ಪ್ರಿಯಂವದ

ಪ್ರಿಯಂವದ

ಸಿನಿಮಾ ಜನರಿಂದ ಹಣ ಕೀಳುವುದೂ ಒಂದು ಯಾಗ ಮಾಡಿದಂತೆಯೆ. ಎಷ್ಟೋ ಸಲ ಅಡ್ವಾನ್ಸ್ ಕೊಟ್ಟಷ್ಟೇ ಗ್ಯಾರಂಟಿ. ನನ್ನ ಪುಣ್ಯ, ನನಗೆ ಸಿಕ್ಕವರು ತೀರಾ ಚಿಲ್ಲರೆಗಳೇನಲ್ಲ. ಚಿಲ್ಲರೆ ಕೊಟ್ಟವರೂ ಅಲ್ಲ. ದೊಡ್ಡ ಬ್ಯಾನರ್‌ನವರು ದೊಡ್ಡದಾಗಿ ಹಣ ಕೊಡದಿದ್ದರೂ (ಜನರು ತಿಳಿದಂತೆ) ಹೇಳಿದಕ್ಕೂ ಕೈ ಬೀಸುವವರಲ್ಲ. ಇನ್ನು ಕೆಲವರು ಕೇಳಿದ್ದಕ್ಕಿಂತ ಐದುಸಾವಿರ ಹೆಚ್ಚೇ ತಗೊಳ್ಳಿ ಸಾರ್, ಕೆಲಸ ಬೊಂಬಾಟ್ ಆಗಿರಲಿ, ಡೈಲಾಗ್ ಮೇಲೆ ಪಿಕ್ಚರ್ ಓಡ್ಬೇಕು ಹಾಗಿರಲಿ ಅಂತಾರೆ. ಕೆಲಸವೇನೋ ತೇಯಿಸಿಕೊಳ್ಳುತ್ತಾರೆ. ಆಮೇಲೆ ಅರ್ಧದಷ್ಟು ದುಡ್ಡಿಗೇ ಪಂಗನಾಮ. ಇನ್ನು ದೊಡ್ಡ ದೊಡ್ಡ ನಿರ್ದೆಶಕರೆನ್ನಿಸಿಕೊಳ್ಳುವವರು – ನಿರ್ಮಾಪಕರೂ ಬೇರೆ. ತಾರೆಯರಿಂದಲೂ ತಂತ್ರಜ್ಞರಿಂದಲೂ ರಿಯಾಯಿತಿ ಪಡೆವ ಈ ಪರಿಶಿಷ್ಟರಿಗೆ ಸಂಭಾವನೆ ಕೇಳಿದರೇ ಕೋಪ. ನಮ್ಮ ಚಿತ್ರಕ್ಕೆ ಕೆಲಸ ಮಾಡುವುದೇ ಮಾಡುವವನ ಭಾಗ್ಯ ಎಂಬಂತಹ ಧೋರಣೆ. ಹೊಸಬರ ಜೊತೆ ಕೆಲಸ ಮಾಡುವಾಗ ಸ್ವಾತಂತ್ರ್ಯವಿರುತ್ತದೇನೋ ನಿಜ. ಆದರೆ ಅವನ ಧಾಟಿಯೇ ಬೇರೆ. ನಮ್ಮನ್ನು ನೀವೇ ಪ್ರೋತ್ಸಾಹಿಸಬೇಕು ಸಾರ್, ಈ ಪಿಕ್ಚರ್‌ ನೂರುದಿನ ಹೋಗಲಿ, ನಮ್ಮದೇ ಒಂದು ಟೀಮ್ ಮಾಡಿಕೊಳ್ಳೋಣ. ನಮ್ಮ ಎಲ್ಲಾ ಪಿಕ್ಚರ್‍ಗೆ ನೀವೇ, ನಿಮ್ಮನ್ನು ಬಿಟ್ಟು, ನಾವು ಹೆಜ್ಜೆಯನ್ನೂ ಊರುವುದಿಲ್ಲ. ನೀವೇ ಊರುಗೋಲು ಎಂದು ಮೂಗಿಗೆ ತುಪ್ಪ ಹಚ್ಚುವವರು. ಇಲ್ಲಿ ಸಿಗುವ ಗೌರವವೇ ಸಂಭಾವನೆ. ಹೀಗೆ ಕರೆಯುವ ಎಮ್ಮೆ, ಕರೆಯದ ಎಮ್ಮೆ ಎಲ್ಲಕ್ಕೂ ಹುಲ್ಲು ಹಾಕಬೇಕು. ಬೌನ್ಸ್ ಚೆಕ್ ಕೊಟ್ಟವನು ಕ್ಷಮೆ ಕೇಳಿ ನನ್ನ ಪಾರ್ಟನರ್ ಇಂಥ ಹಲ್ಕಬಡ್ಡಿಮಗ ಸಾರ್, ನಾನು ಅಪರಂಜಿ. ಈಗ ನಾನು ಆ ಕೊಳಕು ಮಂಡಲವನ್ನು ಬಿಟ್ಟು ಪಿಕ್ಚರ್ ಮಾಡ್ತಾ ಇದೀನಿ. ನನಗೇ ಹತ್ತು ಲಕ್ಷ ಲಾಸ್ ಆಗಿದೆ. ಕಳ್ಕೊಂಡ ಹತ್ತಿರವೇ ಹುಡುಕಬೇಕಲ್ಲವೆ ಸಾರ್ ಎಂದು ಸಲಾಮ್ ಹೊಡೆವವನಿಗೂ ಮತ್ತೆ ಕರುಣೆ ತೋರಿಸಬೇಕು. ಅವನು ಹೇಳುತ್ತಿರುವುದೆಲ್ಲಾ ಬರೀ ಬೋಗಸ್ ಎಂಬ ಅರಿವಿದ್ದರೂ ಉಳಿವಿಗಾಗಿ, ಸಂಖ್ಯೆಗಾಗಿ ಕೈನಲ್ಲಿ ಇಷ್ಟು ಪಿಕ್ಟರ್‌ಗಳಿವೆ ಎಂದು ತೋರಿಸಿಕೊಳ್ಳಲಿಕ್ಕಾಗಿಯಾದರೂ ಹೆಣಗಬೇಕು. ಕೈನಲ್ಲಿ ಚಿತ್ರಗಳಿವೆ. ತುಂಬಾ ಬಿಜಿಯಾಗಿದ್ದಾರೆಂಬ ಸುದ್ದಿಯಿದ್ದರೇನೇ ಮತ್ತೆ ಮತ್ತೆ ಚಿತ್ರಗಳು ಕೈಗೆ ಬರುತ್ತವೆ. ನಿಧಾನವಾದರೂ ತಾಳುತ್ತಾರೆ. ಕೈನಲ್ಲಿ ಕೆಲಸವಿಲ್ಲ, ನಿಮ್ಮದೇ ಪಿಕ್ಚರ್, ವಾರದಷ್ಟು ಟೈಮಿನಲ್ಲಿ ಮಾಡಿಕೊಡುತ್ತೇನೆ ಎಂದರೆ ಬಂದ ನಿರ್ಮಾಪಕನಿಗೆ ಖಂಡಿತ ಖುಷಿಯಾಗುವುದಿಲ್ಲ. ಕಂಡಮ್ ಪಾರ್ಟಿ ಬಳಿ ಬಂದೆನೆ? ಎಂಬ ಅನುಮಾನ ಅವನದು. ಓಡುವ ಕುದುರೆ ಹಿಂದೆ ಎಲ್ಲರೂ ಎಂಬ ಮಾತಿಗಿಂತಲೂ ಗೆಲ್ಲುವ ಕುದುರೆ ಹಿಂದೆ ಎಂಬ ಮಾತು ಚಿತ್ರರಂಗಕ್ಕೆ ಅನ್ವಯಿಸುತ್ತದೆ. ಇಲ್ಲಿ ಶತ್ರುಗಳೂ ಎದುರಿನಲ್ಲಿ ನಗುತ್ತಾರೆ, ತಬ್ಬುತ್ತಾರೆ, ಹರಟುತ್ತಾರೆ. ಹಿಂದೆ…..? ಆ ಮಾತು ಬೇರೆ. ಹೋಗಲಿ ನಿಜವಾದ ಸ್ನೇಹ ವಿಶ್ವಾಸವಾದರೂವುಂಟೆ? ಅದೂ ಮರಳುಗಾಡಿನ ಓಯಸಿಸ್, ಎಲ್ಲರೂ ಎಲ್ಲರ ಚಿತ್ರದ ‘ಫ್ಲಾಪ್’ ಸುದ್ದಿಗಾಗಿಯೇ ಅದನ್ನು ಕೇಳಲೋಸುಗವೇ ಫೋನ್ ಬಳಿ ಕಾದಿರುತ್ತಾರೆ. ಇಲ್ಲಿ ಸ್ನೇಹ ಸಂಬಂಧ ಬರೀ ಸೊನ್ನೆ.

ಹಣ ಯಶಸ್ಸು ಮಾತ್ರವೇ ಪ್ರಾಧಾನ್ಯ ಪಡೆದಿರುವ ಈ ರಂಗದಲ್ಲಿ ನಾನು ಆಕರ್ಷಿತನಾಗದಿದ್ದರೂ ಅವಕಾಶಗಳಿರುವುದರಿಂದ ಸರ್ಕಾರಿ ನೌಕರಿ ಜೊತೆ ಏಗುತ್ತಿದ್ದೇನೆ. ಈವತ್ತಂತೂ ಒಂದಿಷ್ಟು ಖುಷಿಯೂ ಆಗಿದೆ. ಯಾಕೆಂದರೆ ಕಂಜೂಸ್ ಎಂದೇ ಪ್ರಖ್ಯಾತನಾದ ನಿರ್ಮಾಪಕ ಹಣ ಎಣಿಸಿದ್ದಾನೆ. ಒಳ್ಳೆ ನಾನ್ – ವೆಜ್ ಊಟ ಹಾಕಿಸಿ ಮಧ್ಯಾಹ್ನವೇ ಬೀರಲಿಂಗನ ಸೇವನೆಯನ್ನೂ ಮಾಡಿಸಿದ್ದಾನೆ. ಮೂರು ಬಿಯರ್‌ಗಳು ಹೊಟ್ಟೆ ಸೇರಿದ್ದರಿಂದ ಹಣದ ಕಂತೆ ಜೇಬಿನಲ್ಲಿ ತೂಗುತ್ತಿರುವುದರಿಂದ ನಾನೂ ಒಂತರಾ ತೂಗುಯ್ಯಾಲೆಯ ಮೇಲೆ ಬಸ್ ನಿಲ್ದಾಣ ಸೇರಿದ್ದೆ. ನಿಲ್ದಾಣದಲ್ಲಿ ಬೆಂಗಳೂರಿಗೆ ಹೊರಟ ಬಸ್‌ಗಳಿದ್ದರೂ ಎಲ್ಲದರ ಹೊಟ್ಟೆ ಭರ್ತಿ. ಮಧ್ಯಾಹ್ನದ ಚಿಕ್ಕಮಗಳೂರಿನ ರಣಬಿಸಿಲು. ಲಕ್ಷುರಿ ಬಸ್ ಹಿಡಿದೆ. ಅಲ್ಲೂ ಅದೇ ಗತಿ, ನಿಂತುಕೊಂಡು ಬರಲೂ ಸಿದ್ದವೆಂಬಂತೆ ಜನ ಕೋಟೆ ಕಟ್ಟಿಬಿಟ್ಟಿದ್ದಾರೆ. ನಾಳೆ ಒಬ್ಬ ನಿರ್ದೇಶಕರಿಗೆ ಡೈಲಾಗ್ ರೀಡಿಂಗ್ ಕೊಡುವುದಿರುವುದರಿಂದ ನನಗೂ ಅರ್ಜೆಂಟೇ. ಆದರೂ ನಾನಿರುವ ಸ್ಥಿತಿಯಲ್ಲಿ ನಿಂತುಕೊಂಡಂತೂ ಪ್ರಯಾಣಿಸುವಂತಿಲ್ಲ. ಎಷ್ಟು ಬಸ್‌ದರ ಹೆಚ್ಚಳ ಮಾಡಿದರೂ ಬಸ್‌ನಲ್ಲಿ ಮಾತ್ರ ಜಾಗವಿಲ್ಲ. ಜನ ದರ ಏರಿಕೆಗೆ ಒಗ್ಗಿಬಿಟ್ಟಿದ್ದಾರೆ. ಅಕ್ಕಿ ಬೆಲೆ ಜಾಸ್ತಿಯಾಯಿತೆಂದು ಯಾರೂ ಅನ್ನ ತಿನ್ನುವುದನ್ನು ಬಿಡಲಿಲ್ಲ. ಎಣ್ಣೆ ಬೆಲೆ ಜಾಸ್ತಿಯಾದರೂ ಕರಿದ ತಿಂಡಿ ಮೇಲಿನ ವ್ಯಾಮೋಹ ಬಿಡಲಿಲ್ಲ. ಪೆಟ್ರೋಲ್ ಬೆಲೆ ಏರಿದರೂ ವಾಹನಗಳ ಓಡಾಟ ನಿಂತಿಲ್ಲ. ಸಿನಿಮಾ ಟಿಕೆಟ್ ಬೆಲೆ ಏರಿದಷ್ಟೂ ಹೌಸ್‌ಪುಲ್‌ಗಳು. ಸಿನಿಮಾಕ್ಕೆ ಹೋಗಿ ಹೊಟಲ್ಗೇ ಹೋಗಿ ಬೀದಿ ಬದಿಯ ಜ್ಯೂಸ್ ಅಂಗಡಿಗೆ ಹೋಗಿ ಎಲ್ಲಾ ಕಡೆ ಹೌಸ್‌ಫುಲ್. ಬಡತನ ಎಲ್ಲಿದೆ? ಅಂತ ಒಮ್ಮೊಮ್ಮೆ ತಲೆತುರಿಸಿಕೊಳ್ಳುವಂತಾಗುತ್ತದೆ. ಏನೇನೋ ತಿಕ್ಕಲು ಆಲೋಚನೆಗಳು, ಬಿಯರ್‌ನ ಪ್ರಭಾವವೂ ಇದ್ದಿರಬೇಕು. ಬಿಯರೇ ನಾನು ಔಟ್ ಆಗೋದಿದೆ. ಹೇಗಾದರೂ ಜಾಗ ಹಿಡಿಯಬೇಕು. ಬೆಂಗಳೂರು ಸೇರಬೆಕು. ಬಸ್ ತುಂಬಾ ಕಣ್ಣಾಡಿಸುತ್ತೇನೆ. ಈ ಸಿನಿಮಾದವರೆ ಹೀಗೆ, ತಮ್ಮ ಕೆಲಸ ತುರ್ತಾಗಿ ಆಗುವುದಿದ್ದಾಗ ಕಾರು, ಏರೋಪ್ಲೇನ್‌ನಲ್ಲೂ ಕರೆಸಿಕೊಳ್ಳುತ್ತಾರೆ. ನಾವು ಅವರಿಂದ ಹಣ ಎಣಿಸಿಕೊಂಡ ಮರುಕ್ಷಣವೇ ಸಂಬಂಧವನ್ನೇ ಕಡಿದುಕೊಂಡುಬಿಡುತ್ತಾರೆ – ಮುಂದಿನ ಚಿತ್ರದವರೆಗೆ, ಕೆಲವು ಸಲ ಹಣ ಎಣಿಸಿಕೊಳ್ಳದೆಯೂ ಬಸ್ ಏರುವುದುಂಟಲ್ಲ. ಈಗಿನ ಪರಿಸ್ಥಿತಿ ಉತ್ತಮವಾಗಿದ್ದರಿಂದ ಮೈ ಮನದಲ್ಲಿ ಉಲ್ಲಾಸದ ಗಾಳಿ ತುಂಬಿಕೊಂಡಿದೆ. ಬಸ್ ತುಂಬಾ ಹದ್ದಿನಕಣ್ಣು ಹಾಯಿಸಿದೆ. ಸುಂದರಿಯೆಂದು ಹೇಳಲಡ್ಡಿಯಿಲ್ಲ ಎಂಬಷ್ಟು ಮಿಂಚುತ್ತಿದ್ದ ಹೆಣ್ಣೂಬ್ಬಳ ಪಕ್ಕದ ಸೀಟ್ ಖಾಲಿ ಏನೋ ಇದೆ. ಆದರೆ ಅದರ ಮೇಲೆ ಕೋಮಲವಾದ ವ್ಯಾನಿಟಿ ಬ್ಯಾಗ್ ವಿರಮಿಸಿದೆ. ಯಾರಿಗೂ ಆಕೆಯನ್ನು ಮಾತನಾಡಿಸುವ ಎದೆಗಾರಿಕೆಯಿದ್ದಂತೆ ಕಾಣುತ್ತಿಲ್ಲ. ಆಕೆಯ ಸೌಂದರ್ಯಪ್ರಜ್ಞೆ ಪಕ್ಕದಲ್ಲಿ ಕೂರುವವನ ಯೋಗ್ಯತೆಯನ್ನು ಪ್ರಶ್ನಿಸುವಷ್ಟು ಪ್ರಖರ. ಜನರ ಮಧ್ಯೆ ದಾರಿ ಮಾಡಿಕೊಂಡು ಆಕೆಗೆ ಹತ್ತಿರವಾಗಿಯೇ ನಿಂತೆ. ಕಿಟಕಿ ಕಡೆ ಮುಖ ಹಾಕಿ ತನಗೂ ಬಸ್ಸಿಗೂ, ಬಸ್ಸಿಗೂ ಬಸ್ಸಿನ ಗದ್ದಲಕ್ಕೂ ಸಂಬಂಧವಿಲ್ಲವೆಂಬಂತೆ ಹಾಯಾಗಿ ಕೂತಿದ್ದಳು. ಲಿಪ್‌ಸ್ಟಿಕ್, ಹೆಚ್ಚಿನ ಮೇಕಪ್ ಇಲ್ಲದೆ ಕೂಡ ಆಕೆ ಮಿಂಚಿನಂತೆ ಶುಭ್ರ ಅನ್ನಿಸಿತು. ಮದುವೆಯಾದ ಮೇಲೆ ಹೀಗೆ ಬಿಳುಪಾದ ಹೆಂಗಸರನ್ನು ನೇವರಿಸುವಂತೆ ನೋಡುವುದನ್ನು ಕೈಬಿಟ್ಟಿದ್ದೆ. ಎಂಥವಳ ಮೈನಪಾಡು ಹಾಸಿಗೆಯಲ್ಲಿ ಇಷ್ಟೇ ಎನ್ನುವ ರಹಸ್ಯ ಗೊತ್ತಾಗಿದ್ದರ ಪರಿಣಾಮವಿರಬಹುದು. ಅಥವಾ ಪದೆ ಪದೆ ನೋಡಿದ ಅಂಗಾಂಗಗಳ ಮೇಲೆ ಈಗಾಗಲೆ ಜುಗುಪ್ಪೆ ಹುಟ್ಟಿತ್ತೋ, ನಲವತ್ತು ದಾಟಿದ ಪ್ರಭಾವವೋ ಅಥವಾ ಇವೆಲ್ಲವೂ! ಹೆಂಗಸಿನ ಬಗ್ಗೆ ಮೊದಲಿನ ಕಾಳಜಿ ಕಾತರವನ್ನು ಮನ ಕಳೆದುಕೊಂಡಿದ್ದಿತು. ಆದರೆ ಇಂದಿನ ಈಕೆ ಕಳೆದುಕೊಂಡಿದ್ದ ನನ್ನ ಯೌವ್ವನವನ್ನು ಮರುಪ್ರಸಾದಿಸುವಷ್ಟು ಪ್ರಭಾವಿತೆ. ಬಿಳಿಮಿಶ್ರಿತ ಕೆಂಪು ಕೆಂಪಾದ ನುಣ್ಣನೆಯ ಮೈಬಣ್ಣ, ದುಂಬಿ ಕಂಗಳು, ಸೇಬುಗಲ್ಲ, ಗುಲಾಬಿ ದಳದಂತಹ ತುಟಿಗಳು, ನಕ್ಕರೆ? ದಂತಪಂಕ್ತಿಗಳೂ ದಾಳಿಂಬೆ ನೆನಪು ತರಬಹುದೇನೋ! ಒಂದಿಷ್ಟೂ ಬೊಜ್ಜಿಲ್ಲದ ಸಪೂರ ಮೈ. ತೆಳುದೇಹದಲ್ಲಿ ನಿಮಿರಿನಿಂತ ಸ್ತನಗಳ ಸೌಂದರ್ಯ ಆಕೆಯ ಸೊಬಗಿಗೆ ಪರಿಪೂರ್ಣತೆಯನ್ನು ತುಂಬಿತ್ತು. ಬಸ್ ಹೊರಟೇಬಿಟ್ಟಿತು. ಕಂಡಕ್ಟರ್ ಪೀಪಿ ಊದಿದ. ಸುಂದರಿಯ ಪಕ್ಕದ ಸೀಟಿಗೆ ಯಾರೂ ಭರ್ತಿಯಾಗಲೇ ಇಲ್ಲ. ಆದರೂ ಅಲ್ಲಿ ಕೂರುವ, ಆಕೆಯನ್ನು ತನಿಖೆ ಮಾಡುವ ಮನಸ್ಸು, ಧೈರ್ಯ ಯಾರಿಗೂ ಇದ್ದಂತೆ ಕಾಣಲಿಲ್ಲ. ಆದರೆ ನಿಂತವರ ನೋಟವೆಲ್ಲ ಆಕೆಯ ಮೇಲೆ ನಿಂತಿತ್ತು. ‘ಸೀಟ್ ಖಾಲಿ ಇರೋ ಕಡೆ ಕೂಡಿ ಸಾರ್’ ಎಂದು ಕಂಡಕ್ಟರ್ ಸಣ್ಣ ಬೊಬ್ಬೆ ಹೊಡೆದ. ಅದರಿಂದ ವಿಚಲಿತಳಾದ ಸುಂದರಿ ಕಿಟಕಿಯಿಂದ ಮುಖ ಒಳಸರಿಸಿ ಇಹಕ್ಕೆ ಬಂದವಳಂತೆ ಪೋಜ್ ಕೊಡುತ್ತಾ ಬಸ್ಸಿನೊಳಗೊಮ್ಮೆ ದುಂಬಿ ಕಂಗಳನ್ನು ಹರಿಬಿಟ್ಟಳು. ಆಗಲೆ ಒಬ್ಬ ಕರಿ ಧಡಿಯ ‘ಇಲ್ಲಿ ಯಾರಿದಾರೆ ಮೇಡಂ?’ ಎಂದು ಕೇಳುವ ಧೈರ್ಯ ತೋರಿ ನನ್ನ ಹೊಟ್ಟೆ ಉರಿಸಿದ. ‘ಇದಾರೆ’ ಆಕೆಯದು ಗತ್ತಿನ ಉತ್ತರ. ನನ್ನ ಕಡೆಗೆ ಒಮ್ಮೆ ನೋಡಿ ನಕ್ಕಂತೆ ಭಾಸವಾಯಿತು. ಮೊದಲೆ ಸಾಹಿತಿಯ ಹೃದಯ. ಅದರಲ್ಲೂ ಸಿನಿಮಾಗಳಿಗೆ ಬರೆವ ಟೆಕ್ನಿಕಲರ್ ಹೃದಯ. ಬರೀ ಕಲ್ಪನೆಗೆ ಬಲಿಯಾದನೇನೋ ಅಂದುಕೊಂಡು ನನ್ನನ್ನು ನಾನೇ ಸಂತೈಸಿಕೊಳ್ಳುತ್ತಾ ಕಲ್ಲಾದೆ. ‘ಬನ್ನಿ ಸಾರ್…….. ನಿಂತೇ ಇದ್ದೀರಲ್ಲ’ ಎಂದಳಾಕೆ. ಸುತ್ತಲೂ ನೋಡಿದೆ – ನನಗಲ್ಲ ಎನ್ನುವಂತೆ. ಆಕೆಯನ್ನು ಒಮ್ಮೆ ದಿಟ್ಟಿಸಿದೆ. ಎಂತಹ ಮಂದಸ್ಮಿತೆ. ಏನು ದಂತಪಂಕ್ತಿ – ನಿಜ, ದಾಳಿಂಬೆಯೇ! ‘ನಿಮ್ಮನ್ನೇ ಬನ್ನಿ’ – ಮತ್ತದೇ ಕರೆ ಅವಳಿಂದ. ‘ನನ್ನನ್ನಾ’ ಎಂದು ಪಿಸುಗುತ್ತಲೇ ಅವಳ ಬಳಿ ಸರಿದೆ. ಬ್ಯಾಗ್ ಎತ್ತಿ ತೊಡೆಯ ಮೇಲಿಟ್ಟುಕೊಂಡಳು. ಮೊಲದ ಮರಿಯೋಪಾದಿಯಲ್ಲಿ ವಿರಮಿಸಿದೆ. ಆಕೆಯ ಮೈಗೆ ಒಂದಿಷ್ಟೂ ತಾಗದಂತೆ ಅರ್ಥಾತ್ ಒಂದು ಕೈಗೆ (ಆಕೆಯ ಬದಿಗಿರುವ) ಲಕ್ವ ಹೊಡೆದವನಂತೆ ಕೂತೆ. ಬೆವರು ಒರೆಸಿಕೊಂಡು ಫ್ರೆಸ್ ಮಾಡಿಕೊಂಡೆ. ಆಕೆಯ ಮಿರುಗುವ ಬಣ್ಣದೆದುರು ನನ್ನ ಬಣ್ಣದ ಗತಿ ನೋಡಿ ಕುಗ್ಗಿದೆ. ‘ಸಾರ್’ ಅಂತ ನಕ್ಕಳು. ‘ಏನು?’ ಎಂಬಂತೆ ದಿಟ್ಟಿಸಿದೆ. ಫಾರಿನ್ ಇಂಟಿಮೆಟ್ ಮೂಗಿಗೆ ಅಡರಿತು. ಸುಖವೆನಿಸಿತು. ನನ್ನತ್ತ ಸರಿದಳು. ಒಂದು ವಿಧದಲ್ಲಿ ಒರಗಿಯೇ ಕುಳಿತಳು. ‘ನೀವು ಡೈಲಾಗ್ ರೈಟರ್ ಸೋಮು ಅಲ್ವೆ?’ ಗೌರವ ತುಂಬಿ ತುಳುಕಿಸಿದಳು. ಕಣ್ಣುಗಳ ತುಂಬಾ ಅಷ್ಟೇ ಅಲ್ಲ ಮೈತುಂಬಾ ಗೋಣು ಆಡಿಸಿದೆ. ಒಂದಿಷ್ಟು ಗತ್ತು ಆಗಲೆ ಬಂದಿತ್ತು. ಚೌಕಾಸಿ ನಗೆ ನಕ್ಕೆ. ‘ನಿಮ್ಮ ಡೈಲಾಗ್ ಬೊಂಬಾಟ್ ಸಾ……. ನಾನಂತೂ ನಕ್ಕಿದ್ದೇ ನಕ್ಕಿದ್ದು. ನೀವು ಎಕ್ಸಲೆಂಟಾಗಿ ಬರಿತೀರಾ…’ ಹೊಗಳಿಕೆ ಹರಿಯಿತು. ಹೊಗಳಿಕೆ ಹೆಚ್ಚಾದರೂ ಹಿಂಸೆಯೆ. ನನ್ನ ಚಿತ್ರಗಳ ಪಟ್ಟಿ ಮಾಡಿದಳು. ಕ್ರಾಂತಿಕಾರಿ ಸಂಭಾಷಣೆ ಚಿತ್ರಗಳಲ್ಲಿ ತರೋದ್ರಲ್ಲಿ ನೀವೇ ಮೊದಲಿಗರು. ನಿಮ್ಮದೇ ಮೊದಲ ಸಾಹಸ ಸಾರ್……. ಸಾರ್, ನೀವು ದಲಿತರಾ ಸಾರ್?’ ಎಂದು ಅಚ್ಚರಿಯಿಂದ ಬಾಗಿ ಮುಖಕ್ಕೆ ಮುಖ ತಂದಳು. ಬಸ್ ಕುಲುಕುತ್ತಿದ್ದರಿಂದ ದೇಹದ ಹಲವು ಭಾಗಗಳು ಎಗ್ಗಿಲ್ಲದೆ ಮುತ್ತಾಟ ನಡೆಸಿದ್ದವು. ಅವಳೇ ಬಿಡುಬೀಸಾಗಿ ನಡೆದುಕೊಳ್ಳುವಾಗ ನಾನೇಕೆ ಮಡಿವಂತಿಕೆ ತೋರಲಿ ಎಂದುಕೊಂಡನಾದರೂ ನಾನಾಗಿ ಒಂದಿಂಚೂ ಮೈನಲ್ಲಾಗಲಿ ಮನದಲ್ಲಾಗಲಿ ಕದಲಲಿಲ್ಲ. ‘ಮಾಲಾಶ್ರೀ ಹೇಗಿದಾಳೆ ಸಾರ್? ನಿಜವಾಗೂ ಬ್ಯೂಟಿ ಇದಾಳಾ? ನಿಮ್ಮ ಹತ್ತಿರ ಮಾತಾಡ್ತಾಳಾ? ನೀವು ಎಷ್ಟು ದೂರ ಕೂತು ಮಾತಾಡ್ತಿರಾ? ವಿಷ್ಣುವರ್ಧನ್ ನಿಮ್ಮ ಬೆಸ್ಟ್ ಫ್ರೆಂಡಾ? ರವಿಚಂದ್ರನ್ ಸಿನಿಮಾಕ್ಕೆ ನೀವ್ಯಾಕೆ ಬರಿತಾ ಇಲ್ಲ ಸಾರ್?’ ಪ್ರಶ್ನೆಗಳು ಸಮಸ್ಯೆಗಳು ಸಲಹೆಗಳು ತನ್ನಾಸೆಗಳು ಎಲ್ಲವನ್ನೂ ಏಕಕಾಲದಲ್ಲಿ ನನ್ನ ಮುಂದೆ ತೆರೆದಿಡಲಾರಂಭಿಸಿದಳು. ನಾನೇನು ಸುಂದರಿಯರ ಮುಖ ನೋಡದವನೇನಲ್ಲವಾದರೂ ಅವಳು ಸಿನಿಮಾ ಜಗತ್ತಿನಿಂದ ಹೊರತಾದ ಅಪ್ಪಟ ಸುಂದರಿಯೆಂಬುದೇ ಅದೊಂದು ಬಗೆಯ ಆಕರ್ಷಣೆಯನ್ನು ಮೂಡಿಸಿತ್ತು. ಅವಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದೆ. ಕೆಲವಕ್ಕೆ ನಗೆಚೆಲ್ಲಿದೆ. ಬಾಲಿಶ ಎನ್ನಿಸಿದವುಗಳಿಗೆ ‘ಹೂಂ’ ಗುಟ್ಟಿದೆ.

‘ಸೋಮು ಸಾರ್, ನಿಮಗೆಷ್ಟು ಜಂಭಾನೋ ಅನ್ಕೊಂಡಿದ್ದೆ. ಯು ಆರ್ ಸೋ ಸಿಂಪಲ್’ ಅಂತ ಮೈಗೇ ಹತ್ತಿಕೊಂಡಳು.

‘ಸುಧಾರಾಣಿ ಯಾವ ಕ್ಯಾಸ್ಟು ಸಾ?’ ಮತ್ತೊಂದು ಪ್ರಶ್ನೆ ಏಸೆದಳು.

‘ಕ್ಯಾಸ್ಟ್‌ಗಿಂತ ನನಗೆ ಕ್ಯಾರೆಕ್ಟರ್ ಇಷ್ಟ’ ಅಂತ ಸಿಡುಕಿದೆ. ಸುಂದರಿಯ ಬಾಯಿಗೆ ಬೀಗಬಿತ್ತು. ಒಂದೆರಡು ನಿಮಿಷದ ಮೌನದಲ್ಲಿ ನನಗೇ ಬೇಸರವಾಯಿತು. ಸುಕೋಮಲೆ ಮುಗ್ಧೆಯ ಮನನೋಯಿಸಿದೆನಲ್ಲ. ಸಿನಿಮಾ ಎಂದರೆ ಕೆಲವರಿಗೆ ಒಂತರಾ ಹುಚ್ಚು. ಸಿನಿಮಾದವರಂತೂ ದೇವಲೋಕದವರೇ ಎಂಬ ಭಾವನೆ. ಈಗ ನಾನೇ ಆಕೆಯೊಡನೆ ಮಾತು ತೆಗೆದೆ. ‘ಎಕ್ಸ್ ಕ್ಯೂಸ್ ಮಿ. ತಮ್ಮ ಹೆಸರು?’ ಆಕೆ ಮಾತನಾಡುತ್ತಾಳೋ ಇಲ್ಲವೋ ಎಂದುಕೊಂಡಿದ್ದೆ. ಮತ್ತೆ ಅದೇ ನಗು. ಹೃದಯದ ಮೇಲೆ ಐಸ್ ಇಟ್ಟಂತಾಯಿತು. ‘ಪ್ರಿಯಂವದ, ನೀವು ಬೇಕಾದರೆ ಪ್ರಿಯ ಅನ್ನಿ, ಯಾಕೆಂದ್ರೆ ಯು ಆರ್ ಮೈ ಫೆವರೇಟ್ ರೈಟರ್‌’. ಪುನಃ ಮೊದಲಿನ ಸ್ಥಿತಿಗೆ ವಾಪಾಸಾದಳು. ‘ಭವ್ಯ ತುಂಬಾ ಬ್ಯೂಟಿನಾ ಸಾರ್?’ ಅದೇ ಕುತೂಹಲದ ಕಣ್ಣುಗಳು, ಮುಗ್ಧ ಮುಖ. ‘ಅವರಿಗಿಂತ ನೀವೇ ಬ್ಯೂಟಿಯಾಗಿದಿರಾ?’ ನನಗರಿವಿಲ್ಲದೇ ಅಂದುಬಿಟ್ಟೆ. ಆಕೆ ಮಂಜಿನ ಮಳೆಯಲ್ಲಿ ಮಿಂದವಳಂತಾದಳು. ‘ಸುಳ್ಳು ಬಿಡಿ ಅಪ್ಪಾ’ ಎಂದು ರಾಗವಾಗಿ ನಕ್ಕಳು. ಇದು ಯಾವ ರಾಗದ ಛಾಯೆ! ಯೋಚಿಸಿದೆ. ಹಂಸಧ್ವನಿಯದೆ ಗುಂಗು.

‘ನಿಮ್ಮದು ಸಹಜ ಸ್ನಿಗ್ಧ ಸೌಂದರ್ಯ, ಅಂದ್ಹಾಗೆ ನೀವೇನಾದ್ರೂ ಸಿನಿಮಾಕ್ಕೆ ಸೇರೋ ಆಸೆ?’ ಎನ್ನುತ್ತಾ ಹುಬ್ಬೇರಿಸಿ ಬೇಕೆಂದೇ ಅವಳತ್ತ ನೋಡಿದೆ. ಇನ್ನೇನು ಇಷ್ಟಗಲ ಅರಳಿಬಿಡುತ್ತಾಳೆ. ‘ಸಾರ್‌’ ಅಂತ ಮೇಲೆಯೇ ಬೀಳುತ್ತಾಳೆ. ಕಾಲೂ ಹಿಡಿದುಕೊಳ್ಳಬಹುದು. ‘ನನಗೊಂದು ಛಾನ್ಸ್ ಕೊಡ್ಸಿ ಫ್ಲೀಸ್’ ಅಂತ ಹಾಗಾಗಲೇ ಇಲ್ಲ. ಆಕೆ ಮೋರೆ ಓರೆಮಾಡಿ ಕೆಳದುಡಿ ದೊಡ್ಡದು ಮಾಡಿ ನಕಾರಾತ್ಮಕ ಪ್ರತಿಕ್ರಿಯೆ ಸೂಚಿಸಿದಳು. ‘ನಾನು ಎಂಪ್ಲಾಯ್ಡ್ ವುಮನ್ ಸಾರ್, ರಜಾದಲ್ಲಿ ನನ್ನ ಫ್ರೆಂಡ್ ಊರಿಗೆ ಹೋಗಿ ಬಂದೆ……’ ಅಂದವಳೆ ಕಣ್ಣು ಮುಚ್ಚಿ ಧ್ಯಾನಾಸಕ್ತಳಾದಳು. ‘ಎಂತಹ ಹೋಲಿ ಪ್ಲೇಸ್ ಸಾರ್ ಅದು……..’ ಎಂದು ಕಣ್ಣು ತೆರೆದ ಆಕೆ ವ್ಯಾನಿಟಿ ಬ್ಯಾಗ್ ಜಿಪ್ ಎಳೆದು ಪ್ರಸಾದ ತೆಗೆದು ‘ಹಿಡೀರಿ ಕೈನಾ’ ಎಂದಳು ಆಜ್ಞಾಪಿಸುವವಳಂತೆ. ಹೆಚ್ಚು ಹೇಳಿಸಿಕೊಳ್ಳದೆ ಕೈ ಒಡ್ಡಿದೆ. ಕೊಟ್ಟ ಪ್ರಸಾದವನ್ನು ಬಾಯಿಗೆ ಹಾಕಿ ಮೆಲುಕಾಡಿಸಿದೆ. ಮುಗ್ಗುಮುಗ್ಗುಲಾಗಿತ್ತು. ‘ನೂರು ಸಿನಿಮಾಕ್ಕೆ ಡೈಲಾಗ್ ಬರ್‍ದು ಸೆಂಚುರಿ ಬಾರ್ಸಿ’ ಎಂದು ಆಶೀರ್ವದಿಸುವ ಪೋಜ್ ಕೊಟ್ಟಳು. ನಗಿಸಿದಳು. ಒಳ್ಳೆ ಹುಡುಗಿ ಅನಿಸಿತು. ‘ನನಗೆ ಸಿನಿಮಾ ಸಿನಿಮಾದವರ ಬಗ್ಗೆ ಬರೀ ಕುತೂಹಲ ಅಷ್ಟ ಸಾ…… ಅದೊಂದು ತರಾ ಬಣ್ಣದ ಬಂಧನ ಅಲ್ವೆ…….? ನಾನ್ ನೋಡಿ ಫ್ರೀ ಬರ್ಡ್, ಮಾಲಾಶ್ರೀ ನನ್ನ ಹಾಗೆ ಲೈಫ್‌ನ ಇಂಚಿಂಚೂ ಎಂಜಾಯ್ ಮಾಡೋಕೆ ಸಾಧ್ಯನಾ?’ ಎಂದು ಗಟ್ಟಿಸಿ ಕೇಳಿದಳು. ನಗು ಬಂತು. ನಾನು ಎಂಜಾಯ್ ಅಂತ ತಿಳ್ಕೊಂಡಿರೋದಕ್ಕೂ ಅವಳ ಎಂಜಾಯ್ನ ಅರ್ಥಕ್ಕೂ ತಾಳೆಹಾಕದೆ ಸುಮ್ಮನೆ ನಗೆ ತೇಲಿಸಿದೆ. ನಿದ್ರೆ ಬರ್ತಾ ಇದೆ ಸಾ’ ಎಂದು ನನ್ನ ಭುಜಕ್ಕೆ ತಲೆ ಒರಗಿಸಿದಳು. ‘ಸಾರಿ’ ಅಂತ ಸಂಕೋಚಿಸಿ ಹಿಂದೆ ಸರಿದಳು. ‘ಪರ್ವಾಗಿಲ್ಲ…. ರಿಲ್ಯಾಕ್ಸ್’ ಎಂದೆ. ಅಂತಹ ಸುಂದರಿ ಪಕ್ಕದಲ್ಲಿದ್ದೂ ನಿದ್ದೆಗೆ ತುತ್ತಾದರೆ ಪ್ರಯಾಣ ಹಿತವೆನಿಸೀತೆ! ಯೋಚಿಸಿ ನಾನೇ ಈಗವಳನ್ನು ಮಾತಿಗೆಳೆದೆ.

‘ಅಂಬರೀಷ್ ಅವರ ಪಿಕ್ಚರ್‍ಗೆ ಡೈಲಾಗ್ ಬರಿತಿದೀನಿ. ಮಾಮೂಲಿ ರಿವೇಂಜ್ ಸಬ್ಜಕ್ಟ್ ಅಲ್ಲ. ಫ್ಯಾಮಿಲಿ ಸೆಂಟಿಮೆಂಟ್ಸ್ ಇದೆ. ಅದರ ಅಗ್ರಿಮೆಂಟಿಗೆಂದೇ ಇಲ್ಲಿಗೆ ಬಂದಿದ್ದೆ. ನಿರ್ಮಾಪಕ ಸಿಂಗ್ ಅವರದ್ದು ಇದೇ ಊರು’ ಎಂದೆ. ಹೂಂಗುಟ್ಟಿದಳು. ‘ಮೊನ್ನೆ ಲಕ್ಷ್ಮಿ ಸಿಕ್ಕಿದ್ದರು’ ಎಂದು ಆಕೆಯ ಹೊಸ ಗಂಡನ ಬಗ್ಗೆ ವಿವರಣೆ ಕೊಡುತ್ತಿದ್ದೆ. ಹೂಂಗುಟ್ಟುವುದೂ ನಿಂತಿತ್ತು. ಆಕೆ ಸೊಗಸಾದ ನಿದ್ರೆಗೆ ಪಕ್ಕಾಗಿದ್ದಳು. ವಿಪರೀತ ಸಂಕಟವಾಯಿತು. ತುಂಬಾ ಪ್ರಿಯಾಗಿ ನನ್ನ ಮೇಲೆಯೇ ಆಕೆ ತನ್ನ ಸಮಸ್ತ ದೇಹದ ಭಾರ ಬಿಟ್ಟಂತೆ ಭಾಸವಾಯಿತು. ಆಕೆಯ ತೋರಮೊಲೆಗಳು ತೋಳುಗಳಿಗೆ ತಾಕುವಾಗ ಮೈಯಲ್ಲಿ ವಿದ್ಯುತ್ ಸಂಚಾರ, ಬಸ್ ಕುಲುಕಿದಾಗಲೆಲ್ಲಾ ಹಲವು ಬಗೆಯ ಸುಖ. ಇದೇ ಸಮಯದಲ್ಲಿ ನನಗೂ ನಿದ್ರೆ ಕಾಡಹತ್ತಿದ್ದು ಪರಚಿಕೊಳ್ಳುವಷ್ಟು ರೇಗಿತು. ಎಚ್ಚರವಾಗಿದ್ದು ಒಂದಿಷ್ಟು ‘ಮಜಾ’ ತೆಗೆದುಕೊಳ್ಳೋಣವೆನಿಸಿತ್ತು. ಎಂಥವಳೋ ಏನೋ ಎಂದು ಮನ ಮಿಡುಕಿತು. ಎಂಥವಳಾದರೆ ನನಗೇನು ಬೆಂಗಳೂರಲ್ಲಿ. ಇಳಿದರೆ ನಾನಾರೋ……. ಅವಳಾರೋ? ಅಷ್ಟಕ್ಕೂ ಆಕೆ ನನ್ನ ಅಭಿಮಾನಿ, ಅಭಿಮಾನವೆಂದರೆ ಒಂತರಾ ಪ್ರೀತಿನೇ. ಸಿಕ್ಕರೆ ಸುಖ ಯಾರಿಗೆ ಬೇಡವೆಂದುಕೊಂಡು ನಾನು ಪ್ರೀಯಾದೆ. ಆದರೆ ದರಿದ್ರ ಕಣ್ಣುಗಳು ಎಳೆದುಕೊಂಡು ಬಂದವು. ಆಕಳಿಕೆಗಳ ದಾಳಿ.
* * *

ದಡಬಡನೆ ಸದ್ದು. ಬಸ್ಸಿನ ಕುಲುಕಾಟದಿಂದಾಗಿ ತಟ್ಟನೆ ಎಚ್ಚರವಾಯಿತು. ಆಕಳಿಸುತ್ತಾ ಎದ್ದು ಸರಿಯಾಗಿ ಕೂತೆ. ಕಿಟಕಿಯತ್ತ ನೋಡಿದೆ. ಸಂಗಮ್ ಟಾಕೀಸ್ ಕಂಡಿತು. ಬೆಂಗಳೂರು ಝಗಝಗಿಸುತ್ತಿದೆ. ಪಕ್ಕದಲ್ಲಿ ಸುಂದರಿಯಿಲ್ಲ! ‘ಎಲ್ಲಾ ಇವಳಾ! ಒಂದು ಮಾತೂ ಹೇಳದೆ ಇಳಿದು ಹೋಗಿದ್ದಾಳಲ್ಲ ……..! ಎನಿಸಿ ತೀವ್ರ ಬೇಸರವಾಯಿತು. ಛೇ…….. ಪ್ರಯಾಣಿಕರಲ್ಲವೆ ನಿಲ್ದಾಣ ಬಂದು ಇಳಿಯಲೇಬೇಕಲ್ಲವೆ. ಯಾವಾಗ ಎಲ್ಲಿ ಇಳಿದಳೋ! ಯಾವ ಊರಿನಲ್ಲಿ ಇಳಿದಳೋ? ಯಾವ ಕಛೇರಿ ನೌಕರಳೋ…. ಛೇ! ಒಂದೂ ಸರಿಯಾಗಿ ವಿಚಾರಿಸಲಿಲ್ಲವೆ. ಬರೀ ಅವಳನ್ನು ನೋಡಿಯೇ ಹೊಟ್ಟೆ ತುಂಬಿಸಿಕೊಂಡೆ. ಎಂತದೋ ತಹತಹ – ಕೈಗೆ ಬಂದ ತುತ್ತು ಬಾಯಿಗಿಲ್ಲವೆ ಎಂಬಂತೆ.

ಮುಖದ ಬೆವರೊರೆಸಿಕೊಳ್ಳತ್ತಾ ಕರವಸ್ತ್ರ ತೆಗೆದು ಗಾಳಿ ಹಾಕಿಕೊಳ್ಳುತ್ತಾ ಬಸ್ ಇಳಿದೆ. ಭಾರವಾದ ಪ್ಯಾಂಟ್‌ನ ಜೇಬು ಹಗುರಾಗಿತ್ತು. ತಟ್ಟನೆ ಕೈ ಇಳಿಬಿಟ್ಟೆ. ಏನಿದೆ?…….. ಖಾಲಿ! ಹತ್ತು ಸಾವಿರ ಮಾಯವಾಗಿತ್ತು. ಯಾರಿಗೆ ಹೇಳೋದು? ಕನ್ನೆಯ ಮೇಲೆ ಕೈಯಾಡಿಸಿಕೊಂಡೆ. ಬೆರಳಲ್ಲಿದ್ದ ವಜ್ರದ ಹರಳಿನ ಉಂಗುರವೂ ಮಾಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಗಳೆ
Next post ನಿಶೆ

ಸಣ್ಣ ಕತೆ

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…