ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ!
ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು.
“ನೀವು ಏನೇ ಹೇಳಿ ನನಗಂತೂ ಅದೇ ಭ್ರಮೆ! ಅದು ಪುನಹಾ ನಮ್ಮ ಮನೆಯಲ್ಲಿ ಬಾಲ ಎತ್ತಿಕೊಂಡು ಓಡಾಡ ಬೇಕು; ಹವ್ವಾ ಹವ್ವಾ! ಎಂತಕೂಗುತಿರಬೇಕು. ಆಗ ನಮಗೆ ಎಲ್ಲಾ ಸರಿ ಹೋಗಬೇಕು. ಅದು ಇದ್ದಾಗ ನಮಗೆ ಭಾಗ್ಯವಿತ್ತು; ಹಾಲು ತುಪ್ಪದಲ್ಲಿ ಕೈತೊಳೆದೆವು. ಅದು ಮತ್ತೆ ಬಂದರೇನೆ ನಮಗೆ ಭಾಗ್ಯ ಅಮ್ಮ!” ಹೀಗೆಂದು ತುಂಗಮ್ಮ ಹೇಳಿ ಸೆರಗಿನಿಂದ ಕಣ್ಣೊರಸಿಕೊಂಡರು.
“ಅಬ್ಬಾ! ಒಂದು ಕೋತಿಯನ್ನೇ ನೆನಸಿಕೊಂಡು ಕಣ್ಣು ಒದ್ದೆ ಮಾಡಿಕೊಂಡರಲ್ಲ, ಅದಿನ್ನೆಂಥಾ ಕೋತಿಯಮ್ಮ. ನನಗಂತೂ ಕೋತಿ ಮೋರೆ ನೋಡಿದರೆ ನಗು ಎಂದರೆ ನಗು. ತುಂಬಾ ನಗು, ಆ ಚಪ್ಪಟೆ ಮೂಗೋ, ಆ ಮೈಯ್ಯೋ, ಆ ಬಾಲವೋ ಆ ಕೈಯ್ಯೋ ಆ ಕಾಲೋ? ಬಿಡೀಂದರೆ ತುಂಗಮ್ಮಾ! ಕಣ್ಣೀರು ಹಾಕಬೇಡಿ. ಮುತ್ತಿನಂಥಾ ಮಗು ಇದ್ದಾನೆ. ದೇವರು ಕಣ್ಣು ಬಿಟ್ಟರೆ ಇನ್ನೇನಮ್ಮ ನಾಲ್ಕಾರು ವರ್‍ಷ ಎಲ್ಲಾ ನೇರವಾಗಿರುತ್ತೆ. ನೀವು ಪರದೇಶಿಕೋತಿ ನೆನಸಿಕೊಂಡು ಸೀರೆ ಸೆರಗೆಲ್ಲ ಒದ್ದೆ ಮಾಡಿಕೊಳ್ಳಬೇಡಿ! ಹನುಮಂತ ಎಂದರೆ ಏನೋ ಪರವಾಯಿಲ್ಲ. ರಾಮಭಕ್ತ! ಅವನು ಹೇಗಿದ್ದರೇನು, ಮಗುವಾಗಿದ್ದಾಗಲೇ ಸೂರ್ಯ-ಹಣ್ಣು ಕೆಂಪನೆ ಹಣ್ಣು-ಎಂತ ಹಾರಿದ್ದನಂತೆ! ಆಗ ಅವನೇನೋ ಮೋರೆ ಸೊಟ್ಟ ಆಗುವ ಹಾಗೆ ಹೊಡೆದುಬಿಟ್ಟು ನಂತೆ ಇಲ್ಲದಿದ್ದರೆ, ಆ ಅಂಜನಾದೇವಿಯ ಮಗ! ಆ ವಾಯುಪುತ್ರ! ಮಹಾರಾಯ ಸೀತಾಮ್ಮನವರ ಪಾಲಿಗೆ ಸಂಜೀವಿನೀ ರೂಪ! ಅವನು ಹೇಗಿದ್ದರೇನು. ಅದೆಲ್ಲಾ ಒಪ್ಪೆ, ಆದರೆ ಆ ಮರಕೋತಿ, ಥೂ! ಏನು ನಾಚಿಕೆ ಕೇಡಿರೇ ತುಂಗಮ್ಮಾ! ಇದೇನು ಹೀಗೆ ಎಷ್ಟೂಂತ ಅಳುತೀರಿ, ಬಿಡೀಂದರೆ! ನಾನು ಹೊರಟೆ! ಎಂತ ಬೇಸರಮಾಡಿಕೊಂಡು ನೆರಮನೆಯಾಕೆ ಹೊರಡುವುದರಲ್ಲಿದ್ದರು. ಆಗ ತುಂಗಮ್ಮ ಆಕೆಯ ಕೈ ಹಿಡಿದು ಕೂರಿಸಿ, ಹೀಗೆಂದು ಹೇಳಿದರು- “ಪುಟ್ಟಮ್ಮಾ! ಅದು ಕೋತಿಯಲ್ಲ ತಾಯಿ, ಅದು ನಮ್ಮ ಮನೆ ಮಗುವೆ ಆಗಿತ್ತು. ನಮ್ಮ ಶಿವರಂಜನ ಇದ್ದಾನಲ್ಲ ಅವನ ವಯಸ್ಸೇ ಅದಕ್ಕೆ, ಅದರ ಕೈ ಹಿಡಿದು ನೋಡಿದವರು ಹೇಳಿದ್ದಾರಮ್ಮ-ಅದರಿಂದಲೇ ನಮಗೆ ಭಾಗ್ಯವಂತೆ. ನೀವು ಹೇಳುವಹಾಗೆ ಚಪ್ಪಟಮೂಗಿನ ಕೋತಿ ನಿಜ, ಅದೇನೋ ಎಂತೋ ಅದು ಪುನಾಹಾ ಬರಬೇಕು ನಮ್ಮ ಮನೆಗೆ! ಆಗ ನಮಗೆಲ್ಲ ಆಗಬೇಕು ಸೌಖ್ಯ. ಹೀಗೆ ಹೇಳುತ್ತಿರುವಾಗಲೇ ಬಂದ ಹಾರಾಡಿಕೊಂಡು ನಗುನಗುತ್ತ ಮನೆ ಮುದ್ದು ಮೂರ್ತಿ
ಶಿ ವ ರ ಂ ಜ ನ!
ನೆರಮನೆಯಾಕೆ ನಗುತ್ತ ಹೇಳಿದರು- “ಇವನು ನೋಡಿ ಅದರ ಹಾಗೆ ಇದ್ದಾನೆ. ಅದರ ನೆಗೆದಾಟವೆಲ್ಲ ಇವನಿಗೆ ಬಂದು ಬಿಟ್ಟಿದೆ. ಏನಪ್ಪ. ನಿನ್ನ ಪರೀಕ್ಷೆ ಏನಾಯಿತು. ನಮಗೆಲ್ಲ ಏನು ಕೊಡುತ್ತೀಯಪ್ಪ. ಬೆಲ್ಲವೋ, ಸಕ್ಕರೆಯೋ, ಲಾಡು ಉಂಡೆಗಳೋ? ಏನು ಹೇಳಿಬಿಡು, ಕೇಳಿಕೊಂಡೇ ಹೋಗುತ್ತೇನೆ! ಏನಪ್ಪಾ?
ಆಗ ಶಿವರಂಜನ ಹೇಳಿದನು- “ನಿಮಗೆಲ್ಲಾ ಲಾಡು ಉಂಡೇನೇ ಕೊಡಬೇಕು. ನಾನು ಪರೀಕ್ಷೆಯಲ್ಲಿ, ಅಮ್ಮಾ ಹೇಳಲೇನಮ್ಮಾ?” ಎಂದು ಅಮ್ಮನ ಅಪ್ಪಣೆ ಪಡೆದು- “ನೋಡೀಂದರೆ, ನಾನು ಮೊದಲೇ ಹೇಳಿದಹಾಗೆ ಮೊದಲನೇ ತರಗತಿಯಲ್ಲಿ ಮೊದಲಾಗಿದ್ದೇನೆ! ಅಮ್ಮಾ ಎಲ್ಲರೂ ಪೀಡಿಸುತ್ತಾರಮ್ಮ ತಿಂಡಿ ಕೊಡಿಸು ಎಂತ. ಏನುಮಾಡಲಮ್ಮಾ”- ಹೀಗೆಂತ
ತಾನೂ ತನ್ನಮ್ಮನನ್ನು ಪೀಡಿಸತೊಡಗಿದನು.
ನೆರಮನೆಯಾಕೆ ಹೊರಟುಹೋಗಿದ್ದರು. ತಾಯಿ ತುಂಗಮ್ಮ ಶಿವನಿಗೆ ರಾಗಿ ಹುರಿಯಿಟ್ಟು ಕಲಸಿಕೊಟ್ಟರು. ಹುಡುಗ ಪರೀಕ್ಷೆಯಲ್ಲಿ ತೇರ್‍ಗಡೆಯಾದರೆ ಸಂತೋಷ, ದಿಟ. ಸಂತೋಷವನ್ನು ಹೇಗೆ ತಾನೇ ವರ್‍ಣಿಸುವುದು. ಇನ್ನು ಹೇಗೆ ಅದಕ್ಕೆ ಆಕಾರ ಕೊಡುವುದು, ಮನೆಯಲ್ಲಿ ಯಜಮಾನರೇ ಇಲ್ಲ. ಅವರು ಕಣ್ಣು ಮುಚ್ಚಿಕೊಂಡು ಮೂರುವರ್‍ಷವಾಗಿದೆ. ಅಲ್ಪ ಸ್ವಲ್ಪ ಆಸ್ತಿಯೆಲ್ಲ ಕರಗುತ್ತ ಬಂದಿತ್ತು. ಒಂದು ಮನೆ ಅವರದಾಗಿ ಉಳಿದಿತ್ತು. ಅದರಲ್ಲಿ ಎರಡು ಭಾಗಮಾಡಿ ಒಂದನ್ನು ಬಾಡಿಗೆಗೆ ಕೊಟ್ಟು ಇನ್ನೊಂದರಲ್ಲಿ ಇವರಿಬ್ಬರೇ ಇದ್ದರು. ಈದಿನ ಆ ಮಗ ಶಿವರಂಜನ ಗೆದ್ದು ಬಂದಿದ್ದಾನೆ. ಆದರೆ ಇಷ್ಟರಲ್ಲೆ! ಆಯಿತೆ! ಇನ್ನು ಮುಂದೆ, ಪುಸ್ತಕ, ಪೋಷಾಕು, ಫೀಜು ಮುಂತಾಗಿ ಎಲ್ಲಾ ಆಗಬೇಕು. ಅವನಿನ್ನು ಓದಬೇಕು. ಅವನನ್ನು ಮುಂದೆ ಓದಿಸುವರಾರು? ಯಾರು ಆ ಭಾರವೆಲ್ಲ ಹೊರುವರು?- ಹೀಗೆಂದು ಯೋಚಿಸುತ್ತಿದ್ದಾಗ, ನೆರಮನೆಯಾಕೆ ಆ ಪುಟ್ಟಮ್ಮ ಬಂದಿದ್ದರು. ಅವರ ಸಂಗಡ ಮಾತಾಡುವಾಗ ಮನಸಿಗೆ ಹೊಳೆದಿತ್ತು ಆ ಕೋತಿಯ ನೆನಪು. ಅದಕ್ಕೆ ಅತ್ತಿದ್ದರು. ಶಿವರಂಜನ ಆಗಲೇ ಮನೆಗೆ ಬಂದಿದ್ದನು. ತಾಯಿಯ ಕಣ್ಣು ಒದ್ದೆಯಾದ್ದನ್ನು ನೋಡಿದ್ದನು? ಇಂಥಾ ನೆನಪನ್ನು ತಂದುಕೊಟ್ಟಿತಲ್ಲವೇ…….
ಆ ಕೋತಿ ಯಾವುದು ?
ಅದು ಟಂ ಟಂ ಮ್ಮಾಣೀ!
ಆ ಕೋತಿಯ ಹೆಸರನ್ನು ಕೇಳಿದನು. ಶಿವನಿಗೂ ಅದರ ನೆನಪು ಅಲ್ಪ ಸ್ವಲ್ಪ ಹೊಳೆದು ಬಂದಿತು. ಅದರ ಕತೆಯನ್ನು ಆ ರಾತ್ರಿ ಶಿವರಂಜನ ತನ್ನ ತಾಯಿಯ ಬಾಯಿಂದ ಕೇಳಿದನು. ಕೇಳುತ್ತಾ ಕೇಳುತ್ತಾ ತೂಕಡಿಸಿ ರೆಪ್ಪೆ ಮುಚ್ಚಿ ದಿಂಬಿಗೆ ವರಗಿದನು.
ಅದೇ, ಇದು!
ಹಿಂತಿರುಗಿದ ಕೋತಿ
ಹದಿನಾರು ವರ್‍ಷಗಳ ಹಿಂದೆ ಶಿವನ ತಂದೆ ಕಟ್ಟೇ ಹಳ್ಳದ ಕಡೆಗೆ ತಿರುಗಾಡುತ್ತ ಹೋಗಿದ್ದರು. ಆದಿನ ಮಹಾ ಮಳೆ ಬಂದು ಆಗತಾನೆ ಮೋಡ ಬಿಳುಪಾಗಿ ಮಳೆ ನಿಂತಿತ್ತು ನೀರು ಹನಿಗಳು ಮರದೆಲೆಗಳಿಂದ ತೊಟಕುತ್ತಿದ್ದವು. ಮಿಂದು ಆಡುತ್ತಲೇ ಇತ್ತು. ಕಟ್ಟೇ ಹಳ್ಳದ ನೀರು ಕೆಂಪಗೆ ಓಕುಳಿಯ ಹಾಗೆ ಇತ್ತು! ಅದರ ಪ್ರವಾಹ ವೇಗವಾಗಿತ್ತು. ಅಲ್ಲಲ್ಲಿ ಸುಳಿಗಳಿದ್ದವು. ನೀರಿನಮೇಲೆ ಬುಟ್ಟಿ, ಚಾಪೆ, ತೊಟ್ಟಿಲು ಎಂತ ಹಳ್ಳಿಯ ಜನರ ಸಾಮಾನೇನೇನೆಲ್ಲ ತೇಲಿ, ತೇಲಿ ತಿರುಗಿ ತಿರುಗಿ ಮುಳುಗೇಳುತ್ತ ಹೋಗುತ್ತಿದ್ದವು. ಗುಡಾರ್, ಗುಡಾರ್ ಎಂತ ಗುಡುಗಿನ ಆರ್ಭಟ! ಧಡಾರ್, ಧಡಾರ್ ಎಂತ ಕಸಿದು ಬೀಳುವ ದಡದ ಶಬ್ದದ ಸಂಗಡ, ಮಿಂಚು ಥಳ, ಥಳಾರೆನ್ನುವಾಗ ಗಾಳಿ ಸೂಂಯ್, ಸೂಂಯ್ ಎನ್ನುತ್ತಿತ್ತು. ಒಮ್ಮೊಮ್ಮೆ ಗಾಳಿ ರುಮ್ಮೆಂದು ಬೀಸಿದಾಗ ಮರಗಳ ಎಲೆಗಳಿಂದ ಟುಪುರು ಟುಪುರೆಂದು ಹನಿಗಳು ಬೀಳುತ್ತಿದ್ದವು. ಶಿವನ ತಂದೆ ಮುಂದೆ ಮುಂದೆ ಹೋದಾಗ ಮಬ್ಬುಗತ್ತೆಲೆಯಲ್ಲಿ ‘ಕಿರ್ರೋ! ಕಿರ್ರೋ! ಎಂದು ಕಿರುಚಿದ ಸದ್ದು ಕೇಳಿಸಿತು. ಕಿವಿಯನ್ನೇ ಕೊರೆಯುವಂತಿದ್ದ ಆ ಸದ್ದನ್ನು ಕೇಳಿದವರು, ಅಲ್ಲೇ ನಿಂತರು. ಸುತ್ತ ನೋಡಿದರು. ನೀರಿನ ಬಳಿಯಲ್ಲಿ ಈಚೆ ಕರೆಯಲ್ಲಿ ಒಂದು ತಾಳೆಯ ಪೊದೆ. ಅದರೊಳಗಿಂದ ಅಶಬ್ದ ಬರುತ್ತಿತ್ತು. ನೀರು ಏರುತ್ತಿತ್ತು. ಶಿವನ ತಂದೆ ಅಲ್ಲಿಗೆ ಹೋಗಿ ಮುಳ್ಳಿನ ಪಂಜರದಿಂದ ಒಂದು ಸಣ್ಣ ಪ್ರಾಣಿಯನ್ನು ಬಿಡಿಸಿ ತೆಗೆದರು. ಅದು ಇವರ ಕೈಗೆ ತನ್ನ ಕೈಕಾಲುಗಳನ್ನು ಬಿಗಿದು ಬಾಲವನ್ನು ಸುತ್ತಿ ಅಂಟಿಕೊಂಡಿತು. ಅದರ ಮೈಯೆಲ್ಲ ಕೆಂಪಗಿತ್ತು. ಮೋರೆಯಲ್ಲಿ ಮನುಷ್ಯರ ಮಗುವನ್ನು ಹೋಲುವ ಹಾಗಿತ್ತು. ಅದನ್ನು ಎತ್ತಿ ಪಂಚೆಯತುದಿಯಲ್ಲಿ ವರಸಿ ಕೈ ಚೌಕದಲ್ಲಿ ಸುತ್ತಿದರು, ಪಾಪ ಮಂಗನ ಮರಿ ತಬ್ಬಲಿಯಾಗಿ ಬಿಟ್ಟಿದೆ. ಎಂದುಕೊಂಡರು. ಕೈ ಚೌಕವೂ ಒದ್ದೆಯಾಯಿತು. ಕನಿಕರ ಬಟ್ಟು ಅದನ್ನು ಆ ಚೌಕದಿಂದ ಬಿಡಿಸಿ ಬಿಟ್ಟು ಅಂಗಿಯ ಜೇಬಿನವಳಗೆ ಇಟ್ಟು ಕೊಂಡರು. ಅದರ ಮೇಲೆ ಮರೆಯಾಗಿ ತಮ್ಮ ಹಸ್ತವನ್ನು ಇಟ್ಟು ಕೊಂಡು ಮನೆಗೆ ಬಂದರು.
ಅಂತು ಮನೆಗೊಂದು ವಾನರ ಶಿಶು ಬಂದಿತು. ಅದೇ ದಿವಸ ಅದೇ ಮನೆಯಲ್ಲಿ ಒಂದು ನರಶಿಶುವೂ ಅವತರಿಸಿತು. ಇದು ಕಟ್ಟೇಹಳ್ಳದಿಂದ ಕಾಡಿನ ಕೂಸಾಗಿ ಅಲ್ಲಿತೇಲಿ ಬಂದಿತ್ತು. ಅದು ತಾಯಿಯ ಮಡಿಲಿಂದ ಸಂಸಾರದ ಮೊಗ್ಗಾಗಿ ಅರಳಿ ಬಂದಿತ್ತು.
ಮನೆಯತಂದೆಯೇ ವಾನರಶಿಶುವಿಗೆ ತಾಯಿಯಾದರು, ಅವರೇ ಅದರ ಬಾಯಿಗೆ ಹಾಲಿನ ಬತ್ತಿಯಿಟ್ಟು ಸಾಕಿದರು. ಯಜಮಾನತಿಯು ಎದೆಯ ಹಾಲೆರದು ನರಶಿಶುವಿಗೆ ತಾಯಿಯಾಗಿದ್ದರು. ಇದಕ್ಕೆ ತಿಂಮಣ್ಣ ಎಂದು ಹೆಸರಾಯಿತು. ಅದಕ್ಕೆ ಶಿವರಂಜನ ಎಂದು ನಾಮಕರಣ ವಾಯಿತು. ಶಿವನ ತಂದೆ ಈ ಕೋತಿಗೆ ಇನ್ನೂ ಗಂಭೀರವಾದ ಹೆಸರನ್ನಿಡ ಬೇಕೆಂದಿದ್ದರು. ಅದೇನೆಂದರೆ “ರಾಂ ರಜನ್!” ಯಜಮಾನತಿಯು ಆ ಹೆಸರು ಕೇಳಿ ನಕ್ಕುಬಿಟ್ಟಾರೆಂದು ಹೆದರಿ ಇವರು ಅದಕ್ಕೆ ತಿಂಮಣ್ಣನೆಂದೇ ಕರೆಯುತ್ತ ಬಂದರು. ಆದರೂ ಅದಕ್ಕೆ ಅಂಗಿ ಟೋಪಿ ಹೊಲಿಸದೆ ಬಿಡಲಿಲ್ಲ.
ತಿಂಮಣ್ಣ ಹಜಾರದಲ್ಲಿ ಗೋಣಿ ಚೀಲದಲ್ಲಿ ಹೊಕ್ಕು ತೂಕಡಿಸುತ್ತ ಕಾಲ ಕಳೆಯುತ್ತಿತ್ತು. ರಾತ್ರಿಯೆಲ್ಲ ಎಚ್ಚರವಾಗಿರುತ್ತಿತ್ತು. ಯಾವಾಗ ಕೂಗಿದರೂ ಗುರ್ ಗುರ್ ಎನ್ನುವುದು. ಬಹಳ ಹುಷಾರಿ! ಮೊದ ಮೊದಲು ಸಣ್ಣ ಕೋತಿಯಾಟವಾಡಿತು. ಒಂದೆರಡು ವರ್ಷಗಳ ನಂತರ ದೊಡ್ಡ ಕೋತಿಯ ಚೇಷ್ಟೆಗಾರಂಭಮಾಡಿತು. ಮೊದಲು ಮನೆಬಿಟ್ಟು ಯಜಮಾನರ ಹೆಗಲು ಬಿಟ್ಟು ಹೋಗುತ್ತಿರಲಿಲ್ಲ. ಕಡೆ ಕಡೆಗೆ ಎಲ್ಲರ ಸೂರು ಮೇಲೂ ತಿಂಮಣ್ಣ ಎಲ್ಲರ ಹೆಗಲುಮೇಲೂ ತಿಂಮಣ್ಣ, ನಕ್ಕವರನ್ನೂ ಹೆದರದವರನ್ನೂ ಏನೇನೂ ಮಾಡದಿದ್ದು! ಅವರನ್ನೂ ಅಂಜಿದವರನ್ನೂ ಕಚ್ಚಿ ಕಚಗುಳಿಮಾಡಿ ಪರಚಿ, ಅವರ ಬಟ್ಟೆ ಹರಿದುಬಿಡುತಿತ್ತು. ಇದರ ಹಾವಳಿ ಹೆಚ್ಚಾಯಿತು. ಆದುದರಿಂದ ತಿಂಮಣ್ಣನ ನಡುವಿಗೆ ಚರ್‍ಮದ ಪಟ್ಟಿಯ ಕಬ್ಬಿಣದ ಸರಪಳಿಯೂ ಬಂದು ಬಲವಾಗಿ ನಿಂತವು. ಹಜಾರದ ಕಂಬಕ್ಕೆ ಕಟ್ಟು ಬಿಟ್ಟುದ್ದಾಯಿತು. ಹೇಗಾದರೂ ಆ ಕೋತಿಗೆ ಮನೆಯ ಮಗುವನ್ನು ಕಂಡರೆ ಬಲು ಅಕ್ಕರೆ, ತಿಂಮಣ್ಣ ಶಿವರಂಜನನನ್ನು ಕೂರಿಸಿಕೊಂಡು ಕಿಚ, ಕಿಚ ಎನ್ನುತ್ತಾ ಎಷ್ಟು ಹೊತ್ತು ಬೇಕಾದರೂ ಕೂತಿರುತ್ತಿತ್ತು. ತನ್ನ ಬಾಯಿಚೀಲಗಳಿಂದ ತಿಂಡಿ ತೆಗೆದು ಮಗುವಿಗೆ ಕೊಡುತ್ತಿತ್ತು. ಶಿವನ ತಾಯಿ ಕೆಲಸದಮೇಲಿದ್ದಾಗ, ಮುಂಬಾಗಿಲು ಅಗುಳಿಹಾಕಿ ಹಾರ್‍ಮೋನಿಯಂ, ಚಂಡು, ತಿಂಡಿ ಬೊಂಬೆಗಳನ್ನು ಮುಂದೆ ಇಟ್ಟು ಹೊರಟುಹೋಗುತ್ತಿದ್ದರು. ಶಿವರಂಜನಿಗೆ ಆಗ್ಗೆ ಸುಮಾರು ಮೂರುವರ್ಷ ಕೋತಿಗೂ ಅಷ್ಟೇ ವಯಸ್ಸು, ಆದರೂ ತಿಮ್ಮಣ್ಣ ಏನೇನೆಲ್ಲ ಮಾಡುತ್ತಿತ್ತು, ಹೇಗೇಗೆಲ್ಲ ಮಗುವನ್ನು ಆಡಿಸುತ್ತಿತ್ತೋ ಬಲ್ಲವರಾರು? ಕೆಲಸದ ಗದ್ದಲದಲ್ಲಿ ಶಿವನ ತಾಯಿ ಅದೆಲ್ಲ ನೋಡುತ್ತಿರಲಿಲ್ಲ. ಮಗು ವಂತುಸುಮ್ಮನೆ ಇದ್ದರೆ ಅವರಿಗೆ ಸಾಕಾಗಿತ್ತು.
ಹೀಗಿದ್ದಾಗ ಒಂದುದಿನ ಶಿವನತಂದೆ ಊಟಮಾಡಿ ಕುಳಿತರು. ತಿಂಮಣ್ಣನನ್ನು ಸರಪಳಿಬಿಚ್ಚಿ ತಂದರು. “ಹಾರ್‍ಮೋನಿಯು ಒತ್ತು ಮಗು ಎಂದರು. ಮಗು ಬರುವುದಕ್ಕೆ ಮುಂಚಿತವಾಗಿ ತಿಂಮಣ್ಣನೇ ಮುಂದೆ ಬಂದು ಆ ಹಾರ್‍ಮೋನಿಯಂನ್ನು ಒತ್ತಿತು. ಅವರಿಗೆ ಆಶ್ಚರ್‍ಯವಾಯಿತು. “ಇನ್ನೇನೆಲ್ಲ ಬರುತ್ತೆ “ರಾಂ ರಜನ್” ಎಂದು ಹಾರ್ಮೋನಿಯಮ್ಮಿನ ಮುಂಭಾಗದಲ್ಲಿ ಕೂರಿಸಿದರು. ಆಗ ರಾಂರಾಜನ್ ಒಂದೆರಡು ಮನೆ ಒತ್ತಿತು. ಆ ಶಬ್ದವನ್ನು ಕೇಳಿ ಮಗು ಶಿವರಂಜನನೂ ನಕ್ಕು ಚಪ್ಪಾಳೆತಟ್ಟಿ ಕುಣಿಯಿತು. ಅಂದಿನಿಂದ ಶಿವನತಂದೆ ಆ ಕೋತಿಗೆ ಸರ್ಕಸಿನಾಟಗಳನ್ನೆಲ್ಲ ಕಲಿಸಿದರು. ಹರಿಶ್ಚಂದ್ರ ನಾಟಕದಲ್ಲಿ ಅವರೂ ಒಂದು ವೇಶ ಹಾಕಿ ಆ ಕೋತಿಯನು ಹಿಡಿದುಕೊಂಡು ಹೋಗಿ ಅದನ್ನು ಕುಣಿಸಿ ಎಲ್ಲರನ್ನೂ
ನಗಿಸಿದರು. ಕೋತಿ ತಿಂಮಣ್ಣನು ಆ ಊರಿಗೆಲ್ಲ ಹೆಸರುವಾಸಿಯಾಯಿತು. ಮಗು ಶಿವರಂಜನನು ಅದನ್ನು ಹೊಸ ಹೆಸರಿನಿಂದ ಕರೆಯಲಾರಂಭಿಸಿದನು. ಆ ಹೊಸ ಹೆಸರೇ ಟಂ, ಟಿಂ ಮ್ಮಾಣೀ!-
ಆ ಹೆಸರನ್ನು ಆ ಮಗುವಿನ ಬಾಯಲ್ಲಿ ಕೇಳಿ ಆ ಕೋತಿ ನೆಗೆದಾಡಿ ಕಿಚ ಕಿಚಗುಟ್ಟುತ್ತಿತ್ತು. ಆ ಮಗುವನ್ನು ತಬ್ಬಿಕೊಂಡು ಕುಳಿತುಬಿಡುತ್ತಿತ್ತು.
ಟಿಂ, ಟಿಂ ಮ್ಮಾಣೀ- ಎಂಬುದೇ ಮಗುವು ಕೋತಿಗೆ ಇಟ್ಟ ಹೆಸರು. ಅದೇ ವಶೀಕರಣ
ಮಂತ್ರವಾಯಿತು.
ಹೀಗೆಯೇ ಇರುತ್ತವೆಯೇ ಶುಭ ದಿವಸಗಳು? ಇಲ್ಲವಲ್ಲ! ಒಂದು ಬಲು ಕೆಟ್ಟ ದಿವಸ, ಬಲು ಕೆಟ್ಟ ಗಳಿಗೆಯಲ್ಲಿ ಟಿಂ ಟಿಂ ಮ್ನಾಣಿಯು ಹಜಾರದ ಕಂಬಕ್ಕೆ ಕಟ್ಟಿದ್ದ ಸರಪಳಿಯನ್ನು ನುಲಿಚಿ, ತಿರಿಚಿ ಕೊಂಡಿಯನ್ನೇ ಕಳಚಿಕೊಂಡು ಹೊರಹೊರಟಿತು. ನಾಲ್ಕು ವಯಸ್ಸಿನ ಕೋತಿ ಎಲ್ಲರ ಕಣ್ಣಿಗೂ ಗಡವ ಕೋತಿಯಾಗಿ ಪುಟ್ಟ ರಾಕ್ಷಸನ ಹಾಗೆ ಇತ್ತು. ಅದು ಎಲ್ಲ ಕಣ್ಣಿಗೂ ಭಯಹುಟ್ಟಿಸಿತು. ಆ ಕೋತಿಗೋ ಇಡಿಯ ಊರೆಲ್ಲ ಲಂಕಾ ಪಟ್ಟಣದಂತೆ ಕಂಡಿರಬೇಕು. ಇಲ್ಲದಿದರೆ ಅಷ್ಟು ಹಾವಳಿಮಾಡುತಿತ್ತೆ? ಶಾನುಭೋಗರ ಮನೆಯ ಕುಂಬಳ ಬಳ್ಳಿಯೆಲ್ಲ ಹಾಳು. ಶೇಕದ್ರಾ ಮನೆಯ ಶೀರೆಗಳೆಲ್ಲ ಹರಿದು ಚಿಂದಿಚಿಂದಿ. ಅಮಲ್ದಾರಮನೆ ಮುದ್ದು ಮಗಳ ಪರಿಕಾರವೆಲ್ಲ ಹರಿದು ಗೀಳಿಹೋಗಿತ್ತು. ಪಟ್ಟಣದ ಶೆಟ್ಟರ ಮಗನ ಮೋರೆಯೆಲ್ಲ ಗೀರು ಬಾರಾಗಿ ಸೋರುತ್ತಿತ್ತು. ಅದೊಂದು ಕೆಟ್ಟಾನು ಕೆಟ್ಟ ದಿನ. ಕೆಟ್ಟಾನು ಕೆಟ್ಟಗಳಿಗೆ! ಕೋತಿಯದೇನು ತಪ್ಪು.
ಅಂತು ಆದಿನ ಊರಲ್ಲೆಲ್ಲ ಗದ್ದಲ್ಲ!- ಹಾಳು ಕೋತಿ! ಕೋತಿ ಸಾಕಿದವರು ಹಾಳಾದವರು. ಹುಚ್ಚು ಕೋತಿ! ಹೀಗೆಂದು ಕೂಗು ಎಲ್ಲೆಲ್ಲ ಕೇಳಿಸಿತು. ಟಿಂ ಟಿಂ ಮ್ಮಾಣಿ ಯಾರ ಕೈಗೂ ಸಿಕ್ಕಲಿಲ್ಲ. ಎಲ್ಲೆಲ್ಲ ಹಾವಳಿಮಾಡಿ ಎಲ್ಲೋ ಮಾಯವಾಗಿ ಬಿಟ್ಟಿತು.
ಆದರೆ ನೊಂದವರೆಲ್ಲ ಬಿಡುತ್ತಾರೆಯೆ? ಅವರೆಲ್ಲ ಸಾಲುಸಾಲಾಗಿ ಶಿವರಂಜನನ ಮನೆಗೆ ಬಂದರು. ಅವರನ್ನೆಲ್ಲ ನೋಡಿ ಶಿವರಂಜನ ಚಪ್ಪಾಳೆ ತಟ್ಟಿ ನಕ್ಕುಬಿಟ್ಟನು. ಅವನ ತಾಯಿಗೆ ಅವರಿಗೆ ಸಮಾಧಾನಮಾಡಿ ಉತ್ತರ ಹೇಳಿ ಹೇಳಿ ಸಾಕಾಯಿತು. ಹಿಂದೆ ಗೋಪಾಲಬಾಲನು ಗೊಲ್ಲ ಗೇರಿಯಲ್ಲಿ ಅಷ್ಟೊಂದು ಹಾವಳಿ ಎಬ್ಬಿಸಿ ದೂರು ತಂದಿರಲಿಲ್ಲ. ಅಷ್ಟೊಂದು ದೂರು ಈಗ ಈ ಮಂಗನ ಹಾವಳಿಯಿಂದ ಬಂದಿತ್ತು. ಆದರೆ ಏನು ಮಾಡುತ್ತಾರೆ. ಹಿಡಿಯೋಣವೆಂದರೆ ಕೋತಿ ಎಲ್ಲೂ ಕಾಣಿಸಲಿಲ್ಲ. ಶಿವನ ತಂದೆ ಮನೆಗೆ ಬಂದರು. ಅವರು ರೇಗುತ್ತಲೇ ಬಂದರು ತಾವು ಜಲಕಂಟಕದಿಂದ ತಪ್ಪಿಸಿತಂದು, ಮನೆ ಮಗುವಿಗಿಂತ ಹೆಚ್ಚೆಂದು ತಿಂಡಿ ಬಟ್ಟೆ ಕೊಟ್ಟು ಒದ್ದಾಡಿ ಕಾಪಾಡಿದ್ದಕ್ಕೆ ಕೊನೆಗೂ ಹೀಗೆ ಮಾಡಬಹುದೇ! ಅಮಲ್ದಾರರು ಮುನಿಯಬೇಕೆ, ಪಟ್ಟಣದ ಶೆಟ್ಟರು ಶಿಟ್ಟಾಗಬೇಕೆ! ಇರಲಿ ಅದರನ್ನು ಮೊದಲು ಮಗುವಿನ ಕೈಯಿಂದಲಾದರೂ ಹಿಡಿಸಿ ಆಮೇಲೆ ಬುದ್ದಿ ಕಲಿಸುತ್ತೇನೆ-ಹೀಗೆಂದು ತಮ್ಮ ನರಶಿಶುವನ್ನು ಕರೆದುಕೊಂಡು ಹೊರಗೆ ಹೋದರು. ಟಿಂ ಟಿಂ ಮ್ಮಾಣಿಯು ಮನೆಯ ಸೂರಿನ ಮೇಲೆ ಬಂದು ಕೂತಿತ್ತು. ಮಗು ಶಿಶುವನ್ನು ಬಿಟ್ಟ ಕೂಡಲೇ ಅದು ಹಾರಿ ಬಂದು ಅವನ ಕಾಲುಗಳನ್ನು ತಬ್ಬಿಕೊಂಡು ಕಿಚ-ಕಿಚಗುಟ್ಟುತ್ತಾ ಕುಳಿತು ಬಿಟ್ಟಿತು.
ಸ್ವಲ್ಪ ಕಾಲ ಶಿವರಂಜನ ತಂದೆಗೆ ಇದನ್ನೆಲ್ಲ ಕೇಳಿ ರೇಗಿ ಹೋಯಿತು. ತಾವು ಜಲಕಂಠಕದಿಂದ ತಪ್ಪಿಸಿ ತಂದು ಮನೆ ಮಗುವಿಗಿಂತಾ ಹೆಚ್ಚಾಗಿ ಸಾಕಿದ್ದಕ್ಕೆ ಇದೇ ಪ್ರತಿಫಲ ಹುಡುಕಿ ಅವರೇ ಅದನ್ನು ಹಿಡಿದು ಹಿಂಗಟ್ಟು ಮುರಿ ಕಟ್ಟಿ ಹಜಾರದಲ್ಲಿ ಉರುಡಿಕೆಡವಿದರು. ಅನಂತರ ರೇಗಾಡಿ ಕೂಗಾಡಿ ಸ್ವಲ್ಪ ಶಾಂತಿ ಪಡೆಯುವುದಕ್ಕಾಗಿ ಬೀದಿಗೆ ಹೋದರು. ಅಲ್ಲಿ ಮತ್ತೆ ಯಾರೋ ಬಂದರು. ಅವರು ಅವರ ಹತ್ತಿರ ನಿಂತು ಬೀದಿಯಲ್ಲಿ ಮಾತಾಡುತ್ತಿದ್ದಾಗ ಇತ್ತ ಒಳಗೆ ಮನೆಯಜಮಾನಿ ತುಂಗಮ್ಮ ಅಳುತ್ತ ಕೋತಿಯ ಹತ್ತಿರ ಬಂದರು. ಅದು ಕೋತಿಯು ಭಾಷೆಯಲ್ಲಿ ಬೇಡುವಹಾಗೆ “ಹಮ್ಮಾ ಆ, ಆ ಹಮ್ಮಾ, ಆ, ಆ, ಎಂತ ಕೂಗಿ ಕಿಚ ಕಿಚ ಗುಟ್ಟಿತು. ತಡೆಯಲಾರದೆ ತುಂಗಮ್ಮನವರು ಆ ಕೋತಿಯ ಕೈಗಳನ್ನು ಹಗ್ಗದ ಕುಣಿಕೆ ಯಿಂದ ಬಿಡಿಸುತ್ತಿದ್ದಾಗ ಶಿವನ ತಂದೆ ಮನೆಯೊಳಕ್ಕೆ ಬಂದರು. ಹಾಳು ಕೋತಿಯ ರಾಮಾಯಣ! ನಾನೇ ತಾಯಾಗಿ ಸಾಕಿ ಸಲಹಿದ ತಬ್ಬಲಿ ಪ್ರಾಣಿ ಹೀಗೆ ಮಾಡಬಹುದೇ? ಈದಿನ ಅದರ ಋಣಾನುಭಂಧ ಹರಿಯಿತು ಬಿಡು! ನನ್ನ ಕೈಯನ್ನೆ ಕಚ್ಚಿಬಿಟ್ಟಿದೆ. ಅದಕ್ಕೆ ಸ್ವಲ್ಪವೂ ಕರುಣೆ ತೋರಿಸಬೇಡ. ಹೀಗೆಂದು ರೇಗಿ ಕೂಗಾಡುವಾಗ, ಆಕೋತಿ ಹೀಗೆ ಹಾಗೆ ಹೊಸ ಕಾಡಿ ತೆವಳಿಕೊಂಡು ಅವರ ಕಾಲ ಬಳಿಗೆ ಹೋಗಿ ಕಿಚ, ಕಿಚ ಗುಟ್ಟಿ “ಹವ್ವಾ ಆ, ಆ, ಹವ್ವಾ, ಆ, ಆ!” ಎಂದಿತು. ಅನಂತರ ಅದರ ದವಡೆ ಚೀಲದಿಂದ ಒಂದು ಹೊಸ ರೂಪಾಯನ್ನು ತೆಗೆದು ಬಂದ ಕೈನೀಡಿ ಕೊಡ ಹೋಯಿತು. ನಿಲ್ಲಲಾರದೇ ನಿಂತಿತ್ತು. ಹಸ್ತದ ತುದಿಯಲ್ಲಿತ್ತು ಅದರ ಆಪರಾಧ ಕಾಣಿಕೆ.
ಆಗ ಗಂಡ ಹೆಂಡಿರಿಬ್ಬರೂ ಆ ಕೋತಿಯ ಹೊಸ ಆಟವನ್ನು ನೋಡಿ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ಅದರ ಬುದ್ಧಿ ನೋಡಿ ಅವರಿಗೆ ಮರುಕ ಹುಟ್ಟಿತು. ಆದರೂ ಆ ಹೀನಾಯದ ಶೇಕದಾರನ ಶಿಟ್ಟು ಅಸಾದ್ಯವಾಗಿತ್ತಲ್ಲವೆ?- ಅದು ಹುಚ್ಚು ಹಿಡಿದ ಕೋತಿ ಅದನ್ನು ಊರಾಚೆ ತೊಲಗಿಸಿ ಎಂದವರ ಅಪ್ಪಣೆಯಾಗಿತ್ತಲ್ಲವೆ? ಇನ್ನೇನು ಟಿಂ ಟಿಂ ಮ್ಮಾಣಿಯು ಮನೆಬಿಟ್ಟ ಕೂಸೇ ಆದಂತೆ! ಇದುವರೆಗೆ ತಬ್ಬಲಿಯಾಗಿದ್ದ ಕೋತಿಯು ಈಗ ಪರದೇಶಿಯಾಗಿ ಬಿಡುತ್ತದೆ!
ಅದೇ ದಿನ ನೆರೆ ಊರಿನ ಜೋಯಿಸರೊಬ್ಬರು ಅವರ ಮನೆಗೆ ಮಧ್ಯಾನದ ಊಟಕ್ಕೆ ಬಂದರು. ಊಟಕ್ಕೆ, ಕುಳಿತಿದ್ದಾಗ ಈಕೋತಿ ಬಹುವಾಗಿ “ಹವ್ವಾ ಹವ್ವಾ” -ಎಂದು ಕೂಗಲಾರಂಭಿಸಿತು. ಶಿವನ ತಾಯಿ ಅದನ್ನು ಬಿಚ್ಚಿ ತಂದರು. ಅದು ಎಲೆಯ ಮುಂದೆ ಬಂದು ಕೈ ನೀಡಿತು. ಜೋಯಿಸರು ಏನಯ್ಯಾ ತಿಮ್ಮಪ್ಪಾ, ಏ ತಿರುಪತಿ ತಿಮ್ಮಪ್ಪಾ! ನಿನ್ನ ಕೈಭಾಗ್ಯ ಚನ್ನಾಗಿದೆಯಲ್ಲೋ! ನನ್ನ ಹತ್ತಿರವೇ ತಿರುಪೆ ಬೇಡುವೆಯಾ? ಹಾಗಾದರೆ ಹಿಡಿಯಪ್ಪ ಹಿಡಿ-” ಎಂದು ಒಂದು ತುತ್ತು ಮೊಸರನ್ನ ಇಟ್ಟರು. ಕೋತಿಯು ಅದನ್ನು ದವಡೆ ಚೀಲಕ್ಕೆ ತುಂಬಿಕೊಂಡು ಮತ್ತೆ ಕೈನೀಡಿದಾಗ- “ಇದೇನು ತಿಮ್ಮಣ್ಣಾ! ನಿನೇ ಅನ್ನದಾನ ಮಾಡೋದು ಬಿಟ್ಟು ನನ್ನೇ ಬೇಡುತೀಯಲ್ಲೋ ಎಂದು ನಗುತ್ತ ಇನ್ನೂ ಒಂದೆರಡು ತುತ್ತು ಅನ್ನ ಕೊಟ್ಟರು.
ಊಟವಾದಮೇಲೆ ಯಜಮಾನರೂ ಜೋಯಿಸರೂ ಎಲೆ ಅಡಿಕೆ ಹಾಕುವಾಗ ತಿಮ್ಮಣ್ಣ ಬಂದು ಕೂತಿತ್ತು. ಆ ವೇಳೆಗೆ ಸರಿಯಾಗಿ ಮನೆಯ ಯಜಮಾನತಿ ತುಂಗಮ್ಮನವರೂ ಬಂದರು-ಜೋಯಿಸರೆ! ಕೋತಿಗಳಿಗೂ ಕೈನೋಡಿ ಹೇಳುತ್ತಾರೆಯೆ? ಸಾಮುತ್ರಿಕಾ ಶಾಸ್ತ್ರ ಇವಕ್ಕೂ ಸರಿ ಹೋಗುತ್ತದೆಯೇ!” ಎಂದು ಕೇಳಿದರು. ಆಗ ಜೋಯಿಸರು- “ಶಾಸ್ತ್ರ ಯಾರಿಗಿಲ್ಲ ಯಾರಿಗುಂಟು,? ನೋಡೋಣಮ್ಮ,! ಕೊಡೊ, ನಿನ್ನ ಕೈನಾ, ಏ ತಿಮ್ಮಪ್ಪಾ! ಎಂದು ಕೈ ನೋಡಿ ಹೇಳಿದರು.
ತಿಮ್ಮಣ್ಣ ಇನ್ನು ಆ ಮನೆಯಲ್ಲಿರುವಂತಿರಲಿಲ್ಲ. ಅದು ಪ್ರಯಾಣ ಹೊರಡುವುದೇ ಸರಿ! ಹನ್ನೆರಡು ವರ್‍ಷ ಅದು ತಿರುಗಬೇಕು. ದೇಶ ದೇಶಾಂತರವೆಲ್ಲ ನೋಡುವ ಯೋಗ ಅದಕ್ಕೆ ಇತ್ತು. ತುಂಬಾ ಸಂಪಾದನೆ ಮಾಡುವ ಭಾಗ್ಯವಿತ್ತು ಅದಕ್ಕೆ; ಆದರೆ ಅದನ್ನೆಲ್ಲ ಅನುಭವಿಸುವವನು ಇದರ ಬಾಲ್ಯ ಸ್ನೇಹಿತನಾದ ಶಿವರಂಜನ! ಹನ್ನೆರಡು ವರ್ಷಗಳು ಕಳೆದ ನಂತರ ಒಂದು ವಿಚಿತ್ರ ರೀತಿಯಲ್ಲಿ ಅದು ಇದೇ ಮನೆಗೆ ಹಿಂದಿರುವುದಾಗಿತ್ತು-ಎಂಥಾ ವಿಚಿತ್ರ ಸಂಗತಿ! ಆದರೆ ಈ ದಿನವೇ ಅದು ಆ ಮನೆಯನ್ನು ಬಿಡಬೇಕಾಗಿತ್ತು.
ಆದುದರಿಂದ ಇನ್ನೇನು ಮಾಡಬೇಕು? ಶಿವನ ತಂದೆ ಶಿಟ್ಟು ಬಿಟ್ಟು ಹೋಯಿತು. ಅವರು ಆ ಕೋತಿಯನ್ನು ಮುದ್ದಾಡಿದರು. ಅದರ ನಡುವಿಗೆ ಒಂದು ತಾಮ್ರದ ಕಡಗವನ್ನು ಹಾಕಿದರು. ಅದು ಟೊಳ್ಳಾಗಿತ್ತು ಅದರೊಳಗೆ ಅವರು ತಮ್ಮ ಹೆಸರನ್ನೂ ಊರನ್ನೂ ತಾರೀಖನ್ನೂ ಮತ್ತು ಶಿವರಂಜನನು ಅದಕ್ಕಿಟ್ಟ ಟಿಂ ಟಿಂ ಮ್ಮಾಣೀ ಎಂಬ ಅದರ ಹೆಸರನ್ನೂ ಒಂದು ಕಾಗದದಲ್ಲಿ ಬರೆದು ಸುರುಳಿಮಾಡಿ ಅದರೊಳಗೆ ಸೇರಿಸಿದರು. ತುಂಗಮ್ಮನಾಗಲೀ ಆಕೆಯ ಯಜಮಾನನಾಗಲೀ ಆ ಕೋತಿಯನ್ನು ಮನೆಯಾಚೆ ಕಳಿಸುವ ಆಲೋಚನೆಯನ್ನೇ ಬಿಟ್ಟು ಬಿಟ್ಟರು. ಆದರೆ ಅದೇ ಸಂಜೆ ಹಾವಾಡಿಗರವನೊಬ್ಬ ಬಂದು ಈ ಕೋತಿಯನ್ನು ನೋಡಿ ತನಗೆ ಕೊಡಿರೆಂದು ಇವರನ್ನು ಇನ್ನಿಲ್ಲದಂತೆ ಬೇಡಿಕೊಂಡನು. ಅಂತು, ಆ ಕೋತಿಯು ಆ ಸಂಜೆ ಆ ಮನೆಯನ್ನು ಬಿಟ್ಟು ಹೊರಟಿತು. ಅದರ ತ್ರಿಲೋಕ ಸಂಚಾರಕ್ಕೆ ಆಗ ಆರಂಭ.
ಅದಾದನಂತರ ನಾಲ್ಕಾರುವರ್ಷಗಳಲ್ಲಿ ಶಿವನ ತಂದೆಯು ಕಾಲವಾದರು. ಅವರು ದೈವಾಧೀನರಾಗುವ ಮುಂಚೆ ಆ ಕೋತಿಯನ್ನು ನೆನೆದು ಕೊಂಡು ಕಣ್ಣೀರು ಸುರಸಿದರು. ಕಡೆಯುಸರಿನಲ್ಲಿ ನಮ್ಮ ತಿಮ್ಮಣ್ಣ ಬಂದರೆ ಎಲ್ಲ ಸರಿಹೋಗುತ್ತೆ ಅಳಬೇಡ ಶಿವನನ್ನೇ ನೋಡಿಕೊಂಡು ನಿನ್ನ ದುಃಖ ಮರೆತಿರು ಇನ್ನೇನು ನಾಕೈದು ಮಳೆಗಾಲ ಕಳೆದುಬಿಡು. ಖಂಡಿತ ಅದು ಈ ಮನೆಗೆ ಹಿಂತಿರುಗಿ ಬರುತ್ತದೆ. ಇನ್ನೂ ಶಿವನನ್ನೂ ಖಂಡಿತ ಅದು ಕಾದುಕೊಳ್ಳುತ್ತೆ! ಹೀಗೆಂತ ಹೆಳಲಾರೆ ಅದೆಲ್ಲ ದೇವರ ಮಾಯೆ! ರಾಮಾ, ರಾಮಾ! ಎಂದು ಪ್ರಾಣ ಬಿಟ್ಟರು.
ಇಂದಿಗೆ ಆ ನಾಲ್ಕೈದು ವರ್‍ಷಗಳೆಲ್ಲ ಕಳೆದಿವೆ. ಶಿವರಂಜನ ಪರೀಕ್ಷೆಯಲ್ಲಿ ಪಾಸಾಗಿ ಮುಂದೆ ಕಾಲೇಜಿಗೆ ಹೋಗಬೇಕು. ಯಾರನ್ನು ಬೇಡುವುದು, ಏನು ಮಾಡುವುದು ಎಂದು ತಿಳಿಯದೆ ತುಂಗಮ್ಮನು ಸಂಕಟ ಪಡುತ್ತಿದ್ದರು. ಶಿವನು ಆ ರಾತ್ರಿ ಕತೆಯನ್ನು ತನ್ನ ತಾಯಿಯವರ ನುಡಿಯಲ್ಲಿ ಕೇಳಿ ಮಲಗಿದನು. ಬೆಳಗಿನಜಾವ ಎಚ್ಚೆತ್ತನು, ತನ್ನ ಅಮ್ಮನನ್ನು ಕರೆದು ಹೇಳಿದನು- “ಅಮ್ಮಾ ನನಗೊಂದು ಕನಸಾಯಿತು. ಹನುಮಂತ ಆ ಪಟದಿಂದ ಇಳಿದು ಬಂದು ತಲೆಯ ಮೇಲೆಕ್ಕೆಯಿಟ್ಟು ಸುಖವಾಗಿ ಬಾಳಪ್ಪಾ! ಎಂದು ಬಿಟ್ಟನು. ಆ ಹನುಮಂತನೇ ಆ ಕೋತಿ ಇರಬಹುದೇನಮ್ಮ ಎಂದು ಕೇಳಿದಾಗ ಆ ತಾಯಿಯು ಬಹು ಸಂಕಟಪಟ್ಟಳು. ಆ ಕೋತಿಯೇ? ಅದು ಕೋತಿಯಲ್ಲಪ್ಪಾ! ಮನೆಗೆ ಇನ್ನೊಂದು ಮಗುವೇ ಆಗಿತ್ತು ಈ ಮನೆಯ ಭಾಗ್ಯ ದೇವತೆಯೇ ಆಗಿತ್ತು. ನಿನಗೆ ಈಗ ಹದಿನಾರನೇ ವರ್‍ಷ ಅದು ಹಿಂತಿರುಗಿ ಬಂದರೆ ಈಗಲೇ ಬರಬೇಕಪ್ಪ. ಮತ್ತೆ ಈ ಮನೆಗೆ ಹಿಂತಿರುಗಿ ಹೇಗೆ ಬರುತ್ತದೋ! ಇನ್ನು ಹೇಗೆ ನಮಗೆ ನೆರವಾಗುತ್ತದೋ? ನಾನು ಕಾಣೆನಮ್ಮಪ್ಪಾ! ಮಲಗು ನಿದ್ದೆ ಮಾಡು! ನಾನು ನಾಳೆ ನಿನ್ನ ಓದಿಗೆ ಇನ್ನೇನಾದರೂ ಏರ್‍ಪಾಡುಮಾಡುತ್ತೇನೆ. ಆದರೆ ದೇವರು ಸಹಾಯಮಾಡಬೇಕಪ್ಪಾ ತಂದೆ ಗುರುದೇವ! ನಮ್ಮ ಶಿವರಂಜನ ನನ್ನು ನೋಡಿಕೊಳ್ಳಪ್ಪ! ಹೀಗೆಂದು ಹೇಳಿ ಮಗನನ್ನು ಸಮಾಧಾನಪಡಿಸಿ ಮಲಗಿಸಿಬಿಟ್ಟಳು.
ಮಾರನೆಯ ದಿನ ಒಂದು ಸಿನಿಮ ಕಥೆಯು ಅವೂರಿನ ಸಿನಿಮ ಮಂದಿರದಲ್ಲಿ ತೋರಿಸಲ್ಪಟ್ಟಿತು. ಶಿವರಂಜನನು ತನ್ನ ಗೆಳೆಯರ ಸಂಗಡ ಅದನ್ನು ನೋಡಲು ಹೋಗಿದ್ದನು. ಅದರಲ್ಲಿ ಒಂದು ಕೋತಿಯ ಕೆಲಸವು ಬಹು ಚೆನ್ನಾಗಿತ್ತು. ಬೆಳ್ಳಿಯ ಪರದೆಯ ಮೇಲೆ ಆ ಕೋತಿಯ ಆಟಗಳನ್ನು ನೋಡಿ ಆಶ್ಚರ್ಯ ಪಡದವರಿರಲಿಲ್ಲ. ಕೋತಿಯ ಕತೆಯಂದೇ ಅದಕ್ಕೆ ಆ ವೂರಿನವರ ಹೆಸರಾಯಿತು. ಹೆಂಗಸರು ಮಕ್ಕಳು ಬಹಳ ಆಸೆಪಟ್ಟು ಕೊಂಡು ಹೋಗಿ ಅಟವನ್ನು ಪರದೆಯಮೇಲೆ ನೋಡಿ ಬರುತ್ತಿದ್ದರು.
ತುಂಗಮ್ಮನವರೂ ಹೋಗಿ ಆ ಆಟವನ್ನು ನೋಡಿ ಬಂದರು. ಆದರೆ ಅದೇ ಕತೆಯನ್ನೇ ಮತ್ತೆ ಅವರಿಗೆ ನೋಡಬೇಕೆನ್ನಿಸಿತು. ಕೋತಿಯು ತನ್ನ ಬುದ್ದಿವಂತಿಕೆಯನ್ನು ತೋರಿಸಿದ್ದುದರಿಂದ ಅವರಿಗೆ ಅದನ್ನು ಪುನಹಾ ನೋಡಬೇಕೆನ್ನಿಸಿತು. ಆದರೆ ಆ ಕೋತಿಯ ಆಟಗಳಲ್ಲಿ ಕೆಲವೆಲ್ಲ ಅದು ಮನೆಯಲ್ಲಿ ಹಿಂದೆ ಆಡುತ್ತ ಇದ್ದಂತೆಯೇ ಇದ್ದುವು. ಇನ್ನು ಕೆಲವು ಹೊಸ ಆಟಗಳನ್ನೂ ಅದು ಕಲಿತಿತ್ತು. ಮನುಷ್ಯನನ್ನು ಮೀರಿಸಿ ಅದು ಕೆಲಸ ಮಾಡುವುದೂ ಮತ್ತು ಮನುಷ್ಯರಿಗೆ ಪರಮ ಮಿತ್ರನಾಗಿರುವುದೂ ಅತ್ಯಂತ ಆಶ್ಚರ್ಯಕರವಾಗಿತ್ತು. ಆದರೂ ಅದೇ ಇದು ಎನ್ನುವುದು ಹೇಗೆ? ಆಧಾರವೇನು. ಆಗ ತುಂಗಮ್ಮನವರಿಗೆ ಒಂದು ನೆನಪು ಬಂತು. ಅದೇನೆಂದರೆ ಆ ಕೋತಿಯ ಎದೆಯ ಮೇಲೆ ಒಂದು ಕಪ್ಪು ಮಚ್ಚೆಯಿತ್ತು. ಅದನ್ನು ಕಂಡರೆ ಸಾಕು ಎಂದುಕೊಂಡು ಮತ್ತೆ ನಾಲ್ಕೈದು ಬಾರಿ ಅದೇ ಚಿತ್ರವನ್ನು ನೋಡಿ ಬಂದರು. ಆ ಮಚ್ಚೆಯು ಯಾವಾಗಲೋ ಒಮ್ಮೆ ಕಾಣಿಸಿತು. ಇದೇ ಆ ಕೋತಿಯೆಂತ ದೃಢವಾಯಿತು! ಇವರ ಟಿಂ ಟಿಂ ಮ್ಮಾಣಿಯೇ ಅದಿರಬೇಕು.
ಆದರೇನು ರಜತ ಪರದೆಯಮೇಲೆ ನೆರಳಾಗಿ ಕಾಣುವ ಕೋತಿಯಿಂದ ಇವರಿಗೇನು ಪ್ರಯೋಜನ. ಮಾರನೆಯ ದಿನ ಶಿವರಂಜನನು ಸಿನಿಮಾ ಆಫೀಸಿಗೆ ಹೋಗಿ ಆ ಚಿತ್ರದ ವಿಚಾರವನ್ನೆಲ್ಲಾ ತಿಳಿದುಕೊಂಡನು. ಆ ಹುಡುಗನ ಮಾತೆಲ್ಲ ಕೇಳಿ ಅವರು ನಕ್ಕರು. ಆದರೆ ಆವೇಳೆಗೆ ಅಲ್ಲಿಗೆ ಆ ಸಿನಿಮಾ ಚಿತ್ರದ ಏಜೆಂಟರು ಬಂದರು. ಅವರಿಂದ ಇನ್ನಷ್ಟು ಆ ಚಿತ್ರದ ವಿವರವು ತಿಳಿದುಬಂದಿತು.
ಅ ಚಿತ್ರದಲ್ಲಿದ್ದ ಕೋತಿಯ ವಿಚಾರಕ್ಕೆ ಅವರು ಹೀಗೆಂದರು- “ಈ ಚಿತ್ರದಲ್ಲಿನ ಕೋತಿಯ ಮಾಲೀಕನು ಅಮೆರಿಕದಿಂದ ಇಂಡಿಯಾಕ್ಕೆ ಬಂದಿದ್ದಾನೆ. ಆತನು ಈ ಕೋತಿಯನ್ನು ಈ ದೇಶದಿಂದ ಹನ್ನೆರಡು ವರ್ಷಗಳ ಹಿಂದೆ ತೆಗೆದುಕೊಂಡು ಹೋಗಿದ್ದನಂತೆ. ಪುನಹಾ ಆ ಕೋತಿಗಾಗಿಯೇ ಈ ದೇಶಕ್ಕೆ ಬಂದಿದ್ದಾನಂತೆ. ಈ ದೇಶದಲ್ಲಿ ತಿರುಗುತ್ತಿದ್ದಾನೆ. ಈ ಊರಿಗೂ ಬರಬಹುದು”- ಈ ವಿಚಾರವನ್ನೆಲ್ಲ ತಿಳಿದುಕೊಂಡು ತನ್ನ ಮನಗೆ ಶಿವನು ಹಿಂದಿರುಗಿದನು.
ತಾಯಿ ಮಕ್ಕಳು ಆ ಕೋತಿಯ ಬರವಿಗಾಗಿ ಕಾದಿದ್ದರು. ಮನೆಯ ಹುಡುಗನು ಪರದೇಶಕ್ಕೆ ಹೋಗಿ ಖ್ಯಾತಿವಂತನಾಗಿ ಹಿರಿಯನಾಗಿ ಹಿಂತಿರುಗಿ ಬಂದರೆ ಏನೆಲ್ಲ ಮರ್ಯಾದೆ ಮಾಡಬಹುದೋ ಅದನ್ನೆಲ್ಲ ಮಾಡಿಬಿಡಲು ಆ ತಾಯಿ ಮತ್ತು ಆ ಹುಡುಗ ಸಿದ್ದರಾಗಿದ್ದರು. ಆದರೆ ಆ ಕೋತಿ ಇವರನ್ನು ಗುರುತಿಸಬಲ್ಲುದೆ? ಏನೋ ಕೋತಿ ಪ್ರಾಣಿ-ಪಾಪ ಅದರಿಂದ ಅಷ್ಟೆಲ್ಲ ತಿಳಿವಳಿಕೆಯನ್ನು ಬಯಸುವುದು ಸರಿಯಲ್ಲ. ಮತ್ತು ಸಹಾಯ ಬಯಸುವುದಂತೂ ಹುಚ್ಚುತನವೇ ಸರಿ ಆದರೂ ನೋಡೋಣ ಎಂದು ಕಾದುಕೊಂಡಿದ್ದರು.
ಅದೇ ಕೋತಿಯದೇ ವಿಶೇಷ ಕೆಲಸವಿರುವ ಇನ್ನೊಂದು ಕತೆಯ ಸಂಗಡ ಅದರ ಈಗಿನ ಯಜಮಾನನು ಒಂದು ಶುಭ ದಿವಸ ಅದೇ ಊರಿಗೆ ಬಂದುಬಿಟ್ಟನು. ಊರಿನವರು, ಗುಂಪುಗೂಡಿಕೊಂಡು ಬಂದು ಆ ಕೋತಿಯನ್ನು ನೋಡಿಕೊಂಡು ಬಂದರು. ಅದರದೇ ಒಂದಿಷ್ಟು ಬೇರೆ ಆಟವನ್ನು ಸಿನಿಮ ಕತೆಯ ವಿರಾಮಕಾಲದಲ್ಲಿ ಆ ಅಮೆರಿಕದವನು ಆಡಿಸಿದನು! ಕೋತಿ ಶರಬತ್ತು ಕುಡಿಯಿತು. ಸಿಗರೇಟು ಸೇದಿ, ಉಂಗುರ ಉಂಗುರವಾಗಿ ಹೋಗೆಬಿಟ್ಟಿತು. ಹಾರ್‍ಮೊನಿಯಂ ಬಾರಿಸಿತು. ಅದೇ ಕೋತಿ ಆಗ ಶರಟು ಬೂಡ್ಸು ಮುಂತಾದ ಪೋಷಾಕೆಲ್ಲ ಹಾಕಿಕೊಂಡು ಬೆತ್ತ ಹಿಡಿದು ಠೀವಿಯಿಂದ ನಡೆದಾಡಿತು, ಟೈಪುರೈಟರ ಬಳಿ ಕುಳಿತು ನಾಕಾರು ಸಾಲು ಪದಗಳನ್ನು ಕೇವಲ ಅಭ್ಯಾಸಬಲದಿಂದ ಟೈಪು ಮಾಡಿತು. ಅನಂತರ ಬಟ್ಟೆಯೆಲ್ಲ ಬಿಚ್ಚಿ ಮಡಿಸಿಟ್ಟಿತು…….. ಆಗ ಎಲ್ಲರಿಗೂ ಆಶ್ಚರ್ಯವಾಯಿತು. ಆಗ ಎಲ್ಲರೆಂದರು ಪಾಪ ಮಾತುಬಾರದು ಈ ಕೋತಿಗೆ ಮಾತು ಬಂದಿದ್ದರೆ ಅದರ ಕತೆಯನ್ನೆಲ್ಲಾ ಹೇಳುತ್ತಿತ್ತೋ ಏನೋ ಎಂದರು.
ಆಗ ಆ ಗುಂಪಿನಲ್ಲಿದ್ದವರು ಒಬ್ಬರು ಕೇಳಿದರು ಅದರಲ್ಲಿ ಏನು ಟೈಪು ಮಾಡಿದೆ ನೋಡೋಣವೆ?
ಅದಕ್ಕೆ ಆ ಕೋತಿಯ ಯಜಮಾನ ಆ ಕಾಗದವನ್ನು ಓದಿದನು. “ನಾನಾಗಿದ್ದೇನೆ ಟಿಂ ಟಿಂ ಮ್ಮಾಣೀ! ನನ್ನ ತಮ್ಮ ನನ್ನ ಹುಡುಕಿಕೊಂಡು ಬಂದಿದ್ದೇನೆ. ಯಾರಾದರೂ ಕಂಡಿದ್ದೀರಾ? ನನ್ನ ತಮ್ಮನನ್ನ? ನೆರೆದವರಲ್ಲಿ ಕೆಲವರು ನಕ್ಕುಬಿಟ್ಟರು. ಉಳಿದವರೆಲ್ಲ ನೀರವದಲ್ಲಿದ್ದರು. ಸಭೆಯಿಂದ ಹೀಗೆಲ್ಲ ಕೂಗು ಕೇಳಿತು- ಅಪ್ಪ ಇಲ್ಲಾರೂ ಇಲ್ಲಪ್ಪ. ನಿನ್ನ ತಮ್ಮ ಆ ಮರದ ಮೇಲೆ ಇದ್ದಾನಪ್ಪ! ಅಲ್ಲೇ ಇದ್ದಾನಲ್ಲ ನಿಮ್ಮಣ್ಣ! ಕೆಲ ಕೆಲವರು ನಗುತ್ತಲಿದ್ದಾಗ ಇನ್ನು ಕೆಲವರು ಆಶ್ಚರ್ಯಪಡುತ್ತಿದ್ದರು.
ಆಗ ಸಭೆಯೊಳಗಿನಿಂದ ಒಬ್ಬ ಹುಡುಗನು ಎದ್ದು ನಿಂತನು. ಅಮ್ಮ ಎಂದು ಕೂಗಿಕೊಂಡು ತನ್ನ ತಾಯಿಯ ಬಳಿಗೆ ಹೋಗಿ ಹೀಗೆಂದನು- ಅಮ್ಮ ಕೂಗಿ ಕರೆಯಲೇನಮ್ಮ? ಆಕೆಯು “ಕೂಗಪ್ಪಾ ನೋಡೋಣ”- ಎಂದರು.
ಕತ್ತಲು ಎಲ್ಲೆಲ್ಲ! ಪರದೆಯ ಬಳಿ ಮಾತ್ರ ಬೆಳಕಿತ್ತು. ಆದ್ದರಿಂದ ಸಭೆಯಲ್ಲಿ ಯಾರು ಯಾರನ್ನು ಕರೆದರೆಂದು ಯಾರಿಗೂ ತಿಳಿಯಲಿಲ್ಲ.
ಹುಡುಗನೊಬ್ಬನು ಗಟ್ಟಿಯಾಗಿ ಕೂಗಿ ಕರೆದನು. ಟಿಂ ಟಿಂ ಮ್ಮಾಣಿ! ಸಂಗಡಲೆ ಹೆಂಗಸೊಬ್ಬಳು ಅಳುತ್ತ ಅಳುತ್ತ “ತಿಂಮ್ಮಣ್ಣಾ! ಬಂದೆಯ ನನ್ನ ತಂದೆ! ಎಂದು ಕೂಗಿದಳು. ಕೋತಿ ಪರದೆಯ ಬಳಿಯಿಂದ ಒಂದೇ ಏಟಿಗೆ ಹಾರಿಬಿಟ್ಟಿತು. ಎಲ್ಲಿ ಹಾರಿತೆಂದು ಯಾರಿಗೂ ತಿಳಿಯಲಿಲ್ಲ. ದೀಪ! ದೀಪ! ದೀಪಹಾಕಿರಿ ಎಂದೆಲ್ಲ ಕೂಗಿ ಕೂಗಿ ಜನಗಳು ಹಾಹಾಕಾರವೆಬ್ಬಿಸಿದರು. ದೀಪ ಹತ್ತಿತು. ಕೋತಿಯನ್ನು ತಂದಿದ್ದ ಬಿಳಿ ಮನುಷ್ಯನೂ ಕೂಗಿ ಕರೆದನು. ಕೋತಿ ಹಿಂದಿರುಗಲ್ಲಿಲ್ಲ.
ಟಿಂ ಟಿಂ ಮ್ಮಾಣಿಯು ಹೋಗಿ ಆ ತಾಯಿಯ ತೊಡೆಯಮೇಲೆ ಕುಳಿತುಬಿಟ್ಟಿತು. ಆ ಹುಡುಗನನ್ನು ತನ್ನ ಹತ್ತಿರ ಕೈ ಕಾಲುಗಳಿಂದ ಎಳೆದು ಕೊಂಡು ಮುದ್ದಾಡುವಂತೆ ಮಾಡುತ್ತಿತ್ತು. ಎಲ್ಲರೂ ಆಶ್ಚರ್‍ಯ ಪಡುತ್ತಿದ್ದರು- “ಏನು ಕೋತಿಯಪ್ಪ ಎಲ್ಲಿ ಹೋದರೂ ಹೀಗೇ ಆ ಕೋತಿ ಬುದ್ಧಿ ಎಂದು ಕೆಲವರೆಂದರು, “ಹೆಂಗಸರು ಹೆದರಿ ಯಾರು” ಎಂದು ಕೆಲವರು ಕೂಗಿದರು- “ಕರೆಯಪ್ಪ ಆ ನಿನ್ನ ಗಡವ ಕೋತಿಯನ್ನು”
ಕೋತಿಯ ಹೊಸ ಯಜಮಾನನು ಆಗ ಎಲ್ಲರನ್ನು ಕುರಿತು ಹೀಗೆಂದನು-“ಮಹನೀಯರೆ ಮತ್ತು ತಾಯಂದಿರೆ! ಇದೆ ನನಗೆ ಪವಿತ್ರವಾದ ದಿನ. ಈ ದಿನ ನಾನು ಈ ಕೋತಿಯ ತಾಯಿಯರನ್ನು ಕಂಡುಕೊಂಡೆನು. ಈ ಕೋತಿಯು ನನ್ನ ಸಂಗಡ ಜಹಜು, ರೈಲು, ವಿಮಾನಗಳಲೆಲ್ಲ ತಿರುಗಿ ಬಂದಿದೆ. ಇದು ನನಗೆ ಲಕ್ಷಾಂತರ ಹಣ ಸಂಪಾದಿಸಲು ಸಹಾಯಮಾಡಿದೆ. ಇದಕ್ಕೆ ಚಿಕ್ಕಂದಿನಲ್ಲಿ ಯಾರು ಪಾಲಕರಿದ್ದರೋ ಅವರನ್ನು ಹುಡುಕಿಕೊಂಡು ಈ ದೇಶಕ್ಕೆ ಬಂದೆನು, ಇಂಡಿಯಾ ದೇಶವೆಲ್ಲ ಸುತ್ತಿದೆ. ಆದರೆ ಇದು ಯಾವಾಗಲೂ ಯಾರ ಬಳಿಯಲ್ಲೂ ಸಲುಗೆಯಿಂದ ಇದ್ದ ಪ್ರಾಣಿಯಲ್ಲ. ಇದಕ್ಕೆ ಈಗ ಸುಮಾರು ಹದಿನಾರು ವಯಸ್ಸಿರಬಹುದು. ಇನ್ನು ಸುಮಾರಾಗಿ ಒಂಭತ್ತು ವರ್ಷ ಇದು ಬದುಕಿರುತ್ತದೆ. ಸಾಯುವ ಕಾಲಕ್ಕೆ ಇದು ಹುಟ್ಟಿದ ದೇಶದಲ್ಲೇ ಇರಲೆಂದು ಕರೆದು ತಂದಿದ್ದೇನೆ. ನರನಂತೆ ವಾನರನು! ಅದಕ್ಕೂ ತಾಯಿನಾಡಿನ ಮಮತೆ ಇರುತ್ತದೆ. ಇದಕ್ಕೆ ಮಾತು ಬರದಿದ್ದರೇನು? ಇವರ ಮೊಕಭಾವಚರ್ಯೆಗಳಿಂದ ಅದರ ಪ್ರೀತಿಯಲ್ಲವೂ ವ್ಯಕ್ತ ವಾಗುತ್ತದೆ. ಅದರ ನಡುವಿನಲ್ಲಿ ಇದೊಂದು ತಾಮ್ರದ ಗೊಲಸು ಇತ್ತು ಅದು ಬಹಳ ಕಿರಿದಾಗಿ ಚರ್ಮವನ್ನು ಕೊರೆಯುತ್ತಿತ್ತು; ಅದನ್ನು ನಾನು ಕತ್ತರಿಸಿ ತೆಗೆದಾಗ, ಈ ಕಾಗದವು ಅದರಲ್ಲಿತ್ತು ಇದನ್ನು ಯಾರಾದರೂ ಓದಿಕೊಳ್ಳಬಹುದು ಅದರ ಹಿಂದಿನ ವಿಳಾಸವನ್ನೂ ಈ ಮಾತುಗಳನ್ನೂ ಕೇಳಿಯೂ ಎಲ್ಲರೂ ಸುಮ್ಮನಿದ್ದರು.
ಶಿವರಂಜನನು ಗುಂಪಿನೊಳಗಿಂದ ದಾರಿಬಿಡಿಸಿಕೊಂಡು ಬಂದು ಸುರುಳಿ ಬಿಚ್ಚಿ ಆ ಕಾಗದವನ್ನು ಓದಿದನು. ಅದು ಅವನ ತಂದೆ ಬರೆದ ಕಾಗದ. ಆಗ ಆ ಊರಿನ ಕೆಲವು ಹಿರಿಯರು, ಶಿವನ ತಂದೆಯನ್ನ ನೆನಸಿ ಕೊಂಡರು- ಅವರೆ ನಮ್ಮ ಜೋಡಿಶಾಲು ಗುಮಾಸ್ತೆ ಶಿವಕುಮಾರಪ್ಪ ನವರು! ಪಾಪ ಚಿಕ್ಕವಯಸ್ಸಿನಲ್ಲಿ ಕಣ್ಣು ಮುಚ್ಚಿ ಬಿಟ್ಟರು. ಯುದ್ಧ ಶುರುವಾದಾಗಲೇ ಅಲ್ಲವೇ ಅವರು ಕಾಲವಾದದ್ದು -ಹೀಗೆಂತ ಒಬ್ಬರು ಹೇಳಿದರು. ಇನ್ನೊಬ್ಬರು ಎದ್ದು ಅ ಬಿಳಿಯ ಮನುಷ್ಯನನ್ನು ಕುರಿತು “ಸ್ವಾಮಿ, ಕೋತಿಯ ನಾಯಕರೆ ಅಲ್ಲ ನವಕೋತಿನಾಯಕರೇ ಸರಿ ಹೋಯಿತೇನಿರಪ್ಪ, ಸ್ವಾಮಿ ಬಿಳಿಯವರೆ! ಈ ಬಾಲಕ ತಮ್ಮ ಮುಂದೆ ನಿಂತಿರುವಾತ ಇವನೇ ಆ ಕಾಗದ ಬರೆದವರ ಮಗ. ನಾನು ಆ ಕಾಲದಲ್ಲಿ ಶೇಕದಾರನಾಗಿದ್ದೆ. ಈ ಕೋತಿ ತಿಮ್ಮಣ್ಣ ಇದೆಯಲ್ಲ ಇದು ಒಂದು ದಿನ ಶುದ್ದ ಕೋತಿ ಚೇಷ್ಟೆ ಮಾಡಿತು! ಊರವರೆಲ್ಲ ನನ್ನ ಮೇಲೆ ರೇಗಿಬಿದ್ದರು. ನಾನಾಗ ಇದು ಹುಚ್ಚು ಕೋತಿ ಹೊರಡಿಸಿಬಿಡಿ-ಎಂತ ಅಪ್ಪಣೆಮಾಡಿ ಹೇಳಿದ್ದೆ! ಈ ತಾಮ್ರದ ಕಡಗವೂ ಆದರ ಸೊಂಟದಲ್ಲಿ ಆಗ ಇತ್ತು. ಪಾಪ ಶಿವು ಅವರ ಮಗ. ದೊಡ್ಡ ಪರೀಕ್ಷೆಯಲ್ಲಿಯೂ ತಾನು ಮೊದಲು ನಿಂತಿದ್ದಾನೆ ಪಾಸುಮಾಡಿ! ಇವನಿಗೇನು ಸಹಾಯ ಮಾಡುತ್ತಿರೋ ಮಾಡಿ ಆದರೆ ಆ ಕೋತಿ ಈ ಊರಲ್ಲಿ ಬಿಟ್ಟು ಹೋಗೋದಾದರೆ ಒಂದು ದೊಡ್ಡ ಬೋನುಮಾಡಿಸಿಟ್ಟು ಇದನ್ನು ಅದರಲ್ಲಿಟ್ಟು ಹೋಗಿ ಸ್ವಾಮಿ. ಇನ್ನೇನೂ ಇಲ್ಲ ಕೋತಿ ಚೇಷ್ಟೆ ಅಂತ! ಯಾವಾಗಲೂ ಹೀಗೆ ಸಿನಿಮಾದಲ್ಲಿ ಬೆಳಕು ಹಿಡಿದು ನಿಲ್ಲಿಸಿ, ಸಿಗರೇಟು ಸೇದಿಸಿ ನೋಡುಕ್ಕಾಗುತ್ತೆಯೆ? ಏನೋ ಮುಪ್ಪಿನ ಮುದುಕ ಮಾತಾಡಿಬಿಟ್ಟೆ! ಅದೇನು ಇದೆಯೋ ನಿಮ್ಮ ಕೆಲಸ ಮುಂದೆ ಜರುಗಿಸಿಬಿಡಿ.”
ಶೇಕದಾರ್ರ ಮಾತು ಮುಗಿದ ಮೇಲೆ ಕೋತಿ ತಿಮ್ಮಣ್ಣನನ್ನು ತಂದಿದ್ದ ಬಿಳಿಯಾತನು ಇನ್ನೇನೂ ಹೇಳಲ್ಲಿಲ್ಲ. ಆ ಕೋತಿಯನ್ನು ಶಿವರಂಜನನ ಮನೆಗೆ ತನ್ನ ಕಾರಿನಲ್ಲಿ ಕಳಿಸಿಕೊಟ್ಟು ಬಿಟ್ಟನು. ಅನಂತರ ಆ ಕೋತಿಯು ಶಿವರಂಜನನ ಮನೆಗೆ ತಲುಪಿತು. ಅದು ಅಲ್ಲಿ ಹಳೆಯದೆಲ್ಲ ನೆನಸಿಕೊಂಡು ಹಾರಿಹತ್ತಿ ನೆಗೆದಾಡಿತು. ಯಜಮಾನ ಶಿವಕುಮಾರೈ ಯನು ಮಲಗುತ್ತಿದ್ದ, ಜಾಗಕ್ಕೆ ಹೋಗಿ ಹತ್ತಿ ಹಾರಿನೋಡಿ ಆ ರಾತ್ರಿಯೆಲ್ಲ ಆ ಮೂವರೂ ಕೂತಿದ್ದರು-ತಾಯಿ ಮಕ್ಕಳು ಮಾತಾಡುತ್ತಿದ್ದಾಗ ಕೋತಿ ಮಾತಾಡಲಿಲ್ಲವಾದರೂ, ಎಲ್ಲವನ್ನು ಗ್ರಹಿಸಿಕೊಳ್ಳುತ್ತಿತ್ತೋ ಹೋಗೋ.
ಮಾರನೆಯ ದಿನ ಬಿಳಿಯವನು ಆ ಕೋತಿಯು ಸಂಪಾದಿಸಿದುದರಲ್ಲಿ ಇಪ್ಪತ್ತನೇ ಒಂದು ಭಾಗವೆಂದು ಕೆಲವು ಸಾವಿರ ರೂಪಾಯಿಗಳನ್ನು ಆ ಊರಿನ ಬ್ಯಾಂಕಿನಲ್ಲಿಟ್ಟು ಈ ಶಿವರಂಜನನು ತನಗೆ ಸಮಯಬಂದಾಗ ತೆಗೆದುಕೊಳ್ಳುವಂತೆ ಏರ್‍ಪಡಿಸಿ, ತಾನು ಬೇರೆ ಊರಿಗೆ ಹೊರಟುಹೋದನು.
ಮಾರನೆಯ ದಿನವೇ ಕೋತಿ ತಪ್ಪಿಸಿಕೊಂಡು ಊರೆಲ್ಲ ತಿರುಗಿಬಂತು. ಈ ಬಾರಿ ಯಾರಿಗೂ ಏನೇನೂ ತಂಟೆಮಾಡಲಿಲ್ಲ. ಎಲ್ಲ ಮರಗಳನ್ನು ಹತ್ತಿ ಎಲ್ಲ ಸೂರುಗಳಲ್ಲಿ ಜಾರಿ ಅಲ್ಲಿ ಹಾರಿ, ಇಲ್ಲಿ ನೆಗೆದು, ಅಂತ್ಯದಲ್ಲಿ ಮನೆಗೆ ಹಿಂದಿರುಗಿತು. ಅದಕ್ಕೋಸ್ಕರ ಇಟ್ಟಿದ್ದ ತಟ್ಟೆಯಲ್ಲಿ ಅನ್ನ, ರೊಟ್ಟಿ, ಹಣ್ಣುಗಳನ್ನು ತಿಂದಿತು. ಮಾರನೆಯ ದಿನವೇ ತುಂಗಮ್ಮನವರ ತೊಡೆಯ ಮೇಲೆ ಅದು ಕಣ್ಣು ಮುಚ್ಚಿ ಕಡೆಯುಸಿರುಬಿಟ್ಟಿತು. ಅದರ ಮುಖ ಲಕ್ಷಣವಾಗಿತ್ತೆಂದು ನೆರಮನೆಯಾಕೆ ಬಂದು ನಿಂತು ನೋಡಿ ಅಚ್ಚರಿ ಬಟ್ಟರು. ಮನೆ ಯಜಮಾನನು ಕಡೆಯ ಉಸಿರಿನಲ್ಲಿ ಹೇಳಿದಂತೆ ಅದೇ ಕೋತಿಯು ಹಿಂದಿರುಗಿ ಬಂದು ಇವರಿಗೆ ಸಾಕಾದಷ್ಟು ಐಶ್ವರ್ಯವನ್ನು ದೊರಕಿಸಿಟ್ಟು ಹೋಗಿತ್ತು.
ಶಿವರಂಜನ ಓದಿಕೊಂಡು ದೊಡ್ಡ ದೊಡ್ಡ ಕಾರ್ಯಗಳನ್ನೇ ಮಾಡಿದನು. ಕೋತಿಗಳನ್ನು ಕಂಡರೆ ಅವನಿಗೆ ತುಂಬಾ ಗೌರವ, ಕೋತಿಯೇ ಅವನಿಗೆ ಭಾಗ್ಯದೇವತೆಯಾಗಿತ್ತು
*****


















