ಗ್ರಹಕಥಾ

ಗ್ರಹಕಥಾ

[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ ಮನೋವೃತ್ತಿಗಳನ್ನು ಲಕ್ಷಿಸದೆ ಸ್ವಸುಖಾಭಿಲಾಷಿಯಾದರೆ, ಸಂಸಾರವು ಹೇಗೆ ಕಷ್ಟಮಯವಾಗುತ್ತದೆಂಬವು ಈ ಚಿಕ್ಕ ಕಥೆಯಲ್ಲಿ ತೋರಿಸಿದೆ. ಆದರೆ, ನಮ್ಮ ಕಥಾನಾಯಿಕೆಯಾದ ಪ್ರೇಮವಲ್ಲರಿಯು ಶಿಕ್ಷಣದ ಸಂಸ್ಕಾರವನ್ನು ಹೊಂದಿದವಳಾದ್ದರಿಂದ ವ್ಯವಹಾರ ಚತುರೆಯಾದ ಅನ್ನಪೂರ್ಣಾಬಾಯಿಯ ಸದುಪದೇಶವನ್ನು ಗ್ರಹಿಸಿ ತನ್ನ ಆಗ್ರಹವನ್ನು ಬಿಟ್ಟುಕೊಟ್ಟು ಮತ್ತೆ ಹೇಗೆ ಸುಖಭಾಗಿನಿಯಾದಳೆಂಬದಾದರೂ ಇದರಲ್ಲಿ ತೋರಿಸಿದೆ.]

ದಿವಾಕರ ದೇವರಾವ ದೇಶಪಾಂಡೆ ಎಂಬ ಹೆಸರಿನ ಅಲ್ಪ ವಯಸ್ಕನಾದ ಬಾಲಕನ ತಂದೆತಾಯಿಗಳೀರ್ವರೂ ಏಕಕಾಲಕ್ಕೆ ವಿಲಕ್ಷಣವಾದ ಜ್ವರದ ಪೀಡೆಯಿಂದ ತೀರಿಕೊಂಡದ್ದರಿಂದ ಸಕಲ ಸಂಪತ್ತುಗಳಿಂದ ತುಂಬಿ ತುಳಕುತ್ತಿರುವ ಅವನ ಮನೆಗೆ ನಿಯಾಮಕವಿಲ್ಲದಂತಾಯಿತು. ಅವನ ಸಂರಕ್ಷಣದ ಭಾರವೂ ಅವನ ಜಾಗಿರಿಯ ವ್ಯವಸ್ಥೆಯ ಭಾರವೂ ಕೋರ್ಟ ಆಫ ವಾರ್‍ಡ್ಸ್ ಎಂಬ ನ್ಯಾಯಾಸ್ಥಾನದ ಕಡೆಗೆ ಬಂದಿತು. ದಿವಾಕರನು ಸುಂದರನೂ ಚಪಲನೂ ಬುದ್ದಿವಂತನೂ ಆದ ಬಾಲಕನಾಗಿರುವದರಿಂದ ಜಜ್ಜ ಸಾಹೇಬರ ಪ್ರೇಮವು ಅವನ ಮೇಲೆ ಅಧಿಕವಾಗಿತ್ತು. ಅವನ ಊಟ ಉಡಿಗೆ ಆರೈಕೆ ಆರೋಗ್ಯ ರಕ್ಷಣಗಳ ಕೆಲಸವನ್ನು ಸಾಹೇಬರು ದಿವಾಕರನ ಪ್ರೀತಿಯ ಸೋದರಮಾವನ ಕಡೆಗೆ ಒಪ್ಪಿಸಿದ್ದರು. ದಿವಾಕರನು ಸರಕಾರದ ಹಾಯ ಸ್ಕೂಲಿನಲ್ಲಿ ಅಭ್ಯಾಸಮಾಡುತ್ತಿದ್ದರೂ ಮನೆಯಲ್ಲಿ ಅವನ ಮಾನಸಿಕ ಹಾಗೂ ನೈತಿಕ ಶಿಕ್ಷಣಗಳ ಮೇಲ್ವಿಚಾರಣದ ಕೆಲಸವು ಒಬ್ಬ ಚತುರನಾದ ಪದವೀಧರನ ಕಡೆಗೆ ಕೊಡಲ್ಪಟ್ಟಿತ್ತು. ಹೀಗೆ ವ್ಯವಸ್ಥಿತವಾದ ಶಿಕ್ಷಣ ಪೋಷಣಗಳು ದೊರೆಯುತ್ತಿರಲು ಕೇಳುವದೇನು ? ದಿವಾಕರನು ಬುದ್ದಿಶಾಲಿಯಾದ ವಿದ್ಯಾರ್ಥಿಯ ರೂಪವಂತನ ಬಲವಂತನೂ ಆದ ತರುಣನೂ ಆಗುತ್ತೆ ನಡೆದನು. ಶಾಠ್ಯ ದಂಭ ಆಹಂಕಾರಗಳ ಸಂಪರ್ಕವಿಲ್ಲದೆಯೂ ದುರಾಚರ ಣದ ಹಾದಿಗೆ ಹೋಗದೆಯೂ ದಿವಾಕರನು ತನ್ನ ವಿದ್ಯಾ ವ್ಯಾಸಂಗವನ್ನು ಚನ್ನಾಗಿ ಮಾಡುತ್ತೆ ಸಾಹೇಬರಿಗೂ, ಮಾವನಿಗೂ ಶಿಕ್ಷಕರಿಗೂ ಕೂಡಿಯೇ ಕೀರ್ತಿಯನ್ನು ಕೊಡುವವನಾದನು. ಯಥಾಕ್ರಮವಾಗಿ ಇಯತ್ತೆ ಇಯತ್ತೆಗಳನ್ನು ದಾಟಿ ಅವನು ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾಗಿಬಿಟ್ಟನು.

ಆ ಕಾಲಕ್ಕೆ ವರಗಳ ವ್ಯಾಪಾರವೇ ತೇಜಿಯಲ್ಲಿತ್ತು. ಹುಟ್ಟಿದ ಹುಳಕ್ಕೆ ಕೂಡ ಯೋಗ್ಯತೆ ಮೀರಿ ವರದಕ್ಷಿಣೆ! ಫಾಯನಲ್ಲ ಪರೀಕ್ಷೆಯಾಗಿ ಅಸಿಸ್ಟೆಂಟ ಕಲೆಕ್ಟರರ ಕಚೇರಿಯಲ್ಲಿ ಉಮೇದವಾರನಾಗಿದ್ದರಾಯಿತು, ಅವನು ದೊಡ್ಡವರನು. ವರದಕ್ಷಿಣೆ ಎಷ್ಟೆಂದು ಕೇಳಿದ್ದೊಂದೇ ತಡ, ‘ಸಾವಿರ ರೂಪಾಯಿ, ಮೇಲೆ ವರೋಪಚಾರ!’ ಎಂಬ ಮಾತು ಬಂದಿತೇ. ವತನವೃತ್ತಿ ಮನೆ ಮಾರುಗಳೇನಾದರೂ ಇವೆಯೋ ಎಂದು ಕನ್ನೆಯ ಮೇಲೆ ಸಾವಿರ ರೂಪಾಯಿಗಳನ್ನೂ ಕೊಡತಕ್ಕವನು ಕೇಳಿದರೆ ತಪ್ಪಾಯಿತೆ? ಯಾಕೆ ಬಹಳ ಕೀಳುತ್ತೀರಿ ? ನಮ್ಮ ವತನ ವೃತ್ತಿಗಳನ್ನು ನೀವು ಕೊಂಡುಕೊಳ್ಳತಕ್ಕವರೋ ? ಇನ್ನೊಮ್ಮೆ ಕೇಳಿದರೆ ವರದಕ್ಷಿಣೆ ಹದಿನೈದು ನೂರು!’ ಎಂಬ ಉದ್ದವಾದ ಉತ್ತರವನ್ನು ಆ ನೀರಿನವನ ಮಗನು ಕೊಡುವನು. ವರಗಳ ವ್ಯಾಪಾರವು ಹೀಗೆ ಘನಚಕ್ರವಾಗಿ ನಡೆದಿರುವ ದಿವಾಕರನಂಥ ಶ್ರೀಮಂತನೂ ಕುಲೀನನೂ ಉಚ್ಚಪ್ರತಿಯು ಶಿಕ್ಷಣದಮಾರ್ಗದಲ್ಲಿರುವವರೂ ಆದ ತರುಣನ ಮೇಲೆ ಚವರ ಹಾರದಿದ್ದೀತೆ? ದೊಡ್ಡ ದೊಡ್ಡ ದೇಸಾಯಿ ದೇಶಪಾಂಡೆ ಮುಂತಾದ ಜಮೀದಾರರು ಜಜ್ಜ ಕಲೆಕ್ಟರ ಮುಂತಾದ ಆಧಿಕಾರಿಗಳೂ ಸುಂದರಿಯರಾದ ತಮ್ಮ ಕನ್ನೆಯರನ್ನು ಕೊಡಹೋದಲ್ಲಿ, ಕೊರ್ಟ ಆಫ ವಾರ್ಡ್ಸದವರು ಸದ್ಯಕ್ಕೆ ದಿವಾಕರನ ಮದುವೆ ಮಾಡುವದು ತಮಗೆ ಇಷ್ಟವಿಲ್ಲೆಂದು ಹೇಳಿದರು.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಿವಾಕರನು ಮುಂದೆ ಮುಂಬಯಿಯಲ್ಲಿಯ ದೊಡ್ಡದೊಂದು ಕಾಲೇಜಕ್ಕೆ ಹೋದನು. ಅಲ್ಲಿಯಾದರೂ ಅವನು ಬುದ್ದಿವಂತರಾದ ವಿದ್ಯಾರ್ಥಿಗಳಲ್ಲಿ ಅಗ್ರಗಣ್ಯನೆನಿಸಿಕೊಂಡು ಬೀ. ಏ. ಪರೀಕ್ಷೆಯಲ್ಲಿ ಬಹುಮಾನದ ಪದವಿಯನ್ನು ಹೊಂದಿದನು. ಬುದ್ದಿವಂತನೂ ಸುಸ್ವಭಾವದವನೂ ಸಂಪತ್ತಿನ ಸೌಕರ್ಯದಲ್ಲಿರುವವನೂ ಆದ ಆ ತರುಣನು ಪ್ರತಿಷ್ಠಿತರ ಸಮಾಜದಲ್ಲಿ ಮರೆಯಲಾರಂಭಿಸಿದನು. ಮುಂಬಯಿ ಯಂಥ ಸುಧಾರಣೋತ್ತೇಜಕವಾದ ಕ್ಷೇತ್ರದಲ್ಲಿ ಅವನ ನಿವಾಸವು, ಅವನ ಸಹಾಧ್ಯಾಯಿಗಳೂ ಸ್ನೇಹಿತರೂ ಕಾಲೇಜದ ಫೆಲೋ ಪ್ರೊಫೆಸರರೂ ಎಲ್ಲರೂ ಸುಧಾರಣಾವಾದಿಗಳು, ಸುಧಾರಿಸಿದ ಆಚಾರ ವಿಚಾರಗಳುಳ್ಳ ಸಮಾಜದಲ್ಲಿ ಓಡಾಡುವವನಾದ ದಿವಾಕರನು. ನಖಶಿಖಾಂತವಾಗಿ ಸುಧಾರಕನಾಗಿ ಹೋದನು. ಆ ಪರಿಸ್ಥಿತಿಯಲ್ಲಿದ್ದರೆ ಪೆದ್ದನಂಥ ಗ್ರಾಮ್ಯನೋರ್ವನು ಕೂಡ ವರ್ಷಾರು ತಿಂಗಳದಲ್ಲಿ ಸುಧಾರಣೆಯ ಪ್ರವಾಹಕ್ಕೆ ಬಿದ್ದು ಅರಿಯದೆ ತಾನೆಷ್ಟು ದೂರ ಹೋಗಿರುವೆನೆಂಬದನ್ನು ಕಂಡು, ಅವನಿಗೆಯೇ ಆಶ್ಚರ್ಯವಾಗಬಹುದು, ದಿವಾಕರನಂತೂ ಸುಧಾರಣೆಗೆ ಅನುಕೂಲನು. ಈಸು ಕಲಿಯ ಬೇಕೆಂದು, ಬೇಕಾಗಿ ಇವನು ಆ ಮಹಾಪ್ರವಾಹದಲ್ಲಿ ಹಾಕಿಕೊಂಡು ವಿನೋದದಿಂದ ತೇಲತೇಲುತ್ತೆ ಹೋಗಿ, ಸುಧಾರಣಾ ಮಹಾರ್ಣವದ ತರಂಗ ತತಿಗಳ ಹೊಡೆತವನ್ನು ಲಕ್ಷಿಸದೆ ಅವನು ಅಲ್ಲಿ ಆನಂದದಿಂದ ಹೊಯ್ಯಾಡಲಾರಂಭಿಸಿದನು, ಉಣಿಸುತಿನಿಸಿನ ಚಮತ್ಕಾರ ವೇಷವೈಚಿತ್ರ, ನಡೆನುಡಿಗಳ ಒಯ್ಯಾರ ಮುಂತಾದ ಮಾತುಗಳಲ್ಲಿ ದಿವಾಕರನು ಅಚ್ಚ ಸುಧಾರಕರತಲೆ ಮೇಲೆ ಕೈ ಇಟ್ಟನು.

ಬಿ. ಏ. ಪರೀಕ್ಷೆಯಾಯಿತು; ಸುಧಾರಣೆಯ ಯಥೇಷ್ಟವಾದ ಪರಿಚಯವಾಯಿತು; ಇಂದು ನಾಳೆ ಕೋರ್ಟಿನವರು ಸಂಪತ್ತನ್ನೆಲ್ಲ ತನ್ನ ಸ್ವಾಧೀನಕ್ಕೆ ಕೊಡತಕ್ಕವರು; ಇಂಥ ಸೌಕರ್ಯದ ಸ್ಥಿತಿಯಲ್ಲಿ ತಾನಿನ್ನು ಸಸ್ತ್ರೀಕವಾಗಿ ಸಂಸಾರದ ಸುಖವನ್ನು ಯಥೇಷ್ಟವಾಗಿ ಭುಂಜಿಸಬೇಕೆಂಬ ವಿಚಾರವು ದಿನಾಕರನಲ್ಲಿ ಹುಟ್ಟಿದ್ದು ಸಹಜವೇ ಸರಿ. ಆದರೆ ತನಗಿನ್ನು ಯೋಗ್ಯಳಾದ ಪತ್ನಿಯೆಂದರೆ ಎಂಥವಳು ? ಅಪರಿಚಿತಳೂ ಅಸಂಸ್ಕೃತಳು ಆಗಿರುವ ಓರ್ವ ಹಳ್ಳಿಗಾಡ ಕನೈಯನ್ನು ದಲಾಲರ ಮುಖಾಂತರವಾಗಿ ಹುಡುಕಿ ಮದುವೆ ಮಾಡಿಕೊಂಡು ಸಂಸಾರ ಸುಖವನ್ನು ಹೊಂದುವೆನೆಂಬುವದೂ ಕಬ್ಬಿಣದ ಅಲಂಕಾರಗಳನ್ನು ಮಾಡಿ ಇಟ್ಟುಕೊಂಡು ಮೆರೆಯುವೆನೆಂಬುವದೂ ಒಂದೇ ಎಂದು ಶಂಕಿಸಿ, ಅವನು ಸುಧಾರಣಾಶಾಣೋಲ್ಲೀಢಿತಳಾದ ಓರ್ವ ವಿದುಷೀ ಮಣಿಯ ಪ್ರೇಮ ಸಂಪಾದನವನ್ನು ಮಾಡಿಕೊಳ್ಳುವ ಉದ್ಯೋಗದಲ್ಲಿ ತೊಡಗಿದನು. ಕರ್ಮಧರ್ಮ ಸಂಯೋಗದಿಂದ ಒಂದು ನಾಕ್ಯಮಣಿಯ ಪರಿಚಯವೂ ಅವನಿಗೆ ಅಕಸ್ಮಾತ್ತಾಗಿ ಆಯಿತು. ಮುಂಬಯಿಯ ಬಳಿಯಲ್ಲಿರುವ ಮಾತಂಗ ದ್ವೀಪದಲ್ಲಿಯ ಗುಹೆಗಳನ್ನು ದಿವಾಕರನು ನೋಡ ಹೋದ ಕಾಲಕ್ಕೆಯೇ “ಫೀಮೇಲ ಯುನಿವರ್ಸಿಟಿ ಕಾಲೇಜ” ಎಂಬ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ತರುಣಿಯರ ವೃಂದವಾದರೂ ಅಲ್ಲಿಗೆ ಬಂದಿತ್ತು. ಆ ವೃಂದದಲ್ಲಿದ್ದ ಮಿಸ್ ಪ್ರೇಮವಲ್ಲರೀ ಎಂಬ ಸುಂದರಿಯಾದ ಒಯ್ಯಾರೆ ಯೊಬ್ಬಳು ಸಶಾಸ್ತ್ರವಾದ ಶೃಂಗಾರ ಚೇಷ್ಟಿತಗಳನ್ನು ನಟಿಸಿ ದಿವಾಕರನ ಚಿತ್ತವೃತ್ತಿಯನ್ನು ಅಪಹರಿಸಿಕೊಂಡಳು.

ಪ್ರೇಮವಲ್ಲರಿಯು ಹದಿನೆಂಟು ವರ್ಷದ ನವತರುಣಿಯು, ಗೌರ ವರ್ಣದ ಆ ಸುಂದರಿಯ ಉಡಿಗೆ ತೊಡಿಗೆಗಳು ಬಹು ಸೊಬಗಿನವು. ಕೈಯಲ್ಲಿಯ ಅಂದವಾದ ಪುಸ್ತಕವನ್ನು ತಾಳದೊಂದಿಗೆ ನನ್ನ ತೊಡೆಗೆ ಬಡಿಯುತ್ತೆ ಸೇಕ್ಸಪಿಯರನದೊಂದು “ಸಾನೆಟ್” ಪದವನ್ನು ಮೆಲ್ಲನೆ ಬಹು ಇಂಪಾಗಿ ಹಾಡುತ್ತಿರುವ ಮಿಸ್ ಪ್ರೇಮವಲ್ಲರಿಯನ್ನು ಕಂಡು ದಿವಾಕರನು ಮೋಹಿತನಾದದ್ದು ಆಶ್ಚರ್ಯವಲ್ಲ. ಮುಂಬಯಿಗೆ ಬಂದ ಬಳಿಕ ಟ್ರಾಮವೇದಲ್ಲಾಗಲಿ, ನಾಟಕಗೃಹದಲ್ಲಾಗಲಿ ದಿವಾಕರ ಪ್ರೇಮವಲ್ಲರಿಯರ ಸಂದರ್ಶನ ವಾದಾಗ ಅವರವರ ನಡುವೆ ಮೃದುಸ್ಮಿತದ ಪ್ರಣಾಮಗಳು ನಡೆದವು. ಬರ ಬರುತ್ತೆ ಸಂಕೋಚವು ಸಡಿಲಾಗಿ ಅವರೀರ್ವರ ನಡುವೆ ಕುಶಲಪ್ರಶ್ನೆಗಳ ವ್ಯವಹಾರವು ನಡೆಯಿತು. ಮುಂದೆ ಇಬ್ಬರೂ ಕೂಡಿ ಸೇಕ್ಸಪಿಯರನ “ರೋಮಿಯೋ ಆಂಡ ಜೂಲಿಯಟ್” ಎಂಬ ಸುರಸವಾದ ನಾಟಕವನ್ನೊದಿದರು. ಒಬ್ಬರ ಮಾರ್ಮಿಕತೆಯನ್ನು ಒಬ್ಬರು ಕೊಂಡಾಡಿದರು. ಒಂದು ದಿನ ಪ್ರೇಮವಲ್ಲರಿಯು ದಿವಾಕರನಿಗೊಂದು ಚಿತ್ರ ಮಯವಾದ ಕೊರಳ ಪಟ್ಟಿಯನ್ನು ಕಾಣಿಕೆಯಾಗಿ ಕಳಿಸಿದಳು ; ಆದಕ್ಕೆ ಪ್ರತಿಯಾಗಿ ದಿವಾಕರನೊಂದು ಬೆಲೆಯುಳ್ಳ ರೇಶಿಮೆಯ ದುಕೂಲವನ್ನು `In token of love (ಪ್ರೇಮದ ಕುರುಹು)’ ಎಂಬ ವಿಳಾಸ ಸಹಿತವಾಗಿ ಕಳಿಸಿದನು. ಮುಂದೆ ನಡೆದ ಚಮತ್ಕಾರಗಳನ್ನು ರಸಿಕರಾದ ವಾಚಕರು ಊಹಿಸಬಹುದಾದ್ದರಿಂದ ಅದನ್ನು ನಾವು ಇಲ್ಲಿ ಬೆಳಿಸಿ ಹೇಳಲಿಚ್ಛಿಸುವದಿಲ್ಲ. ಪ್ರಥಮ ಪರಿಚಯವಾದ ಒಂದೆರಡು ತಿಂಗಳಗಳಲ್ಲಿಯೇ ದಿವಾಕರ ಪ್ರೇಮವಲ್ಲರಿಯರು ದಂಪತಿಗಳಾದರು.

“ನಿಮ್ಮ ಆಸ್ತಿಯನ್ನು ನೀವು ನಿಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳತಕ್ಕದ್ದೆ”ಂದು ಕೊರ್ಟ- ಆಫ ವಾರ್ಡ್ಸದ ಅಧಿಕಾರಿಗಳು ದಿವಾಕರನಿಗೆ ತಿಳಿಸಿದ ಮೇರೆಗೆ ಅವನು ಸಸ್ತ್ರೀಕನಾಗಿ ಊರಿಗೆ ಬಂದು ದೊಡ್ಡ ಶ್ರೀಮಂತನಾಗಿ ಇರತೊಡಗಿದನು. ಊರಲ್ಲಿಯ ಮನೆಯು ಮನಸ್ಸಿಗೆ ಬರಲಿಲ್ಲವಾದ್ದರಿಂದ ನವದಂಪತಿಗಳು ಊರ ಹೊರಗಿರುವ ತಮ್ಮ ಬಂಗಲೆಯಲ್ಲಿ ಇರಹೋದರು. ಅಲ್ಲಿ ಅವರು ಸೋಜಿಗದ ಸಂಸಾರವನ್ನು ಹೂಡಿದರು. ಎಲ್ಲಿ ನೋಡಿದಲ್ಲಿ ಮೇಜು, ಕುರ್ಚಿ, ಕಪಾಟುಗಳೂ ಚಿತ್ರಪಟ ಕನ್ನಡಿಗಳೂ ಕರ್ಟನ್ ಕನಾತುಗಳೂ ಮಂಚತಿವಾಸಿಗೆಗಳೂ ಪಿಯಾನೋ ಹಾರ್ಮೋನಿಯಮ್‌ಗಳೂ ಬಹು ಪರಿಷ್ಕಾರದೊಂದಿಗೆ ಮಂಡಿಸಲ್ಪಟ್ಟಿದ್ದವು. ಮನೆಯ ಸುತ್ತಲಿನ ರಮ್ಯವಾದ ಉದ್ಯಾನದ ಆರೈಕೆಗಾಗಿ ನಾಲ್ಕು ಜನ ತೋಟಿಗರು, ಮನೆಯಲ್ಲಿ ಕೈಗೊಬ್ಬ ಕಾಲಿಗೊಬ್ಬ ಸೇವಕನು. ಹೆಂಡತಿಗೊಂದು ಗಂಡನಿಗೊಂದು ಹೀಗೆ ಎರಡು ಕುದುರೆಯ ರಥಗಳು. ಹತ್ತುವ ಕುದುರೆಗಳಾದರೂ ಬೇರೆ ಬೇರೆ. ವರ್ಷಾ ಎಂಟೊಂಬತ್ತು ಸಾವಿರ ರೂಪಾಯಿಗಳನ್ನು ಗಂಡಹೆಂಡರಿಬ್ಬರೇ ಬೇಕಾದ ಹಾಗೆ ತೂರಾಡಬಹುದಾದ ಸಮಯದಲ್ಲಿ ಸಂಸಾರಸಾಗರದ ದುಃಖಮಯವಾದ ತರಂಗಗಳು ಇವರಿಗೆ ತೊಂದರೆಯನ್ನು ಕೊಡಲು ಸತ್ವಹೀನವಾಗಿದ್ದವು. ಚಹಾ, ಕಾಫಿ, ಊಟ-ಉಡಿಗೆ, ಗಾನ- ವಾದನ, ವಾಚನ- ಚಿತ್ರ ಲೇಖನ, ಅಶ್ವದಮನ, ವನೋಪವನಗಳಲ್ಲಿ ವಿಹರಣ ಮುಂತಾದ ವ್ಯವಸಾಯಗಳಲ್ಲಿ ಅವರು ವರ್ಷರುತಿಂಗಳುಗಳನ್ನು ಆಡಾಡುತ್ತೆ ಕಳೆದರು.

“ಸ್ವರ್ಗೀಯ” “ಸ್ವರ್ಗೀಯ”ವೆಂದು ಹೇಳಲ್ಪಡುವ ಹುಚ್ಚು ಪ್ರೇಮದ ನಿರ್ಭರವೆಲ್ಲ ಇಳಿದುಹೋದ ಬಳಿಕ ನಾನು ನಾನೆಂಬ ಐಹಿಕವಾದ ವಿಚಾರವು ಮನುಷ್ಯನ ಹೃದಯವನ್ನು ಆಕ್ರಮಿಸುವದುಂಟು. ದೇಶಸ್ಥನಾದ ಈ ದಿವಾಕರನಿಗೆ ನನ್ನಂಥ ಸುಂದರಿಯ ಸುಸಂಸ್ಕೃತೆಯ ಆದ ಸ್ತ್ರೀ ರತ್ನದ ಪ್ರಾಪ್ತಿಯಿಂದಲೇ ಸುಖವಲ್ಲದೆ ಅವನ ಐಶ್ವರ್ಯದಿಂದೇನು ಎಂಬ ವಿಚಾರವು ಮೆಲ್ಲನೆ ಪ್ರೇಮವಲ್ಲರಿಯ ಮನಸ್ಸಿನಲ್ಲಿ ಹೊಕ್ಕಿಕೊಂಡಿತು. ಸುಧಾರಿಸಿದ ಸ್ತ್ರೀಗೆ ಉಚಿತವಾದ ಸ್ವಾತಂತ್ರ್ಯವು ಈ ಮನೆಯಲ್ಲಿ ತನಗೆ ಸಂಪೂರ್ಣವಾಗಿ ಇರುವದೋ ಇಲ್ಲವೋ ಎಂಬದನ್ನು ಅವಳು ಅನೇಕ ಪರಿಯಾಗಿ ಪರೀಕ್ಷಿಸಿ ನೋಡಿದಳು. ಅದು ಇದ್ದಿತ್ತು. ಉದಾರನಾದ ಪತಿಯ ಪರಮಾನುಗ್ರಹವೆಂದು ಭಾವಿಸದೆ ತಾನನುಭವಿಸುತ್ತಿರುವ ಸ್ವಾತಂತ್ರ ಸುಖವು ತನ್ನಲ್ಲಿ ಸ್ವಾಯತ್ತವಾಗಿರುವ ಗುಣಗಳ ಪರಾಕ್ರಮದಿಂದಲೇ ತನಗೆ ಪ್ರಾಪ್ತವಾಗಿರುವದೆಂಬ ಭಾವನೆಯು ಅವಳಿಗಾಯಿತು. ತನಗಾಗಿ ತನ್ನ ಮನೆಗೆ ಬಂದಿರುವ ತನ್ನ ಪ್ರಿಯ ಪತ್ನಿಗೆ ಯಾರಿಂದಲೂ ಕೊರತೆಯಾಗಬಾರದೆಂದು ದಿವಾಕರನು ಹೆಂಡತಿಯ ಇಚ್ಛಾನುವರ್ತಿಯಾಗಿ ನಡೆದರೆ ಅವನು ಹೀನಸತ್ವನೆಂದು ಅವಳು ತಿಳುಕೊಂಡಳು. ಹೆಂಡತಿಯ ಅಧಿಕಾರ ಮರ್ಯಾದೆಯನ್ನು ಅವಳೂ ಮೆಲ್ಲಮೆಲ್ಲನೆ ಉಲ್ಲಂಘಿಸಿದಳು. ಪ್ರೀತಿಯುತನಾದ ಪತಿಗೆ ಅದೆಲ್ಲ ಮೊದಲು ಮೊದಲು ವಿನೋದವೇ ಆಗಿ ತೋರಿತು. ಸತಿ-ಮು ಬೇಡವೆಂದರೂ ನೂರು ರೂಪಾಯಿಗಳನ್ನು ಕೊಟ್ಟು ಪ್ರೇಮವಲ್ಲರಿಯು ಒಂದು ಮಂಗನನ್ನು ಕೊಂಡಳು. ‘ಮಂಗ ಮಂಗಗಳಿಗೆ ಗಂಟು’ ಎಂದು ನಕ್ಕು ಪತಿಯು ಸುಮ್ಮನಿದ್ದನು. ಗಂಡನಿಗಿಂತ ತನಗೆ ಮೊದಲು ಊಟಕ್ಕೆ ಬಡಿಸಲಿಲ್ಲೆಂದು ಸಿಟ್ಟಾಗಿ ಅವಳು ಅಡಿಗೆಯವನನ್ನು ಹೊರಗೆ ಹಾಕಿದಳು. ಹೋಗಲೆಂದನವನು ದಿವಾಕರನೆಂದರೆ ತನಗೆ ಅಂಕಿತವಾಗಿರುವದೊಂದು ಪ್ರಾಣಿಯೆಂದು ನಿಶ್ಚಿತವಾದ ಕಲ್ಪನೆಯಾದ ಬಳಿಕ ಪ್ರೇಮವಲ್ಲರಿಯು ನಿಮ್ಮ ಸ್ವಾತಂತ್ರ್ಯವನ್ನೂ ಪತಿಯ ಸ್ವಾತಂತ್ರ್ಯವನ್ನೂ ತನ್ನ ವಶದಲ್ಲಿಯೇ ಇಟ್ಟುಕೊಂಡು ಮನೆಯನ್ನು ಆಳಲಾರಂಭಿಸಿದಳು.

ಬರಬರುತ್ತೆ ತನ್ನ ಸುಖದಲ್ಲಿ ಕೊರತೆಯಾಗಲಾರಂಭಿಸಿತೆಂದು ದಿವಾಕರನಿಗೆ ಕಂಡುಬಂದಿತು, ತನ್ನೆಡೆಗೆ ಸುಖವು ಬಾರದಿದ್ದರೆ ತಾನೇ ಸುಖವಿದ್ದಲ್ಲಿಗೆ ಹೋದರಾಯಿತೆಂದು ಹೇಳಿ ಅವನು ಸಮಾಧಾನ ಹಚ್ಚಿಕೊಳ್ಳುವನು. ಆದರೇನು? ಹೆಂಡತಿಯೊಡನೆ ಕುಳಿತು ನಾಲ್ಕು ವಿನೋದದ ಮಾತುಗಳನ್ನಾಡುವೆನೆಂದರೆ ಅವಳು ಅವನಿಗೆ ವಿಶೇಷವಾದ ಆದರವನ್ನು ತೋರಿಸದಾದಳು. “ಪ್ರೇಮವಲ್ಲರಿ, ಪಿಯಾನೋ ಪೇಟಿಯನ್ನು ತೆಗೆದು ತುಸು ಹಾಡಬಾರದೇ!” ಎಂದು ಕೇಳಿದರೆ ” ನಾನೊಲ್ಲೆ!” ಎಂದು ಜಂಬ ಹೇಳುತ್ತಿರುವಿರಿ. ಸುಮ್ಮನೆ ಪುಸ್ತಕವನ್ನೋದಿರಿ ಎಂದು ಅವಳು ಹೇಳುವಳು. “ವಲ್ಲರಿ, ನೀನೇ ಚಹ ಮಾಡಬಾರದೆ? ಅಡಿಗೆಯವಳು ನಿಸ್ಸಾರವಾದ ಚಹ ಮಾಡಿರುವಳು” ಎಂದು ಅವನು ಕೇಳಿಕೊಂಡರೆ “ನಾನೇನು ದಾಸಿಯಲ್ಲ” ಎಂಬ ಅಭದ್ರವಾದ ಉತ್ತರವು. ಒಂದು ದಿನವಂತೂ ಪ್ರೇಮವಲ್ಲರಿಯು ಗಂಡನನ್ನು ಕೇಳದ ತಾನೋರ್ವಳೇ ನಾಟಕವನ್ನು ನೋಡಲಿಕ್ಕೆ ಹೊರಟು ಹೋದಳು.

ಮರುದಿವಸ ಮಧ್ಯಾಹ್ನದ ಭೋಜನವಾದ ಬಳಿಕ ಪ್ರೇಮವಲ್ಲರೀ ಬಾಯಿಸಾಹೇಬರವರು ಒಯ್ಯಾರದ ಪೋಷಾಕು ಮಾಡಿಕೊಂಡು ಇನ್ನು ಯುರೋಪಿಯನ್ ಮಡಮ್ಮನಂತೆ ಪೇಟೆಗೆ ಜೀನಸುಗಳನ್ನು ತರಲಿಕ್ಕೆ ಹೊರಡತಕ್ಕವರು. ಅವರು ತಮ್ಮ ಸ್ವಂತ ರಥದ ಸಾರಥಿಯನ್ನು ಕೂಗಿ ರಥ ಸಿದ್ದ ಮಾಡೆಂದು ಆಜ್ಞಾಪಿಸಿದರು. ಆದರೆ ಸಾರಥಿಯ ಉಲುವೇ ಇಲ್ಲ. ಸಿಟ್ಟಾಗಿ ರಥವಿರುವ ಸ್ಥಳಕ್ಕೆ ಹೋಗಿ ನೋಡಿದರು. ಅಲ್ಲಿ ರಥವೂ ಇಲ್ಲ; ಕುದುರೆಗಳೂ ಇಲ್ಲ. ಕಡು ಕೋಪದಿಂದ ಬೂಟುಗಾಲಪ್ಪಳಿಸುತ್ತೆ ಅಮ್ಮನವರ ಮೆರವಣಿಗೆಯು ರಾಯರಿದ್ದಲ್ಲಿಗೆ ಬಂದಿತು.

“ಪತಿರಾಜ! ನನ್ನ ರಥ – ಕುದುರೆಗಳೆಲ್ಲಿ? ಪ್ರಾತಃಕಾಲದಲ್ಲಿಯೇ ನೀವು ಅವುಗಳನ್ನು ಎಲ್ಲಿಗೋ ಕಳಿಸಿದಿರಂತೆ! ನನ್ನ ರಥದ ಗೊಡವೆಗೆ ಹೋಗುವ ಪ್ರಯೋಜನವು ನಿಮಗೇನಿತ್ತು?” ಎಂದು ಕ್ರುದ್ಧಳಾದಂತೆ ನಟಿಸಿ ಪ್ರೇಮವಲ್ಲರಿಯು ಗಂಡನನ್ನು ಕುರಿತು ಪ್ರಶ್ನೆ ಮಾಡಿದಳು.

“ನಿಮ್ಮ ರಥವೇ? ಅದನ್ನು ನಾನು ಮಾರಿಬಿಟ್ಟೆನು!?” ಎಂದು ತನ್ನ ಮುಖದಲ್ಲಿ ಯಾವ ಪ್ರಕಾರದ ವಿಕಾರವನ್ನಾದರೂ ವ್ಯಕ್ತಪಡಿಸದೆ ದಿವಾಕರನು ಬಹು ಶಾಂತನಾಗಿ ಹೇಳಿದನು.

“ಏನು? ನನ್ನ ರಥವನ್ನು ನೀವು ಮಾರಿದಿರಾ?” ಎಂದು ಆ ಹೆಂಡತಿಯು ಸಂತಾಪಾತಿಶಯದಿಂದ ಗಂಡನನ್ನು ಬಡಿಯಹೋದವಳಂತೆ ಉದ್ಗಾರ ತೆಗೆದಳು.

“ಮಾರಿದೆನು; ಅದರಲ್ಲೇನಾಯಿತು? ಕೆಲಸಬಿದ್ದಾಗ ನೀವು ನನ್ನ ರಥದಲ್ಲಿ ಕುಳಿತುಕೊಂಡು ಹೋಗಬಹುದು.”

“ನನ್ನ ಕೆಲಸದ ಪಂಚಾಯತಿ ಮಾಡಬೇಡಿರಿ. ನನ್ನ ರಥವನ್ನು ಮಾರಲಿಕ್ಕೆ ನಿಮಗೆ, ಅಧಿಕಾರವೇನು?”

ವಿಚಾರವಂತನಾದ ದಿವಾಕರರಾಯನು ಹೆಂಡತಿಯ ಮೂರ್ಖತನವನ್ನು ಕಂಡು ನಕ್ಕು “ಪ್ರಿಯೆ, ನನಗೆ ಅಧಿಕಾರವಿತ್ತೆಂದೇ ನಾನು ಆ ರಥವನ್ನು ಮಾರಿದೆನು. ಬೇಕಾದರೆ ನೀನು ವಕೀಲರನ್ನು ಕೇಳಿಕೊಂಡು ಬಾ!” ಎಂದು ಕಿಂಚಿತ್ತಾದರೂ ವ್ಯಗ್ರನಾಗದೆ ನುಡಿದನು.

“ಕೇಳುವ ಪ್ರಸಂಗ ಬಂದಾಗ ಕೇಳುವನಂತೆ! ಆದರೆ ಈಗ ರಥವನ್ನು ಮಾರುವಂಥಾದ್ದೇನಾಗಿತ್ತು?”

“ಮಾರುವಂಥದೇನೂ ಆಗಿಲ್ಲ. ದೇವರ ಕೃಪೆಯಿಂದ ಇನ್ನೂ ಹತ್ತು ರಥಗಳನ್ನು ಕೊಳ್ಳಬಹುದು. ಸದ್ಯಕ್ಕೆ ಈ ರಥವನ್ನು ನಾನು ನಿನ್ನ ಹಿತಕ್ಕಾಗಿ ಮಾರಿದೆನು. ಸಮಯಪಸಮಯಗಳ ವಿಚಾರವನ್ನು ಮಾಡದೆ, ಹೆಂಡತಿಯಾದ ನೀನು ನನ್ನ ಆಜ್ಞೆಯನ್ನು ಕೇಳದೆ ರಥದಲ್ಲಿ ಕುಳಿತು ನಿನ್ನೆ ನಾಟಕಕ್ಕೆ ಹೋದದ್ದು ನನಗೆ ರುಚಿಸಲಿಲ್ಲ. ವಲ್ಲರೀ, ಸುಶಿಕ್ಷಿತ ಆದ ನಿನಗೆ ನಾನು ಕೊಟ್ಟ ಸ್ವಾತಂತ್ರ್ಯದ ಉಪಭೋಗವನ್ನು ಮಾಡಲು ಬರಲಿಲ್ಲ. ಕೆಲವು ಮಾತಿನ ಅನುಭವವು ನಿನಗೆ ಚನ್ನಾಗಿ ಬರುವವರೆಗೆ ನಿನ್ನ ಸ್ವಾತಂತ್ರ್ಯದಲ್ಲಿಯ ಅನೇಕಾಂಶಗಳನ್ನು ಸೆಳಕೊಳ್ಳುವ ವಿಚಾರದಲ್ಲಿ ನಾನಿದ್ದೇನೆ.”

ಪ್ರೇಮವಲ್ಲರಿಯು ಹೆಮ್ಮೆಯಿಂದ ಸೆಟೆದು ನಿಂತು “ಓಹೋ! ಬಾಳ ಗಂಗಾಧರ ಟಿಳಕರೇ ನೀವು ! ನನ್ನನ್ನು ಪ್ರೀತಿಸುತ್ತೇವೆಂದು ಬಾಯಿಯಿಂದ ಒಣ ಮಾತುಗಳನ್ನಾಡುವಿರಿ. ನಿಮ್ಮ ಕೃತಿಗಳನ್ನು ನೋಡಲಾಗಿ ಅವು ನಿಃಸಂದೇಹವಾಗಿ ವಿಪರೀತವಾಗಿವೆ. ನಿಮ್ಮಂಥ ಹುಳುಕುಬುದ್ದಿಯವರ ವಿಚಾರಗಳಿಂದ ಹಾನಿಯೇ ಹೊರತಾಗಿ ಸುಪರಿಣಾಮವಾಗಲಾರದು. ನೀವು – ನನ್ನಿಂದ ಬೇರೆ ಇರಬೇಕಾಗುವದು!” ಎಂದು ನುಡಿದು ಅವಳು ತನ್ನ ವಕ್ತೃತ್ವವನ್ನು ಪ್ರಕಟಗೊಳಿಸಿದಳು.

“ಸುಮ್ಮನಿರು ವಲ್ಲರಿ! ಇಂಥ ಆಪ್ರಶಸ್ತವಾದ ಅಲಂಕಾರಿಕ ಭಾಷೆಯು ನನಗೆ ಸೇರುವದಿಲ್ಲ. ನಾನು ಈ ಮನೆಯ ಸ್ವಾಮಿಯು. ಇಲ್ಲಿಯ ಸಕಲ ವಸ್ತುಗಳ ವಿನಿಯೋಗವನ್ನು ನಾನು ನನ್ನ ಇಚ್ಛೆಗೆ ಬಂದಂತೆ ಮಾಡಬಲ್ಲೆನು. ಹಿಂದೂ ಧರ್ಮಶಾಸ್ತ್ರದ ಮೇರೆಗೆ ಹೆಂಡತಿಯಾದ ನಿನಗೆ ಇಲ್ಲಿ ಯಾವ ಪ್ರಕಾರದ ಸ್ವಾತಂತ್ರವೂ ಇಲ್ಲ.?” ಎಂದು ದಿವಾಕರನು ಗದರಿಸಿ ನುಡಿದನು.

ಕ್ರೋಧಾತಿಶಯದಿಂದ ಪ್ರೇಮವಲ್ಲರಿಯ ಮುಖವು ಕೆಂಪಗೆ ಕೆಂಜಗವಾಯಿತು. ಶಿರ ಬಿಗಿದು ಒತ್ತಾಯದ ಕಂಬನಿಗಳು ಉದುರಿದವು. ಮತ್ತೊಂದು ಮಾತಾಡದೆ ಅವಳು ರಭಸದಿಂದ ಹೊರಬಿದ್ದು ಬಂದು ತನ್ನ – ಕೋಣೆಗೆ ಹೋದಳು, ಕುರ್ಚಿಯ ಮೇಲೆ ಕುಳಿತು ಸಮಾಧಾನವಾಗಲಿಲ್ಲ. ಎದ್ದು ಮಂಚದ ಮೇಲಿನ ಹಾಸಿಗೆಯನ್ನುರುಳಿಸಿ ಅವಳು ಬಿದ್ದು ಕೊಂಡಳು. ಆದರೂ ಸಮಾಧಾನವಿಲ್ಲ. ಪತಿಯು ಹೀಗೇಕೆ ತನ್ನ ವಿಷಯವಾಗಿ ದ್ರೋಹ ಮಾಡಿದನೆಂಬದು ಅವಳಿಗೆ ಚನ್ನಾಗಿ ತಿಳಿಯಲಿಲ್ಲ. ಬಿಕ್ಕಿ ಬಿಕ್ಕಿಸಿ ಅತ್ತಳು. ಆದರಿಂದ ಜೀವಕ್ಕೆ ತುಸು ಸಮಾಧಾನವೆನಿಸಿದರೂ ತನ್ನ ಸ್ವಾತಂತ್ರ್ಯಕ್ಕೆ ಹೀನತೆ ಬಂದಿತಲ್ಲಾ ಎಂಬ ವ್ಯಸನವು ಅವಳನ್ನು ಅಧಿಕವಾಗಿ ಬಾಧಿಸಿತು. “ನಾನು ಹೆಂಗಸಾಗಿದ್ದೆಯೇ ತಪ್ಪೋ, ಅವನು ಪುರುಷನಾಗಿರುವನೆಂಬ ಗರ್ವವು ಹೆಚ್ಚಾಯಿತೋ?” ಎಂದು ನುಡಿದು ಪ್ರೇಮವಲ್ಲರಿಯು ತನ್ನ ದೈವವನ್ನು ನಿಂದಿಸಿದಳು. ಮತ್ತೂ ಅವಳ ಕಣ್ಣಿಗೆ ನೀರು ಬಂದಿತು ; ಮತ್ತಿಷ್ಟು ಸಮಾಧಾನವಾಯಿತು. “ಎಂದಿಲ್ಲದೆ ಅವರು ಹೀಗೇಕೆ ಇಂದು ಮಾಡಿದ್ದಾರು? ನನ್ನಲ್ಲಿಂತಾದರೂ ದೋಷವೇನು ? ಮಿಸ್ ಸೋರಾಬಜೀ, ಮಿಸೆಸ್ ಫರ್ನಾಂಡೀಜ ಮುಂತಾದ ಸಖಿಯರು ನಾಟಕಕ್ಕೆ ಹೋಗೋಣೆಂದು ಕ್ಲಪ್ತಿಯನ್ನು ತೆಗೆದದ್ದರಿಂದ ಹೋದೆನು. ಹೋದರೇನಾಯಿತು ? ಅವರ ಕಣ್ಣುಗಳನ್ನು ಬೇರೆ ನಾನು ತೆಗೆದು ಕೊಂಡು ಹೋಗಿ ಅವುಗಳಲ್ಲಿ ಜಾಗರಣದ ಪೀಡೆಯನ್ನು ಹಾಕಲಿಲ್ಲವಷ್ಟೇ?” ಎಂದು ತನ್ನೊಳಗೆ ತಾನೇ ಪ್ರಶ್ನೆ ಮಾಡಿದಳು. ಮತ್ತೇನೋ ಒಂದು ವಿಚಾರವು ಹುಟ್ಟಿ ಅವಳು ಲಜ್ಜಾಕ್ರಾಂತಳಾಗಿ ನಕ್ಕಳು. “ಅಂದರೇನಾಯಿತು? ಒಂದು ದಿವಸ ನಾಟಕಕ್ಕೆ ಹೋಗದಷ್ಟು ಪರಾಧೀನತೆಯೇನು?” ಎಂದು ವಾದಿಸಿದಳು, ಹೊರಗೆ ಬಂದು ನಡುಮನೆಯಲ್ಲಿ ವಿಮನಸ್ಕಳಾಗಿ ಅಡ್ಡಾಡಿದಳು. ಅಲ್ಲಿಯೂ ಸೊಗಸಾಗಲಿಲ್ಲ. ಮತ್ತೆ ಬಂದು ಹಾಸಿಗೆಯ ಮೇಲೆ ಶಾಲು ಮುಸುಗಿಟ್ಟು ಕೊಂಡು ಮಲಗಿದಳು. ಸಮಾಧಾನವೆಲ್ಲಿ! ವಿಷದ ಗಾಳಿ ಬೀಸುತ್ತಿರುವದೇನು ಈ ದಿವಸ? ಎಂದು ಅವಳು ಮುಸುಗು ತೆರೆದು ಗಾಳೀ ಹಾಕಿಕೊಂಡಳು.” ಅವರು ನನ್ನನ್ನು ಸಮಾಧಾನಗೊಳಿಸಲು ಇಲ್ಲಿ ಬಂದಾದರೂ ಬರಲಿ! ಹೇಗೆ ಮಾಡುವೆನೋ ತಿಳಿದೀತು!?” ಎಂದು ಚಿಂತಿಸಿ ಪತಿಯು ಬಂದದ್ದೇ ಆದರೆ ಕೋಪನಿರಾಕರಣದ ಕಟುವಚನಗಳ ಸಮ್ಮೇಲನವನ್ನು ಹೇಗೆ ಸಾಧಿಸತಕ್ಕದ್ದೆಂಬ ವಿಚಾರದಲ್ಲಿ ತೊಡಗಿದಳು. ಆದರೇನು? ಅವಳು ಯೋಚಿಸಿದಂತೆ ಪತಿಯು ಬಂದು ತಾನೊಡ್ಡಿದ ಬಲೆಯಲ್ಲಿ ಬಿದ್ದರೆ ಅದೆಲ್ಲ ಸರಿಯಷ್ಟೆ? ಅವನು ಬರಲೇ ಇಲ್ಲ. ಅರ್ಧ ತಾಸು, ತಾಸು, ಎರಡು ತಾಸು ಹಾದೀ ನೋಡಿದರೂ ಆ ಧೂರ್ತನು ಅತ್ತ ಹಣೆಯಿಕ್ಕಿ ನೋಡಲಿಲ್ಲ. ಆ ಕೋಪನೆಗೆ ಇಮ್ಮಡಿಯಾದ ಸಂತಾಪವಾಯಿತು. ಸ್ತ್ರೀಯರ ಬ್ರಹ್ಮಾಸ್ತ್ರವೇ ಪ್ರಯೋಜನವಿಲ್ಲದೆ ಹಗೆಯೇ ಉಳಿಯಿತು, ಕಡೆಗೆ ನಿರಾಶೆಯಿಂದ ಅವಳು ಚನ್ನಾಗಿ ಮುಸುಗಿಟ್ಟುಕೊಂಡು ಮಲಗಿಬಿಟ್ಟಳು. ಕೆಲಹೊತ್ತಿನ ಮೇಲೆ ಅನ್ನಪೂರ್ಣಾಬಾಯಿಯು (ಅಡಿಗೆಯುವಳು) ಪ್ರೇಮವಲ್ಲರಿಯು ಮಲಗಿದ್ದ ಸ್ಥಳಕ್ಕೆ ಬಂದು “ಬಾಯಿಸಾಹೇಬರೆ, ಭೋಜನಕ್ಕೆ ದಯ ಮಾಡುವದಿಲ್ಲವೆ?” ಎಂದು ಕೇಳಿದಳು.

“ಅವರ ಭೋಜನವಾಯಿತೇನು?” ಎಂದು ಪ್ರೇಮವಲ್ಲರಿಯು ಬಹು ದೀನಸ್ವರದಲ್ಲಿ ಕೇಳಿದಳು.

“ರಾಯರ ಗೊಡವೆ ನಿಮಗೇಕೆ? ನೀವು ನಿಮ್ಮ ಭೋಜನವನ್ನು ತೀರಿಸಿಕೊಂಡರಲ್ಲವೆ? ಎರಡು ತಾಸು ರಾತ್ರಿಯಾಗಿ ಹೋಯಿತು!”

“ಪತಿಗಳಾದವರ ಅಧಿಕಾರವು ಅವರಿಗೆ ಸಲ್ಲಲಿ! ಅವರ ಊಟ ತೀರಿಹೋದಮೇಲೆ ನಾನು ಉಣ್ಣುವೆವಂತೆ!” ಎಂದು ಆಜ್ಞಾಧಾರಕಳಾದ ಆ ಪತ್ನಿಯು ಅಕ್ಕಸದಿಂದ ನುಡಿದಳು.

“ರಾಯರ ಹಾದಿಯನ್ನು ನೀವು ನೋಡಬೇಕಾಗಿಲ್ಲ. ನಿಮ್ಮ ಅಡಿಗೆ ಬೇರೆಯಾಗಿದೆ, ರಾಯರ ಅಡಿಗೆ ಬೇರೆಯಾಗಿದೆ. ರಾಯರು ಮೂರು ತಾಸು ರಾತ್ರಿಯ ಮೇಲೆ ಮನೆಗೆ ಬರುವರಂತೆ, ಇಂದೇಕೊ ಕಾರ್ಯಗಳು ವಿಪರೀತವಾಗಿ ನಡೆದಿರುತ್ತವೆ!” ಎಂದು ಅನ್ನಪೂರ್ಣೆಯು ನುಡಿದಳು.

“ಅನ್ನ ಪೂರ್‍ಣ ಬಾಯಿ, ನನ್ನ ಅಡಿಗೆಯೇ ಬೇರೆಯಾಗಿದ್ದ ಪಕ್ಷದಲ್ಲಿ ಅದನ್ನು ನಾನು ಬೇಕಾದಾಗ ಉಣ್ಣುವೆನಂತೆ! ಮನೆಯ ಯಜಮಾನರ ಊಟವಾದ ಬಳಿಕ ನಿಮ್ಮ ಫಲಾಹಾರದೊಂದಿಗೆ ನಾನು ಊಟಕ್ಕೆ ಬರುವೆನು, ಈಗ ನನಗೆ ತಲೆ ಸೂಲೆ ಬಹಳಾಗಿದೆ; ಸ್ವಲ್ಪ ಚಹ ಮಾಡಿ ತನ್ನಿರಿ” ರಾತ್ರಿಯ ಹತ್ತು ಗಂಟೆಗೆ ಮತ್ತೆ ಅನ್ನ ಪೂರ್ಣಾಬಾಯಿಯು ತನ್ನ ಯಜಮಾನತಿಯನ್ನು ಊಟಕ್ಕೆ ಎಬ್ಬಿಸಿದಳು. ಪ್ರೇಮವಲ್ಲರಿಯು ಅನಿರ್ವಾಹಕ್ಕಾಗಿ – ಎದ್ದು ಭೋಜನಶಾಲೆಗೆ ಬಂದಳು. ಹಾಗೂ ಹೀಗೂ ಕೈಯಂಜಲ ಬಾಯಂಜಲ ಮಾಡಿ ಅವಳು ಕೈದೊಳೆದು ಮಂಚಕ್ಕೆ ಬಂದಳು. ಎಷ್ಟಾದರೂ ನವತರುಣಿಯೇ ಅವಳು! ತಾಂಬೂಲ ಸಮಾರಂಭಕ್ಕೆ ಪತಿಯು ಬಳಿಯಲ್ಲಿಲ್ಲವಾದ್ದರಿಂದ ಅದು ಅವಳಿಗೆ ಸೊಗಸಾಗಲಿಲ್ಲ. ಉದ್ದಡ್ಡಗಲವಾಗಿರುವ ಆ ಪಟ್ಟಮಂಚದ ಮೇಲೆ ತಾನೋರ್ವಳೇ ಮಲಗಿದ ಆ ತರುಣಿಗೆ ಭಣಭಣವಾಯಿತು. ಪತಿಗೆ ಶರಣು ಹೋಗಿ ಇಂದು ತನ್ನ ಮೇಲೆ ಇಷ್ಟೇಕೆ ಅವಕೃಪೆಯೆಂದು ಕೇಳಬೇಕೆಂದು ಅವಳೊಮ್ಮೆ ಆಲೋಚಿಸಿದಳು. ಆದರೆ ಹಾಗೆ ಮಾಡುವದು ಸ್ವಾಭಿಮಾನಕ್ಕೆ ಹಾನಿಯೆಂದು ಆಹಂಕಾರವು ಉದ್ರೇಕದಿಂದ ಬೋಧಿಸಿತು. ಆ ಮಗ್ಗಲೊಮ್ಮೆ ಈ ಮಗ್ಗಲೊಮ್ಮೆ ಹಾಸಿಗೆಯ ಮೇಲೆ ಹೊರಳಾಡಿ ಆ ಚಂಚಲೆಯು ಬೇಸತ್ತು ಹೋದಳು. ಏನು ಮಾಡಿದರೂ ಕಣ್ಣಿಗೆ ಕಣ್ಣು ಹೆತ್ತಲೊಲ್ಲದು. ಮೆಲ್ಲನೆ ಎದ್ದು ಅವಳು ಅನ್ನಪೂರ್ಣೆಯಿದ್ದ ನಡುಮನೆಗೆ ಬಂದಳು.

ಅಷ್ಟು ರಾತ್ರಿಯಾಗಿದ್ದರೂ ಅನ್ನಪೂರ್ಣಾ ಬಾಯಿಯು ದೀಪದ ಬೆಳಕಿಗೆ ಕುಳಿತು ವಾಣೀವಿಲಾಸ ಮಹಾಭಾರತದ ಆದಿಪರ್ವದಲ್ಲಿ ಕೆಲವೊಂದು ಪ್ರಕರಣವನ್ನು ಓದುತ್ತ ಕುಳಿತಿದ್ದಳು. ಅಡಿಗೆಯವಳೆಂದರೆ ಅನ್ನಪೂರ್ಣೆಯು ಕುಲಹೀನೆಯಲ್ಲ. ಸಂಭಾವಿತನಾದ ಸದ್ಗೃಹಸ್ಥನ ಹೆಂಡತಿಯಾಗಿದ್ದಳವಳು. ಅವಳ ಪತಿಗೆ ತಿಂಗಳಾ ನೂರು ರೂಪಾಯಿಗಳ ಸಂಬಳವಿದ್ದರೂ ಆತ್ತ ವ್ಯಯನಾದ (ಕನ್ನಡ ಐದನೆಯ ಪುಸ್ತಕ ನೋಡಿರಿ.) ಆ ತರುಣ ಗೃಹಸ್ಥನ ಬಳಿಯಲ್ಲಿ ಸಂಚಿತಾರ್ಥವೇನೂ ಇಲ್ಲ. ಏರತಕ್ಕವನಾದ ಆ ಮನುಷ್ಯನು ಮುಂದೇನು ಸಂಚಯಮಾಡುತ್ತಿದ್ದನೋ ಬಿಡುತ್ತಿದ್ದನೋ, ಆಕಸ್ಮಾತಾಗಿ ವಿಷಮ ಜ್ವರದಿಂದ ತೀರಿಕೊಂಡು ಹೆಂಡತಿಯನ್ನು ಗತಿಗೇಡಿಯನ್ನಾಗಿ ಮಾಡಿ ಕೂಡಿಸಿದ್ದನು. ಅನ್ನಪೂರ್ಣೆಯು ಶಾಂತ ಸ್ವಭಾವದವಳೂ ಸುಶಿಕ್ಷಿತಳೂ ಅಲ್ಪ ಸಂತೋಷದವಳೂ ಆಗಿದ್ದರಿಂದ ಆ ಸುಶೀಲೆಯು ದಿವಾಕರರಾಯನಂಥವನಲ್ಲಿ ಆಶ್ರಯವನ್ನು ಹೊಂದಿ ದೇವರು ಇಟ್ಟಂತೆ ಇದ್ದು ಸಮಾಧಾನದಿಂದಿದ್ದಳು. ಪ್ರೇಮವಲ್ಲರಿಯು ಹಾಗೆ ಆಕಸ್ಮಾತ್ತಾಗಿ ತನ್ನೆಡೆಗೆ ಬರುವದನ್ನು ಕಂಡು ಅನ್ನಪೂರ್ಣೆಯು ಚಟ್ಟನೆ ಎದ್ದು ನಿಂತಳು.

“ಹಾಗೆ ಎದ್ದಿರೇಕೆ ? ಕುಳಿತುಕೊಳ್ಳಿರಿ” ಎಂದು ಪ್ರೇಮವಲ್ಲರಿಯು ಚಾಪೆಯ ಮೇಲೆ ಕುಳಿತುಕೊಂಡು ಅನ್ನಪೂರ್ಣೆಯನ್ನಾದರೂ ಕುಳ್ಳಿರಿಸಿಕೊಂಡು “ಅನ್ನ ಪೂರ್ಣಾಬಾಯಿ, ಇಂದೇಕೋ ನನ್ನ ಜೀವಕ್ಕೆ ಸಮಾಧಾನವಿಲ್ಲದ್ದರಿಂದ ನಿಮ್ಮೊಡನೆ ನಾಲ್ಕು ಮಾತಾಡಿ ಹೋಗಬೇಕೆಂದು ಬಂದಿದ್ದೇನೆ” ಎಂದು ವಿನಯದಿಂದ ನುಡಿದಳು.

“ಆಹುದು! ಇಂದೇಕೆ ನಿಮ್ಮಿಬ್ಬರ ನಡುವೆ ಇಂಥ ಚಮತ್ಕಾರವಾದ ರಸಕಸಿಯು? ಮಧ್ಯಾಹ್ನದಲ್ಲಿಯೇ ಕೇಳಬೇಕೆಂಬ ಮನಸ್ಸಾಗಿತ್ತು. ಆದರೆ ‘ಗಂಡ ಹೆಂಡರ ನಡುವಿನ ಜಗಳ ಜಗಳವಲ್ಲ, ‘ಪೆಂಡೆ ಮುತ್ತಿನ ಹಾರ ಪಾಶವಲ್ಲ’ ವೆಂದು ತಿಳಿದು ಸುಮ್ಮನಿದ್ದೆನು” ಎಂದು ಅನ್ನಪೂರ್ಣೆಯು ಕೆನ್ನೆಯಲ್ಲಿಯೇ ನಕ್ಕು ನುಡಿದಳು,

“ಏನು ಮಣ್ಣೋ! ಅವರಿಂದಲೇ ಕಾಲು ಕೆದರಿ ಜಗಳ ತೆಗಿಯೋಣಾಯಿತು. ಆದಿರಲಿ ಅನ್ನಪೂರ್ಣಾಬಾಯಿ, ಪತಿಯನ್ನು ಯಾವಾಗಲೂ ಸಂಪೂರ್ಣವಾದ ಸಂತೋಷದಲ್ಲಿಡುವದು ಹೆಂಡತಿಯ ಕೈಯಲ್ಲಿಯ ಮಾತಾಗಿರುವದೇನು?”

ಈ ಮಾತು ಕೇಳಿ ಅನ್ನಪೂರ್ಣೆಯ ಕಣ್ಣುಗಳಲ್ಲಿ ಅಶ್ರುಬಿಂದುಗಳೊತ್ತಿ ಬಂದವು. ಪತಿಯನ್ನು ಬೇಕಾದ ಹಾಗೆ ಸಂತೋಷಗೊಳಿಸಬಲ್ಲ ಜಾಣೆಯಾದ ಆ ಸುಶೀಲೆಯ ಗಂಡನು ಸದಾ ಸಂತುಷ್ಟನಾಗಿದ್ದ ಮಾತು ನೆನಪಾಗಿ ಅವಳಿಗೆ ವ್ಯಸನವಾಯಿತು. ಆದರೂ ಅವಳು ಬೇಗನೆ ಸಮಾಧಾನವನ್ನು ತಳೆದು ಕಣ್ಣೀರೊರಿಸಿಕೊಂಡು “ಇರಬಹುದು; ನಾನೇನು ಬಲ್ಲೆ? ಆದರೂ ಹೆಂಡತಿಯನ್ನು ಸದಾ ಸಂತೋಷದಲ್ಲಿಡುವೆನೆಂಬ ಪತಿಯ ಪ್ರಯತ್ನಗಳಾದರೂ ಸರ್ವಥಾ ಸಫಲವಾಗಿರುವವೇನು?” ಎಂದು ಆ ಚತುರೆಯಾದ ವಿಧವೆಯು ನಿಪುಣವಾದ ಪ್ರಶ್ನೆ ಮಾಡಿದಳು.

ಈ ಮಾತು ಪ್ರೇಮವಲ್ಲರಿಯ ಮನಸ್ಸಿಗೆ ಬಾಣ ಬಡಿದಂತೆ ನಟ್ಟಿತು. ಅವಳು ಇಲ್ಲದ ನಗೆ ತಾಳಿ “ನೀವು ಅವರ ಪಕ್ಷವನ್ನು ಹಿಡಿದು ಹೀಗೆ ಮಾತಾಡುವಿರಿ. ಅವರು ನನ್ನನ್ನು ಸಂತೋಷಗೊಳಿಸಲು ಪ್ರಯತ್ನ ಮಾಡುತ್ತಿರುವದು ಸರಿ, ಆದರೆ ಅವರ ಪ್ರಯತ್ನಗಳು ಸಫಲವಾಗಿಲ್ಲವೆಂದು ಹೇಗೆ ಹೇಳುವಿರಿ?” ಎಂದು ಆಢ್ಯತೆಯಿಂದ ಕೇಳಿದಳು.

“ಹೇಳಿದರೆ ಸಣ್ಣ ಬಾಯಲ್ಲಿ ದೊಡ್ಡ ತುತ್ತು ತೆಗೆದುಕೊಂಡಂತಾದೀತು! ಆದರೂ ಹೇಳುತ್ತೇನೆ. ರಾಯರು ತಮ್ಮ ಸಂಪತ್ತನ್ನೆಲ್ಲ ನಿಮಗೊಸ್ಕರವಾಗಿ ಕಾದಿಟ್ಟಿರುವರೋ ಎಂಬಂತೆ – ದುಡ್ಡಿನ ಮೊರೆಯನ್ನು ಯತ್ಕಿಂಚಿತ್ತಾದರೂ ನೋಡದೆ ನೀವು ಬೇಡಿ ಬೇಡಿದ್ದನ್ನೆಲ್ಲ ಹಿಡುಕೊಂಡು ನಿಂತಿರುವರು. ಪರದಾರ ಸೋದರರಾದ ಅವರಿಗೆ ಯಾರೂ ಹೆಸರಿಡುವಂತಿಲ್ಲ. ಇವೆರಡೂ ಮಾತುಗಳಲ್ಲಿ ನೀವು ವಾದಿಸಬಂದಲ್ಲಿ ನಾನು ಕೇಳಿದವಳಲ್ಲ. ಹೀಗಿದ್ದು ನಿಮ್ಮ ಸಂತೋಷಕ್ಕೇನು ಕಡಿಮೆಯಾಯಿತೆಂದು ನೀವು ಪತಿಯ ಆಜ್ಞೆಯನ್ನು ಅಪ್ಪಿ ತಪ್ಪಿ ಯಾದರೂ ಉಲ್ಲಂಘಿಸುವಿರಿ?”

“ನಿನ್ನೆ ನಾನು ನಾಟಕಕ್ಕೆ ಹೋಗಿದ್ದೊಂದೆಯೇ ಸರಿ. ಸಖೀಜನರ ಮನಸ್ಸು ಮುರಿಯಲರಿಯದೆ ಹೋದೆನು. ಏನಾಯಿತದರಲ್ಲಿ?”

“ನಾಟಕದ ಛಂದಕ್ಕಾಗಿ ಹೋದಿರಿ. ಹೆಚ್ಚು ಮಾತಾಡಿದ್ದಕ್ಕೆ ಕ್ಷಮಿಸಿರಿ. ಪತಿಯಾಜ್ಞೆಯನ್ನು ಮುರಿದು ಹೋದಿರಿ. ಇದರಲ್ಲಿ ಪತಿಯ ಸಂತೋಷಕ್ಕಿಂತಲೂ ನಿಮ್ಮ ಸಂತೋಷವು ಹೆಚ್ಚಾಗಿ ತೋರಿತೋ ಇಲ್ಲವೊ? ವಸ್ತುತಃ, ಶಾಸ್ತ್ರತಃ, ನಿಮ್ಮ ಒಡೆಯರೂ ಈ ಮನೆಯ ಸಂಪತ್ತಿನ ಒಡೆಯರೂ ಆದ ನಮ್ಮ ರಾಯರು, ನಿಮ್ಮ ಸಂತೋಷಕ್ಕೆ ವಿರುದ್ದವಾಗಿದ್ದಂಥದೊಂದು ಕೆಲಸ ಮಾಡಿ ತಾವು ಸಂತೋಷಪಟ್ಟಿರುವದನ್ನು ನೀವು ಎಂದಾದರೂ ಕಂಡಿರುವಿರೋ?”

ಅನ್ನಪೂರ್ಣೆಯು ಆಡಿದ ಮಾತುಗಳಲ್ಲಿ ಯಾವದನ್ನಾದರೂ ತೆಗೆದು ಹಾಕುವಂತೆ ಇದ್ದಿಲ್ಲ. ಪ್ರೇಮವಲ್ಲರಿಯು ನಿರುತ್ತರಳಾಗಿ ಹುಚ್ಚು ಹಿಡಿದವರಂತೆ ಕುಳಿತಳು. ಅವರು ನನ್ನಲ್ಲಿ ಹೆಚ್ಚಾದ ಪ್ರೇಮವನ್ನು ತಳೆದಿರುವರೆಂಬ ಮಾತಿನಲ್ಲಿ ತಿಲಮಾತ್ರವಾದರೂ ವ್ಯತ್ಯಾಸದ ದೋಷವು ನನಗೆ ತೋರಲೊಲ್ಲದು. ನನ್ನ ಅಭಿಲಾಷೆಗಳ ಪೂರ್ತಿಗಾಗಿ ಅವರು ತಮ್ಮ ದುಡ್ಡು ಸೂರೆ ಮಾಡುತ್ತಿರುವದಾದರೂ ನಿಜವೇ. ಇನ್ನು ನಾನಾದರೂ ಮಾಡಿದ ತಪ್ಪೇನು?” ಎಂದು ತನ್ನೊಳಗೆ ಚಿಂತಿಸುತ್ತಿರುವಾಗ ಅವಳ ವಿಚಾರಸರಣಿಯು ಅಲ್ಲಿಯೇ ನಿಂತಿತು. ನಾನಾದರೂ ಮಾಡಿದ ತಪ್ಪೇನು? ಎಂಬ ಪ್ರಶ್ನವನ್ನು ಅವಳು ತನ್ನ ಮನಸ್ಸಿಗೆ ಕೇಳಿದಾಗ ‘ನಿರ್‍ದೋಷಿ’ ಎಂಬ ಉತ್ತರ ಬರಲೊಲ್ಲದು.

“ಅನ್ನಪೂರ್ಣಾಬಾಯಿ, ಅವರಿಗೊಂದು ಮಾತಿನಿಂದ ಸಂತೋಷವಿಲ್ಲವೆಂದು ತಿಳಿಯಿರಿ, ಅದೇ ಮಾತಿನಿಂದ ನನಗೆ ಸಂತೋಷವಿದ್ದರೆ ಅದನ್ನು ನಾನೇಕೆ ಮಾಡಬಾರದು? ಮಾಡಿದರೆ ತಪ್ಪೇನು?” ಎಂದು ಪ್ರೇಮವಲ್ಲರಿಯು ವಿಚಾರ ಸಮ್ಮೂಢೆಯಾಗಿ ಕೇಳಿದಳು.

“ನೀವು ನಾಟಕಕ್ಕೆ ಹೋದ ಪ್ರಶ್ನವನ್ನೇ ತೆಗೆದುಕೊಳ್ಳೋಣ, ನೀವು ಹೋಗುವದರಿಂದ ರಾಯರಿಗೆ ಸಂತೋಷವೋ ಅಸಂತೋಷವೋ ನಮಗೆ ತಿಳಿದಿಲ್ಲವೆಂದು ಕಲ್ಪಿಸಿರಿ. ಅಂಥ ಸಮಯದಲ್ಲಿ ನಾಟಕಕ್ಕೆ ಹೋಗುವದು ಉಚಿತವೊ ಅನುಚಿತವೋ ಎಂಬುದನ್ನು ನಾವು ನೋಡಿಕೊಳ್ಳಬೇಕಲ್ಲವೆ? ಸದ ಸದ್ವಿವೇಕದಿಂದ ನೋಡಲಾಗಿ ಅದು ಅನುಚಿತವೆಂದು ಕಂಡಲ್ಲಿ ನಾಟಕಕ್ಕೆ ಹೋಗುವ ವಿಚಾರವನ್ನು ಬಿಟ್ಟೇಬಿಡಬೇಕಲ್ಲವೆ? ಏನು, ಇದಕ್ಕೂ ನಿಮ್ಮಲ್ಲಿ ವಾದವಿರುವದೊ?”

“ಇದಕ್ಕೇತರ ವಾದ ಅನ್ನ ಪೂರ್ಣಾಬಾಯಿ?”

“ಒಳಿತಾಗಿ ಮಾತಾಡಿದಿರಿ! ಇನ್ನು ನಾಟಕಕ್ಕೆ ಹೋದರೆ ಚಿಂತೆಯಿಲ್ಲವೆಂದು ವಿವೇಕವು ಹೇಳಿದ್ದಾದಲ್ಲಿ ಹೋಗಬಹುದು, ಅಡ್ಡಿ ಇಲ್ಲ.” ನಾಟಕಕ್ಕೆ ಹೋಗಬಹುದು, ಅಥವಾ ಹೋಗುವದು ಅವಶ್ಯವಾಗಿರುವದು” ಎಂದು ತೋರಿದ ಪ್ರಸಂಗದಲ್ಲಿ ಕೂಡ ನಿಮ್ಮ ಪತಿರಾಯರು ನಿಷ್ಕಾರಣವಾಗಿ ಆಗ್ರಹತೊಟ್ಟು ನಿಮಗೆ ಹೊಗಬೇಡವೆಂದು ಆಜ್ಞಾಪಿಸಿದರೆಂದು ಕಲ್ಪಿಸೋಣ. ಆಗ ನೀವು ಹೋಗುವವರೋ ಹೋಗದಿರುವವರೋ?” ಎಂಬದೊಂದು ದೊಡ್ಡ ಮುಂಡಿಗೆಯನ್ನು ಅನ್ನಪೂರ್ಣೆಯು ಪ್ರೇಮವಲ್ಲರಿಯ ಮುಂದೆ ಚಲ್ಲಿದಳು.

“ನಾನೇನು ಹೇಳಲಿ? ಹೋದರೆ ಏನಾಗುವದು?” ಎಂದು ಪ್ರೇಮವಲ್ಲರಿಯು ಮೂಢೆಯಂತೆ ಕೇಳಿದಳು.

“ನಿಮ್ಮ ಸಂತೋಷಕ್ಕಾಗಿ ನೀವು ಅನ್ಯರಿಗೆ ಅಸಂತೋಷವನ್ನು ಉಂಟುಮಾಡಿದರೂ ಚಿಂತೆಯಿಲ್ಲವೆನ್ನುವಿರಾ? ಆ ಅನ್ಯರೆಂದರೆ ಪ್ರತ್ಯಕ್ಷ ನಿಮ್ಮ ಪ್ರಾಣೇಶ್ವರರು. ನಿಮ್ಮ ಹಿತಕ್ಕಾಗಿಯೇ ತಾವು ಹುಟ್ಟಿರುವವರಂತೆ ವರ್ತಿಸಿ ನಿಮ್ಮ ಹಿತವಾದದ್ದು ಕಂಡು ತಾವು ಸಂತೋಷಪಡುತ್ತಿರುವ ಪ್ರಾಣೇಶ್ವರರು ಮತ್ತೆ!”

“ಅನ್ನಪೂರ್ಣಾಬಾಯಿ, ನಿಮ್ಮಲ್ಲಿ ಮೆಸ್ಮೆರಿಝಮ್‌ ಇಲ್ಲವೆ ಹಿಪ್ನಾಟಿಝುಮ್ ಎಂಬ ವಿದ್ಯೆ ಬೇರೆ ಇಲ್ಲವಷ್ಟೆ? ಏಕೋ ಈ ಸಮಯದಲ್ಲಿ ನೀವು ಅಂದದ್ದಕ್ಕೆ “ಹೂಂ” ಎನ್ನುವ ಬುದ್ದಿ ನನಗಾಗಿದೆ” ಎಂದು ಪ್ರೇಮವಲ್ಲರಿಯು ಬಹು ನಮ್ರಳಾಗಿ ನುಡಿದಳು.

ಅನ್ನಪೂರ್ಣೆಯು ನಕ್ಕು “ಎಲ್ಲಿಯ ಮೆಸ್ಮೆರಿಝಮ್, ಏನು ಕಥೆ! ನಿನ್ನಲ್ಲಿ ತಿಳುವಳಿಕೆ ಇದೆ ಎಂಬುದು ಸಿದ್ದಾಂತವಾಯಿತು ಸರಿ. ಅದಿರಲಿ ಅನ್ಯರಿಗೆ, ಅನ್ಯರಿಗೇಕೆ, ಪತಿರಾಯರಿಗೆ ಅಸಂತೋಷವನ್ನುಂಟು ಮಾಡಿ ನೀವು ನಿಮ್ಮ ಸಂತೋಷವನ್ನು ಸಾಧಿಸಿಕೊಳ್ಳುವದು ಆಯೋಗ್ಯವೆಂಬ ಮಾತಿಗೆ ನೀವು ಒಪ್ಪಿದಂತಾಯಿತಷ್ಟೆ?” ಎಂದು ಕೇಳಿದಳು.

“ನಮ್ಮ ಸಂತೋಷವಾಗುವ ಕೆಲಸದಲ್ಲಿ ಪತಿರಾಯರು ತಾನೇಕೆ ಅಸಂತೋಷನನ್ನು ಹುಟ್ಟಿಸಿಕೊಳ್ಳಬೇಕು?”

“ಅದು ಅವರ ವಿಚಾರವು. ನಿಮ್ಮ ಸಂತೋಷಕ್ಕಾಗಿ ಪತಿಗೆ ಆಸಂತೋಷವನ್ನುಂಟು ಮಾಡುವದು ನಿಮ್ಮ ಧರ್ಮವಲ್ಲವಷ್ಟೆ?”

“ಅಲ್ಲ” ಎಂದು ಪ್ರೇಮವಲ್ಲರಿಯು ಪ್ರಾಂಜಲಳಾಗಿ ಉತ್ತರವಿತ್ತಳು.

“ತೀರಿ ಹೋಯಿತು! ಜಗಳವಿನ್ನೆಲ್ಲಿ ಉಳಿಯಿತು?”

“ಅನ್ನಪೂರ್ಣಾ ಬಾಯಿ, ಈ ಜಗತ್ತಿನಲ್ಲಿ ಗಂಡ ಹೆಂಡರಿರ್ವರೂ ಸಮಾನಾಧಿಕಾರಿಗಳಲ್ಲವೆ? ನಾವೇ ಸೋತು ಪತಿಯ ಸಂತೋಷದ ಕೆಲಸಗಳನ್ನಷ್ಟು ಮಾಡುತ್ತಿರಬೇಕೆ?”

“ನಿಮ್ಮ ವಾದದಲ್ಲಿ ದೋಷವಿಲ್ಲ. ಆದರೆ ನಮ್ಮ ರಾಯರು ನಿಷ್ಕಾರಣವಾಗಿ ನಿಮ್ಮ ಸಂತೋಷದಲ್ಲಿ ಮಣ್ಣುಗಲಿಸಲು ಯತ್ನಿಸುವರೆಂದು ನೀವು ತಿಳಿದಿದ್ದರೆ ಅದು ತಪ್ಪು. ಯಾಕೆಂದರೆ ನಿಮಗೆ ಸಂತೋಷವಾಗಲೆಂದು ಹಗಲಿರಳು ಅವರು ಶ್ರಮಪಡುತ್ತಿರುವದನ್ನು ನೀವು ಅರಿತವರಾಗಿರುವಿರಿ, ವಿಚಾರ ತಿಳಿಯದೆ ನೀವೊಂದು ಮಾತು ಮಾತಾಡುತ್ತಿದ್ದರೆ ಬೇಡೆಂದು ಹೇಳಲು ಅವರಿಗೆ ಅಧಿಕಾರವಿರುವದೊ ಇಲ್ಲವೋ?”

“ನಾನು ಮಾಡಿದ್ದೊಂದು ಕೆಲಸವು ಆವಿಚಾರದ್ದೇ ಎಂದು ಹೇಗೆ ಹೇಳುವಿರಿ?”

“ಅದು ಬುದ್ದಿವಂತರ ಕೆಲಸವು, ನಿಮಗಿಂತಲೂ ರಾಯರು ಬುದ್ದಿವಂತರೆಂಬದಕ್ಕೆ ನಿಮಗೆ ಮಾನ್ಯವಾಗಿರುವ ಯುನಿವ್ಹರ್ಸಿಟಿಯೇ ಪ್ರಮಾಣವು. ನಿಮ್ಮ ಮನಸ್ಸೇ ಸಾಕ್ಷಿಯು, ತಮ್ಮ ಮನೆಯಲ್ಲಿ ನಡೆದಿರುವ ಕಾರ್ಯ್ರಮಗಳ ವಿಹಿತಾವಿಹಿತಗಳ ನಿರ್ಣಯವನ್ನು ರಾಯರೇ ಮಾಡತಕ್ಕವರಲ್ಲವೆ?”

“ಅಂದರೆ ನಾನೆಂದರೆ ಈ ಮನೆಯಲ್ಲಿ ಯಾತಕ್ಕೂ ಬಾರದವಳೆಂದು ನಿಮ್ಮಭಿಪ್ರಾಯವೆ?” ಎಂದು ಸಾಶಂಕಳಾಗಿ ಪ್ರೇಮವಲ್ಲರಿಯು ಕೇಳಿದಳು.

“ಯಾರು ಹಾಗೆ ಹೇಳುವರು ಬಾಯೀಸಾಹೇಬ ! ನೀವಾದರೂ ಈ ಮನೆಯಲ್ಲಿ ರಾಯರಿಗೆ ಸಮಾನರಾದ ಅಧಿಕಾರಿಗಳು, ನೀವು ರಾಯರಿಗೆ ಸಮಾನರಾದ ಅಧಿಕಾರಿಗಳೆಂದರೆ ರಾಯರ ಅಧಿಕಾರವನ್ನು ನೀವು ಕಸುಕೊಳ್ಳಲಾರಿರಿ ಎಂಬದನ್ನು ನೀವು ಮರೆಯಲಾರಿರಿ. ಈ ಮನೆಯಲ್ಲಿ ನಿಮಗೆ ಅಧಿಕಾರವು ಪ್ರಾಪ್ತವಾಗಿದ್ದರೆ ಅದರೊಡನೆ ಕೆಲವು ಕರ್ತವ್ಯಗಳಾದರೂ ನಿಮಗೆ ಬಿಡದವಾಗಿವೆ. ನಿರಂತರವಾಗಿ ಪತಿಗೆ ಸಂತೋಷವಾಗುವಂಥ ಕಲಸವನ್ನೆ ಮಾಡುತ್ತಿರುವದು ನಿಮ್ಮ ಕರ್ತವ್ಯವು. ಈ ಕರ್ತವ್ಯವೊಂದನ್ನು ಮಾಡಿದ ಮಾತ್ರದಿಂದಲೇ ಈ ಮನೆಯ ಸ್ವಾಮಿನಿಯೆಂಬ ಬಹುಮಾನದ ಪದವಿಯು ನಿಮಗೆ ಪ್ರಾಪ್ತವಾಗುವದು.”

“ಸರಿ! ಆದರೆ ನಾವು ಯಾವಾಗಲೂ ಪತಿಯು ಛಂದಾನುವರ್ತಿಗಳೇ ಆಗಿದ್ದು ಕೊಂಡರೆ ನಮ್ಮ ಸುಖದ ಬಗ್ಗೆ ವಿಚಾರ ಮಾಡಲು ನಮಗೆ ಅವಕಾಶವೇ ಉಳಿಯಲಿಕ್ಕಿಲ್ಲ.”

“ರಹಸ್ಯವೇನಿರುವದು ಈ ಮಾತಿನಲ್ಲಿಯೇ! ಸಮಾನಾಧಿಕಾರಿಗಳೀರ್ವರಿದ್ದಲ್ಲಿ ಅವರವರು ತಮ್ಮ ತಮ್ಮ ಅಧಿಕಾರದ ಮರ್ಯಾದೆಯನ್ನು ಕಾದು ಕೊಂಡಿರಬೇಕಾದರೆ ಒಬ್ಬರೊಬ್ಬರು ಒಬ್ಬರೊಬ್ಬರ ಮನೋವೃತ್ತಿಯಂತೆ ನಡೆಯಬೇಕು, ಇಲ್ಲಿಯೇ ನೋಡಿ! ನಮ್ಮ ರಾಯರು ಯಾವಾಗಲೂ ನಿಮ್ಮ ಹಿತವನ್ನೇ ಮಾಡುತ್ತಿದ್ದು ನಿಮಗಾದ ಸುಖವನ್ನು ಕಂಡು ತಾವು ಸುಖಿಸುತ್ತಿರುವರು. ನೀವಾದರೂ ಅದರಂತೆ ವರ್ತಿಸಿ ಅವರಿಗಾದ ಸುಖವನ್ನು ಕಂಡು ಸುಖಿಸುವೆನೆಂಬ ವಿಚಾರವನ್ನು ನೀವು ಮಾಡಿದರೆ ಹೇಗೆ ಬಂಗಾರದಂತಾಗುವದು ನೋಡಿರಿ! ನಿಮ್ಮ ಹಿತವನ್ನು ರಾಯರು ಪ್ರಯತ್ನ ಪೂರ್ವಕವಾಗಿ ಮಾಡುತ್ತಿರುವರು. ಇದರಿಂದ ನಿಮ್ಮ ಹಿತವು ಸಾಧಿಸಿತಷ್ಟೆ? ಅವರ ಹಿತವಾಗುವಂತೆ ನೀವು ಮಾಡಿದರೆ ಅನಾಯಾಸವಾಗಿ ಅವರ ಸುಖವು ಸಾಧಿಸುವದು. ಸ್ವಸುಖವನ್ನು ತಾವೇ ಸಾಧಿಸಿಕೊಳ್ಳುವದೂ ಕತ್ತಲೆಯಲ್ಲಿ ಕುಳಿತು ಮುಟುಮುಟನೆ ಉಂಡೆ ಅನ್ನ ರಸಗಳನ್ನು ತಿನ್ನುವದೂ ಒಂದೇ ಸರಿ. ಪದಾರ್ಥವು ಸವಿಯಾಗಿರಬಹುದು, ಆದರೆ ಅದರಲ್ಲಿ ಸ್ವಾರಸ್ಯವಿಲ್ಲ. ಈರ್ವರು ಚತುರೆಯರು ಅನ್ನೋನ್ಯರನ್ನು ಬೆರಗು ಮಾಡಬೇಕೆಂದು ಒಂದೊಂದು ಚಮತ್ಕಾರವಾದ ಪಕ್ವಾನ್ನದ ತಾಟುಗಳನ್ನು ಸಿದ್ಧಗೊಳಿಸಿ, ಈರ್ವರೂ ಇದಿರುಬದಿರಾಗಿ ಕುಳಿತು, ಇವಳು ತನ್ನ ತಾಟಿನಲ್ಲಿಯ ಪದಾರ್ಥಗಳನ್ನು ಅವಳ ತಾಟಿನಲ್ಲಿಯೂ ಅವಳು ತನ್ನ ಪದಾರ್ಥಗಳನ್ನು ಇವಳ ತಾಟಿನಲ್ಲಿಯೂ ಹಾಕಿ, ಒಬ್ಬರೊಬ್ಬರ ಕೌಶಲ್ಯವನ್ನೂ ಆದರವನ್ನೂ ಬಣ್ಣಿಸುತ್ತ ಹಾಸ್ಯ ವಿನೋದಯುತವಾದ ಮಾತುಗಳನ್ನಾಡುತ್ತ ಉಂಡರೆ ಅವರಿಬ್ಬರಿಗೂ ಎಷ್ಟು, ಸಂತೋಷ ? ಭೋಜನಕ್ಕಾದರೂ ಎಷ್ಟಾದರೂ ಸ್ವಾರಸ್ಯ ? ಹಾಗೆಯೇ ಪತಿಯು ಸತಿಯ ಸುಖವನ್ನೂ ಸತಿಯು ಪತಿಯ ಸುಖವನ್ನೂ ಮಾಡಲೆಣಿಸಿದರೆ ಇಬ್ಬರ ಸುಖಗಳೂ ಸಾಧಿಸುವವಲ್ಲದೆ ಅವರವರ ಸುಖಕ್ಕೆ ಬಗೆಬಗೆಯ ಸ್ವಾರಸ್ಯವಾದರೂ ಬರುವದು, ರಾಯರಿಗೆ ನೀವು ಮಾಡಿಕೊಟ್ಟ ತಾಂಬೂಲವನ್ನು ಸೇವಿಸಲು ಬಲು ಅಕ್ಕರತೆ! ಅವರು ಪ್ರೇಮದಿಂದ ನಿಮ್ಮ ತುರಬಿಗೆ ಒಂದು ಹಾರವನ್ನು ತೊಡಕಿಸಿದರೆಂದು ತಿಳಿಯಿರಿ. ಆ ಸೊಬಗು ಸ್ವರ್ಗದ ಪುಷ್ಪವೃಷ್ಟಿಯಿಂದಾದರೂ ಬರಬಲ್ಲದೆ?”

ಪ್ರೇಮವಲ್ಲರಿಯು ವಿನೋದವನ್ನು ತಾಳಿ ಯಥೇಚ್ಛವಾಗಿ ನಕ್ಕಳು. ಇಂದು ತನ್ನ ಜೀವಕ್ಕೆ ವ್ಯಸನವಾಗಿತ್ತೆಂಬ ಅರಿವನ್ನೇ ಅವಳು ಸಂಪೂರ್ಣವಾಗಿ ಮರೆತುಬಿಟ್ಟಳು. “ಅನ್ನಪೂರ್ಣಾಬಾಯಿ, ನೀವು ಒಳ್ಳೇ ರಸಿಕರು” ಎಂದು ವಲ್ಲರಿಯು ನುಡಿಯುವಷ್ಟರಲ್ಲಿಯೇ ಅನ್ನಪೂರ್ಣೆಯ ವೈಧವ್ಯದ ನೆನಪಾಗಿ ಅವಳ ಕಣ್ಣುಗಳಲ್ಲಿ ದುಃಖಾಶ್ರುಗಳೊತ್ತಿ ಬಂದವು. “ಅಕ್ಕಾ-ಇಂದಿನಿಂದ ನಾನು ನಿಮ್ಮನ್ನು ಆಕ್ಕನೆಂದೇ ಕರೆಯುವೆನು. – ಆಕ್ಕಾ, ನಿಮ್ಮಂಥ ಉತ್ತಮಳಾದ ಸ್ತ್ರೀಗೆ ಇಂಥ ದುರವಸ್ಥೆಯು ಪ್ರಾಪ್ತವಾಗಿರುವದನ್ನು ಕಂಡು ನನಗೆ ನಿಜವಾಗಿ ವ್ಯಥೆಯಾಗಿದೆ, ಏನು ಮಾಡಲಿ!”

ಧೀರೆಯಾದ ಅನ್ನಪೂರ್ಣೆಯು ದುಃಖದ ವಿಚಾರಗಳಿಗೆ ಈಡಾಗದೆ “ಬಾಯಿಯವರೆ, ಈ ಮಾತಿನಲ್ಲಿ ಯಾರು ಏನು ಮಾಡಬೇಕಾಗಿದೆ? ದೇವರು ಕರುಣಾಪೂರ್ಣವಾಗಿ ನನ್ನ ಉಡಿಯಲ್ಲಿ ಸುಖದ ಫಲವನ್ನೇ ನೀಡಿದ್ದನು. ಹತ್ತು ವರ್ಷದ ಮೇಲೆ ಅದೇ ಫಲವನ್ನು ಅವನೇಕೋ ಎತ್ತಿಕೊಂಡು ಹೋದನು. ನನ್ನ ಹಣೇ ಬರಹವು ಹಾಗಿರಲಿ, ದೇವರು ನಿಮ್ಮ ಉಡಿಯಲ್ಲಿಯಾದರೂ ಪರಮಸ್ಪೃಹಣೀಯವಾದ ಫಲವನ್ನು ನೀಡಿದ್ದಾನೆ. ಆದನು ಅನಾದರಿಸದೆ ಜೋಕೆಯಿಂದ ಅದರ ಸ್ವಾರಸ್ಯವನ್ನು ಸೇವಿಸುತ್ತ ನಡೆದರೆ ನಿಮಗೂ ನಿಮ್ಮ ಪತಿರಾಯರಿಗೂ ಕೂಡಿಯೇ ಮಿತಿ ಮೀರಿದ ಸುಖ; ಗಂಟು, ಹಾಕಿ ನಿಮ್ಮಿಬ್ಬರನ್ನು ಒತ್ತಟ್ಟಿಗಿರಿಸಿದ ಪರಮಾತ್ಮನಿಗಾದರೂ ಸಂತೋಷ.”

ಪ್ರೇಮವಲ್ಲರಿಯು ಅನ್ನಪೂರ್ಣೆಯ ಕಾಲೆರಗಿ “ಅಕ್ಕಾ, ಇಂದಿನಿಂದ ನಾನು ನಿಮ್ಮ ಉಪದೇಶದಂತೆ ನಡೆಯುವೆನು. ನಾನು ನನ್ನ ಪತಿರಾಯರ ಇಚ್ಛೆಯನ್ನು ಮುರಿದವಳೇ ಹೆಡ್ಡಳು.” ಎಂದು ನುಡಿದು ಆ ಸಾಧ್ವಿಯ ಮುಖವನ್ನು ನೋಡುತ್ತ ಕುಳಿತಳು.

“ನನ್ನದೇನು ಉಪದೇಶ! ಗುರುಹಿರಿಯರು ಕಲಿಸಿದ ಉಪದೇಶವಿದು. ದಾಂಪತ್ಯ ಧರ್ಮ, ಅದರ ಯೋಗ್ಯತೆ, ಅದರ ಸ್ವಾರಸ್ಯಗಳು ನಮ್ಮ ಜನಾಂಗದವರಿಗೆ ತಿಳಿದಷ್ಟು ಬೇರೆ ಜನಾಂಗದವರಿಗೆ ತಿಳಿದಿಲ್ಲ. ಈ ಧರ್ಮದಿಂದ ನಡೆದರೆ ಇಹದಲ್ಲಿ ಸಂಪೂರ್ಣವಾದ ಸುಖದ ಪ್ರಾಪ್ತಿಯು, ಪರಮಾರ್ಥ ಬೋಧವಾದರೂ ಅದರಲ್ಲಿಯೇ ತುಂಬಿ ತುಳುಕುತ್ತಲಿದೆ.”

“ಅಕ್ಕಾ, ಅಲ್ಲಿ ಕೇಳಿದಿರಾ? ಗಡಿಯಾರದಲ್ಲಿ ತಣ್ಣನೆ ಒಂದು ಹೊಡೆಯಿತು, ಮಲಗಿಕೊಳ್ಳಿರಿನ್ನು. ನಾನು ಹೋಗುತ್ತೇನೆ.” ಎಂದು ಪ್ರೇಮವಲ್ಲರಿಯು ಎದ್ದು ನಿಂತು ಮೂಢೆಯಂತೆ ಅವನತಮುಖಿಯಾಗಿ ನಕ್ಕು, “ಎಲ್ಲಿಗೆ ಹೋಗಲಿ ನಾನಿನ್ನು? ಅವರ ಬಳಿಗೆ ಹೋಗಿ ಕ್ಷಮೆ ಬೇಡಿಕೊಳ್ಳಿಲಿಯಾ ? ಕ್ಷಮೆಯಾದರೂ ಸಿಕ್ಕಬಹುದೇನು?” ಎಂದು ಕೇಳಿದಳು.

“ಕ್ಷಮಿಸಲಿಕ್ಕೆ ರಾಯರು ನಿಮ್ಮ ಮೇಲೆ ಕೋಪಿಸಿಕೊಂಡಿದ್ದರೆ ಸರಿಯಷ್ಟೆ? ನಿಮ್ಮಲ್ಲಿಯ ಅಪಕ್ವವಾದ ವಿಚಾರಗಳನ್ನು ತೆಗೆದು ಹಾಕಲು ಆವರು ಮಾಡಿದ ಪ್ರಯತ್ನವಿದು.”

“ಹಾಗಾದರೆ ಈಗಲೇ ನಡೆದೆನು. ಆದರೆ ಅಕ್ಕಾ, ಅವರು ನಿದ್ರಾವಶರಾಗಿ ಮಲಗಿದರೆ ಹೇಗೆ ಮಾಡಲಿ?”

ಅನ್ನಪೂರ್ಣೆಯು ನಸುನಕ್ಕು “ಹುಚ್ಚು ಹಾಳಾಗಲಿ! ಅವರಿಗೆ ನಿದ್ರೆಯೋ ನಿಮಗೋಸ್ಕರವಾಗಿ ಆತುರತೆಯಿಂದ ಮಾರ್ಗಪ್ರತೀಕ್ಷೆ ಮಾಡುತ್ತಿರುವರೋ ಎಂಬದು ನಿಮಗೆ ತಿಳಿಯಬೇಕು. ಹೋಗಿರಿ. ಅವರಿಗೆ ನಿದ್ರೆ ಬಂದದ್ದಾಗಿರಲಿ, ಇಲ್ಲವೆ ನಿಮ್ಮ ಮೇಲೆ ಅವರು ಕೋಪ ಮಾಡಿದ್ದೇ ಆಗಲಿ, ಆಗಿದ್ದರೆ ನಾಳೆ ಬೆಳಿಗ್ಗೆ ಬಂದು ನನ್ನ ಮುಂದೆ ಹೇಳಿರಿ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಕಲ್ಲು
Next post ಹೆಚ್ಚಾಗಲಿ ಆಯಸ್ಸು

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys