ಮೋಟರ ಮಹಮ್ಮದ

ಮೋಟರ ಮಹಮ್ಮದ

ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ ಒಗ್ಗ ಬೇಕಾದರೂ ಹೇಗೆ? ಶಹರದ ಬೆಡಗಿನ ಜೀವನದ ಮುಂದೆ ಹಳ್ಳಿಯ ಸರಳ ಜೀವನ ಸೊಗಸೆನಿಸುವದಾದರೂ ಸಾಧ್ಯವಿದೆಯೆ? ಈ ಸಿನೆಮಾ ಮಂದಿರಗಳು, ವಿವಿಧ ವಿವಿಧ ತಿಂಡಿತಿನಿಸುಗಳನ್ನು ಒದಗಿಸಿಕೊಡುವ ಹೋಟಲುಗಳು, ಹೊಸ ಬಗೆಯ ಆಟಪಾಟಗಳು-ನಮಗೆ ಆ ಹಾಳು ಹಳ್ಳಿಗಳಲ್ಲಿ ಸಿಕ್ಕುವದಾದರೂ ಹೇಗೆ ? ಇರಲಿ. ಅಂದು ನಾನು ಹಿರಿಯರ ಹಟದ ಮಾತುಗಳನ್ನಾದರೂ ನಡಿಸಿ ನಮ್ಮ ಜಮೀನಿನ ಲಾವಣಿ ಹಣ ತರುವದಕ್ಕಾಗಿ ನಮ್ಮ ಹಳ್ಳಿಗೆ ಹೊರಡುವದನ್ನು ನಿಶ್ಚಯಿಸಿದೆ. ಈಗಿನ ಹೊಸ ಕಾಯಿದೆಗಳ ಜ್ಞಾನವಿಲ್ಲದ ಹಿಂದಿನ ಹಿರಿಯರಿಗೆ ಎಷ್ಟೋ ತೊಂದರೆಗಳು ಬಂದು ಮುತ್ತುವದರಲ್ಲಿ ಸಂದೇಹವಿಲ್ಲ. ಟೆನೆನ್ಸಿ ಕಾಯಿದೆ ಅನ್ವಯದ ಮೇರೆಗೆ ನಮ್ಮ ರೈತ ನಮಗೆ ದುಡ್ಡು ಕೊಡುವದನ್ನು ಬಿಟ್ಟು ನಿಷ್ಟುರವಾಗಿ ದುಡ್ಡು ಮುಳಗಿಸುವದಕ್ಕೆ ಹಟತೊಟ್ಟಿದ್ದ. ಇಂಥ ಪ್ರಸಂಗದಲ್ಲಿ ನಾನಾದರೂ ಮಾಡುವದೇನು? ಏನೋ ಮೋರೆ ಬದಲಾಗಿ ನಾಲ್ಕ ಸವಿಮಾತಿಗಾದರೂ ಅವನು ಮಣಿಯ ಬಹುದೆಂದು ಯೋಜನೆ ಮಾಡಿ ಅಂದು ನಮ್ಮೂರ ಮೋಟಾರ ಹತ್ತಿದೆ.

ನಾನು ಹಳ್ಳಿಯನ್ನು ಬಿಟ್ಟು ಹತ್ತು ವರುಷಗಳಾಗಿ ಹೋಗಿದ್ದವು! ಮಹಾತ್ಮಾಗಾಂಧಿಯವರು ಹಳ್ಳಿಗಳ ಉದ್ದಾರದ ಬಗ್ಗೆ ಬರೆದ ಅನೇಕ ಲೇಖನಗಳನ್ನು ಹರಿಜನದಲ್ಲಿ ಓದಿ, ಪಟ್ಟಣದಲ್ಲಿಯೇ ಕುಳಿತು, ಹರಟೆ ಹೊಡೆಯುವವರಲ್ಲಿ ನಾನೊಬ್ಬ. ಈ ಹತ್ತು ವರ್ಷಗಳ ಅವಧಿಯಲ್ಲಿ ಎಂದಾದರೂ ಹಳ್ಳಿಗೆ ಹೋದಲ್ಲಿ, ಯಾರ ಸಂಬಂಧವಿಲ್ಲದೆ ನಮ್ಮ ಮನೆಯಲ್ಲಿಯೇ ಇದ್ದು ತಿರುಗಿ ಬಂದು ಬಿಡುತ್ತಿದ್ದೆ. ಈಗಂತೂ ನಮ್ಮ ಮನೆಯವರೆಲ್ಲ ಪಟ್ಟಣಕ್ಕೆ ಬಂದಿದ್ದಾರೆ. ಕಾಲದಲ್ಲಿ ಬದಲಾವಣೆಯಾದಂತೆ ಹಳ್ಳಿಯಲ್ಲಿಯೂ ಒಂದು ಬಗೆಯ ಬದಲಾವಣೆಯು ಸಾಗಿಯೇ ಸಾಗಿರುತ್ತದೆ. ಆದರೆ ನಮಗೂ ಹಳ್ಳಿಗೂ ಸಂಬಂಧವಿಲ್ಲದಿರುವದರಿಂದ ನಾವು ಯೋಚನೆ ಮಾಡದೆ ನಮ್ಮ ಸುತ್ತು ಮತ್ತು ಮಾತ್ರ ನೋಡುವ ಅಭ್ಯಾಸವಿಟ್ಟುಕೊಂಡಿರುತ್ತೇವೆ. ಅಂದು ಮೋಟಾರು ತುಸು ಹೊತ್ತಾಗಿಯೇ ಹಳ್ಳಿಯನ್ನು ತಲುಪಿತು. ಅದು ಮುಚ್ಚಂಜೆಯ ಸಮಯ. ದನಕರಗಳ ಕಾಲಿನ ಧೂಳಿ ಮುಗಿಲ ಮುಟ್ಟಿತ್ತು. ದನಗಳ ಕೊರಳೊಳಗಿನ ಗಂಟೆಗಳ ನಾದ ವಾತಾವರಣದಲ್ಲಿ ಬೆರೆತು ಒಂದು ಬಗೆಯ ಆನಂದವನ್ನುಂಟು ಮಾಡುತ್ತಿತ್ತು. “ಬಾರೋ ಬಸವಣ್ಣ ಬಾ” ಎಂಬ ದನಗಾಯಿಗಳ ಜಾನಪದದ ಸಂಗೀತ ಅಲ್ಲಿ ಇಲ್ಲಿ ಕೇಳಿಬರುತ್ತಿತ್ತು. ಸಹಜ ಸೌಂದರ್ಯವು ಹಳ್ಳಿಯನ್ನು ಸುತ್ತಿಕೊಂಡಿತ್ತು. ನನಗೂ ಒಂದು ಬಗೆಯ ಆನಂದವಾಯಿತು.

ನಾನು ಸಣ್ಣವನಿರುವಾಗ ಈಗ ಮೋಟರು ನಿಂತುಕೊಳ್ಳುವ ಸ್ಥಳದಲ್ಲಿ ಏನೂ ಇರಲಿಲ್ಲ! ಈಗ ಮಾತ್ರ ಒಂದು ಚಹದ ಅಂಗಡಿ, ನಾಲ್ಕಾರು ಬೀಡಿ ಅಂಗಡಿಗಳು ಶೋಭಿಸುತ್ತವೆ. ಅಲ್ಲಿಯೇ ಜನರು ಕಿಕ್ಕಿರಿದು ತುಂಬಿರುತ್ತಾರೆ. ನಾನು ಮೋಟಾರಿನಿಂದ ಕೆಳಗಿಳಿದು ಕತ್ತಲಲ್ಲಿ ಹೇಗೆ ಊರಲ್ಲಿ ಹೋಗುವದೆಂದು ಯೋಚಿಸಹತ್ತಿದೆ. ಹತ್ತಿರವೇ ಇರುವ ಗುಡಿಸಲೊಂದರಲ್ಲಿ ಪೆಟ್ರೋಮ್ಯಾಕ್ಸ-ಬೆಳಕು ಹೊರಸೂಸಿ ಬರುತ್ತಿತ್ತು, ತುಸು ಮುಂದಕ್ಕೆ ಬಂದು ನೋಡಿದೆ. “ಚಹಾ ಕಾಫಿ ಫರಾಳದ ಅಂಗಡಿ” ಶುದ್ಧ ಕನ್ನಡ ಅಸ್ತವ್ಯಸ್ತ ಅಕ್ಷರಗಳ ಬೋರ್ಡು! ‘ಸಂತೋಷ ’ ಎಂದು ಒಳಹೊಕ್ಕೆ, ಎದುರಿಗೆ ಒಂದು ಸದ್ದಾ-ಮುದ್ದಾ ಕಪಾಟು ಇಟ್ಟಿದೆ. ಅದರ ಮೇಲೆ ಲಕ್ಷ್ಮೀ ಸರಸ್ವತಿಯ ಚಿತ್ರಗಳು ಕಂಗೊಳಿಸುತ್ತಿವೆ ! ರೂಢಿಯಲ್ಲಿ ಫರಾಳವೆಂದು ಹೇಳಿಕೊಳ್ಳುವ ವಸ್ತುಗಳೇನು ಕಾಣದಿದ್ದರೂ ಕಪಾಟಿನಲ್ಲಿ ತಿನ್ನುವ ಪದಾರ್ಥಗಳು ಕಣ್ಣಿಗೆ ಕಾಣಿಸುತ್ತಿದ್ದವು. ನಾಲ್ಕಾರು ಉದ್ದನ್ನ ಕಟ್ಟಿಗೆಯ ಫಳಿಗಳನ್ನು ಅಂತರವಾಗಿಟ್ಟು ಜನರಿಗೆ ಕೂಡುವದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ, ಅವುಗಳಿಗೆ ಬೇಕಾದರೆ ನಾವು “ಬೆಂಚು” ಎಂದೆನ್ನಬಹುದು! ನಾನು ಒಳಹೊಕ್ಕು ಸುತ್ತು ಮುತ್ತು ನೋಡಿ ಹಾಗೆಯೇ ನಿಂತುಕೊಂಡೆ. ನನಗೆ ಮಾತ್ರ ಅಲ್ಲಿ ಯಾರ ಗುರತು ಸಿಕ್ಕಲಿಲ್ಲ. ಆದರೆ ಅಲ್ಲಿಯೇ ಬೆಂಚಿನ ಮೇಲೆ ಕುಳಿತಿರುವ ಒಬ್ಬ ವ್ಯಕ್ತಿ “ಯಾಕರೀ……..ರಾಯರ ಯಾವಾಗ ಬಂದ್ರಿ” ಎಂದ. ನಾನು “ಈಗ ಮೋಟಾರಿಗೆ ಬಂದೆ.” ಎಂದು ನುಡಿದು ಅಲ್ಲಿಯೇ ಕುಳಿತುಕೊಂಡೆ. ನನ್ನನ್ನು ಮಾತನಾಡಿಸಿದ ವ್ಯಕ್ತಿಯ ಕಡೆಗೆ ದೃಷ್ಟಿ ತಿರುವಿದೆ. ಆದರೂ ಗುರುತು ಸಿಕ್ಕಲಿಲ್ಲ. ವ್ಯಕ್ತಿ ಯಾದರೋ ಮಹಮ್ಮದೀಯನೆಂಬದು ಸ್ಪಷ್ಟ ! ತಲೆಯ ಮೇಲೆ ಉದ್ದನ್ ಫರ್‌ ಕ್ಯಾಪು, ಮೈಯಲ್ಲಿ ಖಾಕಿ ಕೋಟು, ಕಾಲಲ್ಲಿ ಮಿರಿ ಮಿರಿ ಮಿಂಚುವ ಸ್ಲಿಪ್ಪರ್‍ಸ-ಆ ವ್ಯಕ್ತಿಗೆ ಒಂದು ಅಪೂರ್ವ ಕಳೆತಂದು ಕೊಟ್ಟಿವೆ, ನಿರಾಯಾಸವಾಗಿ ಸಿಗಾರೇಟ್ ಹೊಗೆ ಬಿಡುವ ಆ ವ್ಯಕ್ತಿ ಯಾರಿರಬಹುದು ? ತುಸು ತಲೆ ತುರಸಿಕೊಂಡು “ನೀನು….ನಮ್ಮ ಎಂದು ಪ್ರಾರಂಭಿಸಿದೆ.” ಅದಕ್ಕೆ ಅವನು ನಾನು ಮೋಟಾರ ಮಹಮ್ಮದ ಸಾಬರೀ…. ನಾವೂ ನೀವೂಕೂಡೇ ಸಾಲಿ ಕಲತೇವಿ, ಗುರತ ಸಿಗವಲ್ಲತ್ರೇ” ಎಂದ. “ಓಹೋ….ನೀನ….ಮಮ್ಮದಸಾಬ ಈಗ ಏನ ಮಾಡ ತೀಪಾ?” ಎಂದು ಕೇಳಿದೆ.

“ರಾಮಣ್ಣಾರ ನಮ್ಮ ಧಂದೆವು ಏನ್ರಿ…. ಹೀಗ” ಎಂದ. ನಾನು ಮಾತನಾಡದೆ ಅವನನ್ನು ಹುಳು ಹುಳು ನೋಡಿದೆ. ಸುತ್ತುಮುತ್ತಲಿನ ಒಕ್ಕಲಿಗರೂ ನನ್ನ ಕಡೆಗೆ ನೋಡಿದರು. ಮತ್ತೆ ಮಹಮ್ಮದಸಾಬನೇ ನುಡಿದ “ಮೋಟರ ಧಂದೇವ್ರಿ ನಮ್ಮದು. ಏನು ನಿಮ್ಮಾಂಗ ಕಲತೇವ್ರೇ ನಾವು?”

“ನೀ ಈಗ ಡ್ರಾಯಿವ್ಹರ ಆಗೀ ಏನು ?”

“ಡ್ರಾಯಿವ್ಹರನೂ ಆಗಿದ್ದೆ. ಈಗ ಮಾಲಕನೂ ಆಗೇನಿ” ಎಂದು ಒಮ್ಮೆ ನಕ್ಕು ಮತ್ತೆ ಸಿಗರೇಟು ಜಗ್ಗಿದ !

“ಅಲ್ಲಪಾ ಮಹಮ್ಮದಸಾಬಾ, ಎಷ್ಟ ಮೋಟಾರ ಅದಾವು ನಿನ್ನವು ?” ಎಂದು ಮತ್ತೆ ಮಾತಿಗೆ ಮೊದಲು ಮಾಡಿದೆ.

“ನನ್ನವು ಈಗ ನಾಲ್ಕು ಮೋಟರ ಅದಾ. ಇದ… ವರುಷ ಒಂದು ಹಿಟ್ಟಿನ ಗಿರಣೀನು ಚಾಲು ಮಾಡೇನಿ” ಎಂದ.

ಇಷ್ಟರಲ್ಲಿಯೇ ಹೊರಗೆ ಮತ್ತೆ ಮೋಟಾರ “ಫೌಂ…. ಫೌಂ” ಸಪ್ಪಳ! ಮಹಮ್ಮದನು ಎದ್ದು “ಕುಂತಗೋರಿ ರಾಮಣ್ಣಾರ. ರಾಮದುರ್ಗದ ಮೋಟರ ಬಂತು ನಾ ಈಗ ಬರತೇನಿ” ಅಂದು ಹೊರಗೆ ಹೋದ. ನನಗೆ ಮಹಮ್ಮದಸಾಬನ ಮಾತುಕೇಳಿ ಬಹಳ ಅಚ್ಚರಿಯನಿಸಿತು. ನಾನು ಮುಂಬಯಿ ವಿಶ್ವವಿದ್ಯಾಲಯದ ಪದವೀಧರನಾಗಿ, ಕಣ್ಣು ಕೆಡುವಂತೆ ಓದಿ ಪಡೆದದ್ದಾದರೂ ಏನು ? ಸ್ವಾತಂತ್ರವಂತೂ ನನಗಿಲ್ಲ. ಆದರೆ ಮಹಮ್ಮದ ಸಾಬ ಈಗ ನಾಲ್ಕು ಮೋಟರಿನ ಮಾಲಕ, ಸ್ವತಂತ್ರ ಜೀವಿ. ಎಂಥ ಬದಲಾವಣೆ ! ಹೀಗೆ ಏನನ್ನೋ ಯೋಚಿಸುತ್ತ ಎದುರಿನಲ್ಲಿ ನೋಡಿದೆ. ಚಹದ ಅಂಗಡಿಯ ಗೋಡೆಗೆ ಕೈಲಾಸನಾಥನ ಚಿತ್ರ ತೂಗು ಬಿದ್ದಿದೆ ! ಕೈಲಾಸ ಪರ್ವತದಲ್ಲಿ ಪಾರ್ವತಿಯನ್ನು ನಾಮಾಂಕದೊಳಿರಿಸಿ, ಯಾವ ತೊಂದರೆ ಇಲ್ಲದೆ ನಿರಾಯಾಸವಾಗಿ ತನ್ನ ಎಲ್ಲ ಆಯುಧಗಳನ್ನು ಯಾವಾಗಲೂ ಹಿಡಿದು ಕೊಂಡು ಕುಳಿತ ಶ್ರೀ ಶಂಕರನು-ಇಲ್ಲಿ ಈ ಚಹದ ಅಂಗಡಿಯಲ್ಲಿ ಹೊಗೆ ಕುಡಿದು ಬೇಸತ್ತಿರಬಹುದೇ ? ಎಂದು ಏನೋ ವಿಚಾರಿಸುತ್ತಿರುವಾಗಲೆ “ರಾಯರ, ಚಹಾ ಕಾಸೇನಿ ಸಿಂಗಲ್ಲ ಕೊಡಲೋ ಡಬ್ಬಲ್ ಬೇಕೋ” ಎಂಬ ಧ್ವನಿ! ಅಂಗಡಿಯ ಮಾಲಕ ನನ್ನೆದುರು ನಿಂತಿದ್ದ. ತನ್ನ ಕರವಸೂಲಿ ಬಿಟ್ಟಾನೆ? “ಸಿಂಗಲ್ ಸಾಕು. ಸ್ವಚ್ಛ ಕಪ್ಪು ಬಸಿ ತೊಳೆದು ಕೊಡು” ಎಂದೆ. ಅದಕ್ಕೆ ಅವಾ “ನಮ್ಮೂರ ಚಹಾನರಽ ಕುಡದು ನೋಡ್ರಿ ಮುಂಬಯಿಯಾಗ ಸಿಗಾಕಿಲ್ಲ ಇಂಥಾದು” ಎಂದ. ನಾನು ಮನದಲ್ಲಿಯೇ ಮುಂಬಯಿಯಾಗ ಇಂಥಾ ಚಹಾ ಸಿಕ್ಕಿತಾದರೂ ಹೇಗೆ ಎಂದು ಯೋಚಿಸಿದೆ. ಅವನು ಕೊಟ್ಟ ಚಹ ಹಾಗೂ ಹೀಗೂ ಮಾಡಿ ಕುಡಿದೆ. ನನ್ನ ಚಹಾಪಾರ್ಟಿ ಮುಗಿಯುವದರಲ್ಲಿಯೇ ಮಹಮ್ಮದಸಾಬ ಬಂದು “ಊರಾಗ ಹೊಗೋಣ ಬರ್ರೀ… ರಾಮಣ್ಣ” ಅಂದ.

ಪೆಟ್ರೋಮ್ಯಾಕ್ಸ ಹೊತ್ತುಕೊಂಡು ಒಂದು ಹುಡುಗ ಮುಂದೆ ಮುಂದೆ ನಡೆದ, ನಾನು ಮಹಮ್ಮದಸಾಬನ ವೈಭವಕ್ಕೆ ಬೆರಗಾದೆ! ನಾನು ಹಾಗೂ ಮಹಮ್ಮದಸಾಬ ಇನ್ನೂ ಕೆಲವರು ಊರಲ್ಲಿ ಹೊರಟೆವು. ನಾನು ಹೋಗಬೇಕಾದ ಮನೆ ಸಮೀಪಿಸಲು ಮುಹಮ್ಮದ “ನಾಳೆ ಭೇಟ್ಟಿ ಆಕ್ತೇನಿ ರಾಯರ ಈ ಊರಾಗ ನಾಕ ದಿವಸ ಇದ್ದ ಹೋಗ್ರಿ. ನಮಸ್ಕಾರ” ಎಂದ.

“ನನ್ನ ಹೊಲದ ಲಾವಣಿ ಕೆಲಸ ಮುಗಿತಂದ್ರ ಹೋಗತೇನಿ” ಎಂದು ನಾನು ಮಾರುನುಡಿದೆ.

“ಯಾರ ಮಾಡ್ಯಾರೀ ನಿಮ್ಮ ಹೊಲ ?”

“ಹಿತ್ತಲಮನಿ ತಿಪ್ಪ ಮಾಡ್ಯಾನ” ಎಂದು ನುಡಿದು ಮನೆಯ ಕಡೆಗೆ ಹೊರಟೆ “ನಾಳೆ ಎಲ್ಲಾ ವಿಚಾರ ಮಾಡೋಣ್ರಿ” ಎಂದು ಮಹಮ್ಮದ ಮುಂದೆ ಸಾಗಿದ.

ನಾನು ಮನೆ ಸೇರಿದಾಗ ಸಾಕಷ್ಟು ರಾತ್ರಿಯಾಗಿತ್ತು. ಮನೆಯವರೆಲ್ಲ ನನ್ನನ್ನು ಆದರದಿಂದ ಬರಮಾಡಿಕೊಂಡರು. ಊಟವೂ ಮುಗಿಯಿತು. ಅಂದಿನ ರಾತ್ರಿ ಊಟ ಮುಗಿದಮೇಲೆ ಮಾತಿಗೆ ಮಾತು ಹೊರಟು ಅದು ಮಹಮ್ಮದಸಾಬನ ಉದ್ಯೋಗದ ಕಡೆಗೆ ಹೊರಳಿತು. ನಾನು ಅತಿಥಿಯಾದ ಮನೆಯ ಯಜಮಾನರನ್ನು ಕುತೂಹಲದಿಂದ ಕೇಳಿದೆ. “ಮಹಮ್ಮದ ಸಾಬನ ತಾಯಿ ಇನ್ನೂ ಇದ್ದಾಳೇನು?”

“ಛೇ… ಪಾಪ ! ಅವಳು ಸತ್ತು ಏಳು ವರ್ಷಾಯಿತು” ಎಂದು ನುಡಿದು ತಮ್ಮ ಎಲಿ ಅಡಕೆ ಚಂಚಿ ತರಲು ಒಳಗೆ ಹೋದರು. ನಾನು ಆಕಾಶದ ಕಡೆಗೆ ನೋಡುತ್ತ ಕಟ್ಟೆಯಮೇಲೆ ಕುಳಿತುಕೊಂಡೆ. ಶರತ್ಕಾಲದ ಆಕಾಶ ಚುಕ್ಕೆಗಳಿಂದ ಶೋಭಿಸುತ್ತಿತ್ತು. ಬೆಳದಿಂಗಳು ಎಲ್ಲೆಲ್ಲಿಯೂ ಹರಡಿತ್ತು. ಮಂದವಾಗಿ ಗಾಳಿ ಬೀಸುತ್ತಿತ್ತು. ಹಳ್ಳಿಯ ಹುಡುಗರು ಕೇಕೆ ಹಾಕುತ್ತ ಅಂಗಣದಲ್ಲಿ ತಿಳ್ಳಿ ಆಟವಾಡುತ್ತಿದ್ದರು. ಹೆಣ್ಣು ಮಕ್ಕಳು ಹಾಡುತ್ತ ಕಟ್ಟೆಗಳ ಮೇಲೆ ಕುಳಿತಿದ್ದರು. ಎಲ್ಲವೂ ಸಮಾಧಾನ; ಸುಖ ! ನನ್ನ ಮನಸ್ಸು ಹತ್ತು ವರುಷಗಳ ಹಿಂದೆ ಹಾರಿ ಹೋಯಿತು. ಮಹಮ್ಮದನ ಸಂಗಡ ನಾನೂ ಅಂಗಣದಲ್ಲಿ ತಿಳ್ಳಿ ಆಟವಾಡಿದ ಸವಿನೆನಪು ಒಂದು ಕ್ಷಣ ಕಾಲ ಹರ್ಷವನ್ನೀಯಿತು! ನಾನೂ ಈಗ ಈ ಮಕ್ಕಳ ಹಾಗೆ ಆಡಲಾರೆನೆಂಬ ನೋವು ಮನದಲ್ಲಿ ಮೂಡಿತು, ಕಾಲಝುರಿಯು ನನ್ನನ್ನು ಬಹುದೂರ ಬಾಲ್ಯದಿಂದ ಸಾಗಿಸಿಕೊಂಡು ಹೋಗಿದೆಯೆಂಬ ಅರಿವು ಆಗ ನನಗೆ ಉಂಟಾಯಿತು. ಮಹಮ್ಮದನು ಮೊದಲಿನಿಂದಲೂ ಆಟಗಾರ ಆದರೆ ತುಂಟ ಅವನು ಯಾವಾಗಲು ಓಣಿಯ ಹುಡುಗರ ನಾಯಕನೇ ಆಗಿರುತ್ತಿದ್ದ ತಂದೆ ತೀರಿಕೊಡಂದಿನಿಂದ, ಅವನಿಗೇನು ಅವನ ತಾಯಿ ಚಾಂದಬಿ ಕೊರತೆ ಮಾಡಿರಲಿಲ್ಲ. ತಾನು ಕೂಲಿಮಾಡಿಯಾದರೂ ಮಹಮ್ಮದನನ್ನು ಸುಖವಾಗಿಟ್ಟಿದ್ದಳು. ತಮ್ಮದೇ ಆದ ಚಿಕ್ಕಮನೆಯಲ್ಲಿ ತಾಯಿ ಮಗ ಸುಖವಾಗಿದ್ದರು. ಮಹಮ್ಮದ ನನ್ನ ಜೊತೆಗೆ ಸಾಲಿಗೆ ಬರುತ್ತಿದ್ದ. ನನ್ನ ಸಹಪಾಠಿ ಎಂದು ನನಗೆ ಈಗಲೂ ಅವನ ಬಗ್ಗೆ ಹೆಮ್ಮೆ ಅನಿಸುತ್ತದೆ. ಹುಡುಗ ಸಾಲೆಯಲ್ಲಿ ಉಡಾಳನೆಂಬ ಬಿರದು ಪಡೆದುಕೊಂಡನೇ ಹೊರತು-ಶಿಕ್ಷಣವನ್ನಲ್ಲ! ಅಂಕಿ ಮಗ್ಗಿಗಳನ್ನೂ ಗಟ್ಟಿ ಮಾಡಿಕೊಂಡು ಬಾರದ್ದಕ್ಕೆ ಮೊಣಕೈ ಮುರಿಯುವಂತೆ ಹೊಡೆಯಿಸಿಕೊಳ್ಳುತ್ತಿದ್ದ. ಸಾಲೆಯಲ್ಲಿಯ ಜಾಣ ವಿದ್ಯಾರ್ಥಿಗಳ ಜೊತೆಗೆ ನ್ಯಾಯತೆಗೆದು ಅವರನ್ನು ಗುದ್ದಿ ಅಳಿಸುತ್ತಿದ್ದ. ಮಹಮ್ಮದನ ಹಾವಳಿ ಹೀಗೆ ಸಾಗಿಯೇ ಇರುತ್ತಿತ್ತು. ಕೊನೆಗೆ ನಾಲ್ಕನೇ ಈಯತ್ತೆಗೆ ಬಂದು ಮುಟ್ಟಿದ. ಶಾಲೆಯ ಜೀವನ ಅವನಿಗೆ ಒಗ್ಗಲಿಲ್ಲೇನೋ ? ಶಾಲೆಬಿಟ್ಟ !

ಹುಡುಗ ನೋಡುವದಕ್ಕೆ ಸುಂದರ, ನೀಟಾದ ಮಗು, ದುಂಡನ್ನ ಮೋರೆ, ಬಣ್ಣವು ನಸುಗೆಂಪು. ಈಗ ಚನ್ನಾಗಿ ಕ್ರಾಪ್ ಬಿಟ್ಟು, ಹಿಕ್ಕಿಕೊಂಡು ಓಣಿ ಓಣಿ “ತನನ…. ನನನ” ಹಾಡುತ್ತ ತಿರುಗುವದಕ್ಕೆ ಸುರುವು ಮಾಡಿದ ಮಹಮ್ಮದನು ಸಾಲೆಗೆ ಬರುವದನ್ನು ಬಿಟ್ಟ ಬಳಿಕ ನಾವೆಲ್ಲರೂ ಅವನನ್ನು ನೋಡಿ ನಗುತ್ತಿದ್ದೆವು ! ಅವನ ಸಂಗಡ ಆಟವಾಡುವದನ್ನೂ ಬಿಟ್ಟೆವು. ಮನೆಯಲ್ಲಿಯ ಹಿರಿಯರು ನಾವು ಹಾಗೆ ಮಾಡುವದಕ್ಕೆ ಅವಕಾಶಕೊಡುತ್ತಿರಲಿಲ್ಲ. ನಾನೂ ಜಾಣ ವಿದ್ಯಾರ್ಥಿಗಳಲ್ಲೊಬ್ಬನಾಗಿ ಮಹಮ್ಮದನನ್ನು ಹಳಿಯುವವನಾಗಿದ್ದೆ.

ಆ ವರುಷ ನಮ್ಮೂರಲ್ಲಿ ರುಕ್ಮಿಣಿ ಸ್ವಯಂವರ ನಾಟಕವಾಗತಕ್ಕದ್ದಿತ್ತು. ರುಕ್ಷ್ಮಿಣಿಯ ಪಾತ್ರವನ್ನು ಮಹಮ್ಮದನೆ ತೆಗೆದುಕೊಂಡಿದ್ದ. ಪ್ರತಿ ದಿವಸ ತಾಲೀಮು ನಡೆಯುತ್ತಿತ್ತು. ಮಹಮ್ಮದನ ಕಂಠವಾದರೂ ಮಧುರ. ಮಹಮ್ಮದನಲ್ಲಿ ಈಗ ಬಹಳ ಬದಲಾವಣೆ ಒಡೆದು ಕಾಣುತ್ತಿತ್ತು. ತಲೆಯ ಮೇಲಿನ ಕೂದಲನ್ನು ಇನ್ನೂ ಉದ್ದವಾಗಿ ಬಿಟ್ಟ. ಮೇಲಾಗಿ ನಿರ್ಭೀತನಾಗಿ ಓಣಿಯಲ್ಲಿ ಬೀಡಿ ಸೇದುತ್ತ ತಿರುಗಾಡಹತ್ತಿದ್ದ. ನಮಗೆಲ್ಲ ಮಹಮ್ಮದನನ್ನು ಮಾತನಾಡಿಸುವದಕ್ಕೆ ಅಂಜಿಕೆ. ಯಾಕಂದರೆ ಮನೆಯಲ್ಲಿ ಹಿರಿಯರು, ಶಾಲೆಯಲ್ಲಿ ಗುರುಗಳೂ ನಮ್ಮನ್ನು ಹೊಡೆಯುತ್ತಿದ್ದರು–ನಾವೂ ಉಡಾಳರಾದೇವೆಂಬ ಅಂಜಿಕೆಯಿಂದ, ಚಾಂದಬೀ ಮಾತ್ರ ಮಗನ ಮಂಗತನಕ್ಕೆ ಬಹಳೇ ಮರಗುತ್ತಿದ್ದಳು. ಆದರೆ ಅವನಿಗೆ ಊಟ ತಿನಿಸುಗಳಿಗೇನೂ ಕೊರತೆ ಮಾಡಲಿಲ್ಲ.

ರುಕ್ಷ್ಮಿಣಿ ಸ್ವಯಂವರ ನಾಟಕವಾಡುವ ದಿನವದು. ಊರಲ್ಲೆಲ್ಲ ಸಂಭ್ರಮ. ಹಿರಿಯರು, ಹುಡುಗರು, ಎಲ್ಲರೂ ಅಟ್ಟದ ಹತ್ತಿರವೇ ಸುಳಿದಾಡುತಿದ್ದರು. ನನಗೆ ಮಾತ್ರ ಹಾಗೆ ಮಾಡುವದಕ್ಕೆ ನಮ್ಮ ಮನೆಯವರು ಅವಕಾಶ ಕೊಡಲಿಲ್ಲ. ಏಕೆಂದರೆ ಶಾಲೆ ತಪ್ಪಿಸಿ ಅಡ್ಡಹಾದಿ ಹಿಡಿಯಬಾರದೆಂಬ ಇಚ್ಛೆಯಿಂದ ಕಠೋರವಾದ ಕಾನೂನು ಮಾಡಿ ನನ್ನನ್ನು ಅಂದು ಶಾಲೆಗೆ ಅಡ್ಡಿಯೇ ಬಿಟ್ಟರು. ಅಂದು ಮಹಮ್ಮದ ರುಕ್ಕಿಣಿಯ ರೂಪದಲ್ಲಿ ಕಂಡುಕೊಳ್ಳುವವ, ಹೇಗೆ ನಾಟಕವಾಡುತ್ತಾನೋ ನೋಡಬೇಕೆಂದು ನಾವೆಲ್ಲರೂ ಕೂತೂಹಲಿಗಳಾಗಿದ್ದೆವು. ರಾತ್ರಿಯಾಯಿತು; ನಾಟಕವೂ ಪ್ರಾರಂಭ ವಾಯಿತು. ರುಕ್ಮಿಣಿಯ ಪ್ರವೇಶವಾದೊಡನೆ ಎಲ್ಲರೂ ಚಪ್ಪಾಳೆ ಬಾರಿಸಿದರು. ಅಂದಿನ ನಾಟಕದಲ್ಲಿ ರುಕ್ಷ್ಮಿಣಿಯ ಪಾತ್ರವಹಿಸಿದ ಮಹಮ್ಮದ ಅತ್ಯುತ್ತಮ ವಾಗಿಯೇ ಅಭಿನಯಿಸಿ ಊರ ಜನರಿಂದ “ವಾಹವ್ವಾ” ಅನಿಸಿಕೊಂಡ! ನಮ್ಮ ಶಿಕ್ಷಕರಾದರೂ ನಾಟಕಕ್ಕೆ ಬಂದಿದ್ದರು. ಮುಖ್ಯಾಧ್ಯಾಪಕರು “ಮಹಮ್ಮದ ಬಹಳ ಜಾಣ ಹುಡುಗ, ಆದರ ಉಡಾಳ” ಎಂದು ಶರಾ ಹಾಕಿದರು. ಮತ್ತೊಬ್ಬರು “ಹೌದು ಹೌದು” ಎಂದರು ಊರ ಹೆಂಗಳೆಯರೆಲ್ಲ ಮಹಮ್ಮದನನ್ನು ಹೊಗಳುವವರೆ. ಚಾಂದಬಿ ರುಕ್ಮಿಣಿಯ ಪಾತ್ರದಲ್ಲಿ ತನ್ನ ಮಗನನ್ನು ಕಂಡು ಸಂತೋಷ ಪಟ್ಟಳು. ತನಗೆ ಹೆಣ್ಣು ಮಗುವಿಲ್ಲಾ ಎಂಬ ಭಾವ ಮೂಡಿರಬೇಕು ಪಾಪ ಅವಳಿಗೆ. ಮಹಮ್ಮದ ಊರ ಜನರ ಮನಸ್ಸನ್ನೆಲ್ಲ ಸೆಳೆದುಕೊಂಡ.
* * *

ನಾನು ಹಿಂದಿನ ದಿನಗಳ ರಸ ನಿಮಿಷಗಳನ್ನು ನೆನೆಯಿಸಿಕೊಳ್ಳುತ್ತ ಕುಳಿತಾಗ ರಾಮರಾಯರು ತಮ್ಮ ಎಲಿ ಅಡಕಿ ಸಾಮಗ್ರಿ ತೆಗೆದುಕೊಂಡು ಬಂದು “ಮತ್ತೇನು ಎಲ್ಲಾ ಅರಾಮ ಧಾರವಾಡದಾಗ” ಎಂದು ನನ್ನ ವಿಚಾರದೆಳೆಯನ್ನು ಹರಿದರು!

“ಹೂಂ ನೆಟ್ಟಗ ನಡದದ. ಹಳ್ಳಿನಽ ನೆಟ್ಟಗ ಅಂತಾರ ಹಿರೇರು” ಎಂದು ಆಕಳಿಸಿದೆ.

“ಹೌದ…. ಹಳ್ಳಿ ನೆಟ್ಟಗ ಖರೇ. ಆದರ ಈಗ ರೈತರು ಮೊದಲಿನ್ಹಾಂಗ ದುಡಿಯುದುಲ್ಲಾ” ಎಂದು ಹೇಳಿದರು.

“ನಮ್ಮ ರೈತಾ ಲಾವಣಿ ದುಡ್ಡು ಕೊಟ್ಟಿಲ್ಲ” ಎಂದು ನಾನು ಹೇಳಿದೆ. ಅದಕ್ಕೆ ರಾಯರು “ನಿಮ್ಮ ರೈತ ಯಾರ?…….. ಹ… ಹ. ಅವನ ಹಿತ್ತಲ ಮನಿ ತಿಪ್ಪ!” ಎಂದು ನಕ್ಕರು. ಅವರ ನಗುವಿನಲ್ಲಿಯೂ ಒಂದು ಅರ್ಥವಿತ್ತು.

ನಾನು ಆ ಮಾತು ಅಲ್ಲಿಯೇ ಮುಗಿಸಿ ಮತ್ತೆ ಮಹಮ್ಮದಸಾಬನ ಮಾತು ಎತ್ತಿದೆ. “ಮಹಮ್ಮದಸಾಬ ನಾಲ್ಕು ಮೋಟರು ಇಟ್ಟಾನಂತಲ್ಲಾ” ಎಂದೆ. ಅದಕ್ಕೆ ರಾಮರಾಯರು ಒಮ್ಮೆ ಎದ್ದು ತಂಬಾಕು ಉಗಳಿ “ಎಲ್ಲಾ ಹೇಳತೇನಿ ಕೇಳ್ರಿ” ಎಂದರು. ನನಗೂ ಬಹಳ ಹರ್ಷವಾಯಿತು. ರಾಯರು ಸುರುವು ಮಾಡಿದರು. “ಈ ಮಹಮ್ಮದ ಬಹಳ ಉಡಾಳ ಹುಡುಗ, ಇವನ ತಾಯಿ ಚಾಂದಬಿ ಇವನ ಕಾಲಾಗ ಗೋಳಾಡಿ ಗೋಳಾಡಿ ಸತ್ತು ಹೋದಳು. ಆ ಮೇಲೆ ಇದ್ದ ಒಂದು ಮನಿ ಮಾರಿ ಮೋಟಾರ ಕೊಂಡು ತಂದ ಮೋಟಾರ ಧಂದೆ ಕೇಳೆಬೇಕ ? ದಿನಾ ಬೆಳಗಾದ್ರ ರೊಕ್ಕ ಬರಲಿಕ್ಕೆ ಹತ್ತಿತು. ನಾಲ್ಕು ವರುಷ ಅನ್ನೋದರಾಗ ಮಹಮ್ಮದ ನಾಲ್ಕು ಮೋಟರೇ ಖರೀದಿ ಮಾಡಿದ ! ಈ ವರ್ಷ ಒಂದು ಗಿರಣೀನೂ ಹಾಕ್ಯಾನ” ಎಂದು ಮತ್ತೆ ತಂಬಾಕು ಹಾಕಿಕೊಂಡರು.

“ಈಗ ಯಾರ ಮನ್ಯಾಗ ಇರತಾನ?” ಎಂದೆ.

“ಅದನ್ನು ಹೇಳತೇನಿ ಕೇಳ್ರಿ. ಹೋದ ವರ್ಷ ಒಂದು ದೊಡ್ಡ ಮನೀನ ಖರೀದಿ ಹಿಡಿದಾನ-ನಮ್ಮ ಗೌಡರ ಮನಿ ಬಲಗಡೆ ಮನಿ!”

“ಆ ದೊಡ್ಡ ಮನಿ ಮಹಮ್ಮದ ಖರೀದಿ ಹಿಡದಾನ??” ಎಂದು ನಾನು ಬೆರಗಾಗಿ ಕೇಳಿದೆ. ಮತ್ತೆ ರಾಯರು “ಲಕ್ಷ್ಮಿ ಬರೋ ಕಾಲ, ಇರಲಿ ಈಗ ನಮ್ಮ ಮನ್ಯಾಗ ಚಿಮಣೀ ಯಣ್ಣಿಲ್ಲ-ಆದರ ಮಮ್ಮದನ ಮನ್ಯಾಗ ದಿನಾ ಪೆಟ್ರೋಮ್ಯಾಕ್ಷ ಉರಿತದ ತಿಳಿತ?”

“ಹಂಗಾರ ಮಹಮ್ಮದ ಈಗ ಸಾವುಕಾರ ಅನ್ರಿ!”

“ಸಾವುಕಾರನೂ ಆಗ್ಯಾನ, ಊರಾಗ ದೊಡ್ಡ ಮನಸ್ಯಾನೂ ಆಗ್ಯಾನ. ಹುಡುಗ ಒಳ್ಳೆವ, ನಮ್ಮ ಮಾತಂತೂ ಎಂದೂ ಮೀರೂದುಲ್ಲ” ಎಂದು ಅಭಿಪ್ರಾಯ ಪಟ್ಟರು.

ನಾನು ಮತ್ತೆ “ಲಗ್ನಾ ಮಾಡಿಕೊಂಡಾನೇನು ಸಾಬಾ ?” ಎಂದೆ.

“ಓಹೋ ತಿರುಗಿ ನಾಲ್ಕು ಮಕ್ಕಳಾಗ್ಯಾವ. ಎಲ್ಲಾ ಛಲೋ ನಡದದ. ಈ ಹುಡುಗಾ ಇಷ್ಟ ಮುಂದ ಬಂದಾನು ಅಂತ ಯಾರಿಗೆ ತಿಳಿದಿತ್ತು” ಎಂದು ನುಡಿದು ಎದ್ದರು. ರಾತ್ರಿ ಈಗಾಗಳೆ ಬಹಳವಾಗಿತ್ತು. ನಾನೂ ದಣಿದಿದ್ದೆ; ಮಲಗಿಕೊಂಡೆ, ರಾತ್ರಿಯಲ್ಲ ಸುಖವಾಗಿ ನಿದ್ದೆಗೈದೆ!

ಮರುದಿನ ನಸುಕಿನಲ್ಲಿಯೇ ಎದ್ದು ಮೋರೆತೊಳೆದುಕೊಂಡು ನಮ್ಮ ರೈತನ ಮನೆಗೆ ಹೋದೆ. ತಿಪ್ಪಣ್ಣ ತನ್ನ ಎತ್ತಿನ ಮೈ ತಿಕ್ಕುತ್ತ ನಿಂತಿದ್ದ. ನನ್ನನ್ನು ಕಂಡು “ಏನರೀ ರಾಯರ ಕುಂದರಿ” ಎಂದು ಕಂಬಳಿ ಹಾಸಿದ. ತಿಪ್ಪಣ್ಣ ನನ್ನ ಮೋರೆ ನೋಡಿ “ನೀವು ನಮ್ಮ ರಂಗಾಚಾರ ಮಕ್ಕಳಲ್ಲ?” ಎಂದು ಪ್ರಶ್ನಿಸಿದ.

ನಾನು ಅದಕ್ಕೆ “ಹೌದು-ತಿಪ್ಪಣ್ಣ, ನಮ್ಮ ಲಾವಣಿ ಹಣ ಇಷ್ಟ ಕೊಟ್ಟು ಬಿಡಪಾ” ಎಂದೆ. ತಿಪ್ಪಣ್ಣ ತುಸು ಮೋರೆ ಗಂಟಿಕ್ಕಿ ಈ ವರಸಾ ಕರಿಗಾಲ, ನನ್ನ ಕಡಿಂದ ಏನೂ ಕೊಡಾಕ ಆಗುದುಲ್ಲರಿ” ಎಂದು ಕಣ್ಣು ಕೆಂಪಗೆ ಮಾಡಿದ! ನನಗೂ ಸಿಟ್ಟು ಬಂದಿತು “ನಾನು ಏನಾದರೂ ಬಿಡೂದುಲ್ಲಾ” ಎಂದು ಗಟ್ಟಿಯಾಗಿಯೇ ಹೇಳಿದೆ. ತಿಪ್ಪಣ್ಣ ಏನು ತಿಳಿದು ಕೊಂಡನೋ ಒಮ್ಮಿಂದೊಮ್ಮೆಲೇ, “ರಾಯರ ಈ ಬಡಿದಾಟ ಬ್ಯಾಡ, ನಮ್ಮ ನಮ್ಮದಸಾಬರ ಕಡೇ ನಡಿರಿ. ಅವರು ಹೇಳಿದ್ಹಾಂಗ ಮಾಡೋಣ” ಎಂದು ಅತ್ತ ಕಡೆ ಹೊರಟೇಬಿಟ್ಟ. ಮಹಮ್ಮದಸಾಬ ಇಷ್ಟು ಪ್ರತಿಷ್ಠಿತ ಮನುಷ್ಯನಾದದ್ದು ಕೇಳಿ ನನಗೆ ಅವನ ಬಗ್ಗೆ ಇನ್ನೂ ಆದರ ಹೆಚ್ಚಾಯಿತು. ನಾನೂ ಮಹಮ್ಮದಸಾಬನ ಮನೆಗೆ ಹೊರಟೆ. ನಾನೂ ಬಾಗಿಲಿಗೆ ಬರುತ್ತಲೇ ಮಹಮ್ಮದಸಾಬಾ ಬಹಳ ಆದರದಿಂದ ನನ್ನನ್ನು ಬರಮಾಡಿಕೊಂಡ. ಎಲ್ಲರೂ ಕುಳಿತುಕೊಂಡೆವು. ನಮ್ಮ ರೈತ ತನ್ನ ದುಃಖವನ್ನೆಲ್ಲ ತೋಡಿ ಕೊಂಡ. ನಾನೂ ಎಲ್ಲವನ್ನೂ ಹೇಳಿದೆ. ಮಹಮ್ಮದಸಾಬ ಏನೋ ಯೋಚನೆ ಮಾಡಿ ತಿಪ್ಪಣ್ಣನಿಗೆ “ಎಷ್ಟು ಲಾವಣಿ ಹಣ?” ಎಂದ.

“ನಾಕನೂರು ರೂಪಾಯಿ. ಹ್ಯಾಂಗಕೊಡೋದು ನೀವ್ಽ ಹೇಳ್ರಿ” ಎಂದ.

“ತಿಪ್ಪಣ್ಣ, ನಾ ಖರೇ ಮಾತ ಹೇಳತೇನಿ, ರಾಯರು ಒಳ್ಳೆ ಮನುಷರು, ನೀ ಆವರಿಗೆ ಇಲ್ಲದ್ದ ಹೇಳಬ್ಯಾಡ” ಎಂದು ಮಹಮ್ಮದ ತಿಳಿಹೇಳಿದ. ತಿಪ್ಪಣ್ಣ ಮತ್ತೆ “ಸಾಬರ ನೀವು ಹ್ಯಾಂಗ ಹೇಳತೇರಿ ಹಾಂಗ ಮಾಡತೇನಿ” ಎಂದು ಒಪ್ಪಿಕೊಂಡ.

ಮಹಮ್ಮದಸಾಬಾ ನನ್ನ ಕಡೆಗೆ ತಿರುಗಿ “ರಾಯರ, ಈ ವರ್ಷ ಬಹಳ ಕೇಡು. ಮುನ್ನೂರು ರೂಪಾಯಿ ತೊಗೊಂಡು ಮುಗಿಸಿಕೊಳ್ಳಿರಿ” ಎಂದು ಹೇಳಿ ಬಿಟ್ಟಾ, ನಾನೂ ಒಪ್ಪಿಕೊಂಡೆ. ಮಹ್ಮದಸಾಬನ ಈ ತೀರ್ಪು ಬಹಳ ಜಾಣತನದ್ದು, ನ್ಯಾಯದ ಮೂಲವನ್ನೇ ಮುರಿದು ಮತ್ತೆ ನಮ್ಮ ರೈತನಿಗೂ ನಮಗೂ ಮೊದಲಿನಂತೆ ನಡೆದುಕೊಳ್ಳುವದಕ್ಕೆ ಹೇಳಿದ. ತಿಪ್ಪಣ್ಣ ಆಗಲೇ ರೂಪಾಯಿ ತಂದು ಒಪ್ಪಿಸಿದ! ನಮ್ಮ ಹಿರಿಯರು ನಾಲ್ಕು ಸಲ ಅಡ್ಡಾಡಿ ಹೋಗಿದ್ದರೂ ತಿಪ್ಪಣ್ಣ ಹಣಿದಿರಲಿಲ್ಲ. ಮಹಮ್ಮದಸಾಬನ ಮಾತಿಗೆ ಇಷ್ಟೊಂದು ಬೆಲೆ ಇರಬೇಕಾದರೆ ಅವನಲ್ಲಿ ಹಳ್ಳಿಗರ ಜೀವನದಲ್ಲಿ ಬೆರೆತು ಬಾಳುವ ಹದವಿರಲೇಬೇಕು.

ಮಹಮ್ಮದಸಾಬ ನನಗೆ ನಾಲ್ಕಾರು ದಿವಸ ಹಳ್ಳಿಯಲ್ಲಿದ್ದು ಹೋಗ ಬೇಕೆಂದು ಬಹಳ ಆದರ ಪೂರ್ವಕವಾಗಿ ಹೇಳಿದ. ಆದರೆ ನಾನು ಮಾತ್ರ ಅನೇಕ ಕೆಲಸಗಳ ಗದ್ದಲದಲ್ಲಿದ್ದೆನಾದ್ದರಿಂದ ಮತ್ತೊಮ್ಮೆ ರಜೆಯ ದಿನಗಳಲ್ಲಿ ಬರುವೆನೆಂದು ಹೇಳಿದೆ. ಸಂಜೆಯ ಮೋಟಾರಿಗೆ ಊರಿಗೆ ಹೊರಡುವದು ಗೊತ್ತಾಯಿತು.

ನಾನು ರಾಮರಾಯರ ಮನೆಗೆ ಬಂದು ಎಲ್ಲವನ್ನೂ ಹೇಳಿದೆ. ಅವರು “ಮಹಮ್ಮದಸಾಬ ಬಾಯಿ ಹಾಕಿದಾ ಅಂದ್ರ, ಈ ಊರಾಗಿನ ರೈತರು ಹೇಳಿದ್ದಾಂಗ ಕೇಳತಾರ” ಎಂದು ಹೇಳಿ ನನ್ನನ್ನು ಊಟಕ್ಕೆಬ್ಬಿಸಿದರು. ಊಟ ಮುಗಿಸಿಕೊಂಡು, ನಾನು ಕುಕ್ಷಿಯಾದ ಬಳಿಕ ಮೋಟಾರಸ್ಟ್ಯಾಂಡಿಗೆ ಹೋದೆ. ಮಹಮ್ಮದಸಾಬ ಅಧಿಕಾರಿಯಂತೆ ಗಿಡದಡಿಯಲ್ಲಿಯ ಬೆಂಚಿನ ಮೇಲೆ ಕುಳಿತುಕೊಂಡಿದ್ದ. ನಾನು ಬಂದ ಕೂಡಲೆ ಮೋಟಾರಿನಲ್ಲಿ ಫ್ರಂಟ ಸೀಟಿಗೆ ಕುಳ್ಳಿರಿಸಿ “ಹೋಗಿ ಬರ್ರೀ….ನಮ್ಮನ್ನ ಮರಿಬ್ಯಾಡ್ರಿ” ಎಂದು ಹೇಳುವಾಗಲೇ ಮೋಟರು ಹೊರಟಿತು.

ಮೋಟರ ವೇಗವು ಹೆಚ್ಚಾದಂತೆ ಹಳ್ಳಿಯು ಕಾಣದಾಯಿತು, ಮಹಮ್ಮದಸಾಬನ ಮೂರ್ತಿ ಮಾತ್ರ ನನ್ನ ಮನದಲ್ಲಿ ಅಚ್ಚೊತ್ತಿದಂತೆ ಇನ್ನೂ ಉಳಿದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತೆ – ನಿಶ್ಚಿಂತೆ
Next post ಅವಳಿ – ಜವಳಿ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys