ವಿಚಾರ ಸಾಹಿತ್ಯ : ಇವತ್ತಿನ ಮುನ್ನೋಟ

ವಿಚಾರ ಸಾಹಿತ್ಯ : ಇವತ್ತಿನ ಮುನ್ನೋಟ

ವಿಚಾರ ಸಾಹಿತ್ಯಕ್ಕೆ ತನ್ನದೇ ಆದ ಅನನ್ಯತೆ ಇದೆ. ಆದ್ದರಿಂದಲೇ ಇದರ ಹರವು ದೊಡ್ಡದು. ಇಲ್ಲಿ ವಿಷಯದ ನೇರ ಮತ್ತು ಸುಲಭ ಸಂವಹನ ಸಾಧ್ಯ. ಹೆಚ್ಚು ಹೆಚ್ಚು ಯಾಂತ್ರೀಕೃತಗೊಳ್ಳುತ್ತಿರುವ ಹಾಗೂ ಸಮಯವೇ ದುರ್ಲಭವಾಗುತ್ತಿರುವ ಇವತ್ತಿನ ದಿನಗಳಲ್ಲಿ ‘ವಕ್ರೋಕ್ತಿ’ಯ ಮೂಲಕ ಮಾತನಾಡುವ ಸಾಹಿತ್ಯಕ್ಕಿಂತ ನೇರವಾಗಿ ಮಾತನಾಡುವ ವಿಚಾರ ಸಾಹಿತ್ಯಕ್ಕೇ ಹೆಚ್ಚು ಒಲವು. ಅದರಲ್ಲೂ ಒಟ್ಟು ಕೃತಿಗಳಿಗಿಂತ ಬಿಡಿ ಬಿಡಿ ಲೇಖನಗಳ ರೂಪದ ಸಾಹಿತ್ಯಕ್ಕೇ ಓದುಗರು ಹೆಚ್ಚು.

ವಿಚಾರ ಸಾಹಿತ್ಯಕ್ಕೆ ಎಟುಕದ ವಿಚಾರವಿಲ್ಲ. ಬಹುತೇಕ ಎಲ್ಲ ಜ್ಞೆನಶಾಖೆಗಳಲ್ಲೂ ಇದರ ಅಸ್ತಿತ್ವ ಇದೆ. ಆದರೆ ಇಲ್ಲಿ ನನ್ನ ವಿವಕ್ಷೆ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರವನ್ನು ಮಾತ್ರ ಕೇಂದ್ರೀಕರಿಸಿದೆ. ಈ ಚೌಕಟ್ಟಿನ ಸಾಹಿತ್ಯವು ಹೊಸ ಶತಮಾನದ ಈ ಎರಡು ಮೂರು ವರ್ಷಗಳಲ್ಲಿ ಅನೇಕ ಮುಖ್ಯ ಘಟನೆಗಳಿಗೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತಲೇ ಬಂದಿದೆ. ಅವುಗಳಲ್ಲಿ ಕೋಮುವಾದ, ಭಯೋತ್ಪಾದನೆ ಮತ್ತು ಶಿಕ್ಷಣ, ರೈತ-ಕಾರ್ಮಿಕರ ದಿವಾಳಿತನ, ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಸಾಮಾಜಿಕ ನ್ಯಾಯದ ಕಲ್ಪನೆ, ನವ ವಸಾಹತುಶಾಹಿಯ ಪ್ರವೇಶದಿಂದ ನಿರ್ಮಾಣಗೊಳ್ಳುತ್ತಿರುವ ನವ ಸ್ವಾತಂತ್ರ್ಯ ಸಂಗ್ರಾಮದ ವೇದಿಕೆ-ಇವು ಕೆಲವು. ಇವು ನೇತ್ಯಾತ್ಮಕ ನೆಲೆಯಲ್ಲಿ ಬರಲಿರುವ ವರ್ಷಗಳಲ್ಲಿ ವಿಚಾರ ಸಾಹಿತ್ಯಕ್ಕೊದಗುವ ಮುಖ್ಯ ಆಯಾಮಗಳು. ಇನ್ನು ಗುಣಾತ್ಮಕ ನೆಲೆಯಲ್ಲಿ-ಕಳೆದ ಶತಮಾನ ಮತ್ತು ಒಟ್ಟು ಸಹಸ್ರಮಾನದಲ್ಲಿ ಕಾಣಿಸಿಕೊಂಡ ದೇಸಿ ಮತ್ತು ದೇಶಿ ಚಿಂತನೆಯು ತನ್ನ ವಿಸ್ತರಣೆಯನ್ನಾಗಿ ‘ಕನ್ನಡ ಕಾವ್ಯ ಮೀಮಾಂಸೆ’ಮೊದಲಾದ ಪ್ರತ್ಯೇಕ ಶಿಸ್ತುಗಳನ್ನು ಅಸ್ತಿತ್ವಕ್ಕೆ ತಂದುಕೊಳ್ಳುವ ಸೂಚನೆಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕಾಣಿಸಿಕೊಂಡ ‘ಕನ್ನಡ ಕಾವ್ಯ ಮೀಮಾಂಸೆ’ ಎಂಬ ಪ್ರತ್ಯೇಕ ಜ್ಞೆನ ಶಿಸ್ತು. ಹಾಗೆಯೇ ಕನ್ನಡ ವಿಶ್ವವಿದ್ಯಾಲಯ ಹೊರ ತಂದ ‘ಕನ್ನಡ ಸಾಹಿತ್ಯ ಮೀಮಾಂಸೆ’, ಜಿ.ಎಸ್. ಶಿವರುದ್ರಪ್ಪನವರು ಬರೆದ ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’ ಮೊದಲಾದ ಕೃತಿಗಳು ಸದ್ಯಕ್ಕೆ ಮುಖ್ಯವಾಗುತ್ತವೆ. ಅಂತೆಯೇ ಕೋಮುವಾದೀಕರಣಗೊಂಡ ಕರ್ನಾಟಕ ಮತ್ತು ಭಾರತದ ಚರಿತ್ರೆಯ ಪುನಾರಚನೆ ಹಾಗೂ ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದಿರುವ ಸಂಸ್ಕೃತಿಗಳ ಜಾನಪದೀಯ ಅಧ್ಯಯನಗಳು ಮತ್ತೂ ಮುಂದುವರಿಯುವ ಸೂಚನೆಗಳು ಕಾಣುತ್ತಿವೆ.

ಹೀಗೆ ಹೊಸ ಶತಮಾನದ ಆದಿಯಲ್ಲಿ ಕಾಣಿಸಿಕೊಂಡ ಮತ್ತು ಇದಕ್ಕೂ ಪೂರ್ವದಿಂದಲೇ ಅಸ್ತಿತ್ವದಲ್ಲಿರುವ ಈ ಪರಿಕಲ್ಪನೆಗಳು ಮುಂದಿನ ವರ್ಷಗಳಲ್ಲಿ ವಿಚಾರ ಸಾಹಿತ್ಯಕ್ಕೆ ಹೆಚ್ಚು ಮುಖ್ಯ ದ್ರವ್ಯಗಳಾಗುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ಸ್ಥೂಲ ವಿವೇಚನೆ ಇಲ್ಲಿಯ ಅಗತ್ಯವೆಂದು ಭಾವಿಸುತ್ತೇನೆ.

ಕೋಮುವಾದ

ಇತ್ತೀಚಿನ ವಿಚಾರ ಸಾಹಿತ್ಯದ ಅತಿಮುಖ್ಯ ದ್ರವ್ಯಗಳಲ್ಲಿ ಕೋಮುವಾದವು ಒಂದಾಗಿದೆ. ಇದಕ್ಕೆ ಪ್ರತಿಕ್ರಿಯಿಸದ ಯಾವೊಬ್ಬ ಎಡಸತ್ತಾತ್ಮಕ ಬರಹಗಾರನನ್ನೂ ನಾವು ಕಾಣಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ವಿಫುಲವಾದ ಸಾಹಿತ್ಯ ಸೃಷ್ಟಿ ಕೋಮುವಾದಕ್ಕೆ ಸಂಬಂಧಿಸಿ ಬಂದಿದೆ. ಅದಕ್ಕೆ ಕಾರಣ, ಈಗಲೂ ಉರುಳುತ್ತಿರುವ ಅಯೋಧ್ಯೆ, ದಹನಗೊಳ್ಳುತ್ತಿರುವ ಗೋದ್ರಾ, ಕೇಸರಿಯಾಗುತ್ತಿರುವ ಶಿಕ್ಷಣ ಇತ್ಯಾದಿ.

ಭಾರತವು ಸ್ವಾತಂತ್ರ್ಯವನ್ನು ಪಡೆದ ಅನಂತರದಲ್ಲಿ ಅಂದರೆ ಹೆಚ್ಚೂ ಕಡಿಮೆ ತೊಂಬತ್ತರ ದಶಕದ ಆದಿಯವರೆಗೂ ಕೋಮುವಾದವು ಅಂತರ್ವಾಹಿನಿಯಾಗಿ ಮಾತ್ರ ಜನಮಾನಸದಲ್ಲಿ ಇತ್ತು; ಗಲಭೆಗಳಿಗೆ ಕಾರಣವೂ ಆಗಿತ್ತು. ಆದರೂ ತನ್ನ ವಿರಾಟ್ ರೂಪವನ್ನು ಪ್ರಕಟ ಪಡಿಸಿರಲಿಲ್ಲ. ಆದರೆ ಅಂತಹ ವಿರಾಟ್ ರೂಪದ ಪ್ರಕ್ರಿಯೆ ಶುರುವಾದದ್ದು ಬಿ.ಜೆ.ಪಿ., ವಿ.ಎಚ್.ಪಿ., ಆರ್.ಎಸ್.ಎಸ್. ಮೊದಲಾದ ಸಂಸ್ಥೆಗಳ ನೇರಕಾರ್ಯಾಚರಣೆಯಿಂದ. ಆಗ ವಿ.ಪಿ.ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದರು. ಅವರ ಅವಧಿಯಲ್ಲಿ ಗಮನ ಸೆಳೆದ ಮಂಡಲ್ ವರದಿಯ ಜಾರಿ ಹಾಗೂ ಬಾಬರಿ ಮಸೀದಿಯನ್ನು ಕೆಡವಿ ರಾಮಮಂದಿರವನ್ನು ಕಟ್ಟುವ ಅಡ್ವಾನಿ ನೇತೃತ್ವದ ರಥಯಾತ್ರೆಯ ವಿಚಾರ. ಇಲ್ಲಿಂದ ನೇರವಾಗಿ ಮತ್ತು ಸೂರ್ಯನಷ್ಟೇ ಪ್ರಖರವಾಗಿ ಮೊದಲಾದ ಕೋಮುವಾದವು ಇಂದು ಭೂಮಿ-ಆಕಾಶಗಳೆರಡನ್ನೂ ಆವರಿಸಿ ನಿಂತಿದೆ.

ಮೂಲಭೂತವಾಗಿ ಕೋಮುವಾದ ಎಂಬುದು ಒಂದು ಮನೋಧರ್ಮ. ಇದು ಯಾವುದೇ ಒಂದು ಸಂಸ್ಥೆ ಮತ್ತು ರಾಜಕೀಯ ಪಕ್ಷಕ್ಕೆ ಸೀಮಿತವಾದದ್ದಲ್ಲ. ಅದು ಕೆಲವು ಪಕ್ಷ ಮತ್ತು ಸಂಘಟನೆಗಳಲ್ಲಿ ಸ್ವಲ್ಪ ಜಾಸ್ತಿ ಇರುತ್ತದೆ, ಅಷ್ಟೇ. ಆದರೆ ಅದರಾಚೆಗೆ ಇರುವ ಪಕ್ಷ, ಸಂಘಟನೆ, ಸಂಸ್ಥೆ ಈ ಎಲ್ಲಾ ವಲಯಗಳಲ್ಲಿ ಸಹ ಅದರ ಅಸ್ತಿತ್ವವು ವ್ಯಾಪಕವಾಗಿ ಇರುವುದರಿಂದ ಪ್ರಜಾತಾಂತ್ರಿಕವಾದ ನಮ್ಮ ವ್ಯವಸ್ಥೆಯಲ್ಲಿ ಕೋಮುವಾದಿ ಮನಸ್ಸುಗಳು ನಮ್ಮನ್ನು ನೇರವಾಗಿ ಆಳತೊಡಗಲು ಸುಲಭವಾಗಿ ಸಾಧ್ಯವಾಗಿದೆ. ಇಂತಹ ಕೋಮುವಾದವು ಹೊಸ ದಶಮಾನಗಳ ಮುನ್ನೋಟದಲ್ಲಿ ಇನ್ನಷ್ಟು ವ್ಯಾಪಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಪೋಷಕವಾಗಿ ನಮ್ಮ ಶೈಕ್ಷಣಿಕ ರಂಗ ಮತ್ತು ಕೋಮುವಾದ ಇವುಗಳನ್ನು ಒಟ್ಟಿಗೆ ಗಮನಿಸಬೇಕಾಗುತ್ತದೆ.

ದೇಶವು ಸ್ವಾತಂತ್ರ್ಯ ಪಡೆದ ಅನಂತರದ ವರ್ಷಗಳಲ್ಲಿ ಶೈಕ್ಷಣಿಕ ರಂಗವು ಕ್ರಮೇಣ ವಿಸ್ತಾರವಾಗುತ್ತಿದೆ. ವಿದ್ಯಾವಂತರೆಂದು ಕರೆಯಬಹುದಾದವರ ಸಂಖ್ಯೆ ಹೆಚ್ಚುತ್ತಿದೆ. ಇವರು ವಿಜ್ಞೆನವನ್ನು, ವಿಚಾರವನ್ನು ಕಲಿತವರಾಗಿದ್ದಾರೆ. ಆದರೆ ಇವುಗಳ ಪ್ರಯೋಗ ಮತ್ತು ಅನ್ವಯಿಕತೆ ವಾರ್ಷಿಕ ಪರೀಕ್ಷೆಯ ನೆಲೆಯಲ್ಲಿಯೇ?ಅಥವಾ ಬದುಕಿನ ಸಂದರ್ಭದ ನೆಲೆಯಲ್ಲಿಯೇ? ಎಂಬುದು ಇಲ್ಲಿ ಜೀವಂತ ಪ್ರಶ್ನೆಯಾಗಿ ಉಳಿಯುತ್ತದೆ. ಅದಕ್ಕೆ ನನಗನ್ನಿಸುವ ಹಾಗೆ, ನಾವು ವಿಜ್ಞೆನ ಮತ್ತು ವಿಚಾರವನ್ನು ಹೇಳಿಕೊಟ್ಟಿದ್ದೇವೆಯೇ ಹೊರತು ವೈಜ್ಞೆನಿಕ ಮತ್ತು ವೈಚಾರಿಕ ಮನೋಭಾವವನ್ನು ಮೂಡಿಸಲಿಲ್ಲ ಎಂಬುದು. ಆದ್ದರಿಂದಲೇ ಇದೊಂದು ಕಂದರವಾಗಿ ಶಿಕ್ಷಿತರು ಹೆಚ್ಚು ಪ್ರಮಾಣದಲ್ಲಿರುವ ಸಂದರ್ಭದಲ್ಲಿಯೇ ಕೋಮುವಾದವೂ ವ್ಯಾಪಕವಾಗಿರುವ ವಿರೋಧಾಭಾಸಕ್ಕೆ ಕಾರಣವಾಗಿರುವುದು. ಈ ನಿಟ್ಟಿನಲ್ಲಿ ೧೯೮೬ರ ಶಿಕ್ಷಣ ನೀತಿ ಆರೋಗ್ಯಕರ ಶಿಕ್ಷಣಕ್ಕೆ ಒತ್ತಾಸೆಯಾಗಿದ್ದರೂ ಕ್ರಿಯಾತ್ಮಕ ನೆಲೆಯಲ್ಲಿ ಜ್ಯೋತಿಷ್ಯಶಾಸ್ತ್ರ, ಸಂಸ್ಕೃತ ಭಾಷೆಯ ಹೇರಿಕೆ ಮೊದಲಾದ ಶಿಸ್ತುಗಳ ಪ್ರವೇಶವು ದೇಶವನ್ನು ಬೌದ್ಧಿಕ ಹಿನ್ನಡೆಯತ್ತ ಸಾಗಿಸುವಲ್ಲಿ ಸಫಲವಾಗಿರುವುದು. ಇಂತಹ ಬೆಳವಣಿಗೆಗೆ ತೀವ್ರ ತಡೆಯನ್ನು ಒಡ್ಡುವುದು ಸದ್ಯದ ಸಂದರ್ಭದಲ್ಲಂತೂ ನಿರಾಶಾದಾಯಕವಾದ ವಿಚಾರವೇ ಆಗಿದೆ. ಕಾರಣ, ಪ್ರಜಾಸತ್ತೆಯಲ್ಲಿ ದೇಶವನ್ನು ಆಳುವವರು ಬಹುಸಂಖ್ಯಾತರನ್ನು ಪ್ರತಿನಿಧಿಸುವವರು ಆಗಿರುತ್ತಾರೆ. ಹಾಗಾಗಿ ಪ್ರಸಕ್ತ ಪರಿಸ್ಥಿತಿಯಲ್ಲಿ ಅಂತಹ ಬಹುಸಂಖ್ಯಾತರೆಂಬುವರು ಶಿಕ್ಷಣ ವಂಚಿತರು ಹಾಗೂ ಶಿಕ್ಷಣವನ್ನು ಪಡೆದೂ ಅವೈಚಾರಿಕವಾಗಿ ಚಿಂತಿಸುವವರೂ ಆಗಿರುವುದರಿಂದ ನಿಜದ ಅರ್ಥದಲ್ಲಿ ಸುಶಿಕ್ಷಿತರಾದಾಗ, ಅವೈಚಾರಿಕವಾಗಿ ಚಿಂತಿಸುವ ಇವರು ಕ್ರಮೇಣ ಅಲ್ಪಸಂಖ್ಯಾತರಾಗುತ್ತಾರೆ. ಅಂತಹ ಜನರ ನಿರ್ಮಾಣವು ಭಾರತದ ಸಂದರ್ಭದಲ್ಲಂತೂ ಶತಮಾನಕ್ಕಾಗುವ ಕೆಲಸ. ಅಂತಹ ಮಂದಗಾಮಿ ವಿಕಾಸದ ಪಾಠವನ್ನು ೫೫ ವರ್ಷಗಳನ್ನು ದಾಟಿರುವ ಸ್ವತಂತ್ರ ಭಾರತವು ನಮಗೆ ಈಗಾಗಲೇ ಕಲಿಸಿದೆ.

ಆದ್ದರಿಂದ ಈ ಬಗೆಯ ಅಥವಾ ಕೋಮುವಾದನ್ನು ಕೇಂದ್ರೀಕರಿಸಿದ ಬರವಣಿಗೆ ಹೊಸ ಶತಮಾನದ ಪ್ರಧಾನ ನೆಲೆಯಾಗುವ ಸಾಧ್ಯತೆ ಇದೆ.

ಭಯೋತ್ಪಾದಕತೆ ಮತ್ತು ಯುದ್ಧೋತ್ಪಾದಕತೆ

ಕೋಮುವಾದದ ಭಾಗವಾಗಿ ಭಯೋತ್ಪಾದಕತೆ ಮತ್ತು ಯುದ್ಧೋತ್ಪಾದಕತೆ ಇದೆ. ಇದರ ಮುಖ್ಯ ನೆಲೆ-ಧರ್ಮ.
ಮೂಲಭೂತವಾಗಿ ಎಲ್ಲಾ ಧರ್ಮಗಳು ಮನುಷ್ಯತ್ವ ನಿರ್ಮಾಣದ ಕನಸನ್ನೇ ಹೊತ್ತಿರುತ್ತವೆ. ಆದರೆ ಆ ಆಶಯವನ್ನು ತಿಳಿಯದ ಬಹು ಜನರು ಅದರ ಹೆಸರಿನಲ್ಲಿ ಹಿಂಸಾಚಾರಕ್ಕಿಳಿಯುತ್ತಾರೆ. ಅದರ ಮೂಲಕವೇ ತಮ್ಮ ಧರ್ಮಾಭಿಮಾನವನ್ನು ಮೆರೆಯಲು ಯತ್ನಿಸುತ್ತಾರೆ. ಅದು ಅಂಧಾಭಿಮಾನ ಆಗಿರುತ್ತದೆ ಎಂಬುದನ್ನು ತಿಳಿದಿರುವುದಿಲ್ಲ. ಈ ಬಗೆಯಲ್ಲಿ ಧರ್ಮವನ್ನು ಕುರಿತ ವಿದ್ಯಾವಂತ ನಿರಕ್ಷರ ಕುಕ್ಷಿಗಳು ನಮ್ಮ ನಡುವೆ ಹೆಚ್ಚಾಗಿರುವಾಗ ಧರ್ಮ ಮೂಲದ ಭಯೋತ್ಪಾದಕತೆಯೂ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಎರಡು ರಾಷ್ಟ್ರಗಳ ನಡುವಿನ ಈ ಬಗೆಯ ಭಯೋತ್ಪಾದಕತೆಗೆ ಆರ್ಥಿಕತೆಯ ಆಯಾಮವೂ ಇದೆ. ಕಾಶ್ಮೀರವು ಹೆಚ್ಚು ವಿದೇಶೀ ವಿನಿಮಯ ಗಳಿಸುವ ಅಂತರರಾಷ್ಟ್ರೀಯ ಪ್ರವಾಸೀ ತಾಣವಾಗಿರುವುದರಿಂದ ಅದನ್ನು ಕಬಳಿಸಲು ಸಹಜವಾಗಿಯೇ ನೆರೆ ರಾಷ್ಟ್ರವು ಧಾರ್ಮಿಕ ಮೂಲಭೂತವಾದೀ ನೆಲೆಯಲ್ಲಿ ನಿಂತು ಭಯೋತ್ಪಾದಕತೆಗೆ ಮೊದಲಾಗುತ್ತದೆ. ಅದು ಯುದ್ಧೋತ್ಪಾದಕತೆಯೂ ಹೌದು. ಅದನ್ನು ಪೋಷಿಸುವ ನಿಟ್ಟಿನಲ್ಲಿ ಯುದ್ಧಾಸ್ತ್ರಗಳನ್ನು ತಯಾರು ಮಾಡುವ ವ್ಯಾಪಾರೀ ರಾಷ್ಟ್ರಗಳೂ ಸಜ್ಜಾಗಿರುತ್ತವೆ. ಇಂತಹ ಬಿಕ್ಕಟ್ಟಿನಲ್ಲಿ ಭಾರತವೇ ಅಲ್ಲದೆ ತೈಲ ರಾಷ್ಟ್ರಗಳೂ ಸಿಲುಕಿರುವುದನ್ನು ಕಾಣಬಹುದು.

ಹೀಗೆ ಆತಂಕಗಳಿಗೆ ತುತ್ತಾಗಿರುವ ಅಭಿವೃದ್ಧಿ ಶೀಲ ರಾಷ್ಟ್ರಗಳ ಸಮಾನ ಶತ್ರುವಾಗಿ ಅಮೇರಿಕಾ ಕಾಣುತ್ತಿದೆ. ಇದು ಈ ಶತಮಾನದ ಅತಿಮುಖ್ಯ ಸಾಮ್ರಾಜ್ಯಶಾಹಿ ರಾಷ್ಟ್ರ. ಇದರ ಜಾಗದಲ್ಲಿ ಕಳೆದ ಶತಮಾನದಲ್ಲಿ ಬ್ರಿಟನ್ ಇತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು.

ಒಟ್ಟಾರೆ ಭಯೋತ್ಪಾದಕತೆ ಮತ್ತು ಯುದ್ಧೋತ್ಪಾಕತೆಗಳು ಏಕಕಾಲಕ್ಕೆ ಧರ್ಮ ಮತ್ತು ಆರ್ಥಿಕತೆಯ ಆಯಾಮಗಳನ್ನು ಹೊಂದಿರುವುದರಿಂದ ನಮ್ಮ ಹಾಗೂ ಅನೇಕ ರಾಷ್ಟ್ರಗಳ ವಿಚಾರ ಸಾಹಿತ್ಯಕ್ಕೆ ಇದು ಮುಖ್ಯ ದ್ರವ್ಯವಾಗಿ ಮಾರ್ಪಡುವ ಸಾಧ್ಯತೆಯನ್ನು ಹೊಸ ಶತಮಾನದ ಮೊದಲ ದಶಕಗಳಲ್ಲಂತೂ ತಳ್ಳಿ ಹಾಕುವಂತಿಲ್ಲ.

ಶಿಕ್ಷಣ

ಇದು ಬದಲಾಗುತ್ತಿರುವ ಸನ್ನಿವೇಶ. ಈ ಸನ್ನಿವೇಶದಲ್ಲಿ ಜ್ಞೆನಮುಖಿ ಶಿಕ್ಷಣಕ್ಕಿಂತ ಉದ್ಯೋಗಮುಖಿ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ. ಇದಕ್ಕೆ ಕಾರಣ ನಮ್ಮ ಉದ್ಯಮಪತಿಗಳು ಪರೋಕ್ಷವಾಗಿ ಶಿಕ್ಷಣ ರಂಗವನ್ನು ನಿಯಂತ್ರಿಸುತ್ತಿರುವುದಾಗಿದೆ. ಆದ್ದರಿಂದ ಸಾಮಾನ್ಯ ಶಿಕ್ಷಣದ ಅಡಿಯಲ್ಲಿ ಬರುವ ಬಿ.ಎ., ಬಿ.ಎಸ್ಸಿ., ಬಿ.ಕಾಂ. ಮೊದಲಾದ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶ ಕುಗ್ಗುತ್ತಿದೆ. ಆದ್ದರಿಂದ ಉದ್ಯೋಗಮುಖಿಯಾಗಿ ಆಲೋಚಿಸಿ, ನಿರತರಾಗಿರುವ ಶಿಕ್ಷಿತರಲ್ಲಿ ಸಮಾಜ, ಸಂಸ್ಕೃತಿ, ನೈತಿಕತೆ ಮೊದಲಾದ ವಿಚಾರಗಳನ್ನು ಕುರಿತ ಸಾಮಾನ್ಯ ಜ್ಞೆನವನ್ನು ನಿರೀಕ್ಷಿಸುವುದು ತಮಾಷೆಯ ವಿಚಾರವಾಗುತ್ತದೆ. ಪರಿಣಾಮವಾಗಿ ಸಮಾಜದ ನೈತಿಕ ಅದಃಪತನ ದಿನೇ ದಿನೇ ಹೆಚ್ಚಾಗುತ್ತಿರುವುದು ಅಸಹಜವಲ್ಲ.

ಮೇಲ್ಕಂಡ ಮಾತುಗಳನ್ನು ಹೇಳುವಾಗ ಸಾಮಾನ್ಯ ಶಿಕ್ಷಣವನ್ನು ಮಾತ್ರ ಇಚ್ಫಿಸಿ, ಉದ್ಯೋಗ ಮುಖಿ ಶಿಕ್ಷಣವನ್ನು ನಿರಾಕರಿಸುತ್ತಿದ್ದೇನೆ ಎಂದಲ್ಲ. ಎರಡೂ ಬೇಕು. ಆದರೆ ಅವುಗಳ ಔಚಿತ್ಯವನ್ನು ಅರಿತ ವಿವೇಕವನ್ನು ಅನುಸರಿಸಿ ನಮ್ಮ ಶಿಕ್ಷಣ ರಂಗದ ಸ್ವರೂಪ ನಿರ್ಧಾರವಾಗಬೇಕು. ಹಾಗಾದಾಗ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಕಂಪ್ಯೂಟರ್ ಕಡ್ಡಾಯ ವಾಗುವುದಿಲ್ಲ. ಇಂಗ್ಲೀಷ್ ಮಾಧ್ಯಮವಾಗುವುದಿಲ್ಲ, ಪಶ್ಚಿಮವೇ ಮಾದರಿಯಾಗುವುದಿಲ್ಲ, ಉದ್ಯೋಗವೇ ಶಿಕ್ಷಣದ ಗುರಿಯಾಗುವುದಿಲ್ಲ. ಈ ಎಲ್ಲಾ ಅಪಾಯಗಳಿಂದ ಪಾರಾದ ಮತ್ತು ಜನಪರ ನೆಲೆಯಲ್ಲಿ ಅಭಿವೃದ್ಧಿಯ ಕನಸನ್ನು ಹೊತ್ತ ಶಿಕ್ಷಣ ನಮ್ಮದಾಗಿ ಮಾರ್ಪಡುತ್ತದೆ. ಆದರೆ ಅಂತಹ ವಾತಾವರಣ ನಿರ್ಮಾಣಗೊಳ್ಳುವ ಬದಲು ದೊಡ್ಡ ಜನಾಂದೋಲನ ನಡೆಯಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ಹೊಸ ಶತಮಾನದ ವಿಪರ್‍ಯಾಸವಾಗುತ್ತಿದೆ. ಅಂತಹ ಆಂದೋಲನದಲ್ಲಿ ಜಾತಿಗಳಿಗೆ ಅತೀತವಾದ ಹೊಸ ಸ್ವರೂಪದ ವರ್ಗ ಹೋರಾಟ ಏರ್ಪಡುವ ಸೂಚನೆಗಳಿವೆ. ಈ ಎರಡೂ ವರ್ಗಗಳಲ್ಲಿ ಪಶ್ಚಿಮದ ಬಾಲಂಗೋಚಿಯಾಗಿರುವ ಮನಸ್ಸುಗಳು ಅಂದರೆ ಇಂಗ್ಲೀಷ್, ಖಾಸಗೀಕರಣ, ಸಂವೇದನಾ ರಹಿತ ಉದ್ಯೋಗ, ಮೊದಲಾದ ಪರಿಕಲ್ಪನೆಗಳು ಒಂದು ವರ್ಗದಲ್ಲಿ ಒಟ್ಟುಗೂಡಿದರೆ, ಮತ್ತೊಂದು ವರ್ಗದಲ್ಲಿ ದೇಶೀ ಚಿಂತನೆ, ಸ್ಥಳೀಯ ಭಾಷೆಯ ಪ್ರಶ್ನೆ, ರಾಷ್ಟ್ರೀಕರಣ, ಸಾಮಾಜಿಕ ನ್ಯಾಯದ ಕಲ್ಪನೆ, ಮನುಷ್ಯನನ್ನು ಯಂತ್ರವನ್ನಾಗಿ ಮಾತ್ರ ಕಾಣುವ ಸಂವೇದನ ಶೀಲ ಉದ್ಯೋಗ ಪರವಾದ ಮನಸ್ಸು-ಇತ್ಯಾದಿ ಪರಿಕಲ್ಪನೆಗಳು ಒಟ್ಟುಗೂಡುತ್ತವೆ. ಇಲ್ಲಿ ಈಗಾಗಲೇ ಹೇಳಲಾದ ಜಾತಿ ಪ್ರಶ್ನೆಗಳಿಗೆ ಅತೀತವಾದ ಮತ್ತು ಇದುವರೆಗೂ ಕಾಣದ ಹೊಸ ವರ್ಗ ಸ್ವರೂಪವು ಹೋರಾಟದ ವಿನ್ಯಾಸವನ್ನು ನಿರ್ಧರಿಸುತ್ತದೆ. ಅಂತಹ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ಸಮಕಾಲೀನ ಸಾಹಿತ್ಯವು ಹೊಸ ಹೊಸ ಆಯಾಮಗಳನ್ನು ಕ್ಷಿಪ್ರವಾಗಿ ಪ್ರಕಟಪಡಿಸುತ್ತಾ ಸಾಗುತ್ತಿದೆ.

ರೈತ-ಕಾರ್ಮಿಕರ ದಿವಾಳಿತನ

ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಮೊದಲಿನಿಂದಲೂ ಸಂಕಷ್ಟದಲ್ಲಿದ್ದಾರೆ. ಅಲ್ಲಿ ಉತ್ತಮ ಸ್ಥಿತಿಯಲ್ಲಿ ಇದ್ದವರೆಂದರೆ ದೊಡ್ಡ ರೈತರು ಮಾತ್ರ. ಅಂದರೆ ಜಮೀನುದಾರರು. ಈಗ ಒಟ್ಟು ಎಲ್ಲಾ ಮಟ್ಟದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ-ಮುಕ್ತ ಆಮದು ನೀತಿ, ಕಡಿತಗೊಳ್ಳುತ್ತಿರುವ ಮತ್ತು ಕ್ರಮೇಣ ಮಾಯವಾಗುವ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕಡಿತ, ಹೆಚ್ಚು ಹೆಚ್ಚು ವಿಸ್ತಾರವಾಗುತ್ತಿರುವ ಖಾಸಗೀಕೃತ ಬ್ಯಾಂಕ್ ವಲಯದಲ್ಲಿ ರೈತನಿಗೆ ಸುಲಭವಾಗಿ ಸಿಗದ ಸಾಲ ಸೌಲಭ್ಯ, ಹೆಚ್ಚು ವೆಚ್ಚದಲ್ಲಿ ಬೆಳೆದ ವ್ಯವಸಾಯೋತ್ಪನ್ನಗಳಿಗೆ ಸಿಗದ ಸೂಕ್ತ ಬೆಲೆ. ಈ ಎಲ್ಲಾ ಕಾರಣಗಳಿಂದ ದೇಶದ ದೊಡ್ಡ ಸಮುದಾಯವಾದ ರೈತ ಕಂಗಾಲಾಗಿದ್ದಾನೆ. ಈ ನಿಟ್ಟಿನಲ್ಲಿ ಗ್ಯಾಟ್‌ಗೆ ಸಹಿ ಹಾಕಿರುವ ಮತ್ತು ವಿಶ್ವಬ್ಯಾಂಕು ನಿರ್ದೇಶನದಲ್ಲಿ ನಡೆಯುತ್ತಿರುವ ಭಾರತ ತನ್ನ ಆರ್ಥಿಕ ನೀತಿಯನ್ನು ರೈತ ಪರವಾಗಿ ಮಾರ್ಪಡಿಸಿಕೊಳ್ಳುವುದು ಗಗನ ಕುಸುಮವಾಗಿದೆ. ಕಾರಣ, ಆ ಮಾರ್ಪಾಡಿಗೆ ಬೇಕಾದ ಸ್ವಾತಂತ್ರ್ಯ, ಸಾರ್ವಭೌಮತೆಯನ್ನು ಸರ್ಕಾರ ಈಗಾಗಲೇ ಕಳೆದುಕೊಂಡಿದೆ. ಆದ್ದರಿಂದ ರೈತನ ಅಳಲನ್ನು ಹೊಸ ಶತಮಾನದ ಸಂದರ್ಭದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗಿಂತ ಅಮೇರಿಕಾ, ವಿಶ್ವಬ್ಯಾಂಕು ಮೊದಲಾದ ಅಧಿಕಾರದ ನೆಲೆಗಳೇ ಕೇಳಬೇಕಾಗಿದೆ.

ಹೆಚ್ಚೂ ಕಡಿಮೆ ಕಾರ್ಮಿಕರ ಸ್ಥಿತಿಯೂ ಇದೇ ಆಗಿದೆ. ಉದ್ಯೋಗಗಳು ಹೆಚ್ಚು ಹೆಚ್ಚು ಯಾಂತ್ರೀಕರಣಕ್ಕೆ ಒಳಗಾಗುತ್ತಿವೆ. ಬೃಹತ್ ಯಂತ್ರಗಳು, ಕಂಪ್ಯೂಟರ್‌ಗಳು ಇಲ್ಲಿ ಕಾರ್ಯನಿರತ ವಾಗಿವೆ. ಹೊಸ ವಿದ್ಯುನ್ಮಾನ ವ್ಯವಸ್ಥೆ ಶಿಕ್ಷಣ ಕ್ಷೇತ್ರವನ್ನು ಸಹ ಪ್ರವೇಶಿಸುತ್ತಿರುವುದರಿಂದ ಇಲ್ಲಿ ಗಮನಾರ್ಹ ಪಲ್ಲಟಗಳು ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದಲೇ ಇಂದಿನ ಕಾರ್ಮಿಕ ನಿವೃತ್ತಿ ಪೂರ್ವ ವಯಸ್ಸಿನಲ್ಲಿಯೇ ನಿವೃತ್ತನಾಗಿ ಭಾರವಾಗುತ್ತಿರುವುದು.

ಇದು ಒಂದೆಡೆಯಾದರೆ, ಮತ್ತೊಂದೆಡೆಯಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತ್ಯುತ್ಸಾಹದಿಂದ ಸಾರ್ವಜನಿಕ ಒಡೆತನದಲ್ಲಿರುವ ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರುತ್ತಿವೆ. ಇಲ್ಲಿ ವಿವಿಧ ಸರ್ಕಾರಗಳ ನಡುವೆ ಪೈಪೋಟಿಯೂ ಹೆಚ್ಚುತ್ತಿರುವುದು ‘ರಾಷ್ಟ್ರೀಕರಣ’ದ ಕಲ್ಪನೆಗೆ ತೀವ್ರಾಘಾತವಾಗುತ್ತಿದೆ. ಇಲ್ಲಿ ಕಲ್ಯಾಣ ರಾಷ್ಟ್ರದ ಕಲ್ಪನೆ ಹೋಗಿ, ಕಾರ್ಪೋರೇಟ್ ರಾಷ್ಟ್ರದ ಕಲ್ಪನೆ ನೆಲೆಯಾಗುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ಸಿಲುಕಿರುವ ರಾಷ್ಟ್ರೀಯ ಸಂದರ್ಭವು ರೈತ ಮತ್ತು ಕಾರ್ಮಿಕನಿಗೆ ಆಕಾಶವನ್ನು ತೋರಿಸುತ್ತಿದೆ.

ಈ ನೆಲೆಯಲ್ಲಿ ಹೊಸ ಶತಮಾನದ ವಿಚಾರ ಸಾಹಿತ್ಯವು ಎಲ್ಲಾ ತಲ್ಲಣ-ಪಲ್ಲಟಗಳಿಗೂ ತೀವ್ರವಾಗಿ ಸ್ಪಂದಿಸುತ್ತದೆ ಎಂಬುದು ಸ್ವಾಭಾವಿಕ ವಿಚಾರವಾಗುತ್ತದೆ.

ಸಾಮಾಜಿಕ ನ್ಯಾಯದ ಕಲ್ಪನೆ

ಉದಾರೀಕರಣವು ನಮ್ಮ ಇವತ್ತಿನ ನೀತಿಯಾಗಿದೆ. ಪೈಪೋಟಿಯ ನೆಪದಲ್ಲಿ ರಾಷ್ಟ್ರೀಕರಣಕ್ಕೆ ವಿರುದ್ಧವಾದ ಖಾಸಗೀಕರಣವು ದೇಶದ ಎಲ್ಲಾ ಉದ್ದಿಮೆಗಳನ್ನು ತನ್ನ ಅಂಕುಶಕ್ಕೆ ತಂದುಕೊಳ್ಳುತ್ತಿದೆ. ಇಲ್ಲಿ ಸರ್ಕಾರವನ್ನು ನಡೆಸುವವರು ಅಧಿಪತಿಗಳಾಗದೆ ಒಟ್ಟು ದೇಶದ ಸಂದರ್ಭದಲ್ಲಿ ಮೇನೇಜರ್‌ಗಳಾಗಿ ಮಾರ್ಪಡುವ ಸೂಚನೆಗಳು ಕಾಣುತ್ತಿವೆ. ಇಂಥಲ್ಲಿ ಖಾಸಗಿಯವರೆ ಬಹುಸಂಖ್ಯಾತರಾಗಿ ಮಾರ್ಪಟ್ಟು, ಅಪ್ರತ್ಯಕ್ಷವಾಗಿ ದೇಶವನ್ನು ನಡೆಸುವ ಸಂದರ್ಭದಲ್ಲಿ ಅವರು ಸಾಮಾಜಿಕ ನ್ಯಾಯದ ಕಲ್ಪನೆಗೆ ಕಿವುಡಾಗುವ ಸಾಧ್ಯತೆಗಳಿವೆ. ಅಂತಹ ಸ್ಥಿತಿ ಈಗಾಗಲೇ ಖಾಸಗಿ ಉದ್ದಿಮೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದರಲ್ಲಿ ಬಹು ರಾಷ್ಟ್ರೀಯ ಕಂಪನೆಗಳದ್ದು ಸಿಂಹಪಾಲಾಗಿದೆ. ಇಲ್ಲಿ ಸಂವಿಧಾನದ ಮಾತು ಮೌನಕ್ಕೆ ಹಿಂದಿರುಗುತ್ತಿದೆ.

ಹೊಸ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜು

ಈ ಕುರಿತ ಸಾಹಿತ್ಯ ಈಗಾಗಲೇ ಬಂದಿದೆ. ಇದಕ್ಕೆ ಪರಿಸ್ಥಿತಿಯೂ ಪೋಷಕವಾಗಿ ವಿಸ್ತಾರವಾಗುತ್ತಿದೆ. ಒಂದು ವಸಾಹತು ಶಾಹಿಯ ಜಾಗದಲ್ಲಿ ಇಂದು ಅನೇಕ ನವ ವಸಾಹತು ಶಾಹಿಗಳು ನೆಲೆಗೊಳ್ಳುತ್ತಿವೆ. ಇವು ನಮ್ಮ ಜನಪರ ಆಶಯಗಳಿಗೆ ವ್ಯತಿರಿಕ್ತವಾದ ನೆಲೆಯಲ್ಲಿ ಕ್ರಿಯಾಶೀಲಗೊಳ್ಳುತ್ತಿವೆ. ಅಂದು ನೇರವಾಗಿ ಕಾಣುತ್ತಿದ್ದ ಬ್ರಿಟನ್ ಇಂದು ಅಮೇರಿಕಾಕ್ಕೆ ತನ್ನ ಸಾಮ್ರಾಜ್ಯಶಾಹಿ ನೆಲೆಯನ್ನು ಬಿಟ್ಟುಕೊಟ್ಟಿದೆ. ಅಂತಹ ಅಮೇರಿಕಾವು ಜಾಗತೀಕರಣದ ಹೆಸರಿನಲ್ಲಿ ಮತ್ತು ಮೂಲದಲ್ಲಿ ಅಮೇರಿಕೀಕರಣವೇ ಆಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ‘ಜಗದೊಡೆಯ’ನಾಗುತ್ತಿದೆ. ಇದರ ಅಂಕುಶವರ್ತಿ ನಡವಳಿಕೆಯು ದ್ವಿತೀಯ ಜಗತ್ತನ್ನು ಒಡೆದಿರುವುದಲ್ಲದೆ, ತೃತೀಯ ಜಗತ್ತಿನ ಸಾಂಸ್ಕೃತಿಕ ಚಹರೆಯನ್ನು ಹುಸಿ ಪ್ರಗತಿಯ ಹೆಸರಿನಲ್ಲಿ ಅಳಿಸಿಹಾಕುತ್ತಿದೆ. ಈ ದಿಕ್ಕಿನಲ್ಲಿ ಸಾಗುತ್ತಿರುವ ಭಾರತವು ಈಗಾಗಲೇ ತನ್ನ ಸಾರ್ವಭೌಮತೆಯನ್ನು ಗುರುತರವಾಗಿ ಕಳೆದುಕೊಂಡಿದೆ. ಈ ಪಥದಲ್ಲಿ ಮುಂದಕ್ಕಲ್ಲದೆ ಹಿಂದಕ್ಕೆ ನಡೆಯುವ ಸಾಧ್ಯತೆಗಳೇ ಇಲ್ಲದಿರುವಾಗ ಭಾರತವು ಮತ್ತೊಂದು ವಸಾಹತು ರಾಷ್ಟ್ರವಾಗಿ ಮಾರ್ಪಡುವ ವಿಲಕ್ಷಣಗಳು ಕಾಣತೊಡಗಿವೆ. ಈ ನೆಲೆಯಲ್ಲಿ ನವ ವಸಾಹತುಶಾಹಿಗಳ ವಸಾಹತುವಾದಕ್ಕೆ ಪ್ರತಿಯಾದ ಮತ್ತೊಂದು ವಿನ್ಯಾಸದ ನವ ರಾಷ್ಟ್ರೀಯತಾ ವಾದವನ್ನು ನಾವು ಕಟ್ಟಿಕೊಳ್ಳಬೇಕಾಗಿದೆ. ಅಥವಾ ಕಳೆದುಹೋಗುತ್ತಿರುವ ರಾಷ್ಟ್ರೀಕರಣದ ಕ್ರಿಯೆಗೆ ಬಲಕೊಟ್ಟು ೪೭ರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಅಥವಾ ಈಗಾಗಲೇ ಹೇಳಿರುವಂತೆ ರಾಷ್ಟ್ರೀಕರಣದ ಸಾವಿನಲ್ಲಿ ವಿರಾಜಿಸುವ ಸರ್ವ ಖಾಸಗೀಕರಣದ ಒಡೆತನದಲ್ಲಿ ಅದೂ ಅಂತರರಾಷ್ಟ್ರೀಯ ಬಂಡವಾಳ ಶಾಹಿ-ಸಾಮ್ರಾಜ್ಯಶಾಹಿ ಒಡೆತನದ ಎದುರಿನಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶವು ಸಿದ್ಧವಾಗಬೇಕಾಗಿದೆ. ಈ ಎರಡರಲ್ಲಿ ಒಂದು ಸಾಧ್ಯತೆಯು ಈ ಶತಮಾನದ ಮುಖ್ಯ ಅಧ್ಯಾಯವಾಗುವ ಸೂಚನೆಗಳು ಇವತ್ತಿನ ಅರುಣೋದಯವಾಗಿದೆ.

ಹೀಗೆ ಗಮನಾರ್ಹ ಪಲ್ಲಟಗಳ ಮೂಲಕ ತಲ್ಲಣವನ್ನುಂಟು ಮಾಡುತ್ತಿರುವ ಈ ಹೊಸ ಕಾಲವು ಸಹಜವಾಗಿಯೇ ವಿಚಾರ ಸಾಹಿತ್ಯಕ್ಕೂ ವಿಭಿನ್ನ ಸಾಂಸ್ಕೃತಿಕ ಆಯಾಮಗಳನ್ನು ಲಭ್ಯವಾಗಿಸುತ್ತದೆ.
*****
ಹಂಬಲ, ನವೆಂಬರ್ ೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಶಾವತಾರ ಮತ್ತು ಜೀವ ವಿಕಾಸ
Next post ಹಸಿವು-ಮೇವು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys