ಪೈಗಂಬರರ ಮಾನವೀಯ ಅಂತಃಕರಣ

ಸೂರ್ಯನ ಸುತ್ತ ಮೋಡಕವಿದು ಮಂಕು ಮಸುಕುವಂತೆ ಮಹಾತ್ಮರ ಸುತ್ತ ಅಂಧ ಅನುಯಾಯಿಗಳು ಸೇರಿ ಅವರ ಪ್ರಖರ ವಿಚಾರಗಳಿಗೆ ಮಸಿಬಳಿದು ಬಿಡುತ್ತಾರೆ. ಜಗತ್ತಿಗೆ ಬಂದ ಎಲ್ಲ ದಾರ್ಶನಿಕರಿಗೂ ಇದೇ ಗತಿಯಾಗಿದೆ. ಅವರ ಮೂಲ ಮಾನವೀಯ ಅಂತಃಕರಣವನ್ನು ಮರೆಮಾಡಿ ಧರ್ಮವನ್ನು ವೈಭವೀಕರಣಗೊಳಿಸುವುದರ ಮೂಲಕ ಅವರನ್ನು ಜನಸಾಮಾನ್ಯರಿಂದ ದೂರವಿರಿಸಿ ಈ ವರ್ಗ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿರುತ್ತದೆ. ಆದ ಕಾರಣದಿಂದಲೇ ಸ್ವಾಮಿ ವಿವೇಕಾನಂದರು “ವಿಶ್ವಧರ್ಮ ಕೂಡ ಆಗಲೇ ಇದೆ. ಹಲವು ಧರ್ಮಗಳನ್ನು ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸುವ ಧರ್ಮಗುರುಗಳು, ಪಾದ್ರಿ, ಮುಲ್ಲಾ ಮುಂತಾದವರು ಕೆಲವು ಕಾಲ ಮೌನವಾಗಿದ್ದರೆ ಆಗ ವಿಶ್ವಧರ್ಮವಿರುವುದು ನಿಮಗೆ ಗೋಚರವಾಗುವುದು. ಅವರು ಯಾವಾಗಲು ಇದನ್ನು ಕೆಡಿಸುತ್ತಿರುವರು. ಏಕೆಂದರೆ ಇದರಿಂದ ಅವರಿಗೆ ಪ್ರಯೋಜನ” ಎಂದು ವಾಸ್ತವ ಕಟು ಸತ್ಯವನ್ನು ಹೇಳಿರುವರು. ಆದಕಾರಣ ಮಹಾತ್ಮರ ಅಂತಃಕರಣವನ್ನು ನೇರವಾಗಿ ಅವರ ವಿಚಾರಗಳನ್ನು ಮನನ ಮಾಡಿಕೊಳ್ಳುವುದರ ಮೂಲಕ ಅರಿಯಬಹುದು.

ಕ್ರಿ. ಶ. ಸುಮಾರು ೫೭೦ ರಲ್ಲಿ ಜನಿಸಿದ ಮುಹಮ್ಮದ್ ಪೈಗಂಬರ್ ಮಾನವೀಯ ಅಂತಃ ಕರಣದ ಮೇರು ಶಿಖರ. ಬಡವ ಬಲ್ಲಿದ, ಮೇಲು ಕೀಳು, ಸ್ಪೃಶ್ಯ-ಅಸ್ಪೃಶ್ಯ, ಬಿಳಿಯ-ಕರಿಯ, ಜ್ಞಾನಿ-ಅಜ್ಞಾನಿ, ಎಂಬ ಯಾವ ಭೇದಭಾವತೋರದೆ ಮನುಷ್ಯರೆಲ್ಲಾ ಒಂದೆ ಎಂಬ ಸಮಾನತಾ ಬೋಧಿಸಿದ ಅಪೂರ್ವ ಚೇತನ. ಅವರ ಮಾನವೀಯ ಕಳಕಳಿ ಮೇರು ಸದೃಶವಾದುದು. ಅವರ ವಿಚಾರಗಳನ್ನು ಕುರಿತ ಚಿಂತನೆ ಎಂದರೆ ಹೃನ್ಮನಗಳಲ್ಲಿ ಚಿನ್ಮಯದ ಬೆಳಕನ್ನು ತುಂಬಿಕೊಳ್ಳುವುದು ಎಂದರ್ಥ.

ಸಮಾಧಿ: ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ. ಒಂದಲ್ಲ ಒಂದು ಕಾಲನ ವಶವಾಗುವುದು ಪ್ರಾಕೃತಿಕ ಸತ್ಯ ಹೀಗೆ ಶತಶತಮಾನಗಳಿಂದ ಕೋಟಿಕೋಟಿ ಜನರು ಕಣ್ಮರೆಯಾಗಿದ್ದರೂ ಮೋಹ ಮನುಷ್ಯನನ್ನು ಬಿಡುವುದಿಲ್ಲ. ತನ್ನ ಹೆಸರು ಬಹು ಎತ್ತರದಲ್ಲಿ ಶಾಶ್ವತವಾಗಿರಬೇಕೆಂದು ಹೆಸರನ್ನು ಕೆತ್ತಿಸುವುದು, ಸ್ಮಾರಕಗಳನ್ನು ನಿರ್ಮಿಸುವುದು ಮುಂತಾದ ಅನೇಕ ಆಮಿಷಗಳಿಗೆ ಬಲಿಯಾಗಿ ಅದಕ್ಕಾಗಿ ಎಂಥ ಅಕೃತ್ಯಗಳಿಗೂ ಇಳಿಯಲು ಹಿಂಜರಿಯುವುದಿಲ್ಲ. ಈ ಮೋಹ ರಾಜಕಾರಣಿಗಳಲ್ಲಿ, ಸಿರಿವಂತರಲ್ಲಿ ಹೆಚ್ಚು. ಏಕೆಂದರೆ ಅವರಿಗೆ ಅರಿವು ಕಡಿಮೆ. ಚಕ್ರಾಧಿಪತ್ಯಗಳನ್ನೆಲ್ಲಾ ತನ್ನವಶಕ್ಕೆ ತೆಗೆದುಕೊಳ್ಳಬೇಕೆಂಬ ಹಂಬಲದಿಂದ ದಂಡ ಯಾತ್ರೆ ಮಾಡಿದ ಜಗದ್ವಿಖ್ಯಾತ ಅಲೆಗ್ಸಾಂಡರ್ ಯಾರ ಮನೆಯಲ್ಲೂ ಬೆಳಗುತ್ತಿಲ್ಲ; ಬೆಳಗುತ್ತಿರುವವನು ಚಕ್ರಾಧಿಪತ್ಯವನ್ನು ತೊರೆದು ಹೃದಯವನ್ನು ಬೆಳಗಿದ ಗೌತಮ ಬುದ್ಧ ಅರಿವು ಜನರಿಗೆ ಬರುವುದು ಅಪರೂಪ.

ಈ ಸತ್ಯವನ್ನು ಚೆನ್ನಾಗಿ ಅರಿತವರೆಂದರೆ ಮುಹಮ್ಮದ್ ಪೈಗಂಬರರು. ಅವರು ಪ್ರಕೃತಿಯನ್ನು ಪ್ರೀತಿಸಿ ಗೌರವಿ- ಸಿದವರು. ಅದರ ಮಹತ್ವವನ್ನು ಅರಿತಿದ್ದವರು. ಪ್ರಕೃತಿಯ ಮುಂದೆ ಮನುಷ್ಯ ಯಃಕಶ್ಚಿತ್ ಎಂಬುದನ್ನು ತಿಳಿದಿದ್ದ ರು. ಹಾಗಾಗಿ ಅವರು ಪ್ರಕೃತಿಯ ಧರ್ಮವನ್ನು ಅರಿತು ಅದಕ್ಕೆ ಅನುಗುಣವಾಗಿ ಬದುಕಬೇಕೆಂಬ ತಿಳುವಳಿಕೆ ಹೊಂದಿದ್ದವರು. ಪ್ರಕೃತಿಯನ್ನು ತಾಯಿ ಸಮಾನ ಪೂಜ್ಯ ಭಾವದಿಂದ ಕಂಡವರು. ತಾಯಿಗಿಂತ ನಾನು ದೊಡ್ಡವನಲ್ಲ ಎಂಬ ಪರಮ ಸತ್ಯವನ್ನು ಮನಗಂಡಿದ್ದ ಮುಹಮ್ಮದರು ತಾವು ಸತ್ತ ನಂತರ “ತಮ್ಮ ಸಮಾಧಿ ಭೂಮಿಗಿಂತ ಮೇಲಕ್ಕೆ ಇರಬಾರದು” ಎಂಬ ಪೂಜ್ಯ ವ್ಯಕ್ತ ಪಡಿಸಿದ್ದರು. ಅವರ ಸಮಾಧಿಯನ್ನು ಅವರ ಇಚ್ಛೆಯಂತೆ ಮಾಡಲಾಯ್ತು. ಪ್ರಕೃತಿಗೆ ತೋರಿದ ಅವರ ವಿನೀತ ಭಾವ ಎಲ್ಲರ ಕಣ್ಣು ತೆರೆಸುವ ಕ್ರಿಯೆಯಾಗಿದೆ.

ಮೃತದೇಹ: ಮನುಷ್ಯ ಮನುಷ್ಯರ ನಡುವೆ ಇರುವ ನಂಜು ಎಷ್ಟೆಂದರೆ ವಿಷದ ನಾಗರದಲ್ಲೂ ಇಲ್ಲ ಎನ್ನುವಷ್ಟು ಜಾತಿ, ಮತ, ಧರ್ಮ, ಬಣ್ಣ ಸಿರಿವಂತಿಕೆಯ ಹೆಸರಿನಲ್ಲಿ ಮನುಷ್ಯ ಮನುಷ್ಯನನ್ನೂ ಕಿತ್ತುತಿನ್ನುತ್ತಿದ್ದಾನೆ. ದ್ವೇಷ ದಳ್ಳುರಿಯಾಗಿ ಹತ್ತಿ ಉರಿಯುತ್ತಿದೆ. ಅದು ಅವರಿವನ್ನಿರಲಿ ಒಡಹುಟ್ಟಿದವರನ್ನೆ ಕಬಳಿಸುತ್ತಿದೆ. ತಂದೆ, ತಾಯಿಯನ್ನು ಮಕ್ಕಳೆ ಕೊಲೆ ಮಾಡುವಷ್ಟು ಕನಿಷ್ಟ ಸ್ಥಿತಿಗೆ ಇಳಿದು ಬಿಟ್ಟಿದೆ. ತಂದೆ ತಾಯಿಗಳಲ್ಲಿ ಅಣ್ಣತಮ್ಮಂದಿರಲ್ಲಿ ಅಕ್ಕತಂಗಿಯರಲ್ಲಿ ಸಹನಾಭಾವ ಕಡಿಮೆಯಾಗಿ ದ್ವೇಷದ ಚಿಂತೆ ಸುಡುತ್ತಿದೆ. ಇನ್ನು ಶತ್ರುವಾದರಂತೂ ಕೇಳುವುದೇ ಬೇಡ.

ನಾಗರೀಕತೆ ಬೆಳೆದಿದೆ ಎನ್ನುವ ಈ ಕಾಲದಲ್ಲೆ ಇಷ್ಟು ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದರೆ ಮಾನವನ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಿದೆ? ಇದಕ್ಕೆ ಈಗ್ಗೆ ಹದಿನಾಲ್ಕು ಶತಮಾನಗಳ ಹಿಂದೆ ಮುಹಮ್ಮದ್ ಪೈಗಂಬರರು ಎಂತಹ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೆ ಆಶ್ಚರ್ಯವಾಗುತ್ತದೆ.

ದಾರಿಯಲ್ಲಿ ಶವವೊಂದನ್ನು ಹೊತ್ತುಕೊಂಡು ಹೋಗುತ್ತಿದ್ದುದನ್ನು ಮುಹಮ್ಮದರು ಕಂಡರು ತಕ್ಷಣ ಎದ್ದು ನಿಂತು ತಮ್ಮ ಗೌರವವನ್ನು ಸೂಚಿಸಿದರು. ಅದನ್ನು ಕಂಡ ಅನುಯಾಯಿಗಳು ಸತ್ತಿರುವವನು ನಮ್ಮ ವಿರೋಧಿ ಪಂಗಡದ ಯಹೂದಿಯವನು. ನೀವು ಅವನಿಗೆ ಗೌರವ ಸೂಚಿಸುತ್ತಿರುವಿರಲ್ಲಾ ಎಂದರು. ಆಗ ಮುಹಮ್ಮದರು ಅವರೂ ಮಾನವರಲ್ಲವೇ? ಎಂದು ತಮ್ಮ ಮಾನವೀಯತೆಯನ್ನು ಮೆರೆದರು.

ಕಾರ್ಮಿಕನ ಬೆವರು: ಮನುಷ್ಯ ಮೂಲತಹ ಸ್ವಾರ್ಥಿ, ಒಬ್ಬರು ಮತ್ತೊಬ್ಬರನ್ನು ಕಿತ್ತುತ್ತಿನ್ನುವುದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುವ ನೈಜಗುಣ ಇನ್ನೂ ಮನುಷ್ಯನಲ್ಲಿ ಮೊಳಕೆಯೊಡೆದಿಲ್ಲ..

ಮನುಷ್ಯನ ಈ ಕಿತ್ತು ತಿನ್ನುವ ಗುಣ ಗುಡಿ ಚರ್ಚು ಮಸೀದಿಗಳಿಂದ ಹಿಡಿದು ಜೀವನದ ಎಲ್ಲಾ ಕ್ಷೇತ್ರಗಳನ್ನೂ ಆಕ್ರಮಿಸಿಕೊಂಡು ಬಿಟ್ಟಿದೆ. ಅದು ವಕೀಲರನ್ನಂತೂ ಅಂತೆ ವೈದ್ಯರನ್ನೂ ಬಿಟ್ಟಿಲ್ಲ. ಕಡೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ದುರಂತ ಪ್ರದೇಶಗಳ ಉದಾ: ಒರಿಸ್ಸಾ ಚಂಡ ಮಾರುತವಾಗಿರಲಿ, ಕಾರ್ಗಿಲ್ ನಿಧಿ ಸಂಗ್ರಹಣೆಯಾಗಿರಲಿ ಅಥವಾ ಇತ್ತೀಚೆಗೆ ಗುಜರಾತ್‌ನಲ್ಲಿ ಸಂಭವಿಸಿರುವ ಭೂಕಂಪವಾಗಿರಲಿ ಪರಿಹಾರ ನಿಧಿ ಸಂಗ್ರಹಣೆಯ ಹೆಸರಿನಲ್ಲಿ ತನ್ನ ಕರಾಳ ಮುಖವನ್ನು ಚಾಚಿಕೊಂಡು ಬಂದುಬಿಡುತ್ತದೆ. ಸರ್ಕಾರ ಇದಕ್ಕೊಂದು ರಾಷ್ಟ್ರೀಯ ನೀತಿಯನ್ನು ತರದೆ  ಇರುವ ಕಾರಣ ಸಾರ್ವಜನಿಕರಿಂದ ಹಣ ಸುಲಿಯಲು ಅಧಿಕಾರಿಗಳನ್ನು ಮುಂದು ಮಾಡಿಕೊಂಡು ಪಕ್ಷಗಳೆ  ಪೈಫೋಟಿಗಿಳಿದು ಬಿಡುತ್ತವೆ. ಸುಂದರಿಯರು ನಗ್ನ ನೃತ್ಯಕ್ಕೆ ತೊಡಗಿ ಬಿಡುತ್ತಾರೆ. ಅಭಿಮಾನಿ ಸಂಘಗಳು, ಟಿ. ವಿ. ಚಾನಲ್‌ಳು ಹಲ್ಲುಗಿಂಜಿಕೊಂಡು ಹಾದಿ ಬೀದಿಗಳಲ್ಲ್ಲಿ, ಕೈಲಾದಷ್ಟು ಕೊಡಿ ಎಂದು ಭಿಕ್ಷುಕರಂತೆ ಬೇಡಲು ಶುರು ಮಾಡಿ ಬಿಡುತ್ತವೆ.

ಹಡಿಬಿಟ್ಟಿ ಹಣಕ್ಕಾಗಿ ಅಂಗಲಾಚುವ ಇಂಥ ಮನೋಧರ್ಮದ ಸಮಾಜದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲಕೊಡುವ ಗುಣ ಮೈಗೂಡಿ ಬರುವುದಾದರೂ ಹೇಗೆ? ಕೊಡುವುದರಲಿ ಅದು ಎಷ್ಟು ಕ್ರೂರವಾಗಿ ವರ್ತಿಸುತ್ತದೆಂದರೆ ಕಂಬಾಲಪಲ್ಲಿ- ಯಲ್ಲಿ ನಡೆದಂತೆ ಕಾಲಿಗೆ ಸರಪಳಿ ಬಿಗಿದು ಶ್ರಮದ ಬೆವರನ್ನು ಬಸಿದುಕೊಳ್ಳುತ್ತಿರುತ್ತದೆ. ಅದು ಕಂಬಾಲಪಲ್ಲಿಯೇ ಆಗಿರಬೇಕಾಗಿಲ್ಲ ಹೋಟೆಲುಗಳೂ ಸೇರಿದಂತೆ ಮನೆಮನೆಗಳಲ್ಲಿಯೂ ನಡೆಯುತ್ತಿದೆ. ಅದರೆ ಅದರ ಸ್ವರೂಪ ಬೇರೆ ಅಷ್ಟೆ.

ಮನುಷ್ಯ ಮನುಷ್ಯರಲ್ಲಿ ಮನೆ ಮಾಡಿದ್ದ ಈ ಕಿತ್ತು ತಿನ್ನುವ ಗುಣವನ್ನು ಮನಗಂಡಿದ್ದ ಮುಹಮ್ಮದರು ಕಾರ್ಮಿಕನ ಬೆವರು ಆರುವ ಮುನ್ನವೇ ಆತನ ವೇತನ ಕೊಟ್ಟುಬಿಡಿ ಎನ್ನುವ ಮಹತ್ವದ ಮಾತುಗಳನ್ನು ಮನವರಿಕೆ ಮಾಡಿದ್ದಾರೆ. ಅದು ವ್ಯಕ್ತಿ ಸಂಸ್ಥೆ ಅಥವಾ ಇಲಾಖೆ ಗಳಾಗಿರಬಹುದು. ಆ ಎಲ್ಲರಿಗೂ ಈ ಮಾತು ಅನ್ವಯಿಸುತ್ತದೆ. ಮಾಡಿದ ಕೆಲಸಕ್ಕೆ ಬಿಲ್‌ಗಳನ್ನು ತಡೆ ಹಿಡಿಯದೆ ಕೊಟ್ಟುಬಿಡುವುದು ಮನುಷ್ಯನ ಧರ್ಮವಾಗಬೇಕು. ಆಗ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ. ಈ ಸಾಮಾಜಿಕತೆ ಮಾಲೀಕನಲ್ಲಿ ಎಂತೋ ಅಂತೆ ಕಾರ್ಮಿಕನಲ್ಲೂ ಪರಸ್ಪರ ಪ್ರಕಟಗೊಂಡಾಗ ಬದುಕು ಹಸನಾಗುತ್ತದೆ.

ಹೃದಯ ಶ್ರೀಮಂತಿಕೆ: ಶ್ರೀಮಂತಿಕೆ ಎಂದರೆ ಹಣ, ಒಡವೆ, ಆಸ್ತಿ ಎಂಬ ಕಲ್ಪನೆ ಮನುಷ್ಯನಲ್ಲಿ ಅನಾದಿಕಾಲದಿಂದಲೂ ಮನೆಮಾಡಿಕೊಂಡು ಬಂದಿದೆ. ಇದರಿಂದಾಗಿ ಮನುಷ್ಯನಿಗೆ ಅಕಸ್ಮಿಕವಾಗಿ ಸಿಕ್ಕ ಸುಂದರ ಬದುಕು ಈ  ನಶ್ವರವಸ್ತುಗಳ ವ್ಯಾಮೋಹಕ್ಕೆ ಸಿಲುಕಿ ನರಕಮಯವಾಗಿದೆ. ಒಡವೆ, ವಸ್ತ್ರ ಆಸ್ತಿ, ಹಣ ಇದ್ದೂ ಹೆಣವಾಗಿರುವವರೇ ಹೆಚ್ಚಾಗಿದ್ಧಾರೆ. ಅದರ ಇಕ್ಕಳದಲ್ಲಿ ಸಿಕ್ಕಿ ಪಡುತ್ತಿರುವ ಅವರ ನರಕಯಾತನೆಯನ್ನು ಕಂಡರೆ ಯಾರಿಗಾದರೂ ಕನಿಕರವಾಗುತ್ತದೆ. ಅವರ ಪರಿಸ್ಥಿತಿ ಹುಚ್ಚುಬಿಡದೆ ಮದುವೆಯಾಗುವುದಿಲ್ಲ, ಮದುವೆಯಾಗದೆ ಹುಚ್ಚು ಬಿಡುವುದಿಲ್ಲ ಎನ್ನುವಂತಾಗಿದೆ.

ಬದುಕಿನ ಮರ್ಮವನ್ನು ಅರಿತಿದ್ದ ಮುಹಮ್ಮದ್ ಪೈಗಂಬರರು ನಿಜವಾದ ಶ್ರೀಮಂತಿಕೆ ಯಾವುದು ಎಂಬುದನ್ನು ಕಂಡುಕೊಂಡವರಾಗಿದ್ದರು. “ಹೃದಯ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ” ಎಂದು ಸಾರಿದರು. ಜಗತ್ತಿಗೆ ಬಂದ ಎಲ್ಲ ದಾರ್ಶನಿಕರ ಸಂದೇಶವೂ ಇದೇ ಆಗಿದೆ. ನಿಜವಾದ ಒಡವೆ ಯಾವುದು ಎಂಬುದನ್ನು ಕುವೆಂಪು ಅವರು ಮಕ್ಕಳಿಗೆ ಬರೆದ “ಒಡವೆಗಳು” ಕವನದಲ್ಲಿ ಚಿತ್ರಿಸಿದ್ದಾರೆ ಅದು ಮಗು ತಾಯಿಗೆ ಹೇಳುವ ಪದ.

ಒಡವೆಗಳು

ಚಿನ್ನದ ಒಡವೆಗಳೇತಕೆ ಅಮ್ಮ?
ತೊಂದರೆ ಕೊಡುವುವು ಬೇಡಮ್ಮ
ಬಣ್ಣದ ಬಟ್ಟೆಗಳೇತಕೆ ಅಮ್ಮ
ಮಣ್ಣಿನೊಳಾಡಲು ಬಿಡವಮ್ಮ

ಚಂದಕ್ಕೆ ಚಂದಕೆ ಅನ್ನುವೆ ನೀನು
ಚಂದವು ಯಾರಿಗೆ ಹೇಳಮ್ಮ
ನೋಡುವರಿಗೆ ಚೆಂದವು ಆನಂದ
ಆಡುವ ಎನಗಿದು ಬಲು ಬಂಧ

ನನ್ನೀ ಶಿಶುತನ, ನಿನ್ನೀತಾಯ್ತನ
ನಮಗಿವೆ ಎರಡು ಒಡವೆಗಳಮ್ಮ
ನಾನಿನಗೊಡವೆಯು, ನೀನನಗೊಡವೆಯು
ಬೇರೆಯೆ ಒಡವೆಗಳೇಕಮ್ಮ?

ಹೀಗೆ ಮಗು ತಾಯಿಗೆ, ತಾಯಿ ಮಗುವಿಗೆ; ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ, ವಕೀಲರು ಕಕ್ಷಿದಾರರಿಗೆ, ಕಕ್ಷಿದಾರರು ವಕೀಲರಿಗೆ; ವೈದ್ಯರು ರೋಗಿಗಳಿಗೆ, ರೋಗಿಗಳು ವೈದ್ಯರಿಗೆ; ಜೀವನದ ಪ್ರತಿಯೊಂದು ರಂಗದಲ್ಲೂ ಒಬ್ಬರು ಮತ್ತೊಬ್ಬರಿಗೆ ಒಡವೆಗಳಾಗುವಂತಹ ಹೃದಯ ಶ್ರೀಮಂತಿಕೆಯೇ ಬದುಕಿನ ನಿಜವಾದ ಶ್ರೀಮಂತಿಕೆ. ಮನುಷ್ಯನ ಜೀವನದಲ್ಲಿ ಈ ಪ್ರೀತಿಯೇ ಪ್ರಧಾನವಾದದ್ದು. ಅದನ್ನು ದ. ರಾ. ಬೇಂದ್ರೆಯವರು ‘ಬಡವ ಬಡವಿ’ ಪದ್ಯದಲ್ಲಿ ಬಹುಸರಳ ಸುಂದರವಾಗಿ ಚಿತ್ರಿಸಿದ್ದಾರೆ.

ಆತ ಬಡವ ನಾನು ಬಡವಿ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದುಕು ಇದಕು ಎದಕು

ಆತ ನನಗೆ ಕೊಟ್ಟುದೇನು
ಅವಗೆ ನನಗೆ ಗೊತ್ತು
ತೋಳುಗಳಿಗೆ ತೋಳುಬಂದಿ
ಕೆನ್ನೆತುಂಬ ಮುತ್ತು!

ಇಂತಹ ಪ್ರೀತಿಯಿಂದ ಕೂಡಿದ ಒಲವಿನ ಬದುಕೇ ನಿಜವಾದ ಶ್ರೀಮಂತ ಬದುಕು. ಅದನ್ನೆ ‘ರಸಜೀವನ’ ಎನ್ನುವುದು. ನಿಸ್ಸಾರವಾದ ವಸ್ತು ವೈಢೂರ್ಯಗಳಿಂದ ಹೊರಗುಳಿದು ಈ ಸಾರ ತುಂಬಿದ ಹೃದಯ ಶ್ರೀಮಂತಿಕೆಯ ಬದುಕಿನತ್ತ ಮನುಕುಲ ಎಂದಿಗೆ ಹೊರಳೀತು?

ಮುಹಮ್ಮದ್ ಪೈಗಂಬರರ ಬದುಕಿನಲ್ಲಿ ಇಂತಹ ಅನೇಕ ಅಮೂಲ್ಯ ಜೀವನ ಸಂದೇಶಗಳು ತುಂಬಿಕೊಂಡಿವೆ. ಕೇವಲ ಧರ್ಮ ಅಮಲಿನಲ್ಲಿ ಮುಳುಗಿ ಅವರ ಮಾನವೀಯ ಅಂತಃಕರಣದಲ್ಲಿ ಮಿನುಗುತ್ತಿರುವ ಇಂಥ ಅಮೂಲ್ಯ ರತ್ನಗಳನ್ನು ಮರೆಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಮನುಕುಲ ಸದಾ ಜಾಗೃತವಾಗಲಿ. ಧರ್ಮಭೋಧಕರ ದಾರಿಯೂ ಅದೇ ಆಗಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡದ ನೆಲದಲ್ಲಿ ವಿವೇಕಾನಂದರು
Next post ಎಲೆ ಮಾನವಾ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys