ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು.
ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ ಮಾಡಿ ಅವಳ ಜಾತಕದಲ್ಲಿರುವ ಯೋಗಾವಳಿಗಳನ್ನು ಬಣ್ಣಿಸಿದರು. ಶಂಕರ ಹೂಂಗುಡುತ್ತ ಸಾಗಿದ. ಹೆಗಡೆ ಯವರ ಕೆಲವು ಮಾತುಗಳಿಗೆ ‘ಹುಂ’ ಒಂದರಿಂದಲೇ ಪಾರಾಗಲು ಅವನಿಗಾಗಲಿಲ್ಲ. “ನಾನು ಹೇಳುವದು ಸರಿಯೋ ಅಲ್ಲವೋ? ಹೇಳಿ, ತಪ್ಪಾದರೆ ಸರಿಪಡಿಸಿಕೊಳ್ಳುತ್ತೇನೆ” ಎಂದು ತಮ್ಮ ತಪ್ಪು ಒಪ್ಪಿಕೊಳ್ಳುವ ಗುಣವನ್ನು ದೊಡ್ಡದು ಮಾಡಿ ತೋರಿಸಿದಾಗ “ಹೌದು” ಎಂಬೊಂದು ಶಬ್ದವನ್ನು ಶಂಕರ ಆಡಲೇಬೇಕಾಯಿತು.
ಕೇರಿಯ ಅಂಗಳಗಳನ್ನು ಹಾಯ್ದು ಹೆಗಡೆಯವರ ಮನೆಗೆ ಹೋಗ ಬೇಕು. ರಸ್ತೆಯಿಂದಲೇ ಹೋಗಲು ಬರುತ್ತಿದ್ದರೂ ತಮ್ಮ ಭಾವೀ ಅಳಿಯನನ್ನು ಕೇರಿಯ ‘ಗ್ರಾಸ್ತ’ ರ ದೃಷ್ಟಿಗೆ ಹಾಕಿ, ಅವರ ಕಣ್ಣು ಕುಕ್ಕಿಸಿ ತಮ್ಮ ದೊಡ್ಡಸ್ತನವನ್ನು ಮೆರೆಯಿಸುವ ಹುಮ್ಮಸದಿಂದ ಅಂಗಳಗಳನ್ನೇ ದಾಟುತ್ತ ನಡೆದರು. ಕೆಲವು ಗ್ರಾಸ್ತರಿಗೆ “ನಾನು ಹೇಳುತ್ತಿದ್ದ ಶಂಕರಭಟ್ಟರು ಇವರೆ. ಬಿ. ಎ. ಆಯಿತು.” ಎಂದು ಹೋಗುತ್ತಿರುವಾಗಲೇ ಪರಿಚಯ ಮಾಡಿಸಿದರು. ಬಿ. ಎ. ಆದವನಿಗೆ ಮಗಳನ್ನು ಕೊಡುವುದರಲ್ಲಿ ತಮ್ಮ ಊರಿಗೇ ಮೊದಲಿಗನಾಗುವೆನೆಂಬ ಹಿಗ್ಗು ಅವರ ಮಾತು ಮಾತಿನಲ್ಲೆಲ್ಲ ತುಂಬಿತ್ತು.
ನಾಲ್ಕಾರು ಅಂಗಳಗಳನ್ನು ದಾಟಿ ಬಂದಾಯಿತು. ಒಂದು ಅಂಗಳದ ತುದಿಗೆ ಹುಡುಗಿಯರ ‘ಸುರ್ಗುದ್ದು’ (ಹುತುತು) ನಡೆದಿತ್ತು. ಇವರು ಬಂದುದನ್ನು ಕಂಡು ಹೊಸಬನಿಗೆ ನಾಚಿ ಹುಡುಗಿಯರು ಆಟ ಬಿಟ್ಟು ಹೊಳ್ಳಿ ಸೇರಿದರು. ಆಟದಲ್ಲಿ ಭಾಗವಹಿಸದೆ ಸುಮ್ಮನೆ ನಿಂತು ನೋಡುತ್ತಿದ್ದ ಗೊಂಬೆಯಂಥ ಒಬ್ಬ ಕನ್ನೆ ಶಂಕರನ ಮನಸ್ಸನ್ನು ಸೆಳೆದಳು. ಇಷ್ಟು ಹೊತ್ತು ಜಡ ವಸ್ತುವಿನಂತೆ ಬರುತ್ತಿದ್ದ ಶಂಕರನ ಶ್ವಾಸಕೋಶ ಈಗ ಸರಿಯಾಗಿ ಆಡ ಹತ್ತಿತು. ಹೆಣ್ಣು ನೋಡಲು ಹೋಗುವ ಉತ್ಸಾಹ ಆಗ ಚಿಗುರಿತು; ತಾನು ಬಂದ ಕಾರ್ಯದ ಅರಿವಾಯಿತು.
ಆದರೆ ನೋಡುತ್ತ ನಿಲ್ಲುವದು, ಹೋಗಹೋಗುತ್ತ ತಿರುತಿರುಗಿ ನೋಡುವದು ಅವನ ಸ್ವಭಾವಕ್ಕೆ ಸೇರಿದ್ದಲ್ಲ. ಆದರೂ ಒಂದೆರಡು ಸಲ ಏನೋ ನೆವ ಮಾಡಿ, ಹೆಗಡೆಯವರಿಗೆ ಪ್ರಶ್ನೆ ಕೇಳಿ, ಹಿಂದೆ ತಿರುಗದೆ ಹೋಗಲಿಲ್ಲ. ಇಷ್ಟು ಹೊತ್ತು ಜಟ್ಗನಂತೆ ಬರುತ್ತಿರುವ ಇವನಿಗೆ ತಮ್ಮ ಮನೆ ಸಮೀಪಿಸಿದೊಡನೆ ಮಾತು ಬರಹತ್ತಿತೆಂದು ಹೆಗಡೆಯವರು ಒಳಗೊಳಗೇ ಆನಂದಪಟ್ಟು ಕೊಂಡರು.
ಹೆಗಡೆಯವರ ಮಗಳನ್ನು ನೋಡಿ ಬರುವ ಕಾರ್ಯವು ಸುಸೂತ್ರವಾಗಿ ನಡೆಯಿತು. “ಆದಷ್ಟು ಬೇಗ ನಿಮ್ಮ ಅಭಿಪ್ರಾಯವನ್ನು-” ಎಂದು ಹೆಗಡೆಯವರು ಬಿನ್ನೈಸಿಕೊಂಡರು.
“ಓಹೋ” ಎಂದು ಶಂಕರ ಅಲ್ಲಿಂದ ಪಾರಾದ.
“ಹುಡುಗಿಯನ್ನು ನೋಡಿ ಬಂದೆಯಾ?” ಎಂದು ಶಂಕರನ ದೊಡ್ಡ ತಂದೆಯವರು ಕೇಳಿದರು. ತಂದೆಯಿಲ್ಲದ ಅವನಿಗೆ ಅವರೇ ತಂದೆಯಂತಿದ್ದು, ಶಂಕರನೇ ಹೆಣ್ಣು ನೋಡಿ ಒಪ್ಪಿದ ಬಳಿಕ ತಾವು ಮದುವೆ ಮಾಡುವವನೆಂದು ಹೇಳಿದ್ದರು.
“ಯಾರ ಹುಡುಗಿಯನ್ನು?” ಅರೆನಗೆಯಿಂದ ಶಂಕರ ಕೇಳಿದ.
“ರಾಮಾಯಣ ಓದಿ ರಾಮ ಸೀತೆಗೆ ಏನಾಗಬೇಕು ಎಂದ ಹಾಗೆ ಕೇಳುತ್ತೀಯಲ್ಲೋ! ಮತ್ತೆ ಯಾರ ಹುಡುಗಿ? ಹೆಗಡೆಯವರದು”
“ಓಹೋ, ಮರೆತೇ ಹೋಯಿತು!”
“ಅಂದರೆ? ಅವರ ಮನೆಗೆ ಹೋಗಿ….”
“ಹೌದು ಮನಸ್ಸಿನಲ್ಲಿ ಬೇರೆಯವರ ಮಗಳೊಬ್ಬಳು ಆಗ ತಾನೇ ಬಂದುದರಿಂದ ಹೆಗಡೆಯವರ ಮಗಳನ್ನು ನಾನು ನೋಡಲು ಮರೆತೇ ಬಿಟ್ಟೆ!” ದೊಡ್ಡ ತಂದೆಯೊಡನೆ ಶಂಕರನು ಸರಳವಾಗಿ ನಡೆದುಕೊಳ್ಳುತ್ತಿದ್ದನಾದ್ದರಿಂದ ವಿಷಯವನ್ನೆಲ್ಲ ಹೇಳಿ ತನ್ನ ನಿಶ್ಚಯವನ್ನು ಮಂಡಿಸಿದ.
* * *
ಜಾತಕವೂ ಕೂಡಿ ಬಂತು, ಹುಡುಗಿಯ ತಂದೆ-ತಾಯಿಗಳು ಆನಂದದಿಂದ ಕುಣಿದಾಡಿ ತಮ್ಮ ಅಂಗಳದಲ್ಲಿಯೇ ಶಂಕರನನ್ನು ಕರೆದುಕೊಂಡು ಹೋಗಿ ಅವನ ದೃಷ್ಟಿಗೆ ತಮ್ಮ `ಸಾವಿತ್ರಿ’ ಬೀಳುವಂತೆ ಮಾಡಿದುದಕ್ಕಾಗಿ ಶಿವರಾಮ ಹೆಗಡೆಯವರಿಗೆ ಅನೇಕ ಧನ್ಯವಾದಗಳನ್ನರ್ಪಿಸಿದರು.
ಒಂದೇ ಪಕ್ಷದೊಳಗೆ ಮದುವೆಯಾಗಿ ಹೋಯಿತು. ಶಿವರಾಮ ಹೆಗಡೆಯವರು “ನಾನು ಅಂಗಳದ ದಾರಿಯಲ್ಲಿ ಅವನನ್ನು ಕರೆದುಕೊಂಡು ಬಂದದ್ದೇ ತಪ್ಪಾಯಿತು” ಎಂದು ಗೊಣಗಿಕೊಂಡರು. “ಬ್ರಹ್ಮ ಬರೆದಂತೆಯೇ ಆಗುತ್ತದೆ” ಎಂದು ತಮ್ಮ ಮನಸ್ಸಿಗೆ ಉಪದೇಶ ಮಾಡದೆ ಹೋಗಲಿಲ್ಲ.
X X X X
ಬಿ. ಎ. ಆದವನಿಗೆ ರೇಶನ್ ಇನ್‌ಸ್ಪೆಕ್ಟರನಾಗುವದು ಕಠಿಣವಾಗಲಿಲ್ಲ. ಮದುವೆಯಾಗಿ ಮೂರು ತಿಂಗಳೊಳಗೇ ಶಂಕರ ಆ ಊರಿನಿಂದ ಈ ಊರಿಗೆ ಬಂದು ಬಿಡಾರ ಹೂಡಿದ, ಮಗ ಸೊಸೆಗಳೊಡನೆ ವಿಧವೆ ತಾಯಿ ಬರುವದು ಸಹಜವಾಗಿತ್ತು. ಆದರೆ ಶಂಕರನೇ ಎಲ್ಲ ವ್ಯವಸ್ಥೆಯಾದ ಮೇಲೆ ಪತ್ರ ಹಾಕುತ್ತೇನೆ. ಇನ್ನೊಂದು ತಿಂಗಳೊಳಗೆ ನೀನು ಬರುವದಾಗುತ್ತದೆ” ಎಂದು
ತಾಯಿಗೆ ಹೇಳಿ ಹೆಂಡತಿಯೊಬ್ಬಳನ್ನೇ ಕೆರೆದುಕೊಂಡು ಹೊರಟ.
ಬಿಡಾರ ಹೂಡಿಯಾಯಿತು. ಕೆಲಸಕ್ಕೆ ಹಾಜರಾಗಿ ಸಾಯ್ಕಲ್ಲಮೇಲೆ ಓಡಾಡುವದು ಸುರುವಾಯಿತು. ಮೆಚ್ಚಿ ಮದುವೆಯಾದ ಹೆಂಡತಿಯೊಡನೆ ನಲಿಯುತ್ತ ಹೊಸ ಸಂಸಾರ ನಡೆಸಬೇಕೆಂಬ ಆಸೆ ಹೀಗೆ ಕಣ್ಣು ಬಿಟ್ಟು ನೋಡಿತು. ಏನೂ ಹೆಚ್ಚು ಕಡಿಮೆಯಾಗಿಲ್ಲ. ಅದೇ ನಿಸರ್ಗ ಸುಂದರಿ. ಗೊಂಬೆಯಂತೆ ಶೋಭಿಸುತ್ತಾಳೆ. ಆಂ ಅಂತ ಕಿವಿ ಎಳೆದುಕೊಂಡು ಕೇಳಿಯಾಯಿತು. ಅದೇ ಮುದ್ದು ಮುದ್ದಾದ ಮಾತು. ಅಲ್ಲ, ಅಲ್ಲ, ಕಣ್ಣು ಉಜ್ಜಿ ಕೊಂಡು ನೋಡುತ್ತಾನೆ. ಗೊಂಬೆಯಂತೆ ಶೋಭಿಸುತ್ತಿದ್ದಾಳೆ ಹೆಂಡತಿ. ಕರ್ಪುರದ ಗೊಂಬೆ! ಹಾಸಿಗೆಯ ಪಿಂಡಿಯ ಮೇಲೆ ಸುಮ್ಮನೆ ಕುಳಿತಿದ್ದಾಳೆ. ಕಿವಿಗಳನ್ನು ಹೀಗೆ ಒಡ್ಡಿ ಕೇಳುತ್ತಾನೆ. ಅದೇ ಮುದ್ದು ಮುದ್ದು ಅಲ್ಲ. ಅಲ್ಲ ತೊದಲು ತೊದಲು-
“ನನಗೆ ಹಸಿವೆಯಾಗುತ್ತದೆ.”
“ಅಡಿಗೆ ಮಾಡಲೇ ಇಲ್ಲವೇ?”
“ಅ೦ದರೆ?”
“ಅಂದರೆ? ನೀನು ನಮ್ಮಿಬ್ಬರಿಗಾಗಿ ಅಡಿಗೆ ಬೇಯಿಸಲಿಲ್ಲವೇ?”
“ನೀರೇ ಇಲ್ಲ.”
………………..
“ನನ್ನ ಸೀರೆ ಮಣ್ಣಾಗಿದೆ.”
“ನೋಡಿ ಅಂದರೆ, ಕಾಲಿಗೆ ಭತ್ತದ ಮೊನೆ ನಟ್ಟು ಹೋಗಿ ಬಾತು ಬಿಟ್ಟಿದೆ. ಕಾಣುವದಿಲ್ಲವೆ?”
…………………
“ಇಂದು ನನ್ನ ಸೀರೆ ನೀವೇ ಸ್ವಲ್ಪ ಒಗೆದು ಕೊಡಲಾರಿರಾ? ಬಹಾಳ ಆಯಾಸವಾಗಿದೆ ಚಣ್ನೆ ಅರೆದು ಅರೆದು.”
ಆದೇ ಮುದ್ದು ಮೊಗ! ಅದೇ ಹೂವರಳಿದಂಥ ಮಾತು! ಅದೇ ಪ್ರೀತಿ ತುಂಬಿ ತುಳುಕುವ ಧ್ವನಿ! ಶಂಕರ ಮಡದಿಗೆ ಮುದ್ದು ಕೊಟ್ಟು ಮನೆ ಕೆಲಸ ಕಲಿಸಿದ.
“ನೀವು ಮಾತಾಡುವದಿಲ್ಲ. ನನಗೆ ಅಳು ಬರುತ್ತದೆ.”
………………….
“ನೀವು ಇಲ್ಲದಾಗ ಯಾರಾದರೂ ಬಂದರೆ ಏನು ಮಾಡಲಿ?”
” ನೀವು ಹೀಗೆ ಸುಮ್ಮನೆ ಕುಳಿತರೆ ನಾನು ಭಾವಿ ಹಾರಿ ಸತ್ತು ಬಿಡುತ್ತೇನೆ”
ಅದೇ ತನ್ನ ಮನಸೆಳೆದ ಕಣ್ಣು ! ಅದೇ ತನ್ನನ್ನು ಸೆರೆ ಹಿಡಿದ ಚೆಲುವು! ಆದರೆ….
ಮಧ್ಯ ರಾತ್ರೆಯ ಆಕಾಶವನ್ನೇ ದಿಟ್ಟಿಸುತ್ತನಿಂತ ಶಂಕರನ ಕಣ್ಣುಗಳು ತುಂಬಿ ಬಂದವು.
ಸೂರ್ಯೋದಯ, ಹೂ, ತಾರಾಮಂಡಲ- ಎಲ್ಲ ಚೆಂದ, ಹೆಣ್ಣು- ಎಲ್ಲಕ್ಕೂ ಮಿಗಿಲು ಚೆಲುವಿನಲ್ಲಿ.
ಆದರೆ……..
ತಿಳುವಳಿಕೆಗೂ ಚೆಲುವಿಗೂ ಹೀಗೆ ಸಂಬಂಧವೇ ಇಲ್ಲದಿದ್ದರೆ, ಸೌಂದರ್‍ಯದ ಆರಾಧನೆ ಹುಂಬತನ.
ಚೆಲುವು ಹುಡುಕಿ ಒಲವು ಹೋಯಿತು. ಚೆಲುವಿನ ಸೀಮೆಯಲ್ಲಿ ತಳವೂರಿದ ಮೇಲೆ ತೋರಿತು ಒಲವಿಗೆ ತಲೆಯಿಲ್ಲ. ಅದರಿಂದ ಉಪಯೋಗವೂ ಇಲ್ಲ.
ಚೆಲುವು, ಒಲವು, ಉಪಯೋಗ…. ಬುದ್ದಿ-ಶಂಕರನ ತಲೆ ಗಿರ್ರೆಂದು ತಿರುಗಿದಂತಾಯಿತು. ಹೊಡೆಯುವದು ಕಾಡು. ರಮಿಸಿ ತಿಳಿಸಿದರೆ ಬರ ಬಹುದೇ? ಬಂದೀತು. ಆದರೆ ಇಷ್ಟೆಲ್ಲ ತೊಂದರೆ ಯಾರಿಗೆ ಬೇಕಾಗಿತ್ತು? ಚೆಲುವನ್ನು ಬೆನ್ನಟ್ಟಿದ ಒಲವಿಗೆ!
“ಹರ ಹರ ಮಹದೇವ…. ದೇವರೇ ಗತಿ.” ಶಂಕರ ಬಂದು ಮಲಗಿದ.
“ಸಾವಿತ್ರಿ, ಹೆರಿಗೆಗೆ ನೀನು ತವರಿಗೆ ಹೋಗುವಿಯೋ? ಅಥವಾ ಇಲ್ಲಿಯೇ?”
“ಇಲ್ಲೇ ಎರಡು ಮೊಟ್ಟೆ ಹಾಕಿದರೆ ಆಗಲಿಕ್ಕಿಲ್ಲವೇ?”
“ಆಂ?”
“ಇಲ್ಲೇ ಮೊಟ್ಟೆ?”
ಹೊಡೆದೆಬ್ಬಿಸಿದಂತೆ ಎಚ್ಚರವಾಯಿತು. ನೋಡಿದ. ಸಾವಿತ್ರಿ ಗೊರೆಯುತ್ತಿದ್ದಾಳೆ! ಅರೆನಿದ್ದೆಯಲ್ಲಿ.
ತನಗೆ ತಾನೇ ಕೇಳಿಕೊಂಡು, ಉತ್ತರ ಕೊಟ್ಟು, ಹೆದರಿ ಎಚ್ಚತ್ತಿದ್ದಾನೆ! ಸಾವಿತ್ರಿ ಇಷ್ಟು ಹುಂಬಳಿರಲಿಕ್ಕಿಲ್ಲವೆಂದು ಅಂದುಕೊಂಡು ಮತ್ತೆ ಮಲಗಿದ. ಮರುದಿನದಿಂದ ಸಾವಿತ್ರಿಗೆ ಶಂಕರನ ಪಾಠಕ್ರಮ ಸುರುವಾಯಿತು. ಇದರ ಪರಿಣಾಮವಾಗಿ ಸಾವಿತ್ರಿ ರಾತ್ರಿ ಹನ್ನೆರಡು ತಾಸು ಗೊರೆಯ ಹತ್ತಿದಳು. ಕೇಳಿದರೆ “ನೀವು ಹೇಳಿ ಕೊಟ್ಟಿದ್ದನ್ನೆಲ್ಲ ಧ್ಯಾನಿಸಿ ಧ್ಯಾನಿಸಿ ತಲೆ ಕಾದು ಹೋಗುತ್ತದೆ. ಮನೆ ಕೆಲಸ ಮತ್ತೆ” ಅನ್ನುತ್ತಾಳೆ.
ಈಗ ಹದಿನಾರು ವರ್ಷ ಸಾವಿತ್ರಿಗೆ, ಏನು ನಿದ್ದೆ ಅದು!
ಶಂಕರನಿಗೆ ಖಾತ್ರಿಯಾಯಿತು-ಇವಳೊಂದು ಮೊದ್ದು, ಚೆಲುವಿನ ಮುದ್ದೆ. ಇವಳ ತಲೆಯೊಳಗೆ ಮೆದುಳೇ ಇಲ್ಲ. ಅವನು ಒಂದು ತತ್ವವನ್ನೂ ಕಂಡು ಕೊಂಡು ಬಿಟ್ಟ ಅದರಿಂದಲೇ : ಬುದ್ಧಿಯಿಲ್ಲದಲ್ಲಿ ಒಮ್ಮೆ ಚೆಲುವು ಕಾಲಿಟ್ಟಿತೆಂದರೆ ಅದು ಅಲ್ಲಿ ಹುಲುಸಾಗಿ ಬೆಳೆಯುತ್ತದೆ. ಸೌಂದರ್ಯದ ಪರಮಾವಧಿಯ ಬುಡದಲ್ಲಿ ಅಜ್ಞಾನದ ಅಂಧಃಕಾರವಿದೆ.
ಆದರೆ ಇಂಥ ಅಗ್ಗದ ತತ್ವಜ್ಞಾನದಿಂದ ಅವನ ಹರೆಯದ ಸಂಸಾರದ ತೊಡಕು ಬಿಡಲಿಲ್ಲ.
ಒಂದು ದಿನ ಅವನಿಗೆ ಹೀಗೂ ಆನಿಸಿಬಿಟ್ಟಿತು. ಇವಳಿಂದಾಗಿ ನಾನು ಹೀಗೆ ವಿಚಾರಿಸಹತ್ತಿ, ಚಡಪಡಿಸಿ, ನನಗೆ ದೇವರು ಕೊಟ್ಟ ಒಂದು ಒಂದೂವರೆ ತೊಲೆ ಬುದ್ದಿಯನ್ನೂ ಕೆಡಿಸಿಕೊಳ್ಳುತ್ತೇನೆ.
ಆಫೀಸಿನಲ್ಲಿ ಕಾರಕೂನರು ಶಂಕರನ ಬುದ್ಧಿಗೇಡಿತನಕ್ಕೆ ಹಾಸ್ಯ ಮಾಡ ಹತ್ತಿದರು. ೩+೪=೬ ಎಂಬ ಅವನ ಹಲಕೆಲವು ಲೆಕ್ಕಗಳಿಂದ “ಶಂಕರ ರಾಯರಿಗೆ ಒಂದು ಸ್ಕೂರ ಲೂಸ್ ಆಗಿದೆ” ಎಂಬ ಶೋಧ ಮಾಡಿದರು ಗುಮಾಸ್ತೆಗಳು!
ಮಗನ ಕರೆ ಬಾರದುದನ್ನು ಕಂಡು ಶಂಕರನ ತಾಯಿ “ನನ್ನನ್ನು ಎಂದು ಕರೆಯಿಸಿಕೊಳ್ಳುವಿ?” ಪತ್ರದಿಂದ ಕೇಳಿಸಿದಳು. ಇವನ ಉತ್ತರವೇ ಇಲ್ಲ. ಕೊನೆಗೆ ಒಂದುದಿನ ಅವಳು ಬಹಳ ಬೇಸರಗೊಂಡು ಈ ಊರಿಗೆ ಬಂದೇ ಬಿಟ್ಟಳು.
ಮುಂದೇನೂ ಆಗಲಿಲ್ಲ. ಅಂದರೆ ಇಷ್ಟೆ. ಸರ್ವಸಾಮಾನ್ಯ ಕೌಟುಂಬಿಕ ಘಟನೆಗಳ ಹೊರತು ವಿಶೇಷವೇನೂ ಆಗಲಿಲ್ಲ. ವಿಶೇಷ ಸಂಗತಿಗಳು ಆಗುವ ಮುಂಚೆಯೇ ಶಂಕರನ ತಾಯಿ ಬಂದುಬಿಟ್ಟಳು. ಅದರಿಂದ ಆಗಬಹುದಾದ ಅನೇಕಾನೇಕ ಸಾವಿತ್ರಿ ಶಂಕರರ ಘಟನೆಗಳು ಆಗಲಿಲ್ಲ. ಆದ ಒಂದೇ ಒಂದು ಅಲ್ಲ ಎರಡು ಸಂಗತಿಗಳು ಇವು:
“ಅತ್ತೆ, ಈಗ ಬಂದಿರಾ? ಏನು ಒಬ್ಬರೇ ಬಂದಿರಾ? ಬನ್ನಿ. ಒಳ್ಳೆಯದಾಯಿತು ಅತ್ತೆ, ನೀವು ಬಂದದ್ದು. ಅತ್ತೆ ನಾನು ಬ…ಸು….ರಿ ಅವರಿಗೆ ಹೇಳಬೇಡಿ ಮತ್ತೆ!” ಅಂದಳು ಸಾವಿತ್ರಿ.
“ಅಮ್ಮಾ ಬಂದೆಯಾ? ಏನು ಒಬ್ಬಳೇ ಬಂದೆಯಾ? ಬಾ, ಒಳ್ಳೆಯದಾಯಿತು ನೀ ಬಂದದ್ದು. ಅಮ್ಮ, ನನ್ನನ್ನು ಈ ಹಾಳು ಕೆಲಸದಿಂದ ಕಿಽತ್ತು ಹಾಕಿಬಿಟ್ಟರು.!” ಅಂದ ಶಂಕರ.
*****