ಆನುಗೋಲು

ಆನುಗೋಲು

ರೈಲು ನಿಲ್ದಾಣದಲ್ಲಿ ನಿಂತಿತು!

“ಪೇಪರ! ಡೇಲಿ ಪೇಪರ!……..ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ ಬರುವವರ ಗದ್ದಲ; ಚಹಾ ಮುಂತಾದ ಬಿಸಿ ಪಾನೀಯಗಳನ್ನು ಮಾರುವವರ ಕೂಗು! ಫಲಾಹಾರ ಮಾರುವವರ ಕೂಗು! ಇವುಗಳನ್ನು ಮೀರಿ ಪೇಪರ! ಪೇಪರ ಎಂದು ಒದರುವವನ ವಿಚಿತ್ರ ಧ್ವನಿ! ಅದೂ ಒಬ್ಬ ಮುದುಕನ ಕೂಗು.

ಗಾಡಿಯಿಂದ ಕೆಳಗಿಳಿಯುವಾಗ ರಂಜನಾಳ ಲಕ್ಷ ಆ ಧ್ವನಿಯ ಕಡೆಗೇ ಹೋಯಿತು. ನೋಡುತ್ತಾಳೆ, ಅವನೊಬ್ಬ ಮುದುಕ! ಹಣ್ಣು ಮುದುಕ! ಪ್ರತಿಯೊಂದು ಡಬ್ಬಿಯ ಕಿಟಕಿಗೆಳ ಹತ್ತಿರ ನಿಂತುಕೊಂಡು ತನ್ನ ಪತ್ರಿಕೆಗಳನ್ನು ಮಾರಲು ಯತ್ನಿಸುತ್ತಿದ್ದನು. ರಂಜನಾ ಮನಸ್ಸಿನಲ್ಲಿಯೇ ಅಯ್ಯೋ ಪಾಪ! ಎಂದುಕೊಂಡಳು.

ಇಬ್ಬರು ಕೂಲಿಗಳು ಸೆಕೆಂಡ ಕ್ಲಾಸ ಡಬ್ಬಿಯೊಳಗಿಂದ ರಂಜನಾ ಮತ್ತು ನಿರಂಜನರ ಪ್ರವಾಸದ ಸಾಮಾನುಗಳನ್ನು ಕೆಳಗೆ ಇಳಿಸುತ್ತಿದ್ದರು. ರಂಜನಾಳ ಕೈಯಲ್ಲಿ ಏಳು ತಿಂಗಳ ಮಗು ಬೇಬಿ ಇದ್ದಳು. ಅವಳು ಸೆಕೆಂಡ ಕ್ಲಾಸ ಡಬ್ಬಿಯ ಬಾಗಿಲದ ಹತ್ತಿರವೇ ನಿಂತುಕೊಂಡಿದ್ದಳು, ಹೊರಗಣ್ಣುಗಳು ಬೇಬಿಯ ಕಡೆಗೆ ನೋಡುತ್ತ, ಅವಳನ್ನು ಆಟವಾಡಿಸುವಂತೆ ನಟಿಸುತ್ತಿದ್ದರೂ ಅವಳ ದೃಷ್ಟಿ ಪೇಪರ ಮಾರುವ ಆ ಮುದುಕನ ಕಡೆಗೇ ಇತ್ತು.

ಆ ಮುದುಕನ ಕೈಯಲ್ಲಿ ಪತ್ರಿಕೆಗಳು ಇದ್ದರೆ ಇನ್ನೊಂದು ಕೈಯಲ್ಲಿ ಒಂದು ಆನುಗೋಲು. ಆ ಆನುಗೋಲನ್ನು ಊರುತ್ತಲೇ ಅವನು ತನ್ನ ಹೆಜ್ಜೆಗಳನ್ನು ಮುಂದೆ ಸಾಗಿಸುತ್ತಿದ್ದನು. ಸಾಲದುದಕ್ಕೆ ಕಣ್ಣುಗಳು ನೆಟ್ಟಗೆ ಕಾಣದಿದ್ದುದರಿಂದ, ಓಡಾಡುವಾಗ ಅವನ ಹೆಜ್ಜೆ ಕುಂಠಿತವಾಗುತ್ತಿತ್ತು. ತಲೆಯ ಮೇಲೆಲ್ಲಾ ಬಿಳಿಯ ಕೂದಲು. ಒಬ್ಬ ಯೋಗಿಯ ಹಾಗೆ ಬಿಳಿಯ ಗಡ್ಡವನ್ನು ಬೆಳೆಯಿಸಿ ಬಿಟ್ಟಿದ್ದ. ಇಂಥ ವಯಸ್ಸಿನ ಆ ಮುದುಕ ಎಷ್ಟು ಕಷ್ಟಪಡುತ್ತಿರುವನಲ್ಲ! ಎಂದು ರಂಜನಾ ಮನದಲ್ಲಿಯೇ ಯೋಚಿಸುತ್ತಿದ್ದಳು.

ನಿರಂಜನ ತನ್ನ ಆಫೀಸರರ ಠೀವಿಯಲ್ಲಿಯೇ ಇದ್ದನು. ರೈಲು ಬಂಡಿಯಿಂದ ದೂರಸರಿದು ನಿಂತು, ಕೂಲಿಗಳು ತರುತ್ತಿರುವ ಸಾಮಾನುಗಳನ್ನು ನಿರೀಕ್ಷಿಸುತ್ತಿದ್ದನು. ಎತ್ತ ಕಡೆಗೋ ಲಕ್ಷವಿಟ್ಟು ರಂಜನಾ ಸುಮ್ಮನೆ ನಿಂತದ್ದನ್ನು ನೋಡಿ “ರಂಜನಾ, ಇತ್ತ ಕಡೆಗೆ ಬಾ, ಅಲ್ಲಿ ಗದ್ದಲದಲ್ಲಿ ಏಕೆ ನಿಂತಿರುವೆ?” ಎಂದು ಕೂಗಿದನು.

“ಓಹೋಹೋ! ಬೀಬಿ! ಪೇಪರ ಬೇಕು!” ನಿರಂಜನನ ಕಡೆಗೆ ಹೊರಟ ರಂಜನಾ ಒಮ್ಮೆಲೆ ಹೊರಳಿ ನೋಡಿದಳು. ಪೇಪರ ಮಾರುವ ಮುದುಕನ ಕೈಯಲ್ಲಿಯ ಪತ್ರಿಕೆಯೊಂದನ್ನು ಬೇಬಿ ಆಟವಾಡುತ್ತ ಜಗ್ಗಿ ಕೊಂಡು ಬಿಟ್ಟಿದ್ದಳು; ಅದಕ್ಕಾಗಿಯೇ ಆ ಮುದುಕ ನಗುತ್ತ, ಬಹಳ ಹುಡುಗತನದ ರೀತಿಯಿಂದ ನಗುತ್ತ ಬೇಬಿಯನ್ನು ಮಾತನಾಡಿಸುತ್ತಿದ್ದ.

“ಬಣ್ಣದ ಬೊಂಬೆ! ಬಣ್ಣದ ಬೊಂಬೆ! ಅದರಲ್ಲಿ ಇದೆ!” ಮುದುಕ ತನ್ನ ಆನುಗೋಲನ್ನು ಊರಿ ಹೊಟ್ಟೆತುಂಬ ನಕ್ಕನು. ಅವನ ಮುಖದ ಮೇಲೆ ಆನಂದವು ಲಾಸ್ಯವಾಡುತ್ತಿದ್ದಿತು. ಅವನ ಬೆಳ್ಳಿಮಿಂಚಿನ ಗಡ್ಡದ ಕೂದಲಗಳು ಸಹ ಕುಣಿಯುತ್ತಿದ್ದವು. ನೀರಿಗೆಗಟ್ಟಿದ ಆ ಮುಖದಲ್ಲಿ ಯೌವನದ ಉತ್ಸಾಹ ತುಂಬಿದ್ದಿತು.

ಒಂದು ಪುಟ್ಟಹಕ್ಕಿ ಆನಂದದಿಂದ ಎರಡೂ ರೆಕ್ಕೆಗಳನ್ನು ಪಟಪಟ ಬಡಿಯುವಂತೆ, ತನ್ನ ಎರಡೂ ಮಾಟಕೈಗಳನ್ನು ಬಡಿಬಡಿದು ಬೇಬಿ ನಕ್ಕಳು. ಅಲ್ಲಿಯೇ ಜೊತೆಯಲ್ಲಿ ನಿಂತ ಉದಯಕುಮಾರ ಜಿಗಿದಾಡಿದ. ಈ ಮೋಹಕ ಸನ್ನಿವೇಶ ನೋಡಿ, ಸುತ್ತಲಿದ್ದ ಜನ ಮುಗ್ಧಗೊಂಡಿತು.

ರಂಜನಾ ಬೇಬಿಯ ಕೆಂಗಲ್ಲಗಳಿಗೆ ಮುದ್ದುಕೊಡುತ್ತ, ಆ ಮುದುಕನಿಗೆ ಪತ್ರಿಕೆಯ ಬೆಲೆಯಾದ ಎಂಟಾಣೆ ಕೊಡಹೋದಳು.

ಅವನು ಎಂಟಾಣೆ ಇಸಕೊಳ್ಳಲಿಲ್ಲ. “ಬೇಬಿಗೆ ಕೊಟ್ಟುಬಿಡಿರಿ! ಛೂ ಬೇಬಿ” ಮುಗುಳು ನಗೆ ನಗುತ್ತ ಆ ಮುದುಕ ಬೇಬಿಯ ಗದ್ದ ಹಿಡಿದು ಮಾತನಾಡಿಸಿದ.

ರಂಜನಾ ಎಂಟಾಣೆ ತೆಗೆದುಕೊಳ್ಳಲು ಮತ್ತೆ ಕೇಳಿಕೊಂಡಳು. “ಬೇಬಿ ನನ್ನ ಮೊಮ್ಮಗಳೇ! ಅವಳಿಗೆ ಪೇಪರಮಿಂಟ, ಬಿಸ್ಕೀಟ ಕೊಡಿಸಿರಿ……….” ಮತ್ತೆ ಆ ಮುದುಕ ಗಹಿಗಹಿಸಿ ನಕ್ಕನು.

“ಪೇಪರ! ಡೇಲಿ ಪೇಪರ……!” ಎಂದು ಒದರುತ್ತ ಮುಂದೆ ಸಾಗಿದನು ಬೇಬಿಯ ಕಡೆಗೆ ಹಿಂದೆ ಹೊರಳಿ ನೋಡಿ “ಟಾಽ ಟಾಽ!” ಎಂದು ಕೈಮಾಡಿದನು.

ರಂಜನಾ ಕೊಡಹೋದ ಎಂಟಾಣೆ ಅವಳ ಕೈಯಲ್ಲಿಯೇ ಉಳಿಯಿತು. ನಿಜವಾಗಿ ಆ ಮುದುಕ ಎಂಟಾಣೆ ಇಸಿಕೊಂಡುಬಿಟ್ಟಿದ್ದರೆ ನ್ಯಾಯವಾಗುತ್ತಿತ್ತು. ಚಿಂತೆಗೆ ಏನೂ ಕಾರಣವಿರುತ್ತಿರಲಿಲ್ಲ. ತಾನು ಹಾಗೆ ಮಾಡಿದುದು ತಪ್ಪೋ, ಒಪ್ಪೋ ಎಂಬುದು ರಂಜನಾಳಿಗೆ ತಿಳಿಯಲಿಲ್ಲ. ಆ ಘಟನೆಯನ್ನು ಅವಳಿಗೆ ಮರೆಯುವುದೂ ಆಗಲಿಲ್ಲ.

ಅದೇ ದಿನ ರಾತ್ರಿ! ಗಡಿಯಾರ ಹತ್ತು ಗಂಟೆ ಹೊಡೆದುಕೊಂಡಿತು. ಯುವರಾಜ ಉದಯಕುಮಾರ ಮಲಗಿದ್ದನು. ಆದರೆ ಬೇಬಿ ಮಾತ್ರ ದೀಪದ ಬೆಳಕಿನಲ್ಲಿ ಆಟವಾಡುತ್ತಿತ್ತು. ಕೈಯಲ್ಲಿ ಚಿತ್ರದ ಪತ್ರಿಕೆಯನ್ನು ಹಿಡಿದು ಕೊಂಡು “ಪಾಽ ಪಾಽ!” ಎಂದು ಬೊಟ್ಟುಮಾಡಿ ತೋರಿಸಿತು.

“ನೋಡಿದಿರಾ, ಅಜ್ಜ ಕೊಟ್ಟ ಪುಸ್ತಕದ ಮೇಲೆ ಎಷ್ಟು ಪ್ರೀತಿ ಇದೆ, ಇದಕ್ಕೆ!” ರಂಜನಾ ಬೇಬಿಗೆ ಲಟಲಟ ಮುದ್ದುಕೊಟ್ಟಳು.

ಪತ್ತೇದಾರಿ ಕಾದಂಬರಿಯನ್ನು ಓದುವದರಲ್ಲಿ ತಲ್ಲೀನನಾದ ನಿರಂಜನ ಹೆಂಡತಿಯ ಮಾತುಗಳನ್ನು ಕೇಳಿ ಪುಸ್ತಕವನ್ನು ಆಚೆ ಹಾಸಿಗೆಯ ಮೇಲೆ ಒಗೆದ. “ಏನದು ಬೇಬಿ, ಬೇಬಿ?” ಎಂದು ಕೂಗಿದ.

“ಪಾಽ ಪಾಽ” ಬೊಟ್ಟು ಒತ್ತಿ ಹೇಳಿತು. ಇಬ್ಬರೂ ಬಿದ್ದು, ಬಿದ್ದು ನಕ್ಕರು.

“ನೊಡಿರಿ, ನಮ್ಮ ಬೇಬಿಗೆ ಚಿತ್ರದ ಮೇಲೆ ಇಷ್ಟು ಪ್ರೀತಿ. ಆದರೆ ಪಾಪ! ಆ ಮುದುಕ ಇದರ ಬೆಲೆಯನ್ನು ಸಹ ತೆಗೆದುಕೊಳ್ಳಲಿಲ್ಲ.”

“ಏಕೆ?” ನಿರಂಜನ ಚಕಿತನಾಗಿ ಕೇಳಿದ.

“ಏಕೋ?” ರಂಜನಾ ಕೈತಿರುವುತ್ತ ನುಡಿದಳು.

“ಹಾಗಾದರೆ ಏನು ಹೇಳಿದ?”

“ನನ್ನ ಮೊಮ್ಮಗಳು, ರೊಕ್ಕ ಬೇಡ ಎಂದ”

“ಮೊಮ್ಮಗಳು!!” ನಿರಂಜನ ಒಮ್ಮೆಲೆ ಉದ್ಗಾರ ತೆಗೆದ, ಅವನಿಗೆ ನಗುವು ಬಂದುಬಿಟ್ಟಿತು. “ಆ ಮುದುಕ ಹುಚ್ಚನಿರಬೇಕು!” ರಂಜನಾ ಮೌನವಾಗಿಯೇ ಇದ್ದಳು. ಏನೂ ಉತ್ತರಕೊಡಲಿಲ್ಲ.

“ಹೀಗೆ ಮಕ್ಕಳೆಲ್ಲ ಮೊಮ್ಮಕ್ಕಳಾದರೆ, ಅವನ ವ್ಯಾಪಾರ ಹೇಗೆ ಆಗಬೇಕು? ಅವನು ಹೇಗೆ ಬದುಕಬೇಕು?” ರಂಜನಾ, ನೀನು ಸುಮ್ಮನೆ ಅವನಿಗೆ…………”

“ಅವನೇ ಅಲ್ಲಿ ಅಂತಃಕರುಣದಿಂದ ನಗುತ್ತ ಹೋಗಿಬಿಟ್ಟ!”

“ಹುಚ್ಚನಿರಬೇಕು ! ಅವನು ವ್ಯಾಪಾರಕ್ಕೆ ನಿಂತಂತೆ ಕಾಣುವದಿಲ್ಲ”

“ಅಹುದು ನನ್ನದು ತಪ್ಪಾಗಿದೆ. ಆದರೆ ಅವನಿಗೆ ಹುಚ್ಚನೆಂದು ಏಕೆ ಕರೆಯುವಿರಿ? ಮಕ್ಕಳ ಮೇಲೆ ಅಂಥ ಪ್ರೀತಿ ಏಕೆ ಇರಬಾರದು? ನನ್ನ ತಂದೆ, ನಿಮ್ಮ ತಂದೆ ಇದ್ದರೆ, ಅವರು ಹೀಗೆ ಮೊಮ್ಮಕ್ಕಳನ್ನು ಪ್ರೀತಿಸುತ್ತಿದ್ದಿಲ್ಲವೇ? ನಿಮಗಂತೂ ಯಾರನ್ನೂ ಹಚ್ಚಿಕೊಳ್ಳುವುದು ಬೇಡ. ಮಿಲಿಟರಿ ಅಂದರೆ ಶುದ್ಧ ಮಿಲಿಟರಿ ಆಗಿರುವಿರಿ. ಹೃದಯವೆಂಬುದೇ ಇಲ್ಲ. ದಯೆ, ಮಾಯೆ ಇಲ್ಲವೇ ಇಲ್ಲ..

ಮಿಲಿಟರಿ ವೀರನಾದ, ಮೇಜರ ನಿರಂಜನನ ಎದುರಿಗೆ ಇಷ್ಟು ಧೈರ್ಯವಾಗಿ ಮಾತನಾಡಲು ರಂಜನಾ ಇತ್ತಿತ್ತಲಾಗಿ ಹೆದರುತ್ತಿರಲಿಲ್ಲ. ಹೊರಗಿನ ಯುದ್ಧಗಳಲ್ಲಿ ಜಯವನ್ನು ಸಂಪಾದಿಸಬಲ್ಲ ನಿರಂಜನ, ಹೆಂಡತಿಯ ಜೊತೆಯ ಯುದ್ಧದಲ್ಲಿ ಗೆಲ್ಲಲಾರನೆಂದು ಅವಳಿಗೆ ಅನಿಸಿತ್ತೋ ಏನೋ! ನಿರಂಜನ ಹೊರಳಿ ರಂಜನಾಳ ಕಡೆಗೆ ನೋಡಿದ. ಅವಳು ತನ್ನ ವಾದದಲ್ಲಿಯೇ ತಲ್ಲೀನಳಾಗಿದ್ದಳು.

ನಿರಂಜನ ಚಟಕ್ಕನೇ ಎದ್ದು, ಟೇಬಲ್ ಮೇಲಿರುವ ಸಿಗರೇಟ ಪ್ಯಾಕ ತೆರೆದ. ಒಂದು ಸಿಗರೇಟನ್ನು ಬಾಯಲ್ಲಿ ಹಿಡಿದು, ಕಡ್ಡೀಪೆಟ್ಟಿಗೆಯ ಕಡ್ಡಿಗಳನ್ನು ಬಾರಿಸಿದ.

ರಂಜನಾ ನಿರ್ವಾಹವಿಲ್ಲದೆ ಎದ್ದುಬಂದ, ಕಡ್ಡಿಯನ್ನು ಕೊರೆದು ಸಿಗರೇಟ ಹಿಡಿದಳು. “ದಾಟ್ಸ್ ರಾಯಿಟ್, ಈಗ ಸರಿಹೋಯಿತು. ರಂಜನಾ, ಸಿಗರೇಟು ಸೇದುವದು ಮಹತ್ವವಲ್ಲ. ನೀನು ಅದನ್ನು ಹೊತ್ತಿಸುವದು ಮಹತ್ವದ್ದು. ನಾನು ಸಿಗರೇಟ! ನೀನು ಮದ್ದಿನ ಕಡ್ಡಿ! ಮದ್ದು ಎಂದರೆ ಮ ಮಾ ಮಿ ಮೀ ಮು………… ಅಲ್ಲವೇ? ನಿನ್ನಿಂದಲೇ ಈ ಪ್ರೇಮದ ದೀಪ………!” ಹೀಗೆನ್ನುತ್ತ ನಿರಂಜನ ಅವಳ ಮೇಲೆ ಉಫ್ ಉಫ್, ಎಂದು ಸಿಗರೇಟಿನ ಹೊಗೆ ಬಿಟ್ಟನು.

ರಂಜನಾ ಮುಖ ಹೊರಳಿಸಿ, ತನ್ನ ಪಲ್ಲಂಗದಲ್ಲಿ ಹೋಗಿ ಕುಳಿತಳು. “ಹೀಗೀಕೆ ರಂಜನಾ ?” ಸೀರವಾಗಿ ನಿರಂಜನ ಅವಳಿಗೆ ಪ್ರಶ್ನೆ ಕೇಳಿದ. ಅವಳು ಬೇಗ ಉತ್ತರ ಕೊಡದಿರಲು, ತಾನೇ ಮಾತನಾಡಿದ. “ಮತ್ತೆ ಆ ಅಜ್ಜನನ್ನು ನೋಡಿದ ಕೂಡಲೇ ನಿನಗೆ ತಂದೆಯೆ ನೆನಪು ಆಗಿರಲಿಕ್ಕೇಬೇಕು! ಅಲ್ಲವೇ?

“ಹೂಂ” ಎಂದು ದನಿ ಎಳೆದಳು ರಂಜನಾ.

“ನಿನ್ನ ತಂದೆ ಬದುಕಿದ್ದರೆ”….. ಅವನೂ ಹೀಗೆ ಗಡ್ಡ ಬಿಟ್ಟು ಓಡಾಡುತ್ತಿದ್ದ ಅಲ್ಲವೇ?”

“ಹೂಂ” ಎಂದು ರಂಜನಾ ಮತ್ತೆ ಧ್ವನಿ ಎಳೆದಳು.

“ಛೀ ಹುಚ್ಚಿ ಸತ್ತವರು ಸತ್ತುಹೋದರು. ಅವರನ್ನು ನೆನಿಸಿ, ನೀನು ಏನು ಮಾಡಬೇಕಾಗಿದೆ? ನಿನ್ನ ಹಾಗೆ ನಾನು ಮಾಡಿದರೆ, ನಾನು ನೌಕರಿಗೇ ರಾಜೀನಾಮೆ ಕೊಡಬೇಕು. ಹುಚ್ಚೀ !”

“ಇರಲಿ, ನಿಮಗೊಬ್ಬರಿಗೆ ತಂದೆಯ ನೆನಪು ಇರದಿದ್ದರೆ, ಅವರ ಬಗ್ಗೆ ಏನೂ ಚಿಂತೆ ಇರದಿದ್ದರೆ ಬಿಡಲಿ. ನನಗೇಕೆ ಅಡ್ಡಬರುವಿರಿ? ಹೆಂಗಸರ ಮನಸ್ಸೇ ನಿಮಗೆ ಅರ್ಥವಾಗುವದಿಲ್ಲ” ರಂಜನಾಳ ನಾಲಿಗೆ ಸ್ವಲ್ಪ ಹರಿತವಾಗಿತ್ತು.

“ಆಯಿತು. ಮತ್ತೆ ಮತ್ತೆ ಅದೇ ಮಾತು. ಹೆಂಗಸರ ಮನಸ್ಸೇ ವಿಚಿತ್ರ” ನಿರಂಜನ ಸಿಗರೇಟಿನ ಒಂದೆರಡು ಝರಿಕೆ ಎಳೆದನು.

ರಂಜನಾಳಿಗೆ ಸಿಗರೇಟಿನ ಹೊಗೆ ಕಾಣಿಸಿತೇ ಹೊರತು ದೀಪ ಕಾಣಿಸಲಿಲ್ಲ! ಒಂದು ನಿಮಿಷದಲ್ಲಿ ಚಕ್ಕನೆ ಸ್ವಿಚ್ಚನ್ನು ಒತ್ತಿ ದೀಪ ಆರಿಸಿದ! ಇವರ ಮಾತುಗಳಲ್ಲಿ ಬೇಬಿ ಯಾವಾಗಲೋ ನಿದ್ದೆ ಹೋಗಿದ್ದಿತು.

-೨-

ಬೆಳಗಿನ ಒಂಬತ್ತು ಗಂಟೆ! ಸೂರ್ಯ ಪ್ರಕಾಶ ಸ್ವಚ್ಛವಾಗಿ ಬಿದ್ದಿದೆ. ಹಸರು ಎಲೆಗಳ ಮೇಲೆ ಬಿಸಿಲು ಲಾಸ್ಯವಾಡುತ್ತಿದೆ. ನಿರಂಜನ ನಸುಕಿನಲ್ಲಿಯೇ ಎದ್ದು ತನ್ನ ಕೆಲಸಕ್ಕಾಗಿ ಹೋಗಿದ್ದಾನೆ. ಉದಯಕುಮಾರ ಮತ್ತು ಬೇಬಿ ಹೊರಗೆ ಆಟವಾಡಲು ಹೋಗಿದ್ದಾರೆ. ಮನೆಯಲ್ಲಿ ರಂಜನಾ ಒಬ್ಬಳೇ.

ಅಟ್ಟದ ಮೇಲೆ ಎತ್ತರನಾದ ನಿಲುಗನ್ನಡಿಯ ಎದುರಿಗೆ ನಿಂತಿದ್ದಾಳೆ, ಅವಳ ನೀಳವಾದ ಕರಿಕುರುಳು ಭುಜದ ಮೇಲೆ ಹರಡಿದೆ. ತನ್ನ ಕೂದಲನ್ನು ಬಾಚಿಕೊಳ್ಳಬೇಕೆಂದು ನಿಂತವಳು, ತನ್ನ ಚೆಲುವನ್ನು ನೆನಿಸಿ ಕೊಂಡು ತಾನೇ ನಾಚಿಕೊಂಡಳು. ನೀಟವಾಗಿ ಮಾಟವಾಗಿ ತಿದ್ದಿಮಾಡಿ ದಂತಿರುವ ಆ ಅಂಗಾಂಗಗಳು! ಅರಳಿದ ಗುಲಾಬಿಯಂತಿರುವ ಮುಖ! ಇವೆಲ್ಲಕ್ಕೂ ಹೆಚ್ಚಾಗಿ ಅ ಚಿಗರೆಗಣ್ಣಿನಂತಿರುವ ಆ ಕಣ್ಣುಗಳು! ಅಹುದು, ಏಳು ವರುಷಗಳ ಹಿಂದೆ ನಿರಂಜನನ ಹೃದಯವನ್ನು ಸೂರೆಮಾಡಿದುದು ಇದೇ ಚೆಲುವು. ರಂಜನಾ ಹೆಮ್ಮೆಪಟ್ಟುಕೊಂಡಳು.

ಹೊರಗೆ ತೋಟದಲ್ಲಿ ಕಿಲಕಿಲ ಧ್ವನಿಯು ಕೇಳಿಸಿತು! ರಂಜನಾ ತನ್ನ ಹಗಲುಗನಸಿನಿಂದ ಎಚ್ಚೆತ್ತಳು. ಪುನಃ ತನ್ನ ಕೂದಲು ಬಾಚಿಕೊಳ್ಳಹತ್ತಿದಳು. ತೋಟದಲ್ಲಿ ಮತ್ತೆ ಕಿಲ ಕಿಲ ಧ್ವನಿ! ರಂಜನಾಳ ಲಕ್ಷ ಅತ್ತಕಡೆಗೆ ಹೋಯಿತು. ಮಕ್ಕಳು ಇಷ್ಟು ಎಕೆ ನಗುತ್ತಿರುವರೆಂದು ನೋಡುವ ಕುತೂ ಹಲದಿಂದ ‘ಬಾಲ್ಕನಿಗೆ’ ಬಂದಳು.

ಕೆಳಗೆ ತೋಟದಲ್ಲಿ ಉದಯಕುಮಾರ ಒಂದು ಬಡಿಗೆ ಹಿಡಿದುಕೊಂಡು ಕಳ್ಳ ಹೆಜ್ಜೆಯಿಂದ ಗಿಡದಿಂದ ಗಿಡಕ್ಕೆ ಓಡಾಡುತ್ತಿದ್ದನು. ಅವನು ಏನೋ ಹುಡುಕುತ್ತಿದ್ದನು. ಬೇಬಿ ಕೈಗಾಡಿಯಲ್ಲಿ ಇದ್ದಳು. ಆಳುಮಗ ಟೊಂಕದ ಮೇಲೆ ಕೈಯಿಟ್ಟುಕೊಂಡು ನಿಂತು ಮೋಜು ನೋಡುತ್ತಿದ್ದನು. ಏನು ಮೋಜು ಇರಬೇಕೆಂದು ರಂಜನಾಳಿಗೆ ತಿಳಿಯಲಿಲ್ಲ ಆಳುಮಗನನ್ನು ಒದರಿ ಕೇಳಬೇಕೆಂದಳು. ಅಷ್ಟರಲ್ಲಿಯೆ ಅಡಗಿಕೊಂಡ ವ್ಯಕ್ತಿ ಗಿಡದ ಮರೆಯಿಂದ ಹೊರಬಿದ್ದಿತು. ಆ ವ್ಯಕ್ತಿ ನಿಲ್ದಾಣದಲ್ಲಿ ಕಂಡ ಆ ಮುದುಕ! ಉದಯ ಕುಮಾರನ ಹ್ಯಾಟನ್ನು ತಲೆಯಮೇಲೆ ಹಾಕಿಕೊಂಡು ಅಡಗಿಕೊಂಡಿದ್ದ ಅವನನ್ನು ನೋಡಿದ ಕೂಡಲೆ ತೋಟದಲ್ಲಿದ್ದವರೆಲ್ಲರೂ ನಕ್ಕರು.

ಆದರೆ ರಂಜನಾಳಿಗೆ ಅತ್ಯಂತ ಅಚ್ಚರಿ! ಅದೇ ಮನುಷ್ಯನು ಇಲ್ಲಿಗೆ ಹೇಗೆ ಬಂದನು? ಅವಳಿಗೆ ಬೇಗ ವಿಚಾರವೇ ಬಗೆಹರಿಯಲಿಲ್ಲ. ಮರು ಕ್ಷಣವೇ ಎಚ್ಚತ್ತು ದಡದಡನೆ ಕೆಳಗಿಳಿದು ಹೋದಳು. ಅಷ್ಟರಲ್ಲಿ ಮುದುಕನು ಬಗಲಲ್ಲಿ ಪೇಪರ ಇಟ್ಟುಕೊಂಡು ಹೊರಗೆ ಸಾಗಿದ್ದನು.

ಆಳುಮಗನಿಗೆ ಅವನನ್ನು ಕರೆಯಲು ಸನ್ನೆ ಮಾಡಿದಳು. ತೋಟದ ಮಧ್ಯದಲ್ಲಿ ನಿಂತು, ಆ ಮುದುಕ ತನ್ನ ಬಡಿಗೆಯನ್ನು ಎತ್ತಿ “ನಮಸ್ತೆ” ಎಂದು ಹರ್ಷದಿಂದ ನುಡಿದ. ಆ ಮುದಿ ವಯಸ್ಸಿನಲ್ಲಿ ಆ ಧ್ವನಿಗೆ ಎಳೆತನವಿತ್ತು.

“ಬನ್ನಿರಿ ಒಳಗೆ” ರಂಜನಾ ಸೌಮ್ಯವಾಗಿ ನುಡಿದಳು. “ಏನು ಕೆಲಸ? ಏಕೆ” ಎಂದು ಆ ಮುದುಕ ಕೇಳಿದ.

ಏನು ಕೆಲಸವೆಂದರೆ ಉತ್ತರವೇನು ಕೊಡಬೇಕು ರಂಜನಾ ಹಳೆಯ ಸಂದರ್ಭವನ್ನು ಹೊಂದಿಸಿಕೊಂಡು ಹೇಳಿದಳು “ನಿಮಗೆ ಆ ಎಂಟಾಣೆ…”

“ಓಹೋಹೋ! ಅದೇ ಹದಿನೈದು ದಿನವಾಗಿ ಹೋಯಿತು. ಅದು ಬೇಬಿಗೆ ಮುಟ್ಟಿದ್ದರ ಪಾವತಿ ಸಿಕ್ಕಿತು. ಬೇಬಿ ಆ ಪಾವತಿ ತೋರಿಸು ಇನ್ನೊಮ್ಮೆ ಸಹಿ ಮಾಡುತ್ತೇನೆ” ಹೀಗೆಂದವನೇ ಆ ಬೇಬಿಯ ಗಲ್ಲಗಳಿಗೆ ಮುದ್ದುಕೊಟ್ಟನು.

ಆ ಮುದುಕನ ಮಾತುಗಳಲ್ಲಿ ಮನೆಯವರಂತೆ ಸಲಿಗೆ ಇದ್ದಿತು. ಹೃದಯ ಕರಗಿತು. ಆದರೂ ತನ್ನ ಕರ್ತವ್ಯವನ್ನು ಪಾಲಿಸಬೇಕೆಂದು ಹೇಳಿದಳು. ಇದೇನೋ ನಿಮ್ಮ ಸೌಜನ್ಯ. ಪಾಪ ನೀವು ಬಡವರು ನಿಮ್ಮ ಹಣ ನಾವು ಕೊಡಲೇಬೇಕು.

ಈ ಮಾತು ಕೇಳಿ ಮುದುಕ ಗಂಭೀರನಾದನು, “ಅಮ್ಮ ನಾನು ಏಕೆ ಬಡವ? ನನ್ನ ಕಾಲಮೇಲೆ ನಿಲ್ಲಲು ಕಲಿತಿದ್ದೇನೆ. ಮೇಲಾಗಿ ಹಣ ನಮಗೆ ಏನು ಕೊಟ್ಟೀತು? ಪ್ರೀತಿಯ ಸಂಗ್ರಹದಿಂದ ಶ್ರೀಮಂತನಾದಷ್ಟು ಹಣದಿಂದ ಏನು ಆಗಬಹುದು ? ಈಗಿನ ಜಗತ್ತು ಹಣದ ಮೇಲೆಯೇ ನಿಂತಿದೆ.

ಆ ಮುದುಕ ಇನ್ನೂ ಏನೇನೋ ಮಾತಾಡುತ್ತಿದ್ದನೊ? ಅಷ್ಟರಲ್ಲಿ “ಅಜ್ಜಾ ನಾಳೆಯೂ ಬರತೀಯಾ?” ಎಂದು ಕೇಳಿದನು.

ಮುದುಕನ ಮುಖದಲ್ಲಿ ತೀವ್ರವೇ ಬದಲಾವಣೆ ಕೂಡಿತು. ಮುಗುಳು ನಗೆಯಿಂದ ಹೇಳಿದ “ಒಹೋಹೋ ಮಗು!”

“ಅವ್ವ ಅಜ್ಜನಿಗೆ ಹಾಲು, ಬ್ರೆಡ್, ಬಿಸ್ಕೀಟ ಕೊಡತೀಯಾ?” ಮುದುಕನ ವಾತ್ಸಲ್ಯಪೂರಿತ ನಗೆ! ಉದಯಕುಮಾರನ ಪ್ರೀತಿಯ ಮಾತು! ಇವುಗಳ ಮಧ್ಯದಲ್ಲಿ ರಂಜನಾ.

ರಂಜನಾ ತನ್ನ ತಂದೆಯಂತೆಯೇ ಅವನನ್ನು ಬರಮಾಡಿಕೊಂಡಳು ಸಲಿಗೆಯಿಂದ ಏಕವಚನದಲ್ಲಿಯೇ ಮಾತನಾಡತೊಡಗಿದಳು. ಪ್ರತಿದಿನ ಬೆಳಗಿನಲ್ಲಿ ಸುಮಾರು ೯ ಗಂಟೆಗೆ ಪೇಪರು ಕೊಡಲು ಬರುತ್ತಿದ್ದನು. ಒಂದು ನಿಮಿಷವಾದರೂ ನಿಂತು ಮಕ್ಕಳನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ ಬಾಗಿಲಲ್ಲಿ ನಿಂತ ರಂಜನಾಳನ್ನು “ಅಮ್ಮಾ ಹೇಗೆ ಇರುವಿ?” ಎಂದು ಕೇಳದೆ ಇರುತ್ತಿರಲಿಲ್ಲ. ಅದೇನೋ ಒಂದು ರೀತಿಯ ಸಲಿಗೆ ಬೆಳೆಯಹತ್ತಿತು.

ಒಂದು ದಿನ ರಂಜನಾ ಬಾಗಿಲಲ್ಲಿ ಕಾಣಿಸಲಿಲ್ಲ. ಉದಯಕುಮಾರನನ್ನು ಪ್ರಶ್ನಿಸಿದಾಗ “ಅಲ್ಲೇ-ಒಳಗೆ ಎಂದು ಬೊಟ್ಟುಮಾಡಿ ತೋರಿಸಿದ ಮುದುಕನ ಪೇಪರ ಹಂಚುವ ಕೆಲಸ ಮುಗಿದಿತ್ತು. ಆದುದರಿಂದ ಸ್ವಲ್ಪ ಒಳಗೆ ಕುಳಿತುಕೊಂಡು ಹೋಗಬೇಕೆಂದು ಕೋಲು ಸಪ್ಪಳಮಾಡುತ್ತ ಬಂದನು.

ಪಡಸಾಲೆಯಲ್ಲಿ ರಂಜನಾ ಕಾಣಿಸಲಿಲ್ಲ. ಉದಯಕುಮಾರ ಅತ್ತ ಇತ್ತ ನೋಡುವಷ್ಟರಲ್ಲಿ ಪಡಸಾಲೆಗೆ ಹೊಂದಿ ಇರುವ ಕೋಣೆಯಲ್ಲಿ ರಂಜನಾ ಕಂಡಳು. ಕೋಣೆಯ ಸಮೀಪ ಹೋದ. ರಂಜನಾ ವಿರಾಮ ಕುರ್ಚಿಯಲ್ಲಿ ಒರಗಿದ್ದಳು. ಏನೋ ಚಿಂತೆಯಲ್ಲಿದ್ದಳು. ಮುದುಕ ಬಂದುದೂ ಅವಳಿಗೆ ಗೊತ್ತಾಗಲಿಲ್ಲ. “ಅಮ್ಮ ಹೇಗೆ ಇರುವಿ?” ಎಂದು ಕೇಳಿದಾಗಲೇ ಎಚ್ಚರ.

“ಎಲ್ಲಾ ನೆಟ್ಟಗೆ” ಎಂದು ರಂಜನಾ ಸೀರೆಯ ಸೆರೆಗಿನಿಂದ ಕಣ್ಣೊರಿಸಿಕೊಂಡಳು.

“ಅಮ್ಮಾ, ಏನೋ ನೆಟ್ಟಗಿಲ್ಲವೆಂದು ಕಾಣುತ್ತದೆ. ಏನಾಗಿದೆ ಹೇಳು?”

“ಅಜ್ಜ ಇಲ್ಲ, ಎಲ್ಲವೂ ಚೆನ್ನಾಗಿದೆ.”

“ಹಾಗಾದರೆ ಬೆಳಗಿನಲ್ಲಿ ಹೀಗೇಕೆ ಕೂಡುತ್ತಿದ್ದಿ? ಏನೋ ಆಗಿದೆ ಹೇಳಮ್ಮಾ, ನಾನು ನಿನ್ನ ತಂದೆ ಎಂದು ತಿಳಿದುಕೋ ಹೇಳು”

ಅಜ್ಜನ ಮಾತು ಕೇಳಿ ರಂಜನಾಳಿಗೆ ಮರುಭೂಮಿಯಲ್ಲಿ ನೀರು ದೊರೆತಂತೆ ಆದವು. ಅವಳ ಮನಸ್ಸನ್ನು ತಿಳಿದುಕೊಂಡು ಮಾತನಾಡುವವರು ಅವಳಿಗೆ ಬೇಕಿತ್ತು. ನಿರಂಜನನ ಸ್ವಭಾವವಾದರೋ ಒರಟು, ರಂಜನಾಳ ಜೊತೆಗೆ ಪ್ರೀತಿಯಿಂದ ಮಾತನಾಡಿದರೆ ಆಡುತ್ತಿದ್ದ. ಇಲ್ಲವಾದರೆ ಭಯಂಕರವಾಗಿ ಜಗಳಾಡುತ್ತಿದ್ದ.

ಮುನ್ನಾದಿನ ನಿರಂಜನನಿಗೂ ರಂಜನಾಳಿಗೂ ಒಂದು ವಿಷಯದ ಬಗ್ಗೆ ವಿರಸವುಂಟಾಗಿತ್ತು, ಅದು ಈ ಮುದಕನ ಬಗ್ಗೆ. ನಿರಂಜನ ಮುಂಜಾವಿನಲ್ಲಿ ಮನೆಯಲ್ಲಿ ಇರುತ್ತಿರಲೇ ಇಲ್ಲ. ಪತ್ರಿಕೆ ಮಾರುತ್ತ ಬಂದ ಈ ಮುದಕನ ಬಗ್ಗೆ ಅವನಿಗೆ ಏನೂ ಗೊತ್ತಿರುತ್ತಲೇ ಇರಲಿಲ್ಲ. ರಂಜನಾ ಬಹಳ ಕುತೂಹಲದಿಂದ ಈ ಮುದುಕ ತನ್ನ ಮಕ್ಕಳೊಂದಿಗೆ ಆಟವಾಡುವದನ್ನು ಬಣ್ಣಿಸಿ ಹೇಳುತ್ತಿದ್ದಳು. ಬಿಸ್ಕೀಟ, ಹಾಲು ಉದಯ ಕುಮಾರನೇ ತೋಟದಲ್ಲಿ ತಂದುಕೊಟ್ಟುದನ್ನು ಬಣ್ಣಿಸುತ್ತಿದ್ದಳು. ಅವಳು ಮಾತುಗಳ ಭರದಲ್ಲಿ ಇರುವಾಗ ನಿರಂಜನ ಸರಕ್ಕನೆ ಉತ್ತರ ಕೊಟ್ಟಿದ್ದ-ಅವನನ್ನು ಇನ್ನು ಮನೆಯಲ್ಲಿಯೇ ಇಟ್ಟುಕೊಂಡು ಬಿಡು, ಹೇಗೂ ನೀನು ತಂದೆಯನ್ನು ಬಹಳ ನೆನಿಸುತ್ತೀ” ಈ ಮಾತಿನಲ್ಲಿ ತುಚ್ಛತೆ ಇತ್ತು ಎಂದು ರಂಜನಾಳಿಗೆ ಅನಿಸಿತು. ಇಬ್ಬರ ಮಾತುಗಳ ಕಿಡಿ ಹಾರುತ್ತಿರುನಾಗ ಸಿಟ್ಟಿನಿಂದ ದೀಪವನ್ನು ನಿರಂಜನ ಆರಿಸಿಬಿಟ್ಟಿದ್ದ.

ಹೀಗೆ ಮೇಲಿಂದ ಮೇಲೆ ಆಗುತ್ತಿರುವದು ರಂಜನಾಳಿಗೆ ಸರಿಬರಲಿಲ್ಲ. ಅವಳು ನಡೆದು ಹೋದ ಸಂಗತಿ ಸ್ಪಷ್ಟವಾಗಿ ಹೇಳದಿದ್ದರೂ ತನ್ನ ದುಃಖವನ್ನೆಲ್ಲ ಆ ಮುದುಕನ ಮುಂದೆ ತೋಡಿಕೊಂಡಳು. “ನನ್ನ ತಂದೆ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದರೆಂಬುದು” ಇವರಿಗೆ ಗೊತ್ತಿಲ್ಲ. ನಾನು ಹುಟ್ಟಿದ ಕೂಡಲೆ, ನನ್ನ ತಾಯಿ ಸತ್ತುಹೋದಳು. ನನಗೆ ಮೂವರು ಅಕ್ಕಂದಿರು. ಅವರು ಯಾರೂ ಲಗ್ನವಾಗಿ ಸುಖ ಕಾಣಲಿಲ್ಲ. ಎಲ್ಲರೂ ಪ್ರೇಮವಿವಾಹವನ್ನು ಮಾಡಿಕೊಂಡರು. ಅಕ್ಕಂದಿರು ಲಗ್ನವಾದ ಎರಡು-ಮೂರು ವರ್ಷಗಳಲ್ಲಿಯೇ ಮಕ್ಕಳನ್ನು ಕಾಣದೆ ತೀರಿಕೊಂಡರು. ನನ್ನ ಇನ್ನೊಬ್ಬ ಅಕ್ಕ ಉತ್ತರ ಹಿಂದುಸ್ಥಾನದಲ್ಲಿ ಎಲ್ಲಿಯೋ ಇದ್ದಾಳೆ. ಅವಳ ಗಂಡ ನನ್ನ ತಂದೆಯ ಸಂಗಡ ಜಗಳಾಡಿದ್ದರಿಂದ, ನಮಗೂ ಅವರಿಗೂ ಏನೂ ಸಂಬಂಧವಿರದಂತೆ ಆಗಿ ಹೋಗಿದೆ. ನನ್ನ ತಂದೆ ನನ್ನ ಸಲುವಾಗಿ ಬಹಳ ಕಾಳಜಿ ಮಾಡುತ್ತಿದ್ದ. ನನ್ನನ್ನು ಬಿಟ್ಟು ಒಂದುಕ್ಷಣವೂ ಇರುತ್ತಿರಲಿಲ್ಲ. ತನ್ನ ಸಂಸಾರದ ಗೋಳಿನಿಂದ ಬಹಳವಾಗಿ ನೊಂದುಕೊಂಡು ಸೊರಗಿದ. ನಿನ್ನ ಹಾಗೆ ಒಂದು ಬೆತ್ತದ ಕೋಲು ಕೈಯಲ್ಲಿ ಹಿಡಿದುಕೊಂಡು ೪೫ ವರ್ಷದವನಿರುವಾಗಲೇ ಓಡಾಡತೊಡಗಿದೆ, ನನ್ನ ಮುಂದೆ ಮೇಲಿಂದ ಮೇಲೆ ಹೇಳುತ್ತಿದ್ಧ- “ನೋಡು ರಂಜನಾ ನಿನ್ನ ಲಗ್ನವಾಯಿತೆಂದರೆ ನಿನ್ನ ಮನೆಯಲ್ಲಿಯೇ ನಾನು ಇದ್ದುಬಿಡುತ್ತೇನೆ. ನಿನಗೆ ಅಂಥ ವರನು ಸೀಗಬೇಕು. ನಾನು ಸಾಯುವವರೆಗೂ ನೀನೆ ಆನುಗೋಲು “ಎಂದು, ಅದೆಂಥ ನನ್ನ ದುರ್ದೈವವೋ ನಾನು ಹೇಳಲಾರೆ. ನನ್ನ ಲಗ್ನ ನಿಶ್ಚಯವಾಗಬೇಕಾದ ದಿನವೇ ಅವನು ಕಣ್ಣು ಮುಚ್ಚಿದ. ಮನೆ ಶೂನ್ಯವಾಯಿತು, ಮನೆ ಶೂನ್ಯವಾಯಿತು…………! ನನ್ನನ್ನು ಎತ್ತಿಹಿಡಿದವರು ಇವರೇ ಇಲ್ಲವಾದರೆ ನಾನೆಲ್ಲಿಯೋ ಅನಾಥೆಯಾಗಿ ಬಿಡುತ್ತಿದ್ದೆ. ನನ್ನ ತಂದೆ ನನಗೆ ಆನುಗೋಲು ಎನ್ನುತ್ತಿದ್ದನೆಂದು ಇವರ ಕಡೆಗೆ ಲಗ್ನವಾಗುವದಕ್ಕಿಂತ ಮುಂಚೆ ನನ್ನ ತಂದೆಯ ಬೆತ್ತದ ಬಡಿಗೆ ಯನ್ನು ಕೊಟ್ಟೆ. ನನ್ನ ತಂದೆಯ ನೆನಪಿಗಾಗಿ ನಾನು ಕೊಟ್ಟೆ. ಇನ್ನು ಮುಂದೆ ನೀವೇ ನನಗೆ ಆನುಗೋಲು ಎಂದು ಹೇಳಿದೆ. ಅಹುದು ಅವರು ಹಾಗೆಯೇ ಇದ್ದರು. ಇನ್ನೂ ಇದ್ದಾರೆ. ಆದರೆ ಇದೊಂದು ವಿಷಯದಲ್ಲಿ ನನ್ನನ್ನು ತುಚ್ಛಮಾಡುತ್ತಾರೆ, ನಾನು ಯಾವುದಕ್ಕೆ ಮಹತ್ವ ಕೊಡುತ್ತೇನೊ ಅದನ್ನು ಕ್ಷುಲ್ಲಕವೆಂದು ತಿಳಿದುಕೊಳ್ಳುತ್ತಾರೆ. ಏನು ಮಾಡಬೇಕು? ಆ ನನ್ಮ ತಂದೆಯ ನೆನಪಿಗಾಗಿ ಎಂದು ಕೊಟ್ಟ ಬೆತ್ತದ ಬಡಿಗೆಯ ಸುಳಿವನ್ನು ಸಹ ಹಚ್ಚಿಗೊಟ್ಟಿಲ್ಲ. ನನ್ನ ತಂದೆಯ ಮಾತನ್ನೂ ಇವರ ಮುಂದೆ ಆಡಬಾರದು……”

ರಂಜನಾಳ ಕಣ್ಣುಗಳು ತೋಯ್ದವು. “ಅಜ್ಜಾ, ನೀನು ಕೇಳದೆಯೇ ಎಲ್ಲವನ್ನೂ ಹೇಳಿದೆ. ನನಗೆ ಈ ವರೆಗೂ ಯಾರೂ ಹೀಗೆ ಕ್ಷೇಮ ಸಮಾಚಾರ ಕೇಳಿಲ್ಲ. ಇವರ ಸಲುವಾಗಿ ನಾನು ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಇವರು ನನ್ನ ಲಗ್ನವಾದ ವರ್ಷವೇ ಯುದ್ಧಕ್ಕೆಂದು ಹೋಗಿಬಿಟ್ಟರು.

“ಏನಂದಿ?” ಮುದುಕ ಆಶ್ವರ್ಯದಿಂದ ಕೇಳಿದ.

“ಅಹುದು ನಾವು ಪ್ರೀತಿಯಿಂದ ಕಾಲಕಳೆಯುವ ವರ್ಷವೇ ನನ್ನಿಂದ ಹೊರಬಿದ್ದರು. ನನ್ನನ್ನು ಮುಂಬೈಯಲ್ಲಿಯ ಒಂದು ಹಾಸ್ಟಿಲದಲ್ಲಿ ಇಟ್ಟು ಹೋಗಿಬಿಟ್ಟರು. ನನ್ನಂತೆಯೇ ಇವರಿಗೂ ತಂದೆ ಇಲ್ಲ. ತಾಯಿ ಇಲ್ಲ. ಮನೆಯಲ್ಲಿ ಏನಾದರೂ ಬೇನೆ ಬಂದರೆ ಕೇಳುವವರಿಲ್ಲ. ಹೇಗೋ ಕೋಣೆಯಲ್ಲಿದ್ದು, ಕಾಲಹರಣ ಮಾಡಿದೆ. ಇವರು ಕಿಂಗ್ಸ ಕಮೀಷನ್ ಸೇರಿಕೊಂಡು ಆಫ್ರಿಕೆಯ ಉತ್ತರ ಭಾಗಕ್ಕೆ ಹೋಗಿದ್ದರಂತೆ. ಅಲ್ಲಿ ಯುದ್ಧದ ಮುಂಭಾಗದಲ್ಲಿಯೇ ಹೋಗಿದ್ದರಂತೆ. ಒಂದು “ಟಾಂಕಿ”ನಲ್ಲಿ ಕುಳಿತು ಯುದ್ಧ ಭೂಮಿಯ ಮೇಲೆ ಓಡಾಡುವಾಗ, ಬಾಂಬಿನ ಹಲವು ಕಿಡಿಗಳು ಹಾರಿಬಂದು ಇವರ ಮುಖವನ್ನು ಸುಟ್ಟುಬಿಟ್ಟವಂತೆ. ಆ ಸುದ್ದಿ ಗೊತ್ತಾದಾಗ, ನನಗೆ ಹೇಗೆ ಆಗಿರಬೇಕು ನೀನೆ ನೋಡು. ವಿಲಿ ವಿಲಿ ಒದ್ದಾಡಿದೆ. ಸರಕಾರದವರು ಇವರನ್ನು ತಿರುಗಿಕಳಿಸಿಕೊಟ್ಟರು. ಮೈಮೇಲೆ ಅಲ್ಲಲ್ಲಿ ಗಾಯಗಳಾಗಿದ್ದವು. ಒಂದು ಕಪಾಳ ಸುಟ್ಟು ಹೋಗಿತ್ತು, ಆಗ ವಿದ್ರೂಪನಾದ ಮುಖ ಇನ್ನೂ ಹಾಗೆಯೇ ಇದೆ. ಸತಿ ಪತಿಯನ್ನು ಹಿಂಬಾಲಿಸಬೇಕು. ನಾನು ಏನೇ ಆದರೂ ಅವರ ಮೇಲಿನ ಮೋಹವನ್ನು ಕಡಿಮೆಮಾಡಲಿಲ್ಲ. ಹೀಗಿದ್ದೂ ಒಂದು ವಿಷಯದ ಬಗ್ಗೆ ನನ್ನನ್ನು ತುಚ್ಛಮಾಡುವದು ಬಿಡುವುದಿಲ್ಲ.”

“ನಿನ್ನ ಇವರು ಯುದ್ಧಕ್ಕೆ ಹೋಗಿದ್ದರೆ? ಎಷ್ಟು ವರುಷ ಹೋಗಿದ್ದರು?” ಮುದುಕ ಬಹಳ ಕುತೂಹಲದಿಂದ ಕೇಳಿದ.

ರಂಜನಾಳ ಕೊನೆಯ ವಾಕ್ಯಕ್ಕೂ ಈ ಪ್ರಶ್ನೆಗೂ ಸಂಬಂಧವಿರಲಿಲ್ಲ. ಆದರೂ ರಂಜನಾ ಹೇಳಿದಳು. “ಅಹುದು ಒಂದುವರೆ ವರ್ಷ ಹೋಗಿದ್ದರು?”

“ಇವರ ತಂದೆತಾಯಿ ಯಾರೂ ಇಲ್ಲವೆ?”

“ಇಲ್ಲ…!”

ಮುದುಕ ನಿಟ್ಟಿಸುರು ಬಿಟ್ಟು ಎದ್ದು ನಿಂತ! ಹೊರಡಲು ಅನುವಾದ “ಕೂತುಕೊ, ಏಕೆ ಬೇಗ ಎದ್ದಿ? ನನ್ನ ನಾಲಿಗೆ ಸುಮ್ಮನೆ ಕೂಡಲಿಲ್ಲ. ನಿಮಗೆ ತ್ರಾಸವಾಯಿತೋ ಏನೋ?”

“ಅಮ್ಮ ಏನೂ ಇಲ್ಲ. ಇವತ್ತು ಬೆಳಕಿನಿಂದ ತಲೆಶೂಲೆ ಇತ್ತು ಈಗ ಮತ್ತೆ ಹೆಚ್ಚಾಗುತ್ತಿದೆ. ಅದಕ್ಕೆ ಬೇಗ ಎದ್ದೆ ಅಷ್ಟೆ.”

“ಏನಾದರೂ ಮಾಡಿಸಿಕೊಡಲೆ?”

“ಏನೂ ಬೇಡ ಬರತೇನೆ.”

“ಟಾಂಗಾ ಟ್ಯಾಕ್ಸಿಮಾಡಿಸಿಕೊಡಲೇ?” ರಂಜನಾ ಪ್ರಶ್ನೆ ಕೇಳು ಕೇಳುತ್ತಲೆ ಆ ಮುದುಕ ತನ್ನ ಬಡಿಗೆಯನ್ನು ಹಿಡಿದುಕೊಂಡು ಹೊರಟು ಬಿಟ್ಟಿದ್ದ.

ರಂಜನಾ ಮುದುಕನ ಮುಂದೆ ಎಲ್ಲ ಮಾತುಗಳನ್ನು ಹೇಳುವಂತೆ ಹೇಳಿದಳು. ಮಳೆ ಬೀಳುವಾಗ ಮೋಡ ತಡೆಯಬಲ್ಲದೇ? ಅವಳ ಸ್ಥಿತಿಯೂ ಆ ಮೋಡದಂತೆ ಆಗಿತ್ತು. ತರುವಾಯ ತಾನು ಆ ಅಜ್ಜನಿಗೆ ತ್ರಾಸುಕೊಟ್ಟೆನಲ್ಲಾ ಎಂದೆನಿಸತೊಡಗಿತು. ಮರುದಿನ ಬಂದಾಗ ತನ್ನ ಕ್ಷಮಾಪಣೆ ಕೇಳಬೇಕೆಂದು ಮಾಡಿದಳು. ಮರುದಿನ ಅವನು ಬರಲಿಲ್ಲ. ನಿರಂಜನ ಕೇಳಿದ “ಪೇಪರಿನ ಬಿಲ್ಲು ಕೊಡಬೇಕಾಗಿದೆ. ಒಂದು ತಿಂಗಳಾಯಿತು. ಆ ಅಜ್ಜ ಬಂದನೆಂದರೆ ಈ ರೂಪಾಯಿ ಕೊಟ್ಟುಬಿಡು. ಬರುತ್ತಾನಲ್ಲವೇ” ಎಂದ.

ಐದಾರು ದಿನವಾದರೂ ಅಜ್ಜನ ಸುಳಿವು ಇರಲಿಲ್ಲ. ಉದಯ ಕುಮಾರ ಬೆಳಗಿನ ಜಾವದಲ್ಲಿ ಆಟವಾಡುವಾಗ, ಮತ್ತೊಬ್ಬ ಪೇಪರಿನವ ಬಂದನು. ಅವನಿಗೆ ಉದಯಕುಮಾರ ಕೇಳಿದ “ಅಜ್ಜ ಎಂದು ಬರುತ್ತಾನೆ?” ಇವನ ಮಾತು ಕೇಳಿ ಆ ಹುಡುಗ ನಗುತ್ತ ಹೋದನು.

ಆಳುಮಗ ಭವಾನಿ ಹೇಳಿದ “ನೋಡಿರಿ ಅವ್ವಾ ಅಜ್ಜನನ್ನು ಹೇಗೆ ನೆನೆಸುತ್ತಾನೆ, ರಾಜಕುಮಾರ! ಅಜ್ಜನಿಗೆ ಏನು ಮಂತ್ರಶಕ್ತಿ ಅದೆನೋ ಏನೋ! ಎಲ್ಲಾ ಹುಡುಗರು ಅವನನ್ನು ಕಂಡಕೂಡಲೇ ಆನಂದದಿಂದ ಕುಣಿಯುತ್ತಾರೆ!”

“ಎಲ್ಲ ಹುಡುಗರನ್ನು ಹೀಗೇ ಆಟವಾಡಿಸುತ್ತಾನೆಯೇ?” ರಂಜನಾ ಆಶ್ಚರ್ಯದಿಂದ ಕೇಳಿದಳು.

“ಅಹುದು! ಅವನೊಬ್ಬ ಹುಚ್ಚ ನೋಡಿರಿ”

“ಅಂದರೆ ನಿನಗೆ ಇವನ ಬಗ್ಗೆ ಗೊತ್ತಿರುವುದೇನು?”

ಒಹೋ? ಊರೊಳಗ ನಮ್ಮ ಅಣ್ಣನ ಮನೆ ಹತ್ತಿರಾನೇ ಈ ಅಜ್ಜ ಇರತಾನೆ. ಇರತಾನೆ ಅಂದರೇನು ಮತ್ತೊಬ್ಬರ ಮನೆಯಲ್ಲಿ ಇರುತ್ತಾನೆ! “ಇವನಿಗೆ ಮನೆಯೇ ಇಲ್ಲವೇನು? ಇವನ ಮಕ್ಕಳು…….?”

“ಯಾರೂ ಇಲ್ಲ ಬಾಯರೆ. ಯಾವದೇಶದಿಂದಲೋ ಓಡಿ ಬಂದಿದ್ದ. ಅದೇನೋ ಆಗ ಉತ್ತರದಲ್ಲಿ ದೊಡ್ಡದಂಗೆ ಆಯಿತಂತೆ ಆಗ ಇಲ್ಲಿಗೆ ಬಂದು ಹುಚ್ಚನಂತೆ ಬೀದಿ ಬೀದಿ ಓಡಾಡುತ್ತಿದ್ದ.

ಈ ಊರೊಳಗೆ ದೊಡ್ಡ ವ್ಯಾಪಾರಸ್ತರು ಇದ್ದಾರ ನೋಡ್ರಿ; ಅವರೇ ಈ ಅಜ್ಜನಿಗೆ ಉದ್ಯೋಗ ಹಚ್ಚಿಸಿದರು. ಭವಾನಿ ಸ್ವಲ್ಪು ಸುಮ್ಮನಿದ್ದ. ಆ ಮೇಲೆ ಹೇಳಿದ “ಬಾಯರ, ಈ ಅಜ್ಜ ಮೊದಲಿಗೆ ದೊಡ್ಡ ಘರಾಣೇದವರಂತರಿ. ಊರೊಳಗ ಕೆಲ ಜನರು ಹೇಳಿದರು. ಆ ವ್ಯಾಪಾರಸ್ಥ ಇವರಿಗೆ ಕೆಲಸ ಕೊಟ್ಟಾಗ, ಈ ಅಜ್ಜನ ಹತ್ತಿರ ಐನೂರು ರೂಪಾಯಿ ಇದ್ದವು ಅಂತರಿ”

“ಹಾ!” ರಂಜನಾ ಚಕಿತಳಾಗಿ ಉಸಿರೆಳೆದಳು. “ಅವು ಎಲ್ಲಿ ಹೋದವಂತೆ?”

“ಆಟ ಆಡುವ ಹುಡುಗರಿಗೆ ರೊಕ್ಕ ಕೊಡುತ್ತಿದ್ದನಂತೆ! ಅದನ್ನು ನೋಡಿ ಆ ವ್ಯಾಪಾರಸ್ಥ ಮನೆಗೆ ಕರಕೊಂಡು ಬಂದು ಎಲ್ಲಾ ರೊಕ್ಕ ತಗೊಂಡು ಬಿಟ್ಟನಂತೆ!”

“ಹುಂ….! ಪಾಪ! ಭವಾನಿ, ದೈವ ಹೇಗೆ ಅಂತ ನೋಡು!”

“ಇಷ್ಟೇ ಅಲ್ರಿ, ಬಾಯರ..! ಈಗ ಅವನ ಮನಿಯೊಳಗೆ ನಾಯಿ ಬಿದ್ದಂತೆ ಬೀಳಬೇಕಾಗಿದೆ. ಆ ವ್ಯಾಪಾರಸ್ಥ ಹೇಳಿದ ಎಲ್ಲ ಮಾತು ಕೇಳಬೇಕು. ನೋಡಿರಿ, ಅದಕ್ಕೆ ಇಷ್ಟು ಮುದುಕ ಆದರೂ ಮನೆ; ಮನೆ ತಿರುಗುತಾನೆ, ಒಮ್ಮೊಮ್ಮೆ ಹುಚ್ಚನಂತೆ ಹುಡುಗರ ಕೈಯೊಳಗೆ ರೊಕ್ಕ ಕೊಟ್ಟು ಬಂದಿದ್ದ ಅಂದರೆ, ಅವನ ಸಂಬಳದಲ್ಲಿ ವಜಾ ಆಗತದರಿ…” “ಹೌದೆ? ನಿಜವಾಗಿ? ಪಾಪ!” ಕೊನೆಯ ವಾಕ್ಯವು ರಂಜನಾಳಿಗೆ ಸಂಬಂಧಿಸಿ ಬಂದುದರಿಂದ ಅವಳಿಗೆ ಅತ್ಯಂತ ಕೆಡುಕೆನಿಸಿತು. ಒಮ್ಮೆಲೆ ಮನವು ಕುಗ್ಗಿತು. ಅ ವ್ಯಕ್ತಿಯ ಹಿಂದೆ ಇಷ್ಟು ಕತೆ ಇರುವದೆಂಬುದು ಅವಳಿಗೆ ಗೊತ್ತಿರಲಿಲ್ಲ. ಆದರೂ ಅವನು ಎಷ್ಟು ನಗುತ್ತ ಇರುವನಲ್ಲಾ? ಇದನ್ನು ನೆನೆದಾಗ ಅವಳ ಮೈ ಜುಮ್ಮೆಂದಿತು. ರಂಜನಾ ಭವಾನಿಗೆ ಹೇಳಿದಳು “ಯಾಕೋ ಐದಾರು ದಿನವಾಯಿತು ಇತ್ತಕಡೆಗೆ ಬಂದೇ ಇಲ್ಲಾ. ನಾಳೆ ಏನಾದರೂ ಅತ್ತಕಡೆ ಹೋದರೆ ಏಕೆ ಬಂದಿಲ್ಲ ಕೇಳಿಕೊಂಡ ಬಾ, ಆ?”

ಆ ಬಡವನಾದ ದುಃಖಮಯಿ ಅಜ್ಜನಿಗೆ ಏನಾದರೂ ನೆರವು ನೀಡಬೇಕೆಂದು ರಂಜನಾ ಮನಸ್ಸು ಮಾಡಿದಳು. ನಿರಂಜನನ ವಸೀಲಿಯಿಂದ ಹಗುರಾಗಿ ಇರುವ ಯಾವುದಾದರೂ ಕೆಲಸವನ್ನು ಕೊಡಿಸಬೇಕು; ಅವನು ವಿರಾಮದಿಂದ ಕಾಲಕಳೆಯುವಂತೆ ಮಾಡಬೇಕು; ಒಂದು ವೇಳೆ ನಿರಂಜನನ ಮನಸ್ಸಿನ ವಿರುದ್ಧವಾದರೂ ಇದನ್ನು ಮಾಡಿಸಬೇಕು; ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿಕೊಂಡಳು.

ರಾತ್ರಿ ಏಕಾಂತದಲ್ಲಿ ವಿಲಾಸ ಸಮಯದಲ್ಲಿ ರಂಜನಾ ನಿರಂಜನನನ್ನು ಕೇಳಿದಳು. “ನನ್ನದೊಂದು ಕೆಲಸವಾಗಬೇಕಾಗಿದೆ. ಅದನ್ನು ಮಾಡಿಸಿ ಕೊಡುವಿರಾ?” “ಎನಾಗಬೇಕಾಗಿದೆ? ಕೆಲಸದ ಹೆಸರು ಹೇಳು ಅಂದರೆ ಏನಾದರೂ ಉತ್ತರಕೊಡಬಲ್ಲೆ?

“ಇಲ್ಲ, ಹೂಂ. ಎಂದು ಹೇಳಿದರೇನೆ ಹೇಳುವೆ. ನೋಡಿರಿ, ನನ್ನ ಮತ್ತು ನಿಮ್ಮ ಹೆಸರಿನ ನಡುವೆ ಏನು ಅಂತರವಿದೆ? ಈ ‘ನಿ’ ಅಕ್ಷರವೊಂದೇ ಈಗ ನೀ ನೂ ಇಂದು ಅಡ್ಡಬರಬಾರದು ಅಂದರೆ ಆ ಕೆಲಸ ಹೇಳುವೆ.”

‘ನೀ’ ಅಂದರ “ನೋ”ಎಂದು ನನ್ನ ಬಾಯಲ್ಲಿ ಎಂದೂ ಬರುವದಿಲ್ಲ ಹೇಳು ಬೇಗ ಹೇಳು.”

“ನನ್ನ ಮಂಗಳ ಸೂತ್ರ ಮುಟ್ಟಿ ಆಣೆ ಮಾಡಿರಿ”

“ನನ್ನ ಸಿಗರೇಟ ಹೊತ್ತಿಸಲು ಸಹಾಯ ಮಾಡು!” ನಿರಂಜನನ್ನು ತನ್ನ ವಶದಲ್ಲಿ ಸೆಳೆದು ಕೊಂಡಾಗ, ಆ ಸ್ನೇಹಮಯಜಲದಲ್ಲಿ ಇಬ್ಬರೂ ಮುಳುಗಿದಾಗ, ರಂಜನಾ ತನ್ನ ಕೆಲಸವು ಆಗುವಂತೆ ನೋಡಿ ಕೊಂಡಳು.

ಸಿಗರೇಟಿನ ಹೊಗೆ ಸುರುಳಿ, ಸುರುಳಿಯಾಗಿ ತೇಲಿ ಹೋಗುತ್ತಿರವಾಗ, ಒಬ್ಬ ಬಡಜೀವಿಗೆ ಸಹಾಯ ಮಾಡುವ ಆನಂದದ ತೆರೆಗಳ ಮೇಲೆ ರಂಜನಾ ತೇಲಿಹೋದಳು!!!

ಮರುದಿನ ಸಂಜೆ ಭವಾನಿ ಹೊರಗಿನಿಂದ ರಂಜನಾಳ ಕಡೆಗೆ ಬಂದ.

“ಬಾಯರಽ ಬಾಯರಽ ಎಂದು ಕೂಗಿದ. ರಂಜನಾ ಹೊರಗೆ ಬಂದಕೂಡಲೆ ಹೇಳಿದ- ಬಾಯರಽ ನಾನು ಆ ಅಜ್ಜನ ಕಡೆಗೆ ಹೋಗಿದ್ದೆ. ಅವ ಚೀಟಿಕೊಟ್ಟನರಿ” ತನ್ನ ರುಮಾಲದೊಳಗೆ ಮುಚ್ಚಿಟ್ಟಿದ್ದ ಆ ಪತ್ರವನ್ನು ಹಗುರಾಗಿ ತೆಗೆದು ರಂಜನಾಳ ಕೈಯಲ್ಲಿ ಕೊಟ್ಟನು. ಆ ಪಾಕೇಟು ಭದ್ರವಾಗಿ ಮಾಡಲ್ಪಟ್ಟಿದ್ದಿತು. ಪ್ರಾಯವ್ಹೇಟ! ಅಂತ ದಪ್ಪಕ್ಷರದಲ್ಲಿ ಬರೆದಿತ್ತು. ಏನಿರಬಹುದೆಂದು ಬಹಳ ತವಕಬಟ್ಟಳು. ರಂಜನಾ ಏಳೆಂಟು ಹೆಜ್ಜೆ ಮುಂದೆ ಹೋದ ಭವಾನಿ ಮತ್ತೆ ಬಂದು ಹೇಳಿದ, “ಬಾಯರ, ಆ ಅಜ್ಜ ನಿಮ್ಮ ಕೈಯಾಗೆ ಇದನ್ನು ಕೊಡಲಿಕ್ಕೆ ಹೇಳಿದನು!”

ರಂಜನಾ ತನ್ನ ಕೋಣೆಗೆ ಹೋಗಿ ಆ ಪಾಕೀಟನ್ನು ಒಡೆದಳು. ಕಣ್ಣುಗಳು ಒಂದೇ ಸವನೆ ಓಡುತ್ತಿದ್ದವು ಆ ಅಜ್ಜನ ಪತ್ರ ಹೀಗಿದ್ದಿತು.

ಅಮ್ಮ ನನ್ನನ್ನು ಎಲ್ಲರೂ ಹುಚ್ಚನೆಂದು ಕರೆಯುತ್ತಾರೆ. ನೀನೊಬ್ಬಳೇ ಇನ್ನೂ ನಾನು ಹುಚ್ಚನೆಂದು ತಿಳಿದುಕೊಂಡಿಲ್ಲ. ಮಗನೇ ನನಗೆ ಹೀಗೆ ಹೆಸರಿಟ್ಟನು. ಅವನು ನನ್ನನ್ನು ಹುಚ್ಚನನ್ನು ಮಾಡಿದನು; ಜಾಣನನ್ನೂ ಮಾಡಿದನು.

ನನಗೆ ಒಬ್ಬನೇ ಮಗ. ಅವನನ್ನು ಬಹಳ ಸಲಿಗೆಯಿಂದ ಬೆಳೆಸಿದೆ. ಅವನಿಗೆ ಯಾವದೂ ಕೊರತೆ ಮಾಡಲಿಲ್ಲ. ಬೇಡಿದ್ದನ್ನು ಕೊಟ್ಟೆ. ಬಹಳ ಸ್ವತಂತ್ರವಾಗಿ ಸ್ವಚ್ಛಂದವಾಗಿ ಅವನು ಬೆಳೆದನು. ನನ್ನ ಕಣ್ಣುಗಳಿಗೆ ಅವನು ಹಬ್ಬವಾಗಿದ್ದನು. ನನ್ನ ಈ ಪ್ರೀತಿಯೇ? ನನಗೆ ಮುಳುವಾಯಿತು. ಮಮತೆ ಮುಂದೆ ಮುಳ್ಳಾಗಿಯೂ ಹಬ್ಬುವದೆಂದು ನನಗೆ ಮೊದಲು ಅನಿಸಿರಲಿಲ್ಲ.

ದೊಡ್ಡವನಾದ ಮೇಲೆ ಅವನು ದುಃಚಟಗಳಿಗೆ ಬಿದ್ದನು. ಕುಡಿಯವದು, ಬಹಳ ಸಿಗರೇಟು ಸೇದುವದು ಮಾಡತೊಡಗಿದನು. ಕಾಲೇಜದ ಅಭ್ಯಾಸದಲ್ಲಿ ಏನೂ ಮನಸ್ಸು ಇರುತ್ತಿರಲಿಲ್ಲ ಕುಂಟುತ್ತ ಅವನ ಶಿಕ್ಷಣ ಸಾಗಿತ್ತು. ಅವನ ಕೆಟ್ಟ ಚಟಗಳನ್ನು ಬಿಡಿಸುವುದು ಸಾಧ್ಯವಾಗಲಿಲ್ಲ. ನಾಯಿಯ ಬಾಲವೇ ಡೊಂಕ ಇದ್ದಮೇಲೆ ಏನು ಮಾಡಲು ಸಾಧ್ಯ? ಅವನಿಂದ ನನ್ನ ಹೆಸರಿಗೂ ಕುಂದು ಬರತೊಡಗಿತು.

ಇದಕ್ಕೂ ಹೆಚ್ಚಾಗಿ ಅವನಿಗೆ ಹೆಣ್ಣಿನ ಚಟ! ಅಯ್ಯೋ ತಂದೆಯಾದ ನಾನು ನಿನ್ನಮುಂದೆ ಈ ಮಾತು ಬರೆಯುತ್ತಿದ್ದೇನೆ. ಇನ್ನು ಅವನನ್ನು ಬಿಟ್ಟು ಇರುವದೇ ಲೇಸೆಂದು, ಅವನನ್ನು ಮನೆಬಿಟ್ಟು ಹೊರಗೆ ಹಾಕಬೇಕೆಂದು ಮಾಡಿದ್ದೆ. ಆದರೆ ವಿಚಿತ್ರ ವಿಧಿ! ನಾನೇ ಮನೆಬಿಟ್ಟು ಹೊರಗೆ ಬೀಳಬೇಕಾಯಿತು.

ನನಗೆ ಹೇಳದೆಯೆ, ಕೇಳದೆಯೇ ಯಾವದೋ ಒಂದು ಹೆಣ್ಣನ್ನು ಗಂಟು ಹಾಕಿಕೊಂಡಿದ್ದ. ಅವಳು ಸುಸಂಸ್ಕೃತಳಲ್ಲವೆಂದು ಕೇಳಿದ್ದೆ. ಅವಳಿಗಾಗಿ ಮನೆಯಲ್ಲಿಯ ಹಣವನ್ನೂ, ಭಂಗಾರವನ್ನೂ ಕಳವುಮಾಡಿಕೊಂಡು ಹೋಗಿದ್ದ. ಇದಕ್ಕಾಗಿಯೇ ಅವನು ನನ್ನ ಸಂಗಡ ಬಹಳವಾಗಿ ಜಗಳಾಡಿ ಬಿಟ್ಟ. ಅವನ ತಾಯಿ ಸಾಯುವ ಮುನ್ನ ಅಕ್ಕರತೆಯಿಂದ ಅವನ ಆಸ್ತಿಯನ್ನೆಲ್ಲ ಅವನ ಹೆಸರಿನಿಂದಲೇ ಬರೆಯಿಸಿಬಿಟ್ಟಳು. ನಾನು ಬಹಳ ಪರಾಧೀನನಾದೆ. ನನ್ನ ಮಗನೇ ನನ್ನ ಆನುಗೋಲು ಎಂದು ತಿಳಿದಿದ್ದೆ. ಆದರೆ…? ನನ್ನ ಮಾತುಗಳನ್ನೆಲ್ಲ ಅಲ್ಲಗಳೆದನು. ಒಂದು ದಿನ ಒಂದು ಬೆತ್ತದ ಕೋಲಿನಿಂದ ಜೋರಾಗಿ ಬೆನ್ನಮೇಲೆ ಹೊಡೆದ. ಅಯ್ಯೋ? ಆ ದಿನ!!!

ಅಮ್ಮ ಆದಿನವೇ ನಾನು ಮಗನ ಆಶೆ ಬಿಟ್ಟು ಓಡಿಹೋದೆ! ಅಂದಿನಿಂದಲೂ ನಾನು ಹುಚ್ಚನಾಗಿದ್ದೇನೆ. ಮನೆಯ ಮಕ್ಕಳು ಸಂತೋಷ ಕೊಡಲಿಲ್ಲ ನನಗೆ ಆಶ್ರಯ ಕೊಡಲಿಲ್ಲ. ಹೊರಗಿನ ಮಕ್ಕಳನ್ನು ನೋಡಿ ಆನಂದ ಪಡುತ್ತಿದ್ದೇನೆ…

ಈ ಕತೆಯನ್ನೆಲ್ಲಾ ಓದಿ ರಂಜನಾ ನಿಟ್ಟುಸಿರುಬಿಟ್ಟಳು. ಈ ಮೊದಲೇ ಭವಾನಿ ಅವನ ಕತೆ ಹೇಳಿದ್ದ. ಮತ್ತೆ ಇದೊಂದಿಷ್ಟು ಓದಿದ ಮೇಲೆ ಅವಳ ಮನಸ್ಸು ಬಹಳ ವಿಹ್ವಲವಾಯಿತು.

ಈ ಸಂಗತಿಯನ್ನು ಬರೆದ ಕಾಗದವನ್ನು ಮಡಿಕೆ ಹಾಕಿ ಪಾಕೇಟಿನಲ್ಲಿ ಇಡಹೋದಾಗ, ರಂಜನಾಳ ಕಣ್ಣಿಗೆ ಮತ್ತೊಂದು ಕಾಗದ ಕಣ್ಣಿಗೆ ಬಿತ್ತು. ಅದು ಬಹಳ ಚಿಕ್ಕದಾಗಿತ್ತು. ರಂಜನಾ ಅದನ್ನು ತೆಗೆದು ನೋಡಿದಳು.

ಅಮ್ಮಾ ಮೊದಲನೆಯ ಪುಟದಲ್ಲಿ ನಾನು ಏನೆನೋ ಹುಚ್ಚುಚ್ಚ ಬರೆದಿದ್ದೇನೆ. ಅದನ್ನೆಲ್ಲಾ ಮರೆತುಬಿಡು. ನೀನು ಈ ಅಜ್ಜನನ್ನು ಕ್ಷಮಿಸಬೇಕು. ನೀನು ಸುಸಂಸ್ಕೃತಳು ಎಂಬುದು ನನಗೆ ಗೊತ್ತು. ನಿನ್ನ ಗಂಡನನ್ನು ನೀನು ಸುಧಾರಿಸಿರುವಿ. ನನಗೆ ಬಹಳ ಕೆಟ್ಟೆನಿಸುತ್ತದೆ. ನನ್ನನ್ನು ಕ್ಷಮಿಸಬೇಕು.

“ನನ್ನ ಮಗ ಮಿಲಟರಿಗೆ ಹೋಗಿದ್ದನಂತೆ ! ಅವನು ತಿರುಗಿ ಬಂದಿದ್ದಾನಂತೆ! ಅವನ ಗುರುತು ನನಗೆ ಮೊದಲು ಸಿಕ್ಕಲಿಲ್ಲ. ಮುಖವೆಲ್ಲ ಸುಟ್ಟು ಬದಲಾಗಿದ್ದಿತ್ತು…! ನಿನ್ನ ಕತೆ ಹೇಳಿದ ದಿನ ಗೇಟದಲ್ಲಿ ಅವನನ್ನು ನೋಡಿದ್ದೇನೆ!

“ನಾನು ನನ್ನ ಮೊಮ್ಮಕ್ಕಳನ್ನು ಕಂಡೆ! ನನಗೆ ಬಹಳ ಸಂತೋಷ! ನನ್ನ ಕಣ್ಣಿಗೆ ಹಬ್ಬ! ನನ್ನ ಜೀವನ ಕೃತಾರ್ಥ”

ಉದಯಕುಮಾರ ತನ್ನ ತಂದೆಯನ್ನು ಹೊರಗೆ ಹಾಕಲಿಕ್ಕಿಲ್ಲವಷ್ಟೇ ರಂಜನಾ? ನಿನ್ನ ಮಾವ,

ಈ ಚೀಟಿಯನ್ನು ಓದಿದ ಮೇಲೆ, ರಂಜನಾಳ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ತಾನು ಏನು ಓದುತ್ತಿರುವೆನೆಂಬುದೇ ಅವಳಿಗೆ ತಿಳಿಯಲಿಲ್ಲ. ತನ್ನ ತಲೆಯನ್ನು ಗಟ್ಟಿಯಾಗಿ ಒತ್ತಿಕೊಂಡಳು!

ಎಂಥ ದಾರುಣವಾದ ಸತ್ಯಸಂಗತಿ!! ನಿರಂಜನ ಎಷ್ಟು ಸುದ್ದಿ ಇವಳಿಂದ ಮರೆಮಾಚಿ ಇಟ್ಟುಗೊಂಡಿದ್ದ! ತನಗೆ ತಂದೆಯೇ ಇಲ್ಲವೆಂದು ಹೇಳಿದ್ದ. ಎಷ್ಟು ನಿಷ್ಕರುಣೆ! ರಂಜನಾಳ ಎದೆ ಸಿಟ್ಟಿನಿಂದ ಕುದಿಯತೊಡಗಿತು. ನಿರಂಜನ ಆಗ ಮನೆಯಲ್ಲಿಯೇ ಇದ್ದರೆ ಏನೇನೋ ಆಗುತ್ತಿತ್ತು!!

ಅವಳ ಮನಸ್ಸು ಸ್ಥಿಮಿತಕ್ಕೆ ಬರಬೇಕಾದರೆ ಎಷ್ಟೋ ಗಂಟೆ ಹಿಡಿಯಿತು. ಅವಳು ಆ ದಿನ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಲಿಲ್ಲ. ಹಾಗೆ ಮಾಡಿದರೆ ನಿರಂಜನ ತನ್ನ ಮಾತಿಗೆ ಒಪ್ಪುವದಿಲ್ಲವೆಂದೂ ಅನಿಸಿತ್ತು. ಅವಳಿಗೆ ಒಂದು ಉಪಾಯ ಹೊಳೆಯಿತು.

“ರಂಜನಾ, ನಿನ್ನೆ ನೀನು ಹೇಳಿದ ಕೆಲಸ ಮಾಡಿದ್ದೇನೆ” ಎಂದು ನಿರಂಜನ ಹೊರಗಿನಿಂದ ಕಾಲಿಡುವಾಗಲೇ ಉಬ್ಬಿನಿಂದ ಹೇಳಿದ.

ರಂಜನಾ ಮುಖದ ಮೇಲೆ ಸಂತೋಷವನ್ನು ವ್ಯಕ್ತಪಡಿಸುತ್ತ ‘ಚೆನ್ನಾಯಿತು’ ಎಂದಳು, ಹಾಗಾದರೆ ಅವನು ಎಂದಿನಿಂದ ಬರಬೇಕು?

“ಬೇಕಾದಾಗ, ಬೇಕಾದರೆ ನಾಳಿನಿಂದಲೇ ಬರಲಿ” ನಿರಂಜನ ತನ್ನ ಕೋಟನ್ನು ತೆಗೆಯುತ್ತ ಹೇಳಿದ.

“ನಾಳೆ ನಾವೇ ನಮ್ಮ ಕಾರನ್ನು ತೆಗೆದುಕೊಂಡು ಹೋಗಿ ಅವನನ್ನು ಕರೆತರಬೇಕು!”

“ಏಕೆ? ಅದೇನು ಅಂತಹದು?’

“ಇಲ್ಲ ಪಾಪ! ಅವನಿಗೆ ಮೈಯಲ್ಲಿ ಚೆನ್ನಾಗಿಲ್ಲವಂತೆ! ಭವಾನಿ ಅವನ ಮನೆಗೆ ಹೋಗಿದ್ದ ಅವನೇ ಹೇಳಿದ”

“ರಂಜನಾ, ನೀನು ಹೇಳಿದ ಮಾತಿಗೆ ನೋ’ ಇಲ್ಲವೆಂದು ನಿನ್ನೆಯೇ ಹೇಳಿಲ್ಲವೇ? ನಡೆ, ಇಬ್ಬರೂ ಕೂಡಿ ನಾಳೆ ಮಾರ್‍ನಿಂಗ ಟ್ರಿಪ್ ಮಾಡೋಣ!”

ರಂಜನಾ ಒಮ್ಮೆಲೇ ಯಾವದೋ ನಾಟಕದ ಸೂತ್ರಧಾರಿಯಾಗಬೇಕಾಯಿತು. ಮೃದುಸ್ವಭಾವದವಳಾದ ಅವಳ ಮೇಲೆ ಇಂಥ ಭಾರ ಬೀಳುವದೆಂದು ಅವಳಿಗೆ ಕನಸು ಮನಸಿನಲ್ಲಿಯೂ ಅನಿಸಿರಲಿಲ್ಲ.

ರಾತ್ರಿ ನಿರಂಜನ ಸ್ವಸ್ಥವಾಗಿ ನಿದ್ದೆ ಹೋಗಿದ್ದ, ರಂಜನಾಳಿಗೆ ಮಾತ್ರ ಮುಂದೆ ಏನಾಗುವದೋ ಎಂದು ಮನಸಿನಲ್ಲಿ ಡವಡವಿಕೆ! ಅವಳಿಗೆ ನಿದ್ರೆಯೇ ಬರಲಿಲ್ಲ. ಸೂರ್ಯೋದಯವಾಗುವದರೊಳಗೆ ಅವಳು ತನ್ನ ಮನಸ್ಸನ್ನು ಗಟ್ಟಿಮಾಡಿಕೊಳ್ಳುತ್ತಿದ್ದಳು.

ಬೆಳಗಿನ ಎಂಟು ಗಂಟೆ! ಕಾರು ‘ಅಜ್ಜನ ಮನೆ’ಯ ಎದುರು ನಿಂತಿತು; ಆ ವ್ಯಾಪಾರಿಯು ಓಡಿಬಂದು, ಸಾಹೇಬರಿಗೆ ಸಲಾಮು ಮಾಡಿ “ಏನು ತಾವು ಬಂದಿರಿ?” ಎಂದು ಕೇಳಿದನು.

“ಪೇಪರ ಕೊಡುವ ಅಜ್ಜ ನಿಮ್ಮಲ್ಲಿಯೇ ಇದ್ದಾನಲ್ಲವೇ?” ನಿರಂಜನ ಕೇಳಿದ.

ವ್ಯಾಪಾರಿಯ ಧ್ವನಿ ನಡುಗಹತ್ತಿತು. ನಾಲಿಗೆಯಿಂದ ಮಾತು ಹೊರಡದಾದವು. ಅವನಿಗೆ ಅವನದೇ ಟುಕಟುಕಿ, ಮಿಲಟಿರಿ ಮನುಷ್ಯನೇ ಅವನ ಮನೆಗೆ ಬಂದದ್ದರಿಂದ; ದೀನತೆಯಿಂದ ಕೈಮುಗಿಯುತ್ತ ಹೇಳಿದ “ಸಾಹೇಬರೆ, ನನ್ನದೇನೂ ಇದರಲ್ಲಿ ತಪ್ಪಿಲ್ಲ………”

“ಹಾಗಲ್ಲ, ಅವನು ಇಲ್ಲಿ ಇದ್ದಾನಲ್ಲವೇ?” ನಿರಂಜನ ಮತ್ತೆ ತಿದ್ದಿ ಪ್ರಶ್ನೆ ಕೇಳಿದ.

“ಅದೇ ಸಾಹೇಬರೆ, ಇಂದೇ ಬೆಳಿಗ್ಗೆ ತಾನೇ ಓಡಿಹೋಗಿಬಿಟ್ಟಾನೆ. ನಾನು ಅವನಿಗೆ ಏನೂ ಮಾಡಿಲ್ಲರಿ, ಸಾಹೇಬರೇ”

“ಎಲ್ಲಿಗೆ ಹೋದ?” ರಂಜನಾ ಪ್ರಶ್ನಿಸಿದಳು.

ನಿನ್ನೆ ರಾತ್ರಿ ಬಹಳೇ ಬಡಬಡಿಸಿದ ಏನೇನೋ ಹಿಂದಿನದು ಹೇಳುತ್ತಿದ್ದ. ನಾಲ್ಕೈದು ದಿನ ಅವನ ಮೈಯಲ್ಲಿ ನೆಟ್ಟಗೇ ಇದ್ದಿಲ್ಲ. ಕೆಲಸಮಾಡುವದು ಬಿಟ್ಟುಬಿಟ್ಟಿದ್ದ, ಇಂದು ಬೆಳಿಗ್ಗೆ ಎದ್ದು ನೋಡಿದೆ ತಲಬಾಗಲು ತೆರೆದಿತ್ತು. ಕೋಣೆಯಲ್ಲಿ ಅವನೂ ಇಲ್ಲ, ನಾನು ಎಲ್ಲ ಕಡೆಗೂ ಅವನನ್ನು ಹುಡುಕಿದೆ ಸಿಕ್ಕಲಿಲ್ಲ. ಇನ್ನು ಸ್ಟೇಶನ್ನೊಂದು ನೋಡಬೇಕು. ನಾನೂ ಈಗ ಅಲ್ಲಿಗೇ ಹೊರಟಿದ್ದೆ.”

ಕಾರು ಭರ್ರನೇ ನಿಲ್ದಾಣಕ್ಕೆ ಹೋಯಿತು; ನಿಲ್ದಾಣದಲ್ಲಿ ಸ್ಟೇಶನ್ ಮಾಸ್ತರ ನಿರಂಜನನ್ನು ಬರಮಾಡಿಕೊಂಡು ಹೇಳಿದ- “ನೋಡಿರಿ ಇಂದು ಬೆಳಗಿನ ಐದು ಗಂಟೆಯೆ ಗಾಡಿಗೆ ಒಬ್ಬ ಮುದುಕ ಓಡಿ ಬಂದ, ಗಾಡಿ ಅದೇ ಬಿಡುತ್ತಿತ್ತು. ಅವನು ಗಡಿಬಿಡಿಯಿಂದ ಹತ್ತಿಯೇ ಬಿಟ್ಟ. ಅವನು ಎಲ್ಲಿಗೆ ಹೋದನೋ ಗೊತ್ತಿಲ್ಲ. ಅವನು ಹತ್ತುವಾಗ ಈ ಬಡಿಗೆ ಮಾತ್ರ ಕೆಳಗೆ ಬಿತ್ತು. ಅದು ಇಲ್ಲೇ ಇದೆ ನೋಡಿರಿ”.

ರಂಜನಾ ಅದನ್ನು ನೋಡಿದಳು! ಅವಳ ತಂದೆ ಮೋಜಿಗಾಗಿ ಕೊರೆದ ಅಕ್ಷರ ಅದರ ಮೇಲ್ಭಾಗದಲ್ಲಿ ಇದ್ದವು!! ರಂಜನಾ ಚಕಿತಳಾಗಿ ಅಂದಳು “ಓ! ಇದು ನನ್ನ ತಂದೆಯ ಆನುಗೋಲು ನಿಮ್ಮಕಡೆಗೆ ಕೊಟ್ಟದ್ದು.

ರಂಜನಾ ಮತ್ತು ನಿರಂಜನ ಇಬ್ಬರೂ ಶೂನ್ಯವಾಗಿ ಒಬ್ಬರನ್ನೊಬ್ಬರು ನೋಡಿದರು!

ಅದೇ ಕೋಲಿನಿಂದ ತನ್ನ ತಂದೆಗೆ ಹೊಡೆದ ಭಯಂಕರವಾದ ಚಿತ್ರ ನಿರಂಜನನ ಕಣ್ಣೆದುರು ಸುಳಿಯಿತು!!

ತಂದೆಗೆ ಮುದಿ ವಯಸ್ಸಿನಲ್ಲಿ ಮಕ್ಕಳು ಆನುಗೋಲಾಗಿ ಬದುಕದಿದ್ದರೆ, ಏನು ಪ್ರಯೋಜನ? ಕೈಮೀರಿಹೋದ ಆ ಪ್ರಸಂಗವನ್ನು ನೆನೆದು ಅವರಿಬ್ಬರ ಹೃದಯಗಳು ಬಹಳ ಮರುಗಿದವು.!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ
Next post ಕನ್ನಡ ಪ್ರೀತಿಸಿ

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys