ಸ್ವಾನುಭವ ಮತ್ತು ಸಾಹಿತ್ಯ

ಸ್ವಾನುಭವ ಮತ್ತು ಸಾಹಿತ್ಯ

ಪಂಚೇಂದ್ರಿಯಗಳು ನಮಗೆ ಒದಗಿಸುವ ಸಂವೇದನೆಗಳಲ್ಲಿ ಕಲೆಗೆ ಮಾಧ್ಯಮವಾಗಿ ಉಪಯೋಗವಾಗುವುದು ಕೇವಲ ಎರಡೇ ಎನ್ನುತ್ತಾನೆ ಹೆಗೆಲ್: ದೃಶ್ಯ (ದೃಷ್ಟಿ) ಮತ್ತು ಧ್ವನಿ (ಶ್ರವಣ). ಯಾಕೆಂದರೆ ಇವುಗಳಿಂದ ನಾವು ಕಲಾಭಿವ್ಯಕ್ತಿಗೆ ಅಗತ್ಯವಾದ ಸುದೂರವನ್ನು ಗಳಿಸಿಕೊಳ್ಳುವುದು ಸಾಧ್ಯವಿದೆ. ಉಳಿದ ಸಂವೇದನೆಗಳಾದ ವಾಸನೆ, ರುಚಿ ಮತ್ತು ಸ್ಪರ್ಶ ನಮಗೆ ತೀರಾ ಹತ್ತಿರವಾಗಿದ್ದು ಇವು ಕಲಾಮಾಧ್ಯಮವಾಗುವುದಕ್ಕೆ ತಕ್ಕವಲ್ಲ. ನಮ್ಮ ಒಟ್ಟಾರೆ ಅನುಭವ ಜಗತ್ತಿಗೆ ಬಂದಾಗ ಅದು ಈ ಎಲ್ಲ ಪಂಚೇಂದ್ರಿಯಗಳನ್ನೂ ಉಪಯೋಗಿಸುವುದು ಕಂಡುಬರುತ್ತದೆ. ನಾವು ನೇರವಾಗಿ ಕಂಡು, ಕೇಳಿ, ಮೂಸಿ, ಉಂಡು ಮತ್ತು ಮುಟ್ಟಿ ಪಡೆದ ಅನುಭವವನ್ನು ಸ್ವಾನುಭವವೆಂದು ಕರೆಯುತ್ತೇವೆ. ಆದರೆ ನಮ್ಮ ಅನುಭವ ಪ್ರಪಂಚ ಇಷ್ಟಕ್ಕೆ ಸೀಮಿತವೂ ಅಲ್ಲವಲ್ಲ? ನಾವು ಪುಸ್ತಕಗಳಲ್ಲಿ ಓದಿ, ಇತರರು ಹೇಳುವುದನ್ನು ಕೇಳಿ ಪಡೆದ ಅನುಭವಗಳೂ ನಮ್ಮದೇ ಅಲ್ಲವೇ? ಇಲ್ಲಿಯೂ ದೃಶ್ಯ (ಬರೆಯುವುದು, ಓದುವುದು) ಮತ್ತು ಧ್ವನಿ (ಮಾತಾಡುವುದು, ಕೇಳುವುದು) ಎಂಬೀ ಇಂದ್ರಿಯಗಳೇ ಈ ಪರೋಕ್ಷ ಅನುಭವಗಳಿಗೆ ಮಾಧ್ಯಮಗಳಾಗಿ ಒದಗುವುದು; ಉಳಿದ ಇಂದ್ರಿಯಗಳಿಂದ ನಾವು ಪಡೆಯುವ ವಾಸನೆ, ರುಚಿ ಮತ್ತು ಸ್ಪರ್ಶ ನೇರವಾದ ಅನುಭವಗಳು. ಆದರೆ ನಮ್ಮ ಮಟ್ಟಿಗೆ ಅಪರೋಕ್ಷವಾಗಿ ಪಡೆಯುವ ಅನುಭವಗಳು ಅತ್ಯಂತ ಅಮೂಲ್ಯವಾದವು; ಯಾಕೆಂದರೆ ಮನುಷ್ಯ ನಾಗರಿಕತೆ ನಿಂತಿರುವುದೇ ಇವುಗಳ ಮೇಲೆ.

ಪಲವುಂ ಪಳ್ಳ ಸಮುದ್ರವೈ ಎನ್ನುತ್ತಾನೆ ಪಾಲ್ಕುರಿಕೆ ಸೋಮನಾಥ. ನಿಜ, ನಮ್ಮ ಅನುಭವ ಸಂಪತ್ತು ಸಮುದ್ರದಂತೆ ಆಳ ವಿಸ್ತಾರಗಳನ್ನು ಹೊಂದಿದುದಾಗಿದೆ. ಅದರಲ್ಲಿ ಯಾವ ಮೂಲದಿಂದ ಏನು ಬಂತು ಎಂದು ಪ್ರತ್ಯೇಕಿಸುವುದು ಕಷ್ಟ ಮಾತ್ರವೂ ಅಲ್ಲ, ಸರಿಯಲ್ಲದೆಯೂ ಇರಬಹುದು. ಆದರೂ ಸ್ವಾನುಭವ ಅರ್ಥಾತ್ ನೇರ ಅನುಭವ ಎನ್ನುವುದು ಇದು ಸಾಹಿತ್ಯದ ದೃಷ್ಟಿಯಿಂದ ಬಹಳ ಮುಖ್ಯವಾದುದು. ಯಾಕೆಂದರೆ ಇದೇ ಹೆಚ್ಚು ಗಾಢವೂ ವಿಶ್ವಾಸಾರ್ಹವೂ ಆದುದು. ಆದ್ದರಿಂದಲೇ ಯಾಕೆಂದರೆ ಇದೇ ಹೆಚ್ಚು ಗಾಢವೂ ವಿಶ್ವಾಸಾರ್ಹವೂ ಆದುದು. ಆದ್ದರಿಂದಲೇ ಬರಹಗಾರರು ಹೆಚ್ಚಾಗಿ ಸ್ವಾನುಭವಗಳನ್ನೇ ಉಪಯೋಗಿಸಿಕೊಂಡು ಬರೆಯುತ್ತಾರೆ. ಪ್ರತಿಯೊಂದು ಕತೆ ಕಾದಂಬರಿಗಳಲ್ಲೂ ಒಂದಲ್ಲ ಒಂದು ಪ್ರಮಾಣದಲ್ಲಿ ಲೇಖಕನ ‘ಆತ್ಮಚರಿತ್ರೆ’ಯ ಚೂರುಗಳು ಇದ್ದೇ ಇರುತ್ತವೆ. ಸ್ವಂತ ಜೀವನಕ್ಕಿಂತ ಹೆಚ್ಚಿನ ಸ್ವಾನಭವ ಇನ್ನೊಂದು ಇಲ್ಲವಲ್ಲ! ಹಲವು ಪಾತ್ರಗಳು ಕತೆಗಾರರು ತಾವು ಜೀವನದಲ್ಲಿ ಕಂಡ, ಮಾತಾಡಿಸಿದ, ವ್ಯವಹರಿಸಿದ ನಿಜ ಜೀವಿಗಳೇ ಆಗಿರುತ್ತಾರೆ. ಇದೇ ಮಾತು ವಸ್ತು ವಿಷಯ ಹಾಗೂ ಘಟನೆಗಳಿಗೆ ಸಂಬಂಧಿಸಿದಂತೆಯೂ ಸರಿ. ಹಾಗಿದ್ದಾಗಲೇ ಕಥಾನಕಕ್ಕೊಂದು ನೈಜತೆ ಬರುವುದು. ಅದಲ್ಲದೆ ಕಲ್ಪಿಸಿ ಬರೆದರೆ ಅದರಲ್ಲಿ ಹಲವು ‘ತಪ್ಪುಗಳು’ ಬರುವ ಸಾಧ್ಯತೆಗಳು ಹೆಚ್ಚು. ಇಲ್ಲಿ ತಪ್ಪುಗಳೆಂದರೆ, ಗೊತ್ತಿಲ್ಲದೆ ಆಗುವ ಪ್ರಮಾದಗಳು ಎಂದು ಅರ್ಥ. ನನ್ನದೇ ಒಂದು ಉದಾಹರಣೆಯನ್ನು ಕೊಡುವುದಾದರೆ, ನಾನು ‘ತರಂಗಾಂತರ’ ಎಂಬ ಕಿರುಕಾದಂಬರಿಯನ್ನು ಬರೆಯುವಾಗ, ಅದರಲ್ಲಿ ಟೀವಿಯ ರಿಮೋಟ್ ಕಂಟ್ರೋಲನ್ನು ಪ್ರಸ್ತಾವಿಸುವ ಅಗತ್ಯ ಬಂತು; ಈ ಸಲಕರಣೆಯೊಳಗಿನ ವಯರುಗಳೆಲ್ಲ ಹಾಳಾಗಿಹೋಗಿದ್ದುವು ಎಂದು ಬರೆದಿದ್ದೆ. ಇದನ್ನು ಓದಿದ ಎಂ. ಎಸ್. ಶ್ರೀರಾಮ್ ನನಗಂದರು ರಿಮೋಟ್ ಕಂಟ್ರೋಲ್‌ನೊಳಗೆ ವಯರುಗಳಿರುವುದಿಲ್ಲ, ಇರುವುದು ವಿದ್ಯುನ್ಮಾನ ಚಿಪ್ಪುಗಳು ಎಂಬುದಾಗಿ! ನಾನು ಗೊತ್ತಿಲ್ಲದೆ ಊಹಾಪೋಹದಲ್ಲಿ ಹಾಗೆ ತಪ್ಪು ಮಾಡಿದ್ದೆ. ರಿಮೋಟ್ ಕಂಟ್ರೋಲ್ ಎಂಬ ಸಂಗತಿಯೇ ಹೊಸದಾಗಿದ್ದ ಕಾಲ ಅದು. ಈ ತಪ್ಪನ್ನು ನನಗೆ ಎತ್ತಿ ತೋರಿಸಿ ಶ್ರೀರಾಮ್ ಉಪಕಾರ ಮಾಡಿದರು. ಇಲ್ಲದಿದ್ದರೆ ಕಾದಂಬರಿಯಲ್ಲಿ ಅದು ಉಳಿದುಹೋಗಿ ತಮಾಷೆಗೆ ಕಾರಣವಾಗುತ್ತಿತ್ತು. ಪಾಶ್ಚಾತ್ಯ ದೇಶಗಳಲ್ಲಾದರೆ, ಪ್ರಕಟಣೆಗೆ ಬಂದ ಹಸ್ತಪ್ರತಿಗಳನ್ನು ಸೂಕ್ಷ್ಮವಾಗಿ ಓದಿನೋಡಿ ಇಂಥ ತಪ್ಪುಗಳನ್ನು ಕಿತ್ತುಹಾಕುವ ಸಂಪಾದಕರಿರುತ್ತಾರೆ. ನಮ್ಮ ದೇಶದಲ್ಲಿ ಅಂಥ ಅನುಕೂಲತೆಗಳಿಲ್ಲವಾದ್ದರಿಂದ ಲೇಖಕರು ನಾವು ನಾವೇ ಬಹಳ ಜಾಗರೂಕರಾಗಿರಬೇಕಾಗುತ್ತದೆ.

ಯು. ಆರ್. ಅನಂತಮೂರ್ತಿಯವರು “ಸಂಸ್ಕಾರ” ಕಾದಂಬರಿಯಲ್ಲಿ ತಮ್ಮ ಸ್ಚಾಲೋಕಾನುಭವಗಳನ್ನು ಬಹಳಷ್ಟು ಉಪಯೋಗಿಸಿಕೊಂಡಿದ್ದಾರೆ. ದೂರ್ವಾಸಪುರ ಎಂಬ ಕಾಲ್ಪನಿಕ ಹೆಸರಿನ ಅಗಹಾರ ಲೇಖಕರು ಬೆಳೆದ ತಾಣವೇ ಇರಬಹುದು. ಹಾಗೂ ಅಲ್ಲಿನ ಪಾತ್ರಗಳೂ ಅವರು ಕಂಡಂಥ ವ್ಯಕ್ತಿಗಳ ಮಾದರಿಯ ಮೇಲಿಂದ ರೂಪಿತಗೊಂಡಿರಲೂಬಹುದು. ಅದೇ ರೀತಿ ಕಾದಂಬರಿಯಲ್ಲಿನ ಹಲವಾರು ಘಟನೆಗಳಿಗೂ ವಾಸ್ತವವಾಗಿ ನಡೆದ ಘಟನೆಗಳ ಆಧಾರವಿರಬಹುದು. ಈ ಕತೆಯಲ್ಲಿ ಪ್ಲೇಗಿನ ಪ್ರಸಂಗ ಬರುತ್ತದೆ. ಪ್ಲೇಗಿನಲ್ಲಿ ಸತ್ತುಬಿದ್ದಿರುವ ಇಲಿಗಳನ್ನು ಎತ್ತಿಕೊಂಡು ಹೋಗಲು ಮನೆಗಳ ಮೇಲೆ ಕಾಗೆ ರಣಹದ್ದುಗಳು ಮುತ್ತಿಕ್ಕುತ್ತವೆ. ಇವುಗಳನ್ನು ಓಡಿಸಲು ಅಗ್ರಹಾರದ ನಿವಾಸಿಗಳು ಶಂಖ ಜಾಗಟೆ ಮುಂತಾದ ವಾದ್ಯಗಳನ್ನು ಉಪಯೋಗಿಸುವ ವಿವರವಿದೆ. ಕಾದಂಬರಿ ಪ್ರಕಟವಾದ ಹೊಸತರಲ್ಲಿ ಇದನ್ನೋದಿದ ಕೆಲವರು ಪ್ಲೇಗ್ನಲ್ಲಿ ಸತ್ತ ಇಲಿಗಳನ್ನು ಕಾಗೆಗಳಾಗಲಿ ಇತರ ಯಾವುದೇ ಪ್ರಾಣಿಗಳಾಗಲಿ ಮುಟ್ಟುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ಷೇಪ ನಿಜವಿರಲೂಬಹುದು. ತಮ್ಮ ಊರಿಗೆ ಪ್ಲೇಗ್ ಬಂದ ಕುರಿತು ಅನಂತಮೂರ್ತಿಯವರು ಇತರೆಡೆ ಪ್ರಸ್ತಾಪಿಸಿದ್ದರಿಂದ ಅವರಿಗೆ ಈ ರೋಗದ ಬಗ್ಗೆ ಅರಿವು ಇರಲೇಬೇಕು; ಆದರೂ ಬಹುಶಃ ಈ ಕಾಗೆ ರಣಹದ್ದುಗಳು ಸುತ್ತಾಡುವ ಸಂಗತಿ ಅವರ ಊಹೆಯಾಗಿರಬಹುದು. ಯಾರಿಗೇ ಆದರೂ ಎಲ್ಲದರ ಕುರಿತೂ ಎಲ್ಲವೂ ಗೊತ್ತಿರುವುದಿಲ್ಲ ಎನ್ನುವುದನ್ನು ನಾವೆಲ್ಲ ಒಪ್ಪುತ್ತೇವೆ; ಅದೇ ರೀತಿ ಕೆಲವರ ಬಗ್ಗೆ ಕೂಡಾ ಎಲ್ಲವೂ ಗೊತ್ತಿರುತ್ತದೆ ಎನ್ನುವುದು ಕೂಡಾ ಮಹತ್ಚಾಕಾಂಕ್ಷೆಯೇ ಆಗುತ್ತದೆ. ಅದರಲ್ಲೂ ಪ್ಲೇಗಿನಂಥ ಘೋರ ರೋಗಗಳ ಕುರಿತಾಗಿ ಎಲ್ಲವೂ ಗೊತ್ತಿರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಗಮನಿಸಿ ನೋಡಿದರೆ ಬಹುಶಃ ಎಲ್ಲಾ ಸಾಹಿತ್ಯಕೃತಿಗಳಲ್ಲೂ ಇಂಥ ಅನೇಕ ಅಸಂಭಾವ್ಯಗಳನ್ನು ಕಂಡು ಹುಡುಕುವುದು ಸಾಧ್ಯವೆಂದು ತೋರುತ್ತದೆ. ಯಾಕೆಂದರೆ ಯಾವ ಒಬ್ಬ ಲೇಖಕನೂ ಎಲ್ಲವನ್ನೂ ಅನುಭವಿಸಿ ಬರೆಯುವುದು ಸಾಧ್ಯವಿಲ್ಲದ ಮಾತು. ಕೆಲವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಆಗ ಉಂಟಾಗಬಹುದಾದ ಸಣ್ಣಪುಟ್ಟ ತಪ್ಪುಗಳಿಂದ ಒಟ್ಟಾರೆ ಸಾಹಿತ್ಯಕೃತಿಯ ಮೌಲ್ಯವೇನೂ ಕುಸಿಯುವುದಿಲ್ಲ.

ಸಾಹಿತ್ಯವೆನ್ನುವುದು ಅನುಭವ ಮತ್ತು ಕಲ್ಪನೆಗಳ ಅನುಸಂಧಾನ. ಅನುಭವವೊಂದನ್ನೇ ಅವಲಂಬಿಸಿ ಸಾಹಿತ್ಯ ರಚನೆ ಸಾಧ್ಯವಿಲ್ಲ. ಅದಕ್ಕೆ ಮೆರುಗು ಬೇಕಾಗುತ್ತದೆ; ಇಲ್ಲದಿದ್ದರೆ ಸಾಹಿತ್ಯಕ್ಕೂ ವರದಿಗೂ, ಸಾಹಿತ್ಯಕ್ಕೂ ದಾಖಲಾತಿಗೂ ವ್ಯತ್ಯಾಸವೇ ಇರುವುದಿಲ್ಲ. ಆದರೂ ಅನುಭವದ ತಳಹದಿಯಿಲ್ಲದೆ ಕಲ್ಪನೆ ಕೂಡಾ ಏನೂ ಮಾಡಲಾರದು. ಉದಾಹರಣೆಗೆ, ಕನ್ನಡದಲ್ಲಿ ಸಮುದ್ರ ಕತೆಗಳು ಕಡಿಮೆಯಿರುವುದನ್ನು ಗಮನಿಸಬೇಕು. ಕಾರಣ ಸಷ್ಟ. ಯಾಕೆಂದರೆ ಕರ್ನಾಟಕ ಇಂಗ್ಲೆಂಡ್, ಅಮೇರಿಕಗಳಂತೆ ಒಂದು ಸಮುದ್ರಶಕ್ತಿಯಲ್ಲ. ವಿ.ಕೃ. ಗೋಕಾಕರು ಉನ್ನತ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಹೋಗಿಬಂದುದು ನೌಕೆಯಲ್ಲಿ. ಆದ್ದರಿಂದ ಅವರು ‘ಸಮುದಗೀತಗಳು’ ಎಂಬ ಕವನ ಸಂಕಲನವನ್ನು ಬರೆಯುವುದು ಸಾಧ್ಯವಾಯಿತು. ಅವರ ‘ಸಮರಸವೇ ಜೀವನ’ ಎಂಬ ದೀರ್ಘ ಕಾದಂಬರಿಯಲ್ಲೂ ಈ ಸಮುದ್ರಯಾನ ಉಪಯೋಗವಾಗಿದೆ. ಶಾಂತಿನಾಥ ದೇಸಾಯಿಯವರೂ ಇಂಗ್ಲೆಂಡಿಗೆ ಹಡಿಗಿನಲ್ಲೇ ಹೋದರು. ಆದ್ದರಿಂದ ದೇಸಾಯಿಯವರ ಕೆಲವು ಕೃತಿಗಳಲ್ಲಿಯೂ ಅವರ ಇಂಗ್ಲೆಂಡ್ ನೌಕಾ ಯಾನದ ಅನುಭವ ಬಳಕೆಯಾಗಿದೆ. ಆದರೆ ಸಮುದ್ರ ಕತೆಗಳು ಎಂಬ ರೀತಿಯ ಸಾಹಿತ್ಯ ಕನ್ನಡದಲ್ಲಿ ಇಲ್ಲವೆಂದೇ ಹೇಳಬೇಕು. ಸಮುದ್ರ ತೀರದ ಮೀನುಗಾರರ ಅನುಭವಗಳನ್ನು ವಿಶುಕುಮಾರರು ತಮ್ಮ ಸಾಹಿತ್ಯದಲ್ಲಿ ತಂದುದಿದೆ; ಆದರೆ ಅದಿನ್ನೂ ವ್ಯಾಪಕವಾಗಿ ಬಂದಿಲ್ಲ. ಸಮುದ್ರಯಾನದ ಅನುಭವ ಕನ್ನಡ ಲೇಖಕರಿಗೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಇದಕ್ಕೆ ಬದಲಾಗಿ ಇಂಗ್ಲಿಷ್ ಮತ್ತು ಅಮೇರಿಕನ್ ಸಾಹಿತ್ಯಗಳನ್ನು ನೋಡಿದರೆ ಅಲ್ಲಿ ನಾವು ಸಾಕಷ್ಟು ಶ್ರೇಷ್ಠ ಸಮುದ್ರಕತೆಗಳನ್ನು ಕಾಣುತ್ತೇವೆ. ಜಾಸೆಫ್ ಕಾನ್ರಾಡ್ ಮತ್ತು ಹರ್ಮನ್ ಮೆಲ್ವಿಲ್‌ನಂಥ ಲೇಖಕರು ತಾವು ಲೇಖನಕಲೆಗೆ ಇಳಿಯುವ ಮೊದಲು ನಾವಿಕರಾಗಿಯೇ ಕೆಲವು ಕಾಲ ಕೆಲಸ ಮಾಡಿದ್ದರಿಂದ ಆ ಅನುಭವಗಳನ್ನು ಅವರು ಸೃಜನಾತ್ಮಕವಾಗಿ ಉಪಯೋಗಿಸಿಕೊಳ್ಳುವುದು ಸಾಧ್ಯವಾಯಿತು. ಟಾಲ್‍ಸ್ಟಾಯ್, ದೋಸ್ತೋವ್‌ಸ್ಕಿ, ಪಾಸ್ಟರ್‌ನಾಕ್ ಮುಂತಾದ ರಶಿಯನ್ ಲೇಖಕರು ಬರೆದಂಥ ಕೃತಿಗಳನ್ನು ನೋಡಿದರೆ ಆ ದೇಶದ ಹರವು, ಚಳಿ, ಹಿಮ ಹಾಗೂ ಇತಿಹಾಸ, ಸಂಸ್ಕೃತಿಗಳ ಅನುಭವವಿಲ್ಲದವರಿಂದ ಅಂಥ ಕೃತಿಗಳನ್ನು ಊಹಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಸ್ಪಷ್ಟವೇ.

ಮಹಿಳೆಯರು, ಮುಸ್ಲಿಮರು, ಕ್ರಿಶ್ಚಿಯನರು, ದಲಿತರು ಹೆಚ್ಚೆಚ್ಚು ಸಂಖ್ಯೆಯಲ್ಲೀಗ ಕನ್ನಡ ಸಾಹಿತ್ಯವನ್ನು ಪ್ರವೇಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಇದು ಜಾಗತಿಕ ಮಟ್ಟದಲ್ಲಿ ಭಾರತೀಯರು, ಆಫ್ರಿಕನರು, ಅರಬರು ಇಂಗ್ಲಿಷ್ ಸಾಹಿತ್ಯವನ್ನು ಪ್ರವೇಶಮಾಡಿದ ಹಾಗೆ! ಇದರಿಂದ ಹೊಸ ಅನುಭವಕ್ಷೇತ್ರಗಳು ಲಭ್ಯವಾಗಿ ಸಾಹಿತ್ಯ ಶ್ರೀಮಂತವಾಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇವು ವಿಭಿನ್ನ ಭಾಷೆ, ಶೈಲಿ, ಚಿಂತನೆಗಳ ಮೂಲಕವಾಗಿ ಪ್ರವೇಶಮಾಡುವುದನ್ನು ಕಾಣುತ್ತೇವೆ. ಹಾಗೂ ಈ ಒಟ್ಟಾರೆ ಪಕ್ರಿಯೆಯಲ್ಲಿ ಒಂದು ಋಜುತ್ವವಿದೆ: ಯಾಕೆಂದರೆ, ದಲಿತರ ಬಗ್ಗೆ ಶಿವರಾಮ ಕಾರಂತರಾಗಲಿ, ಅನಂತಮೂರ್ತಿಯವರಾಗಲಿ ಬರೆಯುವುದಕ್ಕೂ ದಲಿತ ಲೇಖಕರೇ ಸ್ವತಃ ಬರೆಯುವುದಕ್ಕೂ ವ್ಯತ್ಯಾಸವಿದೆ. ಕೇವಲ ಸಂವೇದನೆಯೊಂದೇ ಸಾಹಿತ್ಯಕ್ಕೆ ಸಾಕಾಗುವುದಿಲ್ಲ. ಸಾಹಿತ್ಯಕ್ಕೆ ಸಂವೇದನೆಯೂ ಬೇಕು, ಸ್ವಾನುಭವವೂ ಬೇಕು. ಕೇವಲ ಸಂವೇದನೆಯಿಂದ ಬರೆದುದು ಎಡ್ವೊಕೆಸಿ (ವಕಾಲತು) ಆಗುತ್ತದೆ, ಎಂಪವರಿಂಗ್ (ಸಬಲೀಕರಣ) ಆಗುವುದಿಲ್ಲ. ಇದೇ ಮಾತು ಮಹಿಳೆಯರ ಮತ್ತು ಇತರ ಬದಿಗೊತ್ತಿದ ವರ್ಗಗಳ ಬಗ್ಗೆ ಕೂಡಾ ನಿಜ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಸಾಹಿತ್ಯಕೃತಿಯೊಂದು ವಸ್ತುವಿವರಗಳ ಮಟ್ಟಿಗೆ ನಿಖರವಾಗಿದ್ದ ಮಾತ್ರಕ್ಕೆ ಚೆನ್ನಾಗಿರಬೇಕೆಂದಿಲ್ಲ ಎನ್ನುವುದು. ಯಾಕೆಂದರೆ, ಸಾಹಿತ್ಯ ಸಮಾಜವಿಜ್ಞಾನವೋ, ಮನೋವಿಜ್ಞಾನವೊ, ಮಾಹಿತಿ ಗ್ರಂಥವೋ, ಪ್ರವಾಸದ ವರದಿಯೋ ಅಲ್ಲ. ಅದೊಂದು ಕಲಾಪ್ರಕಾರ. ವಾಸ್ತವದಲ್ಲಿ ಹೆಚ್ಚೆಚ್ಚು ವಿವರಗಳನ್ನು ತುರುಕಿದಂತೆ ಕೃತಿ ತನ್ನ ಪರಿಣಾಮವನ್ನು ಕಳೆದುಕೊಳ್ಳುವ ಅಪಾಯವೇ ಜಾಸ್ತಿ. ಓದುಗರಾದರೂ ಲೇಖಕನಿಂದ ಇತಿಹಾಸವನ್ನೋ ದಾಖಲಾತಿಯನ್ನೋ ಬಯಸುವುದಿಲ್ಲ; ಓದುಗ ಬಯಸುವುದು ‘ಸಾಹಿತ್ಯ ಕೃತಿ’ಯನ್ನು. ಆದ್ದರಿಂದ ಒಂದು ತರದ ಅಮಾಯಕ ಮುಗ್ಧತೆ ಲೇಖಕನಿಗೆ ಕಲೆಗಾರಿಕೆಯ ದೃಷ್ಟಿಯಿಂದ ಅಗತ್ಯ. ಈ ಕಾರಣಕ್ಕೇ ದೇವನೂರ ಮಹಾದೇವರ ಕತೆ ಕಾದಂಬರಿಗಳು ಅನನ್ಯವಾಗಿರುವುದು. ವಸ್ತುವಿವರಗಳಲ್ಲಿ ಅಷ್ಟೊಂದು ನಿಖರತೆಯಿರದೆಯೂ ಕೃತಿಯೊಂದು ಉತ್ತಮವಾಗಿರುವುದು ಸಾಧ್ಯ ಎನ್ನುವುದೇ ಸಾಹಿತ್ಯದ ಸೋಜಿಗ. ಜಗತ್ತಿನ ಅತ್ಯುತ್ತಮ ಕಾದಂಬರಿಗಳ ಬರವಣಿಗೆಯನ್ನು ನೋಡಿದರೆ, ಅವು ಇಂಥ ವಸ್ತು ನಿಖರತೆಗಳಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದಿರುವುದನ್ನು ಕಾಣುತ್ತೇವೆ. ಮಿಲಾನ್ ಕುಂದೇರಾ ಅನ್ನುವಂತೆ ಒಬ್ಬ ಧಾಂಡಿಗ ಇದ್ದ ಎಂದರೆ ಸಾಕು, ಆತ ಎಷ್ಟೆತ್ತರ ಇದ್ದ ಎಂದು ಮುಂತಾಗಿ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಸಾಹಿತ್ಯದಲ್ಲಿ ಇಂಥ ವಿವರಗಳಿಗಿಂತ ಮುಖ್ಯವಾದ ಸಂಗತಿಗಳಿರುತ್ತವೆ.

ಅನುಭವ ಕೂಡಾ ಅದನ್ನು ನಾವು ನಮ್ಮದಾಗಿಸಿಕೊಂಡಂತೆ. ಹಾಗೂ ಸಾಹಿತ್ಯಕ್ಕೆ ಅದೇ ಒಂದು ಕೊನೆಯೂ ಅಲ್ಲ. ಇಂಗ್ಲಿಷ್ ಕವಿ ವಿಲಿಯಂ ವರ್ಡ್ಸ್‌ವರ್ತ್‌ ಹಲವು ಕವಿತೆಗಳಿಗೆ ‘ಅನುಭವ’ ನೀಡಿರುವುದು ಅವನ ತಂಗಿ ಡೊರೊಥಿ ವರ್ಡ್ಸ್‌ವರ್ತ್ ಎನ್ನುವುದು ಆಕೆಯ ದಿನಚರಿಯನ್ನು ನೋಡಿದರೆ ಗೊತ್ತಾಗುತ್ತದೆ. ಉದಾಹರಣೆಗೆ. ‘ದಿ ಓಲ್ಡ್ ಕಂಬರ್ಲೆಂಡ್ ಬೆಗ್ಗರ್’ ಎಂಬ ವರ್ಡ್ಸ್‌ವರ್ತ್‌ ಕವಿತೆ ಒಬ್ಬ ಹಣ್ಣು ಹಣ್ಣು ಭಿಕ್ಷುಕನ ಕುರಿತಾದ್ದು; ಆದರೆ ಈ ಭಿಕ್ಷುಕನನ್ನು ವರ್ಡ್ಸ್‌ವರ್ತ್‌ ನೇರವಾಗಿ ಸಂಧಿಸಿರುವುದಿಲ್ಲ; ಡೊರೊಥಿ ಸಂಧಿಸಿರುತ್ತಾಳೆ, ಹಾಗೂ ಅಣ್ಣನಿಗೆ ಹೇಳಿರುತ್ತಾಳೆ. ಇದೂ ಆಕೆಯ ದಿನಚರಿಯಲ್ಲಿ ನಮೂದಿತವಾಗಿದೆ. ವರ್ಡ್ಸ್‌ವರ್ತ್‌ ಕವಿತೆ ಮಾತ್ರ ‘ದಾರಿಯಲಿ ನಾನೊಬ್ಬ ಮುದಿ ಭಿಕ್ಷುಕನ ಕಂಡೆ’ ಎಂದೇ ಮೊದಲಾಗುತ್ತದೆ ಹಾಗೂ ಇದೇ ಧಾಟಿಯಲ್ಲಿ ಮುಂದುವರಿಯುತ್ತದೆ; ಆ ಭಿಕ್ಷುಕನನ್ನು ತಾನು ಸ್ವತಃ ನೋಡಿರುವಂತೆಯೇ ಕವಿ ಅವನ ಪ್ರತಿಯೊಂದು ವರ್ತನೆಯನ್ನೂ ವರ್ಣಿಸುತ್ತಾನೆ. ವಿಲಿಯಂ ಮತ್ತು ಡೊರೊಥಿ ಆಲ್ಫಾಕ್ಸ್‍ಡನ್ ಎಂಬಲ್ಲಿ ವಸತಿಯಲ್ಲಿದ್ದಾಗ ಅಲ್ಲೇ ನೆರೆಯಲ್ಲೇ ಇದ್ದ ಕಾಲರಿಜ್ ಕೂಡಾ ಅವರಿಗೆ ಆಗಾಗ ಜತೆಯಾಗುತ್ತಿದ್ದ. ಅವರೆಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ‘ನಾವು ಮೂವರು ವ್ಯಕ್ತಿಗಳು, ಆದರೆ ಒಂದೇ ಆತ್ಮ’ ಎನ್ನುತ್ತಾನೆ ಕಾಲರಿಜ್. ಅನುಭವ ಯಾವ ಮೂಲದಿಂದ ಬಂದರೇನು? ಅದು ಕೃತಿಯಲ್ಲಿ ಯಾವ ರೀತಿಯಲ್ಲಿ ಉಪಯೋಗವಾಗಿದೆ ಎನ್ನುವುದೇ ಕೊನೆಗೂ ಮುಖ್ಯವಾಗುವುದು.

ಇನ್ನು ಕಾವ್ಯ ಪ್ರಕಾರಕ್ಕೆ ಬಂದರೆ, ಇದು ಕತೆ ಕಾದಂಬರಿಗಳಿಗಿಂತ ಭಿನ್ನ ರೀತಿಯಲ್ಲಿ ವರ್ತಿಸುವುದನ್ನು ಕಾಣುತ್ತೇವೆ. ಕವಿ ತನಗೆ ದೊರಕಿದ ಅನುಭವ ಹಾಗೂ ವಿವರಗಳ ಮೇಲೆಯೇ ಕವಿತೆ ರಚಿಸುತ್ತಾನೆ. ಕತೆಗಾರರು, ಕಾದಂಬರಿಕಾರರು ಅನುಭವಗಳನ್ನು ಮತ್ತು ವಿವರಗಳನ್ನು ಹುಡುಕಿಕೊಂಡು ಹೋಗಬಹುದು. ಕಾದಂಬರಿಕಾರ ದೊಡ್ಡ ಸಮಾರಂಭಗಳಿಗೆ ಅಡುಗೆ ಮಾಡುವ ಪಾಕಾಚಾರಿ-ಎಲ್ಲ ಸಾಮಗ್ರಿಗಳನ್ನೂ ಕೂಡಿಹಾಕಿಕೊಂಡು ಕೆಲಸಕ್ಕೆ ತೊಡಗುತ್ತಾನೆ. ಕವಿ ಸಾಮಾನ್ಯ ಅಡುಗೆಯವನಂತೆ ಇದ್ದ ಸಾಮಗ್ರಿಗಳಿಂದಲೇ ಸಿದ್ಧಪಡಿಸುತ್ತಾನೆ. ಆದರೆ ಇಬ್ಬರ ಗೆಲುವೂ ಇರುವುದು ಅವರು ಮಾಡಿದ ಅಡುಗೆಯ ರುಚೆಯಲ್ಲದೆ ಬೇರೆ ಯಾತರಲ್ಲೂ ಅಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಡ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೦

ಸಣ್ಣ ಕತೆ

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…