Home / ಕಥೆ / ಸಣ್ಣ ಕಥೆ / ಬಿಲ್ವದಳ

ಬಿಲ್ವದಳ

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನು ಹಾಸ!! ಇಂಥ ಕಡಲಡಿಯಲ್ಲಿ ಒಂದು ಮರವಿರುತಿಹುದು. ಬೇಸಿಗೆಯ ತಾಪದಲಿ ಬಾಯ್ಬಿಡುವ ವಾರಿಧಿಗೆ ತಂಪು ನೀಡಲು ಎಂದು ಸೆರಗ ಬೀಸುತಲಿಹುದು. ಹೊನ್ನಹರೆ ತುಂಬಿರುವ ಯುವತಿಯೋರ್‍ವಳ ಹಾಗೆ ಅದರ ಸೊಬಗಿರುತಿಹುದು. ನೀಳವಹ ಕೈನೋಟ, ತುಂಬಿಬೆಳದಿಹ ಮಾಟ “ಬಾ! ಇಲ್ಲಿ ಬಾ!! ತೋಳ ತೊಡೆಗಳೊಳು ಕೂಡು ಬಾ! ಮಗುವಾಗಿ ಆಡು ಬಾ!!” ಎಂದಂದು ನೋಡುಗರ ಹೃದಯಕ್ಕೆ ಕರೆಯುತಿಹುದು. ಲಲನೆಯರ ಕೋಮಲ ವಹ ಅಂಗ, ಹೊಳೆ ಹೊಳೆವ ಮೈಕಾಂತಿ, ಉಗು ಉಗುವ ಪ್ರಾಯ ಗಂಧ, ಯುವಕ ಜನ ಜಂಗುಳಿಯ ಮಯ್ತಗೊಳಿಸುವ ತೆರದಿ ಅದೆ ಚಿಗಿತ ಚಿಗುರೆಲೆಯ ಜೊ೦ಪು, ಹೂಗಳ ಕಂಪು “ಬಾ! ಮಗುವಾಗಿ ಬಾ!! ನನ್ನನಪ್ಪು ಬಾ!!! ನಲ್ಮೆಯ ತಾಯಾಗಿ ಮುದ್ದನುಣಿಸುವೆನು ಬಾ!!” ಎಂದೆಂದು ತಾಯಿತನ ಬೀರುತಿಹುದು. ವಾರಿಧಿಗೆ ಗಾಳಿಯನು ನೀಡುವಾಗ ಮೇಲಿಂದ ಸರಿಸಿ ತೊಗುವ ಫಲಾವಳಿಗಳು “ತಾಯಿ ಮೊಲೆ ನಾವಾಗಿ ಹಾಲನುಣಿಸುವೆವು ಬಾ” ಎಂದು ಕರೆಯುತಿಹವು. ಇಂಥ ಮರದೊಳು ಎರಡು ಹಕ್ಕಿಗಳು ಕುಳಿತು, ತಮ್ಮ ತಮ್ಮೊಳೆ ಏನೋ ಆಡುತ್ತ ಹಾಡುತ್ತ, ನಕ್ಕು ನಲೆನಲೆಯುತ್ತ ಸಂತಸವ ಬೀರುತಿಹವು. ಅಹಾ! ಎಂದ ಹಕ್ಕಿಗಳವು!! ಹೊನ್ನ ಬಣ್ಣದವಲ್ಲ; ರನ್ನ ಬಣ್ಣದವಲ್ಲ; ಹವಳ ಬಣ್ಣದವಲ್ಲ; ಹಾಲ ಬಣ್ಣದ ಹಕ್ಕಿ! ಪಕ್ಕಗಳು ಹಾಲಕೆನೆ ! ಚುಂಚು ಚಿನ್ನದುದಾಗಿದೆ! ಇಂದ್ರನೀಲ ಕಣ್ಣು ! ಸುತ್ತು ಹವಳದ ರೇಖೆ ! ಆ ಎರಡು ಹಕ್ಕಿ ಯೊಳು ಒಂದು ಹೆಣ್ಣಾಗಿಹುದು. ಒಲುಮೆ ಅದರ ಜೀವನದ ತಿರುಳಿಹುದು. ಆ ಒಲುಮೆ ಅಲ್ಲಿ ಇಲ್ಲಿಯದಲ್ಲ, ಸುರರ ನಾಡಿನ ಒಲುಮೆ, ಚೆಲುವು ಒಲವುಗಳಿರಲು ಬೇರಿಹುದೆ ಸುರಲೋಕ ? ಅದಕಂತೆ ಅವು ಸ್ವರ್ಗಲೋಕದ ಹಕ್ಕಿಗಳು ! ಪುಟ್ಟೊಂದು ಸಂಸಾರವನು ಕಟ್ಟಿ ಮನೆ ಮಾಡಿ ಕೊಂಡಿಹವು.

ಒಂದು ದಿನ ಹೊಂಬಣ್ಣ ಕಿರಣಗಳು ಆಗತಾನೆ ಮುಗಿಲ ಮಂಟಪವ ನೇರುತಿಹವು. ರಾಗರಸವ ನೊಸರಿಸುವ ಅಚ್ಚ ತಿಳಿ ಮೋಡಗಳು ಬಾಲನೇಸರನೀಗ ಬರುವನೆಂದರಿತು ಹಾದಿ ಬಿಡಲೆಳಿಸಿ ಹೀಗೆ ಹೀಗೆ ಓಸರಿಸುತಿಹವು. ಬಣ್ಣ ಬಣ್ಣದ ದುತುಲನುಟ್ಟು ಆ ಉಷೆಯು ಎನಿತು ಒಯ್ಯಾರದಲ್ಲಿ ಪಡುವಲವ ಮೆಟ್ಟುತಿಹಳು! ಅವಳ ಸೆರಗಿನಂಚಿನಲಿ ನಯವಾಗಿ ನೆಯ್ದಿರುವ ಹೊನ್ನಗೆರೆಗಳ ಹೊಳಪು ರಸಿಕ ಹೃದಯದಲಿ ಭಾವನೆಯ ಕಡಲನುಕ್ಕಿಸುವವು. ರವಿರಾಯ ಬರುವನೆಂದರಿತು ಭೂಮಿ ತಾಯಿಯು ತಾನು ಹಸರು ಸೀರೆಯನುಟ್ಟು, ಮಾಂಗಲ್ಯಗಳ ತೊಟ್ಟು, ಸೌರಭ ಸೂಸುವ ಅರಳ-ಮಲ್ಲಿಗೆಯ ಉಡಿತಂದು ಹಿಡಿದಿಹಳು ಆತನಡಿಗಳಲ್ಲಿ.

ಇಂಥ ಸವಿ ಸಮಯದೊಳು ಒಂದು ಹಕ್ಕಿ ಬಂತು ; ಮುಗಿಲ ಮಾರ್ಗದಿ ನೇರವಾಗಿಯೆ ಬಂತು. ಚಿಕ್ಕಿ ಉದುರಿದ ಹಾಗೆ ತಲೆಯ ಮೇಲೆ ಬ೦ತು. ಬಂದ ಹಕ್ಕಿ ಒಂದು ಕ್ಷಣನಿಂತು ಅಂದವಾಗಿಹ ಆ ಎರಡು ಹಕ್ಕಿಗಳನು ಕಂಡಿತು. ಹಕ್ಕಿಗಳ ಕಂಡು “ಎಲೆ ರಾಜಾ! ಈ ತಾಯಗಿಡ ತಂಪಿನಲಿ ಎನಗೆ ತಾಣವಿಹುದೇನಯ್ಯಾ?” ಎಂದು ಕೇಳಿಕೊಂಡಿತು.

“ಯಾರು ನೀ, ಯಾರಯ್ಯಾ?” ಎಂದು ಮಾರುದನಿ ಬರಲು ಹಾಲಗಿರಿ, ಮೇಲಗಿರಿ, ಸಾಲಗಿರಿ ಯಾಚೆಯಲಿ ನಿಬಿಡಾಗಿ ಬೆಳೆದಿರುವ ಆಗರದ ಹಕ್ಕಿ ಬಾ. ಹಗಲ ಕಿಚ್ಚಿನ ತಾಪ ಕಳೆಯಲೆಳಸಿ ಬೆಳಗಿನಲಿ ಜಾಣ ಕಾಣಲು ಬಂದಿರುವೆ” ಎಂದುಸುರಲು “ವಿಶ್ವ ತಾಯಿಯು ಹಡೆದು ನನಗಾಗಿ ಇಟ್ಟಿಹಳು ವನಸಿರಿ ಬನಸಿರಿಯನೆಲ್ಲವನು ಕೊಟ್ಟಿಹಳು. ಆತಂಕವೇನಿಹುದು ? ಏನು ಬಂಧನವಯ್ಯಾ??” ಎಂದು ಉತ್ತರವನಿತ್ತವು.

ದಿನ ಕಳೆದಹಾಗೆಲ್ಲ ಕೆಳೆಯು ಬೆಳೆಯುತ ಬಂದು ಅವರ ಬಾಳುವೆಯೆಲ್ಲ ಹಿಗ್ಗಿನಾಗರವಾಯ್ತು. ಬಾಳುವೆಯೆಲ್ಲ ಬಾಂಧವ್ಯದಮೃತವ ಹಿಂದೆ ಅರಿಯದ ಅವರು ಇಂದದನು ಈ ಪರಿ ಅರಿತು ಸವಿಯ ತೊಡಗಿದರು. ಮುಂಜಾವ ಸಿರಿಯಲ್ಲಿ ಸಿಕರ ತುದಿಯನು ಏರಿ ಭೂಮಿ ತಾಯಿಯ ಸೊಬಗ ಕಣ್ತುಂಬ ನೋಡುವರು. ಹಾಲು ದೊರೆಯ ನುಕ್ಕಿಸುವ ತಿಳಿಯಾದ ಹೊಳೆಯೆಡೆಗೆ ಹಾರಿ ಹೋಗುವರು. ಉತ್ತತ್ತಿ ಬನದಲ್ಲಿ ಮತ್ತೆ ಕೋಕಿಲೆಗಳನು ಮಾತನಾಡಿಸುವರು, ಅಲ್ಲದೆ ಸೆಳೆ ಗೊಂಬೆಯಲಿ ಕುಳಿತು ತಮ್ಮ ತಮ್ಮೊಳೆ ಪರಿಹಾಸ ಸಿರಿಹಾಸಗಳ ಮಾಡುವರೊಮ್ಮೆ, ಚಿಗುರೆಲೆಯ ಮರೆಯಲ್ಲಿ ಅವಿತುಕೊಳ್ಳುವರು ಮತ್ತೊಮ್ಮೆ, ಮಗದೊಮ್ಮೆ ವಣ್ಗಾಯಿಗಳ ತಂದು ಮನವಾರೆ ಸೇವಿಪರು. ಹೀಗೆ ನಡೆದಿರುವಾಗ ಒಂದು ದಿನ ಸಂದಿಸಿತು. ಆ ಒಂಟಿ ಹಕ್ಕಿ ಏನೊ ಪಡೆಯುವದಕ್ಕಾಗಿ ನಗುವ ಬಾಳಿನ ಮುಂದೆ ಅಳುವ ಬಾಳನು ತಂದಿರಿಸಿಕೊಂಡಿತು. ಆ ನಲ್ಲನಲ್ಲೆಯರ ಬಗೆಯ ಮಂದಿರದಲ್ಲಿ ಮಗ ಮಗಿದ ಹೂವೊಂದು ಕಂಡುಕೊಂಡು, ಆಶಯಗೊಂಡು ತನ್ನ ತನುಮಂದಿರದೊಳು ಆ ಹೂವ ತಂದಿಟ್ಟು ಪೂಜೆ ಮಾಡಲು ಬಯಸಿ ಅವರನು ಬೇಡಿಕೊ೦ಡಿತು.

“ಯಾರ ಹೂವು? ಎಲ್ಲಿಹುದಯ್ಯಾ?” ಎಂದು ಕೇಳಿದರು ಆ ಅಚ್ಚು ಮೆಚ್ಚಿನ ದಂಪತಿಗಳು.

“ಹೊನ್ನ ಹೊಸರಿನ ಎಸಳು! ಹಾಲ ಬಣ್ಣದ ಅಂಚು! ಹಸರು ಬಣ್ಣದ ಪಚ್ಚೆ ದೇಟಾಗಿ ಕಂಗೊಳಿಸುವುದು. ನೀವು ಅರಿಯಲಾರಿರಿ; ನಾನರಿತು ಮೆಚ್ಚಿಹೆನು. ತಮ್ಮ ಮೊಗವ ತಾವು ಕಂಡವರುಂಟೆ?” ಎಂದು ಹಕ್ಕಿ ನುಡಿಯಲು ಆ ನೀರ ನೀರೆಯರು ಮೊಗವ ಹೊರಳಿಸಿ ಒಬ್ಬರೊಬ್ಬರ ಹೀಗೆ ನೋಡಿದರು. ಆಗವರ ಮೊಗದಲ್ಲಿ ಬಿಸಿನಗೆಯ ಮಿಂಚು ಹೇಗೋ ಹೊಳೆದು ಅನಿತರೊಳೆ ಮಾಯವಾಯ್ತು. ಒಡನೆಯೆ ಇದಿರ ಹಕ್ಕಿಯ ಬಗೆಬೆಂದು ಕೆನೆ ಪಕ್ಕಗಳೆರಡು ಕಳಚಿ ಹೋಗಿ ಅದು ಹಾಲುಂಡಿಯಾಗಿ ನೆಲಕ್ಕುರುಳಿತು.

“ಶಾಪಗ್ರಸ್ತನು ನಾನು. ಅಯ್ಯೋ ಶಾಪಗ್ರಸ್ತನು ನಾ. ಪ್ರೇಮದಾಸೆಗೆ ಬಂದು ಶಾಪ ಪಾಕದಲ್ಲಿ ಬಿದ್ದು ಕೊಂಡೆನಲ್ಲಾ! ಮಾನವರ ಶಾಪವಿಲ್ಲವಿದು; ದೇವಲೋಕದ ಶಾಪ! ದೇವೇಂದ್ರ ನಿಕ್ಕಿರುವ ಕಡು ಶಾಪವಿದು!! ಬಲ್ಲವರುನನಗಂದು ಕಿವಿಯಲ್ಲಿ ಹೇಳಿದ್ದು ಲಕ್ಷವಿಲ್ಲದೆ ಮರೆತೆ. ಇಂದು ಅರಿವಾಗಿಹುದು. ಅರಿತ ಗಂಡಾಂತರವ ಮೆಟ್ಟಿ ತುಳಿಯಬಹುದೆಂಬ ಹಮ್ಮು ನನ್ನ ಭಾವನೆಯಲ್ಲಿ ಕುಣಿಯುತಲಿತ್ತು. ಅದರಂತೆ ದುರ್‍ವಿಧಿಯು ನನಗಿ ದುರ್‍ಗತಿಯು ತಂದಿಕ್ಕಿತು.

“ಇಂದ್ರ-ಬನದ ಹಣ್ಣುಗಳನ್ನು ನಾನು ಸವಿಯ ಬೇಕೆಂದೆ. ಸಿರಿ ಸೊಬಗಿನ ಬನದಲ್ಲಿ ಇಂಚರದಿ ಪಾಡ ಬಯಸಿದೆ. ರನ್ನ ಹಕ್ಕಿಗಳಲಿ ಕೂಡಬಯಸಿದೆ ಅದಕಾಗಿ ದೇವೇಂದ್ರನು ಶಾಪಕೊಟ್ಟಿಹನು. ‘ಪ್ರೇಮವನು ಬಯಸಿದಾಗ ಅದು ಸಿಗದಿರಲು ರೆಕ್ಕೆ ಕಳಚಿ ನೀನು ನೆಲಕ್ಕುರುಳು’ ಎ೦ದು ಶಾಪವಿಹುದು. ಅದಕಿಂತು ಉರುಳಿದೆನು. ನಿಮ್ಮ ಪ್ರೇಮದ ಸವಿದುತ್ತು ಈಗಲೂ ನನ್ನ ಪಕ್ಕಗಳ ಚಿಗುರಿಸ ಬಲ್ಲವು. ದಯದೋರಿ ದೇವೇಂದ್ರ ಇನಿತು ಉಶ್ಯಾಪನಿಟ್ಟಿಹನು. “ಲಭಿಸದ ಪ್ರೇಮ ಲಭಿಸಿದಾಗ ಕಳಚಿರುವ ಪಕ್ಕ ಮತ್ತೆ ಮೂಡುವವು. ಆಗ ನನ್ನ ಬನದ ಬಟ್ಟೆ ಮತ್ತೆ ಕಂಗೊಳಿಪುದು.” ಎಂದಂದಿಹನಂತೆ. ಅದಕಾಗಿ ನನ್ನ ನೆಚ್ಚಿನ ಎಲೆದಂತಿಗಳೆ! ಪ್ರೇಮದಲೆ ಹೃದಯದರಲನು ಇತ್ತು ಎನ್ನ ನೀವು ಉಳಿಸಿರಯ್ಯಾ. ಆಗ ನಾವು ಮೂವರು ಮುಗಿಲಿನಾಚೆಗೆ ಹಾರಿ ಮೂಲೋಕವ ನೋಡೋಣವಂತೆ. ಭುವನದೆದೆಯೊಳಗಿರುವ ಪಾರಿಜಾತದ ಹೂವ ಹುಡುಕೋಣವಂತೆ. ಇಂದ್ರ ಬನದ ಹಣ್ಣುಗಳ ತನಿರಸವ ಮನದಣಿ ಹೀರೋ ಣವಂತೆ. ಬೆಳದಿಂಗಳ ಕಡಲಲ್ಲಿ ಹಿಗ್ಗಿನಲಿ ಈಸೋಣವಂತೆ. ಎನ್ನ ಹೃದಯದ ಅರಸು ಅರಸಿಯರೇ, ಈ ಅಮಳ ಸಾಗರದ ಆಚೆಯಲ್ಲಿ ಹೊಗರಿಡುವ ಪೀತ ಸಾಗರವಂತೆ. ಅದರಾಚೆ ಕೆಂಪು ಸಾಗರವಂತೆ, ಅದಕೂ ಆಚೆ ನೀಲ ಸಾಗರವಂತೆ. ಹೀಗೆ ಸಪ್ತ ಸಾಗರಗಳಾಚೆಯಲ್ಲಿ ಒಂದು ಬನವಿಹುದಂತೆ. ಅದನ್ನು ಕೇಳಿರುವಿರಾ? ಅಹಾ ಏನು ಸೌಂದರ್ಯವಲ್ಲಿ! ಮುಗಿಲ ಮುಟ್ಟುವವರೆಗೆ ಏಸೊ ತರು ಬೆಳದಿಹವು! ಸೌರಭವ ಸೂಸುತಲಿ ಎನಿತೊ ಅರಲರಳಿಹವು!! ಪಣ್ಗಾಯಿಗಳಿಗಲ್ಲಿ ಮಿತಿಯಿಲ್ಲ. ಪನ್ನೀರ ಝರಿಯೇಸೊ ಎಣಿಕೆಯಿಲ್ಲ. ದೇವೇಂದ್ರ ನೊಮ್ಮೊಮ್ಮೆ ಅದ ನೋಡ ಬಯಸಿ ಶಚಿಯೊಡನೆ ಬರುಲಿಹನಂತೆ. ವನವೆಲ್ಲ ವಿಹರಿಸಿ ಮನದಣಿದು ರತ್ನ ಶಿಲೆಗಳಮೇಲೆ ಕೂಡುವನಂತೆ ಶಚಿಯೊಡನೆ ಸರಸವಾಡುವನಂತೆ, ಕೋಮಲವಾದ ಹೂಗಳನ್ನಾರಿಸಿ ತಂದು, ಆಕೆ ದೂರದಲಿ ನಿಂತು ಇಂದ್ರನ ಮೇಲೆಸೆದು ರಸನಗೆಯ ನಕ್ಕು ನಲಿಯುವಾಗ ಅವಳ ಅಧರಕಾಂತಿ ಚಿಮುಕಿಸಲು ಅದರ ಬೆಳಕಿನಲ್ಲಿ ಕೋಗಿಲೆಗಳು ಹಾಡುವವು. ಹಕ್ಕಿಗಳು ಮಾತನಾಡುವವು. ನವಿಲುಗಳು ನಿಮಿರೇರಿ ನರ್‍ತಿಸುವವು. ಸಹೋದರು! ನನ್ನ ಸಹೋದರಿ!! ಎನಗೆ ಪ್ರೇಮವನಿತ್ತು ಈ ಶಾಪಕೂಪದ ತಳದಿಂದ ಎನ್ನನುದ್ಧರಿಸಿದರೆ ಸಪ್ತ ಸಾಗರಗಳ ಸೌಂದರ್ಯವನ್ನು ನೋಡುತ್ತ ಅವುಗಳನ್ನು ದಾಟಿ ನಾವು ಒಂದಾಗಿ ಆ ವನದೆಡೆಗೆ ಹೋಗೋಣ. ತರುಗಳಿಂದ ತರುಗಳಿಗೆ ಹಾರೋಣ. ಪುಷ್ಪಗಳ ಮೂಸಿ ಮೈ ಮರೆಯೋಣ. ಪಣ್ಗಾಯಿಗಳ ಮೆಲಿದು ಮತ್ತರಾಗೋಣ. ಬನದಾಚೆಗಿರುವ ಹಾಲ ಹೊಳೆಯಲಿ ನೀರನೀಂಟಿ ನಲಿನಲಿದು ನೆಗೆಯೋಣ.” ಎಂದು ನೆಲಕ್ಕುರುಳಿದ ಹಕ್ಕಿ ಮೋರೆ ಮೇಲಕ್ಕೆತ್ತಿ ಹೊನ್ನ ಚುಂಚುಗಳನು ಬಿಚ್ಚಿ ಬಿಚ್ಚಿ ಕಣ್ಣೀರತಂದು ಹೇಳಿಕೊಂಡಿತು.

“ಏನು ಅನ್ನುವಿ ಹಕ್ಕಿ? ನೀನಂದ ಮಾತುಗಳ ಅರ್‍ಥವೇನಿಹುದು? ನಿನ್ನ ಆಳವಾದ ಬಗೆ ನನಗೆ ತಿಳಿಯಬಾರದು ಅಯ್ಯಾ!” ಎಂದು ಆ ದಂಪತಿಗಳು ತಮ್ಮ ತಮ್ಮ ಕಡೆ ನೋಡುತ್ತ ಮೆಲು ಮೆಲನೆ ಮಾತನಾಡಲು “ನನ್ನ ಮಾತಿನ ಅರ್ಥ ನಿಮಗಾಗದೆ? ಎಲ್ಲಿಯೂ ಆಗದ ನನ್ನ ಮಾತಿನ ಅರ್ಥ ಇಲ್ಲಿಯೂ ಆಗದೆ?? ನನ್ನ ಬಂಧುವೆ! ನನ್ನ ಭಗಿನಿಯೆ!! ಸತ್ಯವಾಗಿ ನಿಮ್ಮ ನಾನು ಪ್ರೀತಿಸುವೆನು. ಸ್ವಾರ್ಥ ಮೋಹಗಳಿಗಿಲ್ಲಿ ಇನಿತು ಕೂಡ ಇಂಬಿಲ್ಲ. ಅಚ್ಚ ನಿಸ್ವಾರ್ಥ ಪ್ರೇಮವಿಹುದು. ಭಕ್ತಿಯಿಹುದು. ದೇವರಾಗಿ ಭಕ್ತಿಯ ಮಾಡಿಸಿಕೊಳ್ಳಿರಿ. ನಾನು ಭಕ್ತನಾಗಿ ಭಕ್ತಿಯ ಮಾಡುವೆ. ನಿಮ್ಮ ಹೃದಯ ಮಂದಿರದಲ್ಲಿಯ ದೇವನಾನು ಪೂಜಿಸಲು ಎನಗೆ ಎನಿತು ಹಿಗ್ಗಾಗುವುದು ಬಾಯಿಯಲಿ ಬಣ್ಣಿಪೆನೆ!…………” ಎಂದುಸುರುವಾಗ ಕಣ್ಣೀರು ಉಕ್ಕಿಸಿರುವವು. ಕುತ್ತಿಗೆಯ ಸಿರಗಳುಬ್ಬುವವು. ಸ್ವಲ್ಪ ತಡೆದು “ಬಂಧುವೆ! ಎನ್ನ ತಾಯಿ!! ನನ್ನ ತಾಯಿ ತೊಟ್ಟಲಿಂದ ಇಲ್ಲಿಯವರೆಗೆ ಸುಖವು ಏನಿಹುದು ನಾನರಿಯೆ! ನನ್ನ ತಂದೆಯು ಮಡದಿ ಮಕ್ಕಳ ಕೂಡ ಇಲ್ಲಿಗೆ ದೂರದಲ್ಲಿರುವ ಒಂದು ರಮ್ಯವಾಗಿಹ ಕೊಳದಡಿಯಲ್ಲಿ, ವಿಶಾಲವಾಗಿಹ ಅಶ್ವತ್ಥ ವೃಕ್ಷದೊಳಗೆ ಮನೆಮಾಡಿಕೊಂಡಿಹನು. ಆತನಿಗೆ ಮಕ್ಕಳು ನಾವು ನಾಲ್ವರು. ನನಗೆ ಹಿರಿಯರು ಇಬ್ಬರಿಹರು ಒಬ್ಬ ಚಿಕ್ಕತಮ್ಮನಿಹನು. ಮಡದಿ ಮಕ್ಕಳ ಕೂಡ ಹಿಗ್ಗಿನಲಿ ಆ ತಂದೆ ಬಾಳುವೆಯ ಮಾಡ ಬಹುದಾಗಿತ್ತು, ತರುಗಳಲಿ ಹಾರಾಡಿ, ತೊಳಗಳಲಿ ಜಿಗಿದಾಡಿ, ಹೂ ಗಳನು ಈಡಾಡಿ ಹರುಷ ಹೊಂದಬಹುದಾಗಿತ್ತು. ಅಯ್ಯೋ! ದುರ್‍ದೈವಿ ಆತಾ. ಆ ಸೃಷ್ಟಿ ದೇವಿಯ ಸೊಬಗನುಣ್ಣುವ ಸುದೈವ ಆತಗಿರಲಿಲ್ಲ. ಆ ಕಾಲದಲಿ ಎತ್ತ ನೋಡಿದಡತ್ತ ಹಣ್ಣುಗಳ ಬರವೇ ಬರ. ಫಲಿತು ನಿಂತಿಹ ಆ ಎಲ್ಲ ತರುಮರಾದಿಗಳು ಒಮ್ಮೆಲೆ ತಮ್ಮ ಹಣ್ಣುಗಳನೆಲ್ಲ ಭೂತಾಯಿಯ ಉಡಿಯಲ್ಲಿ ಉದುರಿಸಿದವು. ಮುಂದೆ ಪಣ್ಗಾಯಿ ಸಿಗದಿರಲು ಹೊಟ್ಟೆಯುರಿ ಸಹಿಸದಲೆ ಎಷ್ಟೊ ಹಕ್ಕಿಗಳು ಮಕ್ಕಳನ್ನು ಕಟ್ಟಿಕೊಂಡು ಬೇರೆ ವನಗಳನರಸಿ ಹಾರಿ ಹೋದವು. ನನ್ನ ತಂದೆ ಅಂಥಾ ಸಾಹಸವ ಮಾಡಿದನೆ? ಇಲ್ಲ. ಹಿರಿಯರಿರುತಿಹ ಬನವ ಬಿಡಬಹುದೆ? ಬಿಡಲು ಬರುವುದೆ? ಎಂದೆಂದು ಅದನ್ನು ಸಹಿಸುತ್ತ ಅಲ್ಲಿ ಇರಲು ಮನಮಾಡಿದನು. ಹೀಗೆ ಏಸೊ ದಿನ ಕಳೆದವು. ಎಷ್ಟೋ ಸಂತಾಪ ಹೊಂದಿದೆವು. ಹೊಟ್ಟೆಯುರಿ ದಗದಗಿಸಿ ನಮ್ಮ ಪ್ರಾಣ ಸುಟ್ಟು ಸುಣ್ಣಾಗಲು ಕಣ್ಣುಗಳು ಕತ್ತಲೆಗೊಂಡು ಆ ರಮ್ಯ ವನವು ನಮಗೆ ಮಸಣವಾಯಿತು. ಅಂಥ ಹೊತ್ತಿನೊಳು ಒಬ್ಬ ಬೇಡ! ಕಪ್ಪು ಬಣ್ಣದ ಬೇಡ!! ಕರಾಳ ರೂಪದ ಬೇಡ!!! ಆಹಾ! ಎನು ಅವನ ರೂಪು ನೆನಿಸಲಿನ್ನೂ ನನ್ನ ಹೃದಯ ನಡಗುವುದು, ಕವಡಿಯಂಥಾ ಕಣ್ಣು ಕೊರಡಿನಂಥಾ ಹಲ್ಲು!! ಹೆದರಿನಂಥ ಮೂಗು!!! ಗುಡುಗಿನ ಧನಿಯಿಂದ ಚೆಲುವಾದ ಹಕ್ಕಿಗಳನ್ನು ಕೊಂಡೊಯ್ಯ ಬಯಸಿ ಬನವ ಸುತ್ತತೊಡಗಿದನು. “ಕೊಲುವವನಲ್ಲ, ನಾನು ಕೊಲುವವನಲ್ಲ. ಚೆಲುವಾದ ಮರಿಗಳನು ಸಾಕ ಕೊಟ್ಟವರಿಗೆ ಬರದ ಬೇಗೆಯನಾರಿಸುವ ಇನಿ ಯಾದ ಹಣ್ಣುಗಳನ್ನು ಕೊಡುವೆನು ನಾನು” ಎಂದು ಕೂಗುತ್ತ ಗಿಡದಿಂದ ಗಿಡಕ್ಕೆ ಅಲಿಯತೊಡಗಿದನು. ಅದಕೇಳಿ ನನ್ನ ತಂದೆಯ ಬಾಯಿಗೆ ನೀರೊಡೆಯದಿರಲಿಲ್ಲ. ಪ್ರಾಣಕಿಂತ ಸಿರಿಯ ವಸ್ತು ಜಗದಿ ಇಹುದೆ?’ ಎನ್ನುವ ನಾಡ ನುಡಿಯೊಳು ಸತ್ಯವಿಲ್ಲದೆ ಇಲ್ಲ. ಅದಕಂತಲೇನೆ ನನ್ನ ನಾತನು ಹಣ್ಣಿಗಾಗಿ ಮಾರಲೆನಿಸಿದನು. ‘ಪಂಜರದೊಳಾದರೂ ಹೊಟ್ಟೆ ತುಂಬಲಿ ಇವಕೆ’ ಎನ್ನುವ ಆಶೆ ಒಡಲೊಳಿಲ್ಲದಿರಲಿಲ್ಲ.

ನನ್ನ ಬಂಧುಗಳಾದ ಆ ಮೂರು ಮಕ್ಕಳನು ಮಾರಿದಂತೆ ನನ್ನನ್ನು ಮಾರಬಯಸಿದಾಗ ನಾನು ಆತನೆಡೆ ಓಡಿಹೋಗಿ ಬಿಗಿ ಯಾಗಿ ಅಪ್ಪಿಕೊಂಡು ಗದ್ದ ಹಿಡಿದು ಮುದ್ದಾಡಿ, ಕಣ್ಣಿನಲಿ ನೀರನುರುಳಿಸಿ “ಅಪ್ಪಾ! ನನ್ನ ಮಾರುವಿಯಾ? ಬೇಡ ಬೇಡ! ನಾನೆಂದೂ ಪಣ್ಗಾಯಿ ಬೇಡೆ. ಹೊಟ್ಟೆಯುರಿಯುವುದೆಂದು ಹೇಳಿಕೊಳ್ಳೆ. ನಿನ್ನ ದುಃಖದಲ್ಲಿ ಭಾಗಿಯಾಗುವೆ ತಂದೆ! ಇದನು ನೋಡಲು ನಿನ್ನಿಂದಾಗದಿದ್ದರೆ ನನ್ನನ್ನು ಬಿಟ್ಟು ಕೊಡು, ನಾನಾರ ಬನದಲ್ಲಾದರೂ ಹಾರಾಡಿ ಹೊತ್ತು ಗಳೆಯುವೆನು.” ಎಂದೆನ್ನಲು “ನಿನಗಿಲ್ಲಿ ಎಳ್ಳೆನಿತು ದುಃಖವಿಲ್ಲ ಮಗುವೆ! ಹೊಟ್ಟೆಗಿಲ್ಲದೆ ಮರುಗಿ ಇಲ್ಲಿ ಸಾಯುವುದಕಿಂತ ರುಚಿಗಾಯಿಗಳ ತಿಂದು ಅಲ್ಲಿ ಬದುಕುವುದು ಮೇಲು. ನಿನ್ನ ನಾತನು ರಾಜಮಂದಿರಕೊಯ್ದು ಒಪ್ಪಿಸುವನಂತೆ ರಾಜ ಕನ್ನೆ ಹಕ್ಕಿಯೊಂದು ಬಯಸಿ ಬೆಸಸಿಹಳಂತೆ. ಅದಕ್ಕಾಗಿಯೇ ಒಂದು ಹೊನ್ನ ಪಂಜರವ ಮಾಡಿಸಿಹಳಂತೆ. ಅದಕೆ ಪಚ್ಚೆಗಳ ಕೆಚ್ಚಿಸಿಹಳಂತೆ. ರನ್ನ ಕುಂದಣವನಿರಿಸಿಹಳಂತೆ. ಆನಂದ ವನದಲ್ಲಿ ಹಾಲು ಗಲ್ಲಿನ ಮನೆಯ ಕಟ್ಟಿಸಿ ಮೇಲಟ್ಟಿದೊಳು ನಿನ್ನ ಪಂಜರವ, ಕೇತಕಿಯ ಬನದ ಕಡೆ ಕಟ್ಟುವಳಂತೆ. ಆಗ ನೀನಲ್ಲಿ ಕುಳಿತು ಹೊರಗೆ ಸುಳಿಯುವ ಅದರ ಸೌರಭವನ್ನು ಮೂಸದಲ್ಲಿಯಂತೆ ಇರುಳಿನಲಿ ಚಕ್ಕಂದ ವಾಡುತಿಹ ಚಿಕ್ಕೆಗಳ ಚನ್ನಾಟವನು ಕಾಣಬಲ್ಲಿಯಂತೆ, ಮೋರೆಯನು ಮೇಲಕ್ಕೆತ್ತಿ, ಪಂಜರದ ಸೆಳೆಗಳಲ್ಲಿ ಇಣಿಕಿ ಇಕ್ಕಿ, ಕಣ್ಣನುಲು ಗಿಸುವಾಗಲೂ ಗೋಣ ಹೊರಳಿಸಿ ಚುಂಚುವನು ಅರತೆರೆದು ಪಕ್ಕಗಳ ಸರಿಸುವಾಗಲೂ ಮುತ್ತಿನಲ್ಲಿ ಹೆಣೆದಿರುವ ಪಲ್ಲಂಗದ ಮೇಲೆ ಸುಪ್ಪತ್ತಿಗೆಯ ಹಾಸಿಗೆಯಲ್ಲಿ, ತೋಳ ತೆಲೆಗಿಂಬು ಮಾಡಿ ಮಲಗಿರುವ ಆ ಕುವರಿ ನಿನ್ನ ನೋಡಿ ಆಗ ಎಷ್ಟು ಹಿಗ್ಗುವಳು ಮಗು! ಆಗ ನಿನಗೆಷ್ಟು ಆನಂದ!! ಕಂದಾ! ನೀನು ಹಸಿದು ಕಲಿಕಿಲಿಸುವಾಗ ಆ ಕುವರಿ, ಕೇತಿಕೆಯ ಬಣ್ಣದ ಆ ಕುವರಿ, ಜಡೆ ಹಾಕಿಕೊಳ್ಳುವುದನು ಬಿಟ್ಟು ಕೊಟ್ಟು ಜೋಲುದುರುಬನು ಬಿಚ್ಚಿ ಬೆನ್ನಲಿ ತೂಗಿಸುತ, ಮುಖವ ಮುದ್ದಿಡಬಂದ ಕಿರಿಗೂದಲುಗಳನು ಹಿಂದಕಟ್ಟುತ, ಚಂಚಲವಾಗಿಹ ಬೊಗಸೆ ಗಣ್ಣುಗಳನು ತಿರುಗಿಸಿ, ನವಿನಗೆಯ ನಕ್ಕು, ನೀಳವಾದ ಬಲಗೈಯನ್ನು ಬೀಸಿ, ಎಡಗೈಯಲ್ಲಿ ಚಿನ್ನದ ತಾಟನು ಹಿಡಿದು ದಾಳಿಂಬ ದ್ರಾಕ್ಷ ರಸಗಳನು ನಿನ್ನೆಡೆ ತರುವಳಂತೆ. ವಜ್ರ ಕೀಲಿಯ ಬಿಚ್ಚಿ ನಿನ್ನ ಪಂಜರದ ಬಾಗಿಲ ತೆರೆದು, ಆ ಕೋಮಲೆಯು ತನ್ನ ರತ್ನ ಕಡಗದ ಕೈಗಳಲಿ ದ್ರಾಕ್ಷರಸದ ಬಟ್ಟಲನು ಹಿಡಿದು ಪಂಜರದಲ್ಲಿಡುವಾಗ ನಸು ಕೂಡ ಮಾಸದ ಅವಳ ಕೈಗೆ ಮೃದುವಾಗಿ ಮುತ್ತಿಟ್ಟೆಯಾದರೆ ನಿನಗೆಷ್ಟು ಸುಖಗೊತ್ತೆ ಮಗು! ಅದಕಾಗಿ ನನ್ನಾಜ್ಞೆ ಮೀರದಿರು. ಆತನೊಡಗೂಡಿ ಸುಖವಾಗಿ ಬಾಳು ಕಂದಾ!!” ಎಂದು ನನ್ನ ತುಟಿ ಹಿಡಿದು ಬುದ್ಧಿ ಹೇಳುವಾಗ ನನಗೆ ಮುನಿಸು ಬರಲು ಅವನ ಬಿಟ್ಟು ದೂರ ಸರಿದೆ. ಆಗ ನನ್ನ ದೇನಿದೆಯಲ್ಲವನ್ನೂ ಹೇಳಿಕೊಂಡು ತಂದೆ! ಪ್ರಕೃತಿ ದೇವಿಯ ಸಹಜ ಸೌಂದರ್ಯಕ್ಕಾಸೆಗೊಂಡ ನನಗೆ ರಾಜಭವನದಲ್ಲಿರುವ ಯುವತಿಯರ ಕೃತ್ರಿಮ ಸೌಂದರ್ಯ ಬೇಕಿಲ್ಲ ನೋಡು. ಈ ಮುಕ್ತ ಸೃಷ್ಟಿಯಲ್ಲಿ ಮನವಾರೆ ಈಜುವುದನು ಬಿಟ್ಟು ಹೊನ್ನ ಪಂಜರದ ಬಂಧನಕ್ಕೊಳಗಾಗಲಿಯಾ? ಲೋಹ ಪಂಜರವಿದ್ದರೇನು ಹೊನ್ನ ಪಂಜರವಿದ್ದರೇನು ಎಲ್ಲವೂ ಬಂಧನವೇ ಅಲ್ಲವೆ? ದ್ರಾಕ್ಷ ದಾಳಿಂಬಾದಿ ಮಧುರ ಪಣ್ಗಳ ಮೆಲಿದು ಯುವತಿಯರ ಮನತಣಿಪ ಮನೆ ಹಕ್ಕಿ ಯಾಗುವುದಕ್ಕಿಂತ ಕಹಿಗಾಯಿಗಳೆ ಇರಲಿ, ಏನೆ ಇರಲಿ ಸಿಕ್ಕುದನು ತಿಂದು ಸ್ವಾತಂತ್ರದಲ್ಲಿ ಬನದಿಂದ ಬನಕ್ಕೆ ಹಾರುವ ಬನದ ಹಕ್ಕಿ ಯಾಗುವುದೆ ನನಗೆ ಹಿರಿದಾಗಿಹುದು. ಅದಕಾಗಿ ತಂದೆ! ಎನ್ನ ನೀಗ ಬಂಧನದಿ ಬಂಧಿಸಬೇಡ, ಎಂದು ನಾನೆನ್ನಲು ಇದಕೇಳಿ ನನ್ನ ತಂದೆಗೆ ಕಣ್ಣೀರು ಮಿಂಚಿ ದೃಷ್ಟಿ ಮಸುಕಾಗಲು ಕಣ್ಣನೊರಿಸಿ ಕೊಳ್ಳುವನು. ಅದೆ ಸಂಧಿಯನೆ ಸಾಧಿಸಿ ನಾನು ಮನೆಯ ಹೊರಗಾದೆ. ಆಗ ನನ್ನ ತಂದೆ ತಾಯಿಗಳು ಎಷ್ಟೋ ಅತ್ತಿರಬೇಕು! ಕರೆದಿರಬೇಕು!! ಆದರೆ ಅದನ್ನಾರು ಬಲ್ಲರು?

ಮನಿಯ ಹೊರಬಂದವನು ಎಲ್ಲಿಯೂ ನಿಲ್ಲದೆ ನಿಡಿದಾಗಿ ಮುಗಿಲ ಕಡೆಗೇ ಹಾರಿದೆ. ಅಲ್ಲಿ ನನ್ನ ನೆಚ್ಚಿನ ಕೆಲಗೆಳೆಯರು ನನಗಾಗಿ ಹಾದಿ ಕಾಯುತಲಿದ್ದರು. ಅವರು…… ಬಂಧುವೆ! ಮುಂದಿನ ಕತೆಯದು ಎಷ್ಟು ದುಃಖದ ಕತೆ ಹೇಳಲಾರೆ ನಾ ಹೇಳಲಾರೆನಪ್ಪಾ!!! ಏಸು ವನಗಳ ತಿರುಗಿದೆ. ಏಸು ಗಿರಿಗಳನ್ನು ಸುತ್ತು ಹಾಕಿದೆ. ಕಂದರಗಳಾಳನೇನು ನೋಡಿದೆ. ಅಹಾ! ಏನು ದೃಶ್ಯ!!.. ಮೊದಲು ತುಂಗಾ ತೀರಕ್ಕೆ ಹೋದೆ, ಅಲ್ಲಿ ಕೆಲವು ದಿನವಿರುವುದರಲ್ಲಿ ನನ್ನ ಹಿರಿಯಣ್ಣ ನನ್ನ ಹುಡುಕಬರಲು ಬೆಳ್ಳಿಗಿರಿಯ ಹತ್ತಿ ಆಚೆ ಹಾರಿದೆ. ಅಲ್ಲಿ ಕೆಲದಿನವಿದ್ದು, ಅದೇ ಶೃಂಗ ಸಾಲಿನಲ್ಲಿರುವ ಚಂದ್ರಗಿರಿಯ ಹತ್ತರದಲ್ಲಿ ಆಲಮರಗಳ ಬನವೊಂದುಂಟು, ಅಲ್ಲಿಯೂ ಕೆಲದಿನ ಕಳೆದೆ, ಅಲ್ಲಿಂದ ನವರಸ ಬನಕ್ಕೆ ಹಾರಿದೆ. ಅಲ್ಲಿಂದ ಶಾಂತಿ ವನವನ್ನು ಸೇರಲು ಹವಣಿಸಿದೆ. ವಿಧಿಯು ಅಡ್ಡ ಬರಲು ಹೇಮಕೂಟಕ್ಕೆ ತದನಂತರ ಮಾತುಂಗ ಪರ್‍ವತ ಹತ್ತಿದೆ. ಹೀಗೆ ಏಸೊ ಬನಗಳನ್ನು ಸುತ್ತಿ ತಿರುಗುವುದರೊಳಗೆ ದ್ವಾರಕೋಟಿಯ ರಾಣಿಯ ಉಪವನವನ್ನು ಸೇರಿ ಅಲ್ಲಿ ತೂಗಬಿಟ್ಟ ಚಿತ್ರ ಪಟಗಳನು ನೋಡಲು ಮರಳುಗೊಂಡು ಅನ್ನ ನೀರುಗಳನು ಮರೆತು ಸೊರಗಿದೆ. ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅಣ್ಣ! ರಕ್ತ ನೀರಾಯ್ತಲ್ಲಿ. ಅಲ್ಲಿಂದ ಹೇಗೋ ಒಮ್ಮೆ ಹಾರಿ ಬಂದೆ. ಆಗ ತಾಯಿಯನು ಕಾಣುವ ಹಂಬಲ ಹಿರಿದಾಗಲು ಕರುಳು ಕೇಳಲಿಲ್ಲ, ಅವಳಿರುವ ಬನದೆಡೆಗೆ ಹೋದೆ. ಅವಳು ಅಲ್ಲಿ ಪಡುತ್ತಿದ್ದ ಬನ್ನವನ್ನೇನೆಂದು ಬಣ್ಣಿಸಲಿ! ಆಕೆಯ ಕಷ್ಟವನ್ನು ಪರಿಹರಿಸಲೆಂದು ವಿಷಪರ್ವತದ ಗುಹೆಯೊಂದರಲ್ಲಿ ಮೂರು ಸಂವತ್ಸರ ತಪವಿದ್ದೆ. ಅಲ್ಲಿ ಹೊಂದಿದ ಸಂತಾಪ, ಪಟ್ಟ ಕಷ್ಟ, ಏನು ಹೇಳಲಿ! ಈ ಬಾಯಿ ಸಾಲದು ನನಗೆ, ಹೀಗೆ ಬೆಂದ ಹೃದಯ, ನೊಂದ ಮನಸ್ಸು, ಹೊಂದಿದ ಕಷ್ಟವೆಲ್ಲವನು ಸಹಿಸಿ ಸಹಿಸುತ್ತಲಿರುವಾಗ “ಪ್ರೇಮವೆನ್ನುವ ವಸ್ತು ಜಗದಿ ಇಹುದೆ? ಅದು ನಾನು ಸವಿಯಬಲ್ಲೆನೆ?” ಎನ್ನುವ ನನ್ನ ಹಿರಿದಾದ ಆಸೆ ಹೆಚ್ಚಾಯಿತು. ಅದಕಾಗಿ ಕಂಡಕಂಡವರನೆಲ್ಲ ಕೇಳ ತೊಡಗಿದೆ. ಸರ್ವರನ್ನೂ ತಾಯಿಯೆಂದೂ, ತಂದೆಯೆಂದೂ ಅಣ್ಣನೆಂದೂ, ತಮ್ಮನೆಂದೂ ಭಾವಿಸಹತ್ತಿದೆ. ನನ್ನನ್ನು ಅಣ್ಣನನ್ನಾಗಿ ಇಲ್ಲವೆ ತಮ್ಮನನ್ನಾಗಿ ಅಥವಾ ಗೆಳೆಯನನ್ನಾಗಿ ಮಾಡಿಕೊಂಡು ತಮ್ಮ ದುಃಖದಲ್ಲಿ ದುಃಖಿಯನ್ನಾಗಿಯೂ ಸುಖದಲ್ಲಿ ಸುಖಿಯನ್ನಾಗಿಯೂ ಮಾಡಿಕೊಳ್ಳುವ ಮಮತಾಳುಗಳಾರಾದರೂ ದೊರೆಯುವರೇ ಎಂದು ಹುಡುಕಿದೆ. ಎಲ್ಲೆಲ್ಲಿಯೂ ನಿರಾಶೆ! ಎಲ್ಲೆಲ್ಲಿಯೂ ಸ್ವಾರ್ಥ! ಮೋಹದಲಿ ಮುಚ್ಚಿರುವ ಪ್ರೇಮವನು ಕಂಡು ಕಂಗೆಟ್ಟು ನಾನೀ ಬನಕ್ಕೆ ಬಂದೆ. ಬಂದು ನಿಮ್ಮನು ಕಂಡು ಹರುಷಗೊಂಡೆ. ನನ್ನ ತಪ್ತ ಹೃದಯವನ್ನು ಸಂತೈಸುವ ಸ್ಥಾನ ಇಲ್ಲಿಹುದೆಂದು ನಾನರಿತೆ. ಅರಿತು ನಿಮ್ಮಯ ಬಗೆಯ ಹೂ ಕಂಡೆ. ಅದ ಬಯಸಿ ಭೂಮಿಗಿಳಿದೆ. ಎಲೆ ದಂಪತಿಗಳೆ! ಇನಿತು ದುಃಖಗಳ ಸಹಿಸಿ ಸಹಿಸಿ ಪ್ರೇಮವನು ಯಾಚಿಸುತಿರಲು ಎನಗೆ ಪ್ರೇಮ ಭಿಕ್ಷೆಯನಿತ್ತು ನನ್ನನ್ನುಳಿಸಿಕೊಳ್ಳಿರಿ.” ಎಂದು ಮೇಲೆ ಮುಖಮಾಡಿ ಕಣ್ಣೀರು ಗರೆಯಿತು. ಆಗ ಆ ದಂಪತಿಗಳು-

“ನೀನನ್ನುವ ಮಾತು ಕೇಳಿದರೆ ಎಲೆಗೆಳೆಯಾ, ಎಮಗೆ ಕನಿಕರ ಬರುತಿಹುದಲ್ಲದೆ ನಿನ್ನರ್ಥದ ಪ್ರೇಮ ನಮ್ಮ ಹೃದಯದಲ್ಲಿ ಒಡಮೂಡದು. ನಿನ್ನ ಪ್ರೇಮದ ಅರ್ಥ ನಮಗಾಗದು, ಹೆಂಡರಲಿ ಮಕ್ಕಳಲಿ ಪ್ರೇಮ ಮಾಡುವ ಬಲ್ಲೆವು ನಾವು. ಆದರೆ, ಅದು ಎಲ್ಲ ಮೋಹವೆಂಬುದು ಅರಿತಿಹೆವು” ಎಂದು ಹೇಳಿ ಆ ಎರಡು ಹಕ್ಕಿಗಳು ಸುಮ್ಮನಾಗುವವು.

ಕಾಲನ ಬಾಯಿಯಲಿ ಇಂಥ ಏಸೋ ದಿನಗಳು ಬಂದು ಮುಳುಗಿ ಹೋದವು. ಎಷ್ಟೋ ಸಾರಿ ಸೂರ್ಯ ಮೂಡಿ ಮೂಡಿ ಮರೆಯಾದನು. ಆದರೇನು, ಆ ಹಕ್ಕಿಯ ದುಃಖಗಳುಮಾತ್ರ ಇನಿತು ಕೂಡ ಇಳಿಯಲಿಲ್ಲ ಪ್ರೇಮಯಾತನೆ ಶಾಂತವಾಗಲಿಲ್ಲ. ಆ ದಂಪತಿಗಳು ಒಮ್ಮೊಮ್ಮೆ ಪ್ರೀತಿಯಿಂದ ಮಾತನಾಡಿದರೆ ಇದಕ್ಕೆ ಸ್ವರ್ಗಕಿಂತಲು ಮಿಗಿಲಾಗುವುದು, ಇಲ್ಲದಿರೆ ನರಕಕಿಂತಲು ಕೀಳು ಅದಕ್ಕೆ. ಅವುಗಳನ್ನಗಲಿ ಒಂದು ಕ್ಷಣ ಕೂಡ ಇರಲು ಇದಕೆ ಮನವಿಲ್ಲ. ಎಲ್ಲಿಯಾದರೂ ಆ ಬನದಾಚೆ ಅವು ಹೋದರೆ ಅವುಗಳತ್ತ ಇದರ ಮನವಿರುತಿಹುದು.

“ಅವುಗಳಿಗೆ ಕ್ಷೇಮವಿರಬಹುದಷ್ಟೆ? ಅವು ನನ್ನ ವಿಷಯವಾಗಿ ಮಾತನಾಡುತಿರಬಹುದಷ್ಟೆ?? ಈಗ ಹೊರಟಿರಬಹುದಷ್ಟೆ???” ಎಂದು ಏನೊ ಪರಿಯಾಗಿ ಭಾವಿಸುವದು. ಬರಲು ಬಹಳ ಹೊತ್ತಾದರೆ ಎದ್ದೆದ್ದು ಹಾದಿ ನೋಡುವದು. ಕೂತು ಕೊಂಡು ಚಿಂತಿಸುವದು. ಮತ್ತೆ ನೋಡುವದು ಸುಳಿವು ಕಾಣದಿರೆ ಮನದಿ ಕಳವಳಿಸುವದು. ಅವರ ಮಾತಿನಲಿ, ರೀತಿಯಲಿ ವ್ಯತ್ಯಯ ಬರಲು ಕೋಟಿಸಿಡಿಲಿನ ಏಟು ಸಹಿಸುವುದು. ಒಡಲಲ್ಲಿ ಅಲಗನಿಟ್ಟು ತಿರುವಿದಂತಾಗಲು ತಾಳಿಕೊಳ್ಳುವುದು. ಆದರೆ, ಇಂಥ ಹೊತ್ತಿನಲ್ಲಿ ಅವುಗಳೊಡನೆ ಮನಬಿಚ್ಚಿಮಾತನಾಡಿದರೆ ಆ ಎಲ್ಲ ಸಾವು ನೋವುಗಳು ಬಯಲಾಗಿ ಅದರ ಹೃದಯ ಹಿರಿದಾಗುವುದು. ಹಿಗ್ಗು ಹೆಚ್ಚುವುದು, ಇಷ್ಟರಲ್ಲಿ ಮತ್ತೊಂದು ಬಿರುಗಾಳಿ ಬರಲು ಅದೆಲ್ಲವನು ಕೊಚ್ಚಿಕೊಂಡು ಹೋಗುವುದು. ಹಿಂದಿನ ಅಳುವೆ ಅದರ ಸಂಪದವಾಗುವುದು. ಮತ್ತೆ ಮತ್ತೆ ಅಳುವುದು, ಗೋಳಿಡುವುದು. ಒಮ್ಮೊಮ್ಮೆ ಇರುಳೆಲ್ಲವನು ಅಳುವಿನಲೆ ಕಳೆಯುವುದು. ಹಲವು ಹಂಚಿಕೆಗಳನು ಹಾಕಿ ಆ ದಂಪತಿಗಳನು ತನ್ನ ಕಣ್ಣಿದಿರು ತಂದು, ಕಣ್ಣೀರಿನಿಂದ ಅವರ ವಾದಗಳನು, ತೊಳೆಯುವುದು. ನಿಮ್ಮ ಪ್ರೇಮದಾಶೆ ಮಾಡಿ ನಿಮ್ಮ ಹೃದಯ ಮಂದಿರದ ಈಶನನು ಪೂಜಿಸುವೆನು” ಎಂದು ಬೇಡಿಕೊಳ್ಳುವುದು. ಅದಕೆ ಬಿಸಿಯುತ್ತರವು ಬರಲು “ಪ್ರೇಮವು ಸುಖದ ನೆಲೆಯಾಗಿಹುದೆ? ಛಿ! ಸುರಿಲೋಕ ಸುಧೆಯಾಗಿಹುದೆ?? ಛಿ!! ಇದು ಸತ್ಯವಲ್ಲ. ಹಾಗಿರಲು ನಮಗೇಕೆ ಈ ಪರಿ ದುಃಖ?” ಎಂದು ಬಗೆಯುವುದು. ಈ ಪ್ರೇಮ ಅಮೃತವಲ್ಲ, ಪ್ರೇಮ ಸಂಜೀವನವಲ್ಲ, ಪ್ರೇಮವು ಶಿವ ಕುಡಿದ ಹಾಲಾಹಲ ವಿಷವಾಗಿದೆ. ಬೆಂಕಿಯಾಗಿದೆ.” ಎಂದು ಅಂದು ಕೊಳ್ಳುವುದು. “ಎನ್ನ ತಾಯಿ! ಎನ್ನ ಅಣ್ಣಾ!! ಆ ಹಾಲಾಹಲ ವಿಷ ಪ್ರಜ್ವಲಿಸುವ ವಡವಾನಲವಾಗಿ ನನ್ನ ಹೃದಯವನ್ನು ಸುಡುತ್ತಲಿದೆ ಈಗ. ನಾನು ತಡೆಯಲಾರೆ ಬದುಕಲಾರೆ. ನಿಮ್ಮ ಪ್ರೇಮದೌಷಧಿಯನಿಕ್ಕಿ ನನ್ನ ಸಲುಹಿಕೊಳ್ಳಿರಿ” ಎಂದು ಶೋಕಿಸುತ್ತ ಬಿದ್ದು ಕೊಳ್ಳುವುದು. ಹೊರಳಾಡಿ ಗೊಳಿಡುವುದು.

ರೆಕ್ಕೆ ಕಳಚಿದ ಆ ಹಕ್ಕಿ ಒಂದು ದಿನ ಯಾವುದೋ ಒಂದಡವಿಯಲ್ಲಿ ಬಿದ್ದು ತನ್ನೆಡೆಗೆ ನೋಡದೆಲೆ ಮೇಲೆ ಹಾರುತಿರುವ ಆ ದಂಪತಿಗಳನು ಕಣ್ಣು ಬಿಟ್ಟು ನೋಡುತ್ತ ದುಃಖಾಶ್ರುಗಳನು ಒಂದೆ ಸವನೆ ಧಾರೆಯಾಗಿ ಸುರಿಸಿ ನಿಡಿದಾದ ಬಿಸಿಯುಸಿರನು ಎಳೆಯುತಿದೆ. ಅವುಗಳೊಡನೆ ಏನೋ ಮಾತಾಡಬಯಸಿ ಕಂಠ ಗದ್ಗದಿಸಲು ಕಳೆ ಮೋರೆ ಮಾಡಿ ನೆಲಕ್ಕುರುಳುತಿದೆ. ಬಿಕ್ಕಿ ಬಿಕ್ಕಿ ಅತ್ತು ತನ್ನ ದೈವವನು ಹಳಿಯುತ್ತಿದೆ. ಹೀಗೆ ಪ್ರೇಮ ವ್ಯಥೆಯಲ್ಲಿ ಮೂರ್‍ಛಿತವಾಗಿರಲು ಇದುರಿಗೊಂದು ಮಹಾಗಿರಿಯ ಕಡಿದಾದ ಪ್ರದೇಶವು ಕಂಗೊಳಿಸಿತು. ಏಕೆ ಏನೋ, ಅದನೇರುವಾಸೆ ಇದರ ಹೃದಯದಲ್ಲಿ ಹೆಚ್ಚಳಿಸಲು ಹಾಲುಂಡಿಯಂತಿದ್ದ ಆ ರೆಕ್ಕೆಯಿಲ್ಲದ ಹಕ್ಕಿಯು ಮೆಲ್ಲಮೆಲ್ಲನೆ ಒಂದೊಂದೆ ಹೆಜ್ಜೆಯನ್ನಿಡುತ್ತ ಏರತೊಡಗಿತು. ಆದರೆ ಏತಕೊ ಏನೋ ಎಂಬುದನು ಅದು ಅರಿಯದು. ಏರತೊಡಗಿತು ಹಾಗೇ ಏರತೊಡಗಿತು. ಅಷ್ಟರಲ್ಲಿ ಒಂದು ಶಕ್ತಿ, ಪ್ರಗಾಢವಾಗಿಹ ಶಕ್ತಿ ಅದರ ಜೀವದಾಳವನು ಹೊಕ್ಕು ಕೆಳಗಿನಿಂದ ಮೇಲೆ ಒತ್ತುತಲಿತ್ತು. ಆ ಹಕ್ಕಿ ತನ್ನನು ಯಾರು ಮೇಲಕ್ಕೆ ಒತ್ತುವರೆಂದು ಸುತ್ತಮುತ್ತ ನೋಡಲು ಕಣ್ಣರಳಿತು. ಅಷ್ಟರಲಿ “ಇಚ್ಛೆಯಿರುವಲಿ ಪೋಗು, ಇಚ್ಛೆಯಿರುವಲಿ ವೋಗು” ಎಂದೊಂದು ಧ್ವನಿಯನ್ನು ಹೃದಯ ದಾಳದಿಂದ ಉಚ್ಚರಿಸಿ ಹದ್ದು ಹಾರಿಸಿದ ಹಾಗೆ ಆಗಸದಲ್ಲಿ ಅದನ್ನು ಹಾರಿಸಿಬಿಟ್ಟಿತು. ಆಗ ಮಿತಿಯಿಲ್ಲದಾನಂದ ಅದರ ಹೃದಯ ತುಂಬಿ ಕೊಂಡಿತು. ಹಿಗ್ಗು ಹಿರಿದಾಗಿ ಅದನ್ನು ತೇಲಾಡಿಸಿ ಓಲಾಡಿಸಿ ಬಿಟ್ಟಿತು. ಇಂತು ಆ ಹಕ್ಕಿ ತನ್ನಂತರಂಗದ ವಾಚಾಮಗೋಚರ ಆನಂದದಲ್ಲಿರಲು ಅನಿತರೊಳೆ ಅದರ ನಚ್ಚಿನ ಜೋಡು ಹಕ್ಕಿಗಳೆದುರು ಮುಗಿಲಲ್ಲಿ ತೇಲಿಬಂದು ಮಂದ ಮುಹೂರ್ತದೊಳು ಆಗಸದಲ್ಲಿ ಮೈದಾಳಿದ ಮಹಾ ಮಂತ್ರವಿದು :-

* “ಮೂರು ಜೀವಗಳು ಮುಗಿಲ ತಲದಲಿ ಕೂಡಿ
ಹೃದಯಗಳನೆಲ್ಲವನು ಸಾಮರಸ್ಯವ ಮಾಡಿ
ತಮ್ಮ ತಮ್ಮಯ ಆತ್ಮದರಿವನ್ನು ಅರಿತಲ್ಲಿ
ಆಗಲೇ ಹುಟ್ಟುವುದು ನವನವ್ಯ ಜೀವನವು”
* “If three people are together under the skies and the soul is conscious between them, that is civilisation”
– “A. E”

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್