ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಕೆರೆಯ ಮೈಲುದ್ದದ ಏರಿಯ ಮೇಲೆ ಒಂದು ಭಾನುವಾರ ಸಂಜೆ ಒಬ್ಬ ಕಳ್ಳ ಕುಂಟುತ್ತ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಡೆಯುತ್ತಿದ್ದ. ಆತ ಏರಿಯ ಮಧ್ಯ ತಲುಪುವ ಹೊತ್ತಿಗೆ ಎದುರಗಡೆಯಿಂದ ಇನ್ನೊಬ್ಬ ಬಂದು ಸೇರಿಕೊಂಡ. ಇಬ್ಬರೂ ಮುಖ ಮುಖ ನೋಡಿಕೊಂಡರು. ಆಮೇಲೆ ಏರಿಗೆ ಹಾಕಿದ್ದ ಕಟಾಂಜನದ  ಕಬ್ಬಿಣದ ಸರಳಿಗೆ ಒರಗಿಕೊಂಡು ಸಿಗರೇಟು ಸೇದತೊಡಗಿದರು. ಇದು ಕಷ್ಟದ ಕಾಲ, ಎಂದ ಮೊದಲನೆಯವ. ಎರಡನೆಯವ ಕೆರೆಗೆ ಕ್ಯಾಕರಿಸಿ ಉಗುಳಿದ.

“ಆ ಕೂತವರನ್ನು ನೋಡಿದೆಯ?”

ಬೆಂಚಿನ ಮೇಲೆ ಇಬ್ಬರು ಕೂತಿದ್ದರು; ಗಂಡ ಹೆಂಡತಿ, ಅವರ ಮಗು ಸ್ವಲ್ಪವೇ ದೂರದಲ್ಲಿ ನೆಲದ ಮೇಲೆ ಓಡಾಡುತ್ತಿತ್ತು. ಸಂಜೆಯ ಸೂರ್ಯರಶ್ಮಿಗೆ ಅದರ ಕೊರಳಲ್ಲಿ ಏನೋ ಫಳಫಳನೆ ಹೊಳೆಯುತ್ತಿತ್ತು.

“ಶ್ರೀಮಂತರ ಸಹವಾಸ ಬೇಡ.” ಎಂದು ಎರಡೆನೆಯವ ದೊಡ್ಡ ತತ್ತ್ವಜ್ಞಾನಿ ಯಂತೆ ಹೇಳಿದ.

“ತಪ್ಪಿಸಿಕೊಂಡರೆ ಕನಿಷ್ಠ ಒಂದು ತಿಂಗಳಿಗೆ ಸಾಕು,”ಎಂದು ಮೊದಲನೆಯವ ಬಾಯಿ ಚಪ್ಪರಿಸಿದ.

“ನಿಜ, ಸಿಕ್ಕಿಬಿದ್ದರೆ ಎರಡು ತಿಂಗಳಿಂದ ಎರಡು ವರ್ಷ.”

“ದೊಡ್ಡ ಮೊತ್ತದಲ್ಲಿ ದೊಡ್ಡ ಅಪಾಯ.”

“ಅವರು ಕಾರಿರುವ ಮಂದಿ, ಅದು ನೋಡಿದೆಯ? ಅವರದೇ ಇರಬೇಕು, ನಮ್ಮ ನಮ್ಮ ನೆಲೆ ನೋಡಬೇಕಲ್ಲ.”

ಮೊದಲನೆಯವ ಏನೋ ಗೊಣಗಿದ.

“ನಿನ್ನ ಕಾಲು ಇನ್ನೂ ಸರಿಯಾಗಿಲ್ಲ. ಆಗಲೇ ನೆಗೆಯಬೇಕೆಂದರೆ ಹೇಗೆ? ಅವರು ಎರಡನ್ನೂ ಮುರಿದು ಹಾಕಲಿಲ್ಲವಲ್ಲ ಸಧ್ಯ. ದೇವರು ದೊಡ್ಡವ ಎಂತ ತಿಳಕೋ.”

ಎರಡನೆಯವ ಹೇಳಿದ್ದರಲ್ಲಿ ಸತ್ಯವಿದೆ ಎಂದು ಅನಿಸಿದರೂ ಮೊದಲನೆಯವನಿಗೆ ಒಪ್ಪಲು ಮನಸ್ಸಾಗಲಿಲ್ಲ. ತನ್ನ ಮೊಂಡು ವಾದವನ್ನು ಮುಂದುವರಿಸಿದ, ಹಾರಿಸುವುದಾದರೆ ದೊಡ್ಡ ಮೊತ್ತವನ್ನೇ ಹಾರಿಸಬೇಕು. ನೊಣ ತಿಂದು ಜಾತಿ ಕೆಡುವುದು ಯಾಕೆ?

ಆದರೆ ಕುಂಟುಕಾಲು ಅವನ ದೌರ್ಬಲ್ಯವಾಗಿತ್ತು. ಅದನ್ನಾತ ಯಾವ ರೀತಿ ಯಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವಿರಲಿಲ್ಲ. ತಿಂಗಳ ಹಿಂದೆ ಅವನು ಒಂದು ಬಾಡಿಗೆ ಸೈಕಲ್ ಮಾಡಿ ಕೊಂಡು ಜನನಿಬಿಡವಾಗಿದ್ದ ಸುಲ್ತಾನ್ ಬಜಾರಿನಲ್ಲಿ ಓಡಾಡುತ್ತಿದ್ದ. ರಾತ್ರಿ ಏಳು ಏಳೂವರೆಯಾಗಿರಬಹುದು. ಬೀದಿಯಲ್ಲಿ ಸಂತೆ. ಮೂರು ನಾಲ್ಕು ಬಾರಿ ಅತ್ತಿಂದ ಇತ್ತ ಓಡಾಡಿದಮೇಲೆ ಒಬ್ಬಾಕೆ ದಪ್ಪ ಹೆಂಗಸು ಕಣ್ಣಿಗೆ ಬಿದ್ದಳು. ಆಕೆಯ ಒಂದು ಕೈಯಲ್ಲಿ ಪ್ಲಾಸ್ಟಿಕ್ಕಿನ ಒಂದು ಚೀಲವಿತ್ತು. ಇನ್ನೊಂದರಲ್ಲಿ ಯಾವುದೋ ತರಕಾರಿಯ ಸ್ಯಾಂಪಲ್ ಪರೀಕ್ಷೆ ಮಾಡುತ್ತಿದ್ದಳು. ಸಮೀಪದಲ್ಲಿದ್ದ ಗಂಡಸರಾರೂ ಆಕೆಗೆ ಸಂಬಂಧಿಸಿದಂತೆ ತೋರಲಿಲ್ಲ, ಈತ ಸ್ವಲ್ಪ ದೂರ ಹೋಗಿ ಸರ್ರನೆ ಸೈಕಲನ್ನು ಆಕೆಯ ಒತ್ತಿಗೇ ಓಡಿಸಿಕೊಂಡು ಬಂದು ಆಕೆಯ ಕೊರಳಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ. ಎರಡೆಳೆ ಸರ ಅದು. ಹತ್ತಾರು ಪವನುಗಳಿರಬೇಕು. ಕೈಗೆ ಬಂದರೆ ಇದೆಲ್ಲಾ ಬಿಟ್ಟು ಒಂದು ಅಂಗಡಿ ತೆರೆದು ಸುಖವಾಗಿರಬೇಕೆಂದು ಬಯಸಿದ್ದ. ಎಳೆದ ರಭಸಕ್ಕೆ ಹೆಂಗಸು ದೊಪ್ಪನೆ ಬಿದ್ದಳು. ಈತ ಅಷ್ಟು ದೂರ ಹೋಗಿ ಮುಗ್ಗರಿಸಿದ. ಸೈಕಲು ಇನ್ನೆಲ್ಲೋ ಬಿತ್ತು. ಒಂದು ಕ್ಷಣ ಏನಾಯಿತೆಂದೇ ಗೊತ್ತಾಗಲಿಲ್ಲ. ಗೊತ್ತಾದಾಗ ಕೆಲವು ಜನರು ಇವನನ್ನು ಆಕ್ರಮಿಸಿದ್ದರು. ಒಬ್ಬ ಇವನ ಒಂದು ಕಾಲನ್ನು ಮೆಟ್ಟಿ ಹಿಡಿದು ಇನ್ನೊಂದನ್ನು ತಿರುವುತ್ತಿದ್ದ. ಮೊಣಕಾಲಿನಲ್ಲೇನೋ ಸದ್ದಾಯಿತು. ಆಮೇಲೆ ಕಣ್ಣು ಕತ್ತಲೆ ಬಂತು. ಪೋಲೀಸರು ಬಂದು ಒದ್ದು ಎಬ್ಬಿಸಿದಾಗ ತನ್ನ ಒಂದು ಕಾಲು ಸ್ವಾಧೀನದಲ್ಲಿಲ್ಲವೆಂದು ಗೊತ್ತಾಯಿತು.

“ನೋಡೋಣ. ಸ್ವಲ್ಪ ಕತ್ತಲಾಗಲಿ.” ಎಂದ ಎರಡನೆಯವ. ಸ್ವಲ್ಪ ಹೊತ್ತು ಇಬ್ಬರೂ ಏರಿಯ ಮೇಲೆ ಸಿಳ್ಳುಹಾಕುತ್ತ ಅಡ್ಡಾಡತೊಡಗಿದರು, ಕೆರೆಯ ಕಡೆಯಿಂದ ಥಂಡಿಯಾದ ಗಾಳಿ ಬೀಸುತ್ತಿತ್ತು. ಬಿಳಿಯಂಗಿ, ಶಿರಸ್ತ್ರಾಣ ಧರಿಸಿದ ಬೀದಿ ಪೋಲೀಸರು ಹೆದ್ದಾರಿಯ ಉದ್ದಕ್ಕೂ ಸೈಕಲಿನ ಮೇಲೆ ಆಚೀಚಿ ಗಸ್ತು ತಿರುಗುತ್ತಿದ್ದರು. ಆಚೆ ಬದಿಗೆ ಬಿಸಿಬಿಸಿ ತಿಂಡಿಗಳನ್ನು ಮಾರುವ ಅಂಗಡಿಯೊಂದು ಕಾಣಿಸಿತು. ಓಡಾಡುತ್ತಿದ್ದ ವಾಹನಗಳನ್ನು ತಪ್ಪಿಸಿಕೊಂಡು ಇವರು ಆ ಕಡೆಗೆ ದಾಟಬೇಕಾದರೆ ಸ್ವಲ್ಪ ಹೊತ್ತೇ ಹಿಡಿಯಿತು.

ನೌಬತ್ ಪಹಾಡಿನ ಮೇಲೆ ಚಂದ್ರಕಾಂತ ಶಿಲೆಯಲ್ಲಿ ಕಟ್ಟಿದ ವೆಂಕಟೇಶ ಮಂದಿರ ವಿದ್ಯುದ್ದೀಪಗಳ ಬೆಳಕಿಗೆ ಜಗಜಗಿಸುತ್ತಿತ್ತು. ರಾತ್ರಿಯ ಬಯಲಗಾಳಿಗೆ ಕೆರೆಯಲ್ಲಿ ಸಣ್ಣ ಸಣ್ಣ ಅಲೆಗಳು ಏಳುತ್ತಿದ್ದವು. ಹೈದರಾಬಾದು-ಸಿಕಂದರಾಬಾದುಗಳನ್ನು ಬೆಸೆಯುವ ಅಲೆಗಳು  ಅವು. ಈ ಅವಳಿ ನಗರಗಳ ನಿಶ್ವಾಸದಂತೆ, ಉಚ್ಛ್ವಾಸದಂತೆ ಬಿದ್ದೇಳುತ್ತಿದ್ದವು. ಇಲ್ಲಿ ಸಂಜೆ ಹೊತ್ತಿಗೆ ಇನ್ನೊಂದು ಸರೋವರವೇ ನಿರ್ಮಾಣ ವಾಗುತ್ತದೆ. ಜನಸರೋವರ, ಉದ್ದೇಶವಿಲ್ಲದೆ ತಿರುಗಾಡುವ ಮಂದಿ , ಎಲ್ಲಿಂದಲೋ ಪ್ರತ್ಯಕ್ಷವಾಗಿ, ಇರುಳು ಬೆಳೆದಂತೆ ಎಲ್ಲೋ ಕರಗಿಹೋಗುತ್ತಾರೆ.

ಇದೆಲ್ಲದರಲ್ಲಿ ಪಾಲ್ಗೊಳ್ಳುತ್ತ ಮರದ ಬೆಂಚೊಂದರಲ್ಲಿ ಒರಗಿ ಕುಳಿತ ಮುದುಕನಿಗೆ ಯಾವಯಾವುದೋ  ನೆನಪುಗಳು. ಭ್ರಮೆಗಳು. ವಾಸ್ತವವಾಗಿ ಅವನು ಯಾವುದನ್ನೂ ನೋಡಲಿಲ್ಲ. ಯಾವುದನ್ನೂ ಗಮನಿಸಲಿಲ್ಲ ಚಂದ್ರಕಾಂತ ಶಿಲೆಯ ವೆಂಕಟೇಶ ಮಂದಿರವಾಗಲಿ, ಕೆರೆಯಲ್ಲಿ ಏಳುವ ತೆರೆಗಳಾಗಲಿ, ಆಚೀಚಿನ ನಗರಗಳ ಬೆಳಕುಗಳಾಗಲಿ, ಏರಿಯ ಮೇಲೆ ಓಡಾಡುವ ಜನರಾಗಲಿ ಅವನ ಕಣ್ಣಿಗೆ ಬೀಳಲಿಲ್ಲ. ಅವನು ತನ್ನದೇ ನೆನಪುಗಳನ್ನು ಎಬ್ಬಿಸುತ್ತ ಕೂತಿದ್ದ.

ಅಷ್ಟರಲ್ಲಿ ಅವನ ಬಲಬದಿಗೊಬ್ಬ ಬಂದು ಕೂತ. “ಎಷ್ಟು ಸುಂದರವಾದ ರಾತ್ರಿ!” ಎಂದ ಬಂದವ. “ಇಂಥ ಹವೆಯಲ್ಲಿ ಎಲ್ಲವೂ ಸುಳ್ಳಾಗುತ್ತವೆ,” ಎಂದು ಆಶ್ಚರ್ಯಗೊಂಡ. “ನೀವು ಎಲ್ಲಿ ಹೋಗಬೇಕು, ಸಾರ್?” ಎಂದು ಕೇಳಿದ. ಮುದುಕ ಕೇಳಿಸಿಕೊಳ್ಳಲಿಲ್ಲ. “ಈ ಕೆರೆ ನೋಡಿದರೆ ನನಗೆ ನಮ್ಮೂರಿನ ಕೊಳ ನೆನಪಾಗುತ್ತದೆ ಸಾರ್,” ಎಂದು ಆತ್ಮೀಯವಾಗಿ ಮುಂದುವರಿಸಿದ.

“ಆ ಕೊಳ ನೆನಪಾದಂತೆಲ್ಲ ನನಗೆ ಅಳು ಬರುವ ಹಾಗಾಗುತ್ತದೆ. ಆ ಕೊಳದಲ್ಲಿ ಎಷ್ಟೊಂದು ಆಮೆಗಳು ಇದ್ದವೆಂತೀರಿ! ನಾನಾಗ ಪುಟ್ಟ ಹುಡುಗ, ಈ ಆಮೆಗಳನ್ನು ಎಣಿಸುತ್ತಲೆ ಲೆಕ್ಕ ಕಲಿತದ್ದು ನಾನು. ಒಂದು ಬಾರಿ ಹನ್ನೆರಡು ಆಮೆಗಳನ್ನೆಣಿಸಿದೆ. ದೊಡ್ಡ ದೊಡ್ಡ  ಆಮೆಗಳು ಅಸಾಧಾರಣ ಆಮೆಗಳು, ಕೊಳಗದಷ್ಟು ಅಗಲ ಅವುಗಳ ಬೆನ್ನು. ನಾವು ಹುಡುಗರು ಈ ಆಮೆಗಳೊಂದಿಗೆ ಆಟವಾಡುತ್ತಿದ್ದೆವು. ಒಂದೊಂದಕ್ಕೂ ಒಂದೊಂದು ಹೆಸರಿಟ್ಟಿದ್ದೆವು. ಸಿಲೋನು ಅಂತ ಒಂದು ಪಣಜಿ ಅಂತ ಇನ್ನೊಂದು, ಅಂಡಮಾನ ಮತ್ತೊಂದು. ಹೀಗೆ ನಾವು ಹೆಸರು ಹಿಡಿದು ಕೂಗಿದರೆ ಅವು ನೀರಿಂದ ಮೇಲೆ ಬರುತ್ತಿದ್ದವು. ಒಂದು ತಮಾಷೆಯ ಆಟ ಎಂದರೆ, ಆಮೆಗಳನ್ನೆಲಾ ಕರೆಯೋದು, ’ಲಕಡೀಕಾ ಪುಲ್’ ಅನ್ನೋದು. ತಕ್ಷಣ ಅವೆಲ್ಲ ಒಂದರ ಹಿಂದೆ ಒಂದರಂತೆ ನಿಲ್ಲುತ್ತಿದ್ದವು. ಆಮೆಗಳು ಈಜೋದನ್ನ ನೋಡಿದ್ದೀರಾ ಸಾರ್? ತುಂಬ ತಮಾಷೆ ಯಾಗಿದೆ. ಇವುಗಳ ಬೆನ್ನ ಮೇಲೆ ಕೂತರೆ ಒಳ್ಳೆ ತೆಪ್ಪದಲ್ಲಿ ಕೂತ ಹಾಗೆ.

“ಒಮ್ಮೆ ಏನಾಯ್ತು ಗೊತ್ತ? ನಮ್ಮೂರಿಗೆ ಒಬ್ಬ ಕಳ್ಳ ಬಂದ. ಆಮೆ ಕಳ್ಳ, ಬಂದು ನಾವಿಲ್ಲದಿರುವಾಗ ನಮ್ಮದೇ ಸ್ವರ ಅಣಕ ಮಾಡುತ್ತ, ’ಸಿಲೋನ್’ ಅಂತ ಕೂಗಿದ, ಸಿಲೋನಿಗೆ ಸ್ವಲ್ಪ ಸಂಶಯ ಬಂದಿರಬೇಕು. ತುಂಬಾ ಹೊತ್ತು ಮೇಲೆ ಬರಲೇ ಇಲ್ಲ. ಆಮೇಲೆ ಅಳುಕುತ್ತ ಬಂತು. ಅದು ಬರೋದನ್ನೇ ಕಾದು ಕುಳಿತಿದ್ದ ಈತ ಆದರೆ ಹೊಟ್ಟಿಗೇ ಕತ್ತಿ ಹಾಕಿಬಿಟ್ಟ ಇದು ನಮಗೆ ಗೊತ್ತಾಗಿ, ಆಮೆಕಳ್ಳನನ್ನು ಊರಿಂದ ಓಡಿಸಿದೆವೆನ್ನಿ. ಆದರೆ, ಹೋದ ಸಿಲೋನು ಮರಳಿ ಬರುತ್ತದೆಯೆ? ಇದೇ ದುಃಖದಿಂದ ಬಾಕಿ ಆಮೆಗಳು ಆತ್ಮಹತ್ಯೆ ಮಾಡಿಕೊಂಡವು…..”
ಮುದುಕ ಈಗಾಗಲೆ ಹೊಟ್ಟೆ ಬಿರಿಯುವಂತೆ ನಗಲು ಸುರುಮಾಡಿದ್ದ. ನಕ್ಕು ನಕ್ಕು ಅವನಿಗೆ ಕೆಮ್ಮು ಬರಲು ಸುರುವಾಗಿ ನಿಲ್ಲಿಸಿದ. ಅಷ್ಟರಲ್ಲಿ ಎಡಗಡೆಯಿಂದೊಬ್ಬ ಬಂದು, “ಒಂದು ರೂಪಾಯಿಯ ಚಿಲ್ಲರೆ ಇದ್ದರೆ ಕೊಡ್ತೀರ?” ಎಂದು ಕೇಳಿದ.

“ಚಿಲ್ಲರೆ ಇಲ್ಲ,” ಎಂದ ಮುದುಕ.

“ದಯವಿಟ್ಟು ನೋಡಿ.”ಎಂದು ಬಂದವ ಒತ್ತಾಯಿಸಿದ.

“ಇಲ್ಲ ಎಂದೆನಲ್ಲ,” ಎಂದ ಮುದುಕ.

“ಹಾಗಾದರೆ ಒಂದು ನಾಲ್ಕಾಣೆಯಾದರೂ ಕೊಡಿ. ಈ ನೋಟು ಇಟ್ಟುಕೊಳ್ಳಿ, ಆಮೇಲೆ ಇಸಗೊಳ್ಳುತ್ತೇನೆ,” ಎಂದು ನೋಟು ನೀಡಿದ.

ಮುದುಕ ಜೇಬಿಗೆ ಕೈಹಾಕಿ ಪರ್ಸು ತೆಗೆಯುವುದೇ ತಡ, ಮಿಂಚಿನ ವೇಗದಲ್ಲಿ ಅದನ್ನು ಹಾರಿಸಿಕೊಂಡು ಓಡಿದ ಎರಡನೆಯವ.

ಈಗ ಎಡಗಡೆಯಲ್ಲಿ ಕೂತಿದ್ದವ ಮುದುಕನ ಕೈಹಿಡಿದುಕೊಂಡು.

“ಛೀ, ಏನನ್ಯಾಯ ಆಯ್ತು, ಸಾರ್! ನೀವು ಪರ್ಸು ಹೊರಕ್ಕೆ ತೆಗೆಯಲೇಬಾರದಿತ್ತು ಸಾರ್. ಈ ಊರೇ ಹೀಗೆ, ಬೇಜಾರು ಮಾಡಬೇಡಿ. ಇವನ್ನೀಗ ಹಿಡಿದು ನಿಮ್ಮ ಪರ್ಸು ನಿಮಗೆ ಒಪ್ಪಿಸದಿದ್ದರೆ ನಾನು ಯಾಕೆ. ನೀವಿಲ್ಲೇ ಕೂತಿರಿ,” ಎಂದು ಕುಂಟುತ್ತ ಮೊದಲನೆಯವ ಓಡಿಹೋದ ದಿಕ್ಕಿನಲ್ಲಿ ನಡೆದ.

ಮುದುಕ ಅನಾಸಕ್ತನಾಗಿ ಆಕಳಿಸಿದ.

ಲಿಬರ್ಟೀ ಸಿನಿಮಾ ಮಂದಿರದ ಹಿಂದಿನ ಗಲ್ಲಿಯಲ್ಲಿ ಅವರು ಕೂಡಿಕೊಂಡರು, ಎರಡನೆಯವ ಪರ್ಸನ್ನು ದೀಪಕಂಬದ ಇಳಿಬೆಳಕಿಗೆ ಹಿಡಿದ. ಹಲವು ಸಂವತ್ಸರಗಳ ಬೆವರು ಹಿಡಿದು ದೊರಗಾದ ಚರ್ಮದ ಹಳೇ ಪರ್ಸು ಅದು. ಒಳಗೆ ಹಲವಾರು ಅರೆಗಳಿದ್ದವು. ಎಲ್ಲವನ್ನೂ ಶೋಧಿಸಿದ ಮೇಲೆ ಹನ್ನೆರಡೂ ಚಿಲ್ಲರೆ ರೂಪಾಯಿಗಳೂ ಎರಡು ಪತ್ರಗಳೂ ಸಿಕ್ಕಿದವು. ಮೊತ್ತ ಇಷ್ಟು ಕಡಮೆಯಾದ್ದಕ್ಕೆ ಇಬ್ಬರಿಗೂ ಬೇಜಾರಾಯಿತು. ಮುದುಕನೊಬ್ಬನಿಂದ ಇದಕ್ಕಿಂತ ಹೆಚ್ಚನ್ನು ನಿರೀಕ್ಷಿಸುವುದಾದರೂ ಹೇಗೆ?

ಪತ್ರಗಳನ್ನೇನು ಮಾಡುವುದೆಂದು ಒಂದು ಕ್ಷಣ ಅವರಿಗೆ ಗೊತ್ತಾಗಲಿಲ್ಲ ಮಬ್ಬು ಬೆಳಕಿನಲ್ಲಿ ಅವುಗಳನ್ನೋದಲು ಸಾಧ್ಯವಾಗುತ್ತಿರಲಿಲ್ಲ. ಇರಲಿ, ಆಮೇಲೆ ಓದಿ ನೋಡಿದರಾಯಿತು ಎಂದುಕೊಂಡು ಖಾಲಿ  ಪರ್ಸನ್ನು ಮಾತ್ರ ಚರಂಡಿಗೆಸೆದು, ಗಲ್ಲಿಯ ಹಿಂದುಗಡೆಯಿರುವ ಬಾರಿನ ಕಡೆ ಹೆಜ್ಜಿ ಹಾಕಿದರು.

ಹೊಟ್ಟೆ ಹಸಿಯುತ್ತಿದೆಯೆಂದು ಒಂದೊಂದು ರೂಪಾಯಿನ ಊಟ ಹೇಳಿದರು. ಆದರೊಂದಿಗೆ ಗೋವೆಯಿಂದ ಹೊಸದಾಗಿ ತರಿಸಿದ ಫೆನ್ನಿಯನ್ನೂ ತೆಗೆದುಕೊಂಡರು. ಹಸಿವು ತಣಿದಾಗ ಜೇಬಿನಲ್ಲಿ ಇಳಿಸಿದ್ದ ಪತ್ರಗಳ ನೆನಪಾಯಿತು. ಎರಡನೆಯವನಿಗೆ, ಹೊರ ತೆಗೆದ. ತುಂಬ ಹಳೆಯ ಕಾಗದಗಳು. ಕಂದು ಬಣ್ಣಕ್ಕೆ ತಿರುಗಿದ್ದವು. ಮಡಚಿದ ಕಡೆ ಹರಿದುಹೋಗಿದ್ದವು. ಒಂದನ್ನು ಬಿಡಿಸಿ ಜೋಡಿಸಿ ಓದತೊಡಗಿದ.

“ನನ್ನ ಅತ್ಯಂತ ಪ್ರಿಯ ರಾಜ….ಘಾಟಿಯಿದ್ದಾನಲೇ ಮುದುಕ!”

“ಓದು, ಓದು.”

“ನೀನು ಹೇಳಿದಂತೆ ನಾಳೆ ಜೋಡು ಮಾರ್ಗದ ಬದಿಯ ಮಾವಿನ ಮರದ ಕೆಳಗೆ ಕಾದಿರುತ್ತೇನೆ. ಖಂಡಿತ. ಇದುವರೆಗೆ ಯಾರಿಗೂ ಯಾವ ಸುಳಿವೂ ಸಿಕ್ಕಿಲ್ಲ. ಆದರೆ ನನಗೇಕೋ ಭಯವಾಗುತ್ತಿದೆ. ರಾಜ, ನಮ್ಮಿಂದ ಇದು ಸಾಧ್ಯವಾಗುತ್ತದೆಯೇ? ಕೊನೆಯ ಘಳಿಗೆಯಲ್ಲಿ ಏನಾದರೂ ಆದರೆ ಎಂದು ನೆನೆದು ನನ್ನ ಮೈ ಕಂಪಿಸುತ್ತಿದೆ. ನನ್ನ ನಿರ್ಧಾರಕ್ಕಂತೂ ಬದಲಿಲ್ಲ. ನಾಳೆ ಬೆಳಿಗ್ಗೆ ಆರು ಗಂಟೆಗೆ ನಾನು ರೆಡಿ, ನನ್ನ ಕೈ ಬಿಡಬೇಡಿ. ಇತಿ ನಿನ್ನ ಮೀನ.”

“ಯಾರ ಮೀನ?”

“ನಿನ್ನ ಮೀನ.”

“ಆ, ಇನ್ನೊಂದನ್ನು ಓದು.”

“ಪ್ರಿಯ ರಾಜಣ್ಣ, ಈ ಪತ್ರವನ್ನು ನಿಮಗೆ ಬರೆಯಲೋ ಬೇಡವೊ. ಹೇಗೆ ಬರೆಯಲಿ, ಏನು ಬರೆಯಲಿ ಎಂದು ತಿಳಿಯದೆ ಚಿಂತಿಸಿ ಹಣ್ಣಾಗಿದ್ದೇನೆ. ಯಾಕೆ ಹೀಗೆಲ್ಲ ಆಯಿತೆಂದು ದಯವಿಟ್ಟು ಕೇಳಬೇಡಿ. ನನಗೊಂದೂ ತಿಳಿಯದು. ಯಾವುದೂ ಅರ್ಥವಾಗುವುದಿಲ್ಲ. ಆದರೆ ನನಗೆ ಅರ್ಥವಾಗದ್ದು ನಿಮಗಾದೀತೆಂದು ತಿಳಿದಿದ್ದೇನೆ, ನೀವು ಹೀಗಿರುವುದು ಛಂದವಲ್ಲ. ಇಂಥ ನೆನಪಿಗೆ ನಾನು ಅರ್ಹಳಲ್ಲ ಎಂದು ನಿಮಗೆ ಗೊತ್ತಿಲ್ಲವೆ….”

ಮುಂದೆ ಓದದೆ, ಎರಡೂ ಕಾಗದಗಳನ್ನು ಸಣ್ಣಗೆ ಹರಿದು ಬೂದಿ ಬುಡ್ಡಿಯಲಿ ಹಾಕಿ ಬೆಂಕಿ ಹಚ್ಚಿದ. ಆಮೇಲೆ ಮತ್ತೆ ಅದೇ ಬೆಂಕಿಯಿಂದ ಒಂದು ಸಿಗರೇಟು ಹಚ್ಚಿಕೊಂಡ.

“ಕೆಲವರಿರ್ತಾರೆ, ತಮ್ಮ ಪರ್ಸುಗಳಲ್ಲಿ ಛಂದ ಛಂದ ಹುಡುಗೀರ ಫೋಟೋ ಇಟ್ಟುಕೊಳ್ತಾರೆ, ಪ್ರೇಮಪತ್ರಗಳನ್ನು ಇಟ್ಟುಕೊಳ್ತಾರೆ, ನಮ್ಮಂಥವರನ್ನ ಇಂಪ್ರೆಸ್ ಮಾಡೋದಕ್ಕೆ.”

“ಯಾಕೆ, ನಿನಗೆ ಈ ಮೊದಲು ಏನಾರೂ ಫೋಟೋ ಗೀಟೋ ಸಿಕ್ಕಿದ್ದವೇನು?”

“ಇಲ್ಲ.”

“ಮತ್ತೆ?”

“ಮತ್ಯಾಕೆ ಇಟ್ಟುಕೊಂಡಿದಾನೆ ಈ ಪತ್ರಗಳನ್ನ?”

“ನಿನ್ನ ಎಂದಾದರೂ ಒಂದು ಹುಡುಗಿ ಪ್ರೀತಿಸಿತ್ತ?”

ಈ ಪ್ರಶ್ನೆಗೆ ಎರಡನೆಯವ ಯೋಚನೆಗೊಳಗಾದ.”ನಮ್ಮಂಥವರನ್ನ ಯಾರು ಪ್ರೀತಿಸ್ತಾರೆ?” ಎಂದ. ಪ್ರೀತಿಯ ಬಗ್ಗೆ ನೆನಪಾಗಿ ಇಬ್ಬರಿಗೂ ಸಂಕಟವಾಯಿತು. ಡಬ್ಬಲ್ ಫ಼ೆನ್ನಿಗೆ ಹೇಳಿದರು.

ಬಾರಿನಲ್ಲಿ ಜನ ವಿರಳವಾಗತೊಡಗಿದರು. ಕೌಂಟರಿನ ಹಿಂದೆ ಕುಳಿತಿದ್ದ ಯಜಮಾನ ತನ್ನ ಭಾರವನ್ನು ರಿ ಅಡ್ಜಸ್ಟ್ ಮಾಡಲು ಶ್ರಮಿಸುತ್ತಿದ್ದ. ಧಾಂಡಿಗನಂತಿದ್ದ ಕೆಲಸದವ ಬಾಟಲಿಗಳನ್ನು ಆಚೀಚಿ ಕೊಂಡೊಯ್ಯುತ್ತಿದ್ದ. ಸಿಗರೇಟಿನ ಕಮಟು ಹೊಗೆ ತುಂಬಿದ ಬಾರಿನೊಳಗೆ ಒಂದು ಥರ ಮಾಯಾಪ್ರಪಂಚ ತೇಲಾಡುತ್ತಿತ್ತು.

“ನಮ್ಮ ಮನೆ ಪಕ್ಕದಲ್ಲಿ ಒಂದು ಹುಡುಗಿ ಇತ್ತು,” ಎಂದ ಮೊದಲನೆಯವ. “ಎಷ್ಟು ಛಂದ ಅಂತೀ, ಆಕೇನ ನೋಡೋದೇ ಹಿಂದು ಖುಷಿ. ನಾವಿಬ್ಬರೂ ಒಟ್ಟಿಗೇ ಬೆಳೆದವು. ಆಕೆ ಕಾಚ ಹಾಕಲು ಸುರುಮಾಡಿದಾಗಲೇ ಗೊತ್ತು ನನಗೆ. ಆಮೇಲೆ ಆಕೆ ಕಾಲೇಜಿಗೆ ಹೋಗೋದಕ್ಕೆ ಸುರು ಮಾಡಿದಳು. ನನ್ನ ಕೂಡೆ ಮಾತಾಡೋದೇ ಬಿಟ್ಟುಬಿಟ್ಟಳು. ಯಾಕೆಂದರೆ ಆಕೆಗೆ ತನ್ನ ತಂದೆಯ ಭಯ. ನಾನು ಗುಟ್ಟಾಗಿ ಆಕೆಯನ್ನು ಕಾಣಲು ಹೋಗುತ್ತಿದ್ದೆ.

“ಒಂದು ದಿನ ಏನಾಯ್ತು ಗೊತ್ತ?….. ಆಕೆ ಕಾಲೇಜಿನಿಂದ ಬರೋ ಹೊತ್ತು. ಭಾರೀ ಮಳೆ ಹೊಡೆಯುವುದಕ್ಕೆ ಸುರುವಾಯಿತು. ಬಸ್ ಸ್ಟಾಪಿನಲ್ಲಿ ನಾನು ಕೊಡ ಯೊಂದಿಗೆ ಕಾದು ನಿಂತೆ, ಆಕೆಗಾಗಿ ಏನಾದರೂ ಮಾಡಬೇಕು ಎಂದು. ಆಕೆ ಬಸ್ಸಿ ನಿಂದ ಇಳಿದಳು. ನಾನೀಗ ಕೊಡೆ ಕೊಟ್ಟರೆ ಆಕೆಗೆ ಎಷ್ಟೊಂದು ಖುಷಿಯಾಗುತ್ತದೆ ಎಂಡು ನೆನೆದು ನನಗೆ ಸಂತೋಷ. ಆಕೆ ಬಸ್ಸಿನಿಂದ ಇಳಿದಳು. ನಾನು ಕೊಡೆ ಕೊಟ್ಟರೆ ತೆಗೆದುಕೊಳ್ಳಲೇ ಇಲ್ಲ. ಈ ಮಳೆಗೆ ಮತ್ತೇನು ಮಾಡ್ತೀ ತೆಗೆದುಕೊ ಎಂದು ಒತ್ತಾಯಿಸಿದೆ. ಕೊಡೆ ತೆಗೆದುಕೊಂಡರೆ ಏನೂ ಮುಳುಗಿ  ಹೋಗೋದಿಲ್ಲ ಎಂದು ತಿಳಿಹೇಳಿದೆ. ಆಕೆ ಒಪ್ಪದೆ ಮಳೆಯಲ್ಲಿ ನೆನೆಯುತ್ತಲೇ ಹೋದಳು. ಅದೇ ರಾತ್ರಿ ಆಕೆಗೆ ಜ್ವರ ಬಂತಂತೆ, ಮರುದಿನ ನಾನು ನೋಡಲೆಂದು ಹೋದರೆ ನನ್ನನ್ನು ಆಕೆಯ ತಂದೆ ಹೊರಗಿ ನಿಂದಲೇ ಕಳಿಸಿಬಿಟ್ಟರು……”

ಹೀಗೆ  ಹೇಳಿ ಮೊದಲನೆಯವನು ಅಳಲು ಶುರು ಮಾಡಿದ.

“ನೀನೀಗ ಈ ಪತ್ರಗಳನ್ನು ಸುಟ್ಟು ಹಾಕಿ ಅದೇ ಬೆಂಕಿಯಲ್ಲಿ ಸಿಗರೇಟು ಹಚ್ಚಿದೆ ಯಲ್ಲ? ಹಾಗೆ ಮಾಡಬಾರದಿತ್ತು ನೋಡು, ಇಂಥ ಹಲ್ಕಾ ಕೆಲಸ ಮಾಡಿದರೆ ಯಾವ ಹುಡುಗೀಯಾದ್ರೂ ನಿನ್ನ ಪ್ರೀತಿಸ್ತಾಳೇನು?”

“ಈಗೇನು ಮಾಡಲಿ?”

“ಅಳೋದು. ಸ್ವಲ್ಪ ಅತ್ತುಬಿಡಯ್ಯಾ….. ಲೇ, ಇನ್ನೆರಡು ಫೆನ್ನಿ ತಗೊಂಡ್ಬಾರಯ್ಯ….. ಹೀಗೆ ನಮ್ಮ ದುಃಖವನ್ನು ಮುಳುಗಿಸುವಾ.”

ಯಜಮಾನ ಒಂದು ಕಡೆಯಿಂದ ಇನ್ನೊಂದು  ಕಡೆಗೆ ಒಜ್ಜೆಯನ್ನು ಬದಲಿಸಿದ. ಧಾಂಡಿಗನಾದ ಕೆಲಸದವ ಬಿಲ್ಲನ್ನು ತಂದು ಇವರ ಮುಂದೆ ಇಟ್ಟ. ಆದರೆ ಅದನ್ನು ಓದಲು ಎಷ್ಟು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ. ಅದ್ದರಿಂದ ಧಾಡಿಗ ಒಬ್ಬನ ಜೇಬಿಗೆ ಕೈ ಹಾಕಿ ಪರಿಶೋಧಿಸಿದ. ಅಲ್ಲೇನೂ ಸಿಗಲಿಲ್ಲ. ಇನ್ನೊಬ್ಬನ ಜೇಬಿಗೆ ಕೈ ಹಾಕುತ್ತಿರುವಾಗ ಆತ ಪ್ರತಿಭಟಿಸಿದ. ಆತನಿಗೆ ಒಂದೇಟು ಹಾಕಿದ ಮೇಲೆ ಸುಮ್ಮನಾದ. ಆತನ ಜೇಬಿನಲ್ಲಿ ಹನ್ನೆರಡೂ ಚಿಲ್ಲರೆ ರೂಪಾಯಿಗಳು ದೊರೆತವು. ಇದು ಒಟ್ಟಾರೆ ಬಿಲ್ಲಿಗಿಂತ ತುಂಬಾ ಕಡಿಮೆಯಾಗಿತ್ತು. ಏನು ಮಾಡುವುದು ಎಂದು ತಿಳಿಯದ ಯಜಮಾನ, ಇದ್ದ ಹಣವನ್ನು ಇಸಿದುಕೊಂಡು, ಈ ತಿರುಗಾಡಿಗಳನ್ನು ಹೊರಗೆ ಹಾಕುವಂತೆ ಕೆಲಸದವನಿಗೆ ಸನ್ನೆ ಮಾಡಿದ.

ಕೆಲಸದವ ಮೊದಲನೆಯವನ ಬಳಿ ಬಂದ. ಅವನು ಕುಳಿತಲ್ಲಿಂದ ಜಪ್ಪೆನ್ನಲು ಒಪ್ಪಲಿಲ್ಲ. ಕೆಲಸದವನು ಅವನ ರಟ್ಟಿ ಹಿಡಿದತ್ತಿ ಮೂರು ಬಾರಿ ತೂಗಿ ಹೊರಕ್ಕೆ ಎಸೆದ. ಆತ ಅಷ್ಟು ದೂರ ಹೋಗಿ ನಗರ ಪಾಲಿಕೆಯ ಕಸದ ಹಂಡೆಯ ಬಳಿ ಉರುಳಿದ. ಸ್ವಲ್ಪ ಸಮಯದಲ್ಲಿ ಎರಡನೆಯವ ಅವನ ಪಕ್ಕದಲ್ಲಿ ಬಂದು ಬಿದ್ದ.
*****

ತಿರುಮಲೇಶ್ ಕೆ ವಿ

ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ