ಉಪ್ಪು

ಉಪ್ಪು

ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : “ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?” ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ ಕಪ್ಪಿಗೆ ಬಸಿದುಕೋಳ್ಳುತ್ತಿದ್ದರು. ಮುಗುಡಿ ಯಿಂದ ಧಾರೆಯಾಗಿ ಸುರಿಯುತ್ತಿದ್ದ ಪಾರದರ್ಶಕ ಚಹಾ ಸಂಜೆಯ ಇಳಿ ಬಿಸಿಲಿಗೆ ಅಲ್ಲಲ್ಲಿ ಹೊಳೆಯಿತು. ಅರವತ್ತು ದಾಟಿದ ಬಾನಲಗಿಯವರು ಎರಡೂ ಕೈಗಳಿಂದ ಜಾಡಿಯನ್ನು ಹಿಡಿದುಕೊಂಡಿದ್ದರು. ಮುಂಗೈಯ ನರೆತ ರೋಮಗಳು ಅಂಗಿಕೈಯ ಹೊರಕ್ಕೆ ಇಣಿಕುತ್ತಿದ್ದವು. ಚಿಕ್ಕದೊಂದು ಭಾಷಣಕ್ಕೆ ಪೀಠಿಕೆ ಹಾಕುವಂತೆ ಬಾನಲಗಿಯವರ ತುಟಿಗಳಲ್ಲಿ ಮುಗುಳ್ನಗೆಯಿತ್ತು. “ನಿನ್ನ ಅಭಿಪ್ರಾಯ ಏನು?” ಎಂದರೆ “ನನ್ನ ಅಭಿಪ್ರಾಯ ಹೇಳುತ್ತೇನೆ. ಕೇಳು.” ಎಂಬ ಅರ್ಥ. ಆದರೆ ಅದಕ್ಕೆ ತಕ್ಕ ಸಿದ್ಧತೆಯನ್ನು ಅವರು ಮಾಡಿಕೊಳ್ಳುವವರು. ಕೇಳುವವರ ಮನಸ್ಸನ್ನು ತಕ್ಕ ಧ್ವನಿ. ನಿತ್ಯರಂಗಕ್ಕೆ ಶ್ರುತಿ ಮಾಡುವುದು ಅವರ ಕ್ರಮ.

ಸ್ಟೈಲಿಸ್ಟಿಕ್ಸ್ ಬಗ್ಗೆ ನನಗೇನೂ ಖಚಿತವಾದ ಅಭಿಪ್ರಾಯ ಇರಲಿಲ್ಲ. ಈ ವಿಷಯದ ಅಭ್ಯಾಸ ಸುರುಮಾಡಿ ಕೇವಲ ಏಳೆಂಟು ವಾರಗಳಷ್ಟೆ ಸಂದಿದ್ದವು. ಆಗಲೆ ಅದರ ಕುರಿತು ಅಭಿಪ್ರಾಯವನ್ನು ರೂಪಿಸುವುದಕ್ಕೆ ನಾನು ತಯಾರಿರಲಿಲ್ಲ. ಅಲ್ಲದೆ ಎರಡು ದಿನಗಳಿಂದ ಸುರುವಾದ ಗಂಟಲು ನೋವು ಹೆಚ್ಚು ಮಾತಾಡುವುದಕ್ಕೆ ಬಿಡುತ್ತಿರಲಿಲ್ಲ. ಕಡುವಾದ ಉಪ್ಪು ನೀರಿನಿಂದ ಗಂಟಲನ್ನು ಗುಳುಗುಳಿಸಬೇಕೆಂದು ಡಾಕ್ಟರರು ಹೇಳಿದ್ದರು. ಮದ್ದಿನ ಚೀಟಿಯನ್ನು ಕೊಟ್ಟಿದ್ದರು. ಪೇಟೆಗೆ ಹೋಗಿ ಅದರಲ್ಲಿ ಹೇಳಿದ ಮಾತ್ರೆಗಳನ್ನು ತರಬೇಕಾಗಿತ್ತು. ಗಂಟಲು ನೋವಿನ ಕಾರಣದಿಂದ ಸ್ಟೈಲಿಸ್ಟಿಕ್ಸ್ ಬಗ್ಗೆ ಹೆಚ್ಚೇನೂ ಹೇಳುವುದು ಸಾಧ್ಯವಾಗಲಿಲ್ಲ. ಲೆವಿನ್, ಓಮನ್, ಯಾಕೊಬ್ಸನ್, ಮುಕಾರೋವ್ಸ್ಕಿ ಹೀಗೆ ಐದಾರು ಹೆಸರುಗಳನ್ನು ನಾನು ಉದುರಿಸಬಹುದಾಗಿತ್ತು. ಉದುರಿಸಿದೆ, ರೆಜಿಸ್ಟರ್, ಟಿ.ಜಿ., ಮೆಟ್ರಿಕ್ಸ್ ಮುಂತಾದ ಕೆಲವು ತಾಂತ್ರಿಕ ಪದಗಳನ್ನು ಬಳಸಬಹುದಾಗಿತ್ತು. ಬಳಸಿದೆ. ಆದರಿಂದಾಚಿಗೆ ದಾರಿ ಮಾಡುವುದಕ್ಕೆ ಆಗಲಿಲ್ಲ. ಪ್ರೊಫ಼ೆಸರ್ ಬಾನಲಗಿಯವರು ಮಾಸಿದ ತಮ್ಮ ಕಣ್ಣುಗಳಲ್ಲಿ ತುಂಬನಗೆಯನ್ನು ತುಂಬಿಕೊಂಡು ನಿಧಾನವಾಗಿ ಚಹಾ ಸವಿಯುತ್ತಿದ್ದರು. ಅವರ ಅಕ್ಕಪಕ್ಕ ದಲ್ಲಿ ಕುಳಿತಿದ್ದ, ಸದಾ ಅವರ ಬೆನ್ನು ಹತ್ತಿ ತಿರುಗುತ್ತಿದ್ದ. ಸಭೆ ಸಮಾರಂಭ ಸಿನಿಮಾ ಗಳಲ್ಲಿ ಅವರ ಜತೆ ಇರುತ್ತಿದ್ದ ಲಕ್ಷಣರಾಣೆ ಮತ್ತು ಸೀಮಾ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಸ್ಟೈಲಿಸ್ಟಿಕ್ಸ್ ಬಗ್ಗೆ ಮಾತುಕತೆ ಆರಂಭಿಸಿದರು. ಲಕ್ಷ್ಮಣರಾಣೆಯದು ಸಣಕಲು ದೇಹ. ಕೋಲು ಮೋರೆ. ಎದುರು ಎರಡು ಹಲ್ಲುಗಳು ಮುಂದೆ ಬಂದಿದ್ದವು. ಮಹಾರಾಷ್ಟ್ರದ ಯಾವುದೋ ಊರು. ಇವನು ಸದಾ ಸೀಮಾಳೆ ಹಿಂದೆ ತಿರುಗುವವನು. ಸೀಮಾ ಸುಮಾರು ಮೂವತ್ತರ ಹರೆಯದ, ನೆತ್ತರಿಲ್ಲದೆ ಬಿಳಿಚಿಕೊಂಡು ಮುಖ ಸುಕ್ಕುಗಟ್ಟಲು ತೊಡಗಿದ ಹೆಣ್ಣು. ಇವಳು ಯಾವ ಪ್ರದೇಶದವಳೋ ನನಗೆ ಗೊತ್ತಿರಲಿಲ್ಲ. ಇಬ್ಬರೂ ನನಗಿಂತ ಒಂದು ವರ್ಷ ಮೊದಲೆ ಬಂದು ಇಲ್ಲಿ ಸೇರಿದ್ದರು. ಭಾಷಾ ವಿಜ್ಞಾನದಲ್ಲಿ ಸಂಶೋಧನೆ ನಡೆಸುವುದಕ್ಕೆ. ಸಂಶೋಧನೆಯ ವಿಷಯಗಳು ಇನ್ನೂ ನಿಶ್ಚಯವಾಗಿರಲಿಲ್ಲ. ಪ್ರೊಫ಼ೆಸರ್ ಬಾನಲಗಿಯವರಿಗೆ ಸ್ಟೈಲಿಸ್ಟಿಕ್ಸ್ ಬಗ್ಗೆ ಸ್ವಂತ ಅಭಿಪ್ರಾಯಗಳಿದ್ದುವು. ಇದು ಗೊತ್ತಿದ್ದರಿಂದಲೋ ಏನೋ, ಲಕ್ಷ್ಮಣರಾಣೆ ಮತ್ತು ಸೀಮಾ ಇಬ್ಬರು ಒಂದೇ ಧಾಟಿಯಲ್ಲಿ ಮಾತಾಡಲು ತೊಡಗಿದರು. ಬಾನಲಗಿಯವರ ಗಮನ ಅವರ ಕಡೆ ಸರಿಯಿತು.

ಸ್ಟೈಲಿಸ್ಟಿಕ್ಸ್ ಎಂದಿಗೂ ಸಾಹಿತ್ಯ ವಿಮರ್ಶೆಯ ಸ್ಥಾನವನ್ನು ಕಸಿಯಲಾರದು.”ಎಂದು ಎಡಗಡೆಯಿಂದ ಲಕ್ಷ್ಮಣರಾಣೆ.

“ಸ್ಟೈಲಿಸ್ಟಿಕ್ಸ್ ತನಗೆ ದಕ್ಕಲಾರದ ಕೇಳಿಕೆಗಳನ್ನು ಮುಂದೊತ್ತುತ್ತಿದೆ,” ಎಂದು ಬಲಗಡೆಯಿಂದ ಸೀಮಾ.

“ಉದಾಹರಣೆಗೆ ಷಾನ ಮೇಲೆ ಓಮನ್ ಬರೆದಿದ್ದು.”

“ಉದಾಹರಣೆಗೆ ಪ್ರೋಲಿಗೋಮಿನಾ”

“ಸ್ಟೈಲಿಸ್ಟಿಕ್ಸ್ ಒಂದು ವಿಜ್ಞಾನ ವಿಷಯವಾಗಿ ಇನ್ನೂ ಬೆಳೆದಿಲ್ಲ.”

“ಅದಿನ್ನು ಹುಟ್ಟಿಯೇ ಇಲ್ಲ, ಲಕ್ಷ್ಮಣ್, ಇನ್ನು ಬೆಳೆಯುವ ಪ್ರಶ್ನೆ ಎಲ್ಲಿ?” ಲಕ್ಷ್ಮಣರಾಣೆ ಹೇರಳವಾಗಿ ನಕ್ಕ. ಅವಳ ಎಂತಹ ಕೆಟ್ಟ ಮಾತಿಗೂ ಆತ ನಗುತ್ತಲೇ ಇರುತ್ತಾನೆ. ಅಲ್ಲದೆ, ಮುಂದೆ ಬಂದ ಹುಲ್ಲುಗಳಿಂದಾಗಿ ನಗೆ ಅವನ ಮುಖದಲ್ಲಿ ಖಾಯಂ ಆಗಿ ಹೋಗಿದೆ. ಈಗ ಪ್ರೊಫ಼ೆಸರ್ ಬಾನಲಗಿಯವರು ಚಹಾದ ಕೊನೆಯ ಗುಟುಕು ಮುಗಿಸಿ, ಸ್ಟೈಲಿಸ್ಟಿಕ್ಸ್ ಬಗ್ಗೆ ಒಂದು ಪುಟ್ಟ ಭಾಷಣ ಕೊಡಲು ಸಿದ್ಧರಾದರು. ಒಂದು ಜೀವಮಾನದ ಕಾಲ ಇಂಗ್ಲಿಷ್ ಸಾಹಿತ್ಯವನ್ನು ಕಲಿಸಿದವರು ಅವರು. ನಿಧಾನವಾಗಿ, ಅಸ್ಖಲಿತವಾಗಿ ಮಾತಾಡುತ್ತಾರೆ. ಕೇಳುವವರಿಗೆ ಖುಷಿ, ಆದರೆ ನನ್ನ ಗಂಟಲು ಅತ್ಯಂತ ಕೆಟ್ಟದಾಗಿ ನೋಯುತ್ತಿತ್ತು. ಚಹಾ ಕುಡಿಯುವುದೇ ಕಷ್ಟವಾಗುತ್ತಿತ್ತು. ಕುಡಿದು ಮುಗಿಸಿದ ಮಂದಿ ಎದ್ದು ಹೋಗತೊಡಗಿದರು. ಉಳಿದವರು ದೊಡ್ಡದಾಗಿ ಮಾತಾಡುತ್ತಿದ್ದರು, ರ್ಯಾಕೆಟ್ ಬೀಸುತ್ತ ಚಂಚಲ ಎದ್ದು ಹೋದಳು. ಕಪ್ಪು ಬಣ್ಣದ ದೊಗಲೆ ಪೈಜಾಮ ಅವಳ ಸೊಂಟದಿಂದ ನೇತುಬಿದ್ದಿತ್ತು. ಮೇಲೆ ಕಪ್ಪು ಬೊಟ್ಟುಗಳ ಬಿಳಿ ಅಂಗಿ ಹಾಕಿಕೊಂಡಿದ್ದಳು.

“ಮತ್ತು, ಬರೇ ಶಬ್ದ, ವಾಕ್ಯಗಳಿಗಿಂತ ಹೆಚ್ಚಾದ್ದು ಸಾಹಿತ್ಯದಲ್ಲಿಲ್ಲವೆ? ಧ್ವನಿ, ವಿಷಯ, ಕಾಲ ಮುಂತಾದ್ದು?” ಸ್ಟೈಲಿಸ್ಟಿಕ್ಸ್ ಈ ಪ್ರದೇಶಗಳಲ್ಲಿ ಸುಳಿಯಲಾರದು. ಇನ್ನು ವ್ಯಾಕರಣದ ಸಂಗತಿ. ಪ್ರತಿಯೊಂದು ಸಾಹಿತ್ಯ ರಚನೆಯೂ ತನ್ನ ವ್ಯಾಕರಣವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಾರೆ. ಹಾಗಲ್ಲ, ಪ್ರತಿಯೊಂದು ಸಾಹಿತ್ಯ ರಚನೆಯನ್ನೂ ಅದರ ಭಾಷೆಗೆ ಸಾಮಾನ್ಯವಾದ ವ್ಯಾಕರಣದಲ್ಲಿ ಅರ್ಥವಿಸಬೇಕೆಂದು ಇನ್ನೊಂದು ಅಭಿಪ್ರಾಯ. ಆದರೆ ವ್ಯಾಕರಣಕ್ಕೂ ಹೊರತಾದ್ದು ಸಾಹಿತ್ಯದಲ್ಲಿದೆ. ಉದಾಹರಣೆಗೆ, ಮೌನ…..”, ಬಾನಲಗಿಯವರು ರಸವತ್ತಾಗಿ ಮಾತಾಡುತ್ತಿದ್ದರು. ರಾಣೆ ಮತ್ತು ಸೀಮಾ ಆಸಕ್ತಿ ಯನ್ನು ಪ್ರದರ್ಶಿಸುತ್ತ, ಎಡೆಯಡೆಯಲ್ಲಿ ತಮ್ಮ ಮಾತುಗಳನ್ನು ಸೇರಿಸುತ್ತಿದ್ದರು.

ಕೊನೆಗೆ ಅವರೆಲ್ಲ ಎದ್ದರು. ಅವರೊಂದಿಗೆ ನಾನೂ, ಸಂಜೆ ಅವರು ಸಾಮಾನ್ಯವಾಗಿ ಹೂದೋಟದಲ್ಲಿ ಅಡ್ಡಾಡುತ್ತಾರೆ, ಅಥವಾ ವಾಯುಸಂಚಾರಕ್ಕೆ ಹೋಗುತ್ತಾರೆ. ಅಥವಾ ಸಿನಿಮಾಕ್ಕೆ, ಮೆಸ್ಸಿನಿಂದ ಹೊರಬಂದು ನಾನು ನನ್ನ ಕೋಣೆಯ ಹಾದಿ ಹಿಡಿದೆ. ಪ್ರೊಫ಼ೆಸರ್ ಬಾನಲಗಿಯವರು ತನ್ನ ಶಿಷ್ಯರೊಂದಿಗೆ ಹೂದೋಟದ ಕಡೆ ತಿರುಗಿದರು. ಸಂಜೆ ಒಂದರ್ಧ ಗಂಟೆ ಚೆನ್ನಾಗಿ ಮಳೆ ಸುರಿಯುತು. ಅದರೊಂದಿಗೆ ಥಂಡಿ ಗಾಳಿಯೂ ಬೀಸಿತು. ಏಳು ಗಂಟೆಯ ಸುಮಾರಿಗೆ ಮಳೆ ನಿಂತು ಆಕಾಶ ನಿಚ್ಚಳವಾಯಿತು. ಮಾತ್ರೆಗಳನ್ನು ಕೊಳ್ಳುವುದಕ್ಕಾಗಿ ನಾನು ಪೇಟೆಯ ಕಡೆ ಹೋಗಬೇಕಿತ್ತು. ಕಾಲಿಗೆ ಕ್ಯಾನ್ ವಾಸಿನ ಬೂಟುಗಳನ್ನು ಹಾಕಿಕೊಂಡು (ಮಳೆ ಬಂದ ಕಾರಣ) ಹಾಸ್ಟೆಲಿ ನಿಂದ ಹೊರಗಿಳಿದೆ. ಅಷ್ಟರಲ್ಲಿ ಚಿಂತಾಕುಲರಾದ ಲಕ್ಷ್ಮಣ ರಾಣೆ ಮತ್ತು ಸೀಮಾ ನನ್ನೆದುರು ಪ್ರತ್ಯಕ್ಷರಾದರು ತಡೆದು ನಿಲ್ಲಿಸಿ, ನಾನು ಮುಂದು ತಾನು ಮುಂದು ಎಂದು ಮಾತಾಡಿಸಿದರು.

“ಎಲ್ಲಿಗೆ ಹೋಗುತ್ತಿದ್ದಿಯಾ?” ಎಂದು ಕೇಳಿದ ರಾಣೆ,”

“ನೀನೊಂದು ಕೆಲಸ ಮಾಡಬೇಕು.” ಎಂದಳು ಸೀಮಾ.

“ಪ್ರೊಫ಼ೆಸರ್ ಬಾನಲಗಿಯವರ ಕೈಗೆ, ಬಾತ್ ರೂಮಿನಲ್ಲಿ ಬಿದ್ದು, ಪೆಟ್ಟಾಗಿದೆ.”

“ಮುಂಗೈ ಮೂಳೆ ಮುರಿದಿದೆಯೋ ಗೊತ್ತಿಲ್ಲ.”

“ಅವರನ್ನು ರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.”

“ನಮಗೆ ಪುರುಸೊತ್ತಿಲ್ಲ. ಇಲ್ಲದಿದ್ದರೆ ನಾವೇ ಹೋಗುತ್ತಿದ್ದೆವು.”

ನಮಗೆ ನಾಳೆ ಒಂದು ಪರೀಕ್ಷೆಯಿದೆ. ಏನೂ ತಯಾರಾಗಿಲ್ಲ.”

“ಪ್ಲೀಸ್”, ಎಂದು ರಾಗವಾಗಿ ತನ್ನ ನೀಳ ಕತ್ತನ್ನು ಕೊಂಕಿಸಿದಳು ಸೀಮಾ. ಕೂಡೆ ಮಲಗಲು ಕರೆಯುವ ಸೇಲೆಯಿತ್ತು ಅವಳ ಭಂಗಿಯಲ್ಲಿ.

ಹೀಗೆ ನನ್ನನ್ನು ಒತ್ತಾಯಿಸಿ, ಒಪ್ಪಿಸಿ, ಅವರಿಬ್ಬರು ಹೊರಟು ಹೋದರು. ಅವರು ಒತ್ತಾಯಿಸದಿದ್ದರೂ ನಾನು ಪ್ರೊಫ಼ೆಸರ್ ಬಾನಲಗಿಯವರನ್ನು ಕಾಣಲು ಹೋಗುವವನೆ. ಅವರ ಹೆಂಡತಿ ಮಕ್ಕಳೆಲ್ಲ ಜೈಪುರದಲ್ಲಿದ್ದರು. ಜೀವನದ ಹೆಚ್ಚಿನ ವರ್ಷಗಳನ್ನು ಜೈಪುರ ಯೂನಿವರ್ಸಿಟಿಯ ಇಂಗ್ಲಿಷ್ ವಿಭಾಗದಲ್ಲಿ ಪ್ರೊಫ಼ೆಸರ್ ಬಾನಲಗಿಯವರು ಕಳೆದಿದ್ದರು. ಅಲ್ಲಿ ನಿವೃತ್ತರಾದ ಮೇಲೆ ಎರಡು ವರ್ಷಗಳ ಒಪ್ಪಂದದ ಮೇಲೆ ನಮ್ಮ ಸಂಸ್ಥೆಗೆ ಒಂದು ಸೇರಿದ್ದರು. ಕ್ವಾರ್ಟರ್ಸಿನಲ್ಲಿ ಒಬ್ಬರೆ ವಾಸಮಾಡುತ್ತಿದ್ದರು.

ನಾನು ಹೋದಾಗ, ಡ್ರೆಸ್ ಹಾಕಿಕೊಂಡು, ಆರಾಮ ಕುರ್ಚಿಯಲ್ಲಿ ಕುಳಿತು ಯಾವುದೋ ಪತ್ರಿಕೆ ಓದುತ್ತಿದ್ದರು. ಎಡಗೈಯನ್ನು ಮಡಿಲಲ್ಲಿ ಇಟ್ಟುಕೊಂಡಿದ್ದರು. ಅದೀಗ ಮೂಳೆಗಂಟುಗಳು ಕಾಣದಂತೆ ಬಾತುಕೊಂಡಿತ್ತು. ಬೆರಳುಗಳು ದಪ್ಪವಾಗಿ ನಸುಪಟ್ಟೆಗೆ ತಿರುಗಿದ್ದವು. ನಾನು ಅವರ ಅಪಘಾತದ ಬಗ್ಗೆ ವಿಚಾರಿಸಿದೆ. ಅವರು ಎದುರಿನ ಟೀಪಾಯ್ ಮೇಲಿದ್ದ ಟಿನ್ನಿನಿಂದ ಒಂದು ಸಿಗರೇಟನ್ನು ತೆಗೆದು ಬಾಯಿಯಲ್ಲಿ ಕಚ್ಚಿಕೊಂಡು, ಟಿನ್ನನ್ನು ನನ್ನ ಕಡೆಗೆ ಸರಿಸಿದರು. ಕಡ್ಡಿಗೀರಿ ಅವರ ಸಿಗರೇಟಿಗೆ ಬೆಂಕಿ ಹಚ್ಚಿ, ನಾನೂ ಒಂದನ್ನು ಹಚ್ಚಿಕೊಂಡೆ. ಪ್ರೊಫ಼ೆಸರ್ ಬಾನಲಗಿಯವರ ಬಾಯಿಯಿಂದ ಬ್ರಾಂದಿಯ ವಾಸನೆ ಬಂದಂತೆ ಅನಿಸಿತು. ತಾನು ಬಿದ್ದಾಗಿನ ಅತೀಂದ್ರಿಯ ಅನುಭವವನ್ನು ವಿವರಿಸ ತೊಡಗಿದರು.

“ನನಗೇನನ್ನಿಸಿತು ಗೊತ್ತೆ? ನಾನು ಬಿದ್ದಾಗ ಜಗತ್ತೇ ಬಿದ್ದಂತೆ ಅನ್ನಿಸಿತು. ಅಸ್ತಿತ್ವವಾದಿಗಳು ಹೇಳುತ್ತಾರಲ್ಲ, ಹಾಗೆ. ಸಾರ್ತ್ರೆ ಪ್ರಕಾರ, ನೀನು ಹುಟ್ಟಿದಾಗ ಜಗತ್ತು ಹುಟ್ಟಿಕೊಳ್ಳುತ್ತದೆ. ನೀನು ಸತ್ತಾಗ ಜಗತ್ತು ಸತ್ತುಹೋಗುತ್ತದೆ. ನೀನೇ ನಿನ್ನ ಜಗತ್ತು. ನೀನೇ ನಿನ್ನ ವಿಧಿ. ತಮಾಷೆಯೆಂದರೆ, ಬಾತ್ ರೂಮಿನಲ್ಲಿ ಜಾರಿ ಬೀಳಬೇಕೆಂದು ನಾನು ಬಯಸಿರಲಿಲ್ಲ. ನಾನು ಇಂಥ ವಿಧಿಯನ್ನು ಚುನಾಯಿಸಿರಲಿಲ್ಲ. ಆದರೆ, ಬೇರೊಂದು ಬಾತ್ ರೂಮನ್ನು ಅರಿಸಿಕೊಳ್ಳಬಹುದಿತ್ತಲ್ಲಾ ಎಂದು ಹೇಳಬಹುದು, ಅದು ಅಸಂಬದ್ಧ. ಆಹ್! ಜೀವನವೇ ಒಂದು ದೊಡ್ಡ ಅಸಂಬದ್ಧ!” ಎಂದು ಬಾನಲಗಿಯವರು, ಊದಿಕೊಂಡ ಎಡಗೈಯನ್ನು ಬಲಗೈಯ ಮೇಲೆ ಇಟ್ಟುಕೊಂಡು, ನಗತೊಡಗಿದರು. “ನನಗೆ ಗೊತ್ತು, ಸಾರ್ತ್ರೆಯನ್ನು ಹೀಗೆ ತೆಳು ಮಾಡುವುದು ತಪ್ಪೆಂದು. ತಮಾಷೆಗಾಗಿ ಹೇಳಿದ, ಅಷ್ಟ್. ಆದರೆ, ಅತ್ಯಂತ ಗಂಭೀರವಾದು ಕೂಡ ಅತ್ಯಂತ ತಮಾಷೆಯದ್ದಾಗಿರುತ್ತದೆ ಅಲ್ಲವೆ? ಉದಾಹರಣೆಗೆ, ಲೈಂಗಿಕ ಕ್ರಿಯೆ. ನಾವು ಹೇಳುವ, ಕೇಳುವ, ತಮಾಷೆಗಳಲ್ಲಿ ನೂರಕ್ಕೆ ಐವತ್ತೊಂದು ಪಾಲು ಇದಕ್ಕೆ ಸಂಬಂಧಿಸಿದ್ದಾಗಿರುತ್ತದೆ…..?”

ನಾಲ್ಕು ವಾರಗಳ ಹಿಂದೆ ರಿಪಬ್ಲಿಕ್ ಡೇ ನಿಮಿತ್ತ ಮೆಸ್ಸಿನಲ್ಲಿ ಭರ್ಜರಿ ಊಟ ಇತ್ತು. ಇಂಥ ಊಟ ತೆಗೆದುಕೊಂಡ ಮೇಲೆ ಹಾಸ್ಟಲ್ ನಿವಾಸಿಗಳು ಒಂದೋ ಅಡ್ಡಾಡುತ್ತಾರೆ, ಇಲ್ಲಾ ಕೆಲವು ರೂಮುಗಳಲ್ಲಿ ಸೇರಿಕೊಂಡು ತಮಾಷೆಯಾಗಿ ಕಾಲ ಕಳೆಯುತ್ತಾರೆ. ಶ್ರೀಮತಿ ವಿನೀತಳ ರೂಮಿನಲ್ಲಿ ನಾವು ಏಳೆಂಟು ಮಂದಿ ಸೇರಿದ್ದೆವು. ಚಿಕ್ಕಕೋಣೆ ಅದು. ಹಾಸಿಗೆಯಲ್ಲಿ ಮೇಜಿನ ಮೇಲೆ ಹೆಂಗಸರು ಗಂಡಸರು ಒತ್ತಿ ಕುಳಿತಿದ್ದೆವು. ಶ್ರೀಮತಿ ವಿನೀತಳು ಉಳಿದ ಸ್ಥಳದಲ್ಲಿ ಕಾಫ಼ಿಯ ಸಿದ್ಧತೆ ಮಾಡುತ್ತಿದ್ದಳು. ಕಾಫ಼ಿ ತಯಾರಾಗುವವರೆಗೆ ಎಲ್ಲರೂ ಒಂದೊಂದು ಜೋಕು ಹೇಳಬೇಕಾಗಿತ್ತು. ಎಲ್ಲರೂ ಒಂದೊಂದು ಜೋಕು ಹೇಳತೊಡಗಿದರು. ಸರ್ದಾರ್ಜಿಯ ಕುರಿತಾದ ಲೈಂಗಿಕ ಜೋಕುಗಳು. ಎಲ್ಲರಿಗೂ ಗೊತ್ತಿದ್ದ ಹಳೆಯ ಜೋಕುಗಳು. ಗೊತ್ತಿದ್ದರೂ ಹೊಸದರಂತೆ ಎಲ್ಲರೂ ಗೊಳ್ಳನೆ ನಕ್ಕು ಸ್ವೀಕರಿಸುತ್ತಿದ್ದರು. ಸರದಿ ನನ್ನ ಪಾಲಿಗೆ ಬರುತ್ತದಲ್ಲಾ ಎಂದು ಅಳುಕುತ್ತಲೇ ಇದ್ದೆ. ಕೊನೆಗೂ ಸರದಿ ಬಂದಾದ ಏನು ಹೇಳುವುದೆಂದು ತಿಳಿಯಲಿಲ್ಲ. ಗೊತ್ತಿದ್ದ ಒಂದೇ ಒಂದು ಜೋಕು ಅತ್ಯಂತ ಲೈಂಗಿಕವಾಗಿತ್ತು. ಹೇಳಲೋ ಬೇಡವೋ ಎಂದು ಅನುಮಾನದಿಂದಿರುವಾಗ “ಹೇಳು, ಹೇಳು” ಎಂದು ಎಲ್ಲರೂ ಒತ್ತಾಯಿಸಿತೊಡಗಿದರು. ಹೇಳಿದೆ. ಶ್ರೀಮತಿ ವಿನೀತ ನನ್ನ ಬಗ್ಗೆ ಎಷ್ಟು ಹೇಸಿಕೆಪಡಬಹುದೋ ಎಂದು ಆತಂಕದಲ್ಲಿದ್ದೆ. ನನ್ನ ಜೋಕು ಮುಗಿಯುತ್ತಲೇ ಅವಳು ಖುಷಿಯಿಂದ ಗಾಳಿಯಲ್ಲಿ ಒಂದು ಚುಂಬನವನ್ನು ನನ್ನ ಕಡೆಗೆ ರವಾನಿಸಿದಳು.

“ಒಂದು ವಿಧದಲ್ಲಿ ಇದು ಒಳ್ಳೆಯದೆ.” ಬಾನಲಗಿಯವರು ಹೇಳುತ್ತಿದ್ದರು. “ಎಂಥ ಗಂಭೀರ ಪರಿಸ್ಥಿತಿಗಳನ್ನೂ ಮೋಜಿನಲ್ಲಿ ತೆಗೆದುಕೊಂಡರೆ ಹುಟ್ಟು ಸಾವು ಹಗುರಾಗುತ್ತವೆ. ಉದಾಹರಣೆಗೆ, ಬಕ್ಕತಲೆ, ಬಕ್ಕತಲೆ ಎಲ್ಲರಿಗೂ ತಮಾಷೆಯ ವಿಷಯವಾಗಿದೆ. ಆದರೆ, ಸ್ವತಃಅ ಬಕ್ಕತಲೆಯನ್ನು ಸದಾಕಾಲ ಹೊತ್ತು ತಿರುಗುವ ವ್ಯಕ್ತಿಯ ಭಾವನೆಗಳು ಬೇರೆ ಇರಬಹುದು. ಆತ ತನ್ನ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತು ಏನನ್ನು ನೋಡುತ್ತಿದ್ದಾನೆ? ಏನನ್ನು ಯೋಚಿಸುತ್ತಿದ್ದಾನೆ? ಮಿನುಗುತ್ತಿರುವ ತಮಾಷೆಯನ್ನೋ, ಬೋಳಾದ ದುರಂತವನ್ನೋ?”

ಪ್ರೊಫ಼ೆಸರ್ ಬಾನಲಗಿಯವರ ಮಾತಿನ ತಾತ್ಪರ್ಯ ನನಗೆ ಗೊತ್ತಾಗಲಿಲ್ಲ. ಪ್ರಾಯ ಸಂದಿದ್ದರೂ , ಕೂದಲು ಬೆಳ್ಳಗಾಗಿದ್ದರೂ, ಬಕ್ಕತಲೆಯಿಂದ ಅವರು ಮುಕ್ತರು. ಅದ್ದರಿಂದ ಬಕ್ಕತಲೆಯ ಬಗ್ಗೆ ಹೆದರಿಕಿಯಿಂದ ಅವರು ಮಾತನಾಡಬಹುದು.

“ಎರಡನ್ನು ಅಲ್ಲ. ಎರಡರ ಮಧ್ಯೆ ಇರುವ ಅವಸ್ಥೆ ಯನ್ನು.” ಎಂದರು ಎಂದು ನಕ್ಕರು. ಈಮಧ್ಯೆ ಅವರ ಎಡಗೈ ಮೆಲ್ಲ ಮೆಲ್ಲನೇ ದಪ್ಪವಾಗುತ್ತ ಹೋಗುತ್ತಿತ್ತು. ಆಸ್ಪತ್ರೆಗೆ ಹೋಗಲಿರುವ ಕುರಿತು ಅವರಿಗೆ ನೆನಪು ಮಾಡಿದೆ.

“ಹೌದು, ಎಂಟೂವರೆ ಗಂಟೆಗೆ ಅಲ್ಲಿ ಮುಟ್ಟಬೇಕು. ರಾಣೆ ಬರ್ತೆನೆ ಎಂದಿದ್ದ.” ಎಂದರು.

ರಾಣೆ ಬರುವುದಿಲ್ಲ. ಅವನಿಗೂ ಸೀಮಾಳಿಗೂ ನಾಳೆ ಪರೀಕ್ಷೆ. ನನ್ನನ್ನು ಇಲ್ಲಿಗೆ ಕಳಿಸಿದ್ದೂ ಅವರೇ.”

“ಹಾಗೇನು? ಒಳ್ಳೇದಾಯಿತು.” ಎಂದು ಎದ್ದರು.

ನಾನು ಟಾಕ್ಸಿ ಅಥವಾ ರಿಕ್ಷ ತರಿಸೋಣವೆಂದರೆ ಬೇಡ ಎಂದರು. ಬರೋವಾಗ ರಿಕ್ಷಾದಲ್ಲಿ ಬರೋಣ. ಹೋಗುವಾಗ ನಡದೇ ಹೋದರಾಯಿತು. ಮಾತಾಡುತ್ತ ಹೋಗುವ. ಹೇಗಿದ್ದರೂ ಎಂಟೂವರೆ ಗಂಟೆಗೆ ಡಾಕ್ಟರರ ಭೇಟಿ. ಫೋನು ಮಾಡಿ ನಿಗದಿಪಡಿಸಿದ್ದಾಗಿದೆ–ಎಂದರು. ನಡೆದೇ ಹೊರಟೆವು. ಹೊರಗೆ ಚಳಿಗಾಳಿ ಬೀಸುತ್ತಿತ್ತು. ಪ್ರೊಫ಼ೆಸರ್ ಬಾನಲಗಿಯವರು ಉಣ್ಣೆಯ ಶಾಲು ಹೊದ್ದುಕೊಂಡಿದ್ದರು. ನಾನಾದರೆ ಬನಿಯನಿನ ಮೇಲೆ ಹತ್ತಿ ಬಟ್ಟೆಯ ಒಂದು ಅಂಗಿ ಮಾತ್ರ ಹಾಕಿಕೊಂಡಿದ್ದೆ. ಗಂಟಲು ನೋವಿನಿಂದಾಗಿ ಜ್ವರ ಬರುವಂತೆ ತೋರಿತು. ಒಂದೆರಡು ಬಾರಿ ಕೆಮ್ಮಿ ಉಗುಳಿರಬೇಕು. ಬಾನಲಗಿಯವರು ಇದನ್ನು ಗಮನಿಸಿ, ತನ್ನ ಶಾಲನ್ನು ನನಗೆ ಕೊಡುವುದಕ್ಕೆ ಮುಂದೆ ಬಂದರು. ನಾನವರನ್ನು ತಡೆದೆ. ಎರಡು ಮಾತ್ರೆಗಳನ್ನು ನುಂಗಿದರೆ ಎಲ್ಲ ಸರಿಯಾಗುತ್ತದೆ ನನಗೆ ಎಂದೆ. ಮದ್ದಿನ ಚೀಟಿ ಜೇಬಿನಲ್ಲಿತ್ತು. ನಾವು ನಡೆಯುತ್ತಿದ್ದ ಮಾರ್ಗ ಮಳೆ ನೀರಿಗೆ ರಾಡಿಯಾಗಿತ್ತು. ಅಲ್ಲಲ್ಲಿ ಕೆಸರು ನೀರಿನ ಹೊಂಡಗಳನ್ನು ಬಳಸಿಕೊಂಡು ನಾವು ನಡೆಯುತ್ತಿದ್ದೆವು. ಹಾಗೆ ನಡೆಯುತ್ತಿರುವಾಗ ಕೆಲವೊಮ್ಮೆ ನಾವು ಬೇರ್ಪಟ್ಟು ಆ ಮೇಲೆ ಫ಼ಕ್ಕನೆ ಎದುರಾಗುತ್ತಿದ್ದೆವು. ಉದ್ದಕ್ಕೂ ಬಾನಲಗಿ ಯವರ ಭಾಷಣ ಸಾಗುತ್ತಲೇ ಇತ್ತು.

ಅವರು ಮತ್ತೆ ಸ್ಟೈಲಿಸ್ಟಿಕ್ಸ್ ಬಗ್ಗೆ ಮಾತೆತ್ತಿದರು. ಶಾನ ಮೇಲೆ ಓಮನ್ ಬರೆದ ಪ್ರಬಂದದಲ್ಲಿನ ಕುಂದು ಕೊರತೆಗಳನ್ನು ವಿವರಿಸಿದರು. ನಾನು ರಾಣೆ ಮತ್ತು ಸೀಮಾ ತಪ್ಪಿಸಿಕೊಂಡ ಬಗ್ಗೆ ಆಲೋಚಿಸುತ್ತಿದೆ. ಮಹಾರಾಷ್ಟ್ರದ ಯಾವುದೋ ಒಂದು ಹಳ್ಳಿಯಲ್ಲಿ ರಾಣೆಗೆ ಒಬ್ಬಳು ಹೆಂಡತಿಯಿದ್ದಾಳೆ; ಅಥವಾ ಇದ್ದಳು. ಆದರೆ ಈತ ಮಾತ್ರ ತಲೆಗೊದಲು ಮತ್ತು ಗಡ್ಡ ಬೆಳಿಸಿ ಹಿಪ್ಪಿಯಂತೆ ಕಾಣಲು ಪ್ರಯತ್ನಿಸುತ್ತಿದ್ದಾನೆ. ಸೀಮಾ ತನ್ನ ಗಂಡನಿಂದ ವಿಛ್ಛೇದನ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬಂದಿದ್ದಾಳೆ. ಇವಳು ತೆಳ್ಳಗೆ, ಬೆಳ್ಳಗೆ, ಗಾಳಿಗೆ ಬಳುಕುತ್ತಾಳೇ. ಕಣ್ಣುಗಳು ಆಳಕ್ಕೆ ಹೋಗುತ್ತಲೇ ಇದ್ದು ಮುಖಕ್ಕೆ ಮೂಗೇ ಪ್ರಧಾನವಾಗಿ ಎದ್ದು ನಿಂತಿದೆ. ಅಲ್ಲದೆ ಕಣ್ಣುಗಳ ಸುತ್ತ ಚರ್ಮ ಕಮರಿದಂತೆ ಕಾಣುತ್ತದೆ. ಸಂಶೋಧನೆ? ಅಸಹಜ ಪ್ರವೃತ್ತಿ? ಲೈಂಗಿಕ ಅತೃಪ್ತಿ? ಇವರನ್ನೆಲ್ಲ ಹತ್ತಿರ ತಂದ ಭಾಷಾ ವಿಜ್ಞಾನ ಅದ್ಭುತವಾದ್ದು ಎಂದುಕೊಂಡೆ.

“ಭಾಷಾ ವಿಜ್ಞಾನದಿಂದ ಉಪಯೋಗವಿಲ್ಲವೆಂದು ನಾನು ಹೇಳುತ್ತಿಲ್ಲ.”ಪ್ರೊಫ಼ೆಸರ್ ಬಾನಲಗಿಯವರು ಮುಂದರಿದು ಹೇಳತೊಡಗಿದರು: “ಇತ್ತೀಚಿನ ದಿನಗಳಲ್ಲಿ ಅದು ಆಶ್ಚರ್ಯಕರವಾದ ವೇಗದಲ್ಲಿ ಬೆಳೆಯುತ್ತಾ ಇದೆ. ಮತ್ತು ಯಾವುದೇ ವಿಜ್ಞಾನ ಬೆಳೆಯುತ್ತಾ ಹೋದಂತೆ ಕವಲೊಡೆಯುತ್ತಲೇ ಇರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಒಂದು ಕಾರಣ ಬಡ್ತಿ.”

“ಬಡ್ತಿ? ” ಹೊರಳಿದ ಈಚೆ ಬದಿಯಿಂದ ನಾನು ಕೇಳಿದೆ.

ಆಚೆ ಬದಿಯಿಂದ ಬಾನಲಗಿಯವರು ಉತ್ತರಿಸಿದರು:

“ನಿಜ. ಆಯಾ ವಿಭಾಗಗಳಲ್ಲಿ ಬಡ್ತಿಯಿಲ್ಲದೆ ಕೊಳೆಯುವ ಶಾಸ್ತ್ರಜ್ಞರು ಹೊಸ ದಾರಿಗಳನ್ನು ತೆರೆಯಲು ಹೆಣಗುತ್ತಾರೆ. ಉದಾಹರಣೆಗೆ, ಜೀವರಸಾಯನ ಶಾಸ್ತ್ರ.”

“ಜೀವರಸಾಯನ ಶಾಸ್ತ್ರ?”

“ಹೌದು. ಜೀವರಸಾಯನ ಶಾಸ್ತ್ರ. ಸ್ಟೈಲಿಸ್ಟಿಕ್ ಕೂಡ ಇದೇ ಥರ”

ಬಾನಲಗಿಯವರ ಅಭಿಪ್ರಾಯದಲ್ಲಿ ಇದು ತಪ್ಪಲ್ಲ. ಯಾಕೆ ತಪ್ಪಲ್ಲ ಎಂಬುದನ್ನು ಅವರು ವಿವರಿಸತೊಡಗಿದರು. ವಿಭಾಗೀಕರಣ ನಡೆದಂತೆ ಪ್ರತ್ಯೇಕೀಕರಣ ನಡೆಯುತ್ತ ಹೋಗುತ್ತದೆ. ಹಾಗೆ ಪ್ರತ್ಯೇಕಿಸಲ್ಪಟ್ಟ ಯಾವುದೇ ಒಂದು ಶಾಖೆಗೆ ಒಟ್ಟು ಪದ್ಧತಿ ಯಲ್ಲಿ ಅರ್ಥ ಬರಬೇಕಾದರೆ ಪದ್ಧತಿಯ ಇತರ ಶಾಖೆಗಳೊಂದಿಗೆ ಅದಕ್ಕೆ ಸಂಪರ್ಕ ಬೇಕು. ಆಗ ಮತ್ತೆ ಏಕೀಕರಣ ನಡೆಯುತ್ತದೆ. ವಿಜ್ಞಾನ ಬೆಳೆಯುವುದೇ ಹಾಗೆ.

ರಾಣೆ ಮತ್ತು ಸೀಮಾ ಈ ಪದ್ಧತಿಯ ಯಾವ ಯಾವ ಶಾಖೆಗಳಲ್ಲಿ ಕುಳಿತಿದ್ದಾರೆ? ಅವರೂ ಕೂಡ ಪ್ರತ್ಯೇಕೀಕರಣದಿಂದ ಏಕೀಕರಣ ಸಾಧಿಸುತ್ತಿದ್ದಾರೆಯೆ? ಅಲ್ಲದೆ, ನನ್ನ ಶಾಖೆ ಯಾವುದು? ದೊಗಲೆ ಪೈಜಾಮದ ಒಳಗಿನ ಪದ್ಧತಿಯಲ್ಲಿ ಇದಕ್ಕೆಲ್ಲ ಯಾವ ಅರ್ಥ? ಇಂಥ ಪ್ರಶ್ನೆಗಳು ನನ್ನಲ್ಲಿದ್ದವು. ಆದರೆ ಮಾತಾಡುವ ಸ್ಥಿತಿಯಲ್ಲಿ ನನ್ನ ಗಂಟಲು ಮಾತ್ರ ಇರಲಿಲ್ಲ. ಗಂಟು ಗಂಟಾಗಿ ನೋವು ತಲೆಗೇರುತ್ತಿತ್ತು. ಶ್ರೀಮತಿ ವಿನೀತಳು ನಿತ್ಯವೂ ಸಂಜೆ ಲೈಬ್ರರಿಯಲ್ಲಿ ಕುಳಿತಿರುತ್ತಾಳೆ. ದೊಡ್ಡ ದೊಡ್ಡ ಗ್ರಂಥಗಳನ್ನು ತನ್ನ ಬೃಹತ್ತಾದ ಮೊಲೆಗಳಿಗೆ ಒತ್ತಿಕೊಂಡು ಹಾಸ್ಟಲಿಗೆ ತರುತ್ತಾಳೆ. ಇಳಿರಾತ್ರಿಯ ತನಕ ತನ್ನ ಕೋಣೆಯಲ್ಲಿ ಸ್ನೇಹಿತರನ್ನು ಸತ್ಕರಿಸುತ್ತಾಳೆ.

ಎಂಟೂ ಇಪ್ಪತ್ತೈದಕ್ಕೆ ರೆಡ್ಡಿ ಆಸ್ಪತ್ರೆಗೆ ಮುಟ್ಟಿದವು. ಡಾಕ್ಟರರ ಭೇಟಿಗೆ ನಿಗದಿಯಾದ ಸಮಯ ಎಂಟೂವರೆ. ಹೊರ ರೋಗಿಗಳಿಗಾಗಿ ಹಾಕಿದ್ದ ಬೆಂಚೊಂದರಲ್ಲಿ ಕುಳಿತವು. ಅಲ್ಲಿ ಹಲವು ರೋಗಿಗಳು-ಹೆಂಗಸರು, ಮಕ್ಕಳು, ಗಂಡಸರು, ವಯಸ್ಸಾದವರು, ಆಗದವರು – ಹೀಗೆ ಕುಳಿತು ಕಾಯುತ್ತಿದ್ದರು. ಒಳಗಡೆ ಒಳರೋಗಿಗಳು ವಾರ್ಡಿನಿಂದ ಹಲವು ರೀತಿಯ ಶಬ್ದಗಳು ಕೇಳಿಬರುತ್ತಿದ್ದವು. ಮದ್ದಿನ ಗಮ್ಮಿನಿಂದ ವಾತಾವರಣ ಮಂದವಾಗಿತ್ತು. ಒಬ್ಬಳು ನರ್ಸ್ ಆಚೀಚೆ ಓಡಾಡುತ್ತಿರುವುದು ಕಂಡು ಬಂತು. ಅವಳನ್ನು ಕರೆದು, ಪ್ರೊಫ಼ೆಸರ್ ಬಾನಲಗಿಯವರ ವಿಷಯ ಹೇಳಿದೆ. ಅವಳು ಒಂದು ಚೀಟಿಯಲ್ಲಿ ಏನನ್ನೂ ಗುರುತು ಮಾಡಿಕೊಂಡು ಒಳಗೆ ಹೋದಳು.

“ಟೆನ್ಶನ್! ” ಎಂದರು ಪ್ರೊಫ಼ೆಸರ್ ಬಾನಲಗಿ.

ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದೆ.

“ಈ ಜನರ ಮುಖದಲ್ಲಿರುವ ಟೆನ್ಶನ್ ನೋಡಿದೆಯೆ? ತಮಗೆ ಏನಾಗಿದೆ, ಏನಾಗಲಿದೆ ಎಂಬುದು ಈ ಜನಕ್ಕೆ ಗೊತ್ತಿಲ್ಲ. ಆದ್ಧರಿಂದಲೇ ಈ ಟೆನ್ಶನ್, ಎಲ್ಲಿ ಸಂಪರ್ಕವನ್ನು ಸಂಪೂರ್ಣವಾಗಿ ಸಾಧಿಸಲಾರೆವೋ, ಮತ್ತು ಎಲ್ಲಿ ಸಂಪರ್ಕಕ್ಕಾಗಿ ಒತ್ತಡವಿದೆಯೋ, ಅಲ್ಲಿ ಟೆನ್ಶನ್ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ, ಕಾರ್ಬನಿನ ಆರ್ಕ್ ಮೂಲಕ ವಿದ್ಯುತ್ತನ್ನು ಹಾಯಿಸುವುದು.”

ನನಗೆ ಈ ಉದಾಹರಣೆ ಸ್ವಲ್ಪವೂ ಅರ್ಥವಾಗದ್ದರಿಂದ ಸುಮ್ಮನಿದ್ದೆ. ಅಷ್ಟರಲ್ಲಿ ನರ್ಸ್ ಬಂದು ಪ್ರೊಫ಼ೆಸರರನ್ನು ಒಳಕ್ಕೆ ಕರೆದಳು. “ಬರುತ್ತೇನೆ” ಎಂದು ನನಗೆ ಹೇಳಿ, ತನ್ನ ಊದಿದ ಎಡಗೈಯನ್ನು ಗಾಯವಾದ ಹುಂಜವನ್ನು ಎತ್ತಿಕೊಳ್ಳುವಂತೆ ಎತ್ತಿಕೊಂಡು ಪ್ರೊಫ಼ೆಸರ್ ಬಾನಲಗಿಯವರು ನರ್ಸನ್ನು ಹಿಂಬಾಲಿಸಿದರು.

ಈ ವೇಳೆಯಲ್ಲಿ ನನ್ನ ಮಾತ್ರೆಗಳನ್ನು ಕೊಳ್ಳುವುದಕ್ಕಾಗಿ ಹತ್ತಿರದ ಮದ್ದಿನಂಗಡಿಗೆ ಹೋದೆ. ಅಲ್ಲಿ ಸಿಗಲಿಲ್ಲ. ಇನ್ನೊಂದು ಅಂಗಡಿಯಲ್ಲೂ ಸಿಗಲಿಲ್ಲ. ಮದ್ದನ್ನು ಕಂಡು ಹುಡುಕುವುದಕ್ಕೆ ಸ್ವಲ್ಪ ಸಮಯವೇ ಹಿಡಿಯಿತು. ಪ್ರೊಫ಼ೆಸರ್ ಬಾನಲಗಿಯವರು ನನಗಾಗಿ ಹುಡುಕಾಡಬಹುದೇನೊ ಎಂದು ಆತಂಕವಾಯಿತು. ಅಂತೂ ಮಾತ್ರೆಗಳನ್ನು ಕೊಂಡು ರೆಡ್ಡಿಯ ಆಸ್ಪತ್ರೆಗೆ ಮರಳಿದಾಗೆ ಪ್ರೊಫ಼ೆಸರರು ಕಾಣಿಸಲಿಲ್ಲ. ನರ್ಸನ್ನು ಕರೆದು ವಿಚಾರಿಸಿದಾಗ ಅವರ ಕೈಗೆ ಬ್ಯಾಂಡೇಜು ಕಟ್ಟುತ್ತಿದ್ದಾರೆ ಎಂದು ತಿಳಿಸಿದಳು. ಸೀರಿಯಸ್ಸೇ ಎಂದು ಕೇಳಿದೆ. “ಇಲ್ಲ ಪೆಟ್ಟಾದ್ದರಿಂದ ನೋವಿರಬಹುದು ಕೆಲವು ದಿನ ನಾಳೆ, ನಾಡಿದ್ದು ಅವರು ಬರಬೇಕಾಗುತ್ತದೆ.” ಎಂದಳು. ನರ್ಸುಗಳಿಗೆ ಬಿಳಿ ಬಟ್ಟೆ ಚೆನ್ನಾಗಿ ಒಪ್ಪುತ್ತದೆ ಎಂದುಕೊಂಡೆ.

ಎಲ್ಲಾ ಮುಗಿದು ಹೊರಬಂದಾಗ ಸ್ವಲ್ಪ ತಡವೇ ಆಯಿತು. ಒಂದು ಆಟೋರಿಕ್ಷಾ ನಮಗಾಗಿ ಎಂಬಂತೆ ಬಂತು ರಿಕ್ಷಾದವನಲ್ಲಿ ಚೌಕಾಶಿ ಮಾಡಬೇಕು. ರಾತ್ರಿಯಲ್ಲಿ ಮೀಟರಿನ ಗುಮಾನವಿಲ್ಲ ಅವನಿಗೆ. ಇಂಥ ವಿಷಯಗಳಲ್ಲಿ ನನಗೆ ವಿಶೇಷ ತೊಂದರೆ ಯಾಗುತ್ತಿತ್ತು. ಈ ಊರಿನವರಿಗೆ ಗೊತ್ತಿದ್ದ ತೆಲುಗು, ಹಿಂದಿ, ಉರ್ದು ಯಾವುದೂ ನನಗೆ ಬರುತ್ತಿರಲಿಲ್ಲ. ನನ್ನ ಭಾಷೆ ಇವರಿಗೆ ತಿಳಿಯದು. ಪ್ರೊಫ಼ೆಸರ್ ಬಾನಲಗಿಯವರಿಗೆ ನನ್ನ ಅವಸ್ಥೆ ಚೆನ್ನಾಗಿ ಗೊತ್ತಿತ್ತು. ಅವರು ರಿಕ್ಷಾದವನೊಂದಿಗೆ ಹಿಂದಿಯಲ್ಲಿ ಚೌಕಾಶಿ ಪ್ರಾರಂಭಿಸಿದರು. ಮಾತುಕತೆಯ ದಿಕ್ಕು ಗತ್ತಿಯನ್ನು ನಾನು ಊಹಿಸಿದೆ. ರಿಕ್ಷಾದವನು ಈ ವೃದ್ಧನ ಹೆಗಲಿನಿಂದ ಬಟ್ಟೆಯ ಪಟ್ಟೆಯಲ್ಲಿ ನೇತು ಬಿದ್ದಿರುವ ಬ್ಯಾಂಡೇಜು ಕೈಯನ್ನು ಕಂಡಿದ್ದಾನೆ; ಒಟ್ಟಿಗಿರುವ ಯುವಕನಿಗೆ ಮಾತು ಬರುವುದಿಲ್ಲ; ಹತ್ತಿರದಲ್ಲೆಲ್ಲೂ ಬೇರೆ ರಿಕ್ಷಾಗಳ ಸುಳಿವಿಲ್ಲ. ಅಲ್ಲದೆ, ರಾತ್ರಿ ಇಂಥ ಸ್ಥಿತಿಯಲ್ಲಿ ರಿಕ್ಷಾದವನು ಮೂರೆಂತಲೂ ಪ್ರೊಫ಼ೆಸರರು ಒಂದೆಂತಲೂ ಜಗ್ಗುತ್ತಿದ್ದರು. ಇವರ ಸಹಾಯಕ್ಕೆ ಬರಲಾರದೆ ನಾನು ಒಂಟೆಯಾದೆ. ಕೊನೆಗೆ ಎರಡು ರೂಪಾಯಿಗೆ ರಿಕ್ಷಾ ಗೊತ್ತಾಯಿತು. ಹತ್ತಿ ಕೂತೆವು. “ಟೆನ್ಶನ್!” ಎಂದು ನಕ್ಕರು ಪ್ರೊಫ಼ೆಸರ್ ಬಾನಲಗಿ, ರಿಕ್ಷಾ ನೀರಿನ ಹೊಂಡಗಳನ್ನು ತಪ್ಪಿಸಿಕೊಂಡು ಓಡತೊಡಗಿತು. ಒಳಗೆ ಕುಳಿತ ನಾವು ಆಚೀಚೆಗೆ ತೊನೆಯುತ್ತಿದ್ದೆವು. ಆಪ್ಪಿ ತಪ್ಪಿ ಹೊಂಡಕ್ಕೆ ಇಳಿದಿದ್ದಾಗ ಕುಳಿತಲ್ಲೆ ನೆಗೆದು ಬೀಳುತ್ತಿದ್ದವು. ಪ್ರೊಫ಼ೆಸರ್ ಬಾನಲಗಿಯವರು, ಚಿಕ್ಕಂದಿನಲ್ಲಿ ತನಗೆ ಸಂಭವಿಸಿದ ಅಪೂರ್ವ ಅನುಭವವೊಂದನ್ನು ವಿವರಿಸುತ್ತಿದ್ದರು. ಪೇರಳೆ ಹಣ್ಣು ಕೊಯ್ಯಲು ಒಬ್ಬನೇ ಹೋಗಿ ಪೇರಳೆ ಮರದ ಕೊಂಬೆಗಳೆಡೆಯಲ್ಲಿ ಕೈ ಸಿಕ್ಕಿಕೊಂಡದ್ದು; ಕೆಳಗೆ ನೀರು ತುಂಬಿ ಕಪ್ಪು ಕಪ್ಪಾದ ಕೊಳ……

ಪ್ರೊಫ಼ೆಸರರ ಕ್ವಾರ್ಟರ್ಸ್ ಮುಟ್ಟಿದಾಗ ಒಂಬತ್ತೂವರೆ ಗಂಟೆ. ಅವರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಟ್ಟು “ಇನ್ನು ನಾಳೆ ಬರ್ತೇನೆ.” ಎಂದೆ. ಅವರ ಕಣ್ಣುಗಳು ಕೃತಜ್ಞತೆ ಸೂಚಿಸಿದವು.

“ಈ ಸಲ್ದ ಸ್ಟೈಲ್ ಪತ್ರಿಕೆ ಓದಿದೆಯಾ?” ಎಂದು ಕೇಳಿದರು.

“ಇಲ್ಲವಲ್ಲ.”

“ಅದರಲ್ಲಿ ಸ್ಟೈಲಿಸ್ಟಿಕ್ಸ್ ಬಗ್ಗೆ ಒಂದು ಲೇಖನ ಇದೆ. ವಿಲಾಸ ಸರಂಗ್ ಎಂತ ಒಬ್ಬಳು ಬರೆದದ್ದು. ಓದಿನೋಡು.”

“ಸರಿ. ಸಾರ್, ಗುಡ್ ನೈಟ್:

“ಗುಡ್ ನೈಟ್”

ಒದ್ದೆಯಾದ ನೆಲವನ್ನು ತುಳಿಯುತ್ತ, ಹೆಂಗಸರ ಹಾಸ್ಟಲಿನ ಬದಿಯಿಂದ ನಡೆದುಬಂದೆ. ಶ್ರೀಮತಿ ವಿನೀತಳ ಕೋಣೆಯ ಕಿಟಿಕಿ ಪರದೆ ಇಳಿಬಿಟ್ಟಿತ್ತು, ಒಳಗಿನ ಬೆಳಕಿಗೆ ಪರದೆ ಕೆಂಪಗೆ ಪ್ರಕಾಶಿಸುತ್ತಿತ್ತು. ಅದರ ಬದಿಯ ಕೋಣೆ ದೊಗಲೆ ಪೈಜಾಮದ ಚಂಚಲಳದ್ದು. ಕೋಣೆಯಲ್ಲಿ ಬೆಳಕಿರಲಿಲ್ಲ. ಚಂಚಲ ನಿದ್ದೆಹೋಗಿರಲಾರಳು. ರಾಣೆ ಮತ್ತು ಸೀಮಾ ಒಟ್ಟಿಗೆ ಅಭ್ಯಾಸ ಮಾಡುತ್ತಿರಬಹುದು.

ಮೆಸ್ಸಿಗೆ ಬಂದಾಗ ಬಾಗಿಲು ಅರ್ಧ ಮುಚ್ಚಿತ್ತು. ಒಳಗಿಂದ ಯಾರೋ ದೊಡ್ಡ ದನಿಯಲ್ಲಿ ಜಗಳಾಡುವುದು ಕೇಳಿಸುತ್ತಿತ್ತು. ಒಂಬತ್ತು ಗಂಟೆಯ ಮೇಲೆ ಊಟ ಸಿಗುವ ಹಾಗಿಲ್ಲ. ಊಟಕ್ಕೆ ಹಸಿವೂ ಇರಲಿಲ್ಲ. ದೇಹವೆಲ್ಲ ಗಂಟಲೇ ಆದಂತೆ ಮೇಯುತ್ತಿತ್ತು. ಮೆಸ್ಸಿನೊಳಗೆ ಪ್ರವೇಶಿಸಿದೆ. ಅಲ್ಲಿ ತೆಲುಗು ಭಾಷೆಯಲ್ಲಿ ಭಯಂಕರವಾದ ಜಗಳ ಆಗುತ್ತಿತ್ತು — ಹಿರಿಯ ಅಡಿಗೆ ಭಟ್ಟ ನಾಯರ್ ಮತ್ತು ಜಾಡಮಾಲಿ ರಾಮಯ್ಯನ ನಡುವೆ. ನಾಯರ್ ಮುಂಡನ್ನು ಮೇಲಕ್ಕೆ ಎತ್ತಿಕಟ್ಟಿದ್ದ. ಅವನ ಎಣ್ಣೆ ಹಾಕಿದ ಖಾಲಿ ಮುಂದಲೆ ಟ್ಯೂಬ್ ಲೈಟಿಗೆ ಹೊಳೆಯುತ್ತಿತ್ತು. ರಾಮಯ್ಯನ ಕೈಯಲ್ಲಿ ಮೇಜೊರೆಸುವ ಸ್ಪಂಜಿನ ತುಂಡು. ಅದನ್ನೇ ಆಯುಧದಂತೆ ಎತ್ತಿ ಹಿಡಿದಿದ್ದ. ಇಬ್ಬರ ಕೊರಳ ಸೆರೆಯೂ ಉಬ್ಬಿತ್ತು….ಕಣ್ಣು ಗುಡ್ಡೆಗಳು ಹೊರ ಧುಮುಕುವುದಕ್ಕೆ ಕಾದು ಕುಳಿತಿದ್ದುವು. ನನಗೆ ತಿಳಿಯದ ಭಾಷೆ. ಬರೇ ಸದ್ದು ಮಾತ್ರ, ಆದರೇನಾಯಿತು, ಜಗಳದ ಭಾಷೆ ಎಲ್ಲರಿಗೂ ಒಂದೇ ಎನಿಸಿತು.

ಮೆಸ್ಸಿನ ಉಳಿದ ಕೆಲಸಗಾರರು, ಕ್ಯಾಂಪಸಿನ ಚೌಕಿದಾರರು ಜಗಳವನ್ನು ನೋಡುತ್ತ ನಿಂತಿದ್ದರು. ಈ ಗಲಾಟಿಯನ್ನು ನಿಲ್ಲಿಸುವ ಉದ್ದೇಶದಿಂದ ನಾನು ಹೋರಾಟಗಾರರನ್ನು ಸಮೀಪಿಸಿ “ಸ್ಟಾಪ್ ಇಟ್!” ಎಂದೆ ಎತ್ತರದ ಸ್ವರದಲ್ಲಿ. ನಾಯರು ಮತ್ತು ರಾಮಯ್ಯ ನನ್ನ ಮಾತನ್ನು ಕಡೆಗಣಿಸಿ ತಮ್ಮ ಭಾಷೆಯಲ್ಲಿ ಜಗಳವನ್ನು ಇನ್ನಷ್ಟು ಎತ್ತರದ ಸ್ವರದಿಂದ ಮುಂದರಿಸಿದರು. ನಾನು ಹತಾಶನಾಗಿ ಈಚೆಗೆ ಬಂದು ಇಕ್ಬಾಲ್ ಎಂಬ ಮೆಸ್ ಬಾಯ್ ಯನ್ನು ಹತ್ತಿರಕ್ಕೆ ಕರೆದೆ.

“ನನಗೆ ಸ್ವಲ್ಪ ಉಪ್ಪು ಬೇಕು.” ಎಂದೆ.

ಅವನಿಗೆ ಅರ್ಥವಾಗದೆ ಪೆಚ್ಚಾಗಿ ನನ್ನ ಮುಖ ನೋಡಿದ.

“ಉಪ್ಪು!” ಎಂದೆ.

“ಉಪ್?” ಎಂದ.

“ಉಪ್ಪು ಕಣೋ ಉಪ್ಪು ಉಪ್ಪು! ಸಾಲ್ಟ್”

ನಾಯರ್ –ರಾಮಯ್ಯ ಜಗಳದ ನಿರಂತರ ಶಬ್ದದಲ್ಲಿ ನನ್ನ ಮಾತು ಇಕ್ಬಾಲಿನ ತಲೆಯೊಳಗೆ ಯಾವ ಗಂಟೆಯನ್ನೂ ಬಾರಿಸಲಿಲ್ಲ. ನನ್ನ ಗಂಟಲು ಮಾತ್ರ ಉಪ್ಪಿಗಾಗಿ ಆರ್ತಿಸಹತ್ತಿತು.

“ಉಪ್ಪು ಬೇಕು ನನಗೆ! ಉಪ್ಪು!” ಎಂದು ಗಂಟಲು ಬಿರಿಯುವಂತೆ ಅರಚಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನದೇ ಎಲ್ಲ
Next post ಕತ್ತಲೇ ಉಳಿದ ಬಗೆ?

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys