ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದಷ್ಟೂ ಕಾಲ ಅವನನ್ನು ತೆರೆದ ಬೆಳಕಿನೆದುರು ನಿಲ್ಲಿಸುತ್ತಾ ಇದೆ. ಅತಿಯಾದ ದುಃಖಿತನಾದ ಅವನಿಗೆ ಮುಪ್ಪು ಅಕಾಲದಲ್ಲಿ ಬಂದೊದಗಿದೆ. ತನ್ನ ನಿರಾಸಕ್ತಿ, ಜಿಗುಪ್ಸೆ, ಗೊಂದಲಗಳ ಬಗ್ಗೆ ಅವನು ತನ್ನ ಹೃದಯವನ್ನೇ ಆಗಾಗ್ಗೆ ಕೇಳಿಕೊಳ್ಳುತ್ತಾ ಇದ್ದ. ಯಾಕೆ ಹೀಗಾಗುತ್ತದೆ ಎಂದು ನನ್ನನ್ನು ಸಂಪೂರ್‍ಣ ಬಲ್ಲ ವ್ಯಕ್ತಿ ತನ್ನ ಹೃದಯವಲ್ಲದೆ ಮತ್ತೆ ಬೇರೆ ಯಾರೂ ಆಗಲಿಕ್ಕೆ ಸಾಧ್ಯವಿಲ್ಲವೆಂಬ ಕಟುಸತ್ಯ ಅವನಿಗೆ ಅನುಭವದಿಂದ ತಿಳಿದಿತ್ತು. ಒಂಟಿತನದಿಂದ ಹೀಗಾಗಿರಬಹುದೇ? ಎಂದು ಕೂಡಾ ಆಲೋಚಿಸ ತೊಡಗಿದ. ಸಾಧ್ಯವಿಲ್ಲ. ಒಬ್ಬಂಟಿ ಆಗಿರುವವನೇ ಪ್ರಪಂಚದಲ್ಲಿ ಎಲ್ಲರಿಗಿಂತಲೂ ಬಲಶಾಲಿ, ಒಂಟಿತನ ಅವನಿಗೆ ಸಮಸ್ಯೆಯಾಗಲೇ ಇಲ್ಲ. ಆಗುವುದೂ ಇಲ್ಲ. ಹುಟ್ಟು-ಸಾವು ಎರಡೂ ಒಂಟಿತನದಿಂದಲೇ ಆದಿ-ಅಂತ್ಯಗೊಳ್ಳುತ್ತದೆ. ಹುಟ್ಟಿನ ಜೊತೆಯಲ್ಲಿಯೇ ಹೊತ್ತು ತಂದ ಹೊರೆ ಈ ಸಾವು. ಇನ್ನೊಬ್ಬರ ನೋವಿನಲ್ಲಿ ನಮ್ಮ ಜನನ. ನಮ್ಮ ನೋವಿನಲ್ಲಿ ನಮ್ಮ ಸಾವು, ಹುಟ್ಟು ಸಾವಿನ ಮಧ್ಯೆ ಗೊಂದಲಗಳು, ಸಮಸ್ಯೆಗಳು, ಅರ್‍ಥವಿಲ್ಲದ ಸಂಬಂಧಗಳು, ವ್ಯಾಮೋಹಗಳು, ಕಾಲ ಅವನನ್ನು ಕುಬ್ಜನಾಗಿ ಮಾಡಿದರೂ ಅವನು ಸುಲಭವಾಗಿ ಸೋಲುವವನಲ್ಲ. ಧನಾತ್ಮಕ ಚಿಂತನೆಯಲ್ಲೇ ಬಾಳು ಸವೆಸಿದ ಅವನಿಗೆ ಮುದಿತನ ಹೊರೆಯಾಗಿ ತೋರಲಿಲ್ಲ. ಒಂಟಿತನ ಭಯ ಹುಟ್ಟಿಸಲಿಲ್ಲ. ಬಾಳು ಒಂದು ಸುದೀರ್‍ಘ ಪಯಣವೆಂದು ಅವನಿಗೆ ತಿಳಿದಿತ್ತು. ಅಲ್ಲದೆ ತನ್ನ ನಿಲುಗಡೆ ಬಂದಾಗ ತಾನು ಇಳಿಯಲೇಬೇಕು. ಅಲ್ಲಿಯವರೆಗೆ ಸಾಗಲಿ ಎಂದು ನಿರ್‍ಲಿಪ್ತನಾಗಿ ಬಿಟ್ಟಿದ್ದ.
ಇಂತಹ ಸಂದಿಗ್ಧ ಮನಸ್ಸಿನೊಂದಿಗೆ ಅವನು ಸೌದಿ ಅರೇಬಿಯಾದ ಮದೀನಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕಾಲಮಾನ ರಾತ್ರಿ ಮೂರುವರೆ ಗಂಟೆಗೆ ಬಂದಿಳಿದಾಗ ಅವನಿಗೆ ಒಂದು ಹೊಸ ಪ್ರಪಂಚ ತೆರೆದುಕೊಂಡಿತ್ತು. ಅವನು ಬಂದ ಆ ವಿಮಾನದಲ್ಲಿ ಸುಮಾರು ನೂರ ಮೂವತ್ತು ಹಜ್ ಯಾತ್ರಿಕರಿದ್ದು ಅವರೆಲ್ಲರೂ ತಮ್ಮ ಮುಂದಿನ ಕಾರ್‍ಯಕ್ರಮದ ಬಗ್ಗೆ ಅತೀವ ಆತಂಕಗೊಂಡದ್ದು ಅವರ ಮುಖದಲ್ಲಿ ಸ್ಪಷ್ಟವಾಗಿ ತೋರಿ ಬರುತ್ತಿತ್ತು. ಅವನು ಅದಾವುದನ್ನು ಆಲೋಚಿಸದೆ ಪರಿಶೀಲನೆಗೆ ಒದಗಿಸಬೇಕಾದ ಎಲ್ಲಾ ದಾಖಲಾತಿಗಳನ್ನು ಸಂಬಂಧಪಟ್ಟ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತೋರಿಸಿ ಅಲ್ಲಿಂದ ಬಿಡುಗಡೆಗೊಂಡು ಯಾತ್ರಿಕರಿಗಾಗಿ ಸಿದ್ಧವಾಗಿ ನಿಂತ ಬಸ್ಸನ್ನು ಏರಿ ಕುಳಿತುಕೊಂಡ. ಒಬ್ಬೊಬ್ಬರೇ ಪ್ರಯಾಣಿಕರು ಬಸ್ಸು ಏರಿ ಕುಳಿತುಕೊಂಡರು. ಎಲ್ಲಾ ಯಾತ್ರಿಕರು ಬಂದ ಮೇಲೆ ಬಸ್ಸು ಆ ಬೆಳಗ್ಗಿನ ಜಾವದಲ್ಲಿ ಪವಿತ್ರ ಮದೀನದ ರಾಜರಸ್ತೆಯಲ್ಲಿ ಸಾಗ ತೊಡಗಿತು. ಬಸ್ಸಿನ ಒಳಗಿನ ಹವಾ ನಿಯಂತ್ರಿತ ಗಾಳಿ ಸ್ವಲ್ಪ ಅತಿಯಾಯಿತೇನೋ ಎಂದೆನಿಸಿದರೂ ಅನಿವಾರ್‍ಯವೆಂಬ ಮಾತು ಅವನ ಮನಃಪಟಲದಲ್ಲಿ ಸುಳಿದು ಅವನು ಸುಮ್ಮನಾದ. ಬಸ್ಸು ಒಂದು ಐಶಾರಾಮ ಹೋಟೇಲಿನ ಎದುರು ನಿಂತುಕೊಂಡಿತು. ಹೋಟೆಲ್ ಮೆನೇಜರ್‌ನೊಂದಿಗೆ ಆ ಐಶಾರಾಮಿ ಹೋಟೇಲಿನ ಆರನೇ ಮಹಡಿಯ ರೂಮನ್ನು ಹೊಕ್ಕು ಅವನು ಸುತ್ತಲೂ ಕಣ್ಣಾಡಿಸಿದ. ಐದು ಬೆಡ್‌ಗಳು. ಅಂದರೆ ಇನ್ನೂ ನಾಲ್ಕು ಜನ ಯಾತ್ರಿಕರು ಈ ರೂಮಿಗೆ ವಾರಸುದಾರರಾಗಲಿದ್ದಾರೆ ಎಂದು ಅವನಿಗೆ ಖಾತ್ರಿಯಾಯಿತು. ಆಗಲೇ ಹತ್ತಿರದ ‘ಮಸ್ಜಿದುನ್ನ ಬವಿ’ಯಿಂದ ಬೆಳಗ್ಗಿನ ಪ್ರಾರ್‍ಥನೆಯ ಕರೆ ಕೇಳಿ ಬಂತು. ಅವನು ಲಗ್ಗೇಜನ್ನು ಅಲ್ಲಿಯೇ ಕೆಳಗಿಟ್ಟು ಹೆಚ್ಚು ವಿಳಂಬ ಮಾಡದೆ ಸ್ನಾನ ಮಾಡಿ ಶುದ್ಧ ವಸ್ತ್ರ ಧರಿಸಿ, ಸುಗಂಧ ಪೂಸಿಸಿಕೊಂಡು ಆರನೇ ಮಹಡಿಯ ಲಿಫ್ಟ್‌ನಿಂದ ಕೆಳಗೆ ಬಂದು ಪ್ರಾರ್‍ಥನೆಯ ಕರೆ ಕೇಳಿ ಬಂದ ಸ್ಥಳದತ್ತ ಭಯ ಭಕ್ತಿಯಿಂದ ದಾಪುಗಾಲು ಹಾಕಿದ. ಕೊರೆಯುತ್ತಿರುವ ಚಳಿಯಿಂದ ಅವನು ಸಾವರಿಸಿಕೊಂಡ. ರಸ್ತೆಯ ಇಕ್ಕೆಲಗಳ ಸ್ಟ್ರೀಟುಲೈಟುಗಳು ಮಂದಗತಿಯ ಬೆಳಕನ್ನು ಚೆಲ್ಲುತ್ತಿದ್ದು ಕತ್ತಲನ್ನು ಸಂಪೂರ್‍ಣ ಓಡಿಸಲು ಅಸಮರ್‍ಥವಾಗಿದ್ದುವು. ಕೂಡು ರಸ್ತೆಗಳ ಎಲ್ಲಾ ಮೂಲೆಗಳಿಂದ ಜನರು ತಂಡೋಪತಂಡವಾಗಿ ಪ್ರಾರ್‍ಥನಾ ಮಂದಿರದತ್ತ ವೇಗವಾಗಿ ನಡೆದು ಹೋಗುತ್ತಿದ್ದರು. ಯಾಕೋ ಏನೋ ಅವನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು.
ಪ್ರಾರ್‍ಥನಾ ಮಂದಿರದ ಕರೆ ಅವನ ಕಿವಿಗೆ ಹತ್ತಿರದಿಂದ ಕೇಳ ತೊಡಗಿತು. ಅವನ ಮನಸ್ಸು ಪುಲಕಿತಗೊಂಡಿತು. ಮೈಯಲ್ಲಿ ಏನೋ ಹುರುಪು, ಉಲ್ಲಾಸ, ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಒಮ್ಮೆ ಆಲೋಚಿಸಿದ ಹೌದು. ಪ್ರವಾದಿಯವರ ನಾಯಕತ್ವದಲ್ಲಿ ನಿರ್‍ಮಾಣಗೊಂಡ ಪ್ರಾರ್‍ಥನಾ ಮಂದಿರ, “ಮಸ್ಜಿದುನ್ನಬವಿ”! ಈ ಪ್ರಾರ್‍ಥನಾ ಮಂದಿರದ ಸಾನಿಧ್ಯದೊಂದಿಗೆ ಪ್ರವಾದಿಯವರ ಸಾನಿಧ್ಯವೂ ಇದೆ. ಈ ಪ್ರಾರ್‍ಥನಾ ಮಂದಿರದ ಪ್ರಾರ್‍ಥನೆಯು ಇತರ ಪ್ರಾರ್ಥನಾ ಮಂದಿರಗಳ ಪ್ರಾರ್‍ಥನೆಗಿಂತ ಸಾವಿರ ಪಟ್ಟು ಶ್ರೇಷ್ಠವಾಗಿದೆ. ಎಂಟು ದಿನಗಳಲ್ಲಿ ನಲ್ವತ್ತು ಸಾರಿಯ ಪ್ರಾರ್‍ಥನೆಯನ್ನು ಮಸ್ಜಿದುನ್ನಬವಿಯಲ್ಲಿ ಸಾಮೂಹಿಕವಾಗಿ ನಿರ್‍ವಹಿಸಿದರೆ ಕಷ್ಟ ಕಾರ್‍ಪಣ್ಯದಿಂದಲೂ ನರಕದ ಶಿಕ್ಷೆಯಿಂದಲೂ ಮುಕ್ತಿ ದೊರಕುತ್ತದೆ. ಅಂತಹ ಅವಕಾಶವನ್ನು ಒದಗಿಸಿಕೊಟ್ಟ ದೇವರಿಗೆ ಅವನು ಕೃತಜ್ಞತೆ ಅರ್‍ಪಿಸುತ್ತಾ ಪ್ರಾರ್‍ಥನಾ ಭವನದ ಪ್ರವೇಶ ದ್ವಾರವನ್ನು ಸಮೀಪಿಸಿದ. ಒಂದು ಕ್ಷಣ ಅವನು ನಿಂತು ಪವಿತ್ರ ಮಂದಿರವನ್ನು ವೀಕ್ಷಿಸಿದ. ತನ್ನ ಜೀವಮಾನದಲ್ಲಿಯೇ ಕಂಡಿರದ ಸೋಜಿಗವನ್ನು ಅವನು ನೋಡ ತೊಡಗಿದ. ಪ್ರಾರ್‍ಥನಾ ಮಂದಿರದ ಸುತ್ತಲೂ ಬಣ್ಣದಿಂದ ಅಲಂಕೃತವಾದ ಕಲ್ಲಿನ ಕಂಪೌಂಡು. ಅಂಗಳಕ್ಕೆ ಅತೀ ಉತ್ತಮ ದರ್‍ಜೆಯ ಚಂದ್ರಕಾಂತ ಶಿಲೆಯನ್ನು ಹಾಕಲಾಗಿತ್ತು. ಸುತ್ತಲೂ ಬೃಹದಾಕಾರದ ಪೋಕಸ್ ಲೈಟುಗಳಿಂದ ಜಿಗಿಜಿಗಿಸುವ ಕಂಬಗಳು, ಹಗಲಿನಲ್ಲಿ ಬಿಸಿಲಿನ ಝಳವನ್ನು ತಡೆಯಲು ಕಂಬಗಳ ಮೇಲೆ ಕೊಡೆಯಂತೆ ಮುಚ್ಚಿಕೊಂಡು ನಿಂತ ನೆರಳು ಕೊಡುವ ಚಾದರದ ಹೊದಿಕೆಗಳು ತಾವಾಗಿಯೇ ನಿಧಾನವಾಗಿ ತೆರೆದುಕೊಂಡು ಮೌನವಾಗಿ ಭಕ್ತಾದಿಗಳನ್ನು ಸ್ವಾಗತಿಸುವ ದ್ರಶ್ಯ ಮನೋಹರವಾಗಿತ್ತು. ಅಲ್ಲಲ್ಲಿ ತಿರುಗುವ ಬ್ರಹದಾಕಾರದ ಪ್ಯಾನುಗಳು, ಶೀತಲೀಕರಿಸಿ ಚಿಮ್ಮುತ್ತಿರುವ ನೀರಿನ ಹನಿಗಳು ಮನಸ್ಸಿಗೆ ಮುದ ನೀಡುತ್ತಿದ್ದವು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯ-ಪ್ರತ್ಯೇಕವಾದ ಸ್ವಚ್ಛತೆಯಿಂದ ಕೂಡಿದ ಟಾಯ್ಲೆಟ್ಟುಗಳು ಹಾಗೂ ನೀರಿನ ನಲ್ಲಿಗಳು! ಮಸೀದಿಯ ಸುತ್ತಲೂ ಸುಮಾರು ನಲ್ವತ್ತು ಅಡಿಗೆ ಒಂದರಂತೆ ವಿಶಾಲವಾದ ಪ್ರವೇಶದ್ವಾರಗಳು. ಪ್ರತೀ ದ್ವಾರಕ್ಕೆ ಇಂಗ್ಲೀಷ್ ಹಾಗೂ ಅರಬಿಕ್ ಭಾಷೆಯಲ್ಲಿ ನಂಬ್ರಗಳನ್ನು ಕೊಟ್ಟಿದ್ದರು. ಯಾರೂ ಯಾರ ಮುಖವನ್ನು ನೋಡುತ್ತಿರಲಿಲ್ಲ. ಕಾರಣ ಏಕಾಗ್ರತೆ. ಉದ್ದೇಶ ಒಂದೇ. ಪ್ರವಾದಿಯವರ ಸಾನಿಧ್ಯವನ್ನು ಪಡೆಯುವ ತವಕ. ಜಗತ್ತನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಿದ ಪವಿತ್ರ ದೇಹವು ಚಿರವಿಶ್ರಾಂತಿಗೊಂಡ ಪವಿತ್ರ ಸ್ಥಳ! ಅವನು ತಡ ಮಾಡಲಿಲ್ಲ. ವೇಗವಾಗಿ ನಡೆದುಕೊಂಡು ಹೋಗಿ, ಕೈ-ಕಾಲುಗಳನ್ನು ಶುಚಿಗೊಳಿಸಿ, ಬಲಗಾಲನ್ನು ಮುಂದಿಟ್ಟು ಮಸೀದಿಯೊಳಗೆ ಪ್ರವೇಶಿಸಿದ. ಅವನ ದೇಹ ನಡುಗುತ್ತಿತ್ತು. ಚಳಿಯಿಂದಲ್ಲ ಭಯಭಕ್ತಿಯಿಂದ. ಜನಸಂದಣಿಯ ನಡುವೆ ಒಮ್ಮೆ ಕತ್ತೆತ್ತಿ ನೋಡಿದ. ಇದು ಹಗಲೋರಾತ್ರಿಯೋ ಎಂದು ತಿಳಿಯದಂತಹ ಕಣ್ಣು ಕೋರೈಸುವ ವಿದ್ಯುತ್ ಲೈಟ್‌ಗಳು! ದಣಿದ ದೇಹಕ್ಕೆ ಹವಾನಿಯಂತ್ರಿತ ಪೆಟ್ಟಿಗೆಯು ತಂಪನ್ನು ಎರೆಯುತ್ತಿತ್ತು. ನೆಲಕ್ಕೆ ಹಾಸಿದ ದಪ್ಪಗಿನ ಕಡುಕೆಂಪು ವರ್‍ಣದ ರತ್ನಗಂಬಳಿಗಳು, ಕುಡಿಯಲು ಅಲ್ಲಲ್ಲಿ ಪವಿತ್ರ ಝುಂ-ಝುಂ ನೀರಿನ ಹಂಡೆಗಳು. ಅವನೂ ಭಕ್ತಾಧಿಗಳಲ್ಲಿ ಒಬ್ಬನಾಗಿ ಸೇರಿಕೊಂಡು ಸಾಮೂಹಿಕ ಪ್ರಾರ್‍ಥನೆಯಲ್ಲಿ ತಲ್ಲೀನನಾದ.
ಪ್ರಾರ್‍ಥನೆ ಮುಗಿಸಿ ಅವನು ಹೊರಬಂದು ಪ್ರವೇಶದ್ವಾರದ ಕಡೆಗೆ ನಡೆದ. ದ್ವಾರದ ಹೊರಗೆ ಅನ್ಯ ದೇಶಿಯ ಬಡಜನರು ರಸ್ತೆ ವ್ಯಾಪಾರ ಮಾಡುತ್ತಿದ್ದರು. ರಸ್ತೆ ವ್ಯಾಪಾರ ನಿಷಿದ್ಧವಾದರೂ ಅವರು ಪೋಲಿಸರ ಕಣ್ಣು ತಪ್ಪಿಸಿ ಒಂದು ಅರ್‍ಧ ಗಂಟೆಯ ವ್ಯಾಪಾರ ಮಾಡಿಕೊಂಡು ಪೋಲಿಸರು ಬರುವ ಗುಮಾನಿ ದೂರತೊಡನೆ ಸರಕುಗಳನ್ನು ಒಟ್ಟು ಮಾಡಿ ಮೂಟೆ ಕಟ್ಟಿ ತಳ್ಳು ಗಾಡಿಗಳನ್ನು ದೂಡಿಕೊಂಡು ಓಡಿ ಹೋಗುತ್ತಿದ್ದರು. ಅವರು ಮಾರಾಟ ಮಾಡುವ ಹೆಚ್ಚಿನ ವಸ್ತುಗಳು ಉತ್ತಮ ಗುಣಮಟ್ಟವಲ್ಲದ ಟೋಪಿಗಳು, ಜಪಮಾಲೆಗಳು, ಪ್ರಾರ್‍ಥನೆ ಮಾಡಲು ಉಪಯೋಗಿಸುವ ಸಣ್ಣ ಜಮಖಾನಗಳು, ಜುಬ್ಬಾ-ಪೈಜಾಮ, ಸಲ್ವಾರ್ ಕಮೀಝ್ ಹಾಗೂ ಉದ್ದದ ನೈಟಿಗಳು. ಅವನು ಹೋಟೆಲಿನ ರೂಮಿಗೆ ಪ್ರವೇಶಿಸುತ್ತಿದ್ದಂತೆ ಅವನನ್ನು ಸ್ವಯಂ ಸೇವಕರಿಬ್ಬರು ನಗುತ್ತಾ ಸ್ವಾಗತಿಸಿದರು. ಎಂಟು ದಿನಕ್ಕೆ ಆಗುವಂತಹ ಬೆಳಗ್ಗಿನ ಪಲಾಹಾರ ನೀಡಿದರು. ಅದರಲ್ಲಿ ಟೀ ಬ್ಯಾಗ್, ಹಾಲಿನ ಪ್ಯಾಕ್, ಸಕ್ಕರೆ ಬ್ಯಾಗ್, ಬ್ರೆಡ್, ಬಿಸ್ಕೆಟು, ಮಿಕ್ಸಡ್ ಜಾಂ, ಬ್ರೆಡ್ ಹಾಗೂ ಟೀ ಕುಡಿಯಲು ಗಾಜಿನ ಕಪ್‌ಗಳಿದ್ದುವು. ಅವನು ಕೃತಜ್ಞತೆ ಅರ್‍ಪಿಸಿ, ಕಿಟ್‌ನೊಂದಿಗೆ ರೂಮಿಗೆ ಬಂದಾಗ ಯಾರೂ ಇರಲಿಲ್ಲ. ಕ್ರಮೇಣ ನಾಲ್ಕು ಮಂದಿಯ ಪ್ರವೇಶವಾಯಿತು. ಇಬ್ಬರು ವಯಸ್ಸಾದ ಗಂಡ-ಹೆಂಡತಿ ಮತ್ತಿಬ್ಬರು ಅಕ್ಕ-ತಮ್ಮ, ಎಲ್ಲರೂ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು. ತದ ನಂತರ ಎಲ್ಲರೂ ಅವರವರ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗಾಗಿ ತಯಾರಿಗೆ ತೊಡಗಿದರು.
ಎಂಟು ದಿನ ಮದೀನಾದಲ್ಲಿ ಹೇಗೆ ಕಳೆದೆ ಎಂದು ಅವನಿಗೆ ಗೊತ್ತಾಗಲಿಲ್ಲ. ದಿನಾಲೂ ಮಸೀದಿಯಲ್ಲಿ ಪ್ರಾರ್‍ಥನೆ ಸಲ್ಲಿಸಿ, ಪ್ರವಾದಿಯವರು ಚಿರ ವಿಶ್ರಾಂತಿ ಪಡೆದ ಪವಿತ್ರ ಸ್ಥಳವನ್ನು ಸಂದರ್‍ಶಿಸಿ, ಸಲಾಂ ಹೇಳಿ ಹೊರಗೆ ಬಂದಾಗ ಅವನ ಮನಸ್ಸು ಪ್ರಪುಲ್ಲತೆಯಿಂದ ಅರಳುತ್ತಿತ್ತು. ಜಗತ್ತಿನ ಆಗು ಹೋಗುಗಳ ಮತ್ತು ಸಂಬಂಧಿಕರ ವ್ಯಾಮೋಹದಿಂದ ದೂರವಾದ ಅನುಭವ. ಇಹದ ಮೋಹವನ್ನು ತೊರೆದು ಪರ ಚಿಂತನೆ ಮಾಡುವ ತವಕ. ಈ ಅವಧಿಯಲ್ಲಿ ಅವನು ಹಲವಾರು ಪವಿತ್ರ ಸ್ಥಳಗಳನ್ನು ಸಂದರ್‍ಶಿಸಿದನು. ಪ್ರಾರ್ಥನಾ ಮಂದಿರಗಳಾದ ಜನ್ನತುಲ್‌ಬಶೀಅ, ಮಸ್ಜಿದುಲ್ ಖುದಾ, ಮಸ್ಜಿದುಲ್ ಖಬ್‍ಲತೈನಿ, ಮಸ್ಜಿದುಲ್ ಪತ್‍ಹ, ಮಸ್ಜಿದುಲ್ ಗುಮಾಮ, ಮಸ್ಜಿದುಲ್ ಜಮುಆ, ಮಸ್ಜಿದುಲ್ ಇಜಾಬ, ಮದುಲ್ ಗುಮಾಮ, ಮದುಲ್ ಜುಮುಕಿ, ಮಸ್ಕಿದುಲ್ ಇಜಾಬ, ಉಹ್‌ದ್ ಯುದ್ಧ ನಡೆದ ಸ್ಥಳ ಹಾಗೂ ಇನ್ನಿತರ ಚಾರಿತ್ರಿಕ ಘಟನೆಗಳು ನಡೆದು ಹೋದ ಸ್ಥಳಗಳನ್ನು ವೀಕ್ಷಿಸಿದನು. ಎಲ್ಲಿ ಹೋದರೂ ಅರಬರು ಖರ್‍ಜೂರ ಹಾಗೂ ಒಂದು ರೀತಿಯ ಔಷಧೀಯ ಕಷಾಯವನ್ನು ನೀಡಿ ಸ್ವಾಗತಿಸುತ್ತಿದ್ದರು. ಇದು ಆ ದೇಶದ ಪದ್ಧತಿಯಾಗಿತ್ತು. ಭಾಷೆಯ ತೊಡಕು ಕೆಲವೊಮ್ಮೆ ಅವನಿಗೆ ನಿರಾಶೆ ಹುಟ್ಟಿಸುತ್ತಿತ್ತು. ಆದರೆ ಅವನಲ್ಲಿ ಇಂಗ್ಲಿಷ್ ಹಾಗೂ ಉರ್‍ದು ಭಾಷೆಯ ಅಗಾಧ ಪಾಂಡಿತ್ಯವಿದ್ದುದರಿಂದ ಅವನು ಹೊಂದಾಣಿಕೆಯಲ್ಲಿ ವ್ಯವಹರಿಸುತ್ತಿದ್ದನು. ಪ್ರಾರ್‍ಥನೆ ಮುಗಿದ ನಂತರ ಅವನು ತಪ್ಪದೆ ಪ್ರಾರ್‍ಥನಾ ಮಂದಿರಕ್ಕೆ ಸುತ್ತು ಬರುತ್ತಿದ್ದನು. ಪ್ರವಾದಿಯವರು ಓಡಾಡಿದ ಸ್ಥಳ, ಹಿತವಚನ ನೀಡಿದ ಸ್ಥಳ, ಕುಳಿತ ಸ್ಥಳವನ್ನೆಲ್ಲಾ ವೀಕ್ಷಿಸಿದಾಗ ಅವನ ಮೈ-ಮನ ಪುಲಕಿತಗೊಳ್ಳುತ್ತಿತ್ತು. ಇದು ಕನಸೋ-ನನಸೋ ಎಂದು ಗಾಬರಿಗೊಳ್ಳುತ್ತಿದ್ದನು. ಇಂತಹ ಅವಕಾಶವನ್ನು ಒದಗಿಸಿಕೊಟ್ಟ ಸೃಷ್ಟಿಕರ್‍ತನಿಗೆ ಅವನು ಧನ್ಯವಾದವನ್ನು ಹಲವು ಬಾರಿ ಅರ್‍ಪಿಸಿದನು.
ಮದೀನಾ ತೊರೆಯುವ ಸಮಯ ಬಂತು. ಅವನು ಗದ್ಗದಿತನಾದನು. ಯಾಕೆಂದರೆ ಅವನು ಹೆಂಡತಿ ಮಕ್ಕಳನ್ನು ಕಳಕೊಂಡಾಗಲೂ ಅಳಲಿಲ್ಲ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಹೊಂದಿದಾಗಲೂ ಅತ್ತಿರಲಿಲ್ಲ. ಆದರೆ ಇಂದೇಕೋ? ತನ್ನ ಇಡೀ ಹೃದಯವನ್ನು ಬಿಟ್ಟು ಹೋಗುವಂತಹ ನೋವು ಅವನನ್ನು ಕಾಡುತ್ತಿತ್ತು. ಏನೋ ಒಂದು ಅವ್ಯಕ್ತ ಸಂಕಟ, ಮಕ್ಕಾದ ಬಸ್ಸು ಹತ್ತಿ ಕುಳಿತವನು ಬಸ್ಸು ಹೊರಟಾಗ ಕೊನೆಯ ಭಾರಿ ಒಮ್ಮೆ ಪ್ರಾರ್‍ಥನಾ ಮಂದಿರದತ್ತ ತಿರುಗಿ ನೋಡಿದ. ಎರಡು ತೊಟ್ಟು ಕಣ್ಣೀರು ಅವನ ಕಣ್ಣಿಂದ ಜಾರಿ ಕೆಳಗೆ ಬಿತ್ತು.
ಬಸ್ಸು ವೇಗವಾಗಿ ಮಕ್ಕಾದ ಕಡೆ ಚಲಿಸುತ್ತಿತ್ತು. ಎಲ್ಲರೂ ದೇವರ ನಾಮವನ್ನು ಸ್ತುತಿಸುತ್ತಿದ್ದರು. ಹೆಚ್ಚಿನವರು ಕುಟುಂಬದೊಂದಿಗೆ ಅಥವಾ ಗಂಡ-ಹೆಂಡತಿಯರಾಗಿ ಪವಿತ್ರ ಹಜ್-ಕಾರ್‍ಯ ನಿರ್‍ವಹಿಸಲು ಬಂದಿದ್ದು ತಾನು ಮಾತ್ರ ಒಂಟಿಯಾಗಿದ್ದೇನೆ ಎಂದು ಆಲೋಚನೆ ಅವನನ್ನು ಕಾಡ ತೊಡಗಿದಾಗ ಅವನು ಸ್ವಲ್ಪ ಅಧೀರನಾದರೂ ಸಾವರಿಸಿಕೊಂಡನು. ಅವನು ರಸ್ತೆಯನ್ನು ದಿಟ್ಟಿಸಿದ. ಎಲ್ಲಾ ಕಡೆಯೂ ವನ್-ವೇ. ರಸ್ತೆಯಲ್ಲಿ ಹೊಂಡಗಳಿರಲಿಲ್ಲ. ಪ್ರಾಣಿಗಳ ಯಾ ಮನುಷ್ಯರ ಕಾಟ ಇರಲಿಲ್ಲ. ಭಿಕ್ಷುಕರಿಲ್ಲ. ಅಡ್ಡಾದಿಡ್ಡಿ ಕರೆಂಟ್ ಕಂಬಗಳು, ವಯರ್‌ಗಳು, ಕೇಬಲ್ ಕಂಬಗಳು ಕಂಡು ಬರಲಿಲ್ಲ. ಇಕ್ಕೆಲಗಳಲ್ಲಿ ಅಪಾಯಕಾರಿ ಮರ ಮಟ್ಟುಗಳಿಲ್ಲ. ದೂರದಲ್ಲಿ ಬಾನೆತ್ತರ ತಲೆಎತ್ತಿ ನಿಂತ ಬೆಟ್ಟಗಳು! ಸುಮಾರು ನೂರ ಇಪ್ಪತ್ತು ಕಿಲೋಮೀಟರ್ ವೇಗದಲ್ಲಿ ಬಸ್ಸು ಚಲಿಸುತ್ತಿತ್ತು. ಕೆಲವು ಗಂಟೆಯ ಪ್ರಯಾಣದ ನಂತರ ಬಸ್ಸು ಮಕ್ಕಾದ ಹೋಟೆಲೊಂದರ ಎದುರು ನಿಂತಿತು. ಅಲ್ಲಿ ಅವನಿಗೆ ಎರಡು ಅಂತಸ್ತಿನ ಮೂರು ಬೆಡ್‌ಗಳ ಕೊಠಡಿ ದೊರಕಿತು. ಅವನೊಂದಿಗೆ ವಯಸ್ಸಾದ ಗಂಡ-ಹೆಂಡತಿಯರು ಸಹಪಾಠಿಗಳಾದರು. ಅವರೊಂದಿಗೆ ಸ್ಥೂಲ ಪರಿಚಯ ಮಾಡಿಕೊಂಡ ಅವನು ಮುಂದಿನ ಪ್ರಯಾಣದ ಬಗ್ಗೆ ಆಲೋಚಿಸ ತೊಡಗಿದ.
ಮದೀನಾದಷ್ಟು ಸುಂದರವಾಗಿ ಅವನಿಗೆ ಮಕ್ಕಾ ಕಾಣಲಿಲ್ಲ. ಇಲ್ಲಿಯ ಅರಬರು ಸ್ವಲ್ಪ ಒರಟು ಜನರಂತೆ ಕಂಡು ಬಂದರು. ಯಾತ್ರಿಕರೊಂದಿಗೆ ಒಂದಿಷ್ಟೂ
ಹೊಂದಿಕೊಳ್ಳುತ್ತಿರಲಿಲ್ಲ. ತಮ್ಮ ಪಾಡಿಗೆ ತಾವಿರುತ್ತಿದ್ದರು. ಅವನು ಅವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತಾಡಲು ಹವಣಿಸಿದರೂ ಅವರು ಯಾವುದೇ ಮುತವರ್‍ಜಿ ತೋರಿಸುತ್ತಿರಲಿಲ್ಲ. ಯಾಕೆಂದರೆ ಹೆಚ್ಚಿನವರಿಗೆ ಇಂಗ್ಲಿಷ್ ಯಾ ಉರ್‍ದು ಭಾಷೆಯ ಜ್ಞಾನವಿರಲಿಲ್ಲ. ಬಹುಶಃ ಭಾಷಾ ತೊಡಕು ಸ್ನೇಹಕ್ಕೆ ಅಡಚಣೆಯನ್ನು ಕೊಡುತ್ತಿತ್ತು. ಅವನು ಉರ್‍ದು ಯಾ ಇಂಗ್ಲಿಷ್‌ನಲ್ಲಿ ಹೋಟೆಲಿನ ಮೇಲ್ವಿಚಾರಕರೊಂದಿಗೆ ಮಾತಾಡಲು ಆಸಕ್ತಿ ತೋರಿದರೂ ಅವರು “ಓ ಅರಬ್” ಎಂದು ಹೇಳುತ್ತಿದ್ದರು. ರೂಮಿನ ಕೀಗಾಗಿ ರೂಮ್ ನಂಬ್ರವನ್ನು ಇಂಗ್ಲೀಷ್‌ನಲ್ಲಿ ಹೇಳಿದರೆ ಅಲ್ಲಿಯ ಮೇಲ್ವಿಚಾರಕನು ಕ್ಯಾಲ್ಕುಲೇಟರ್ ಕೊಟ್ಟು, ನಂಬ್ರ ಒತ್ತಲು ಹೇಳುತ್ತಿದ್ದನು. ಇದೊಂದು ತಮಾಷೆಯಾಗಿ ಅವನಿಗೆ ಕಾಣುತ್ತಿತ್ತು. ಅವರ ತಾಯ್ನಾಡ ಭಾಷೆಗೆ ಮೀರಿದ ಸ್ನೇಹವನ್ನು ಅವರು ಇಷ್ಟಪಡುತ್ತಿರಲಿಲ್ಲ. ಪ್ರಯಾಣದ ಉದ್ದಕ್ಕೂ ಇದೊಂದು ಸಮಸ್ಯೆಯಾಗಿ ಅವನನ್ನು ಆಗಾಗ್ಗೆ ಕಾಡುತ್ತಿತ್ತು. ಇದರಿಂದಾಗಿ ಅವನು ನಗರವನ್ನು ನಿರ್‍ಭೀತಿಯಿಂದ ಸುತ್ತಲು ಹೆದರುತ್ತಿದ್ದನು. ಪೊಲೀಸ್‌ನವರಿಗೂ ಇತರ ಭಾಷೆಯ ಜ್ಞಾನದ ಕೊರತೆ ಇತ್ತು.
ಮಕ್ಕಾದಲ್ಲಿ ತಂಗಿದ ಮರುದಿನವೇ ಯಾತ್ರಿಕರೆಲ್ಲಾ ಪವಿತ್ರ ಮಕ್ಕಾದ ಕೇಂದ್ರ ಸ್ಥಳವಾದ “ಕಹಬಾ” ಮಂದಿರಕ್ಕೆ ಪ್ರದಕ್ಷಿಣೆ ಬರುವ ಕಾರ್‍ಯಕ್ಕೆ ಪ್ರವರ್‍ತರಾದರು. ಯಾತ್ರಿಕರಿಗಾಗಿ ಬಂದ ಬಸ್ಸಿನಲ್ಲಿ ಅವನು ಕುಳಿತುಕೊಂಡ. ಕೆಲವೇ ಗಂಟೆಗಳಲ್ಲಿ ಬಸ್ಸು ‘ದ್ದುಲ್ ಹುಲೈಪಾ’ ಮಸೀದಿಯ ಬಳಿ ನಿಂತಿತು. ಎಲ್ಲರೂ ಮಸೀದಿಯಲ್ಲಿ ಪ್ರಾರ್‍ಥನೆ ಸಲ್ಲಿಸಿ “ಇಹ್ರಾಮ್” ಕಟ್ಟಿದರು. ಅವನು ಮೊದಲ ಬಾರಿಗೆ ತನ್ನ ವೇಷ-ಭೂಷಣ ಕಳಚಿ, ಸ್ನಾನ ಮಾಡಿ, ಬಿಳಿ ಬಟ್ಟೆಯನ್ನು ಹೊದ್ದು, ಬಿಳಿ ದೋತಿಯನ್ನು ಉಟ್ಟುಕೊಂಡನು. ಅವನು ಈ ರೀತಿ “ಇಹ್ರಾಮ್ ಮೊದಲ ಬಾರಿ ಕಟ್ಟುದಾಗಿದೆ. ಅದೊಂದು ರೀತಿಯ ಸನ್ಯಾಸತ್ವದ ಕುರುಹಾಗಿದೆ. ಮುಂದೆ ಬಸ್ಸು ವೇಗವಾಗಿ ಚಲಿಸುತ್ತಾ ಮಕ್ಕಾದ ಕೇಂದ್ರ ಬಿಂದುವಾದ ಹಾಗೂ ಭೂಮಿಯಲ್ಲಿ ನಿರ್‍ಮಿಸಿದ ಪ್ರಥಮ ಮಸೀದಿಯಾದ ‘ಮಸ್ಜಿದುಲ್ ಹರಾಂ’ನತ್ತ ಸಾಗಿತು. ದೇವರ ಗುಣಗಾನದ ಘೋಷಣೆ ಎಲ್ಲರ ಬಾಯಿಯಿಂದಲೂ ಉಚ್ಚಾರವಾಗುತ್ತಿತ್ತು. ಸಂಜೆ ಹೊತ್ತು ಎಲ್ಲರಿಗೂ ‘ಕಹಬಾ’ ಭವನ ನೋಡುವ ಹಾಗೂ ಪ್ರದಕ್ಷಿಣೆ ಬರುವ ತವಕ. ಜಗತ್ತಿನ ಎಲ್ಲಾ ಮುಸ್ಲಿಮರು ‘ಕಹಬಾ’ದತ್ತ ಅಭಿಮುಖರಾಗಿ ಪ್ರಾರ್‍ಥನೆ ಸಲ್ಲಿಸಬೇಕಾದ ಐತಿಹಾಸಿಕ ಭವನ, ಅನತಿ ದೂರದಲ್ಲಿ ನಿಂತ ಬಸ್ಸಿನಿಂದ ಜನ ತಂಡೋಪತಂಡವಾಗಿ ಇಳಿಯ ತೊಡಗಿದರು. ಅವನು ಮಾತ್ರ ಏಕಾಂಗಿ. ಅವನ ಬಸ್ಸಿನ ಯಾತ್ರಿಕರ ನಾಯಕತ್ವವನ್ನು ಸ್ಥಳೀಯ ಅರಬ್ಬಿ ಒಬ್ಬರು ವಹಿಸಿದ್ದರು. ಅವರು ಇಡೀ ತಂಡವನ್ನು ‘ಕಹಬಾ’ ಭವನದತ್ತ ದೇವರ ಪವಿತ್ರ ನಾಮೋಚ್ಛಾರಣೆಯೊಂದಿಗೆ ಕರೆದೊಯ್ಯುತ್ತಿದ್ದರು. ಸಂಜೆ ಜಾರಿ ಕತ್ತಲೆ ನಿಧಾನವಾಗಿ ಆವರಿಸುತ್ತಿತ್ತು. ಎಲ್ಲರೂ ಭಯಭಕ್ತಿಯಿಂದ “ಮಸ್ಜಿ ದುಲ್ ಹರಂ’ನ ಪ್ರವೇಶ ದ್ವಾರವನ್ನು ಹೊಕ್ಕು ‘ಕಹಬಾ’ದ ಕಡೆ ಸಾಗಿದರು. ‘ಕಹಬಾ’ದ ಮೊದಲ ದರ್‍ಶನ. ಅವನ ಕಣ್ಣನ್ನು ಅವನು ನಂಬಲೇ ಇಲ್ಲ. ದೇವರ ನಾಮಸ್ತುತಿಯೊಂದಿಗೆ ಅವಿರತವಾಗಿ ಪ್ರದಕ್ಷಿಣೆ ಬರುತ್ತಿರುವ ಜನ ಸಾಗರವನ್ನು ನೋಡಿ ಅವನು ದಂಗಾದ. ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಬೇಕು ಎಂದು ಹೇಳುತ್ತಿರುವವರ ಮಾತಿನ ಮರ್‍ಮ ಈಗ ಅವನಿಗೆ ಅರ್‍ಥವಾಯಿತು. ಪ್ರದಕ್ಷಿಣೆ ಬರುತ್ತಿರುವ ಲಕ್ಷ ಲಕ್ಷ ಯಾತ್ರಿಕರೊಂದಿಗೆ ಅವನೂ ಲೀನನಾದ. ತನ್ನ ದೇಹ, ತನ್ನ ಆರೋಗ್ಯ, ತನ್ನ ಆಸ್ತಿ, ಅಂತಸ್ತು, ಆಡಂಬರ, ಅಹಂಕಾರ ಎಲ್ಲವನ್ನೂ ಮರೆತ ಅವನು ಆ ಯಾತ್ರಿಕರ ಮಧ್ಯೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಎಲ್ಲಾ ವಿಧಿ ವಿಧಾನವನ್ನು ನಿರ್‍ವಹಿಸುವ ದೃಢ ಸಂಕಲ್ಪದೊಂದಿಗೆ ಆ ಜನಜಂಗುಳಿಯಲ್ಲಿ ಸೇರಿ ಹೋದ. ತದ ನಂತರ ಅವನು ಸಪಾ-ಮರ್‍ವ ಬೆಟ್ಟಗಳ ಮಧ್ಯೆ ಏಳು ಬಾರಿ ಪ್ರದಕ್ಷಿಣೆ ಬಂದು ಪ್ರಾರ್‍ಥನೆ ಸಲ್ಲಿಸಿದ.
ಮುಂದಿನ ಸುಮಾರು ಒಂದು ತಿಂಗಳು ಮಕ್ಕಾದಲ್ಲಿದ್ದ ಅವನು ಬೆಳಿಗ್ಗೆ ಮೂರು ಗಂಟೆಗೆ ಎದ್ದು ಉಚಿತವಾಗಿ ಸರಕಾರ ಏರ್‍ಪಾಡು ಮಾಡಿದ ಬಸ್ಸಿನಲ್ಲಿ ‘ಕಹಬಾ’ಕ್ಕೆ ಬಂದು ಏಳು ಸುತ್ತಿನ ಪ್ರದಕ್ಷಿಣೆ ಮುಗಿಸಿ ‘ಮಸ್ಜಿದುಲ್ ಹರಂ’ ಭವನ ಪ್ರವೇಶಿಸಿ, ಪ್ರಾರ್‍ಥನೆ ಸಲ್ಲಿಸುತ್ತಿದ್ದ. ರಾತ್ರಿವರೆಗೂ ಪ್ರಾರ್‍ಥನಾ ಮಂದಿರದಲ್ಲಿದ್ದು ದೇವಗ್ರಂಥ ಖುರಾನ್ ಓದುತ್ತಿದ್ದ. ಕಹಬಾ ಪ್ರದಕ್ಷಿಣೆ ಸಮಯದಲ್ಲಿ ‘ಹಜರತ್ ಅಸ್ಪದ್’ ಎಂಬ ಸ್ವರ್‍ಗದ ಕಲ್ಲನ್ನು ಸಾಧ್ಯವಾದಾಗ ಸ್ಪರ್‍ಶ ಮಾಡುತ್ತಿದ್ದ. ಪ್ರವಾದಿ ಇಬ್ರಾಹಿಂರವರ ಹೆಜ್ಜೆ ಗುರುತಿನ ಕಲ್ಲನ್ನು ವೀಕ್ಷಿಸಿದ. ರುಕ್ಮುಲ್ ಯಾಮಾನಿಯನ್ನು ಕೈಯಿಂದ ಸ್ಪರ್‍ಶಿಸಿದ. ಇದು ಅವನ ದೈನಂದಿನ ಕಾರ್‍ಯಕ್ರಮ. ಬೆಳಗ್ಗಿನ ಜಾವ ರೂಮು ತೊರೆದರೆ ಮತ್ತೆ ಅವನು ಬರುವುದು ರಾತ್ರಿಯೇ ಇದ್ದ ಗಂಜಿ ಊಟವನ್ನು ಸೇವಿಸಿ, ನಿದ್ರೆ ಹೋಗುತ್ತಿದ್ದ. ರೂಮಿನಲ್ಲಿರುವ ಸಹಯಾತ್ರಿಕರೊಂದಿಗೆ ಅವನು ಅಷ್ಟಾಗಿ ಸೇರಿಕೊಳ್ಳುತ್ತಿರಲಿಲ್ಲ.
ತನ್ನ ಪ್ರಯಾಣದ ಮೂವತ್ತಾರು ದಿನ ಮುಗಿದಿತ್ತು. ಇನ್ನು ಬರೇ ಆರು ದಿನ ಉಳಿದಿದೆ. ಈ ಆರು ದಿನಗಳಲ್ಲಿ ಮೂರು ದಿನ ಮೀನಾದಲ್ಲಿ ತಂಗಬೇಕು. ಒಂದು ಹಗಲು “ಅರಫಾ”ದಲ್ಲಿ ಕಳೆದು ನಂತರ ‘ಮುಯ್ದಲಿಪ್’ನಲ್ಲಿ ಕಲ್ಲುಗಳನ್ನು ಹೆಕ್ಕಿ ಮೀನಾಕ್ಕೆ ತರಬೇಕು. ಸೈತಾನನಿಗೆ ಕಲ್ಲು ಬಿಸಾಕಬೇಕು. ನಂತರ ಹಿಂತಿರುಗಿ ‘ಕಹಬಾ’ ಹಾಗೂ ‘ಸಪಾ-ಮರ್‍ವ’ದಲ್ಲಿ ಪ್ರದಕ್ಷಿಣೆ ಮುಗಿಸಿ ಕೇಶಮುಂಡನ ಮುಗಿಸಬೇಕು. ಇದೇ ಸಮಯದಲ್ಲಿ ‘ಬಲಿದಾನ’ ಮಾಡಬೇಕು. ಅಲ್ಲಿಗೆ ಪವಿತ್ರ ಹಜ್‌ಕಾರ್‍ಯ ಮುಗಿಯುತ್ತದೆ.
ಎಂದಿನಂತೆ ತನ್ನ ದೈನಂದಿನ ಕಾರ್‍ಯ ಮುಗಿಸಿ ಅವನು ಸಪಾ-ಮರ್‍ವ ಬೆಟ್ಟದ ಹಿಂಬದಿಗೆ ಬಂದ. ಅಲ್ಲಿಯ ಇಳಿಜಾರಾದ ಬಂಡೆ ಕಲ್ಲುಗಳ ಒಂದು ಮೂಲೆಯನ್ನು ಆರಿಸಿ ಕುಳಿತ. ಸ್ವಲ್ಪ ಆರಾಮ ಎನಿಸಿತು. ದೂರದ ಬೆಟ್ಟಗಳತ್ತ ಕಣೋಡಿಸಿದ. ಸಂಜೆಯ ಹೊತ್ತು ಬಿಸಿಯೂ ಅಲ್ಲದ, ತಂಪೂ ಅಲ್ಲದ ಧೂಳು ಮಿಶ್ರಿತ ಗಾಳಿ ಜೋರಾಗಿ ಬೀಸಿ ಬರುತ್ತಿತ್ತು. ಅವನು ಗಾಳಿಗೆ ಬೆನ್ನು ಹಾಕಿ ಕುಳಿತ. ಯಾಕೆಂದರೆ ಆ ಧೂಳು ಮಿಶ್ರಿತ ಗಾಳಿಯು ಶ್ವಾಸಕೋಶ ಪ್ರವೇಶಿಸಿದರೆ ಕೆಮ್ಮಿನ ತೊಂದರೆಗೆ ಒಳಗಾಗುವ ಸಾಧ್ಯತೆಯಿತ್ತು. ಅಲ್ಲಲ್ಲಿ ಯಾತ್ರಿಕರು ಗುಂಪು ಗುಂಪಾಗಿ ಕುಳಿತು ಮಾತಾಡುತ್ತಿದ್ದರು. ಕೆಲವರು ದೂರದ ತಮ್ಮ ಊರಿಗೆ ಫೋನಿನಲ್ಲಿ ಮಾತಾಡುತ್ತಾ ಕುಟುಂಬದವರ ಸುಖ ದುಃಖವನ್ನು ವಿಚಾರಿಸುತ್ತಿದ್ದರು. ಒಂದೊಂದು ಗುಂಪಿನವರದ್ದು ಒಂದೊಂದು ಭಾಷೆ. ಒಂದೊಂದು ತರಹದ ಉಡುಗೆ-ತೊಡುಗೆ, ಸೇವಿಸುವ ಆಹಾರದಲ್ಲೂ ವೈವಿಧ್ಯತೆ. ಅವನ ಮುಖದಲ್ಲಿ ಒಂದು ಸಣ್ಣಗೆ ನಗು ಮೂಡಿ ಬಂತು. ಈ ಯಾತ್ರಿಕರು ಇನ್ನೂ ತಮ್ಮ ಇಹದ ವ್ಯಾಮೋಹದಿಂದ ದೂರವಾಗಲು ಇಷ್ಟಪಡುದಿಲ್ಲ. ಇರಲಿ, ಅದನ್ನೇ ಜೀವನ ಅನ್ನುವುದು ನನ್ನ ಜೀವನದಲ್ಲಿ ಒದಗಿ ಬಂದಂತಹ ಪರಿಸ್ಥಿತಿ ನಮ್ಮ ವೈರಿಗಳಿಗೂ ಒದಗಿ ಬರುವುದು ಬೇಡ. ಎಲ್ಲರೂ ಸುಖವಾಗಿರಲಿ ದೇವರೇ ಎಂದು ಮನದಲ್ಲೇ ದೇವರನ್ನು ಪ್ರಾರ್‍ಥಿಸಿದ.
ಅವನು ದೂರದ ಬೆಟ್ಟದತ್ತ ದೃಷ್ಟಿ ಹಾಯಿಸಿದ. ಬೆಟ್ಟದ ಎತ್ತರವನ್ನು ಮೀರಿ ನಿಂತ ಕಟ್ಟಡಗಳ ಸಾಲು-ಸಾಲು! ಒಂದು ಬದಿಯಲ್ಲಿ ಕಟ್ಟಡ ಒಂದರ ತುದಿಯಲ್ಲಿ ಬೃಹದಾಕಾರದ ಗಡಿಯಾರ ಮೌನವಾಗಿ ತನ್ನ ಕರ್‍ತವ್ಯವನ್ನು ನಿರ್‍ವಹಿಸುತ್ತಿತ್ತು. ಅರಬ್ ದೇಶದಲ್ಲಿ ಏನೊಂದು ಬದಲಾವಣೆ! ತೈಲ ನಿಕ್ಷೇಪ ದೊರೆತೊಡನೆ ಜಗತ್ತಿನ ಸಿರಿವಂತ ದೇಶಗಳಲ್ಲಿ ಅರಬ್ ದೇಶಗಳೂ ಸ್ಥಾನ ಪಡೆದುವು. ಮರುಭೂಮಿಯನ್ನು ಸ್ವರ್‍ಗ ಮಾಡಿದರು. ಗಗನ ಚುಂಬಿತ ಕಟ್ಟಡಗಳು ತಲೆ ಎತ್ತಿದುವು. ಬೆಟ್ಟಗಳ ಮಧ್ಯೆ ಸುರಂಗ ತೋಡಿ ವಾಹನ ಸೌಕರ್‍ಯವನ್ನು ಹೆಚ್ಚಿಸಿಕೊಂಡರು. ಅತೀ ದುಬಾರಿ ಬೆಲೆಯ ಕಾರುಗಳು ಓಡಾಡ ತೊಡಗಿದುವು. ಕೈಗೆ-ಕಾಲಿಗೆ ಕೆಲಸದ ಆಳುಗಳು, ಐಶಾರಾಮಿ ಜೀವನ. ಜಗತ್ತಿನ ಸಿರಿತನವನ್ನೆಲ್ಲಾ ಕೆಲವೇ ಕೆಲವು ದೇಶಗಳಿಗೆ ಸೀಮಿತವಾಗಿ ಹೋಗಿದೆ. ಯಾಕೆ ಹೀಗೆ? ಎಂಬುದು ಅವನಿಗೆ ನಿಲುಕಲಾರದ ಯಕ್ಷ ಪ್ರಶ್ನೆಯಾಗಿ ಉಳಿಯಿತು.
ಅವನು ಎದ್ದು ನಿಂತು ರಸ್ತೆಗೆ ಬಂದನು. ಅಲ್ಲಿಂದ ಬಸ್ಸು ಹತ್ತಿ ಕುಳಿತನು. ಬಸ್ಸಿನಲ್ಲೂ ನೂಕುನುಗ್ಗಲು. ಪ್ರತಿಯೊಬ್ಬರೂ ತಮ್ಮ ಸ್ವರಕ್ಷಣೆಯಲ್ಲಿ ಮಗ್ನರಾಗುತ್ತಿದ್ದರೇ ಹೊರತು ಹತ್ತಿರ ಕುಳಿತವರ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಪರಿಚಯವಿಲ್ಲದಿದ್ದರೂ ಪರಿಚಯ ಮಾಡಿಕೊಳ್ಳುವ ಅವಕಾಶವಾಗಲೀ, ತಾಳ್ಮೆಯಾಗಲೀ ಯಾರಿಗೂ ಇರಲಿಲ್ಲ. ಬಸ್ಸು ಅವನ ರೂಮಿನ ಪಕ್ಕದ ನಿಲ್ದಾಣದಲ್ಲಿ ನಿಂತಿತು. ಅದು ಕೊನೆಯ ನಿಲ್ದಾಣ. ಅಲ್ಲಿಯೇ ಎಲ್ಲಾ ಯಾತ್ರಿಕರು ತಂಗುವ ಏರ್‍ಪಾಡು ಮಾಡಿದ್ದರು. ಅವನು ಬಸ್ಸಿನಿಂದ ಇಳಿದು ರೂಮು ಕಡೆ ಹೆಜ್ಜೆ ಹಾಕಿದ. ರೂಮಿಗೆ ಹೋಗಲು ಮನಸ್ಸಾಗದೆ ಅಲ್ಲಿಯೇ ಅನತಿ ದೂರದಲ್ಲಿರುವ ಪಾರ್‍ಕಿನ ಒಳಗಿನ ಕಲ್ಲು ಬೆಂಚಿನ ಮೇಲೆ ಕುಳಿತನು. ಹವಾಮಾನ ಸ್ವಲ್ಪ ಬಿಸಿಯೇ ಇತ್ತು. ಗಾಳಿ ಸ್ವಲ್ಪ ಜೋರಾಗಿ ಬೀಸಿ ಬರುತ್ತಿತ್ತು. ರಸ್ತೆ ಬದಿಯಲ್ಲಿ, ಪಾರ್‍ಕಿನ ಸುತ್ತ, ಅಂಗಡಿಗಳ ಒಳಗೆ ಹಾಗೂ ಹೊರಗೆ ಹೋಟೆಲಿನ ಸುತ್ತಮುತ್ತ ಮತ್ತು ವರಾಂಡಗಳಲ್ಲಿ ಯಾತ್ರಿಕರು ತುಂಬಿದ್ದರು. ಹಜ್ ಅವಧಿಯಲ್ಲಿ ಅರಬ್ಬಿಗಳು ದಾನ ಮಾಡುವುದು ರೂಢಿಯಾಗಿತ್ತು. ವಾಹನಗಳಲ್ಲಿ ಬಿಸ್ಕೀಟು, ಅನ್ನದಪೊಟ್ಟಣ, ಬ್ರೆಡ್, ಕೊಡೆ, ಚಪ್ಪಲಿ, ಕೋಲ್ಡ್ ಡ್ರಿಂಕ್ಸ್, ಮೊಸರಿನ ಪ್ಯಾಕ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ತುಂಬಿಸಿಕೊಂಡು ದಾರಿಯ ಅಂಚಿನಲ್ಲಿ ಮತ್ತು ಪಾದಾಚಾರಿಗಳು ನಡೆಯುವ ರಸ್ತೆಗಳಲ್ಲಿ ವಿತರಿಸುತ್ತಿದ್ದರು. ಆದರೆ ಹೆಚ್ಚಿನ ಯಾತ್ರಿಕರು ತಾವು ಬಂದ ಉದ್ದೇಶವನ್ನು ಮರೆತು ಬರಪೀಡಿತ ಪ್ರದೇಶದಿಂದ ಬಂದವರಂತೆ ಆ ಸಾಮಾಗ್ರಿಗಳಿಗಾಗಿ ಮುಗಿ ಬೀಳುತ್ತಿದ್ದರು. ಕೆಲವೊಮ್ಮೆ ಇದು ಅತಿರೇಕವಾಗಿ ಜಗಳವಾಡುವುದೂ ಕೂಡಾ ಕಂಡು ಬರುತ್ತಿತ್ತು. ಇದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಒಂದು ತಿಂಗಳು ಮಕ್ಕಾದಲ್ಲಿದ್ದ ಅವನು ಒಮ್ಮೆಯೂ ಆ ದಾನಕ್ಕೆ ಮುಗಿ ಬೀಳಲಿಲ್ಲ, ಕೈ ಚಾಚಲಿಲ್ಲ. ದೂರದಿಂದಲೇ ಎಲ್ಲವನ್ನೂ ವೀಕ್ಷಿಸುತ್ತಿದ್ದ. ಇದು ದಾನವೋ ಅಥವಾ ‘ತಾಕತ್ತಿನ’ ಪ್ರದರ್‍ಶನವೋ ಎಂಬ ಸಂಶಯ ಅವನನ್ನು ಕಾಡುತ್ತಿತ್ತು. ಎಲ್ಲವನ್ನೂ ತೊರೆದು ಪುಣ್ಯಗಳಿಸಲು ಬಂದವರು ಈ ರೀತಿ ಮುಗಿಬೀಳುವುದು ಅವನಿಗೆ ಸಹ್ಯವಾಗಲಿಲ್ಲ. ಬಲಗೈಯಲ್ಲಿ ಕೊಟ್ಟ ದಾನ ಎಡಕೈಗೆ ತಿಳಿಯಬಾರದು ಎಂದು ಬಲ್ಲವರು ಹೇಳಿದ್ದು ಸುಳ್ಳೇನು? ಅವನು ಈ ಪ್ರದರ್‍ಶನದ ಹತ್ತಿರವೂ ಸುಳಿಯದೆ ತನಗೂ ಆ ವ್ಯವಹಾರಕ್ಕೂ ಸಂಬಂಧವಿಲ್ಲದಂತೆ ನಡೆದು ಹೋಗುತ್ತಿದ್ದ. ಆದರೆ ಬೆರಳೆಣಿಕೆಯ ಕೆಲವು ಅರಬರು ಜನ-ಜಂಗುಳಿಯಿಂದ ಕೆಲವೇ ಗಜ ದೂರ ನಿಂತು ತಮ್ಮ ಕಡೆಗೆ ನಡೆದು ಬರುವ ಕೆಲವೇ ಯಾತ್ರಿಕರ ಬಳಿ ಸಾರಿ, ನಗು ಮುಖದಿಂದ ದಾನ ಮಾಡುತ್ತಿದ್ದರು. ತನ್ನ ಬಳಿಗೆ ಬಂದು ನೀಡುತ್ತಿರುವ ದಾನವನ್ನು ಅವನು ಕೃತಜ್ಞತೆಯೊಂದಿಗೆ ಸ್ವೀಕರಿಸುತ್ತಿದ್ದ.
ಎಂದಿನಂತೆ ಅವನು ಪಾರ್‍ಕಿನ ಮೂಲೆಯಲ್ಲಿ ಕುಳಿತು ಈ ಎಲ್ಲಾ ಪರಿಸ್ಥಿತಿಯನ್ನು ದೂರದಿಂದಲೇ ವೀಕ್ಷಿಸುತ್ತಿದ್ದ. ಆದರೆ ಯಾರೊಂದಿಗೂ ಇದರ ಬಗ್ಗೆ ಚರ್‍ಚಿಸುತ್ತಿರಲಿಲ್ಲ. ಯಾಕೆಂದರೆ ಅವನ ರೀತಿಯ ಮನಸ್ಥಿತಿಯವರು ಅಲ್ಲಿ ದೊರಕುವುದು ಕಷ್ಟಸಾಧ್ಯವೆಂದು ಅವನಿಗೆ ತಿಳಿದಿತ್ತು. ದಾನದ ಸಾಮಾಗ್ರಿಗಳಿಗೆ ಮುಗಿ ಬೀಳುವುದು ಒಂದು ಕಡೆಯಾದರೆ ಇನ್ನು ಕೆಲವು ಕಡೆ ಕಷಾಯ, ಚಹಾ, ಕರ್‍ಜೂರ ವಿತರಣೆಯಾಗುತ್ತಿದ್ದು ಅದಕ್ಕೂ ನೂಕು ನುಗ್ಗಲು ಸಹಜವಾಗಿತ್ತು. ಕೈಗೆ ಸಿಕ್ಕಿದ ಆಹಾರ ಸಾಮಾಗ್ರಿಗಳನ್ನು ಪಾರ್‍ಕ್‌ನಲ್ಲಿ ಕುಳಿತು ತಿಂದು ಖಾಲಿ ಪೊಟ್ಟಣಗಳನ್ನು ಹಾಗೂ ಪಾನೀಯದ ಖಾಲಿ ಕಪ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಇದು ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ಬಿಂಬಿಸುತ್ತದೆ ಎಂಬ ಸಾಮಾನ್ಯ ಜ್ಞಾನವೂ ಈ ಯಾತ್ರಿಕರಿಗೆ ಇಲ್ಲದಿರುವ ಬಗ್ಗೆ ಅವನಿಗೆ ಬೇಸರವಾಯಿತು. ಇದೆಲ್ಲವನ್ನು ನೋಡಲಿಕ್ಕಾಗದೆ ಅವನು ಎದ್ದು ನಿಂತ. ಯಾಕೊ ಅವನ ಮನಸ್ಸು ಸ್ಥಿಮಿತ ಕಳಕೊಂಡಿತ್ತು. ಅವನು ನೆಮ್ಮದಿ ಹಾಗೂ ಪ್ರೀತಿಯನ್ನು ಅರಸುತ್ತಿದ್ದ. ಜಗತ್ತನ್ನು ಅರ್‍ಥ ಮಾಡಿಕೊಂಡವನಿಗೆ ಜಗತ್ತನ್ನು ಪ್ರೀತಿಸುವುದು ಸಾಧ್ಯವಿದೆ. ಪ್ರೀತಿಯ ಒಂದು ಮಾತು, ಒಂದು ಪರಿಚಯ ಹೃದಯವನ್ನು ಶ್ರೀಮಂತಗೊಳಿಸುತ್ತದೆ. ಅದೇಕೋ ಅವನಿಗೆ ಇಲ್ಲಿ ಪ್ರೀತಿಯ ಕೊರತೆ ಎದ್ದು ಕಾಣುತ್ತಿತ್ತು. ಪ್ರತಿಯೊಬ್ಬರೂ ಅವರವರ ಆಗು-ಹೋಗುಗಳ ಬಗ್ಗೆ ಮುತುವರ್‍ಜಿ ವಹಿಸುತ್ತಿದ್ದರೇ ಹೊರತು ಭಾವನೆಗಳ ಹೊಂದಾಣಿಕೆ ಮಾತ್ರ ಮರೀಚಿಕೆಯಾಗಿತ್ತು. ಸೋಲು-ಗೆಲುವುಗಳಿಗೆ ಸಮಾನವಾಗಿ ಸ್ವೀಕರಿಸುವ ಕೊರತೆ ಇರುವಲ್ಲಿ ಆನಂದ ಕನಸಾಗಿಯೇ ಉಳಿಯುತ್ತದೆ.
ಅವನು ತಲೆಯೆತ್ತಿ ಆಕಾಶದತ್ತ ನೋಡಿದ. ಪಶ್ಚಿಮ ದಿಕ್ಕಿನಲ್ಲಿ ಕಪ್ಪು ಮೋಡಗಳ ಶೇಖರಣೆಯಾಗಿದ್ದು ಆಗೊಮ್ಮೆ-ಈಗೊಮ್ಮೆ ಕೋಲ್ಮೀಂಚುಗಳು ಕಂಡು ಬಂದುವು. ಅವನು ತನ್ನ ಪ್ಯಾಂಟಿನ ಕಿಸೆಗೆ ಕೈಹಾಕಿ ಪರ್‍ಸು ಇರುವ ಬಗ್ಗೆ ಖಾತ್ರಿ ಮಾಡಿಕೊಂಡ. ಕುತ್ತಿಗೆಗೆ ಹಾಕಿದ ಗುರುತಿನ ಕಾರ್‍ಡನ್ನು ಮುಟ್ಟಿ ನೋಡಿದ. ಸರಿಯಿದೆ. ಇನ್ನೇನು ಒಂದು ಹೆಜ್ಜೆ ಮುಂದಡಿ ಇಟ್ಟ. ಆ ಕ್ಷಣದಲ್ಲಿ ಅವನಿಗೆ ಅಡ್ಡವಾಗಿ ಬುರ್‍ಖಾ ದಾರಿ ಹೆಣ್ಮಗಳು ಬಿರುಸಿನಿಂದ ಮುಂದೆ ನಡೆದು ಹೋದವಳು ಗಕ್ಕನೆ ನಿಂತು ತಿರುಗಿ ನೋಡಿದಳು. ಆಕಸ್ಮಿಕ ಸನ್ನಿವೇಶದಿಂದ ಅವನು ಕತ್ತೆತ್ತಿ ಅವಳ ಕಡೆ ನೋಡಿದ. ಅವಳು ತದೇಕಚಿತ್ತದಿಂದ ಅವನನ್ನೇ ನೋಡುತ್ತಿದ್ದವಳು “ಸುಬಹಾನಲ್ಲಾ” ಎಂದು ಉದ್ಗಾರ ಎತ್ತಿದಳು. ಅವನು ಒಮ್ಮೆ ತಬ್ಬಿಬ್ಬಾದ. ಅವಳು ಸುಮಾರು ಇಪ್ಪತೈದು ಮುವತ್ತರ ಆಸುಪಾಸಿನ ಪ್ರಾಯದ ಅಪ್ರತಿಮ ಸುಂದರಿ, ದುಬಾರಿ ಬೆಲೆಯ ಕಪ್ಪು ಬುರ್‍ಕಾದಿಂದ ತನ್ನ ಮುಖ ಮತ್ತು ಅಂಗೈಯನ್ನು ಬಿಟ್ಟು ದೇಹವನ್ನು ಸಂಪೂರ್‍ಣ ಮುಚ್ಚಿಕೊಂಡಿದ್ದಳು. ಹಾಲು ಬಣ್ಣದ ಗಾಂಭೀರ್‍ಯ ಮುಖ. ದಿಟ್ಟೆ ಎಂದು ಅವಳ ಮುಖ ಸಾರಿ ಹೇಳುತ್ತಿತ್ತು. ಅವನಿಗೆ ಭಯವಾಯಿತು. ಅರಬ್ ದೇಶಗಳಲ್ಲಿ ಹೆಣ್ಮಕ್ಕಳು ಏನಾದರೂ ಅಪಾರ್‍ಥ ಮಾಡಿಕೊಂಡು ಪೋಲೀಸರಿಗೆ ಫೋನು ಮಾಡಿದರೆ ಸಾಕು, ವಿಚಾರಣೆ ಇಲ್ಲದೆ ಸೀದಾ ಕಂಬಿ ಎಣಿಸಬೇಕಾಗುತ್ತದೆ. ಆದುದರಿಂದಲೇ ಅಲ್ಲಿ ಮಧ್ಯರಾತ್ರಿಯಲ್ಲೂ ಹೆಣ್ಮಕ್ಕಳು ಭಯವಿಲ್ಲದೆ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬಹುದು. ಈ ರಾದ್ಧಾಂತ ಬೇಡವೆಂದು ಅವನು ತಲೆತಗ್ಗಿಸಿ ಮುಂದಡಿ ಇಟ್ಟ.
“ಒಂದು ನಿಮಿಷ ನಿಲ್ಲಬಹುದೇ?” ಇಂಗ್ಲೀಷ್‌ನಲ್ಲಿ ಕೇಳಿ ಬಂದ ಸ್ವರದತ್ತ ಅವನು ಮತ್ತೊಮ್ಮೆ ಕತ್ತು ತಿರುಗಿಸಿದ. ಅವನಿಗೆ ಮರುಭೂಮಿಯಲ್ಲಿ ‘ಓಯಸಿಸ್’ ಕಂಡಷ್ಟು ಸಂತೋಷವಾಯಿತು. ಸುಮಾರು ಒಂದು ತಿಂಗಳಿಂದ ಅವನು ಅರಬರೊಂದಿಗೆ ಇಂಗ್ಲಿಷ್‌ನಲ್ಲಿ ಮಾತಾಡಲು ತಿಣಕಾಡಿದರೂ ಸಾಧ್ಯವಾಗದಾಗ ಇದೆಂತಹ ಅನುಭವ! ಅವಳು ಅವನ ಉತ್ತರಕ್ಕೆ ಕಾಯದೆ ಅವನ ಹತ್ತಿರ ಬಂದಳು. ದೂರಕ್ಕೆ ಕೈಸನ್ನೆ ಮಾಡಿದಳು. ಸೇವಕನೊಬ್ಬ ಕೈಯಲ್ಲಿ ಕಿಟ್ ಹಿಡಿದುಕೊಂಡು ಓಡೋಡಿ ಬಂದ. ಅವಳು ಅವನಿಂದ ಕಿಟ್ ತೆಗೆದುಕೊಂಡು, ಕಪ್‌ಗೆ ಕಷಾಯ ಸುರಿದಳು. ಬಿಸಿ ಹೊಗೆ ಕಪ್‌ನಿಂದ ಹೊರಗೆ ಬರುತ್ತಿತ್ತು. ಅವಳು ಕಪ್ಪನ್ನು ಅವನ ಮುಂದೆ ಹಿಡಿದು “ಸ್ವೀಕರಿಸಿ” ಅಂದಳು. ಅವನು ಅವಳಿಗೆ ಧನ್ಯವಾದ ಅರ್‍ಪಿಸಿ ಕಪ್ಪನ್ನು ಸ್ವೀಕರಿಸಿದ. ಅಲ್ಲಿಯೇ ಇದ್ದ ಕಟ್ಟಡದ ದಂಡೆಗೆ ಆತುಕೊಂಡು ಅವನು ಕಷಾಯ ಕುಡಿಯ ತೊಡಗಿದ. ಅವಳು ಅವನ ಮುಖವನ್ನೇ ನೋಡುತ್ತಾ ನಿಂತಿದ್ದಳು. ಗಾಂಭೀರ್‍ಯದ ಅವಳ ಮುಖದಲ್ಲಿ ಸಣ್ಣ ನಗುವೊಂದು ತೇಲಿ ಬಂತು. “ದಯವಿಟ್ಟು ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ದೇವರು ದೊಡ್ಡವನು. ನಿಮ್ಮ ಮುಖದಲ್ಲಿ ನನ್ನ ತಂದೆಯ ಪ್ರತಿರೂಪವಿದೆ. ಅದೇ ಬಣ್ಣ, ಅದೇ ಎತ್ತರ, ಆದೇ ಮೂಗು, ಅದೇ ನಗು… ಅದಕ್ಕಾಗಿ ನಿಮ್ಮನ್ನು ಮಾತಾಡಿಸಿದೆ. ನಿಮ್ಮನ್ನು ಮಾತಾಡಿಸದೆ ಮುಂದೆ ಹೋಗಲು ನನ್ನ ಮನಸ್ಸು ಕೇಳುತ್ತಾ ಇಲ್ಲ. ನಿಮಗೆ ತೊಂದರೆಯಾಗಿದ್ದಲ್ಲಿ ದಯವಿಟ್ಟು ನನ್ನನ್ನು ಕ್ಷಮಿಸಿ.” ಅರಳು ಹುರಿದಂತೆ ಅವಳು ಇಂಗ್ಲೀಷ್‌ನಲ್ಲಿ ಮಾತಾಡುತ್ತಿದ್ದಳು. ಅವಳು ಮಾತು ಮುಂದುವರಿಸುವುದರಲ್ಲಿದ್ದಳು. ಅವನು ನಕ್ಕು ಉತ್ತರಿಸಿದ. “ಪರಿಚಯವಾದುದಕ್ಕೆ ಧನ್ಯವಾದಗಳು. ಜಗತ್ತೇ ನಮ್ಮ ಮನೆ, ಮಾನವ ಕುಲವೇ ನಮ್ಮ ಕುಟುಂಬ ಎಂಬ ತತ್ವವನ್ನು ಒಪ್ಪುವವರಿಗೆ “ಅಹಂ” ಇರುವುದಿಲ್ಲ. ಅವನು ನಕ್ಕು ಸ್ಥೂಲವಾಗಿ ತನ್ನ ಪರಿಚಯ ಹೇಳಿದ. ಅವಳು ಮಾತು ಮುಂದುವರಿಸಿದಳು.
“ನಾನು ಮೂಲತಃ ಸೌದಿ ಅರೇಬಿಯಾದವಳು. ನನ್ನ ತಂದೆ ಅಮೇರಿಕಾದಲ್ಲಿ ವಿಜ್ಞಾನಿಯಾಗಿದ್ದರು. ಆದುದರಿಂದ ನನ್ನ ಬಾಲ್ಯ, ವಿದ್ಯಾಭ್ಯಾಸ ಎಲ್ಲಾ ಅಮೇರಿಕಾದಲ್ಲಿಯೇ ನಡೆಯಿತು. ಅಮೇರಿಕಾ ದೇಶದ ದತ್ತು ಪುತ್ರಿ ನಾನು. ಆದರೆ ಸೌದಿ ಅರೇಬಿಯಾ ತನ್ನ ತವರೂರು, ನನ್ನ ತಾಯಿ ನಾನು ಚಿಕ್ಕವಳಿದ್ದಾಗಲೇ ತೀರಿ ಹೋದರು. ನನ್ನ ತಂದೆ ತದನಂತರ ಮದುವೆಯಾಗಲೇ ಇಲ್ಲ. ಬಹುಶಃ ನನ್ನ ಮೇಲಿನ ಅತಿಯಾದ ಪ್ರೀತಿಯೇ ಇದಕ್ಕೆ ಕಾರಣವಿರಬಹುದು. ಕಳೆದ ವರ್‍ಷ ತಂದೆಯೂ ತೀರಿ ಹೋದರು. ಒಂಟಿಯಾಗಿ ಅಮೇರಿಕಾದಲ್ಲಿರಲು ನಾನು ಇಷ್ಟಪಡಲಿಲ್ಲ. ಊರಿಗೆ ಬಂದೆ. ಇಲ್ಲಿ ನನ್ನ ತಂದೆ-ತಾಯಿಯ ಅಪಾರ ಬಂಧು ಮಿತ್ರರಿದ್ದಾರೆ. ತಂದೆಯ ಅಗಾಧ ಸಂಪತ್ತಿದೆ. ಅದಕ್ಕಿಂತಲೂ ಮಿಗಿಲಾಗಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದ್ದಾರೆ…” ಅವಳು ಗದ್ಗದಿತಳಾದಳು. ಅಪರಿಚಿತ ಊರಿನಲ್ಲಿ ಅಪರಿಚಿತ ಹೆಣ್ಮಗಳನ್ನು ಸಂತೈಸುವುದು ಒಂದು ರೀತಿಯ ಸಂಧಿಗ್ಧತೆಯ ವಿಷಯವಾಯಿತು. ಆದರೂ ಅವನು ಧೈರ್‍ಯ ತೆಗೆದುಕೊಂಡ.
“ಮಗಳೇ, ಜೀವನ ಎನ್ನೋದು ಸಿಹಿ-ಕಹಿಗಳ ಮಿಶ್ರಣ, “ನೆಮ್ಮದಿ” ಎನ್ನೋದು ಒಂದು ಭ್ರಮೆಯೆಂದು ನಮಗೆ ಮನದಟ್ಟಾದರೆ ಆತ್ಮ ಜ್ಞಾನದ ಅರಿವು ತಾನಾಗಿಯೇ ಉಂಟಾಗುತ್ತದೆ. ಈ ಭೂಮಿಯ ಸಕಲ ಜೀವರಾಶಿಗಳೊಂದಿಗೆ ನಮ್ಮನ್ನು ಗುರುತಿಸಲು ನಮಗೆ ಸಾಧ್ಯವಾದರೆ ಬಂಧನವಿಲ್ಲದ ಬದುಕು, ಸಂತೋಷ ನಮ್ಮ ಜೊತೆಯಾಗಿ ಬರುತ್ತದೆ. ನಾವು ಒಂಟಿಯಾಗುವುದಿಲ್ಲ. ಬದುಕು ಪರಿಪೂರ್‍ಣಗೊಳ್ಳುವುದು ಆಗಲೇ…” ಕೆಲಹೊತ್ತು ಮೌನ, ಅವನ ಮಾತು ಅವಳಿಗೆ ಹಿಡಿಸಿದಂತೆ ತೋರಿತು. ಅವಳು ಒಮ್ಮೆ
ಬಾನತ್ತ ನೋಡಿದಳು. ಒಂದೆರಡು ಕೋಲ್ಮೀಂಚು ಕುಣಿದು ಕಣ್ಮರೆಯಾದುವು.
“ನನ್ನ ತಂದೆಯವರು ಕೂಡಾ ಇದೇ ರೀತಿ ಮಾತಾಡುತ್ತಿದ್ದರು. ನಾನು ನನ್ನ ಭವಿಷ್ಯದ ಕುರಿತು ಆಲೋಚನೆಗೆ ಬಿದ್ದಾಗಲೆಲ್ಲಾ ಅವರು ಇದೇ ರೀತಿ ಉಪದೇಶ ಮಾಡುತ್ತಿದ್ದರು. ನನಗೆ ಧೈರ್‍ಯ ತುಂಬುತ್ತಿದ್ದರು. ಬದುಕಿನಲ್ಲಿ ನಾನಿಷ್ಟು ಗಟ್ಟಿಯಾಗಲು ಅವರೇ ಕಾರಣ…”
ಅವನು ನಕ್ಕು ಮೌನಿಯಾದ. ಅವಳು ಮಾತು ಮುಂದುವರಿಸಿದಳು. “ನಾನೀಗ ಏನಾಗಿದ್ದೇನೆಯೋ ಅದಕ್ಕೆಲ್ಲಾ ನನ್ನ ತಂದೆಯೇ ಪ್ರೇರಣೆ ಶಕ್ತಿ. ನಿಮ್ಮಲ್ಲಿ ಅವರನ್ನು ಕಾಣುತ್ತಿದ್ದೇನೆ. ನೀವು ಅನ್ಯಥಾ ಭಾವಿಸದಿದ್ದರೆ ನಾನು ನಿಮ್ಮನ್ನು “ಡ್ಯಾಡಿ” ಎಂದು ಕರೆಯಲೇ?” ಅವಳು ಕಾಲೇಜಿಗೆ ಹೋಗುವ ಸಣ್ಣ ಹುಡುಗಿಯಂತೆ ಪ್ರಶ್ನೆ ಹಾಕಿ ಅವನ ಉತ್ತರಕ್ಕಾಗಿ ಕಾಯತೊಡಗಿದಳು. ಅವನ ಮುಖದಲ್ಲಿ ಒಂದು ಶುಷ್ಕ ನಗು ಮೂಡಿತು. ಜೀವನದಲ್ಲಿ ಎಲ್ಲಾ ದೊರೆಯಿತು ಎಂದಾಗಲೇ ಎಲ್ಲವನ್ನೂ ಕಳಕೊಂಡವನು ನಾನು. ಪುನಃ ಇದು ಯಾವ ರೀತಿಯ ಅನುಬಂಧ! ಇರಲಿ. ಅವಳಿಗೆ ತೃಪ್ತಿಯಾಗುದಾದರೆ ಇದೂ ಒಂದು ರೀತಿಯ ಉಪಕಾರವೇ ಸರಿ. “ನಿನಗೆ ಸಂತೋಷವಾಗುದಾದರೆ ನನ್ನ ಅಭ್ಯಂತರವಿಲ್ಲ. ಅವನು ನಗುತ್ತಾ ಉತ್ತರಿಸಿದ. ನಾಳೆ ಇದೇ ಸಮಯಕ್ಕೆ, ಇದೇ ಸ್ಥಳದಲ್ಲಿ ಭೇಟಿಯಾಗುವ ಭರವಸೆಯೊಂದಿಗೆ ಅವಳು ಸೇವಕನೊಂದಿಗೆ ಹೊರಟು ಹೋದಳು. ಅವನು ರೂಮಿನ ಕಡೆಗೆ ಆಲೋಚಿಸುತ್ತಾ ಹೆಜ್ಜೆ ಹಾಕಿದ.
ರೂಮಿನೊಳಗೆ ಬಂದು ಬಾಗಿಲು ಹಾಕಿಕೊಂಡ ಅವನಿಗೆ ಸಾವಿರ ಆಲೋಚನೆಗಳು ಮುತ್ತ ತೊಡಗಿದುವು. ರೂಮಿನ ಇನ್ನಿಬ್ಬರು ಯಾತ್ರಿಕರು ಬರುವುದು ತಡರಾತ್ರಿಯೇ. ಅವನು ಅಂದಿನ ಪ್ರಾರ್‍ಥನೆಯನ್ನು ರೂಮಿನಲ್ಲಿಯೇ ಮುಗಿಸಿದ ಆಲೋಚನೆಗಳು ಅವನ ಮನಸ್ಸನ್ನು ಕುಕ್ಕ ತೊಡಗಿದುವು. ಬಂಧನವಿಲ್ಲದ ಬದುಕಿಗೆ ಹೊಂದಿ ಕೊಂಡವನಿಗೆ ಇದು ಯಾವ ರೀತಿಯ ಬಂಧನ! ಜೀವನದ ಎಲ್ಲಾ ಹಂತವನ್ನು ದಾಟಿ ವಿಮುಕ್ತನಾಗಿ ಸನ್ಯಾಸತ್ವದ ಮನಃಸ್ಥಿತಿಗೆ ತಲುಪಿದ ತನಗೆ ಇದು ಯಾವ ರೀತಿಯ ಸ್ನೇಹ! ಸಾವನ್ನು ಪ್ರೀತಿಯಿಂದ ಆಲಂಗಿಸಬೇಕೆಂದು ನಿರ್‍ಣಯಿಸಿದ ತನಗೆ ಇದಾವ ರೀತಿಯ ಪ್ರೀತಿ? ಇದು ದೇವರ ಅನುಗ್ರಹವೇ? ಅಥವಾ ಪ್ರಕೃತಿಯ ಮಾಯಾ ಜಾಲವೇ?
ಕಿಟಕಿಯ ಬಳಿ ಕೇಳಿ ಬಂದ “ಟಪ-ಟಪ” ಶಬ್ದಗಳಿಂದ ಅವನು ಎಚ್ಚತ್ತುಗೊಂಡ. ಬಲವಾಗಿ ಬೀಸಿ ಬರುವ ಗಾಳಿಯೊಂದಿಗೆ ಮಳೆಹನಿಗಳು ಉದುರ ತೊಡಗಿದುವು. ಅದರೊಂದಿಗೆ ಸಣ್ಣ ಅವರೇ ಕಾಳುಗಾತ್ರದ ಆಲಿಕಲ್ಲುಗಳು ರೂಮಿನ ಒಳಗೆ ಬೀಳುತ್ತಿದ್ದಂತೆ ಅವನು ಕಿಟಕಿಯನ್ನು ಮುಚ್ಚಿದ, ನಗರದತ್ತ ನೋಟ ಬೀರಿದ. ಗನನ ಚುಂಬಿತ ಕಟ್ಟಡಗಳ ಮೇಲ್ಚಾವಣಿಯಲ್ಲಿ ಕೆಲವು ಬುರ್‍ಖಾಧಾರಿ ಮಹಿಳೆಯರು ಮಳೆಗೆ ನೆನೆಯುತ್ತಾ ತಮ್ಮ ಕೈಗಳನ್ನು ಮೇಲೆತ್ತಿ ಪ್ರಾರ್‍ಥಿಸುತ್ತಿದ್ದರು. ಒಬ್ಬ ಅರಬ್ಬಿ ಯುವಕನು ಮಹಡಿಗೆ ಬಂದು, ಮಳೆಯಲ್ಲಿ ನೆನೆಯುತ್ತಾ ಆಕಾಶದಲ್ಲಿ ಮಿನುಗಿದ ಕೋಲ್ಮಿಂಚಿನ ಪೋಟೊ ತೆಗೆಯುತ್ತಿದ್ದ. ಅವನು ಆಕಾಶವನ್ನು ದಿಟ್ಟಿಸಿದ. ಹದವಾಗಿ ಸುರಿಯುವ ಮಳೆ! ಹೌದು, ಈ ಆಕಾಶ, ಈ ಭೂಮಿಯನ್ನು ನೋಡಿದಾಗ ಕಾರಣವಿಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ. ಯಾವ ಯಾವ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತಲೇ ಇರುತ್ತದೆ. ಒಂದೈದು ನಿಮಿಷದಲ್ಲಿ ಮಳೆ ಭೋರ್‍ಗರೆದು ತಣ್ಣಗಾಯಿತು. ಭೂಮಿ ಆಕಾಶ ಶುಭ್ರವಾಯಿತು. ಆದರೆ ಅವನ ಮನಸ್ಸು ಮಾತ್ರ ಅಲ್ಲೋಲ-ಕಲ್ಲೋಲವಾಯಿತು. ಅವನ ಕಣ್ಣೆದುರು ಆ ಹೆಣ್ಮಗಳು ಬಂದು ನಿಂತಳು. ಸಂಸಾರದ ಜಂಜಾಟದಿಂದ ಕಾಲ ಅವನನ್ನು ತಾನಾಗಿಯೇ ಹೊರಗೆ ಹಾಕಿತ್ತು. ಆದರೆ ಈಗ ಅದೇ ಕಾಲ ತನ್ನನ್ನು ಜೀವನದ ಬಂಧನದಲ್ಲಿ ಸಿಲುಕಿಸಲು ಹವಣಿಸುತ್ತದೆ. ಅಂದರೆ ತನ್ನ ಬದುಕಿನಲ್ಲಿ ಇನ್ನೂ ಆಶೆ ಉಳಿದಿದೆಯೇ? ಅವನ ದೇಹ ಕಂಪಿಸಿತು. ಹೌದು, ಬದುಕಿನಲ್ಲಿ ಯಾವುದಾದರೂ ಆಶೆ ಉಳಿದುಕೊಂಡಿದೆ ಎಂದಾದರೆ ಅದರ ಹಿಂದೆ ದುಃಖ ದಾರಿ ಮಾಡಿಕೊಂಡು ಬರುತ್ತದೆ. ಬೇಡ, ಈ ವ್ಯಾಮೋಹ ಬೇಡ. ನಾಳೆ ತಾನವಳಿಗೆ ಸಿಗಲೇಬಾರದು. ಅವಳು ಹುಡುಕಿ ಹುಡುಕಿ ಹಿಂತಿರುಗಿ ಹೋಗಬೇಕು. ಆದರೆ ಅವನು ಅವಳಿಗೆ ಸಿಗುವೆನೆಂದು ಮಾತು ಕೊಟ್ಟಿದ್ದ. ಯಾತ್ರಿಕನಾದ ನಾನು ವಚನ ಭ್ರಷ್ಟನಾಗುವುದು ತಪ್ಪಲ್ಲವೇ? ಯಾವುದಕ್ಕೂ ನಾಳೆ ಆಲೋಚಿಸುವುದು ಒಳ್ಳೆಯದು. ಅವನು ಎದ್ದು ನಿಂತು ಅಡುಗೆ ಕೋಣೆಗೆ ಹೋದ. ಬೆಳಿಗ್ಗೆ ಮಾಡಿಟ್ಟ ಗಂಜಿಯನ್ನು ಬಿಸಿ ಮಾಡಿ ಉಪ್ಪಿನಕಾಯಿಯೊಂದಿಗೆ ತಿಂದು ಹಾಸಿಗೆಯಲ್ಲಿ ಬಿದ್ದುಕೊಂಡ. ಸುಖವಾದ ನಿದ್ರೆಗೆ ಜಾರಿದ.
ಬೆಳಿಗ್ಗೆ ಎಚ್ಚರವಾದಾಗ ಅವನ ಸಹಪಾಠಿಗಳು ಅದಾಗಲೇ ಪ್ರಾರ್‍ಥನೆಗಾಗಿ ಮಸೀದಿಗೆ ಹೊರಟಿದ್ದರು. ವಿಳಂಬವಾದುದಕ್ಕೆ ಅವನಿಗೆ ನಾಚಿಕೆಯಾಯಿತು. ಅವನು ಕೂಡಾ ಲಗುಬಗೆಯಿಂದ ಮಸೀದಿ ಕಡೆ ಹೆಜ್ಜೆ ಹಾಕಿದ. ಪ್ರಾರ್‍ಥನೆ ಮುಗಿಸಿ ರೂಮಿನತ್ತ ಸಾಗುತ್ತಿರುವ ಅವನಿಗೆ ಅಲ್ಲಲ್ಲಿ ಯಾತ್ರಿಕರು ಉಚಿತ ಚಹಾ ಹಾಗೆ ಬಿಸ್ಕತ್ತುಗಾಗಿ ಕ್ಯೂ ನಿಂತಿದ್ದು ಕಂಡು ಬಂತು. ಅವನು ಅದಾವುದನ್ನು ಲೆಕ್ಕಿಸದೆ ರೂಮಿಗೆ ತೆರಳಿ ಅಕ್ಕಿಯನ್ನು ತೊಳೆದು ನೀರು ಸುರಿದು ಒಲೆಯಲ್ಲಿಟ್ಟ. ಬೆಳಿಗ್ಗೆ ಸ್ವಲ್ಪ ಗಂಜಿ ಬೇಯಿಸಿಟ್ಟರೆ ಅದು ಇಡೀ ದಿನಕ್ಕೆ ಸಾಕಾಗುತ್ತಿತ್ತು. ಸ್ವಲ್ಪ ಹೊತ್ತು ಅವನು ಹಾಸಿಗೆಯಲ್ಲಿ ಬಿದ್ದುಕೊಂಡ. ಅವನ ರೂಮಿನ ದಂಪತಿಗಳು ಒಂದು ಒಳ್ಳೆಯ ಸುದ್ದಿ ತಂದಿದ್ದರು.
“ಹೊರಗೆ ಗೋಡೆಯಲ್ಲಿ ನೋಟೀಸು ಹಚ್ಚಿದ್ದಾರೆ. ಇವತ್ತು ರಾತ್ರಿ ನಾವು ಮೀನಕ್ಕೆ ಹೋಗಲು ರೆಡಿಯಾಗಲು ತಿಳಿಸಿದ್ದಾರೆ.”
ಅವನಿಗೆ ಸಂತೋಷವಾಯಿತು. ಅವನು ಎದ್ದು ಕುಳಿತ. ಗತ ಚರಿತ್ರೆಗಳ ಪುಣ್ಯಭೂಮಿ ಮೀನಾ ತಂದೆಯೇ ತನ್ನ ಪುತ್ರನನ್ನು ಬಲಿ ಅರ್‍ಪಿಸಲು ಸಜ್ಜಾಗಿ ನಿಂತ ಭೂಮಿ! ಶೈತಾನನಿಗೆ ಕಲ್ಲೆಸದ ಭೂಮಿ. ಇಂತಹ ಪವಿತ್ರ ಸ್ಥಳವನ್ನು ತಾನು ಕಣ್ಣಾರೆ ಕಾಣುವುದೆಂದರೆ! ಅದೊಂದು ಅದ್ಭುತ ಸಮಯ, ಸನ್ನಿವೇಶ. ಅವನ ಮೈ-ಮನ ಪುಲಕಿತಗೊಂಡಿತು. ಇವತ್ತು ರಾತ್ರಿ ಮೀನಾಕ್ಕೆ ಪ್ರಯಾಣ. ಅಲ್ಲಿಂದ ‘ಅರಪಾ’ ಮೈದಾನದಲ್ಲಿ ಸೂರ್‍ಯಾಸ್ತದವರೆಗೆ ತಂಗುವುದು. ನಂತರ ಮಧ್ಯ ರಾತ್ರಿಯ ಬಳಿಕ, ಬೆಳಗ್ಗಿನ ಜಾವದ ಮುನ್ನ ‘ಮುಝ್ದಲಿಫ’ದಲ್ಲಿ ತಂಗುವುದು. ‘ಅರಪಾ’ ಮತ್ತು ‘ಮೀನಾ’ದ ನಡುವಿನ ಸ್ಥಳ ‘ಮುಝ್ದಲಿಫ’ವಾಗಿದೆ. ಮುಝ್ದಲಿಫದಲ್ಲಿ ಹೆಕ್ಕಿ ತಂದ ಎಪ್ಪತ್ತು ಸಣ್ಣ ಕಲ್ಲುಗಳನ್ನು ಜಮ್ರಾಗಳಿಗೆ ಎಸೆಯಬೇಕು. ನಂತರ ಮೀನಾದಿಂದ ನಿರ್‍ಗಮನ, ತದನಂತರ ಮಕ್ಕಾಕ್ಕೆ ಬಂದು ಪವಿತ್ರ ‘ಕಹಬಾ’ ಹಾಗೂ ‘ಸಪಾ-ಮರ್‍ವ’ ಬೆಟ್ಟಗಳ ನಡುವೆ ಪ್ರದಕ್ಷಿಣೆ ಹಾಕಿ, ಕೇಶ ಮುಂಡನ ಮಾಡಿಸಿಕೊಂಡರೆ ಹಜ್‌ಕಾರ್‍ಯ ಮುಗಿದಂತೆಯೇ. ಈ ಮಧ್ಯೆ ಖುರ್‍ಬಾನಿ ನೀಡಬೇಕು. ಪ್ರವಾದಿಯವರು ಕೈಕೊಂಡ ಪವಿತ್ರ ಹಜ್ ಕಾರ್‍ಯದ ಅನುಕರಣೆಯನ್ನು ಅವರದೇ ಸ್ಥಳದಲ್ಲಿ ಕೈಗೊಳ್ಳುವಂತಹ ಭಾಗ್ಯ ದೊರೆಯುವುದೆಂದರೆ ಅದೊಂದು ಪುಣ್ಯವೇ. ಇದಕ್ಕೂ ಭಾಗ್ಯ ಬೇಕು. ದೇವರು ಈ ಭಾಗ್ಯವನ್ನು ಪೂರ್‍ಣಗೊಳಿಸಲಿ ಎಂದು ಅವನು ಮನದಲ್ಲಿಯೇ ಪ್ರಾರ್‍ಥಿಸಿದ. ಇದರ ಮಧ್ಯೆ ಅವನಿಗೆ ಏನೋ ವೇದನೆಯಾದಂತೆ, ಏನೋ ಕಳಕೊಂಡಂತೆ ಭಾಸವಾಗುತ್ತಿತ್ತು. ಪವಿತ್ರ ಸ್ಥಳಕ್ಕೆ ಕಾಲೂರಿದ ಅಂದಿನಿಂದ ಇವತ್ತಿನವರೆಗೆ ಅವನು ತನ್ನ ದೇಹ, ಮನಸ್ಸನ್ನು ಈ ಪುಣ್ಯಭೂಮಿಗೆ ಅರ್‍ಪಿಸಿಕೊಂಡಿದ್ದ. ಇನ್ನು ಕೆಲವೇ ದಿನಗಳಲ್ಲಿ ಈ ಪವಿತ್ರ ಸ್ಥಳವನ್ನು ಬಿಟ್ಟು ಹೋಗಲು ಮನಸ್ಸು ಕೇಳುತ್ತಿರಲಿಲ್ಲ. ಪುನಃ ಎಲ್ಲವನ್ನೂ ಕಳಕೊಳ್ಳುವ ನೋವು! ದೇವರು ಯಾಕೆ ನನ್ನನ್ನು ಈ ರೀತಿ ಪರೀಕ್ಷಿಸುತ್ತಿದ್ದಾನೆ? ನನಗೇಕೆ ಇದೇ ಪುಣ್ಯ ಭೂಮಿಯಲ್ಲಿ ಸಾವು ಬರಬಾರದು? ಅದಕ್ಕೂ ಭಾಗ್ಯ ಬೇಕು. ಭಾಗ್ಯವಂತರಿಗೆ ಮಾತ್ರ ಆ ಪುಣ್ಯ ಲಭಿಸುತ್ತದೆ. ಅವನು ಆಲೋಚನೆಯಿಂದ ಹೊರ ಬಂದಾಗ ಅವನ ರೂಮಿನ ದಂಪತಿಗಳು ಅದಾಗಲೇ ಹೊರಗೆ ಹೋಗಿದ್ದರು.
ಅವನು ‘ಮಸ್ಜಿದುಲ್ ಹರಂ’ಗೆ ಪ್ರಾರ್‍ಥನೆಗಾಗಿ ಹೊರಟ. ಎಲ್ಲಾ ಕಾರ್‍ಯಗಳನ್ನು ಮುಗಿಸಿ, ಮಕ್ಕಾದ ಪಾರ್‍ಕಿನಲ್ಲಿ ಬಂದು ಕುಳಿತ. ಮನಸ್ಸು ಶಾಂತವಾಗಿತ್ತು. ಅವನು ಕಣ್ಮುಚ್ಚಿಕೊಂಡು ಉಸಿರನ್ನು ದೀರ್‍ಘವಾಗಿ ಒಳಗೆ ಎಳೆಯುತ್ತಾ, ಹೊರಗೆ ಬಿಡುತ್ತಾ ಕುಳಿತಿದ್ದ. ಹತ್ತಿರದ ಪರಿವೆಯೇ ಅವನಿಗಿರಲಿಲ್ಲ. ಈ ರೀತಿ ಮಾಡುವುದರಿಂದ ಅವನ ಮನಸ್ಸಿಗೆ ದೀರ್‍ಘ ನೆಮ್ಮದಿ, ತಾಳ್ಮೆ ಹಾಗೂ ಶಾಂತಿ ದೊರಕುತ್ತಿತ್ತು. ಹತ್ತಿರದಲ್ಲಿ ‘ಸಲಾಂ’ನ ಧ್ವನಿ ಕೇಳಿ ಅವನು ಕಣ್ಣು ತೆರೆದನಿನ್ನೆಯ ದಿನ ಮಾತಾಡಲು ಸಿಕ್ಕಿದ ಹೆಣ್ಮಗಳು ಎದುರಲ್ಲಿ ನಿಂತಿದ್ದಳು. ಅದೇ ನಗು. ಅದೇ ತೇಜಸ್ಸು, ಅವನು ಪ್ರತಿವಂದನೆ ಸಲ್ಲಿಸಿದ.
“ಡ್ಯಾಡಿ, ಇವತ್ತು ನಾನು ಇತರ ಯಾತ್ರಿಕರಿಗೆ ಏನೂ ತರಲಿಲ್ಲ. ನಿಮಗಾಗಿ ಕುರಿಮಾಂಸದಿಂದ ತಯಾರಿಸಿದ ಬೋಂಡ ತಂದಿದ್ದೇನೆ. ಬಿಸಿ ಬಿಸಿ ಚಹಾ ಕೂಡಾ ಇದೆ ಕೊಡ್ಲಾ” ಅವಳು ಅವನ ಉತ್ತರಕ್ಕೂ ಕಾಯದೆ ಅಲ್ಲಿಯೇ ಕುಳಿತು ಬ್ಯಾಗನ್ನು ತೆರೆದಳು. ಅವನಿಗೆ ನಗು ಬಂತು. ಅವಳ ಅಮೇರಿಕನ್ ಇಂಗ್ಲೀಷ್ ಉಚ್ಚಾರ ಅವನಿಗೆ ಮುದ ನೀಡುತ್ತಿತ್ತು.
“ಹೌದು ನಾನು ಚಹಾ ಕುಡಿಯುತ್ತೇನೆಂದು ನಿನಗೆ ಹೇಗೆ ಗೊತ್ತಾಯಿತು?” ಅವಳು ನಕ್ಕಳು. “ನೀವು ಚಹಾ ಬೆಳೆಸುವ ದೇಶದವರು. ಚಹಾ ಕುಡಿಯಲೇಬೇಕು. ಹೌದಲ್ಲವೇ?” ಅವನು ಹೌದೆಂದು ತಲೆಯಲ್ಲಾಡಿಸಿದ. ಇಬ್ಬರೂ ಬೋಂಡ ತಿಂದು ಚಹಾ ಕುಡಿದರು. ಸ್ವಲ್ಪ ಹೊತ್ತು ಮೌನ, ಅವಳೇ ಮೌನ ಮುರಿದಳು. “ಇವತ್ತು ರಾತ್ರಿ ನೀವು ಮೀನಾಕ್ಕೆ ಹೋಗಲಿರುವಿರಿ. ಇನ್ನು ನಮ್ಮ ಭೇಟಿ ಅಸಾಧ್ಯ. ಯಾಕೆಂದರೆ ನಾಳೆಯಿಂದ ಹಜ್‌ಯಾತ್ರೆ ಮುಗಿಯುವವರೆಗೆ ಸ್ಥಳೀಯರಿಗೆ ಈ ಪ್ರದೇಶದಲ್ಲಿ ಪ್ರವೇಶವಿಲ್ಲ.” ಅವಳು ತಲೆ ತಗ್ಗಿಸಿದಳು. ಅವನಿಗೆ ಆಶ್ಚರ್‍ಯವಾಯಿತು.
“ಹೌದು ಇದು ನಿನಗೆ ಹೇಗೆ ಗೊತ್ತಾಯಿತು?”
“ನಾನು ಎಲ್ಲಾ ತಿಳಿದುಕೊಂಡೆ.” ಅವಳು ಬ್ಯಾಗಿನಿಂದ ಒಂದು ಡೈರಿ ಹೊರ ತೆಗೆದಳು. ಅದರೊಳಗಿದ್ದ ಪೋಟೊ ಒಂದನ್ನು ಹೊರ ತೆಗೆದು ಅವನ ಕೈಗಿತ್ತಳು. “ಇದು ನನ್ನ ಹಾಗೂ ನನ್ನ ತಂದೆಯ ಪೋಟೊ ತೀರಿ ಹೋಗುವ ಕೆಲವೇ ತಿಂಗಳ ಮೊದಲು ತೆಗೆದದ್ದು. ನೋಡಿ ಡ್ಯಾಡಿ, ನಿಮ್ಮೊಂದಿಗೆ ತಂದೆಯವರ ಮುಖ ಹೇಗೆ ಹೋಲಿಕೆಯಿದೆ.” ಫೋಟೊವನ್ನು ಅವನು ಕೈಗೆತ್ತಿಕೊಂಡ. ಅಜಾನುಬಾಹು, ಮಿತವಾದ ದಾಡಿ, ನಗುಮುಖ, ಉದ್ದ ಮೂಗಿಗೆ ಕನ್ನಡಕ ಸರಿಯಾಗಿ ಹೊಂದಾಣಿಕೆಯಾಗುತ್ತಿತ್ತು. ಅವನು ಫೋಟೊವನ್ನು ನೋಡುತ್ತಾ ಹೇಳಿದ.
“ನೀನು ಹೇಳಿದ್ದು ಸರಿ ಮಗಳೇ, ಹೋಲಿಕೆಯಿದೆ”. ಅವನು ನಕ್ಕು ಮಾತು ಮುಂದುವರಿಸಿದ.
“ನಾವೆಲ್ಲಾ ಒಂದೇ ಮೂಲದಿಂದ ಬಂದವರು. ನಮ್ಮ ನಮ್ಮ ಕರ್‍ಮಫಲ ನಮಗೆ ವ್ಯತಿರಿಕ್ತ ಸ್ಥಾನಮಾನ, ಅನುಕೂಲ ಹಾಗೂ ಅನಾನುಕೂಲಗಳನ್ನು ನೀಡಿರುತ್ತದೆ. ಸಕಲ ಜೀವರಾಶಿಗಳೊಂದಿಗೆ ನಮ್ಮನ್ನು ಗುರುತಿಸಿಕೊಂಡಾಗ ಬದುಕು ಪರಿಪೂರ್‍ಣವಾಗುತ್ತದೆ ಮಗಳೇ” ಅವಳಿಗೆ ಅರ್‍ಥವಾಯಿತೋ ಇಲ್ಲವೋ ಅವಳು ತಲೆಯಲ್ಲಾಡಿಸಿದಳು. ಅವಳು ಪೋಟೊವನ್ನು ಡೈರಿಯ ಒಳಗಿಟ್ಟು ಡೈರಿಯನ್ನು ಅವನಿಗೆ ಉಡುಗೊರೆಯಾಗಿ ನೀಡಿದಳು.
“ಇದಕ್ಕಿಂತ ವೈಭವಯುಕ್ತ ಉಡುಗೊರೆಯನ್ನು ನೀವು ಸ್ವೀಕರಿಸಲಾರಿರಿ ಎಂದು ನನಗೆ ಮನದಟ್ಟಾಗಿದೆ. ಈ ಡೈರಿಯಲ್ಲಿ ನನ್ನ ಮನೆ ವಿಳಾಸ, ನನ್ನ ಹಾಗೂ ನನ್ನ ಮನೆಯವರ ಮೊಬೈಲ್ ನಂಬ್ರ, ಫೋನು ನಂಬ್ರ ಎಲ್ಲಾ ಇವೆ. ಇದು ನನ್ನ ನೆನಪಿಗಾಗಿ ನಿಮಗೆ ನೀಡುತ್ತಿದ್ದೇನೆ.” ಅವಳು ಗದ್ಗದಿತಳಾದಳು. “ದಯವಿಟ್ಟು ನೀವು ಅನುಮತಿಸುವುದಾದರೆ ನಮ್ಮಿಬ್ಬರ ಸೆಲ್ಪಿ ಪೋಟೊ ತೆಗೆಯಬಹುದೇ?” ಅವನು ಆಗಬಹುದೆಂದು ತಲೆಯಲ್ಲಾಡಿಸಿದ. ಸೆಲ್ಪಿ ತೆಗೆದ ಮೇಲೆ ಅವಳು ಅವನ ಊರಿನ ಮೊಬೈಲ್ ನಂಬ್ರ, ಇಲ್ಲಿಯ ಮೊಬೈಲ್ ನಂಬ್ರ, ಊರಿನ ಮನೆ ವಿಳಾಸ, ಮನೆಯವರ, ಸಂಬಂಧಿಕರ ಮೊಬೈಲ್ ನಂಬ್ರ ವಿಳಾಸ ಎಲ್ಲಾ ಪಡೆದುಕೊಂಡಳು. ಅವನ ಊರಿಗೆ ಹೋಗುವ ದಾರಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳ ಬಗ್ಗೆಯೂ ಮಾಹಿತಿಯನ್ನು ಪಡಕೊಂಡಳು. ಎಲ್ಲವನ್ನೂ ತನ್ನ ಮೊಬೈಲ್‌ನಲ್ಲಿ ದಾಖಲಿಸಿಕೊಂಡಳು.
“ನಾನು ನಿಮ್ಮನ್ನು ನನ್ನ ಮನೆಗೆ ಆಮಂತ್ರಿಸಿಲ್ಲವೆಂದು ಭಾವಿಸಬೇಡಿ. ಇದಕ್ಕಾಗಿ ನಾನು ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಾನು ನಿಮ್ಮ ಮನೆಗೆ ನಿರ್‍ಭಯವಾಗಿ ಬರಬಲ್ಲೆ, ಬರುವೆನು. ದೇವರು ಅನುಗ್ರಹಿಸಿದರೆ ಕೆಲವೇ ತಿಂಗಳುಗಳೊಳಗೆ ನಿಮ್ಮ ಮನೆಯಂಗಳದಲ್ಲಿ ಹಾಜರಾಗಿ ನಿಮ್ಮ ಮನೆಯ ಕರೆಗಂಟೆ ಒತ್ತುವೆ.” ಅವಳು ತುಂಬಿ ಬಂದ ಕಣ್ಣೀರನ್ನು ತನ್ನ ಕೈಯಿಂದ ಒರೆಸುತ್ತಾ ಅವನ ಎರಡೂ ಕೈಗಳನ್ನು ಎತ್ತಿ ಹಿಡಿದು ಕಣ್ಣಿಗೆ ಒತ್ತಿಕೊಂಡಳು.
“ದಯವಿಟ್ಟು ನನಗೆ ಆಶೀರ್‍ವಾದ ಮಾಡಿ ಡ್ಯಾಡಿ.” ಅವಳು ಅಳುತ್ತಲೇ ವಿಜ್ಞಾಪಿಸಿದಳು. ಅವನು ಅವಳ ತಲೆಯ ಮೇಲೆ ತನ್ನ ಎರಡೂ ಕೈಗಳನ್ನಿಟ್ಟು ಆಶೀರ್‍ವಾದಿಸಿದ.
“ಮಗಳೇ, ನಾನು ಪರದೇಶಿ ಯಾತ್ರಿಕ. ಉಟ್ಟ ಬಟ್ಟೆ-ಬರೆಗಳಲ್ಲದೆ ನಿನಗೆ ಕೊಡಲು ನನ್ನಲ್ಲಿ ಏನೂ ಇಲ್ಲ. ಆದರೆ ಎರಡು ಒಳ್ಳೆಯ ಮಾತನ್ನು ಮಾತ್ರ ಹೇಳಬಲ್ಲೆ” ಅವನು ತನ್ನ ಪ್ಯಾಂಟಿನ ಕಿಸೆಯಿಂದ ಒಂದು ಕಂದು ಬಣ್ಣದ ಕವರನ್ನು ಹೊರ ತೆಗೆದು ಅವಳಿಗೆ ನೀಡಿದ.
“ಈ ಕವರನ್ನು ಇಟ್ಟುಕೋ ಮಗಳೇ, ಇದನ್ನು ತೆರೆಯಬೇಡ. ನಿನ್ನ ಮನಸ್ಸಿಗೆ ಅತೀವ ನೋವಾದಾಗ ಮಾತ್ರ ಇದನ್ನು ತೆರೆಯಬಹುದು. ನಿನಗೆ ಒಳ್ಳೆಯದಾಗಲಿ. ದೇವರು ಅನುಗ್ರಹಿಸಿದರೆ ನಾವು ಖಂಡಿತ ಮತ್ತೂಮ್ಮೆ ಭೇಟಿಯಾಗೋಣ. ಆದರೆ ನಿನಗೆ ತಿಳಿದಿರಲಿ, ಫಲದ ನಿರೀಕ್ಷೆಯಿಲ್ಲದ ಕರ್‍ಮಗಳನ್ನು ಮಾಡುವುದರಿಂದ ನಾವು ಬಂಧಮುಕ್ತಗೊಂಡು ಮುಕ್ತಿಯನ್ನು ಹೊಂದಬಹುದು. ಬದುಕು ಏನನ್ನು ಕೊಟ್ಟರೂ ಸಂತೋಷದಿಂದ ಸ್ವೀಕರಿಸುವ ಮನದಲ್ಲಿ ದುಗುಡ-ದುಮ್ಮಾನಗಳಿಗೆ ಅವಕಾಶ ಇರುವುದಿಲ್ಲ. ಆಗ ಶಾಂತಿನೆಮ್ಮದಿ ದೊರೆಯುತ್ತದೆ. ಅದುವೇ “ಆನಂದ”. ಅವನು ದೂರದ ಬೆಟ್ಟಗಳತ್ತ ಕಣ್ಣೋಡಿಸಿದ. ಕೆಲವೊಂದು ಜೆ.ಸಿ.ಬಿ.ಗಳು, ಟ್ರಾಕ್ಟರ್‌ಗಳು ಬೆಟ್ಟವನ್ನು ಕೊರೆಯುವ ಕಾರ್‍ಯದಲ್ಲಿ ಮಗ್ನವಾಗಿದ್ದುವು. ಅಲ್ಲಿ ದುಡಿಯುವ ಆ ಕಾರ್‍ಮಿಕರು ಯಾವುದೋ ದೇಶದಿಂದ ಹೆಂಡತಿ ಮಕ್ಕಳು ಬಿಟ್ಟು ಬಂದು ಹೊಟ್ಟೆಪಾಡಿಗಾಗಿ ಆ ಉರಿಬಿಸಿಲನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ! ಒಂದಿಷ್ಟು ಅನ್ನವನ್ನು ಹಸಿವು ನೀಗಿಸಲು ತಿಂದುಕೊಂಡು ಯಾವುದೋ ಶೆಡ್‌ನಲ್ಲಿ ಬಿದ್ದುಕೊಂಡಿರುತ್ತಾರೆ! ಅದುವೇ ಜೀವನ.”
“ಏನು ಆಲೋಚಿಸುತ್ತಿದ್ದೀರಿ ಡ್ಯಾಡಿ?” ಅವಳು ಅವನನ್ನು ಎಚ್ಚರಿಸಿದಳು. ಅವನು ಎದ್ದು ನಿಂತ.
“ನಾನಿನ್ನು ಬರುತ್ತೇನೆ ಮಗಳೇ, ಆದರೆ ಕೊನೆಯದಾಗಿ ನಿನಗೊಂದು ಸತ್ಯವನ್ನು ಹೇಳುತ್ತೇನೆ. ಅತಿಯಾದ ಪ್ರೀತಿ, ನೋವು ಕೊಡದೆ ಕಳಚುದಿಲ್ಲ”. ಅವನು ಅವಳ ಉತ್ತರಕ್ಕೂ ಕಾಯದೆ ಅವಳಿಂದ ವಿದಾಯ ಹೊಂದಿ ರೂಮಿನ ಕಡೆ ಸಾಗಿದ. ಅವಳು ಅವನು ನಡೆದು ಹೋದ ದಾರಿಯನ್ನೇ ನೋಡುತ್ತಾ ಭಾರವಾದ ಹೃದಯದಿಂದ ತನ್ನ ಕಾರಿನ ಕಡೆ ಸಾಗಿದಳು.
ಅವನು ಸಹ ಯಾತ್ರಿಕರೊಂದಿಗೆ ಮೀನಾದ ಡೇರೆಯನ್ನು ಪ್ರವೇಶಿಸಿದಾಗ ಬೆಳಗ್ಗಿನ ಜಾವವಾಗಿತ್ತು. ಎಲ್ಲಿ ನೋಡಿದರೂ ಡೇರೆಯೇ ಕಂಡು ಬರುತ್ತಿತ್ತು. ಒಂದೊಂದು ಡೇರೆಯಲ್ಲಿ ಸುಮಾರು ನಲ್ವತ್ತು-ನಲ್ವತೈದು ಯಾತ್ರಿಕರು, ಪ್ರತಿಯೊಬ್ಬರಿಗೂ ಒಂದೊಂದು ಬೆಡ್ ಹಾಗೂ ಹೊದ್ದುಕೊಳ್ಳಲು ತೆಳ್ಳಗಿನ ಬೆಡ್‌ಶೀಟ್. ಗಂಡಸರು ಹಾಗೂ ಹೆಂಗಸರಿಗೆ ಪ್ರತ್ಯ-ಪ್ರತ್ಯೇಕವಾದ ಡೇರೆಯ ವ್ಯವಸ್ಥೆ ಇತ್ತು. ಮರುದಿನ ಅರಪಾಕ್ಕೆ ಪ್ರಯಾಣ, ಅರಫಾ ಮೈದಾನದಲ್ಲಿ ಕುಳಿತುಕೊಳ್ಳಲು ಹಾಗೂ ಪ್ರಾರ್‍ಥನೆ ಮಾಡಲು ನೆಲಕ್ಕೆ ಜಮಖಾನ ಹಾಕಿದ್ದರು. ಬಿಸಿಲಿನ ಬೇಗೆ ತಡೆಯಲು ವಿಶಾಲವಾದ ಡೇರೆ ಹಾಕಿದ್ದರು. ಅಲ್ಲಲ್ಲಿ ಫ್ಯಾನಿನ ವ್ಯವಸ್ಥೆಯಿತ್ತು. ಅಲ್ಲಲ್ಲಿ ಡ್ರಮ್‌ಗಳೊಳಗೆ ಐಸ್ ತುಂಡುಗಳನ್ನು ತುಂಬಿಸಿ ಇಟ್ಟಿದ್ದರು. ಆದರೂ ಉರಿಬಿಸಿಲನ್ನು ತಡೆಯಲಿಕ್ಕಾಗದೆ ಕೆಲವು ಮುದಿ ಯಾತ್ರಿಕರು ಐಸ್ ತುಂಡುಗಳನ್ನು ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರು. ಅವನು ಅರಫಾ ಮೈದಾನದಲ್ಲಿ ನಿಂತುಕೊಂಡು ತನ್ನ ಪ್ರಾರ್‍ಥನೆಯನ್ನು ಸಲ್ಲಿಸಿದ. ಮುಂದಿನ ಪ್ರಯಾಣ “ಮುಯ್ದಲಿಫಾ’ಕ್ಕೆ, ರೈಲು ನಿಲ್ದಾಣ ತಲಪಲು ಕೆಲವು ಫರ್‍ಲಾಂಗು ನಡೆಯುವುದು ಅನಿವಾರ್‍ಯವಾಗಿತ್ತು. ಜಗತ್ತಿನ ಲಕ್ಷ ಲಕ್ಷ ಯಾತ್ರಿಕರು ಹೆಣ್ಣು-ಗಂಡೆಂಬ ತಾರತಮ್ಯ ಇಲ್ಲದೆ ದೇವರ ಸ್ತುತಿ ಮಾಡುತ್ತಾ ಒಂದಾಗಿ ಸಾಗಿ, ರೈಲು ಹತ್ತಿ ‘ಮುಯ್ದಲಿಫ’ ತಲಪಿದಾಗ ಸಂಜೆಯಾಗಿತ್ತು. ಅವನು ಸಂಪೂರ್‍ಣ ನಿತ್ರಾಣಗೊಂಡಿದ್ದ. ಕುಸಿದು ಕುಳಿತೇ ಅವನು ಕಲ್ಲುಗಳನ್ನು ಹೆಕ್ಕಿದ. ಅಲ್ಲಿಂದ ಮೀನಕ್ಕೆ ಮರು ಪ್ರಯಾಣ. ಬಹಳವಾದ ಆತ್ಮ ಬಲ ಮತ್ತು ದೇವರ ಅನುಗ್ರಹದಿಂದ ಮಾತ್ರ ಅವನು ಬದುಕುಳಿದ. ಈ ಅವಧಿಯಲ್ಲಿ ಆ ಹೆಣ್ಮಗಳಿಂದ ದಿನಕ್ಕೆ ಎರಡು ಬಾರಿ ಮೊಬೈಲ್ ಕರೆ ಬರುತ್ತಿತ್ತು. ಅವಳು ಮೊಬೈಲ್‌ನಲ್ಲಿ ಮಾತಾಡುತ್ತಾ ಅವನಿಗೆ ಧೈರ್‍ಯ ತುಂಬುತ್ತಿದ್ದಳು. ಅವನು ಮೀನಾಕ್ಕೆ ಬಂದು ತಲುಪಿದೊಡನೆ ಅವಳಿಗೆ ಮೊಬೈಲ್ ಮಾಡಿ ಮಾತಾಡಿಸಿದ.
“ಮಗಳೇ, ನಿನ್ನ ಆತ್ಮಬಲದ ಮಾತುಗಳು ನನ್ನನ್ನು ಪುನಃ ಚೇತನಗೊಳ್ಳುವಂತೆ ಮಾಡಿದುವು. ಅದಕ್ಕಾಗಿ ನಿನಗೆ ಧನ್ಯವಾದಗಳು. ನಾನೀಗ ಮೀನಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಬಹುಶಃ ನಾಳೆ ಜಮ್ರಾಗಳಿಗೆ ಕಲ್ಲೆಸೆಯುವ ಕಾರ್‍ಯ ಇದೆ. ದೇವರ ಅನುಗ್ರಹ ಒಂದಿದ್ದಲ್ಲಿ ಅದೇನೂ ದೊಡ್ಡ ವಿಷಯವಲ್ಲ. ನಿನಗೆ ಒಳ್ಳೆಯದಾಗಲಿ ಮಗಳೇ.”
ಮರುದಿನ ಮೀನಾ ಡೇರೆಯಲ್ಲಿ ಸಂಭ್ರಮವೋ ಸಂಭ್ರಮ. ಜಗತ್ತಿನ ಎಲ್ಲಾ ಯಾತ್ರಿಕರು, ಬಡವ-ಬಲ್ಲಿದ ಎನ್ನದೆ ಲಕ್ಷೋಪ ಲಕ್ಷವಾಗಿ ನಡೆದುಕೊಂಡೇ ಹೋಗಿ ಕಲ್ಲೆಸೆಯುವ ಆ ಪವಿತ್ರ ಕಾರ್‍ಯಕ್ಕೆ ಸಜ್ಜುಗೊಳ್ಳುವ ತವಕ. ಅದೇಕೋ ಅವನಿಗೆ ದೇಹದಲ್ಲಿ ಉಲ್ಲಾಸವೇ ಇರಲಿಲ್ಲ. ತುಂಬಾ ನಿತ್ರಾಣಗೊಂಡಿದ್ದ. ಮೀನಾದಲ್ಲಿ ತಂಗಿದ ಮೂರು ದಿನವೂ ಅವನಿಗೆ ಆಹಾರದ ಸಮಸ್ಯೆ ಬಲವಾಗಿ ಕಾಡಿತ್ತು. ಎಷ್ಟೋ ತಡಕಾಡಿದರೂ ಒಂದಿಷ್ಟು ಅನ್ನ ಅವನಿಗೆ ಸಿಗಲಿಲ್ಲ. ಮಕ್ಕಾದಲ್ಲಿ ಏನೋ ಸ್ವಲ್ಪ ಅನ್ನ ಬೇಯಿಸಿಕೊಂಡು ತಿಂದು ತೃಪ್ತಿಪಟ್ಟುಕೊಳ್ಳುತ್ತಿದ್ದ. ಇಲ್ಲಿ ಹಾಗಲ್ಲ. ಪ್ಯಾಕೆಟ್ ಊಟ ಸಿಗುತ್ತಿದ್ದರೂ ಬರೇ ಸಪ್ಪೆ, ಉಪ್ಪು ಹುಳಿ-ಖಾರವನ್ನು ಇಲ್ಲಿ ಯಾರೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಮಕ್ಕಾ ತಲಪಿದರೆ, ರೂಮಿನಲ್ಲಿ ಒಂದಿಷ್ಟು ಅನ್ನ-ಬೇಯಿಸಿ ತಿಂದು ವಿಶ್ರಾಂತಿ ಪಡೆಯುವ ಆಶೆಯು ಮನಸ್ಸಿನಲ್ಲಿ ಮೂಡಿ ಬರುತ್ತಿತ್ತು. ಅದರೊಂದಿಗೆ ಜಮಾಗಳಿಗೆ ಕಲ್ಲೆಸೆಯುವ ಪವಿತ್ರ ಕಾರ್‍ಯವನ್ನು ನೇರವೇರಿಸುವ ಆಶೆ, ಲಕ್ಷ-ಲಕ್ಷ ಯಾತ್ರಿಕರೊಂದಿಗೆ ಒಂದಾಗುವ ಆಶೆ, ಆ ಪವಿತ್ರ ಅಪರೂಪದ ಕ್ಷಣಕ್ಕಾಗಿ ಅವನು ಜಾತಕ ಪಕ್ಷಿಯಂತೆ ಕಾಯುತ್ತಿದ್ದ. ಅವನು ಬಾವುಕನಾದ. ಕೊನೆಗೆ ಆ ಘಳಿಗೆಯು ಸಮೀಪಿಸಿತು. ದೇವರ ನಾಮ ಸ್ಮರಣೆ ಮಾಡುತ್ತಾ ಜಮಾಕ್ಕೆ ಹೋಗುತ್ತಿರುವ ಜನಸಂದಣಿಯೊಂದಿಗೆ ಅವನೂ ಲೀನನಾದ.
ಆ ಹೆಣ್ಮಗಳು ಅವನೊಂದಿಗೆ ಮೊಬೈಲ್ ಸಂಪರ್‍ಕಕ್ಕಾಗಿ ತವಕಿಸುತ್ತಿದ್ದಳು. ಆ ದಿನ ಬೆಳಿಗ್ಗೆಯಿಂದ ಅವಳು ಮೊಬೈಲ್‌ನಲ್ಲಿ ಎಷ್ಟೇ ಪ್ರಯತ್ನಿಸಿದರೂ ಅವನ ಸಂಪರ್‍ಕ ಸಿಗಲಿಲ್ಲ. ಸಂಜೆಯಾಯಿತು. ಅವಳು ಸುಮಾರು ಇಪ್ಪತ್ತು ಭಾರಿ ಪ್ರಯತ್ನಿಸಿ ಸೋತಿದ್ದಳು. ತಾನು ಅವರ ರೂಮಿನ ಸಹಯಾತ್ರಿಕರ ಮೊಬೈಲ್ ನಂಬ್ರವನ್ನು ಪಡೆಯದೆ ತಪ್ಪು ಮಾಡಿ ಬಿಟ್ಟೆ ಎಂದು ಅವಳಿಗೆ ಖೇದವಾಯಿತು. ಆದರೂ ಅವಳು ಎಡೆಬಿಡದೆ ಅವನ ಸಂಪರ್‍ಕಕ್ಕಾಗಿ ಶತಃ ಪ್ರಯತ್ನ ಮಾಡುತ್ತಿದ್ದಳು. ತನ್ನ ದೈನಂದಿನ ಪ್ರಾರ್‍ಥನೆಯಲ್ಲಿ ಅವನ ಸಂಪರ್‍ಕಕ್ಕಾಗಿ ದೇವರಲ್ಲಿ ಪ್ರಾರ್‍ಥಿಸಿಕೊಂಡಳು. ಮಧ್ಯಾಹ್ನದ ಊಟ ಅವಳಿಗೆ ಸೇರಲಿಲ್ಲ. ಸಂಜೆ ಕೂಡಾ ಯಾವುದೇ ಅನ್ನ-ಆಹಾರ ಸೇವಿಸದೆ ಅವಳು ಚಡಪಡಿಸ ತೊಡಗಿದಳು. ಅವನಿಂದ ತನಗೆ ರಿಂಗ್ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಕಾಯ ತೊಡಗಿದಳು. ಹೊತ್ತು ಕಳೆದಂತೆ ಅವಳು ಹತಾಶ ಹೊಂದಿದಳು. ಮುಖ ಕಪ್ಪಿಟ್ಟಿತು. ಕಣ್ಣೀರು ಕಣ್ಣಾಲಿಗಳಲ್ಲಿ ತುಂಬಿಕೊಂಡವು. ಆ ಕ್ಷಣದಲ್ಲಿ ಅವಳ ಗಮನ ಹರಿದದ್ದು ಟಿ.ವಿ. ಕಡೆಗೆ, ಸೌದಿ ಅರೇಬಿಯಾ ಸರಕಾರವು ಒಂದೇ ಸವನೆ, ಎಡೆಬಿಡದೆ ವಿಶೇಷ ವಾರ್‍ತೆಯನ್ನು ಬಿತ್ತರಿಸುತ್ತಿತ್ತು. ಅವಳು ಗಾಬರಿಯಿಂದ ಟಿ.ವಿ. ವಾರ್‍ತೆಯನ್ನು ಆಲಿಸಿದಳು.
“ಜಮ್ರಾಗಳಿಗೆ ಕಲ್ಲೆಸೆಯುವ ಸಂದರ್‍ಭದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ ಸಾವಿರಾರು ಯಾತ್ರಿಕರು ಮರಣವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಯಾತ್ರಿಕರಿಗೆ ಸಂಪೂರ್‍ಣ ರಕ್ಷಣೆ ನೀಡಲಾಗುತ್ತಿದ್ದು, ಜನರು ಭಯಭೀತರಾಗಬಾರದಾಗಿ ವಿನಂತಿಸಿದೆ.”
“ಡ್ಯಾಡೀ” ಎಂದು ರೋದಿಸುತ್ತಾ ಅವಳು ಕುಸಿದು ಕುಳಿತಳು. ಪದೇ ಪದೇ ಮೊಬೈಲ್ ಸಂಪರ್‍ಕಕ್ಕೆ ಯತ್ನಿಸಿದಳು. ಏನೂ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಅವಳಿಗೆ ಅವನು ಕೊಟ್ಟ ಲಕೋಟೆಯ ನೆನಪಾಗಿ ಅದರಲ್ಲಿ ಏನಾದರೂ ಹೆಚ್ಚಿನ ಮಾಹಿತಿ ಸಿಗಬಹುದೇ ಎಂಬ ಆಲೋಚನೆ ಉಂಟಾಯಿತು. ಅವಳು ಒಂದೇ ಉಸಿರಿನಲ್ಲಿ ಎದ್ದು ರೂಮಿನ ಕಡೆ ಹೊರಟು ಕವರನ್ನು ಕೈಗೆತ್ತಿಕೊಂಡಳು. ನಡುಗುವ ಕೈಗಳಿಂದ ಅವಳು ಲಕೋಟೆಯನ್ನು ತೆರೆದಳು, ಅದರಲ್ಲಿ ಒಂದು ಶುಭ್ರವಾದ ಬಿಳಿ ಹಾಳೆ ಇತ್ತು. ಅದರ ಮಧ್ಯದಲ್ಲಿ ಒಂದೇ ಒಂದು ವಾಕ್ಯ ಮುದ್ದಾಗಿ ಬರೆದಿತ್ತು. “ದಿಸ್ ಟೂ ಶಲ್ ಪಾಸ್”.
*****


















