Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೮ ಜುಲೈ ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೮ ಜುಲೈ ೧೯೪೨

ಪ್ರೀತಿಯ ಕಿಟಿ,

ರವಿವಾರ ಮತ್ತು ಇವತ್ತಿನ ನಡುವೆ ವರ್ಷಗಳೇ ಉರುಳಿಹೋದಂತೆನ್ನಿಸಿತು. ಎಷ್ಟೊಂದು ಸಂಗತಿಗಳು ನಡೆದುಹೋದವು. ಇಡೀ ಜಗತ್ತು ತಿರುವು- ಮುರುವಾದಂತೆ ಕಾಣಿಸುತ್ತಿದೆ. ಆದರೆ ನಾನಿನ್ನೂ ಜೀವಂತ. ಕಿಟಿ, ಡ್ಯಾಡಿ ಹೇಳುವಂತೆ ಆ ಭಾವ ಮುಖ್ಯ ಅಲ್ಲವೇ?

ಹೌದು! ನಾನಿನ್ನೂ ಬದುಕಿದ್ದೇನೆ. ನಿಜ. ಅದು ಎಲ್ಲಿ ಮತ್ತು ಹೇಗೆ ಬದುಕುತ್ತಿದ್ದೇನೆ ಎಂದು ಕೇಳಬೇಡ. ನಿನಗೊಂದು ಶಬ್ದವೂ ಅರ್ಥವಾಗದು. ಭಾನುವಾರದ ಮಧ್ಯಾಹ್ನ ಏನು ನಡೆಯಿತು ಎಂಬಲ್ಲಿಂದ ಪ್ರಾರಂಭಿಸುತ್ತೇನೆ.

ಅದು ಮೂರು ಗಂಟೆಯ ಸಮಯ. [ಹ್ಯಾರಿ ಆಗಷ್ಟೇ ಹೊರಟು ಹೋಗಿದ್ದ. ಆದರೆ ಪುನಃ ಸ್ವಲ್ಪ ನಂತರ ಬರುವವನಿದ್ದ.] ಯಾರೋ ಮುಂಬಾಗಿಲಿನ ಕರೆಗಂಟೆ ಬಾರಿಸಿದರು. ಬಿಸಿಲಿಗೆ ವರಾಂಡಾದಲ್ಲಿ ಪುಸ್ತಕವೊಂದನ್ನು ಓದುತ್ತಾ ನಾನು ಆಲಸಿಯಾಗಿ ಬಿದ್ದುಕೊಂಡಿದ್ದೆ. ಹಾಗಾಗಿ ಆ ಸದ್ದು ನನಗೆ ಕೇಳಿಸಲಿಲ್ಲ. ಸ್ವಲ್ಪ ಹೊತ್ತಿಗೆ ಮಾರ್‍ಗೊಟ್ ತೀರಾ ಉದ್ವಿಗ್ನಗೊಂಡಂತೆ ಅಡುಗೆ ಕೋಣೆಯ ಬಾಗಿಲಲ್ಲಿ ಕಾಣಿಸಿಕೊಂಡಳು. ಡ್ಯಾಡಿಗೆ ಎಸ್. ಎಸ್. ಕಡೆಯಿಂದ ಕಾಲ್ ಅಪ್ ನೋಟೀಸು ಕಳಿಸಿದ್ದಾರೆ ಆಕೆ ಪಿಸುಗುಟ್ಟಿದಳು. “ಮಮ್ಮಿ ಈಗಾಗಲೇ ವ್ಯಾನ್ಡ್ಯಾನ್‌ರನ್ನು ಭೇಟಿಯಾಗಲು ಹೋಗಿದ್ದಾರೆ. [ವ್ಯಾನ್ಡ್ಯಾನ್ ಡ್ಯಾಡಿಯೊಂದಿಗೆ ವ್ಯವಹಾರದಲ್ಲಿ ಕೆಲಸ ಮಾಡುತ್ತಾರೆ] ಇದು ನನಗೆ ದೊಡ್ಡ ಆಘಾತ. ಕಾಲ್ ಅಪ್ ಅಂದರೆ ಸೈನ್ಯಕ್ಕೆ ಸೇರಲು ಅಪ್ಪಣೆ ಕೊಡುವುದು ಎಂದರೆ ಎಲ್ಲರಿಗೂ ಗೊತ್ತು. ಸೆರೆ ಶಿಬಿರಗಳು, ಏಕಾಂಗಿ ಜೈಲು ಕೋಣೆಗಳು ಕಣ್ಣೆದಿರು ಬಂದವು- ಡ್ಯಾಡಿ ಆ ನರಕಕ್ಕೆ ಹೋಗಲು ನಾವು ಬಿಡಬೇಕೇ? ನಾವಿಬ್ಬರೂ ಕಾಯುತ್ತ ನಿಂತಾಗ ಮಾರಗೋಟ್
“ಖಂಡಿತವಾಗಿ ಡ್ಯಾಡಿ ಅಲ್ಲಿಗೆ ಹೋಗಕೂಡದು” ದೃಢವಾಗಿ ನುಡಿದಳು. “ನಾಳೆ ನಾವು ನಮ್ಮ ಅಡಗು ತಾಣಗಳತ್ತ ಹೋಗಬೇಕೆ ಬೇಡವೇ? ಎಂಬುದನ್ನು ಚರ್ಚಿಸಲು ಮಮ್ಮಿ ವ್ಯಾನ್ಡ್ಯಾನ್‌ನಲ್ಲಿಗೆ ಹೋಗಿದ್ದಾರೆ. ವ್ಯಾನ್ಡ್ಯಾನ್ ಕೂಡ ನಮ್ಮೊಂದಿಗೆ ಬರುತ್ತಾರೆ. ನಾವೆಲ್ಲ ಸೇರಿ ಈಗ ಏಳು ಜನರಾಗುವೆವು” ನಿಶ್ಯಬ್ಧ. ನಮಗೆ ಮತ್ತೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಜೂಡ್ಸೆ ಇನ್ವೆಲೈಡ್ನಲ್ಲಿ ಕೆಲವು ವೃದ್ಧರನ್ನು ಭೇಟಿಯಾಗುತ್ತಿದ್ದ, ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪವೇ ತಿಳಿದಿದ್ದ ಡ್ಯಾಡಿ ಕುರಿತು ಚಿಂತಿಸುತ್ತಾ, ಒತ್ತಡ ಮತ್ತು ಸಂದಿಗ್ಧತೆಯಲ್ಲಿ ಅಮ್ಮನಿಗಾಗಿ ಕಾಯುತ್ತಿದ್ದೆವು. ಇವೆಲ್ಲವೂ ನಮ್ಮನ್ನು ಮೂಕ ಹಾಗೂ ಭಯಭೀತರನ್ನಾಗಿಸಿದ್ದವು.

ಒಮ್ಮೆಲೆ ಕರೆಗಂಟೆ ಪುನಃ ಬಾರಿಸಿತು. “ಅದು ಹ್ಯಾರಿ” ನಾನೆಂದೆ. “ಬಾಗಿಲು ತೆಗಿಬೇಡ” ಎಂದು ಮಾರ್‍ಗೊಟ್ ನನ್ನ ತಡೆದಳು. ಆದರೆ ಅದರ ಅಗತ್ಯವಿಲ್ಲದಂತೆ ಮಮ್ಮಿ ಮತ್ತು ವ್ಯಾನ್ಯ್ಡಾನ್ ಕೆಳ ಮೆಟ್ಟಿಲಲ್ಲಿ ಹ್ಯಾರಿಯೊಂದಿಗೆ ಮಾತನಾಡುವುದು ಕೇಳಿಸಿತು. ನಂತರ ಅವರು ಒಳಬಂದು, ಹಿಂದಿನಿಂದ ಬಾಗಿಲನ್ನು ಮುಚ್ಚಿದರು. ಪ್ರತಿಸಲ ಬೆಲ್ ಬಾರಿಸಿದಾಗಲೂ ಮಾರಗೋಟ್ ಅಥವಾ ನಾನು, ಅದು ಡ್ಯಾಡಿಯೇ ಎಂದು ನೋಡಲು ನಿಧಾನಕ್ಕೆ ಕೆಳಗೆ ತೆವಳಿ ಹೋಗಬೇಕಿತ್ತು. ಬೇರೆಯವರಿಗೆ ನಾವು ಬಾಗಿಲು ತೆರೆಯುತ್ತಿರಲಿಲ್ಲ.

ಮಾರ್‍ಗೊಟ್ ಮತ್ತು ನನ್ನನ್ನು ಕೋಣೆಯಿಂದ ಹೊರಗೆ ಕಳುಹಿಸಿದರು. ವ್ಯಾನ್ಡ್ಯಾನ್ ಮಮ್ಮಿಯೊಂದಿಗೆ ಗುಪ್ತವಾಗಿ ಮಾತನಾಡಬಯಸಿದರು. ನಮ್ಮ ಮಲಗುವ ಕೋಣೆಯಲ್ಲಿ ನಾವಿಬ್ಬರೂ ಮಾತ್ರ ಜೊತೆಯಲ್ಲಿ ಇರುವಾಗ ಮಾರ್‍ಗೊಟ್ ಕಾಲ್ ಅಪ್ ಇರುವುದು ಡ್ಯಾಡಿಗಲ್ಲವೆಂದು ಅದು ತನಗೆಂದೂ ಹೇಳಿದಳು. ಈಗ ನಾನು ಹಿಂದೆಂದಿಗಿಂತಲೂ ಹೆಚ್ಚು ಹೆದರಿದ್ದೆ. ಅಳಲು ಶುರುಮಾಡಿದೆ. ಮಾರ್‍ಗೊಟ್ ಹದಿನಾರರ ಹುಡುಗಿ. ಅವರು ಆ ವಯಸ್ಸಿನ ಹುಡುಗಿಯರನ್ನು ಏಕಾಂಗಿಯಾಗಿ ಕರೆದೊಯ್ಯುವರೇ? ಆದರೆ ದೇವರೇ ಆಕೆ ಎಲ್ಲಿಗೂ ಹೋಗುತ್ತಿಲ್ಲ. ಮಮ್ಮಿ ಹಾಗೇ ಆಕೆಗೆ ಹೇಳಿದ್ದಳು. ಗುಪ್ತವಾಸಕ್ಕೆ ಹೋಗುವ ಕುರಿತು ಡ್ಯಾಡಿ ಹೇಳಿದ್ದು ಇದಕ್ಕೆ ಇರಬೇಕು.

ಗುಪ್ತವಾಸಕ್ಕೆ – ನಾವೆಲ್ಲಿಗೇ ಹೋಗುವುದು, ಪಟ್ಟಣಕ್ಕೋ ಹಳ್ಳಿಗೋ, ಯಾವುದಾದರೂ ಒಂದು ಮನೆಗೋ, ಇಲ್ಲ ಕಾಟೇಜಿಗೋ ಯಾವಾಗ, ಹೇಗೆ, ಎಲ್ಲಿ?

ಈ ಎಲ್ಲ ಪ್ರಶ್ನೆ ಕೇಳಲು ನನಗೆ ಅನುಮತಿ ಇರಲಿಲ್ಲ. ಆದರೆ ಆ ಪ್ರಶ್ನೆಗಳನ್ನು ನನ್ನ ತಲೆಯಿಂದ ಹೊರಗೋಡಿಸಲು ನನ್ನಿಂದಾಗದು. ಮಾರ್‍ಗೊಟ್ ಮತ್ತು ನಾನು ನಮ್ಮ ತೀರಾ ಮಹತ್ವದ ವಸ್ತುಗಳನ್ನು ಶಾಲಾ ಬ್ಯಾಗಿಗೆ ತುಂಬಲು ಶುರುಮಾಡಿದೆವು. ಮೊದಲ ವಸ್ತುವೆಂದರೆ ಅದು ಈ ಡೈರಿ. ನಂತರ ಹೇರ್ ಕರ್ಲರ್, ಕೈಗವಸಗಳು, ಶಾಲಾ ಪುಸ್ತಕಗಳು, ಬಾಚಣಿಕೆ, ಹಳೆಯ ಪತ್ರಗಳು. ನಾವು ಗುಪ್ತವಾಸಕ್ಕೆ ಹೋಗುತ್ತಿದ್ದೇವೆ ಎಂಬ ಆಲೋಚನೆಯೊಂದಿಗೆ ನಾನು ನನ್ನ ಇಷ್ಟದ ವಸ್ತುಗಳನ್ನು ಒಳತುರುಕಿದೆ. ನನಗೆ ಬೇಸರವಿರಲಿಲ್ಲ. ನನಗೆ ಬಟ್ಟೆಗಳಿಗಿಂತ ನೆನಪುಗಳು ಮುಖ್ಯವಾಗಿದ್ದವು.

ಕೊನೆಗೂ ಐದು ಗಂಟೆಗೆ ಡ್ಯಾಡಿ ಬಂದರು. ಕೂಫಸ್‌ಗೆ ಸಂಜೆ ಬರಲಿದ್ದಾರೆಯೇ ಎಂದು ತಿಳಿಯಲು ಅವರಿಗೆ ಫೋನಾಯಿಸಿದೆವು. ವ್ಯಾನ್ಡ್ಯಾನ್ ಮೇಪ್‌ಳನ್ನು ಕರೆತಂದರು. ಮೇಪ್ ವ್ಯವಹಾರದಲ್ಲಿ ಡ್ಯಾಡಿ ಜೊತೆಗೆ ೧೯೩೩ರಿಂದಲೂ ಇದ್ದಳು. ಹಾಗೂ ಅತಿ ಆತ್ಮೀಯ ಗೆಳತಿಯಾಗಿದ್ದಳು. ಆಕೆಯ ಹೊಸ ಗಂಡ ಹ್ಯಾಂಕ್ ಕೂಡಾ. ಮೇಪ್ ಬಂದವಳು ಕೆಲವು ಶೂಗಳನ್ನು, ಡ್ರೆಸ್‌ಗಳನ್ನು, ಕೋಟುಗಳನ್ನು, ಒಳ‌ಉಡುಪುಗಳನ್ನು ಮತ್ತು ಕಾಲು ಚೀಲಗಳನ್ನು ಸಂಜೆಯೊಳಗೆ ವಾಪಸ್ಸು ತರುವುದಾಗಿ ಹೇಳಿ ತನ್ನ ಬ್ಯಾಗಿನಲ್ಲಿ ಕೊಂಡೊಯ್ದಳು. ನಂತರ ಪುನಃ ಮನೆಯಲ್ಲಿ ಮೌನ ಕವಿಯಿತು. .ನಮಗ್ಯಾರಿಗೂ ಏನನ್ನಾದರೂ ತಿನ್ನಬೇಕೆಂದು ಅನ್ನಿಸಲಿಲ್ಲ. ಸೆಖೆ ಬಹಳ ಇತ್ತು. ಎಲ್ಲವೂ ವಿಚಿತ್ರವಾಗಿತ್ತು. ನಮ್ಮ ದೊಡ್ಡ ಮಹಡಿಯ ಕೋಣೆಯನ್ನು ಆ ನಿರ್ಧಿಷ್ಟ ಸಂಜೆ ಏನೂ ಇಲ್ಲದೇ ನಮ್ಮ ಮುಂದೆ ನಿಂತ ಗೌಡ್ಸ್ಮಿತ್ ಎಂಬ ಮೂವತ್ತು ವರ್ಷದ ವಿಚ್ಛೇದಿತನಿಗೆ ಬಿಟ್ಟುಕೊಡಲಾಯಿತು.

ಆತನೊಂದಿಗೆ ಕಠೋರವಾಗಿ ವರ್ತಿಸದೇ ಅವನಿಂದ ಸಹಜವಾಗಿ ಬಿಡುಗಡೆ ಸಾಧ್ಯವಿರಲಿಲ್ಲ. ಆತ ಸುಮಾರು ಹತ್ತು ಗಂಟೆಯವರೆಗೂ ನಮಗೆ ಜೋತು ಬಿದ್ದಿದ್ದ. ಹನ್ನೊಂದು ಗಂಟೆಗೆ ಮೇಪ್ ಮತ್ತು ಹ್ಯಾಂಕ್ ವ್ಯಾನ್ ಸೆಂಟನ್ ವಾಪಸಾದರು. ಮತ್ತೊಮ್ಮೆ ನಮ್ಮ ಶೂಗಳು, ಕಾಲುಚೀಲಗಳು, ಪುಸ್ತಕಗಳು, ಒಳುಡುಪುಗಳು ಮೇಪ್‌ಳ ಬ್ಯಾಗಿನೊಳಗೆ ಹ್ಯಾಂಕ್‌ನ ದೊಡ್ಡ್ ಕಿಸೆಯೊಳಗೆ ಮರೆಯಾದವು. ಹನ್ನೊಂದೂವರೆಗೆ ಅವರು ಕೂಡಾ ಮರೆಯಾದರು. ನಾನು ತೀರಾ ದಣಿದಿದ್ದೆ, ನನ್ನ ಈ ಹಾಸಿಗೆಯಲ್ಲಿ ಇದು ನನ್ನ ಕೊನೆಯ ರಾತ್ರಿಯಾಗಲಿದೆ ಎಂಬುದು ನನಗೆ ತಿಳಿದಿತ್ತು. ಆನಂತರ ಕೂಡಲೇ ನಾನು ನಿದ್ದೆ ಮಾಡಿದೆ. ಮಾರನೇ ದಿನ ಬೆಳಿಗ್ಗೆ ಐದೂವರೆಗೆ ಅಮ್ಮ ನನ್ನನ್ನು ಎಬ್ಬಿಸುವವರೆಗೂ ನಾನು ಏಳಲಿಲ್ಲ. ಅದೃಷ್ಟಕ್ಕೆ ರವಿವಾರದಂತೆ ಆ ದಿನವೂ ಅಂಥ ಸೆಖೆ ಇರಲಿಲ್ಲ. ಬೆಚ್ಚಗಿನ ಮಳೆ ದಿನವಿಡಿ ಸಣ್ಣದಾಗಿ ಬಿಡದೇ ಬಿತ್ತು. ನಾವು ಉತ್ತರ ಧ್ರುವಕ್ಕೆ ಹೋಗುತ್ತಿವವರಂತೆ ರಾಶಿರಾಶಿ ಬಟ್ಟೆಗಳನ್ನು ತೊಟ್ಟುಕೊಂಡೆವು. ಅದರ ಏಕೈಕ ಕಾರಣ ನಮ್ಮೊಂದಿಗೆ ಬಟ್ಟೆಗಳನ್ನು ಹೆಚ್ಚು ತೆಗೆದುಕೊಂಡು ಹೋಗುವುದು. ನಮ್ಮ ಪರಿಸ್ಥಿತಿಯಲ್ಲಿ ಯಾವೊಬ್ಬ ಯಹೂದಿಯೂ ಸೂಟಕೇಸ್ ತುಂಬಾ ಬಟ್ಟೆಗಳ ಜೊತೆ ಹೊರಹೋಗುವ ಕನಸನ್ನು ಕಂಡಿರಲಾರ. ನನ್ನ ಬಳಿ ಎರಡು ನಡುವಂಗಿ, ಮೂರು ಜೊತೆ ಪ್ಯಾಂಟುಗಳು, ಒಂದು ಡ್ರೆಸ್, ಸ್ಕರ್ಟ, ಬೇಸಿಗೆಯ ಜಾಕೆಟ್ ಕೋಟ್, ಎರಡು ಜೊತೆ ಕಾಲುಚೀಲ, ಲೇಸ್ ಶೂಗಳು, ಉಣ್ಣೆಯ ಕ್ಯಾಪ್ ಮತ್ತು ಹಲವಾರು ವಸ್ತುಗಳಿದ್ದವು.. ನಾವು ಹೊರಡುವ ಮುನ್ನ ನನಗೆ ನಿಜಕ್ಕೂ ಉಸಿರುಗಟ್ಟಿದಂತಾಗುತ್ತಿತ್ತು. ಆದರೆ ಯಾರೊಬ್ಬರೂ ಅದನ್ನು ವಿಚಾರಿಸಲಿಲ್ಲ.

ಮಾರ್‍ಗೊಟ್ ತನ್ನ ಸ್ಕೂಲ್ ಬ್ಯಾಗಿನಲ್ಲಿ ಪುಸ್ತಕಗಳನ್ನು ತುಂಬಿದಳು. ತನ್ನ ಬೈಸಿಕಲ್ ತಂದು, ಮೇಪ್‌ಳ ಹಿಂದೆ ಹಿಂದೆ ಗೊತ್ತಿಲ್ಲದ ಕಡೆ ತನ್ನ ಸೈಕಲ್ಲು ಓಡಿಸಿದಳು. ನಾನು ಅಷ್ಟು ದೂರದವರೆಗೆ ನೋಡುತ್ತಲೇ ಇದ್ದೆ. ನನಗೆ ಮಾತ್ರ ನಮ್ಮ ಗೌಪ್ಯ ಅಡಗುತಾಣ ಎಲ್ಲಿರಬಹುದೆಂದು ಇನ್ನೂ ಗೊತ್ತಿಲ್ಲ. ಏಳುವರೆಗೆ ನಾವು ಹೊರಬೀಳುತ್ತಲೇ ಹಿಂದಿನಿಂದ ಬಾಗಿಲು ಹಾಕಿಕೊಂಡಿತು. ನನ್ನ ಸಣ್ಣ ಬೆಕ್ಕು ಮೂರ್ಜೆಗೆ, ಅದೊಂದು ಜೀವಕ್ಕೆ ಮಾತ್ರ ನಾನು ವಿದಾಯ ಹೇಳಿದೆ. ನೆರೆಮನೆಯಲ್ಲಿ ಅವಳಿನ್ನು ಚೆನ್ನಾಗಿರಬಹುದು. ಇದೆಲ್ಲವೂ ಮಿ. ಗೌಡ್ಸ್ಮಿತ್‌ಗೆ ಬರೆದ ಪತ್ರದಲ್ಲಿದೆ.

ಬೆಕ್ಕಿಗಾಗಿ ಒಂದು ಪೌಂಡ ಮಾಂಸ ಕಿಚನ್‌ನಲ್ಲಿತ್ತು. ಟೇಬಲ್ಲುಗಳ ಮೇಲೆ ಹರಡಿ ಬಿದ್ದ ಬ್ರೇಕಫಾಸ್ಟನ ತುಂಡುಗಳು ಬಿಚ್ಚಿದ ಹಾಸಿಗೆಗಳು, ಎಲ್ಲವೂ ನಾವು ಚೆಲ್ಲಾಪಿಲ್ಲಿಯಾಗಿ ಬಿಟ್ಟುಹೋದ ಸಂಗತಿಗಳಿಗೆ ಸಾಕ್ಷಿಯಾಗಿದ್ದವು. ಆದರೆ ನಾವು ಆ ಯಾವ ಅನಿಸಿಕೆಗಳಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬದಲಿಗೆ ನಾವು ಪಾರಾಗಬೇಕಿತ್ತು, ಸುರಕ್ಷಿತವಾಗಿ ಹೋಗಬೇಕಾದಲ್ಲಿ ಮುಟ್ಟಬೇಕಿತ್ತು. ಬೇರೇನೂ ಇರಲಿಲ್ಲ. ಇನ್ನು ನಾಳೆಗೆ,..

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...