ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ
ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು
ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು
ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ!

ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು
ಕುಳಿತಿದ್ದೆವು ಕಾರಿನಲ್ಲಿ ಅಪಘಾತಗಳ ನೋಟ ಅಲ್ಲಲ್ಲಿ
ನಮ್ಮ ಚಾಲಕನೂ ತೋರಿಸುತ್ತಿದ್ದ ತನ್ನ ಕೈಚಳಕ
“ಇಂಥ ಹಾದಿಗಳೇ ಹೀಗೆ!” ಎಂದುಕೊಂಡೆವು ನಮ್ಮೊಳಗೆ

ಸುತ್ತಿ ಬಳಸಿ ಹತ್ತಿ ಕುಳಿತಲ್ಲೆ ತಲೆ ಸುತ್ತಿ
ಮುಗಿಯುವುದೆಂದು ಈ ಆರೋಹಣವೆಂದು
ನೊಡಿದರೆ ಎಲಾ! ಎದುರು ಮಸ್ಸೂರಿಯ ಬಜಾರು
ಇನ್ನು ನಮ್ಮನ್ನು ಹಿಡಿದು ನಿಲ್ಲಿಸುವವರಾರು?

ಬಿಟ್ಟು ನಮ್ಮೂರ ಬಂದಿದ್ದೆವು ಬಹಳ ದೂರ
ಈಗೇಕೆ ಆ ಗೊಡವೆ ಇಂಥ ಬೀದಿಗಳ ನಡುವೆ
ಬೇಕಾದವರು ಹೊರಡಿ ಹೇಸರಗತ್ತೆಗಳ ಗಾಡಿ
ಪಾದಚಾರಿಗಳಾಗಿಯೆ ನಾವು ಇಲ್ಲಿ ಸಂಚರಿಸುವೆವು

ಕೊಡು ಎವೆಗೆ ಎವೆಯ ನೆಲೆ ಬೆಟ್ಟದ ಚೆಲುವೆ
ಇಲ್ಲಿಯ ತನಕವು ಬಂದೆ ನಿನ್ನ ನೋಡಲೆಂದೆ
ಏನ ಮಾರುವೆ ನನಗೆ ಬೇಕಾದ್ದು ನಿನ್ನ ನಗೆ
ಮಾರುವೆಯ ನನಗೊಂದು ಮಂಜಿನರಮನೆಯ ?

ಕಟಾಂಜಣದ ಬಳಿ ಸಿಗರೇಟಿನ ಹೊಗೆಯುಗುಳಿ
ನೋಡಿದೆನು ಡೆಹರಾಡೂನು ಆಚೆಗಿನ್ನೊಂದು ಸಾನು
ನಿಂತಿದ್ದೆನಲ್ಲಿ ಮರೆತು ಹೀಗೆಷ್ಟು ಹೊತ್ತು
ಬಂದ ದಾರಿಯ ಪಯಣ ಉಳಿದಿತ್ತು ಅವರೋಹಣ

ಆವರಿಸಿದಾಗ ಕತ್ತಲು ತಲಪಿದ್ದೆವು ಕೆಳಗಿನ ತಪ್ಪಲು
ಎಲ್ಲಿ ಮುಂಜಾನೆ ಎಲ್ಲಿ ನನ್ನ ಮಂಜಿನರಮನೆ ?
ಎದ್ದೆ ಹಾಸಿಗೆಯಿಂದ ಧಾವಿಸಿದೆ ಅಂಗಳದ ಬದಿಗೆ
ತೇಲಿ ಹೋಗುತ್ತಿತ್ತು ಅದು ಮಸ್ಸೂರಿಯ ಕಡೆಗೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)