ನಮ್ಮ ದೇಶದಲ್ಲಿ ನಡೆಯುತ್ತಿರುವ ಅನಾರೋಗ್ಯಕರ ಘಟನೆಗಳಿಗೆ ಮಿತಿಯೇ ಇಲ್ಲವೇನೋ ಎಂಬ ಆತಂಕದಿಂದ ಸಂಕಟದ ಸುಳಿಯೇಳುತ್ತದೆ. ಇಲ್ಲಿ ಅರಳುವ ಹೂವುಗಳು, ಹರಿಯುವ ನದಿಗಳಿಗೆ, ಬೆಳೆಯುವ ಮರಗಳಿಗೆ ಇನ್ನು ಮುಂದೆ ಜಾತಿ ಮತ ಧರ್ಮಗಳ ಸೋಂಕು ತಗುಲಿ ಹಿಂದೂ ಹೂವು, ಮುಸ್ಲಿಂ ನದಿ; ಕ್ರೈಸ್ತ ಮರ ಎಂಬಿತ್ಯಾದಿಯಾಗಿ ಕರೆಯಬೇಕಾಗಬಹುದು. ನದಿ, ಮರ, ಹೂವುಗಳು ತಂತಮ್ಮಲ್ಲೇ ಜಾತಿ-ಧರ್ಮಗಳ ಜಗಳವಾಡಬಹುದು. ಇಲ್ಲದಿದ್ದರೆ ಜಾತಿ ಧರ್ಮಗಳ ಮೂಲಕ ಮಸಲತ್ತು ಮಾಡುವ ಮನುಷ್ಯರು ಈ ನಿಸರ್ಗದಲ್ಲಿ ನೆತ್ತರು ಹೊಳೆ ಹರಿಸಬಹುದು.
ಗಾಂಧಿ ಹುಟ್ಟಿದ ನಾಡಿನಲ್ಲಿ ಹೀಗೆಲ್ಲ ಆಗುತ್ತಿದೆಯಲ್ಲ ಎಂದು ಕೊರಗುವವರು ಕೇವಲ ಗತವೈಭವಕ್ಕೆ ಆರತಿ ಎತ್ತುವ ಅಪಾಯವೂ ಇರುತ್ತದೆ. ವಾಸ್ತವವಾಗಿ ಸಮಸ್ಯೆಗಳಿಗೆ ಮುಖಾಮುಖಿಯಾದ ಸಂತ ಮನೋಧರ್ಮದ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ್ದು ನಮ್ಮ ದೇಶದ ಧಾರ್ಮಿಕ ದೌರ್ಜನ್ಯದ ಕೆಟ್ಟ ಹೆಜ್ಜೆಯಾಯಿತು. ಜನಾಂಗ ದ್ವೇಷದ ದಳ್ಳುರಿಯ ಕೊಳ್ಳಿಕುಣಿತ ಉತ್ಕಟಗೊಂಡಿತು. ಜೇನುಗೂಡಿಗೆ ಕೈ ಹಾಕಿದ ಗಾಂಧೀಜಿಯವರಂಥ ಅನೇಕ ಧೀಮಂತರು ಹುಟ್ಟಿದ ನಾಡಿನಲ್ಲಿ ಮಂಥನದ ವಿವಿಧ ಮುಖಗಳು, ಮುಖವಾಡಗಳು ಹೊರಬೀಳಲು ಸಾಧ್ಯ.
ಗೋಡ್ಸೆ, ಗಾಂಧಿ ಯನ್ನು ಕೊಂದದ್ದು ಒಬ್ಬ ವ್ಯಕ್ತಿಯಾಗಿ ಅಲ್ಲಿ. ಅಸಂಖ್ಯಾತ ಅಸಹನೆಯ ವ್ಯಕ್ತಿತ್ವಗಳ ಪ್ರತೀಕವಾಗಿ ಪ್ರಕಟಗೊಂಡ ಗೋಡ್ಸೆ ಇಂದು ವ್ಯಕ್ತಿಯಾಗಿ ಬದುಕಿಲ್ಲವಾದರೂ ವ್ಯಕ್ತಿತ್ವವಾಗಿ ಬದುಕಿದ್ದಾನೆ. ಮತೀಯ ಮೂಲಭೂತವಾದಿಗಳ ಮದ ಮತ್ಸರಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದಾನೆ. ಗಾಂಧೀಜಿ ಗುಣ ಅವನತಿಯ ಹಾದಿ ಹಿಡಿಯುತ್ತಿರುವ ಸಂದರ್ಭದಲ್ಲಿ ಗೋಡ್ಸೆ ಗುಣ ವಿಜೃಂಭಿಸತೊಡಗುತ್ತದೆ. ಈ ಗೋಡ್ಸೆ ಗುಣಕ್ಕೆ ಗಾಂಧಿ ಗುಣವೇ ಸಂಪೂರ್ಣ ಪರಿಹಾರವೆಂದು ಹೇಳುವ ಸಂದರ್ಭದಲ್ಲಿ ನಾವಿಲ್ಲವಾದರೂ ಎಡ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳು ಹುಡುಕಿಕೊಳ್ಳುತ್ತಿರುವ ಪರಿಹಾರದ ಹಾದಿಯಲ್ಲಿ ಗಾಂಧಿಗುಣ ಸಂಪೂರ್ಣ ಅಪ್ರಸ್ತುತವಾಗುವುದಿಲ್ಲ. ಎಂಬುದು ಅದರ ಹೆಗ್ಗಳಿಕೆಯಾಗಿದೆ. ಅದರಲ್ಲೂ ಗೋಡ್ಸೆ ಗುಣವೊಂದಕ್ಕೆ ಗಾಂಧಿ ಗುಣವೊಂದು ಎದುರಾಗುವುದು ಕೋಮು ಸಾಮರಸ್ಯದ ಮಿತಿಯಲ್ಲಿ ಇಂದಿಗೂ ಸಾಧ್ಯವಾಗುತ್ತದೆ. ಸಂಘರ್ಷದ ಹೋರಾಟಗಳು ಸಾಮರಸ್ಯದ ಮಾತಾಡುವಂತೆ ಹಿನ್ನಡೆಸಿದ ಕೋಮುವಾದದ ಕರಾಳತೆಯನ್ನು ಕೇವಲ ಶುಷ್ಕ ಹೇಳಿಕೆಗಳಲ್ಲಿ ಎದುರಿಸಲು ಸಾಧ್ಯವಿಲ್ಲ. ಕ್ರಿಯೆಗೆ ಇಳಿದಾಗ ಗೊತ್ತಾಗುತ್ತದೆ -ಒಡೆದು ಚೂರಾಗುತ್ತಿರುವ ಮನುಷ್ಯ ಮನಸ್ಸನ್ನು ಒಂದುಗೂಡಿಸಲು ಸಾಮರಸ್ಯ, ಸಮಕಾಲೀನ ಅಗತ್ಯವಾಗಿದೆ. ಯಾಕೆಂದರೆ ಸಾಮರಸ್ಯವನ್ನು ಕದಡುತ್ತಿರುವ ಮತಧರ್ಮಿಯ ಮೂಲಭೂತವಾದಿತನ ನಮ್ಮ ದೇಶದ ಮೂಲಭೂತ ಸಮಸ್ಯೆಗಳನ್ನು ಮರೆಮಾಚುತ್ತದೆ. ಹುಸಿ ಸಮಸ್ಯೆಗಳನ್ನು ಮುಂದು ಮಾಡಿ ಹುಸಿ ಸಂಸ್ಕೃತಿಯನ್ನು ಬಿತ್ತುತ್ತದೆ. ಕೊನೆಗೆ ನೈಜ ರಾಜಕೀಯ ಹೋರಾಟಗಳು ಗೌಣವಾಗಿ ಹುಸಿ ಹೋರಾಟಗಳು ವಿಜೃಂಭಿಸುವಂತೆ ಮಾಡುತ್ತದೆ. ಆದ್ದರಿಂದ ನಮ್ಮ ಸಂದರ್ಭವನ್ನು ನೈಜಸ್ಥಿತಿಗೆ ತರುವ ಕೆಲಸ ಮೊದಲು ಆಗಬೇಕಾಗಿದೆ. ಸಾಮರಸ್ಯದ ಒತ್ತಾಸೆಯೊಂದಿಗೆ ಸಮಾಜ ಬದಲಾವಣೆ ಅಗತ್ಯ ಅನಿವಾರ್ಯಗಳನ್ನು ಪ್ರತಿಪಾದಿಸಬೇಕಾಗಿದೆ. ಜನ ಪ್ರಭುತ್ವ ಸ್ಥಾಪನೆಯ ದಿಕ್ಕಿನಲ್ಲಿ ನಾವೆಲ್ಲ ಜಾತಿವಾದ ಮತ್ತು ಕೋಮುವಾದವನ್ನು ಹತ್ತಿಕ್ಕಲೇಬೇಕಾಗಿದೆ.
ನಮ್ಮ ಜನ ಮುಗ್ಧವಾಗಿ ಒಂದು ಜಾತಿಯವರಾಗಿ, ಒಂದು ಧರ್ಮದವರಾಗಿ ತಮ್ಮಾರಕ್ಕೆ ತಾವು ಬದುಕುವುದು ಬೇರೆ, ಜಾತಿ ಧರ್ಮಗಳನ್ನು ರಾಜಕೀಯ-ಸಾಮಾಜಿಕ ಅಸ್ತ್ರವಾಗಿ ಬಳಸಿಕೊಂಡು ಬಲಪ್ರದರ್ಶನ ಮಾಡುತ್ತ ಅನ್ಯರ ಅವಹೇಳನ ಮತ್ತು ಹಲ್ಲೆಗಳಲ್ಲಿ ತೊಡಗುವುದು ಬೇರೆ. ಮೊದಲನೇಯದು ವಸ್ತುಸ್ಥಿತಿಯ ಒಪ್ಪಿಗೆಯಾದರೆ ಎರಡನೆಯದು ಮುಗ್ಧ ಸ್ಥಿತಿಯೊಂದನ್ನು ಸ್ವಾರ್ಥಕ್ಕೆ ಓಟಿನ ರಾಜಕೀಯಕ್ಕೆ ಬಳಸಿಕೊಳ್ಳುವ ಕ್ಷುದ್ರ ಕಾರ್ಯಾಚರಣೆ, ಜನಮುಖೀ ಮೌಲ್ಯಗಳ ನಿರಾಕರಣೆ.
ಜಾತಿವಾದ ಮತ್ತು ಕೋಮುವಾದಗಳು ಒಟ್ಟಾರೆಯಾಗಿ ಮತೀಯ ಮೂಲಭೂತವಾದವಾಗುತ್ತದೆ. ಅದರಲ್ಲೂ ಪ್ರಬಲ ಜಾತಿಗಳ ಸಂಘಟನೆ. ಬಹುಸಂಖ್ಯಾತರ ಧಾರ್ಮಿಕ ಕಾರ್ಯಾಚರಣೆಗಳು ದುರ್ಬಲ ವರ್ಗ ಮತ್ತು ಅಲ್ಪಸಂಖ್ಯಾತರಲ್ಲಿ ಭಯವನ್ನು ಹುಟ್ಟುಹಾಕುವ ಅಸ್ತ್ರಗಳಾದಂತೆ ರಾಜಕೀಯ ಮೆಟ್ಟಲುಗಳು ಆಗುತ್ತವೆ. ಜಾತಿ ಮತ್ತು ಧರ್ಮಗಳ ಕಾರಣದಿಂದಲೇ ತುಳಿತಕ್ಕೆ ಒಳಗಾದವರು, ತುಳಿತದಿಂದ ವಿಮೋಚನೆಗೊಳ್ಳುವುದಕ್ಕಾಗಿ ಸಂಘಟಿತರಾಗುವುದು ಮತ್ತು ತುಳಿಯುತ್ತ ಬಂದವರು ಸಂಘಟಿತರಾಗುವುದು ಎರಡೂ ಪ್ರತ್ಯೇಕ ನೆಲೆಗಳು, ಆದರೆ ಜಾತಿವಾದ ಮತ್ತು ಕೋಮುವಾದದ ಸೂಕ್ಷ್ಮಗಳು ಯಾವ ನೆಲೆಯಿಂದ ಬಂದರೂ ಅಪಾಯಕಾರಿಯಾಗುತ್ತವೆ. ಬಹುಸಂಖ್ಯಾತರಾಗಲಿ, ಅಲ್ಪಸಂಖ್ಯಾತರಾಗಲಿ ಮತೀಯ ಮೂಲಭೂತವಾದಿಗಳಾದರೆ ಯಾರಿಗೂ ರಿಯಾಯಿತಿ ಕೊಡಲಾಗದು; ಕೊಡಬಾರದು ಈ ದೇಶ ಯಾವೊಂದು ಜಾತಿ-ಧರ್ಮದ ಗುತ್ತಿಗೆಯಲ್ಲ. ವೈದಿಕ ವಸಾಹತು ಶಾಹಿಯಾಗಲಿ, ಬಂಡವಾಳಶಾಹಿಯಾಗಲಿ, ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ನಿಯಂತ್ರಿಸಲು, ಅವೈದಿಕ ನೆಲೆಗಳಿಗೆ ಮತ್ತು ಬಡವರ ಭಾವಕೋಶಕ್ಕೆ ಲಗ್ಗೆ ಹಾಕುತ್ತದೆ. ಈಗ ನವ ವೈದಿಕಶಾಹಿ ಎಲ್ಲ ಜಾತಿಗಳಲ್ಲೂ ಕಾಣಿಸಿ ಕೊಳ್ಳುತ್ತಿದೆ. ಮಾನಸಿಕ ವಸಾಹತುಗಳ ನಿರ್ಮಾಣವಾಗುತ್ತಿದೆ, ಇದು ಎಷ್ಟರಮಟ್ಟಿಗೆ ಪ್ರಬಲವಾಗಿದೆಯೆಂದರೆ ಕೆಲ ವಲಯಗಳಲ್ಲಿ ಮೂಲ ವೈದಿಕರಿಗಿಂತ ಶೂದ್ರಾತಿ ಶೂದ್ರರಲ್ಲಿ ಅವತಾರವೆತ್ತಿದ ನವವೈದಿಕರೇ ಅಪಾಯಕಾರಿ ಯಾಗುತ್ತಿದ್ದಾರೆ.
ಗೊಡ್ಸೆ ಗುಣವೂ ಅಷ್ಟೆ. ಇದು ಘೋಷಿತ ಮತೀಯ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಅಘೋಷಿತ ವಲಯಗಳಲ್ಲಿ ಒಂದು ವ್ಯಕ್ತಿತ್ವವಾಗಿ ಒಳಸೇರುತ್ತಿದೆ. ವಿಧ್ವಂಸಕವಾಗುತ್ತಿದೆ.
ಗೋಡ್ಸೆ ಗುಣದ ಮೂಲ ಲಕ್ಷಣಗಳೆಂದರೆ, ಅಸಹನೆ ಹಾಗೂ ಅಹಂಕಾರ ಮೂಲವಾದ ಆಕ್ರೋಶ, ಸ್ವಾರ್ಥ, ಸಂಚು. ಅನ್ಯರ ಅವಹೇಳನ ಮತ್ತು ಹಲ್ಲೆ. ಸಾಹಿತ್ಯ ಕ್ಷೇತ್ರದ ಗೋಡ್ಸೆಗಳು ಅಕ್ಷರವನ್ನು ಸಂಚಿನ ಸಾಧನವಾಗಿಸಿ ಹಲ್ಲೆ ಮಾಡುತ್ತಾರೆ. ಹುಸಿ ಸಂಸ್ಕೃತಿಯ ಗೋಡ್ಸೆಗಳು ದೇಶಪ್ರೇಮದ ಗುತ್ತಿಗೆ ಹಿಡಿದಂತೆ ವರ್ತಿಸುತ್ತಾ ದೇಶವನ್ನು ಒಡೆಯುತ್ತಾರೆ. ಧರ್ಮದ ಗೋಡ್ಸೆಗಳು ಅಧಾರ್ಮಿಕತೆಯನ್ನೇ ಧಾರ್ಮಿಕತೆಯೆಂದು ಪ್ರಚುರಪಡಿಸುತ್ತಾ ಸಾಮಾನ್ಯರನ್ನು ಹಾದಿ ತಪ್ಪಿಸುತ್ತ ಹುಸಿ ಸಂಸ್ಕೃತಿಯ ವಕ್ತಾರರಿಗೆ ಒತ್ತಾಸೆಯಾಗುತ್ತಾರೆ. ರಾಜಕೀಯ ಗೋಡ್ಸೆಗಳು ಇದೆಲ್ಲವನ್ನೂ ಒಳಗೊಳ್ಳುತ್ತ ಓಟಿನ ಲೆಕ್ಕಾಚಾರಕ್ಕೆ ತಕ್ಕಂತೆ ವಂಚನೆಯ ಜಾಲವನ್ನು ವಿಸ್ತರಿಸುತ್ತಾರೆ.
ಗೋಡ್ಸೆ ಗುಣದ ವೈಚಿತ್ರ್ಯವೆಂದರೆ, ಅದು ಮತೀಯ ಮೂಲಭೂತ ವಾದದಲ್ಲಿ ಕಾಣಿಸಿಕೊಂಡಷ್ಟು ಸ್ಪಷ್ಟವಾಗಿ ನೇರವಾಗಿ, ಇತರೆ ವಲಯಗಳಲ್ಲಿ ಕಾಣುವುದಿಲ್ಲ. ಏಕೆಂದರೆ ಕೆಲವು ವಲಯಗಳಲ್ಲಿ ಗಾಂಧಿ ಗುಣ ಮುಖವಾಡದ ಮೂಲಕ ಗೋಡ್ಸೆ ಗುಣವು ಹೊಂಚುಹಾಕುತ್ತದೆ, ಸಂಚು ಮಾಡುತ್ತದೆ. ಸೃಜನಶೀಲತೆಯ ಹೆಸರಿನಲ್ಲಿ ಸೃಜನಶೀಲತೆಯನ್ನು ನಾಶ ಮಾಡುತ್ತದೆ. ಸಂಸ್ಕೃತಿಯ ಹೆಸರಿನಲ್ಲಿ ಜನ ಸಂಸ್ಕೃತಿಯನ್ನು ಮೂಲೆಗೆ ತಳ್ಳುತ್ತದೆ. ಏಕತೆಯ ಹೆಸರಿನಲ್ಲಿ ಒಡಕನ್ನು ಬಿತ್ತುತ್ತದೆ. ಇದೆಲ್ಲ ಅಮೂರ್ತ ನೆಲೆಯಲ್ಲಿ ನಡೆಯುವುದರಿಂದ ಮೊದಲ ನೋಟಕ್ಕೆ ಗೊತ್ತಾಗುವುದಿಲ್ಲ. ಮತೀಯ ಮೂಲಭೂತವಾದ ವಿರುದ್ಧವಾಗಿ ಜಾಗೃತಿ ಮಾಡುತ್ತಿರುವುದರಿಂದ ಅಲ್ಲಿನ ಗೋಡ್ಸೆ ಗುಣ ಮೂರ್ತರೂಪದಲ್ಲಿ ಕಾಣಿಸುತ್ತದೆ. ಸಾಂಸ್ಕೃತಿಕ ಕ್ಷೇತ್ರದ ಗೋಡ್ಸೆಗುಣ ಇಷ್ಟು ಬೇಗ ಪತ್ತೆಯಾಗುವುದಿಲ್ಲ.
ಗೋಡ್ಸೆ ಗುಣವನ್ನು ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ವ್ಯಕ್ತಿ, ವಲಯಗಳಿಗೆ ಮಾತ್ರ ಸಂಬಂಧಿಸಿದಂತೆ ನಾನು ಕಾಣುತ್ತಿಲ್ಲ. ಸಾಮಾಜಿಕ-ಸಾಂಸ್ಕೃತಿಕ ಸಮಚಿತ್ತವನ್ನು ನಾಶ ಮಾಡುವ ಸಮೂಹ ಸನ್ನಿಯಾಗಿಯೂ ಇದು ಕಾಣಿಸುತ್ತಿದೆ. ವ್ಯಕ್ತಿಯ ರಾಗದ್ವೇಷಗಳ ವೈಪರೀತ್ಯ ವಾಗಿಯೂ ಕಾಣಿಸುತ್ತಿದೆ. ಬಿಡಿಯಾದ ವ್ಯಕ್ತಿತ್ವವಾಗುವುದರ ಜೊತೆಗೆ ಸಾಮಾಜಿಕ ವ್ಯಕ್ತಿತ್ವವೂ ಆಗುತ್ತಿದೆ. ಒಬ್ಬೊಬ್ಬರಲ್ಲಿ ಗೋಡ್ಸೆ ವ್ಯಕ್ತಿತ್ವ ಕಾಣಿಸಿಕೊಳ್ಳುವುದು ವ್ಯಕ್ತಿ ವೈಪರೀತ್ಯದ ಲಕ್ಷಣವಾಗುತ್ತದೆಯಾದ್ದರಿಂದ ಅದು ಹೆಚ್ಚು ಆತಂಕಕಾರಿ ಯಾಗದೆ ಇರಬಹುದು. ಆದರೆ ಗೋಡ್ಸೆ ಗುಣ ಸಾಮಾಜಿಕ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಮುಂತಾದ ಜನಪ್ರಿಯ ಮಾದರಿಗಳ ಮುಖವಾಡದಲ್ಲಿ ಮನೆ ಮಾಡುವುದು, ಕಡೆಗೆ ಮುಖವೇ ಆಗುವುದು ಅತ್ಯಂತ ಅಪಾಯಕಾರಿ. ಆದ್ದರಿಂದ ಗೋಡ್ಸೆ ಗುಣ ಸಾಮಾಜಿಕ ವ್ಯಕ್ತಿತ್ವವಾಗಿ ವಿಸ್ತರಣೆಗೊಳ್ಳುವುದನ್ನು ತಡೆಯಲು ಸಾಮೂಹಿಕ ಸಂಘಟನಾತ್ಮಕ ಪ್ರಯತ್ನಗಳು ಬೇಕು. ಇದು ನಮ್ಮ ನಾಡಿನ ನೈಜ ಪ್ರಗತಿಪರ ಶಕ್ತಿಗಳ ಮುಂದಿರುವ ಸವಾಲು.
*****
೧೬-೪-೧೯೯೫