ನಂಜನಗೂಡು ತಿರುಮಲಾಂಬಾ

ನಂಜನಗೂಡು ತಿರುಮಲಾಂಬಾ

ಯಾರಿವರು ಈ ನಂಜನಗೂಡು ತಿರುಮಲಾಂಬಾ ?

ಇವರೇ ಹೊಸಗನ್ನಡ ಸಾಹಿತ್ಯದ ಮೊದಲ ಕವಯತ್ರಿ, ಕಾದಂಬರಿಗಾರ್ತಿ, ಪತ್ರಕರ್ತೆ, ಪ್ರಕಾಶಕಿ ಏನೆಲ್ಲಾ. ಅಬ್ಬಾ! ೧೯ನೇ ಶತಮಾನದ ಅಂತ್ಯದಲ್ಲಿಯೇ ಒಬ್ಬ ಹೆಣ್ಣುಮಗಳು ಇಷ್ಟೆಲ್ಲಾ ಮಾಡಲು ಅವಕಾಶವಿತ್ತೆ? ಅನ್ನಿಸುವುದು ಸಹಜ ಅಲ್ಲವೆ? ಕನ್ನಡ ಸಾಹಿತ್ಯ ಚರಿತ್ರೆಯನ್ನು ನೋಡಿದರೆ ಮೊಟ್ಟಮೊದಲ ಹೆಣ್ಣಿನ ಧ್ವನಿ ಕೇಳುವುದೇ ೧೨ನೇ ಶತಮಾನದಲ್ಲಿ. ಅವಳೇ ಅಕ್ಕಮಹಾದೇವಿ. ಅನಂತರ ೫೦೦ ವರ್ಷಗಳ ಬಳಿಕ ಚಿಕದೇವರಾಜ ಒಡೆಯರ ಆಸ್ಥಾನದಲ್ಲಿ ೧೭ನೇ ಶತಮಾನದಲ್ಲಿ ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಶೃಂಗಾರಮ್ಮ, ಚೆಲುವಾಂಬೆ ಇವರೆಲ್ಲಾ ಬರುತ್ತಾರೆ. ಅನಂತರದ ೨೦೦ ವರ್ಷಗಳ ನಂತರ ಬಂದವರು ನಂಜನಗೂಡು ತಿರುಮಲಾಂಬಾ.

ಎಲ್ಲಾ ಹೆಣ್ಣು ಮಕ್ಕಳಂತೆ ಇವಳನ್ನೂ ಇವಳ ತಂದೆ ಸಾಕಿ ಬೆಳೆಸಿ ಹೆಚ್ಚು ವಿದ್ಯೆ ಕಲಿಸದೇ ೯ನೇ ವಯಸ್ಸಿಗೆ ಮದುವೆಯೂ ಮಾಡಿದರು. ೧೨ನೇ ವಯಸ್ಸಿಗೆ ಗಂಡ ಸತ್ತು ಆಕೆ ವಿಧವೆಯಾದ ಮೇಲೆ ಅವರ ತಂದೆ ಅವರನ್ನು ಬಿ.ಎ.ವರೆಗೆ ಓದಿಸಿದರು. ಆಗಿನ ಕಾಲದ ಬಿ.ಎ.! ಹಾಗೆ ಓದಿ ಅವರು ‘ಸತೀ ಹಿತೈಷಿಣಿ’ ಎಂಬ ಗ್ರಂಥ ಮಾಲೆಯನ್ನು ಸ್ಥಾಪಿಸಿ ಅದರಲ್ಲಿ ತಾವೇ ಬರೆದ ೧೨ ಕಾದಂಬರಿಗಳು, ೧೪ ನಾಟಕಗಳು, ಮೂರು ಕವನಸಂಕಲನಗಳನ್ನು ಪ್ರಕಟಿಸಿದ್ದಲ್ಲದೇ ಇತರರ ಪುಸ್ತಕಗಳನ್ನೂ ಪ್ರಕಟಿಸಿದರು. ‘ಕರ್ನಾಟಕ ನಂದಿನಿ’ ಮತ್ತು ‘ಸನ್ಮಾರ್ಗದರ್ಶಿನಿ’ ಎಂಬ ಪತ್ರಿಕೆಗಳನ್ನೂ ನಡೆಸಿದರು.

ನಂಜನಗೂಡಿನಲ್ಲಿ ೧೮೮೨ರಲ್ಲಿ ಹುಟ್ಟಿದ ತಿರುಮಲಾಂಬಾ ೧೯೯೨ರವರೆಗೂ ಬದುಕಿದ್ದರು. ಅಂದರೆ ಇಪ್ಪತ್ತನೇ ಶತಮಾನದ ಬಹುಕಾಲ ಬದುಕಿದ್ದರು. ಆದರೆ ಅವರು ಬದುಕಿದ್ದಾಗಲೇ ಸತ್ತುಹೋದರೆಂದು ಭಾವಿಸಿದ ಸಂಗತಿ ನಿಮಗೆ ಗೊತ್ತೆ ? ಒಂದು ದಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಪ್ರಾಶುಂಪಾಲರಾಗಿದ್ದ ಚಿ.ನ. ಮಂಗಳಾ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಎದುರಾಗಿ ಹೆಚ್.ಎಸ್. ಪಾರ್ವತಿ ಬಂದರಂತೆ, ಆ ವೇಳೆಗೆ ಚಿ.ನಾ. ಮಂಗಳಾ ಒಂದು ಪತ್ರಿಕೆಯಲ್ಲಿ ತಿರುಮಲಾಂಬಾ ಬಗ್ಗೆ ಲೇಖನ ಬರೆದು ಅದರಲ್ಲಿ ಅವರು ಸತ್ತು ಹೋಗಿದ್ದಾರೆಂದೂ ಬರೆದುಬಿಟ್ಟಿದ್ದರು.

ಪಾರ್ವತಿ – ರೀ ಮಂಗಳಾ, ತಿರುಮಾಲಾಂಬ ಬದುಕಿದಾರಂತೆ ಕಣ್ರೀ.

ಮಂಗಳಾ ಹೌದಾ, ಅಯ್ಯೋ ಎಂಥಾ ಪ್ರಮಾದವಾಯಿತು! ಈಗ ಏನ್ರ್‍ಈ ಮಾಡೋದು ಪಾರ್ವತೀ?

ಹೀಗೆ ಪರಿತಪಿಸಿದ ಮಂಗಳಾ ಅನಂತರ ತಮ್ಮ ಕಾಲೇಜಿನಲ್ಲೇ ಶಾಶ್ವತಿ ಎಂಬ ವಸ್ತು ಸಂಗ್ರಹಾಲಯವನ್ನೂ, ಪ್ರತಿ ವರ್ಷ ಒಬ್ಬ ಸ್ತ್ರೀವಾದಿ ಲೇಖಕಿಗೆ ಶಾಶ್ವತೀ ಪ್ರಶಸ್ತಿಯನ್ನೂ ಸ್ಥಾಪಿಸಿ ತಿರುಮಲಾಂಬಾ ಹೆಸರಿನಲ್ಲಿ ಒಂದು ಸಭಾಂಗಣವನ್ನೂ ಕಟ್ಟಿಸಿದರು. ಅನಂತರ ಪತ್ರಿಕೆಯವರು ಮದ್ರಾಸಿನಲ್ಲಿದ್ದ ತಿರುಮಲಾಂಬಾ ಅವರನ್ನು ಕಾಣಲು ಹೋದಾಗ ಅವರಿಗೆ ತೊಂಭತ್ತರ ಮುಪ್ಪು. ‘ನಮ್ಮನ್ನೆಲ್ಲಾ ಈಗ ಯಾರು ಕೇಳ್ತಾರಪ್ಪಾ?’ ಅಂದರೂ ಬಿಡದೇ ಎಲ್ಲಾ ಪತ್ರಿಕೆಯವರೂ ಅವರ ಬೇರೆ ಬೇರೆ ಭಂಗಿಯ ಚಿತ್ರಗಳನ್ನು ಸೆರೆಹಿಡಿದು ಪ್ರಕಟಿಸಿಯೇಬಿಟ್ಟರು. ಅಯ್ಯಂಗಾರ್ ಮಾದರಿ ಕಚ್ಚೆ ಸೀರೆಯುಟ್ಟು, ಹಣೆಗೆ ಉದ್ದಕ್ಕೆ ಕೆಂಪು ತಿಲಕವಿಟ್ಟ ತಿರುಮಲಾಂಬಾ ತಮ್ಮ ಜೀವಮಾನದ ಸಾಧನೆಗೆ ಅಂತೂ ತಮ್ಮ ತೊಂಭತ್ತನೇ ವಯಸ್ಸಿನಲ್ಲಿ ಗುರುತಿಸಲ್ಪಟ್ಟರು. ಅದಾದ ಕೆಲವೇ ತಿಂಗಳಿಗೆ ಸತ್ತೂ ಹೋದರು.

ಅವರು ಬದುಕಿದ್ದ ಕಾಲಕ್ಕೆ ಬಂಗಾಳಿಯಿಂದ ಶರಶ್ಚಂದ್ರರ ಅನೇಕ ಕಾದಂಬರಿಗಳು ಕನ್ನಡಕ್ಕೆ ಅನುವಾದವಾಗಿದ್ದವು. ವೆಂಕಟರಾಯರು, ಗಳಗನಾಥರು ಅನುವಾದಿಸಿದ್ದ ಕಾದಂಬರಿಗಳ ಪರಿಚಯ ತಿರುಮಲಾಂಬಾ ಅವರಿಗಿತ್ತು. ಏಕೆಂದರೆ ಬ್ರಿಟಿಷ್ ಸರ್ಕಾರದ ನೆರವಿನಿಂದ ಆಗಷ್ಟೇ ಹೆಣ್ಣುಮಕ್ಕಳನ್ನು ಶಾಲೆಗೆ ಕಾಲೇಜಿಗೆ ಕಳಿಸುತ್ತಿದ್ದ ಕಾಲ ಅದು. ತಾವೂ ವಿದ್ಯೆ ಕಲಿತವರಾದುದರಿಂದ ತಿರುಮಲಾಂಬಾ ಅವರಿಗೆ ವಿದ್ಯೆಯ ಬೆಲೆ ಗೊತ್ತಿತ್ತು. ಅದಕ್ಕೆ ಕಂಡುಬಂದ ವಿರೋಧದ ಅರಿವೂ ಇತ್ತು. ಅದರೊಂದಿಗೆ ವರದಕ್ಷಿಣೆ, ವಧೂದಹನ, ಬಾಲ್ಯ ವಿವಾಹ, ವೇಶ್ಯಾ ಸಮಸ್ಯೆ ಇವೂ ಅವರ ಮುಖ್ಯ ಕಾಳಜಿಗಳಾಗಿದ್ದವು. ಅವರ ‘ನಭಾ’ ಕಾದಂಬರಿಯ ವಸ್ತು ‘ವಿಧವಾ ವಿವಾಹವೇ’. ಅವರ ಎಲ್ಲಾ ಕಾದಂಬರಿಗಳಲ್ಲಿ, ಮನೆಯಲ್ಲಿ ಮಧ್ಯಾಹ್ನದ ವೇಳೆ ಕುಳಿತು ಕೆಲಸಕ್ಕೆ ಬಾರದ್ದನ್ನು ಹರಟುವುದು, ಅವರಿವರ ಬಗ್ಗೆ ಗಾಸಿಪ್ ಮಾತಾಡುವುದು, ಸಮಯ ವ್ಯರ್ಥ ಮಾಡುವುದು – ಇವು ತಪ್ಪು ಎಂದು ಬರೆದಿರುವುದನ್ನು ನೋಡಬಹುದು. ಇವರ ಈ ಪ್ರಗತಿಪರ ಆಲೋಚನೆಗಳು ಅವರ ಸಮಕಾಲೀನರಾದ ತಿರುಮಲೆ ರಾಜಮ್ಮ, ಕೊಡಗಿನ ಗೌರಮ್ಮ, ಬೆಳೆಗೆರೆ ಚಾನಕಮ್ಮ, ಹೆಚ್.ವಿ. ಸಾವಿತ್ರಮ್ಮ, ಮೂಕಾಂಬಿಕಮ್ಮ, ಸೀತಾದೇವಿ ಪಡುಕೋಣೆ, ಆರ್. ಕಲ್ಯಾಣಮ್ಮ, ಹೆಚ್.ಎಸ್. ಕಾತ್ಯಾಯಿನಿ, ಶ್ಯಾಮಲಾದೇವಿ ಬೆಳಗಾಂವಕರ ಮೊದಲಾದ ಮೊದಲ ತಲೆಮಾರಿನ ಲೇಖಕಿಯರ ಮೇಲೆ ಆಗಿತ್ತು. ಆದ್ದರಿಂದಲೇ ಹೆಚ್.ವಿ.ಸಾವಿತ್ರಮ್ಮನವರು ‘ರಾಮ ಸೀತೆ ರಾವಣ’ ಅಂತಹ ಹೊಸ ಆಲೋಚನೆಯ ಕಾದಂಬರಿಯನ್ನು, ಆರ್. ಕಲ್ಯಾಣಮ್ಮನವರು ‘ನಿರ್ಭಾಗ್ಯ ವನಿತೆ’ಯಂತಹ ವಿಧವಾವಿವಾಹದ ಕತೆಯನ್ನೂ ಬರೆಯುವುದು ಸಾಧ್ಯವಾಯಿತು. ಆದರೂ ಇವರ ಸಮಕಾಲೀನರೇ ಆಗಿದ್ದ ಮಾಸ್ತಿ ವೆಂಕಟೇಶಯ್ಯಂಗಾರ್‌ರವರು. ತಮ್ಮ ‘ಜೀವನ’ ಪತ್ರಿಕೆಯಲ್ಲಿ ತಿರುಮಲಾಂಬಾ ಅವರ ಅನೇಕ ಕೃತಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಅದಕ್ಕೆ ಕಾರಣ ಅವರ ಕಾದಂಬರಿಗಳ ಭಾಷೆ ಸರಳವಾಗಿರದೇ ಗಳಗನಾಥರ ಅನುವಾದಿತ ಕೃತಿಗಳ ಭಾಷೆಯಂತೆ ಪಡಸಾಗಿರುವುದು ಮತ್ತು ಎಷ್ಟೇ ಪ್ರಗತಿಪರರೆಂಬಂತೆ ತೋರಿದರೂ ತಟ್ಟನೇ ಸಂಪ್ರದಾಯಕ್ಕೆ ಹೊರಳಿಬಿಡುವುದು. ಇದಕ್ಕೆ ಉದಾಹರಣೆಯಾಗಿ ಇವರ ‘ನಭಾ’ ಕಾದಂಬರಿಯ ವಿಧವೆಯೊಬ್ಬಳು ತಾನು ಕೂದಲು ಬೋಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಎಷ್ಟೆಲ್ಲಾ ನಾಟಕವಾಡುತ್ತಾಳೆ. ತನ್ನ ಕನಸಿನಲ್ಲಿ ಶ್ರೀರಂಗಪಟ್ಟಣದ ‘ರಂಗನಾಥಸ್ವಾಮಿಯು ಬಂದು ಕೂದಲಿಗೆ ಕತ್ತರಿ ಹಾಕಬಾರದಾಗಿ ಹೇಳಿದ್ದಾನೆ’ ಎಂದೂ ಕತೆ ಕಟ್ಟುತ್ತಾಳೆ. ಈಗಿನ ಕಾಲಕ್ಕೆ ಇದೆಲ್ಲಾ ಹಾಸ್ಯಾಸ್ಪದವೆಂಬಂತೆ ತೋರಬಹುದು. ಆದರೆ ಆಗಿನ ಕಾಲಕ್ಕೆ ಅಷ್ಟು ಪ್ರಗತಿಯ ಮಾತನಾಡುವುದೂ ದೊಡ್ಡದೇ ಆಗಿತ್ತು. ಆದರೆ ಇಷ್ಟೆಲ್ಲಾ ಸರ್ಕಲ್ ಮಾಡುವ ನಭಾ, ಉದ್ದಕ್ಕೂ ಹೆಂಗಸಿಗೆ ಮರುಮದುವೆ ಬೇಕೆಂದು ವಾದಿಸುವ ನಭಾ ಕೊನೆಯ ಘಟ್ಟದಲ್ಲಿ ತನಗೆ ಮತ್ತೆ ಮದುವೆ ಬೇಡವೆಂದುಬಿಡುತ್ತಾಳೆ. ಹೀಗೆ ಸಂಪ್ರದಾಯ ಮತ್ತು ಕ್ರಾಂತಿ ಎರಡೆರಡೂ ಒಟ್ಟೋಟ್ಟಿಗೇ ಸ್ಫೋಟಗೊಳ್ಳುವುದೇ ಅವರ ಬರವಣಿಗೆಯ ವೈಶಿಷ್ಟ್ಯ. ತಿರುಮಲಾಂಬಾ ಯಾವಾಗ ಪ್ರಗತಿಯ ಮಾತನಾಡುತ್ತಾರೆ, ಯಾವಾಗ ಸಂಪ್ರದಾಯಕ್ಕೆ ತಿರುಗುತ್ತಾರೆ ಎಂಬುದನ್ನು ಹೇಳುವುದೇ ಕಷ್ಟ. ಇದಕ್ಕೆ ಹೋಲಿಸಿದರೆ ಆರ್. ಕಲ್ಯಾಣಮ್ಮ(ಅವರೂ ಬಾಲ ವಿಧವೆ)ನವರ ‘ನಿರ್ಭಾಗ್ಯವನಿತೆ’ ಎಂಬ ಕತೆಯಲ್ಲಿ ಸುಂದರೇಶ ನನ್ನು ಪ್ರೀತಿಸಿ ಬೇರೊಬ್ಬನನ್ನು ಮದುವೆಯಾದ ಇಂದಿರೆ ಗಂಡ ಸತ್ತ ಮೇಲೆ ವೈಧವ್ಯದ ದುರ್ವಿಧಿಯನ್ನು ಹಳಿಯುತ್ತಾ ಕೊನೆಗೆ ಸುಂದರೇಶನನ್ನು ಮದುವೆಯಾಗುತ್ತಾಳೆ. ಇದು ಕಲ್ಯಾಣಮ್ಮನವರಿಗೂ ಸುಲಭ ಸಾಧ್ಯವಾಗಿರಲಿಲ್ಲ ಎಂಬುದಕ್ಕೆ ಅವರು ಸುಂದರೇಶನೊಂದಿಗೆ ವಿಧವಾ ವಿವಾಹದ ಕಾನೂನನ್ನು ಬಲ್ಲವರ ಜೊತೆಗೆ ಏರ್ಪಡಿಸುವ ದೀರ್ಘವಾದ ಚರ್ಚೆಯೇ ಸಾಕ್ಷಿ.

ಇನ್ನು ಅವರ ಬೇರೆ ಕೃತಿಗಳ ಬಗ್ಗೆ ಹೇಳಬಹುದಾದರೆ ಇದಲ್ಲದೇ ಸುಶೀಲೆ, ವಿರಾಗಿಣಿ, ಗಿರಿಜಾಬಾಯಿ ಇತ್ಯಾದಿ ಒಟ್ಟು ಹನ್ನೆರಡು ಕಾದಂಬರಿಗಳನ್ನೂ ರಮಾನಂದ, ಚಂದ್ರ ನಟನಾ, ವಿವೇಕೋದಯ, ಭಾರ್ಗವ ಗರ್ವಭಂಗ ಮೊದಲಾದ ಹದಿನಾಲ್ಕು ನಾಟಕಗಳನ್ನೂ ಬರೆದಿದ್ದಾರೆ. ಇವುಗಳಲ್ಲಿ ಒಂದೆರಡರ ಬಗ್ಗೆ ಪ್ರಸ್ತಾಪಿಸಬಹುದು. ಯಯಾತಿ, ಭರತ ವಂಶದ ಹಸ್ತಿನಾವತಿಯ ರಾಜ, ಅವನ ಮಗಳು ಮಾಧವಿ. ಗಾಲವನೆಂಬ ಋಷಿ ತನ್ನ ಗುರುವಿಗೆ ದಕ್ಷಿಣೆಯಾಗಿ ಒಂದು ಕಿವಿ ನೀಲಿ ಬಣ್ಣಕ್ಕಿರುವ ಇನ್ನೂರು ಕುದುರೆಗಳನ್ನು ತರುವೆನೆಂದು ಮಾತು ಕೊಟ್ಟು ಬಂದಿರುತ್ತಾನೆ. ಅಂತಹ ಕುದುರೆಗಳನ್ನು ಪಡೆಯಲು ಯಯಾತಿಯ ಮಗಳಾದ ಮಾಧವಿಯನ್ನು ದಾನವಾಗಿ ಪಡೆದು ಪುತ್ರಾಕಾಂಕ್ಷಿಗಳಾದ ನಾಲ್ವರು ರಾಜರಿಗೆ ಮಾರಿ ಅವರಿಂದ ಕುದುರೆಗಳನ್ನು ಪಡೆಯುತ್ತಾನೆ. ಆ ನಾಲ್ಕು ರಾಜರಿಗೆ (ಅವರಲ್ಲಿ ಮುದುಕರೂ ಇದ್ದರು) ವರ್ಷಕ್ಕೊಂದರಂತೆ ಒಬ್ಬೊಬ್ಬ ಮಗನನ್ನು ಹೆತ್ತ ಮಾಧವಿಯನ್ನು ತನಗೂ ಒಂದು ಮಗು ಹೆತ್ತುಕೊಡುವಂತೆ ಗಾಲವ ಕೇಳುತ್ತಾನೆ. ಇದೇ ವೇಳೆಗೆ ಯಯಾತಿ ಅವಳಿಗೆ ಸ್ವಯಂವರವೇರ್ಪಡಿಸುತ್ತಾನೆ. ಗಾಲವನ ಕೋರಿಕೆಯನ್ನೂ ತಂದೆಯ ಏರ್ಪಾಟನ್ನೂ ಒಟ್ಟಿಗೇ ತಿರಸ್ಕರಿಸಿದ ಮಾಧವಿ ಕಾಡಿಗೆ ಹೊರಟು ಹೋಗುತ್ತಾಳೆ. ಇದು ಕತೆ. ಇದನ್ನು ಆಧರಿಸಿ ‘ವಿವೇಕೋದಯ’ ಎಂಬ ನಾಟಕವನ್ನು ಬರೆಯುವಾಗ ತಿರುಮಲಾಂಬಾ ಅವರಿಗೆ ಮಾಧವಿಯ ಹೃದಯದ ದುಃಖವನ್ನು ಅನಾವರಣ ಮಾಡುವ ಅವಕಾಶವಿದ್ದರೂ ಅವರು ಅದನ್ನು ಮಾಡುವುದಿಲ್ಲ. ಏಕೆಂದರೆ ಆಗಿನ ಕಾಲಕ್ಕೆ ಅಂಥದೊಂದು ವಸ್ತುವನ್ನು ಮುಟ್ಟುವುದೇ ಕ್ರಾಂತಿಕಾರಕವಾಗಿತ್ತು. ಆದ್ದರಿಂದ ಸುಮಾರು ಐವತ್ತು ವರ್ಷಗಳ ನಂತರ ಡಾ. ಅನುಪಮಾ ನಿರಂಜನ ಅವರು ತಮ್ಮ ‘ಮಾಧವಿ’ ಕಾದಂಬರಿಯಲ್ಲಿ ಅದೇ ವಸ್ತುವನ್ನೆತ್ತಿಕೊಂಡು ಮಾಧವಿಯ ದುಃಖವನ್ನು ಅನಾವರಣ ಮಾಡುವ ಮೂಲಕ ಅದರಲ್ಲಿ ಸ್ತ್ರೀ ಸಂವೇದನೆಯನ್ನು ತುಂಬಿದರು.

ಇದೇ ಮಾತನ್ನು ಅವರ ‘ಭಾವಗೀತಾವಳಿ’, ‘ಭಕ್ತಿ ಗೀತಾವಳಿ’, ‘ಭದ್ರಗೀತಾವಳಿ’ ಎಂಬ ಕವನ ಸಂಕಲನಗಳಿಗೂ ಅನ್ವಯಿಸಬಹುದು. ಹೆಸರೇ ಹೇಳುವಂತೆ ಅವು ಭಕ್ತಿ ಪ್ರಧಾನವಾದ ಸ್ತೋತ್ರ ಪದ್ಮಗಳು. ಅವರ ಸಮಕಾಲೀನರೇ ಆದ ಬೆಳಗೆರೆ ಜಾನಕಮ್ಮ ಬರೆದ ‘ಚಂಡಶಾಸನ’ ಪದ್ಮದ ಸ್ತ್ರೀ ಸಂವೇದನೆಯಾಗಲೀ, ತಿರುಮಲೆ ರಾಜಮ್ಮ ಬರೆದ ‘ಜಯ ಭಾರತ ಭುವಿಗೇ ಮಾತೆಗೆ ಜಯ್, ಸುಂದರಮೂರ್ತಿಗೆ ಸನ್ಮಂಗಳವಾಗಲೀ ಸತತಂ’ ಎಂಬ ಪದ್ಮದ ದೇಶಭಕ್ತಿಯಾಗಲೀ ತಿರುಮಲಾಂಬಾ ಅವರಿಗೆ ಸಾಧ್ಯವಾಗಲಿಲ್ಲ. ರಾಜಮ್ಮ ವೀಣೆ ನುಡಿಸುತ್ತಿದ್ದರು, ನಾಟಕದಲ್ಲಿ ಅಭಿನಯಿಸಿದ್ದು, ಪತಿ ತೀ.ತಾ. ಶರ್ಮ ನಾಟಕ ನೋಡಲು ಬಂದಿದ್ದಾರೆಂದು ತಿಳಿದ ಸಾವಿತ್ರಿ ಪಾತ್ರಧಾರಿ ರಾಜಮ್ಮ ರಂಗದ ಮೇಲೆ ಸತ್ಯವಾನ ಕೂಗಿ ಕರೆದರೂ ಬರಲೇ ಇಲ್ಲವಂತೆ. ಈ ಯಾವ ಸೌಲಭ್ಯಗಳೂ, ಹೊರದಾರಿಗಳೂ ತಿರುಮಲಾಂಬಾ ಅವರಿಗೆ ಇರಲಿಲ್ಲವೆಂದು ತೋರುತ್ತದೆ.

ಡಾ. ವಿಜಯಾ ದಬ್ಬೆಯವರು ‘ಹಿತೈಷಿಣಿಯ ಹೆಜ್ಜೆಗಳು’ ಎಂಬ ಗ್ರಂಥದಲ್ಲಿ ತಿರುಮಲಾಂಬಾ ಅವರ ಎಲ್ಲಾ ಕೃತಿಗಳು ಎಲ್ಲಾ ಪತ್ರಗಳನ್ನೂ ಸಂಕಲಿಸಿ ವಿಶ್ಲೇಷಣಾತ್ಮಕವಾಗಿ ಅವರ ಬಗ್ಗೆ ಬರೆದಿದ್ದಾರೆ. ಸಪ್ನಾ ಬುಕ್ ಹೌಸ್ ಇದನ್ನು ಪ್ರಕಟಿಸಿದೆ. ಆಸಕ್ತಿಯಿದ್ದವರು ನೋಡಬಹುದು. ಇದರಲ್ಲಿ ಅವರ ಸಮಗ್ರ ಸೃಜನಶೀಲ ಕೃತಿಗಳೂ ಮುದ್ರಿತವಾಗಿರುವುದಲ್ಲದೇ ಅವರು ಓದುಗರಿಗೆ, ಸರ್ಕಾರಕ್ಕೆ, ಪತ್ರಿಕಾಲಯಕ್ಕೆ ಕಾಲಕಾಲಕ್ಕೆ ಬರೆದ ಪತ್ರಗಳು, ಅವುಗಳಲ್ಲಿ ದುಡ್ಡು ಕಾಸಿನ ಸಂಕಟ, ಪತ್ರಿಕೆ ತರುವ ಸಂಕಟ ಎಲ್ಲಾ ದಾಖಲಾಗಿವೆ.

ಒಂದೇ ಒಂದು ದುಃಖದ ಸಂಗತಿ ಎಂದರೆ ಇದುವರೆಗೆ ಆರ್. ನರಸಿಂಹಾಚಾರ್ ಅವರ ‘ಕರ್ನಾಟಕ ಕವಿ ಚರಿತ್ರೆ’ಯಿಂದ ಹಿಡಿದು ಇಂದಿನವರೆಗೆ ರಂ.ಶ್ರೀ. ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ಸಾಹಿತ್ಯದ ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಪ್ರತ್ಯೇಕವಾಗಿ ಐದಾರು ಸಂಪುಟಗಳಲ್ಲಿ ಪ್ರಕಟಿಸಿರುವ ‘ಕನ್ನಡ ಸಾಹಿತ್ಯ ಚರಿತ್ರೆ’, ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ಕೊನೆಯದಾದ ‘ಹೊಸಗನ್ನಡ ಸಾಹಿತ್ಯ’ – ಈ ಯಾವ ಗ್ರಂಥದಲ್ಲೂ ತಿರುಮಲಾಂಬಾ ಬಗ್ಗೆ ಒಂದು ಸಾಲಿನ ಉಲ್ಲೇಖವೂ ಇಲ್ಲದಿರುವುದು. ಮುಂದಿನ ದಿನಗಳಲ್ಲಿ ನಾನು ಆಗಲೇ ಪ್ರಸ್ತಾಪಿಸಿದ ಮೊದಲ ತಲೆಮಾರಿನ ಲೇಖಕಿಯರ ಬಗ್ಗೆ ಮಾಹಿತಿ ಪಡೆಯಲಿಚ್ಚಿಸಿ ಯಾರಾದರೂ ಯಾವ ಸಾಹಿತ್ಯ ಚರಿತ್ರೆಯನ್ನೋದಿದರೂ ನಿರಾಶೆಯೇ ಕಾದಿದೆ. ಈ ಹಿನ್ನೆಲೆಯಲ್ಲಿ ಡಾ. ವಿಜಯಾ ದಬ್ಬೆಯವರು ‘ಹಿತೈಷಿಣಿಯ ಹೆಜ್ಜೆಗಳು’ ಪ್ರಕಟಿಸಿದ ನಂತರ ಅದೇ ಹಾದಿಯನ್ನನುಸರಿಸಿ ಡಾ. ಸುಮಿತ್ರಾ ಬಾಯಿಯವರು ಕಲ್ಯಾಣಮ್ಮನವರ ಬಗ್ಗೆ ‘ಕಲ್ಯಾಣ ಸರಸ್ವತಿ’, ನೇಮಿಚಂದ್ರ ಅವರು ‘ಬೆಳಗೆರೆ ಜಾನಕಮ್ಮ’, ಶ್ರೀವಳ್ಳಿಯವರು ‘ಮೂಕಾಂಬಿಕಮ್ಮ’, ಹೆಚ್‌.ಎಸ್. ಪಾರ್ವತಿಯವರು ತಿರುಮಲೆ ರಾಜಮ್ಮನವರ ಬಗ್ಗೆ ‘ಭಾರತಿ’, ಡಾ. ಗಾಯತ್ರಿ ಮತ್ತು ಡಾ. ಸುಮಿತ್ರಾಬಾಯಿಯವರು ಹೆಚ್.ವಿ. ಸಾವಿತ್ರಮ್ಮನವರ ಬಗ್ಗೆ ‘ವಿಮುಕ್ತಿಯ ಹಾದಿಯಲ್ಲಿ’, ಚಂದ್ರಮತಿ ಸೋಂದಾ ಅವರು ಸಿ.ಎನ್. ಜಯಲಕ್ಷ್ಮೀದೇವಿಯವರ ಬಗ್ಗೆ ‘ವ್ಯಕ್ತಿ-ಅಭಿವ್ಯಕ್ತಿ’, ಡಾ. ವಿಜಯಾ ದಬ್ಬೆಯವರು ಶ್ಯಾಮಲಾದೇವಿಯವರ ಬಗ್ಗೆ ‘ಶ್ಯಾಮಲಾ ಸಂಚಯ’ – ಬರೆದು ಪ್ರಕಟಿಸಿ ಈ ಕೊರತೆಯನ್ನು ತುಂಬಿದ್ದಾರೆ. ಮುಂದೊಂದು ದಿನ ರಚನೆಯಾಗಲಿರುವ ‘ಮಹಿಳಾ ಸಾಹಿತ್ಯ ಚರಿತ್ರೆ’ಗೆ ಇವು ಬುನಾದಿಯಾಗಲಿವೆ. ಈ ಬುನಾದಿಯ ಮೊದಲ ಕಲ್ಲು ನಂಜನಗೂಡು ತಿರುಮಲಾಂಬಾ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ.
*****
ಆಕಾಶವಾಣಿಯಲ್ಲಿ ಓದುವುದಕ್ಕಾಗಿ ಬರೆದದ್ದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ಮಳೆ
Next post ಮಗುವಿನ ಪ್ರಶ್ನೆ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys