ವಾತಾಪಿ ಜೀರ್ಣೋಭವ

ವಾತಾಪಿ ಜೀರ್ಣೋಭವ

ಇಲ್ವಲನೂ ವಾತಾಪಿಯೂ ಅಣ್ಣತಮ್ಮಂದಿರು. ರಾಕ್ಷಸ ಕುಲಕ್ಕೆ ಸೇರಿದವರಾದ ಇವರಿಗೆ ಮಣಿಮತಿಯೆಂಬ ಹೆಸರಿನ ರಾಜಧಾನಿಯಿರುವ ಸ್ವಂತದ ರಾಜ್ಯವೊಂದಿತ್ತು. ತಮಗೆ ಇಂದ್ರನಷ್ಟು ಬಲಶಾಲಿಯಾದ ಮಗ ಬೇಕೆಂದು ಅವರು ಬ್ರಾಹ್ಮಣರನ್ನು ಪ್ರಾರ್ಥಿಸಿದರೂ ಇಷ್ಟಾರ್ಥ ಸಿದ್ಧಿಯಾಗದ ಕಾರಣ ಅವರು ಬ್ರಾಹ್ಮಣದ್ವೇಷಿಗಳಾಗುತ್ತಾರೆ. ಇವರ ಬ್ರಾಹ್ಮಣದ್ವೇಷದ ಒಂದು ಮಾದರಿಯೆಂದರೆ, ಬ್ರಾಹ್ಮಣರನ್ನು ಮನೆಗೆ ತಂದು ಕೊಂದು ತಿನ್ನುವುದು. ಇದಕ್ಕೆ ಅವರು ಒಂದು ಉಪಾಯವನ್ನು ಕಂಡುಕೊಂಡಿರುತ್ತಾರೆ. ಇಲ್ವಲ ತನ್ನ ತಮ್ಮನನ್ನು ಕುರಿಯಾಗಿ ರೂಪಾಂತರಿಸಿ ಆತನನ್ನು ಕೊಂದು ಅಡುಗೆ ಮಾಡಿ ಅತಿಥಿಯಾಗಿ ಕರೆತಂದ ಬ್ರಾಹ್ಮಣನಿಗೆ ಊಟ ಇಕ್ಕುವನು. ಆಮೇಲೆ ‘ವಾತಾಪಿ! ಹೊರಗೆ ಬಾ’ ಎಂದು ದೊಡ್ಡದಾಗಿ ಕೂಗಿಕರೆಯುವನು. ಆಗ ಬ್ರಾಹ್ಮಣನ ಹೊಟ್ಟೆ ಸೇರಿದ್ದ ವಾತಾಪಿ ಆ ಹೊಟ್ಟೆಯನ್ನು ಸೀಳಿಕೊಂಡು ಇಡಿಯಾಗಿ ಹೊರಬರುವನು. ಈ ರೀತಿ ಅವರು ಅನೇಕ ಮಂದಿ ಬ್ರಾಹ್ಮಣರನ್ನು ಕೊಂದಿರುವ ಕಾಲಕ್ಕೆ ಒಮ್ಮೆ ಅಗಸ್ತ್ಯ ಮುನಿ ಧನಾಪೇಕ್ಷೆಯಿಂದ ಅವರಲ್ಲಿಗೆ ಬರುತ್ತಾರೆ. ಅವರಿಗೂ ಊಟ ಹಾಕಲಾಗುತ್ತದೆ. ಆದರೆ ಅಗಸ್ತ್ಯ ಮುನಿಗೆ ಇವರ ಗುಟ್ಟು ತಿಳಿದುಹೋಗುತ್ತದೆ. ಆದ್ದರಿಂದ ಇಲ್ವಲನು ವಾತಾಪಿಯ ಹೆಸರು ಹಿಡಿದು ಕೂಗುತ್ತಿರುವಾಗಲೇ, ಅಗಸ್ತ್ಯರು ‘ವಾತಾಪಿ,. ಜೀರ್ಣೋಭವ!’ ಎಂದುಬಿಡುತ್ತಾರೆ. ಅಲ್ಲಿಗೆ ವಾತಾಪಿ ಅವರ ಹೊಟ್ಟೆಯಲ್ಲಿ ಜೀರ್ಣವಾಗಿಬಿಡುತ್ತಾನೆ. ಆಗ ಇಲ್ವಲನಿಗೆ ಭಯವುಂಟಾಗಿ, ಅಗಸ್ತ್ಯರಿಗೆ ಶರಣಾಗಿ, ಹಾಗೂ ಮುಂದೆ ಬ್ರಾಹ್ಮಣದ್ವೇಷವನ್ನು ಬಿಟ್ಟುಬಿಡುತ್ತಾನೆ.

ಇದೊಂದು ಪುರಾಣಕತೆ, ಮಹಾಭಾರತದಲ್ಲೂ ಭಾಗವತದಲ್ಲೂ ಬರುವಂಥದು. ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿಯವರು ಬರೆದ ‘ಪುರಾಣನಾಮಚೂಡಾಮಣಿ’ಯಲ್ಲಿರುವಂತೆ ನಾನಿದನ್ನು ಇಲ್ಲಿ ನಮೂದಿಸಿದ್ದೇನೆ. ಆದರೆ ಜನಪ್ರಿಯವಾದ ಈ ಕತೆಗೆ ಇತರ ರೂಪಾಂತರಗಳೂ ಇವೆ. ಚಿಕ್ಕಂದಿನಲ್ಲಿ ನಾನು ಕೇಳಿದ ರೂಪದಲ್ಲಿ, ಅಣ್ಣತಮ್ಮಂದಿರಾದ ಇಲ್ವಲ ಮತ್ತು ವಾತಾಪಿ ರಕ್ಕಸರು ನಿಜ; ಆದರೆ ಅವರು ಸೋಮಾರಿಗಳು. ಅವರ ಬ್ರಾಹ್ಮಣದ್ವೇಷಕ್ಕೆ ಪ್ರತ್ಯೇಕವಾದ ಕಾರಣವೇನೂ ಇಲ್ಲ-ಬ್ರಾಹ್ಮಣರು ಸುಲಭವಾಗಿ ಸಿಗುತ್ತಾರೆ ಎಂಬುದಲ್ಲದೆ. ಇವರು ಕಾಡಿನ ಅಂಚಿನಲ್ಲಿ ನಿಂತುಕೊಂಡು ದಾರಿಯಲ್ಲಿ ಹೋಗುತ್ತಿದ್ದ ಯಾವನಾದರೂ ಬ್ರಾಹ್ಮಣನನ್ನು ತಡೆಗಟ್ಟಿ, ಇವತ್ತು ನಮ್ಮ ತಂದೆಯ ಶ್ರಾದ್ಧ, ದಯವಿಟ್ಟು ನಮ್ಮ ಮನೆಗೆ ಬಂದು ಶ್ರಾದ್ಧಭೋಜನವನ್ನು ಸ್ವೀಕರಿಸಿ ನಮ್ಮನ್ನು ಹರಸಬೇಕು ಎಂದು ಬೇಡಿಕೊಳ್ಳುತ್ತಾರೆ. ಶ್ರಾದ್ಧದ ಕರೆಯನ್ನು ಬ್ರಾಹ್ಮಣರು ತಿರಸ್ಕರಿಸುವಂತಿಲ್ಲ; ಅದೂ ಅಲ್ಲದೆ ಬ್ರಾಹ್ಮಣರು ಭೋಜನಪ್ರಿಯರೆಂದು ಪ್ರಸಿದ್ಧರು. ಇಂಥ ಇಮ್ಮಡಿ ಕಾರಣಗಳ ಇಕ್ಕಳದಲ್ಲಿ ಸಿಕ್ಕಿಸಿ ಒಂದೊಂದು ದಿನ ಒಬ್ಬೊಬ್ಬ ಬ್ರಾಹ್ಮಣನನ್ನು ಅವರು ತಮ್ಮ ಮನೆಗೆ ಕರೆತರುತ್ತಾರೆ. ಅಲ್ಲಿ ಇಲ್ವಲನು ವಾತಾಪಿಯನ್ನು ಕೊಚ್ಚಿ ಅವನ ಮಾಂಸದಿಂದ ಭೋಜನ ತಯಾರಿಸಿ ಅತಿಥಿಗೆ ಉಣ್ಣಿಸುತ್ತಾನೆ. ನಾನು ಕೇಳಿದ ಕಥಾರೂಪದಲ್ಲಿ ವಾತಾಪಿಯನ್ನು ಮೇಕೆಯಾಗಿ ಪರಿವರ್ತಿಸುವ ಸಂಗತಿ ಇಲ್ಲ. ಊಟ ಮುಗಿದ ನಂತರ ಇಲ್ಪಲ ‘ವಾತಾಪಿ! ಹೊರಗೆ ಬಾ’, ಎಂದು ಕರೆಯುವುದು, ಬ್ರಾಹ್ಮಣನ ಹೊಟ್ಟೆ ಸೀಳಿಕೊಂಡು ವಾತಾಪಿ ಹೊರಬರುವುದು, ಪರಿಣಾಮವಾಗಿ ಆ ಬ್ರಾಹ್ಮಣ ಸಾಯುವುದು, ಮುಂದೊಂದು ದಿನ ಅಗಸ್ತ್ಯರು ಬಂದು ಈ ದುಷ್ಟದ್ವಯರಿಗೆ ಪಾಠಕಲಿಸುವುದು ಎಲ್ಲಾ ಹಿಂದಿನ ಕತೆಯ ಹಾಗೆಯೇ. ಆದರೆ ಇಲ್ಲಿ ಇಲ್ವಲ ಮತ್ತು ವಾತಾಪಿ ಬ್ರಾಹ್ಮಣ ದ್ವೇಷದಿಂದೇನೂ ಈ ಪಾಪ ಕಾರ್ಯಕ್ಕೆ ಕೈಹಾಕುವುದಲ್ಲ; ತಮ್ಮ ಹೊಟ್ಟೆಗಳನ್ನು ತುಂಬಿಸಿಕೊಳ್ಳುವುದಕ್ಕೆಂದು ಅವರು ಈ ಕೆಲಸ ಮಾಡುತ್ತಾರೆ. ಅರ್ಥಾತ್, ತಾವು ಕೊಂದ ಬ್ರಾಹ್ಮಣರ ಮಾಂಸ ತಿನ್ನುವುದಕ್ಕೆ! ಹೀಗೆ ಊಟಕ್ಕೆ ಬಂದ ಬ್ರಾಹ್ಮಣರೇ ಊಟವಾಗಿ ಇಲ್ವಲ ಮತ್ತು ವಾತಾಪಿಯ ಹೊಟ್ಟೆ ಸೇರುತ್ತಾರೆ.

‘ಪುರಾಣನಾಮಚೂಡಾಮಣಿ’ಯ ಕಥಾರೂಪ ಓದುವುದಕ್ಕೆ ಮೊದಲೇ, ನಾನು ಚಿಕ್ಕವನಿದ್ದಾಗಲೇ, ನನಗೀ ಮೌಖಿಕ ಕಥಾರೂಪದ ಪರಿಚಯವಿತ್ತು, ಮತ್ತು ನನಗೀಗಲೂ ಈ ಜನಪದ ಕಥಾರೂಪವೇ ಹೆಚ್ಚು ಸೊಗಸಾಗಿ ಅನಿಸುವುದು. ಪುರಾಣರೂಪದ ವಾತಾಪಿ ಕತೆ ಹೆಚ್ಚು ವಿದ್ವತ್ಪೂರ್ಣ. ಅದರಲ್ಲಿ ಈ ಅಣ್ಣತಮ್ಮಂದಿರ ಬ್ರಾಹ್ಮಣದ್ವೇಷಕ್ಕೆ ಒಂದು ಕಾರಣವಿರುತ್ತದೆ. ಮತ್ತು ಇಲ್ವಲನು ವಾತಾಪಿಯ ಮಾಂಸವನ್ನು ಮನುಷ್ಯರೂಪವಾಗಿ ಬ್ರಾಹ್ಮಣರಿಗೆ ತಿನಿಸುವುದಿಲ್ಲ; ಮೊದಲು ಅವನನ್ನು ಕುರಿಯಾಗಿ ರೂಪಾಂತರಿಸುತ್ತಾನೆ. ಕತೆಯಲ್ಲಿ ಕೂಡಾ ಮನುಷ್ಯಮಾಂಸ ಬ್ರಾಹ್ಮಣರಿಗೆ ವರ್ಜ್ಯ ಎನ್ನುವ ಒಂದು ನೈತಿಕತೆ ಇಲ್ಲಿ ಕೆಲಸಮಾಡುವಂತೆ ತೋರುತ್ತದೆ. ವಾಸ್ತವದಲ್ಲಿ ಅಡುಗೆ ಮಾಡಿದ ಮಾಂಸ ಪ್ರಾಣಿಗಳದ್ದೋ ಮನುಷ್ಯರದ್ದೋ ಎಂದು ತಿನ್ನುವವರಿಗೆ ಗೊತ್ತಾದೀತೆಂದು ಅನಿಸುವುದಿಲ್ಲ. ಆದ್ದರಿಂದ ಈ ನೈತಿಕ ಕಾರಣವಿಲ್ಲದೆ ವಾತಾಪಿಯನ್ನು ಮೊದಲು ಕುರಿಯನ್ನಾಗಿ ಪರಿವರ್ತಿಸುವ ಅಗತ್ಯವಿಲ್ಲ. ಅದೂ ಅಲ್ಲದೆ, ಈ ರಕ್ಕಸರು ಬಾಹ್ಮಣರನ್ನು ನಾಶಮಾಡುವುದಕ್ಕೆ ಹೀಗೆ ಮಾಡುತ್ತಾರೆಯೇ ವಿನಾ ಅವರನ್ನು ತಿನ್ನುವುದಕ್ಕೆ ಅಲ್ಲ.

ಆದರೆ ಜನಪದ ಕತೆಯ ರಕ್ಕಸರು ಪಾಪ ತಮ್ಮ ಹೊಟ್ಟೆ ಹಸಿವು ನೀಗಿಸುವುದಕ್ಕಾಗಿಯೆಂದೇ ಬ್ರಾಹ್ಮಣರನ್ನು ಹೀಗೆ ಕೊಲ್ಲುತ್ತಾರೆ! ಅವರು ಬ್ರಾಹ್ಮಣರನ್ನೇ ಯಾಕೆ ಆರಿಸುತ್ತಾರೆ ಎನ್ನುವುದಕ್ಕೆ ಈಗಾಗಲೇ ಕಾರಣ ಕಂಡಿದ್ದೇವೆ. ಆದ್ದರಿಂದ ಈ ನಮ್ಮ ಮೌಖಿಕ ಪರಂಪರೆಯ ರಕ್ಕಸರು ಕಪಟಿಗಳಾದರೂ ಒಂದು ರೀತಿಯಲ್ಲಿ ಅಮಾಯಕರೇ ಸರಿ! ಇವರಿಗೆ ಹೋಲಿಸಿದರೆ, ಪುರಾಣದ ಇಲ್ವಲ ವಾತಾಪಿಯರು ನಿಜಕ್ಕೂ ಕ್ರೂರಿಗಳು. ಆದರೆ ಈ ಎರಡೂ ಕಥಾರೂಪಗಳಲ್ಲಿ ಕತೆಯ ದೃಷ್ಪಿಯಿಂದ ಸ್ವಾರಸ್ಯಕರವಾದ ಸಂಗತಿಯೆಂದರೆ, ತಮ್ಮ ಕೈಗೆ ಸಿಕ್ಕಿದ ಬ್ರಾಹ್ಮಣರನ್ನು ಕೊಲ್ಲುವುದಕ್ಕೆ ರಕ್ಕಸರಿಗೆ ಈ ಪಾಕ ತಂತ್ರದ ಅಗತ್ಯವೇನು ಎನ್ನುವುದು. ಕೊಲ್ಲುವುದಕ್ಕೆ ಲೋಕದಲ್ಲಿ ಇದಕ್ಕಿಂತ ಸುಲಭವಾದ ಅದೆಷ್ಟೋ ಉಪಾಯಗಳಿರುವಾಗ ಈ ದ್ರಾವಿಡ ಪ್ರಾಣಾಯಾಮವೇ ಯಾತಕ್ಕೆ? ಕೈಗೆ ಸಿಕ್ಕಿದವರ ತಲೆಗೆ ಬಡಿದು ಕೊಲ್ಲಬಹುದಿತ್ತು, ಕುತ್ತಿಗೆ ಹಿಚುಕಬಹುದಿತ್ತು, ಕತ್ತಿಯಿಂದ ತಿವಿಯಬಹುದಿತ್ತು. ಅದೆಲ್ಲವನ್ನೂ ಬಿಟ್ಟು ಇವರು ಹಿಡಿಯುವ ದಾರಿಯೇ ವಿಚಿತ್ರವಾದ್ದು. ಇಲ್ವಲನೇನಾದರೂ ಹಿಂದಣ ಜನ್ಮದಲ್ಲಿ ನುರಿತ ಬಾಣಸಿಗನಾಗಿದ್ದನೇ? ಅವನಲ್ಲಿ ಶುಕ್ರಾಚಾರ್ಯರಲ್ಲಿದ್ದಂಥ ಸತ್ತವರನ್ನು ಬದುಕಿಸುವ (ಆದರೆ ಬಹುಶಃ ವಾತಾಪಿಗೆ ಸಂಬಂಧಿಸಿ ಮಾತ್ರವೇ ಕೆಲಸಮಾಡುವ) ಸಂಜೀವಿನಿ ಮಂತ್ರವೊಂದು ಇದ್ದಿತೆನ್ನುವುದು ಖಂಡಿತ. ಪುರಾಣ ಕತೆಯ ಪ್ರಕಾರ ಅವನಿಗೆ ವಾತಾಪಿಯನ್ನು ಕುರಿಯನ್ನಾಗಿ ಮಾರ್ಪಡಿಸುವ ವಿದ್ಯೆಯೂ ತಿಳಿದಿತ್ತು. ಬಹುಶಃ ತನ್ನೀ ಅಪೂರ್ವ ಮಂತ್ರ ಶಕ್ತಿಯನ್ನು ಪ್ರಯೋಗಿಸುವುದೇ ಅವನಿಗೆ ಖುಷಿಯ ವಿಚಾರವಾಗಿದ್ದಿರಬಹುದೇ? ಆದರೂ ಊಹಿಸಿ ನೋಡಿ: ಮೊದಲು ವಾತಾಪಿಯನ್ನು ಮೇಜಿನ ಮೇಲೆ ಮಲಗಿಸಿ ಕೊಚ್ಚಿ ಬೇಯಿಸಿ ತಕ್ಕ ಮಸಾಲೆ ಹಾಕಿ ರುಚಿಕರವಾದ ಭೋಜನ ತಯಾರಿಸಬೇಕು; ಇದರಿಂದ ಇಡೀ ಅಡುಗೆ ಮನೆ ಕಸಾಯಿಖಾನೆಯಾಗುತ್ತದೆ. ಪರವಾಯಿಲ್ಲ, ರಕ್ಕಸರು ನಮ್ಮಷ್ಟು ನಾಜೂಕರಲ್ಲ, ಅವರಿಗೆ ಕಸಾಯಿಖಾನೆಗೂ ಬಾಣಸಸಾಲೆಗೂ ಅಂತರವಿಲ್ಲ ಎಂದುಕೊಳ್ಳೋಣ. ನಂತರ ಅತಿಥಿಗೆ ಊಟಮಾಡಿಸಬೇಕು. ಆಮೇಲೆ ಅತಿಥಿ ಹೊಟ್ಟೆ ನೀವುವ ವೇಳೆ, ವಾತಾಪಿಯನ್ನು ಕೂಗಿ ಕರೆಯಬೇಕು, ಹಾಗೂ ಚೂರು ಚೂರಾಗಿರುವ ವಾತಾಪಿ ಮತ್ತೆ ಒಂದಾಗಿ ಹೊಟ್ಟೆಯನ್ನು ಸೀಳಿಕೊಂಡು ಹೊರಬರಬೇಕು. ಇದೊಂದು ಇಂದಿನ ಸಿನೆಮಾದಲ್ಲಿ ಸಾಧ್ಯವಾಗುವ ತಂತ್ರವೇ ಸರಿ. ನಮ್ಮ ಜನಪದ ಕತೆಯಂತೆ, ಈಗ ಈ ಸತ್ತು ಬಿದ್ದಿರುವ ಬ್ರಾಹ್ಮಣನ ದೇಹವನ್ನು ಅಣ್ಣತಮ್ಮಂದಿರಿಬ್ಬರೂ ಸೇರಿ ಭಕ್ಷಿಸುತ್ತಾರೆ. ಈ ಕ್ರಿಯೆಯನ್ನು ಅವರು ಮೊದಲೇ ಮಾಡಬಹುದಿತ್ತು, ಇಷ್ಟೂ ಹೊತ್ತು ತಮ್ಮ ಮಿಕದ ಮುಖವನ್ನೇ ನೋಡುತ್ತ ಹಸಿದು ಕೂತುಕೊಳ್ಳುವುದು ಬೇಕಿರಲಿಲ್ಲ, ಎನ್ನುವುದು ನಮ್ಮ ಆಕ್ಷೇಪ.

ನಿಜ, ಬ್ರಾಹ್ಮಣರನ್ನು ಕೊಲ್ಲವುದೋ ಅಥವಾ ಅವರನ್ನು ತಿನ್ನುವುದೋ ಮಾತ್ರವೇ ಅವರ ಉದ್ದೇಶವಾಗಿದ್ದರೆ ಅದು ಸರಿ. ಆದರೆ ಕತೆಯ ಉದ್ದೇಶವಂತೂ ಅದಲ್ಲ. ಕತೆಯ ಉದ್ದೇಶ ಸ್ವಾರಸ್ಯಕರವಾದ ಕತೆಯೊಂದನ್ನು ಹೆಣೆಯುವುದು. ಇಬ್ಬರು ರಕ್ಕಸರಿದ್ದರು; ಅವರು ದಾರಿಹೋಕ ಬ್ರಾಹ್ಮಣರನ್ನು ಅಡ್ಡಗಟ್ಟಿ ಕೊಂದು ತಿನ್ನುತ್ತಿದ್ದರು; ಒಮ್ಮೆ ತಪಸ್ವಿ ಅಗಸ್ತ್ಯರನ್ನು ಅವರು ಹೀಗೆ ಅಡ್ಡಗಟ್ಟಿದರು. ದಿವ್ಯ ಜ್ಞಾನಿಗಳಾದ ಅಗಸ್ತ್ಯರು ಈ ದುಷ್ಟರಿಗೆ ಚೆನ್ನಾಗಿ ಶಾಸ್ತಿ ಮಾಡಿದರು-ಹೀಗೆನ್ನುವುದು ಕತೆಯಾಗುವುದಿಲ್ಲ. ಕತೆಗೆ ಸ್ವಲ್ಪ ‘ರೋಚಕತೆ’ ಕೂಡಾ ಬೇಕು, ಸ್ವಲ್ಪ ನಾಟಕೀಯತೆಯೂ ಬೇಕು, ಕೊನೆಗೆ ತುಸು ಅನಿರೀಕ್ಷಿತವಾದ ತಿರುವು ಕೂಡಾ ಬೇಕು. ಈ ನಮ್ಮ ಇಲ್ವಲ ವಾತಾಪಿಯರ ಕತೆಯಲ್ಲಿ ಇದೆಲ್ಲವೂ ಇವೆ. ಮುಖ್ಯವಾಗಿ ಕತೆಯ ಅಂತ್ಯ ಅದೆಷ್ಟು ಸ್ವಾರಸ್ಯಕರವಾಗಿದೆ! ಇಲ್ವಲ ವಾತಾಪಿಯನ್ನು ದೊಡ್ಡ ಸ್ತರದಿಂದ ಕರೆಯುತ್ತಿರುವಂತೆ, ಚಿಕ್ಕದೇಹದ ಅಗಸ್ತ್ಯರು ಹೊಟ್ಟೆ ನೀವುತ್ತ, ‘ವಾತಾಪಿ ಜೀರ್ಣೋಭವ!’ ಎಂಬ ಆ ಸಂಸ್ಕೃತದ ಅಮೋಘವಾಕ್ಯ ಹೇಳುವುದನ್ನು ಹಾಗೂ ಅದರ ಪರಿಣಾಮವನ್ನು ಊಹಿಸುವುದೇ ನಮಗೊಂದು ರೋಮಾಂಚಕಾರಿ ಅನುಭವ! ಇಂಥ ಕತೆಯನ್ನು ಕಲ್ಪಿಸಿದ ಯಾರಿಗೇ ಆದರೂ ಮೊದಲ ಬಹುಮಾನ ಕಟ್ಟಿಟ್ಟದ್ದೇ! ಬದಲಾಗಿ, ಇಲ್ಪಲ ಯಾಕೆ ಅಡುಗೆಯ ಕಷ್ಟ ತೆಗೆದುಕೊಳ್ಳಬೇಕು ಎಂದು ಮುಂತಾಗಿ ಅಡ್ಡಪ್ರಶ್ನೆಗಳನ್ನು ಹಾಕಿದರೆ, ಅರ್ಥಾತ್ ಕತೆಗಾರನ ಜತೆ ತರ್ಕ ಮಾಡಲು ಹೊರಟರೆ, ಕತೆ ಇಲ್ಲದಾಗುತ್ತದೆ; ಕತೆಯನ್ನು ಕೊಲ್ಲುವ ಇಂಥ ತರ್ಕಕ್ಕೆ ಮನ್ನಣೆಯೂ ಇಲ್ಲ, ಅದೊಂದು ಕುತರ್ಕವೆಂದು ಕರೆಯಲ್ಪಡುತ್ತದೆ. ನನ್ನ ಚಿಕ್ಕಂದಿನಲ್ಲಿ ಮಕ್ಕಳಿಗೆ ಕತೆ ಹೇಳುವ ಹಿರಿಯರು ಅಡ್ಡ ಪ್ರಶ್ನೆ ಹಾಕದಿದ್ದರೆ ಕತೆ ಹೇಳುತ್ತೇನೆ ಎನ್ನುತ್ತಿದ್ದರು. ಯಾಕೆಂದರೆ ನಮ್ಮ ತಾರ್ಕಿಕತೆಯನ್ನು ಕತೆಗೆ ತಂದರೆ ಅದು ವಾತಾಪಿಯಂತೆ ಜೀರ್ಣವಾಗಿಬಿಡುತ್ತದೆ!

ಎಷ್ಟೇ ತರ್ಕಬದ್ಧವಿರುವಂತೆ ತೋರಿದರೂ ಸ್ವಾರಸ್ಯಕರವಾದ ಎಲ್ಲ ಕತೆಗಳೂ ತರ್ಕಾತೀತವಾಗಿರುತ್ತವೆ ಎನ್ನುವುದಕ್ಕೆ ಉದಾಹರಣೆ ಈ ಇಲ್ವಲ ವಾತಾಪಿಯರ ಕತೆಯನ್ನು ಹೋಲುವ ಕಚ ಮತ್ತು ದೇವಯಾನಿಯರ ಇನ್ನೊಂದು ಕತೆ. ಶುಕ್ರಾಚಾರ್ಯರಿಗೆ ಮಾತ್ರವೇ ಗೊತ್ತಿದ್ದ ಸಂಜೀವಿನಿ ಮಂತ್ರವನ್ನು ತಿಳಿಯುವುದಕ್ಕೆಂದು ಕಚ ದೇವಲೋಕದಿಂದ ಬಂದು ದಾನವರ ಗುರುಗಳಾದ ಶುಕ್ರಾಚಾರ್ಯರ ಶಿಷ್ಯತ್ವದಲ್ಲಿರುತ್ತಾನೆ. ಶುಕ್ರಾಚಾರ್ಯರಿಗೆ ಕಚನ ಈ ಉದ್ದೇಶ ತಿಳಿಯದು. ದಾನವರಿಗೆ ಸಂದೇಹ ಬಂದು ಅವರು ದನಕಾಯುತ್ತಿದ್ದ ಕಚನನ್ನು ಕೊಂದು ಬಿಸಾಕುತ್ತಾರೆ. ಈ ಮಧ್ಯೆ ಶುಕ್ರಾಚಾರ್ಯರ ಮಗಳು ದೇವಯಾನಿ ಕಚನಲ್ಲಿ ಅನುರಕಳಾಗಿರುತ್ತಾಳೆ. ಸಂಜೆ ಗೋವುಗಳು ಕುಟೀರಕ್ಕೆ ಮರಳಿದರೂ ಕಚನ ಸುಳಿವಿಲ್ಲದ್ದರಿಂದ ದೇವಯಾನಿ ಗಾಬರಿಯಾಗಿ ತಂದೆಯಲ್ಲಿ ಅವನನ್ನು ಹುಡುಕುವಂತೆ ವಿನಂತಿಸುತ್ತಾಳೆ. ಶುಕ್ರಾಚಾರ್ಯರ ದಿವ್ಯ ದೃಷ್ಟಿಗೆ ನಡೆದ ಸಂಗತಿ ಗೊತ್ತಾಗುತ್ತದೆ. ಆದರೂ ಅವರಿಗಿದು ದೊಡ್ಡ ಸಂಗತಿಯಲ್ಲ. ತಕ್ಷಣ ಸಂಜೀವಿನಿ ಮಂತ್ರ ಪಠಿಸಿ ಕಚನನ್ನು ಬದುಕಿಸುತ್ತಾರೆ. ತಮ್ಮ ತಂತ್ರ ಫಲಿಸದ್ದಕ್ಕೆ ದಾನವರು ಇನ್ನೊಂದು ಉಪಾಯ ಮಾಡುತ್ತಾರೆ. ಕಚನನ್ನು ಕೊಂದು ಸುಟ್ಟು ಆ ಬೂದಿಯನ್ನು ಸುರೆಯಲ್ಲಿ ಬೆರೆಸಿ ಶುಕ್ರಾಚಾರ್ಯರಿಗೆ ಕುಡಿಸುತ್ತಾರೆ. ಈ ಬಾರಿಯೂ ದೇವಯಾನಿ ತಂದೆಯಲ್ಲಿ ಕಚನನ್ನು ಬದುಕಿಸುವಂತೆ ಮೊರೆಯಿಡುತ್ತಾಳೆ. ಈಗ ಮಾತ್ರ ಕಚನನ್ನು ಬದುಕಿಸಬೇಕಾದರೆ, ತಾವು ಸಾಯಬೇಕಾಗುತ್ತದೆ ಎನ್ನುವುದು ಶುಕ್ರಾಚಾರ್ಯರಿಗೆ ಗೊತ್ತಾಗುತ್ತದೆ. ಆದ್ದರಿಂದ ಕಚನಿಗೆ ಸಂಜೀವಿನಿ ಮಂತ್ರ ಉಪದೇಶಿಸುವುದು ಅಗತ್ಯವಾಗುತ್ತದೆ. ಮುಂದೆ ಕಚನು ಶುಕ್ರಾಚಾರ್ಯರ ಹೊಟ್ಟೆ ಸೀಳಿ ಹೊರಬಂದು ಅದೇ ಸಂಜೀವಿನಿ ಮಂತ್ರದಿಂದ ಗುರುಗಳನ್ನು ಬದುಕಿಸುತ್ತಾನೆ. ಕತೆ ಹೀಗೆ ಮುಂದರಿಯುತ್ತದೆ. ಆದರೆ ಇಷ್ಟೊಂದು ಸುಸಂಬದ್ಧವಾದ ಕತೆಯಲ್ಲೂ ಕೆಲವು ಅಡ್ಡ ಪ್ರಶ್ನೆಗಳು ಬಂದೇ ಬರುತ್ತವೆ: ಬೂದಿಯನ್ನು ಬೆರೆಸಿದ ಸುರೆಯ ರುಚಿ ವ್ಯತ್ಯಾಸವಾದ್ದು ಶುಕ್ರಾಚಾರ್ಯರಿಗೆ ಕುಡಿಯುವಾಗ ಗೊತ್ತಾಗಲಿಲ್ಲವೇ? ಅವರಿಗೆ ಸುರಾಪಾನದ ಅಭ್ಯಾಸವೇನೂ ಹೊಸತಾಗಿರಲಿಲ್ಲ. ಸಂಜೀವಿನಿ ಮಂತ್ರವನ್ನು ತಮ್ಮ ಹೊಟ್ಟೆಯೊಳಗಿರುವ ಕಚನಿಗೆ ಉಪದೇಶಿಸುವ ಬದಲು ತಮ್ಮ ಪ್ರೀತಿಯ ಮಗಳು ದೇವಯಾನಿಗೆ ಉಪದೇಶಿಸಬಹುದಿತ್ತಲ್ಲವೇ? ಅವಳು ಸ್ತ್ರೀ ಎಂಬ ಕಾರಣಕ್ಕೆ ಅವಳನ್ನು ಈ ಮಂತ್ರದಿಂದ ಆಚಾರ್ಯರು ದೂರವಿಟ್ಜರೇ? ಆದರೆ ದೇವಯಾನಿ ಸಕಲ ಶಾಸ್ತ್ರವಿದ್ಯಾಪಾರಂಗತಳು ಎಂಬುದಾಗಿ ಮಹಾಭಾರತ ಸೂಚಿಸುತ್ತದೆ. ಸಕಲ ಶಾಸ್ತ್ರಗಳನ್ನೂ ಅವಳಿಗೆ ಹೇಳಿಕೊಟ್ಟವರು ಶುಕ್ರಾಚಾರ್ಯರೇ. ಹೀಗಿರುತ್ತ, ಸಂಜೀವಿನಿ ಮಂತ್ರವನ್ನು ಅವಳಿಗೆ ಉಪದೇಶಿಸದೆ ಇರುವುದಕ್ಕೆ ಅವರಿಗೆ ಯಾವ ಕಾರಣವೂ ಇರಲಿಲ್ಲ-ಹೌದು, ಕತೆಯ ಕಾರಣವಲ್ಲದೆ! ಕಾರಣಕ್ಕಾಗಿ ಕತೆಯಿರುವುದಿಲ್ಲ, ಕತೆಗಾಗಿ ಕಾರಣವಿರುತ್ತದೆ. ಇದು ಹಿಂದಣ ಕತೆಗಾರರಿಗೆ ಗೊತ್ತಿತ್ತು. ನಾವಿದನ್ನು ಮರೆತಿರುವುದರಿಂದ ಕಾರಣಭಾರದಿಂದಾಗಿ ನಮ್ಮ ಕತೆಗಳು ಸೊರಗಿಹೋಗಿವೆ.
*****

One thought on “0

  1. ತುಂಬ ಸುಂದರವಾದ ಅರ್ಥಬದ್ಧ ವಾಕ್ಸರಣಿ..ಧನ್ಯವಾದ ಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…