ವಿಪರ್‍ಯಾಸ
‘ಕನ್ನಡ ನಾಡಿಗೆ ಕನ್ನಡವೇ ಗತಿ’
ಎಂದರು ಆಗದ ಬಿ.ಎಂ.ಶ್ರೀ
ಕನ್ನಡಕ್ಕೆ ಕರ್ನಾಟಕದಲೆ ತಿಥಿ
ಎನ್ನುವನೀಗ ಕಾ.ವೆಂ.ಶ್ರೀ!
ಶತಶತಮಾನದ ಇತಿಹಾಸದಲಿ
ಅರಳುತ ಬಂದಿಹ ತಾಯಿನುಡಿ
ಬೆಳಕನು ಬಿತ್ತಿಹ ಕವಿಋಷಿ ಕಲಿಗಳ
ವಿಶ್ವಕೆ ತಂದಿಹ ನಮ್ಮ ನುಡಿ
ಮರೆಯಾಗುತಿದೆ ನಮ್ಮೆದುರು
ಕಣ್ಮುಚ್ಚಿದ ಈ ಕಣ್ಣೆದುರು!
ಆದರೂ ನಡೆದಿದೆ ಗತವೈಭವ ಕಥೆ
ಎನಿತೋ ವಿಚಾರ ಗೋಷ್ಠಿಯಲಿ
ಬೀದಿಗೆ ಇಳಿಯದ ಮಣ್ಣನು ಮುಟ್ಟದ
ನಿರಭಿಮಾನಿಗಳ ಕೂಟದಲಿ
ವಿಮರ್ಶಾತ್ಮಕ ನೆಲೆಯಲ್ಲಿ
ಬುದ್ಧಿ ಪ್ರದರ್ಶನ ವೇಶದಲಿ!
ಕನ್ನಡ ಧ್ವಜ ಮೇಲೆತ್ತುವ ಕೈಗಳು
ಕಂಡರೂ ಹಲವೆಡೆ ನಾಲ್ಕಾರು
ಕನ್ನಡ ಮರೆಯುತ ಬೀಗುತ ನಡೆಯುವ
ಕಾಲ್ಗಳೆ ಕಂಡಿವೆ ನೂರಾರು
ಕನ್ನಡ ಮಿನುಗುವ ಗಗನದಲಿ
ಅನ್ಯತೆ ಹಬ್ಬಿಹ ಮಬ್ಬಿನಲಿ
*****