ನಮ್ಮ ಬಾಳಿನಲ್ಲಿ ಧರ್ಮಕ್ಕೆ ಅತ್ಯಂತ ಮಹತ್ವ ನೀಡಬೇಕು. ಶ್ರೀ ಬಸವಣ್ಣನವರು ಹೇಳಿದ ಹಾಗೆ ‘ದಯವಿಲ್ಲದ ಧರ್ಮದೇವುದಯ್ಯ’ ಎಂದು ತಮ್ಮ ವಚನಗಳಲ್ಲಿ ಕೇಳುತ್ತಾರೆ. ಧರ್ಮ ಎಂದರೆ ನಮಗೆ ಸನ್ಮಾರ್ಗದತ್ತ ನಡೆಸುವುದೇ ಧರ್ಮ ಎನಿಸುತ್ತದೆ. ಹೊರತುಪಡಿಸಿ ಮೂಢ ನಂಬಿಕೆಗಳೆಲ್ಲ ಆಚರಣೆದಲ್ಲಿ ತರುವುದೆಂದರ್ಥವಲ್ಲ. ಜಗತ್ತಿನ ಧರ್ಮಗಳಲ್ಲೆಲ್ಲ ಮಾನವೀಯ ಸಂಬಂಧಗಳನ್ನು ಜೋಡಿಸಿಕೊಂಡಿವೆ. ಎಲ್ಲಿ ಸತ್ಯ, ನ್ಯಾಯ, ಮಾನವೀಯತೆ ಇದೆಯೊ ಅದೇ ಧರ್ಮ. ಎಲ್ಲ ಧರ್ಮಗಳು ವಿನಯವನ್ನು ಕಟ್ಟಿಕೊಡುತ್ತವೆ.
ನಯಸೇನನ ‘ಧರ್ಮಾಮೃತಂ’ ದಲ್ಲಿ ‘ಧರ್ಮವೇ ತಂದೆ, ಧರ್ಮವೇ ಪ್ರಿಯೆ, ಧರ್ಮವೇ ಬಂಧು ವರ್ಗ, ಸದ್ಧರ್ಮವೇ ಮುತ್ತಜ್ಜ, ಉತ್ತಮ ಅಜ್ಜ, ಹೇಗೆ ನೋಡಿದರೂ ಧರ್ಮವೇ ಮುಖ್ಯ ಎಂಬುದಾಗಿ ಸುಖವನ್ನು ಬಯಸುವಾತನು ಪರಿಭಾವಿಸುತ್ತಿರಲಿ’ ಎಂದು ಹೇಳಿದೆ. ಹಾಗೆ ನಾವು ಸದಾ ಸದ್ಧರ್ಮ, ಸದ್ವಿನಯದಲ್ಲಿ ಜೀವನ ಕಳೆಯಲು ಪ್ರಯತ್ನಿಸಬೇಕು.
ಶೃದ್ಧೆ ಆಚರಣೆಯಲ್ಲಿ ಬಾಳುವುದು ಇನ್ನೊಬ್ಬರಿಗೆ ನೋವಾಗದಂತೆ ನೋಡಿಕೊಳ್ಳುವುದು ನಡೆ-ನುಡಿಯಲ್ಲಿ ಏಕಸಾಮ್ಯ ತುಂಬಿಕೊಳ್ಳುವುದು, ಮನುಷ್ಯ ಮನುಷ್ಯರಿಗೆ ಸಹಕರಿಸುವುದು ಧರ್ಮವಾಗುತ್ತದೆ. ಒಬ್ಬರು ಕಷ್ಟಕಾಲದಲ್ಲಿದ್ದಾಗ ಸಹಕರಿಸುವುದು, ದುಃಖದಲ್ಲಿದ್ದದವರಿಗೆ ಸಾಂತ್ವನ ಹೇಳುವುದು, ವಯಸ್ಸಾದವರಿಗೆ ಊರುಗೋಲಾಗಿ ಉಪಕಾರ ಮಾಡುವುದೆಲ್ಲವೂ ಸಹಜ ಧರ್ಮವಾಗುತ್ತದೆ.
ಇವತ್ತು ಲೋಕದಲ್ಲಿ ಕೊಲೆ-ಸುಲಿಗೆ, ಸುಳ್ಳು ಮೋಸ ಸ್ವಾರ್ಥ, ಸ್ವಹಿತಪರ ಆಶ್ವಾಸನೆಗಳು ಮಿತಿಮೀರಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡಲು ಸಿದ್ಧನಾಗಿಹನು, ಅವನು ಧರ್ಮವನ್ನು ಕಡೆಗಣಿಸಿಹನು.
ನಮ್ಮ ಪಾಪ ಕರ್ಮಗಳಿಗೆ ಅಂಕುಶವಾಗಿರಬೇಕಾದುದೇ ಧರ್ಮ ಎನಿಸುತ್ತದೆ. ಜಾತಿ-ಪಂಗಡಗಳ ಸೂತಕದಿಂದ ಮುಕ್ತವಾಗಿ ಪತನದತ್ತ ಜಾರುತ್ತಿರುವ ವ್ಯಕ್ತಿಯನ್ನು ಅಪ್ಪಿ ಸನ್ಮಾರ್ಗಕ್ಕೆ ಎಳೆಸುವುದೇ ಧರ್ಮವಾಗುತ್ತದೆ.
ಗಾಂಧೀಜಿಯವರು ನಮ್ಮಲ್ಲಿರುವ ದೋಷಗಳಿಗೆ ಮುಕ್ತವಾಗಿಸುವ ಕರ್ತವ್ಯಕ್ಕೆ ಧರ್ಮ ಎಂದು ಕರೆದರು. ಯಾರಲ್ಲಿ ಅಂತಃಕರಣ, ಪ್ರೀತಿ, ಅನುಕಂಪ ಇಲ್ಲವೋ ಅವರಲ್ಲಿ ಧರ್ಮವೆಂಬುದು ಕನ್ನಡಿಯೊಳಗಿನ ಗಂಟು ಎಂದು ಹೇಳಬಹುದು.
ನಮ್ಮ ಪೂರ್ವಜರು ಈ ಲೋಕದಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಲೆಂದೇ ಈ ಧರ್ಮವೆಂಬ ಕಟ್ಟುಪಾಡು ನಮಗೆ ಹಾಕಿದರು. ಎಲ್ಲ ಧರ್ಮಗಳು ಸಮಾನತೆ ಮತ್ತು ಸತ್ಯವನ್ನೇ ಸಾರಿವೆ. ಅಂಥ ಧರ್ಮವೇ ನಮ್ಮ ಬದುಕು ಬೆಳಗಿಸಲು ಕಾರಣವಾಗುತ್ತದೆ.
*****



















