ಕವಿಗಳ ಕವಿ ಎಜ್ರಾ ಪೌಂಡ್

ಕವಿಗಳ ಕವಿ ಎಜ್ರಾ ಪೌಂಡ್

ಎಲ್ಲ ಕಾಲದಲ್ಲೂ ಕವಿಗಳು ಹಲವಾರು ಜನ ಇರುತ್ತಾರೆ, ಆದರೆ ಕವಿಗಳ ಕವಿಗಳು ಎಲ್ಲ ಕಾಲದಲ್ಲೂ ಇರುವುದಿಲ್ಲ. ಇದ್ದಾಗಲೂ ಅವರ ಸಂಖ್ಯೆ ಅತ್ಯಲ್ಪ. ಆಧುನಿಕ ಕನ್ನಡ ಕಾವ್ಯದಲ್ಲಿ ಗೋಪಾಲಕೃಷ್ಣ ಅಡಿಗರು ಕವಿಗಳ ಕವಿಗಳಾಗಿದ್ದರು. ಇಂಗ್ಲಿಷ್ನಲ್ಲಿ ಎಜ್ರಾ ಪೌಂಡ್ ಅಂಥ ಕವಿ. ಸಾಧಾರಣ ಕವಿಗಳಿಗೂ ಕವಿಗಳ ಕವಿಗಳಿಗೂ ಇರುವ ವ್ಯತ್ಯಾಸವೆಂದರೆ, ಕವಿಗಳ ಕವಿಗಳು ಕಾವ್ಯಕ್ಷೇತ್ರದ ಗತಿಯನ್ನೇ ಬದಲಾಯಿಸಿಬಿಡುತ್ತಾರೆ; ಸಾಧಾರಣ ಕವಿಗಳು ಆಮೇಲೆ ಅದೇ ದಾರಿಯಲ್ಲಿ ಸಾಗುತ್ತಾರೆ, ಇನ್ನೊಬ್ಬ ಕವಿಗಳ ಕವಿ ಬರುವವರೆಗೆ! ಈ ವಿದ್ಯಮಾನವನ್ನು ನಾವು ಥಾಮಸ್ ಕುನ್ (Thomas Kuhn) ತನ್ನ ‘ವೈಜ್ಞಾನಿಕ ಕ್ರಾಂತಿಗಳ ಸ್ವರೂಪ’ (The Structure of Scientific Revolutions ಎಂಬ ಕೃತಿಯಲ್ಲಿ ಹೇಳುವ ‘ಕ್ರಾಂತಿಕಾರಿ ವಿಜ್ಞಾನ’ (Revolutionary Science) ಮತ್ತು ‘ಸಾಧಾರಣ ವಿಜ್ಞಾನ’ (Normal Science) ಗಳಿಗೆ ಹೋಲಿಸಬಹುದು. ಕುನ್‍ನ ಪ್ರಕಾರ ಕ್ರಾಂತಿಕಾರಿ ವಿಜ್ಞಾನ, ಅದರ ಹೆಸರೇ ಸೂಚಿಸುವಂತೆ, ವಿಜ್ಞಾನದ ಮೂಲಭೂತ ತಿಳಿವನ್ನೇ ಬದಲಾಯಿಸುತ್ತದೆ; ಸಾಧಾರಣ ವಿಜ್ಞಾನ ಹೀಗೆ ಸ್ಥಾಪಿತವಾದ ವಿಜ್ಞಾನವನ್ನು ಕಾಪಾಡಿಕೊಂಡು ಇರುತ್ತದೆ. ಕಾವ್ಯದಲ್ಲಾಗಲಿ ವಿಜ್ಞಾನದಲ್ಲಾಗಲಿ, ಈ ಎರಡೂ ಸಂಗತಿಗಳು, ಎಂದರೆ ಕ್ರಾಂತಿ ಮತ್ತು ಸಾಧಾರಣಸ್ಥಿತಿ, ಆಯಾ ಕ್ಷೇತ್ರಗಳ ಹಿತದೃಷ್ಟಿಯಿಂದ ಅಗತ್ಯವಾಗುತ್ತವೆ. ಯಾಕೆಂದರೆ ಯಾವುದೇ ಸಮಾಜ ಕ್ರಾಂತಿಯಿಲ್ಲದೆ ಜೀವಂತವಾಗಿರುವುದು ಸಾಧ್ಯವಿಲ್ಲ; ಅದೇ ರೀತಿ, ನಿರಂತರ ಕ್ರಾಂತಿಯಲ್ಲೂ ಅದು ಇರುವುದು ಸಾಧ್ಯವಿಲ್ಲ-ನಿರಂತರ ಕ್ರಾಂತಿಯೆನ್ನುವುದೇ ಒಂದು ಅಸಾಧ್ಯವಾದ ಕಲ್ಪನೆ!

ಮೇ ೨೨ ಇಂಗ್ಲಿಷ್ ಕಾವ್ಯಕ್ಷೇತ್ರದಲ್ಲಿ ವಿಶಿಷ್ಟವಾದ ಒಂದು ದಿನ; ಹಾಗೆ ನೋಡಿದರೆ, ಕೇವಲ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೂ ಅಲ್ಲ, ಜಾಗತಿಕ ಸಾಹಿತ್ಯಕ್ಷೇತದಲ್ಲೇ ಸ್ಮರಣಾರ್ಹ ದಿನ. ಯಾಕೆಂದರೆ ೧೯೪೫ರ ಇದೇ ದಿನ ಎಜ್ರಾ ಪೌಂಡನ್ನ ಯುದ್ಧಾಪರಾಧಕ್ಕೋಸ್ಕರ ಇಟೆಲಿಯ ಮುಖ್ಯ ಪಟ್ಟಣವಾದ ಪೀಸಾದ ಸಮೀಪ ಬಂಧಿಸಿಡಲಾಯಿತು. ಇದಿಷ್ಟೇ ಆಗಿದ್ದಿದ್ದರೆ ಇದರಲ್ಲಿ ವಿಶೇಷವೇನೂ ಇಲ್ಲ ಎನ್ನಬಹುದಾಗಿತ್ತು; ಆದರೆ ಈ ಅರುವತ್ತು ವರ್ಷದ ಕವಿಯನ್ನು ಇರಿಸಿದ್ದು ಬಟಾಬಯಲಲ್ಲಿ, ಸಣ್ಣದಾದ ಸರಳುಗಳ ಗೂಡೊಂದರಲ್ಲಿ, ಅಪಾಯಕಾರಿ ವನ್ಯಮೃಗವನ್ನು ಇರಿಸಿದ ಹಾಗೆ! ಸುಪ್ರಸಿದ್ಧನಾದ ಕವಿಯೊಬ್ಬನನ್ನು ಹೀಗೆ ಹೀನಾಯವಾಗಿ ಬಂಧಿಸಿರಿಸಿದ ಘಟನೆ ಜಾಗತಿಕ ಇತಿಹಾಸದಲ್ಲೇ ಬಹುಶಃ ಇನ್ನೊಂದು ಇರಲಾರದೇನೋ! ಮೂರು ವಾರಗಳಲ್ಲೇ ಪೌಂಡ್ ಮಾನಸಿಕ ಆಘಾತಕ್ಕೆ ತುತ್ತಾದ್ದರಿಂದ ಆಮೇಲೆ ಅವನನ್ನು ಮಿಲಿಟರಿ ಆಸ್ತತ್ರೆಯೊಂದಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಅವನನ್ನು ಚಿಕ್ಕದೊಂದು ಟೆಂಟ್ನಲ್ಲಿರಿಸಲಾಯಿತು. ಹಾಗೂ ಅವನಿಗೆ ಒಂದೆರಡು ಪುಸ್ತಕಗಳು, ಒಂದು ಟೈಪ್ರೈಟರ್ ದೊರಕಿತು. ಪೌಂಡ್ ಇಲ್ಲೇ ತನ್ನ ‘ಪೈಸನ್ ಕ್ಯಾಂಟೋಸ್’ ಬರೆದದ್ದು; ಈ ಕ್ಯಾಂಟೋಗಳು ಅವನು ಅದೆಂದೋ ಬರೆದು ಪ್ರಕಟಿಸಲು ಸುರುಮಾಡಿ, ಮುಂದೆಯೂ ಬರೆಯುತ್ತಲೇ ಇದ್ದ ಸುಪ್ರಸಿದ್ಧ ‘ಕ್ಯಾಂಟೋಸ್’ (ಖಂಡಗಳು) ಎಂಬ ಸುದೀರ್ಘ ಕಾವ್ಯದ ಪ್ರಮುಖ ಭಾಗವಾದುವು. ಇದು ಪೌಂಡ್ನ ಇಡೀ ಕಾವ್ಯದಲ್ಲಿ ಅತ್ಯಂತ ಮನಕರಗಿಸುವ ಭಾಗವೂ ಹೌದು. ಇದೊಂದು ರೀತಿಯಲ್ಲಿ ಪೌಂಡ್ ಮಾಡಿಕೊಳ್ಳುವ ಆತ್ಮಾವಲೋಕನ: ಯಾವುದು ಅಹಂ ಆಗಿತ್ತು, ಯಾವುದು ಆಗಿರಲಿಲ್ಲ ಎಂದು ಕವಿ ವಿಶ್ಷೇಷಿಸುತ್ತಾನೆ. `Pull down your vanity’ (ಹಿಡಿದೆಳೆ ನಿನ್ನಯ ಅಹಮನ್ನು) ಎನ್ನುವುದು ಇಲ್ಲಿನ ಪಲ್ಲವಿ.

ಎಜ್ರಾ ಪೌಂಡ್ ಈ ಸ್ಥಿತಿಗೆ ಹೇಗೆ ಬಂದ? ೧೮೮೫ರಲ್ಲಿ ಅಮೇರಿಕದ ಐಡಹೋ ಪ್ರಾಂತದಲ್ಲಿ ಜನಿಸಿದ ಎಜ್ರಾ ಲೂಮಿಸ್ ಪೌಂಡ್ ಓದಿದ್ದು ಪೆನ್ಸಿಲ್ವೇನಿಯಾ ಯುನಿವರ್ಸಿಟಿಯಲ್ಲಿ. ಮಧ್ಯಕಾಲೀನ ಫ್ರೆಂಚ್ ಮತ್ತು ಇಟಾಲಿಯನ್, ಮುಖ್ಯವಾಗಿ ಪ್ರೊವೆನ್ಸಾಲ್ ಭಾಷೆ ಮತ್ತು ಸಾಹಿತ್ಯ ಅವನ ವಿಷಯಗಳು. ಜತೆಯಲ್ಲೇ ಚೈನೀಸ್ ಹಾಗೂ ಜಪಾನೀ ಸಾಹಿತ್ಯಗಳಲ್ಲೂ ಆಸಕ್ತ. ವಿದ್ಯಾರ್ಥಿಯಾಗಿದ್ದಾಗಲೇ ಒಂದೆರಡು ಬಾರಿ ಯುರೋಪಿಗೆ ಪ್ರವಾಸ ಹೋಗುತ್ತಾನೆ. ೧೯೦೮ರಲ್ಲಿ ಇಂಗ್ಲೆಂಡ್ಗೆ ಬರುತ್ತಾನೆ. ಅದೇ ವರ್ಷ ವೆನೀಸ್‌ನಲ್ಲಿ ತನ್ನ ಮೊದಲ ಕವನ ಸಂಕಲನ ಅ ಲ್ಯೂಮೆ ಸ್ಟೆಂಟೋದ ಹಸ್ತಪ್ರತಿಯನ್ನು ನೀರಿಗೆಸೆಯಲು ಯೋಚಿಸುತ್ತಾನೆ; ನಂತರ ಮನಸ್ಸು ಬದಲಿಸಿ, ಸ್ವಂತ ಖರ್ಚಿನಿಂದ ಪ್ರಕಟಿಸುತ್ತಾನೆ. ಮಾರನೆಯ ವರ್ಷ ಇನ್ನೆರಡು ಸಂಕಲನಗಳು. ಅವುಗಳಲ್ಲಿ ಪರ್ಸೊನೆ (‘ಪಾತ್ರಗಳು’) ಎಂಬುದು ಅವನಿಗೆ ಹೆಸರು ತರುತ್ತದೆ. ಪೌಂಡ್ ಇದೇ ಕಾಲಕ್ಕೆ ಅನುವಾದದಲ್ಲಿ ಆಸಕ್ತನಾಗಿ ಯುರೋಪಿನ ಹಳೆ ಹೊಸ ಭಾಷೆಗಳಿಂದ, ಅಂತೆಯೇ ಚೈನೀಸ್ ಮತ್ತು ಜಪಾನೀ ಸಾಹಿತ್ಯದಿಂದಲೂ ಹಲವು ಕೃತಿಗಳನ್ನು ಇಂಗ್ಲಿಷ್‌ಗೆ ತರುತ್ತಾನೆ. ಕಾವ್ಯ ಸೌಂದರ್ಯವೇ ಎಲ್ಲಕ್ಕಿಂತಲೂ ಮುಖ್ಯ ಎಂಬ ಧೋರಣೆಯನ್ನು ಪ್ರತಿಪಾದಿಸುತ್ತಾನೆ. ಮುಂದೆ ೧೯೧೯ರಲ್ಲಿ ಹೋಮೇಜ್ ಟು ಪ್ರೋಪರ್ಟಿಯಸ್ ಮತ್ತು ೧೯೨೦ರಲ್ಲಿ ಹ್ಯೂ ಸೆಲ್ಪಿನ್ ಮೌಬರ್ಲಿ ಎಂಬ ಕವನ ಸಂಕಲನಗಳೊಂದಿಗೆ ಪೌಂಡ್‌ನ ಸಾಮಾಜಿಕ ಕಳಕಳಿ ಮೊದಲಾಗುತ್ತದೆ. ಕಲಾವಿದ ಮತ್ತು ಸಮಾಜ-ಈ ಎರಡು ಘಟಕಗಳ ನಡುವಣ ಅವಿಭಾಜ್ಯ ಸಂಬಂಧವನ್ನು ಪ್ರತಿಪಾದಿಸತೊಡಗುತ್ತಾನೆ. ಕವಿಯೆಂದರೆ ಸಂಸ್ಕೃತಿಯ ಮಾರ್ಗದರ್ಶಿ ಮತ್ತು ದೀಪ ಎನ್ನುವುದು ಅವನ ನಂಬಿಕೆಯಾಗುತ್ತದೆ. Guide to Kulcher (‘ಸಂಸ್ಕೃತಿಗೊಂದು ಕೈಪಿಡಿ; Kulcher ಎನ್ನುವುದು ಸಂಸ್ಕೃತಿಗೆ ಜರ್ಮನ್ ಪದ) ಎಂಬ ಲೇಖನ ಸಂಕಲನದಲ್ಲಿ ಪೌಂಡ್ ಹೇಳುವುದು: ‘ಯಾರೂ ಮಾಡಬಾರದ ಒಂದು ಸಂಗತಿಯೆಂದರೆ ಕಲೆಗಳಲ್ಲಿ ಏನಾದರೂ ತಪ್ಪಾದರೆ, ಅದು ಕೇವಲ ಕಲೆಗಳಲ್ಲಿ ಮಾತ್ರ ಎಂದು ತಿಳಿದುಕೊಳ್ಳುವುದು.’ ಪೌಂಡ್‌ನ ಮಟ್ಟಿಗೆ ಈ ಮಾತು ಸ್ವಂತ ಭವಿಷ್ಯವಾಣಿಯಂತಿತ್ತು!

೧೯೧೪ರಲ್ಲಿ ಡೊರೊಥಿ ಶೇಕ್ಸ್‌ಪಿಯರಳ ಜತೆ ವಿವಾಹ. ೧೯೨೦ರಲ್ಲಿ ಇಂಗ್ಲೆಂಡಿನಿಂದ ಪ್ಯಾರಿಸಿಗೆ ವಲಸೆ. ನಂತರ ೧೯೨೪ರಲ್ಲಿ ಇಟೆಲಿಗೆ; ಅಲ್ಲಿ ರಪೆಲ್ಲೋ ಎಂಬ ಸಮುದ್ರ ತೀರದ ಪ್ರದೇಶವೊಂದರಲ್ಲಿ ನೆಲಸುತ್ತಾನೆ. ಈ ಮಧ್ಯೆ ಅವನು ಸಾಹಿತ್ಯಿಕವಾಗಿ ಮಾಡಿದ ಕೆಲಸ ಹಲವಾರು. ೧೯೩೯ರಲ್ಲಿ ದ್ವಿತೀಯ ಮಹಾಯುದ್ಧ ಆರಂಭವಾದಾಗ ಪೌಂಡ್ ವಿಚಿತ್ರವಾದ ಸನ್ನಿವೇಶವೊಂದರಲ್ಲಿ ಸಿಗಹಾಕಿಕೊಂಡ. ಅವನ ಮಾತೃಭೂಮಿಯಾದ ಅಮೇರಿಕ ಮತ್ತು ವಾಸಭೂಮಿಯಾದ ಇಟೆಲಿ ಪರಸ್ಪರ ವಿರೋಧಿಗಳಾಗಿಬಿಟ್ಟದ್ದುವು. ಇದಷ್ಟೇ ಅಲ್ಲ; ಸೈದ್ಧಾಂತಿಕವಾಗಿ ಪೌಂಡ್ ಇಟೆಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಮುಸ್ಲೊಲನಿಯ ಪರವೂ ಇದ್ದ. ಮಧ್ಯಯುಗದ ಇಟೆಲಿ, ಕನ್‍ಫ್ಯೂಶಿಯಸ್ ಕಾಲದ ಚೈನಾ, ಸಾಮ್ರಾಜ್ಯಯುಗದ ಜಪಾನ್ ಮುಂತಾದ ಕಡೆಗಳಿಂದ ಹೆಕ್ಕಿತೆಗೆದ ತನ್ನದೇ ಆದ ಹಲವು ಆರ್ಥಿಕ, ಆಡಳಿತ, ರಾಜಕೀಯ ಧೋರಣೆಗಳನ್ನೂ ರೂಪಿಸಿಕೊಂಡಿದ್ದ. ಬಡ್ಡಿಗೆ ಹಣ ನೀಡುವ ‘ಯುಸುರಿ’ ಪದ್ದತಿಯನ್ನು ಬಲವಾಗಿ ವಿರೋಧಿಸುತ್ತಿದ್ದ; ತನ್ಮೂಲಕ ಈ ಪದ್ಧತಿಯೊಂದಿಗೆ ಯೆಹೂದಿಗಳು ಐತಿಹಾಸಿಕವಾಗಿ ಗುರುತಿಸಲ್ಪಡುವುದರಿಂದ ಯೆಹೂದಿವಿರೋಧಿಯೆಂದೂ ಕುಪ್ರಸಿದ್ಧಿ ಗಳಿಸಿದ. ಮೂಲತಃ ಯುರೋಪಿಯನ್ ಆದ ಯುದ್ಧದಲ್ಲಿ ಅಮೇರಿಕ ಯಾಕೆ ಕೈಹಾಕಬೇಕು ಎನ್ನುವುದೂ ಪೌಂಡ್‌ನ ಪ್ರಶ್ನೆಯಾಗಿತ್ತು. ಯುದ್ಧ ನಡೆಯುತ್ತಿರುವಾಗಲೇ ಪೌಂಡ್ ರೋಮ್ ರೇಡಿಯೋದಲ್ಲಿ ತನ್ನ ಇಂಥ ಹಲವು ವಿಚಾರಗಳನ್ನು ಪ್ರಕಟಿಸಿ ಭಾಷಣ ನೀಡತೊಡಗಿದ. ಈ ಅವಧಿಯಲ್ಲಿ ಅವನಿಗೆ ಈ ರೇಡಿಯೋ ಭಾಷಣಗಳೇ ಜೀವನಾಧಾರವೂ ಆಗಿದ್ದುವು. ಆದರೆ ಅಮೇರಿಕನ್ ಪ್ರಜೆಯಾಗಿದ್ದು ಅಮೇರಿಕ ವಿರುದ್ಧವಾದ ಇಂಥ ಕೆಲಸ ದೇಶದ್ರೋಹದ ಆರೋಪವನ್ನು ತಂದಿತು. ೧೯೪೩ರಲ್ಲೇ ಅಮೇರಿಕದಲ್ಲಿ ಪೌಂಡ್‌ನ ಗೈರುಹಾಜರಿಯಲ್ಲಿ ಈ ಕೇಸು ದಾಖಲಾಯಿತು. ಕೇಸು ನೋಡಿಕೊಳ್ಳುತ್ತಿದ್ದ ನ್ಯಾಯಾಧೀಶನಿಗೆ ಪತ್ರವೊಂದನ್ನು ಬರೆದು ಪೌಂಡ್ ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕು ತನಗಿದೆಯೆಂದು ತನ್ನ ಕ್ರಿಯೆಯನ್ನು ಸಮರ್ಥಿಸಿಕೊಂಡ. ಆದರೆ ೧೯೪೫ರ ಏಪ್ರಿಲ್‌ನಲ್ಲಿ, ಇನ್ನೇನು ಯುದ್ಧ ಮುಗಿಯಬೇಕು ಎನ್ನುವಾಗಲೇ, ಇಟೆಲಿಯ ಪಕ್ಷಪಾತಿ ದಳವೊಂದು ಪೌಂಡ್‌ನ್ನ ಬಂಧಿಸಿ ಅಮೇರಿಕನ್ನರಿಗೆ ಹಸ್ತಾಂತರಿಸಿತು. ಆಗಲೇ ಪೌಂಡ್‌ನ್ನು ಗೂಡಿನಲ್ಲಿ ಇರಿಸಿದ್ದು.

೧೯೪೬ರಲ್ಲಿ ಪೌಂಡ್‌ನ್ನು ವಿಚಾರಣೆಗೆಂದು ವಾಷಿಂಗ್ಟನ್‌ಗೆ ಕರೆದೊಯ್ಯಲಾಯಿತು. ಇಲ್ಲಿ ಹಲವಾರು ಅಮೇರಿಕನ್ ಹಾಗೂ ಇತರ ಕವಿಗಳ ಹಸ್ತಕ್ಷೇಪದ ಪರಿಣಾಮವಾಗಿ, ದುರ್ಬಲ ಮಾನಸಿಕ ಸ್ಥಿತಿಯ ಕಾರಣ ವಿಚಾರಣೆ ಸಹಿಸಲು ಅಸಮರ್ಥನೆಂದು ಅವನನ್ನು ಮಾನಸಿಕ ರೋಗಿಗಳ ಆಸ್ಪತ್ರೆಯೊಂದರಲ್ಲಿ ಇರಿಸಲಾಯಿತು. ವಿಚಾರಣೆಯೇನಾದರೂ ನಡೆಯುತ್ತಿದ್ದರೆ ಪೌಂಡ್‌ಗೆ ಗಲ್ಲು ಶಿಕ್ಷೆ ಕಟ್ಟಿಟ್ಟದ್ದಾಗಿತ್ತು. ಈ ಆಸ್ತತ್ರೆಯಲ್ಲಾದರೆ ಪೌಂಡ್‌ಗೆ ಓದಿ ಬರೆಯುವುದಕ್ಕೆ ಮಾತ್ರವೇ ಅಲ್ಲ, ಇಷ್ಟಮಿತ್ರನ್ನು ಭೇಟಿಯಾಗುವುದಕ್ಕೂ, ಅವರೊಂದಿಗೆ ಸಲ್ಲಾಪ ನಡೆಸುವುದಕ್ಕೂ ಸ್ವಾತಂತ್ರ್ಯವಿತ್ತು. ಹೀಗೆ ಪೌಂಡ್ ಆಸ್ತತ್ರೆಯಲ್ಲೇ ತನ್ನ ಸಾಹಿತ್ಯಿಕ ಚಟುವಟಿಕೆಯನ್ನು ಮುಂದುವರಿಸುತ್ತ ಸುಮಾರು ೧೪ ವರ್ಷಗಳ ಕಾಲ ಜೀವನ ಸವೆಸಿದ. ಕೊನೆಗೆ ೧೯೫೮ರಲ್ಲಿ ಪೌಂಡ್ ಇನ್ನೆಂದಿಗೂ ವಾಸಿಯಾಗದಂಥ ಬುದ್ಧಿಭ್ರಮಣೆಯಲ್ಲಿದ್ದಾನೆಂದು ವೈದ್ಯರು ತೀರ್ಮಾನಿಸಿದ ಮೇಲೆ, ಯುರೋಪಿಗೆ ಮರಳುತ್ತಾನೆಂಬ ಭರವಸೆಯಲ್ಲಿ ಅವನನ್ನು ಖುಲಾಸೆ ಮಾಡಲಾಯಿತು. ಇಟೆಲಿಗೆ ಮರಳಿದ ಪೌಂಡ್ ಮುಂದೆ ೧೯೭೨ರಲ್ಲಿ ವೆನಿಸ್‌ನಲ್ಲಿ ಗತಿಸುವ ತನಕ ಅಲ್ಲೇ ಇದ್ದ. ಈ ಮಧ್ಯೆ ತನ್ನ ಮುಖ್ಯ ಕಾವ್ಯವಾದ ಕ್ಯಾಂಟೋಗಳನ್ನು ಆತ ಬರೆಯುತ್ತಲೂ ಕಂತಿನಲ್ಲಿ ಪ್ರಕಟಿಸುತ್ತಲೂ ಇದ್ದನಾದರೂ, ಕೊನೆಯ ಕೆಲವು ವರ್ಷ ಮಾತ್ರ ಅವನು ತೀರಾ ಕುಸಿದಿದ್ದನೆಂದೇ ಹೇಳಬೇಕು. ಇದರ ಪರಿಣಾಮವಾಗಿ ಅವನು ಮಾತು ನಿಲ್ಲಿಸಿ ಮೌನವಹಿಸಿದ. ೧೯೫೯ರಲ್ಲೇ ಆತ ತನ್ನ ಪ್ರಕಾಶಕರಿಗೆ ಬರೆದ ಪತ್ರವೊಂದರಲ್ಲಿ, ತನಗೆ ಯಾವ ರಾಜಕೀಯಸಿದ್ಧಾಂತ ಯಾವತ್ತು ಇತ್ತು ಎಂಬುದೇ ಮರೆತುಹೋಗಿದೆ, ಈಗಂತೂ ಯಾವುದೂ ಇಲ್ಲ ಎಂದಿದ್ದ.

ಆದರೂ, ಫ್ಯಾಸಿಸ್ಟ್ ಬೆಂಬಲಿಗ ಮತ್ತು ಯೆಹೂದಿ ವಿರೋಧಿ ಎಂಬ ಉಪಾಧಿಗಳು ಅವನು ಬದುಕಿದ್ದಾಗಲೂ ಅವನ ಬೆನ್ನು ಬಿಟ್ಟಿರಲಿಲ್ಲ, ಈಗಲೂ ಬಿಟ್ಟಿಲ್ಲ. ಪೌಂಡ್‌ನ ಕುರಿತಾಗಿ ನಾವು ಕಲ್ಪಿಸಿಕೊಂಡ ಚಿತ್ರ ಮೂಲಭೂತ ಭಾವನೆಗಳನ್ನು ಕೆರಳಿಸುವಂತೆ ತೋರುತ್ತದೆ. ೧೯೬೬ರಲ್ಲಿ ಸುಪ್ರಸಿದ್ಧ ರಶಿಯನ್ ಕವಿ ಯುಜೆನಿ ಯೆವ್‌ತುಷೆಂಕೊ ಪೌಂಡ್‌ನ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ. ೧೯೬೮ರಲ್ಲಿ ಆಕ್ಸ್‌ಫರ್ಡ್‌ನ ನ್ಯೂ ಕಾಲೇಜಿನಲ್ಲಿ ಅಮೇರಿಕನ್ ಕವಿ ರಾಬರ್ಟ್ ಲೊವೆಲ್ ಪೈಸನ್ ಕ್ಯಾಂಟೋಗಳ ಪದ್ಯವೊಂದನ್ನು ಓದುವಾಗ ಪೇಕ್ಷಕರಲ್ಲಿ ಅರ್ಧದಷ್ಟು ಮಂದಿ ಪ್ರತಿಭಟಿಸಿ ಹೊರನಡೆದರು. ಇವತ್ತಿಗೂ ಅಮೇರಿಕ ಹಾಗೂ ಇತರ ದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಪೌಂಡ್‌ನ ಕಾವ್ಯಕ್ಕೆ ಒಂದು ರೀತಿಯ ಅಘೋಷಿತ ನಿಷೇಧವಿರುವಂತೆ ಕಾಣುತ್ತದೆ.

ಇದು ನೈತಿಕ ಸಮಸ್ಯೆಯೊಂದನ್ನು ಎಬ್ಬಿಸುತ್ತದೆ: ಕವಿಯೊಬ್ಬನ ವೈಯಕ್ತಿಕ ವರ್ತನೆಗಳು, ಹೇಳಿಕೆಗಳು, ಅಥವಾ ಆತ ಬದುಕಿದಕ್ರಮಗಳು ಅವನ ಕಾವ್ಯದ ಓದಿನ ಮೇಲೆ ಪರಿಣಾಮ ಬೀರಬೇಕೇ? ನಿಜ, ಪೌ೦ಡಿನಮಟ್ಟಗೆ ಅವನ ಕಾವ್ಯದಲ್ಲೂ ಅವನ ಧೋರಣೆಗಳು ವ್ಯಕ್ತವಾಗುತ್ತವೆ: ಅಲ್ಲಿ ಮುಸ್ಸಲೊನಿಯ ಪಶಂಸೆ ಬರುತ್ತದೆ, ಬ್ಯಾಂಕಿಂಗ್ ವ್ಯವಸ್ಥೆಯ ಟೀಕೆ ಬರುತ್ತದೆ, ಯೆಹೂದಿ ವಿರೋಧಿ ಎನ್ನಬಹುದಾದ ಧ್ವನಿಗಳೂ ಬರುತ್ತವೆ. ಆದರೂ ಅದು ಯಾವುದೇ ಒಂದು ವಾದವನ್ನು ಓದುಗರ ಮೇಲೆ ಹೇರುವಂಥ ಕಾವ್ಯವಲ್ಲ. ಹಾಗೂ ಪೌಂಡ್ ಎಂದೂ ಜನಾಂಗ ಹತ್ಯೆಯಂಥ ಕ್ರೌರ್ಯವನ್ನು ಎತ್ತಿಹಿಡಿದವನಲ್ಲ. ವೈಯಕ್ತಿಕ ನೆಲೆಯಲ್ಲಿ ಅವನಿಗೆ ಹಲವಾರು ಯೆಹೂದಿ ಮಿತ್ರರೂ ಇದ್ದರು. ಆದರೂ ಈ ಸೈದ್ಧಾಂತಿಕ ಕಳಂಕವನ್ನು ಸ್ಥಿರವಾಗಿ ಹೊಂದಿದ ಪೌಂಡ್‌ನನ್ನು ಅವನ ಕವಿತೆಯಿಂದ ಪ್ರತ್ಯೇಕಿಸುವುದು ಹೇಗೆ? ಇಂಗ್ಲಿಷ್ ಕವಿ ಡೊನಾಲ್ಡ್ ಡೇವಿ ಹೇಳುವುದು, ಪೌಂಡ್‌ನ ಕಾವ್ಯ ‘ಭಾರೀಪ್ರಮಾಣದ ಸಂದರ್ಭಸೂಚನೆಗಳನ್ನೂ ಚೈನೀ ಚಿತ್ರಾಕ್ಷರಗಳನ್ನೂ, ವಿಭಿನ್ನ ಪರಂಪರೆಗಳನ್ನೂ, ಪ್ರೊವೆನ್ಸಾಲ್, ಇಟಾಲಿಯನ್, ಗ್ರೀಕ್ ಹಾಗೂ ಇತರ ಹಲವಾರು ಸಾಂಸ್ಕೃತಿಕ ಪ್ರಾದೇಶಿಕತೆಗಳನ್ನೂ ಭರಿಸುವ ಸ್ವಯಂವೇದ್ಯವಾಗಿಯೂ ಅಪಾಯಕಾರಿಯಾಗಿಯೂ ತಪ್ಪಾದ ಇತಿಹಾಸದ, ಆದ್ದರಿಂದ ರಾಜಕಾರಣದ, ತಿಳುವಳಿಕೆಯನ್ನು ಮೀರಿ ಬದುಕಬೇಕಾಗಿದೆ’ ಎಂಬುದಾಗಿ. ಇಂಥ ತಿಳುವಳಿಕೆಯನ್ನು ಮೀರಿ ಪೌಂಡ್‌ನ ಕಾವ್ಯ ಬದುಕುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಪೌಂಡ್‌ನದು ಕ್ರಾಂತಿಕಾರಿ ಕಾವ್ಯವಾಗಿದ್ದು, ಇಡೀ ಇಂಗ್ಲಿಷ್ ಕಾವ್ಯದ, ಹಾಗೂ ಆ ಮೂಲಕ ಇಡೀ ಜಗತ್ತಿನ, ಕಾವ್ಯದ ಗತಿಯನ್ನೇ ಬದಲಿಸಿದಂಥದು. ಆದರೆ ಸಮೀಪ ದೃಷ್ಟಿಯಿಂದ ಬಳಲುವವರಿಗೆ ಕಾಣಿಸುವುದು ಟಿ.ಎಸ್. ಎಲಿಯಟ್‌ನ ‘ವೇಸ್ಟ್ ಲ್ಯಾಂಡ್’ ಮಾತ್ರ. ಎಲಿಯಟ್‌ನಿಂದಾಗಿ ನವ್ಯಕ್ರಾಂತಿ ಸುರುವಾಯಿತು ಎಂದು ನಾವು ತಿಳಿದುಕೊಂಡಿದ್ದರೆ ಅದೊಂದು ಬಹುದೊಡ್ಡ ಅರ್ಧಸತ್ಯ. ‘ವೇಸ್ಟ್ ಲ್ಯಾಂಡ್’ನ ಇಂದಿನ ರೂಪಕ್ಕೆ ಕಾರಣನಾದವನು ಎಜ್ರಾ ಪೌಂಡ್. ಮೂಲದ ಸಾಹಿತ್ಯವನ್ನು ಮೂರನೇ ಓಂದಂಶಕ್ಕೆ ಇಳಿಸಿ ಎಲಿಯಟ್‌ನ ಮಹಾಕಾವ್ಯಕ್ಕೆ ಅರ್ಥಗೌರವ ತಂದುಕೊಟ್ಟವನು ಅವನೇ. ಅಲ್ಲದೆ ಎಲಿಯಟ್ ತನ್ನ ಕಾವ್ಯದಲ್ಲಿ ಪೌಂಡ್ ಆಗಲೇ ಬಳಕೆಗೆ ತಂದಂಥ ಅನೇಕ ತಂತ್ರಗಳನ್ನು ಉಪಯೋಗಿಸಿರುವುದು ಗಮನಾರ್ಹವಾದ ಸಂಗತಿ. ಆದ್ದರಿಂದಲೇ ಎಲಿಯಟ್ ‘ವೇಸ್ಟ್ ಲ್ಯಾಂಡ್’ನ್ನು ಪೌಂಡಿಗೆ ಅರ್ಪಿಸುತ್ತ, ಅವನನ್ನು !! il miglior fabbro (ಇಲ್ ಮಿಲ್ಯೋರ್ ಪಾಬ್ರೋ ‘ಹೆಚ್ಜಿನ ಕುಶಲಕರ್ಮಿ’) ಎಂದು ಡಾಂಟೆ ತನ್ನ ಕಾಮೆಡಿಯಾದಲ್ಲಿ ಇನ್ನೊಬ್ಬ ಕವಿಯ ಕುರಿತಾಗಿ ಉಪಯೋಗಿಸಿದ ಪದಪುಂಜದಿಂದ ಹೊಗಳಿರುವುದು.

೧೯೧೫ರಲ್ಲೇ ಪೌಂಡ್ ಕ್ಯಾಂಟೋಸ್ ಬರೆಯಲು ಆರಂಭಿಸಿದ್ದ, ಈ ಕವಿತೆಗಳನ್ನು ಬರೆಯುತ್ತಲೂ ತಿದ್ದುತ್ತಲೂ ಬದಲಾಗಿಸುತ್ತಲೂ ಇದ್ದ ಪೌಂಡ್, ೧೯೨೨ರಲ್ಲಿ ಎಲಿಯಟ್ನ ‘ವೇಸ್ಟ್ ಲ್ಯಾಂಡ್’ನ ಮೇಲೆ ಕೈಯಾಡಿಸಿದ ನಂತರ ಹೆಚ್ಚು ಕೇಂದ್ರೀಕೃತವಾಗಿ ಮುಂದುವರಿಸಿದ. ಓಟ್ಟು ೧೧೭ ಭಾಗಗಳ ಕ್ಯಾಂಟೋಸ್ ಯಾವ ರೀತಿಯಿಂದ ನೋಡಿದರೂ ಒಂದು ಕ್ರಾಂತಿಕಾರಿ ಪ್ರಯೋಗ. ಪ್ರಧಾನವಾಗಿ ಪೌಂಡ್ ಇಪತ್ತನೆಯ ಶತಮಾನದ ಆರಂಭದ ಎರಡು ದಶಕಗಳ ದುರ್ಬಲ ಜಾರ್ಜಿಯನ್ ಕವಿತಾವಿಧಾನವನ್ನು ತಿರಸ್ಕರಿಸುವುದು; ಕನ್ನಡದಲ್ಲಿ ವ್ಯಾಪಕವಾಗಿರುವ ಐದು ಮಾತ್ರೆಗಳ ಗಣದಂತೆ ಇಂಗ್ಲಿಷ್‌ನಲ್ಲಿ ಸಾರ್ವತ್ರಿಕವಾಗಿರುವ ಅಯಾಂಬಿಕ್ ಎಂಬ ಗಣವನ್ನು ಮೀರುವುದು; ಲ್ಯಾಟಿನ್, ಗ್ರೀಕ್, ಇಟಾಲಿಯನ್, ಫ್ರೆಂಚ್, ಚೈನೀಸ್, ಜಪಾನೀ ಭಾಷೆಗಳನ್ನು ತರುವುದು, ಮುಖ್ಯವಾಗಿ ಚೈನೀಸ್ ಚಿತ್ರಲಿಪಿಯನ್ನು ಸಾಂಕೇತಿಕವಾಗಿ ಉಪಯೋಗಿಸುವುದು ಮುಂತಾದ ಪ್ರಯೋಗಗಳನ್ನು ಕಾಣುತ್ತೇವೆ. ಡಾಂಟೆಯ ಡಿವೈನ್ ಕಾಮೆಡಿಯನ್ನೂ ಹೋಮರನ ಒಡಿಸ್ಸಿಯನ್ನೂ ಮಾದರಿಯಾಗಿಟ್ಟುಕೊಂಡು ಕವಿ ಇಲ್ಲಿ ನಮ್ಮನ್ನು ಚರಿತ್ರೆಯ ಸ್ವರ್ಗ ನರಕಗಳ ಮೂಲಕ ಕರೆದೊಯ್ಯುತ್ತಾನೆ. ಡಾಂಟೆ, ಕಾವಲ್ಕಾಂಟಿ, ಲೀ ಪೋ ಮುಂತಾದ ಕವಿಗಳು ಹಾದು ಹೋಗುತ್ತಾರೆ. ಎಲ್ಲದರ ಹಿಂದೆ ಒಡೀಸಿಯಸ್‌ನ ಸಮುದ್ರಯಾನದ ಕತೆ. ಅದು ಬೆಳೆದಂತೆ ಪೌಂಡ್‌ನ ಜೀವನದ ಕತೆಯೂ ಆಗುತ್ತದೆ.

ಆದರೂ ಕ್ಯಾಂಟೋಗಳಿಗೆ ಒಂದು ಸುಲಭವಾಗಿ ಗುರುತಿಸಲಾಗುವ ಸೂತ್ರವಾಗಲಿ, ಸ್ವರೂಪವಾಗಲಿ ಇಲ್ಲ; ಸರಿಯಾದ ಅಭ್ಯಾಸವಿಲ್ಲದೆ ಹಲವೆಡೆ ಅವು ಅರ್ಥವಾಗುವುದೂ ಇಲ್ಲ. ಆದ್ದರಿಂದ ಓದುಗರು ಈ ಖಂಡಗಳ ಮುಂದೆ ಹತಾಶರಾಗುವುದೇ ಹೆಚ್ಚು. ಆದರೆ ಇಂಗ್ಲಿಷ್ ಮಂದಿ ನಮ್ಮಂತೆ ಅರ್ಥವಾಗಲಿಲ್ಲ ಎಂದು ಹಳಿಯದೆ ಅರ್ಥಮಾಡಿಕೊಳ್ಳಲು ಶ್ರಮಿಸುತ್ತಾರೆ. ಆದ್ದರಿಂದ ಕ್ಯಾಂಟೋಗಳ ಸಂದರ್ಭಗಳನ್ನು ಸೂಚಿಸುವ ಮಾರ್ಗದರ್ಶಿ ಪುಸ್ತಕಗಳು ಈಗ ಪ್ರಕಟವಾಗುತ್ತಿದ್ದು, ಆಸಕ್ತಿಯಿರುವವರಿಗೆ ಅನುಕೂಲವಿದೆ. ಪೌಂಡ್‌ನ ಒಡನಾಟದಲ್ಲಿದ್ದ ಕವಿ ಬೇಸಿಲ್ ಬಂಟಿಂಗ್ ಈ ಕ್ಯಾಂಟೋಗಳನ್ನು ಜರಿದು ಬೀಳುವ ನೀರ್ಗಲ್ಲಗಳಿಂದ ಕೂಡಿದ ಆಲ್ಪ್ಸ್ ಪರ್ವತಕ್ಕೆ ಹೋಲಿಸಿದ್ದುಂಟು. ಪೌಂಡ್ ಸ್ವತಃ ತನ್ನೀ ಕಾವ್ಯದ ಬಗ್ಗೆ ಹತಾಶನಾದದ್ದಿದೆ. ಕ್ಯಾಂಟೋಗಳ ಕೊನೆಯಲ್ಲಿ ಆತ ‘ನಾನೇನೂ ದೇವರಲ್ಲ, ನಾನಿದನ್ನು ಹೊಂದಿಸಲಾರೆ’ ಎನ್ನುತ್ತಾನೆ. ಈ ಹೊಂದಿಸಲಾರದ್ದೂ ಅವನ ಕಾವ್ಯದ ಒಂದು ಗುಣವೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೧
Next post ಸಾವು

ಸಣ್ಣ ಕತೆ

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys