ರಷೀದಾ ಬೀ (ಎಡ) ಚಂಪಾ ದೇವಿ ಸುಕ್ಲ (ಬಲ)         ಚಿತ್ರ ಸೆಲೆ: ಗೋಲ್ಡ್‌ಮ್ಯಾನ್ ಪ್ರೈಜ್.ಕಾಂ
ರಷೀದಾ ಬೀ (ಎಡ) ಚಂಪಾ ದೇವಿ ಸುಕ್ಲ (ಬಲ) ಚಿತ್ರ ಸೆಲೆ: ಗೋಲ್ಡ್‌ಮ್ಯಾನ್ ಪ್ರೈಜ್.ಕಾಂ

ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ಬಿಪಾಷ ಬಸು ಜನಪ್ರಿಯರು. ಅಂಜಲಿ ಭಾಗವತ್, ಅಂಜು ಬಾಬ್ಬಿ ಮುಖಗಳೂ ಪರಿಚಿತ. ಸೋನಿಯಾ, ಸುಷ್ಮಾ ತೇಜಸ್ವಿನಿಯೂ ಜನಪ್ರಿಯರು. ಆದರೆ, ಭೋಪಾಲದ ವಿಷಾನಿಲ ದುರಂತದ ಸಂತ್ರಸ್ತರಿಗೆ ನೆಮ್ಮದಿ ದೊರಕಿಸಿಕೊಡಲು ಹೊಂಟಿರುವ ರಷೀದಾ-ಚಂಪಾ ಎನ್ನುವ ಈ ಹೆಣ್ಣುಮಕ್ಕಳು ಸಾಕಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ! ಏಕೆಂದರೆ, ಉಕ್ಕುವ ಯೌವನವನ್ನು ದಾಟಿರುವ, ಅಷ್ಟೇನೂ ಆಕರ್ಷಕರಲ್ಲದ, ಕಲಿತವರೂ ಅಲ್ಲದ ಈ ಹೆಣ್ಣುಮಕ್ಕಳು ಪ್ರಚಾರದ ಬೆಳಕಿಗೆ ಬೀಳುವುದಾದರೂ ಹೇಗೆ ಸಾಧ್ಯ? ಬೆಂಕಿಯಲ್ಲಿ ಅರಳಿದ ಹೂಗಳಾದ ಈ ಗೆಳತಿಯರು ಭಾರತದ ಜನಸಾಮಾನ್ಯ ಹೆಣ್ಣುಮಕ್ಕಳ ಪ್ರತಿನಿಧಿಗಳು ಹಾಗೂ ಭಾರತೀಯ ಸ್ತ್ರೀಯರ ಗಟ್ಟಿ ವ್ಯಕ್ತಿತ್ವದ ಮಾದರಿಗಳು.

ರಷೀದಾ ಬೀ
ಚಂಪಾದೇವಿ ಶುಕ್ಲಾ
ಮೇಲಿನ ಹೆಸರುಗಳೇ ಇಬ್ಬರ ನಡುವಣ ವ್ಯತ್ಯಾಸವನ್ನು ಹೇಳಿಬಿಟ್ಟರೂ, ಒಬ್ಬರ ಹೆಸರನ್ನು ಬಿಟ್ಟು ಮತ್ತೊಬ್ಬರನ್ನು ನೆನಪಿಸಿಕೊಳ್ಳಲಾಗದಂತೆ ಈ ಹೆಣ್ಣುಮಕ್ಕಳು ತಮ್ಮನ್ನು ಗುರ್ತಿಸಿಕೊಂಡಿದ್ದಾರೆ.  ಭಿನ್ನ ಕೋಮುಗಳಿಗೆ ಸೇರಿದ್ದರೂ ಇಬ್ಬರ ಗುರಿಯೂ ಒಂದೇ.  ಹಾಗಾಗಿ. ವ್ಯಕ್ತಿಗಳು ಇಬ್ಬರಾದರೂ ಶಕ್ತಿಯಾಗಿ ರಪೀದಾ ಹಾಗೂ ಚಂಪಾ ಅಭಿನ್ನರು.

`ಗೋಲ್ಡ್‍ಮನ್ ಪರಿಸರ ಪ್ರಶಸ್ತಿ’ ಪಟ್ಟಿ ಪ್ರಕಟವಾದಾಗ, ಆವರೆಗೂ ಎಲೆಮರೆಯ ಕಾಯಿಯಂತಿದ್ದ ರಪೀದಾ-ಚಂಪಾ ಜೋಡಿ ಒಮ್ಮೆಗೇ ಸುದ್ದಿಯಾದರು. ಅಷ್ಟೇ ವೇಗವಾಗಿ ಸುದ್ದಿಪ್ರಕಾಶದಿಂದ ಮರೆಯಾಗಿಯೂ ಹೋದರು. `ಗೋಲ್ಡ್ಮನ್ ಪ್ರಶಸ್ತಿ’ ಪರಿಸರ ಕ್ಷೇತ್ರದ ನೊಬೆಲ್ ಎಂದೇ ಹೆಸರಾದ ಪ್ರತಿಸ್ಥಿತ್ರ ಪ್ರತಿಷ್ಟಿತ ಪ್ರಶಸ್ತಿ.  ೧೨೫,೦೦೦ ಡಾಲರ್‌ಗಳ ಮೊತ್ತದ ಭಾರೀ ಪ್ರಶಸ್ತಿ. ಇಂಥದೊಂದು ಪ್ರತಿಷ್ಟಿತ ಪ್ರಶಸ್ತಿ ಅಷ್ಟೇನೂ ಕಲಿಯದ ಈ ಭಾರತೀಯ ಹೆಣ್ಣುಮಕ್ಕಳಿಗೆ ಬಂದುದಾದರೂ ಹೇಗೆ ?

ಭೋಪಾಲ್ ದುರಂತ ನೆನಪಿದೆ ತಾನೆ? ಸಾರಾಸಗಟಾಗಿ ಇಪ್ಪತ್ತು ಸಾವಿರ ಮಂದಿಯನ್ನು ಆಹುತಿ ತೆಗೆದುಕೊಂಡ ವಿಷಾನಿಲದ ದುರಂತವದು.  ಮರೆತಿದ್ದರೆ ನೆನಪಿಸಿಕೊಳ್ಳಲಿಕ್ಕೊಂದು ಅವಕಾಶ ದೊರೆಕಿದೆ: ಭೋಪಾಲದ ಯೂನಿಯನ್ ಕಾರ್ಬೈಡ್ ಅನಿಲ ದುರಂತ ಘಟನೆಯ ಇಪ್ಪತ್ತನೇ ವಾರ್ಷಿಕ ಶ್ರಾದ್ಧದ ಸಂದರ್ಭದಲ್ಲಿ ರಷೀದಾ-ಚಂಪಾ ಅವರ ಹೋರಾಟಕ್ಕೆ ಗೌರವವೊಂದು ದೊರತಿದೆ. ಭೋಪಾಲ್ ದುರಂತ ವಿಶ್ವದ ಅತಿದೊದ್ದ ಕೈಗಾರಿಕಾ ದುರಂತವೂ ಹೌದು ಸತ್ತವರ ಮಾತು ಬಿಡಿ. ಇವತ್ತು ಹುಟ್ಟುತ್ತಿರುವ ಅಮಾಯಕ ಕಂದಮ್ಮಗಳು ಕೂಡ ಈ ದುರಂತದ ವಿಷಜ್ವಾಲೆಯಿಂದ ಪಾರಾಗಲು ಸಾಧ್ಯವಾಗಿಲ್ಲ ಇಂಥದೊಂದು ದುರಂತದ ಹಿನ್ನೆಲೆ, ಹೋರಾಟದ ಕಥೆ ರಷೀದಾ-ಚಂಪಾ ಜೋಡಿಗಿದೆ. ಈ ಹೋರಾಟವೇ ಅವರಿಗೆ `ಗೋಲ್ಡ್‍ಮನ್ ಪರಿಸರ ಪ್ರಶಸ್ತಿ’ ತಂದುಕೊಟ್ಟಿದೆ.

ಈ ಗೆಳತಿಯರದು ನೊಂದವರಿಗೆ ಸಾಂತ್ವನ ಹೇಳುವ ಕಾಯಕ, ನತದೃಷ್ಟರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟ. ಭೋಪಾಲ ದುರಂತದ ನತದೃಷ್ಟರಿಗೆ ಪರಿಹಾರ ಒದಗಿಸಿಕೊಡಲು ರಷೀದಾ-ಚಂಪಾ ನಡೆಸಿದ ಹೋರಾಟ, ಪಟ್ಟಪಾಡು ಒಂದೆರಡಲ್ಲ ಹಾಗೆ ನೊಃಡಿದರೆ. ಇವರಿಬ್ಬರೂ ಕಲಿತ ಹೆಣ್ಣುಮಕ್ಕಳಲ್ಲ, ಹೋರಾಟದ ಕಂಕಣ ತೊಟ್ಟಾಗಿದ್ದ ಲೋಕಜ್ಞಾನವೂ ಅಷ್ಟಕ್ಕಷ್ಟೆ. ಆದರೆ, ಭೋಪಾಲದ ಕೇರಿಕೇರಿಗಳಲ್ಲಿ ಅಲೆಯಾದ ಆಕ್ರಂದನ ಇಬ್ಬರ ಬದುಕಿನ ದಿಕ್ಕುಗಳನ್ನು ಬದಲಿಸಿತು. ನೋವು ಅವರಿಗೆ ನೋಡಿಕೇಳಿದ ಕಥೆಯಲ್ಲ ಇಬ್ಬರೂ ಸ್ವತಃ ನಷ್ಟ ಅನುಭವಿಸಿದ ನತದ್ಟುಷ್ಟರು. ರಷೀದಾ ಒಳ್ಳೆಯ ಮಾತುಗಾರಳು. ಚಂಪಾದೇವಿ ಅದ್ಭುತ ಸಂಘಟನಾಶಕ್ತಿಯ ಶಿಸ್ತಿನ ಸಿಪಾಯಿ.  ಇಬ್ಬರೂ ಜೊತೆ ಸೇರಿದಾಗ `ಬೆಂಕಿ ಬಿರುಗಾಳಿ’.

ಇಷ್ಟಕ್ಕೂ ಭೊಪಾಲದಲ್ಲಿ ಆದದ್ದೇನು ಗೊತ್ತಾ? ಅದು ೧೯೮೪ನೇ ಇಸವಿ.  ಡಿಸೆಂಬರ್ ೩ ಭೋಪಾಲದಲ್ಲಿನ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ ಕಾರ್ಖಾನೆಯುಲ್ಲಿ
೨೭ ಟನ್‍ಗೂ ಅಧಿಕ ವಿಷಾನಿಲ ಸೋರಿಕೆಯಾಯಿತು.  ತಕ್ಷಣ ಸತ್ತವರು ೮೦೦೦ ಮಂದಿ.  ಈವರೆಗೆ ಸತ್ತವರ ಸಂಖ್ಯೆ ಕನಿಷ್ಠ ೨೦ ಸಾವಿರ;  ಸಾವಿನ ಓಟ ಮುಂದುವರಿದಿದೆ. ಹುಟ್ಟುವ ಮಕ್ಕಳು ರೋಗದ ಗೂಡೆಗಳ ಹೊತ್ತುಕೊಂಡೇ ಕಣ್ಣುಬಿಡುತ್ತಿದ್ದಾರೆ. ದೀರ್ಘಕಾಲದ ರೋಗಗಳು, ಕ್ಯಾನ್ಸರ್, ಕ್ಷಯ ಇಲ್ಲಿ ಮಾಮೂಲು.  ಅಂತರ್ಜಲದಲ್ಲಿ ಪಾದರಸ, ನಿಕ್ಕಲ್ ಹಾಗೂ ವಿಷಪೂರಿತ ಟಾಕ್ಸಿನ್‍ಗಳು ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಅನೇಕ ಅಧ್ಯಯನಗಳು  ಸ್ಪಷ್ಟಪಡಿಸಿವೆ.  ದುರಂತ ಸಂಭವಿಸಿದ ಸ್ಥಳದ ಸಮೀಪದ ತಾಯಂದಿರ ಮೊಲೆಹಾಲಲ್ಲೂ ನಂಜಿನ ಅಂಶವಿದೆ ಎಂದರೆ ದುರಂತದ ಪ್ರಮಾಣವನ್ನು ಕಲ್ಪಿಸಿಕೊಳ್ಳಿ.  ದುರಂತದ ತೀವ್ರತೆಯ ಕುರಿತು ರಷೀದಾ ಹೇಳುವುದು ಹೀಗೆ: ಮೂಗು, ತುಟಿ, ಕಿವಿ ಇಲ್ಲದೆ ಹುಟ್ಟುವ ಮಕ್ಕಳಿಲ್ಲಿ ವಿಶೇಷವೇ ಅಲ್ಲ ಕೆಲವೂಮ್ಮೆ ಹುಟ್ಟುವ ಕೂಸಿನ ಸಂಪೂರ್ಣ ಕೈ ಮಾಯವಾಗಿರುತ್ತದೆ. ಇನ್ನು ಅಮ್ಮಂದಿರ ಪಾಡಂತೂ ದೇವರಿಗೇ ಪ್ರಿತಿ. ಕೆಟ್ಟುಕೂರುವ ಋತುಚಕ್ರ, ಉಸಿರಾಟದ ತೊಂದರೆಗಳು… ಮಗೂವಿಗೆ ಹಾಲುಣಿಸೋಣವೆಂದರೆ, ಮೊಲೆಹಾಲೂ ನಂಜಾಗಿರುವ ಭಯ….

೧೯೮೬ನೇ ಇಸವಿ. ಲೇಖನ ಸಾಮಗ್ರಿಗಳ ಕಾರ್ಖಾನೆಯೊಂದರಲ್ಲಿ ರಷೀದಾ ಹಾಗೂ ಚಂಪಾ ದುಡಿಯುತ್ತಿದ್ದ ದಿನಗಳವು. ದುಡಿಮೆಗೆ ತಕ್ಕ ಸಂಬಳ ಹಾಗೂ ಇತರ
ಸೌಲಭ್ಯಗಳಿಗಾಗಿ ತಮ್ಮದೇ ಆದ ಸಂಘಟನೆ ಬೇಕೆನ್ನಿಸಿತು. ಪುರುಷ ಸಂಘಟನೆಗಳು ಪ್ರಬಲವಾಗಿದ್ದ ಆ ದಿನಗಳಲ್ಲಿ ಮಹಿಳೆಯರ ಸಂಘಟನೆ ಕಣ್ಣು ಬಿಡುವುದು ಸುಲಭದ ಮಾತಾಗಿರಲಿಲ್ಲ.  ಇಂಥದೊಂದು ಸಂದರ್ಭದಲ್ಲಿ ಮಹಿಳೆಯರ ಸಂಘಟನೆ ಬೀದಿಗಿಳಿದೇ ಬಿಟ್ಟಿತು. ೧೯೮೯ರಲ್ಲಿ ೪೬೯ ಮೈಲುಗಳ ಪಾದಯಾತ್ರೆಯನ್ನು ಭೋಪಾಲದಿಂದ ದೆಹಲಿಗೆ ಹಮ್ಮಿಕೊಂಡಿತು. ನೂರಕ್ಕು ಹೆಚ್ಚು ಹೆಣ್ಣುಮಕ್ಕಳು ಈ ಹೋರಾಟದ ಹಾದಿಯಲ್ಲಿ ನಡೆದಿದ್ದರು. ಅನೇಕರು ಒಡವೆ ಮಾರಿದರು. ಕೊನೆಗೂ ಮಹಿಳೆಯರು ದೆಹಲಿ ಮುಟ್ಟಿದರು. ಪ್ರಧಾನಿಗೆ ಮನವಿಪತ್ರವನ್ನೂ ಅರ್ಪಿಸಲಾಯಿತು.  ಪರಿಣಾಮವಾಗಿ ವೇತನದ ಹೆಚ್ಚಳ, ಕೆಲಸದ ಚೌಕಟ್ಟಿನಲ್ಲಿ ಒಂದಿಷ್ಟು ಸಡಿಲಿಕೆ. ರಷೀದಾ-ಚಂಪಾಗೆ ಹೋರಾಟದ ಕಾವು ಹತ್ತಿಸಿದ್ದೇ ಈ ಪಾದಯಾತ್ರೆ.

ಲೇಖನ ಸಾಮಗ್ರಿಗಳ ಕಾರ್ಖಾನೆಯಲ್ಲಿನ ಹೋರಾಟದ ಗೆಲುವಿನಿಂದ ಉತ್ತೇಜಿತರಾದ ರಪೀದಾ-ಚಂಪಾ ಕಣ್ಣು ಹೊರಳಿದ್ದು ವಿಷಾನಿಲ ದುರಂತದ ಸಂತ್ರಸ್ತರತ್ತ.  ದುರಂತಕ್ಕೆ ಕಾರಣವಾದವರಿಂದ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವ ಹೋರಾಟಕ್ಕೆ ಈ ಗಳತಿಯರು ದನಿಯಾದರು. ರಷೀದಾ ಕುಟುಂಬದ ಸ್ಥಿತಿಯೂ ನೆಟ್ಟಗಿರಲಿಲ್ಲ.  ೧೯೮೪ ರಿಂದೀಚೆಗೆ ಆಕೆಯ ಕುಟುಂಬದ ೬ ಮಂದಿಯನ್ನು ಕ್ಯಾನ್ಸರ್ ಬಲಿತೆಗೆದುಕೊಂಡಿತ್ತು.  ಚಂಪಾದೇವಿಯ ಮನೆಯಲ್ಲೂ ನಗುವಿರಲಿಲ್ಲ ಆಕೆಯ ಮೊಮ್ಮಗು ಹುಟ್ಟಿನಿಂದಲೇ ವಿರೂಪಕ್ಕೆ ತುತ್ತಾಗಿತ್ತು. ಸಾಲದೆನ್ನುವಂತೆ ಗಂಡನನ್ನು ಆರೋಗ್ಯವನ್ನು ಚಂಪಾ ಕಳಕೊಂಡಿದ್ದಳು. ಅಕೆಯಲ್ಲಿ ಉಳಿದಿದುದೊಂದೇ- ಹೋರಾಟದ ಛಲ.

ಹತ್ತು ವರ್ಷಗಳ ಹೋರಾಟದ ನಂತರ ಸಂತ್ರಸ್ತರಿಗೆ ಒಂದಷ್ಟು ಪರಿಹಾರ ದೊರೆಯುವ ಆಶ್ವಾಸನೆ ದೊರೆಯಿತು.  ೫೦೦ ಡಾಲರ್ಗಳಿಗಿಂತಲೂ ಕಡಿಮೆ ಮೊತ್ತದ ಪರಿಹಾರ. ಒಟ್ಟು ೪೭೦ ಮಿಲಿಯನ್ ಡಾಲರ್‌ಗಳನ್ನು ಯೂನಿಯನ್ ಕಾರ್ಬೈಡ್ ಪರಿಹಾರವಾಗಿ ನೀಡಲು ಮುಂದಾಯಿತು.  ಆದರೆ, ಆಧಿಕಾರಶಾಹಿಯ ಯಡವಟ್ಟು ನಡುವಳಿಕೆಯಿಂದ ಪರಿಹಾರ ಕಾರ್ಯ ವಿಳಂಬಗೊಂಡಿತು. ಈ ನಡುವೆ ೨೦೦೧ರಲ್ಲಿ ಯೂನಿಯನ್ ಕಾರ್ಬೈಡ್‍ನ್ನು ತನ್ನ ಅಧೀನಕ್ಕ ತೆಗೆದುಕೊಂಡ `ಡೌ ಕೆಮಿಕಲ್ಸ್’ ಕೈಗಾರಿಕಾ ದುರಂತದ ಹೊಣೆಯಿಂದ ನುಣುಚಿಕೊಂಡಿತು.

ಹೋರಾಟ ಮತ್ತೆ ಚುರುಕಾಯಿತು. ೨೦೦೨ರಲ್ಲಿ ರಷೀದಾ-ಚಂಪಾ ದೆಹಲಿಯಲ್ಲಿ ೧೯ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡರು. ಅವರ ಬೇಡಿಕೆಗಳು ಇಂತಿದ್ದವು: ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ‍ನ ಅಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷ ಹಾಗೂ ಸಿ‌ಇ‌ಒ ವಾರೆನ್ ಅಯಂಡರ್ಸನ್ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.  ವಿಚಾರಣೆ ಭೋಪಾಲದಲ್ಲಿಯೇ ನಡೆಯಬೇಕು. ಸಂತ್ರಸ್ತರು ಹಾಗೂ ಅವರ ಮಕ್ಕಳಿಗೆ ಧೀರ್ಘಕಾಲೀನ ಚಿಕಿತ್ಸೆಯ ಸೌಲಭ್ಯಗಳನ್ನು ಕಲ್ಪಿಸಬೇಕು.  ದುರಂತ ಸಂಭವಿಸಿದ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಶುದ್ಧೀಕರಣಗೊಳಿಸಬೇಕು. ದುರಂತದಲ್ಲಿ ವಿಧೆವೆಯಾದವರು ಹಾಗೂ ಕಾಯಿಲೆಬಿದ್ದು ದುಡಿಯಲಾಗದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ಕಲ್ಪಿಸಬೇಕು.

ದೆಹಲಿಯಲ್ಲಿ ರಷೀದಾ ಹಾಗೂ ಚಂಪಾ ಉಪವಾಸ ಕೂತಿರುವ ಸಮಯದಲ್ಲಿಯೇ ಇತ್ತ ಭೋಪಾಲದಲ್ಲೂ ಪ್ರತಿಭಟನೆಗಳು ಜೋರಾಗಿದ್ದವು.  ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಮುಂಭಾಗದಲ್ಲಿ ವಿಶ್ವದ ೧೦ ರಾಷ್ಟಗಳ ಸುಮಾರು ೧೫೦೦ ಮಂದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.  ಹೆಚ್ಚೂಕಡಿಮೆ ತಿಂಗಳ ಕಾಲ ನಡೆದ ಈ ಉಪವಾಸ ಸತ್ಯಾಗ್ರಹ, ನೊಂದವರ ಕಣ್ಣೀರ ತೊಡೆಯಲು ರೂಪುಗೊಂಡ ಜಾಗತಿಕ ಸ್ಪಂದನವಾಗಿತ್ತು.  ಇತಿಹಾಸದಲ್ಲಿ ಇಂಥ ಸ್ಪಂದನಗಳು ತೀರಾ ವಿರಳ.

ಮಹಿಳೆಯರ ಹೋರಾಟದ ಮುಂದಿನ ಹಂತ ಪೊರಕೆ ಪೂಜೆ.  `ಡೌ’ ಅಧಿಕಾರಿಳಿಗೆ ಕಸಬರಿಕೆಯನ್ನು ಕಾಣಿಕೆಯನ್ನಾಗಿ ನೀಡಲಾಯಿತು. `ಡೌ’ ಅನ್ನು  ಕಸಬರಿಕೆಯಿಂದ ಸದೆಬಡಿಯಿರಿ ಎನ್ನುವ ಘೋಷವಾಕ್ಯ ಹುಟ್ಟದ್ದೇ ಆಗ.  ೨೦೦೩ರಲ್ಲಿ ಮುಂಬಯಿ ಹಾಗೂ ನೆದರ್‌ಲ್ಯಾಂಡ್‍ನಲ್ಲಿ `ಡೌ’ ಅಧಿಕಾರಿಗಳನ್ನು ಭೇಟಿ ಮಾಡಿದ ರಷೀದಾ-ಚಂಪಾ, ಟಾಕ್ಸಿಕ್ ತ್ಯಾಜ್ಯಗಳ ಸ್ಯಾಂಪಲ್ಗಳನ್ನು ಕೊಡುಗೆಯಾಗಿ ನೀಡಿದರು. ಇದರೊಂದಿಗೆ `ಡೌ’ ವಿರುದ್ದದ ಸಮರ ಇನ್ನಷ್ಟು ಚುರುಕುಗೊಂಡಿಕು. ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟಿನಲ್ಲಿ ಪ್ರತಿಭಟನಾಕಾರರು ೧೨ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ನಿತ್ರಾಣರಾಗಿ ಕುಸಿದುಬಿದ್ದ ರಷೀದಾ-ಚಂಪಾರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಮಿಚಿಗನ್‍ನಲ್ಲಿ ಜರುಗಿದ `ಡೌ’ನ ಷೇರುದಾರರ ಸಭೆ ಸಂದರ್ಭದಲ್ಲೂ ಪ್ರತಿಭಟನೆ ನಡೆಯಿತು.  ಇಂಗ್ಗೆಂಡ್, ಚೀನಾ, ಕೆನಡಾ, ಥೈಲ್ಯಾಂಡ್, ಸ್ಪೇನ್ ದೇಶಗಳ ಹಲವಾರು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗುವ ಮೂಲಕ ಹೋರಾಟದ ಕಾವು ಬಲಗೊಂಡಿತು.

`ಡೌ’ ಜೊತೆಗಿನ ವ್ಯಾಜ್ಯವನ್ನು ಗೆಳತಿಯರು ನ್ಯಾಯಾಲಯದ ಕಟಕಟೆಗೂ ಒಯ್ದಿದ್ದಾರೆ. ದುರಂತ ಸಂಭವಿಸಿದ ಕಾರ್ಖಾನೆಯ ನಿವೇಶನವನ್ನು ಶುದ್ಧೀಕರಣಗೊಳಿಸುವಂತೆ, ಚಿಕಿತ್ಸೆಯ ಖರ್ಚುಗಳನ್ನು ತುಂಬಿಕೊಡುವಂತೆ ಯೂನಿಯನ್ ಕಾರ್ಬೈಡ್‍ಗೆ ಆದೇಶಿಸುವಂತೆ, ಸಂತ್ರಸ್ತರು ಹಾಗೂ ಕಾನೂನು ಸಂಘಟನೆಗಳೊಂದಿಗೆ ಸೇರಿ ರಷೀದಾ-ಚಂಪಾ ಪ್ರಕರಣ ದಾಖಲಿಸಿದ್ದರು. ವಾದ ಪ್ರತಿವಾದಗಳು ಅಮೆರಿಕದಲ್ಲೂ ಜರುಗಿವೆ. ಅಮೆರಿಕದ ನ್ಯಾಯಾಲಯವೊಂದು ಸಂತ್ರಸ್ತರ ಪರವಾಗಿ ತೀರ್ಪು ನೀಡಿದೆ.  ಸಂತ್ರಸ್ತರಿಗೆ ಪರಿಹಾರ ಕಟ್ಟಿಕೊಡಬೇಕೆಂದು ಅಮೆರಿಕ ಕಾಂಗ್ರೆಸ್‍ನ ಬಹುಸಂಖ್ಯೆಯ ಸದಸ್ಯರು `ಡೌ’ಗೆ ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಪರಿಹಾರದ ಹೊಣೆಗಾರಿಕೆ ತನಗಿಲ್ಲವೆಂದು ಪಟ್ಟುಹಿಡಿದ `ಡೌ’ ತನ್ನ ಹಠಮಾರಿತನಕ್ಕೆ ಭಾರಿ ಬೆಲೆ ತೆರಬೇಕಾಯಿತು. ಯೂನಿಯನ್ ಕಾರ್ಬೈಡ್ ಖರೀದಿಸಿದ ಎರಡೇ ವರ್ಷದಲ್ಲಿ `ಡೌ’ನ ಷೇರುಮೌಲ್ಯ ಶೇ.೧೩ರಷ್ಟು ಕುಸಿಯಿತು. ಇಷ್ಟಾದರೂ `ಡೌ’ ಸೋಲು ಒಪ್ಪಿಕೊಂಡಿಲ್ಲ ರಷೀದಾ-ಚಂಪಾ ಹೋರಾಟ ಬಿಟ್ಟುಕೊಟ್ಟಿಲ್ಲ ಆಶಾಭಾವನೆ ಕಳಕೊಂಡಿಲ್ಲ ಚಂಪಾ ಹೇಳುತ್ತಾರೆ: `ವರ್ಷಗಳ ಕಾಲದ ನಮ್ಮ ಹೋರಾಟ ಈಗಲೂ ಮುಂದುವರೆದಿದೆ.  ಪ್ರತಿದಿನವೂ ಜನರ ಬೆಂಬಲ ನಮ್ಮ ಹೋರಾಟಕ್ಕೆ ಹೆಚ್ಚುತ್ತಿದೆ.  ಒಂದಂತೂ ಖಚಿತ- ಇಂದಲ್ಲಾ ನಾಳೆ `ಡೌ’ ತನ್ನ ಪಟ್ಟು ಸಡಿಲಿಸಲೇಬೇಕು.

`ಗೋಲ್ಡ್ಮನ್ ಪರಿಸರ ಪ್ರಶಸ್ತಿ’ ರಷೀದಾ-ಚಂಪಾರ ಹೋರಾಟಕ್ಕೆ ಸಂದ ಜಾಗತಿಕ ಮಾನ್ನಣೆಯಾಗಿದೆ.  ಈ ಮಾನ್ಯತೆ ಅವರ ಹೋರಾಟದ ಹುಮ್ಮಸ್ಸಿಗೆ ನೀರೆರೆದಿದೆ.  `ಭೋಪಾಲ್ ದುರಂತದ ಬಗೆಗೆ ಜಾಗತಿಕ ಗಮನ ಸೆಳೆಯಲು ಈ ಪ್ರಶಸ್ತಿ ನೆರವಾಗಿದೆ.  ಮುಂದಿನ ಹೋರಾಟದಲ್ಲಿ ಸಂತ್ರಸ್ತರ ನೆರವಿಗೆ ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಾರೆಂದು ನಂಬಿದ್ದೇವೆ’ ಎಂದು ಗೋಲ್ಡ್‍ಮನ್ ಕಛೇರಿಯಲ್ಲಿ ನೀಡಿದ ಸಂದರ್ಶನದಲ್ಲಿ ರಷೀದಾ ಅಭಿಪ್ರಾಯಪಟ್ಟಿದ್ದಾರೆ.  `ಭಾರತದ ಇತರ ಹೆಣ್ಣುಮಕ್ಕಳೂ ನಮ್ಮ ಹೋರಾಟದಲ್ಲಿ ಕೈಜೋಡಿಸಬೇಕು’ ಎಂದು ಚಂಪಾದೇವಿ ಆಗ್ರಹಿಸುತ್ತಾರೆ. ೧೨೫,೦೦೦ ಡಾಲರ್‌ಗಳ ಬಹುಮಾನವನ್ನೂ ಕೂಡ ಸಂತ್ರಸ್ತರಿಗಾಗಿ ಖರ್ಚು ಮಾಡಲು ಗೆಳತಿಯರು ನಿಶ್ಚಯಿಸಿದ್ದಾರೆ.  ವಿಷಾನಿಲ ದುರಂತಕ್ಕೆ ತುತ್ತಾದ ನತದೃಷ್ಟ ಮಕ್ಕಳ ಆರೋಗ್ಯ, ಸಂತ್ರಸ್ತರಿಗೆ ಉದ್ಯೋಗಾವಕಾಶಗಳ ಆಭಿವೃದ್ಧಿ ಮುಂತಾದ ಕಾರ್ಯಗಳಿಗಾಗಿ ಈ ನಿಧಿ ಬಳಸಿ ದತ್ತಿಯೊಂದನ್ನು ಸ್ಥಾಪಿಸಲು ಚಂಪಾ-ರಷೀದಾ ಮುಂದಾಗಿದ್ದಾರೆ. ಕಾರ್ಪೋರೇಟ್ ಅಪರಾಧಗಳ ವಿರುದ್ದ ಅಸಾಧಾರಣ ಹೋರಾಟ ನಡೆಸುವ ಸಾಮಾನ್ಯರಿಗಾಗಿ ಪ್ರಶಸ್ತಿಯೊಂದನ್ನು ನೀಡಲು ಬಹುಮಾನದ ಒಂದು ಭಾಗವನ್ನು ಮೀಸಲಿಡುವ ಉದ್ದೇಶವೂ ಅವರಿಗಿದೆ.

ಭೋಪಾಲದ ಹೆಣ್ಣುಮಕ್ಕಳಿಬ್ಬರ ನೇತೃತ್ವದ ಈ ಹೋರಾಟಕ್ಕ ದೊರೆತಿರುವ ಜಾಗತಿಕ ಬೆಂಬಲಕ್ಕೆ ಹೋಲಿಸಿದರೆ ದೇಶದೊಳಗೆ ಸಿಕ್ಕಿರುವ ಬೆಂಬಲ-ಪ್ರಚಾರ ತೀರಾ ಕಡಿಮೆ. ಭೋಪಾಲದಿಂದ ಹೊರಗೆ ರಷೀದಾ-ಚಂಪಾ ನಡೆಸುತ್ತಿರುವ ಹೋರಾಟದ ಬಗೆಗೆ ಅರಿವೇ ಇಲ್ಲ. ವಿದ್ಯಾರ್ಥಿಗಳ ಪಾಲಿಗಂತೂ ಭೋಪಾಲ ದುರಂತ ಒಂದಾನೊಂದು ಕಾಲದ ದುರಂತ.  ಅಂದರೆ ಭೋಪಾಲ ದುರಂತ ಮುಗಿದುಹೋದ ಅಧ್ಯಾಯವಾಗಿರದೆ, ಇಂದಿಗೂ ಜ್ವಲಂತವಾಗಿರುವ- ಹಾನಿ ಉಂಟು ಮಾಡುತ್ತಿರುವ ದುರಂತ. ಸೋನಿಯಾ ಪ್ರಧಾನಿ ಪದ ನಿರಾಕರಿಸಿದ್ದು ಐತಿಹಾಸಿಕ ತ್ಯಾಗವಾಗಿ ಬಿಂಬಿತವಾಗುತ್ತಿದೆ; ಐಶ್ವರ್ಯ ರೈ ಚುಂಬನಕ್ಕೆ ಒಪ್ಪಿಕೊಂಡ ವಿಷಯ ಮುಖಪುಟ ಸುದ್ದಿಯಾಗುತ್ತದೆ;  ರೇಣುಕಾ ಚೌಧರಿಯ ಹೊಸ ಮುಖವಾಡದ ಬಗೆಗೆ ಮಾಧ್ಯಮಗಳು ಚರ್ಚಿಸುತ್ತವೆ; ಆದರೆ ಬೆಂಕಿಯ ಹಾದಿಯಲ್ಲಿ ಸಾಗುತ್ತಿರುವ ರಷೀದಾ-ಚಂಪಾ ಗೆಳತಿಯರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. `ಗೋಲ್ಡ್‍ಮನ್ ಪರಿಸರ ಪ್ರಶಸ್ತಿ’ ಪ್ರಭೆಯಲ್ಲಾದರೂ ನಾವು ರಷೀದಾ-ಚಂಪಾರನ್ನು ಗುರ್ತಿಸಬೇಕಾಗಿದೆ. ಏಕೆಂದರೆ ರಷೀದಾ ಹಾಗೂ ಚಂಪಾ ಅನಕ್ಷರಸ್ಥ ಹಾಗೂ ಅತ್ಯಂತ ಕಡಿಮೆ ಆದಾಯದ ಅಸಂಖ್ಯ ಭಾರತೀಯ ಹೆಣ್ಣುಮಕ್ಕಳ ಪ್ರತಿನಿಧಿಯಾಗಿದ್ದಾರೆ. ಸಾಮಾನ್ಯವರ್ಗ- ಕುಟುಂಬಗಳಿಂದ ಮೂಡಿಬಂದ ಇಂಥ ಅಸಾಧಾರಣರ ಚರಿತ್ರೆಯೇ ಭಾರತದ ಅಂತಃಸತ್ವವಾಗಿದೆ.
*****