ದೊಡ್ಡವರು

ದೊಡ್ಡವರು

ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ ಆಲದಮರದ ನೆರಳಲ್ಲಿ ಗಾಡಿ ನಿಲ್ಲಿಸಿ ಅದರ ಮೇಲೆ ಬಿಳಿ ಅರಿವೆಗಳನ್ನು ಹಾಸಿ ಪುಸ್ತಕಗಳ ಟ್ರಂಕ್ ಬಿಚ್ಚಿ ಅದರಲ್ಲಿರುವ ವಿವಿಧ ಬಗೆಯ, ನಾನಾ ನಮೂನೆ ಬಣ್ಣದ ವುಸ್ತಕಗಳನ್ನು ಒಂದೊಂದಾಗಿ ತೆಗೆದು ನೀಟಾಗಿ ಗಾಡಿಯ ತುಂಬಾ ಜೋಡಿಸುತ್ತಾನೆ. ದೊಡ್ಡ ಹಳೆಯ ಟ್ರಂಕ್ ಈಗಿವನಿಗೆ ಸಿಂಹಾಸನವಾಗುತ್ತದೆ. ಮಳೆ ಬಂದರೆ ಪುಸ್ತಕಗಳ ಮೇಲೆ ಹೊದ್ದಿಸುವ ಪ್ಲಾಸ್ಟಿಕ್ ಹೊದಿಕೆ ಉಳಿದ ಸಮಯದಲ್ಲಿ ಆತ ಕೂರುವ ಟ್ರಂಕಿಗೆ ಕುಶನ್ ಆಗುತ್ತದೆ. ಚಿಂದಿ ಬಟ್ಟೆ ಕಟ್ಟಿದ ಸಣ್ಣ ಕೋಲಿನಿಂದ ಪುಸ್ತಕಗಳ ಮೇಲಿನ ಧೂಳು ಜಾಡಿಸಿ ಊದು ಬತ್ತಿಹಚ್ಚಿ, ಕೈ ಮುಗಿದ ಅನಂತರ ತಾನೊಂದು ಬೀಡಿ ಹಚ್ಚಿ “ಧಂ” ಎಳೆದನೆಂದರೆ ವ್ಯಾಪಾರಕ್ಕೆ ಅಣಿಯಾದಂತೆ. ಸನಿಹದಲ್ಲೇ ಇರುವ ಕಾಕಾ ಹೋಟೆಲ್ನಿಂದ ಅರ್ಧ ಕಪ್ ಚಹಾವನ್ನು ದಿನವೂ ಹುಡುಗನೊಬ್ಬ ತಂದುಕೊಡಬೇಕೆಂಬುದು ಅಲಿಖಿತ ಒಪ್ಪಂದ. ದಿನಗಳಲ್ಲಿ ಆದೆಷ್ಟು ಬೀಡಿಗಳು ದಹನವಾಗುತ್ತವೋ ಅದೆಷ್ಟು ಲೀಟರ್ಗಳಷ್ಟು ಚಹಾ ಪ್ರಭಾಕರನ ಹೊಟ್ಟೆ ಸೇರುವುದೋ ಕಾಕಾನು ಇಟ್ಟಿಲ್ಲ ಪ್ರಭಾಕರನು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮಧ್ಯಾಹ್ನ ಎರಡು ಇಡ್ಲಿ ತಿಂದರೆ ಅದೇ ಅವನ ಡಿನ್ನರ್. ರಾತ್ರಿ ಮನೆ ಸೇರಿದ ಮೇಲೆಯೇ ಹೊಟ್ಟೆ ತುಂಬಾ ಮುದ್ದೆ ಬಾಯಿ ತುಂಬಾ ಅನ್ನ.

ಬಹುತೇಕ ಅವನಲ್ಲಿಗೆ ಬರುವವರು ಹಳ್ಳಿ ಗಿರಾಕಿಗಳು. ಅವನಿಟ್ಟಿರುವ ಸಾಹಿತ್ಯದ ಮಾಲು ಬಹುತೇಕ ಗಾಮಾಂತರ ಪ್ರದೇಶಗಳ ಮಧ್ಯಮ ವಯಸ್ಕರನ್ನೇ ಅವಲಂಭಿಸಿವೆ. ಅವನೇ ಅವರುಗಳ ಪಾಲಿನ ಸಪ್ನಾ ಬುಕ್ ಹೌಸ್. ಬಂದ ಹಳ್ಳಿಗರನ್ನು ತಾಜಾ ಮಾಡಿ, ಇರುವ ಪುಸ್ತಕಗಳನ್ನೇ ಹೊಗಳಿ ಅಟ್ಟಕ್ಕೇರಿಸಿ, ಕೈಗಿರಿಸಿ ಕಾಸು ಕೀಳುವುದರಲ್ಲಿ ಚಾಣಾಕ್ಷ. ತನ್ನಲ್ಲಿ ಇಲ್ಲದ ಪುಸ್ತಕದ ಹೆಸರು ಹೇಳಿ ಬೇಕಿತ್ತೆಂದು ದುಂಬಾಲು ಬಿದ್ದರೆ ಆಗಾಗ ಬೆಂಗಳೂರಿಗೆ ಹೋಗುವ ಅವನು ನೆನಪಿನಲ್ಲಿಟ್ಟುಕೊಂಡು ತನ್ನ ಗಿರಾಕಿಗಳಿಗೆ ತಪ್ಪದೇ ತರುವಶ್ಟು ರಿಸ್ಕ್ ತೆಗೆದುಕೊಳ್ಳಬಲ್ಲ. ಅದೇ ಅವನ ಜನಪ್ರಿಯತೆಯ ಗುಟ್ಟು. ಒಮ್ಮೆ ಅವನ ಬೀದಿ ಬದಿ ಅಂಗಡಿಯ ಮುಂದೆ ನಿಂತ ಗಿರಾಕಿ ಬರಿಗೈಲಿ ಹೋಗುವಂತಿಲ್ಲ. ಒಮ್ಮೆ ಬಂದವನು ತಾನು ಬರುವುದರ ಜೊತೆಗೆ ಇತರರನ್ನೂ ಕರೆತರುವಷ್ಟು ಆಕರ್ಷಿಸುವ ಕಲೆಗಾರಿಕೆ ಅವನ ಮಾತಿಗಿದೆ. ಮಾತೇ ಆವನ ಬಂಡವಾಳ, ಜೀವಾಳ. ಆದರೇನು, ಪೇಟೆ ಮಂದಿ ಇವನತ್ತ ತಿರುಗಿಯೂ ನೋಡರು. ಪ್ರಖ್ಯಾತ ಕಥೆ, ಕಾದಂಬರಿಗಳಿಗೆ ಅವನಲ್ಲಿ ತಾವಿಲ್ಲ. ಅವನಲ್ಲಿ ಪುಸ್ತಕ ಪ್ರಪಂಚದ್ದೇ ಒಂದು ತೆರನಾದ ಲೋಕ. ಚಿತ್ರಗೀತೆಗಳ ಪುಸ್ತಕ, ವಿವಿಧ ಬಗೆಯ ಪಂಚಾಂಗಗಳು, ಪಾಕಶಾಸ್ತ್ರ, ಹಲ್ಲಿಶಕುನದ ಪುಸ್ತಕ, ಶನಿ ಮಹಾತ್ಮೆ- ಶಿವ ಪುರಾಣ, ಸತ್ಯನಾರಾಯಣ ವ್ರತ ಮಹಾತ್ಮೆ, ವರಮಹಾಲಕ್ಷ್ಮಿ ಪೂಜಾ ಫಲ, ಜಗದೇಕವೀರನ ಕಥೆಗಳು, ಅರೇಬಿಯನ್ ನೈಟ್ಸ್, ಪಂಚತಂತ್ರ, ಯೋಗ ವಿಧಾನ, ವಚನ ಭಗವದ್ಗೀತೆ, ಕಂಪನಿ ನಾಟಕಗಳು, ಮಾಟ-ಮಂತ್ರ ಪುಸ್ತಕಗಳಿಂದ ಹಿಡಿದು ಕೋಕ ಶಾಸ್ತ್ರ, ದಾಂಪತ್ಯ ರಹಸ್ಯದ ಪುಸ್ತಕಗಳು ಕಣ್ಣು ಕುಕ್ಕುತ್ತವೆ. ಇವುಗಳ ಮಧ್ಯೆ ದೃಷ್ಠಿ ಬೊಟ್ಟಿನಂತೆ ಅನಕೃ, ತರಾಸು, ಬೀಚಿಯವರ ಹಳೆ ಸರಕಿನೊಂದಿಗೆ ಲೋಕಲ್ ಸಾಹಿತಿಗಳಿಗೆ ಜಾಗ ಮಾಡಿಕೊಟ್ಟಿದ್ದಾನೆ ಪ್ರಭಾಕರ. ಪಂಚಾಂಗಕ್ಕಾಗಿ ಹಳ್ಳಿ ಪುರೋಹಿತರು, ಜಂಗಮಯ್ಯಗಳು ಬಂದರೆ, ನಾಟಕ, ಚಿತ್ರಗೀತೆ, ದಾಂಪತ್ಯ ರಹಸ್ಯಗಳಿಗಾಗಿ ಪಡ್ಡೆಗಳು ಹಾಯುತ್ತವೆ. ಆಸ್ತಿಕರಿಗಂತೂ ಅವನ ಪುಸ್ತಕದ ಅಂಗಡಿಯೇ ದೇವಸ್ಥಾನ. ಎಲ್ಲಾ ದೇವರ ಸ್ತೋತ್ರಗಳು ಇಲ್ಲಿ ಲಭ್ಯ. ಹಲ್ಲಿಶಕುನದ ಪುಸ್ತಕಗಳಿಗೂ ಗಿರಾಕಿಗಳುಂಟು. ಜಾತ್ರೆಗಳ ಸಮಯದಲ್ಲಿ ಮಾತ್ರ ಪ್ರಭಾಕರ ತನ್ನ ಟೆಂಟ್ ಎತ್ತುತ್ತಾನಷ್ಟೇ. ನಾಯಕನಹಟ್ಟಿ ಜಾತ್ರೆ, ತೇರಮಲ್ಲೇಶ್ವರನ ಪರಸೆ, ಹೊರಕೇರಿ ರಂಗನ ರಥೋತ್ಸವ, ಮಾರಿ ಜಾತ್ರೆಗಳು ನಡೆಯುವಲ್ಲಿ ಹೋಗಿ ಬಿಡುತ್ತಾನೆ. ಒಂದೆರಡು ದಿನಗಳಂತೂ ಭರ್ಜರಿ ವ್ಯಾಪಾರ. ಮನೆಯಲ್ಲಿ ಕೂತು ಜಂಗು ಹಿಡಿದ ಮುದುಕರು ಪ್ರಭಾಕರ ಬುಕ್ ಸ್ಟಾಲ್ ಹಾಕಿದ್ದಾನೆಂದು ತಿಳಿದೊಡನೆ ಕೊಡವಿಕೊಂಡು ಮೇಲೆದ್ದು ಟೊಂಕ ಹಿಡಿದುಕೊಂಡು ಧಾವಿಸುತ್ತಾರೆ. ಆಗಲೇ ಕೋಕಶಾಸ್ತ್ರ ವಶೀಕರಣದ ಪುಸ್ತಕಗಳಿಗೆ ಡಿಮ್ಯಾಂಡು. ಇತರರಂತೆ ಚೌಕಾಸಿಗಿಳಿಯದೆ ಕೇಳಿದ ‘ದರ’ ಕೊಟ್ಟು ಜಾಗ ಖಾಲಿ ಮಾಡುವ ಗಿರಾಕಿಗಳೆಂದರೆ ಯಾವ ವ್ಯಾಪಾರಿಗೆ ತಾನೆ ಅಪಥ್ಯ? ದಿನವೂ ನೂರೈವತ್ತು-ಇನ್ನೂರರವರೆಗೆ ವ್ಯಾಪಾರಕ್ಕೆ ಮೋಸವಿಲ್ಲವೆಂದು ಹೇಳಿಕೊಳ್ಳುತ್ತಾನೆ. ಜಾತ್ರೆಗಳಲ್ಲಿ ಡಬ್ಬಲ್ ವ್ಯಾಪಾರ. ಮಳೆಗಾಲದ ನಾಲ್ಕು ತಿಂಗಳು ಮಾತ್ರ ತ್ರಾಸು. ಅದರಲ್ಲೂ ದುರ್ಗದಲ್ಲಿ ಮಳೆಯಾಗುವುದು ಕಡಿಮೆಯಾದ್ದರಿಂದ ಅವನಿಗಂತೂ ಸಂತೋಷವಾಗಿದೆ. ಮಳೆಯಾಯಿತೋ ಪುಸ್ತಕಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದ್ದಿಸಿ ಪುಸ್ತಕಗಳು ಹಾಳಾಗದಂತೆ ಕಾಪಾಡಲು ತಿಣುಕಾಡುವ ಪ್ರಭಾಕರನೆಂಬ ಏಕೈಕ ವ್ಯಕ್ತಿ ಮಾತ್ರ ಮಳೆಗೆ ಹಿಡಿಶಾಪ ಹಾಕುತ್ತಿರುತಾನೆ. ಅದವನ ಕಷ್ಟದ ಸೀಸನ್.

ಅವನೂ ಸರಕಾರಿ ಕಚೇರಿಯಲ್ಲಿ ಆಫೀಸರ್ ಆಗಬೇಕೆಂದು ಕನಸಿದ್ದವನೇ. ಆದರೆ ಪಿ.ಯು.ಸಿ. ಮುಂದೆ ದಾಟಲು ಬಿಡಲೇ ಇಲ್ಲ ವಯಸ್ಸಾದರೂ ಕೆಲಸ ಸಿಗಲಿಲ್ಲ. ಇಷ್ಟವಿಲ್ಲದಿದ್ದರೂ ಅಪ್ಪನ ಬೀದಿ ಬದಿಯ ಬುಕ್ ಸ್ಟಾಲ್ನ ಯಜಮಾನಿಕೆಯ ಕಡೆಗೆ ಖಾಯಂ ಆಯಿತು. ಬೆಳಗ್ಗಿನಿಂದ ಸಂಜೆಯವರೆಗೂ ಕೂರಲಾಗದೆ ಅಪ್ಪನನ್ನು ಕೂರಿಸಿ ಡ್ಯೂಟಿಗೆ ಚಕ್ಕರ್ ಹಾಕಿ ಮ್ಯಾಟ್ನಿ ಶೋಗೆ ಎದ್ದು ಬಿಡುತ್ತಿದ್ದ. ಅವನ ಖಯಾಲಿಗೆ ಬೇಸತ್ತ ಅವನಪ್ಪ ಅವನಿಗೊಂದು ಮದುವೆ ಮಾಡಿದ. ಹೆಂಡತಿಯ ಬೇಕು-ಬೇಡಗಳನ್ನು ಈಡೇರಿಸಿದರೆ ಮಾತ್ರ ಇಷ್ಟಾರ್ಥ ಸಿದ್ಧಿರಸ್ತು ಎಂದರಿವಾದ ಮೇಲೆಯೇ ತನ್ನ ಕಾಲವನ್ನೆಲ್ಲಾ ಪುಸ್ತಕ ವ್ಯಾಪಾರಕ್ಕೆ ಮೀಸಲಿಟ್ಟ. ಪ್ರಭಾಕರನ ಪಾಲಿಗೀಗ ಹೆಂಡತಿಯೇ ಮ್ಯಾಟ್ನಿ ಶೋ. ಬಿಸಿನೆಸ್ ಕಡೆ ನಿಗಾ ಕೊಟ್ಟ ಅಂವಾ ತರಾವರಿ ಪುಸ್ತಕಗಳನ್ನು ತೂಕದ ಮೇಲೆ ಕೊಂಡು ತಂದು ಗಿರಾಕಿಗಳ ಮೇಲೆ ತಂದೆಯಂತೆ ಸಿಡುಕದೆ ಚೌಕಾಸಿ ಮಾಡಿದಾಗ ಕಡಿಮೆ ಬೆಲೆಗೂ ಮಾರಿದ. ಓದುಗರ ಸಂಖ್ಯೆ ಕಡೆಮೆಯಾಗಿದೆ ಎಂದು ಹೌಹಾರಿ ಸಾಹಿತಿಗಳ ಭಾಷಣ ಕುಟ್ಟುವಾಗಲೂ ಅವನ ಪುಸ್ತಕಗಳಿಗೆ ಮಾತ್ರ ಓದುಗರ ಬರವಿಲ್ಲ. ಲೋಕಲ್ ಸಾಹಿತಿಗಳು ಖರ್ಚಾಗದ ತಮ್ಮ ಕವನ ಸಂಕಲನಗಳನ್ನು ತಂದು ಕೊಟ್ಟಾಗಲೂ ಆದರದಿಂದಲೇ ಸ್ವೀಕರಿಸಿದ.

ಗಿರಾಕಿಗಳಿಗೆ ಗೋಲ್ ಮಾಡಿ ಕೈಗಿಟ್ಟು ಅದರಲ್ಲಿ ಮೂವತ್ತು ಪರ್ಸೆಂಟಿನಷ್ಟು ಕಮಿಶನ್ ಮುರ್ಕೊಂಡು ಒಂದಿಷ್ಟು ಹಣ ಕವಿಗಳ ಕೈಗಿಟ್ಟು ಪ್ರೋತ್ಸಾಹಿಸುವಷ್ಟು ಔದಾರ್ಯವೂ ಅವನಲ್ಲಿತ್ತು. ಅಂಥ ಪುಸ್ತಕಗಳ ಸಾಲಿನಲ್ಲಿ ರಾಮನಾಥರ ಕಾದಂಬರಿಗಳು ಕಾಣಿಸಿಕೊಂಡಾಗ ಗಿರಾಕಿಗಳಿಗೆ ಅಚ್ಚರಿ. ಪುಸ್ತಕಗಳನ್ನು ಮಾರಾಟ ಮಾಡಲು ಪ್ರಭಾಕರ ಮಾಡುತ್ತಿದ್ದ ಸರ್ಕಸ್ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ಪ್ರೊಫೆಸರ್ ರಾಮನಾಥ ಈ ಊರಿನ ಸಾಹಿತಿಗಳು. ಅಕಾಡೆಮಿ ಬಹುಮಾನ ವಿಜೇತರು. ಅವರದೊಂದು ಕಾದಂಬರಿ ಸಿನಿಮಾ ಅಗಿದೆ. ವಿದೇಶದಲ್ಲೆಲ್ಲಾ ಸುತ್ತಿ ಬಂದೋರು ಎಂದೆಲ್ಲಾ ಗುಣಗಾನ ಮಾಡುತ್ತಾ ‘ನಮ್ಮೋರ ಅಭಿಮಾನ ಇರಬೇಕ್ರಿ’ ಎಂದು ಪೀಡಿಸುತ್ತ ಪಂಚಾಂಗ ಕೊಳ್ಳಲು ಬಂದವರನ್ನೂ ಬಿಡದೆ ಕೊಳ್ಳಿರೆಂದು ದುಂಬಾಲು ಬೀಳುತ್ತಿದ್ದ.

ರಾಮನಾಥರು ಸಾಹಿತಿಗಳಾದರೂ ಊರ ಜನಕ್ಕೆ ಅಪರಿಚಿತರೇ. ಅಲ್ಲದೆ ಅವರದ್ದು ಜನಪ್ರಿಯ ಇಂಗ್ಲೀಷ್ನ ಕಾದಂಬರಿಗಳನ್ನು ಅನುವಾದಿಸಿದವರು ಹಾಗೂ ಅನುವಾದಿತ ಕಾದಂಬರಿಯೊಂದಕ್ಕೆ ಸುಲಭವಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಅವರ ‘ನೆರಳು’ ಎಂಬ ಕಾದಂಬರಿ ನಿರ್ದೇಶಕ ಹರೀಶ್ ಮಾರ್ನಳ್ಳಿ ನಿರ್ದೇಶನದಲ್ಲಿ ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿದ್ದೂ ನಿಜ. ಆದರೆ ಆ ಚಿತ್ರ ಥಿಯೇಟರಿಗೆ ಬಾರದೆ ಡಬ್ಬಾದ ನೆರಳಿನಲ್ಲೇ ಇರೋದು ಅದನ್ನು ಸ್ವತಃ ರಾಮಮಾಥರೇ ಈವರೆಗೆ ನೋಡಿಲ್ಲವೆಂಬೋದು ಅಷ್ಟೇ ನಿಜ. ವಿದ್ಯಾವಂತ ಮಂದಿಗೆ ಅವರ ಬರಹದ ವ್ಯಾಲ್ಯೂ ಗೊತ್ತಿದ್ದಿತ್ತಾದರೂ ಸಾಮಾನ್ಯ ಓದುಗರಿಗವರು ಅರ್ಥವಾಗದ ನವ್ಯ ಚಿತ್ರ. ಆದರೇನಂತೆ ಪ್ರಭಾಕರನ ಮುಲಾಜಿಗೆ ಹಳ್ಳಿಗರೂ ಕೊಂಡುಕೊಳ್ಳತ್ತಿದ್ದುದುಂಟು. ಕೆಲವರಲ್ಲಿ ಪ್ರೊಫೆಸರ್ ತಮ್ಮ ಊರಿನವರೆಂಬ ಅಭಿಮಾನ ಟಿಸಿಲೊಡೆಯಲೂ ಕಾರಣವಾಗಿದ್ದ. “ಓದಿ ನೋಡ್ರಿ ಸ್ವಾಮಿ… ಚೆನ್ನಾಗಿಲ್ಲ ಅಂದ್ರಿ ರೊಕ್ಕ ವಾಪಸ್” ಅನ್ನುತ್ತಿದ್ದ. ಅವರೇನು ವಾಪಸ್ ತಂದುಕೊಡುತ್ತಿರಲಿಲ್ಲ. ಯಾಕೆಂದರೆ ಅವರದನ್ನು ಓದುವ ಗೋಜಿಗೇ ಹೋಗುತ್ತಿರಲಿಲ್ಲ. ತಮ್ಮ ಪುಸ್ತಕಗಳ ಮಾರಾಟದ ಹಣದಿಂದಲೇ ಪ್ರೊಫೆಸರ್ ಜೀವನ ನಿರ್ವಹಿಸುವಷ್ಟು ದರಿದ್ರರಲ್ಲ. ಅದು ಪ್ರಭಾಕರನಿಗೂ ಗೊತ್ತು. ಆದರೆ ಆವರೀಗ ನಿವೃತ್ತರಾಗಿದ್ದಾರೆಂಬ ಮರುಕ ಅವನಲ್ಲಿತ್ತು. ಪ್ರಾಂಶುಪಾಲರಾಗಿ ಅವರು ಸಾಹಿತಿಯಾಗಿ ಹೆಸರು ಮಾಡಿದವರು. ನಿವೃತ್ತಿ ಯಾವಾಗ ಶಾಪವಾಗುತ್ತದೆಂದರೆ ಹೆಣ್ಣುಮಕ್ಕಳು ಮದುವೆಗೆ ಬಂದು ನಿಂತಿವೆ, ಗಂಡು ಹುಡುಗರ ವಿದ್ಯಾಭ್ಯಾಸ ಮುಗಿದಿಲ್ಲವೆಂದಾದಾಗ ಅಭದ್ರತೆ ಕಾಡುವುದು ಸಹಜ. ಆದರೆ ರಾಮನಾಥರ ಇಬ್ಬರು ಗಂಡು ಮಕ್ಕಳು ವಿದೇಶದಲ್ಲಿ ಇಂಜಿನೀಯರ್ಸ್ ಇನ್ನೊಬ್ಬ ಮಗಳನ್ನು ಡಾಕ್ಟರಿಗೆ ಕೊಟ್ಟಿದ್ದಾರೆ. ಹೀಗಾಗಿ ಹೆಂಡತಿಯೊಂದಿಗಿನ ಕಾಲಹರಣ ಮಾತ್ರ ಅವರಿಗೆ ಶಾಪವಾಗಿದೆ. ತಂದೆಯ ಒತ್ತಾಯಕ್ಕೆ ದುರ್ಗದಲ್ಲಿಯೇ ಬಂಗಲೆ ಕಟ್ಟಿಸಿದ್ದರಿಂದಲೂ ಕಾಸ್ಟ್ ಆಫ್ ಲಿವಿಂಗ್ ಕಡಿಮೆ, ಪ್ರಶಾಂತವಾದ ಸ್ಥಳವೆಂತಲೂ ನಂಬಿದ್ದರಿಂದ ಅವರಲ್ಲಿಗೆ ಬಂದು ಸೆಟ್ಲ್ ಆಗಿದ್ದರು. ಒಂಟಿತನ ಅವರನ್ನು ಭಾದಿಸಹತ್ತಿತ್ತು. ಬೆಳಿಗ್ಗೆ ವಾಕ್, ಸ್ನಾನ ಮುಗಿಸಿ ಪೇಪರ್ಗಳನ್ನೆಲ್ಲ ತಿರುವಿ ಎಸೆದರೆ ಊಟದ ಸಮಯಕ್ಕಾಗಿ ಕಾಯಬೇಕು. ಸಂಜೆ ಮತ್ತದೇ ಬ್ರಿಸ್ಕ್ ವಾಕ್ ನೋ ಟಾಕ್. ತಿಂಗಳೊಪ್ಪತ್ತಲ್ಲೇ ಜಿಗುಪ್ಸೆ ಕಾಡಿತ್ತು ಅವರಲ್ಲಿ ಪುನಃ ಜೀವನೋತ್ಸಾಹ, ಲವಲವಿಕೆ ತುಂಬಿದ್ದವನೇ ಪ್ರಭಾಕರನೆಂದರೆ ಯಾರೂ ನಂಬಲಿಕ್ಕಿಲ್ಲ.

ಪ್ರೊಫೆಸರ್ ಹಣ ಪಡೆಯಲು ಕೆನರಾ ಭ್ಯಾಂಕ್ಗೆ ಬಂದಾಗೊಮ್ಮೆ ಬೀದಿ ಬದಿಯ ಪುಸ್ತಕದ ಅಂಗಡಿಯ ಬಳಿ ಹೊತ್ತು ಕಳೆಯಲು ನೋಡುತ್ತಾ ನಿಂತರು. ಅಲ್ಲಿನ ವುಸ್ತಕಗಳನ್ನು ನೋಡುತ್ತಾ ಹೋದಂತೆ ಸಾಹಿತ್ಯದಲ್ಲಿ ಇಂಥದ್ದೂ ಇರುತ್ತದಾ! ಇಂಥದ್ದನ್ನೆಲ್ಲಾ ಸಾಹಿತ್ಯವೆಂದು ಪರಿಗಣಿಸಲಿಕ್ಕುಂಟಾ ಎಂಬ ಕಾಡುತ್ತಿರುವಾಗಲೇ ಪ್ರಭಾಕರ ಪಿಳಿಪಿಳಿಸುತ್ತಾ ಮಾತಿಗೆಳೆದಿದ್ದ. “ಸಾ ತಾವು ಪ್ರೊಫಸರ್ ರಾಮನಾಥರಲ್ವೆ ಸಾ?” ರಾಮನಾಥರಿಗೆ ಆಶ್ಚರ್ಯ. ತಲೆಯಾಡಿಸಿ ಸ್ಟೈಲಿಷ್ ಆಗಿ ಕನ್ನಡಕವನ್ನು ಸರಿ ಪಡಿಸಿಕೊಂಡರು. ‘ತಾವು ಯಾರಿಗೆ ಗೊತ್ತಿಲ್ಲಾ. ಫೇಮಸ್ ಕಾದಂಬರಿಕಾರರು. ಮೇಲಾಗಿ ಒಂದು ಕಾದಂಬರಿ ಸಿನಿಮಾ ಆಗಿ ಅವಾರ್ಡ್ ಹೊಡೆದೈತೆ’. ರಾಮನಾಥರಿಗೀಗ ಪರಮಾಶ್ಚರ್ಯ. ತಾನು ಕಾದಂಬರಿಕಾರನೆಂದು ಇಂಥ ಬೀದಿ ಬದಿಯ ವ್ಯಾಪಾರಿಗೆ ತಿಳಿಯುವಷ್ಟೇ ಪಾಪ್ಯೂಲರ್ರಾ ಎಂದವರಿಗೆ ಒಳಗೇ ಕೋಪ. ಜನಪ್ರಿಯ ಸಾಹಿತಿ ಎಂದೊಪ್ಪಿಕೊಳ್ಳುವುದು ಘನತೆಗೆ ಕುಂದೆಂದು ಭಾವಿಸಿದ್ದ ಅವರು ಮೋರೆ ಗಂಟಿಕ್ಕಿ ದಿಟ್ಟಿಸಿದರು. ಎಂದೋ ನೋಡಿದ ಮುಖ! ‘ನಂದು ಗುರತು ಹತ್ತಲಿಲ್ವೆ ಸಾ?’ ಪ್ರಭಾಕರ ತನ್ನ ಕುರುಚಲು ಬಿಳಿಗಡ್ಡ ಕೆರೆದುಕೊಂಡ. ಕಪ್ಪಗೆ, ಗಿಡ್ಡಕ್ಕೆ ಕೊಳಕು ಕೊಳಕಾಗಿದ್ದ ವ್ಯಕ್ತಿಗೆ ತಾನ್ಹೇಗೆ ಗೊತ್ತಿರಲು ಸಾಧ್ಯ? ಅದರಲ್ಲೂ ತತ್ರಾಪಿ ಇಂಥ ಊರಲ್ಲಿ ತಕ್ಷಣ ಕೋಪ ಬಂತು.

“ಯಾರಯ್ಯ ನೀನು?” ಶಿಕ್ಷೆ ವಿಧಿಸುವ ಜಡ್ಜನಂತೆ ಕೆಕ್ಕರಿಸಿದರು.
“ಅಯ್ಯೋ ನಾನ್ ಸಾ! ನಿಮ್ಮ ಕ್ಲಾಸ್ಮೇಟು. ಪಿಯುಸಿಯಲ್ಲಿ ನಾನು ಡುಮ್ಕಿ ಹೊಡ್ದೆ ಓದು ತಲೆ ಹತ್ತಲಿಲ್ಲ ಅಪ್ಪನ ಕಸುಬು ಶುರು ಹಚ್ಕೊಂಡೆ… ಆದರೂ ಪುಸ್ತಕಗಳು ನನ್ನ ಕೈ ಬಿಡಲಿಲ್ಲ. ತಾವು ಕಷ್ಟ ಪಟ್ಟು ಓದಿದಿರಿ… ದೊಡ್ಡೋರಾದ್ರಿ” ಅವನು ಹೇಳುತ್ತಲೇ ಹೋದ. ಇಂವಾ ಯೂರಿರಬಹುದು ಎಂದು ಪ್ರೊಫಸರ್ ನಲವತ್ತು ವರ್ಷಗಳಷ್ಟು ಹಿಂದಕ್ಕೆ ಓಡಿತು.

“ಅದೇ ಸಾ ನಾನ್ಸಾ ಇಬ್ಬರೂ ಸೇರಿ ಶೆಟ್ಟರ ಹುಡ್ಗಿ ವಿಶಾಲೂಗೆ ಲೈನ್ ಹೊಡಿತಿದ್ವಲ್ಲ. ‘ಆವಳು ನನ್ನ ಪ್ರಾಪರ್ಟಿ ಕಣೋ ಹುಪಾರ್’ ಅಂತ ಧಮ್ಕಿ ಹಾಕಿದ್ರಿ, ಅದೇ ಪ್ರಭಾಕರ ಸಾ… ಕೋಪ ಬಂದರೂ ಸೈರಣಿಗೆಡದೆ ಮುಗುಳ್ನಕ್ಕರು ಪ್ರೊಫೆಸರ್.

“ಐ ಸೀ… ಅದೇ ಎಮ್ಮೆಕರಾನೋ ನೀನು!” ಅವರು ಗುರುತಿಸಿದಾಗ ಇವನಿಗೆ ಸ್ವರ್ಗ ಮೂರೇ ಗೇಣು.

“ಒಂದ್ ಮಿನಿಟ್ ಕೂರ್ರಿ ಸಾ… ಟೀ ತರಸ್ತೀನಿ” ತನ್ನ ಟ್ರಂಕಿನ ಪಕ್ಕದಲ್ಲಿ ಮಡಚಿಟ್ಟಿದ್ದ ವಿ‌ಐಪಿಗಳಿಗೆ ಮಾತ್ರ ಹಾಕುತ್ತಿದ್ದ ಕಬ್ಬಿಣದ ಚೇರನ್ನು ಬಿಡಿಸಿ ಕರವಸ್ತ್ರದಿಂದ ಧೂಳು ಜಾಡಿಸಿದ.

“ಪರ್ವಾಗಿಲ್ಲ ಬಿಡಯ್ಯ” ಅಂದ ಪ್ರೊಫಸರ್ ಮೋರೆ ಗಂಟಾಯಿತು. “ಸಾರಿ ಸಾ..” “ತಮ್ಮಂಥವರು ಇಲ್ಲೆಲ್ಲಾ ಕೂರೋದುಂಟಾ… ಆದ್ರೂ ಫ್ರೆಂಡನ್ನ ಮರೆತಿಲ್ಲವಲ್ಲ. ಕಾದಂಬರಿಕಾರ ರಾಮನಾಥರು ನನ್ನ ಫ್ರೆಂಡು ಅಂತ ಹೇಳಿಕೊಳ್ಳೋ ಭಾಗ್ಯವಾದರೂ ನನಗೆ ಸಿಗ್ತಲ್ಲ.. ಅದೇ ನನಗೆ ಹೆಮ್ಮೆ ಸಾ” ಅವನು ಬೀಗಿದ.

“ಯಾವುದಾದರೂ ಬುಕ್ ಬೇಕ ಸಾ?” ಎಂದ. ರಾಮನಾಥರದ್ದು ಮೌನ. ಹೀಗೆ ಶುರುವಾದ ಸ್ನೇಹವನ್ನು ರಾಮನಾಥರು ತಲೆಗೆ ಹಚ್ಚಿಕೊಳ್ಳಲಿಲ್ಲವಾದರೂ ಪ್ರಭಾಕರ ಬಿಡಬೇಕಲ್ಲ. ಪೇಟೆಗೆ ಬಂದ ರಾಮನಾಥರನ್ನು ಕಂಡೊಡನೆ -“ಸಾ ಬರ್ರಿ ಸಾ” ಎಂದು ಕೂಗಿ ಕರೆಯುತ್ತಿದ್ದ. ಗಿರಾಕಿಗಳಿಗೆ ಹೆಮ್ಮಯಿಂದ ಪರಿಚಯಿಸುತ್ತಿದ್ದ. ಅಂಗಡಿಯನ್ನು ಯಾರಿಗೋ ಒಪ್ಪಿಸಿ ದೊಡ್ಡ ಹೋಟೆಲ್ಗೆ ಕರೆದೊಯ್ದು ತಿಂಡಿ ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿದ್ದ. ಅವನದು ಅತಿ ಸ್ನೇಹ. ಆದರೆ ರಾಮನಾಥರೆಂದೂ ಸಲುಗೆ ತೋರಲಿಲ್ಲ. ಅವನೂ ‘ಸಾ’ ಎನ್ನದೆ ಬಾಯಿ ತೆರೆದವನಲ್ಲ. ರಾಮನಾಥ ಶುಗರ್ಲೆಸ್ ಕಾಫಿ ಕುಡಿಯುವಾಗ ಇವನಿಗೆ ಸಂಕಟ.

“ತಮ್ಮಂಥವರಿಗೆ ಶುಗರ್ರಾ… ಯಾಕ್ಸಾ ಬಂತು ಬಡ್ಡೀ ಮಗಂದು? ನಮ್ಮಂಥವರಿಗಾದ್ರೂ ಖಾಯಿಲೆ ಬರಬಾರದಿತ್ತೆ ಸಾ…” ಅವನು ಅಲವತ್ತುಕೊಳ್ಳುವಾಗ ಅವರ ಗಂಟು ಮೋರೆಯಲ್ಲೂ ನಗು.

“ಅದೇ ಕಣಯ್ಯಾ ದೇವರ ಆಟ. ಮೊದಲು ತಿನ್ನೋಕೆ ದುಡ್ಡಿರಲಿಲ್ಲ ಬಡತನ ಕಿತ್ತು ತಿನ್ನೋದು. ಈಗ ದುಡ್ಡಿದೆ. ತಿನ್ನೋಕೆ ದಿನವೂ ರಾಗಿಮುದ್ದೆ ತಿನ್ನಬೇಕಪ್ಪಾ” ನಿಡುಸುಯ್ದರು. ಬಿಳಿಗಡ್ಡ ಕೆರೆದುಕೊಂಡ ಪ್ರಭಾಕರ.

“ನಾವು ಹುಟ್ಟಿದಾಗ್ನಿಂದ ಅದ್ನೇ ತಿಂತಾ ಇರೋದು ಸಾ. ಅದಕ್ಕೆ ನಾನೇಳಿದ್ದು ನಮ್ಮಂಥೋರಿಗಾದ್ರೂ ಖಾಯಿಲೆ ಬರಬಾರ್ದಾ… ಬೇಕಾದ್ದು ತಿಂದು ಈ ವಯಸ್ಸಿನಾಗೂ ಅರಗಿಸಿಕೊಳ್ಳೋ ಸಗ್ತಿ ಐತ್ ಸಾ.. ಆದರೆ ದುಡಿಮೇನೆ ಇಲ್ವೆ. ನಾನು ನನ್ನ ಹೆಂಡ್ತಿ ಮಗಳು ಮೂವರ ಹೊಟ್ಟೆ ತುಂಬಬೇಕು. ನಂಗೋ ತಿನ್ನೋ ಚಪಲ… ಅದ್ಕೆ ಮದುವೆ ಮನೆದಾದ್ರೇನು. ತಿಥಿ ಊಟವಾದ್ರೇನು. ಒಂದ್ಕೂ ಮಿಸ್ ಮಾಡಿಕೊಳ್ಳೂಲ್ಲ” ಅವನು ಮುಸಿ ಮುಸಿ ನಕ್ಕರೂ ರಾಮನಾಥ ನಗಲಿಲ್ಲ. ಅವರೇನೋ ಚಿಂತೆಯಲ್ಲಿ ಮುಳುಗಿದ್ದರು. ಅವರಿಗೆ ಶುಗರ್ ಜತೆ ಬಿಪಿ, ಹಾರ್ಟ್ ಟ್ರಬಲ್, ಪೈಲ್ಸ್, ಗ್ಯಾಸ್ಟ್ರಿಕ್ ಏನೆಲ್ಲಾ ರೋಗಗಳಿದ್ದವು. ಪುಟ್ಟ ಮೆಡಿಕಲ್ ಸ್ಟೋರೇ ಮನೆಯಲ್ಲಿತ್ತು. ಅದನ್ನೆಲ್ಲ ಹೇಳಿಕೊಳ್ಳಲು ಪ್ರೆಸ್ಟಿಜ್ ಬಿಡಲಿಲ್ಲ. ಪ್ರಭಾಕರ ಆರೋಗ್ಯವಂತ, ಗಟ್ಟಿಮುಟ್ಟಾದ ದೇಹ, ಸುಖಾಸುಮನೆ ಗೊಳ್ಳನೆ ನಗುವ ಪರಿ, ಆಕರ್ಷಿಸುವ ಮಾತುಗಾರಿಕೆ, ಲವಲವಿಕೆ. ಅವರಲ್ಲಿ ಒಳಗೇ ಅಸೂಯೆ ಹೆಡೆಯಾಡಿತು. “ದೊಡ್ಡಮನುಷ್ಯರಿಗೆ ಕಣಯ್ಯ ಕಾಯಿಲೆ ಬರೋದು” ಅದರಲ್ಲೇ ದೊಡ್ಡಸ್ತಿಕೆ ತೋರಿದರು. ಅವನೇ ಈ ಊರಿನ ಮೊದಲ ಮಿತ್ರನಾಗಿದ್ದರಿಂದ ಆಗಾಗ ಪೇಟೆಗೆ ಬಂದಾಗ ಅವನ ಅಂಗಡಿ ಬಳಿ ನಿಲ್ಲುತ್ತಿದ್ದರು. ಅವನ ಸಡಗರ ಸಿಕ್ಕವರಿಗೆಲ್ಲಾ ಪರಿಚಯಿಸುವ ಹುಂಬತನ ಮಾತ್ರ ನುಂಗಲಾರದ ಬಿಸಿ ತುಪ್ಪ. ಆದರೆ ಅವರಿಗೊಂದು ‘ರಿಕಗ್ನಿಶನ್’ ದೊರಕಿಸಿಕೊಟ್ಟವನೇ ಪ್ರಭಾಕರ. ಅವನ ಮಾತು ಪಬ್ಲಿಸಿಟಿಯಿಂದಾಗಿ ಪ್ರೊ.ರಾಮನಾಥ್ ನಮ್ಮೂರಿನ ಕಾದಂಬರಿಕಾರ ಎಂಬುದು ಪುಡಿ ಸಾಹಿತಿಗಳಿಗೆ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ, ಮಠ ಮಾನ್ಯಗಳಿಗೆ ಸಾಹಿತ್ಯಿಕ ಕಾರ್ಯಕ್ರಮಗಳನ್ನಿಟ್ಟುಕೊಂಡು ಅತಿಥಿಗಳಿಗಾಗಿ ಪರದಾಡುವ ಸಾಹಿತ್ಯಾಭಿಮಾನಿಗಳಿಗೆ ಮುಟ್ಟಿತು, ತಟ್ಟಿತ್ತು. ಪ್ರೊಫೆಸರ್ ಬಂಗಲೆಗೆ ಜನ ಬರುವಂತಾದರು. “ಸಾರ್, ತಾವು ನಮ್ಮ ಊರಿನವರೆಂಬುದು ಹೆಗ್ಗಳಿಕೆ ವಿಷಯ ಸಾರ್. ಪ್ರಭಾಕರ ಹೇಳಿದಾಗ ನಂಬೋಕೆ ಆಗ್ಲಿಲ್ಲ ಸಾರ್” ಅನ್ನೋರೆ ಜಾಸ್ತಿ. “ಸಾರ್ ದಯಮಾಡಿ ಪುಸ್ತಕ ಬಿಡುಗಡೆ ಮಾಡ್ಬೇಕು ಸಾರ್. ತಾವೇ ಅಧ್ಯಕ್ಷತೆ ವಹಿಸಿ ಪ್ರೊಫೆಸರ್… ನಮ್ಮ ಫಂಕ್ಷನ್‍ಗೆ ತಾವೇ ಚೀಫ್ ಗೆಸ್ಟ್ ಆಗಲ್ಲ ಅನ್ಬೇಡಿ. ನನ್ನ ಹೆಸರು ಹೇಳಿ, ಒಪ್ಕೋತಾರೆ ಅಂದಿದಾನೆ ಸಾರ್ ಪ್ರಭಾಕರ” ಹುಡುಕಿ ಬರುವ ಮಂದಿಯ ಸಂಖ್ಯೆ ಏರಿತು. ಇದೀಗ ಊರಿನ ಎಲ್ಲಾ ಕಾರ್ಯಕ್ರಮಗಳಲ್ಲೂ ರಾಮನಾಥರು ಇರಲೇ ಬೇಕೆಂಬಂತಾಯಿತು. ಅವರೂ ಒಳ್ಳೆಯ ವಾಗ್ಮಿ, ವಿಚಾರವಾದಿಗಳಾದ್ದರಿಂದ ಅವರನ್ನು ಆರಾಧಿಸುವ ಯುವಕ-ಯುವತಿಯರ ಗುಂಪೂ ಬೆಳೆಯಿತು. “ರವಷ್ಟು ಸಿಡುಕು ಆನ್ನೋದು ಬಿಟ್ಟರೆ ಪ್ರೊಫೆಸರ್ ತೂಕದ ಮನುಷ್ಯ” ಎಂದು ಹಿರಿಯವರ ಮೆಚ್ಚಿಕೆಗೂ ಪಾತ್ರರಾದರು. ಝೆನ್ ಕಾರು ಇದ್ದರೂ ಆರೋಗ್ಯದ ಸಲುವಾಗಿ ಅವರು ನಡೆದಾಡುವುದೂ ಸರಳತೆಯ ಪ್ರತೀಕವೆಂದೇ ಪಬ್ಲಿಸಿಟಿ ಗಿಟ್ಟಿಸಿತು. ಪ್ರೊಫೆಸರಿಗೆ ಸನ್ಮಾನಗಳೂ ಆದವು.

ಇಂಥ ಸಂತೋಷದ ಸುಮಯದಲ್ಲೇ ಪ್ರಭಾಕರ ಅದರ ಪುಸ್ತಕಗಳಗೆ ಗಂಟು ಬಿದ್ದಿದ್ದ. ಮನೆಯಲ್ಲಿ ಧೂಳು ತಿನ್ನುತ್ತಿದ್ದ ಒಂದಷ್ಟು ಪುಸ್ತಗಳನ್ನು ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ತಂದು ಒಮ್ಮೆ ಅವನ ಅಂಗಡಿ ಮುಂದೆ ಸುರಿದಿದ್ದರು. “ನೋಡಯ್ಯಾ ನಾನು ಪಕ್ಕಾ ಕಮರ್ಷಿಯಲ್ ಪರ್ಸನ್. ಪುಸ್ತಕ ಸೇಲ್ ಮಾಡಿ ಬಂದ ಹಣವನ್ನು ತಪ್ಪದೇ ಕೊಡಬೇಕು. ಬಿ ಕೇರ್‌ಫುಲ್” ಅಂದಿದ್ದರು. ಅವರೂ ಯಾವತ್ತೂ ದಾಕ್ಷಿಣ್ಯಕ್ಕೆ ದಾಸರಾದವರಲ್ಲ. ಜಿಪುಣತನ ಅವರಿಗೆ ಬಡತನ ಹೇಳಿಕೂಟ್ಟ ಪಾಠವಾಗಿತ್ತು ಅಂತೆಯೇ ನೇರ ನುಡಿ. ಈಗಂತೂ ಒಪ್ಪಿಗೆಯಾದ ಸಮಾರಂಭ, ಸಭೆಗಳಿಗೆ ಮಾತ್ರ ಹೋಗುತ್ತಿದ್ದರು. ಈಗಲೂ ಅವರು ಒಂಟಿ. ಅಷ್ಟೊಂದು ತರಾವರಿ ಕಾಯಿಲೆಗಳ ನಡುವೆಯೂ ಸಂಜೆ ಐಶ್ವರ್ಯ ಪೋರ್ಟ್ ಕಡೆ ಹೋಗಿ ಎರಡು ಪೆಗ್, ಚಿಲ್ಲಿ ಚಿಕನ್ ಮುಗಿಸಿ ಮನೆ ಸೇರಿ ಬೊಗಸೆಗಟ್ಟಲೆ ಮಾತ್ರೆಗಳನ್ನು ಗುಳುಂ ಮಾಡುತ್ತಿದ್ದರು. ಹೆಂಡತಿ ಬಳಿಯೂ ಬಿಡು ಬೀಸಾಗಿ ವರ್ತಿಸಿದವರಲ್ಲ. ಬೇಕೆಂದಾಗ ತೊಟ್ಟು ಆನಂತರ ಹ್ಯಾಂಗರ್ಗೆ ಅಲಂಕಾರಿಕವಾಗಿ ನೇತು ಹಾಕುವ ಸೂಟು-ಬೂಟು-ಟಾಯ್ ನಂತೆ ಹೆಂಡತಿಯೂ ಅವರಿಗೊಂದು ಶೋಭಾಯಮಾನ ವಸ್ತು. ಇಂಥ ವ್ಯವಹಾರಿಕ ಮನುಷ್ಯನಾದ ತನ್ನನ್ನು ಪ್ರಭಾಕರನೆಂದೂ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾನೆಂದು ಆಲೋಚಿಸಿದವರಲ್ಲ. ಆದರೆ ಹಾಗಾಯಿತಲ್ಲ! ಅವನಾದರೂ ಮಾಡಿದ್ದಿಷ್ಟೇ – “ಹೆಂಡತಿಗೆ ಅಪೆಂಡಿಕ್ಸ್ ಅಂತೆ ಸಾ-ನೆಕ್ಸ್ಟ್ ಆಪರೇಷನ್ ಆಗಬೇಕಂತವರೆ… ಒಂದು ಸಾವಿರ ರೂಪಾಯಿ ಕೈಗಿಡಬೇಕಾಗಿತ್ತು. ಸಾ, ನೆಕ್ಸ್ಟ್ ಮಂಥ್ ಗ್ಯಾರಂಟಿ ರಿಟರ್ನೂ ಸಾ” ಅಲವತ್ತುಕೊಂಡ.

“ಅದಕ್ಕೆಲ್ಲಾ ಯಾಕಯ್ಯ ದುಡ್ಡು? ಸರಕಾರಿ ಆಸ್ಪತ್ರೆನಲ್ಲಿ ತೋರ್ಸು” ಗದರಿದರು ರಾಮನಾಥ್.

“ಸರಕಾರಿ ಆಸ್ತತ್ರೇನೇ ಸಾ…ಲಂಚ ಕೇಳ್ತಾ ಅವರೆ” ಇವನೆಂದ.
“ಸರಿ ಸರಿ” ಅಂದ ಪ್ರೊಫಸರ್ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಮತ್ತೆ ಆ ಕಡೆ ತಲೆ ಹಾಕಲಿಲ್ಲ. ಪೆನ್ಷನ್ ಹಣವನ್ನು ಯಾರೋ ಒಬ್ಬ ಮರಿ ಸಾಹಿತಿ ತಂದು ಕೊಡುತ್ತಿದ್ದ. ಅವರಂತೂ ಪ್ರಭಾಕರನನ್ನು ಸಂಪೂರ್ಣ ಮರೆತುಬಿಡುತ್ತಿದ್ದರೇನೋ? ಅವರ ಪುಸ್ತಕಗಳು ಅವನ ಬಳಿ ಇದ್ದುದರಿಂದ ಆಗಾಗ ನೆನಪಾಗುವ ಅವನು ಅವರ ಬಿಪಿ ಏರಿಸುವಷ್ಟು ಕೆಡುಕೆನಿಸಿತ್ತು.

ಆದರೆ ಪ್ರಭಾಕರ ಮಾತ್ರ ಶಬರಿಯಂತೆ ದಿನವೂ ಅವರಿಗಾಗಿ ಕಾದ. ಆಪರೇಶನ್ ಆದ ಹೆಂಡತಿ ಪಕ್ಕ ಕೂತು ತಲೆ ತೂರಿಸಿಕೊಂಡ. ಮನೆಗೇ ಹೋಗಲೇ ಎಂದುಕೊಂಡರೂ ದೂರ್ವಾಸ ಮುನಿ ಎಂಬ ಅಂಜಿಕೆ. ತಿಂಗಳುಗಳಾದವು, ಪುಸ್ತಕದ ಅಂಗಡಿ ಎತ್ತಿಕೊಂಡು ರಾತ್ರಿ ಮನೆಗೆ ಬಂದಾಗ ಹೆಂಡತಿ ನೋವೆಂದು ಕಂಗಾಲಾಗಿದ್ದಳು. ಪ್ರಭಾಕರ ಅವಳೊಡನೆ ಗಾಬರಿಯಿಂದ ಆಟೋ ಏರಿದ. ಆಸ್ತತ್ರೆಯಲ್ಲಿ ಚಕ್‌ಅಪ್ ಮಾಡಿ ಸೂಜಿ ಚುಚ್ಚಿದ ಡಾಕ್ಟರ್ “ನಥಿಂಗ್ ಟು ವರಿ” ಅಂದರು. ಆಗಲೇ ಅಲ್ಲಿಗೆ ಸೀರಿಯಸ್ ಕೇಸೊಂದು ಎಮರ್ಜೆನ್ಸಿಗೆ ಬರಬೇಕೆ? ಗಾಬರಿಗೊಂಡ ರೋಗಿಯ ಹೆಂಡತಿ ಒಂದೇ ಸಮನೆ ರೋದಿಸುತ್ತಿದ್ದಳು. ಕುತೂಹಲದಿಂದ ನೋಡಿದ, ರೋಗಿಗೆ ಎಚ್ಚರವಿಲ್ಲ “ಸಿವಿಯರ್ ಹಾರ್ಟ್ ಅಟ್ಟಾಕ್ ಆಗಿದೆಯಮ್ಮ ಈ ಇಂಜೆಕ್ಷನ್ ಆರು ಸಾವಿರ ಆಗುತ್ತೆ” ಡಾಕ್ಟರರ ಸೂಚನೆ. “ರಾತ್ರಿ ಎಲ್ಲಿಂದ ಹಣ ತರ್ಲಿ? ಮನೆಯಲ್ಲೂ ಅಷ್ಟಿಲ್ಲ ನೀವೇ ಏನಾದ್ರೂ ಮಾಡ್ರಿ” ಆಕೆಯ ಗೋಳಾಟ. “ಊರಿಗೆ ಹೊಸಬರು. ಅಷ್ಟಾಗಿ ಯಾರ ಪರಿಚಯವೂ ಇಲ್ಲ ಡಾಕ್ಟರ್” ಆಕೆ ಚಿಪ್ಪಿನಲ್ಲಿ ಹುದುಗಿದ ಆಮೆಯಂತಾದಳು. “ಯಾಕಿಲ್ಲ ನಾನಿದೀನಿ ಕಣಮ್ಮ” ಎಂದವನೇ ಪ್ರಭಾಕರ ಡಾಕ್ಟರ್ ಕೈಲಿದ್ದ ಪ್ರಿಸ್ಕಿಪ್ಶನ್ ಚೀಟಿ ಕಿತ್ತುಕೊಂಡು ಓಡಿದ. ಆಕೆಗೆ ಸುತ್ರಾಂ ನಂಬಿಕೆ ಇಲ್ಲ ಕೊಳಕಾಗಿದ್ದ ಅಂವಾ ತಂದಾನೆ ಎಂದು ಪರಿತಪಿಸುವಾಗಲೇ ಅಂವಾ ಏದುಸಿರು ಬಿಡುತ್ತಾ ಇಂಜೆಕ್ಷನ್ ತಂದೊಪ್ಪಿಸಿದ. “ಅಷ್ಟೊಂದು ಹಣಕ್ಕೆ ಏನ್ ಮಾಡಿದ್ರಿ?” ಕೃತಜ್ಞತೆಯಿಂದ ಪ್ರೊಫೆಸರರ ಹೆಂಡತಿ ಅವನತ್ತ ನೋಡಿದಳು. “ಸಾಲ ಮಾಡ್ದೆ. ಈ ಊರೇ ನಂದು. ನನ್ಗೆ ಯಾರಮ್ಮ ಇಲ್ಲ ಅಂತಾರೆ. ಧೈರ್ಯವಾಗಿರಿ ದೇವರಿದಾನೆ” ಸಾಂತ್ವಾನಿಸಿದ. ಮೂರು ದಿನದಲ್ಲಿ ಚೇತರಿಸಿಕೊಂಡ ರಾಮನಾಥ ತನ್ನ ಹೆಂಡತಿಯು ಮಕ್ಕಳಿಗೆ ಸುದ್ದಿ ತಿಳಿಸಿಲ್ಲವೆಂದಾಗ ಸಮಾಧಾನಗೊಂಡರು. “ಡಾಕ್ಟರ್ ಔಟ್ ಆಫ್ ಡೇಂಜರ್ ಅಂದರು ಕಣ್ರಿ… ಅದಕ್ಕೆ ಯಾರಿಗೂ ತಿಳಿಸಲಿಲ್ಲ” ಹೆಂಡತಿ ವಿವರಿಸಿದಳು.

“ದುಡ್ಡಿಗೆ ಏನ್ಮಾಡ್ದೆ?” ಅವರ ಮೊದಲ ಪ್ರಶ್ನೆ.

“ಅದ್ಯಾರೋ ಪುಣ್ಯಾತ್ಮರು ಸಹಾಯ ಮಾಡಿದರು ಕಣ್ರಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ನಲ್ಲಿರೋ ಹಣ ನಿಮ್ಮನ್ನೇನು ಉಳಿಸ್ತಾ ಇರಲಿಲ್ಲ” ಮುನಿದಳಾಕೆ.

“ಸರಿ ಸರಿ… ಯಾರವರು?” ಪ್ರೊಫಸರ್ರ ಕಣ್ಣ ಮುಂದೆ ತಮ್ಮ ಸಿರಿವಂತ ಮಿತ್ರರು, ಸಾಹಿತ್ಯ ಬಳಗದವರು ಹಾದು ಹೋದರು. “ಆತನ ಹೆಸರೂ ನಂಗೊತ್ತಿಲ್ಲಾರೀ… ಮೂರು ದಿನಗಳಿಂದ ನನ್ನ ಊಟ, ನಿಮ್ಮ ಗಂಜಿ ಎಲ್ಲಾ ಆತನ ಮನೆಯಿಂದ್ಲೆ ಬರ್ತಾ ಇದೆ”

“ಹೆಸುರು ಗೊತ್ತಿಲ್ಲವೋ? ಅವನಿಗೆ ಹೆಸರೇ ಇಲ್ಲವೋ” ಅವರ ‘ಈಗೋ’ಗೆ ಪೆಟ್ಟಾಯಿತು. ಸಣ್ಣಗೆ ನರಳಿದರು. ಆಗಲೇ ಪ್ಲಾಸ್ಕ್ ಹಿಡಿದ ಪ್ರಭಾಕರ ಒಳಬಂದ. “ರೀ… ಇವರೇ ಕಂಡ್ರಿ ದೇವರಂತೆ ಬಂದು ಕಾಪಾಡಿದರು” ಹೆಂಡತಿ ಉದ್ವೇಗದಿಂದ ಹೇಳುವಾಗ ಪ್ರೊಫೆಸರ್ ವಿಸ್ಮಯ ಬೆರೆಸಿ ನೋಡಿದರು.

“ಅಯ್ ನಾನ್ಸಾ ನಿಮ್ಮ ಪ್ರಭಾಕರಾ…” ಕೈ ಮುಗಿದ ಅವನ ಕಣ್ಣುಗಳಲ್ಲಿ ನೀರಾಡಿತು.

“ಸಾ, ತಮ್ಮ ಪುಸ್ತಕ ಮಾರಿದ ದುಡ್ಡು ಎಲ್ಡು ಸಾವಿರ ಐತೆ. ತಮ್ಮತಾವೇನು ಕಮಿಶನ್ ಮುರ್ಕೊಂಡಿಲ್ಲ ತಗಳಿ ಕಷ್ಟಕ್ಕೆ ಆಯ್ತದೆ” ಫ್ರಭಾಕರ ತನ್ನ ಹೆಂಡತಿಯ ಕೈಗೆ ನೋಟಿನ ಕಂತೆಗಳನ್ನಿಡುತ್ತಾ – “ತಾವು ಉಳ್ಕೊಂಬಿಟ್ರಿ ಸಾ” ಎಂದವನು ಹಿಗ್ಗುವಾಗ ಪ್ರೊಫೆಸರರ ತುಟಿಗಳು ಅಲುಗಿದವೇ ಹೊರತು ಮಾತುಗಳು ಹೊರಬೀಳದೆ ಗಂಟಲಲ್ಲೇ ಸಮಾಧಿಯಾದವು.


Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪವಾಡ
Next post ಜೈಲಿನ್ಕಂಡಿ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…