ರಾವಣಾಂತರಂಗ – ೧೧

ರಾವಣಾಂತರಂಗ – ೧೧

ಮಾಯಾಜಾಲ

ಒಂದು ದಿನ ಕೈಕಾದೇವಿಯ ತಂದೆ ಕೇಕೆಯ ರಾಜನು ಬಂದು ತನ್ನ ಮೊಮ್ಮಕ್ಕಳಾದ ಭರತನನ್ನು ಶತ್ರುಘ್ನನನ್ನು ಅವನ ಮಡದಿಯರನ್ನು ಸ್ವಲ್ಪಕಾಲ ಇರಿಸಿಕೊಂಡು ಸತ್ಕಾರ ಮಾಡುತ್ತೇನೆಂದು ಕರೆದುಕೊಂಡು ಹೋದನು. ಇತ್ತ ವಾಯೆಯು ತನ್ನ ಮಾಯಾಜಾಲವನ್ನು ಬೀಸಿ ಕೈಕೆಯ ಪರಮಾಪ್ತದಾಸಿಯಾದ ಮಂಥರೆಯ ಮೇಲೆ ಪ್ರಭಾವ ಬೀರಿದಳು. ದುಷ್ಟಬೀಜವನ್ನು ತಲೆಯೊಳಗೆ ನೆಟ್ಟಳು. ಬೀಜ ಚಿಗುರಿ ಹೆಮ್ಮರವಾಯಿತು. ರಾಮನ ಬದುಕಿಗೆ ತಿರುವು ನೀಡಿದವಳೇ ಮಂಥರೆ ರಾಮನೆಂದರೆ ಅಕ್ಕರೆ ತೋರುತ್ತಿದ್ದ ಮಂಥರೆ ರಾಮನ ವಿರುದ್ಧ ಕೈಕೆಯನ್ನು ಎತ್ತಿಕಟ್ಟಿದಳು. ಕುರೂಪಿಯಾಗಿದ್ದ ಮಂಥರೆಯನ್ನು ಕಂಡರೆ ಎಲ್ಲರೂ ತಿರಸ್ಕಾರದಿಂದ ಅಸಹ್ಯದಿಂದ ಕಾಣುತ್ತಿದ್ದರು. ಕೌಸಲ್ಯೆಯಂತೂ ರಾಮನನ್ನು ಎತ್ತಿಕೊಳ್ಳಲು ಬಿಡುತ್ತಿರಲಿಲ್ಲ. ಮಂಥರೆಯಾದರೂ ಅಷ್ಟೆ ಕೈಕೆಯ ಮನಮೆಚ್ಚಿಸಲು ಪ್ರೀತಿಯ ನಾಟಕವಾಡುತ್ತಿದ್ದಳು. ರಾಮನೆಂದರೆ ನನಗೂ ಪ್ರಾಣವೆಂದು ಮಾತು ಮಾತಿಗೂ ಹೇಳುತ್ತಿದ್ದಳು. ಆದರೆ ಒಳಗೊಳಗೆ ರಾಮನನ್ನು ಕಂಡರೆ ಕೌಸಲ್ಯೆಯನ್ನು ಕಂಡರೆ ಹೊಟ್ಟೆಕಿಚ್ಚಿನಿಂದ ನರಳುತ್ತಿದ್ದಳು. ಸಮಯಕ್ಕಾಗಿ ಕಾಯುತ್ತಿದ್ದಳು. ಅಂತಹ ಸಂದರ್ಭ ಮಂಥರೆಯ ಪಾಲಿಗೆ ಬಂತು. ಸಿಕ್ಕ ಅವಕಾಶವನ್ನು ಬಿಡದೆ ಚೆನ್ನಾಗಿ ಉಪಯೋಗಿಸಿಕೊಂಡು ಕೈಕೆಯ ತಲೆ ಕೆಡಿಸಿ ರಾಮನ ವಿರುದ್ಧ ಘೋರವಾದ ತೀರ್ಮಾನ ತೆಗೆದುಕೊಳ್ಳುವಂತೆ ಮನವೊಲಿಸಿದಳು. ಅವಳ ಒಂದೊಂದು ಮಾತು ಕೈಕೆಯ ಎದೆಯನ್ನು ಶೂಲದಂತೆ ತಿವಿಯಿತು. ಮಮತಾಮಯಿ, ಕೈಕೆ ಸಾಕ್ಷಾತ್ ಮಲತಾಯಿಯೇ ಆಗಿ ತನ್ನ ಭೀಕರ ರೂಪವನ್ನು ಪ್ರದರ್ಶಿಸಿದಳು.

“ದೇವಿ ! ನಿನ್ನ ಮಗನನ್ನು ತಾತನ ಮನೆಗೆ ಕಳುಹಿಸಿದ್ದರ ಮರ್ಮ ಗೊತ್ತಾಗಲಿಲ್ಲವೇ ನಿನಗೆ? ರಾಮನಿಗೆ ಪಟ್ಟಕಟ್ಟುವಾಗ ನಿನ್ನ ಮಗನಿದ್ದರೆ, ಅಡ್ಡಿ ಆತಂಕಗಳು ಬರಬಾರದೆಂದು ನೆಪಹೂಡಿ ದೂರ ಕಳಿಸಿದ್ದಾರೆ. ನೀನೀಗ ಎಚ್ಚೆತ್ತುಕೊಳ್ಳಬೇಕು”.

“ಮಂಥರೆ ! ರಾಮನಾದರೇನು? ಭರತನಾದರೇನು? ನನಗೆ ಇಬ್ಬರೂ ಒಂದೇ. ರಾಮನು ನನಗೆ ನನ್ನ ಮಗ ಭರತನಿಗಿಂತಲೂ ಹೆಚ್ಚು ರಾಮನು ರಾಜನಾಗುವುದೇ ನ್ಯಾಯ ಎಲ್ಲರಿಗೂ ಸಂತೋಷ ನನಗೆ ಸವತಿ ಮತ್ಸರವಿಲ್ಲ” “ನಿನ್ನ ಬುದ್ದಿಗೆ ಏನು ಹೇಳಲಿ? ರಾಮರಾಜನಾದರೆ ನಿನ್ನ ಮಗ ಊಳಿಗದವನಿಗಿಂತ ಕಡೆಯಾಗುತ್ತಾನೆ. ಕೌಸಲ್ಯ ರಾಜಮಾತೆಯಾಗಿ ಎಲ್ಲರಿಂದ ಗೌರವ, ಮರ್ಯಾದೆ ಪಡೆಯುತ್ತಾಳೆ. ನೀನು ಅವಳ ಕಾಲೊತ್ತುವ ದಾಸಿಗಿಂತಲೂ ಕಡೆಯಾಗಿ ಮಾತು ಮಾತಿಗೂ ಅವಳಿಗೆ ಜೈ ಪರಾಕು ಹೇಳುತ್ತಾ ಬದುಕಬೇಕಾಗುತ್ತದೆ” ಮಂಥರೆ ಸವತಿ ಮತ್ಸರದ ಪರಿಣಾಮಗಳನ್ನು ಎಳೆ ಎಳೆಯಾಗಿ ಬಿಡಿಸಿದಳು. ಮಂಥರೆಯ ದುರ್ಬೋಧನೆಗೆ ಕೈಕೆಗೆ ಜ್ಞಾನೋದಯವಾಯಿತು ಅವಳು ಕುಳಿತಲ್ಲೇ ಕೂರದೆ ನಿಂತಲ್ಲಿ ನಿಲ್ಲದೆ ವಿಚಾರ ಮಂಥನ ಮಾಡಿದಳು. ದಶರಥ ಮಹಾರಾಜನು ತನ್ನ ಹೆಂಡತಿ ಮಕ್ಕಳನ್ನು ಸಮಾನವಾಗಿ ಪ್ರೀತಿಸುತ್ತಿರಬೇಕಾದರೆ ರಾಜ್ಯವನ್ನು ಸರಿಯಾಗಿ ನಾಲ್ಕು ಪಾಲು ಮಾಡಿ ನಾಲ್ಕು ಮಂದಿಗೂ ಸಮಾನವಾಗಿ ಹಂಚಬೇಕಿತ್ತು. ಅದು ಬಿಟ್ಟು ರಾಮನೊಬ್ಬನಿಗೆ ಪಟ್ಟಕಟ್ಟಿ ಬೇರೆ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾನೆ. ಇದನ್ನು ಸರಿಪಡಿಸುವುದು ಹೇಗೆ? “ಏನು ಮಾಡಲಿ ಮಂಥರೆ ನನಗೇನು ತೋಚದಾಗಿದೆ. ನೀನೇ ಮುಂದಿನ ದಾರಿ ತೋರಿಸಬೇಕು. ನನ್ನ ಮಗನಿಗೂ ರಾಜ್ಯದಲ್ಲಿ ಸಮಪಾಲು ಸಿಗಬೇಕು. ಅದಕ್ಕಾಗಿ ನೀನು ಏನು ಹೇಳಿದರೂ ನಾನು ಕೇಳುತ್ತೇನೆ.”

“ಮಹಾರಾಣಿ ದೇವಾಸುರ ಯುದ್ಧದಲ್ಲಿ ಮಹಾರಾಜರ ಪ್ರಾಣ ಉಳಿಸಿದ್ದಕ್ಕಾಗಿ ಎರಡು ವರಗಳನ್ನು ಕೊಡುವುದಾಗಿ ಹೇಳಿದ್ದರಲ್ಲವೇ? ಇದೇ ಸರಿಯಾದ ಸಮಯ ಎರಡು ವರಗಳಲ್ಲಿ ಭರತನಿಗೆ ರಾಜ್ಯಾಭಿಷೇಕ, ಶ್ರೀರಾಮಚಂದ್ರನು ಹದಿನಾಲ್ಕು ವರ್ಷ ವನವಾಸ ಮಾಡಬೇಕೆಂದು ಕೇಳಿಕೋ” ಎಂದು ಬುದ್ದಿ ಹೇಳಿದಳು. ಕೈಕೆ ಮಂಥರೆಯ ಕುತಂತ್ರಕ್ಕೆ ಒಳಗಾಗಿ ತನ್ನ ಪಟ್ಟ ಸೀರೆ ವಜ್ರಾಭರಣಗಳನ್ನು ಕಳಚಿ ಮಲಿನವಾದ ಸೀರೆಯುಟ್ಟು ಸಿರಿ ಮಡಿಯನ್ನು ಬಿಚ್ಚಿ ಕೆದರಿಕೊಂಡು ನೆಲದ ಮೇಲೆ ಬಿದ್ದು ಅಳುತ್ತಾ ಕಪಟ ನಾಟಕ ಆರಂಭಿಸಿದಳು. ಇತ್ತ ಪ್ರಿಯ ಪತ್ನಿಗೆ ಪ್ರಿಯ ವಾರ್ತೆಯನ್ನು ತಿಳಿಸಲು ಉತ್ಸಾಹ, ಉಲ್ಲಾಸದಿಂದ ಅಂತಃಪುರಕ್ಕೆ ಧಾವಿಸಿದನು. ಬರುವಾಗಲೇ ಬಲಗಣ್ಣು ಅದುರಿತು. ಅನೇಕ ಅಪಶಕುನಗಳೆದುರಾದರೂ ಕಡೆಗಣಿಸಿ ಬಂದಾಗ ಅಂತಃಪುರದ ದೃಶ್ಯ ನೋಡಿ ಎದೆಯೊಡೆಯಿತು. ಸ್ಮಶಾನ ಮೌನ ಕವಿದ ಮಹಲಿನಲ್ಲಿ ಕೈಕೆಯ ದರ್ಶನವಾಗದೆ ಸಖಿಯರನ್ನು ಕಾಣದೆ ಇದೇನಿದು ಆಶ್ಚರ್ಯದಿಂದ ಕೋಪಗೃಹದಲ್ಲಿ ಕೈಕೆಯ ಭೀಕರ ರೂಪವನ್ನು ರಾಜನಿಗೆ ಸಿಡಿಲು ಬಡಿದಂತಾಯಿತು. ಪತ್ನಿಯನ್ನು ಎದೆಗೊತ್ತಿಕೊಂಡು ಸಮಾಧಾನ ಚಿತ್ತದಿಂದ ಮಡದಿಯ ಮನವೊಲಿಸಿ ಬಾಯಿಬಿಡಿಸಿದಾಗ ಬಂದ ಆಣಿಮುತ್ತುಗಳನ್ನು ಕೇಳಿ ಕಣ್ಣುಗಳು ಮಂಜಾಗಿ ಭೂಮಿ ಗರ ಗರ ತಿರುಗಿದಂತೆ ಕೈಕಾ ಮಾತುಗಳ ಬಾಣಗಳು ಎದೆಯಲ್ಲಿ ನೆಟ್ಟು ಅಪಾರವೇದನೆಯಿಂದ ತತ್ತರಿಸಿದನು. ಆದರೂ ಎದೆಗುಂದದೆ ಪತ್ನಿಯನ್ನು ನಾನಾ ರೀತಿಯಿಂದ ಮನವೊಲಿಸಿದನು. “ಮಂಗಳಾಂಗಿ ನಿನ್ನ ಮಗ ಭರತನಿಗೆ ಇಡೀ ರಾಜ್ಯವನ್ನೇ ಕೊಡುವೆ, ಅವನೇ ರಾಜನಾಗಲಿ, ಆದರೆ ನನ್ನ ಪ್ರಾಣಪದಕ ಶ್ರೀರಾಮಚಂದ್ರನಿಗೆ ವನವಸಾದ ವರವನ್ನು ಕೇಳಬೇಡ” ಎಂದು ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಕೈಕೇಯಿಯ ಹೃದಯ ಕಲಕಲಿಲ್ಲ ಒಂದೇ ಪಟ್ಟು; ಹೆಂಗಸರು ಹಠಮಾರಿಗಳಾಗಬಾರದು, ಗಂಡಸರು ಛಲಸಾಧಿಸಬಾರದು. ಆ ಮನೆ ನಾಶವಾಗುತ್ತದೆ. ಆದರೇನು! ಮುಂದಿನ ಲೋಕಕಲ್ಯಾಣಕ್ಕೆ ಶ್ರೀರಾಮನ ಅವಶ್ಯಕತೆ ಉಂಟಾಗಬೇಕಲ್ಲ. ಹಾಗಾಗಿ ಕೈಕೇಯಿಯ ಪಟ್ಟು ಸಡಿಲವಾಗಲಿಲ್ಲ. ಕ್ಷಣಾರ್ಧದಲ್ಲಿ ಸುದ್ದಿಯು ಅರಮನೆಯ ಹೊಸಿಲು ದಾಟಿ ಊರೆಲ್ಲಾ ವ್ಯಾಪಿಸಿತು.

ರಾಮ, ಲಕ್ಷ್ಮಣ, ಸೀತೆ, ಕೌಸಲ್ಯ, ಸುಮಿತ್ರ ಎಲ್ಲರಿಗೂ ವಿಷಯ ಅರಿವಾಯಿತು. ರಾಮನಿಗೆ ತಂದೆಯ ಸ್ಥಿತಿಗತಿಯನ್ನು ನೆನೆಸಿಕೊಂಡ ಗಾಬರಿಯಿಂದ ಬಂದನು. ತಂದೆಯವರ ಸ್ಥಿತಿ ನೋಡಿ ರಾಮನಿಗೆ ಮಾತು ಬಾರದಾಯಿತು. ಪರಿಪರಿಯಾಗಿ ತಂದೆಯವರನ್ನು ಸಮಾಧಾನಿಸಲು ಪ್ರಯತ್ನಿಸಿದನು. “ಮಗನೇ ರವಿಕುಲ ತಿಲಕನೇ ಪುರುಷೋತ್ತಮನೇ ಬಂದೆಯಾ ನೋಡು ನಿನ್ನ ತಂದೆಯ ದೀನ ಸ್ಥಿತಿಯನ್ನು ಕಂದಾ. ನಾವೊಂದೆಣಿಸಿದರೆ ದೈವ ಬೇರೊಂದು ಬಗೆಯಿತು. ಈ ಅರಮನೆ ವೈಭವದ ಬೀಡಾಗಿತ್ತು. ಮರ್‍ಯಾದೆಯ ಸಾಗರ, ಐಶ್ವರ್‍ಯದ ಗಣಿಯಾಗಿತ್ತು. ಈಗ ಅಶಾಂತಿ ಅವಮರ್ಯಾದೆಯ ಬೀಡಾಗಿದೆ ರಾಕ್ಷಸಿಯ ವಾಸಸ್ಥಾನವಾಗಿದೆ. ನಂದಗೋಕುಲದಂತಿದ್ದ ವೃಕ್ಷದ ಬೇರಿಗೆ ಉರಿಯನ್ನು ಹಚ್ಚಿದ ಮಹಾಪಾತಕಿ ಇವಳು, ಇವಳ ಅಂತರ್ಯ ತಿಳಿಯದೆ ಎರಡು ವಚನಗಳನ್ನು ಕೊಟ್ಟು ನನ್ನ ಕಾಲ ಮೇಲೆ ನಾನೇ ಕಲ್ಲು ಎತ್ತಿ ಹಾಕಿಕೊಂಡೆ. ಅದನ್ನು ಕೇಳಿ ಕೈಕೆ “ರಾಮ! ಸೂರ್ಯವಂಶದವರು ಕೊಟ್ಟಮಾತಿಗೆ ತಪ್ಪುವರಲ್ಲವೆಂಬ ನಂಬಿಕೆಯಿಂದ ವರನ್ನು ಬೇಡಿದೆ. ಕೊಡುವುದಾದರೆ ಕೊಡಲಿ, ಬಲವಂತವಿಲ್ಲ. ನಾನು ನನ್ನ ಮಗ ಭರತ ಹದಿನಾಲ್ಕು ವರ್ಷ ಕಾಡಿಗೆ ಹೋಗುವೆವು ತಮ್ಮ ಪ್ರೀತಿಯ ಮಗನಿಗೆ ಪಟ್ಟ ಕಟ್ಟಲು ಹೇಳು” ನಿಷ್ಟುರವಾಗಿ ನುಡಿದಳು. ಸ್ತ್ರೀಯರು ಮನಸ್ಸು ಮಾಡಿದರೆ ಎಂತಹ ಸಾಹಸಮಯ ಕೆಲಸವನ್ನಾದರೂ ಸಾಧಿಸಬಲ್ಲರೆಂಬುದಕ್ಕೆ ಕೈಕೆ ಸಾಕ್ಷಿಯಾಗಿದ್ದಳು. ಅವಳ ಧೈರ್ಯ ಸಾಹಸಕ್ಕೆ ಎಂಥವರೂ ತಲೆದೂಗಲೇಬೇಕು. ಕೈಕೆಯ ಮಾತು ಕೇಳಿ ರಾಮನು “ಅಮ್ಮಾ ನೀವು ನಿಶ್ಚಿಂತರಾಗಿರಿ. ತಂದೆಯವರ ಮಾತನ್ನು ನಾನು ನಡೆಸಿಕೊಡುತ್ತೇನೆ” ತಂದೆಯ ಕಡೆ ತಿರುಗಿ ಅಪ್ಪಾಜಿ ಇಷ್ಟು ಚಿಕ್ಕ ವಿಷಯಕ್ಕೆ ನೀವೇಕೆ ದುಃಖಪಡಬೇಡಿ, ಹದಿನಾಲ್ಕು ವರ್ಷ ಕಾಡಿಗೆ ಹೋಗುವುದರಿಂದ ಏನೂ ನಷ್ಟವಿಲ್ಲ. ಸಂತೋಷವಾಗಿ ಹೋಗಿ ಬರುತ್ತೇನೆ. ತಾಯಿಯವರಿಗೆ ನನ್ನಲ್ಲಿ ಅತಿಶಯವಾದ ಪ್ರೀತಿ! ಇಷ್ಟು ಚಿಕ್ಕ ವಯಸ್ಸಿಗೆ ಈ ಗುರುತರವಾದ ಜವಾಬ್ದಾರಿಯೇಕೆ? ನಾಲ್ಕಾರು ದಿನ ಕಾಡಿನಲ್ಲಿ ನೆಮ್ಮದಿಯಾಗಿ ಬಾಳಲಿ ಎಂದು ವರವನ್ನು ಕೇಳಿದ್ದಾರೆ. ಇದು ನನ್ನ ಭಾಗ್ಯ ಇದಕ್ಕಾಗಿ ನಾನು ತಾಯಿಯವರಿಗೆ ಚಿರ‌ಋಣಿ, ನಿಮ್ಮ ಮಾತನ್ನು ನಾನು ನಡೆಸಿಕೊಡುತ್ತೇನೆ. ನೀವು ನಿಶ್ಚಿಂತೆಯಾಗಿ’ ಎಂದು ನಮಸ್ಕರಿಸಿ ತಡಮಾಡದೆ ತನ್ನ ಹೆತ್ತ ತಾಯಿ ಕೌಸಲ್ಯೆಯನ್ನು ಕಾಣಲು ಹೊರಟನು. ನೂರಾರು ಕನಸುಗಳನ್ನು ಕಟ್ಟಿ ಸುಖದ ಉಯ್ಯಾಲೆಯಲ್ಲಿ ಬೀಕುತ್ತಿದ್ದ ಕೌಸಲ್ಯೆಗೆ ಒಮ್ಮೆಲೆ ಬರಸಿಡಿಲು ಬಡಿದಂತೆ “ಅಯ್ಯೋ ನನ್ನ ಮುದ್ದು ಕಂದ ಕಾಡಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದುಕೊಂಡು ನಡೆಯಬೇಕೇ? ಗುಡಿಸಲು ಕಟ್ಟಿ ವಾಸ ಮಾಡಬೇಕೇ? ಕಂದ ಮೂಲಾದಿ ಫಲಗಳನ್ನು ತಿಂದು ಬದುಕಬೇಕೇ? ನಾನು ಅರಮನೆಯಲ್ಲಿದ್ದು ರಾಜ್ಯ ಭೋಗಗಳನ್ನು ಭೋಗಿಸುತ್ತಾ ನನ್ನ ಕಂದಮ್ಮಗಳನ್ನು, ಮುದ್ದಿನ ಸೊಸೆಯನ್ನು ! ಶಿವಾ ಶಿವಾ! ನನಗೇಕೆ ಈ ಶಿಕ್ಷೆ? ಯಾವ ತಪ್ಪಿಗೆ ನನ್ನ ಮಕ್ಕಳಿಗೆ ಈ ದುರ್ಗತಿ! ಅವಳ ವೇದನೆಯನ್ನು ಕಂಡು ಅರಮನೆಯ ಗೋಡೆಯ ಮೇಲಿದ್ದ ಕಲ್ಲುಗೊಂಬೆಗಳು ಕಣ್ಣೀರು ಕರೆದವು. ದೇವತೆಗಳು ಸಂಕಟಪಟ್ಟರು. ಮಗ ಬಂದಕೂಡಲೇ ಬಿಗಿದಪ್ಪಿ ಗೋಳಾಡತೊಡಗಿದಳು. ಎಷ್ಟು ಸಮಾಧಾನಿಸಿದರೂ, ತಾಯ ಹೃದಯದ ಕಣ್ಣೀರು ನಿಲ್ಲಲಿಲ್ಲ. ಹಿಂದೆಯೇ ಬಂದ ಲಕ್ಷ್ಮಣನು ಹಸಿದ ಹುಲಿಯಂತೆ ಗರ್ಜಿಸುವ ಸಿಂಹದಂತೆ “ಅದು ಹೇಗೆ ಭರತ ರಾಜ್ಯವಾಳುತ್ತಾನೋ ನಾನು ನೋಡಿಯೇ ಬಿಡುತ್ತೇನೆ. ಅಗ್ರಜಾ ! ಅರವತ್ತಕ್ಕೆ ಅರಳು ಮರುಳೆಂದು ಈ ವಯಸ್ಸಿನಲ್ಲಿ ತಂದೆಯವರ ಪಿತ್ತ ನೆತ್ತಿಗೇರಿದೆ. ಹೆಂಡತಿಯ ಮಾತು ಕೇಳಿ ಗೆಜ್ಜೆ ಕಟ್ಟಿಕೊಂಡು ಕುಣಿಯುವ ಗಂಡಂದಿರು ಯಾರೂ ಉದ್ಧಾರವಾಗುವುದಿಲ್ಲ. ತಂದೆಯವರ ಮಾತಿಗೆ ಮನ್ನಣೆ ಕೊಡಬೇಡ, ಗುರುಹಿರಿಯರ ಸಲಹೆಯಂತೆ ನೀನು ರಾಜನಾಗು, ಪಟ್ಟಾಭಿಷಕ್ತನಾಗು” ಎನ್ನಲು ರಾಮನು “ಈ ರಾಮನು ಕೊಟ್ಟ ಮಾತನ್ನು ಬಿಟ್ಟ ಬಾಣವನ್ನು ಹಿಂದಕ್ಕೆ ಪಡೆಯಲಾರೆನು. ಪಿತೃವಾಕ್ಯ ಪರಿಪಾಲನೆಯೇ ನನಗೆ ರಾಜ್ಯ, ಪದವಿಯು, ನೀನು ದುಡುಕಿ ಮಾತನಾಡಬೇಡ, ಭರತನಿಗೆ ಸಹಾಯಕನಾಗಿದ್ದು ರಾಜ್ಯವನ್ನು ಧರ್ಮದಿಂದ ಪಾಲಿಸಿರಿ” ಎನ್ನಲು “ಅಣ್ಣಾ ನಾನು ನಿನ್ನನ್ನು ಬಿಟ್ಟಿರಲಾರೆ. ನೀನೆಲ್ಲೋ ನಾನಲ್ಲೆ, ನನಗೂ ನಾರುಮಡಿಯನ್ನು ಕೊಡು ಉಡುತ್ತೇನೆ” ಎಂದು ಇಬ್ಬರೂ ವಲ್ಕಲವನ್ನು ಉಟ್ಟು, ವನವಾಸಕ್ಕೆ ಹೊರಡಲು ಸಿದ್ಧರಾದರು. ಆಗ ಸೀತಾದೇವಿಯು “ದೇವಾ ನನ್ನದೊಂದು ಕೋರಿಕೆ. ಸ್ತ್ರೀಯರಿಗೆ ಪತಿಯೇ ಸರ್ವಸ್ವ ನಾನು ನಿಮ್ಮ ನೆರಳು, ಹೂವಿನಲ್ಲಿ ಪರಿಮಳ, ಚಂದ್ರನಲ್ಲಿ ಕಾಂತಿ ಇರುವಂತೆ ನಾನೂ ನಿಮ್ಮೊಡನೆ ವನವಾಸಕ್ಕೆ ಬರುತ್ತೇನೆ”. “ಬೇಡ ! ಕಾಡಿನಲ್ಲಿ ನಾನಾ ಕಷ್ಟಗಳು ಎದುರಾಗುತ್ತವೆ. ನೀನು ಸುಕೋಮಲೆ, ರಾಜಕುಮಾರಿ ನಿನಗೆ ಅಭ್ಯಾಸವಿಲ್ಲ ನೀನು ಇಲ್ಲಿಯೇ ಇದ್ದು ಅತ್ತೆ ಮಾವರ ಸೇವೆ ಮಾಡಿಕೊಂಡಿರು”

ಪ್ರಭು ಎಷ್ಟು ಸಂಪತ್ತು ಸೌಲಭ್ಯವಿದ್ದರೇನು? ಹೆಂಡತಿಗೆ ಗಂಡನ ಪ್ರೀತಿಯ ಹೊರತು ಬೇರೆ ಸುಖವಿಲ್ಲ. ಗಂಡನ ಸುಖದಃಖಗಳಲ್ಲಿ ಪಾಲುದಾರಳಾಗಬೇಕಾದ್ದು ಸತಿಯ ಧರ್ಮ. ಧರ್ಮ ಮಾರ್ಗದಲ್ಲಿ ನಡೆಯಲು ನನಗೆ ಅನುಮತಿ ಕೊಡಿರಿ, ಇಲ್ಲವೆನ್ನಬೇಡಿ.” ಸೀತೆಯು ನಾರುಮಡಿಯನ್ನುಟ್ಟು ಅತ್ತೆಯನ್ನು ಸಮಾಧಾನ ಮಾಡಿ ಗಂಡ, ಮೈದುನನ ಹಿಂದೆ ಹೊರಟಳು. ಮೂವರೂ ಬರಿಗಾಲಿನಿಂದ ನಡೆಯುತ್ತಾ ನಗರದಿಂದ ಹೊರಟು ಸರಾಯು ನದಿ ದಾಟಿ ಕಾಡಿಗೆ ಸೇರಿದರು. ಗಂಗಾನದಿಯನ್ನು ದಾಟಿ ಮುಂದೆ ಹೋಗಬೇಕಿತ್ತು. ಆಗ ಶ್ರೀರಾಮನ ಮಿತ್ರನಾದ ಗುಹನು ಪ್ರೇಮದಿಂದ ಉಪಚರಿಸಿ ನಾವೆಯಿಂದ ಗಂಗಾನದಿ ದಾಟಿಸಿದರು. ಗಂಗಾ ಯಮುನಾ ನದಿಗಳ ಸಂಗಮಕ್ಕೆ ಬಂದರು. ಅಲ್ಲಿ ಭಾರಧ್ವಾಜ ಮುನಿಗಳ ಆಶ್ರಮದಲ್ಲಿ ಸತ್ಕಾರವನ್ನು ಪಡೆದು ಚಿತ್ರಕೂಟ ಪರ್ವತಕ್ಕೆ ಬಂದು ಪರ್ಣಕುಟಿ ನಿರ್ಮಿಸಿ ಆ ಸುಂದರವಾದ ಪ್ರದೇಶದಲ್ಲಿ ವಾಸ ಮಾಡಿದರು. ಸುಮಂತನು ಹಿಂದಿರುಗಿ ರಾಮನು ಕಾಡು ಸೇರಿದ ಬಗೆಯನ್ನು ಅತ್ಯಂತ ದುಃಖದಿಂದ ವಿವರಿಸಲು ದಶರಥನು ಹಿಂದೆ ತಾನು ಮಾಡಿದ ಅಚಾತುರ್ಯದಿಂದ ತಾನೆಣಿಸಿದ ತಪ್ಪು ಕಣ್ಮುಂದೆ ನರ್ತಿಸಿ ಶಾಪದ ಫಲ ಇಷ್ಟು ಬೇಗ ಫಲಿಸಿತಲ್ಲ ಎಂದು ನೊಂದುಕೊಂಡನು. ಶ್ರವಣಕುಮಾರನ ಮುದ್ದು ಮುಖ; ಆತನ ತಂದೆತಾಯಿಗಳು, ಎಲ್ಲರೂ ನೆನಪಾದರು. ತಾನು ಮಾಡಿದ ಅಚಾತುರ್ಯದಿಂದ ಶ್ರವಣಕುಮಾರನನ್ನು ಕೊಂದಾಗ ಆತನ ತಂದೆತಾಯಿಗಳು ಪಟ್ಟ ಸಂಕಟವೆಷ್ಟು, ಅವರು ಮಗನನ್ನು ಕಳೆದುಕೊಂಡು ಗೋಳಾಡುತ್ತಿರುವಾಗ ತನಗೂ ಇದೇ ಗತಿ ಮುಂದೊಂದು ದಿನ ಬರಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ. “ನಮ್ಮ ಮುಪ್ಪಿನ ಕಾಲದಲ್ಲಿ ಮಗನನ್ನು ಕಳೆದುಕೊಂಡು ಸಾಯುವ ಸ್ಥಿತಿ ತಂದಿಟ್ಟೆ ಅದೇ ರೀತಿ ಮುಪ್ಪಿನ ಕಾಲದಲ್ಲಿ ಪುತ್ರವಿಯೋಗದಿಂದ ನಿನಗೂ ಮರಣವುಂಟಾಗಲಿ” ಎಂದು ಶಾಪವಿತ್ತರು. ಅದನ್ನು ನೆನೆಸಿಕೊಂಡು ಪುತ್ರಶೋಕದಿಂದ ಕಂಗೆಟ್ಟು ಬೆಂದು, ಬಸವಳಿದು ಎದೆಯೊಡೆದು ಪ್ರಾಣಬಿಟ್ಟನು. ವಿಷಯ ತಿಳಿದು ಭರತ ಶತ್ರುಘ್ನರು ಅಯೋಧ್ಯೆಗೆ ಧಾವಿಸಿ ತಂದೆಯ ಮರಣಕ್ಕೆ ಶೋಕಿಸಿದರು. ಕೈಕೆಯು ಮಾಡಿದ ಹೀನಕೃತ್ಯಕ್ಕೆ ನಾಚಿ, ರೋಸಿಹೋಗಿ ಮಗನಾದ ಭರತನೇ ತಾಯಿಯನ್ನು ಕೊಲ್ಲಲು ಖಡ್ಗವನ್ನು ಎತ್ತಿದನು. ಅಲ್ಲಿ ನೆರೆದಿದ್ದವರೆಲ್ಲ ಭರತನನ್ನು ಸಮಾಧಾನ ಪಡಿಸಿ ಮುಂದಿನ ಕಾರ್ಯವನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ಬುದ್ಧಿ ಹೇಳಿದರು. ಭರತನಾದರೋ ರಾಮನನ್ನು ಕಾಣದೆ ಹಸುವನ್ನು ಕಳೆದುಕೊಂಡ ಕರುವಿನಂತೆ ಕಳವಳಿಸಿದನು. ಹೇಗಾದರೂ ಮಾಡಿ ಅವನನ್ನು ಅಯೋಧ್ಯೆಗೆ ಕರೆತರಲೇಬೇಕೆಂದು ಪಣತೊಟ್ಟು ತಾಯಂದಿರು, ಮಂತ್ರಿಗಳು, ಗುರುಗಳು, ನಾಗರೀಕರೊಂದಿಗೆ ಚಿತ್ರಕೂಟಕ್ಕೆ ಬಂದನು. ರಾಮನನ್ನು ಕಂಡಕೂಡಲೇ ತಾಯಿಯನ್ನು ಕಂಡ ಮಗುವಿನಂತೆ ಓಡೋಡಿ ಬಂದು ರಾಮನ ಪಾದಗಳ ಮೇಲೆ ಬಿದ್ದು ಕಣ್ಣೀರು ಕರೆದನು. ಮತ್ತೆ ಅಯೋಧ್ಯೆಗೆ ಹಿಂದಿರುಗಿ ಬಂದು ರಾಜನಾಗಬೇಕೆಂದು ತಂದೆಯವರ ಸ್ಥಾನದಲ್ಲಿ ನಿಂತು ತಮ್ಮನ್ನು ಪಾಲಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡನು. ಕೌಶಲ್ಯ, ಕೈಕೆ, ಸುಮಿತ್ರೆಯರು ರಾಮನಪ್ಪಿಕೊಂಡು ವಿಧವಿಧವಾಗಿ ಪ್ರಾರ್ಥಿಸಿದರು. “ಇಲ್ಲ ಮಗನು ವಚನ ದ್ರೋಹಿಯಾದರೆ ಸ್ವರ್ಗಸ್ಥನಾದ ತಂದೆಗೆ ದುಃಖವಾಗುತ್ತದೆ. ಸೂರ್ಯವಂಶದ ರಾಜರು ಯಾರೂ ಕೊಟ್ಟ ವಚನ ಮುರಿದಿಲ್ಲ. ಹದಿನಾಲ್ಕು ವರ್ಷ ಭರತ ರಾಜ್ಯವಾಳಲಿ ಆಮೇಲೆ ನಾನೇ ಬಂದು ಅರಸನಾಗಿ ಆಳುವೆನು” ಎಂದು ಸಂತೈಸಿ ಕಳುಹಿಸಿದನು. ಭರತ ಮಾತ್ರ ಎಷ್ಟು ಸಂತೈಸಿದರೂ ಸಮ್ಮತಿಸಿದೆ. “ಹಿರಿಯನಾದ ನೀನೀರುವಾಗ ನನಗೇಕೆ ಈ ರಾಜ್ಯ ಕೋಶ? ನಿನಗಿಂತಲೂ ನನಗೆ ಪದವಿ ಅಧಿಕಾರ ಬೇಕಿಲ್ಲ. ನೀನೇ ನನ್ನ ತಂದೆ, ಗುರು, ಆರಾಧ್ಯದೈವ! ನಾನು ನಿನ್ನೊಂದಿಗೆ ಹದಿನಾಲ್ಕು ವರ್ಷ ವನವಾಸಮಾಡುತ್ತೇನೆ. ಲಕ್ಷ್ಮಣನೂ ನಿನ್ನ ತಮ್ಮನಲ್ಲವೇ? ಅವನೇ ರಾಜನಾಗಲಿ ಮೂವರು ತಮ್ಮಂದಿರಲ್ಲಿ ನಿನಗೆ ಲಕ್ಷಣ ಮಾತ್ರ ಪ್ರಿಯನೇ? ನಾವ್ಯಾರು ನಿನ್ನ ತಮ್ಮಂದಿರಲ್ಲವೇ ಏಕೆ ಈ ಪಕ್ಷಪಾತ! ನಾನು ರಾಜನಾಗುವುದಿಲ್ಲ ಎಂದು ಹಠ ಮಾಡಿದನು. “ರಾಮನು ತಂದೆಯ ಮಾತಿನಂತೆ ನಾನು ವನವಾಸ ಮಾಡುತ್ತೇನೆ. ತಾಯಿಯ ಮಾತಿನಂತೆ ನೀನು ರಾಜನಾಗು. ಇಬ್ಬರ ಮಾತನ್ನು ಪಾಲಿಸುವುದು ನಮ್ಮ ಧರ್ಮ. ನನ್ನ ಆಣತಿಯನ್ನು ನೀನು ಪಾಲಿಸಬೇಕು. ಗೌರವಿಸಬೇಕು. ಭರತ ನಾನು ಎಲ್ಲೇ ಇದ್ದರೂ ನಿನ್ನ ಮನಸ್ಸಿನಲ್ಲಿ ನಾನಿರುತ್ತೇನೆ” ಎಂದು ಪರಿಪರಿಯಾಗಿ ಓಲೈಸಿದನು. “ಆಯಿತು ನಾನು ಮಾತ್ರ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಿಲ್ಲ ನಿನ್ನ ಪಾದುಕೆಗಳನ್ನು ಕೊಡು ಅದನ್ನೇ ಪಟ್ಟದ ಮೇಲಿರಿಸಿ ನೀನು ಬರುವವರೆಗೆ ನಾನು ರಾಜ್ಯವಾಳುತ್ತೇನೆ. ಹದಿನಾಲ್ಕು ವರ್ಷ ಕಳೆದು ಒಂದು ದಿನ ತಪ್ಪಿದರೂ ನಾನು ಅಗ್ನಿಪ್ರವೇಶ ಮಾಡುತ್ತೇನೆಂದು ಒಪ್ಪಂದ ಮಾಡಿಕೊಂಡು ಅಯೋಧ್ಯೆಗೆ ಹಿಂದಿರುಗಿದನು.

*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಥೆಲೋ ನಾಟಕ ಓದಿ
Next post ನನ್ನ ವಾಣಿಯ ನೀನು ವರಿಸಿದವನೇನಲ್ಲ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys