ಪ್ರಾಣ ಪರಿಸರ

ಪ್ರಾಣ ಪರಿಸರ

ಚೈನಾದಲ್ಲಿ ಒಂದು ಪಾತರಗಿತ್ತಿ ಹಾರಿದರೆ ಯುರೋಪಿನಲ್ಲಿ ಭೂಕಂಪನವಾಗುತ್ತದೆ ಎಂಬ ಮಾತಿದೆ. ಮೇಲುನೋಟಕ್ಕೆ ಇದು ತಮಾಷೆಯಾಗಿ ಕಾಣುತ್ತದೆ. ಆದರೆ ಇಡೀ ಲೋಕವೇ ಒಂದು ಬೃಹತ್ತಾದ ಅಂತರ್ಜಾಲವಾಗಿರುತ್ತ ಇಂಥ ಯಾವ ಮಾತೂ ನಿಜಕ್ಕೂ ಅರ್ಥಹೀನವಲ್ಲ. ಯಾವುದೋ ಒಂದು ಊರಿನಲ್ಲಿ ಸುರುವಾದ ಹಕ್ಕಿಜ್ಜರ ಇಡೀ ಜಗತ್ತಿಗೇ ವ್ಯಾಪಿಸುವ ಸಾಧ್ಯತೆಯುಳ್ಳದ್ದು. ನಮ್ಮದೇ ಜೀವಮಾನದ ಕಾಲದಲ್ಲಿ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ, ಮುಖ್ಯವಾಗಿ ಪ್ರಾಣಿ ವರ್ಗಗಳ ವಸತಿ ಪ್ರದೇಶಗಳಿಗೆ (habitat) ಸಂಬಂಧಿಸಿದಂತೆ, ನಡೆಯುತ್ತಿರುವ ವ್ಯಾಪಕ ಬದಲಾವಣೆಗಳ ಘೋರ ಪರಿಣಾಮಗಳನ್ನು ತಿಳಿದುಕೊಳ್ಳುವುದಕ್ಕೆ ನಾವೇನೂ ವಿಜ್ಞಾನಿಗಳಾಗಿರಬೇಕಿಲ್ಲ, ಸೂಕ್ಷ್ಮಮತಿಗಳಾಗಿದ್ದರೆ ಸಾಕು. ನನ್ನ ಅನುಭವಕ್ಕೇ ಸಂಬಂಧಿಸಿ ಹೇಳುವುದಾದರೆ, ನಾನು ಹುಟ್ಟಿದ ಕಾರಡ್ಕ ಎಂಬ ಗ್ರಾಮವೊಂದರ ಸುತ್ತ ಮುತ್ತ ಆ ಕಾಲದಲ್ಲಿ ದಟ್ಟವಾದ ಮಳೆಯ ಕಾಡುಗಳಿದ್ದುವು. ಇದು ಸರಕಾರಕ್ಕೆ ಸೇರಿದ್ದಾದ್ದರಿಂದ ಇದನ್ನು ‘ಫಾರೆಸ್ಟ್ ಕಾಡು’ ಎಂಬ ವಿಚಿತ್ರವಾದ ನಾಮಧೇಯದಿಂದ ಜನರು ಕರೆಯುತ್ತಿದ್ದರು. ಈ ಕಾಡಿನಲ್ಲಿ ಇರದ ಮರಗಳೇ ಇಲ್ಲ. ಹಾಗೂ ಸಾವಿರಾರು ವರ್ಷಗಳ ಕಾಡು ಇದಾದ್ದರಿಂದ ಇಲ್ಲಿನ ಮರಗಳೂ ಬೃಹತ್ತಾಗಿದ್ದುವು. ಈ ಕಾಡಿನೊಳಗೆ ಹುಲಿ, ಕಾಡುಹಂದಿ, ಮುಳ್ಳುಹಂದಿ, ಕಾಡಾನೆ, ಮಂಗ ಮುಂತಾದ ಅನೇಕ ಪ್ರಾಣಿಗಳೂ ಅದೆಷ್ಟೋ ಬಗೆಯ ಹಕ್ಕಿಗಳು, ಕ್ರಿಮಿಕೀಟಗಳೂ ಇದ್ದುವು. ಹಾಗೂ ಕಾಡು ಅನೇಕ ಬಗೆಯ ಕಾಡುತ್ಪತ್ತಿ ಮತ್ತು ಔಷಧಗಳಿಗೆ ಆಗರವಾಗಿದ್ದಿತು. ಆದರೆ ಇವೆಲ್ಲವೂ ಸರಕಾರದ ಆಸೆಬುರುಕತನದಿಂದಾಗಿ ಮುಂದೆ ನಾಶವಾಗಿಹೋದುವು. ಅದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭವೆಂದು ಕಾಣುತ್ತದೆ. ನಾನಿನ್ನೂ ಚಿಕ್ಕವ. ಸರಕಾರ ಒಂದು ಭಾರೀ ಯೋಜನೆಯನ್ನು ಹಾಕಿಕೊಂಡು ಇಡೀ ಕಾಡನ್ನು ಕಡಿದು ಮರಮಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿತು; ಹಾಗೂ ಇಡೀ ಪ್ರದೇಶಕ್ಕೆ ಬೆಂಕಿ ಹಾಕಿ ಎಲ್ಲವನ್ನೂ ನೆಲಸಮಗೊಳಿಸಿ ಗೇರುಸಸಿಗಳನ್ನು ನೆಡಿಸಿತು. ಕಾರಣವೆಂದರೆ, ಈ ಕಾಡಿನಿಂದ ಏನೂ ಉಪಯೋಗವಿಲ್ಲ, ಇದರ ಬದಲು ಗೇರು ಸಸಿ ನೆಟ್ಟರೆ ವರ್ಷ ವರ್ಷವೂ ಲಾಭ ಬರುತ್ತದೆ ಎನ್ನುವುದು. ಸರಕಾರಕ್ಕೆ ಈಗ ಗೇರುಬೀಜದ ಲಾಭವೇನೋ ನಿರಂತರವಾಗಿ ಬರುತ್ತದೆ. ಆದರೆ ಅದಕ್ಕಾಗಿ ತೆತ್ತ ಮೌಲ್ಯವನ್ನು ಅದು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇಡೀ ಪ್ರದೇಶದಲ್ಲೀಗ ಗೇರುಮರಗಳು ಮಾತ್ರವೇ ಇರುವುದರಿಂದ ಅಲ್ಲಿನ ಪ್ರಾಣಿವರ್ಗಗಳಲ್ಲಿ ಹೇಳಿಕೊಳ್ಳುವಂಥ ವೈವಿಧ್ಯವಿಲ್ಲ. ಹುಲಿ, ಹಂದಿಗಳಂಥ ವನ್ಯಜೀವಿಗಳಂತೂ ಇಲ್ಲವೇ ಇಲ್ಲ. ಇತರ ಪ್ರಾಣಿಗಳೂ ಕಡಿಮೆ ಯಾಕೆಂದರೆ, ಗೇರು ಬೀಜಗಳನ್ನು ಹೆಕ್ಕುವ ಕೂಲಿಗಳಿಂದಾಗಿ ಅಲ್ಲಿ ಯಾವಾಗಲೂ ಮನುಷ್ಯಸಂಚಾರ ಇದ್ದೇ ಇರುತ್ತದೆ. ಪಕ್ಷಿಸಂಕುಲದ ವೈವಿಧ್ಯ ಮಾಯವಾಗಿದೆ. ಮಳೆಯ ಕಾಡು ಹೋಗಿ ಗೇರುಬೀಜ ಬೆಳೆಯುವ ಕಾಡಾಗಿದೆ ಇಡೀ ಪ್ರದೇಶ. ಇತರ ಯಾವುದೇ ಕಾಡುತ್ಪತ್ತಿ ಇಲ್ಲವೇ ಇಲ್ಲ. ಸೊಪ್ಪು ಸದೆಗಳೂ ನಾಶವಾಗಿವೆ. ಇವನ್ನು ಆಶ್ರಯಿಸಿಕೊಂಡಿದ್ದ ಸೂಕ್ಷ್ಮ ಜೀವಿಗಳೂ ಈಗ ಅಲ್ಲಿ ಇರಲಾರವು.

ಕಾರಡ್ನದ ಗತಿ ಇದಾದರೆ, ನನ್ನ ಸೋದರ ಮಾವಂದಿರಿದ್ದ ಬೆದ್ರಡಿ ಎಂಬ ಊರಿನ ಪರಿಸ್ಥಿತಿಯೂ ಇಂಥದೇ. ಶಾಲೆಗೆ ಹೋಗಲೆಂದು ನಾಮ ಚಿಕ್ಕ೦ದಿನಲ್ಲೇ ಈ ಊರಿಗೆ ಬಂದೆ. ಅಲ್ಲಿನ ಬದಲಾವಣೆಗಳೂ ನನ್ನ ಜೀವನಾನುಭವಕ್ಕೇ ಸೇರಿದಂಥವು. ಇಡೀ ಊರು ಸುಂದರವಾದ ಗದ್ದೆಗಳಿಂದ ತುಂಬಿತ್ತು. ಊರಿನ ನಡುವೆ ಮಳೆನೀರಿನ ಹಳ್ಳವೊಂದು ಹರಿದುಹೋಗುತ್ತಿತ್ತು. ಮಳೆಗಾಲದಲ್ಲಿ ಇದು ಕೆಂಪು ನೀರಿನಿಂದ ತುಂಬಿ ತುಳುಕುತ್ತಿತ್ತು. ಬೇಸಿಗೆಯಾಗುತ್ತಿದ್ದಂತೆ ಇದರಲ್ಲಿ ನೀರು ಕಡಿಮೆಯಾಗುತ್ತಿತ್ತಾದರೂ ಎಂದೂ ಪೂರ್ತಿ ಆರಿಹೋಗುತ್ತಿರಲಿಲ್ಲ. ಇದರಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಊರವರು ಸೇರಿ ಅಲ್ಲಲ್ಲಿ ಇದಕ್ಕೆ ಕಟ್ಟೆಗಳನ್ನು ಹಾಕಿ ಅದರಲ್ಲಿ ಶೇಖರಣೆಯಾದ ನೀರನ್ನು ತಂತಮ್ಮ ಗದ್ದೆಗಳಿಗೆ ಸರದಿಯಂತೆ ಬಿಟ್ಟುಕೊಳ್ಳುತ್ತಿದ್ದರು. ಇಂಥ ಗದ್ದೆಗಳಲ್ಲಿ ಕೆಲವು ಮೂರು ಬೆಳೆಯವು, ಕೆಲವು ಎರಡು ಬೆಳೆಯವು, ಇನ್ನು ಕೆಲವು ಒಂದು ಬೆಳೆಯವು ಇದ್ದುವು. ಇವುಗಳಲ್ಲಿ ಬೇರೆ ಬೇರೆ ತರದ ಭತ್ತ ಬೆಳೆಯುತ್ತಿತ್ತು. ಕೃಷಿಕರು ರಾಗಿ, ತೊಗರಿ, ಹೆಸರು, ಉದ್ದು, ಸಾಸಿವೆ ಮುಂತಾದ ಪರ್ಯಾಯ ಬೆಳೆಗಳನ್ನೂ ತೆಗೆಯುತ್ತಿದ್ದರು. ಕೆಲವು ಗದ್ದೆಗಳಲ್ಲಿ ಕಬ್ಬು ತೆಗೆಯುತ್ತಿದ್ದರು. ಊರಿಗೆ ಬೇಕಾದ ಆಹಾರ ಪದಾರ್ಥಗಳೆಲ್ಲ ಬಹುಮಟ್ಟಿಗೆ ಊರಲ್ಲೇ ದೊರಕುತ್ತಿದ್ಧುವು-ಎಣ್ಣೆ, ಬೆಲ್ಲವೂ ಸೇರಿದಂತೆ. ಕೆಲವು ಗದ್ದೆಗಳಲ್ಲಿ ಬೆಂಡೆ, ಅಳಸಂದೆ, ಸೌತೆ, ಮುಳ್ಳುಸೌತೆ, ಬದನೆ, ಹಾಗಲ, ಪಡವಲ, ಗೆಣಸು, ಬೂದುಗುಂಬಳ, ಸಿಹಿಗುಂಬಳ, ಖರ್ಬೂಜ ಮುಂತಾದ ಅನೇಕ ತರದ ಹಣ್ಣು ತರಕಾರಿಗಳನ್ನು ಬೆಳೆಯುತ್ತಿದ್ದರು. ಸ್ವಂತ ಗದ್ದೆಗಳಿಲ್ಲದವರಿಗೂ ಇಲ್ಲಿ ತರಕಾರಿ ಬೆಳೆಸಲು ಆಹ್ವಾನವಿರುತ್ತಿತ್ತು. ಕಾರಣ ಹೀಗೆ ಬೆಳೆಯುವುದರಿಂದ ಗದ್ದೆಯ ಕಸುವು ಜಾಸ್ತಿಯಾಗುತ್ತಿತ್ತು. ಇಂಥ ಗದ್ದೆಗಳಿಗೆ ಏತ ನೀರಾವರಿ ಇರುತ್ತಿತ್ತು. ಈ ಏತದ ಕೊನೆಯನ್ನು ಹಿಡಿದು ಹೊಂಡಕ್ಕೆ ಜಿಗಿದ ಅನುಭವ ನನಗಿದೆ.

ಎತ್ತು ದನಗಳಿಲ್ಲದೆ ಗದ್ದೆ ಬೇಸಾಯ ಅಸಾಧ್ಯ; ಆದ್ದರಿಂದ ಗದ್ದೆಬೇಸಾಯದವರು ಗೋವುಗಳನ್ನೂ ಸಾಕುತ್ತಿದ್ದರು. ಹಸಿಗೊಬ್ಬರಕ್ಕೆ ಬೇಕಾದ ಸೊಪ್ಪು ಗದ್ದೆಯ ಆಚೀಚೆ ಇರುವ ಪ್ರದೇಶಗಳಲ್ಲಿ ದೊರಕುತ್ತಿದ್ದುವು. ಹಾಗೂ ಹತ್ತಿರದ ಗುಡ್ಡಗಳಲ್ಲಿ ಗೋವುಗಳು ಮೇಯುವುದಕ್ಕೆ ಅಗತ್ಯವಾದ ಹುಲ್ಲೂ ಬೆಳೆಯುತ್ತಿತ್ತು. ಈ ಪ್ರದೇಶದಲ್ಲಿ ಕಾಡುಗಳು ಕಡಿಮೆಯಿದ್ದರೂ ಇಲ್ಲೂ ಸಾಕಷ್ಟು ವಿಧದ ಹಕ್ಕಿಗಳಿದ್ದುವು. ಗದ್ದೆಗಳ ಪಕ್ಕದಲ್ಲಿ ಹಲಸು, ಮಾವು, ಹುಣಸೆ ಮುಂತಾದ ಗಟ್ಟಿ ಮರಗಳಿರುತ್ತಿದ್ದುವು. ಹೊಳೆಯ ತಂಪಿಗೆ ಬೆಳೆಯುತ್ತಿದ್ದ ಇತರ ಹಲವಾರು ರೀತಿಯ ಮರಗಳೂ ಇದ್ದುವು. ಮನೆ ಹತ್ತಿರ ತೆಂಗು, ತೊಂಡೆ, ಬಸಳೆ, ಕೇಸು, ಬಾಳೆ, ಸ್ವರ್ಣಗಡ್ದೆ, ನುಗ್ಗೆ ಇತ್ಯಾದಿ ಹಲವು ಸಸ್ಯಗಳು.

ಈ ಇಡೀ ಪರಿಸರ ನಾನು ನೋಡನೋಡುತ್ತಿರುವಂತೆಯೇ ಫಕ್ಕನೇ ಬದಲಾಗಿ ಬಿಟ್ಟಿತು. ಕಾರಣ ಅಡಿಕೆ ಎಂಬ ಪಿಡುಗು. ಫಲವತ್ತಾದ ಗದ್ದೆಗಳೆಲ್ಲವೂ ಒಂದರ ಮೇಲೊಂದರಂತೆ ‘ಡಾಮಿನೋ ಇಫೆಕ್ಟ್’ನಲ್ಲಿ ಅಡಿಕೆ ತೋಟಗಳಾಗಿ ಮಾರ್ಪಟ್ಟುವು. ತನ್ನ ನೆರೆಯವನು ಅಡಿಕೆ ಸಸಿ ಇಟ್ಟಿದ್ದಾನೆ, ಗದ್ದೆಗೆ ನೆರಳಾಗುತ್ತದೆ ಎಂಬುದು ನೆಪ. ಆದರೆ ನಿಜವಾದ ಕಾರಣ ಅಡಿಕೆಗೆ ಇದ್ದ ಬೆಲೆ. ಇದೆಲ್ಲ ಸುರುವಾದ್ದು ಇಪ್ಪತ್ತನೆ ಶತಮಾನದ ಐವತ್ತು ಅರುವತ್ತರ ದಶಕಗಳಲ್ಲಿ. ಅಡಿಕೆ ಧಾರಣೆ ಏರುತ್ತ ಏರುತ್ತ ಹೋಯಿತು-ಗದ್ದೆಗಳೂ ನಾಶವಾಗುತ್ತ ಹೋದುವು. ಈಗ ನೋಡಿದರೆ ಕೇವಲ ಬೆದ್ರಡಿಯ ಬಯಲು ಮಾತ್ರವಲ್ಲ, ಇಡೀ ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಹೆಚ್ಚಿನ ಹಳ್ಳಿ ಪ್ರದೇಶಗಳೂ ಅಡಿಕೆತೋಟಗಳಿಂದ ಆವೃತವಾಗಿವೆ. ಎಲ್ಲಾದರೂ ಗದ್ದೆ ಕಾಣಿಸಿದರೆ ಕಂಡವನ ಭಾಗ್ಯ. ಇಂಥ ವ್ಯಾಪಕ ಬದಲಾವಣೆಗೆ ಯಾರೊಬ್ಬ ಬೇಸಾಯಗಾರನನ್ನೂ ದೂರಿ ಉಪಯೋಗವಿಲ್ಲ. ನಮ್ಮ ಇಡೀ ಆರ್ಥಿಕ ವ್ಯವಸ್ಥೆಯೇ ಹಾಗಿದೆ. ಈ ವ್ಯವಸ್ಥೆಯಲ್ಲಿ ಭತ್ತ ಅಥವಾ ಇತರ ಯಾವುದೇ ಆಹಾರ ಧಾನ್ಯ ಬೆಳೆದು ಶ್ರೀಮಂತನಾಗುವುದು ಸಾಧ್ಯವಿಲ್ಲ; ಆದರೆ ಅಡಿಕೆ, ರಬ್ಬರ್ ಇತ್ಯಾದಿ ಬೆಳೆದು ಶ್ರೀಮಂತನಾಗುವುದು ಸಾಧ್ಯ. ಆದ್ದರಿಂದ ಈ ಪರಿಸರ ಬದಲಾವಣೆಯಿಂದಾಗಿ ಈ ಪ್ರದೇಶದ ಬೆಳೆಗಾರರಲ್ಲಿ ದುಡ್ಡು ಓಡಾಡಲು ಸುರುವಾದ್ದು, ಅವರ ಮಕ್ಕಳು ಮರಿ ನಗರಗಳಲ್ಲಿ ಓದಿ ಮುಂದೆ ಬರಲು ಸಾಧ್ಯವಾದ್ದು ನಿಜ. ಕೇವಲ ಗದ್ದೆಗಳಲ್ಲಿ ಭತ್ತ ಬೆಳೆಯುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಆದರೆ ಇದರಿಂದ ಪರಿಸರದ ಮೇಲೆ ಯಾವ ಪರಿಣಾಮ ಉಂಟಾಯಿತು. ಎನ್ನುವುದೂ ಕೂಡ ಮುಖ್ಯ ಪ್ರಶ್ನೆಯೇ. ಈ ಕುರಿತು ಯಾವ ವಿಶ್ವವಿದ್ಯಾಲಯವೂ ಸಂಶೋಧನೆ ನಡೆಸಿಲ್ಲ. ಆದರೂ ನನಗೆ ತಿಳಿದಮಟ್ಟಿಗೆ, ಇಲ್ಲಿನ ಮಣ್ಣಿನ ಗುಣವೇ ಬದಲಾಗಿಬಿಟ್ಟದೆ. ಮುಖ್ಯವಾಗಿ ನೀರಿನ ಮಟ್ಟ ಕುಸಿದಿದೆ. ವಿದ್ಯುತ್ ಲಭ್ಯವಿರುವುದರಿಂದ ಪ್ರತಿಯೊಬ್ಬರೂ ಕೊಳವೆಬಾವಿ ತೆಗೆಸಿದ್ದಾರೆ; ಇದರ ಆಳವನ್ನು ಇನ್ನಷ್ಟು ಹೆಚ್ಚಿಸುವ ಪೈಪೋಟಿ ಪ್ರತಿ ವರ್ಷ ನಡೆಯುತ್ತಿದೆ. ಮಾತ್ರವಲ್ಲ, ಅಡಿಕೆ ತೋಟವನ್ನು ವಿಸ್ತರಿಸುವ ಆಸೆಯಲ್ಲಿ ಹಸಿರೆಲೆ ಬೆಳೆಯುವ ಕಡೆಯಲ್ಲೂ ಅಡಿಕೆ ಗಿಡ ನಟ್ಟಿದ್ದಾರೆ. ಆದ್ದರಿಂದ ಹಸಿರುಗೊಬ್ಬರ ಇಲ್ಲ. ಇನ್ನು ದನಗಳಿಗೆ ಮೇಯಲು ಜಾಗವೂ ಇಲ್ಲದಾಗಿರುವುದರಿಂದ ದನ ಸಾಕಣೆಯೂ ಕಡಿಮೆಯಾಗಿದೆ. ತರಕಾರಿಗಳನ್ನು ಜನ ಪೇಟೆಗೆ ಹೋಗಿ ಕೊಂಡುಕೊಳ್ಳುತ್ತಿದ್ದಾರೆ, ತಾವಾಗಿಯೇ ಬೆಳೆಯುವುದನ್ನು ನಿಲ್ಲಿಸಿಬಿಟ್ಟದ್ದಾರೆ. ಅಕ್ಕಿ, ಬೇಳೆಗಳನ್ನೂ ಅಂಗಡಿಗಳಿಂದಲೇ ಕೊಂಡುಕೊಳ್ಳಬೇಕಾಗಿದೆ. ಇವೆಲ್ಲ ಜೀವನಾವಶ್ಯಕತೆಯ ಸಾಧನಗಳು. ಯಾರೋ ಎಲ್ಲೋ ಬೆಳೆಯುತ್ತಿದ್ದಾರೆ. ಇವುಗಳ ಕ್ರಯ ಜಾಸ್ತಿಯಾಯಿತೆಂದು ಊರ ಮಂದಿ ಗೊಣಗುತ್ತಾರೆ; ಅಡಿಕೆ ಧಾರಣೆ ವರ್ಷ ವರ್ಷವೂ ಹೆಚ್ಚಾಗಬೇಕೆಂದು ಒತ್ತಾಯಿಸುತ್ತಾರೆ.

ಇನ್ನು ಪ್ರಾಣಿಪರಿಸರದ ಸಂಗತಿಯೇನು? ಹಕ್ಕಿ ಪಕ್ಕಿಗಳ ಬಗ್ಗೆ ಸಾಮಾನ್ಯ ಜನರಿಗೆ ಏನೇನೂ ತಿಳುವಳಿಕೆಯಿಲ್ಲ. ಗೂಗೆ ಕೂಗಿದರೆ ಅಡಿಕೆ ಧಾರಣೆ ಜಾಸ್ತಿಯಾಗುತ್ತದೆ, ಅಡುಗೆ ಮಾಡುವ ಹೊತ್ತು ಕಾಗೆ ಕೂಗಿದರೆ ನೆಂಟರು ಬರುತ್ತಾರೆ, ಗುಬ್ಬಿ ಗೂಡನ್ನು ಯಾರೂ ಅಳಿಸಬಾರದು ಮುಂತಾಗಿ ಅವರು ನಂಬಿರುತ್ತಾರೆ. ಆದರೆ ಈ ಗುಬ್ಬಿಗಳಿಗಾದರೂ ಆಹಾರವೇನು? ಗುಬ್ಬಿಗಳಿಗೆ ಕಾಳುಗಳು-ಅದರಲ್ಲೂ ಅಕ್ಕಿ-ಇಷ್ಟ. ಅದೇ ರೀತಿ ಹೂಗಳ ಮಕರಂದವನ್ನು, ಹುಳಹುಪ್ಪಟೆಗಳನ್ನು ಇಷ್ಟಪಡುವ ಹಕ್ಕಿಗಳಿದ್ದಾವೆ. ತರಗೆಲೆಗಳು ಬಿದ್ದು ನೆಲದ ಮೇಲೆ ತೇವ ನಿಲ್ಲುವ ರಕ್ಷಾಕವಚವೊಂದು ನಿರ್ಮಾಣವಾಗಬೇಕಿದ್ದರೆ ಮರಗಿಡಗಳು ಸಾಕಷ್ಟು ಪ್ರಮಾಣದಲ್ಲಿ ಬೇಕು. ಇಂಥ ರಕ್ಷಾಕವಚದ ಕೆಳಗೆ ಅಸಂಖ್ಯ ನಮೂನೆಯ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತವೆ. ಇವೆಲ್ಲವೂ ಜೀವ ಪರಿಸರಕ್ಕೆ ಹಲವು ಬಗೆಯಲ್ಲಿ ಅಗತ್ಯ. ಈ ಕುರಿತಾದ ಜ್ಞಾನವನ್ನು ಸಾಮಾನ್ಯ ಜನರಿಂದ ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಕನಿಷ್ಠ ಆಹಾರದ ಕುರಿತಾದ ಅರಿವಾದರೂ ಇರಬೇಡವೇ? ದ್ವಿತೀಯ ಮಹಾಯುದ್ಧದ ಬೆನ್ನಲ್ಲೆ ಬಂದ ಆಹಾರ ಅಭಾವದ ಕಾಲದಲ್ಲಿ ನಾನೀಗ ವಿವರಿಸುತ್ತಿರುವ ಪರದೇಶದ ಜನರನ್ನು ರಕ್ಷಿಸಿದ್ದು ಭತ್ತದ ಗದ್ದೆಗಳೇ ವಿನಾ ಅಡಿಕೆತೋಟಗಳಲ್ಲ. ಭತ್ತ ಬೇಸಾಯಗಾರರು ತಾವು ಬೆಳೆಸಿ ಸರಕಾರಕ್ಕೂ ಕೂಡಾ ಲೆವಿ ಕೊಡಲು ಶಕ್ತರಾಗಿದ್ದರು ಇಲ್ಲಿ. ಯಾವುದೇ ಕಾರಣಕ್ಕೆ ಅಂಥ ಇನ್ನೊಂದು ಅಭಾವ ಉಂಟಾದರೆ ಜನ ಅಡಿಕೆಯನ್ನೇ ತಿನ್ನಬೇಕಾಗುತ್ತದೆ.

ಇದು ಕೇವಲ ಅನ್ನದ ಪ್ರಶ್ನೆ ಮಾತ್ರವೂ ಅಲ್ಲ. ಮರಮಟ್ಟುಗಳ ಪ್ರಶ್ನೆಯೂ ಹೌದು. ಹಲಸು, ಬೀಟೆ, ಮಾವಿನಂಥ ಗಟ್ಟಿಯಾದ ಮರಗಳು ಬೆಳೆಯಬೇಕಿದ್ದರೆ ಕನಿಷ್ಠ ನೂರು ವರ್ಷಗಳಾದರೂ ಅಗತ್ಯ. ಮನುಷ್ಯ ತಾನು ತನ್ನ ಕುಟುಂಬ ಎಂಬ ಸಂಕುಚಿತ ಮನೋಭಾವಬಿಡದಿದ್ದರೆ, ಕೇವಲ ತತ್ಕಾಲೀನ ಹಣದ ಲಾಭವನ್ನೇ ನೋಡಿಕೊಂಡಿದ್ದರೆ ಇಂಥ ಮರಗಳನ್ನು ಬೆಳೆಸುವುದು ಸಾಧ್ಯವೇ ಇಲ್ಲ. ಹಿಂದಿನ ಪರಿಸರದಲ್ಲಾದರೆ ಗಿಡಮೂಲಿಕೆಗಳು ಕಾಡಿನ ಭಾಗವಾಗಿ ಸಹಜ ರೀತಿಯಲ್ಲಿ ಬೆಳೆಯುತ್ತಿದ್ದುವು. ‘ಅಜ್ಜಿಮದ್ದು’ಗಳ ಸ೦ಪನ್ಮೂಲಗಳಿರುವುದು ಇಲ್ಲೇ. ಈಗ ಅಂಥ ಅಜ್ಜಿಯರೂ ಇಲ್ಲ, ಕಾಡುಗಳೂ ಇಲ್ಲ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರಂತೆ ಹಳ್ಳಿ ವೈದ್ಯರು ಇರಬಹುದಾದರೂ, ಪರಿಸರ ನಾಶದೊಂದಿಗೆ ಗಿಡಮೂಲಿಕೆಗಳ ಕುರಿತಾದ ಜ್ಞಾನವೂ ನಾಶವಾಗುತ್ತಿದೆ ಎನ್ನುವುದು ವಾಸ್ತವ. ಇದೆಲ್ಲಕ್ಕೂ ಕಾರಣ ನಮ್ಮ ತಾತ್ಕಾಲೀನ ಲಾಭದ ಸಮಯಸಾಧಕ ದೃಷ್ಟಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒರೆಸಿಬಿಡು ಬೇಕಾದರೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೬

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…