ಸಂಬಂಧ

ಸಂಬಂಧ

ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು.

ದೆಹಲಿಯಿಂದ ಹೊರಡಬೇಕಾಗಿದ್ದ ವಿಮಾನಗಳೂ ಬಿಸಿಲಿಗಾಗಿ ಕಾಯುತ್ತಾ ತಡವಾಗಿ ಹೊರಡುತ್ತಿದ್ದವು. ಬೆಂಗಳೂರಿಗೆ ಹೋಗಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದರು. ಬೆಳಗಿನ ಆರು ಗಂಟೆಗೆ ಹೊರಡಬೇಕಿದ್ದ ವಿಮಾನ ಏಳೂವರೆಯಾದರೂ ಹೊರಡಲಿಲ್ಲ. ಪ್ರಯಾಣಿಕರು ಅಲ್ಲಿ ಇಲ್ಲಿ ಕುಳಿತು ನಿಂತು ಸುಸ್ತಾದರು. ಮೂರ್ನಾಲ್ಕು ಸಲ ಚಹಾ ಕುಡಿದರು. ಕೊನೆಗೊಮ್ಮೆ ವಿಮಾನ ಹೊರಡುವುದೆಂದು ಧ್ವನಿವರ್ಧಕದಲ್ಲಿ ಪ್ರಸಾರ ಮಾಡಿದರು. ಅಲ್ಲಿ ಇಲ್ಲಿ ಕುಳಿತಿದ್ದ ಪ್ರಯಾಣಿಕರು ದಡಬಡಿಸಿ ಎದ್ದು ನಿಂತು ವಿಮಾನವೇರಲು ಮುನ್ನುಗ್ಗಿದರು. ವಿಮಾನ ಹತ್ತಿ ತಮ್ಮ ತಮ್ಮ ಆಸನ ಹುಡುಕಿ ಕುಳಿತಾಯಿತು. ಆದರೂ ವಿಮಾನ ಹೊರಡಲಿಲ್ಲ. ಸ್ವಲ್ಪ ಬಿಸಿಲು ಬಂದು ಮಂಜು ಕರಗಿದ ಬಳಿಕ ವಿಮಾನ ರನ್‌ವೇನ ಮೇಲೆ ಚಲಿಸತೊಡಗಿತು.

ಸುಮಾರು ಎಂಟೂವರೆಯ ವೇಳೆಗೆ ಗಗನಕ್ಕೇರಿತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು ಬಹಳ ಸುಸ್ತಾಗಿದ್ದರು. ವಿಮಾನವೇರಿ ಕುಳಿತ ಕೂಡಲೇ ಕಣ್ಮುಚ್ಚಿ ನಿದ್ರೆಗೆ ಜಾರಿದರು. ಗಗನ ಸಖಿಯರು ಬಂದು ತಿಂಡಿ ಸರಬರಾಜು ಮಾಡತೊಡಗಿದಾಗ ಎಲ್ಲಾ ಪ್ರಯಾಣಿಕರೂ ತಿಂಡಿ ತೆಗೆದುಕೊಂಡು ಗಲ ಗಲ ತಿನ್ನ ತೊಡಗಿದರು. ಈ ವೃದ್ಧರು ತಿಂಡಿ ಬೇಡವೆಂದು ಕೈಯಾಡಿಸಿ, ಕಣ್ಮುಚ್ಚಿ ಕುಳಿತರು. ಅವರ ಪಕ್ಕದಲ್ಲಿದ್ದ ಮುಕುಂದ, ಆ ಹಿರಿಯರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಅವರ ಆರೋಗ್ಯವೂ ಸರಿ ಇಲ್ಲದಂತೆ ಕಾಣುತ್ತಿತ್ತು. ಮೇಲಾಗಿ ಬಹಳ ದಣಿದಿದ್ದರು. ಬೆಳಗಿನ ಜಾವ ಆರು ಗಂಟೆಯ ವಿಮಾನವೇರಲು ಪ್ರಯಾಣಿಕರು ಮುಂಜಾನೆ ಮೂರು, ಮೂರೂವರೆಗೆಲ್ಲಾ ಎದ್ದು ತಯಾರಾಗಿ ಐದು ಗಂಟೆಗೆ ಮುಂಚೆಯೇ ವಿಮಾನ ನಿಲ್ದಾಣ ತಲುಪಿ, ತಮ್ಮ ಸಾಮಾನು ಸರಂಜಾಮುಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕೊಟ್ಟು ವಿಮಾನವೇರಲು ತಯಾರಾಗಿ ಕುಳಿತಿದ್ದರು. ಹಾಗಾಗಿ ಎಲ್ಲರಿಗೂ ವಿಪರೀತ ಸುಸ್ತಾಗಿತ್ತು. ಮತ್ತು ನಿದ್ರೆ ಸಾಲದೆ, ಎಲ್ಲರೂ ಕುಳಿತಲ್ಲಿಯೇ ನಿದ್ರೆಗೆ ಜಾರಿದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಮಯ ಹತ್ತೂವರೆ ಆಗಿತ್ತು. ಕೆಲವರು ಆ ದಿನ ಕೆಲಸಗಳಿಗೆ ಹೋಗಬೇಕಿತ್ತು. ಕೆಲವರು ಮದುವೆಗೆ ಹೋಗಬೇಕಿತ್ತು. ಒಟ್ಟಿನಲ್ಲಿ ಎಲ್ಲರಿಗೂ ಅವಸರ, ವಿಮಾನದಿಂದ ಇಳಿಯಲು ನಾನು ತಾನು ಎಂದು ಮುನ್ನುಗ್ಗಿದರು. ಮುಕುಂದನ ಪಕ್ಕದ ಆಸನದಲ್ಲಿ ಕುಳಿತಿದ್ದ ಹಿರಿಯರು ಮಾತ್ರ ಇನ್ನೂ ಕಣ್ಮುಚ್ಚಿ ಕುಳಿತಿದ್ದರು. ಅವರು ಎದ್ದು ಜಾಗ ಬಿಟ್ಟ ಮೇಲೆ ಮುಕುಂದ ಹೊರಬರಬೇಕಿತ್ತು. ಮುಕುಂದ ಅವರ ಭುಜ ಅಲುಗಿಸಿ ಎಚ್ಚರಿಸಿದ. ಅವರು ಕರೆದು ನೋಡಿ ಮತ್ತೆ ಕಣ್ಮುಚ್ಚಿದರು. ಓಹೋ… ಇವರಿಗೆ ಏನೋ ಸಮಸ್ಯೆಯಾಗಿದೆ ಎಂದು ತಿಳಿದ ಮುಕುಂದ, ವಿಮಾನದ ಸಿಬ್ಬಂದಿಯನ್ನು ಕರೆದು, ಇವರನ್ನು ಎಬ್ಬಿಸಿ ನಿಧಾನವಾಗಿ ಬಾಗಿಲಿನವರೆಗೆ ನಡೆಸಿಕೊಂಡು ಹೋದರು. ನಂತರ ಗಾಲಿಕುರ್ಚಿ ತರಿಸಿ ಅವರನ್ನು ಕೂಡಿಸಿ ವಿಮಾನದಿಂದ ಇಳಿಸಿದರು. ಇವರ ಬಳಿ ಲಗೇಜ್ ಏನಾದರು ಇದೆಯೇ ಎಂದು ಕೇಳಿದರೆ, ಅವರಿಗೆ ಉತ್ತರಿಸಲು ಆಗುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಲಗೇಜ್ ತೆಗೆದುಕೊಂಡು ಹೊರಟ ನಂತರ ಉಳಿದ ಎರಡು ಚೀಲಗಳಲ್ಲಿ ಒಂದು ಮುಕುಂದನದು ಮತ್ತೊಂದು ಈ ಹಿರಿಯರದು. ಅವರ ಟಿಕೇಟಿನ ಸಹಾಯದಿಂದ ಅವರ ಹೆಸರು ದಶರಥ್ ನಂದನ್ ಚತುರ್ವೇದಿ ಅಥವಾ ಡಿ.ಎಸ್. ಚತುರ್ವೇದಿ ಎಂದು ತಿಳಿಯಿತು. ವಯಸ್ಸು ಅರವತ್ತಾರು ವರ್ಷ, ವಿಳಾಸ ಗೊತ್ತಿಲ್ಲ. ದೆಹಲಿಯ ಒಂದು ಟ್ರಾವೆಲ್ಸ್ ಅಂಗಡಿಯಿಂದ ಟಿಕೇಟ್ ಖರೀದಿಸಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೊಲೀಸರು ಈ ಚತುರ್ವೆದಿಯವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ದೆಹಲಿಯ ವಿಮಾನ ನಿಲ್ದಾಣಕ್ಕೆ ಮತ್ತು ದೆಹಲಿಯ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆಗಳನ್ನು ಮಾಡಿ ಮಾತನಾಡತೊಡಗಿದರು. ಈ ಹಿರಿಯರು ಮಾತ್ರ ತಮಗೆ ಇದಾವುದರ ಪರಿವೆಯೇ ಇಲ್ಲವೆನ್ನುವಂತೆ ಕಣ್ಮುಚ್ಚಿ ಕುಳಿತಿದ್ದರು. ಅದನ್ನು ಕಂಡ ಮುಕುಂದ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಆಗ್ರಹಿಸಿದ.

“ಅದೆಲ್ಲ ಆಮೇಲೆ ವಿಚಾರಿಸಿ ಸಾರ್‌, ಮೊದಲು ಅವರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸಿ. ವಿಪರೀತ ಸುಸ್ತಾಗಿದ್ದಾರೆ. ಈ ಚಳಿಯಲ್ಲಿಯು ಬೆವರ್ತಾ ಇದ್ದಾರೆ. ಏನಾದ್ರೂ ಹಾರ್ಟ್ ಅಟ್ಯಾಕ್ ಆಗಿಹೋಗಿದೆಯೋ ಏನೋ?”

“ಇವರು ನಿಮಗೇನಾಗಬೇಕ್ರಿ? ನಿಮ್ಮ ಸಂಬಂಧೀಕರಾದರೆ ನೀವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ನಿಮಗೇನೂ ಸಂಬಂಧವಿಲ್ಲದವರು ಅಂದರೆ ನೀವು ಸುಮ್ಮನೆ ಹೋಗಿ. ನಮ್ಮ ಕೆಲಸ ನಾವು ಮಾಡ್ತೇವೆ.”

ಮುಕುಂದ ಬೇಸರ ಮಾಡಿಕೊಳ್ಳದೇ ಹೇಳಿದ.

“ಅವರು ನನಗೇನೂ ಸಂಬಂಧವಿಲ್ಲ ಸಾರ್, ಆದರೆ ಅವರ ಜೊತೆಗೆ ಯಾರೂ ಇಲ್ಲದೇ ಇರೋದರಿಂದ ನಾನು ಹೇಳ್ತಾ ಇದ್ದೀನಿ ಅಷ್ಟೇ” ದಯವಿಟ್ಟು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಥವಾ ಕೂಡಲೇ ಒಬ್ಬ ಡಾಕ್ಟರನ್ನು ಕರೆಸಿ.”

ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅದು ಸರಿಯೆನಿಸಿತು. ಕೂಡಲೇ ವಿಮಾನ ನಿಲ್ದಾಣದ ಮೆಡಿಕಲ್ ಆಫೀಸರ್ ಅವರನ್ನು ಮತ್ತು ಅಂಬುಲೆನ್ಸ್ ಅನ್ನು ಕರೆಸಿದರು. ಮುಕುಂದನನ್ನು “ಸಾಧ್ಯವಾದರೆ ನೀವೂ ಅವರ ಜೊತೆಗೆ ಆಸ್ಪತ್ರೆಗೆ ಬನ್ನಿ” ಎಂದರು.

ಮುಕುಂದ್ ತನ್ನ ಮನೆಗೆ ದೂರವಾಣಿ ಮಾಡಿ ಈ ವಿಷಯ ವಿವರಿಸಿ, ತಾನು ಆಸ್ಪತ್ರೆಗೆ ಹೋಗಿ ನಂತರ ಮನೆಗೆ ಬರುವುದಾಗಿ ತಿಳಿಸಿದ. ನಂತರ ತನ್ನ ಕಂಪನಿಗೆ ಕರೆ ಮಾಡಿ ಈ ರೀತಿ ಒಂದು ಸಮಸ್ಯೆಯಲ್ಲಿ ಸಿಕ್ಕಿದ್ದೇನೆ. ಅವರನ್ನು ಆಸ್ಪತ್ರೆಗೆ ಸೇರಿಸಿ, ಮನೆಗೆ ಹೋಗಿ ಬರಲು ತಡವಾಗುತ್ತದೆ. ಆದುದರಿಂದ ಈ ದಿನ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ. ಆ ಹಿರಿಯರನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ದು ಪೊಲೀಸರ ಸಹಾಯದಿಂದ ಒಳರೋಗಿಯಾಗಿ ಸೇರಿಸಲಾಯಿತು. ಅವರಿಗೆ ತುರ್ತು ಚಿಕಿತ್ಸೆ ಆರಂಭವಾಯಿತು. ಅಷ್ಟರ ವೇಳೆಗೆ ಪೊಲೀಸರು ಚತುರ್ವೇದಿಯವರ ಚೀಲಗಳನ್ನು, ಬಟ್ಟೆ, ಬರೆ ಪರ್ಸ್ ಎಲ್ಲಾ ಮಹಜರ್ ಮಾಡಿ, ಒಂದು ಪಟ್ಟಿ ಮಾಡಿದರು. ಮುಕುಂದನನ್ನು ಸಾಕ್ಷಿಯಾಗಿ ಸಹಿ ಮಾಡಿಸಿಕೊಂಡರು. ನಂತರ ಚತುರ್ವೇದಿಯವರ ಮೊಬೈಲ್ ಫೋನ್ ನೋಡಿದರು. ಚತುರ್ವೇದಿಯವರು ವಿಮಾನವೇರುವ ಮುನ್ನವೇ ನಿಯಮದ ಪ್ರಕಾರ ಮೊಬೈಲ್ ಫೋನನ್ನು ಆಫ್ ಮಾಡಿದ್ದರು.

ಪೊಲೀಸರು ಆ ಮೊಬೈಲ್ ಫೋನನ್ನು ಸ್ವಿಚ್ ಆನ್ ಮಾಡಿದರು. ಒಂದೆರಡು ನಿಮಿಷದಲ್ಲಿಯೇ ಕರೆ ಬಂತು. ಆ ಕರೆ ಮಾಡಿದ್ದು, ಆ ಹಿರಿಯರ ಮಗಳು, “ನೇಹಾ.” ಪೊಲೀಸರು ಅವಳಿಗೆ ಚತುರ್ವೇದಿಯವರ ವಿಷಯ ತಿಳಿಸಿ ಕೂಡಲೇ ಆಸ್ಪತ್ರೆಗೆ ಬರಬೇಕೆಂದು ತಿಳಿಸಿದರು. ನಂತರ ಮುಕುಂದ ಮಾತನಾಡಿ, “ನೀವೇನೂ ಗಾಬರಿಯಾಗಬೇಡಿ, ನಾನಿದ್ದೇನೆ. ಅವರನ್ನು ನೋಡಿಕೊಳ್ಳುತ್ತೇನೆ. ನೀವು ಸಮಾಧಾನದಿಂದಿರಿ, ನಿಧಾನವಾಗಿ ಬನ್ನಿ ಪರವಾಗಿಲ್ಲ.” ಎಂದು ಹೇಳಿದರು. ನಂತರ ಪೊಲೀಸರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿ, ತನ್ನ ಸೆಲ್ ನಂಬರ್ ಕೊಟ್ಟು, ತಿಂಡಿ ತಿಂದು ಬರಲು ಕ್ಯಾಂಟೀನ್‌ಗೆ ಹೋದರು.

ಚತುರ್ವೆಏದಿಯವರ ಮಗಳು ನೇಹಾ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಒಂದು ಕಂಪ್ಯೂಟರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಳು. ಅವಳ ಗಂಡ ಮತ್ತೊಂದು ಕಂಪನಿಯಲ್ಲಿ ಫೈನಾನ್ಸ್ ವಿಭಾಗದ ಗ್ರೂಫ್ ಲೀಡರ್. ಆತ ಕಂಪನಿಯ ಕೆಲಸದ ಮೇಲೆ ಲಂಡನ್ನಿಗೆ ಹೋಗಿದ್ದರು. ಇವರಿಗೆ ಎಂಟು ವರ್ಷದ ಮಗಳು “ಆಶ್ರಿತಾ” ಅವಳು ಶಾಲೆಯಲ್ಲಿ ಓದುತ್ತಿದ್ದಳು. ನೇಹಾ ತನ್ನ ಮಗಳನ್ನು ಶಾಲೆಗೆ ಕಳಿಸಿ ತನ್ನ ಆಫೀಸಿಗೆ ಹೋಗಿದ್ದಳು. ಈ ದಿನ ಆಫೀಸಿನಲ್ಲಿ ಒಂದು ಮುಖ್ಯವಾದ ಮೀಟಿಂಗ್ ಇತ್ತು. ಆ ಮೀಟಿಂಗ್ ಮುಗಿಸಿ, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಮನೆಗೆ ಬಂದು ಅಡುಗೆ ಮಾಡಬೇಕು, ತಂದೆ ದೆಹಲಿಯಿಂದ ಬರುತ್ತಾರೆ, ಅವರಿಗೆ ಇಷ್ಟವಾದ ತಿಂಡಿ ತಿನಿಸು ಮಾಡಬೇಕು ಎಂದು ಯೋಚಿಸಿ ತನ್ನ ಆಫೀಸಿಗೆ ಹೋಗಿದ್ದಳು. ಆಫೀಸ್‌ನಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಿತ್ತು. ಬೇಗ ಕೆಲಸ ಮುಗಿಸಿ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಈ ದೂರವಾಣಿ ಕರೆ ಬಂತು. ಏನು ಮಾಡುವುದೆಂದು ತೋಚಲಿಲ್ಲ. ಮಗಳು ಶಾಲೆಯಿಂದ ಮನೆಗೆ ಬರುತ್ತಾಳೆ. ಅವಳನ್ನು ನೋಡಿಕೊಳ್ಳಬೇಕು. ಮನೆಗೆ ಹೋಗಿ ಅಡುಗೆ ಮಾಡಬೇಕು. ಮತ್ತೀಗ ಆಸ್ಪತ್ರೆಗೆ ಹೋಗಿ ತಂದೆಯವರನ್ನು ನೋಡಿ ಅವರ ಜವಾಬ್ದಾರಿ ವಹಿಸಿಕೊಳ್ಳಬೇಕು. ತಾನಿರುವ ಅಪಾರ್ಟ್‌ಮೆಂಟಿನಲ್ಲಿ ಒಬ್ಬ ಹಿರಿಯ ದಂಪತಿಗಳು ಯಾವಾಗಲಾದರೂ ಆಶ್ರಿತಾಳನ್ನು ನೋಡಿಕೊಳ್ಳುತ್ತಿದ್ದರು. ಸುಮ್ಮನೆ ಅಲ್ಲ. ಅವರಿಗೆ ದಿನಕ್ಕೆ ಐನೂರು ರೂಪಾಯಿ ಕೊಡಬೇಕಿತ್ತು. ಈ ದಿನ ಕೂಡಾ ಮಗುವನ್ನು ನೋಡಿಕೊಳ್ಳುವಂತೆ ಅವರಿಗೆ ತಿಳಿಸಿ ಆಸ್ಪತ್ರೆಗೆ ಹೊರಟಳು.

ನೇಹಾ ಆಸ್ಪತ್ರೆ ತಲುಪುವ ವೇಳೆಗೆ ಮುಕುಂದ್ ತಿಂಡಿ ತಿಂದು ಬಂದಿದ್ದರು. ನೇಹಾಳ ಪರಿಚಯ ಮಾಡಿಕೊಂಡು ಅವರ ತಂದೆಯ ವಿಷಯ ಸಂಕ್ಷಿಪ್ತವಾಗಿ ತಿಳಿಸಿ, “ನೀವೇನೂ ಗಾಬರಿಯಾಗಬೇಡಿ, ಆಸ್ಪತ್ರೆಯ ಸಿಬ್ಬಂದಿಯವರೆಲ್ಲಾ ನಿಮ್ಮ ತಂದೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನೀವು ಧೈರ್ಯವಾಗಿರಿ” ಎಂದರು. ಆದರೆ ಚತುರ್ವೇದಿಯವರಿಗೆ ಹೃದಯಾಘಾತವಾಗಿತ್ತು. ನೇಹಾ ಬರುವ ವೇಳೆಗೆ ವೈದ್ಯರು, ಚತುರ್ವೇದಿಯವರಿಗೆ ಆಪರೇಶನ್ ಮಾಡಿ, ಸ್ಟಂಟ್ ಹಾಕಿ ಐ.ಸಿ.ಯೂಗೆ ಕಳಿಸಿದ್ದರು. ನೇಹಾಗೆ ಮುಕುಂದ್‌ರವರು ಪರಿಪರಿಯಾಗಿ ಸಮಾಧಾನ ಹೇಳಿದರು. ನಂತರ, “ನಾನು ಮನೆಗೆ ಹೋಗಿ, ಸ್ನಾನ ಮಾಡಿ, ಊಟ ಮಾಡಿ, ಸಂಜೆ ಐದು ಗಂಟೆಯ ವೇಳೆಗೆ ಬರುತ್ತೇನೆ. ನೀವು ಹೋಗಿ ತಂದೆಯವರನ್ನು ನೋಡಿಕೊಂಡು ಬನ್ನಿ. ನಂತರ ಇಲ್ಲಿಯೇ ವಿಶ್ರಾಂತಿ ಮಾಡಿ ಎಂದು ಹೇಳಿ, ತನ್ನ ಫೋನ್ ನಂಬರ್ ಕೊಟ್ಟು, ಅವಳ ಫೋನ್ ನಂಬರ್ ತೆಗೆದುಕೊಂಡು ಹೊರಟರು.

ಮುಕುಂದ ಮನೆಗೆ ಬಂದು ನಡೆದ ವಿಷಯವನ್ನೆಲ್ಲಾ ತನ್ನ ಪತ್ನಿ ಸುಧಾಗೆ ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ಸ್ನಾನ ಮಾಡಿ, ಊಟ ಮಾಡಿ, ವಿಶ್ರಾಂತಿ ತೆಗೆದುಕೊಂಡರು. ಸಂಜೆ ಐದು ಗಂಟೆಗೆ ಮಗ ನಿತಿನ್ ಬಂದ ಮೇಲೆ ಅವನಿಗೆ ತಿಂಡಿ, ಕಾಫಿ ಕೊಟ್ಟು, ಅವನು ಆಡಲು ಹೋದ ಮೇಲೆ, ಇವರಿಬ್ಬರೂ ಕಾರು ತೆಗೆದುಕೊಂಡು ಆಸ್ಪತ್ರೆಗೆ ಹೋದರು. ನೇಹಾ ಇವರಿಗಾಗಿ ಕಾದು ಕುಳಿತಿದ್ದಳು. ಇವರು ಮೂವರೂ ಹೋಗಿ ಚತುರ್ವೇದಿಯವರನ್ನು ನೋಡಿ, ಮಾತನಾಡಿಸಿ ಬಂದರು. ಅಲ್ಲಿಗೆ ಇವರ ಜವಾಬ್ದಾರಿ ಮುಗಿಯಿತು. ಆದರೆ ಬಹಳ ಸಹೃದಯ ದಂಪತಿಗಳಾದ ಮುಕುಂದ ಮತ್ತು ಸುಧಾ ನೇಹಾಳಿಗೆ ಮತ್ತೆ ಮತ್ತೆ ಸಮಾಧಾನ ಮಾಡಿ, ಧೈರ್ಯ ತುಂಬಿದರು. ಅವಳ ಮನೆಯಲ್ಲಿ ಯಾರು ಯಾರು ಇದ್ದಾರೆ? ಅವಳ ಒಡಹುಟ್ಟಿದವರು ಯಾರಿದ್ದಾರೆ? ಎಂದೆಲ್ಲಾ ವಿಚಾರಿಸಿದರು. ನೇಹಾಳ ಅಣ್ಣ ಕಿಶೋರ್ ದೆಹಲಿಯಲ್ಲಿ ಒಂದು ಕಂಪನಿಯಲ್ಲಿ ಜನರಲ್ ಮೇನೇಜರ್ ಆಗಿದ್ದ. ದೆಹಲಿಯಲ್ಲಿ ಸ್ವಂತ ಮನೆ, ಓಡಾಡಲು ಸ್ವಂತ ಕಾರು, ಲಕ್ಷ ರೂಪಾಯಿ ಸಂಬಳ ಎಲ್ಲಾ ಅನುಕೂಲವಾಗಿತ್ತು. ಕಿಶೋರನ ಮಗಳು ಅನುಶ್ರೀ ಮದುವೆಯಾಗಿ ಅಮೇರಿಕಾದಲ್ಲಿದ್ದಳು. ಅವಳಿಗೀಗ ಮಗುವಾಗಿತ್ತು, ಕಿಶೋರನ ಪತ್ನಿ ಮೃದುಲಾ ಮಗಳ ಬಾಣಂತನ ಮಾಡಲು ಅಮೇರಿಕಾಗೆ ಹೋಗಿದ್ದಳು. ಕಿಶೋರನ ಮಗ ನಿಹಾಲ್ ದೆಹಲಿಯಲ್ಲಿ ಓದುತ್ತಿದ್ದ. ಕಿಶೋರ್, ನೇಹಾರ ತಾಯಿ ಈಗಾಗಲೇ ತೀರಿ ಹೋಗಿದ್ದರು. ಚತುರ್ವೇದಿಯವರು ಮಗನ ಮನೆಯಲ್ಲಿಯೇ ಇದ್ದರು. ಅವರಿಗೆ ನೇಹಾ ಕಿಶೋರ್‌ರವರಿಗಿಂತಾ ಹಿರಿಯಳಾದ ಮಗಳಿದ್ದಳು. ಅವಳ ಹೆಸರು ಪ್ರಿಯಂವದಾ. ಅವಳು ಚಂಡೀಘರ್‌ನಲ್ಲಿದ್ದಳು. ಚತುರ್ವೇದಿಯವರು ಆಗಾಗ ಚಂಡೀಘರ್‌ಗೂ, ಬೆಂಗಳೂರಿಗೂ ಹೋಗಿ ಮಗಳ ಮನೆಯಲ್ಲಿ ಹತ್ತಾರು ದಿನ ಇದ್ದು ಆರಾಮ ಮಾಡಿ ಬರುತ್ತಿದ್ದರು.

ಚತುರ್ವೇದಿಯವರು ಮೂಲತಃ ಉತ್ತರ ಪ್ರದೇಶದ ಅಲಹಾಬಾದ್‌ನವರು. ಅಲಹಾಬಾದ್‌ನ ಹತ್ತಿರ ಹದಿನೆಂಟು ಕಿಲೋಮೀಟರ್ ದೂರದಲ್ಲಿ ಸಹದೇವಪುರ ಎಂಬ ಗ್ರಾಮದಲ್ಲಿ ಇವರಿಗೆ ಹೊಲ, ಗದ್ದೆ, ತೋಟ, ವಾಸದ ಮನೆ ಎಲ್ಲಾ ಇದೆ. ಆದರೆ ನೋಡಿಕೊಳ್ಳುವವರಿಲ್ಲದೆ ತೋಟ ಮನೆ ಎಲ್ಲ ಹಾಳು ಬಿದ್ದಿದೆ. ಚತುರ್ವೇದಿ ಯವರು ವರ್ಷಕ್ಕೋ ಎರಡು ವರ್ಷಕ್ಕೋ ಒಂದು ಸಲ ಸಹದೇವಪುರಕ್ಕೆ ಹೋಗಿ ಮನೆಯನ್ನು ಸ್ವಚ್ಛ ಮಾಡಿಸಿ, ತಮ್ಮ ಎಲ್ಲಾ ಆಸ್ತಿಗೆ ತೆರಿಗೆ ಕಟ್ಟಿ ಬರುತ್ತಾರೆ. ಜಮೀನನ್ನು ಒಬ್ಬ ರೈತನಿಗೆ ಗುತ್ತಿಗೆಗೆ ಕೊಟ್ಟಿದ್ದಾರೆ. ಅವರು ಕೆಲವೊಮ್ಮೆ ಹಣ ಕೊಡುತ್ತಾನೆ. ಕೆಲವೊಮ್ಮೆ ಬೆಳೆ ಆಗಿಲ್ಲ. ನನ್ನ ಹತ್ತಿರ ಹಣವಿಲ್ಲ ಎಂದು ಕೈಯಾಡಿಸಿಬಿಡ್ತಾನೆ. ಕಿಶೋರನಿಗಾಗಲಿ, ಅವನ ಅಕ್ಕ ತಂಗಿಯರಿಗೆ ಆ ಆಸ್ತಿಯ ಬಗ್ಗೆ ಯಾವ ಆಸಕ್ತಿಯೂ ಇಲ್ಲ. ನಮ್ಮ ನಮ್ಮ ಕೆಲಸ, ಸಂಸಾರ, ಮನೆ ಮಕ್ಕಳು ಇದರ ಗಡಿಬಿಡಿಯಲ್ಲಿ ನಾವಿದ್ದೇವೆ ಎಂದಳು ನೇಹಾ.

ಮುಕುಂದ ಕೇಳಿದರು. ಅದೆಲ್ಲಾ ಇರಲಿ, ಈಗ ನೀವು ಏನು ಮಾಡ್ತೀರಿ? ಮಗಳು ಶಾಲೆಯಿಂದ ಬಂದಿದ್ದಾಳೆ. ಮನೆಯಲ್ಲಿ ಪಾಪ ಬೇರೆಯಾರೂ ಇಲ್ಲ. ನಿಮ್ಮ ಅಣ್ಣನಿಗೆ, ಫೋನ್ ಮಾಡಿದ್ದೀರಾ?

ನೇಹಾ ನಿಟ್ಟುಸಿರು ಬಿಟ್ಟು ಹೇಳಿದಳು.

“ಹೌದು ನನ್ನ ಅಣ್ಣನಿಗೆ, ಅಕ್ಕನಿಗೆ, ಭಾವನಿಗೆ, ಅತ್ತಿಗೆಗೆ ಎಲ್ಲರಿಗೂ ಫೋನ್ ಮಾಡಿದ್ದೆ. ಎಲ್ಲರಿಗೂ ಅವರವರದೇ ಸಮಸ್ಯೆಗಳು, ಅಣ್ಣ ಎರಡು ದಿನ ಬಿಟ್ಟು ಬಂದು ನೋಡಿಕೊಂಡು ಹೋಗ್ತಿನಿ ಅಂತ ಹೇಳಿದ. ನನ್ನ ಪತಿಗೆ ಮತ್ತು ಅತ್ತೆಯವರಿಗೂ ಫೋನ್ ಮಾಡಿ ಹೇಳಿದೆ. ಎಲ್ಲರೂ ಸಹಾನುಭೂತಿ ತೋರಿಸುವವರೇ. ಅಲ್ಲಿಗೆ ಅವರ ಕೆಲಸ ಮುಗೀತು. ಇನ್ನು ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಮಗಳಿಗೆ ಹೋಂ ವರ್ಕ್ ಮಾಡಿಸಬೇಕು. ನಾಳೆ ನಮ್ಮ ಆಫೀಸಿಗೆ ಅಮೇರಿಕಾದಿಂದ ಡೆಲಿಗೇಟ್ಸ್ ಬರ್ತಾ ಇದಾರೆ, ನಾನು ರಜಾ ಹಾಕುವಂತಿಲ್ಲ. ಏನು ಮಾಡೋದು ಅಂತ ತೋಚ್ತಾ ಇಲ್ಲ.”

ಬಹಳ ಚಿಂತಿತಳಾಗಿ ಹೇಳಿದಳು. ಇವಳ ಮಾತು ಕೇಳಿ ಮುಕುಂದ್ ದಂಪತಿಗಳಿಗೆ ಬಹಳ ದುಃಖವಾಯಿತು. ಆದರೆ ತಾನೇನು ಮಾಡಲು ಸಾಧ್ಯ? ಈದಿನ ಅಂತೂ ರಜೆ ಹಾಕಿ ಆಸ್ಪತ್ರೆಯಲ್ಲಿ ಇದ್ದದ್ದಾಯಿತು. ಇನ್ನು ನಾಳೆ ಆಫೀಸಿಗೆ ಹೋಗಲೇಬೇಕು. ಮುಕುಂದ್ “ಒಂದು ನಿಮಿಷ ಇರಿ ಬರೀನಿ” ಎಂದು ಹೋಗಿ ಐಸಿಯೂನ ದಾದಿಯರನ್ನು ಭೇಟಿ ಮಾಡಿ, ಚತುರ್ವೇದಿಯವರ ವಿಷಯ ಚರ್ಚಿಸಿದರು. ಇವತ್ತೇ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ಇನ್ನೆರಡು ದಿನ ಐ.ಸಿ.ಯುನಲ್ಲಿಯೇ ಇರಬೇಕು. ಆ ಸಮಯದಲ್ಲಿ ಮನೆಯವರು ಯಾರೂ ಇರುವಂತಿಲ್ಲ. “ನೀವುಗಳು ನಿಶ್ಚಿಂತೆಯಾಗಿ ಮನೆಗೆ ಹೋಗಿ ನಾಳೆ ಒಂಭತ್ತು ಗಂಟೆಯ ನಂತರ ಬಂದು ನೋಡಬಹುದು” ಎಂದರು.

ಮುಕುಂದ ಹೊರಬಂದು ನೇಹಾಳಿಗೆ ಸಮಾಧಾನ ಮಾಡಿದರು. “ಆಸ್ಪತ್ರೆಯವರು ನಿಮ್ಮ ತಂದೆಯವರನ್ನು ಚೆನ್ನಾಗಿ ನೋಡಿಕೊಳ್ತಾರೆ ನೀವು ನಿಶ್ಚಿಂತರಾಗಿ ಮನೆಗೆ ಹೋಗಿಬನ್ನಿ.”

ಸುಧಾ ನಸುನಗುತ್ತಾ ಹೇಳಿದರು.

“ನಾಳೆ ಬೆಳಗ್ಗೆ ನೀವಿಬ್ಬರೂ ನಿಮ್ಮ ನಿಮ್ಮ ಆಫೀಸಿಗೆ ಹೋಗಿ ಬನ್ನಿ, ನಾನು ನಾಳೆ ಬೆಳಗ್ಗೆ ಅಡುಗೆ ಮಾಡಿಟ್ಟು ಮಗನನ್ನು ಸ್ಕೂಲಿಗೆ ಕಳಿಸಿ ಆಸ್ಪತ್ರೆಗೆ ಬರ್ತೀನಿ. ಸಂಜೆವರೆಗೆ ಇಲ್ಲೇ ಇರ್ತೀನಿ. ನೀವು ಆಫೀಸ್ ಕೆಲಸ ಮುಗಿಸಿಕೊಂಡು, ಸಂಜೆ ಮಗೂನ ಕರೆದುಕೊಂಡು ಇಲ್ಲಿಗೆ ಬನ್ನಿ, ಸರೀನಾ? ಈಗ ನಡೀರಿ ಹೊರಡೋಣ. ನಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ನಿಮ್ಮನ್ನು ಮನೆ ತಲುಪಿಸಿ ನಾವು ನಮ್ಮ ಮನೆಗೆ ಹೊರಡ್ತೀವಿ.”

ಈ ಮಾತಿನಿಂದ ಮುಕುಂದರವರಿಗೂ, ನೇಹಾವರಿಗೂ ಸಮಾಧಾನವಾಯಿತು. ಮರುದಿನ ಸುಧಾ ಬಂದು ಚತುರ್ವೇದಿಯವರನ್ನು ನೋಡಿಕೊಂಡರು. ಅದರ ಮರುದಿನ ಅವರನ್ನು ವಾರ್ಡಿಗೆ ಬಿಟ್ಟರು. ಅದೇ ದಿನ, ದೆಹಲಿಯಿಂದ ಕಿಶೋರ್ ಬಂದು ಎರಡುದಿನ ಬೆಂಗಳೂರಿನಲ್ಲಿದ್ದು ತಂದೆಯವರ ಆಸ್ಪತ್ರೆಯ ಬಿಲ್ ಪಾವತಿ ಮಾಡಿ, ತಂದೆಯವರನ್ನು ತಂಗಿಯ ಮನೆಯಲ್ಲಿ ಬಿಟ್ಟು ದೆಹಲಿಗೆ ಹೊರಟನು. ಹೊರಡುವ ಮುನ್ನ ಮುಕುಂದರವರ ಮನೆಗೆ ಬಂದು ಅವರ ಎಲ್ಲಾ ಸಹಾಯಕ್ಕೆ ಹೃತೂರ್ವಕ ವಂದನೆಗಳನ್ನು ತಿಳಿಸಿ ದೆಹಲಿಗೆ ಹಿಂತಿರುಗಿದನು. ಮುಕುಂದ ಮತ್ತು ಸುಧಾ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿ ಚತುರ್ವೇದಿಯವರ ವಿಷಯ ಮರೆಯತೊಡಗಿದರು.

ನೇಹಾ ತನ್ನ ಮನೆಯ ಕೆಲಸ, ಆಫೀಸಿನ ಕೆಲಸ, ಮಗಳನ್ನು ಶಾಲೆಗೆ ಕಳಿಸುವುದು ಸಂಜೆ ಮನೆಗೆ ಬಂದು ಅವಳ ಹೋಂ ವರ್ಕ್ ಮಾಡಿಸುವುದು ಹೀಗೆ ತನ್ನ ಕೆಲಸದಲ್ಲಿ ತಾನು ಸದಾ ಗಡಿಬಿಡಿಯಿಂದ ಇರುತ್ತಿದ್ದಳು. ಇನ್ನು ತಂದೆಯವರ ಊಟ, ತಿಂಡಿ, ಬಟ್ಟೆ-ಬರೆ, ಔಷದೋಪಚಾರ ಇದೂ ಅವಳಿಗೆ ಹೆಚ್ಚಿನ ಜವಾಬ್ದಾರಿಯಾಯಿತು. ನೇಹಾ ಒಂದು ವಾರದ ಬಳಿಕ ಅಕ್ಕ ಪ್ರಿಯಾಂವದಾಳಿಗೆ ಫೋನ್ ಮಾಡಿ, “ತಂದೆಯವರು ಈಗ ಆರೋಗ್ಯವಾಗಿದ್ದಾರೆ. ಆದರೆ ದೆಹಲಿಗೆ ಹೊರಡುವ ಮಾತೇ ಆಡುತ್ತಿಲ್ಲ. ಅಲ್ಲಿ ಅತ್ತಿಗೆ ಇಲ್ಲ. ಅವರು ಮಗಳ ಮನೆಗೆ ಅಮೇರಿಕಾಗೆ ಹೋಗಿದ್ದಾರೆ ಇಲ್ಲಿ ನನ್ನ ಯಜಮಾನರು ಇಂಗ್ಲೆಂಡಿಗೆ ಹೋಗಿದ್ದಾರೆ. ನನಗೆ ಒಂದು ನಿಮಿಷ ಬಿಡುವಿಲ್ಲದಂತೆ ವಿಪರೀತ ಕೆಲಸವಾಗಿದೆ. ನೀನು ಸ್ವಲ್ಪ ಬಿಡುವ ಮಾಡಿಕೊಂಡು ಬಂದು ಹೋಗು. ನಾಲ್ಕು ದಿನ ಇಲ್ಲಿದ್ದು ತಂದೆಯವರನ್ನು ನೋಡಿಕೋ ಸಾಧ್ಯವಾದರೆ ಅವರನ್ನು ನಿನ್ನ ಜೊತೆ ಚಂಡೀಘರ್‌ಗೆ ಕರೆದುಕೊಂಡು ಹೋಗು” ಎಂದಳು.

ಪ್ರಿಯಂವದಾ ಕೂಡಾ ಸಹಾನುಭೂತಿ ವ್ಯಕ್ತಪಡಿಸಿದಳೇ ವಿನಃ ಬರುವ ವಿಷಯವಾಗಲೀ, ತಂದೆಯವರನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ವಿಷಯವಾಗಲೀ ಮಾತನಾಡಲಿಲ್ಲ. ಚತುರ್ವೇದಿಯವರು ಪ್ರತಿದಿನ ದೂರವಾಣಿ ಕರೆ ಮಾಡಿ ಕಿಶೋರನ ಹತ್ತಿರ ಮತ್ತು ಪ್ರಿಯಂವದಾಳ ಬಳಿ ಮಾತನಾಡುತ್ತಿದ್ದರು. ಒಂದು ದಿನ ನೇಹಾಳಿಗೆ ಹೇಳಿ, ಮುಕುಂದರವರಿಗೆ ದೂರವಾಣಿ ಕರೆ ಮಾಡಿ ಅವರೊಂದಿಗೆ ಮತ್ತು ಅವರ ಪತ್ನಿಯವರೊಂದಿಗೆ ಹತ್ತು ನಿಮಿಷ ಮಾತನಾಡಿದರು. ಕೊನೆಗೆ, ನನಗೆ ಇಲ್ಲಿ ಒಬ್ಬನೇ ಇದ್ದು ಇದ್ದು ಬಹಳ ಬೇಜಾರಾಗಿದೆ. ನೀವಿಬ್ಬರೂ ಒಮ್ಮೆ ಬಂದು ಹೋಗಿರಿ ಎಂದು ವಿನಂತಿಸಿಕೊಂಡರು. ಅದೇ ಪ್ರಕಾರ ಮುಕುಂದ ದಂಪತಿಗಳು ನೇಹಾಳ ಮನೆಗೆ ಬಂದು ಎರಡು ಗಂಟೆಗಳ ಕಾಲ ಇವರ ಮನೆಯಲ್ಲಿದ್ದು ಆತ್ಮೀಯತೆಯಿಂದ ಮಾತನಾಡಿ ಹೋದರು. ಎಲ್ಲರಿಗೂ ಬಹಳ ಸಂತೋಷವಾಯಿತು. ಮತ್ತೊಮ್ಮೆ ನೇಹಾ ತನ್ನ ತಂದೆಯವರನ್ನು ತನ್ನ ಮಗಳನ್ನು ಮುಕುಂದರವರ ಮನೆಗೆ ಕರೆದೊಯ್ದು ಅವರ ಮನೆಯಲ್ಲಿ ಇಡೀ ಭಾನುವಾರ ಪೂರ್ತಿ ಕಾಲ ಕಳೆದು ಊಟ ಮಾಡಿ ಬಂದಳು.

ಒಮ್ಮೆ ಪ್ರಿಯಂವದಾ ಮತ್ತು ಅವಳ ಪತಿ ವಿಶಾಲ್‌ಗೌರ್‌ ಬೆಂಗಳೂರಿಗೆ ಬಂದು ತಂದೆಯವರನ್ನು ನೋಡಿ, ಅವರ ಕಷ್ಟ ಸುಖ, ವಿಚಾರಿಸಿದರು. ನೇಹಾಳಿಗೆ ಮತ್ತು ಅವಳ ಮಗಳಿಗೆ ಉಡುಗೊರೆಗಳನ್ನು ತಂದುಕೊಟ್ಟರು. ನೇಹಾ ತನ್ನ ಅಕ್ಕ ಭಾವರನ್ನು ಮುಕುಂದರವರ ಮನೆಗೆ ಕರೆದುಕೊಂಡು ಹೋಗಿ ಬಂದಳು. ಎಲ್ಲರಿಗೂ ಮುಕುಂದರವರ ಆತಿಥ್ಯ ಮತ್ತು ಸಹೃದಯತೆ ಬಹಳ ಮೆಚ್ಚುಗೆಯಾಯಿತು. ಎಲ್ಲರೂ ವಂದನೆಗಳನ್ನು ಹೇಳಿ ಹಿಂತಿರುಗಿದರು. ಎರಡು ದಿನಗಳ ಬಳಿಕ ಪ್ರಿಯಂವದಾ ದಂಪತಿಗಳು ಚಂಡೀಘರ್‌ಗೆ ಹಿಂತಿರುಗಿದರು ಮತ್ತು ಚತುರ್ವೇದಿಯವರು ಒಂಟಿತನದಿಂದ ಬಳಲತೊಡಗಿದರು. ಆಗಾಗ ಮುಕುಂದನಿಗೆ ಫೋನ್ ಮಾಡಿ ತನ್ನ ಅಳಲನ್ನು ತೋಡಿಕೊಂಡರು.

ಒಂದು ದಿನ ಮುಕುಂದ ಮತ್ತು ಸುಧಾರವರು ನೇಹಾಳ ಮನೆಗೆ ಹೋಗಿ ಮಾಮೂಲಿನಂತೆ ಒಂದು ಗಂಟೆ ಕಾಲ ಮಾತನಾಡಿ ಕೊನೆಗೆ ಒಂದು ಪ್ರಸ್ತಾಪನೆಯನ್ನಿಟ್ಟರು. “ನೀವು ಒಪ್ಪುವುದಾದರೆ ನಾವು ಚಾಚಾಜಿಯವರನ್ನು ಕೆಲವು ದಿನಗಳ ಮಟ್ಟಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿ ನೋಡಿಕೊಳ್ಳುತ್ತೇವೆ” ನೇಹಾಗೆ ಬಹಳ ಸಂಕೋಚವಾಯಿತು. ನಾವ್ಯಾರೋ, ಇವರ್ಯಾರೋ, ಇವರೇಕೆ ತನ್ನ ತಂದೆಯವರನ್ನು ನೋಡಿಕೊಳ್ಳಬೇಕು? ಆ ವಿಷಯ ಚತುರ್ವೇದಿಯವರ ಹತ್ತಿರ ಹೇಳಿದಾಗ ಅವರು ಬಹಳ ಸಂತೋಷದಿಂದ ಆಗಲಿ ಈಗಲೇ ಬರುತ್ತೇನೆ ಎಂದು ಹೊರಟು ನಿಂತರು. ನೇಹಾ ಒಲ್ಲದ ಮನಸ್ಸಿನಿಂದಲೇ ತಂದೆಯವರನ್ನು ಮುಕುಂದರವರ ಮನೆಗೆ ಕಳಿಸಿಕೊಟ್ಟಳು.

ಚತುರ್ವೇದಿಯವರು ಎರಡು ದಿನಗಳಲ್ಲಿ ಮುಕುಂದರ ಮನೆಗೆ ಚೆನ್ನಾಗಿ ಹೊಂದಿಕೊಂಡರು. ಮುಕುಂದರ ಮಗ ಸುದರ್ಶನನ ಜೊತೆ ಒಳ್ಳೆಯ ಆತ್ಮೀಯತೆ ಬೆಳೆಸಿಕೊಂಡರು. ಮನೆಮಂದಿಯೆಲ್ಲಾ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು. ಸುಧಾ ಚಾಚಾಜಿ ಚಾಚಾಜಿ ಎಂದು ಅವರನ್ನು ಬಹಳ ಪ್ರೀತಿಯಿಂದ ಕರೆಯುತ್ತಿದ್ದಳು. ಮಧ್ಯಾಹ್ನದ ವೇಳೆಯಲ್ಲಿ ಅವರಿಗೆ ಕನ್ನಡ ಮತ್ತು ತಮಿಳು ಕಲಿಸತೊಡಗಿದಳು. ಒಮ್ಮೆ ಚಾಮರಾಜಪೇಟೆಯಲ್ಲಿರುವ ತನ್ನ ತಂದೆಯ ಮನೆಗೆ ಕರೆದುಕೊಂಡು ಹೋಗಿ, ತನ್ನ ಅಲಮೇಲಮ್ಮ ಅಣ್ಣ, ಅತ್ತಿಗೆ ಎಲ್ಲರಿಗೂ ಪರಿಚಯ ಮಾಡಿಸಿದಳು. ತಂದೆ ನಾರಾಯಣ ಅಯ್ಯಂಗಾರ್, ತಾಯಿ ಎಲ್ಲರೂ ಚಾಚಾಜಿಯವರನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಹೀಗೆಯೇ ಸಂತೋಷವಾಗಿ ಚಾಚಾಜಿಯವರು ಹನ್ನೆರಡು ದಿನಗಳ ಕಾಲ ಇವರ ಮನೆಯಲ್ಲಿದ್ದು ನೇಹಾಳ ಮನೆಗೆ ಹಿಂತಿರುಗಿದರು. ಕೆಲವು ದಿನಗಳ ಬಳಿಕ ಮುಕುಂದ, ತನ್ನ ತವರು ತಲಕಾಡಿನಲ್ಲಿ ಕೀರ್ತಿನಾರಾಯಣ ಸ್ವಾಮಿಯ ರಥೋತ್ಸವಕ್ಕೆ ಹೊರಟರು. ಆಗ ತಮ್ಮ ಜೊತೆ ಕಾರಿನಲ್ಲಿ ಚಾಚಾಜಿಯವರನ್ನು, ನೇಹಾಳನ್ನು, ಅವಳ ಮಗಳು ಆಶ್ರಿತಾಳನ್ನೂ ಕರೆದುಕೊಂಡು ತಲಕಾಡಿಗೆ ಹೋದರು. ತಲಕಾಡಿನಲ್ಲಿ ಮುಕುಂದನ ತಂದೆ, ತಾಯಿ, ಅಣ್ಣ, ಅತ್ತಿಗೆ, ತಮ್ಮ, ತಂಗಿ, ಚಿಕ್ಕಪ್ಪಂದಿರು, ಅತ್ತೆಯರು, ನೂರಾರು ಬಳಗದವರು, ಗೆಳೆಯರು ಎಲ್ಲರೂ ಇದ್ದರು. ಮುಕುಂದ ದಂಪತಿಗಳು ಚತುರ್ವೇದಿಯವರನ್ನು, ನೇಹಾಳನ್ನು, ಆಶ್ರಿತಾಳನ್ನು ತಮ್ಮ ಸಮಸ್ತ ಬಂಧುಗಳಿಗೆ ಪರಿಚಯಿಸಿದರು. ನೇಹಾ ತನ್ನ ಎಂದಿನ ಜೀನ್ಸ್ ಪ್ಯಾಂಟ್, ಟೀಶರ್ಟ್ ಉಡುಪು ತೊರೆದು, ಈ ದಿನ ದಕ್ಷಿಣ ಭಾರತದ ಸ್ತ್ರೀಯರಂತೆ ರೇಷ್ಮೆ ಸೀರೆ ಧರಿಸಿ, ಹೂಮುಡಿದು ಹಳ್ಳಿಯ ಹುಡುಗಿಯರ ಜೊತೆ ತಿರುಗಾಡಿ ಸಂಭ್ರಮಿಸಿದಳು. ನಿತಿನ್ ಆಶ್ರಿತಾಳನ್ನು ಕರೆದುಕೊಂಡು ಊರೆಲ್ಲಾ ಸುತ್ತಾಡಿಸಿ, ತನ್ನ ಸ್ನೇಹಿತರನ್ನೆಲ್ಲಾ ಪರಿಚಯಿಸಿ ಅವಳಿಗೆ ಬಗೆ ಬಗೆಯ ತಿಂಡಿ ತಿನಿಸು, ಆಟಿಕೆಗಳು, ಬಳೆ, ಟೇಪು ಎಲ್ಲಾ ಕೊಡಿಸಿದ. ಎಲ್ಲರೂ ಆನಂದದಲ್ಲಿ ತೇಲಾಡಿದರು. ರಥೋತ್ಸವ ಮುಗಿಸಿ ಆ ಸಂಜೆಯೇ ಬೆಂಗಳೂರಿಗೆ ಹಿಂತಿರುಗಿದರು. ಚತುರ್ವೇದಿ ಚಾಚಾಜಿಯವರಿಗೆ, ನೇಹಾಳಿಗೆ ಮತ್ತು ಆಶ್ರಿತಳಿಗೆ ತಮಗಾದ ಮಧುರ ಅನುಭವಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಕೆಲವು ವಾರಗಳೇ ಹಿಡಿದವು. ಇದಾದ ಎರಡು ತಿಂಗಳ ನಂತರ ನೇಹಾಳ ಪತಿ ಸಂಜಯ್ ಇಂಗ್ಲೆಂಡಿನಿಂದ ಬಂದರು. ಆಗಲೂ ಇವರೆಲ್ಲರೂ ಮುಕುಂದರವರ ಜೊತೆ ತಲಕಾಡಿಗೆ ಹೋಗಿ ಬಂದರು. ಈ ಸಲ ಚಾಚಾಜಿಯವರು ಮುಕುಂದರ ತಂದೆ ಕೃಷ್ಣ ಅಯ್ಯಂಗಾರ್‌ರವರ ಜೊತೆಗೆ ಅವರ ತೋಟ, ಗದ್ದೆ, ಶಾಲೆ, ಆಸ್ಪತ್ರೆ, ಎಲ್ಲಾ ನೋಡಿ ಬಂದರು. ಮನೆಗೆ ಬಂದ ಮೇಲೆ ಅವರ ಹತ್ತಿರ ಹೇಳಿದರು. ನನಗೂ ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ಇಂತಹುದೇ ಬಂಗಲೆಯಂತಹ ಮನೆ ಇದೆ. ಸಹದೇವಪುರದಲ್ಲಿ ಗಂಗಾನದಿ ತೀರದಲ್ಲಿ ಐದು ಎಕರೆ ಜಮೀನಿದೆ. ಯಾರೋ ಗ್ರಾಮಸ್ಥರು ನೋಡಿಕೊಳ್ಳುತ್ತಿದ್ದಾರೆ. ನನ್ನ ಮಕ್ಕಳಿಗೆ ಈ ಆಸ್ತಿ ವಿಷಯದಲ್ಲಿ ಏನೂ ಉತ್ಸಾಹವಿಲ್ಲ ಎಂದು ನೊಂದು ನುಡಿದರು. ಎಲ್ಲರೂ ಆ ರಾತ್ರಿ ತಲಕಾಡಿನಲ್ಲಿಯೇ ಉಳಿದರು. ಮರುದಿನ ತಲಕಾಡಿನ ಕಾವೇರಿ, ಕೀರ್ತಿನಾರಾಯಣ ಸ್ವಾಮಿ ದೇವಸ್ಥಾನ, ಪಂಚಲಿಂಗಗಳ ಈಶ್ವರ ದೇವಾಲಯಗಳು, ತಲಕಾಡಿನ ಪ್ರಸಿದ್ಧ ಮರಳುಗುಡ್ಡ ಎಲ್ಲಾ ನೋಡಿ ಬಂದರು.

ಬೆಂಗಳೂರಿಗೆ ಹಿಂತಿರುಗಿದ ಮೇಲೆ ಅವರವರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾದರು. ಕೆಲವು ದಿನಗಳ ಬಳಿಕ ಚಾಚಾಜಿಯವರು ದೆಹಲಿಗೆ ಹಿಂತಿರುಗಿದರು. ಆಗಾಗ ಮುಕುಂದ ದಂಪತಿಗಳಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ನೇಹಾ ಕೂಡಾ ಮುಕುಂದ ಮತ್ತು ಸುಧಾರೊಂದಿಗೆ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದಳು.

ಇವೆಲ್ಲಾ ನಡೆದು ಎರಡು ವರ್ಷಗಳೇ ಕಳೆದು ಹೋದವು. ಒಂದು ದಿನ ನೇಹಾ ಮುಕುಂದನಿಗೆ ಫೋನ್ ಮಾಡಿ ಜೋರಾಗಿ ಅಳುತ್ತಾ ತನ್ನ ತಂದೆಯವರು ತೀರಿ ಹೋದ ವಿಷಯ ತಿಳಿಸಿದಳು. ಇವರಿಗೂ ಗಾಬರಿಯಾಯಿತು. “ಅರೆ ಇದೇನಾಯಿತು! ಇತ್ತೀಚೆಗೆ ಅವರು ಚೆನ್ನಾಗಿಯೇ ಇದ್ದರಲ್ಲಾ? ಇದ್ದಕ್ಕಿದ್ದಂತೆ ಇದೇನು ಸಿಡಿಲಿನಂತಹ ಸುದ್ದಿ! ಯಾವಾಗ ತೀರಿ ಹೋದರು? ಅವರಿಗೆ ಏನಾಗಿತ್ತು?” ಎಂದು ಕೇಳಿದರು. ನೇಹಾ ಅಳುತ್ತಲೇ ಉತ್ತರಿಸಿದಳು. “ಅವರು ಇತ್ತೀಚೆಗೆ ಆರೋಗ್ಯವಾಗಿಯೇ ಇದ್ದರು. ಒಮ್ಮೆ ಅಕ್ಕನ ಮನೆಗೂ, ಒಮ್ಮೆ ಸಹದೇವಪುರಕ್ಕೂ ಹೋಗಿ ಬಂದಿದ್ದರು. ಬಂದು ಎರಡು ದಿನಗಳಾಗಿತ್ತು. ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲ. ನಿದ್ರೆಯಲ್ಲಿಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೂರು ದಿನಗಳಾಯಿತು. ನಾನು ಮತ್ತು ಸಂಜಯ್ ದೆಹಲಿಗೆ ಹೋಗಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಬಂದೆವು. ನಾನೂ, ಕಿಶೋರ್, ಅಕ್ಕ ಎಲ್ಲರೂ ನಿಮ್ಮನ್ನ ತುಂಬಾ ನೆನೆಸಿಕೊಂಡೆವು.”

ಮುಕುಂದ ದಂಪತಿಗಳಿಗೂ ಈ ಸುದ್ದಿ ಕೇಳಿ ಬಹಳ ದುಃಖವಾಯಿತು. ನಾಲ್ಕಾರು ದಿನ ಅದೇ ಮಾತನಾಡುತ್ತಾ ಇದ್ದರು. ಚತುರ್ವೇದಿಯವರು ಇವರ ಮನೆಗೆ ಬಂದದ್ದು ಕನ್ನಡದಲ್ಲಿ ಮಾತನಾಡುವುದನ್ನು ಕಲಿತದ್ದು ತಮ್ಮ ಜೊತೆ ತಲಕಾಡಿಗೆ ಬಂದದ್ದು ಎಲ್ಲಾ ಜ್ಞಾಪಿಸಿಕೊಂಡರು. ನೇಹಾ ಮೊದಲೇ ತಿಳಿಸಿದ್ದರೆ ದೆಹಲಿಗೆ ಹೋಗಿ ಅವರ ದೇಹದ ಅಂತಿಮದರ್ಶನವನ್ನಾದರೂ ಮಾಡಿಬರಬಹುದಿತ್ತು ಎಂದುಕೊಂಡರು. ಹೀಗೆಯೇ ಆಗಾಗ ಆ ವಿಷಯ ಮಾತನಾಡಿಕೊಂಡು, ನಿಧಾನವಾಗಿ ಮರೆತರು. ಚತುರ್ವೇದಿಯವರು ತೀರಿಹೋಗಿ ಎರಡು ತಿಂಗಳೇ ಕಳೆದುಹೋದವು. ಹೀಗಿರುವಾಗ ಒಂದು ದಿನ ಮುಕುಂದ್ ವಿಳಾಸಕ್ಕೆ ಅಲಹಾಬಾದಿನಿಂದ ರಿಜಿಸ್ಟರ್ಡ್ ಅಂಚೆಯಲ್ಲಿ ಒಂದು ಲಕೋಟೆ ಬಂದಿತು. ರಾತ್ರಿ ಮುಕುಂದ ಮನೆಗೆ ಬಂದ ಕೂಡಲೇ ಮುಕುಂದನಿಗೆ ಆ ಲಕೋಟೆಯಲ್ಲಿದ್ದ ಪತ್ರವನ್ನು ಕಂಡು ಆಶ್ಚರ್ಯವೂ, ಗಾಬರಿಯೂ, ಸಂತೋಷವೂ, ಚಿಂತೆಯೂ ಆರಂಭವಾಯಿತು. ಸುಧಾಳನ್ನು ಕೂಡಿಸಿಕೊಂಡು ಈ ಪತ್ರದ ವಿಷಯ ತಿಳಿಸಿದರು. ಅಲಹಾಬಾದಿನಿಂದ ದಿನಕರ್‌ ಕುಮಾರ್ ಶರ್ಮ ಎಂಬ ವಕೀಲರು ಒಂದು ಪತ್ರ ಬರೆದು ಅದರ ಜೊತೆಗೆ ಒಂದು
ಉಯಿಲನ್ನು ಲಗತ್ತಿಸಿ ಕಳಿಸಿದ್ದರು. ಆ ಉಯಿಲಿನ ಪ್ರಕಾರ ದಿವಂಗತರಾದ ಶ್ರೀಯುತ ದಶರಥನಂದನ ಚತುರ್ವೇದಿಯವರು ತಮ್ಮ ಜಮೀನು, ಮನೆ, ಬ್ಯಾಂಕಿನಲ್ಲಿರುವ ಹಣ ಎಲ್ಲಾ ಸ್ಥಿರಾಸ್ತಿ, ಚರಾಸ್ತಿ ಎಲ್ಲವನ್ನೂ ಮುಕುಂದನ ಹೆಸರಿಗೆ ಉಯಿಲು ಮಾಡಿಟ್ಟು ಕಣ್ಮುಚ್ಚಿದ್ದರು. ಅದನ್ನು ಕೇಳಿ ಸುಧಾಳಿಗಂತೂ ಕುಣಿದಾಡುವಷ್ಟು ಸಂತೋಷವಾಯಿತು.

ಗಂಗಾನದಿ ತೀರದಲ್ಲಿರುವ ಐದು ಎಕರೆ ತೋಟ, ಅಲಹಾಬಾದಿನಲ್ಲಿರುವ ಬಹುಕೋಟಿ ಬೆಲೆಬಾಳುವ ಮನೆ, ಬ್ಯಾಂಕಿನಲ್ಲಿರುವ ಕೋಟ್ಯಾಂತರ ರೂಪಾಯಿ ಹಣ! ಹೇ ಕರುಣಾಮಯಿ ಭಗವಂತ ನಾವು ಮಾಡಿದ ಸಣ್ಣ ಸೇವೆಗೆ ಇಷ್ಟು ದೊಡ್ಡ ಫಲವನ್ನು ಕರುಣಿಸಿದೆಯಾ ತಂದೆ! ನಿನಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ದೇವರಿಗೆ ಕೈ ಮುಗಿದಳು.

ಆದರೆ ಮುಕುಂದನಿಗೆ ಮಾತ್ರ ಅಷ್ಟೇನೂ ಸಂತೋಷವಾಗಲಿಲ್ಲ. “ತುಂಬಾ ಸಂತೋಷಪಡಬೇಡ. ಚಾಚಾಜಿಯವರಿಗೆ ಮಗ, ಮಗಳು, ಮೊಮ್ಮಗಳು, ದಾಯಾದಿಗಳು ಎಲ್ಲರೂ ಇದ್ದಾರೆ. ಈ ಆಸ್ತಿ ಎಲ್ಲಾ ಪಿತ್ರಾರ್ಜಿತವೋ, ಸ್ವಯಾರ್ಜಿತವೋ ಗೊತ್ತಿಲ್ಲ. ನಿಧಾನವಾಗಿ ನೋಡೋಣ. ನರಸಿಂಹ ಅಣ್ಣನ ಹತ್ತಿರ ಚರ್ಚೆ ಮಾಡ್ತೀನಿ, ಅಲ್ಲಿಯವರೆಗೆ ಸುಮ್ಮನಿರು” ಎಂದು ನಿಟ್ಟುಸಿರುಬಿಟ್ಟನು.

ಮುಕುಂದನ ಅಣ್ಣ ನರಸಿಂಹನ್ ವಕೀಲರು, ಮೈಸೂರಿನಲ್ಲಿ ತಮ್ಮ ಇಬ್ಬರು ವಕೀಲ ಮಿತ್ರರ ಜೊತೆಗೂಡಿ ವಕೀಲಿ ಕೆಲಸ ಮಾಡುತ್ತಿದ್ದರು. ಮುಕುಂದ್ ಅಣ್ಣನಿಗೆ ಫೋನ್ ಮಾಡಿ ಒಂದು ಮುಖ್ಯವಾದ ವಿಷಯ ಮಾತನಾಡಬೇಕು ನೀನು ಬಿಡುವಾಗಿದ್ದರೆ ಬೆಂಗಳೂರಿಗೆ ಬಾ. ಇಲ್ಲದಿದ್ದರೆ ನಾನೇ ಒಂದು ದಿನ ಮೈಸೂರಿಗೆ ಬಂದು ಈ ವಿಷಯ ಮಾತನಾಡುತ್ತೇನೆಂದು ತಿಳಿಸಿದ.

ಅದೇ ದಿನ ಮುಕುಂದ ಅಲಹಾಬಾದಿನ ವಕೀಲ ದಿನಕರ ಕುಮಾರ್ ಶರ್ಮರವರಿಗೆ ದೂರವಾಣಿ ಕರೆ ಮಾಡಿ, ನೀವು ಕಳಿಸಿದ ಉಯಿಲು ಮತ್ತು ನಿಮ್ಮ ಪತ್ರ ಬಂದು ತಲುಪಿತು. ಅದರ ಬಗ್ಗೆ ನನ್ನ ಅಣ್ಣನ ಬಳಿ ಚರ್ಚೆ ಮಾಡಿ ಮುಂದಿನ ವಿಷಯ ಮಾತನಾಡುತ್ತೇನೆ. ನಿಮಗೆ ತುಂಬಾ ವಂದನೆಗಳು ಎಂದು ತಿಳಿಸಿದ. ಅಂದಿನಿಂದ ಮುಕುಂದನ ನಿದ್ರೆ ಹಾರಿ ಹೋಯಿತು. ಅಣ್ಣ ನರಸಿಂಹನ್ ಏನು ಹೇಳುತ್ತಾರೆ ಎಂದು ಕಾದು ಕುಳಿತ.

ಒಂದು ವಾರವಾದರೂ ಅಣ್ಣ ಬರಲಿಲ್ಲ. ನಿಮ್ಮಣ್ಣನಿಗೆ ನಿಮ್ಮ ಮೇಲೆ ಅಸೂಯೆಯಾಗಿರಬೇಕು, ಅದಕ್ಕೆ ಅವರು ಬರಲೂ ಇಲ್ಲ, ಫೋನೂ ಮಾಡಲಿಲ್ಲ. ಎಂದು ಸುಧಾ ಮೂದಲಿಸಿದಳು. ಮುಕುಂದ ಅವಳನ್ನು ಸಮಾಧಾನ ಪಡಿಸಿ ಅಣ್ಣನಿಗೆ ಫೋನ್ ಮಾಡಿ, ಆ ಉಯಿಲನ್ನು ತೆಗೆದುಕೊಂಡು ತಾನೇ ಮೈಸೂರಿಗೆ ಹೋದ. ನರಸಿಂಹ ಮತ್ತು ಅವನ ಗೆಳೆಯರು ಆ ಉಯಿಲನ್ನು ನೋಡಿದರು. ಇದರಲ್ಲಿ ಒಂದು ವಿಷಯ ಸರಿಯಾಗಿ ಸ್ಪಷ್ಟಪಡಿಸಿಲ್ಲ. ಈ ಆಸ್ತಿಯೆಲ್ಲಾ ಪಿತ್ರಾರ್ಜಿತವೊ ಅಥವಾ ಸ್ವಯಾರ್ಜಿತವೋ ಎಂಬುದು ಸ್ಪಷ್ಟವಾಗಿಲ್ಲ. ಸ್ವಯಾರ್ಜಿತವಾದರೆ ಏನೂ ತೊಂದರೆಯಿಲ್ಲ. ಅವರು ಯಾರ ಹೆಸರಿಗೆ ಬೇಕಾದರೂ ಉಯಿಲು ಬರೆಯಬಹುದು. ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಆಗ ಅದು ಅವರ ವಾರಸುದಾರರಿಗೆ ಹೋಗುತ್ತದೆ. ನಾವು ಡಿ.ಕೆ. ಶರ್ಮರವರ ಹತ್ತಿರ ಮಾತನಾಡುತ್ತೇವೆ ಎಂದರು.

ಹತ್ತಾರು ಸಲ ಪ್ರಯತ್ನಿಸಿದರೂ ಅವರು ಸಿಗಲಿಲ್ಲ. ರಾತ್ರಿ ಫೋನ್ ಮಾಡೋಣ ಎಂದು ಹೇಳಿದರು. ಮುಕುಂದ ಆ ಉಯಿಲಿನ ಒಂದು ಜೆರಾಕ್ಸ್ ಪ್ರತಿಯನ್ನು ಅಣ್ಣನ ಬಳಿ ಕೊಟ್ಟು ಬೆಂಗಳೂರಿಗೆ ಹಿಂತಿರುಗಿದ, ರಾತ್ರಿ ಡಿ.ಕೆ. ಶರ್ಮರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ. ಅವರು ಅದೆಲ್ಲ ಚತುರ್ವೇದಿಯವರ ಸ್ವಯಾರ್ಜಿತವೆಂದೇ ಕಾಣುತ್ತದೆ. ಯಾವುದಕ್ಕೂ ನಾನು ಡಾಕ್ಯುಮೆಂಟ್ಸ್ ಕಾಪಿಗಳಿಗೆ ಅರ್ಜಿ ನೀಡಿದ್ದೇನೆ, ಡಾಕ್ಯುಮೆಂಟ್ಸ್ ಬಂದಮೇಲೆ ನೋಡೋಣ ಎಂದರು.

ಮುಕುಂದ ನೇಹಾಳಿಗೆ ಮತ್ತು ಕಿಶೋರನಿಗೆ ಫೋನ್ ಮಾಡಿದ. ಇವನ ನಂಬರ್ ಗುರುತಿಸಿದ ಅವರು ಇವನ ಕರೆಗಳನ್ನು ಸ್ವೀಕರಿಸಲಿಲ್ಲ. ಒಂದು ದಿನ ಮುಕುಂದ ಮತ್ತು ಸುಧಾ ನೇಹಾಳ ಮನೆಗೆ ಹೋದರು. ಇವರನ್ನು ನೋಡಿದವಳೇ ಮುಖ ಗಂಟಿಕ್ಕಿಕೊಂಡು “ಏನು?” ಎಂದು ಒಳಗಿನಿಂದಲೇ ಕೇಳಿದಳು. ಮುಕುಂದನಿಗೆ ಎಲ್ಲಾ ಅರ್ಥವಾಯಿತು. ಚತುರ್ವೇದಿಯವರು ಉಯಿಲು ಬರೆದು ತಮ್ಮ ಆಸ್ತಿಯನ್ನು ಮುಕುಂದನ ಹೆಸರಿಗೆ ಬರೆದಿರುವ ವಿಷಯ ಇವಳಿಗೆ ತಿಳಿದಿದೆ. ಆದ್ದರಿಂದ ಈ ರೀತಿ ವರ್ತಿಸುತ್ತಿದ್ದಾಳೆ ಎಂದುಕೊಂಡರು. “ಹೇಗಿದ್ದೀರ? ನಿಮ್ಮ ಮಗಳು ಹೇಗಿದ್ದಾಳೆ? ನಿಮ್ಮ ಯಜಮಾನರು ಹೇಗಿದ್ದಾರೆ?” ಎಂದು ಕೇಳಿದ. ಅದಕ್ಕೆ ನೇಹಾ “ಎಲ್ಲರೂ ಬದುಕಿದ್ದೇವೆ” ಎಂದು ಹೇಳಿ ಒಳಗೆ ಹೋದಳು. ಹತ್ತು ನಿಮಿಷಗಳಾದರೂ ಬರಲಿಲ್ಲ. ಇವರಿಗೆ ಬೇಸರವಾಯಿತು. ಸರಿ ಹೊರಡೋಣ ಎಂದು ಎದ್ದು “ನಾವಿನ್ನು ಹೊರಡುತ್ತೇವೆ” ಎಂದರು, ಒಳಗಿನಿಂದಲೇ ನೇಹಾ ಓ.ಕೇ ಎಂದಳು. ಇವಳ ನಡವಳಿಕೆಯಿಂದ ಮುಕುಂದ್ ದಂಪತಿಗಳಿಗೆ ಬಹಳ ದುಃಖವಾಯಿತು.

ಒಂದು ತಿಂಗಳ ಬಳಿಕ ಮುಕುಂದ ಮತ್ತು ನರಸಿಂಹ ಅಲಹಾಬಾದಿಗೆ ಹೋದರು. ವಕೀಲ ಶರ್ಮರವರನ್ನು ಭೇಟಿ ಮಾಡಿ ಚತುರ್ವೇದಿಯವರ ಉಯಿಲಿನ ಬಗ್ಗೆ ವಿಚಾರಿಸಿದರು. ಮರುದಿನ ಮುನಿಸಿಪಲ್ ಆಫೀಸಿಗೆ ಹಾಗೂ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಿದರು. ಮರುದಿನ ಸಹದೇವಪುರಕ್ಕೆ ಹೋಗಿ ಅಲ್ಲಿನ ಗ್ರಾಮ ಪಂಚಾಯಿತಿ ಕಛೇರಿಗೆ ಹೋಗಿ ಪರಿಶೀಲಿಸಿದರು. ಎಲ್ಲವೂ ಚತುರ್ವೇದಿಯವರ ಹೆಸರಿನಲ್ಲಿಯೇ ಇದ್ದವು. ಒಂದು ಎಕರೆ ಜಮೀನು ಮಾತ್ರ ಅವರಿಗೆ ಪಿತ್ರಾರ್ಜಿತವಾಗಿ ಬಂದದ್ದು. ಮಿಕ್ಕ ಜಮೀನನ್ನು ಚತುರ್ವೇದಿಯವರು ಹಣ ಕೊಟ್ಟು ಕೊಂಡುಕೊಂಡಿದ್ದರು. ತಮ್ಮ ಜಾಗದ ಜಮೀನಿನ ಪಕ್ಕದ ಜಮೀನನ್ನು ಅವರ ಅಣ್ಣನಿಂದಲೇ ಹಣ ಕೊಟ್ಟು ಕೊಂಡುಕೊಂಡಿದ್ದರು. ಎಲ್ಲಾ ಜಮೀನಿನ ಖಾತೆ ಇವರ ಹೆಸರಿಗೆ ಆಗಿತ್ತು. ವರ್ಷ ವರ್ಷ ತಪ್ಪದೇ ಕಂದಾಯ ಕಟ್ಟಿದ್ದರು. ಇವರುಗಳು ಬಂದಿರುವ ವಿಷಯ ತಿಳಿದ, ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದ ರೈತ ಮತ್ತು ಅವನ ನಾಲ್ಕು ಗೆಳೆಯರು ಬಂದು ಮುಕುಂದ ಮತ್ತು ನರಸಿಂಹರ ಮೇಲೆ ಕೂಗಾಡಿದರು. ಲಾಗಾಯ್ತಿನಿಂದ ನಾವೇ ಈ ಜಮೀನಿನ ಪರಭಾರೆ ಮಾಡಿಕೊಂಡು ಬರುತ್ತಿದ್ದೇವೆ. ಉಳುವವನಿಗೇ ಭೂಮಿ ಎಂಬ ಕಾನೂನೇ ಇದೆ. ನಮ್ಮ ನೆಲ ಕೇಳುವುದಕ್ಕೆ ನೀವ್ಯಾರು? ಚತುರ್ವೇದಿ ಯಜಮಾನರ ಮಗ ಬಂದು ಕೇಳಲಿ ನೋಡೋಣ. ಈ ಜಮೀನಿಗೂ, ನಿಮಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಹೊರಟು ಹೋಗಿ, ಇಲ್ಲವೆಂದರೆ ಪರಿಣಾಮ ನೆಟ್ಟಗಾಗುವುದಿಲ್ಲ ಎಂದೆಲ್ಲ ಹೆದರಿಸಿದರು. ವಕೀಲ ಶರ್ಮರವರು ಉಯಿಲಿನ ಬಗ್ಗೆ ತಿಳಿಸಿ ಕಾನೂನಿನ ಪ್ರಕಾರ ಈ ಆಸ್ತಿಗೆಲ್ಲಾ ಇನ್ನು ಮುಂದೆ ಇವರೇ ಒಡೆಯರು, ನಾವೂ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು. ಅದಕ್ಕೆ ಒಬ್ಬ ಗ್ರಾಮಸ್ಥ ಜೋರಾಗಿ ನಕ್ಕು ತೊಡೆ ತಟ್ಟಿ ಹೇಳಿದ. “ಇಲ್ಲಿ ನಮ್ಮದೇ ಕಾನೂನು ನಾವೇ ಸರ್ಕಾರ. ನೀವು ಅದೇನು ಮಾಡ್ಕೊತೀರೋ ಮಾಡ್ಕೊಳಿ” ಎಂದು ಹೇಳಿ ಮುನ್ನಡೆದ.

ಶರ್ಮರವರು ಮುಕುಂದನಿಗೆ ಧೈರ್ಯ ಹೇಳಿ ನಾನು ಉಯಿಲಿನ ಪ್ರತಿಯನ್ನೂ, ಖಾತೆ ಬದಲಾವಣೆಯ ಅರ್ಜಿಯನ್ನು ಪಂಚಾಯಿತಿ ಆಫೀಸಿಗೆ ಕೊಟ್ಟು ನಿಮ್ಮ ಹೆಸರಿಗೆ ಖಾತೆ ಮಾಡಿಸಿಕೊಡುತ್ತೇನೆ. ಮುಂದೆ, ಪೊಲೀಸರ ಸಹಾಯದಿಂದ ಜಮೀನನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡೋಣ. ಇನ್ನು ಅಲಹಾಬಾದಿಗೆ ಹೊರಡೋಣ ನಡೆಯಿರಿ ಎಂದರು.

ಅಲಹಾಬಾದಿನ ಮನೆಯನ್ನು ಐವತ್ತು ವರ್ಷಗಳ ಹಿಂದೆಯೇ ಚತುರ್ವೇದಿಯವರು ಕೇವಲ ಹತ್ತು ಸಾವಿರ ರೂಪಾಯಿಗಳಿಗೆ ಕೊಂಡಿದ್ದರು. ನಂತರ ಹಂತ ಹಂತವಾಗಿ ಕಟ್ಟಿಸಿದ್ದರು. ಅದರ ದಾಖಲೆಗಳೂ ಏನೂ ಇರಲಿಲ್ಲ. ಆದರೆ ವರ್ಷ ವರ್ಷ ಕಂದಾಯವನ್ನು ಮಾತ್ರ ತಪ್ಪದೆ ಕಟ್ಟಿದ್ದರು. ಸಬ್‌ರಿಜಿಸ್ಟ್ರಾರ್‌ ಕಛೇರಿಯಲ್ಲಿ ಮತ್ತು ತಾಲ್ಲೂಕು ಕಛೇರಿಯಲ್ಲಿ ಈ ಆಸ್ತಿಯ ದಾಖಲೆಗಳ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಬಂದರು. ಆ ಮನೆಗೆ ಹೋದಾಗ ಅಲ್ಲಿದ್ದ ಒಬ್ಬ ಸಣ್ಣ ವ್ಯಾಪಾರಿ ಕುಟುಂಬದವರು, ಈ ಮನೆ ನಮ್ಮದೇ ನಾವೇನೂ ಬಾಡಿಗೆದಾರರಲ್ಲ. ಚತುರ್ವೇದಿಯವರು ಹನ್ನೆರಡು ವರ್ಷಗಳ ಹಿಂದೆಯೇ ಈ ಮನೆಯನ್ನು ನಮಗೆ ಕೊಟ್ಟಿರುತ್ತಾರೆ. ಈ ಮನೆಯ ಒಡೆತನ ಕೇಳಲು ನೀವು ಯಾರು? ನಿಮಗೂ ಇದಕ್ಕೂ ಏನು ಸಂಬಂಧ ಎಂದೆಲ್ಲಾ ಕಿರುಚಾಡಿದರು.

ಶರ್ಮಾರವರು ಮುಕುಂದನಿಗೆ ಧೈರ್ಯ ಹೇಳಿದರು. ಇದೇನೂ ದೊಡ್ಡ ಸಮಸ್ಯೆಯಲ್ಲ, ಒಮ್ಮೆ ಖಾತೆ ನಿಮ್ಮ ಹೆಸರಿಗೆ ಬದಲಾವಣೆಯಾಗಲಿ, ನಂತರ ಮೂರೇ ದಿನಗಳಲ್ಲಿ ಪೊಲೀಸರ ಸಹಾಯದಿಂದ ಮನೆ ಖಾಲಿ ಮಾಡಿಸಿಕೊಡುತ್ತೇನೆ ಎಂದರು.

ಸರಿ ನಾವು ಇನ್ನು ಹೊರಡುತ್ತೇವೆ. ಮುಂದೇನು ಮಾಡಬೇಕು ಎಂದು ತಿಳಿಸಿ, ನಾವು ಮತ್ತೆ ಬರುತ್ತೇವೆ” ಎಂದು ಮುಕುಂದ ಹೇಳಿದ. ಈಗ ಶರ್ಮರವರು ಮೆಲ್ಲನೆ ನಗುತ್ತಾ ಬಾಯಿಬಿಟ್ಟರು.

“ನೋಡಿ ಗೆಳೆಯರೇ, ಇದು ಕೋಟ್ಯಾಂತರ ರೂಪಾಯಿಗಳು ಬೆಲೆ ಬಾಳುವ ಆಸ್ತಿಗಳ ವಿಚಾರ, ಚತುರ್ವೇದಿಯವರಿಗೆ ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು, ಎಲ್ಲರೂ ಇದ್ದಾರೆ. ಹೆಜ್ಜೆ ಹೆಜ್ಜೆಗೂ ವಿರೋಧಗಳು ಬರುತ್ತವೆ. ತುಂಬಾ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು. ಆದ್ದರಿಂದ ನನಗೆ ಸರಿಯಾದ ಫೀಸ್ ಕೊಡಬೇಕು. ಈಗ ಒಂದು ಲಕ್ಷರೂಪಾಯಿ ಕೊಟ್ಟು ಹೋಗಿ” ಎಂದರು.

ಮುಕುಂದ ಸಹೋದರರು ಹೌಹಾರಿದರು! ಅಯ್ಯೋ ದೇವರೇ! ಇದೇನು ಭೂತ ಸಮಸ್ಯೆ ಎದುರಾಯಿತು. ಇವೆಲ್ಲಾ ಆಸ್ತಿ ಕೈಗೆ ಬರುವುದೋ ಇಲ್ಲವೋ ತಿಳಿಯದು. ಇಷ್ಟರಲ್ಲಿ ಈ ವಕೀಲರು ಏನು ಲಕ್ಷರೂಪಾಯಿ ಕೇಳಿದಾರೆ! ಇನ್ನು ಆಸ್ತಿ ಎಲ್ಲಾ ಕೈಗೆ ಬಂದರೆ ಇನ್ನೆಷ್ಟು ಕೇಳುತ್ತಾರೋ ದೇವರೇ!

ವಕೀಲರೇ ಆದ ನರಸಿಂಹನ್ ಹೇಳಿದರು.

“ನೋಡಿ, ನಾನೂ ಕೂಡಾ ವಕೀಲನೇ, ಈ ಉಯಿಲಿನಲ್ಲಿರುವ ಆಸ್ತಿ ಇವನ ಕೈಗೆ ಸಿಗುವುದು ಎಷ್ಟು ಕಷ್ಟ ಎಂಬ ಅರಿವು ನನಗೂ ಇದೆ, ನಿಮಗೂ ಇದೆ. ಇನ್ನು ಈ ನನ್ನ ತಮ್ಮ ಸಾಧಾರಣ ಮಧ್ಯಮ ವರ್ಗದ ಪ್ರಜೆ, ಸಾಧಾರಣ ಸಂಬಳದಲ್ಲಿಯೇ ಉದ್ಯೋಗಿ. ಅವನೂ ಬಹಳ ಸಾಲ ಸೋಲ ಮಾಡಿ ಮನೆ ಕಟ್ಟಿಸಿದ್ದಾನೆ. ತಿಂಗಳು ತಿಂಗಳೂ, ಮನೆ ಸಾಲ, ಕಾರಿನ ಕಂತು, ಮಗನ ವಿದ್ಯಾಭ್ಯಾಸಕ್ಕೆ ಸಾಲ, ಸೊಸೈಟಿ ಸಾಲ ಎಲ್ಲ ಕಟ್ಟಿ ಅವನ ಸಂಬಳ ಅವನ ಸಂಸಾರಕ್ಕೇ ಸಾಲದು. ಈಗ ಇಲ್ಲಿಗೆ ಬರೋದಕ್ಕೆ ಸಾಲ ಮಾಡಿಕೊಂಡು ಬಂದಿದ್ದೀವಿ. ನೀವು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ಆಸ್ತಿಯಲ್ಲಿ ಎಷ್ಟು ಸಿಗುತ್ತದೋ, ಎಷ್ಟು ಹೋಗುತ್ತದೋ ತಿಳಿಯದು. ಇನ್ನು ಬರುವುದಾದರೆ ಯಾವಾಗ ಬರುತ್ತದೋ! ಆದ್ದರಿಂದ ಈಗ ಒಂದು ಹತ್ತು ಸಾವಿರ ತಗೊಳ್ಳಿ. ಆಸ್ತಿ ಕೈಗೆ ಬಂದಮೇಲೆ ಖಂಡಿತ ನಿಮ್ಮ ಫೀಸು ಕೊಡ್ತೀವಿ.” ಎಂದು ಕೈ ಮುಗಿದರು.

ಶರ್ಮಾರವರು ಇವರ ನಿಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, “ಸರಿ ಈಗ ಹತ್ತು ಸಾವಿರ ಕೊಡಿ, ಇನ್ನೊಂದು ವಾರದಲ್ಲಿ ದೆಹಲಿಗೆ ಹೋಗಿ ಬ್ಯಾಂಕುಗಳಲ್ಲಿ ಏನೇನು ಠೇವಣಿ ಮಾಡಿದ್ದಾರೆ ನೋಡಿ ಬೃತೀನಿ. ಉಯಿಲು ಇರುವುದರಿಂದ ಶೀಘ್ರವೇ ಸೆಟ್ಲ್ ಆಗುತ್ತದೆ. ಆ ಹಣ ಬಂದ ಮೇಲೆ ನನ್ನ ಫೀಸು ಕೊಡಬೇಕು ಸರೀನಾ?” ಎಂದು ಹತ್ತು ಸಾವಿರದ ಚೆಕ್ ತೆಗೆದುಕೊಂಡರು.

ಮುಕುಂದ ಮತ್ತು ನರಸಿಂಹನ್, ಈ ಸಮಸ್ಯೆಗಳು ಜಾಸ್ತಿ ಜಟಿಲವಾಗದೆ ಪರಿಹಾರವಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು. ನಂತರ ಮತ್ತೊಮ್ಮೆ ಬರುವುದಾಗಿ ಶರ್ಮರವರಿಗೆ ಹೇಳಿ ಬೆಂಗಳೂರಿನ ವಿಮಾನ ಹತ್ತಿದರು.

ಇವರು ಅಲಹಾಬಾದಿಗೆ ಹೋಗಿಬಂದು ಇಪ್ಪತ್ತು ದಿನಗಳೇ ಕಳೆದರೂ ಶರ್ಮರವರಿಂದ ಯಾವ ಸಮಾಚಾರವೂ ಬರಲಿಲ್ಲ. ಬಹುಶಃ ಖಾತೆ ವರ್ಗಾವಣೆ ಆಗಿರಬಹುದೆಂದು ಆಶಾಭಾವನೆಯಿಂದಿದ್ದರು. ಆದರೆ ಒಂದೆರಡು ದಿನಗಳಲ್ಲಿ ಸಿಡಿಲು, ಗುಡುಗು, ಮಿಂಚು ಬಂದಂತೆ ಬೇರೆ ಬೇರೆ ವಕೀಲರಿಂದ ಪತ್ರಗಳು ಬರಲಾರಂಭಿಸಿದವು. ದೆಹಲಿಯಿಂದ ಕಿಶೋರ, ಚಂಡೀಘಡದಿಂದ ಪ್ರಿಯಂವದಾ, ಅಲಹಾಬಾದಿನಿಂದ ಇಬ್ಬರು ರೈತರು ಮತ್ತು ಚತುರ್ವೇದಿಯವರ ಅಣ್ಣನ ಮಕ್ಕಳು ಇಬ್ಬರು ಎಲ್ಲರೂ ಲಾಯರ್‌ ನೋಟಿಸ್‌ ಕಳಿಸಿದರು. ಮುಕುಂದ ಗಾಬರಿಯಾಗಿ ಅವನ್ನೆಲ್ಲಾ ತೆಗೆದುಕೊಂಡು ಹೋಗಿ ಅಣ್ಣನಿಗೆ ತೋರಿಸಿದ. ಕೊನೆಗೆ ನೇಹಾ ಕೂಡಾ ಈ ಎಲ್ಲಾ ಆಸ್ತಿಗಳಲ್ಲಿ ತನಗೂ ಹಕ್ಕಿದೆ, ತನ್ನ ಪಾಲು ತನಗೆ ಸೇರಬೇಕೆಂದು ಲಾಯರ್ ನೋಟೀಸ್ ಕಳಿಸಿದಳು! ಇದನ್ನು ಕಂಡು ದುಃಖದಿಂದ “ಯೂ ಟೂ ಬ್ರೂಟಸ್” ಎಂದ. ಅದನ್ನು ಕೇಳಿದ ಸುಧಾ “ಏನ್ರೀ ಹೇಳ್ತಾ ಇದೀರ?” ಎಂದು ಕೇಳಿದಳು. ಮುಕುಂದ ವಿಷಾದದ ನಗು ನಕ್ಕು ಹೇಳಿದ.

ಮಹಾಕವಿ, ನಾಟಕಕಾರ, ಶೇಕ್ಸ್‌ಪಿಯರ್ ತನ್ನ “ಜೂಲಿಯಸ್ ಸೀಸರ್” ಎಂಬ ನಾಟಕದಲ್ಲಿ ಈ ಪ್ರಸಿದ್ಧವಾದ ಮಾತನ್ನು ಹೇಳುತ್ತಾನೆ. ಕಾಲೇಜಿನ ದಿನಗಳಲ್ಲಿ ನೀನು “ಜೂಲಿಯಸ್ ಸೀಜರ್ ಓದಿರಬಹುದು. ನಮಗೆ ಬಿ.ಎಸ್ಸಿ.ಯಲ್ಲಿ ಇದು ಪಠ್ಯ ಪುಸ್ತಕವಾಗಿತ್ತು. ನಮ್ಮ ಕಾಲೇಜಿನಲ್ಲಿ ನಾವು ಈ ನಾಟಕದ ಪ್ರದರ್ಶನ ಕೂಡಾ ಮಾಡಿದ್ದೆವು. ನಾನೂ ಕೂಡಾ ಆ ನಾಟಕದಲ್ಲಿ ಅಭಿನಯಿಸಿದ್ದೆ. ರೋಮನ್ ಚಕ್ರವರ್ತಿ ಸೀಸರ್‌ನನ್ನು ಅವನ ಸಹಚರರೇ ಇರಿದು ಕೊಲೆ ಮಾಡುತ್ತಾರೆ. ಅವನ ಅತ್ಯಂತ ಆಪ್ತನಾಗಿದ್ದ ಮಂತ್ರಿ ಬ್ರೂಟಸ್ ಕೂಡಾ ಸೀಸರ್‌ನನ್ನು ಇರಿದು ಕೊಂದಾಗ, ಅತ್ಯಂತ ದುಃಖ ಮತ್ತು ವಿಷಾದದಿಂದ ಸೀಸರ್ “ಯೂ ಟೂ ಬ್ರೂಟಸ್” ಎಂದು ಹೇಳಿ ಪ್ರಾಣ ಬಿಡುತ್ತಾನೆ. ಇತರ ಮಂತ್ರಿಗಳು ಸೀಸರ್‌ನನ್ನು ಏನೇ ತಿಳಿದುಕೊಂಡು ಸಾಯಿಸಿದರೂ ಅವನಿಗೆ ಏನೂ ಅನ್ನಿಸಲಿಲ್ಲ ತನ್ನ ಅತ್ಯಂತ ಆಪ್ತನಾದ ಬ್ರೂಟಸ್ ಕೂಡಾ ತನ್ನನ್ನು ತಪ್ಪು ತಿಳಿದು, ತನ್ನ ಮೇಲೆ ದ್ವೇಷ ಸಾಧಿಸಿ ತನ್ನನ್ನು ಇರಿದು ಸಾಯಿಸುವ ಮಟ್ಟಕ್ಕೆ ಬಂದನೇ ಎಂದು ಸೀಸರ್‌ಗೆ ಬಹಳ ದುಃಖವಾಗುತ್ತದೆ.

ಅದೇ ರೀತಿ ಈಗ ನಮ್ಮ ವಿಷಯದಲ್ಲಿ ಚತುರ್ವೇದಿಯವರ ಮಕ್ಕಳು, ದಾಯಾದಿಗಳು, ರೈತರೂ, ಯಾರೂ ಕೂಡಾ ಅವರ ಬಗ್ಗೆ ಆಸಕ್ತಿ ತೋರದೇ, ಆ ಜಮೀನನ್ನಾಗಲೀ, ಮನೆಯನ್ನಾಗಲೀ, ನೋಡಿಕೊಳ್ಳದೇ ಕಡೆಗಣಿಸಿದ್ದರು. ಈಗ ಚತುರ್ವೇದಿಯವರ ಆಸ್ತಿಯನ್ನೆಲ್ಲಾ ನನ್ನ ಹೆಸರಿಗೆ ಉಯಿಲು ಮಾಡಿದ ಮೇಲೆ ಎಲ್ಲರೂ ಸ್ವಾರ್ಥದಿಂದ, ನನ್ನ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದಾರೆ. ಆದರೆ ನನ್ನ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ನೋಡಿದ ನೇಹಾ ಕೂಡಾ ನನ್ನ ವಿರುದ್ಧ ಕೇಸ್ ಹಾಕಿದ್ದಾಳೆ ಎಂದು ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು” ಎಂದು ನೊಂದು ನುಡಿದ ಮುಕುಂದ.

ಅಡ್ವಕೇಟ್ ಶರ್ಮರವರು ದೆಹಲಿಗೆ ಹೋಗಿ ವಿವಿಧ ಬ್ಯಾಂಕುಗಳಲ್ಲಿ ಚತುರ್ವೇದಿಯವರು ಇಟ್ಟಿದ್ದ ಠೇವಣಿಗಳನ್ನು ಉಳಿತಾಯ ಖಾತೆಗಳಲ್ಲಿ ಇರಿಸಿದ್ದ ಹಣದ ವಿವರಗಳನ್ನು ಪಡೆದುಕೊಂಡರು. ದಿವಂಗತ ಚತುರ್ವೇದಿಯವರು ತಮ್ಮ ಮೂರೂ ಮಕ್ಕಳ ಹೆಸರಿನಲ್ಲಿ ಹತ್ತು ಹತ್ತು ಲಕ್ಷ ರೂಪಾಯಿಗಳ ಠೇವಣಿ ಮಾಡಿದ್ದರು. ಆದರೆ ಆ ಠೇವಣಿಗಳು ಡಿ.ಎನ್. ಚತುರ್ವೇದಿಯವರು ಹೆಸರಿನಲ್ಲಿಯೇ ಇತ್ತು. ಹಾಗೂ ಒಂದೊಂದು ಠೇವಣಿಯನ್ನು ಒಬ್ಬೊಬ್ಬರ ಹೆಸರಿಗೆ ನಾಮಾಂಕಿತ ಅಂದರೆ ನಾಮಿನೇಷನ್ ಮಾಡಿಸಿದ್ದರು. ಅವು ಆಯಾ ನಾಮಿನಿಗೇ ಸೇರುತ್ತದೆ. ಅವಲ್ಲದೆ ಇನ್ನೂ ಬೇಕಾದಷ್ಟು ಠೇವಣಿಗಳಿದ್ದವು ಮತ್ತು ಲಾಕರಿನಲ್ಲಿ ಒಡವೆಗಳೂ, ನಗದು ಹಣ, ಅಮೂಲ್ಯ ಕಾಗದ ಪತ್ರಗಳೂ ಎಲ್ಲವೂ ಇದ್ದವು. ಶರ್ಮರವರು ಎಲ್ಲಾ ಬ್ಯಾಂಕುಗಳಿಗೂ ಉಯಿಲಿನ ಪ್ರತಿ ಮತ್ತು ಮುಕುಂದನ ಅರ್ಜಿ ಪತ್ರ ಕೊಟ್ಟು ಬಂದರು. ಅಲಹಾಬಾದ್ ಕೋರ್ಟಿನಲ್ಲಿ ಜಮೀನಿನ ಒಡೆತನದ ಬಗ್ಗೆ ಮತ್ತು ಮನೆ ಒಡೆತನದ ಬಗ್ಗೆ ಮೊಕದ್ದಮೆಯ ನಡವಳಿಕೆಗಳು ಆರಂಭವಾದವು, ಮೊದ ಮೊದಲು ಮುಕುಂದ, ನರಸಿಂಹ, ಕಿಶೋರ, ನೇಹಾ, ಪ್ರಿಯಂವದಾ ಎಲ್ಲರೂ ನ್ಯಾಯಾಲಯದಲ್ಲಿ ಹಾಜರಾಗುತ್ತಿದ್ದರು. ಬರುಬರುತ್ತಾ ಯಾರೂ ಬರುತ್ತಲೇ ಇರಲಿಲ್ಲ. ಎರಡೂ ಕಡೆಯ ವಕೀಲರು ಬಂದು ಕೇಸ್ ನಡೆಸುತ್ತಿದ್ದರು. ಹೆಚ್ಚಿನ ಮಟ್ಟಿಗೆ ಕೇಸ್ ಮುಂದಕ್ಕೆ ಹೋಗುತ್ತಿತ್ತು. ಎಲ್ಲರು ಅವರವರ ಕೆಲಸ ಕಾರ್ಯಗಳಲ್ಲಿ ಮಗ್ನರಾದರು.

ಆರೇಳು ತಿಂಗಳ ನಂತರ ದೆಹಲಿಯ ವಿವಿಧ ಬ್ಯಾಂಕುಗಳಲ್ಲಿದ್ದ ಚತುರ್ವೇದಿಯವರ ಠೇವಣಿಗಳು ಯಾರಾರಿಗೆ ಸೇರಬೇಕೆಂದು ನಿರ್ಧಾರವಾಯಿತು. ಚತುರ್ವೇದಿಯವರ ಮಕ್ಕಳಿಗೆ ತಮ್ಮ ತಮ್ಮ ಹೆಸರಿಗೆ ನಾಮಾಂಕಿತವಾಗಿದ್ದ ಹತ್ತು ಹತ್ತು ಲಕ್ಷಗಳು ಮಾತ್ರ ಬಂದವು. ಮಿಕ್ಕ ಹಣ ಸುಮಾರು ಒಂದು ಕೋಟಿ ಅರವತ್ತು ಲಕ್ಷ ರೂಪಾಯಿಗಳು ಮುಕುಂದನಿಗೆ ಬಂದಿತು! ಅದೇ ದೊಡ್ಡ ನಿಧಿಯಂತಾಗಿತ್ತು. ಆ ಹಣದಲ್ಲಿ ಮೊದಲು ಒಂದು ಲಕ್ಷ ರೂಪಾಯಿಗಳನ್ನು ವಕೀಲ ಶರ್ಮರವರಿಗೆ ಕೊಟ್ಟರು. ಅವರು ಇನ್ನೊಂದು ಐದು ಲಕ್ಷವಾದರೂ ಕೊಡಿ ಎಂದು ದಂಬಾಲು ಬಿದ್ದರು. ಸರಿ ಆಗಲಿ ಪಾಪ ಎಂದು ಕೊಟ್ಟರು.

ಮುಕುಂದನಿಗೆ ಇಷ್ಟೊಂದು ಹಣ ಏನು ಮಾಡುವುದೆಂದು ತೋಚಲಿಲ್ಲ. ಕೊನೆಗೆ, ತನ್ನ ಗೃಹ ನಿರ್ಮಾಣ ಸಾಲ, ವಾಹನ ಸಾಲ, ಮಗನ ವಿದ್ಯಾಭ್ಯಾಸಕ್ಕಾಗಿ ತೆಗೆದುಕೊಂಡ ಸಾಲ, ಸೊಸೈಟಿ ಸಾಲ, ಪಿ.ಎಫ್. ಮೇಲಿನ ಸಾಲ, ತಂದೆಯ ಬ್ಯಾಂಕ್ ಸಾಲ, ಅಣ್ಣನ ಸಾಲಗಳು ಎಲ್ಲವನ್ನು ತೀರಿಸಿದ. ಇನ್ನುಳಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ಮುಂದೆ ಬರುವ ಖರ್ಚು ವೆಚ್ಚಗಳಿಗೆ ಪ್ರಾವಧಾನ ಮಾಡಿಟ್ಟುಕೊಂಡ.

ಇನ್ನು ಅಲಹಾಬಾದಿನ ಮನೆ ಮತ್ತು ಸಹದೇವಪುರ ಜಮೀನಿನ ಕೇಸ್ ನ್ಯಾಯಾಲಯದಲ್ಲಿ ಆರು ವರ್ಷಗಳು ನಡೆಯಿತು. ಎರಡೂ ಕಡೆಯ ಕಕ್ಷಿದಾರರೂ ಬಹಳ ಸುಸ್ತಾಗಿ ಹೋಗಿದ್ದರು. ಕೊನೆಗೊಮ್ಮೆ ನ್ಯಾಯಾಲಯದ ತೀರ್ಪು ಹೊರಬಂದಿತು. ಪಿತ್ರಾರ್ಜಿತ ಆಸ್ತಿಯಾದ ಕೆಲವು ಜಮೀನು ಚತುರ್ವೇದಿಯವರ ಮಕ್ಕಳಿಗೆ ಸೇರಿತು. ಇನ್ನು ಚತುರ್ವೇದಿಯವರ ಅಣ್ಣನ ಮಕ್ಕಳಿಗೆ ಯಾವುದೇ ಭಾಗ ಬರಲಿಲ್ಲ. ಚತುರ್ವೇದಿ ಸಹೋದರರು ಬಹಳ ಹಿಂದೆಯೇ ಭಾಗ ಮಾಡಿಕೊಂಡಿದ್ದರು. ಚತುರ್ವೇದಿಯವರ ಅಣ್ಣಂದಿರು ತಮ್ಮ ಭಾಗಕ್ಕೆ ಬಂದ ಜಮೀನನ್ನು ಮಾರಿಕೊಂಡು ಲಕ್ನೋಗೆ ಹೋಗಿಬಿಟ್ಟಿದ್ದರು. ಅದಕ್ಕೆ ಸರಿಯಾದ ದಾಖಲೆಗಳಿದ್ದವು. ಹಾಗಾಗಿ ಆ ದಾಯಾದಿಗಳಿಗೆ ಏನೂ ದೊರೆಯಲಿಲ್ಲ. ಇನ್ನು ಇವರ ನೆಲದಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರಿಗೂ ಕೂಡ ಏನೂ ದೊರೆಯಲಿಲ್ಲ. ಅವರು ಗೇಣಿದಾರರಾಗಲಿ, ಅಥವಾ ಗುತ್ತಿಗೆಗೆ ಜಮೀನು ಪಡೆದ ರೈತರಾಗಲಿ ಆಗಿರಲಿಲ್ಲ. ಅವರ ಬಳಿ ಯಾವ ದಾಖಲೆಯೂ ಇರಲಿಲ್ಲ. ಕಾನೂನಿನ ದೃಷ್ಟಿಯಲ್ಲಿ ಅವರು ಅನಧಿಕೃತ ಉಳುಮೆಗಾರರೇ ಆಗಿದ್ದರು. ಹಾಗಾಗಿ ಶೇಕಡ ಎಂಭತ್ತರಷ್ಟು ಜಮೀನು ಮುಕುಂದನಿಗೂ, ಶೇಕಡ ಇಪ್ಪತ್ತರಷ್ಟು ಜಮೀನು ಕಿಶೋರ ಮತ್ತು ಅವನ ಸಹೋದರಿಯರಿಗೂ ದಕ್ಕಿತು.

ಇನ್ನು ಅಲಹಾಬಾದಿನ ಮನೆ ಡಿ.ಎನ್ ಚತುರ್ವೇದಿಯವರು ಮಾಡಿದ ಸ್ವಯಾರ್ಜಿತ ಆಸ್ತಿಯಾದುದರಿಂದ, ಉಯಿಲಿನ ಪ್ರಕಾರ ಇಡೀ ನಿವೇಶನ ಮತ್ತು ಅದರಲ್ಲಿರುವ ಮನೆ ಮುಕುಂದನ ಪಾಲಿಗೆ ಬಂದಿತು. ಎಲ್ಲಾ ವ್ಯಾಜ್ಯ ಇತ್ಯರ್ಥವಾದ ಮೇಲೆ ಮೇಲಿನ ನ್ಯಾಯಾಲಯಕ್ಕೆ ಹೋಗಲು ಯಾರಿಗೂ ತ್ರಾಣವಿರಲಿಲ್ಲ. ವಕೀಲ ಶರ್ಮರ ಮೂಲಕ ಮುಕುಂದ ತನ್ನ ಪಾಲಿಗೆ ಬಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ, ಕಂದಾಯ ಮುಂತಾದ ದಾಖಲೆ ಮಾಡಿಕೊಂಡ. ಒಂದು ತಿಂಗಳ ಬಳಿಕ ಚತುರ್ವೇದಿ ದಾಯಾದಿಗಳಾದ ಇಬ್ಬರು ಗೃಹಸ್ಥರು, ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರು ಮತ್ತು ಮನೆಯಲ್ಲಿ ವಾಸವಾಗಿದ್ದ ಬಾಡಿಗೆದಾರ ಎಲ್ಲರೂ ಬಂದು ಮುಕುಂದನ ಕಾಲಿಗೆ ಬಿದ್ದು ನಮ್ಮನ್ನು ಬೀದಿ ಪಾಲು ಮಾಡಬೇಡಿ, ನಮ್ಮ ಜೀವನಕ್ಕೆ ಏನಾದರೂ ಕೊಡಿ ಎಂದು ಕೇಳಿಕೊಂಡರು. ವಕೀಲರ ಶಿಫಾರಸ್ಸಿನ ಪ್ರಕಾರ ಆ ಇಬ್ಬರು ಸಂಬಂಧಿಕರಿಗೆ, ಇಬ್ಬರು ರೈತರಿಗೆ ಐದೈದು ಲಕ್ಷ ರೂಪಾಯಿ ಕೊಟ್ಟು ಇನ್ನು ಈ ಆಸ್ತಿಯ ಮೇಲೆ ತಮ್ಮದೇನೂ ಹಕ್ಕು ಬಾದ್ಯತೆ ಇಲ್ಲಾ ಎಂದು ಬರೆಸಿಕೊಂಡರು. ಇನ್ನು ಮನೆಯಲ್ಲಿ ವಾಸವಿರುವ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟು ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುವ ತನಕ ನೀವೇ ಆ ಮನೆಯನ್ನು ನೋಡಿಕೊಳ್ಳುತ್ತೀರಿ ಎಂದು ಹೇಳಿ ಕಳಿಸಿದರು.

ಆ ಜಮೀನಿನಲ್ಲಿ ವ್ಯವಸಾಯ ಮಾಡುವುದು, ಆ ವ್ಯವಸಾಯೋತ್ಪನ್ನಗಳನ್ನು ಮಾರುವುದು, ರೈತರೊಂದಿಗೆ ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವುದು ಇವೆಲ್ಲಾ ನಮ್ಮಿಂದ ಆಗದ ಹೋಗದ ಕೆಲಸ ಎಂದು ಮನಗಂಡು, ಆ ಜಮೀನನ್ನು ಒಳ್ಳೆಯ ಬೆಲೆ ಸಿಕ್ಕರೆ ಮಾರಿಬಿಡುವುದು ಎಂದು ನಿರ್ಧರಿಸಿದರು. ಆದರ ಬಗ್ಗೆ ಊರಿನ ಶ್ರೀಮಂತ ರೈತರನ್ನು ವಿಚಾರಿಸತೊಡಗಿದರು. ಕೆಲವರು ನೇರವಾಗಿ ಬೆಂಗಳೂರಿಗೆ ಬಂದು, ಮುಕುಂದನನ್ನು ಭೇಟಿ ಮಾಡಿ ಈ ಜಮೀನನ್ನು ನಮಗೆ ಕೊಡಿ ಎಂದು ಕೇಳಿದರು. ಮತ್ತೆ ಕೆಲವು ರೈತರು ವಕೀಲ ಶರ್ಮರವರಿಗೆ ಒಳ್ಳೆಯ ಕಮೀಷನ್ ಕೊಡುತ್ತೇವೆ ಎಂದು ಆಮಿಷ ತೋರಿಸಿ, ಅವರ ಮೂಲಕ ಈ ಜಮೀನು ಹೊಡೆದುಕೊಳ್ಳಲು ಪ್ರಯತ್ನಿಸಿದರು. ಒಬ್ಬ ರಾಜಕಾರಣಿ, ಕರ್ನಾಟಕದ ಒಬ್ಬ ರಾಜಕಾರಣಿಯ ಮೂಲಕ ಬೆಂಗಳೂರಿಗೆ ಬಂದು, ಮುಕುಂದನನ್ನು ಭೇಟಿ ಮಾಡಿ, ಚತುರ್ವೇದಿಯವರು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದರು. ಲೋಕಸಭಾ ಸದಸ್ಯರಾಗಿದ್ದರು. ನೀವೂ ನಮ್ಮ ಪಕ್ಷಕ್ಕೆ ಸೇರಿ, ನಿಮ್ಮ ಜಮೀನನ್ನು ಅಲಹಾಬಾದಿನ ಮನೆಯನ್ನೂ ನನಗೇ ಮಾರೀ, ನಿಮ್ಮನ್ನು ರಾಜ್ಯ ಸಭಾ ಸದಸ್ಯನನ್ನಾಗಿ ಮಾಡುತ್ತೇನೆ ಎಂದು ಆಮಿಷ ತೋರಿಸಿದರು. ಮುಕುಂದ ಮನಸಾರ ನಕ್ಕ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಒಳ್ಳೆಯ ಬೆಲೆ ಬಂದರೆ ಮಾರುತ್ತೇನೆ. ಆಗ ನಿಮಗೆ ತಿಳಿಸುತ್ತೇನೆ ಎಂದು ಹೇಳಿ ಕಳಿಸಿದ.

ಒಂದು ದಿನ ಅನಿರೀಕ್ಷಿತವಾಗಿ ನೇಹಾ, ಕಿಶೋರ ಮತ್ತು ಪ್ರಿಯಂವದಾ ಮುಕುಂದನ ಮನೆಗೆ ಬಂದರು! ಮುಕುಂದನಿಗೆ ಮತ್ತು ಸುಧಾಳಿಗೆ ಬಹಳ ಗಾಬರಿಯಾಯಿತು. ಅರೆ! ಇದೇನಿದು ಆಶ್ಚರ್ಯ! ಆರೇಳು ವರ್ಷಗಳ ಕಾಲ ತಮ್ಮ ವಿರೋಧಿಗಳಾಗಿ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಖಟ್ಲೆ ನಡೆಸಿದವರು ಈ ದಿನ ನಮ್ಮ ಮನೆಗೆ ಬಂದಿದ್ದಾರೆ! ತಾನು ಮೊಕದ್ದಮೆಯಲ್ಲಿ ಗೆದ್ದು ತನಗೆ ಆಸ್ತಿ ಮತ್ತು ನಗದು ಬಂದಿರುವುದರಿಂದ ಈ ಜನ ಮತ್ಯಾವುದಾದರೂ ಷಡ್ಯಂತ್ರ ರಚಿಸಿ ತನ್ನ ಪಾಲಿನ ಆಸ್ತಿಯನ್ನು ಲಪಟಾಯಿಸಲು ಮಾಡಿರುವ ಹೊಸ ಉಪಾಯವೇ? ಏನೇ ಇರಲಿ, ಮನೆಗೆ ಬಂದವರನ್ನು ಸ್ವಾಗತಿಸುವುದು ನಮ್ಮ ಧರ್ಮ ಎಂದು, ಈ ಮೂವರನ್ನು ಒಳಗೆ ಕರೆದು ಕೂರಿಸಿದರು. ಕುಡಿಯಲು ನೀರು ಮತ್ತು ಚಹಾ ಕೊಟ್ಟರು. ನಂತರ ನಿಧಾನವಾಗಿ ಮುಕುಂದನೇ ಮಾತು ಆರಂಭಿಸಿದ.

“ದಯವಿಟ್ಟು ತಾವುಗಳು ನನ್ನ ಮೇಲೆ ತಪ್ಪು ತಿಳಿಯಬಾರದು. ನಾನು ಯಾರ ಆಸ್ತಿಗೂ ಆಸೆಪಟ್ಟವನಲ್ಲ. ನನ್ನ ಮತ್ತು ನನ್ನ ಪತ್ನಿ ಸುಧಾಳ ನಿಸ್ವಾರ್ಥ ಸೇವೆಗೆ ಮೆಚ್ಚಿ ನಿಮ್ಮ ತಂದೆಯವರು ತಮ್ಮ ಆಸ್ತಿಯನ್ನು ನನ್ನ ಹೆಸರಿಗೆ ಬರೆದು ದಿವಂಗತರಾದರು. ಈ ಆರುವರ್ಷಗಳಲ್ಲಿ ನಾವೆಲ್ಲರೂ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದೇವೆ. ಈಗ ಅದೆಲ್ಲಾ ಮುಗಿದ ಕಥೆ. ಈಗ ನನ್ನ ತಮ್ಮ ತಂಗಿಯರಂತೆ ನೀವು ಮೂವರೂ ಮನೆಗೆ ಬಂದಿದ್ದೀರಿ. ಪ್ರೀತಿಯಿಂದ ಇದ್ದು ಊಟ ಮಾಡಿಕೊಂಡು ಹೋಗಿ” ಎಂದು ಬಹಳ ವಿನಯದಿಂದ ಹೇಳಿದ. ಬಂದವರೂ ಏನೂ ಜಗಳ ಮಾಡಲು ಬಂದವರಂತೆ ಕಾಣಲಿಲ್ಲ. ಚಹಾ ಕುಡಿದು ಕಿಶೋರ ಮಾತು ಆರಂಭಿಸಿದ.

“ನಿಮ್ಮ ಒಳ್ಳೆಯ ಗುಣಕ್ಕೆ ಒಳ್ಳೆಯ ಕೆಲಸಕ್ಕೆ ನಿಮಗೆ ತಕ್ಕ ಪ್ರತಿಫಲ ಸಿಕ್ಕಿದೆ. ಅದರ ಬಗ್ಗೆ ನಮಗೇನೂ ಬೇಸರವಿಲ್ಲ. ಸಹದೇವಪುರದ ಜಮೀನನ್ನು ನೀವು ಮಾರುತ್ತೀರ ಅಂತ ವಿಷಯ ತಿಳೀತು. ನೀವು ಒಳ್ಳೆಯ ಬೆಲೆಗೆ ಮಾರುವ ಉದ್ದೇಶವಿದ್ದರೆ, ನಮ್ಮ ಪಾಲಿಗೆ ಬಂದಿರುವ ಜಮೀನನ್ನು ಅವರಿಗೆ ಮಾರುವ ವ್ಯವಸ್ಥೆ ಮಾಡಿ ನಾವು ಮೂವರೂ ನಮ್ಮ ನಮ್ಮ ಕೆಲಸ ಕಾರ್ಯಗಳಲ್ಲಿ ಮತ್ತು ಸಾಂಸಾರಿಕ ಕೆಲಸಗಳಲ್ಲಿ ವ್ಯಸ್ತರಾಗಿದ್ದೇವೆ. ಆದುದರಿಂದ ಈ ಜಮೀನುಗಳನ್ನು ಮಾರುವ ವಿಷಯದಲ್ಲಿ ಸ್ವಲ್ಪ ಸಹಾಯ ಮಾಡಿ.” ಎಂದು ಕೈಮುಗಿದ.

ಮುಕುಂದ ಒಪ್ಪಿಕೊಂಡು ಹಾಗೆಯೇ ಆಗಲಿ ನೀವೇನೂ ಚಿಂತಿಸಬೇಡಿ ಎಂದು ಧೈರ್ಯ ಹೇಳಿದ. ಸುಧಾ, ಬಂದ ಅತಿಥಿಗಳನ್ನು ಊಟ ಮಾಡಿಕೊಂಡು ಹೋಗಿ ಎಂದು ಆಗ್ರಹಪಡಿಸಿದಳು, ಇವರ ಮಾತಿಗೆ ಒಪ್ಪಿ ಮೂವರೂ ಊಟ ಮಾಡಿಕೊಂಡು ಹೋದರು. ಮತ್ತೆ ಒಂದು ವರ್ಷ ಒದ್ದಾಡಿ ಒದ್ದಾಡಿ ಹಲವಾರು ಜಮೀನ್ದಾರರ ಜೊತೆ ಚರ್ಚಿಸಿ ಕೊನೆಗೆ ಸಹದೇವಪುರದ ಜಮೀನನ್ನು ಮಾರಿದರು. ಕಿಶೋರ, ನೇಹಾ ಮತ್ತು ಪ್ರಿಯಂವದಾರೂ ಕೂಡ ಒಂದು ಕೋಟಿಗೂ ಹೆಚ್ಚು ಹಣ ದೊರೆಯಿತು. ಮುಕುಂದನಿಗೆ ಹಲವು ಕೋಟಿಗಳು ದೊರೆತವು. ಮೊದಲು ವಕೀಲ ಶರ್ಮರವರಿಗೆ ಹತ್ತು ಲಕ್ಷ ರೂಪಾಯಿ ಕೊಟ್ಟರು. ನಂತರ ಇಷ್ಟೊಂದು ಹಣ ಏನು ಮಾಡುವುದೆಂದು ಯೋಚಿಸಿದರು. ಕೊನೆಗೆ ಮುಕುಂದನಿಗೆ ಒಂದು ವಿಚಾರ ಹೊಳೆಯಿತು. ಕೂಡಲೇ ಅಣ್ಣ ನರಸಿಂಹನನ್ನು ಕರೆಸಿ ತನ್ನ ಯೋಚನೆಯನ್ನು ಅವರ ಮುಂದಿಟ್ಟ.

ಅಲಹಾಬಾದಿನ ಮನೆಯನ್ನು ಸಂಪೂರ್ಣ ಕೆಡವಿ, ಆ ಜಾಗದಲ್ಲಿ ಒಂದು ಸುಸಜ್ಜಿತವಾದ ವೃದ್ಧಾಶ್ರಮ ಕಟ್ಟಿಸುವುದು, ಅಲ್ಲಿಯೇ ತಮಗೂ ಮನೆಗಳನ್ನು ಕಟ್ಟಿಕೊಂಡು, ತಾವೆಲ್ಲರೂ, ವೃದ್ಧಾಶ್ರಮದ ಆಡಳಿತ ನೋಡಿಕೊಂಡು ಅಲ್ಲಿಯೇ ಇರುವುದು ಈ ವಿಚಾರ ನರಸಿಂಹನಿಗೂ ಸರಿಕಂಡಿತು. ಒಂದೆರಡು ತಿಂಗಳಲ್ಲಿ ವೃದ್ಧಾಶ್ರಮದ ನಕ್ಷೆ ತಯಾರಾಯಿತು. ಒಟ್ಟು ನಾಲ್ಕು ಮಹಡಿಯ ಕಟ್ಟಡ, ನೆಲಮಹಡಿಯಲ್ಲಿ ಮುಂದೆ ವಿಶಾಲವಾದ ಪಡಸಾಲೆ, ಸ್ವಲ್ಪ ತಿರುಗಾಡಲು ಜಾಗ, ಒಂದು ಸಣ್ಣ ಉದ್ಯಾನವನ, ಅದರ ಮಧ್ಯದಲ್ಲಿ ಚತುರ್ವೇದಿಯವರ ಒಂದು ಸುಂದರ ಪ್ರತಿಮೆ, ಹಿಂಭಾಗದಲ್ಲಿ ವಾಹನಗಳ ನಿಲುಗಡೆಗೆ ಜಾಗ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುವವರಿಗೆ ವಸತಿಗೃಹಗಳು.

ಮೊದಲ ಮಹಡಿಯಲ್ಲಿ ಪ್ರಾರ್ಥನಾ ಗೃಹ, ಭೋಜನ ಶಾಲೆ, ಅಡುಗೆ ಮನೆ, ಉಗ್ರಾಣ ಮತ್ತು ಮುಕುಂದ, ನರಸಿಂಹ ಕುಟುಂಬಗಳಿಗೆ ವಾಸದ ಮನೆಗಳು. ಎರಡು, ಮೂರು ಮತ್ತು ನಾಲ್ಕನೇ ಮಹಡಿಗಳಲ್ಲಿ ಇಲ್ಲಿಗೆ ಬಂದು ನೆಲೆಸಲು ಬಯಸುವ ವೃದ್ಧರಿಗೆ ವಸತಿ ಸಮಚ್ಛಯ, ಆರೋಗ್ಯವಾಗಿರುವವರಿಗೆ ಸಣ್ಣ ಸಣ್ಣ ಮನೆಗಳು ತೀರಾ ಆಶಕ್ತರಿಗೆ ಆಸ್ಪತ್ರೆಯಂತಹ ಕೋಣೆಗಳು ಮತ್ತು ವಾರ್ಡುಗಳು. ಈ ಯೋಜನೆ ಸಮಾಜಸೇವಾ ಕಾರ್ಯವೇ ಆದರೂ ಇಲ್ಲಿನ ಸೇವೆಗಳು ಉಚಿತವಲ್ಲ. ಇಲ್ಲಿ ಬಂದು ನೆಲೆಸಬಯಸುವವರು ಐದೋ ಹತ್ತೋ ಲಕ್ಷ ಠೇವಣಿ ಇಡಬೇಕು. ತಮ್ಮ ವಸತಿ ಸೌಕರ್ಯ, ಊಟ, ತಿಂಡಿ ಮುಂತಾದ ಸೇವೆಗೆ ಮಾಸಿಕ ಶುಲ್ಕ ಕೊಡಬೇಕು. ಈ ಸಮಚ್ಚಯದ ಕಟ್ಟಡ ನಿರ್ಮಾಣವಾಗುತ್ತಿರುವಾಗಲೇ ಇಲ್ಲಿ ಬಂದು ನೆಲೆಸುವುದಕ್ಕೆ ನೂರಾರು ಜನ ವೃದ್ಧರು, ಅವರ ಮಕ್ಕಳು ಮುಗಿಬಿದ್ದು ಮುಂಗಡ ಹಣ ಕೊಟ್ಟರು. ಇವರುಗಳು ಕೊಟ್ಟ ಹಣದಿಂದಲೇ ಕಟ್ಟಡ ನಿರ್ಮಾಣವಾಯಿತು. ವಸತಿ ಗೃಹಗಳು, ಭೋಜನ ಶಾಲೆ, ಪ್ರಾರ್ಥನಾಗೃಹ, ಮುಕುಂದ, ನರಸಿಂಹರ ಮನೆಗಳು ಎಲ್ಲವೂ ಹವಾನಿಯಂತ್ರಿತ ವಸತಿ ಸಮಚ್ಚಯಗಳಾದವು. ಮಹಡಿ ಏರಲು ಎರಡು ಲಿಫ್ಟ್‌ಗಳು ಬಂದವು. ಒಂದೆರಡು ಕಾರುಗಳು, ಒಂದು ಅಂಬುಲೆನ್ಸ್ ಒಂದೆರಡು ಲಗ್ಗೇಜ್ ಆಟೋಗಳು, ಎಲ್ಲವನ್ನು ಕೊಂಡರು. ವೃದ್ಧಾಶ್ರಮ ಕೆಲಸ ಸಂಪೂರ್ಣಗೊಂಡ ಮೇಲೆ ರಾಜಸ್ಥಾನದ ಮಕರಾನಾದಿಂದ ಚತುರ್ವೇದಿಯವರು ಪ್ರತಿಮೆಯನ್ನು ಮಾಡಿಸಿ ತರಿಸಿದರು. ವೃದ್ಧಾಶ್ರಮದ ಉದ್ಘಾಟನೆಗೆ ಬರಲು ಸ್ವಯಂ ಪ್ರಧಾನ ಮಂತ್ರಿಗಳೇ ಒಪ್ಪಿದರು. ಚತುರ್ವೇದಿಯಗಳು ಈಗಿನ ಪ್ರಧಾನ ಮಂತ್ರಿಗಳ ಪಕ್ಷದವರೇ ಆಗಿದ್ದರು ಮತ್ತು ಅವರ ರಾಜಕೀಯ ಗುರುಗಳೂ ಆಗಿದ್ದರು. ಉದ್ಘಾಟನೆಗೆ ನೇಹಾ, ಕಿಶೋರ, ಪ್ರಿಯಂವದಾ ಎಲ್ಲರೂ ತಮ್ಮ ತಮ್ಮ ಸಂಪೂರ್ಣ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು.

ಈ ಉದ್ಘಾಟನಾ ಸಮಾರಂಭದ ಸುದ್ದಿ ಎಲ್ಲಾ ಟಿ.ವಿ. ವಾಹಿನಿಗಳಲ್ಲಿಯೂ ವೃತ್ತ ಪತ್ರಿಕೆಗಳಲ್ಲಿಯೂ ಪ್ರಸಾರವಾದವು. ವೃದ್ಧಾಶ್ರಮಕ್ಕೆ ಶ್ರೀ ದಶರಥನಂದನ್ ಚತುರ್ವೇದಿ ಜೀವನ ಸಂಧ್ಯಾ ಟ್ರಸ್ಟ್ ಎಂದೇ ಹೆಸರಿಟ್ಟರು. ಇವರ ಹಿರಿಯ ವಕೀಲ ಶರ್ಮಾಜಿಯವರನ್ನೇ ಮೇನೇಜರ್ ಆಗಿ ನೇಮಿಸಿದರು. ವೃದ್ಧಾಶ್ರಮ ದಿನದಿಂದ ದಿನಕ್ಕೆ ಬಹಳ ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತಾ ಸಾಗಿತ್ತು.

ಮುಕುಂದನ ಮಗ ನಿತಿನ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಮುಂದೆ ಎಂ.ಎಸ್. ಮಾಡಲು ಆಮೇರಿಕಾಗೆ ಹೋದ. ಎಂ.ಎಸ್. ಮುಗಿದ ಮೇಲೆ ಅಲ್ಲಿಯೇ ಒಳ್ಳೆಯ ಕೆಲಸಕ್ಕೆ ಸೇರಿದ. ಮಗನನ್ನು ನೋಡಲು ಮುಕುಂದ ಮತ್ತು ಸುಧಾ ಅಮೇರಿಕಾಗೆ ಹೋಗಿ ಬಂದರು. ಇದಾದ ಒಂದು ವರ್ಷದ ನಂತರ ನಿತಿನ್ ಬಂದು ಪ್ರಸ್ತಾವನೆ ತಂದ. ನನ್ನ ಸಹಪಾಠಿ ಹಾಗೂ ಸಹೋದ್ಯೋಗಿ ಒಬ್ಬ ಹುಡುಗಿ ಇದ್ದಾಳೆ. ಅವಳೂ ಭಾರತೀಯಳೇ ಬೆಂಗಳೂರಿನವಳೇ, ಬಹಳ ಚೆನ್ನಾಗಿದ್ದಾಳೆ. ಮುಖ್ಯವಾಗಿ ನನಗೆ ಅವಳನ್ನು ಕಂಡರೆ ಬಹಳ ಇಷ್ಟ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದ. ಅವನು ಹೇಳಿದ ಎಲ್ಲಾ ವಿಷಯಗಳೂ ಚೆನ್ನಾಗಿಯೇ ಇದ್ದವು. ಆದರೂ ಒಳ ಮನಸ್ಸಿನಲ್ಲಿ ಅವರು ಯಾವ ಜಾತಿಯೋ? ಗೋತ್ರ ನಕ್ಷತ್ರ ಜಾತಕ ಎಲ್ಲಾ ಸರಿ ಹೊಂದುವುದೋ ಇಲ್ಲವೋ ಎಂದು ಸುಧಾ ಅನುಮಾನ ವ್ಯಕ್ತಪಡಿಸಿದಳು. ಮುಕುಂದ ಅವಳಿಗೆ ಸಮಾಧಾನ ಮಾಡಿ, ಈಗಿನಕಾಲದಲ್ಲಿ ಹುಡುಗರು ತಮ್ಮ ಗೆಳೆಯ ಗೆಳತಿಯರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಈ ಸಲ ಅವನು ಭಾರತಕ್ಕೆ ಬಂದಾಗ ಆ ಹುಡುಗಿಯ ಮನೆಗೆ ಹೋಗಿ ಅವಳ ತಂದೆ ತಾಯಿಯರನ್ನು ಭೇಟಿ ಮಾಡಿ ಮಾತನಾಡೋಣವೆಂದು ಹೇಳಿ ಮಾತು ಮುಗಿಸಿದ.

ಅದೇ ರೀತಿ ನಿತಿನ್ ಭಾರತಕ್ಕೆ ಬಂದಾಗ, ಆ ಹುಡುಗಿ ಕೂಡಾ ಅವಳ ತಂದೆ ತಾಯಿಯನ್ನು ನೋಡಲು ಬೆಂಗಳೂರಿಗೆ ಬಂದಳು. ಹುಡುಗಿಯನ್ನೂ ಅವಳ ತಂದೆ ತಾಯಿಯರನ್ನು ನೋಡಲು ಮುಕುಂದ, ಸುಧಾ ಮತ್ತು ನಿತಿನ್ ಬೆಂಗಳೂರಿಗೆ ಹೋದರು. ಆ ಹುಡುಗಿ ಆಶ್ರಿತ ಬೇರಾರೂ ಅಲ್ಲದೆ ನೇಹಾಳ ಮಗಳೇ ಆಗಿದ್ದಳು. ಒಂದು ಕಾಲದಲ್ಲಿ ನನ್ನ ತಂಗಿಯಂತಿದ್ದ ನೇಹಾ ಒಂದು ಸಮಯದಲ್ಲಿ ದಾಯಾದಿಗಳಂತೆ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದವಳು, ಈಗ ಬೀಗಿತ್ತಿಯಾದಳು! ನಿತಿನ್ ಮತ್ತು ಆಶ್ರಿತಾಳ ಮದುವೆ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಮುಕುಂದನ ಮನೆಯವರು ಕೊನೆಗೂ ಚತುರ್ವೇದಿ ಕುಟುಂಬದ ಸಂಬಂಧಿಕರಾದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಡೆವು ನಾವು ನಿಮ್ಮಲ್ಲಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…