ಅವರೊಬ್ಬ ಎಡಿಟರ್ -ಶ್ರೀಪಾದರಾಯರು!
“ಶಿಂಗಣ್ಣ!” ಎಂದರು. ಗೋಡೆಗಳೆಲ್ಲ ಕಂಪಿಸಿದುವು. ಅವುಗಳಿಂದ ಸಿಡಿದು ಬಂದಂತೆ, ನಾಲ್ಕಡಿಯ ಒಂದು ಮಹಾ ದೀನಪ್ರಾಣಿಯು ಸಂಪಾದಕರ ಎದುರಿಗೆ ಬಂದು ನಿಂತಿತು.
“ಶಿಂಗಣ್ಣಾ!”
“ಸಾರ್!”
“ನಮ್ಮ ಈ ವಾರದ ಸಂಚಿಕೆಯಲ್ಲಿ ಪ್ರೆಸಿಡೆಂಟ್ ಪಟೇಲರ ಜೀವನ ಚರಿತ್ರೆಯು ಬರಬೇಕು-ಬರಲೇಬೇಕು. ಅವರು ಕಾಲವಾದರಂತೆ. ತಿಳಿಯಿತೇ?”
“ಸತ್ತರೇ?”
“ಖಂಡಿತವಾಗಿ ಸತ್ತರು. ನಿನಗೇಕೆ ಸಂದೇಹ? ಅವರು ಎಸೆಂಬ್ಲಿ ಅಧ್ಯಕ್ಷರಾಗಿದ್ದರಲ್ಲವೇ?”
“ಅಹುದು ಸಾರ್”
“ಅವರು ಎಸಂಬ್ಲಿಯಲ್ಲೇನೇನು ಮಾಡಿದ್ದರೆಂದು ಗೊತ್ತೇ?”
“ಅಧ್ಯಕ್ಷತನವನ್ನು ವಹಿಸಿ ಭಾಷಣಗಳನ್ನು ಮಾಡಿದ್ದರು.”
“ಸರಿ. ಆ ಭಾಷಣಗಳೆಲ್ಲವನ್ನೂ ಚುಟುಕಿನಿಂದ ಬರೆದುಬಿಡು. ಅವರ ವಯಸ್ಸೆಷ್ಟು?”
“ಎಪ್ಪತ್ತೋ ಎಂಭತ್ತೋ…?”
“ಎಷ್ಟೂ ಇರಲಿ ‘ಅಕಾಲ ನಿಧನಹೊಂದಿದ’ರೆಂದು ಬರೆದುಬಿಡು. ಅವರಿಗೆ ಮಕ್ಕಳಿವೆಯೇ?”
“ಇರಬೇಕು.”
“ಇರಬೆಕು – ಎಂದರೇನಯ್ಯಾ? ಅದು ನಿನ್ನ ಇಚ್ಚೆಯೇ? ಆಗೆಲ್ಲ ನಿಮಗೆ ತಿಳಿದಿರದಿದ್ದರೆ ನೀವೆಲ್ಲಾ ಪತ್ರಿಕೆಗಳಿಗೆ ಬರೆವುದೇನಂತೆ? ನಿಮಗೇಕಂತೆ ಈ ಕೆಲಸ? ಇರುವರೋ ಇಲ್ಲವೋ ಹೇಳಿ ಬಿಡು!”
“ಮೂವರು ಇರುವರು.”
“ಹಾಗೆಹೇಳು- ಅದನ್ನೂ ಕಾಣಿಸಬೇಕು ಪತ್ರಿಕೆಯಲ್ಲಿ. ತಿಳಿಯಿತೇ??”
“ಆಗಬಹುದು.”
ಶಿಂಗಣ್ಣನು ತನ್ನ ಕೋಣೆಗೆ ಹೊರಟುಹೋದನು. ಸಂಪಾದಕರು ತಮ್ಮ ಮೇಜಿನಿಂದ ‘ಅಮೃತಬಜಾರ’ ಪತ್ರಿಕೆ ಯನ್ನು ತೆಗೆದು, ಕಾಳಿಗೆ ಐವರು ಹುಡುಗರನ್ನು ಬಲಿಕೊಟ್ಟ ಸನ್ಯಾಸಿಯ ಮೊಕದ್ದಮೆಯನ್ನೋದ ತೊಡಗಿದರು.
ಅಷ್ಟರಲ್ಲಿ “ಹೋ ಹೋ ಹೋ” ಎನ್ನುತ್ತ ಪದ್ಮಯ್ಯ ನವರ ಪ್ರವೇಶವಾಯಿತು. ಬಂದವರೇ ಒಂದು ಕುರ್‍ಚಿಯನ್ನೆಳೆದು ಕುಳಿತು, “ಶ್ರೀಪಾದರಾಯರೇ, ಏನು ಸ್ವಾಮಿ ಇದು ನಿಮ್ಮ ಪತ್ರಿಕೆ! ವಿದೇಶೀ ರಾಜಕೀಯಗಳನ್ನೇ ನೀವು ಬರೆಯುವುದಿಲ್ಲವಲ್ಲ!” ಎಂದರು.
ಶ್ರೀಪಾದರಾಯರ ಮುಖ ಕೆಂಪಗಾಯಿತು. “ಶಿಂಗಣ್ಣಾ!” ಎಂದರು. ಶಿಂಗಣ್ಣನು ಬಂದು ನಿಂತನು.
“ಶಿಂಗಣ್ಣಾ!”
“ಸಾರ್!”
“ವಿದೇಶೀ ರಾಜಕೀಯಗಳೇ ಬರುವುದಿಲ್ಲ. ಅದೇನು?”
“ಈ ಸಾರಿ ಬರೆಯಲೇ?”
“ಹಾಗೆ ಹೇಳುವುದರ ಅರ್ಥವೇನಯ್ಯಾ? ಸಂದೇಹವೇ ನಿನಗೆ? ಪತ್ರಿಕೆಯೆಂದರೇನು, ವಿದೇಶ- ಸ್ವದೇಶ ಎಲ್ಲವೂ ಬರಲೇಬೇಕು, ಈ ಬಾರಿ ಏನನ್ನು ಬರೆಯುತ್ತಿ?”
“ವಾನ್ ನೇಷನರಿಗೂ ಹಿಟ್ಲರರಿಗೂ ಚುನಾವಣೆಯ ಯುದ್ಧ.”
“ಅದನ್ನೆಲ್ಲಾ ಬರಿ. ಎಷ್ಟು ಮಂದಿ ಸತ್ತರೆಂದೂ ಬರಿ ಪೇಪನರ ಮತ್ತು ಹಿಟ್ಲರರ ಜೀವನ ಚರಿತ್ರವನ್ನೂ ಬರಿ, ತಿಳಿಯಿತೇ? ಇನ್ನೇನಿದೆ?”
“ಅಮೇರಿಕದಲ್ಲಿ ರೂಸ್ ವೆಲ್ಟರು. . . .”
“ರೂಸ್ವೆಲ್ಟ ರ ವಿಷಯ ಬರೆಯಲೇ ಬೇಕು ತಿಳಿಯಿತೇ?”
“ತಿಳಿಯಿತು.”
ಅರ್ಧತಾಸು ಕಳೆಯಿತು. ಮುಂಡಾಲ ಕೇರಿಯ ಮಾದಯ್ಯನವರ ಆಗಮನ!
“ಶ್ರೀಪಾದರಾಯರೇ, ಕಳೆದ ಸಂಚಿಕೆಯಲ್ಲಿ ಆ ಭದ್ರಮ್ಮ ಗುಡ್ಡದ ಮರ ಕಡಿಸಿದುದನ್ನು ಚೆನ್ನಾಗಿ ಟೀಕಿಸಿರುವಿರಿ. ಬೇಷ್! ಇಲ್ಲದಿದ್ದರೆ ಬುದ್ಧಿ ಬರೋದಿಲ್ಲ ಈ ಮಕ್ಕಳಿಗೆ ಸ್ವಾಮಿ. ಹಾಗೆ ಬರೆಯುವುದು ಪತ್ರಿಕೆಗಳ ಧರ್‍ಮ ಸ್ವಾಮೀ. ಆದರೆ, ಶ್ರೀಪಾದರಾಯರೇ, ನಿಮ್ಮ ಪತ್ರಿಕೆಯಲ್ಲಿ ಸ್ವದೇಶದ ಸುದ್ದಿಗಳೇ ಕಡಿಮೆಯಾಗಿವೆಯಲ್ಲ. ಸ್ವದೇಶ ರಾಜಕೀಯಗಳ ವಿಷಯವೂ ನೀವು ಇತ್ತೀಚೆಗೆ ಏನೂ ಬರೆಯುವುದಿಲ್ಲ.”
“ಶಿಂಗಣ್ಣಾ” ಎಂದರು ಶ್ರೀಪಾದರಾಯರು.
“ಸಾರ್!”
“ನಮ್ಮ ಪತ್ರಿಕೆಯಲ್ಲಿ ಶಿಂಗಣಾ-ಅಯ್ಯೋ ಪರಮಾತ್ಮಾ- ಸ್ವದೇಶೀ ಸುದ್ದಿಗಳನ್ನೂ ಸ್ವದೇಶೀ ರಾಜಕೀಯಗಳನ್ನೂ ನೀನು ಕಡಮೆ ಮಾಡಿದರೆ ಹೇಗೆ ಶಿಂಗಣ್ಣಾ?”
“ಕಡಿಮೆಯಾಯಿತೇ ಸಾರ್?”
“ಸಂದೇಹವೇ ನಿನಗೆ? ‘ಅಗದೀ’ ಕಡಮೆಯಾಯಿತು. ಹೆಚ್ಚಿಸಬೇಕು, ತಿಳಿಯಿತೇ? ಈ ಬಾರಿ ಸ್ವದೇಶಿ ರಾಜಕೀಯಗಳೇನಿವೆ?”
“ಸಂಯುಕ್ತ ಪ್ರಾಂತ್ಯದ ಮಂತ್ರಿಮಂಡಲದ ಮೇಲೆ ಅವಿಶ್ವಾಸದ ಠರಾವು-ಮದರಾಸು ಸಚಿವರ ಕುಂಭಕೋಣ ಭಾಷಣ- ಪಂಜಾಬಿನ ರೈತರಿಗೆ ಸರಕಾರದ ರಿಯಾಯತಿ ನಾಸ್ತಿ…..”
“ಅದೆಲ್ಲ ಬರಬೇಕು ಶಿಂಗಣ್ಣಾ-ಬರಲೇಬೇಕು. ಸ್ವದೇಶ ರಾಜಕೀಯಗಳಿಗಲ್ಲದೆ ನಮ್ಮ ಪತ್ರಿಕೆ ಮತ್ತೇತಕ್ಕೆ? ತಿಳಿಯಿತೇ?”
“ತಿಳಿಯಿತು.”
ಅರ್ಧತಾಸು ಕಳೆಯಿತು
“ಶ್ರೀಪಾದರಾಯರೇ!”
“ಯಾರು, ನರಸಿಂಹಪ್ಪನವರೇ? ಬನ್ನಿ ಬನ್ನಿ ಬನ್ನಿ!”
“ಶ್ರೀಪಾದರಾಯರೇ- ನಿಮ್ಮ ಪತ್ರಿಕೆಯ ವಿಷಯವಾಗಿ ಒಂದು ಮಾತುಹೇಳಲು ಬಂದೆ, ನೋಡಿ ಸ್ವಾಮಿ, ಆ ಸುದ್ದಿ – ಈ ಸುದ್ದಿ ಬರೆಯುತ್ತೀರಿ, ಅವುಗಳನ್ನೊಂದಿಷ್ಟು ಕಡಿಮೆಮಾಡಿ, ಒಂದು ಒಳ್ಳೆಯ ಕಥೆ ಬರೆಯಬಾರದೇ? ಒಂದು ತಾಸು ಓದಬಹುದು. ಅದು ಬಿಟ್ಟು ನಮಗೆ ಎಲ್ಲೆಲ್ಲಿ ಯಾರ್‍ಯಾರು ಖೂನಿಮಾಡಿದ ಸುದ್ದಿಯೇಕೆ ಸ್ವಾಮಿ?”
ನಿಜ! . . . . “ಶಿಂಗಣಾ!”
“ಸಾರ್!”
“ನಮ್ಮ ಪತ್ರಿಕೆಯಲ್ಲಿ ಕಥೆಗಳೇ ಇಲ್ಲವೇನು? ಒಂದು ಒಳ್ಳೆ ಕಥೆ ಬರೆದುಕೊಡು, ತಿಳಿಯಿತೇ?”
“ತಿಳಿಯಿತು.”
ಕಾಲುತಾಸು ಕಳೆಯಿತು. ಮುರಾರಿರಾಯರ ಆಗಮನ.
“ಸ್ವಾಮೀ-ಶ್ರೀಪಾದರಾಯರೇ, ನಮಸ್ಕಾರ!”
“ನಮಸ್ಕಾರ!”
“ಸ್ವಾಮಿ, ನಿಮ್ಮ ಪತ್ರಿಕೆ ಕಳೆದವಾರ ತಲಪಿಲ್ಲ”
“ಶಿಂಗಣ್ಣಾ!”
“ಸಾರ್!”
“ಇವರ ಪತ್ರಿಕೆ ಕಳೆದವಾರ ತಲಪಲಿಲ್ಲವಂತೆ. ಏಕೆ ತಲಪಲಿಲ್ಲ?”
“ವಿಚಾರಿಸುತ್ತೇನೆ.”
“ವಿಚಾರಿಸುತ್ತೇನೆ! ಪ್ರತಿವಾರವೂ ದೊರು ಬರುತ್ತಿದೆ, ನೀನು ವಿಚಾರಿಸುತ್ತಿ. ದೂರು ಬರುವ ಮೊದಲೇ ವಿಚಾರಿಸ ಬಾರದೇ?”
“ಸ್ವಾಮೀ-ಶ್ರೀಪಾದರಾಯರೇ, ಮತ್ತೊಂದು ವಿಷಯ ಹೇಳುತ್ತೇನೆ. ನಿಮಗೆ ಹಿತ ಕಂಡರೆ ಹಾಕಬಹುದು. ಹೇಳಲೇ?”
“ಸಂಕೋಚವೇಕೆ ಸ್ವಾಮೀ? ಹೇಳಿ ಬಿಡಿ.”
“ನೋಡಿ, ನಿಮ್ಮ ಪತ್ರಿಕೆಯಲ್ಲಿ ಒಂದೊಂದು ಒಳ್ಳೆ ಚಕ್ರಬಂಧ ಒಗಟು ಕೊಡಬೇಕು ಸ್ವಾಮಿ. ಈಗಿನ ಕಾಲದಲ್ಲಿ ಚಕ್ರಬಂಧವೇ ಬೇಕು. ಆ ಸುಜ್ಞಾನ ಪತ್ರಿಕೆಯವರ ಹಾಗೆ ಸುಟ್ಟ ಕಥೆಗಳನ್ನೂ ಹಿಟ್ಲರ್ ಮತ್ತು ಬಟ್ಲರ್ ಎಂದು ಯಾರಿಗೂ ಬೇಡವಾದ-‘ನಮ್ಮ ಕನಸಿನಲ್ಲಿಯೂ ಕೇಳದ ಹೆಸರುಗಳನ್ನೂ ಕೊಟ್ಟು ಏನೂ ಪ್ರಯೋಜನವಿಲ್ಲ.”
“ಶಿಂಗಣ್ಣಾ”
“ಸಾರ್!”
“ನಮ್ಮ ಪತ್ರಿಕೆಯಲ್ಲಿ ಹಿಟ್ಟರ್ ಮತ್ತು ಕಟ್ಲರ್ ಎಂದು ಸುಟ್ಟ ಸುದ್ದಿಗಳನ್ನೇಕೆ ನೀನು ಕೊಡುತ್ತೀ? ಮತ್ತು ನೋಡು, ಶಿಂಗಣ್ಣ, ಕೆಟ್ಟ ಕಥೆಗಳಿಂದಲೂ ಏನೂ ಪ್ರಯೋಜನವಿಲ್ಲ. ಕೈ ತಿರುಗಿದಂತೆ ಬರೆದರೆ ಪತ್ರಿಕೆಯಾಗುವುದೇ? ನೀನು ಮಹಾ ಬುದ್ಧಿವಂತನೆಂದು ನಿನ್ನ ಮನಸ್ಸಿನಲ್ಲಿರಬಹುದು ಶಿಂಗಣ್ಣಾ. ಆದರೆ, ಶಿಂಗಣ್ಣಾ, ಜನರು ನಿನಗಿಂತ ಬುದ್ಧಿವಂತರು ಶಿಂಗಣ್ಣಾ! ಅವರ ಅಭಿರುಚಿಯನ್ನು ನೋಡಿಯೇ ನಾವು ಬರೆಯಬೇಕು ಶಿಂಗಣ್ಣಾ. ಈ ಸಂಚಿಕೆಯಿಂದ ಮೋದಲ್ಗೊಂಡು ಒಂದೊಂದು ಒಳ್ಳೊಳ್ಳೆ ಚಕ್ರಬಂಧ ಬರಲಿ-ತಿಳಿಯಿತೇ?”
“ತಿಳಿಯಿತು”
ಹೀಗೆ ಹನ್ನೆರಡು ಜನರು ಬಂದರು. ಹನ್ನೆರಡು ಬಗೆಯಾಗಿ ಸೂಚನೆ ಕೊಟ್ಟರು. ಸಂಪಾದಕರು ಶಿಂಗಣ್ಣನನ್ನು ಹನ್ನೆರಡು ಬಾರಿ ಕರೆದು, ಹನ್ನೆರಡು ಉಪದೇಶಗಳನ್ನು ಕೊಟ್ಟು, ಹನ್ನೆರಡುಬಾರಿ “ತಿಳಿಯಿತೇ?” ಎಂದು ಕೇಳಿದರು. ಶಿಂಗಣ್ಣನು ಹನ್ನೆರಡುಬಾರಿ ತಿಳಿಯಿತೆಂದನು.
ಸಾಯಂಕಾಲ ಮನೆಗೆ ತೆರಳುವ ಹೊತ್ತಿಗೆ ಸಂಪಾದಕರು ಶಿಂಗಣ್ಣನನ್ನು ಹದಿಮೂರನೆಯ ಬಾರಿ ಕರೆದರು. ಬಂದು ನಿಂತು, “ಸಾರ್!” ಎಂದನು.
“ಶಿಂಗಣ್ಣಾ, ಪತ್ರಿಕೆ ನಾಳೆ ಸಾಯಂಕಾಲದೊಳಗೆ ಅಚ್ಚಾಗಬೇಕು-ಆಗಲೇ ಬೇಕು, ಈ ಬಾರಿ ಎರಡು ಪುಟ ಹೆಚ್ಚು ಕೂಡಿಸಿದರೂ ಚಿಂತೆಯಿಲ್ಲ, ತಿಳಿಯಿತೇ?” ಎಂದು ಕೇಳಿದರು.
ಶಿಂಗಣ್ಣನು ಹದಿಮೂರನೆ ಬಾರಿ, “ತಿಳೆಯಿತು!” ಎಂದನು.
“ಎಲ್ಲವೂ ಬರೆದಾಯಿತೇ?” ಎಂದು ಕೇಳಿದರು ಸಂಪಾದಕ ಮಹಾಶಯರು.
“ಆಹುದೆ”ಂದಿತು ಶಿಂಗಣ್ಣ ಮೂರ್‍ತಿ.
“ಇತ್ತ ತಾರೆ”ಂದಿತು ಸಂಪಾದಕ ಗೆ,
ಶಿಂಗಣ್ಣನು ತನ್ನ ಕೋಣೆಗೆ ಹೋಗಿ, ಮಡಚಿದ ಒಂದು ಕಾಗದವನ್ನು ತಂದು ಸಂಪಾದಕರ ಕೈಗೆ ಕೊಟ್ಟನು.
ಸಂಪಾದಕರು ಬಿಡಿಸಿದರು, ನೋಡಿದರು, ಏನನ್ನು?
ಒಂದು ಹುಲಿ; ಒಂದು ಕರಡಿ; ಒಂದು ನೀರು ಕುದುರೆ; ಒಂದು ಗೋರಿಲ್ಲ; ಒಂದು ಎಮ್ಮೆ; ಒಂದು ಆಡು; ಒಂದು ಕಾಗೆ; ಒಂದು ನರಿ; ಒಂದು ಎತ್ತು; ಒಂದು ಹೆಬ್ಬಾವು; ಒಂದು ನಾಗಪ್ಪ, ಒಂದು ಹಂದಿ- ಇವಿಷ್ಟು ಚಿತ್ರಗಳೂ, ಅವುಗಳ ಕೆಳಗೆ, ಕ್ರಮವಾಗಿ- ಪದ್ಮಯ್ಯ, ಮಾದಯ್ಯ, ನರಸಿಂಹಪ್ಪ, ಮುರಾರಿ ರಾವ್ – ಹೀಗೆ ಹೆಸರುಗಳನ್ನೂ ಬರೆದು, ಸಂಪಾದಕರನ್ನು ಅವುಗಳ ಮೇಲೆ ಮಲಗಿಸಿ, ನರಕವನ್ನೆ ಕಣ್ಣ ಮುಂದಿಟ್ಟಿದ್ದನು!
ಆಶ್ಚರ್‍ಯ- ಕ್ರೋಧಗಳಿಂದ ಸಂಪಾದಕರು ತಲೆ ಎತ್ತಿ ನೋಡಿ, “ಶಿಂಗಣ್ಣಾ!” ಎಂದರು.
“ಠಽಪ್’ ಎಂಬೊಂದು ಶಬ್ದ ಕೇಳಿತು. ಶಿಂಗಣ್ಣನು ಮಾಯವಾಗಿದ್ದನು. ಸಂಪಾದಕರು ಬಾಗಿಲಿನ ತನಕ ಹೋಗಿ, ಬಾಗಿಲು ತೆರೆದು ನೋಡಿದರು. ಒಂದು ಫರ್ಲಾಂಗು ದೂರದಲ್ಲಿ ಚಿಕ್ಕದೊಂದು ವ್ಯಕ್ತಿಯು, ಬೇಟೆನಾಯಿಗಳು ಹಿಂಬಾಲಿಸಿದಂತೆ ಓಡಿಹೋಗುತಿತ್ತು.
“ಹಾಳಾಗಲಿವನು! ಇವನಿಗೇನು ಹುಚ್ಚೇ?” ಎನ್ನುತ ಶ್ರೀಪಾದರಾಯರು, ಮೃಗಕೋಟಿಯ ಚಿತ್ರಾವಳಿ ಇರುವ ಆ ಕಾಗದದ ಕಡೆಗೆ ಇನ್ನೊಮ್ಮೆ ನೋಡಿದರು. ಆ ಮೇಲೆ ತಿರುವಿದರು. ಅಲ್ಲಿ –
“ಎರಡು ತಿಂಗಳು ಅನ್ನ ಕೊಟ್ಟುದಕ್ಕೆ ನಿಮಗೆ ನನ್ನ ಕೃತಜ್ಞತೆಗಳು ಸಲ್ಲಬೇಕಾಗಿವೆ. ಆದರೆ, ಗೋಳಾಡಿಸಿ ಅನ್ನ ಕೊಟ್ಟುದಕ್ಕೆ ನಿಮಗೆ ನರಕ ತಪ್ಪದೆಂದು ನನ್ನ ಅಭಿಪ್ರಾಯ. ನೀವು ಸಂಪಾದಕರಲ್ಲ. ಸಂಪಾದಕರ ಕಾಲಿನ ಧೂಳಾಗಲಿಕ್ಕೂ ಯೋಗ್ಯರಲ್ಲವೆಂದು ವಿನಯದಿಂದ ತಿಳಿಸುವೆನು. ನೀವು ಸಂಪಾದಕರಾಗವ ಬದಲು ಛಾಪಖಾನೆಯ ಮೊಳೆ ಜೋಡಿಸುವ ಕೋಣೆಯಲ್ಲಿ ಕಸ ತೆಗೆಯುವ ಕೆಲಸವನ್ನು ಮಾಡಿಕೊಂಡು ಕ್ರಮೇಣ ಸಂಪಾದಕನಾಗುವ ಯೋಗ್ಯತೆ ಯನ್ನು ಗಳಿಸಿಕೊಳ್ಳಬೇಕೆಂದು ನನ್ನ ಸೂಚನೆ. ಇನ್ನು ನಿಮ್ಮ ಪತ್ರಿಕಾ ಆಫೀಸಿನಲ್ಲಿ ನಾನಿರುವದಂತೂ ಇಲ್ಲ; ಈ ಊರಿನಲ್ಲೇ ನನ್ನನ್ನು ನೀವು ಕಂಡರೆ ನನ್ನ ಹೆಸರು ಶಿಂಗಣ್ಣ ನಲ್ಲ” ಎಂದು ಬರೆದಿತ್ತು.
ಹಲ್ಲುಗಳನ್ನು ಕಡಿಯುತ್ತ, ಕಾಗದವನ್ನು ಹರಿದು, ನೆಲಕ್ಕೆ ರಭಸದಿಂದ ಬಿಸಾಡಿ, ಸಂಪಾದಕರು – “ಕೃತಜ್ಞತೆಯಿಲ್ಲದ ನಾಯಿ!” ಎಂದರು.
ಶಿಂಗಣ್ಣನೀಗ ಮತ್ತೊಂದು ಕಡೆಯಲ್ಲಿಯೂ ಉಪ ಸಂಪಾದಕನಂತೆ ಕೃತಘ್ನ!
*****


















