ಮನುವಿನ ರಾಣಿ

ಮನುವಿನ ರಾಣಿ

ನನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿದ್ದುವು ಅಷ್ಟೆ. ಆದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವು ಒಂದು ಹೊಡೆಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆಮಾಡಿಬಿಟ್ಟಿದ್ದರು. ಪಾರ್ವತಿ ಮಾತ್ರ ನನ್ನ ಪ್ರತೀಕ್ಷೆಯಲ್ಲೇ ಕೂತಿದ್ದಳು. ಒಳಗೆ ಹೋಗಿ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಇನ್ನೇನು ಊಟಕ್ಕೆ ಕೂರಬೇಕು; ಅಷ್ಟರಲ್ಲಿ ಮುಂಬಾಗಿಲನ್ನು ತಟ್ಟುವ ಶಬ್ದ ಕೇಳಿಸಿತು. ಪಾರ್ವತಿಗೆ ರೇಗಿ ಹೋಯ್ತು, “ಥೂ ಇದೇನಿದು ಬೆಳಗಿನ ಜಾವಕ್ಕೆ ಹೋದವರು ಈಗ ಬಂದಿದ್ದಾರೆ. ಒಂದಿಷ್ಟು ಊಟ ಮಾಡುವುದಕ್ಕೂ ಪುರಸೊತ್ತಿಲ್ಲ-ಅಷ್ಟರಲ್ಲಿ ಬಂದರು ಇನ್ನೊಬ್ಬರು, ಕದ ತಟ್ಟುತ್ತಿರಲಿ; ನಾನೇನು ಬಾಗಿಲು ತೆರೆಯುವುದಿಲ್ಲ” ಎಂದಳು. ಹೌದು-ನಾನು ಬೆಳಗಿನಿಂದಲೂ ಹಸಿದಿದ್ದೆ ಆದರೆ… ಆದರೆ ನನಗೆ ಮನಸ್ಸು ತಡೆಯಲಿಲ್ಲ. “ಹೋಗಲಿ ಬಿಡು ಪಾರ್ವತಿ, ಬಾಗಿಲು ತೆರೆದು ಯಾರೆಂದು ವಿಚಾರಿಸು” ಎಂದೆ. ಅವಳಿಗೆ ಇನ್ನಷ್ಟು ಕೋಪ ಬಂತು: “ನಿಮ್ಮ ದಮ್ಮಯ್ಯ, ಬೆಳಗಿನಿಂದಲೂ ಹೊಟ್ಟೆಗೇನೂ ಇಲ್ಲ. ಮೊದಲು ಊಟ ಮಾಡಿ; ಆಮೇಲೆ ನೋಡೋಣ” ಎಂದಳು. ಈ ಮಧ್ಯೆ ಬಾಗಿಲ ತಟ್ಟುವದು ಬಹಳ ಜೋರಾಯ್ತು. ಮನುಷ್ಯ ಪ್ರಾಣಿಯೊಂದು ಜೀವನ ಮರಣಗಳ ಮಧ್ಯೆ ಹೊರಳಾಡುತ್ತಿರುವಾಗ ನಾನು ಊಟ ಮಾಡುತ್ತ ಕೂತಿರಲೆ? ಎದ್ದು ನಾನೇ ಕದ ತೆರೆಯಲು ಹೋದೆ. ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. ‘ನಮ್ಮೂರೇ ವಾಸಿಯಾಗಿತ್ತು-ಈ ಹಾಳೂರಿಗೆ ಬರಲಾಗಿ ಊಟಕ್ಕೂ ಸಮಯವಿಲ್ಲ’ ಎಂದು ಕೊಂಡಳು. ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ನೋಡಿ ನನ್ನ ಮನಸ್ಸು ನೊಂದರೂ ಆಗ ಅವಳನ್ನು ಸಮಾಧಾನಪಡಿಸುವಂತಿರಲಿಲ್ಲ. ಹೋಗಿ ಕದ ತೆರೆದೆ.

ಕದ ತಟ್ಟಿದವನೊಬ್ಬ ಹುಡುಗ-ಸುಬ್ಬು-ಆ ಊರಿನ ಬಿಟ್ಟೀ ಬಸವಯ್ಯ. “ಏನೋ” ಎಂದು ಕೇಳಿದೆ. “ರಾಜಮ್ಮಾವ್ರ ಮನೇಲಿ ಬಾಳ ಕಾಯ್ಲೆ ಅಂತೆ. ಈಗ್ಲೇ ಬರ್ಬೇಕಂತೆ” ಎಂದ. ರಾಜಮ್ಮ! ಅವಳ ಹೆಸರನ್ನು ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸಹಾನುಭೂತಿ, ಕರುಣೆ ಎಲ್ಲೋ ಮಾಯವಾಯ್ತು. “ಬೆಳಿಗ್ಗೆ ಬರುತ್ತೇನೆ ನಡೆ” ಎಂದೆ. ಆವನು ಹೊರಟುಹೋದ. ಕದಮುಚ್ಚಿ- ನಾನೂ ಒಳಗೆ ಹೋದೆ. ಪಾರ್ವತಿ ಊಹಿಸಿದ್ದಂತೆ ನಾನು ಹೊರಟುಹೋಗದೆ ಮರಳಿಬಂದುದರಿಂದ ಅವಳಿಗೂ ಸಮಾಧಾನವಾಯ್ತು. ಊಟಕ್ಕೆ ಬಡಿಸುತ್ತಾ “ಯಾರು ಬಂದವರು” ಎಂದು ಕೇಳಿದಳು. “ಸುಬ್ಬು, ರಾಜಮ್ಮನ ಮನೆಗೆ ಕೂಡಲೇ ಬರಬೇಕೆಂದು ಕರೆಯುವುದಕ್ಕೆ” ಎಂದೆ. ರಾಜಮ್ಮನ ಹೆಸರು ಕೇಳಿ ಪಾರ್ವತಿ “ಅವಳಿಗೇನೀಗ ಕೇಡು! ಬೆಳಿಗ್ಗೆ ಹೋದರೆ ಸಾಲದೇನೋ? ಇಷ್ಟಕ್ಕೂ ಸತ್ತು ಹೋದರೆ ಭೂಮಿಭಾರವೇ ಕಮ್ಮಿಯಾಯ್ತು” ಎಂದಳು.

ರಾಜಮ್ಮ-ಹೆಸರನ್ನು ಕೇಳಿದ ಮಾತ್ರದಿಂದಲೆ ತಿರಸ್ಕಲ್ಪಡುತ್ತಿದ್ದ ರಾಜಮ್ಮ-ಸೂಳೆ. ನಾನವಳನ್ನು ಕಣ್ಣಾರೆ ನೋಡಿರಲಿಲ್ಲವಾದರೂ ಅವಳ ವಿಷಯವಾಗಿ ಜನರಾಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿಯೇ ‘ಆವಳು ನಿಜವಾಗಿಯೂ ರಾಕ್ಷಿಸಿ’ ಎಂದೆನಿಸಿ ಹೋಗಿತ್ತು, ನನಗೆ. ‘ಅಂಥವಳ ಮನೆಗೆ ಈಗ ಯಾರು ಹೋಗುತ್ತಾರೆ? ಬೆಳಗಿನಿಂದಲೂ ಊಟ ಸಹ ಮಾಡಿಲ್ಲ-ನಾಳೆ ಬೆಳಿಗ್ಗೆ ಹೋದರಾಯಿತು’ ಎಂದು ಸಮಾಧಾನ ಮಾಡಿಕೊಂಡು ಮಲಗಿದೆ. ಅಷ್ಟರಲ್ಲಿ ಪುನಃ ಬಾಗಿಲನ್ನು ಬಡನೆ ಬಡಿಯುವ ಶಬ್ದ ಕೇಳಿಸಿತು. ಹೋಗಿ ಬಾಗಿಲು ತೆರೆದೆ. ಸುಬ್ಬು! “ಈಗ್ಲೇ ಬರ್ಬೇಕಂತೆ ಡಾಕ್ಟ್ರೇ, ಬಹಳ ಜೋರಂತೆ. ಕಾಲಿಗೆ ಬಿದ್ದು ಕರ್ಕೊಂಡು ಬಾ ಅಂದ್ರು” ಎಂದ. “ಯಾರಿಗೋ ಕಾಯಿಲೆ?” ಎಂದು ಕೇಳಿದೆ. ಆವನಿಗೆ ಗೊತ್ತಿರಲಿಲ್ಲ. ಅಂತೂ ಕಾಯಿಲೆ ರಾಜಮ್ಮನಿಗಲ್ಲ ಎಂದು ತಿಳಿಯಿತು. ಇನ್ನಾರಿಗೆ? ಯಾರಿಗೇ ಆದರೂ-ರಾಜಮ್ಮನಿಗೇ ಆದರೂ ಹೋಗಿ ನೋಡುವುದು ನನ್ನ ಕರ್ತವ್ಯ. ಅವಳು ಸೂಳೆ ಎಂಬ ಮಾತ್ರಕ್ಕೆ ಅಷ್ಟೊಂದು ಅಲಕ್ಷ್ಯ ಮಾಡಲು ನನಗೆಲ್ಲಿಯ ಅಧಿಕಾರ? ಸ್ವಲ್ಪ ಹೊತ್ತಿನ ಮೊದಲೇ ನನ್ನ ಕರ್ತವ್ಯವನ್ನು ಅವಳು ಸೂಳೆ ಎಂಬ ನೆವನದಿಂದ ಬದಿಗೊತ್ತಿ, ಸಮಾಧಾನ ಮಾಡಿಕೊಂಡಿದ್ದೆ. ನೆನಸಿ ಕೊ೦ಡು ನನಗೇ ನಾಚಿಕೆಯಾಯ್ತು-” ಬರುತ್ತೇನೆ ತಡೆ ” ಎಂದು ಹೇಳಿ ಒಳಗೆ ಹೋಗಿ ಬೇಗ ಬೇಗ ಬಟ್ಟೆ ಹಾಕಿಕೊಂಡೆ. ಪಾರ್ವತಿಗೆ ನಿದ್ರೆ ಬಂದುಹೋಗಿತ್ತು. ಔಷಧಿಯ ಪೆಟ್ಟಿಗೆಯನ್ನು ತೆಗೆದುಕೊಂಡು ಹಾಗೆಯೇ ಬಾಗಿಲನ್ನೆಳೆದುಕೊಂಡು ಹೊರಟೆ.

ರಾಜಮ್ಮನ ಮನೆ ನಮ್ಮನೆಗೆ ಸುಮಾರು ಮುಕ್ಕಾಲುಮೈಲು ದೂರದಲಿ ಒಂದು ತೋಟದೊಳಗೆ ಒಂಟಿಯಾಗಿತು. ಆದರ ಹತ್ತಿರ ಹತ್ತು ಹನ್ನೆರಡು ಮಾರು ದೂರದಲ್ಲಿ ಒಂದೆರಡು ಬಡಕೂಲಿಯವರ ಗುಡಿಸಲುಗಳಲ್ಲದೆ ಬೇರೆ ಮನೆಗಳಿರಲಿಲ್ಲ. ನಾವು ಹೋಗುವಾಗ ರಾಜಮ್ಮನ ಮನೆಬಾಗಿಲು ತೆರೆದೇ ಇತ್ತು, ಸುಬ್ಬು “ಅಮ್ಮಾವ್ರೇ” ಎಂದು ಕೂಗಿದ. ರಾಜಮ್ಮ ಹೊರಗೆ ಬಂದಳು. ಆದೇ ಮೊಟ್ಟ ಮೊದಲು ನಾನು ರಾಜಮ್ಮನನ್ನು ನೋಡಿದ್ದು. ಅವಳ ವಿಷಯವಾಗಿ ಜನರಾಡುತ್ತಿದ್ದ ಮಾತುಗಳನ್ನು ಕೇಳಿ ರಾಜಮ್ಮ ರಾಕ್ಷಸಿ ಎಂಬ ಭಾವನೆಯಾಗಿಹೋಗಿತ್ತು ನನಗೆ. ಆದರೆ ಆದೇಕೋ- ‘ವ್ಯಸನದಿಂದ ಬಾಡಿದ್ದ ಅವಳ ಮುಖವನ್ನೂ ಆತ್ತು ಅತ್ತು ಕೆಂಪಾಗಿ ಊದಿಕೊಂಡಿದ್ದ ಅವಳ ಕಣ್ಣುಗಳನ್ನು ನೋಡಿ ನನಗೆ ಅತ್ಯಂತ ಕರುಣೆಯುಂಟಾಯಿತು. “ಯಾರಿಗಮ್ಮಾ ಕಾಯಿಲೆ?” ಎಂದು ಕೇಳಿದೆ. ರಾಜಮ್ಮ ಪ್ರತ್ಯುತ್ತರ ಕೊಡದೆ ನನ್ನನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲೊಂದು ಕೋಣೆಯಲ್ಲಿ ಮಂಚದ ಮೇಲೊಬ್ಬನು ಮಲಗಿದ್ದ. ರಾಜಮ್ಮ ಆತನ ಕಡೆಗೆ ಕೈತೋರಿದಳು. ಹತ್ತಿರ ಹೋಗಿ ನೋಡಿದೆ. ಸತ್ತ ಹೆಣದ ಮುಖದಂತಿತ್ತು ಅವನ ಮುಖ. ಕಣ್ಣುಗಳನ್ನು ಬಿಟ್ಟುಕೊಂಡೇ ಇದ್ದರೂ ಆ ಕಣ್ಣುಗಳಲ್ಲಿ ಜೀವನದ ಬೆಳಕಿದ್ದಂತೆ ತೋರಲಿಲ್ಲ. ಬಗ್ಗಿ ಆತನ ಕೈಹಿಡಿದು ನೋಡಿದೆ. ಬೆಂಕಿಯಂತೆ ಸುಡುತ್ತಿತ್ತು ಕೈ. ಜ್ವರದ ತಾಪದಿಂದ ಅವನಿಗೆ ಪ್ರಜ್ಞೆ ಇರಲಿಲ್ಲ. ನೋಡಿದೊಡನೆಯೇ ಆತ ಬದುಕುವಂತಿಲ್ಲವೆಂದು ನನಗೆ ತಿಳಿಯಿತು. ರಾಜಮ್ಮ ಅವನ ಕಾಲ ಹತ್ತಿರ ತಲೆಯನ್ನಿಟ್ಟುಕೊಂಡು ಶೂನ್ಯದೃಷ್ಟಿಯಿಂದ ನನ್ನಕಡೆ ನೋಡುತ್ತಿದ್ದಳು. ನಾನು ಎಷ್ಟೋ ಜನರು ಸಾಯುವುದನ್ನು ನೋಡಿದ್ದೇನೆ. ಅದೆಷ್ಟೋ ಜನರು ಎದೆ ಎದೆ ಬಡಿದುಕೊಂಡು ಅಳುವ ಕರುಣಕ್ರಂದನವನ್ನೂ ಕೇಳಿದ್ದೇನೆ. ಆದರೆ ಅದಾವ ದೃಶ್ಯಗಳೂ ರಾಜಮ್ಮನ ಮೂಕ ರೋದನದಷ್ಟು ವ್ಯಥೆಯನ್ನುಂಟುಮಾಡಿರಲಿಲ್ಲ.

ಸ್ವಲ್ಪ ಹೊತ್ತಿನ ಹಿಂದೆ ನಾನು ರಾಜಮ್ಮನನ್ನು ನೋಡಿ ಸಹ ಇರಲಿಲ್ಲ. ಅವಳ ವಿಷಯದಲ್ಲಿ ತಿರಸ್ಕಾರವಿತ್ತು; ಸತ್ತರೂ ಸಾಯಲಿ ಎಂಬ ಭಾವನೆ ಇತ್ತು. ಒಂದು ಸಾರಿ ಅವಳ ಅಳುವ ಮುಖವನ್ನು ನೋಡಿದ ಮಾತ್ರದಿಂದ ನನಗವಳ ವಿಷಯದಲ್ಲಿದ್ದ ಎಲ್ಲ ಭಾವನೆಗಳೂ ಮಾಯವಾಗಿ ಅಸೀಮಕರುಣೆಯೊಂದು ಮಾತ್ರ ಆದೇಕೆ ಉಳಿಯಿತೋ ಹೇಳಲಾರೆ. ಅವಳ ಪ್ರಾಯವೇನೂ ಹೆಚ್ಚಾಗಿದ್ದಂತೆ ತೋರಲಿಲ್ಲ. ನನ್ನ ಮಗಳು ಶಾಂತಿಗಿಂತ ಒಂದೆರಡು ವರ್ಷಕ್ಕೆ ಹಿರಿಯಳೋ ಏನೋ. ಇಷ್ಟೊಂದು ಚಿಕ್ಕ ಪ್ರಾಯದಲ್ಲೇ ಇಂತಹ ಅವಸ್ಥೆ! ಹೆಸರಾದ ಸೂಳೆ ಎಂಬ ಕೀರ್ತಿ!!

ಮಲಗಿದ್ದ ಮನುಷ್ಯ ಹೊರಳಾಡಿದ. ನಾನು ಕುಡಿಸಿದ ಔಷಧಿಯ ಪ್ರಭಾವದಿಂದ ಅವನನ್ನು ಬದುಕಿಸುವುದು ಆಸಾಧ್ಯವಾದರೂ ಅವನಿಗೆ ಸ್ಮೃತಿ ಬರುವ ಸಂಭವವಿತ್ತು. ಕಾಲದಿಸೆಯಲ್ಲಿ ಕುಳಿತಿದ್ದ ರಾಜಮ್ಮ ಎದ್ದು ಬೆವರುತ್ತಿದ್ದ ಅವನ ಮುಖವನ್ನು ಒರಸತೊಡಗಿದಳು. ಆತನ ತುಟಿ ಅಲುಗಾಡಿತು. ಸ್ವಲ್ಪ ನೀರನ್ನು ಕುಡಿಸುವಂತೆ ಹೇಳಿದೆ. ಅವಳು ಒಂದೆರಡು ಚಮಚ ನೀರನ್ನು ಕುಡಿಸುತ್ತಲೆ ಅವನು ಬಹು ಮೆಲ್ಲಗೆ “ರಾಣಿ” ಎಂದ. ರಾಜಮ್ಮ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೋಡಿ, “ಏನು ಮನು?” ಎಂದಳು. ಪಾಪ, ಅವಳಿಗೆ ಗೊತ್ತಿರಲಿಲ್ಲ- ಆರುವ ಮೊದಲು ದೀಪ ಜೋರಾಗಿ ಉರಿಯುವುದೆಂದು. “ರಾಣೀ! ರಾಣೀ, ರಾಣೀ” ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡದು ಕೊಂಡ. “ಇಲ್ಲೆ ಇದ್ದೇನೆ, ಮನು ಏನು?” ಎಂದು ರಾಜಮ್ಮ ಕೇಳಿದಳು. ಪುನಃ ಇನ್ನೊಮ್ಮೆ “ರಾಣೀ” ಎಂದು ಜೋರಾಗಿ ಚೀರಿದ ಆತ. ಆಯ್ತು, ಅದೇ ಅಂತ್ಯ.

ಬೆಳಗಿನ ಹತ್ತುಗ೦ಟೆಯಾಗಿತ್ತು. ಮರುದಿನ ನಾನು ಮನೆಗೆ ಹೋಗುವಾಗ. ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ಪಾರ್ವತಿ ಹೋದೊಡನೆಯೇ “ಎಲ್ಲಿಗೆ ಹೋಗಿದ್ರಿ? ರಾತ್ರಿನೇ ಹೋದ್ರೋ, ಬೆಳಗಾಗಿತ್ತೋ? ಯಾರಿಗೆ ಕಾಯ್ಲೆ?” ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯುತ್ತುರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ ನನ್ನ ಮನಸ್ಸು. ಹಿಂದಿನ ದಿನದ ಆ ರೋಗಿ, ಕೆದರಿದ ಕೂದಲಿನ ಊದಿದ ಕಣ್ಣುಗಳ ಬಾಡಿದ ಮುಖದ ರಾಜಮ್ಮ, ಅವಳ ಮೂಕರೋದನ ಎಲ್ಲಾ ಕಣ್ಣಮುಂದೆ ಕಟ್ಟಿದಂತಿತ್ತು. ನನ್ನಿದಿರು ಪಾರ್ವತಿಯೇ ನಿಂತಿದ್ದರೂ ನನ್ನ ಕಣ್ಣುಗಳಿಗೆ ರಾಜಮ್ಮನ ಬಾಡಿ ಬೆಂಡಾಗಿದ್ದ ಆ ಮುಖ ಕಾಣಿಸುತ್ತಿತ್ತು.

ನಾನು ಮೂಕನಂತೆ ಬೆಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವತಿಗೆ ಆಶ್ಚರ್ಯವೇ ಆಗಿರಬೇಕು ಹಿಂದಿನ ದಿನದ ನನ್ನ ವಿಪರೀತದ ಕೆಲಸದಿಂದಲೇ ನಾನು ಹಾಗಿರುವುದೆಂದು ಅವಳು ಬಲು ನೊಂದು ಕೊಂಡಳು. “ನಿನ್ನೆ ಇಡೀ ದಿನ ನಿದ್ರೆಯಿಲ್ಲ; ಹೊತ್ತಿಗೆ ಸರಿಯಾಗಿ ಊಟವಿಲ್ಲ. ಇನ್ನಾದರೂ ಫಲಾಹಾರ ಮಾಡಿ ವಿಶ್ರಾಂತಿತಕ್ಕೊಳ್ಳಿ” ಎಂದು ಕಾಫಿ ತಿಂಡಿಯನ್ನು ತಂದಿಟ್ಟುಕೊಂಡು ಬಲವಂತಪಡಿಸತೊಡಗಿದಳು. “ಈಗೇನೂ ಬೇಡ ಪಾರ್ವತಿ. ಸ್ವಲ್ಪ ಮಲಗಿ ನಿದ್ರೆಮಾಡಿದರೆ ಎಲ್ಲಾ ಸರಿಯಾಗುತ್ತೆ” ಎಂದು ಬಟ್ಟೆಯನ್ನು ಸಹ ಬದಲಾಯಿಸದೆ ಹಾಗೆಯೇ ಬಿದ್ದುಕೊಂಡೆ. ನಾನು ನಿದ್ರೆ ಮಾಡಲೆಳಸುವೆನೆಂದೆಣಿಸಿ ಪಾರ್ವತಿ ಹೊರಗೆ ಹೊರಟಳು. “ಇಲ್ಲಿ ಬಂದು ಕೂತ್ಕೋ ಪಾರ್ವತಿ” ಎಂದೆ. ಪಾರ್ವತಿ ನನ್ನ ಹತ್ತಿರ ಬಂದು ಕುಳಿತಳು. “ಇವತ್ತು ನಿಮಗೇನಾಗಿದೆ” ಎಂದು ಕೇಳುವಂತಿತ್ತು ಪಾರ್ವತಿಯ ಪ್ರಶ್ನಾಸೂಚಕವಾದ ದೃಷ್ಟಿ. ನಾನವಳಿಗೆ ಹಿಂದಿನ ರಾತ್ರಿ ರಾಜಮ್ಮ ಮನೆಯಲ್ಲಿ ನಡೆದುದೆಲ್ಲವನ್ನೂ ಹೇಳಿದೆ. ನನ್ನ ಮಾತುಗಳನ್ನು ಕೇಳಿ ಪಾರ್ವತಿ “ಸತ್ತವನು ಯಾರು? ರಾಜಮ್ಮನಿಗೆ ಏನಾಗಬೇಕು?” ಎಂದು ಕೇಳಿದಳು. ಅಷ್ಟರವರೆಗೂ ನನಗಾ ವಿಷಯ ಹೊಳೆದಿರಲಿಲ್ಲ. ಸತ್ತವನು ಯಾರು? ರಾಜಮ್ಮನಿಗೆ ಅಷ್ಟೊಂದು ವ್ಯಸನವನ್ನುಂಟುಮಾಡಲು ಅವನಿಗೂ ಅವಳಿಗೂ ಏನು ಸಂಬಂಧ? ಎಂದು ನನಗೂ ಈಗ ಎನಿಸಿತು. ಪಾರ್ವತಿಗೆ ರಾಜಮ್ಮನ ಮೇಲೆ ಬಹಳ ಸಂದೇಹ: ‘ಎಲ್ಲಾದರೂ ರಾಜಮ್ಮ ಅವನನ್ನು ವಿಷಹಾಕಿ ಕೊಂದಿರಬಹುದೇ’ ಎಂತ. ಒಂದೇ ಒಂದು ದಿನದ ಹಿಂದೆ ಪಾರ್ವತಿಯಂತೆಯೇ ನನಗೂ ಸಂದೇಹ ಉಂಟಾಗುತ್ತಿತ್ತು. ರಾಜಮ್ಮನನ್ನೊಂದು ಸಾರಿ ನೋಡಿದ ಮೇಲೆ ನನ್ನ ಆ ತರದ ಭಾವನೆಗಳೆಲ್ಲಾ ಬದಲಾಗಿಹೋಗಿದ್ದವು. ಅದರಿಂದ ಅವಳ ವಿಷಯದಲ್ಲಿ ಪಾರ್ವತಿಯ ಸಂಶಯದ ಮಾತುಗಳನ್ನು ಕೇಳಿ ನನಗೆ ಕೋಪಬಂತು. ಸುಮ್ಮನಿರು ಪಾರ್ವತಿ” ಎಂದುಬಿಟ್ಟೆ. ನನ್ನ ಸ್ವರ ಕಠೋರವಾಗಿದ್ದಿರಬೇಕು. ಸಿಟ್ಟನಿಂದ ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. ಅವಳ ಮುಖವನ್ನುನೋಡಿ ನನ್ನ ಕಠೋರತೆಗಾಗಿ ನಾಚಿಕೆಯಾಯ್ತು.

ಅವಳನ್ನು ಸಮಾಧಾನಪಡಿಸುತ್ತ “ರಾಜಮ್ಮ ವಿಷಹಾಕಿ ಕೊಲ್ಲುವಂಥ ರಾಕ್ಷಸಿಯಂತೆ ತೋರುವುದಿಲ್ಲ ಪಾರ್ವತಿ. ನಮ್ಮ ಶಾಂತಿಗಿಂತ ಎಲ್ಲಾದರೂ ಒಂದೆರಡು ವರ್ಷಕ್ಕೆ ದೊಡ್ಡವಳಾಗಿರಬೇಕು. ಪಾಪ, ಅವಳನ್ನು ನೋಡುವಾಗ ಬಹಳ ಮರುಕವಾಗುತ್ತೆ. ಜನರಿಗೇನು, ಸುಮ್ಮನೆ ಏನಾದರೂ ಹೇಳುತ್ತಿರುತ್ತಾರೆ” ಎಂದು ಹೇಳಿದೆ. ಆದರೆ ಪಾರ್ವತಿಗೆ ರಾಜಮ್ಮನ ಮೇಲಿನ ಸಂದೇಹವು ಸಂಪೂರ್ಣವಾಗಿ ದೂರವಾದಂತೆ ತೋರಲಿಲ್ಲ. ಸತ್ತವನು ಹಣಗಾರನಾಗಿರಬಹುದು- ಅವನ ಹಣಕ್ಕಾಗಿ ಅವನನ್ನು ಕೊಂದಿರಬಹುದು. ಈಗ ವ್ಯಸನವನ್ನು ನಟಿಸಿ ಪಾರಾಗಲು ಯತ್ನಿಸುತ್ತಿದ್ದಾಳೆ ಎಂದು ಪಾರ್ವತಿಯ ಊಹನೆ.

ಆದಿನ ನಾನು ಆಸ್ಪತ್ರಿಗೆ ಹೋಗಲಿಲ್ಲ. ವಿಶ್ರಾಂತಿಯನ್ನು ತೆಗೆದು ಕೊಳ್ಳುವ ನೆವನದಿಂದ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದೆ. ನಿದ್ರೆ ಮಾತ್ರ ಎಷ್ಟೆಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಕೊನೆಗೆ ಸಾಯಂಕಾಲ ಸ್ವಲ್ಪ ಹೊರಗೆ ಹೋಗಿ ತಿರುಗಾಡಿಕೊಂಡಾದರೂ ಬರೋಣ ಎಂದು ಹೊರಟೆ. ನನಗೆ ತಿಳಿಯದಂತೆಯೇ ಕಾಲುಗಳು ನನ್ನನ್ನು ರಾಜಮ್ಮನ ಮನೆಯ ಕಡೆಗೆ ಎಳೆದುಕೊಂಡು ಹೋದುವು. ಬಾಗಿಲು ತೆರೆದಿತ್ತು. ಒಳಗೆ ಹೋದೆ. ಹಿಂದಿನ ದಿಸ ರೋಗಿಯು ಮಲಗಿದ್ದ ಮುಂಚದ ಹತ್ತಿರ ನೆಲದಮೇಲೆ ಕುಳಿತುಕೊಂಡು ನಟ್ಟ ದೃಷ್ಟಿಯಿಂದ ಬಾಗಿಲಕಡೆ ನೋಡುತ್ತಿದ್ದಳು ರಾಜಮ್ಮ. ಅದೇ ಬಾಗಿಲಿಗಾಗಿ ನಾನು ಒಳಗೆ ಹೋಗಿದ್ದರೂ ನನ್ನನ್ನವಳು ನೋಡಿದಂತೆ ತೋರಲಿಲ್ಲ. ನನಗವಳ ಸ್ಥಿತಿಯನ್ನು ನೋಡಿ ಬಹಳ ಕಳವಳವಾಯ್ತು. ಹೆಣದ ದಹನವಾಗಿತ್ತು- ಈಗ ಅವಳೊಬ್ಬಳೇ ಆ ಮನೆಯಲ್ಲಿ. ಸೂಳೆಯ ಜೊತೆಗೆ ಹೋಗುವವರು ಯಾರು? ಪಾರ್ವತಿಯನ್ನಾದರೂ ಜೊತೆಯಲ್ಲಿ ಕರೆತರಬೇಕಾಗಿತ್ತು ಎನ್ನಿಸಿತು ನನಗೆ. ಹಿಂದಿನ ದಿನ ಯಾರಾದರೂ ನನ್ನೊಡನೆ ರಾಜಮ್ಮನ ಮನೆಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗೆಂದಿದ್ದರೆ ನಾನವರೊಡನೆ ಖಂಡಿತವಾಗಿಯೂ ಜಗಳಾಡಿಬಿಡುತ್ತಿದ್ದೆ. ರಾಜಮ್ಮನನ್ನು ನೋಡಿದಮೇಲೆ ಆತರದ ಭಾವನೆಗಳೇಕೋ ಮಾಯವಾಗಿ ಹೋಗಿದ್ದವು. ಹಿಂದೆ ನಾನವಳ ವಿಷಯವಾಗಿ ನೆನಸಿಕೊಂಡುದನ್ನೆಲ್ಲಾ ಯೋಚಿಸಿಕೊಂಡಾಗ ನನ್ನ ಮೇಲೆ ನನಗೇ ಧಿಕ್ಕಾರ ಉಂಟಾಗುತ್ತಿತ್ತು.

ಅವಳಿಗೆ ನಾನು ಹೋದುದು ತಿಳಿಯಲಿಲ್ಲ. “ರಾಜಮ್ಮಾ” ಎಂದು ಕೂಗಿದೆ. ಬೇರೆ ಯಾವುದನ್ನೋ ನೋಡುತ್ತಿದ್ದವಳು ತಿರುಗುವ೦ತೆ ನನ್ನ ಮಾತು ಕೇಳಿ ಅವಳು ತಿರುಗಿದಳು. ಮೊದಮೊದಲು ನಾನು ಯಾರೆಂತ ಅವಳಿಗೆ ಗುರುತು ಸಿಕ್ಕಿದಂತೆ ತೋರಲಿಲ್ಲ. ಅವಳನ್ನು ನಾನೆಷ್ಟೋ ಸಮಾಧಾನಪಡಿಸಲು ಯತ್ನಿಸಿದೆ. ಅವಳು ಅಳುತ್ತಿರಲಿಲ್ಲವಾದರೂ ನನ್ನ ಮಾತುಗಳಿಂದ ಅವಳಿಗೆ ಸಮಾಧಾನವಾದಂತೆ ತೋರಲಿಲ್ಲ. ಕತ್ತಲಾಗುತ್ತ ಬಂದಿತ್ತು. ಅವಳೊಬ್ಬಳೇ ಆ ಮನೆಯಲ್ಲಿ. ಆದರೆ ನಾನೇನು ಮಾಡುವಂತಿರಲಿಲ್ಲ. ಕೊನೆಗೆ ಯಾರನ್ನಾದರೂ ಜೊತೆಗೆ ಕಳುಹಿಸುತ್ತೇನೆಂದು ಹೇಳಿ ಹೊರಟೆ. ಬಾಯಲ್ಲಿ ಹೇಳುದಷ್ಟು ಸುಲಭವಾಗಿರಲಿಲ್ಲ ರಾಜಮ್ಮನ ಮನೆಗೆ ಜನರನ್ನು ಕಳುಹಿಸುವುದು. ಅಂತೂ ಕೊನೆಗೆ ನಮ್ಮನೆಯ ಕೆಲಸದವಳನ್ನು ಆ ರಾತ್ರಿ ಮಟ್ಟಿಗೆ ಅಲ್ಲಿಗೆ ಹೋಗಲು ಒಪ್ಪಿಸಿದೆ. ಶಾಂತಿ ತಾನೂ ಅವಳೊಡನೆ ಹೋಗುತ್ತೇನೆಂದಳು. ನನ್ನ ಆಕ್ಷೇಪಣೆ ಇಲ್ಲದಿದ್ದರೂ ಪಾರ್ವತಿ ಅವಳನ್ನು ಕಳುಹಿಸಲು ಒಪ್ಪಲಿಲ್ಲ.

ಎರಡು ದಿನಗಳಿಂದ ನಿದ್ರೆ ಸರಿಯಾಗಿಲ್ಲದುದರಿಂದ ಆ ದಿನ ನಿದ್ರೆ ಚೆನ್ನಾಗಿ ಬಂದುಹೋಗಿತ್ತು ನನಗೆ. ಪಾರ್ವತಿಯೂ ಎಚ್ಚರಗೊಳಿಸಿರಲಿಲ್ಲ. ಆದರಿಂದ ಆ ದಿನ ನಾನು ಏಳುವಾಗ ಎಂಟು ಹೊಡೆದು ಹೋಗಿತ್ತು. ಆಸ್ಪತ್ರೆಗೆ ಹೋಗಲು ಹೊತ್ತಾಗುವುದೆಂದು ಅವಸರವಾಗಿ ಹೊರಟಿದ್ದೆ. ಗೇಟು ದಾಟುವಾಗ ರಾತ್ರಿ ರಾಜಮ್ಮನ ಮನೆಗೆ ಹೋಗಿದ್ದ ನಮ್ಮ ಕೆಲಸದವಳು ಇದಿರಾಗಿ ಬಂದಳು. ಅವಸರದಲ್ಲಿ ರಾಜಮ್ಮನ ಸುದ್ದಿಯೇ ಮರೆತುಹೋಗಿತ್ತು ನನಗೆ. ಅವಳನ್ನು ನೋಡಿ ರಾಜಮ್ಮ ಹೇಗಿದ್ದಾಳೆ ಎಂದೆ ವಿಚಾರಿಸಿದೆ. ತಾನು ಬರುವಾಗ ಇನ್ನೂ ಎದ್ದಿದ್ದಿರಲಿಲ್ಲವೆಂದೂ ನಿದ್ರೆ ಮಾಡುತ್ತಾಳೆಂದೂ ಹೇಳಿ ಅವಳು ತನ್ನ ಕೆಲಸಕ್ಕೆ ಹೊರಟು ಹೋದಳು.

ಆ ದಿನ ನನಗೂ ಸ್ವಲ್ಪ ಹೆಚ್ಚು ಕೆಲಸವಿತ್ತು. ಅದೇ ಮನೆಗೆ ಊಟಕ್ಕೆ ಬರುವಾಗ ನಾಲ್ಕು ಗಂಟೆಯಾಗಿತ್ತು. ಊಟವಾದ ಮೇಲೆ ನಾನೂ ಪಾರ್ವತಿಯೂ ಮಾತನಾಡುತ್ತ ಕುಳಿತಿರುವಾಗ ಮಧ್ಯಾಹ್ನದ ಟಪಾಲಿನಲ್ಲಿ ಬಂದ ಒಂದು ಕಾಗದವನ್ನು ಪಾರ್ವತಿ ಕೊಟ್ಟಳು. ಕಾಗದವನ್ನು ಬಿಡಿಸಿದೆ. ಅಕ್ಷರಗಳು ನನಗೆ ಪರಿಚಿತವಾಗಿರಲಿಲ್ಲ. ಯಾರ ಕಾಗದವಿರಬಹುದೆಂದು ಕುತೋಹಲದಿಂದ ಕೊನೆಯನ್ನು ನೋಡಿದೆ. ರಾಜಮ್ಮ! ನನಗೆ ತುಂಬ ಆಶ್ಚರ್ಯವಾಯ್ತು. ರಾಜಮ್ಮ ನನಗೆ ಬರೆಯುವಂತಹ ವಿಷಯವೇನು! ಆತುರದಿಂದ ಓದತೊಡಗಿದೆ:

“ಡಾಕ್ಟ್ರೇ,

ನನ್ನಂತವಳ ಮೇಲೆ ಜನರಿಗೆ ಕರುಣೆ ಇರುವುದು ಅಪರೂಪ. ನನ್ನಂತವರಿಗೆ ಕಷ್ಟಬಂದಾಗ ಸಹಾಯ ಮಾಡುವುದು ಸಹ ಮನುಷ್ಯಧರ್ಮಕ್ಕೆ ವಿರೋಧವೆಂದು ಭಾವಿಸುವವರೇ ಹೆಚ್ಚು. ಇಷ್ಟು ದಿನ-ಈಗ ನಾಲ್ಕು ವರ್ಷ ನಾನು ಯಾರಿಂದಲೂ ಸಹಾಯವನ್ನಾಗಲಿ ಸಹಾನುಭೂತಿಯನ್ನಾಗಲಿ ಅಪೇಕ್ಷಿಸಿದವಳಲ್ಲ. ಮೊನ್ನೆ ಮನುವಿಗೆ ಒಂದೇ ಸಾರಿ ಜ್ವರ ಜೋರಾಯಿತು.

“ಸುಬ್ಬು ವಿನಾ ನನ್ನ ಮನೆಯ ಕಡೆಗೆ ಮತ್ತಾರೂ ಸುಳಿಯುವುದಿಲ್ಲ. ಅವನನ್ನೇ ಕಳುಹಿಸಿದೆ ಡಾಕ್ಟರನ್ನು ಕರೆದುಕೊಂಡು ಬರುವುದಕ್ಕೆ” ತಾವು ಮನೆಯಲ್ಲಿರಲಿಲ್ಲ…..ರ ಮನೆಗೆ ಕಳುಹಿಸಿದೆ. ಅವರು ನಿರ್ದಾಕ್ಷಿಣ್ಯವಾಗಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟರು. ಪುನಃ ನಿನುಗೇ ಹೇಳಿಕಳುಹಿಸಿದೆ. ನೀವು ಬೆಳಗ್ಗೆ ಬರುವೆನೆಂದುಬಿಟ್ಟರಿ. ಈ ಮಧ್ಯೆ ಮನುವಿಗೆ ನಿಮಿಷ ನಿಮಿಷಕ್ಕೆ ಜೋರಾಗುತ್ತಿತ್ತು. ಕಾಲಿಗೆ ಬಿದ್ದಾದರೂ ಕರೆದುಕೊಂಡು ಬಾ ಎಂದು ತಿರುಗಿ ಸುಬ್ಬುವನ್ನು ಕಳುಹಿಸಿದೆ. ನಿಮಗೇನೋ ದಯೆ ಬಂತು, ನೀವು ಬಂದಿರಿ. ಆದರೆ ಮನುವನ್ನು ಇಟ್ಟುಕೊಳ್ಳುವ ಭಾಗ್ಯ ನನಗಿರಲಿಲ್ಲ. ಅವನು ಹೊರಟುಹೋದ.

“ನಾನು ಯಾರು-ಮನು ಯಾರು? ನಮನಮಗೆ ಸಂಬಂಧವೇನು? ಎಂದು ಮುಂತಾಗಿ ನೀವು ಯೋಚಿಸಬಹುದು. ನನ್ನ ವಿಷಯವಾಗಿ ಜನರಾಡಿಕೊಳ್ಳುವ ಮಾತುಗಳನ್ನು ನೀವು ಕೇಳಿರಬಹದು. ಹೌದು. ನನ್ನ ತಾಯಿ ಸೂಳೆಯಾಗಿದ್ದಳು. ನಾನೂ ಅದೇ ವೃತ್ತಿಗಾಗಿ ತಯಾರುಮಾಡಲ್ಪಟ್ಟಿದ್ದೆ. ನನ್ನ ತಾಯಿಯು ನನ್ನಿಂದ ತುಂಬ ಹಣ ಸಂಪಾದಿಸಲು ಬಯಸುತ್ತಿದ್ದಳು. ಅವಳ ಬಯಕೆಯೂ ನಿರರ್ಥಕವಾಗುವಂತಿರಲಿಲ್ಲ. ಏಕೆಂದರೆ ಅನೇಕ ಗಣ್ಯಮಾನ್ಯ ಧನಿಗಳು ನನ್ನನ್ನು ಮೆಚ್ಚಿ ಮನ ಸೋತಿದ್ದರು. ಆದರೆ ಮನುವಿನಿಂದಾಗಿ ನನ್ನ ತಾಯಿಯ ಆಶೆ ನಿರಾಶೆ ಯಾಗಬೇಕಾಯಿತು. ಮನು-ಮೋಹನ ಎಂತ ಅವನ ಹೆಸರು-ಭಾಗ್ಯ ವ೦ತರ ಒಬ್ಬನೇ ಮಗ. ಚಿಕ್ಕಂದಿನಲ್ಲೇ ತಂದೆತಾಯಿಯರನ್ನು ಕಳೆದು ಕೊಂಡಿದ್ದುದರಿಂದ ಹೇಳುವವರು ಕೇಳುವವರು ಯಾರೂ ಇರಲಿಲ್ಲ ಅವನಿಗೆ. ಒಂದು ದಿನ ನನ್ನ ತಾಯಿಯ ಹಳೆಯ ಸ್ನೇಹಿತನೊಬ್ಬನು ಅವನನ್ನು ನಮ್ಮನೆಗೆ ಕರೆದುಕೊಂಡು ಬಂದನು. ಅಂದಿನಿಂದ ಯಾವಾಗಲೂ ಮನು ನಮ್ಮನೆಗೆ ಬರತೊಡಗಿದ ನನಗಾಗಿ. ಸೂಳೆಯರಿಗೆ ಹೃದಯವಿರಬಾರದೆಂದು ನನ್ನ ತಾಯಿ ಹೇಳಿಕೊಟ್ಟಿದ್ದರೂ ಮನುವನ್ನು ನಾನು ಪ್ರೀತಿಸತೊಡಗಿದೆ. ಆತನೂ ನನ್ನನ್ನು ಪ್ರೀತಿಸುತ್ತಿದ್ದ. ಮನುವಿನ ಮತ್ತು ನನ್ನ ವ್ಯವಹಾರಗಳು ನನ್ನ ತಾಯಿಗೆ ಸರಿಬೀಳುತ್ತಿರಲಿಲ್ಲ. ಈ ಮಧ್ಯೆ ಮನುವಿನ ಹಣಕಾಸೆಲ್ಲ ನಮ್ಮ ಪೆಟ್ಟಗೆಗೆ ಸೇರಿಹೋಗಿತ್ತು. ಅದರಿಂದ ಮುಂದೆ ಅವನಿಂದ ನನ್ನ ತಾಯಿಗೆ ಪ್ರಯೋಜನವಾಗುವಂತಿರಲಿಲ್ಲ.

“ಅಕಸ್ಮಾತ್ತಾಗಿ ಮನು ಮನೆಗೆ ಬರುವುದು ನಿಂತುಹೋಯ್ತು. ನಾನು ತಾಯಿಯನ್ನು ವಿಚಾರಿಸಿದಾಗ ಅವನು ಮದುವೆಯಾಗಿರುವನೆ೦ದು ಹೇಳಿದಳು. ಮನುವಿನ ಮದುವೆಯ ಮಾತು ಕೇಳಿ ನನಗೆ ಬಹಳ ದುಃಖವಾಯ್ತು. ಒಂದೆರಡು ತಿಂಗಳು ಪ್ರಾಣಾಂತಿಕವಾದ ಕಾಯಿಲೆಯಲ್ಲಿ ಮಲಗಿಹೋದೆ. ಆಗಲೇ ನಾನು ಏಕೆ ಸಾಯಲಿಲ್ಲವೊ! ಅಂತೂ ನನಗೆ ಜ್ವರ ಬಿಟ್ಟಾಗ ನಮ್ಮ ಕೆಲಸದವಳ ಮೂಲಕ ಮನು ಮದುವೆ ಯಾಗಲಿಲ್ಲವೆಂದೂ ನಾನು ಸತ್ತುಹೋದೆನೆಂದು ನಮ್ಮತಾಯಿ ಹುಟ್ಟಿಸಿದ ವರ್ತಮಾನದಿಂದ ಅವನು ಅರೆಹುಚ್ಚನಾಗಿರುವನೆಂದೂ ತಿಳಿಯಿತು. ಅದೇ ದಿನ ರಾತ್ರಿ ನಾನು ಮನೆ ಬಿಟ್ಟು ಹೊರಟುಬಿಟ್ಟೆ. ಮನುವಿನ ಮನೆಗೇ ಹೋದೆ. ಅವನು ಹುಚ್ಚನಾಗಿ ಹೋಗಿದ್ದ. ಹುಚ್ಚಿನಲ್ಲಿ ಕಣ್ಣಿಗೇನೋ ಹಾಕಿಕೊಂಡದ್ದರಿಂದ ಎರಡು ಕಣ್ಣುಗಳೂ ದೃಷ್ಟಿಹೀನವಾಗಿದ್ದುವು. ನಮಗೆ ಕೊಟ್ಟು ಉಳಿದಿದ್ದ ಹಣವೂ ಖರ್ಚಾಗಿಹೋಗಿತ್ತು. ಆದರೆ ನನ್ನ ಹತ್ತಿರ ಮನು ಉತ್ತಮಸ್ಥಿತಿಯಲ್ಲಿದ್ದಾಗ ಕೊಟ್ಟ ಕೆಲವು ನಗಗಳಿದ್ದುವು. ಅವುಗಳನ್ನೆಲ್ಲಾ ಮಾರಿ ಮನುವಿಗೆ ಚಿಕಿತ್ಸೆಮಾಡಿಸಿದೆ. ಚಿಕಿತ್ಸೆಯಿಂದ ಅವನ ಹುಚ್ಚು ಸಂಪೂರ್‍ಣ ವಾಸಿಯಾಗದಿದ್ದರೂ ಕೆಲವು ವೇಳೆ ಅವನು ಸರಿಯಾಗಿರುತ್ತಿದ್ದ. ಆದರೆ ಅದರಿಂದ ಆಗಾಗ ಜ್ವರ ಬರುತ್ತಿತ್ತು. ಅಂತೂ ಮೊದಲಿನ ಮನುವನ್ನು ನನ್ನ ತಾಯಿ ಕೊಂದುಹಾಕಿಬಿಟ್ಟಿದ್ದಳು. ಮನುವಿನ ಆ ಸ್ಥಿತಿಯಲ್ಲಿ ನಾನವನೊಡನೆ ಹೆಚ್ಚುಕಾಲ ನಿಲ್ಲಲಾರೆನೆಂದು ನನ್ನ ತಾಯಿ ಯೋಚಿಸಿದ್ದಳು. ಆದರೆ ಅವಳು ಕರೆಯುವಾಗ ನಾನು ಅವಳೊಡನೆ ಹೋಗದಿದ್ದುದರಿಂದ ಅವಳಿಗೆ ತುಂಬಾ ಸಿಟ್ಟು ಬಂತು. ಅದರ ಮೇಲೆ ನಾನಲ್ಲಿರುವುದೇ ಕಷ್ಟವಾಯಿತು. ಕೊನೆಗೆ ನಾನೂ ಮನುವೂ ಊರು ಬಿಟ್ಟು ಇಲ್ಲಿಗೆ ಬ೦ದುಬಿಟ್ಟಿವು. ದಿನಗಳು ಕಳೆದಂತೆ ಮನುವಿನ ಬುದ್ಧಿ ಸಂಪೂರ್ಣ ಲೋಪವಾಗಿಹೋಯ್ತು. ಏನೇನು ಮಾಡಿದರೂ ಅವನಿಗೆ ವಾಸಿಯಾಗಲಿಲ್ಲ. ಕೇವಲ ‘ರಾಣಿ’ ಎಂದು ನನ್ನನ್ನು ಕೂಗುವುದಲ್ಲದೆ ಹೆಚ್ಚಿನ ಮಾತುಗಳನ್ನೇ ಆಡುತ್ತಿರಲಿಲ್ಲ. ಅದರವನಿಗೆ ನಾನು ಹತ್ತಿರವಿರುವುದು ತಿಳಿಯುತ್ತಿತ್ತು. ನಾನೆಲ್ಲಾದರೂ ಸ್ವಲ್ಪ ಅತ್ತಿತ್ತ ಹೋದರೆ ‘ರಾಣೀ’ ಎನ್ನುತ್ತಿದ್ದ. ಮೂರು ವರ್ಷಗಳಿಂದ ನಾವಿಬ್ಬರೂ ಈ ಮನೆಯಲ್ಲಿದ್ದೆವು. ಈಗ ಅವನಿಲ್ಲ. ಮತ್ತೆ ನನಗಿಲ್ಲೇನು ಕೆಲಸ?

“ಡಾಕ್ಟ್ರೇ, ನಾನು ನಿಮಗಿದೆಲ್ಲಾ ಬರೆಯುತ್ತಿರುವೆನೇಕೆ? ಇಷ್ಟು ವರ್ಷಗಳಲ್ಲಿ ನಮ್ಮಿಬ್ಬರ ವಿಷಯದಲ್ಲಿ ಮನುಷ್ಯೋಚಿತವಾದ ಕರುಣೆಯಿಂದ ವರ್ತಿಸಿದವರು ನೀವು ಮತ್ತು ಸುಬ್ಬು ಇಬ್ಬರೆ, ಅದರಿಂದ ನಿಮಗೆ ಹೇಳಿ ಹೋಗುವ ಸಲುವಾಗಿ ಇದನ್ನು ಬರೆಯಬೇಕಾಯ್ತು. ನೀವು ಮನುವಿನ ಕೊನೆಗಾಲದಲ್ಲಿ ಮಾಡಿದ ಸಹಾಯ ಎಂದೂ ಮರೆಯುವಂತಿಲ್ಲ. ನನ್ನಂಥ ದರಿದ್ರ ಪ್ರಾಣಿ ನಿಮಗೆ ಯಾವ ಪ್ರತಿಫಲವನ್ನು ಕೊಡಬಲ್ಲುದು? ದೇವರೇ ನಿಮಗೆ ಒಳ್ಳೆಯದನ್ನು ಮಾಡಬೇಕು.

ರಾಜಮ್ಮ”

ಓದಿ ಪಾರ್ವತಿಯ ಕೈಗೆ ಕೊಟ್ಟೆ. ಅವಳೂ ಓದಿದಳು. ಕಣ್ಣುಗಳೆರಡರಲ್ಲೂ ನೀರು ತುಂಬಿತ್ತು. ‘ನಾನೆಂಥಾ ಪಾಪಿ’ ಎಂದುಕೊಂಡಳು. ನನ್ನ ಮನಸ್ಸು ಏನೋ ಒಂದು ತರವಾಗಿತ್ತು. ಅದೂ ಪಾರ್ವತಿಯ ಮಾತನ್ನೇ ಹೇಳುವಂತೆ ‘ನಾನೆಂಥಾ ಪಾಪಿ!’ ಎಂದಿತು.

ಆದಿನ ಸಾಯಂಕಾಲ ತಿರುಗಾಡಲು ಹೊರಡುವಾಗ ಪಾರ್ವತಿಯು ತಾನೂ ಬರುತ್ತೇನೆಂದಳು. ಇಬ್ಬರೂ ರಾಜಮ್ಮನ ಮನೆಗೇ ಹೋದೆವು. ಆದರೆ ನಾವು ಹೋಗುವ ಮೊದಲೇ ಅವಳು ಹೊರಟು ಹೋಗಿದ್ದಳು-

ಎಲ್ಲಿಗೋ ಯಾರಿಗೆ ಗೊತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಪನವೇ…..
Next post ತೀರಿಲ್ಲ….

ಸಣ್ಣ ಕತೆ

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys