ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು. ತಂದೆಯ ಸಾವಿನೊಂದಿಗೆ ನಿರಾಶ್ರಯವಾಯಿತು ದೊಡ್ಡ ಸಂಸಾರ. ಕಬ್ಬಿನ ಹಾಲಿನ ಮಾರಾಟ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿದ್ದ ಇಮಾಮ್ ಸಾಬ್ ೫೦ ವರ್ಷಕ್ಕೆ ಕಾಲಿರಿಸಿದ್ದಾಗ ದಿಢೀರನೆ ಹೊಡೆದ ಲಕ್ವಾ ಅವನ ಪ್ರಾಣವನ್ನೇ ಕೊಂಡೊಯ್ದು ಸಂಸಾರವನ್ನು ದುಃಖ ಸಾಗರದಲ್ಲಿ ಮುಳುಗಿಸಿತು.

ಝನಾಬ್ ಗಂಡನನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಬೆಳೆಯುತ್ತಿರುವ ಕಂದಮ್ಮಗಳ ಹಸಿವನ್ನು ತಣಿಸಿ, ಅವರನ್ನು ಮುನ್ನಡೆಸುವ ಭಾರ ಅವಳದಾಗಿತ್ತು. ೩೦ ವರ್ಷದ ರೆಹನಾ, ೧೮ ವರ್ಷದ ಫಾತಿಮಾ, ೧೦ ನೇ ತರಗತಿಯಲ್ಲಿ ಓದುತ್ತಿದ್ದ ನಸರೀನ್ ಇವರ ಬೆಳದ ಮಕ್ಕಳು. ಇನ್ನು ಮೂರು ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನವರು, ಕೊನೆಯ ಗಂಡು ಮಗು ಮೂರು ವರ್ಷದವನು. ತಾಯಿಯ ದುಖದಲ್ಲಿ ರೆಹನಾ, ಫಾತಿಮಾಗೆ ಏನು ಮಾಡಬೇಕೆಂದು ತೋಚಲಿಲ್ಲ.

“ಅಮ್ಮಾ! ಏಕೆ ಇಷ್ಟು ಅಧೀರಳಾಗುತ್ತೀ? ಅಪ್ಪ ನಮ್ಮನ್ನು ಬಿಟ್ಟು ಹೋದರೂ ನಮಗೆ ಕಬ್ಬಿನಿಂದ ಹಾಲನ್ನು ತೆಗೆಯುವ ಚಕ್ರವನ್ನು ಬಿಟ್ಟು ಹೋಗಿದ್ದಾರೆ. ನಾನು ನಾಳೆಯಿಂದ ಶಾಲೆಯಾದ ಮೇಲೆ ಮಾರುಕಟ್ಟೆಯ ಒಂದು ಮೂಲೆಯಲ್ಲಿ ನಿಂತು ಕಬ್ಬಿನ ಹಾಲು ತೆಗೆದು ಮಾರಿ ಹಣ ಸಂಪಾದಿಸಿ ಸಂಸಾರಕ್ಕೆ ಒದಗುವೆ. ಇದರಿಂದ ನಮ್ಮ ಹಸಿವೆ ಖಂಡಿತ ನೀಗುತ್ತದೆ” ಎಂಬ ಆಶ್ವಾಸನೆ ಕೊಟ್ಟಳು ನಸಿರೀನ್. ದುಃಖದಿಂದ ಪರಿತಪ್ತಳಾದ ತಾಯಿ ಹಾಗೂ ಅಕ್ಕಂದಿರಿಗೆ ಇವಳ ಮಾತಿನಲ್ಲಿ ಆಶಾಕಿರಣ ಮೂಡಿದರೂ ಈ ಎಳೇ ತೋಳುಗಳು ಚಕ್ರವನ್ನು ತಿರುಗಿಸಬಲ್ಲವೇ?- ಎಂದು ಚಿಂತಿಸಿದರು.

“ಅಮ್ಮ! ನಸಿರಿನ್ ಕಬ್ಬಿನ ಹಾಲಿನ ವ್ಯಾಪಾರ ಮಾಡಿಕೊಂಡರೆ ನಾವು ಮನೆಯಲ್ಲೇ ಕುಳಿತು ಹಪ್ಪಳ ಲಟ್ಟಿಸಿ ಮಾರುತ್ತೇವೆ. ಊದಿನ ಕಡ್ಡಿಗೆ ಗಂಧ ಹಚ್ಚಿ ಕೊಡುವ ಕೆಲಸ ಮಾಡಿ ಕೂಡ ಸಂಪಾದನೆ ಮಾಡಿ ಸಂಸಾರ ತೂಗಿಸುತ್ತೇವೆ” ಎಂದರು.

ಮಕ್ಕಳ ತೋಳ ಬಲದಲ್ಲಿ ನಂಬಿಕೆಯಿಟ್ಟ ಹೈನಾಬ್ ದಿನೇದಿನೇ ಗಂಡನ ಸಾವಿನ ದುಃಖವನ್ನು ಮರೆಯುತ್ತಾ ಬಂದಳು. ಅವಳು ಮಕ್ಕಳ ಜೊತೆಗೂಡಿ ಕೈಲಾದಷ್ಟು ದುಡಿದು ಸಂಸಾರ ನಿಭಾಯಿಸುತ್ತಿದ್ದಳು.

ಎರಡು ತಿಂಗಳು ಕಬ್ಬಿನ ಯಂತ್ರವು ಸ್ಥಗಿತವಾಗಿದ್ದು ಚಕ್ರ ತಿರುಗುವುದು ಕಷ್ಟವಾಗಿತ್ತು. ನಸಿರೀನಳ ಎಳೆಯ ಕೈಗಳು ಆ ಚಕ್ರಕ್ಕೆ ತೈಲವನ್ನು ಬಿಟ್ಟು ಅದು ಸರಾಗವಾಗಿ ತಿರುಗುವಂತೆ ಮಾಡಿದಳು.

“ಅಮ್ಮಾ! ನಾನು ಶಾಲೆಯಿಂದ ಬರುವುದರೊಳಗೆ ನೀನು ಕಬ್ಬಿನ ಜಲ್ಲೆಗಳನ್ನು ಕೊಂಡು ತಂದಿಡು” ಎಂದು ಹೇಳಿ ಶಾಲೆಗೆ ಹೋಗುತ್ತಿದ್ದಳು.

ಶಾಲೆಯಲ್ಲೂ ನಸಿರೀನ್ ಬಹಳ ತನ್ಮಯತೆಯಿಂದ ಪಾಠ ಪ್ರವಚನ ಕಲಿಯುತ್ತಿದ್ದಳು. ಉಪಾಧ್ಯಾಯರು ಹೇಳಿಕೊಟ್ಟಿದ್ದು ಅರ್ಥವಾಗದಿದ್ದರೆ ಅವರ ಹತ್ತಿರ ಹೋಗಿ ತನ್ನ ಸಂಶಯಗಳನ್ನು ದೂರ ಮಾಡಿಕೊಳ್ಳುತಿದ್ದಳು. ಎಲ್ಲ ಗುರುಗಳಿಗೂ ಅವಳು ಪ್ರಿಯ ವಿದ್ಯಾರ್ಥಿನಿಯಾಗಿದ್ದಳು. ಓದಿನಲ್ಲಿ ಅವಳು ಚೂಟಿಯಾಗಿರುವುದು, ಬುದ್ದಿವಂತಿಕೆ ಉಪಯೋಗಿಸಿ ಕೆಲಸ ಮಾಡುವುದು ಶಾಲೆಯ ಗುರುವೃಂದಕ್ಕೆ ಆಶ್ಚರ್ಯ ಉಂಟು ಮಾಡುತ್ತಿತ್ತು.

ಅವಳು ಎಲ್ಲವನ್ನೂ ಬಹುಬೇಗ ಅರ್ಥವಿಸಿಕೊಂಡು ಬಹು ಬೇಗನೇ ಕಲಿಯುತ್ತಿದ್ದಳು. ಶಾಲೆ ಮುಗಿದ ಮೇಲೆ ಮನೆಗೆ ಬಂದೊಡನೆ ಅವಳ ಗಮನ ಕಬ್ಬಿನ ಯಂತ್ರದ ಕಡೆ ತಿರುಗುತಿತ್ತು.

“ಅಮ್ಮಾ! ಕಬ್ಬಿನ ಜಲ್ಲೆ ತಂದಿರುವ ಅಲ್ಲಾ? ಇನ್ನು ನಾನು ಹೊರಡುವೆ” ಎನ್ನುತ್ತಿದ್ದಳು.

“ಮಗಳೆ, ಶಾಲೆಯಿಂದ ಬಂದಿರುವೆ. ಸ್ವಲ್ಪ ಸುಧಾರಿಸಿಕೋ, ತಿಂದು ಹೋಗು” ಎನ್ನುತ್ತಿದ್ದರು ತಾಯಿ.

“ಅಮ್ಮಾ! ನನಗೆ ಹಸಿವಿಲ್ಲ, ನಾನು ಬಂದು ಊಟ ಮಾಡುವೆ” ಎನ್ನುತ್ತಾ ಕಬ್ಬಿನ ಯಂತ್ರವಿದ್ದ ಬಂಡಿಯನ್ನು ತಳ್ಳಿಕೊಂಡು ನಡೆದೇಬಿಡುತ್ತಿದ್ದಳು. ಗ್ರಾಹಕರಿರದ ವೇಳೆಯಲ್ಲಿ ನಿಂತ ಕಡೆಯೇ ಅವಳ ಓದು ಸಾಗುತ್ತಿತ್ತು ಕಬ್ಬಿನ ಯಂತ್ರವಿರುವ ಗಾಡಿಯೇ ಅವಳ ಓದುವ ಮೇಜಾಗುತಿತ್ತು. ಅವಳ ಶಾಲೆಯ ಮನೆಕೆಲಸವೆಲ್ಲಾ ಅಲ್ಲೇ ಮುಗಿಸಿಬಿಡುತ್ತಿದ್ದಳು. ಅವಳು ಮನೆಗೆ ಬರುವಾಗ ಭಾಗ್ಯದ ಲಕ್ಷ್ಮಿಯಂತೆ ಬಂದು ಅಮ್ಮನ ಮಡಿಲಿಗೆ ದಿನಕ್ಕೆ ೨೦೦, ೨೫೦ ರೂಗಳನ್ನು ಸುರಿಯುತ್ತಿದ್ದಳು. ತಂದೆಯ ಔಷಧಕ್ಕೆಂದು ಮಾಡಿದ ೮೦ ಸಾವಿರ ಸಾಲಕ್ಕೂ ನಸಿರೀನ್ ಸಂಪಾದಿಸಿದ ದುಡ್ಡಿನಲ್ಲಿ ಕಟ್ಟಬೇಕಾಗುತ್ತಿತ್ತು. ಇದರ ಮೇಲೆ ಮಿಕ್ಕ ಹಣವನ್ನು ಸಂಸಾರ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದರು.

ಪಕ್ಕದ ಮನೆಯಲ್ಲಿದ್ದ ಮತ್ತೊಂದು ಮುಸ್ಲಿಂ ಕುಟುಂಬದ ಕಥೆ ಅತಿ ಭಿನ್ನವಾಗಿತ್ತು. ಅಲ್ಲಿಯೂ ತಂದೆ ತೀರಿಹೋದ ತಾಯಿ ಮತ್ತು ಎರಡು ಗಂಡು ಮಕ್ಕಳ ಸಂಸಾರ. ಅಮೀನಾಗೆ ಗಂಡ ತೀರಿದಾಗ ಬಹಳ ಅಧೀರಳಾಗಿ ದುಃಖ ಸಹಿಸಲಾಗದೆ ಸ್ವಲ್ಪ ದಿನ ಹಾಸಿಗೆ ಹಿಡಿದುಬಿಟ್ಟಿದ್ದಳು. ಇದಕ್ಕೆ ಕಾರಣವೆಂದರೆ ಅಡ್ಡದಾರಿ ಹಿಡಿದಿದ್ದ ಮಹಮೂದ್, ಹಾಗೂ ಸುಲಾನ್ ಕಾರಣವಾಗಿದ್ದರು. ತಂದೆ ತೀರಿಹೋದ ಮೇಲೆ ೧೫ ವರ್ಷದ ಮೊಹಮದ್ ಹಾಗು ೧೩ ವರ್ಷದ ಸಲ್ಮಾನ್ ಶಾಲೆಗೆ ಹೋಗುವುದನ್ನು ಬಿಟ್ಟು ಬಿಟ್ಟು ಗೋಲಿ, ಕ್ರಿಕೆಟ್, ಇಸ್ಪೇಟ್ ಆಡಿ ಪೋಲಿ ತಿರುಗತೊಡಗಿದರು. ಸಂಸಾರ ನಿಭಾಯಿಸುವುದು ದುಸ್ತರವಾದಾಗ ತಾಯಿ ಅಮೀನಾ ಅವರನ್ನು ಕೆಲಸಕ್ಕೆ ಸೇರಲು ಗೋಗರೆದಳು.

“ರಫೀಕ್ ಅಂಗಡಿಗೆ ಹೋಗಿ ಪೊಟ್ಟಣ ಕಟ್ಟಿ ಮಾಲೀಕನಿಗೆ ವ್ಯಾಪಾರದಲ್ಲಿ ಸಹಾಯ ಮಾಡಿ ಸಂಪಾದಿಸಬಾರದೇ?” ಎಂದು ಮೊಹಮದ್ದಿಗೆ ಅಂಗಲಾಚಿದಳು.

ಅಮೀನಾ ರಫೀಕ್ ಅಂಗಡಿಯ ಮಾಲೀಕನ ಹತ್ತಿರ ತನ್ನ ಕಷ್ಟಗಳನ್ನು ಹೇಳಿಕೊಂಡಾಗ ಮಾಲೀಕ ಮೊಹಮದ್‌ಗೆ ಕೆಲಸ ಕೊಟ್ಟ ಎರಡನೆಯ ಮಗ ಸಲ್ಮಾನ್ “ನನಗೆ ಎಲ್ಲಾ ಗೊತ್ತು ದುಡ್ಡು ಹೇಗೆ ಸಂಪಾದಿಸಬೇಕೆಂದು. ನೀನು ನನಗೆ ಏನು ಹೇಳಬೇಡ” ಅಂದುಬಿಟ್ಟ ಅಮ್ಮನಿಗೆ.

ತನ್ನ ಎರಡು ಮಕ್ಕಳು ಸಂಸಾರದ ರಥವನ್ನು ಸಾಗಿಸುತ್ತಾರೆಂದು ಸ್ವಲ್ಪ ನೆಮ್ಮದಿ ಪಡೆದಳು ಅಮೀನಾ. ಪಕ್ಕದ ಮನೆ ಝನಾಬ್ ಹತ್ತಿರ ನಿನ್ನ ಹೆಣ್ಣು ಮಕ್ಕಳಂತೆ ನನ್ನ ಮಕ್ಕಳು ನನ್ನ ನೆರವಿಗೆ ಬಂದಿದ್ದಾರೆ ಎಂದು ಹೇಳಿಕೊಂಡು ನಿಟ್ಟುಸಿರು ಬಿಡುತ್ತಿದ್ದಳು.

ಆದರೆ ಅವಳ ನೆಮ್ಮದಿ ಬಹಳ ದಿನ ಉಳಿಯಲಿಲ್ಲ ದೊಡ್ಡ ಮಗ ಮಾಲೀಕನ ಕ್ಯಾಷ್ ಪೆಟ್ಟಿಯಿಂದ ದಿನವೂ ಕದ್ದು ದುಡ್ಡು ತಂದು ಮಾಲೀಕರು ಕೊಟ್ಟರು ಎಂದು ಸುಳ್ಳು ಹೇಳುತ್ತಿದ್ದ. ಒಂದು ದಿನ ಸಿಕ್ಕಿಬಿದ್ದ ಮೊಹಮದ್ ಮನೆಗೆ ಸಪ್ಪೆ ಮೋರೆ ಹಾಕಿಕೊಂಡು “ನನಗೆ ಮಾಲೀಕ ಕೆಲಸದಿಂದ ತೆಗೆದುಹಾಕಿದರು” ಎಂದು ಹೇಳಿದ. ಅಮೀನಾ ಹೋಗಿ ಕೇಳಿದಾಗ ಮಾಲೀಕ ಅವಳನ್ನು ಅವಳ ಮಗನ ಕದಿಯುವ ಗುಣವನ್ನು ಎತ್ತಿ ಹಿಡಿದು ಛೀಮಾರಿ ಹಾಕಿದರು. ಅವಳ ಬಾಳಿಗೆ ಇಷ್ಟೇ ಸಾಲದೆಂಬತೆ ಎರಡನೆಯ ಮಗ ಸಲ್ಮಾನ್ ಜೇಬುಗಳ್ಳತನ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದು ಲಾಕಪ್ ಸೇರಿದ. ಅಮೀನಾಳ ದುಃಖಕ್ಕೆ ಕೊನೆ ಮೊದಲಿರಲಿಲ್ಲ.

ಅಂದು ನಸರೀನ್ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿ ಪದವೀಧರಳಾಗಿ ಸಿಹಿ ಹಂಚಲು ಅಮೀನಾ ಮನೆಗೂ ಬಂದಿದ್ದಳು. ಕಬ್ಬನ್ನುರಿಸಿ ಕುಟುಂಬಕ್ಕೆ ಹಾಲೆರೆದ ಬಾಲೆ ನಸಿರೀನ್ ಬಗ್ಗೆ ಅಮೀನಾಗೆ ಬಲು ಹೆಮ್ಮೆ ಎನಿಸಿತು. ನೀನು ಕಬ್ಬಿನ ಯಂತ್ರದ ಚಕ್ರ ತಿರುಗಿಸಿ ಬಾಳ ಚಕ್ರ ನಿಲ್ಲದೆ ಚಲಿಸುವಂತೆ ಮಾಡಿದೆ. ಸಣ್ಣ ಮಕ್ಕಳಿಗೆ ಅದರ ಅರಿವಾಗದೆ ನಮ್ಮ ಬಾಳ ಚಕ್ರವೇ ನಿಂತು ಕಣ್ಣೀರಿಡುವಾಗ “ಅಮೀನಾ ಆಂಟಿ, ದುಖಿಸಬೇಡಿ. ನಾನು ಅಕ್ಕ ಪಕ್ಕ ನೆರೆಹೊರೆ ಇದ್ದೀವಲ್ಲ ನೀವುಗಳು ಹಸಿವೆಯಿಂದ ಇರಲು ಬಿಡುವುದಿಲ್ಲ ನನಗೆ ಸರ್ಕಾರಿ ಕೆಲಸ ಸಿಕ್ಕಿದೆ. ನನಗಾದಷ್ಟು ನೆರವು ಮಾಡುವೆ” ಎಂದಳು.

“ನನ್ನ ಮಕ್ಕಳು ನಿಮ್ಮನ್ನು ನೋಡಿ ಒಳ್ಳೆಯ ಮಾರ್ಗದಲ್ಲಿ ಜೀವಿಸಲು ಕಲಿತರೆ ನನಗೆ ಅಷ್ಟೇ ಸಾಕು” ಎಂದಳು ಅಮೀನಾ.

“ಅಮೀನಾ ಆಂಟಿ! ನಾನು ಓದಿ ಪ್ರಭಾವಿತಳಾಗಿ, ನನ್ನ ಬಾಳನ್ನು ರೂಪಿಸಿಕೊಂಡ ಗಾಂಧೀಜಿಯ ಆತ್ಮಕಥೆ, ವಿವೇಕಾನಂದರ ಭಾಷಣಗಳು, ಬಸವಣ್ಣನವರ ವಚನಗಳು, ರಾಮಾಯಣ, ಮಹಾಭಾರತ ಜೊತೆಗೆ ಒಂದು ಕುರಾನ್ ಪುಸ್ತಕ ಎಲ್ಲವನ್ನೂ ನಿಮ್ಮ ಮಕ್ಕಳಿಗಾಗಿ ಕೊಡುತ್ತಿರುವೆ” ಎಂದಳು. “ಕೆಲವು ಪುಸ್ತಕಗಳು ನನಗೆ ಶಾಲೆಯಲ್ಲಿ ಬಹುಮಾನ ಬಂದವು. ಅವು ನಿಮ್ಮ ಮಕ್ಕಳಿಗೆ ದಾರಿ ದೀಪವಾಗಲಿ” ಎಂದಳು.

ಅಮೀನಾ ಆಂಟಿಗೆ ನಸರೀನ್‌ಳ ಮಾತಿನಿಂದ ಆಶಾಕಿರಣ ಮೂಡಿತು.
*****