ಅವನತಿ, ಪುರೋಗತಿ ಮತ್ತು ವಿಸ್ಮೃತಿ

ಅವನತಿ, ಪುರೋಗತಿ ಮತ್ತು ವಿಸ್ಮೃತಿ

ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಡಿಮೆಯಾಯಿತು ಎನ್ನುತ್ತೇವೆ; ಇದರ ಅರ್ಥ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದೆ ಎಂದು. ಹೀಗೆ ನಿಯಂತ್ರಣ ತಪ್ಪಿ ಹಣದುಬ್ಬರ ಉಂಟಾಗುವುದು ಯಾವುದೇ ದೇಶದ ಆರ್ಥಿಕ ವ್ಯವಸ್ಥೆಗೆ ಒಳಿತಲ್ಲ. ಇದರಿಂದ ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ. ಧರ್ಮವೂ ಹಾಗೆಯೇ. ತನ್ನ ಮೂಲ ಗುಣವನ್ನು ಬಿಟ್ಟುಕೊಟ್ಟು ಕೇವಲ ಆಚರಣೆಗಳಿಗೆ ಒತ್ತುಕೊಟ್ಟರೆ ಧರ್ಮದ ಮೌಲ್ಯ ಕುಸಿಯಿತೆಂದೇ ಲೆಕ್ಕೆ. ಇದು ಕೇವಲ ಧರ್‍ಮಕ್ಕೇ ಸಂಬಂಧಿಸಿದ ಸಂಗತಿಯೂ ಅಲ್ಲ; ಯಾವುದೇ ಕ್ಷೇತ್ರದಲ್ಲಿ ಆಚರಣೆ ಮಾತ್ರವೇ ಮುಖ್ಯವಾಗಿ ಅದರ ಅರ್ಥ ಮರೆತಾಗ ಅದು ಅವನತಿಗೊಂಡ ಹಾಗೇ. ಜನಾಂಗ ಸ್ಮೃತಿಯನ್ನು ಬಾಧಿಸುವ ಇನ್ನೊಂದು ಸಂಗತಿಯೆಂದರೆ, ಆಮೂಲಾಗವಾದ ಶೀಘ್ರ ಬದಲಾವಣೆ. ಇದು ಪಟ್ಟಣವೊಂದನ್ನು ಹಿಂದಿನ ಯಾವ ಕುರುಹೂ ಉಳಿಯದಂತೆ ಮುರಿದು ಕಟ್ಟಿದ ಹಾಗೆ; ವಿಸ್ಮೃತಿಗೆ ಕಾರಣವಾಗುತ್ತದೆ. ಅಂಥ ಸ್ಥಿತಿಯಲ್ಲಿ ಜನಜೀವನ ಸಮೃದ್ಧವಾಗಿರುವುದು ಸಂದೇಹಾಸ್ಪದ.

ಕನ್ಸರ್ವೇಟಿಸಂ ಮತ್ತು ರ್‍ಯಾಡಿಕಲಿಸಂ ಎನ್ನುವುದೂ ಇದೇ ತರದ ಪರಸ್ಪರ ಎಣ್ಣೆ ಸೀಗೆಗಳಂಥ ಕಲ್ಪನೆಗಳು. ಕನ್ಸರ್ವೇಟಿಸಂ ಎಂದರೆ ಸ್ಥಿತಿಸ್ಥಾಪಕ ವಾದ, ಇದ್ದುದನ್ನೆಲ್ಲ ಕ್ರೋಢೀಕರಿಸಿಕೊಳ್ಳುವಿಕೆ; ಇದರ ವಿರೋಧಿಗಳಿಗೆ ಇದು ಯಥಾಸ್ಥಿತಿವಾದ. ರ್‍ಯಾಡಿಕಲಿಸಂ ಎಂದರೆ ಆಮೂಲಾಗ್ರವಾಗಿ ಎಲ್ಲವೂ ಬದಲಾಗಬೇಕೆನ್ನುವ ವಾದ; ಇದನ್ನು ಓಪ್ಪದವರಿಗೆ ಇದು ಅನಾರ್ಕಿಸಂ ಅರ್ಥಾತ್ ಅರಾಜಕತೆ. ಆದರೆ ವಾಸ್ತವದಲ್ಲಿ ಯಾವ ಸಮಾಜವೂ ನಿಂತ ನೀರಾಗಿ ಹೆಚ್ಚುಕಾಲ ಇರುವುದು ಸಾಧ್ಯವಿಲ್ಲ; ಬದಲಾವಣೆಯೆನ್ನುವುದು ಜೀವಧರ್ಮ; ಬದಲಾವಣೆ, ಮಾರ್ಪಾಟು, ಪುರೋಗಮನ ಇಲ್ಲದಿದ್ದರೆ ವ್ಯಕ್ತಿಯಾಗಲಿ, ಸಮಷ್ಟಿಯಾಗಲಿ ಸತ್ತಂತೆಯೇ ಸರಿ. ಹಾಗೇನೇ, ಸ್ಥಿತಿಸ್ಥಾಪಕತ್ವವೂ ಜೀವನದ ಸಹಜ ಗುಣ; ಅದಿಲ್ಲದಿದ್ದರೆ ಮನುಷ್ಯನಿಗಾಗಲಿ, ಸಮಾಜಕ್ಕಾಗಲಿ ಅಸ್ಮಿತೆ (ಐಡೆಂಟಿಟಿ ಅಥವಾ ಗುರುತು) ಇಲ್ಲದಾಗುತ್ತದೆ; ಆಮೇಲೆ ಯಾವ ನೆನಪೂ ಉಳಿಯುವುದಿಲ್ಲ. ಮನುಷ್ಯನಿಗೂ ಇತರ ಪ್ರಾಣಿಗಳಿಗೂ ಇರುವ ಅಂತರವೇ ತೊಡೆದುಹೋಗುತ್ತದೆ. ವಾಸ್ತವದಲ್ಲಿ ನಿರಂತರ ಕ್ರಾಂತಿಯಾಗಲಿ, ನಿರಂತರ ಸ್ಥಿತಿಸ್ಥಾಪನೆಯಾಗಲಿ ಅಸಾಧ್ಯವಾದರೂ, ಅದರ ಒಲವುಗಳನ್ನು ಆಧಾರದ ಮೇಲಿಂದ ಕೆಲವು ಕಾಲಘಟ್ಟಗಳನ್ನು ನಾವು ಸ್ಥಿತಿಸ್ಥಾಪಕವೆಂದೂ, ಕ್ರಾಂತಿಕಾರಿಯೆಂದೂ ಗುರುತಿಸುತ್ತೇವೆ. ಸ್ಥಿತಿಸ್ಥಾಪನವಾಗಲಿ ಕ್ರಾಂತಿಯಾಗಲಿ ಅತಿರೇಕಕ್ಕೆ ಹೋದರೆ ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಬೀರಬಲ್ಲವು. ಅತಿರೇಕಗಳಿಲ್ಲದಂತೆ ಈ ಎರಡೂ ಗುಣಗಳನ್ನೂ ಸಮತೋಲನದಲ್ಲಿ ತೂಗಿಸಿಕೊಂಡು ಹೋಗುವುದೇ ಸರಿಯಾದ ಕ್ರಮ, ಸ್ಥಿತಿಸ್ಥಾಪಕತ್ವದ ಅತಿರೇಕ ನಮ್ಮನ್ನು ಹೊರಗಿನದೆಲ್ಲವನ್ನೂ ಸಂದೇಹ ದೃಷ್ಟಿಯಿಂದಲೂ ಭಯದಿಂದಲೂ ನೋಡುವಂತೆ ಮಾಡುತ್ತದೆ; ಆಮೂಲಾಗ್ರ ಕ್ರಾಂತಿಯ ಅತಿರೇಕ ಕೆಟ್ಟುದರೊಂದಿಗೆ ಒಳ್ಳೆಯದನ್ನೂ ತೊಡೆದುಹಾಕಿ ವಿಸ್ಮೃತಿಯನ್ನು ತರುತ್ತದೆ. ಅತಿರೇಕಸ್ಥಿತಿಯಲ್ಲಿ ಇವೆರಡೂ ಮೂಲಭೂತವಾದಗಳೇ.

ಕ್ರಿಸ್ತ ಶಕ ನಾಲ್ಕನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ರೋಮಿನ ಪೂರ್ವಕ್ಕಿರುವ ಬೈಝಾಂಟಿಯಮ್ ನಲ್ಲಿ ರೋಮನ್ ದೊರೆ ಕಾನ್ಸ್ಟಾಂಟೈನನು ಬೈಝಾಂಟಿಯಮ್ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇದರ ರಾಜಧಾನಿಗೆ ದೊರೆಯ ಹೆಸರನ್ನೇ ಇಡಲಾಗಿ ಬೈಝಾಂಟಿಯಮ್ ನಗರ ಕಾನ್ಸ್ಟಾಂಟಿನೋಪಲ್ ಆಯಿತು. ಮುಂದೆ ತುರುಕರ ಆಕ್ರಮಣಾನಂತರ ಇದೇ ನಗರಕ್ಕೆ ಇಸ್ತಾಂಬುಲ್ ಎಂಬ ಹೆಸರು ಬಂತು. ಈಗ ಬೈಝಾಂಟಿಯಮ್ ಟರ್ಕಿಯಾಗಿ ಮಾರ್ಪಟ್ಟಿದೆ; ಇಸ್ತಾಂಬುಲೇ ಅದರ ರಾಜಧಾನಿ. ನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ಸ್ಥಾಪಿತವಾದ ಈ ಬೈಝಾಂಟೈನ್ ಸಾಮ್ರಾಜ್ಯ ಹದಿನೈದನೆಯ ಶತಮಾನದ ಮಧ್ಯಭಾಗದಲ್ಲಿ ತುರುಕರ ಕೈಸೇರುವ ತನಕ ಹಾಗೇ ಮುಂದುವರಿಯಿತು ಎಂದರೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ. ಆದರೂ ಇಷ್ಟು ದೀರ್ಘಾವಧಿಯಲ್ಲಿ ನಾವು ಸಾಮಾನ್ಯವಾಗಿ ನಿರೀಕ್ಷಿಸಬಹುದಾದ ಯಾವ ಬದಲಾವಣೆಗಳೂ ಬೈಝಾಂಟಿಯಮಿನಲ್ಲಿ ಆಗಲಿಲ್ಲ. ಬೈಝಾಂಟಿಯನ್ ದೊರೆಗಳು ಕಟ್ಟಡ ಕೋಟೆಗಳನ್ನು ಕಟ್ಟಿದರು, ಮುರಿದರು, ಮತ್ತೆ ಕಟ್ಟಿದರು. ಆದರೆ ಜನಜೀವನದ ಸುಧಾರಣೆಯ ಕಡೆಗೆ ಹೆಚ್ಚಿನ ಗಮನ ಕೊಡಲಿಲ್ಲ. ಇಂಗ್ಲಿಷ್ ಸಾಹಿತ್ಯ ಓದಿದ ನಮ್ಮಂಥವರಿಗೆ ಬೈಝಾಂಟಿಯಮ್ ಎಂದರೆ ನೆನಪಾಗುವುದು ಯೇಟ್ಸ್‍ನ ‘ಸೈಲಿಂಗ್ ಟು ಬೈಝಾರಿಟಿಯಮ್’ ಮತ್ತು ‘ಬೈಝಾಂಟಿಯಮ್’ ಎಂಬ ಎರಡು ಉತ್ತಮ ಕವಿತೆಗಳು. ಆದರೆ ಯೇಟ್ಸ್‍ನ ಈ ಕವಿತೆಗಳಿಗೂ ವಾಸ್ತವದ ಬೈಝಾಂಟಿಯಮ್ ಕಾಲದೇಶಕ್ಕೂ ಹೆಚ್ಚಿನ ಸಂಬಂಧವಿಲ್ಲ. ಯೇಟ್ಸ್ ಹೇಳುವಂತೆ ಬೈಝಾಂಟಿಯಮ್ ಕುಶಲಕರ್ಮಿಗಳು ಚಿನ್ನದ ಹಕ್ಕಿಗಳನ್ನು ಬಡಿದು ಮಾಡಿರಬಹುದು-ಎಂದರೆ ಕಲಾಕೃತಿಗಳ ಬಗ್ಗೆ, ಮುಖ್ಯವಾಗಿ ಪುತ್ಥಳಿ ಬೊಂಬೆಗಳ ಬಗ್ಗೆ, ಸ್ಮಾರಕಗಳ ಬಗ್ಗೆ ಸಾಕಷ್ಟು ಆಸಕ್ತಿವಹಿಸಿದ್ದೇನೋ ನಿಜ, ಆದರೆ ಇಷ್ಟು ದೀರ್ಘಾವಧಿಗೆ ಸಮನಾಗಿ ಅದಕ್ಕಿಂತ ಮಿಗಿಲಾದ್ದೇನೂ ಆಗಲಿಲ್ಲ. ಯೇಟ್ಸ್ ಬೈಝಾಂಟಿಯಮನ್ನು ಕಲೆಯ ರೂಪಕವಾಗಿ ತೆಗೆದುಕೊಳ್ಳುತ್ತಾನೆಯೇ ಹೊರತು ವಾಸ್ತವ ಸಂಗತಿಯಾಗಿ ಅಲ್ಲ. ಕಲೆಯೇ ಜೀವನ ಎಂಬ ರೊಮ್ಯಾಂಟಿಕ್ ಆಶಯವನ್ನು ತಲೆಕೆಳಗೆ ಮಾಡಿ ನಿಲ್ಲಿಸಿ, ಜೀವನವೇ ಕಲೆ, ಆಗಲೇ ಅಮರತ್ವ ಎಂಬ ಆಶಯವನ್ನು ಆದರ್ಶವಾಗಿ ಮಾಡುವುದಕ್ಕೆ ಯೇಟ್ಸ್ ಬೈಝಾಂಟಿಯಮನ್ನ ಉಪಯೋಗಿಸುತ್ತಾನೆ.

ನಾವು ಮಧ್ಯಕಾಲೀನ ಯುಗದ ಬಗ್ಗೆ ಮಾತಾಡುತ್ತಿರುವ ಕಾರಣ ಆ ಕಾಲದ ಸಕಲ ಒಳಚಲನೆಗಳನ್ನೂ ನಾವು ಬೈಝಾಂಟಿಯಮಿನಲ್ಲಿ ಕಾಣುತ್ತೇವೆ ಎನ್ನುವುದು ನಿಜ-ಬೈಝಾಂಟಿಯಮ್ ಬರ್ಬರರ, ಪರ್ಶಿಯನರ, ಹೂಣರ ಮತ್ತು ಅರಬರ ಆಗಾಗಿನ ಆಕ್ರಮಣಗಳನ್ನು ಎದುರಿಸುತ್ತಲೇ ಇರಬೇಕಾಗಿತ್ತು. ಹಾಗೂ ಅಧಿಕಾರ ಬದಲಾದಂತೆ ಅದು ಕೆಲವೊಮ್ಮೆ ರೋಮನ್ ಸಾಮ್ರಾಜ್ಯದಂತೆಯೂ ಕೆಲವೊಮ್ಮೆ ಗ್ರೀಕ್ ಸಾಮ್ರಾಜ್ಯದಂತೆಯೂ ರೂಪ ಪಡೆಯುತ್ತಿತ್ತು. ಆದರೆ ಈ ದೀರ್ಘಾವಧಿಯಲ್ಲಿ ನಮಗೆ ಮುಖ್ಯವಾಗಿ ಗೋಚರಿಸುವುದು ಕ್ರಿಶ್ಚಿಯನ್ ಧರ್ಮ ನಿಧಾನವಾಗಿ ಗಳಿಸುತ್ತಿದ್ದ ಅವನತಿ. ಜೆರುಸಲೇಮನ್ನು ಮರಳಿ ಪಡೆಯುವ ಹೆಸರಿನಲ್ಲಿ ಸುರುವಾದ ಕುಪ್ರಸಿದ್ಧವಾದ ಕ್ರುಸೇಡ್ (ಧರ್‍ಮಯುದ್ಧ) ಇದೇ ಕಾಲಘಟ್ಟದಲ್ಲಿ ನಡೆಯಿತು. ಹಾಗೂ ಬೈಝಾಂಟಿಯಮ್ ಇದಕ್ಕೆ ಮನಸ್ಸಿಲ್ಲದ ಆತಿಥೇಯ ರಾಷ್ಟ್ರವಾಗಬೇಕಾಯಿತು. ಇದಕ್ಕಿಂತಲೂ ಮುಖ್ಯವಾಗಿ ರಾಜ್ಯದಲ್ಲಿ ಕಾಣಿಸಿಕೊಂಡ ವಿವಿಧ ರೀತಿಯ ಧಾರ್ಮಿಕ ವಿಧಿಗಳು ಕ್ರಿಶ್ಚಿಯಾನಿಟಿ ಅರ್ಥಕ್ಕಿಂತ ಆಚರಣೆಗೆ ನೀಡಿದ ಮಹತ್ವ. ಆದ್ದರಿಂದ ಕ್ರಿಸ್ತನಿಗಿಂತಲೂ ಕ್ರೂಜೆ, ಮೇರಿಗಿಂತಲೂ ಆಕೆಯ ಮೂರ್ತಿ ಮುಖ್ಯವಾದುವು. ಯೇಸು ಯಾವ ಮೂರ್ತಿಪೂಜೆಗೆ ವಿರುದ್ಧವಾಗಿದ್ದನೋ ಅದಕ್ಕೆ ಸಮಾನಾಂತರವಾದ ಇನ್ನೊಂದು ರೀತಿಯ ಮೂರ್ತಿಪೂಜೆ ಸುರುವಾಯಿತು. ಇದಕ್ಕೆ ಹಲವು ರಾಜರು, ಮತ್ತು ಸೈನಿಕಮುಖಂಡರು ವಿರೋಧವಾಗಿದ್ದರು ಎಂಬುದು ನಿಜ; ಆದರೆ ಇವರು ಧಾರ್ಮಿಕ ಅವನತಿಯನ್ನು ಹತ್ತಿಕ್ಕುವ ಒಳ್ಳೆಯ ಉದ್ದೇಶದಿಂದ ಹಾಗೆ ಮಾಡಿದರು ಎನ್ನಲಾಗುವುದಿಲ್ಲ; ಇಂಥ ಪೂಜೆಗಳು ಬೇರೆ ಬೇರೆ ಶಕ್ತಿಕೇಂದ್ರಗಳಾಗುತ್ತಿವೆ ಎಂಬ ಆತಂಕವೇ ಅವರನ್ನು ಹೆಚ್ಚು ಕಾಡಿದ್ದು, ಆದರೆ ಗಂಡಂದಿರು ಮೂರ್ತಿಪೂಜೆಗೆ ವಿರೋಧವಾಗಿದ್ದಾಗಲೂ ಅದನ್ನು ಪ್ರೋತ್ಸಾಹಿಸುತ್ತಿದ್ದ ಅವರ ಹೆಂಡಂದಿರ ಉದಾಹರಣೆಗಳೂ ಸಾಕಷ್ಟು ಇವೆ.

ಬೈಝಾಂಟೈನ್ ಸಾಮ್ರಾಜ್ಯದಲ್ಲಿ ಕಾಣಿಸಿಕೊಂಡ ಕ್ರಿಶ್ಚಿಯನ್ ಧರ್ಮದ ಅವನತಿಯ ಇನ್ನೊಂದು ಉದಾಹರಣೆ ಇಡೀ ದೇಶವನ್ನು ವ್ಯಾಪಿಸಿದ ವ್ಯರಾಗ್ಯಮನಃಸ್ಥಿತಿ. ವೈರಾಗ್ಯದ ಅತಿರೇಕ ಪ್ರಕಟಣೆಯೆಂದರೆ ದೇಹದಂಡನೆ. ತಮ್ಮ ವೈರಾಗ್ಯವಿಧಾನಗಳಿಗೆ ಸಾಕಷ್ಟು ಪ್ರಚಾರ ಪಡೆದ ಸಾಧುಸಂತರು ದೇಶದ ಎಲ್ಲೆಡೆ ಕಾಣಿಸಿಕೊಂಡರು; ಒಬ್ಬೊಬ್ಬನದೂ ಒಂದೊಂದು ರೀತಿಯ ಮಹಿಮೆಯಾಗಿತ್ತು. ಆದರೆ ಬೈಝಾಂಟಿಯಮಿನಲ್ಲಿ ಹೆಚ್ಚು ಪ್ರಚಲಿತವಿದ್ದುದು ಎತ್ತರದ ಸ್ತಂಭಗಳ ಮೇಲೆ ನೆಲೆಯೂರುವ ವೈರಾಗಿಗಳದು. ಊರ ಹೊರಗೆ, ಕಠಿಣ ಪ್ರದೇಶಗಳಲ್ಲಿ ಇಂಥ ಸ್ತಂಭಗಳನ್ನು ತಾವಾಗಿಯೇ ಕಟ್ಟಿಕೊಂಡು ಈ ವೈರಾಗಿಗಳು ಅವುಗಳ ಮೇಲೆ ದೀರ್ಘ ಕಾಲ ನಿಂತಿರುತ್ತಿದ್ದರು. ಇದೊಂದು ರೀತಿಯ ತಪಸ್ಸು. ಚರಿತ್ರೆಯ ಪ್ರಕಾರ, ಸಿಮಿಯೋನ್ ಸ್ಟೈಲೈಟಿಸ್ ಎಂಬಾತನೇ ಈ ರೀತಿಯ ಮೊದಲ ಸ್ತಂಭ ಸಂತ. ಈತ ಸನ್ಯಾಸಾಶ್ರಮವೊಂದರಲ್ಲಿ ಇದ್ದ; ಆಗಾಗ ಉಪವಾಸ ಮಾಡುವುದು ಇವನ ಪದ್ಧತಿಯಾಗಿತ್ತು, ಮೂವತ್ತೊಂಬತ್ತು ದಿನಗಳ ಕಾಲ ಬಿಡದೇ ಉಪವಾಸವಿದ್ದುದು ಇವನ ಹಿರಿಮೆಯಾಗಿತ್ತು. ಈ ತರದ ಇವನ ದೇಹದಂಡನೆಯಿಂದ ಆಶ್ರಮದ ಇತರ ಸನ್ಯಾಸಿಗಳಿಗೆ ಕಿರಿಕಿರಿಯಾಗುತ್ತಿತ್ತೆಂದು ಬೇರೆ ಹೇಳಬೇಕಾಗಿಲ್ಲ. ಆದರೇನು, ಸಿಮಿಯೋನ್ನ ಪ್ರಸಿದ್ಧಿ ಎಲ್ಲೆಡೆ ಹರಡಿತು. ಭಕ್ತರು ಬಂದು ಆರಾಧಿಸಲು ಆರಂಭಿಸಿದರು. ಕೊನೆಗಿವನು ಯಾರ ರಗಳೆಯೂ ಬೇಡ ಎಂದು ನೀರು ಬತ್ತಿದ ಸರಸ್ಸೊಂದರ ತಳದಲ್ಲಿ ಮಲಗಿದ. ಅಲ್ಲಿಯೂ ಜನ ಅವನನ್ನು ಬಿಡಲಿಲ್ಲವಾದ್ದರಿಂದ ಸಿಮಿಯೋನ್ ತಾನೇ ಉನ್ನತವಾದೊಂದು ಸ್ತಂಭವೊಂದನ್ನು ಕಟ್ಟಿ ಅದರ ಮೇಲೆ ತಪಸ್ಸಿಗೆ ನಿಂತ. ಇಲ್ಲಿಗೂ ಜನ ಬಂದರು; ಕೆಲವರು ಅವನ ಶಿಷ್ಯವೃತ್ತಿಯನ್ನೂ ಸ್ವೀಕರಿಸಿ ತಾವೂ ಸ್ತಂಭ ಸಂತರಾದರು. ಇಂಥವರಲ್ಲಿ ಡೇನಿಯೆಲ್ ಎಂಬಾತ ಸಿಮಿಯೋನ್ನಂತೆಯೇ ಪ್ರಸಿದ್ಧಿ ಗಳಿಸಿದ. ಇವನೂ ಅನನುಕೂಲ ಹವಾಮಾನದ ಸ್ಥಳವೊಂದರಲ್ಲಿ ಸ್ತಂಭವೊಂದನ್ನು ನಿರ್ಮಿಸಿಕೊಂಡು ಗಾಳಿ ಮಳೆ ಚಳಿಯೆನ್ನದೆ ಹವೆಗೆ ತನ್ನನ್ನು ತಾನು ತೆರೆದುಕೊಂಡು ನಿಂತೇ ತಪಸ್ಸುಮಾಡಿದ. ಸಂತ ಮಕಾರಿಯೋಸ್ ಎಂಬವನೊಬ್ಬ ಸೊಳ್ಳೆಯೊಂದನ್ನು ಹೊಡೆದುಕೊಂದಿದ್ದ; ಇದಕ್ಕೆ ಪಶ್ಚಾತ್ತಾಪಗೊಂಡು ಸೊಳ್ಳೆಗಳ ಕೊಳ್ಳವೊಂದರಲ್ಲಿ ವಾಸಿಸಲು ಸುರುಮಾಡಿದ. ಭಕ್ತರು ಇವನನ್ನು ಅಲ್ಲಿಂದ ಹೊರತಂದಾಗ ಇವನ ಮೈಯಲ್ಲೆಲ್ಲ ಸೊಳ್ಳೆಕಡಿತದಿಂದ ಬೊಕ್ಕೆಗಳೆದ್ದು ಹುಣ್ಣಾಗಿದ್ದುವು. ಸಂತ ಜೋನ್ನಿಕಿ ಎಂಬವನೊಬ್ಬ ಏಕಾಂತ ಬಯಸಿ ಬೆಟ್ಟವೇರಿ ನೆಲಸಿದ; ಅಲ್ಲಿನ ಏಕಾಂತವೂ ಸಾಲದೆ, ಕೊನೆಗೆ ಅರಣ್ಯವನ್ನು ಹೊಕ್ಕು ಅಲ್ಲಿ ಕುಣಿಯುತ್ತ, ಹಾಡುತ್ತ ನೆಲಸಿದ.

ಇಂಥ ಧಾರ್ಮಿಕ ಅಮಲಿನಲ್ಲಿ ಸನ್ಯಾಸಾಶ್ರಮಗಳು ವೃದ್ಧಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಬೆಟ್ಟಗಳ ಪಕ್ಕದಲ್ಲೆಲ್ಲ ಇಂಥ ಆಶ್ರಮಗಳು ಎದ್ದುನಿಂತವು. ಅವುಗಳ ತಾಣ ದುರ್ಗಮವಾದಷ್ಟೂ ಮಹಿಮೆ ಹೆಚ್ಚುತ್ತ ಹೋಯಿತು. ತೆಸ್ಸಲಿಯ ಮೆಟಿಯೊರಾ ಎಂಬಲ್ಲಿನ ಆಶ್ರಮಕ್ಕೆ ಹೋಗುವುದಕ್ಕೆ ಹಗ್ಗರಾಟೆಗಳು ಅಗತ್ಕವಾಗಿದ್ದುವು! ತೆಸ್ಸಲೋನಿಕಿಯ ಏಥೋಸ್ ಎಂಬುದು ಕನ್ಯಾಗಿರಿಯೆಂದು ಪ್ರಸಿದ್ಧ; ಯಾಕೆಂದರೆ ಇಲ್ಲಿಗೆ ಸ್ರೀಯರ ಪ್ರವೇಶ್ ನಿಷಿದ್ಧ. ಈ ನಿಷಿದ್ಧ ಈಗಲೂ ಜಾರಿಯಲ್ಲಿದೆಂಯೆಂದರೆ ಆಶ್ಚರ್ಯವಾಗುವುದಿಲ್ಲವೇ? ಇಂಥ ಆಶ್ರಮಗಳನ್ನು ಹೊಕ್ಕ ಸನ್ಯಾಸಿಗಳು ಉಪವಾಸ, ಮಂತ್ರಪಠಣ, ಧ್ಯಾನ, ಮೌನ, ಸಮಾಧಿಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದರು. ಬೈಝಾಂಟೈನ್ ಚರಿತ್ರೆಯ ಈ ಭಾಗವನ್ನು ಓದುವಾಗ ನಮಗೆ ಪದೇ ಪದೇ ನೆನಪಾಗುವುದು ಫ್ರೆಡರಿಕ್ ನೀತ್ಸೆ ಧರ್ಮಾಚರಣೆಗಳ ವಿರುದ್ಧವಾಗಿ ಕೆಂಡಕಾರಿದ್ದು. ಯೇಸು ಯಾವುದನ್ನು ವಿರೋಧಿಸಿದ್ದನೋ ಅದೇ ಕ್ರಿಶ್ಚಿಯಾನಿಟಿ ಆಯಿತು ಎನ್ನುತ್ತಾನೆ ನೀತ್ಸೆ! ಇತಿಹಾಸ ಓದಿದವರಿಗೆ ಗೊತ್ತಾಗುವ ವಿಷಯವೆಂದರೆ, ಬೈಝಾಂಟೈನ್ ಸಾಮ್ರಾಜ್ಯದ ಪತನಕ್ಕೆ ಮುಖ್ಯ ಕಾರಣ ಅಲ್ಲಿನ ಸಹಸ್ರ ವರ್ಷಗಳ ಧಾರ್ಮಿಕ ಅವನತಿಯಲ್ಲದೆ ಬೇರೇನೂ ಅಲ್ಲ. ಆರಂಭದ ರೋಮನ್ ಸಾಮ್ರಾಜ್ಯದ ಪತನ ಕೂಡಾ ಇಂಥ ಧರ್ಮಾಚರಣೆಗಳ ಉಬ್ಬರದಿಂದಲೇ ಆಯಿತು. ಎನ್ನುವುದನ್ನು ಗಮನಿಸಿದರೆ ಇದರಲ್ಲೇ ಏನೋ ಸಮಸ್ಯೆಯಿದೆ ಎನ್ನುವುದು ಸ್ಪಷ್ಟ. ಮೊದಲ ಸಾಮ್ರಾಜ್ಯದಲ್ಲಿದ್ದುದು ಪೇಗನ್ ಧರ್ಮ; ಎರಡನೆಯದರಲ್ಲಿ ಕ್ರಿಶ್ಚಿಯನ್. ಇದೊಂದು ವ್ಯತ್ಯಾಸದ ಹೊರತಾಗಿ ಬೇರೇನೂ ಇರಲಿಲ್ಲ.

ಇಂಥ ಅತಿರೇಕದ ಇನ್ನೊಂದು ಮುಖವನ್ನು ಸಾಯುಧ ಕ್ರಾಂತಿಗಳಲ್ಲಿ ಕಾಣುತ್ತೇವೆ. ಸೋವಿಯೆಟ್ ರಶಿಯಾ ಮತ್ತು ಮಾವೋಯಿಸ್ಟ್ ಚೈನಾ ಮುಂತಾದ ದೇಶಗಳು ಜನರ ಧಾರ್ಮಿಕ ಮನೋಭಾವವನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕ್ರಾಂತಿಯುಂಟು ಮಾಡಿದ ಉದಾಹರಣೆಗಳು. ಇದು ಈಚಿನ ಚರಿತ್ರೆಯಾದ ಕಾರಣ ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಕಮ್ಯೂನಿಸ್ಟ್ ಆಡಳಿತದ ಕಾಲದಲ್ಲಿ ರಶಿಯಾದಲ್ಲಿ ಇಗರ್ಜಿ ಮತ್ತು ಸೆನೆಗಾಗುಗಳು ಮುಚ್ಚಿದುವು. ಜನರು ಅಲ್ಲಿಗೆ ಹೋಗಿ ಪ್ರಾರ್ಥಿಸಲು ಬೆದರಿದರು. ಚೈನಾದಲ್ಲೂ ಧರ್ಮಾಚರಣೆ ಸುಮಾರಾಗಿ ನಿಂತಿತು. ಚೈನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಸಾಂಸ್ಕೃತಿಕ ಕ್ರಾಂತಿ’ ಎಂಬ ಹೆಸರಿನಲ್ಲಿ ಸಾಹಿತ್ಯ, ಕಲೆ, ವಿದ್ಯಾಭ್ಯಾಸ ಮುಂತಾದ ಕ್ಷೇತ್ರಗಳಲ್ಲೂ ಕೂಡಾ ಸಾಂಪ್ರದಾಯಿಕವೆನಿಸುವ ಎಲ್ಲಾ ಚಿಹ್ನೆಗಳನ್ನೂ ತೊಡೆದುಹಾಕಲು ಯತ್ನಿಸಿತು. ೧೯೫ಂರಲ್ಲಿ ಚೈನಾ ಟಿಬೇಟನ್ನು ಆಕ್ರಮಿಸಿಕೊಂಡ ನಂತರ ಮಾಡಿದ ಒಂದು ವಿಧ್ವಂಸಕ ಕೃತ್ಯವೆಂದರೆ ಟಿಬೇಟಿನ ಆದಷ್ಟೂ ಹೆಚ್ಚು ಬೌದ್ಧ ಸನ್ಯಾಸಾಶ್ರಮಗಳನ್ನು ನೆಲಸಮ ಮಾಡಿದ್ದು. ಒಂದು ರೀತಿಯಿಂದ ಟಿಬೇಟಿನ ಅವಸ್ಥೆ ಕೂಡಾ ಬೈಝಾಂಟೈನ್ ಚರಿತ್ರೆಯನ್ನೇ ಹೋಲುತ್ತದೆ. ಯಾಕೆಂದರೆ ಟಿಬೇಟ್ ಹಲವು ಶತಮಾನಗಳಿಂದ ಧರ್ಮದ ಮೌಢ್ಯದಲ್ಲಿ ಬಳಲಿದ ದೇಶ. ಆ ಕುರಿತು ವಿವರಿಸಲು ಇಲ್ಲಿ ಅವಕಾಶವಿಲ್ಲ. ಆದರೆ ಚೈನೀಸ್ ಕಮ್ಯುನಿಸಂ ತನ್ನ ದೇಶದಲ್ಲಾಗಲಿ, ಟಿಬೇಟಿನಲ್ಲಾಗಲಿ ತೋರಿಸಿದ ಆಮೂಲಾಗ್ರತೆ ಕೂಡಾ ಒಂದು ಅತಿರೇಕವೇ. ಸೋವಿಯೆತ್ ರಶಿಯಾ ಪತನಗೊಂಡ ನಂತರ ರಶಿಯಾದಲ್ಲಿ ಪ್ರಾರ್ಥನಾಮಂದಿರಗಳು ತೆರೆದಿರುವುದನ್ನು ನೋಡಿದರೆ ಧರ್ಮವನ್ನು ಬಲವಂತವಾಗಿ ಹತ್ತಿಕ್ಕುವುದರಲ್ಲಿ ಅರ್ಥವಿಲ್ಲ. ಧರ್ಮದ ಅತಿರೇಕಗಳನ್ನು ಮಾತ್ರವೇ ರಾಷ್ಟಾಡಳಿತಗಳು ತಡೆಯಬೇಕಾದ್ದು. ಅದೇ ರೀತಿ, ರಾಜಕೀಯದ ಅತಿರೇಕಗಳನ್ನಷ್ಟೆ ಧರ್ಮ ತಡೆಯಬೇಕಾದ್ದು. ಇಂದು ಆಧುನಿಕತೆಯ ಕಲ್ಪನೆ ಕೂಡಾ ಹಲವಾರು ಅತಿರೇಕಗಳಿಗೆ ಕಾರಣವಾಗಿವೆ. ಇದು ಮುಖ್ಯವಾಗಿ ಕಾಣಿಸಿಕೊಳ್ಳುವುದು ಪಾಶ್ಚಾತ್ಯ ಜಗತ್ತಿನಲ್ಲಿ. ಆದ್ದರಿಂದಲೇ ಬಹುಶಃ ಆ ದೇಶಗಳಿಗೆ ಹೋಗಿ ಮನುಷ್ಯ ಎಲ್ಲಾ ನೆನಪುಗಳನ್ನು ಕಳೆದುಕೊಂಡು ಬದುಕುವುದನ್ನು ಕಣ್ಣಾರೆ ಕಂಡ ಹಲವು ಪುರೋಗಾಮೀ ಹಿಂದೂ, ಮುಸ್ಲಿಮ್, ಸಿಖ್ ಧರ್ಮೀಯರು ತಾವು ಇದುವರೆಗೆ ಆಚರಿಸದ ಬಾಹ್ಯಾಚರಣೆಗಳಿಗೆ ಮರಳುತ್ತಿರುವುದು, ಅಥವಾ ಆ ಕುರಿತು ಅನುಕಂಪ ತಾಳುತ್ತಿರುವುದು.

ಜಗತ್ತಿನ ಅತಿ ದೊಡ್ಡ ಸಂಕರ ರಾಷ್ಟ್ರವಾದ ಭಾರತ ಇದೆಲ್ಲದರಿಂದಲೂ ಸರಿಯಾದ ಪಾಠ ಕಲಿಯುವ ಅಗತ್ಯವಿದೆ. ಬೈಝಾಂಟಿಯಮಿನ ಚರಿತ್ರೆ ನಮ್ಮ ಮುಖಕ್ಕೆ ಕನ್ನಡಿಯಾಗಬೇಕು. ‘ಕ್ರೈಸ್ತ ನಿರಾಕರಿಸಿದ್ದೇನು? ಇವತ್ತು ಕ್ರಿಶ್ಚಿಯನ್ ಎಂದು ಕರೆಯುವ ಪ್ರತಿಯೊಂದನ್ನೂ’ (What did Christ deny? Everything that is today called Christian) ಎನ್ನುವ ನೀತ್ಸೆಯ ಮಾತು ಸರ್‍ವಧರ್‍ಮಕ್ಕೆ ಸಂಬಂಧಿಸಿಯೂ ನಿಜವಾದದ್ದು. ಯಾವುದೇ ಧರ್ಮವೂ ತನ್ನ ಚೈತನ್ಯವನ್ನು ಬಿಟ್ಟುಕೊಟ್ಟು ಆಚರಣೆಯಲ್ಲಿ ತಲ್ಲೀನವಾದಾಗ ಅವನತಿಹೊಂದುವುದು ನಿಶ್ಚಯ. ಧರ್ಮಾತಿರೇಕ ಸ್ವಂತ ಮೂಲವನ್ನೇ ಕಡಿದುಹಾಕಿದ ಹಾಗೆ. ಅದೇ ರೀತಿ, ಕ್ರಾಂತಿಯಾಗಲಿ, ಆಧುನಿಕತೆಯಾಗಲಿ ಜನಾಂಗ ಸಂಸ್ಕೃತಿಗೆ ಆಘಾತ ತರುವಂತಾದರೆ ಅದೂ ಕೂಡ ಒಂದು ಅತಿರೇಕವೇ. ಪುರೋಗತಿ ಸಂಸ್ಕೃತಿಯೊಂದಿಗೆ ಹೇಗೆ ವ್ಯವಹರಿಸುತ್ತದೆ ಎನ್ನುವುದೇ ದೊಡ್ಡ ಸಮಸ್ಯೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಡಿದ ಮುಂಜಾನೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೦

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys