“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.”
ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು:
“ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ”
“ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ”
ನಾನು ಹೀಗೆ ಹೇಳಿದೆನಾದರೂ ಭೀಮಪ್ಪ ಬರುವ ದಾರೀ ಕಾಯುತ ನಿಂತೆ ತುಸು ಕಾಲ ಓಡಿತು. ಮಗ್ಗುಲಿನ ಮನೆಯಿಂದ ಆತ ಇನ್ನೂ ಬರಲಿಲ್ಲ ಹಾಗೆಯೇ ಭೀಮಪ್ಪನ ಕಾಲ್ಪನಿಕ ಚಿತ್ರ ಬಂದು ನನ್ನ ಕಣ್ಣ ಮುಂದೆ ಸುಳಿಯಿತು. ಮುಪ್ಪಿನ ಮುದುಕ, ಸೊರಗಿದ ಮೈಯ, ಹರಕು ಶರಟು, ಗಿಡ್ಡ ಧೋತರ, ಹೊಲಸು ರುಮಾಲು ಸುತ್ತಿದ ವ್ಯಕ್ತಿ, ಇ೦ಥ ವ್ಯಕ್ತಿಯ ಕೈಯಲ್ಲಿ ಬ್ಯಾಗು ಕೊಟ್ಟು ನಾನು ಕೈ ಬೀಸುತ್ತ ನಡೆಯುತ್ತ ಹೊಗುವದೆಂದರೆ! ಬೇಡವೆಂದಿತು ಮನಸ್ಸು ಮತ್ತೆ ಬ್ಯಾಗಿಗೆ ಕೈಯಿಕ್ಕಿದೆ.
ಅದನ್ನು ಕಂಡು ಬಾಯಕ್ಕೆ ಮತ್ತೆ ಕರೆದಳು.
“ಭೀಮಾ, ಲಗೂನ ಬಾರಪ್ಪ ಅವರಿಗೆ ಹೊತ್ತಾತು”
“ಹೂನ್ರಿ!” ಎಂದು ಭೀಮಪ್ಪ ಲಗುಬಗೆಯಿಂದ ಉಟ್ಟ ಧೋತರಕ್ಕೆ ತನ್ನ ಹಸಿಯಾದ ಕೈಗಳನ್ನು ಒರಿಸಿಕೊಳ್ಳುತ್ತ ಹೊರಗೆ ಬಂದ. ಇನ್ನೂ ಇಪ್ಪತ್ನಾಲ್ಕು ವರ್ಷದ ತರುಣನಾತ, ಗಟ್ಟಿಮುಟ್ಟಾದ ಆಳು, ತಲೆಯ ಮೇಲೆ ಖಾದಿಯ ಟೊಪ್ಪಿಗೆ, ಮೈಯಲ್ಲಿ ಖಾದಿಯ ಶರ್ಟು, ಖಾದಿ ಅಂದರೆ ಗಿರಣಿಯ ಖಾದಿ, ಬಂದು ಅವಸರದಿಂದ ಬ್ಯಾಗಿಗೆ ಕೈ ಹಾಕುತ್ತ ಕೇಳಿದ.
“ಇದೇ ಅಲ್ಲೇನರಿ ಒಯ್ಯೋದು?”
“ಹೌದು; ಅದಽ ತಗೋ” ಎಂದಳು ಬಾಯಕ್ಕ.
“ಹೋಗಿ ಬರುತ್ತೇನೆ ಅಕ್ಕಾ ನಾ.” ಎಂದು ಹೇಳಿ ಮುನ್ನಡೆದೆ ನಾನು ಹಾಗೆಯೇ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಬಾಯಕ್ಕ ನೋಡುತ್ತ ನಿಂತು. ಮತ್ತೊಮ್ಮೆ ಭೀಮನಿಗೆ ಹೇಳಿದಳು.
“ಮೋಟಾರಿನಲ್ಲಿ ಕೂಡಿಸಿಯೇ ಬಾ”
“ಹೂನ್ರಿ! ಹಾಗೇ ಯಾತಕ್ಕ ಬರಲಿ? ಅದಕ್ಕಽ ಸ್ವಲ್ಪ ಹೊತ್ತಾದರೂ ಎಲ್ಲಾ ಕೆಲಸ ತೀರಿಸೇ ಬಂದೆ”
ಅರ್ಧ ತನ್ನಲ್ಲಿ ಅರ್ಧ ಹೊರಗೆ ನುಡಿದ ಭೀಮ.
“ಏನ ಕೆಲಸ ತೀರಿಸಿದಿಯೋ?”
ಭಾಂಡಿ ತಿಕ್ಕೋದ ಇತ್ತ ಏಳಿರಿ”
“ತಿಂಗಳಿಗೆ ಏನ ಕೊಡತಾರೋ ನಿನಗ?”
ಸಹಜ ವಿಷಯ ತಿಳಿದುಕೊಳ್ಳಬೇಕೆಂದು ಕೇಳಿದೆ.
“ಏನಿಲ್ಲರೀ. ನಾನು ಅವರ ರೈತ.” ಎಂದ ಭೀಮಪ್ಪ. ನನ್ನ ಕಲ್ಪನೆ ತಲೆ ಕೆಳಗಾಯಿತು. ಈತ ಅವರ ರೈತ. ರೈತನಾಗಿಯೂ ಮನೆಯಲ್ಲಿ ಪಾತ್ರೆ ತಿಕ್ಕಲು ಬಂದಿರುವ, ಈ ಟೆನನ್ಸಿ ಬಿಲ್ಲಿನ ಅಮಲಿನಲ್ಲಿಯೂ ರೈತನ ಈ ಅವತಾರ. ನನಗೆ ಮೊದಲು ಆವನ ಮಾತಿನ ಮೇಲೆ ನಂಬುಗೆಯೇ ಹುಟ್ಟಲಿಲ್ಲ. ಆದರೂ ಕೇಳಿದೆ.
“ಎಷ್ಟ ಎಕರೆ ಹೊಲಾ ಅದನೋ ನಿನ್ನ ಕಡೆಗೆ?”
“ಹತ್ರ ಹನ್ನೆರಡ ಏಕರೆ ಅದ ಅಲ್ಲರಿ!”
“ಎಷ್ಟ ವರ್ಷ ಆಯ್ತು ಮಾಡ್ತ ಬಂದಿರುವಿ?”
“ನಾಲೈದು ವರ್ಷ ಆಯ್ತಲ್ಲ.”
“ಆಮೇಲೇನು ನನ್ನ ಕಡೆಯಿಂದ ಅವರಿಗೆ ಹೊಲ ತೆಗೆಯಲಿಕ್ಕೆ ಬರುವದಿಲ್ಲ.” ಎಂದು ನಾನು ಕಾಯಿದೆಯನ್ನು ಹೇಳಿದೆ. ಆತ ಸುಮ್ಮನೆ ಇದ್ದ. ಹಾಗೆಯೇ ನನ್ನ ಹಿಂದೆ ಹಿಂದೆ ಬರುತ್ತಿದ್ದ. ಈಗ ಸ್ವಲ್ಪ ಹೊತ್ತು ಏರಿತ್ತು ಎಳೆಬಿಸಿಲು ಉಪ್ಪರಿಗೆಗಳ ತುದಿಗೆ ಬಂಗಾರದ ಕಿರೀಟದಂತೆ ಒಪ್ಪುತ್ತಿದ್ದಿತು. ಆದರೂ ಪಶ್ಚಿಮ ದಿಕ್ಕಿನಿಂದ ಸಾವಕಾಶವಾಗಿ ಮಂಜು ಬರುತ್ತಲಿತ್ತು ತಂಗಾಳಿಯಿಂದ ಅದು ಚಲಿಸುತಲಿತ್ತು. ನಾಲ್ಕು ಹೆಜ್ಜೆ ಹೋದ ಮೇಲೆ ಮತ್ತೆ ಕೇಳಿದೆ.
“ನಿನ್ನ ಮನೆ ಎಲ್ಲಿಯೋ?”
“ಅಲ್ಲೇ ಸಾವಕಾರರ ಹಿತ್ತಲೊಳಗೇ ಇದ್ದೇವಿ, ಪಾಯಖಾನೆ ಹತ್ತರ ಸ್ವಲ್ಪ ಚಪ್ಪರ ಹಾಕ್ಕೊಳ್ಳಿಕ್ಕೆ ಜಾಗಾ ಕೊಟ್ಟಾರ?”
“ಮಳೆಗಾಲದೊಳಗ ಏನ ಮಾಡ್ತೀರಿ?”
“ಚಪ್ಪರ ಅಂದರ ನಾಲ್ಕು ತಗಡೂ ಅವರಿ!”
“ಅದಕ್ಕೇ ಚಪ್ಪರ ಅ೦ದಿ ಹೌದ”
“ಏನಾದರೂ ಅನ್ನೊದ ಅಲ್ಲರಿ?” ಭೀಮಪ್ಪನ ದನಿಯಲ್ಲಿ ನಿರಾಶೆ ತುಂಬಿತ್ತು.
“ಹಾಂಗಾದರ ನಿನ್ನ ಊರ ಇದು ಅಲ್ಲ ಅನ್ನು”
“ಎಲ್ಲೀದರೀಯಪ್ಪ ಹತ್ತವರ್ಷದ ಹಿಂದ ಇಲ್ಲೆ ಬಂದೀನಿ, ಆಗ ನಮ್ಮ ಅವ್ವ ಇದ್ದಳು.”
“ಈಗ ಎಷ್ಟ ಜನರು ನೀವು ಮನಿಯೊಳಗೆ?” ಎಂದು ನಡುವೆಯೇ ನಾನು ಕೇಳಿದೆ.
“ನಾನು, ನನ್ನಾಕಿ ಇಬ್ಬರೇ.”
“ಮದುವೆ ಆಗಿ ಎಷ್ಟು ವರ್ಷ ಆಯ್ತು?”
“ಏನು ಸುಡತೀರಿ ಬರ್ರಿ!” ಬೇಸರದ ದನಿಯಲ್ಲಿ ನುಡಿದು ಭೀಮಪ್ಪ ಮುನ್ನಡೆದ. ನಾನೂ ನಾಲ್ಕು ಹೆಜ್ಜೆ ಮುಂದೆ ಹೋದ ಮೇಲೆ ಕೇಳಿದೆ.
“ಯಾಕೋ?”
“ಅದೇ ಮದಿವೀಸಾಲದೊಳಗ ವದ್ದಾಡಲಿಕ್ಕೆ ಹತ್ತೇನಿ.”
“ಯಾರ ಕೊಟ್ಟಾರೋ ಸಾಲಾ?”
“ಮತ್ಯಾರ ಕೊಡತಾರರೀ ನಮಗ? ಸಾವಕಾರರೆ? ಅಲ್ಲೇ ದುಡಿಯೋದು ಅಲ್ಲೇ ತಿನ್ನೋದು.”
“ಎಷ್ಟ ಅದನೋ ಇನ್ನೂ ಕೊಡೋದು?”
“ಮುನ್ನೂರು ಅದ ಅಲ್ಲರಿ?”
“ಈ ಸಾರೆ ಸುಗ್ಗಿ ಅದರ ತೀರತದಲ್ಲ?” ಎಂದೆ ನಾನು.
“ಸುಗ್ಗಿಗೇ ನಮಗಽ ಏನ ಸಂಬಂಧರಿ?”
ಅವನ ಮಾತನ್ನು ಕೇಳಿ ಆಶ್ಚರ್ಯವಾಯಿತು. ಹೊಲದಲ್ಲಿ ದುಡಿಯುವ ರೈತನೀತ, ಅವರ ಹೊಲ ಮಾಡಿರುವ. ಆದರೆ ಸುಗ್ಗಿಗೆ ಸಂಬಂಧವಿಲ್ಲ ಅನ್ನವ ಇದೆಂಥ ಮಾತು? ಎ೦ದು ಬೇಕಂತಲೇ ಮೂಲ ಸಂಗತಿಕೆ ಕೈಹಾಕಿದೆ.
“ಹೊಲದೊಳಗಿನ ಬೆಳೆ ನಿಮಗೆ ಕೊಡೂದಿಲ್ಲೇನೊ?”
“ಇಲ್ಲರಿ ಎರಡ ಎತ್ತು ಕೊಂಡು ಕೊಟ್ಟಾರರೀ, ಹೊಲಾ ಹರಗತೇನ್ರಿ. ಬಿತ್ತತೇನ್ರಿ, ನನ್ನ ಹೆಂಡತಿ ನಾನೂ ದುಡಿತೇವ್ರಿ, ರಾಶಿಯೊಳಗ ಬಂದು ಕೂತು ಬೆಳೆ ತರತಾರು, ನನಗೂ ಸ್ವಲ್ಪ ಕಾಳಕಡಿ ಕೊಡತಾರು. ಸ್ವಲ್ಪ ಸಾಲಾನೂ ಕಡಕೊಳ್ಳತಾರು.”
“ಕಬುಲಾಯತಿ ಇಲ್ಲೇನೋ?” ಮುರಕದಿ೦ದ ಕೇಳಿದೆ ನಾನು.
“ಇತ್ತರಿ, ಎರಡ ವರ್ಷದ ಹಿಂದ, ಈಗ ಮನೆಯಿಂದ ಕಮತ ಇಟ್ಟೀನಿ ಅಂತ ಕೇಳಿದವರ ಮು೦ದ ಹೇಳತಾರೆ.”
“ನೀನು ಸರಕಾರಕ್ಕೆ ತಿಳಿಸಬೇಕು”
“ಸರಕಾರಕ್ಕೆ ತಿಳಿಸಿ ನಾವು ಹೊಟ್ಟೆಗೇನ ತಿನ್ನೋದ ಅಣ್ಣಾ?”
ಬಸ್ ನಿಲ್ದಾಣ ಸಮೀಪಕ್ಕೆ ಬಂತು. ಬೀದಿ ಬೀದಿಗಳಲ್ಲಿ ಸ್ವಾತಂತ್ರ್ಯ ದಿನೋತ್ಸವದ ಸಿಂಗರ ನಡೆದಿದ್ದಿತು. ಮುನಸಿಪಾಲ್ವಿಯ ಆಳುಹೋಳುಗಳು ಅಲ್ಲಲ್ಲಿ ತೋರಣ, ಕಮಾನುಗಳನ್ನು ಕಟ್ಟುತ್ತಿದ್ದಾರೆ, ಸಿ೦ಗರಿಸುತ್ತಿದ್ದಾರೆ.
ಬಸ್ಸು ಈಗಾಗಲೇ ಹೊರಟು ಸಿದ್ಧವಾಗಿ ನಿಂತಿತ್ತು, ಹೋದವನೇ ಹತ್ತಿದೆ. ಭೀಮಪ್ಪ ಬ್ಯಾಗನ್ನು ತಂದು ಒಳಗೆ ಇಟ್ಟ. ಅವನ ಮುಖ ಅರಳಿತ್ತು. ಬೇಗನೆ ಮನೆಗೆ ಹೋಗಲು ಸಿಕ್ಕಿತೆಂದು ಇರಬೇಕು. ಅವನ ಕೈಯಲ್ಲಿ ಎಂಟಾಣೆ ಇಟ್ಟೆ.
“ಬ್ಯಾಡಿರಿ, ಬಾಯಕ್ಕೇನು ಹೊರಗಿನವರೇನು ತಕ್ಕೊಳ್ಳರಿ!” ಎಂದ ಭೀಮಪ್ಪ ಮಾತಿನಲ್ಲಿ ನಟನೆ ಇರಲಿಲ್ಲ.
“ಆದರೇನಾಯಿತು ತಗೋ.” ಎಂದು ಆಗ್ರಹ ಮಾಡಿದೆ. ಆತ ತಕ್ಕೊಂಡು, ನಮಸ್ಕಾರ ಮಾಡಿ ಹೊರಳಿ ನಡೆದ.
ಭಾರತಕ್ಕೆ ಸ್ವಾತಂತ್ರ ಬಂತು! ಆದರೆ ಭೀಮಪ್ಪನಿಗೇನು? ಉಣ್ಣಲಿಲ್ಲ, ತೊಡಲಿಲ್ಲ. ಸರಕಾರ ಕಾಯಿದೆಗಳನ್ನು ಪಾಸು ಮಾಡುತ್ತಿದೆ. ರೈತರ ಹಿತ ಬಯಸುತ್ತಿದೆ. ಅವುಗಳ ಪ್ರಯೋಗವಾಗುವುದು ಈ ರೀತಿ ಯಾರ ಕಾಯಿದೆ ಬಂದರೇನು? ಸ್ವಾತಂತ್ರ ಸಿಕ್ಕರೇನು? ಭೀಮಪ್ಪ ಇನ್ನೂ ಬಂಧನದಲ್ಲಿಯೇ ಅಲ್ಲವೆ? ಎಂದೇನೇನೋ ವಿಚಾರಿಸುತ್ತಿದ್ದೆ.
ಕಣ್ಣಿಗೆ ದೂರದಲ್ಲಿ ಹೋಗುವ ಭೀಮಪ್ಪನ ತಲೆಯ ಹೊಲಸು ಟೊಪ್ಪಿಗೆ ಕಾಣುತ್ತಿದ್ದಿತು. ಅದರ ಮೇಲೆ ಸ್ವಾತಂತ್ರ್ಯೋತ್ಸವದ ತೋರಣ ಹಾರಾಡುತ್ತಿತ್ತು!
*****


















