ನವೆಂಬರ್ ನಾಯಕರು

ನವೆಂಬರ್ ನಾಯಕರು

ನವೆಂಬರ್ ತಿಂಗಳೆಂದರೆ ಕನ್ನಡದ ತಿಂಗಳೆಂದೇ ಪ್ರಸಿದ್ದಿ. ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಮುಂದಕ್ಕೆ ಹೋಗಲು ಹೇಗೆ ಸಾಧ್ಯ? ಹನ್ನೊಂದು ತಿಂಗಳ ನಿದ್ದೆಗೆ ಬಂದ ಒಂದು ತಿಂಗಳ ಎಚ್ಚರ ವೆಂಬಂತೆ ಈ ನವೆಂಬರ್ ತಿಂಗಳು ಬಂದು ಹೋಗುತ್ತದೆ. ಬೀದಿ ಬೀದಿಯಲ್ಲಿ ಕನ್ನಡ ರಾಜ್ಯೋತ್ಸವದ ರಂಗು ತರುವ ಪಡ್ಡೆ ಪ್ರಯತ್ನಗಳು ನಡೆದು ನವೆಂಬರ್ ತಿಂಗಳ ನಂತರ ತಂಗಳಾಗುವ ತೀವ್ರತೆ, ಪ್ರತಿವರ್ಷವೂ ಪುನರಾವರ್ತನೆ ಗೊಳ್ಳುತ್ತಿದೆ.

ಕನ್ನಡಿಗರಿಗೆ ಅಭಿಮಾನ ಶೂನ್ಯತೆ ಆವರಿಸಿದೆಯೆಂಬ ಮಾತು ತೀರಾ ಹಳೆಯದು. ಆದರೆ ಈಗಲೂ ನವೆಂಬರ್ ತಿಂಗಳಲ್ಲಿ ತುಂಬಿ ತುಳುಕುವ ಈ ಮಾತು ಹೊಸ ವೇಷದಲ್ಲಿ ವಿಜೃಂಭಿಸುತ್ತದೆ. ‘ನಿಮಗೆ ಅಭಿಮಾನವಿಲ್ಲ. ನಿಮ್ಮಂಥ ನಿರಭಿಮಾನಿಗಳು ಬೇರೆಲ್ಲೂ ಸಿಗುವುದಿಲ್ಲ’ ಎಂದು ವೇದಿಕೆಯ ಮೇಲಿಂದ ತಿಳಿಯುವ ಭಾಷಣಗಳನ್ನು ಹೇಳಿದ ಕನ್ನಡಿಗ ಚಪ್ಪಾಳೆ ತಟ್ಟುತ್ತಾರೆ. ಈ ಚಪ್ಪಾಳೆ ನಿರಭಿಮಾನ ಟೀಕೆಗೆ ಒಪ್ಪಿಗೆಯೊ, ಎಚ್ಚೆತ್ತ ಕೈಗಳ ತೀವ್ರತೆಯೊ ಗೊತ್ತಾಗುವುದಿಲ್ಲ. ಕೇಳಿದ್ದನ್ನೇ ಕೇಳಿ ಕನ್ನಡದ ಬಗ್ಗೆ ಮರುಕ ಪಡುವುದನ್ನು ನವೆಂಬರ್ ಆಚರಣೆಯೆಂಬಂತೆ ಒಪ್ಪಿಕೊಂಡಿರುವ ಕನ್ನಡಿಗ, ತನ್ನನ್ನು ತಾನೇ ಒಮ್ಮೆ ಕೇಳಿಕೊಳ್ಳಬೇಕಾಗಿದೆ : ‘ನಿಜಕ್ಕೂ ನಾನು ನಿರಭಿಮಾನಿ ? ಹತ್ತಿಪ್ಪತ್ತು ವರ್ಷಗಳ ಹಿಂದಿನಂತೆಯೇ ನಾನಿದ್ದೇನೆಯೆ ? ಕರ್ನಾಟಕದಲ್ಲಿ ಏನು ಬದಲಾವಣೆಯಾಗಿಲ್ಲವೆ?’- ಹೀಗೆ ಪ್ರಶ್ನಿಸಿಕೊಳ್ಳುತ್ತ ಉತ್ತರ ಹುಡುಕುತ್ತಾ ಹೋದಂತೆ ಸತ್ಯದ ನೆಲೆ ಸಿಕ್ಕುತ್ತದೆ. ಕಳೆದು ಹೋಗುತ್ತಿರುವ ಕನ್ನಡಾಭಿಮಾನವು ಸಿಕ್ಕುತ್ತದೆ. ಇಲ್ಲದಿದ್ದರೆ ಪ್ರತಿವರ್ಷವೂ ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಮಾತನಾಡುವ ಸಂಪ್ರದಾಯಕ್ಕಾಗಿಯೆ ಹಬ್ಬ ಆಚರಿಸಿದಂತಾಗುತ್ತದೆ.

ಸತ್ಯವನ್ನು ಹುಡುಕುತ್ತಾ ಹೋದಂತೆ ಇವತ್ತು ಸ್ವಲ್ಪವಾದರೂ ಬದಲಾವಣೆ ಆಗಿರುವುದು ತಾನೇ ತಾನಾಗಿ ಕಾಣಿಸುತ್ತದೆ. ಮೊದಲಿಗಿಂತ ಹೆಚ್ಚು ಕನ್ನಡ ಸಂಘ ಸಂಸ್ಥೆಗಳು ಹುಟ್ಟುತ್ತಿವೆ; ಪ್ರತಿ ಕಛೇರಿ, ಕಾರ್ಖಾನೆ, ಬಡಾವಣೆಗಳಲ್ಲಿ ರಾಜ್ಯೋತ್ಸವವನ್ನು ವ್ಯವಸ್ಥೆಗೊಳಿಸುವ ಉತ್ಸಾಹ ಹತ್ತು ಪಟ್ಟಾದರೂ ಹೆಚ್ಚಾಗಿದೆ. ಕನ್ನಡ ಪುಸ್ತಕಗಳನ್ನು ಮೊದಲಿಗಿಂತ ಹೆಚ್ಚು ಜನ ಕೊಂಡುಕೊಳ್ಳುತ್ತಾರೆ; ಓದುತ್ತಾರೆ, ಒಂದು ಸಮೀಕ್ಷೆ ಪ್ರಕಾರ ಕನ್ನಡದಲ್ಲಿ ಕಾದಂಬರಿಗಳನ್ನು ಬಿಟ್ಟರೆ ವಿಚಾರ ಸಾಹಿತ್ಯದ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತವೆ. ವಿದ್ಯಾವಂತರ ಹೆಚ್ಚಳ ಪ್ರಗತಿಪರ ಚಳುವಳಿಗಳು ತೀವ್ರತೆಗಳಿಂದ ಹೀಗಾಗಿರಬಹುದು. ವಿಚಾರ ಸಾಹಿತ್ಯದ ಓದು ಹೆಚ್ಚುವುದಕ್ಕೆ ಕನ್ನಡಪರ ಹೋರಾಟಗಳು ಕೊಡುಗೆ ಕಡಿಮೆಯೆಂದೇ ನನ್ನ ಅಭಿಪ್ರಾಯ. ನವೆಂಬರ್ ತಿಂಗಳ ಕನ್ನಡಾಭಿಮಾನ ಎಷ್ಟರಮಟ್ಟಿಗೆ ಸಾಂಪ್ರದಾಯಿಕವಾಗಿ, ಜಡವೂ ಆಗಿರುತ್ತದೆಯೆಂದರೆ ಈಗಲೂ ‘ಮುಕ್ಕೋಟಿ ಕನ್ನಡಿಗರು’ ಎಂದು ಸಂಬೋಧಿಸಲಾಗುತ್ತದೆ. ಕರ್ನಾಟಕದ ಜನಸಂಖ್ಯೆ ನಾಲ್ಕು ಕೋಟಿ ಯಾದದ್ದನ್ನೂ ಗಮನಿಸಿ ಕೆಲವು ಕನ್ನಡ ಕಟ್ಟಾಳುಗಳು ಮೂರು ಕೋಟಿ ಯಿದ್ದಾಗಿನ ಬಾಯಿ ಪಾಠವನ್ನೇ ಇವತ್ತು ಒಪ್ಪಿಸುತ್ತಿದ್ದರು. ಕನ್ನಡದ ದುರಂತ ಗಳಲ್ಲಿ ಇದೂ ಒಂದು.

ಕನ್ನಡದ ವಿಷಯದಲ್ಲಿ ಮೊದಲಿಗಿಂತ ಹೆಚ್ಚು ಪ್ರೀತಿ-ಅಭಿಮಾನಿಗಳು ಇದೆಯೆಂದ ಕೂಡಲೆ ಸಮಸ್ಯೆಗಳೆಲ್ಲ ಬಗೆಹರಿದಿವೆ ಎಂದು ಅರ್ಥವಲ್ಲ. ಬೆಳವಣಿಗೆಯನ್ನು ಗಮನಿಸಿ ಹೋರಾಟದ ಕಣ್ಣು ಕುರುಡಾಗುತ್ತದೆ ; ಕಿವಿ ಕಿವುಡಾಗುತ್ತದೆ ; ನಾಲಿಗೆಯೊಂದೇ ಜಾಗೃತವಾಗಿ ವಿಜೃಂಭಿಸತೊಡಗುತ್ತದೆ: ಮಾತಿಗೂ ಮನಸ್ಸಿಗೆ ಸಂಬಂಧವೇ ಇಲ್ಲದ ಹೋರಾಟದ ಮಾತುಗಳು ವೇದಿಕೆಯ ಮೇಲೆ ವೀರಾವೇಶದಿಂದ ಜಳಪಿಸಲ್ಪಟ್ಟು ಮರುಕ್ಷಣದಲ್ಲೇ ಒರೆಯೊಳಗೆ ಹೋಗಿ ಗೊರಕೆ ಹೊಡೆಯುತ್ತದೆ. ಮತ್ತೆ ವೇದಿಕೆ ಸಿಕ್ಕಿದಾಗ ಕಣ್ಣುಜ್ಜಿಕೊಂಡು ಹೊರಬಂದು ವೇದಿಕೆಯ ಕತ್ತಿಯಾಗಿ ಮತ್ತೆ ಮೊದಲಿನ ಜಾಗಕ್ಕೆ ಮರಳುತ್ತದೆ. ಇಲ್ಲಿ ‘ಮಾತೆಂಬುದು ಮತ್ತು’ ಮಾತ್ರವಾಗಿ, ಅಮಲಿನಲ್ಲಿ ಅರಿವನ್ನು ತರಿದು ಹಾಕುವ ಕತ್ತಿಯಾಗಿ ಕನ್ನಡವನ್ನು ಜಡನೆಲೆಯಲ್ಲಿ ನೋಡುವ ಕುರುಡಾಗಿ ಪರಿಣಮಿಸುತ್ತದೆ. ಕರ್ನಾಟಕದ ಇತಿಹಾಸವನ್ನಾಗಲಿ, ಸಮಕಾಲೀನ ಸಂದರ್ಭವನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾಥಮಿಕ ಪ್ರಯತ್ನವೂ ಇಲ್ಲದವರು ಒಂದು ಕಡೆಗಿದ್ದರೆ, ಇತಿಹಾಸ ಮತ್ತು ಸಮಕಾಲೀನತೆಗಳನ್ನು ಅಧ್ಯಯನ ಮಾಡಿಯೂ ತಿರುಚುವ, ಉದ್ರೇಕ ವಸ್ತು ಮಾತ್ರವಾಗಿಸುವವರು ಇನ್ನೊಂದು ಕಡೆಯಿದ್ದಾರೆ. ಇವರಿಬ್ಬರೂ ಕನ್ನಡಕ್ಕಾಗಿ ಕತ್ತು ಕೊಡುವಂತೆ ಅಬ್ಬರಿಸುತ್ತ ಕೆಲವೊಮ್ಮೆ ನಿಜವಾದ ಕುತ್ತುಗಳನ್ನು ಮರೆಯುತ್ತಾರೆ. ಮುಗ್ಧತೆಯಿಂದ ಉಂಟಾಗುವ ಮರೆವು ಮತ್ತು ಅಜ್ಞಾನಗಳು ಯಾವತ್ತೂ ಅಪಾಯಕಾರಿಯಲ್ಲ. ಉದ್ದೇಶಪೂರ್ವಕ ಮರೆವು ಮತ್ತು ಅಜ್ಞಾನಗಳು ಸದಾ ಅಪಾಯಕಾರಿ. ಇಂಥ ಅಪಾಯಕಾರಿ ನೆಲೆಯಲ್ಲಿ ನಿಂತು ‘ಕನ್ನಡಾಭಿಮಾನದ ಕ್ಯಾಸೆಟ್ ಕಂಠ’ವಾಗುವವರು ನನ್ನ ದೃಷ್ಟಿಯಲ್ಲಿ ‘ನವೆಂಬರ್ ನಾಯಕರು’. ತಾವು ಬೆಳೆಯಲ್ಲ ಕನ್ನಡಿಗರನ್ನು ಬೆಳೆಸದೆ ಭಾವೋದ್ರೇಕವನ್ನು ಬಂಡವಾಳವಾಗಿಸಿ ವ್ಯಾಪಾರಕ್ಕೊಡ್ಡುವ ‘ಭಾಷಾ ವಾಣಿಜ್ಯ ವಿಶಾರದರು’ ಹೆಚ್ಚಾದಂತೆ ಕನ್ನಡದ ಸಮಸ್ಯೆಗಳು ಹೆಚ್ಚಾಗುತ್ತದೆ. ಕನ್ನಡದ ಎಲ್ಲ ಸಮಸ್ಯೆಗಳಿಗೆ ಅನ್ಯ ಭಾಷಿಕರು ಕಾರಣ, ಅನ್ಯ ಜನಾಂಗದವರೇ ಕಾರಣ, ಎಂಬ ಅಭಿಪ್ರಾಯವನ್ನು ರೋಚಕವಾಗಿ, ದೋಷಯುಕ್ತವಾಗಿ ಹೇಳುತ್ತಾರೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ನಮ್ಮ ರಾಜ್ಯದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ಯೋಗ ನೀತಿಯ ಅನುಷ್ಠಾನದಲ್ಲಾದ ಅಸಮರ್ಪಕತೆಯಿಂದ, ಅನ್ಯಭಾಷಿಕರು ಯಾವುದೇ ಕೆಲಸಕ್ಕಾಗಿ ಸಿದ್ಧವಾಗಿ ಬಂದು ಬೇರು ಬಿಡುವುದರಿಂದ, ಕನ್ನಡಿಗರ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ತೀವ್ರತೆ ಬಂದಿರುವುದು ನಿಜ. ಆದರೆ ಕನ್ನಡದ ಸಮಸ್ಯೆಯ ಮೂಲ ಇದು ಮಾತ್ರ ಎಂಬಂತೆ ನಂಬಿಸುವುದು ಕನ್ನಡಿಗನಿಗೆ ಮಾಡುವ ವಂಚನೆ ಮತ್ತು ಆತ್ಮವಂಚನೆ. ಕರ್ನಾಟಕದ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳದ ಸ್ಥಿತಿ, ನಾಡಿನ ಸಮಗ್ರ ವಿಕಾಸಕ್ಕೆ ಬೇಕಾದ ನೀಲಿ ನಕ್ಷೆಯನ್ನು ತೋರಿಸಿ ಅನುಷ್ಠಾನಕ್ಕೆ ತರದ ಕೆಟ್ಟ ಆಡಳಿತ, ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ನೀಗಲು ಬೇಕಾದ ಸಂಕಲ್ಪ ಶಕ್ತಿಯ ಅಭಾವ-ಇವೇ ಮುಂತಾದ ಕಾರಣಗಳಿಂದ ಕರ್ನಾಟಕದ, ಕನ್ನಡಿಗರ ಸಮಸ್ಯೆಗಳು ಹೆಚ್ಚುತ್ತ ಬಂದಿವೆ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ಅವರಿಗೆ ತಮಗೆ ದಕ್ಕಬಹುದಾದ ಅವಕಾಶಗಳನ್ನು ಅನ್ಯಭಾಷಿಕರು ಪಡೆಯುತ್ತಿದ್ದರೆ ಸಹಜವಾಗಿಯೇ ಸಿಟ್ಟು ಬರುತ್ತದೆ. ಆದರೆ ಇಂಥ ಸಿಟ್ಟಿನಲ್ಲಿ ಸಮಸ್ಯೆಗಳನ್ನು ಸುಟ್ಟುಬಿಡುವ ಮತ್ತು ಕನ್ನಡದ ಸಮಸ್ಯೆಯನ್ನು ತಮಿಳಿಗನ ಮೂಲಕ ಅಥವಾ ಮುಸ್ಲಿಮನ ಮೂಲಕ ನೋಡುವುದನ್ನು ಕಲಿಸುವ ಹುಸಿ ಅಭಿಮಾನ ನಮ್ಮನ್ನು ಜನಾಂಗ ದ್ವೇಷಿಗಳನ್ನಾಗಿಸುತ್ತದೆ, ಮತೀಯವಾಗಿಸುತ್ತದೆ. ಆದರೆ ಅಪ್ಪಟ ಕನ್ನಡಾಭಿಮಾನಿಯನ್ನಾಗಿಸುವುದಿಲ್ಲ.

ಕನ್ನಡವೆನ್ನುವುದು ಹಿಂದೂಗಳ ಭಾಷೆಯಲ್ಲಿ. ಕನ್ನಡವು ಕರ್ನಾಟಕದ ಪ್ರಮುಖ ಸಂವಹನ ಮಾಧ್ಯಮವಾಗಿರುವುದರಿಂದ, ಅದು ಅಲ್ಲಿ ಬದುಕುವ ಎಲ್ಲರ ಭಾಷೆಯಾಗಬೇಕು. ಇಲ್ಲಿ ಬದುಕುವ ಅನ್ಯಭಾಷಿಕರು ಕನ್ನಡದಲ್ಲಿ ವ್ಯವಹರಿಸಬೇಕು. ಎಲ್ಲ ಧರ್ಮೀಯರು ಕನ್ನಡದ ಮೂಲಕ ಮಾತು ಬಿತ್ತಬೇಕು. ಕ್ರೈಸ್ತರಾಗಲಿ, ಮುಸ್ಲಿಮರಾಗಲಿ, ಹಿಂದೂಗಳಾಗಲೀ, ತಂತಮ್ಮ ಧಾರ್ಮಿಕ ನಂಬಿಕೆಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬಹುದಾದರೂ ಕನ್ನಡವನ್ನು ಬಿಟ್ಟುಕೊಡಬಾರದು. ಆದರೆ ಕನ್ನಡದ ಸಮಸ್ಯೆಯನ್ನು ಭಾಷೆ ದ್ವೇಷದ ಮೂಲಕ, ಮತೀಯತೆಯ ಮೂಲಕ ನೋಡುವ ರೀತಿಯೇ ಕನ್ನಡ ವಿರೋಧಿಯಾದದ್ದು. ಯಾಕೆಂದರೆ ಕನ್ನಡ ಒಂದು ಜನಭಾಷೆ : ಜನಸಾಮಾನ್ಯರ ಸಂವೇದನೆಗಳ ಭಾಷೆ. ಜನಸಾಮಾನ್ಯರ ಒಳಿತಿಗಾಗಿ ನಾವು ಕನ್ನಡ ಭಾಷೆಯನ್ನು ಉಳಿಸಬೇಕು. ಕನ್ನಡದ ಮೂಲಕ ಕರ್ನಾಟಕ ಜನಸಾಮಾನ್ಯರ ಸ್ವಾಭಿಮಾನ- ಸಂವೇದನೆಗಳು ಸಾರ್ವತ್ರಿಕ ಗೊಳ್ಳಬೇಕು, ಸಾಮಾಜಿಕ ಸಂರಚನೆಯ ಸೂಕ್ಷ್ಮ ಮತ್ತು ದೇಶದ ಆರ್ಥಿಕ ನೀತಿಯ ಅಪಾಯಗಳಿಂದ ಒಂದು ಭಾಷೆಯ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳ ಅರಿವಾಗಬೇಕು. ಇಂಥ ಅರಿವು ಸಾಮಾನ್ಯ ಕನ್ನಡಿಗರಿಗಿಂತ ಮುಂಚೆ ಕನ್ನಡ ಹೆಸರಿನಲ್ಲಿ ಹೋರಾಟ ಮಾಡುವವರಿಗೆ ಆಗಬೇಕು. ಭಾಷಾ ಸಮಸ್ಯೆಯನ್ನು ಕೇವಲ ಭಾವುಕ ಗೊಳಿಸಿ ಸಾಮಾಜಿಕ-ಆರ್ಥಿಕ ನೆಲೆಗಳನ್ನು ನಿರ್ಲಕ್ಷ್ಯ ಮಾಡುವ ಇಂಥ ‘ಹೋರಾಟಗಾರರು’ ಕನ್ನಡಿಗನ ಕನಸುಗಳನ್ನು ಕೆರಳಿಸುತ್ತಲೇ ಕಮರಿಸುತ್ತಾರೆ. ಕನ್ನಡಿಗನನ್ನು ಅಭಿಮಾನ ಶೂನ್ಯವೆಂದು ಬಯುತ್ತ, ಶೂನ್ಯಕ್ಕೆ ತಳ್ಳುತ್ತಾರೆ. ನಿಜವಾದ ಸಮಸ್ಯೆಗಳಿಗೆ ಮುಖಾಮುಖಿಯಾಗಿಸುವ ಬದಲು ಹುಸಿ ವೈರಿಗಳತ್ತ ಹರಿಹಾಯುತ್ತಾರೆ : ಬೇಳೆ ಬೇಯಿಸಿ ಕೊಳ್ಳುತ್ತಾರೆ.

ಉದ್ಯೋಗ ವಿವಿಧ ಅವಕಾಶಗಳನ್ನು, ಸವಲತ್ತುಗಳನ್ನು ಪಡೆಯುವ ಮಟ್ಟಕ್ಕೆ ಬೆಳೆದಿರುವ ಕನ್ನಡಿಗರಿಗೆ ಅನ್ಯ ಭಾಷಿಕರಿಂದ ಅವಕಾಶ ವಂಚನೆಯಾಗಿದೆಯೆಂಬುದು ನಿಜ. ಆದರೆ ಕನ್ನಡಿಗನೆಂದರೆ ಕೇವಲ ಉದ್ಯೋಗಾಕಾಂಕ್ಷಿ ಮಾತ್ರವಲ್ಲ ಮತ್ತು ನಗರ ಕೇಂದ್ರಿತ ವ್ಯಕ್ತಿಗಳು ಮಾತ್ರವಲ್ಲ-ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಕರ್ನಾಟಕವನ್ನು ಒಳಗೊಂಡಂತೆ ಸಮಗ್ರ ಕರ್ನಾಟಕದ-ಕನ್ನಡಿಗರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ರಾಜ್ಯವೊಂದರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಒತ್ತಡಗಳಿಗೆ ಕೆಲಸ ಮಾಡುವ ವಿವಿಧ ರಾಷ್ಟ್ರೀಯ ನೀತಿಗಳನ್ನು ಗ್ರಹಿಸಿ, ಆ ಹಿನ್ನೆಲೆಯಲ್ಲಿ ಕನ್ನಡದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ತಿಳುವಳಿಕೆ ಅರೆಬೆಂದ ಕಾಳಾಗುತ್ತದೆ. ಈ ದೃಷ್ಟಿಯಿಂದ, ಕನ್ನಡ ಹೆಸರಿನಲ್ಲಿ ಕಂಠ ಶೋಷಣೆ ಮಾಡಿಕೊಳ್ಳುತ್ತಿರುವ ಮತ್ತು ಮಾಡುತ್ತಿರುವ ಅನೇಕರಿಗೆ ಭಾಷಾ ಹೋರಾಟ ನಿಜದ ನೆಲೆಗಳನ್ನು ಅರ್ಥಮಾಡಿಕೊಡುವ ತರಬೇತಿ ಬೇಕೆನಿಸುತ್ತದೆ. ಕನ್ನಡ ಹೋರಾಟದಲ್ಲಿ ತೊಡಗಿದ ಕಾರ್ಯಕರ್ತರಿಗೆ, ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಭಾವುಕ ವಿಷಯಗಳನ್ನು ಮಾತ್ರ ತಿಳಿಸದೆ, ವಿವೇಕವನ್ನು ವಿಸ್ತರಿಸಿದ ವಿವಿಧ ಆಯಾಮಗಳಲ್ಲಿ ಭಾಷಾ ಸಮಸ್ಯೆಯನ್ನು ಬಿಡಿಸಿ ಹೇಳಬೇಕಾಗಿದೆ.

ಭಾವುಕತೆ, ಮನುಷ್ಯ ಮನಸ್ಸಿನ ಒಂದು ಸ್ವಾಭಾವಿಕ ನೆಲೆ, ಮನುಷ್ಯರು ಭಾವುಕರೇ ಆಗದೆ ಅಂಕಗಣಿತದಂತೆ ಬದುಕಬೇಕೆಂದು ಬಯಸುವುದು ಮೂರ್ಖತನವಾದೀತು. ಆದರೆ ಕನ್ನಡಿಗರ ಭಾವುಕತೆಗೆ ಬೆಂಕಿ ಹೊತ್ತಿಸಿ ಬೀಡಿ ಹಚ್ಚಿಕೊಂಡು ದಮ್ಮೆಳೆಯುವ ನಾಯಕಮಣಿಗಳು ಕರ್ನಾಟಕಕ್ಕೆ ಒಳ್ಳೆಯದನ್ನಂತೂ ಮಾಡುವುದಿಲ್ಲ. ಆದ್ದರಿಂದ, ಕರ್ನಾಟಕದಲ್ಲಿ ‘ನವೆಂಬರ್ ನಾಯಕರಿದ್ದಾರೆ ಎಚ್ಚರಿಕೆ!’ ಎಂದು ನಾಮಫಲಕ ನೇತು ಹಾಕುವ ದಿನವೊಂದು ಬಂದರೆ ಆಶ್ಚರ್ಯಪಡಬೇಕಿಲ್ಲ.
*****
೨೭-೧೧-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?
Next post ಕನ್ನಡದ ಬಾವುಟ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys