Home / ಲೇಖನ / ಸಾಹಿತ್ಯ / ವಿಭಿನ್ನ ಧ್ವನಿಗಳ ‘ಪ್ರಜಾಪ್ರಭುತ್ವ’

ವಿಭಿನ್ನ ಧ್ವನಿಗಳ ‘ಪ್ರಜಾಪ್ರಭುತ್ವ’

ಸೂರ್‍ಯ ಎಂದಕೂಡಲೇ ಏನು ನೆನಪಿಗೆ ಬರುತ್ತದೆ? ಆಸ್ತಿಕರ ಪಾಲಿಗಾದರೆ ಸೂರ್ಯ ಪರಮಾತ್ಮ ಜ್ಞಾನಿಗಳ ಪಾಲಿಗೆ ಜ್ಞಾನದ ಸಂಕೇತ; ಕತ್ತಲನ್ನು ಕಳೆದು ಜಗತ್ತಿನ ಸಕಲ ಜೀವರಾಶಿಗಳಲ್ಲಿ ಚೈತನ್ಯವನ್ನು ಮೂಡಿಸುವ ಜೀವಸೆಲೆ. ರೈತಾಪಿ ಮಕ್ಕಳ ಪಾಲಿಗೆ ಮುಗಿಲಲ್ಲಿ ನೇತುಹಾಕಿದ ಗಡಿಯಾರ. ಕವಿಗಳ ಪಾಲಿಗೆ ಸೌಂದರ್ಯದ ರೂಪಕ; ಚೈತನ್ಯದ ಪ್ರೇರಕ. ಒಟ್ಟಾರೆ, ಸೂರ್ಯನೆಂದ ಕೂಡಲೇ ಪ್ರಭಾಪುಂಜ ಹಾಗೂ ಜೀವನೋತ್ಸಾಹದ ಚಿತ್ರವೊಂದು ಕಣ್ಣೆದುರು ಸುಳಿಯುತ್ತದೆ. ಆದರೆ ಕವಿ ಚೆನ್ನನೀರ ಕಣವಿ ಅವರಿಗೆ ಕವಿತೆಯಲ್ಲಿ ಸೂರ್ಯ ಜೀವನೋತ್ಸಾಹದ ಚಿಲುಮೆಯಾಗಿ ಕಾಣುತ್ತಿಲ್ಲ ಬದಲಿಗೆ ಅಟ್ಟಹಾಸದಿ ಮೆರೆದು ನೆಲಕಚ್ಚಿದ ಸರ್ವಾಧಿಕಾರಿಯಂತೆ ಕಾಣುತ್ತಿದ್ದಾನೆ (ಸೂರ್ಯನನ್ನು ಸರ್ವಾಧಿಕಾರಿ ಎಂದವರಲ್ಲಿ ಬಹುಶಃ ಕಣವಿ ಅವರೇ ಮೊದಲಿರಬೇಕು). ಇಂಥ ವಿಭಿನ್ನ ನೋಟದಿಂದಲೇ ‘ಆಕಾಶಬುಟ್ಟಿ’ ಸಂಕಲನದಲ್ಲಿನ ‘ಪ್ರಜಾಪ್ರಭುತ್ವ’ ಕವಿತೆ ಮೊದಲ ಓದಿಗೇ ಇಷ್ಟವಾಗಿಬಿಡುತ್ತದೆ.

ಕವಿತೆ ಆರಂಭವಾಗುವುದೇ ಸೂರ್‍ಯಾಸ್ತಮಾನದ ಕಕ್ಕರುಮಬ್ಬಿನೊಂದಿಗೆ. ಈ ಸೂರ್ಯಾಸ್ತ ಕವಿಯ ಕಣ್ಣಿಗೆ ಸೌಂದರ್ಯದ ರೂಪದಲ್ಲಿ ಕಾಣುತ್ತಿಲ್ಲ. ಬದಲಿಗೆ ಸೂರ್ಯನ ಸೋಲಾಗಿ ಕಾಣುತ್ತಿದೆ. ಮುಳುಗುತಿಹ ನೇಸರ ಮುದಿಸಿಂಹದಂತಾಗಿ ಪಶ್ಚಿಮದಲ್ಲಿನ ತನ್ನ ಗವಿಯ ಸೇರುತ್ತಿದ್ದಾನೆ ಎಂದು ಕವಿ ಬಣ್ಣಿಸುತ್ತಾರೆ. ಇಲ್ಲಿನ ‘ಗವಿ’ ಪದವನ್ನು ಗಮನಿಸಿ. ಸಾಮಾನ್ಯವಾಗಿ ಗವಿ ಎಂದರೆ ಕತ್ತಲೆಯ ಕೂಪ. ಈ ಕೂಪದಲ್ಲಿ ಸೂರ್ಯ ಸೇರುತ್ತಿದ್ದಾನೆ. ಸೂರ್ಯನ ಅರ್ಥಾತ್ ಸರ್‍ವಾಧಿಕಾರತ್ವದ ಅವನತಿಯನ್ನು‘ಗವಿ’ ಪದಪ್ರಯೋಗ ಪರಿಣಾಮಕಾರಿಯಾಗಿಸುತ್ತದೆ.

ಮುದಿಸಿಂಹದಂತೆ ಮೆತ್ತಗಾಗಿದ್ದರೂ, ಪದಚ್ಯುತಿಗೊಂಡು ಗವಿಯಲ್ಲಿ ಮುಳುಗುತ್ತಿದ್ದರೂ ಸೂರ್ಯನ ಆಹಂ ಅಳಿದಿಲ್ಲ. ತನ್ನ ಸರ್ವಾಧಿಕಾರತ್ವದ ಕೊನೆಯ ಕ್ಷಣಗಳಲ್ಲೂ ಉರಿಗಣ್ಣಿನ ನೋಟ ನಯಗೊಂಡಿಲ್ಲ ಬದಲಿಗೆ ಜನರತ್ತ ಕೆಕ್ಕರಿಸಿ ನೋಡುತ್ತಿದ್ದಾನೆ.

ಒಂದೆಡೆ ಸೂರ್ಯನ ನಿರ್ಗಮನ: ಇನ್ನೊಂದೆಡೆ ಸ್ವಾತಂತ್ರ್ಯದ ಉದಯ. ನಿರ್‍ಗಮಿಸಿದ್ದು ಸಾಧಾರಣ ಸಾಮ್ರಾಜ್ಯವಲ್ಲ ಅದು ಹಗಲಿನ, ಅದರಲ್ಲೂ ಉರಿ ಬಿಸಿಲಿನ ಸಾಮ್ರಾಜ್ಯ. ಪತನಗೊಂಡ ಈ ಸಾಮ್ರಾಜ್ಯ ಪಶ್ಚಿಮದ ಸಮುದ್ರದಲ್ಲಿನ ಹಡಗನ್ನೇರುತಿದೆ. ಈ ನಿರ್‍ಗಮನದ ಸಂದರ್‍ಭದಲ್ಲಿ ಮಬ್ಬು ಬೆಳಕು ಗಗನ ಸಿಂಹಾಸನದಲ್ಲಿ ಕಪ್ಪು ಬಾವುಟವನ್ನು ಹಾರಿಸುತ್ತಿದೆ. ಹಕ್ಕಿಗಳಿಗೆ ಬಿಡುಗಡೆಯ ಸಂಭ್ರಮ. ಸ್ವಾತಂತ್ರ್ಯದ ಆ ಹಿಗ್ಗಿನಲ್ಲಿ ಅವುಗಳು ಜಯಕಾರ ಮೊಳಗಿಸುತ್ತಿವೆ. ಸಂಧ್ಯಾ ಸಮೀರನದು ಚಾರನ ಪಾತ್ರ. ಆತ ಮುಗಿಲಿನ ನಾಲ್ದೆಸೆಗಳಲ್ಲೂ ಸ್ವಾತಂತ್ರ್ಯದ ಸಂದೇಶವನ್ನು ಬಿತ್ತರಿಸುತ್ತಿದ್ದಾನೆ. ಇಡೀ ಪ್ರಕೃತಿಯೇ ಬಿಡುಗಡೆಯ ಸಂಭ್ರಮಕ್ಕೆ, ಒಂದಲ್ಲಾ ಒಂದು ರೀತಿಯಲಿ ಸ್ಪಂದಿಸುತಿದೆ.

ಸರಿ, ಸರ್‍ವಾಧಿಕಾರಿ ಸೂರ್‍ಯ ಪದಚ್ಯುತಿಗೊಂಡು ಗಂಟುಮೂಟೆ ಕಟ್ಟಿದ್ದಾಯಿತು. ಮುಂದೇನು? ಮುಂದಿನದು ಜನತಾ ರಾಜದ ಉದಯ; ಅಗಣಿತ ಚಕ್ಕಿಗಳ ಪ್ರಜಾಪ್ರಭುತ್ವ. ಈ ಪ್ರಜಾ ಸಾಮ್ರಾಜ್ಯದಲ್ಲಿ ಸರ್ವಾಧಿಕಾರಿಗಳಿಗೆ ಸ್ಥಾನವಿಲ್ಲ ಇಲ್ಲಿ ಸರ್ವರಿಗೂ ಸಮಪಾಲು. ಪ್ರತಿ ವ್ಯಕ್ತಿಯ ಶಕ್ತಿಗೂ ಇದೆ ಮನ್ನಣೆ.

ಚುಕ್ಕಿಗಳ ಪ್ರಜಾಪ್ರಭುತ್ವದ ಸಾಮ್ರಾಜ್ಯದಲ್ಲಿ ಆಕಾಶಗಂಗೆ ಶಾಸನಸಭೆಯನ್ನು ನಡೆಸಿ, ಮಂತ್ರಿಮಂಡಲವನ್ನು ರಚಿಸಿದೆ. ಬುಧ, ಬೃಹಸ್ಪತಿ, ಶುಕ್ರ, ಶನಿ, ಮಂಗಳನಂಥ ಮಹಿಮಾನ್ವಿತರು ಮಂತ್ರಿಗಳಾಗಿ ಆಧಿಕಾರ ಸೂತ್ರ ಹಿಡಿದಿದ್ದಾರೆ. ಇಂಥ ಅಪರೂಪದ ಆಡಳಿತ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಯಾರು? ಇನ್ನಾರು, ಹಾಲಿನಂಥ ಬೆಳದಿಂಗಳ ಚೆಲ್ಲುವ ಚಂದಿರನಲ್ಲದೆ?

ಸರ್ವಾಧಿಕಾರಿ ಆಡಳಿತ ಈಗ ಇತಿಹಾಸಕ್ಕೆ ಸಂದ ಪುಟ. ವರ್ತಮಾನದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಾನಿನಲ್ಲಿ ಶಾಂತಿ ಸಮದರ್ಶಿತ್ವ ನೆಲೆಸಿದೆ. ಇಲ್ಲಿ ಬಡವ ಬಲ್ಲಿದ ಎನ್ನುವ ಭೇದವೇ ಇಲ್ಲ. ಚಂದ್ರನ ಆಡಳಿತದಲ್ಲಿ ಸರ್ವರಿಗೂ ಸಮಪಾಲು ಬೆಳದಿಂಗಳು.

ಪ್ರಜಾಪ್ರಭುತ್ವದ ಮಹತ್ವವನು ಎತ್ತಿ ಹಿಡಿಯುವುದರೊಂದಿಗೆ ಕವಿ ತಮ್ಮ ಕವಿತೆಯನ್ನು ಮುಗಿಸುತ್ತಾರೆ. ಇಪ್ಪತ್ತೆಂಟು ಸಾಲುಗಳ ಪುಟ್ಟ ಶರೀರದ ಈ ಕವಿತೆ ಸುರ್ಯಚಂದ್ರರ ಮೂಲಕ ಲೋಕ ವ್ಯವಹಾರವನ್ನು ಅದ್ಭುತವಾಗಿ ಹೇಳುತ್ತದೆ. ವರ್ತಮಾನಕ್ಕೆ, ರಾಜಕಾರಣಕ್ಕೆ ಕಣವಿ ಸ್ಪಂದಿಸಿರುವ ಅಪರೂಪದ ಉದಾಹರಣೆಯಾಗಿ ಈ ಕವಿತೆ ಮುಖ್ಯವಾಗುತ್ತದೆ. ಅಂದಹಾಗೆ, ಈ ಕವಿತೆಯ ಮೂಲಕ ಕವಿ ಹೇಳಲು ಹೊರಟಿರುವುದು ಪ್ರಜಾಪ್ರಭುತ್ವದ ಕುರಿತು ಮಾತ್ರವಾ?

ಮೇಲ್ನೋಟಕ್ಕೆ ಸ್ಪಷ್ಟವಾಗುವ ಪ್ರಜಾಪ್ರಭುತ್ವದ ಅರ್ಥವನ್ನು ಮರೆತು ಇನ್ನೊಂದು ನಿಟ್ಟಿನಲ್ಲಿ ಕವಿತೆಯನ್ನು ಓದಿಕೊಳ್ಳಲಿಕ್ಕೂ ಸಾಧ್ಯವಿದೆ. ಭಾರತದ ಸ್ವಾತಂತ್ರ್ಯೋದಯದ ಹರ್‍ಷಗೀತೆಯಂತೆಯೂ ‘ಪ್ರಜಾಪ್ರಭುತ್ವ’ ಕವಿತೆ ಕಾಣಿಸುತ್ತದಲ್ಲವೇ?

ಕವಿತೆಯಲ್ಲಿನ ಪಶ್ಚಿಮಾದ್ರಯ ಗವಿ, ಪಡುವ ಕಡಲು ಇವೆಲ್ಲ ಸೂಚಿಸುವುದು ಪಶ್ಚಿಮ ದೇಶವನ್ನು- ಇಂಗ್ಲೆಂಡನ್ನು- ಆಲ್ಲವೇ? ‘ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿ’ ಎನ್ನುವ ಪದ ಇಂಗ್ಗೆಂಡ್‍ನ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎನ್ನುವ ಖ್ಯಾತಿಯನ್ನು ನೆನಪಿಸುತ್ತವೆ. ಆದರೆ ಬ್ರಿಟೀಷರ ನಿರ್ಗಮನದೊಂದಿಗೆ ಅವರ ಖ್ಯಾತಿ ಮುಕ್ಕುಗೊಳ್ಳುತ್ತಿದೆ.

ನವೋದಯದ ಸೌಂದರ್ಯೋಪಾಸನೆಯ ಹಾದಿಯಲ್ಲಿ ನಡೆದುಬಂದ ಕಣವಿ ಯಂಥ ಕವಿ ಸೂರ್ಯನನ್ನು ಸರ್ವಾಧಿಕಾರಿಯನ್ನಾಗಿ ಕಾಣುವುದನ್ನು ಕಲ್ಪಿಸಿಕೂಳ್ಳುವುದು ಕಷ್ಟ. ಈ ಕವಿತೆಯಲ್ಲಿ ಕೂಡ ಕಣವಿ ಸೂರ್ಯನ ಕುರಿತು ಮಾತನಾಡುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ. ಅವರು ಸುರ್ಯನ ಮೂಲಕ ಸಾಮ್ರಾಜ್ಯಶಾಹಿಗಳ ನಿರ್ಗಮನದ ಕುರಿತು ಹೇಳುತ್ತಿದ್ದಾರೆ. ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎನ್ನುವ ಇಂಗ್ಲಂಡ್‍ನ ಗರ್‍ವವನ್ನು ಅಣಕಿಸಲು ಸೂರ್‍ಯ’ ಕವಿಗೆ ರೂಪಕವಾಗಿ ಒದಗಿದ್ದಾನೆ.

ಸ್ವಾತಂತ್ರ್ಯ ಚಳುವಳಿಯ ಸಫಲತೆಯೊಂದಿಗೆ ಕವಿತೆಯನ್ನು ನೆನಪಿಸಿಕೊಂಡಾಗ, ಕವಿತೆಯ ಒಡಲಲ್ಲಿನ ವ್ಯಂಗ್ಯ ಗಮನಿಸಿ. ಇಲ್ಲಿನ ಪ್ರಜಾಪ್ರಭುತ್ವ ಇಂಗ್ಲೆಂಡಿನಲ್ಲೂ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ವಿಶ್ವದ ಎರಡು ದೊದ್ದ ದೇಶಗಳು ‘ಭಾರತ-ಇಂಗ್ಗೆಂಡ್. ಹೀಗಿದ್ದೂ ಒಂದು ಪ್ರಜಾಪ್ರಭುತ್ವ ಆಡಳಿತದ ದೇಶವೊಂದು ಮತ್ತೊಂದು ದೇಶದ ಮೇಲೆ ಪ್ರಭುತ್ವ ಸಾಧಿಸಿದ ವ್ಯಪರೀತ್ಯ, ಆ ಮೂಲಕ ನಡೆದ ಪ್ರಜಾಪ್ರಭುತ್ವದ ಅಣಕವನ್ನು ಕವಿತೆ ಹೇಳುತ್ತದೆ. ಅಂತಿಮವಾಗಿ ಈ ವಿಪರೀತಗಳ ನಡುವೆಯೇ ನಿಜವಾದ ಪ್ರಜಾಪ್ರಭುತ್ವ ಸ್ವಾತಂತ್ರ್ಯದ ರೂಪದಲ್ಲಿ ಉದಯಿಸುತ್ತದೆ. ಇಂಥ ಅಪೂರ್‍ವ ಧ್ವನಿಗಳಿಂದ ‘ಪ್ರಜಾಪ್ರಭುತ್ವ’ ಕವಿತೆ ಓದುಗನಿಗೆ ಇಷ್ಟವಾಗುತ್ತದೆ; ಕಾಡುತ್ತದೆ.

ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ
ಪಶ್ಚಿಮಾದ್ರಿಯ ಗವಿಯ ಸೇರುತಿಹನು;
ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ
ಲೋಗರೆಡೆ ಕೆಕ್ಕರಿಸಿ ನೋಡುತಿಹನು!

ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ
ಕಪ್ಪು ಬಾವುಟವತ್ತಿ ತೋರಿಸಿಹುದು-
ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ
ಹಾಡಿ ಜಯಜಯಕಾರ ಗೈಯುತಿಹುದು.

ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ
ಪಡುವ ಕಡಲಿನ ಹಡಗವೇರುತಿರಲು
ಸಂಧ್ಯಾ ಸಮೀರನದೂ ಸ್ವಾತಂತ್ರ್ಯ ಸಂದೇಶ
ಹೊತ್ತು ನಾಲ್ದೆಸೆಗಳಲಿ ಹರಡುತಿಹನು.

ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ
ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ-
ವ್ಯಕ್ತಿ-ಶಕ್ತಿಯ ಗುಣವಿಕಾಸ ಪ್ರಕಾಶದಲಿ
ಜಗವ ಬೆಳಗುವುದದರ ಮೂಲತತ್ತ್ವ.

ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ
ಮಂತ್ರಿ ಮಂಡಲವನ್ನು ನಿರ್ಮಿಸಿಹುದು;
ಬುಧ ಬ್ರಹಸ್ಪತಿ ಶುಕ್ರ ಶನಿ ಮಂಗಳಾದ್ಯರನು
ವಿವಿಧ ಮಂತ್ರಿಗಳಾಗಿ ನೇಮಿಸಿಹುದು.

ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು
ರಾಜಕೀಯದ ಪಕ್ಷಪಂಗಡವೆನೆ
ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ
ಮುಖ್ಯಮಂತ್ರಿಯು ಚಂದ್ರನಾಗಿರುವನೆ?

ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು
ಶಾಂತಿ ಸಮದರ್ಶಿತ್ವ ತಂಪಿನಿರುಳು-
ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು
ಸರ್ವರಿಗೂ ಸಮಪಾಲು ಬೆಳದಿಂಗಳು.

(ಆಕಾಶಬುಟ್ಟಿ ಸಂಕಲನದಿಂದ)
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...