ಬದಲಾವಣೆ: ಯಾಕೆ ಓದಬೇಕು?

ಬದಲಾವಣೆ: ಯಾಕೆ ಓದಬೇಕು?

ಯಾಕೆ ಓದಬೇಕು? ಶಿಕ್ಷಣವೇ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಶಿಕ್ಷಣವೇ ವಿಶ್ಶಕ್ತಿ ಎಂದು ಬದಲಾಯಿಸಬೇಕು. ಸುಮ್ಮನೆ ನೆನಪು ಮಾಡಿಕೊಳ್ಳಿ. ಕನ್ನಡದ ಯಾವುದಾದರೂ ಗಾದೆ ಓದುವಿಕೆಯನ್ನು ಮೆಚ್ಚಿ ಶಿಫಾರಸು ಮಾಡುವಂಥದಿದೆಯೇ? ಓದಿ ಓದಿ ಮರುಳಾದ… ಓದು ಒಕ್ಕಾಲು…ಮಾಘ ಓದಿ ಮಗ ಕೆಟ್ಟ… ಎಲ್ಲ ಓದಿನ ವಿರುದ್ಧವಾಗಿರುವ ಗಾದೆಗಳೇ. ಕೈಲಾಸಂ ಅವರ ‘ಪೋಲಿ ಕಿಟ್ಟಿ’ ರವೀಂದ್ರನಾಥ ಟಾಗೂರರ ‘ಪಂಜರಶಾಲೆ’ ಇಂಥ ನಾಟಕಗಳನ್ನು ಜ್ಞಾಪಿಸಿಕೊಳ್ಳಿ. ಅಥವಾ ಓದುವ್ರದನ್ನು ಕುರಿತು ‘ಪಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೇ’ ಮೊದಲಾದ ವಚನಗಳನ್ನು ‘ನೂರು ಶಾಸ್ತ್ರವನೋದಿ ಏನು ಫಲ’ ಮೊದಲಾದ ಹಾಡುಗಳನ್ನು ನೆನಪಿಸಿಕೊಳ್ಳಿ. ಎಲ್ಲವೂ ಓದಿನ ಮಿತಿಗಳನ್ನೇ ಹೇಳುವಂಥವು.

ಹೌದು ನಾವು ಏಕೆ ಓದುತ್ತೇವೆ? ಯಾವುದಾದರೂ ಪರೀಕ್ಷೆ ಪಾಸು ಮಾಡುವುದಕ್ಕೆ, ಪಾಸು ಮಾಡಿ ಮೈಮುರಿಯದೆ ದುಡ್ಡು ಸಂಪಾದನೆ ಮಾಡುವ ದಾರಿ ಕಂಡುಕೊಳ್ಳುವುದಕ್ಕೆ? ಮಾಹಿತಿ ಸಂಗ್ರಹಿಸಿಕೊಳ್ಳುವುದಕ್ಕೆ? ಜ್ಞಾ ಸಂಪಾದನೆಗೆ? ಜಾಣರಾಗುವುದಕ್ಕೆ? ಯಾವುದಾದರೂ ಕಸುಬಿನಲ್ಲಿ ಕುಶಲರಾಗುವುದಕ್ಕೆ? ನಮ್ಮನ್ನು ನಾವು ಮರೆಯುವುದಕ್ಕೆ? ಮನರಂಜನೆಗೆ? ನಾನು ಇಷ್ಟು ಓದಿದ್ದೇನೆ ಎಂಬ ಅಹಂಕಾರ ಬೆಳಸಿಕೊಳ್ಳುವುದಕ್ಕೆ? ಓದದವರನ್ನು ಮೋಸಮಾಡಿ ನಾವ್ವು ದೊಡ್ಡವರಾಗುವುದಕ್ಕೆ? ನಮ್ಮ ನಿಜಸ್ವಭಾವವನ್ನು ಮರೆಮಾಡಿ ಬೇರೆ ಏನೋ ಅಗಿದ್ದೇವೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುವುದಕ್ಕೆ? ಯಾಕೆ ಓದುತ್ತೇವೆ?

ಕಾಯಕದ ಬಗ್ಗೆ, ದೇಹಶ್ರಮದ ಗೌರವದ ಬಗ್ಗೆ ಅಷ್ಟೆಲ್ಲ ಮಾತನಾಡುತ್ತೇವೆ. ಆದರೆ ಹೆಚ್ಚು ಹೆಚ್ಚು ಓದಿದಂತೆಲ್ಲ, ಪರೀಕ್ಷೆಗಳನ್ನು ಪಾಸು ಮಾಡಿದಂತೆಲ್ಲ, ದೇಹಶ್ರಮದ ಬಗ್ಗೆ ತಿರಸ್ಕಾರವೇ ಮೂಡುತ್ತದೆಯಲ್ಲ! ಓದಿದಂತೆಲ್ಲ ಓದಿದ ಇತರರನ್ನು ಮೀರಿಸಬೇಕೆಂಬ ಸ್ಪರ್‍ಧೆಯೇ ಹುಟ್ಟುತ್ತದೆಯಲ್ಲ! ಈ ಸ್ಪರ್‍ಧೆ ಅಸೂಯೆಯನ್ನೂ ಕ್ಲೇಶವನ್ನೂ ತರುತ್ತದೆಯಲ್ಲ! ಓದುವಿಕೆಯನ್ನು ಅಧರಿಸಿದ ಶಿಕ್ಷಣ ದೈಹಿಕವಾಗಿ ಮಾನಸಿಕವಾಗಿ ನಿಶ್ಶಕ್ತರನ್ನಾಗಿಸಿ ಇತರರ ದೈಹಿಕ ದುಡಿಮೆಯನ್ನು ಅವಲಂಬಿಸಿ ಪರಾವಲಂಬಿಗಳನ್ನಾಗಿಸುತ್ತದೆಯಲ್ಲ… ಇಂಥ ಓದು ಬೇಕೇ? ಮಾಹಿತಿ ಸಂಗ್ರಹಿಸಬೇಕೇ? ಯಾಕೆ? ಓದಿನ ಮೂಲಕ ನಾವು ಸಂಗ್ರಹಿಸಿದ ಮಾಹಿತಿ ಉಪಯೋಗಕೆ ಬರುತ್ತದೆಯೇ? ಓದಿನಿಂದ ಜ್ಞಾನ ಲಭಿಸುತ್ತದೆ ಎಂಬುದು ಕೂಡ ಭ್ರಮೆಯೇ. ಏಕೆಂದರೆ ನಮ್ಮ ಸ್ವಂತ ಅನುಭವದಿಂದ ಜ್ಞಾನ ಕೇವಲ ಮಾತಾಗಿ, ಮಾಹಿತಿಯಾಗಿ ಅಷ್ಟೇ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಬುದ್ಧನನ್ನೋ ಬಸವನನ್ನೋ ಓದಿದವರೆಲ್ಲ, ಓದಿ ಹೊಗಳಿದವರೆಲ್ಲ, ಜ್ಞಾನಿಗಳಾಗಿಬಿಡುವುದಿಲ್ಲವಷ್ಟೆ? ಇಂಥ ಓದು ಬೇಕೇ? ಓದಿ ಜಾಣರಾಗುವುದೆಂದರೇನು? ಯಾವುದೂ ಅಪಾಯ ಎದುರಿಸದೆ, ರಿಸ್ಕು ತೆಗೆದುಕೊಳ್ಳದೆ ಬದುಕುವುದನ್ನು ಕಲಿಯುವುದಷ್ಟೇ ಅಲ್ಲವೆ? ಕಸುಬು ಮಾಡುತ್ತ ಮಾಡುತ್ತ ಕೌಶಲ ಬರುತ್ತದಯಷ್ಟೇ ಹೊರತು ಓದಿನಿಂದ ಕೌಶಲ ಬಂದೀತೆ? ಈಜು ಕಲಿಯುವ ಬಗ್ಗೆ ಮಸ್ತಕ ಓದಿ ಈಜು ಕಲಿತವರುಂಟೆ? ಮನರಂಜನೆಗಾಗಿ ಓದುವುದೆಂದರೇನು? ನಮ್ಮ ಮನಸ್ಸೇ ನಮಗೆ ಬೇಜಾರಾಗಿದೆ ಎಂದಲ್ಲವೇ? ಎಷ್ಟೇ ಓದಿದರೂ ನಮ್ಮ ಮನಸ್ಸಿನಿಂದ ನಾವು ಪಾರಾಗುವುದುಂಟೇ? ಹಾಗೆ ಮನರಂಜನೆಗೆ, ನಮ್ಮನ್ನು ನಾವು ಮರೆಯುವುದಕ್ಕೆ ಓದುವುದೆಂದರೆ ವಾಸ್ತವದಿಂದ ನಾವು ಪಲಾಯನ ಮಾಡುವುದೆಂದೇ ಅರ್ಥವಲ್ಲವೇ? ಅಥವಾ ನಾವು ಹೆಚ್ಚು ಹೆಚ್ಚು ಓದಿದಷ್ಟೂ ನಮ್ಮ ನಿಜವಾದ ಭಾವನೆಗಳನ್ನೂ, ರಾಗದ್ವೇಷಗಳನ್ನೂ ಮುಚ್ಚಿಡುವುದನ್ನು ಕಲಿತ ಮುಖವಾಡಗಳೇ ಅಗುತ್ತೇವಲ್ಲ! ಬದುಕನ್ನು ಅರಿಯುವುದಕ್ಕೆ ಬದುಕುವುದೊಂದೇ ದಾರಿಯೇ ಹೊರತು ಓದಿನಿಂದ ಬದುಕಿನ ಬಗ್ಗೆ ಕಲಿಯಲು ಸಾಧ್ಯವೇ? ಯಾಕೆ ಓದಬೇಕು? ಓದುವುದು ಬೇಡ.

ಬೇಕು. ಓದಬೇಕು. ಸರಿಯಾಗಿ ಓದಬೇಕು. ಬರಿಯ ಅಕ್ಷರವನ್ನಲ್ಲ, ಬದುಕನ್ನು ಓದಬೇಕು. ನಮ್ಮೊಡನೆ ಇರುವವರ ಮನಸ್ಸನ್ನು, ನಮಗೆದುರಾಗುವ ಸನ್ನಿವೇಶಗಳನ್ನು, ನಮ್ಮದೇ ಮನಸ್ಸನ್ನು ಓದಬೇಕು. ಬದುಕಿಗೆ ಕ್ರಮವಿಲ್ಲ, ಭಾಷಗೆ ಕ್ರಮವಿದೆ. ಕ್ರಮ ಇರುವುದನ್ನು ಓದಬಹುದು. ಆ ಮುಖಾಂತರ ಕ್ರಮವಿಲ್ಲದ್ದನ್ನು ಅರ್ಥಮಾಡಿಕೊಳ್ಳಬಹುದು ಎಂಬ ಆಸೆಯಿಂದ ಓದಬೇಕು. ಅಲ್ಲಮ ಒಂದು ವಚನದಲ್ಲಿ ಹೇಳುತ್ತಾನೆ – ‘ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಹುದೆ’ ಎಂದು.

ಪದವೇ ಪದಾರ್ಥವಲ್ಲ. ಬಾಗಿಲು ಎಂಬ ಪದವೇ ಬಾಗಿಲಲ್ಲ. ದೇವರು ಎಂಬ ಪದವೇ ದೇವರಲ್ಲ. ಪ್ರೀತಿ ಎಂಬ ಪದವೇ ಪ್ರೀತಿಯಲ್ಲ. ಪದವನ್ನು ದಾಟಿ ಪದಾರ್ಥವನ್ನು ಅರಿಯುವ ಹಾಗೆ ಓದಬೇಕು.

ನಾವು ಇಂದು ಬದುಕುತ್ತಿರುವ ಕ್ರಮವೇ ಹೀಗಿದೆ. ಪದವೇ ಪದಾರ್ಥ ಎಂಬ ಭ್ರಮೆಯಲ್ಲಿ ಬದುಕಿದ್ದೇವೆ. ಪದ ಏನಿದ್ದರೂ ಸಂಕೇತ. ಸಂಕೇತವೆಂದರೆ ನಿಜದ ತೋರುಬೆರಳು ಅಷ್ಟೆ. ಇದು ಅರಿವಾಗದಿದ್ದರೆ ರಾಮ, ಅಯೋಧ್ಯೆ, ಹಿಂದೂ, ಮುಸ್ಲಿಂ, ಮೊದಲಾದ ಪದ, ಸಂಕೇತಗಳೇ ನಿಜವೆಂಬ ಭ್ರಮೆಗೆ ಗುರಿಯಾಗಿ ಬದುಕನ್ನೆಲ್ಲ ಹಿಂಸೆಗೆ ಗುರಿಮಾಡಿಕೊಳ್ಳುತ್ತೇವೆ. ಸಂಕೇತಗಳು ಬದಲಾಗಬಹುದು, ಸಾಯಬಹುದು, ನಾಶವಾಗಬಹುದು, ಅವು ಸೂಚಿಸುವ ಪದಾ-ರ್ಥ ಅವಿನಾಶಿ. ನಮ್ಮ ಓದುವಿಕೆ ಪದಕ್ಕಷ್ಟೇ ಬದ್ಧರಾಗಿ ಎಂದು ಹೇಳುವ ರಾಜಕಾರಣವನ್ನು ಮೀರಿದ್ದಾದಾಗ ಮಾತ್ರ ಬದಲಾವಣೆ ಸಂಭವಿಸೀತು.

ಇಲ್ಲಿ ಒಂದು ಕುತೂಹಲದ ಸಂಗತಿಯನ್ನು ಪ್ರಸ್ತಾಪಿಸಬಹುದು. ನಾವು ವಾಚ್ಯ, ವಾಚಕ ಎಂಬಂಥ ಪದಗಳನ್ನು ಬಳಸುತ್ತೇವೆಯಲ್ಲ, ಅವಕ್ಕೆ ನಾವು ಸಾಮಾನ್ಯವಾಗಿ ತಿಳಿದಿರುವುದಕ್ಕಿಂತ ಬೇರೆಯ ಅರ್ಥಗಳೂ ಇವೆ. ವಾಚ್ಯ ಎಂಬ ಮಾತನ್ನು ನಾವು ಇಂದು ‘ಎಲ್ಲವನ್ನೂ ಬಿಡಿಸಿ ಹೇಳುವ ಮಾತಿನ ಪರಿ’ ಎಂದೇ ತಿಳಿದಿದ್ದೇವೆ. ಆದರೆ ಪ್ರಾಚೀನ ಕಾಲದ ಕಾವ್ಯಮೀಮಾಂಸೆಯಲ್ಲಿ ವಾಚ್ಯ ಎಂದರೆ ಓದಲು ಅರ್ಹವಾದದ್ದು, ನಮ್ಮ ಓದಿಗೆ, ನಮ್ಮ ಅರ್ಥಕ್ಕೆ ಸಿಗುವ ಈ ಜಗತ್ತು ಎಂಬ ಅರ್ಥಗಳಿವೆ. ಹಾಗಾದರೆ ಓದುವುದು ಎಂದರೆ ಅರ್ಥಮಾಡಿಕೊಳ್ಳುವುದು ಮತ್ತು ಓದಿಗೆ ದಕ್ಕುವುದೆಲ್ಲ, ಈ ಇಡೀ ಜಗತ್ತು ವಾಚ್ಯ ಎಂದಾಗುತ್ತದೆ. ವಾಚಕ ಎಂದರೆ ಕೇವಲ ಪುಸ್ತಕವನ್ನು ಓದುವವನಲ್ಲ, ಇಡೀ ಲೋಕವನ್ನು ನೋಡಿ ಅರ್ಥಮಾಡಿಕೊಳ್ಳುತ್ತಿರುವಾತ ಎಂದಾಗುತ್ತದೆ. ಹಾಗೆ ನಿಜವಾಗಿ ನಾವು ಓದಬೇಕಾದದ್ದು ನಮ್ಮ ಸುತ್ತ ಇರುವ ಸದಾ ಬದಲಾಗುತ್ತಲೇ ಇರುವ ಲೋಕವನ್ನೇ, ಬದುಕನ್ನೇ. ಇಂಥ ಓದಿಗೆ ಕೊನೆ ಎಂಬುದುಂಟೇ? ಪುಸ್ತಕದ ಓದು ಬದುಕಿನ ಓದಿಗೆ ಪೂರಕವೋ, ಅಥವ ಅಡಚಣೆಯೋ? ನಮ್ಮ ಶಿಕ್ಷಣವು ಕೇವಲ ಒಂದು ವ್ಯವಸ್ಥೆ ಮಾತ್ರವಾಗಿದ್ದರೆ ಆ ವ್ಯವಸ್ಥೆಗೆ ಅನುಗುಣವಾದ ಓದು ಬದುಕಿನ ಓದಿಗೆ ಅಡಚಣನೆಯೇ ಅಗುತ್ತದೆ. ಶಿಕ್ಷಣ ವ್ಯವಸ್ಥೆ ಎಂದರೆ ಈಗ ಇರುವ ಸಮಾಜದ ವ್ಯವಸ್ಥೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವ ಸಂಗತಿ. ಈಗ ನಾವು ಇರುವ ಸ್ಥಿತಿಯ ಬಗ್ಗೆ ಆಳವಾದ ಅತೃಪ್ತಿಯನ್ನು ಮೂಡಿಸದಿದ್ದರೆ ಶಿಕಣವೆನ್ನುವುದು ಯಾಂತ್ರಿಕವಾಗುತ್ತದೆ. ಶಿಕ್ಷಣಕ್ಕೆ ಕ್ರಾಂತಿಕಾರಕ ಗುಣ ಇಲ್ಲವೇ ಹಾಗಾದರೆ? ಕ್ರಾಂತಿಕಾರಕ ಗುಣವೆಂದರೆ ಇರುವ ಸ್ಥಿತಿಯನ್ನು ಪ್ರಶ್ನಿಸುವ, ತೀವ್ರವಾದ ಅತೃಪ್ತಿಯ ಮೂಲಕ ಕ್ರಿಯೆಯಲ್ಲಿ ತೊಡಗುವ, ಸೃಜನಶೀಲರನ್ನಾಗಿಸುವ ಶಿಕ್ಷಣ ನಮಗೆ ಎಂಥ ಓದನ್ನು ಕಲಿಸಬೇಕು? ಇವು ಬಹು ಮುಖ್ಯವಾದ ಪ್ರಶ್ನೆಗಳಲ್ಲವೇ? ಕಳೆದ ಸುಮಾರು ಮೂವತ್ತು ವರ್ಷಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿ ಕಳೆದದಿದ್ದಾನೆ ಈ ಬರಹಗಾರ. ಶಿಕ್ಷಣದ ವ್ಯವಸ್ಥೆಯ ಬಗ್ಗೆ ಯಾರೂ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಅಡಳಿತ ಮಂಡಳಿಗಳು, ಮತ್ತು ಇಡೀ ಸಮಾಜ ನಿಜವಾಗಿ ಆತಂಕಕ್ಕೇ ಒಳಗಾಗದೆ ಇದು ಇರಬೇಕಾದ್ದೇ ಹೀಗೆ ಎಂಬ ಧೋರಣೆ ಬೆಳೆಸಿಕೊಂಡಿದ್ದೇವೆಯಲ್ಲ ಇದು ನಿಜವಾದ ದುರಂತ. ಆಗುವ ಎಲ್ಲ ಬದಲಾವಣೆ ಶಿಕ್ಷಣವನ್ನು ಕುರಿತು ನಮ್ಮ ಬದಲಾವಣೆಗಳಿಂದಲೇ ತೊಡಗಬೇಕು ಅನ್ನಿಸುತ್ತಿದೆ. ಈ ಬಗ್ಗೆ ಮುಂದಿನ ಬರಹದಲ್ಲಿ ಇನ್ನಷ್ಟು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ
Next post ಮಸ್ಸೂರಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys