ಮೇರಾ ಭಾರತ್ ಮಹಾನ್ ಹೈ
ಹೇಳಿ ನಮ್ಮಿದಿರು ಯಾರಿಹರು ಸ
ಗುಡಿ ಕಟ್ಟಿದವರನ್ನು ಗುಡಿಯಾಚೆಗಿರಿಸಿದ
ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ
ಪಾವಿತ್ರ ದ ಚರಿತೆ ಇದು ಅಲ್ಲವೆ ಹೇಳಿ!
ಇಂತಹ ಚರಿತೆ ಬೇರೆಲ್ಲಿದೆ ಕೇಳಿ?
ತುಳಿದವನ ಜಾತಿಗೆ ಹೆಸರು ಮೇಲ್ಜಾತಿ
ತುಳಿಸಿಕೊಂಡವನಿಗೆ ಹೆಸರು ಕೀಳ್ಜಾತಿ
ಇಂತಹ ವ್ಯಾಖ್ಯಾನ ಬರೆದ ಸಾಮಾಜಿಕತೆ!
ಹೌದಲ್ಲವೆ ಹೇಳಿ ಭಾರತದ ಆತ್ಮಕತೆ?
ದೇವಭಾಷೆ ದೇವಪುತ್ರರಿಂದ ಕೊಲೆಯಾದ ಕತೆ
ಪುರೋಹಿತ ನಾಮ ಹೊತ್ತು ತಿರೋಹಿತ ಆದ ಕತೆ
ಇಂತಹ ಕತೆ-ವೆತೆ ಪುಟವ ತುಂಬಿದ ಚರಿತೆ
ಎಂದೂ ಅಲ್ಲವೆ ಹೇಳಿ ಸುವರ್ಣಾಕ್ಷರ ಚರಿತೆ!?
ನಮ್ಮ ಸಂಸ್ಕ ತಿದೇವಿ ನಿತ್ಯಪೂಜೆಗೆ ಮಾನ್ಯ
ಅದಕೆ ನಾವ್ ಧನ್ಯ ಬೇಡ ನಮಗೆ ಅನ್ಯ
ನಿಜದ ಕತೆ ಬೇಡ ಭ್ರಮೆಯ ಕತೆ ಚೆನ್ನ!
ನಮಗೆ ನಾವ್ ಚಿನ್ನ ಹಣೆಬರಹವೆ ಚೆನ್ನ!
*****

















