ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು ಆರಾಮವಾಗಿ ಕುಳಿತಳು. ಅದರಲ್ಲಿ ಕೊಲೆ, ಕಪಟ, ಕಳ್ಳತನ, ದುರ್ಘಟನೆಗಳು, ದುಷ್ಕರ್ಮಗಳು, ದ್ವೇಷ, ಯುದ್ಧ ಭೀತಿ, ಪ್ರಕೃತಿ ವಿಕೋಪ, ಪ್ರವಾಹ, ಪೀಡೆ, ಕೋಮುವಾರು ಗಲಭೆ, ಹೀಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಸಾವಿರಾರು ಸಾಯುವ ಜನರಬಗ್ಗೆ ಓದಿ ಅವಳು ಅನ್ಯಮನಸ್ಕಳಾದಳು. ಬುದ್ದಿ ಮಂಕಾಯಿತು. ಶಕ್ತಿ ಕುಂದಿದ ಹಾಗೆ ಆಯಿತು. ದೂರದರ್ಶನ, ರೇಡಿಯೋ ಮನರಂಜನೆಗೆಂದು ಹಾಕಿದಳು. ಮತ್ತೆ ಅದೇ ಮನಕಲಕುವ ಸುದ್ದಿಗಳು. ಸಂಜೆ ಮತ್ತೆ ಅವಳು ದರ್ಪಣದಲ್ಲಿ ತನ್ನ ಮುಖವನ್ನು ನೋಡಿಕೊಂಡಳು. ಇದೇನು ಮುಂಜಾನೆಯ ಆರೋಗ್ಯ ಈಗ ಏಕೆ ಇಷ್ಟು ಹದಗೆಟ್ಟಿತು? ಎಂದು ಯೋಚಿಸಿ ಜೋಲು ಮುಖಹಾಕಿ ಕೊಂಡಳು. ಕೈ ಜೋಡಿಸಿ “ಲೋಕಾ ಸಮಸ್ತಾ ಸುಖಿನೋ ಭವಂತು” ಎಂದು ಪ್ರಾರ್ಥಿಸಿದಳು.
*****