ಮೌನವು ಮುದ್ದಿಗಾಗಿ!

ಮೌನವು ಮುದ್ದಿಗಾಗಿ!

ಚಿತ್ರ: ಎಂ ಜೆ ಜಿನ್

ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ

ವಾಗಿ ನಿದ್ರೆ ಗೈದಿದ್ದರು. ಬದಿಯಲ್ಲಿಯೇ Bed Lamp ತನ್ನ ಕರ್ತವ್ಯವನ್ನು ಇನ್ನೂ ಮಾಡುತ್ತಿರುವೆನೆಂದು ಶಾಂತವಾಗಿ ಉರಿಯುತ್ತಲಿತ್ತು. ಕಾಲವು ಮಳೆಗಾಲವಾದ್ದರಿಂದ, ತಂಪು ತಗಲಬಾರದೆಂದು ಕಿಟಕಿಗಳೆಲ್ಲವನ್ನೂ ಇಕ್ಕಿದ್ದರು. ಹಂಚಿನ ಮೇಲೆ ಮಳೆಹನಿಗಳು ಬೀಳುತ್ತ ತೊಟತೊಟನೆ ಸಪ್ಪಳವಾಗುತ್ತಲಿತ್ತು. Black Board ದ ಮೇಲೆ ಖಡುವಿನಿಂದ ಉದ್ದ ಗೆರೆಗಳನ್ನೆಳೆದಂತೆ ಕಿಟಕಿ, ಬಾಗಿಲುಗಳ ಬಿರುಕುಗಳಿಂದ ಬೆಳಕು ಬಿದ್ದಿತ್ತು. ಮೋಹನರಾಯರು ತಮ್ಮ ಎದುರಿನಲ್ಲಿ “ಟಿಕ್ ಟಿಕ್” ಸಪ್ಪಳ ಮಾಡುತ್ತ ಗೂಟಕ್ಕೆ ತೂಗು ಬಿಟ್ಟಿದ್ದ ಗಡಿಯಾರದ ಕಡೆಗೆ ದೃಷ್ಟಿ ಹರಿಸಿದರು: ಆಗ ೮|| ಗಂಟೆಯಾಗಿದ್ದಿತು!

ಇತ್ತ ಮತ್ತೊಂದೆಡೆಗೆ ತಮ್ಮ ಗೃಹಿಣಿ ಇನ್ನೂ ಮುಸುಕು ಹಾಕಿ ದೀರ್ಘವಾಗಿ ಉಸುರೆಳೆಯುತ್ತ ಮಲಗಿದ್ದನ್ನು ಕಂಡರು. ಪಕ್ಕದಲ್ಲಿಯೇ ಮಗುವು “ಮುಸ್-ಮುಸ್” ಎನ್ನುತ್ತ ತಾಯಿಯನ್ನಪ್ಪಿಕೊಂಡಿದ್ದಿತು!

ಮೋಹನರಾಯರು ಆಫೀಸಿಗೆ ೧೧ ಗಂಟೆಗೆ ಪ್ರತಿನಿತ್ಯವೂ ಹೋಗುವವರು. ಸುಂದರೆಯು ಬೆಳಗಿನಲ್ಲಿಯೇ ಎದ್ದು ಎಲ್ಲ ಕೆಲಸಗಳನ್ನು ಮುಗಿಸಿ, ಹೊಸ್ತಿಲಿಗೆ ರಂಗವಲ್ಲಿಯನ್ನಿಕ್ಕಿ ಕಿರುದನಿಯಲ್ಲಿ “ಏಳು ನಾರಾಯಣ ಏಳು ಲಕ್ಷ್ಮೀರಮಣ” ಎಂದು ಉದಯರಾಗವನ್ನು ಅನ್ನುತ್ತ “ಸ್ಟೋ” ಹೊತ್ತಿಸುವ ವೇಳೆ ದಾಟಿಹೋಗಿದ್ದಿತು. ಮೋಹನರಾಯರ ಮನಸ್ಸನ್ನು ಸಿಟ್ಟು ಮತ್ತು ಸಂಶಯಗಳೆರಡೂ ಅಂಟಿಕೊಂಡವು. ಗಾಳಿಯು ಹಂಚುಗಳ ಸಂದಿನೊಳಗಿಂದ ಸುಯ್ ಎಂದು ಬೀಸಿತು. ಮೋಹನರಾಯರೂ ತಾವೂ ಮುಸುಕು ಎಳೆದುಬಿಡಬೇಕೆಂದಿದ್ದರು. ಆದರೆ ಆಫೀಸ್? ದಾಸ್ಯವೃತಿ ! ಏನಾದರೂ ಬಿಟ್ಟಿದ್ದಲ್ಲವಲ್ಲಾ ಆಫೀಸಿಗೆ ಹೋಗುವದು. ಸಾವಕಾಶವಾಗಿ ತಾವೇ ಎದ್ದು ನಡುಮನೆಗೆ ಹೋದರು. ಸಪ್ಪಳ ಮಾಡುತ್ತ ಕಿಟಕಿ ತೆಗೆದರು ತಮ್ಮ ಹೆಂಡತಿಯು ಏಳಬೇಕೆಂದು. ಆದರೆ ಗಾಢನಿದ್ರೆಗೈಯುತ್ತಿದ್ದ ಸುಂದರೆಗೆ ಎಚ್ಚರವೇ ಆಗಲಿಲ್ಲ. ಮೋಹನರಾಯರ ಕೋಪವು ಇಮ್ಮಡಿಸಿತು. ಮೋರೆ ತೊಳೆದುಕೊಂಡು ತಾವೇ “ಸ್ಟೋ” ಹೊತ್ತಿಸಿ ಚಹಾ ಮಾಡಿಟ್ಟರು. ಆದರೂ ಸುಂದರಿಯು ಇನ್ನೂ ಏಳಲಿಲ್ಲ. ರಾಯರು ಬಸಿಯನ್ನೆತ್ತಿ ಚಹ ಕುಡಿಯಲು ಪ್ರಾರಂಭಿಸಿದರು. ಅಷ್ಟು ಹೊತ್ತಿಗೆ ಸುಂದರೆಯು ಎದ್ದು ಮೋರೆ ಮೇಲೆ ಬಿದ್ದ ಕೂದಲುಗಳನ್ನು ಸರಿಮಾಡಿಕೊಳ್ಳುತ್ತಾ ಬಚ್ಚಲಮನೆಯನ್ನು ಸೇರಿದಳು. ಮೋಹನರಾಯರು ಕೆಟ್ಲಿಯಲ್ಲಿ ಅರ್ಧಾಂಗಿಗೆ ಚಹವನ್ನಿರಿಸಿ ತಮ್ಮ ಆಫೀಸ್ ರೂಮಿಗೆ ಹೋದರು. ಅದೇನೋ ಮಾಡಬೇಕಾಗಿದ್ದ ಕೆಲಸವು ಸಾಕಷ್ಟಿತ್ತು! ಆದರೆ ಕೆಲಸಮಾಡುವ ಹುರುಪು ಮೈಯಲ್ಲಿ ಇರಲಿಲ್ಲ. ಅದೇಕೆ ? ನಗೆಮೊಗದಿಂದ ನಲಿದು ಚಹ ಕೊಡುವ ಅರ್ಧಾಂಗಿಯು ಏಳುವದು ಹೊತ್ತಾದುದಕ್ಕೆ ರಾಯರಿಗೆ ಅಷ್ಟೊಂದು ಸೊಗಸೆನಿಸಲಿಲ್ಲ! ಟೇಬಲ್ಲಿನ ಮೇಲಿನ ಫೈಲುಗಳನ್ನೆಲ್ಲ ತಿರುವಿಹಾಕಿದರೂ, ಒಂದನ್ನೂ ಪೂರ್ಣ ಮುಗಿಸಲಿಲ್ಲ. ಸಾಕಾಯಿತು ಅವರಿಗೆ ಕೆಲಸ ಮಾಡುವದು. ಡ್ರಾ ತೆರೆದು ಒಂದು ಸಿಗರೇಟನ್ನು ಹೊರತೆಗೆದರು. ಕಡ್ಡಿ ಕೆರೆದು ಹೊತ್ತಿಸಿದರೇನೋ ನಿಜ, ಅವರ ಮನಸ್ಸೆಲ್ಲಿದ್ದಿತೋ ಬಲ್ಲವರಾರು? ಬಿಳಿ ಬತ್ತಿ ತಾನೆ ಸುಡಲಾರದೆ ಸುಟ್ಟು ಬೂದಿಯಾಯಿತು.

ರಾಯರು ಎದ್ದು ಕಿಟಕಿಯಲ್ಲಿ ಮೋರೆ ಹಾಕಿ ನೋಡಿದರು. ಬೀದಿಯಲ್ಲಿ ಮಳೆ ಧಾರೆಗಟ್ಟಿ ಸುರಿಯುತ್ತಲಿತ್ತು. ಜನರು ತಮ್ಮ ಧೋತರಗಳನ್ನು ಮೇಲೆಕ್ಕೇರಿಸಿ, ಛತ್ರಿಗಳ ಚಾಟಿನಲ್ಲಿ ನಡೆದಿದ್ದರು. ಇಷ್ಟರಲ್ಲಿಯೇ ಬದಿಯ ಬೀದಿಯಿಂದ ರಾಯರ ಗೆಳೆಯ ವೆಂಕಟರಾಯರು Over-coat ಹಾಕಿಕೊಂಡು ಬಂದು ಕೂಗಿದರು. “ಏನು ಮೋಹನರಾವ್-ಪೇಟೆಗೆ ಬರುದಿಲ್ಲ?” ಮೋಹನರಾಯರ ನಾಲಿಗೆಯ ತುದಿಯಲ್ಲಿಯೇ ಚಹ ಎಂಬ ಶಬ್ದ ಬಂದು ಮಾಯವಾಯಿತು. ಹೀಗೇಕೆ ಎಂದು ಚಿಂತಿಸಬಹುದು ನೀವು. ಮೋಹನರಾಯರು ತಮ್ಮ ಮನೆಗೆ ಬಂದವರಿಗೆ ಚಹವಿಲ್ಲದೆ ಕಳಿಸುವ ವ್ಯಕ್ತಿಯಲ್ಲ….

ಅಷ್ಟು ಉದಾರ ಮನಸ್ಸಿನವರು! ಇಂದು ಅವರನ್ನು ಒಳಗೆ ಕರೆಯದೇ ತಾವು ಹೊರಟೇ ಬಿಟ್ಟರು……… ಚಹ ಮಾಡಿಸುವ ಗದ್ದಲಕ್ಕೆ ಬಿದ್ದರೆ ಮತ್ತೆ ಅವಳನ್ನು ಮಾತಾಡಿಸಬೇಕಾಗುತ್ತದೆಂದು ಹೀಗೆ ಮಾಡಿರಬೇಕು.
ಪೇಟೆಗೆ ಹೋಗಿದ್ದ ರಾಯರು ಪಲ್ಲೆಯ ಗಂಟನೊಡನೆ ಮನೆ ಸೇರಿದರು. ಒಳಹೊಕ್ಕು ನೋಡಿದರು. ಅಡಿಗೆ ಸಿದ್ದವಾಗಿರಲಿಲ್ಲ ಸುಂದರಿಯು ಅತ್ತಿಂದಿತ್ತ ಇತ್ತಿಂದತ್ತ ಗಡಿಬಿಡಿಯಿಂದ ಓಡಾಡುತ್ತಿದ್ದಳು. ರಾಯರು ಬಚ್ಚಲ ಮನೆಯನ್ನು ಸೇರಿ, ತಾವೇ ನೀರು ತೋಡಿಕೊಂಡು ಸ್ನಾನದ ಕಾಟ ತೀರಿಸಿಕೊಂಡರು. ಅವರು ಬಚ್ಚಲ್ಮನೆಯಿಂದ ಹೊರಬೀಳುವದರೊಳಗಾಗಿ ತಾಟು ಬಟ್ಟಲಗಳು ಅಣಿಯಾಗಿದ್ದವು ಮಣೆಯ ಮುಂದೆ. ಹಾಗೆಯೇ ರಾಯರು ಬಂದು ಊಟಕ್ಕೆ ಕುಳಿತುಕೊಂಡರು. ಅಂದಿನ ಅಡಿಗೆಯಲ್ಲಿ ಸ್ವಾರಸ್ಯವೇ ಇರಲಿಲ್ಲ. ಸಾರು ಉಪ್ಪಿಲ್ಲದ್ದು ! ಪಲ್ಯ ಕಾರವಿಲ್ಲದ್ದು !! ಅನ್ನವು ಹಂಜಕ್ಕಿ ! ಹೀಗೆ ವಿವಿಧ ಅವತಾರ ಹೊಂದಿ ತಾಟಿನಲ್ಲಿ ಬಂದು ಸೇರಿದವು ! ಮೌನವ್ರತವನ್ನು ಹಿಡಿದ ರಾಯರು ಮಾತಾಡುವದೆಂತು? ಸಿಟ್ಟಿನಿಂದ ಅಷ್ಟು ಇಷ್ಟು ಬದಿಗೊತ್ತಿ ಎದ್ದೆ ಎದ್ದರು. ೧೧|| ಯಾಗಿದ್ದರಿಂದ ಗಡಿಬಿಡಿಯಿಂದ ಆಫೀಸಿಗೆ ಹೊರಟರು.

ಸುಂದರೆಯು ಪತಿಯ ಮೌನಕ್ಕೆ ಮನದಲ್ಲಿಯೇ ಬೆದರಿದಳು. ಹಾಗೂ ಅರೆ‌ಊಟ ಮಾಡಿದುದಕ್ಕೆ ಮರುಗಿದಳು. ಮಾಡುವುದೇನು….? ತನ್ನದೇ ತಪ್ಪು ಬೆಳಗಿನಲ್ಲಿ ಎದ್ದು ಕೆಲಸಗಳನ್ನು ತೀರಿಸಬೇಕಾಗಿತ್ತು. ಆದರೆ ಮಗು ಒಂದಿದೆ ಯಲ್ಲ! ಅದರ ಅಳುವು….ನಗುವು! ಮೋಹನರಾಯರು ಹೊರಟ ಕೂಡಲೇ ತಾನೂ ಇದ್ದಷ್ಟನ್ನು ಹಾಕಿಕೊಂಡು ಊಟಮುಗಿಸಿದಳು. ರಾಯರು ೪ಗಂಟೆಗೆ ಚಹಕ್ಕೆ ಬರುವದರೊಳಗಾಗಿ ಸ್ವಲ್ಪ ಹೊಟ್ಟೆ ತುಂಬುವ ಹಾಗೆ ಏನಾದರೂ ಮಾಡಬೇಕೆಂದು ಮಾಡಿದಳು. ಸರಿಯಾಗಿ ೪ ಗಂಟೆಯಾಯಿತು. ರಾಯರ ಸುಳುವಿಲ್ಲ! ಹಾಗೆಯೇ ಕುಳಿತುಕೊಂಡಳು ಮಗುವನ್ನಾಡಿಸುತ್ತ, ಮೋಹನ ರಾಯರು ಬರದ್ದನ್ನು ಕಂಡು ತಾನೂ ಏನನ್ನೂ ತಿನ್ನದೆ ಮಾಡಿದ ಚಹವನ್ನೊಂದೆಡೆಗೆ ಇರಿಸಿ ಹೊರಗೆ ಬಂದು ಬಿಟ್ಟಳು, ಪಾಪ !! ಕುಳಿತು ಕುಳಿತು ಬೇಸತ್ತು, ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಚಪ್ಪರಿಸುತ್ತಾ ಪಕ್ಕದ ಮನೆಯವರ ಸಂಗಡ ಹರಟೆ ಹೊಡೆಯುವದಕ್ಕಾಗಿ ಹೊರಟಳು.

ಮೋಹನ ರಾಯರ ಹಸಿವೆಯಿಂದ ಬಳಲಿದ್ದರು. ಅದಕ್ಕೂ ಮಿಗಿಲಾದ ತಾಪವೆಂದರೆ-ಮುಂಜಾವಿನಿಂದ ಒಂದೂ ಕೂಡಾ ನಗುವಿನ ಮಾತಿಲ್ಲ ಅವಳೊಂದಿಗೆ ಪ್ರತಿ ನಿತ್ಯ ಎಷ್ಟು ರಸವತ್ತಾದ ಹರಟೆಗಳಾಗುತ್ತಿದ್ದವೊ? ಅವರಿಬ್ಬರಿಗೆ ಗೊತ್ತು! ರಾಯರು ತಮ್ಮ ಆಫೀಸಿನಲ್ಲಿಯ ಸುದ್ದಿಗಳನ್ನು ಸುಂದರೆಗೆ ವಿಸ್ತಾರವಾಗಿ ಹೇಳುವ ರೂಢಿ. ನಡುನಡುವೆ ಅವಳ ಮುಗುಳು ನಗೆ, ಕಣ್ಣುಗಳನ್ನು ಹೊರಳಿಸುವ ಚಾಪಲ್ಯ! ರಾಯರಿಗೆ ತಮ್ಮ ಶ್ರೇಷ್ಟತೆಯ ಬಗ್ಗೆ ಆವೇಶ!! ಇವೆಲ್ಲವುಗಳು ಜರಗತಕ್ಕವೇ. ಆದರೆ ಇಂದು? ಆಕೆಯೊಂದಿಗೆ ಇಷ್ಟು ವೇಳೆ ಮಾತಾಡಿಸದಿದ್ದುದಕ್ಕೆ ಹುಚ್ಚು ಹಿಡಿದಿದ್ದಿತು ! ಹಾಗೂ ಹೀಗೂ ಮಾಡಿ ೫ ಹೊಡೆಯಲು ಬಡಿಗೆ ತಿರುವುತ್ತ ಮನೆಗೆ ಧಾವಿಸಿ ಬಿಟ್ಟರು. ಬಾಗಿಲಿಗೆ ಬರಲು ಬಾಗಿಲಿಗೆ ಬೀಗ !! ಮೋಹನರಾಯರು ಬೆಪ್ಪಾಗಿ ನಿಂತು ಬಿಟ್ಟರು. ಪ್ರತಿನಿತ್ಯ ಬಾಗಿಲಿಗೆ ಬಂದು ನಸುನಗುತ್ತ ನಿಂತಿರುವ ಸುಂದರೆಯು ಇಂದು ಬೀಗ ಹಾಕಿ ಹೋಗಿದ್ದು ಆಶ್ಚರ್ಯವಾಯಿತು. ತಮ್ಮೆಡೆಯಲ್ಲಿದ್ದ ಬೀಗದ ಕೈಯಿಂದ ಬಾಗಿಲು ತೆರೆದು ನೋಡಿದರು-ಮನೆಯು ಸ್ವಚ್ಛವಾಗಿತ್ತು, ಲೋಡುಗಳು ಗಂಜಿಯ ಬಟ್ಟೆಗಳನ್ನು ಹಾಕಿಕೊಂಡು ಗೋಡೆಗಳಿಗೆ ಒರಗಿದ್ದವು. “ಟೇಬಲ್” ದ ಮೇಲೆ ವ್ಯವಸ್ಥಿತವಾಗಿ ಪುಸ್ತಕಗಳಿದ್ದವು. ಸ್ವಚ್ಛವಾಗಿ ಒರಸಿ ಇಟ್ಟಿದ್ದ “ಸ್ಟ್ಯಾಂಡ” (ದೀವಿಗೆ) ಕಂಡಿತು. ಬದಿಯಲ್ಲಿಯೇ ಗೂಟಕೆ ಮರುದಿವಸ ಹಾಕಿಕೊಳ್ಳಲಿಕ್ಕೆಂದು “ಇಸ್ತ್ರಿಯ” ಶರಟು ಕೋಟು ಗಳು ತೂಗು ಬಿದ್ದಿದ್ದವು. ರಾಯರು ತುಸು ಬಗ್ಗಿ ನೋಡಿದರು. ಶರಟಿಗೆ ಗುಂಡಿಗಳು ತಿರುವುಮುರುವಾಗಿ ಸೇರಿಕೊಂಡಿದ್ದವು. ರಾಯರು ಮನದಲ್ಲಿಯೇ ನಕ್ಕರು. ಇಷ್ಟೆಲ್ಲವನ್ನು ಯಾರು ಮಾಡಿದ್ದರೆಂದು ಬೇರೆ ಹೇಳ ಬೇಕಿಲ್ಲ.

ರಾಯರು ಅತ್ತಿತ್ತ ತಿರುಗಾಡಲು ಪ್ರಾರಂಭಿಸಿದರು. ಸುಂದರೆಯು ಲಗುಬಗೆಯಿಂದ ಧಾವಿಸಿ ಬಂದಳು ಅವಳು ಮೆಟ್ಟಿಲು ಏರುವದಕ್ಕೂ ರಾಯರು ಬಾಗಿಲ ಎದುರಿಗೆ ಹಾಕಿದ್ದ ನಿಲುಗನ್ನಡಿಯ ಮುಂದೆ ಮುಖ ನೋಡುತ್ತ ನಿಲ್ಲುವದಕ್ಕೂ ಸರಿಹೋಯಿತು ಸುಂದರೆಯು ಧಾವಿಸಿ ಬರುವಾಗ ಸೆರಗಿಗೆ ಬದಿಯಲ್ಲಿಯ ಗುಲಾಬಿ ಕಂಟಿ ಸಿಕ್ಕಿತು. ತನ್ನ ಹೂಗಳನ್ನು ಮುಡಿದು ತನ್ನನ್ನೇ ಮರೆತು ಹೊರಟಿರುವಳೆಂದೋ ಏನೋ! ಹೃದಯದಲ್ಲಿಯ ಪ್ರೀತಿಯು ಉಕ್ಕೇರಿ, ಹೊರಸೂಸಿ ಮತ್ತೆ ಅಡಗಿತೋ ಅನ್ನುವಂತೆ ಕೊರಳಲ್ಲಿಯ ನಕ್ಷತ್ರ ಮಾಲೆಯು ತುಸು ಕಂಡು ಸೆರಗಿನಲ್ಲಿ ಅಡಗಿಕೊಂಡಿತು. ಸುಂದರೆಯು ಒಂದು ಬಗೆಯ ಒಯ್ಯಾರದಿಂದ ಹಿಂದಿರುಗಿ ಸೆರಗನ್ನು ಬಿಡಿಸಿ ಕೊಂಡು ಮನೆಯ ಒಳಗೆ ಹೊಕ್ಕಳು. ರಾಯರು ಮುಗುಳುನಗೆ ಒಂದನ್ನು ಸೂಸಿದರೇನೊ ನಿಜ ಆದರೆ ಮಾತಾಡಿಸಲಿಲ್ಲ. ಪ್ರತಿನಿತ್ಯದಂತಿದ್ದಿದ್ದರೆ “ಏನು ಸಿನೆಮಾದಲ್ಲಿಯ ನಟಿ ಮಾಡಿದ ಹಾಗೆ ಮಾಡಿದೆ” ಎಂದು ಅನ್ನ ಬೇಕಾಗಿತ್ತು. ಅದಕ್ಕೆ ಪ್ರತಿಯಾಗಿ “ನೀವು ಡೌಲು ಮಾಡುವದಿಲ್ಲವೇ?” ಎಂದು ಅವಳ ಉತ್ತರ ಬರಬಹುದಾಗಿತ್ತು. ಅದಕ್ಕೆ ಮೋಹನರಾಯರ ತತ್ವಜ್ಞಾನ ಹೀಗೆ “ಏನು ಹೆಣ್ಣು ಮಕ್ಕಳ ಸಲುವಾಗಿಯೇ ಎಲ್ಲವು ಹಾಳಾಗುವದು, ನಮ್ಮದೇನಿದೆ?” ಎಂದು. ರಾಯರು ತಾವು ತೀರ ಸಾದಾ ಆಗಿ ಬಿಟ್ಟಿದ್ದೇವೆಂದು ಅವರ ಮತ. ಡೌಲಿನ ಬಗ್ಗೆ ಕೇಳಿದರೆ ರಾಯರು “ನಮ್ಮ ಕಾಲದ ಡೌಲು ಈಗ ಹೋಗಿ ಬಿಟ್ಟಿದೆ.” ಎಂದು ಉತ್ತರ ಕೊಡುವ ರೂಢಿ.

ರಾಯರು ಹೇಳಿದಂತೆ ದಿವಸ ದಿವಸಕ್ಕೆ ಹೊಸದು ಬರಹತ್ತಿದೆ. ಈಗ “These are the days of fashion” ಎಂದು ಹೇಳಿಕೊಳ್ಳುವ ಕಾಲವಿದು. ಮೊದಲು ಶರಟಿನ ಕಾಲರ ಗೇಣು ಉದ್ದ ಯಾಕೆ, ಇನ್ನೂ ತುಸು ಹೆಚ್ಚು ಎಂದರೂ ಅಡ್ಡಿಯಿಲ್ಲ ಹಚ್ಚಿಸುವ ರೂಢಿಯಾಗಿದ್ದಿತು. ಅಧುನಿಕರ ಕಾಲವಿದು…. ದುಡ್ಡಿಲ್ಲದ್ದು….. ಬಡತನದ್ದು – ಅದಕ್ಕೆ ಬಟ್ಟನಗಲದಷ್ಟೇ ಕಾಲರ ಹಚ್ಚಿಸುವದು ನಾವು ! ಇದರಂತೆಯೇ ಕೋಟಿನ ಅವಸ್ಥೆಯಾಗಿರಬೇಕು. ಜವಾನರಂತೆ ಸಾಲುಸಾಲಾಗಿ ಮಧ್ಯದಲ್ಲಿ ಅಷ್ಟೇ ಅಳತೆ ಬಿಟ್ಟು ಕುತ್ತಿಗೆಯಿಂದ ತಳದವರೆಗೆ ಗುಂಡಿಗಳನ್ನು ಹಚ್ಚುವದು ಹೋಗಿ, ಅಂದರೆ Retrenchment ಆಗಿ ೨, ೩ ಇಷ್ಟೇ ಉಳಿದಿರಬೇಕು. ಇನ್ನೂ ಹೇಳಬೇಕೆಂದಲ್ಲಿ ಎಷ್ಟೋ ಇವೆ. ಆದರೆ ಸದ್ಯಕ್ಕೆ ಸಾಕುಮಾಡಿ ಬಿಡುವ ನಮ್ಮ ಹಿಂದಿನ ಹೆಣ್ಣು ಮಕ್ಕಳು ಸೀರೆ ತೆಗೆದು ಕೊಳ್ಳುವಾಗ ಗೇಣಿನಿಂದ ಅಂಚನ್ನು ಅಳೆದು ತೆಗೆದು ಕೊಳ್ಳುವ ರೂಢಿಯಿದ್ದಿಲ್ಲವೇ? ಈಗ! ( ಅಂಚಿಲ್ಲದ್ದನ್ನು ಕೂಡಿರಿ ಎಂದು ಆರಿಸಿ ತೆಗೆದು ಕೊಳ್ಳುವವರಲ್ಲವೆ ? ಇದಕ್ಕೂ ನಮ್ಮ ಉತ್ತರ “These are the days of fashion” ಎಂದು ಏನನ್ನೂ ಹೇಳುತ್ತ ಕಥೆ ಹೇಳುವದನ್ನು ಮರೆತುಬಿಟ್ಟೆ.

ಹೀಗೆ ನಗುವಿನ ಹರಟೆಗಳು ಆಗತಕ್ಕವುಗಳು ಪ್ರತಿದಿನವು-ರಾಯರಿಗೂ ಸುಂದರೆಗೂ, ಇಂದು ಮೋಹನರಾಯರು ವಿರಾಮು ಕುರ್ಚಿಯಲ್ಲಿ ಮಂಡಿಸಿ `Times’ ಓದುವದರಲ್ಲಿ ಮಗ್ನರಾದಂತೆ ನಟಿಸಿದರು. ಆದರೆ ಒಳಗಿನಿಂದ ಕೂಗು ಬಂದಿತು. “ಎಷ್ಟು ಅಳತಿಯೋ ಅಳು” ಎಂದು. ರಾಯರು ನೀಟಾಗಿ ಕುಳಿತು ಒಳಗೆ ಇಣಿಕಿ ನೋಡಿದರು. ಸುಂದರೆಯು ಮಗುವನ್ನು ತಂದು “ಕರಕೊಳ್ಳಿರಿ ಇವನನ್ನು…. ಎಷ್ಟು ಕಾಡಿಸುವದು!” ಎಂದು ಮಗುವನ್ನು ಕೈಯಲ್ಲಿ ಕೊಟ್ಟು ಒಳಗೆ ಹೋದಳು. ರಾಯರು ನೋಡುತ್ತಾರೆ. ಮಗುವಿನ ಮೈ ಬೆಚ್ಚಗಾಗಿದೆ!…. ಅದಕ್ಕೆ ಕಾಯಿಲೆ!! ಬೆಳಗಿನಿಂದ ಹೀಗೆ ಮಾಡಿದುದು ಉಚಿತವಾಗಲಿಲ್ಲವೆಂದು ರಾಯರು ಮನಗಂಡು ತಾವೇ “ಅಲ್ಲಾ, ಕಿಟ್ಟಗ ಜ್ವರ ಬಂದದ್ದು ಹೇಳಬಾರದ ನನ್ನ ಮುಂದ….ಆಂ -ಂ -ಂ ಏನಂದೀ ಽ ಽ”. ಸುಂದರೆಯು ನಡುಮನೆಯ ಬಾಗಿಲಿಗೆ ಬಂದು “ನೀವು ಮಾತೇ ಆಡಲಿಲ್ಲ… ನಾನರೆ ಏನು ಮಾಡುವುದು?” ಎಂದು ಕಣ್ಣಿನಲ್ಲಿಯ ನೀರನ್ನು ಒರಿಸಿಕೊಂಡಳು. “ಮತ್ತೆ ಒಳಗ ಬರತೀರೇನು?” ಎಂದಳು.

“ಎಂಥ ಹುಚ್ಚಿ ನೀನು…. ಮಗುವಿಗೆ ಕಾಯಿಲೆಯಾದರೂ ಕೂಡಾ ಹೇಳಬಾರದೆ?” ಎಂದನ್ನುತ್ತಾ ಒಳಗೆ ಬಂದು ಮಣೆಯ ಮೇಲೆ ಕುಳಿತು ಮಗುವನ್ನು ತೊಡೆಯ ಮೇಲೆ ಹಾಕಿಕೊಂಡರು. ಸುಂದರೆಯು ಕಪ್ಪು ಬಸಿಗಳನ್ನು ಮುಂದಿರಿಸಿ ಮಗುವನ್ನೆತ್ತಿಕೊಂಡಳು. ಮಗುವು ಕಪ್ಪು ಬಸಿಗಳನ್ನು ನೋಡಿ ಹಿಗ್ಗಿ ಹಾರಿತು. ದಂಪತಿಗಳೀರ್ವರು ಮಗುವಿಗೆ ಮುದ್ದು ಕೊಡಲು ಬಾಗಿದರು…….. ಇತ್ತ “ಸ್ಟೋ” ಭರ್ ಅನ್ನುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವು ಕಂಡದ್ದು
Next post ಇರುಳಾಗಲೆ ಕವಿದಿದೆ ಗೆಳತಿ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…