ನಾಗನ ವರಿಸಿದ ಬಿಂಬಾಲಿ…

ನಾಗನ ವರಿಸಿದ ಬಿಂಬಾಲಿ…

ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು.

ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ ಅನೇಕ ಸಂಬಂಧಗಳನ್ನು ಬಿಂಬಾಲಿಗೆ ಮದುವೆ ಮಾಡಲು ನೋಡಿದ್ದರು. ಆದರೂ ಯಾವ ಸಂಬಂಧವೂ ಕುದುರಲಿಲ್ಲ, ಅಣ್ಣ ತನ್ನ ವ್ಯವಸಾಯದ ಕೆಲಸದಲ್ಲಿ ನಿರತನಾಗಿದ್ದು ಬಿಂಬಾಲಿಯ ಮದುವೆ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ಅತ್ತಿಗೆ ಅಧಿಕಾರವಾಣಿ, ಅವಳ ದಬ್ಬಾಳಿಕೆ ಬಿಂಬಾಲಿಗೆ ಬೇಸರ ತಂದಿತ್ತು. ಅವಳ ಅಮ್ಮನಂತೂ ಅಸಹಾಯಕತೆಯಿಂದ ಏನನ್ನೂ ಮಾಡದಾಗಿದ್ದಳು. ಮಗಳಿಗಾಗಿ ಮಮತೆಯ ಕಣ್ಣೀರಿಡುವುದು ಒಂದೇ ಅವಳಿಗೆ ಗೊತ್ತಿತ್ತು.

ಬಿಂಬಾಲಿ, ಅತ್ತಿಗೆಯ ಮಾತುಗಳಿಂದ ನೊಂದಾಗ ಅವಳಿಗೆ ನೆಮ್ಮದಿ ಕೊಡುತ್ತಿದ್ದ ತಾಣವೆಂದರೆ ಮನೆಯ ಹಿಂಭಾಗದ ತೋಟ. ಅವಳು ಅಲ್ಲಿಗೆ ಹೋಗಿ ಒಂದು ನಾಗರ ಹುತ್ತದ ಪಕ್ಕದಲ್ಲಿ ಕುಳಿತು ತನ್ನ ಕಣ್ಣೀರು ಸುರಿಸುತ್ತಿದ್ದಳು. ಅವಳಿಗೆ ಒಂದು ರೀತಿಯ ನೆಮ್ಮದಿ ಶಾಂತಿ ದೊರೆಯುತ್ತಿತ್ತು. ಒಮ್ಮೊಮ್ಮೆ ನಾಗರವೂ ತಲೆಯಾಡಿಸುತ್ತಾ ಹುತ್ತದಿಂದ ಮೇಲೆ ಬಂದು ಅವಳನ್ನು ಸಂತೈಸುವಂತೆ ತಲೆ ತೂಗುತಿತ್ತು.

ಬಿಂಬಾಲಿಗೆ ಮನುಷ್ಯರಲ್ಲಿ ದೊರೆಯದ ಅಭಯ ಆಶ್ರಯ ಸಾಂತ್ವನ ಹಾವಿನ ಹುತ್ತದ ನಾಗರನಲ್ಲಿ ಸಿಕ್ಕುತ್ತಿತ್ತು.

ನಾಗರ ಅವಳ ಎದುರಿಗೆ ಬಂದಾಗ ಅವಳ ಹೃದಯದಲ್ಲಿ ಧೈರ್ಯ ಸ್ಥೈರ್ಯದ ಅಪೂರ್ವ ಅನುಭವವಾಗುತ್ತಿತ್ತು.

ಹುತ್ತದ ಬಳಿ ಕುಳಿತ ಬಿಂಬಾಲಿಯನ್ನು ಅವಳ ಅಮ್ಮ ಗಮನಿಸಿ “ಬಿಂಬಾಲಿ, ಇದೇನು ಹಗಲು ರಾತ್ರಿ ನಾಗರ ಹುತ್ತಕ್ಕೆ ಜೋತುಬಿದ್ದಿರುವೆ. ಹಾವೂ ಕಚ್ಚಿದರೆ ಅನಾಹುತ ವಾಗುವುದಿಲ್ಲವೇ?” ಎನ್ನುತ್ತಿದ್ದರು.

ಅಮ್ಮ ಕರೆದಾಗ ಒಳಗೆ ಬಂದರು ಅವಳ ಹೃದಯ ಪದೇ ಪದೇ ನಾಗರ ಹುತ್ತದೆಡೆಗೆ ಆಕರ್ಷಿತವಾಗುತ್ತಿತ್ತು. ಆ ಹುತ್ತದ ನಾಗರದಲ್ಲಿ ಅವಳಿಗೊಂದು ಅಯಸ್ಕಾಂತ ಶಕ್ತಿ ಕಾಣುತಿತ್ತು.

ಗೆದ್ದಲು ಕಟ್ಟಿ (ಯುಹುಂಕಾ)ದ ನಾಗರ ಹುತ್ತದಲ್ಲಿ ಒಮ್ಮೆ ಅವಳಿಗೆ ನಾಗನ ಅದ್ಭುತ ಸಂದರ್ಶನವಾಗಿತ್ತು.

ನಾಗನನ್ನು ಸಂದರ್ಶಿಸಿದ ಪ್ರಥಮ ಕ್ಷಣದಲ್ಲಿ ಅವಳಿಗೆ ಅವನಲ್ಲಿ ಒಲವು ಮೂಡಿತ್ತು. ಇದೊಂದು ಮಾನವಾತೀತವಾದ ನಾಗರ ಮತ್ತು ಯುವತಿಯ ಪ್ರೇಮ ವ್ಯವಹಾರವಾಗಿತ್ತು. ಮಾನವರಲ್ಲಿ ಹೆಣ್ಣುಗಂಡಿನ ಆಕರ್ಷಣೆ ಅದು ಬಲು ಸಹಜ. ಆದರೆ ನಾಗ ಮತ್ತು ಯುವತಿಯದು ಅಪ್ರಾಕೃತಿಕ, ಅಸಹಜವಾದರೂ ಅದು ದೈವೀಕವಾಗಿತ್ತು, ನಿಗೂಢವಾಗಿತ್ತು, ಅತೀಂದ್ರವಾಗಿತ್ತು. ಅವಳಿಗೆ ನಾಗನಲ್ಲಿ ಮೂಡಿದ ಒಲವು ಅತಿ ಸಹಜವೆನಿಸುತಿತ್ತು ಅವಳ ಮನವನ್ನು ಸಂತಸದಲ್ಲಿ ತೇಲಿಸುತಿತ್ತು.

ಅವಳು ನಾಗರ ಹುತ್ತದ ಜೊತೆ ಯಾವಾಗಲು ಸಮಯ ಕಳೆವುದನ್ನು ತಾಯಿ ನೋಡಿ ಅವಳನ್ನು ಆಗ್ರಹಪೂರ್ವಕ ತಡೆಯುತ್ತಿದ್ದರು.

ಬಿಂಬಾಲಿಗೆ ಅವಳ ಮನ, ನದಿ ಹರಿದು ಸಾಗರ ಸೇರುವಂತೆ ಅವಳ ಹೃದಯ, ಸಾಗರ ಹುತ್ತದೆಡೆ ಹೋಗುತಿತ್ತು. ಅವಳು ಹದಿನಾಲ್ಕು ವರ್ಷ ಪ್ರೇಮತಪದಲ್ಲಿ ಕಳೆದಳು. ಮನೆಯಲ್ಲಿ ಅತ್ತಿಗೆಯದು ಅದೇ ಕಾಟ, ಅಣ್ಣನದು ಅದೇ ನಿರ್ಲಕ್ಷ್ಯ. ಅಮ್ಮನದು ಅದೇ ಪ್ರೀತಿಯ ಅಮೃತಧಾರೆ. ಎಲ್ಲದಕ್ಕೂ ಮಿಗಿಲಾಗಿ ನಾಗನ ಒಡನಾಟ, ಸಹವಾಸ ಅವಳಿಗೆ ಬದುಕಿಗೆ ಒಂದು ಅರ್ಥವನ್ನಿತ್ತಿದ್ದವು.

ಒಂದು ದಿನ “ಅಮ್ಮ!” ಎಂದು ಬಿಂಬಾಲಿ ಪಿಸುಗುಟ್ಟಿದಳು. “ಏನು ಮಗಳೇ ? ನಿನ್ನ ಹೃದಯವನ್ನು ಕಾಡುತ್ತಿರುವ ವಿಷಯವೇನು?” ಎಂದು ಕೇಳಿದಳು.

“ಅಮ್ಮ ! ನಾನು ನಾಗ ದೇವನನ್ನು ವರಿಸಬೇಕೆಂದಿರುವೆ. ನಿಮ್ಮೆಲ್ಲರ ಒಪ್ಪಿಗೆ ಬೇಕು” ಎಂದಳು.

ಅಮ್ಮನಿಗೆ ಬರಸಿಡಿಲು ಬಡಿದಂತಾಯಿತು.

“ಇದೇನು ಮಗಳೇ ! ಮಾನಿನಿಯಾದ ನಿನಗೆ ನಾಗರನೊಡನೆ ಮದುವೆಯೇ ? ಇದು ಎಂದಿಗೂ ಸಾಧ್ಯವಿಲ್ಲ ವಿಷವನ್ನು ಹೊತ್ತ ಹುತ್ತದ ನಾಗರದೊಂದಿಗೆ ಮದುವೆ ಯಾಕೆ ? ಇಂತಹದು ಯಾರೂ ಕಂಡು ಕೇಳಿ ಅರಿಯರು. ಮಗಳೆ ! ಹಾಗೆ ಮಾತ್ರ ಮಾಡಬೇಡ” ಎಂದು ಅಮ್ಮ ಅಂಗಲಾಚಿದಳು.

“ಅಮ್ಮಾ! ಮನುಷ್ಯನ ನಾಲಿಗೆಯಲ್ಲೂ ವಿಷ ತುಂಬಿದೆ. ನಂಜಿದೆ. ಹಾಗೇ ಅವನ ಹೃದಯದಲ್ಲಿ ಅಮೃತ ಕುಂಭವೂ ಇದೆ. ಆದರೆ ಮಾನವ ಜನಾಂಗ ಹಾಲಾಹಲವನ್ನು ಚೆಲ್ಲಾಡಿ ಉಕ್ಕಾಡಿ ಅಸೂಯೆ, ದ್ವೇಷಗಳಲ್ಲಿ ನಾಶವಾಗುತ್ತಿದ್ದಾನೆ. ಅಮೃತ ಕುಂಭವನ್ನು ಹೃದಯದಿಂದ ತೆಗೆದು ಎಲ್ಲರಿಗೂ ಪ್ರೀತಿ ಹಂಚಿ ಬಾಳಬೇಕು. ಅಂತಹವರು ಬಹಳ ಕಡಿಮೆಯಲ್ಲವೇ? ಅಮ್ಮಾ!” ಎಂದಳು.

“ಮಗಳೇ ! ನೀನು ಹೇಳುವುದರಲ್ಲಿ ಸತ್ಯವಿದೆ. ಆದರೆ ನಿನ್ನ ಈ ದೃಢ ನಿರ್ಧಾರ ನನ್ನ ಕಂಗೆಡಿಸುತ್ತದೆ.”

“ಅಮ್ಮಾ! ಅಂಜಿ ಅಳುಕಬೇಡ, ನಾಗರದ ನಾಲಿಗೆ ನಂಜು, ಅದು ಕೆದಕಿದಾಗ ಮಾತ್ರ, ನಾಗರವನ್ನು ಪ್ರೇಮಿಸಿ, ಪೂಜಿಸಿದಾಗ ಅದು ನನ್ನ ಪ್ರೇಮಿಯು, ಜೀವನ ಜೊತೆಗಾರನು ಆಗಬಲ್ಲದು. ನಾನು ಹುತ್ತದ ಬಳಿ ತೆರಳಿದಾಗಲೆಲ್ಲಾ ಆತ ನನಗೆ ದರ್ಶನ ವಿತ್ತಿದ್ದಾನೆ. ಯಾವತ್ತೂ, ಈ ಹದಿನಾಲ್ಕು ವರ್ಷಗಳಲ್ಲಿ ನನಗೆ ಅಪಾಯ ಮಾಡಿಲ್ಲ. ನಮ್ಮದು ಹದಿನಾಲ್ಕು ವರ್ಷದ ಸದೃಢ ಪ್ರೇಮ” ಎಂದಳು.

“ಮಗಳೇ ! ಹಾವುಗಳು ಮೂಕ ಪ್ರಾಣಿಗಳು, ಅದರ ಜೊತೆ ಮದುವೆ ಹೇಗಮ್ಮ ?”

“ಹಾವುಗಳಿಗೆ ಮಾತು ಬರುವುದಿಲ್ಲ ನಿಜ. ಆದರೆ ನಾವು ವಿಶಿಷ್ಟ ರೀತಿಯಲ್ಲಿ ಅದನ್ನು ಮಾತನಾಡಿಸಿದಾಗ ಅದು ಸ್ಪಂದಿಸುತ್ತದೆ. ನಾನು ತುಂಬ ಪ್ರೀತಿಯಿಂದ ಅರ್ಪಿಸಿದ ಹಾಲನ್ನು ಒಂದು ದಿನವೂ ಅದು ತಿರಸ್ಕರಿಸಿಲ್ಲ. ಅಂದರೆ ಅದು ನನ್ನ ಪ್ರೇಮವನ್ನು ಸ್ವೀಕರಿಸಿದೆ. ನಾಗರ ನನಗೆ ಈ ಆಶ್ವಾಸನೆ ಕೊಟ್ಟಿದೆ. ನನಗೆ ನಾಗರನ ಜೊತೆಯ ನನ್ನ ಬಾಳ್ವೆಯಲ್ಲಿ ಪೂರ್ಣನಂಬಿಕೆ ಇದೆ. ನಿನ್ನ ಸಮ್ಮತ್ತಿಗಾಗಿ ಕಾಯುತ್ತಿರುವೆ ಅಮ್ಮಾ” ಎಂದಳು ಬಿಂಬಾಲಿ.

“ಮಗಳೇ! ಹಳ್ಳಿಯವರ ಮುಂದೆ ಈ ಮದುವೆಯ ಪ್ರಾಸ್ತಾಪ ಮಾಡುತ್ತೇನೆ. ಅವರು ಅಪ್ಪಣೆ ಕೊಟ್ಟರೆ ಅವರುಗಳನ್ನೇ ಈ ಮದುವೆ ನಡೆಸಿಕೊಡಲು ಕೇಳಿಕೊಳ್ಳುತ್ತೇನೆ” ಎಂದಳು. ನಾಗರನ ಜೊತೆ ವಿವಾಹವಾಗುವ ವಿಚಾರವನ್ನು ಗ್ರಾಮಸ್ಥರ ಮುಂದಿಡಲು ಬಿಂಬಾಲಿಯ ತಾಯಿ ಸನ್ನದ್ಧರಾದರು. ವಿಷಯ ಪ್ರಸ್ತಾಪವಾದಾಗ ಗ್ರಾಮದವರಿಂದ ಉತ್ಸಾಹದ ಪ್ರತಿಕ್ರಿಯೆ ದೊರೆಯಿತು. ಒಬ್ಬ ಗ್ರಾಮಸ್ಥ ಹೇಳಿದ “ಇದು ನಿಜವಾದ ದೈವಿಕ ವಿವಾಹ. ಇದು ಗ್ರಾಮಕ್ಕೆ ಅದೃಷ್ಟ ತರುವಲ್ಲಿ ಸಂದೇಹವಿಲ್ಲ” ಎಂದ.

ಇನ್ನೊಬ್ಬ ಗ್ರಾಮಸ್ಥ ಮುಂದೆ ಬಂದು “ನಾನು ಈ ಅಲೌಕಿಕ ಕಲ್ಯಾಣದ ಭವ್ಯ ಔತಣದ ಖರ್ಚನ್ನು ನಾನು ಭರಿಸಿ ಧನ್ಯನಾಗುತ್ತೇನೆ” ಎಂದ.

ಮತ್ತೊಬ್ಬ ಗ್ರಾಮಸ್ಥ ಒಂದು ಸಲಹೆಯೊಂದಿಗೆ ಮುಂದೆ ಬಂದ ‘ಇಲ್ಲಿ ಒಂದು ತೊಡಕು ಇದೆ. ಬಿಂಬಾಲಿ ಕೆಳಜಾತಿಗೆ ಸೇರಿದವಳು. ನಾಗರ ವಿಷ್ಣುವಿನ ಶಯನಕ್ಕೆ ಒದುಗುವವನು. ಈಶ್ವರನಿಗೆ ಕೊರಳ ಮಾಲೆಯಾಗುವವನು. ಆದ್ದರಿಂದ ಬಿಂಬಾಲಿಯನ್ನು ವೈಷ್ಣವ ಕುಲಕ್ಕೆ ಪರಿವರ್ತಿಸಿ ಈ ವಿವಾಹವನ್ನು ಮಾಡೋಣ’ ಎಂದ.

ಅದಕ್ಕೆ ತಾಯಿ ದ್ಯುತಿ ಭೋಯಿ ಹಾಗೂ ಗ್ರಾಮಸ್ಥರು ಒಪ್ಪಿಕೊಂಡರು. ಒಂದು ವಾರದಲ್ಲಿ ಎಲ್ಲಾ ತಯಾರಿಗಳು ಅದ್ದೂರಿಯಿಂದ ಆಗತೊಡಗಿದವು. ಗ್ರಾಮಕ್ಕೆ ಗ್ರಾಮವೇ ಅದು ತಮ್ಮ ಮನೆಯ ಮದುವೆ ಎಂಬಂತೆ ಉತ್ಸಾಹದಿಂದ ಏರ್ಪಾಡುಗಳನ್ನು ಮಾಡತೊಡಗಿದರು.

ಪುರೋಹಿತರನ್ನು ಕರೆಸಲಾಯಿತು. ಇಂತಹ ಅಪೂರ್ವ ಮದುವೆಗೆ ಬೇಕಾದ ಸಜ್ಜಿಕೆಯನ್ನು ಮಾಡಲಾಯಿತು. ದಿಟದ ನಾಗರ ವರ ಹಾಜರಿರುವುದು ಅಸಂಭವವಾಗಿತ್ತು. ಕಲ್ಲುನಾಗರ ಅದು ಅಪ್ರಸ್ತುತವಾಗುತ್ತದೆ. ಅದಕ್ಕೆ ತಾಮ್ರದ ತಗಡಿನಲ್ಲಿ ನಾಗರನ ಪ್ರತಿರೂಪ ಮಾಡಿ ಮದುವಣಗಿತ್ತಿಯ ಹಸೆಮಣೆಯ ಪಕ್ಕದಲ್ಲಿ ಇರಿಸಲಾಯಿತು. ಕಲ್ಯಾಣ ಮಂಟಪ ಹೂವು ಹಣ್ಣು, ಬಾಳೆಯ ಎಲೆ ತಂಗಿನ ತೋರಣ ಮಾವಿನ ತೋರಣಗಳಿಂದ ಅಲಂಕೃತವಾಗಿತ್ತು. ಎಲ್ಲೆಲ್ಲೂ ಸಂಭ್ರಮ ಸಡಗರ, ದೀಪ ಧೂಪ ಅಲಂಕಾರ, ನಾದಸ್ವರ ಡೋಲು ಢಮರು ಶಂಖ ವಾದ್ಯಗಳು ಮೊಳಗುತ್ತಿದ್ದವು. ಎರಡು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಮದುವೆಗೆ ಹಾಜರಿದ್ದರು. ಹಿಂದೂ ಸಂಪ್ರದಾಯದ ಪದ್ಧತಿಯಂತೆ ಪುರೋಹಿತರು ಎಲ್ಲ ವಿಧಿಗಳನ್ನು ಪೂರೈಸಿದರು. ಮಂತ್ರ ಪಠನ ಮಾಂಗಲ್ಯಧಾರಣೆ ‘ಸುಮುಹೂರ್ತ ಸಾವಧಾನಾ’ ಘಂಟಾ ಘೋಷವಾಗಿ ಕೇಳಿಬರುತ್ತಿರಲು ನಾದಸ್ವರದ ಗಟ್ಟಿಮೇಳ ತಾರಕಕ್ಕೆ ಹೋಗಿರಲು ನಾಗರನ ಪ್ರಾತಿನಿಧ್ಯವನ್ನು ಮಾಡಿ ತಾಯಿ ಬಿಂಬಾಲಿಗೆ ಮಾಂಗಲ್ಯ ಕಟ್ಟಿದಳು.

ಬಿಂಬಾಲಿ ನಯನಗಳಲ್ಲಿ ಪ್ರೇಮದ ಅಶ್ರುಧಾರೆ ಹರಿಯಿತು. ತಾಯಿ ಕಣ್ಣೀರಲ್ಲಿ ಮಿಂದು ಎಂದೂ ನೆನಸಿರದ ಈ ಮದುವೆ ದೈವ ನಿಶ್ಚಯವೆಂದೇ ತಿಳಿದು ಸುಮ್ಮನಾದಳು.

ಮದುವೆಯ ಭೂರಿಭೋಜನವನ್ನು ಮಾಡಿ ಬಂದ ಗ್ರಾಮಸ್ಥರು ಶ್ರೀಮತಿ ಬಿಂಬಾಲಿ ನಾಗಿಣಿಯನ್ನು ಹರಸಿ ನಾಗನಿಂದ ಆಶೀರ್ವಾದ ಪಡೆದರು. ಸಾಯಂಕಾಲ ಆರತಕ್ಷತೆ ಮೆರವಣಿಗೆ ಕೂಡ ನೂರು ಪೆಟ್ರೊಮಾಕ್ಸ್ ದೀಪಗಳನ್ನು, ಕೀಲುಕುದುರೆಗಳನ್ನು ಬೊಂಬೆಕುಣಿತ ಎಲ್ಲವನ್ನೂ ಏರಡಿಸಿದ್ದರು. ಗ್ರಾಮದ ಸುತ್ತಲೂ ವಿಜೃಂಭಣೆಯ ಮೆರವಣಿಗೆ ಸಾಗಿತು. ಜನರು ನೃತ್ಯ ಗಾಯನ ಮಾಡುತ್ತ ಹರ್ಷೋದ್ಧಾರ ಮಾಡಿದರು. ನಾಗಿಣಿ ಬಿಂಬಾಲಿ ಈಗ ದೇವಿಯ ಸ್ಥಾನಮಾನ ಪಡೆದಿದ್ದಳು. ಸಕಲ ಸೌಭಾಗ್ಯವತಿ ಎಂದು ಪೂಜಿಸಲರ್ಹಳಾದಳು. ಅವಳ ತ್ಯಾಗ ಅರ್ಪಣೆ, ಪ್ರೀತಿ ಪ್ರೇಮದಲ್ಲಿ ಬಾಳ ಪೂರ್ಣತೆಯನ್ನು ಬಾಳ ಸತ್ಯವನ್ನು ಕಂಡುಕೊಂಡಿದ್ದಳು. ನಾಗನ ವರಿಸಿದ ಮಾನಿನಿ ಗ್ರಾಮವಂದ್ಯಳು ವಿಶ್ವ ಪ್ರಖ್ಯಾತಳೂ ಆದಳು.


Previous post ಸೂರ್ಯ
Next post ಕನಸೊಂದ ಕಂಡೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys