ದೇವರಾಜ ಅರಸು : ಒಂದು ಸ್ಮರಣೆ

ದೇವರಾಜ ಅರಸು : ಒಂದು ಸ್ಮರಣೆ

೧೯೮೨ನೇ ಇಸವಿ ಜೂನ್ ೯ ನೇ ತಾರೀಕು. ದೇವರಾಜ ಅರಸು ಅವರು ವಿರೋಧ ಪಕ್ಷದ ಕೆಲವು ಮುಂದಾಳುಗಳೊಂದಿಗೆ ವಿರೋಧ ಪಕ್ಷಗಳ ಏಕತೆಯನ್ನು ಕುರಿತು ಸಾಕಷ್ಟು ಚರ್ಚೆ ನಡೆಸಿದರು. ನಂತರ ‘ಆತ್ಮೀಯರೊಬ್ಬರ’ ಮನೆಗೆ ಹೋದರು. ಮಧ್ಯಾಹ್ನ ಮಲಗಿದ್ದಲ್ಲೇ ಮೃತರಾದರು!

ಎಂಥ ವಿಪರ್ಯಾಸ! ಒಂದುಗೂಡುವ ಬಗ್ಗೆ ಚರ್ಚೆ ನಡೆಸಿದ ನಾಯಕ ಒಂದುಗೂಡದೆ ಒಂಟಿಯಾಗಿ ಸಾವಿನ ಸವಾರಿಯಾದರು. ರಾಜಕೀಯ ಬದುಕಿನಲ್ಲಿ ಅಸಾಧಾರಣ ಏರಿಳಿತಗಳನ್ನು ಕಂಡ ಅರಸು ಅವರು ಸೋಲವಾಗಲೂ ಗೆಲ್ಲುವ ಗಟ್ಟಿತನ ತೋರುತ್ತಿದ್ದ ಅಪರೂಪದ ರಾಜಕಾರಣಿ. ಖ್ಯಾತ ಲೇಖಕ ಚದುರಂಗರಿಗೆ ಆರಸು ಅವರೇ ಹೇಳಿಕೊಂಡಂತೆ ಕೌಟಿಲ್ಯನ ಅರ್ಥಶಾಸ್ತ್ರ ಅವರ ಮೇಲೆ ಗಾಢ ಪ್ರಭಾವ ಬೀರಿತ್ತು; ಅಧಿಕಾರ ಚಲಾಯಿಸಲು, ಉಳಿಸಿಕೊಳ್ಳಲು ಬೇಕಾದ ಪಟ್ಟುಗಳನ್ನು ಕಲಿಸಿತ್ತು. ವಿವಿಧ ಪಟ್ಟುಗಳನ್ನು ಹಾಕುತ್ತಲೇ ಅಧಿಕಾರದ ಆಖಾಡದಲ್ಲಿ ಅಪೂರ್ವ ಧೀಮಂತಿಕೆ ತೋರಿದ ಅರಸು ಸತ್ತಾಗ ಕರ್ನಾಟಕ ರಾಜಕಾರಣದ ಒಂದು ವರ್ಣರಂಜಿತ ವಿವಾದಾತ್ಮಕ ಹಾಗೂ ಹೊಸ ಆಯಾಮದ ಅಧ್ಯಾಯ ಮುಗಿದಿತ್ತು. ಅರಸರನ್ನು ವಿವಾದಾತ್ಮಕ ವ್ಯಕ್ತಿಯಾಗಿ ಕಂಡವರು ಯಥಾಪ್ರಕಾರ ‘ಕಂಬನಿ’ ಸುರಿಸಿದರು. ಕರ್ನಾಟಕದ ಬಹು ಪಾಲು ಜನಸಾಮಾನ್ಯರ ಸಹಜವಾಗಿ ಕಣ್ಣೀರು ಹಾಕಿದರು. ರಾಜಕೀಯ ನಾಯಕರ ‘ಕಂಬನಿ’ಯ ಕಣ್ಣಿಗಿಂತ ಜನಸಾಮಾನ್ಯರ ‘ಕಣ್ಣೀರು’ ತುಂಬಿದ ಕಣ್ಣಿನಲ್ಲಿ ಅರಸು ಬದುಕಿದ್ದರು.

ಹೌದು, ಅರಸು ಅವರ ಅಧಿಕಾರಾವಧಿ ಅರ್ಥವಂತಿಕೆ ಲಭ್ಯವಾದದ್ದು ಜನಸಾಮಾನ್ಯರು ಮತ್ತು ಸರ್ಕಾರದ ದೂರವನ್ನು ಕಡಿಮೆ ಮಾಡುವ ಕ್ರಿಯಾಶೀಲತೆಯಿಂದ ಎಂಬ ಮಾತನ್ನು ಮರೆಯಲು ಸಾಧ್ಯವಿಲ್ಲ. ಅಲ್ಲಿಯವರೆಗೆ ಯಾರೂ ಜನಸಾಮಾನ್ಯರ ಬಗ್ಗೆ ಯೋಚಿಸಿ ಇರಲಿಲ್ಲವೆಂದು ಹೇಳಲಾಗದಿದ್ದರೂ ನಮ್ಮ ಸಮಾಜದ ನಿರ್ಲಕ್ಷಿತ ಸಾಮಾಜಿಕ ವಲಯಗಳು ರಾಜಕೀಯ ಚೈತನ್ಯ ಬರತೊಡಗಿದ್ದು ಅರಸರ ಅಪೂರ್ವ ಕೊಡುಗೆ ಎಂದು ಹೇಳಲು ಹಿಂಜರಿಯ ಬೇಕಾಗಿಲ್ಲ. ಅರಸರು ಹಾವನೂರು ಆಯೋಗವನ್ನು ರಚಿಸಿ ಅದರ ವರದಿಯನ್ನು ಪ್ರಧಾನ ಆಶಯಕ್ಕೆ ಧಕ್ಕೆ ತಾರದಂತೆ ಅನುಷ್ಠಾನ ಗೊಳಿಸಿದ್ದು ಒಂದು ಅಪೂರ್ವ ಸಾಮಾಜಿಕ ಕ್ರಿಯೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪ್ರಕ್ರಿಯೆಗೆ ಚಾಲನೆ ಕೊಟ್ಟದ್ದು ದೇವರಾಜ ಅರಸರ ದೂರದೃಷ್ಟಿ. ಇದರ ಫಲವಾಗಿ ಎಂದೂ ಕಾಣದ ಮುಖಗಳು ವಿಧಾನಸಭೆಯಲ್ಲಿ ಕಂಡವು. ಎಂದೂ ಕೇಳದ ದನಿಗಳು ವಿಧಾನಸಭೆಯಲ್ಲಿ ಕೇಳಿಸತೊಡಗಿದವು. ಮಂತ್ರಿಮಂಡಲದ ರಚನೆಯಲ್ಲಿ ಹಿಂದುಳಿದ ವರ್ಗ ಮತ್ತು ದಲಿತರ ಪ್ರತಿನಿಧಿಗಳು ಹೆಚ್ಚು ಸ್ಥಾನ ಬಳಸತೊಡಗಿದರು. ಹೀಗೆ ಅಧಿಕಾರ ಹಂಚಿಕೆ ಹೊಸ ಪ್ರಕ್ರಿಯೆ ಪ್ರಮುಖ ಶಕ್ತಿಯಾಗಿ ಅರಸರ ರಾಜಕಾರಣ ಆವರಿಸಿಕೊಳ್ಳತೊಡಗಿತು. ಕರ್ನಾಟಕದಲ್ಲಿ ಯಾವತ್ತು ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲು ಅಸಾಧ್ಯವಾದಂಥ ವಾತಾವರಣ ನಿರ್ಮಾಣಗೊಂಡಿರುವುದು ಅರಸರ ಕೊಡುಗೆ. ಉತ್ತರಭಾರತದ ಉದ್ದಕ್ಕೆ ಮೀಸಲಾತಿ ವಿರೋಧಿ ಚಳುವಳಿ ನಡೆದರೆ ಕರ್ನಾಟಕದಲ್ಲಿ ನಮ್ಮನ್ನು ಮೀಸಲಾತಿ ಪಟ್ಟಿಗೆ ಸೇರಿಸಿ ಎಂದು ಕೇಳುವವರು ಹೆಚ್ಚಾದರೆ ಹೊರತು ಮೀಸಲಾತಿ ವಿರೋಧಿ ಚಳುವಳಿ ಬಹಿರಂಗವಾಗಿ ಸ್ಫೋಟಗೊಳ್ಳಲಿಲ್ಲ. ಅರಸರ ಅಧಿಕಾರಾವಧಿಯ ಕೊಡುಗೆ ಇದೊಂದೇ ಅಲ್ಲ, ಯಾರ ಜೊತೆಯೂ
ಹೋಲಿಸಲಾಗದ ಆಡಳಿತ ಶೈಲಿಯನ್ನು ರೂಢಿಸಿಕೊಂಡಿದ್ದ ಅವರು ವೈಚಿತ್ರ್ಯಗಳು ವಕ್ತಾರರೂ ಹೌದು. ಉತ್ತರಭಾರತದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುತ್ತಿದ್ದಗ ಕರ್ನಾಟಕದ ಮಣ್ಣಲ್ಲಿ ಕಾಂಗೈ ಫಸಲು ಬೆಳೆಯುವಂತೆ ಫಲವತ್ತು ಗೊಳಿಸಿದರು. ತುರ್ತುಪರಿಸ್ಥಿತಿಯ ಅತಿರೇಕಗಳು ಬೇರೆ ರಾಜ್ಯಗಳಲ್ಲಿ ವಿಜೃಂಭಿಸುತ್ತಿದ್ದಾಗ ಅರಸರು ಅಧಿಕಾರವನ್ನು ಬಡವರ ಕಲ್ಯಾಣ ಕಾರ್‍ಯಗಳಿಗೆ ವಿನಿಯೋಗಿಸಿದರು. ಉತ್ತರಪ್ರದೇಶದಲ್ಲಿ ಚುನಾವಣೆ ಶೋಚನೀಯ ಉತ್ತರ ಪಡೆದ ಇಂದಿರಾಗಾಂಧಿಯವರನ್ನು ಕರ್ನಾಟಕದ ಚಿಕ್ಕಮಗಳೂರಿನಿಂದ ಗೆಲ್ಲಿಸುವಂಥ ವಾತಾವರಣ ನಿರ್ಮಿಸಿದರು. ಮೊದಲು ಮೈಸೂರು ಎಂಬ ಹೆಸರೇ ಇರಲೆಂದು ಹೇಳುತ್ತಿದ್ದವರು ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂಬ ಪುನರ್ ನಾಮಕರಣ ಮಾಡಿ ಕುವೆಂಪು ಅವರಿಂದಲೂ ಹೊಗಳಿಸಿಕೊಂಡವರು. ಶಕ್ತಿ ರಾಜಕಾರಣದ ಧೀಮಂತರಾಗಿ ಮಲೆದರು.

ಆದರೆ ಮಾಧ್ಯಮಗಳು ಮತ್ತು ನಗರ ಬುದ್ಧಿ ಜೀವಿಗಳಿಗೆ ಅರಸರು ಅಲ್ಪಸ್ವಲ್ಪ ಅಪ್ಯಾಯಮಾನವಾದದ್ದು ಇಂದಿರಾಗಾಂಧಿಯವರನ್ನು ತೊರೆದ ಮೇಲೆ. ನಾವು ಎಂಥ ಅತಿಗಳಲ್ಲಿರುತ್ತೇವೆಂದರೆ ಕೆಲವು ಕೆಲವರನ್ನು ಬಿಟ್ಟಕೂಡಲೆ ಕಲಿಗಳಾಗುತ್ತಾರೆ. ಇಲ್ಲದಿದ್ದರೆ ಇಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇಂದಿರಾಗಾಂಧಿಯವರನ್ನು ಬಿಟ್ಟ ಆರಸು, ರಾಜೀವ ಗಾಂಧಿ ಅವರನ್ನು ಬಿಟ್ಟ ವಿ.ಪಿ. ಸಿಂಗ್ ಅವರನ್ನು ಹೀರೋಗಳಂತೆ ಚಿತ್ರಿಸಿದವರು ಸದಾ ಇಂದಿರಾ ಮತ್ತು ರಾಜೀವ್ ರಾಜಕೀಯ ವಿರೋಧಿಗಳಾಗಿದ್ದವರನ್ನು ಆ ಮಟ್ಟದಲ್ಲಿ ಚಿತ್ರಿಸಿಲ್ಲ. ಸದಾ ವಿರೋಧಿಯಾಗಿದ್ದರೆ ‘ಸುದ್ದಿ ಮೌಲ್ಯ’ವಾದರೂ ಎಲ್ಲಿರುತ್ತದೆಯೆಂಬುದೇ ಇದಕ್ಕೆ ಉತ್ತರವಿರಬೇಕು. ಅದೇನೇ ಇರಲಿ, ಇಂದಿರಾಗಾಂಧಿ ಹಾಗೂ ಅಧಿಕಾರವನ್ನು ಬಿಟ್ಟನಂತರ ಅರಸರು ನಮ್ಮ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಮನೋಧರ್ಮಗಳು ಒಗ್ಗುವ ಒಗ್ಗರಣೆಯಾಗತೊಡಗಿದ್ದು ಒಂದು ವಿಪರ್ಯಾಸವೆಂದೇ ನನ್ನ ನಂಬಿಕೆ.

ಏಕೆಂದರೆ ಯಾರೊಬ್ಬರನ್ನೇ ಆಗಲಿ ಅಧಿಕಾರದಲ್ಲಿದ್ದಾಗಲೇ ಒಳ್ಳೆಯದಕ್ಕಾಗಿ ಮೆಚ್ಚುವ ಕೆಟ್ಟದ್ದಕ್ಕಾಗಿ ಟೀಕಿಸುವ ಸಮ ಪ್ರಜ್ಞೆಯನ್ನು ನಾವು ಬೆಳೆಸಿ ಕೊಳ್ಳದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ. ಅರಸರ ವಿಚಾರದಲ್ಲಿ ಆದದ್ದು ಇದೇ. ಅವರು ಅಧಿಕಾರದಲ್ಲಿದ್ದಾಗ ಹೊಗಳಿದ್ದಕ್ಕಿಂತ ತೆಗಳಿದ್ದೇ ಹೆಚ್ಚು. ತೆಗಳುವುದಕ್ಕೆ ಬೇಕಾದ ಸಕಲಾಸ್ತ್ರಗಳನ್ನೂ ಒದಗಿಸಲು ಅರಸು ಅವರು ಹಿಂದೆ ಬೀಳಲಿಲ್ಲವೆಂಬುದು ಸತ್ಯ. ಹಿಂದಿನಿಂದ ಇದ್ದ ಭ್ರಷ್ಟಾಚಾರ ಅರಸರ ಕಾಲದಲ್ಲಿ ಕ್ರಮಬದ್ದವಾಗಿ ವಿಸ್ತರಣೆಗೊಂಡಿದ್ದು, ಸಮಾಜಘಾತುಕ ಶಕ್ತಿಗಳು ವಿಜೃಂಭಿಸತೊಡಗಿದ್ದು ಯಾರು ಮುಚ್ಚುವ ವಿಷಯಗಳಲ್ಲ. ಇವನ್ನು ಖಂಡಿಸದೆ ಬೇರೆ ಮಾತೇ ಇಲ್ಲ. ಆದರೆ ಅರಸರು ಅಸಾಮಾನ್ಯವಾದದ್ದು ಸಾಮಾನ್ಯರ ಬಗ್ಗೆ ಪ್ರಾಮಾಣಿಕ ಕಾಳಜಿಯಿಂದ, ದುರ್ಬಲ ವರ್ಗದವರ ಬಗ್ಗೆ ಅವರಿಗಿದ್ದ ಕಳಕಳಿ ಕಾಗದದ ಮೇಲೆ ಕಾಗಕ್ಕ ಗೂಗಕ್ಕನ ಕಥೆ ಹೇಳದೆ ಕ್ರಿಯೆಯಾಗಿ ಕಣ್ಣು ಬಿಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಸ್ವಂತ ಜಾತಿ ರಾಜಕೀಯ ಸಂಖ್ಯಾ ಬೆಂಬಲವಿಲ್ಲದ, ದಮನ ಗೊಂಡಿದ್ದ ದನಿಗಳಿಗೆ ಮರುಮಾತು ಕೊಡುವ ಕ್ರಿಯೆಗೆ ಬದ್ಧನಾದ ಮುಖ್ಯಮಂತ್ರಿಯೊಬ್ಬ ಶಕ್ತಿ ರಾಜಕೀಯಕ್ಕೆ ತೊಡಗಿದಾಗ ಉಂಟಾಗುವ ವೈಚಿತ್ರಗಳಲ್ಲಿ ಭ್ರಷ್ಟತೆ ಮತ್ತು ಅನಪೇಕ್ಷಿತ ಶಕ್ತಿಗಳ ಸಾಮಿಪ್ಯಗಳೂ ಸೇರುತ್ತವೆ. ಹೀಗೆಂದು ನಾವು ಭ್ರಷ್ಟಾಚಾರಕ್ಕೆ ಕಾನೂನು ಬಾಹಿರ ಶಕ್ತಿಗಳಿಗೆ ಖಂಡಿತ ರಿಯಾಯಿತಿ ಕೊಡಬೇಕಾಗಿಲ್ಲ. ಶಕ್ತಿ, ರಾಜಕೀಯ ಇತಿಮಿತಿ ಮತ್ತು ವೈಚಿತ್ರ್ಯಗಳನ್ನಾದರೂ ಚರ್ಚಿಸಬಹುದಲ್ಲ? ಆದರೆ ಅರಸರು ಅಧಿಕಾರದಲ್ಲಿದ್ದಾಗ ಇಂಥ ಚರ್ಚೆ ನಡೆಯಲಿಲ್ಲ. ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ ಏಕಮುಖ ಖಂಡನೆ ಕೆಲವರ ಕಸುಬಾಯಿತು. ರಾಜಕೀಯ ಸ್ಥಿತ್ಯಂತರಕ್ಕೆ ಕಾರಣರಾದ ದೇವರಾಜ ಅರಸರ ಕ್ರಿಯೆಯಲ್ಲಿ ಅಡಕವಾಗಿದ್ದ ಕೆಲವು ಅನಾರೋಗ್ಯಕರ ಅಂಶಗಳು ಆರೋಗ್ಯಕರ ನಿಲುವನ್ನು ನಿರ್ಲಕ್ಷ್ಯ ಮಾಡುವಷ್ಟು ಪ್ರಚಾರಗೊಂಡವು.

ವಾಸ್ತವವಾಗಿ ಅರಸರ ಕಾಲದಲ್ಲಿ ಭ್ರಷ್ಟತೆಯ ನಡುವೆ ಕರ್ನಾಟಕಕ್ಕೆ ಹೊಸ ರಾಜಕೀಯ ಪರಿಭಾಷೆ ಲಭ್ಯವಾಯಿತು. ರಾಜಕೀಯ ಪರಿಭಾಷೆಗೆ ಭೂಸುಧಾರಣೆಯಂಥ ಪರಿಕಲ್ಪನೆ ಸೇರ್ಪಡೆಯಾದದ್ದು ಒಂದು ಐತಿಹಾಸಿಕ ಘಟನೆ ಸರಿ. ಈಗ ದುರ್ಬಲರು, ಹಿಂದುಳಿದವರು, ಬಡವರು, ಭೂಸುಧಾರಣೆ, ಜೀವವಿಮೋಚನೆ ಮುಂತಾದ ಪದಗಳು ಬೆಸೆದುಕೊಳ್ಳುತ್ತಲೇ ರಾಜಕೀಯ ಭಾಷೆ ಬೆಳೆಯಿತು. ಭ್ರಷ್ಟತೆ ಬೆಳೆದದ್ದನ್ನು ಗುರುತಿಸುವ ರಾಜಕೀಯ ಭಾಷೆಯ ಹೊಸ ಬೆಳವಣಿಗೆಯನ್ನು ಗುರುತಿಸುವುದು ಅಗತ್ಯ. ಅರಸರ ಆಡಳಿತಾವಧಿಯಲ್ಲಿ ಮೌಲ್ಯಗಳೆಂದರೆ ತುಳಿತಕ್ಕೊಳಗಾದ ಜಾತಿ ಜನಾಂಗಗಳಿಗೆ ಸ್ಥಾನಮಾನ, ಬಡವರ ಬದುಕಿಗೆ ಭದ್ರತೆ ಇತ್ಯಾದಿಗಳು. ಇಲ್ಲಿ ಮೌಲ್ಯವೆನ್ನುವುದು ಅಮೂರ್ತ ಕಲ್ಪನೆಯಾಗಲಿಲ್ಲ. ನೇರ, ಸರಳ ಮಾತಾಯಿತು; ಖಚಿತಗೊಂಡ ಕ್ರಿಯೆಯಾಯಿತು. ಬೋಳೆ ಭಾಷೆಯ ಬದಲು ಖಚಿತಾರ್ಥದ ಭಾಷೆ ರೂಪುಗೊಂಡಿತು. ರಾಜಕೀಯ ಪರಿಭಾಷೆಯಲ್ಲಾದ ಸ್ಥಿತ್ಯಂತರ ಕೇವಲ ಭಾಷೆಯದು ಮಾತ್ರವಲ್ಲ ; ಅದು ಬದುಕಿನ ಆಶಯಗಳ ಅಭಿವ್ಯಕ್ತಿಯಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸುತ್ತಲೇ ಭ್ರಷ್ಟತೆಯ ಬಗ್ಗೆ, ಅದು ಹುಟ್ಟು ಹಾಕಿದ ‘ಭಾಷೆ’ಯ ಬಗ್ಗೆ ಟೀಕಿಸಿದರೆ ಅದಕ್ಕೊಂದು ಅರ್ಥವಿರುತ್ತದೆ. ಅಷ್ಟೇ ಅಲ್ಲ, ಅಧಿಕಾರ ಕೇಂದ್ರಿತ ರಾಜಕಾರಣ ವೈರುಧ್ಯಗಳನ್ನು ಚರ್ಚಿಸಲು ಅರಸರ ಅಧಿಕಾರಾವಧಿಯನ್ನು ಒಂದು ಆಕರವನ್ನಾಗಿ ಮಾಡಿಕೊಳ್ಳಬಹುದಾಗಿದೆ. ಇಂಥ ಗಂಭೀರ ರಾಜಕೀಯ ಚರ್ಚೆ ನಡೆಯಲಿಲ್ಲವೆನ್ನುವುದು ಇಂದಿಗೂ ವಿಷಾದದ ಸಂಗತಿಯಾಗಿದೆ.

ಅಂದು ಅರಸರಿಗೆ ಎರಡು ಆಯ್ಕೆಗಳಿದ್ದವು : ಒಂದು ಹೇಗಾದರೂ ಸರಿ ಅಧಿಕಾರದಲ್ಲಿ ಉಳಿದು ದುರ್ಬಲ ವರ್ಗದವರಿಗೆ ಅನುಕೂಲ ಮಾಡುವುದು. ತಾವೂ ಅಧಿಕಾರದ ರುಚಿ ಅನುಭವಿಸುವುದು. ಎರಡು- ಅಧಿಕಾರವನ್ನು ಬಿಟ್ಟು ಹಿಂದುಳಿದ ಎಲ್ಲ ದುರ್ಬಲ ವರ್ಗಗಳ ಹೋರಾಟ ಕಟ್ಟುವುದು. ನಾವು ಎರಡನೆಯ ನಾಳೆಯಿಂದ ನಿಂತು ಅರಸರನ್ನು ಅಳೆಯತೊಡಗುತ್ತೇವೆ. ಆದರೆ ಶಕ್ತಿ ರಾಜಕೀಯ ನೆಲೆ ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಅಧಿಕಾರವಿಲ್ಲದೆ ಏನು ಮಾಡಲು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬರುತ್ತದೆ. “ಅಧಿಕಾರವಿದ್ದರೆ ತಾನೆ, ನಾಡಿಗೆ ಏನಾದರೂ ಕೆಲಸ ಮಾಡಲು ಅನುಕೂಲವಾಗುವುದು” ಎಂದು ಚದುರಂಗರಿಗೆ ಹೇಳಿದ ಅರಸು “ಅಯ್ಯೋ ರಾಮ! ಭ್ರಷ್ಟಾಚಾರ ನಾನು ಹುಟ್ಟು ಹಾಕಿದ್ದೇನು? ಅನಾದಿಕಾಲದಿಂದಲೂ ಅದು ನಡೆದು ಬಂದದ್ದೆ. ನನ್ನ ಕಾಲದಲ್ಲಿ ಸ್ವಲ್ಪ ಹೆಚ್ಚಾಗಿರಬಹುದು ಅಷ್ಟೇ” ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರಿದ್ದಾರೆ. ಹುಸಿ ಮೌಲ್ಯಗಳನ್ನು ಆಧರಿಸಿ ಆಕಾಶದ ಹೇಳಿಕೆ ಕೊಡಲಿಲ್ಲ. (‘ಒಡನಾಡಿ’-ಚದುರಂಗರ ಲೇಖನ-ಪರಿವರ್ತನೆಯ ಹರಿಕಾರ-ಪುಸ್ತಕದಲ್ಲಿ)

ಹಿಂದುಳಿದ ವರ್ಗಗಳಿಗೆ ಜೀವ ಚೈತನ್ಯ ಕೊಟ್ಟ ದೇವರಾಜ ಅರಸರ ಧೀಮಂತಿಕೆ ನನ್ನ ಮಟ್ಟಿಗೆ ಪ್ರಶ್ನಾತೀತ. ಆದರೆ ದೇವರಾಜ ಅರಸರು ಹಿಂದುಳಿದ ವರ್ಗಗಳ ಹೋರಾಟ ಕಟ್ಟಿದರೆಂದು ಹೇಳುವಂತಿಲ್ಲ. ತಮಗೆ ಲಭ್ಯವಾದ ಅಧಿಕಾರವನ್ನು ಬಳಸಿ ಅತ್ಯಂತ ಪ್ರಾಮಾಣಿಕ ಕಳಕಳಿಯಿಂದ ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಮತ್ತು ಸವಲತ್ತುಗಳನ್ನು ಕಲ್ಪಿಸಿ ಕೊಟ್ಟರು. ರಾಜಕೀಯವಾಗಿ ಹೊಸ ಆಕಾರಗಳನ್ನು ಅನಾವರಣಗೊಳಿಸಿದರು.

ಅರಸರ ಕಾಲದಲ್ಲಿ ಅಧಿಕಾರ ಹಂಚಿಕೆ ಮತ್ತು ಅಧಿಕಾರದ ನೆಲೆಯಿಂದ ಹರಿದುಬಂದ ಸವಲತ್ತುಗಳಲ್ಲಿ ಸಂಭ್ರಮಿಸಿದ ಹಿಂದುಳಿದ ವರ್ಗಗಳು ಈಗ ಹೋರಾಟ ಮನೋಧರ್ಮದ ಹೊಸ ಪಾಠ ಕಲಿತು, ಶಕ್ತಿ ರಾಜಕಾರಣದ ಮಿತಿಯಲ್ಲಿ ದೇವರಾಜ ಅರಸರು ತೋರಿದ ದಾರಿಯನ್ನು ದಾಟುವ ಸೈದ್ಧಾಂತಿಕ ಶಕ್ತಿಯಾಗಬೇಕು. ದೇವರಾಜ ಅರಸರ ಆರೋಗ್ಯಕರ ನಿಲುವುಗಳನ್ನು ಒಳಗೊಂಡು, ಮೀರುವ ಮುನ್ನೋಟ ಮತ್ತು ಕ್ರಿಯಾಶಕ್ತಿ ಅವರ ಸಾರ್ಥಕ ಸ್ಮರಣೆಯಾಗಬೇಕು.
*****
೧೨-೦೬-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳು
Next post ಬ್ರಾಹ್ಮಣನೂ ಭಗವದ್ಗೀಯೂ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…