ಪ್ರೀತಿಯ ಕಿಟಿ,
ನಮ್ಮ ಇಡೀ ಬಿ. ಕ್ಲಾಸು ಥರಥರ ನಡುಗುತ್ತ ಇತ್ತು. ಅದಕ್ಕೆ ಕಾರಣ ಸದ್ಯದಲ್ಲಿಯೇ ಟೀಚರಗಳ ಮೀಟಿಂಗು ನಡೆಯಲಿದೆ ಎಂಬುದು. ಯಾರನ್ನು ಮುಂದಿನ ತರಗತಿಗೆ ತಳ್ಳುವುದು ಯಾರನ್ನು ಅಲ್ಲಿಯೇ ಇಟ್ಟುಕೊಳ್ಳುವುದು ಎಂಬುದರ ಕುರಿತು ಊಹಾಪೋಹಗಳು ಇದ್ದವು. ಮೇಪ್-ಡಿ-ಜಂಗ್ ಮತ್ತು ನನಗೆ ದಿನವೂ ನಮ್ಮ ಹಿಂದೆ ಕುಳಿತುಕೊಳ್ಳುವ ವಿಮ್ ಮತ್ತು ಜೆಕ್ವೇಸ್‌ರ ಅವಸ್ಥೆ ನೋಡಿದಾಗ ಮಜವೆನ್ನಿಸುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ನೀನು ಮುಂದಿನ ಕ್ಲಾಸಿಗೆ ಹೋಗುವೀ, ಇಲ್ಲ ಹೋಗಲ್ಲ ಹೋಗುತ್ತಿ ಎಂದೆಲ್ಲ ಬೆಟ್ ಮಾಡಿ ಮಾಡಿ ರಜೆಗಾಗಿ ಬೇಕೆಂದು ಇಟ್ಟುಕೊಂಡಿದ್ದ ಫ್ಲಾರಿನ್‌ಗಳನ್ನೆಲ್ಲಾ [ಇಂಗ್ಲಿಷ ನಾಣ್ಯ] ಕಳೆದುಕೊಂಡರು. ಮೇಪ್ ಸುಮ್ಮನಿರುವಂತೆ ಕೇಳಿಕೊಂಡರೂ, ನನ್ನ ಕೋಪಕ್ಕೂ ಕೂಡಾ ಅವರನ್ನು ಸುಮ್ಮನಾಗಿಸಲಾಗಲಿಲ್ಲ.
ನನ್ನ ಪ್ರಕಾರ ತರಗತಿಯ ಕಾಲು ಭಾಗದಷ್ಟು ವಿದ್ಯಾರ್ಥಿಗಳು ಎಲ್ಲಿರುವರೋ ಅಲ್ಲೆ ಉಳಿಯುವರು. ಅವರೆಲ್ಲ ನಿಜಕ್ಕೂ ಕೋಗಿಲೆಯ ಸ್ವಭಾವದವರು. ಆಲಸಿಗಳು. ಆದರೆ ಟೀಚರುಗಳು ಈ ಭೂಮಿ ಮೇಲಿನ ಅತಿ ಶ್ರೇಷ್ಠ ಮನೋವಿಕಾರಿಗಳು. ಹಾಗಾಗಿ ಬಹುಶಃ ಅವರು ಸರಿದಾರಿಯಲ್ಲಿ ಒಮ್ಮೆಯಾದರೂ ತಿಕ್ಕಲುತನ ಮಾಡುವರು.
ನನಗೆ ನನ್ನ ಗೆಳತಿಯರ ಬಗ್ಗೆಯಾಗಲೀ, ನನ್ನ ಬಗ್ಗೆಯಾಗಲೀ ಹೆದರಿಕೆ ಇರಲಿಲ್ಲ. ಹೇಗಾದರೂ ಮಾಡಿ ಮುಂದೆ ಹೋಗುವೆವು. ಆದರೂ ನನಗೆ ನನ್ನ ಗಣಿತ ವಿಷಯದ ಬಗ್ಗೆ ಖಚಿತತೆ ಇರಲಿಲ್ಲ. ಹಾಗಿದ್ದೂ ನಾವು ತಾಳ್ಮೆಯಿಂದ ಕಾಯಬಲ್ಲೆವು. ಅಲ್ಲಿವರೆಗೆ ಒಬ್ಬರನ್ನೊಬ್ಬರೂ ತಮಾಷೆ ಮಾಡಿಕೊಳ್ಳುತ್ತೇವೆ.
ನನ್ನ ಒಂಬತ್ತು ಜನ ಗುರುಗಳೊಂದಿಗೆ ನಾನು ಚೆನ್ನಾಗಿಯೇ ಇದ್ದೆ. ಅದರಲ್ಲಿ ಏಳು ಜನ ಮಾಸ್ತರರಾಗಿದ್ದರೆ, ಇಬ್ಬರು ಮಹಿಳಾ ಟೀಚರ್‌ಗಳು. ಹಿರಿಯರಾದ ಕೆಪ್ಟರ್ ಗಣಿತದ ಮಾಸ್ಟರರಾಗಿದ್ದು, ಬಹಳ ಕಾಲದಿಂದ ನನ್ನೊಂದಿಗೆ ಸಿಟ್ಟಾಗಿದ್ದರು .ಕಾರಣ ನಾನು ತರಗತಿಗಳಲ್ಲಿ ಬಹಳೇ ಮಾತನಾಡುತ್ತಿದ್ದೆ. ಅದಕ್ಕಾಗಿ ವಾಚಾಳಿ ಪೆಟ್ಟಿಗೆ ಎಂಬ ವಿಷಯದ ಮೇಲೆ ಪ್ರಬಂಧ ಬರೆಯಬೇಕಾಗಿತ್ತು. ವಾಚಾಳಿ ಪೆಟ್ಟಿಗೆ! ನಾನಿದರ ಬಗ್ಗೆ ಏನಾದರೂ ಬರೆಯಬಲ್ಲೆನೆ? ಆನಂತರ ಬಿಡಿಸಿದರಾಯಿತೆಂದು ನಿರ್ಧರಿಸಿ, ಅದನ್ನು ನನ್ನ ನೋಟ್ ಪುಸ್ತಕದಲ್ಲಿ ಬರೆದು ತೆಪ್ಪಗಾದೆ.
ಆ ದಿನ ಸಂಜೆ ನನ್ನ ಹೋಮ್ ವರ್ಕ್‌ಗಳನ್ನು ಮುಗಿಸಿ ಕೂತಾಗ ಅಕಸ್ಮಾತ್ತಾಗಿ ನನಗೆ ನೋಟ್ ಪುಸ್ತಕದ ಮೇಲೆ ಬರೆದ ಆ ವಿಷಯ ಕಂಡಿತು. ನನ್ನ ಫೌಂಟನ್ ಪೆನ್ನಿನ ತುದಿ ಚೀಪುತ್ತಾ ಯೋಚಿಸಿದೆ. ಬೇಕಾದಂತೆ ಬರೆಯಲು ಅವಕಾಶವಿರುವ ಸಂಗತಿಗಳ ಬಗ್ಗೆ ದೊಡ್ಡ ದೊಡ್ಡ ಪದಗಳಲ್ಲಿ ಯಾರು ಬೇಕಾದರೂ ಬರೆಯಬಲ್ಲರು. ಆದರೆ ಅದೇ ಮಾತಿನ ಅಗತ್ಯತೆಯನ್ನು ಸಂದೇಹಗಳಿಗೆ ಮೀರಿ ಸಾಬೀತುಪಡಿಸುವುದು ಕಷ್ಟಕರ. ತುಂಬಾ ಯೋಚಿಸಿದೆ. ನಂತರ ಒಮ್ಮೆಗೆ ಹೊಳೆದ ವಿಚಾರವನ್ನು ನನಗೆ ನಿಗದಿಪಡಿಸಿದ ಮೂರು ಬದಿಗಳಲ್ಲಿ ತುಂಬಿಸಿದೆ. ಆನಂತರ ಸಂಪೂರ್ಣ ತೃಪ್ತಳಾದೆ.
ನನ್ನ ವಾದವು ಹೀಗಿತ್ತು. ಮಾತನಾಡುವುದು ಹೆಣ್ಣುಮಕ್ಕಳ ಗುಣಲಕ್ಷಣ. ಅದನ್ನು ನನ್ನ ನಿಯಂತ್ರಣದಲ್ಲಿಡಲು ನಾನು ಬಹಳ ಪ್ರಯತ್ನಿಸುವೆ. ಆದರೆ ನನಗೆ ಮಾತನಾಡದೆ ಇರಲಾಗದು. ನನ್ನ ತಾಯಿ ಕೂಡಾ ನನಗಿಂತಲೂ ಹೆಚ್ಚು ಮಾತನಾಡುವವರು.
ವಂಶಪಾರಂಪರ್‍ಯದಿಂದ ಬಂದ ಇಂತಹ ಗುಣಗಳ ಬಗ್ಗೆ ನಾವೇನು ಮಾಡಲಾದೀತು? ನನ್ನ ತರ್ಕವನ್ನು ನೋಡಿ ಕೆಪ್ಟರ್ ನಗಬೇಕಿತ್ತು. ಆದರೆ ಮುಂದಿನ ಪಾಠದಲ್ಲಿ ನಾನದನ್ನು ಮುಂದಿಡುತ್ತಿದ್ದಂತೆ ಇನ್ನೊಂದು ನಿಬಂಧ ಬರೆಯುವ ಜವಾಬ್ದಾರಿ ಬಿತ್ತು. ಈ ಸಲ ಅದು ಗುಣಪಡಿಸಲಾಗದ ವಾಚಾಳಿ ಪೆಟ್ಟಿಗೆ ಎಂಬುದಾಗಿತ್ತು. ಅದನ್ನು ನನಗೆ ಬರೆಯಲು ಹೇಳಿದ ಕೆಪ್ಟರ್ ಎರಡು ತರಗತಿಗಳವರೆಗೆ ದೂರು ಹೇಳಲಿಲ್ಲ. ಆದರೆ ಅದು ಮೂರನೇ ಪಾಠದ ದಿನ ಅವರಿಗೆ ತಡೆಯಲಾಗಲಿಲ್ಲ. ಆನ್ ತರಗತಿಯಲ್ಲಿ ಮಾತನಾಡಿದ್ದಕ್ಕೆ ಶಿಕ್ಷೆಯಾಗಿ ಕ್ವೇಕ್ ಕ್ವೇಕ್ ಕ್ವೇಕ್ ಸೇಯ್ಸ್ ನಟರಬೀಕ್ ಎಂಬುದರ ಬಗ್ಗೆ ಪ್ರಬಂಧ ಬರೆದು ತರುವಂತೆ ಹೇಳುತ್ತಲೇ ಇಡೀ ಕ್ಲಾಸು ಬಿದ್ದು ಬಿದ್ದು ನಕ್ಕಿತು. ನಾನೂ ನಗಬೇಕಾಗಿತ್ತು. ಅಲ್ಲದೇ ಈಗಾಗಲೇ ಈ ವಿಷಯದ ಮೇಲಿನ ನನ್ನ ಸಾಮರ್ಥ್ಯ ಕಡಿಮೆಯಾಗಿತ್ತು. ನಾನೀಗ ಬೇರೆಯದನ್ನೇ ಯೋಚಿಸಬೇಕಿತ್ತು. ಸಂಪೂರ್ಣ ಮೂಲಸಂಗತಿಯುಳ್ಳಂತಹ ಏನನ್ನಾದರೂ. ನಾನು ಅದೃಷ್ಟವಂತಳಾಗಿದ್ದೆ. ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದ ನನ್ನ ಗೆಳತಿ ಸ್ಯಾನ್ ನನಗೆ ಇಡೀ ಪ್ರಬಂಧವನ್ನು ಕವಿತೆಯಲ್ಲಿ ಕಟ್ಟಿಕೊಡಲು ಸಹಾಯ ಮಾಡಿದಳು. ನನಗೆ ಬಹು ಆನಂದವಾಗಿತ್ತು. ಕೆಪ್ಟರ್ ನನಗೆ ಇಂತಹ ಅಸಂಬದ್ಧ ವಿಷಯವನ್ನು ಬರೆಯಲು ನೀಡಿ ಮೂರ್ಖಳನ್ನಾಗಿ ಮಾಡಬಯಸಿದ್ದರು. ಆದರೆ ನಾನು ಸ್ವಯಂ ಬಲದಿಂದ ಗೆದ್ದು, ಕೆಪ್ಟರ್‌ರನ್ನು ಇಡೀ ಕ್ಲಾಸಿನ ಮುಂದೆ ತಮಾಷೆಯ ವಸ್ತುವನ್ನಾಗಿ ಮಾಡುವವಳಿದ್ದೆ. ಬರೆದ ಕವಿತೆ ತುಂಬಾ ಚೆನ್ನಾಗಿತ್ತು. ಅದು ಮೂರು ಮುದ್ದು ಮರಿಗಳನ್ನು ಹೊಂದಿದ ತಾಯಿ ಹಂಸ ಮತ್ತು ತಂದೆ ಹಂಸದ ಕುರಿತಾಗಿತ್ತು. ಅದು ವಾಚಾಳಿಗಳಾಗಿದ್ದ ಕಾರಣ ಮರಿಬಾತುಗಳು ತಂದೆ ಹಂಸನಿಂದ ಮನಬಂದಂತೆ ಥಳಿಸಲ್ಪಟ್ಟ ಸಂಗತಿಯಾಗಿತ್ತು. ಪುಣ್ಯಕ್ಕೆ ಕೆಪ್ಟರ್ ಈ ತಮಾಷೆಯನ್ನು ನೋಡಿ, ತರಗತಿಯಲ್ಲಿ ಆ ಪದ್ಯವನ್ನು ಜೋರಾಗಿ ಓದಿ ಕಮೆಂಟು ಮಾಡಿದರು. ಅದನ್ನು ಉಳಿದ ತರಗತಿಗಳಿಗೂ ಹೇಳಿದರು.
ಅಂದಿನಿಂದ ನನಗೆ ತರಗತಿಯಲ್ಲಿ ಮಾತನಾಡಲು ಅನುಮತಿ ಇತ್ತು. ಮತ್ತೆಂದೂ ಹೆಚ್ಚಿನ ಕೆಲಸ ಸಿಗಲಿಲ್ಲ. ಅಲ್ಲದೇ ಕೆಪ್ಟರ್ ಯಾವಾಗಲೂ ಆ ವಿಚಾರವಾಗಿ ತಮಾಷೆ ಮಾಡುತ್ತಲೇ ಇರುತ್ತಾರೆ.
ನಿನ್ನ
ಆನ್
*****















