ಹತ್ಯೆ

ಹತ್ಯೆ

ಮಗಳ ತಲೆಯ ಕೂದಲನ್ನು ಇಬ್ಭಾಗ ಮಾಡುತ್ತಾ, ಹೇನು ಹುಡುಕುತ್ತಾ, ಅದು ಸಿಕ್ಕಾಗ ಎರಡು ಹೆಬ್ಬೆರಳುಗಳ ಉಗುರಿನಿಂದ ಕುಕ್ಕುತ್ತಾ, ಅದು ಚೆಟ್ ಎನ್ನುವುದು ಕೇಳಿಸದಿರಲಿ ಎಂದೂ ಅಥವಾ ಅದಕ್ಕೆ ಪೂರಕವಾದ ಪಕ್ಕವಾದ್ಯದಂತೆಯೇ ಬಾಯಲ್ಲಿ ‘ಯೂಸೂ’ ಎನ್ನುತ್ತಿದ್ದಳು. ಅಕಸ್ಮಾತ್ ಅವಳ ಗುಡಿಸಲ ಪಕ್ಕದಲ್ಲೇ ತಳವಾರರ ನಿಂಗ ಏನೋ ಸಾರಿಕೊಂಡು ಹೋಗುತ್ತಿದ್ದುದನ್ನು ಕೇಳಲೆಂದು ತಲೆ ಎತ್ತಿದಾಗ ಗುಡಿಸಲ ಎದುರಿನ ಅರಳೀಮರದಲ್ಲಿ ಕೋತಿಯೊಂದು ಕುಳಿತು, ಅದರ ಮರಿಯ ಮೈಯಲ್ಲಿ ಹೇನು ಹುಡುಕುತ್ತಿರುವುದು ಕಂಡು, ಅದರ ವಾತ್ಸಲ್ಯಕ್ಕೆ ತನ್ನ ಪ್ರೀತಿಯನ್ನು ಹೋಲಿಸಿಕೊಂಡು ನಕ್ಕಳು ಕಲ್ಯಾಣಿ. ಆದರೆ ಆ ಮಂಗ ಹೇನನ್ನು ಬಾಯಲ್ಲಿ ಹಾಕಿಕೊಂಡಾಗ, ಅಸಹ್ಯವಾಗಿ ವಾಂತಿಯಾಗುವಂತಾಯಿತು. ‘ವ್ಯಾ …’ ಎಂದು ಕಕ್ಕಲು ಹೊರಬರುವಾಗ ಸೀರನ್ನು ಸೀರಲು ಕೂದಲಿಗೆ ತೂರಿಸಿದ್ದ ಸೀರಣಿಗೆ ಸಿಕ್ಕಿಗೆ ಸಿಕ್ಕಿಕೊಂಡು ಮುಗ್ಗರಿಸಿದಳು. ಆಗ ತಾನೇ ಉಂಡ ಕಲ್ಯಾಣಿ ಹಸುವಿನ ಹುಳಿ ಮಜ್ಜಿಗೆ ಅನ್ನ ಬಾಯಿಗೆ ಬಂದು ತಡೆದುಕೊಳ್ಳಲಾರದೇ ಅಲ್ಲೇ ಕಕ್ಕಿದಳು. ನಂತರ ಏನೂ ಅರಿಯದ ಕೋತಿಗೆ ಕೋಲಿನಿಂದ ಬೀಸಿ ಓಡಿಸಿ, ಕಕ್ಕಿದ್ದನ್ನು ಹೊರಹಾಕಿ ಬಂದಳು. ಬಾಯಲ್ಲಾ ಇನ್ನೂ ಸಪ್ಪೆ ಹುಳಿ ಏನೇನೋ ಆಗುತ್ತಿದ್ದಂತೆಯೇ ಸತ್ಯಪ್ಪ ಬಾಗಿಲಿಗೆ ಬಂದವನು, ಕೊಕ್ಕರೆ ಕಾಲಿನ ಕೋಳಿ ಕುಕ್ಕಿ ಕುಕ್ಕಿ ತಿನ್ನುತ್ತಿದ್ದುದನ್ನು ಒಂದರೆಗಳಿಗೆ ಆಶ್ಚರ್ಯದಿಂದ ನಿಂತು ನೋಡಿದವನಿಗೆ ಹೇಗೇಗೋ ಆಗಲಾರಂಭಿಸಿತು. ತನ್ನ ಮಗಳು ಸುಕಾಲೇರ ಪೂವಾನಾಯ್ಕನ ಜತೆ ಸರಸ ಆಡುತ್ತಿರುತ್ತಾಳೆ ಎಂದುಕೊಂಡಿದ್ದ ಅವನ ಅನುಮಾನ ಯಾಕೋ ನಿಜ ಆಗುತ್ತಿರುವಂತೆನಿಸಿ, ಬುಸುಗುಡುತ್ತಾ ಒಳ ಹೋಗಿ ಅವಳ ಜುಟ್ಟು ಹಿಡಿದು ಹೊಟ್ಟೆಗೆರಡು ಇಕ್ಕಬೇಕೆನಿಸುತ್ತಿದ್ದಂತೆಯೇ, ಅವನ ಹೆಂಡತಿ ಕಲ್ಯಾಣಿಯೇ ಬೇಲಿ ಮೂಲೆಯಲ್ಲಿ ಬಾಯಿಗೆ ಕೈ ಹಾಕಿ ನಾಲಿಗೆ ಉಜ್ಜಿ ತೊಳೆಯುತ್ತಿರುವುದು ಕಾಣಿಸಿತು. ಅವನ ಕೋಪ ಜರನೇ ಇಳಿದು ಅವಳ ಬಳಿಗೆ ಓಡಿ `ಏನಾಯ್ತೇ?’ ಎಂದು ವಿಚಾರಿಸಲಾರಂಭಿಸಿದ. ಅವನಿಗೆ ಖಾತ್ರಿಯಾದಂತಿತ್ತು-ಏಳನೇ ಜೀವ ಅವಳ ಒಡಲಲ್ಲಿ ಅಂಕುರಿಸಿದೆ ಎಂದು.

ನಿಂಗ ಸಾರಿಕೊಂಡು ಹೋದುದನ್ನು ಕಂಡು, ಕೇಳಿಯೇ ಅವಸರದಿಂದ ಮನೆಗೆ ಬಂದಿದ್ದ. ಪ್ರಸ್ತುತದ ಘಟನೆಯಿಂದ ಹಿಮ್ಮುಖ ಪಡೆದಿದ್ದ ಅವನ ಆಲೋಚನೆ ಎದೆಯುದ್ಧದ ಕರುವಿಗೆ ಹಾಲು ಕುಡಿಸುತ್ತಾ ನಿಂತಿದ್ದ ಕಲ್ಯಾಣಿ ಹಸುವಿನ ಕಡೆ ಹರಿದು, ಖುಷಿಯಿಂದ ಗಂಟಲು ಉಬ್ಬಿಬಂತು. `ಇನ್ನೇನು ಇವತ್ತು ನಾಳೆಗೆ ಕರ ಹಾಕಂಗೈತೇ ಹಸ’ ಎಂದುಕೊಂಡ. ಆದರೂ ಇನ್ನೂ ಮೊದಲಿನ ಕರುವಿಗೆ ಹಾಲು ಕುಡಿಸುತ್ತಲೇ ಇರುವುದನ್ನು ಕಂಡು ಅದು ಸದ್ಯಕ್ಕೆ ಕರ ಹಾಕಿಯಾತೋ ಇಲ್ಲವೋ ಎನ್ನುವ ಅನುಮಾನ ಇದ್ದೇ ಇತ್ತು. ಹೆಂಡತಿಯ ಹೊಟ್ಟೆಗೆ ಹಾಗೂ ಹಸುವಿನ ಹೊಟ್ಟೆಗೆ ಒಮ್ಮೆ ದೃಷ್ಟಿ ಹಾಯಿಸಿ ಮುಸಿನಕ್ಕ, ಮೀಸೆಯಲ್ಲೇ.

ತನ್ನ ಹೆಂಡತಿ ಕಲ್ಯಾಣಿಯಂತೆಯೇ ಆ ಹಸುವೂ ಬಜಾರಿ, ಅದಕ್ಕೂ ಕಲ್ಯಾಣಿ ಎಂದೇ ಹೆಸರಿಟ್ಟಿದ್ದ. ಮೇಲಾಗಿ ಇಬ್ಬರ ಬಣ್ಣವೂ ಅಚ್ಚ ಕಪ್ಪಾಗಿದ್ದುದು ಆಕಸ್ಮಿಕವೇನೋ. ಆದರೆ ಇದನ್ನೆಲ್ಲ ಮನದಲ್ಲೇ ಗುಣಿಸಿಕೊಂಡ ಸತ್ಯ ಜೋರಾಗಿ ನಕ್ಕಾಗ, ಕಲ್ಯಾಣಿಗೆ ಯಾಕೋ ಮುಖದ ಮೇಲೆ ಹೊಡೆದಂತಾಗಿ, ಹುಬ್ಬು ಗಂಟಿಕ್ಕಿ ಗಂಡನ ಮುಖವನ್ನೇ ನೋಡಿದಳು. ರಮಿಸುವ ಮನಸ್ಸಾದರೂ ಎದೆಮಟ್ಟ ಬೆಳೆದು ಎದೆಯುಬ್ಬಿ ವಯಸ್ಸಿಗೆ ಬಂದಿರುವ ಮಗಳು ಪಕ್ಕದಲ್ಲಿರುವುದನ್ನು ಗಮನಿಸಿ ಸುಮ್ಮನಾದ. ಮಾತು ಬದಲಿಸುತ್ತಾ “ನಮ್ಮ ಕಲ್ಯಾಣಿ ಹಸಾನ ನೋಡೇ, ಎಂಗ್‌ಎಂಗೌಳೆ, ಒಳ್ಳೆ ಒಳ್ಳೆ ರಸಪೂರಿ….” ಎನ್ನುತ್ತಿದ್ದವನು ಕಲ್ಯಾಣಿ ದುರುಗುಟ್ಟಿ, ನೋಡುತ್ತಿರುವುದನ್ನು ಕಂಡು ಮಾತು ಹಿಂದೆ ಮಾಡಿದ. ‘ರಸಪೂರಿ’ ಎಂದು ಅವನು ಸಂಬೋಧಿಸುತ್ತಿದ್ದುದು ಸಾಮಾನ್ಯವಾಗಿ ಅವನ ಪ್ರೇಯಸಿ ರತ್ನಿಗೆ ಮಾತ್ರ ಎಂದು ಅವಳಿಗೆ ತಿಳಿದಿತ್ತು. ಸಿಕ್ಕಿ ಹಾಕಿಕೊಂಡ ಮುಖ ಭಾವದಿಂದ ಸತ್ಯ ಒಳಗೆ ಹೋಗಲು ನಾಚಿ ಬೀದಿಗಿಳಿದ. ಆದರೆ ದಾರಿ ತೋರಿದ್ದು ಮಾತ್ರ ಅದೇಕೋ ರತ್ನ ಮನೆಗೇ, ಆಗಲೇ ಸಾಯಂಕಾಲ ಆಗುತ್ತಾ ಬರುತ್ತಿತ್ತು. ಎಂಟಾಣೆ ಕೊಟ್ಟು ಚಂದ್ರಿ ಅಂಗಡಿಯಲ್ಲಿ ಎರಡು ವಡೆಗಳನ್ನು ಕಾಗದದಲ್ಲಿ ಕಟ್ಟಿಸಿಕೊಂಡು ಹೊರಟ. ರತ್ನಿಯ ಮಗ, ಸಗಣಿ ಬಗ್ಗಡದಲ್ಲಿ ಬಳಿದಿದ್ದ ಜಗಲಿ ಮೇಲೆ ಕುಳಿತು `ನಾಕೊಂದ್ಲೆ ನಾಕೋ… ನಾಕೆಲ್ಧೇ ಎಂಟೋ…..’ ಎನ್ನುತ್ತಾ ಕಣ್ಣ ಆಕಾಶದಲ್ಲಿ ನೆಟ್ಟು ಮಗ್ಗಿ ಹೇಳಿಕೋತಿತ್ತು. ಸತ್ಯನನ್ನು ನೋಡಿ ಅಷ್ಟಕ್ಕೇ ನಿಲ್ಲಿಸಿ, “ಅವ್ವಾ ಅವ್ವಾ” ಎಂದಿದ್ದಕ್ಕೆ ಪ್ರತ್ಯುತ್ತರವಾಗಿ “ಯಾರ್ಲಾ” ಎನ್ನುವ ಧ್ವನಿ ಒಲೆ ಉರಿಸುತ್ತಿದ್ದ ಊದು ಕೊಳವೆಯ ‘ಸೋರ್ ಸೋರ್‌’ ಸದ್ದಿನೊಂದಿಗೆ ಬಂದಿತು. ‘ಯಾರ್ ಸತ್ತಣ್ಣ ಬಂದೈತೇನ್ಲಾ’ ಎಂದು ರತ್ನ ಒಳಗಿನಿಂದ ಕೇಳುತ್ತಲೇ ಹೊರ ಬಂದಳು.

“ಮುಚ್ಚಂಜೆ ಕತ್ಲಾತು” ಅನ್ನುತ್ತಾ ಹುಡುಗನೂ ಒಳ ಬಂದು ಸೀಮೆಎಣ್ಣೆಯ ಗಾಜಿನ ಬುಡ್ಡಿ ಇಟ್ಟುಕೊಂಡು ಓದುವುದಕ್ಕಿಳಿದ. ಎಣ್ಣೆ ಖಾಲಿಯಾಗಿ ಬತ್ತಿ ಮೇಲೆ ಕಿಡಿ ಕುಳಿತಿದ್ದು ಕಂಡು, “ಕಿಟ್ಟ ಕಟ್ಟೈತೇ ಎಣ್ಣೆ ಆಕೆದೋ” ಎಂದ. ಹಾಕಲು ಬಂದಾಗ ಮಗನ ಹಣೆಯ ಮೇಲೆ ವಿಭೂತಿಯ ಪಟ್ಟೆ ಕಂಡು, ಅವಳಿಗೆ ತನ್ನ ಮಗ ಲಿಂಗಾಯ್ತರ ನಾಗರತ್ನಳ ಸಹವಾಸ ಮಾಡೋದು ನೆನಪಾಗುತ್ತಲೇ, ಸಂತೋಷ ಮುಜುಗರ ಎಲ್ಲಾ ಒಟ್ಟೊಟ್ಟಿಗೇ ಆದರೂ ‘ಹಾಳ್ ನನ್ಮಗ ಆ ಮ್ಯಾಲ್ ಜಾತೇರ ಸಂಗ್ಡ ಸೇರ್ಕಂಡು ಕೆಟ್ಟೋಗೌನೆ’ ಎಂದು ಗೊಣಗಿದಳು. ಆ ಹುಡುಗಿ ಇನ್ನೂ ಎರಡನೇ ಕ್ಲಾಸ್‌ನಲ್ಲೇ ಓದುವವಳಾಗಿದ್ದರೂ, ಅಲ್ಲೇ ಕಾಮದ ಕಮಟು ವಾಸನೆ ಹುಡುಕುವ ಪ್ರಯತ್ನ ಅಸಹ್ಯಕರವಾದರೂ ಸತ್ಯವಾದದ್ದು.

ಸತ್ಯ ನಡುಮನೆಯ ಗೋಡೆಯನ್ನೇ ನೋಡುತ್ತಿದ್ದ. ಹುಲ್ಲಿನ ಹೊದಿಕೆಯ ಕೆಳಗೆ ಕಟ್ಟಿದ್ದ ಜೇಡರ ಬಲೆಗಳೂ ಮಸಿ ಹಿಡಿದು ಕುಂತಿದ್ದವು. ಅಡಿಗೆ ಕೋಣೆಯಿಂದ ನುಗ್ಗಿ ಬರುತ್ತಿದ್ದ ಬೆರಣಿಯ ಹೊಗೆಯಿಂದ ಕಣ್ಣು ಉರಿಯುತ್ತಿದ್ದರೂ, ಶೂನ್ಯದಲ್ಲಿ ದೃಷ್ಟಿನೆಟ್ಟು ಏನನ್ನೋ ಯೋಚಿಸುತ್ತಿದ್ದ. ಆ ಆಲೋಚನೆಗೆ ತನ್ನ ಕೈ ಹಿಡಿದ ಗಂಡ, ತಳವಾರರ ನಿಂಗ, ಸಾರಿದ ವಿಷಯವೇ ಕಾರಣ ಎಂದು ರತ್ನಿಗೆ ಹೇಗೆ ಗೊತ್ತಾಗಬೇಕು ಪಾಪ.

ತಂಗಡಿ ಹೂವ ಹಾಕಿ ಮಾಡಿದ ಕಾಫಿ ತಂದುಕೊಟ್ಟಳು. ಮೇಲೆಲ್ಲಾ ಕಪ್ಪು ಕಪ್ಪು ಪುಡಿ ತೇಲಾಡುತ್ತಿತ್ತು. ಬೆಲ್ಲದ ಕಮಟು ವಾಸನೆಯ ಜೊತೆ ಸಿಕ್ಕಾಪಟ್ಟೆ ಸೀಕಲಾಗಿತ್ತು. ಬಾಯಿ ಎಲ್ಲಾ ಸೀ ಸೀ ಅನಿಸಿತು. ನಾಲಿಗೆಯನ್ನು ವಸಡಿಗೆ ಒರೆಸುತ್ತಾ, ತುಟಿಗೆ ಸವರಿ ಕೊಳ್ಳುತ್ತಾ, ಏನನ್ನೋ ಕೇಳಲು ನಾಲಿಗೆ ರೆಡಿ ಮಾಡುತ್ತಿದ್ದಂತೆಯೇ ನಿಂಗ ಬಂದ. ತಳಮಳಗೊಂಡ ಸತ್ಯ ಮಾತು ನುಂಗಿ ನಿಂಗನನ್ನು ಕಾಫಿ ಕುಡಿಯಲು ಆಮಂತ್ರಿಸಿದ. ನಂತರ ಹೆಗಲ ಮೇಲೆ ಕೈಹಾಕಿ ಹೆಂಡದಂಗಡಿಗೂ ಕರೆದುಕೊಂಡು ಹೋದ.

ತಾನು ರತ್ನಿಯ ಬಳಿ ಕೇಳಬೇಕಾದ್ದಕ್ಕೆ ಲಂಚವಾಗಿ ಒಂದು ಬಾಟಲಿ ಹೆಂಡವನ್ನು ಕೈಲಿ ಹಿಡಿದುಕೊಂಡು ಮನೆಗೆ ವಾಲಾಡಿಕೊಂಡು ಹೋಗುವ ಹೊತ್ತಿಗೆ ಯಾರೋ ನೆಂಟರು ಬಂದಿರಬೇಕೆ? ನಿಂಗನನ್ನು ಬಿಟ್ಟು ಹೋಗಲು ಬಂದವನಂತೆ ನಟಿಸಿ ತನ್ನ ಮನೆಗೆ ಬಂದ. ರಾತ್ರಿಯ ಅರ್ಧ ಹತ್ತಿರಕ್ಕೆ ಬರುವುದರಲ್ಲಿತ್ತು. ಚಂದ್ರ ಸೂರ್ಯನನ್ನು ಹಿಂಬಾಲಿಸಿಕೊಂಡು ಹೋಗಿದ್ದರಿಂದ ಕಗ್ಗತ್ತಲಾಗಿತ್ತು. ಬೆಳಿಗ್ಗೆ ಹೇಗೆ ರತ್ನಿಯ ಹತ್ತಿರ ಸರ್ಕಾರದವರು ತಾಳಿ ಭಾಗ್ಯ ಅಂತ ಕೊಟ್ಟಿರುವ ಬಂಗಾರದ ತಾಳಿಯನ್ನು ಇಸಕೊಳ್ಳುವುದು ಎಂದು ಚಿಂತಿಸುತ್ತಿದ್ದ. ನಿಂಗ ಕುಡಿಯುವುದಕ್ಕೆ ಎಂದೋ ಅದನ್ನೂ ಕಿತ್ತುಕೊಂಡು ಹೋಗುತ್ತಿದ್ದುದನ್ನು ತಪ್ಪಿಸಿದ್ದವನೂ ಅವನೇ. ಆದ್ದರಿಂದಲೇ ಆ ತಾಳಿಯ ಮೇಲೆ ಸತ್ಯಪ್ಪನಿಗೂ ಅಧಿಕಾರ.

ಕದ ತಟ್ಟಿದ್ದಕ್ಕೆ ಬಾಗಿಲು ತೆರೆದ ಕಲ್ಯಾಣಿಯ ಕುತ್ತಿಗೆ ಮೇಲಿನ ತಾಳಿ ಕಣ್ಣಿಗೆ ಬೀಳಬೇಕೇ ಆ ಸೀಮೆಎಣ್ಣೆ ಬುಡ್ಡಿ ಬೆಳಕಲ್ಲೂ! ತನ್ನ ಕಂಕುಳಲ್ಲೇ ಇರುವ ಗಣಿ ಮರೆತಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡ. ಆದರೂ ಕೇಳಲು ಸಂಕೋಚಕ್ಕಿಂತ ಮೇಲಾಗಿ ಹೆದರಿಕೆ. ಆದ್ರೂನುವ ಪಕ್ಕ ಮಲಗಿಕೊಂಡಾಗ ಕೇಳಿದ, “ನಿನ್ನ ಹೆಸರಷ್ಟು ಚೆನ್ನಾಗಿದೆಯೋ, ನೀನೂ ಅಷ್ಟೇ ಚಂದಾಗಿದೀ ಕಣೇ…” ಆದರೆ ಕಲ್ಯಾಣಿ ಮಾತ್ರ ಅವನ ಕುಡಿದ ವಾಸನೆಗೆ ತಡೆಯಲಾರದೆಯೋ ಅಥವಾ ಕುಡಿದು ಹುಚ್ಚುಚ್ಚಾಗಿ ಮಾತನಾಡುವುದು ಅಭ್ಯಾಸವಾಗಿರುವುದರಿಂದ ಅದಕ್ಕೆ ಏನೂ ಬೆಲೆಯಿಲ್ಲವೆಂದು ಪ್ರತಿಭಟಿಸಬೇಕೆಂದೋ ಇವನತ್ತ ಬೆನ್ನು ತಿರುಗಿಸಿ ಮಲಗಿಕೊಂಡಳು. ತನ್ನ ಸರಸ ಅವಳ ಹತ್ತಿರ ನಡೆಯಲ್ಲ ಎಂದು ಅವನಿಗೂ ಗೊತ್ತಿದ್ದರಿಂದ ತೆಪ್ಪಗಾದ.

ರಾತ್ರಿ ಏನೇನೋ ಕನಸುಗಳು. ಕಲ್ಯಾಣಿ ಹಸುವಿನ ಕೊಂಬಿಗೆ ಇನಾಮು ಕಟ್ಟಿ ಬಾಲಕ್ಕೆ ಎರಡು ಸರ ಲಕ್ಷ್ಮೀಪಟಾಕಿ ಹಚ್ಚಿ ಬೆದರಿಸಿ ಕೊರಳಲ್ಲಿನ ಹಗ್ಗ ಅಳಕೊಂಡಿದ್ದೇ ತಡ, ಕಿತ್ತುಕೊಂಡು ಓಡಿಹೋಯ್ತು – ರಾಮಬಾಣದ ತರಹ. ಯಾವ ಗಂಡಸೂ ಹಿಡಿಯುವ ಧೈರ ಮಾಡಲಿಲ್ಲ. ಮಾಡಿದರೂ ಮಂಡಿ ಮುಖ ಕಿತ್ತುಕೊಂಡು ತೆಪ್ಪಗಾದರು.

ಅದೂ ನಿನ್ನೆ ಈವತ್ತು ನೋಡಿದಂತಹ ಹಸುವಾ! ಅದುನ್ನ ಕಳೆದ ಎಂಟು ದೀಪಾವಳಿಯಲ್ಲೂ ಹಿಡಿದ ಗಂಡಸರೇ ಇಲ್ಲವೆನ್ನುವ ದಾಖಲೆ ಮಾಡಿದ ಮೊದಲನೇ ಆಕಳು ಅದು ಎಂದು ಊರವರೂ ಬಿರುದು ಕೊಟ್ಟಿದ್ದರು. ಅದಕ್ಕೇ ಈ ವರ್ಷವೂ ಬಿಡಬೇಕು ಅನ್ನುವ ಖಯಾಲಿ ಅವನಿಗೆ. ಹೋದ ವರ್ಷ ಹೀಗೇ ಆಗಿ ಎರಡು ಬಂಗಾರದ ಬಣ್ಣದ ಬಳೆಗಳು ಎಲ್ಲೋ ಕಳೆದುಹೋಗಿದ್ದವು. ಅದರ ಹಿಂದಿನ ವರುಷ ಯಾವನೋ ಕಾಲಿಗೆ ಮಚ್ಚಲ್ಲೋ ಕುಡುಗೋಲಲ್ಲೋ ಹೊಡೆದು ಹಿಡಿಯಲು ಪ್ರಯತ್ನಿಸಿ ವಿಫಲನಾಗಿದ್ದರೂ, ಅದರ ಗಾಯಕ್ಕೆ ಮಾತ್ರ ಹುಳುವಾಗಿ ಸಾಯೋ ಮಟ್ಟಕ್ಕೆ ಬಂದಿತ್ತು. ನಾಟಿ ಮದ್ದು ತಿನ್ನಿಸಿ ಸ್ವಲ್ಪ ನಿಗಾ ಮಾಡಿದ್ದಕ್ಕೆ ಹೇಗೋ ಬದುಕಿತು. ಈ ಎಲ್ಲ ಹಿನ್ನೆಲೆಯಿರುವುರಿಂದ ಕಲ್ಯಾಣಿ ಯಾರ ಕೈಗೂ ಸಿಕ್ಕಲಿಕ್ಕಿಲ್ಲ ಎಂದು ಗೊತ್ತಿದ್ದರೂ, ಕುದುರೆ ರೇಸಿನ ತರಹ ಅವನನ್ನು ಆಕರ್ಷಿಸಿತು. ಇವನ ಮನಸ್ಸು ತಿಳಿದವಳಂತೆ ಕಾಲ್ಯಾಣಿ “ಈಗ ಆಗ ಅನ್ನೋದ್ರಾಗೆ ಕರ ಹಾಕಂಗದೆ, ಅದುನ್ನ ಅಬ್ಬುರ್ಸಿ ಅಟ್ಟುದ್ರೆ ಅದು ಓಡಾತಾ, ಒಂದ್ವೇಳೆ ಓಡುದ್ರೂ ಕರಗಿರ ಅಡ್ಡಾಗಿ ಹಸಕರ ಎಲ್ಡೂ ಸತ್ತೋದ್ರೆ ಏನ್ ಗತಿ. ಇರಾದ್ ಒಂದು ಹಸ” ಎಂದು ಪ್ರತಿಭಟಿಸಿದಳು.

ಮೂರು ವರ್ಷದ ತನ್ನ ಅಂಗವಿಕಲ ಮಗ ಅಳೋಕ್ಕೆ ಹತ್ತಿದ್ದಕ್ಕೆ ಕನಸು ಮುರಿದು ಎಚ್ಚರಾಯಿತು. ಕಡ್ಡಿಗೀರಿ ಬುಡ್ಡಿ ಹಚ್ಚಿ ಹೆಂಡತಿಗೆ ಎಬ್ಬಿಸಿದ. ಅವಳು ಎದ್ದು ಕುಳಿತು ಮಗುವಿಗೆ ಮೊಲೆ ಉಣಿಸುವುದಕ್ಕೆ ಶುರುಮಾಡುತ್ತಲೇ ಪುನಃ ನಿದ್ದೆಗೆ ಜಾರಿದವಳ ತೆರೆದ ಎದೆಯನ್ನು ಯಾಕೋ ನೋಡುವ ಧೈರ್ಯ ಬಾರದೆ ಪಕ್ಕಕ್ಕೆ ಮಲಗಿದ್ದ ಮಕ್ಕಳತ್ತ ಗಮನ ಹರಿಸಿದ. ‘ಸಾಲುಗೆ ಪಂಚ ಪಾಂಡವರಂಗೆ ಮಲ್ಗವೆ ನನ್ಮಗ್ನವು’ ಎಂದುಕೊಂಡು, ಯಾವುದಾದರ ಕೊರಳಲ್ಲೋ ಸೊಂಟದಲ್ಲೊ, ಬೆಳ್ಳಿಯದೋ ಬಂಗಾರದ್ದೋ ಆದ ಏನಾದರೂ ಇದೆಯೇನೋ ಎಂದು ಹುಡುಕಿದ.

ಬೆಳಕು ಹರಿಯುವುದನ್ನೇ ಕಾಯ್ದುಕೊಂಡಿದ್ದು, ಎದ್ದವನೇ ಮುಖ ಗಿಖ ಏನೂ ತೊಳೆಯದೇ ರತ್ನಿಯ ಮನೆ ಕಡೆಗೆ ಹೊರಟ. ಅವಳು ಬಾಗಿಲಿಗೆ ಸಗಣಿ ನೀರು ಹಾಕಿ ಸಾರಿಸಿ ಆರು ಮೂಲೆ ನಕ್ಷತ್ರದ ರಂಗೋಲಿ ಹಾಕುತ್ತಿದ್ದಳು. “ಎದ್ದೆಯಾ ರತ್ನಿ” ಎಂದ-ಬಗ್ಗಿ ರಂಗೋಲಿ ಬಿಡಿಸುತ್ತಿದ್ದವಳ ಹರಿದ ಸೀರೆಯನ್ನೇ ನೋಡುತ್ತಾ, ಹಿಂದೆ ತಿರುಗಿ “ಹೂಂ ಎದ್ದೆ ಬಾ ಸಣ್ಣ… ನೀನೆದ್ದಾ?” ಎಂದಳು. “ಹೂನವ್ವ, ಇನ್ನೂ ನಿಂಗ ಎದ್ದಿಲ್ಲೇನು ರತ್ನೀ?” ಎನ್ನುತ್ತಾ ಒಳ ಬಗ್ಗಿ ನೋಡಿ, ಪಕ್ಕದಲ್ಲಿದ್ದ ಒಂದು ವರಸೆ ಮಣ್ಣಿನ ಜಗಲಿ ಮೇಲೆ ಕುಳಿತ. “ಒಂದ್ ಮಾತ್ ಕೇಳ್ತೀನಿ, ಬೆಳ್ಕರಿತಿದ್ದಂಗೆ ಕೇಳ್ತಿದೀನಂತ ಬ್ಯಾಸ್ರ ಮಾಡ್ಕಂದಂಗೆ ಕೊಡೊಂಗಿದ್ರೆ ಯೋಳು” ಅಂದ “ಅದೇನ್ ಕೇಳ್ಬಾರ್ದಾ” ಎಂದವಳು, ಅಕ್ಕ ಪಕ್ಕ ನೋಡಿ “ನನ್ನೇ ಕೊಟ್ಟಿವ್ನಿ, ನಂಗಿನ್ನ ದೊಡ್ಡ ಅದಿನ್ನೇನ್ನ ಕೇಳಿಯಾ ನೀನು” ಎಂದಳು. “ಏ … ಏನಿಲ್ಲ ವಸಿ ತಾಳೀನ ಇವತ್ತೊಂದಿನ ಕೊಟ್ಟಿರು. ಸಾಯಂಕಾಲ ನಾನೇ ತಂದೊಟ್ಬುಡ್ತೀನಿ, ನೀಯೇನ್ ಯೋಚ್ನೆ ಮಾಡ್ಬೇಡ’ ಎಂದು ಅವತ್ತು ಇರುವ ಬಸವನ ಪೂಜೆಯ ಪ್ರಯುಕ್ತದ ಬೀಟಿನ ಕುರಿತು, ತನ್ನ ಕಾಲ್ಯಾಣಿ ಹಸುವಿನ ಪೌರುಷ ಕುರಿತು ಹೊಗಳುತ್ತಿದ್ದ. ಅಷ್ಟರಲ್ಲಿ ಒಳಗಿನಿಂದ ಗಂಡ ನಿಂಗ ಕೂಗಿದ೦ತಾಗಿ “ಓ ಬಂದೇ” ಎನ್ನುತ್ತಾ ಎಂದೂ ಇಲ್ಲದವಳು ಇಂದು ಗಂಡನ ಮಾತಿಗೆ ಬೆಲೆ ಕೊಟ್ರೆ ಮಹಾಪತಿವ್ರತೆಯಂತೆ ಒಳಹೋದಳು.

ಸ್ವಲ್ಪ ಹೊತ್ತು ಬಿಟ್ಟು, ಹೊರಗೆ ಬಂದಾಗ ಮಾತಿಗೆ ಮಾತು ಹೇಳುತ್ತಾ, ‘ಅಯ್ಯೋ ನಾಕಾಣುದ್ ತಾಳೀನಾ ಅದು ಸತ್ತಣ್ಣ, ಕೊಡ್ತಿದ್ದೆ ಪ್ರಮಾಣವಾಗ್ಲೂ, ನಿನಗಿಂತ ಹೆಚ್ಚಾ ಅದು, ಹೆಂಗೂ ಸಾಯಂಕಾಲುಕ್ಕೆ ಕೊಡ್ತಿದ್ದೆ, ಇನ್ನೆಲ್ಲೋಗ್ತಿದ್ದೆ, ಅದೂ ಅಲ್ದೆ ಕಲ್ಯಾಣೀ ಹಸೀಗೆ ಕಟ್ಟಿದ ಸವಾಲ್ನ ಬಿಚ್ಚೋ ಅಂತ ಗಂಡುಸ್ರಾದ್ರೂ ಯಾರವ್ರೇ ಈ ಚಿತ್ರುವಳ್ಳೀವಳ್ಗೇ. ಪ್ರಮಾಣವಾಗಿ ಹೇಳ್ತೀನಿ ಸತ್ತಣ್ಣ, ಈ ರಂಗೋಲಿ ಆಣೆಗೂ, ನಮ್ತಾಯಾಣೆಗೂ, ರಾತ್ರಿ ಮಲುಗ್ದಾಗ ಇದ್ದ ತಾಳಿ ಬೆಳಕರಿಯದ್ರಾಗೆ ನಾಪತ್ತೆ ಆಗೋಗದೇಂದ್ರ ಏನೇಳ್ಲಿ, ನೀನಾರೂ ನಂಬಿಯಾ, ನನ್ನ ಗಂಡ ಅವ್ನಲ್ಲ ಚಿತ್ರಪುತ್ರ, ಚಿನಾಲಿ ನನ್ಮಗ ಮಕ್ಕಂಡಿದ್ದಾಗ ಎಗರಸ್ಬುಟ್ಟವ್ನೆ. ಕೇಳುದ್ರೆ ಪ್ರಮಾಣವಾಗ್ಲೂ ಗೊತ್ತಿಲ್ಲ ಅಂತಾನೆ, ನೋಡು ಬೇಕಾದ್ರೆ ಕೊಳ್ನ, ಖಾಲಿ ಬಿದ್ದದೆ ಎನ್ನುತ್ತಾ ಸೆರಗ ಪಕ್ಕಕ್ಕೆ ಎಳೆದು, ಕುತ್ತಿಗೆ ತೆರೆದು ಸವರಿ ತೋರಿಸಿದಳು. ಪೂರಕವಾಗಿ ಕಣ್ಣೀರೂ ಇಟ್ಟಳು. ಆದರೆ ಒಳಗೆ ಹೋದವಳು ಕೋಡೊಲೆಯ ಗೂಡಿನಲ್ಲಿ ತೆಗೆದಿಟ್ಟು ಬಂದದ್ದು ಮಾತ್ರ ಅವನಿಗೆ ತಿಳಿದಿರಲಿಲ್ಲ.

ಕಲ್ಯಾಣಿಯನ್ನು ಎಂದಿನಂತೆ ಮೇಯಲು ಬಿಟ್ಟು ಓಡಿಸಲಿಲ್ಲ. ಅವನ ಆಸೆ ಇನ್ನೂ ಬತ್ತಿರಲಿಲ್ಲ. ಏನಾದರೂ ಆಗಲಿ, ತನ್ನ ಹೆಸರು, ತನ್ನ ಕಲ್ಯಾಣಿಯ ಹೆಸರು ಊರ ಜನರ ಬಾಯಲ್ಲೆಲ್ಲಾ ಕುಣೀಬೇಕು ಅನ್ನುವುದೇ ಅವನ ಧ್ಯೇಯ. ಊರಿನಲ್ಲೆಲ್ಲಾ ದೀಪಾವಳಿ ಹಬ್ಬವೆಂದು ಹೋಳಿಗೆ ಪಾಯಸ ಅಂತ ಏನೇನೋ ಮಾಡಿಕೊಂಡಿದ್ದರೂ ತನ್ನ ಮನೆಯಲ್ಲಿ ಇಲ್ಲದ್ದಕ್ಕೆ ಬೇಸರಪಟ್ಟಿರಲಿಲ್ಲ. ಮುದ್ದೆಯಲ್ಲೇ ಅಮೃತ ಕಂಡವನು.

ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದವನು ಕಲ್ಯಾಣಿಯನ್ನು ಹೇಗೆ ಕೇಳುವುದೆಂದೇ ಯೋಚಿಸುತ್ತಿದ್ದ. ಅವತ್ತು ಕೂಲಿ ಕೆಲಸಕ್ಕೆ ಹೋಗಬೇಕಾದ್ದು ಇಲ್ಲದೇ ಇದ್ದುದರಿಂದ ನಿಧಾನವಾಗಿ ಪ್ರಾತಃವಿಧಿಗಳನ್ನು ಮುಗಿಸುತ್ತಿದ್ದ. ಅಷ್ಟರಲ್ಲಿ ಕಲ್ಯಾಣಿ ಊಟಕ್ಕೆ ಕರೆದಳೆಂದು ಮಕ್ಕಳು ಬಂದು ಹೇಳಿದವು. ಆಕೆಯಾಗೇ ಕರೆದಿರೋ ಸಂದರ್ಭ, ಖುಷಿಯಾಗೇ ಇದ್ದಾಳೆ, ಒಂದು ಮಾತು ಕೇಳಿಯೇ ಬಿಡುವುದೆಂದು ತಣಿಗೆ ಮುಂದೆ ಕುಳಿತ. ಮುದ್ದೆ ಅಗಲಿಗೆ ಬಂತು. “ಬಿಸಿ ಇಟ್ಟು, ಉಣ್ಣಕ್ಕೆ ಮಜವಾಗಿರ್ತದೆ. ಆರೋದ್ರೆ ಅದ್ಯಾಕೋ ಅದೂ ರುಚಿನೇ ಹೊಂಟೋಯ್ತದೆ ಅಲ್ವಾ” ಎಂದು ಹೆಂಡತಿಯನ್ನು ಸರಸಕ್ಕೆ ಎಳೆಯಲು ಪ್ರಯತ್ನಿಸಿದ. ಬಿಸಿ ಸಾರನ್ನು ಹಾಕಲು ತೆಂಗಿನ ಚಿಪ್ಪಿನ ಸೌಟನ್ನು ಮುಂದೆ ತಂದಾಗ ಸ್ಪರ್ಶದ ಮೂಲಕ ತನ್ನ ಪ್ರೀತಿ ಸೂಚಿಸಲು, “ಸಾಕು ಸಾಕು” ಎಂಬ ನೆಪದಿಂದ ಕೈಹಿಡಿಯುವ ಪ್ರಯತ್ನ ಮಾಡಿದಾಗ ಅಭಾಸವಾಗಿ ತುಳುಕಿ ಅವನ ಕಾಲ ಮೇಲೆಲ್ಲಾ ಸುಡುವ ಸಾರು ಬಿದ್ದು ಬೆಂದಂತಾಯಿತು. ಆದರೂ ಅವನ ಉತ್ಸಾಹದ ಮುಂದೆ ಅವೆಲ್ಲಾ ಯಾವ ಲೆಕ್ಕ.

‘ಕಾಲು ಸುಟ್ಟುಕೊಂಡನಲ್ಲ ಪಾಪ’ ಎಂದಿರುವ ಅವಳ ಅನುಕಂಪವನ್ನು ಸದುಪಯೋಗ ಪಡಿಸಿಕೊಳ್ಳಲು ಯತ್ನಿಸಿದ. ಕೇಳಿಯೂ ಬಿಟ್ಟ, ಆಕೆ ಚೆನ್ನಾಗಿ ಛೀಮಾರಿ ಹಾಕಿದಳು. ಅವಳ ಬೈಗುಳ ಕೇಳಲಾರದೇ ನುಂಗಿದ್ದ ತುತ್ತು ಗಂಟಲಲ್ಲೇ ಸಿಕ್ಕಿಕೊಂಡು ಸುಡುತ್ತಿದ್ದರೂ ಮುನಿಸಿ ಕೊಂಡವನಂತೆ ಉಳಿದಿದ್ದ ಮುದ್ದೆಗೇ ಕೈತೊಳೆದು ಹೊರಬಂದ. ಅವನು ಅರ್ಧ ಹೊಟ್ಟೆ ಯಲ್ಲೇ ಎದ್ದು ಹೋದದ್ದರಿಂದ ಕಲ್ಯಾಣಿಗೇಕೊ ಮನಸ್ಸಿಗೆ ಕಸಿವಿಸಿಯಾದಂತಾಯಿತು. ತಾನು ಅವನ ಮೇಲೆ ಹಾಗೆ ರೇಗಿದ್ದು ಅಸಮಂಜಸವೆನಿಸಿತು.

ಹಟ್ಟಿಯಲ್ಲಿ ಕಾಲು ತೀಡುತ್ತಾ ಕುಳಿತವನನ್ನು, ಮಗಳನ್ನು ಕಳಿಸಿ ಕರೆಸಿದಳು. ಒಳಗಿನ ಮಾತು ಆಲಿಸಿದ್ದ ಆತ, “ನಂಗೇನ್ ಬೇಡ, ನೀವೇ ಅವ್ವ ಮಕ್ಳು ಹೊಟ್ಟೆಬಿರ್ಯಾ ನುಂಗ್ರಿ, ದುಡ್ದಾಕೋರು ನೀವು ತಾನೇ, ನಾನು ಬರೀ ಬಿಟ್ಟಿ ಕೂಳು ತಿನ್ನೋನು” ಎಂದೇನೇನೋ ವ್ಯಂಗ್ಯವಾಗಿ, ಸ್ವಪ್ರತಿಷ್ಠೆಯಿಂದ ಒಳಗೆ ಕೇಳಿಸುವಂತೇ ಮಾತನಾಡಿದ.

ಕಲ್ಯಾಣಿಯೇ ಸೋತಳು. ಅವಳೇ ಬಂದು “ಕೊಡ್ತೀನಿ ಬರ್ರೀ” ಎಂದಳು. ಇನ್ನೂ ಒಂದು ಮುದ್ದೆ ಜಾಸ್ತಿ ಇಕ್ಕಿಸಿಕೊಂಡು ಉಂಡು ತನ್ನ ಖುಷಿಯನ್ನು ಸಂತೃಪ್ತಿಯಲ್ಲಿ ಪರ್ಯಾವಸಾನಗೊಳಿಸಿದ.

ಮಧ್ಯಾಹ್ನವಾಗುತ್ತಿದ್ದಂತೆಯೇ ಕಲ್ಯಾಣಿ ಹಸುವಿಗೆ ಮೈ ತೊಳೆದು ಕೋಡಿಗೆ ಬಣ್ಣ ಬಳಿದು ಮೈಗೆಲ್ಲಾ ಚೆಂಡು ಹೂವಿನ ಹಾರ ಕಟ್ಟಿ, ಬಣ್ಣದ ಗುಲ್ಲು ಹಾಕಿ ಸಿಂಗರಿಸಿದ. ಅದು ಮನೆಯವರಿಗೆ ಎಷ್ಟು ಸಾಧುವೋ ಹೊರಗಿನವರನ್ನು ಕಂಡರೆ ಅಷ್ಟೇ ಗಾಬರಿಗೊಳ್ಳುತ್ತಿತ್ತು. ಆ ಗುಣದಿಂದಲೇ ಅದರ ಕೋಡಿಗೆ ಕಟ್ಟಿರುತ್ತಿದ್ದ ಒಡವೆ, ವಸ್ತ್ರ ಏನೇ ಆದರೂ ಯಾರ ಕೈಗೂ ದಕ್ಕದೇ ಸುರಕ್ಷಿತವಾಗಿರುತ್ತಿದ್ದುದು. ಆ ಕೊಂಬುಗಳೋ ಚೂಪಾಗಿ ನೆಟ್ಟಗೆ ನಿಂತಿವೆ. ಅದನ್ನು ನೋಡಿದವರೂ ಹಾಯ್ದು ಗೀಯ್ದಿತೆಂದು ಹೆದರುತ್ತಾರೆ. ಅಂತಹದರಲ್ಲಿ ಹಿಡಿಯೋ ಪ್ರಯತ್ನ ಯಾರು ಮಾಡಬೇಕು. ಆ ಭರವಸೆಯ ಮೇಲೆಯೇ ಕಲ್ಯಾಣಿಯ ಮನಸ್ಸು ಕರಗಿದ್ದು. ವಾಸ್ತವವಾಗಿ ಆಕೆಗೂ ತನ್ನ ಹಸುವಿನ ಹೆಸರು ನಾಲ್ಕು ಜನರ ನಾಲಿಗೆಯನ್ನು ತಣಿಸಲಿ ಎಂಬ ಕಾಳಜಿ ಇಲ್ಲದಿರಲಿಲ್ಲ. ಆದರೆ ಬಂಗಾರದ ವ್ಯಾಮೋಹ ಸ್ವಾರ್ಥವನ್ನೂ ಮೀರಿಸಿದ್ದು ನಿಜ.

ಈ ಬಾರಿಯೂ ಸತ್ಯ ತನ್ನ ಹಸುವನ್ನು ಷರತ್ತಿಗೆ ಬಿಡುತ್ತಿದ್ದಾನೆಂದು ತಿಳಿದು ಮಲ್ಲಪ್ಪನಿಗೆ ರಕ್ತ ಕುದಿಯಲಾರಂಭಿಸಿತು. ಹೋದ ವರ್ಷ ಹೀಗಾಗಿ ತನ್ನ ಮಾವ ಮದುವೆಗೆ ವರದಕ್ಷಿಣೆಯಾಗಿ ಕೊಟ್ಟಿದ್ದ ಉಂಗುರ ಕಳೆದುಕೊಂಡಿದ್ದ. ಅವನ ಕಾಳಿ ಹಸು ಸ್ವಲ್ಪ ಹೊತ್ತಿನಲ್ಲಿ ರಹಮತ್ತುಲ್ಲಾನಿಗೆ ಸಿಕ್ಕಿಬಿಟ್ಟಿತ್ತು. ಆದ್ದರಿಂದ ಈ ಬಾರಿ ತನ್ನ ಕಾಳಿಯನ್ನು ಬಿಡಲು ಹಿಂಜರಿದ. ಆದರೆ ಕಲ್ಯಾಣಿ ಈ ವರ್ಷವೂ ಮೊದಲು ಬರುವುದನ್ನು ಸಹಿಸಲಾಗಲಿಲ್ಲ. ರಹಮತ್ತುಲ್ಲಾನ ಜೊತೆ ಸೇರಿಕೊಂಡು ಕಾರಸ್ಥಾನ ರಚಿಸಿದ. ರಹಮತ್ತುಲ್ಲಾನ ಕ್ರೂರತೆ ಅವನ ದಪ್ಪ ಎತ್ತರಕ್ಕೂ ಸಮನಾಗಿದೆ ಎನಿಸುವಂತಿದ್ದ. ಕಾಡಿನಲ್ಲಿ ಕೊಬ್ಬಿದ ದನಗಳನ್ನು ಕದ್ದು ಕೊಯ್ದು ಮಾಂಸವನ್ನು ಪೇಟೆಗೆ ಸಾಗಿಸುವ ಭೂಗತ ವ್ಯವಹಾರದಲ್ಲಿ ಪ್ರಮುಖ ಪಾತ್ರದವನಾಗಿದ್ದ. ಆದ್ದರಿಂದಲೇ ಮಲೆನಾಡಿನವರಂತೆ ಯಾವಾಗಲೂ ಅಣಿಸಿ ಹರಿತವಾಗಿರುತ್ತಿದ್ದ ಕಂದಲಿಯನ್ನು ಸೊಂಟಕ್ಕೆ ಸಿಕ್ಕಿಸಿರುತ್ತಿದ್ದ.

ಮಲ್ಲಪ್ಪ ಹೋಗಿ ಬಾಯಿಮಾತಲ್ಲಿ ಸತ್ಯನಿಗೆ ಕಲ್ಯಾಣಿಯನ್ನು ಬಿಡಬೇಡವೆಂದರೂ ಆತ ಲೆಕ್ಕಿಸಲಿಲ್ಲ. ಸವಾಲು ಹಾಕಿದರೂ ಅಂಜಲಿಲ್ಲ.

ಕಲ್ಯಾಣಿಗೆ ಒಂದು ಕ್ವಾರ್ಟರ್ ಕುಡಿಸಿ, ಬಸವಣ್ಣನ ದೇವಸ್ಥಾನದ ಮುಂದೆ ತಂದು ನಿಲ್ಲಿಸಿ, ಗಲಾಟೆ ಮಾಡುತ್ತಿದ್ದರೂ ಬಿಗಿಯಾಗಿ ಹಿಡಿದು ಪೂಜೆ ಮಾಡಿಸಿ, ಅದರ ಕೊಂಬಿನಲ್ಲಿ ಬಟ್ಟೆಯಿಂದ ಕಟ್ಟಿರುವ ಗಂಟನ್ನು ತೋರಿಸಿ, “ಗಂಡುಸಾಗಿದ್ದವರು ಹಿಡಿಯಬಹುದು; ಹಿಡಿದವರಿಗೇ ಬಂಗಾರ” ಎಂದು ಸವಾಲೆಸದು, ಪೂಜಾರಿಯಿಂದ ತೀರ್ಥ ಚುಮುಕಿಸಿ, ಬಾಲಕ್ಕೆ ಕಟ್ಟಿದ್ದ ಎರಡು ಮೂರು ಸರ ಲಕ್ಷ್ಮಿ ಪಟಾಕಿಗೆ ಬೆಂಕಿ ಹಚ್ಚಿದ್ದೇ ತಡ ಅಬ್ಬಾ….” ಎಂದು ಸಿಕ್ಕತ್ತ ಓಡಿತು. ಆ ಗಳಿಗೆಯಲ್ಲಿ ಎದುರು ಸಿಕ್ಕವರನ್ನು ತುಳಿದು ಕೊಂಡೇ ಹೋದೀತೆಂದು ಯಾರೂ ಹತ್ತಿರ ಬರುವ ಪ್ರಯತ್ನ ಮಾಡದೆ ಅಕ್ಕಪಕ್ಕೆ ಓಡಿಹೋಗಿ ದಾರಿಮಾಡಿ ಕೊಟ್ಟರು.

ದೇವಸ್ಥಾನದ ಎದುರಿನಿಂದ ಅದು ಮರೆಯಾಗುವವರೆಗೂ ನೋಡಿದ ಎಲ್ಲರೂ ಅದು ಯಾರಿಗೂ ಸಿಗುವುದಿಲ್ಲವೆಂದು ನಿರ್ಧರಿಸಿದರು. ಸತ್ಯನೂ ಹಾಗೇ ಭಾವಿಸಿದ. ತಾಳಿ ಕೊಡುವ ಮುನ್ನ ಕಲ್ಯಾಣಿ ಹಾಕಿದ್ದ ಷರತ್ತಿಗೆ ಯಾವುದೇ ಕುತ್ತಾಗುವುದಿಲ್ಲವೆಂದು ಬಲವಾಗಿ ನಂಬಿದ. ಆ ಸಂತಸದಲ್ಲಿ, ತನ್ನ ಹಸು ತುಂಬು ಗರ್ಭಿಣಿಯಾಗಿದೆ ಎಂಬುದನ್ನು ಮರೆತ. ಅದರ ಹಿಂದೆ ಹಿಡಿಯುವ ಪ್ರಯತ್ನದಲ್ಲಿ ಓಡಿದವರಾರೂ ವ್ಯಕ್ತಿಗಳಾಗಿ ಕಾಣಲಿಲ್ಲ. ಅವರಲ್ಲಿ ರಹಮತ್ತುಲ್ಲಾ ಮಲ್ಲಪ್ಪರೂ ಇದ್ದಾರೆಂದು ಗಮನಿಸುವ ಪ್ರಮೇಯವೇ ಬರಲಿಲ್ಲ.

ಇನ್ನೂ ಒಂದೆರಡು ಹೋರಿ, ಹಸುಗಳನ್ನು ಓಟಕ್ಕೆ ಬಿಡಲಾಯಿತು. ಕೆಲವರು ಅವುಗಳ ಹಿಂದೆಯೂ ಓಡಿದರು. ಆದರೆ ಕಲ್ಯಾಣಿ ಹಸುವಿನ ಹಿಂದೆ ಹೋದವರಲ್ಲಿ ಉಳಿದವರು ಇಬ್ಬರು ಮಾತ್ರ, ಮೂರು ಮೂಲೆಯಲ್ಲೂ ಗುಡ್ಡದಿಂದ ಆವರಿಸಿದ್ದ ಇಕ್ಕಟ್ಟಿನ ಪ್ರದೇಶಕ್ಕೆ ಅದನ್ನು ಅಟ್ಟಿಸಿಕೊಂಡು ಹೋದರು. ಒಳಗೆ ನುಗ್ಗಿದ ಕಲ್ಯಾಣಿ ಓಡಲು ದಾರಿ ಸಿಗದೇ ಹಿಂದ ತಿರುಗುವಷ್ಟರಲ್ಲಿ ಅದರ ಎರಡು ಬದಿಯಲ್ಲೂ ರಹಮತ್ತುಲ್ಲಾ, ಮಲ್ಲಪ್ಪ ನಿಂತಿರುವುದು ಕಂಡು ಎತ್ತಲೂ ಹೋಗಲಾರದೆ ಸುಮ್ಮನೆ ನಿಂತುಕೊಂಡಿತು.

ತಣ್ಣೀರ ಕಲ್ಯಾಣಿ ಇರುವ ಆ ಸ್ಥಳಕ್ಕೆ ಐತಿಹ್ಯವಿತ್ತು. ಪುಣ್ಯಕೋಟಿ ಎಂಬ ಹಸುವಿನ ಸತ್ಯವನ್ನು ಕಂಡು ಹುಲಿಯು ಗುಡ್ಡದಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ಸ್ಥಳ ಅದೇ ಎಂದು ಕೆಲವರು; ಹಸುವೊಂದು ಕಾಡಿನಲ್ಲೇ ಕರು ಹಾಕಿಕೊಂಡು ಮಲಗಿದ್ದಾಗ, ಹುಲಿ ಅದನ್ನು ಹೊತ್ತೂಯ್ಯಲು ಬಂತೆಂದೂ, ಆಗ ಆ ಹಸು ಹುಲಿಯೊಂದಿಗೆ ಭಯಂಕರವಾಗಿ ಹೋರಾಡಿ ಹುಲಿಯನ್ನು ಕೊಂದು, ಗಾಯಗಳಿಂದ ಚೇತರಿಸಿಕೊಳ್ಳಲಾರದೇ ತಾನೂ ಸತ್ತ ನೆನಪಿಗಾಗಿ ಆ ಹಸುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಕಲ್ಯಾಣಿ ತೋಡಿಸಿದರೆಂದೂ ಹೇಳುತ್ತಾರೆ.

ಮಲ್ಲಪ್ಪ ಕಲ್ಯಾಣಿಯನ್ನು `ಹಿಡಿಯೋ’ ಅಂದ. ಆದರೂ ಅದು ಸಿಗೋ ಜಾತೀದಲ್ಲ. ಮನುಷ್ಯನ ಮೇಲೆ ಬೇಕಾದರೂ ಹಾರಿಹೋಗೋ ಅಂತ ಬಜಾರಿ ನನ್ಮಗುಂದು’ ಎಂದು ಇಬ್ಬರಿಗೂ ತಿಳಿದಿತ್ತು. ದಾರಿ ಅಡ್ಡ ಕಟ್ಟಿಕೊಂಡೇ ಹಗ್ಗ ಉರುಲು ಮಾಡಿ ಕೊರಳಿಗೆ ಬೀಸಿದ. ಕೋಡಿಗೇ ಸಿಕ್ಕಿಕೊಂಡು ಅದರ ಬುಡದಲ್ಲಿ ಜೀರು ಗುಣಿಕೆ ಹಾಕಿಕೊಂಡಿತು. ಕೊಂಬಿನ ತುದಿ ಸ್ವಲ್ಪ ಹೊರಬಾಗಿದ್ದರಿಂದ ಬಿಚ್ಚಿಕೊಳ್ಳಲು ಬರುವಂತಿರಲಿಲ್ಲ. ಇವರು ನಿರೀಕ್ಷಿಸಿದಂತೆ ಅದು ಏನೂ ಗಲಾಟೆ ಮಾಡದೇ ಸುಮ್ಮನೆ ನಿಂತದ್ದು ಕಂಡು ಆಶ್ಚರ್ಯವಾಗಬೇಕಾಗಿದ್ದರೂ ಗಮನಿಸಲಿಲ್ಲ. ಅದರ ಹೊಟ್ಟೆ ಓಡಿ ಬಂದ ಬಿರುಸಿಗೆ ಏರಿಳಿಯುತ್ತಿತ್ತು. ಹಸು ಕಾಲು ಸೋತು ನಡುಗುತ್ತ ನೆಲಕ್ಕೆ ಕುಸಿಯಿತು. ಕಳ್ಳ ಎತ್ತು ಬೇಸಾಯಕ್ಕೆ ಹೂಡಿದಾಗ ಮಲಗಿ ಕೊಳ್ಳುವಂತೆ ಇದೂ ಮಲಗಿತು ಎಂದೇ ಭಾವಿಸಿದರು.

ಎಷ್ಟೊತ್ತಾದರೂ ಮನೆಗೆ ಬರಲಿಲ್ಲವೆಂದು ಹಸುವನ್ನು ಹುಡುಕಿಕೊಂಡು ಹೊರಟ ಸತ್ಯ. ಮಬ್ಬುಗತ್ತಲೆ ಸುತ್ತಲೂ ಕವಿಯಲು ಶುರುವಾಗಿತ್ತು. ಮಲ್ಲಪ್ಪ ಅದರ ಕೊಂಬಿಗೆ ಕಟ್ಟಿದ ಬಂಗಾರದ ಒಡವೆಯನ್ನು ಬಿಚ್ಚಲೆಂದು ಅರಿವೆ ಬಿಚ್ಚಿ ನೋಡಿದರೆ ಬರೀ ಒಂದು ಕಲ್ಲು ಅದರಲ್ಲಿದೆ. ತಾವು ಇಷ್ಟೊತ್ತು ಪಟ್ಟ ಕಷ್ಟ ಸಹನೆ ಮೀರಿಸಿತು.

ಹೆದರಿಕೆಯಿಂದ ಮತ್ತು ಓಡಿ ಬಂದಿದ್ದರಿಂದ ಹಸುವಿನ ಹೊಟ್ಟೆಯಲ್ಲಿ ಇದ್ದ ಕರು ಬೇಗ ಹೊರಬರಲು ಪ್ರಯತ್ನಿಸಿ ಪ್ರಸವ ವೇದನೆ ಶುರುವಾಗಿತ್ತು. ಹಸುವಿನ ಒತ್ತಡವನ್ನು ಮೀರಿ ಕರುವಿನ ಕಾಲುಗಳೆರಡೂ ಹಾಗೂ ಅರ್ಧ ತಲೆಯೂ ಹೊರಬಂದಿತ್ತು. “ಇಸ್ ಕಿ ಮಾ ಕಿ ಛೋದ್” ಎನ್ನುತ್ತಾ ಸೊಂಟದಲ್ಲಿದ್ದ ಮಚ್ಚನ್ನು ಎಳೆದುಕೊಂಡು ಕಲ್ಯಾಣಿಯ ಕುತ್ತಿಗೆಯ ಮೇಲೆ ಪ್ರಹಾರ ಮಾಡಿಯೇ ಬಿಟ್ಟ. ಬ್ಯಾ ಎನ್ನಲೂ ಅವಕಾಶವಿರದೇ ರುಂಡ ಮುಂಡ ಬೇರ್ಪಟ್ಟವು. ರಹಮತ್ತುಲ್ಲಾನ ಏಟಿನಿಂದ ಹಸು ನಿರ್ಜಿವವಾದ್ದರಿಂದ, ಸಂಕುಚಿತ ಕ್ರಿಯೆಯಿಂದ ಕರುವಿನ ತಲೆ ಹೊರಬಂದಿದ್ದು, ಹಿಂದಕ್ಕೆ ಹೋಗಲಾರದೇ ಮುಂದಕ್ಕೆ ಬರಲಾರದೇ ಸಿಕ್ಕಿಹಾಕಿಕೊಂಡಿತು. ಇದನ್ಯಾವುದನ್ನೂ ಯಾರೂ ಗಮನಿಸಲಿಲ್ಲ. ಎಗರಿದ ತಲೆ ಮಾತ್ರ ಸ್ವಲ್ಪ ಹೊತ್ತು ಒದ್ದಾಡಿ ಸುಮ್ಮನಾಯಿತು.

ಹಸುವಿನ ಕತ್ತಿನಿಂದ ಚಿಮ್ಮಿದ ರಕ್ತ ಕಂಡು ಹಾಗೂ ಅನಿರೀಕ್ಷಿತವಾದ ಆಘಾತದಿಂದ ಮಲ್ಲಪ್ಪ ಜೋರಾಗಿ ಚೀರಿಕೊಂಡು ಹೆದರಿಕೆಯಿಂದ ನಡುಗುತ್ತ ನಿಂತಿದ್ದ.

ಮಲ್ಲಪ್ಪನ ಆ ಚೀರುವಿಕೆ ಆಕಸ್ಮಿಕವಾಗಿ ಅಥವಾ ಕಾಕತಾಳೀಯವಾಗಿ ಅಲ್ಲೇ ಪಕ್ಕದಲ್ಲಿದ್ದ ಕಾಲುದಾರಿಯಲ್ಲಿ, ಹಸುವನ್ನು ಹುಡುಕುತ್ತಾ ಹಾದು ಹೋಗುತ್ತಿದ್ದ ಸತ್ಯನಿಗೆ ಕೇಳಿಸಿ ಇತ್ತ ಓಡಿಬಂದ. ದೃಶ್ಯ ಕಂಡು ದಂಗಾದ. ಆಗ ಅಲ್ಲಿ ಅವನನ್ನು ಅನಿರೀಕ್ಷಿತವಾಗಿ ಕಂಡು ಇವರೂ ಮೂಕರಾದರು. ಹಸುವಿನ ಕೊಂಬಿಗೆ ಬಂಗಾರದ ಒಡವೆ ಕಟ್ಟಿದ್ದೇನೆಂದು ಮೋಸ ಮಾಡಿದ ಸತ್ಯನನ್ನು ಕಂಡು ಅವನ ಆವೇಶ ಇನ್ನೂ ಜಾಸ್ತಿಯಾಯಿತು. ಅದೇ ಮಚ್ಚಿನಿಂದ ಸತ್ಯನನ್ನೂ ಕೊಚ್ಚಲು ರಣ ಆವೇಶದಿಂದ ರಹಮತ್ತುಲ್ಲಾ ನುಗ್ಗಿ ಬಂದಾಗ ಸತ್ಯನಿಗೆ ಏನು ಮಾಡಲೂ ತೋಚದೇ ಪಕ್ಕಕ್ಕೆ ವಾಲಿದ. ವಾಲುವಿಕೆಯಿಂದ ಮುಗ್ಗರಿಸಿದ. ಕತ್ತರಿಸಿ ಬಿದ್ದಿದ್ದ ಕಲ್ಯಾಣಿಯ ತಲೆಯ ಮೇಲೆಯೇ ಬಿದ್ದ. ನೆಟ್ಟಗೆ ನಿಂತಿದ್ದ ಅದರ ಒಂದು ಕೋಡು ಸತ್ಯನ ಹೊಟ್ಟೆಯೊಳಗೆ ತೂರಿ ಬೆನ್ನಲ್ಲಿ ಮೂತಿ ಕಾಣಿಸಿತು. `ಕಲ್ಯಾಣೀ…’ ಎಂದು ಉದ್ಗರಿಸಿದ. ಆ ಘಳಿಗೆಯಲ್ಲೂ ಆತನಿಗೆ ಹೆಂಡತಿ ಕಲ್ಯಾಣಿಯ ತಾಳಿಯನ್ನು ಹಸುವಿಗೆ ಕಟ್ಟುವಾಗ ಆಕೆ ಹಾಕಿದ್ದ ಷರತ್ತು ನೆನಪಾಗುತ್ತಿತ್ತು. ನನ್ನ ತಾಳೀ ಬೇಕಾದ್ರೆ ಕೊಡ್ತೀನಿ. ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನನ್ನ ಪಾಲಿಗೆ ನೀವು ಸತ್ತಂಗೇ ಅನ್ನೋದು ನೆನ್ಪಿರ್ಲಿ’.

“ನನ್ಮಗ್ನೆ ಯಾರತ್ರನಾದ್ರೂ ಉಸ್ರು ಬಿಟ್ರೆ ನಿನ್ನ ಇಲ್ಲಾ ಅನ್ನುಸ್ ಬುಡ್ತೀನಿ” ಎಂದು ಮಲ್ಲಪ್ಪನಿಗೆ ಹೆದರಿಸಿ ರಹಮತ್ತುಲ್ಲಾ ಮಚ್ಚು ಹಿಡಿದೇ ಪಕ್ಕದ ಗುಡ್ಡವನ್ನು ಏರಿದ.

ಈ ಎಲ್ಲಾ ಪ್ರಮಾದಗಳಿಗೂ ಕಾರಣವಾದ ಕಲ್ಯಾಣಿಯ ಕೊಂಬಿನಲ್ಲಿದ್ದ ಕಲ್ಲು ಗಂಟು ಹೇಗೆ ಬಂತೆಂದು ಯಾರಿಗೂ ತಿಳಿದಿರಲಿಲ್ಲ -ಕಲ್ಯಾಣಿಯನ್ನುಳಿದು. ತನ್ನ ತಾಳಿ ಕಳೆದುಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ.

ಪೂರಕ ಪರಿಣಾಮಗಳು ಕಲ್ಯಾಣಿಗೆ ತಿಳಿಯುವ ಮೊದಲೇ ಬೆಳಕನ್ನು ಕತ್ತಲೆಯು ಸೋಲಿಸಿ, ಕಂಡವರ ಕಣ್ಣು ಮುಚ್ಚಿಸಿ, ಲೋಕದ ತುಂಬಾ ಮಂದವಾಗಿ ಹರಡಿ ರಾತ್ರಿಯಾಗಿತ್ತು….
*****
(ಮಾರ್ಚ್ ೧೯೮೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾದ ವೇದಗಳ ಶಿವೆ
Next post ವಿಪರ್‍ಯಾಸ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…