ರಾಜ ಒಡೆಯರವರು ಶ್ರೀರಂಗಪಟ್ಟಣದಲ್ಲಿದ್ದ ತಿರುಮಲ ರಾಯನ ಆಸ್ಥಾನಕ್ಕೆ ಹೋಗುತ್ತಲಿರಬೇಕಾಗಿತ್ತು. ಏಕೆಂದರೆ ಆಗಿನಕಾಲದ ಪಾಳಯಗಾರರೂ ಒಡೆಯರೂ ವಿಜಯನಗರದ ಅರಸರಿಗೆ ಅಧೀನರಾಗಿದ್ದು ಶ್ರೀರಂಗಪಟ್ಟಣದಲ್ಲಿದ್ದ ಅವರ ಪ್ರತಿನಿಧಿಯ ವಶವರ್ತಿಗಳಾಗಿದ್ದರು. ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಒಡೆಯರೂ ಪಾಳಯಗಾರರೂ ಪರಸ್ಪರ ಸೇರಿ ಜಗಳವಾಡುವುದು ಸಾಮಾನ್ಯವಾಗಿತ್ತು.
ಶ್ರೀರಂಗಪಟ್ಟಣಕ್ಕೆ ರಾಜ ಒಡೆಯರು ತಮ್ಮ ಮೈಗಾವಲಿನ ಭಟರೊಡನೆಯೂ ವಾಲಗ ಮೇಳದೊಡನೆಯೂ ಹೊರಟರು. ದಾರಿಯಲ್ಲಿ ಕೆಂಬಲ್ಲೆಂಬ ಗ್ರಾಮದ ಒಡೆಯನೂ ಅದೇ ರೀತಿಯಲ್ಲಿ ಮೇಳತಾಳಗಳೊಡನೆ ಹೋಗುತ್ತಿದ್ದನು. ರಾಜ ಒಡೆಯರಿಗೆ ಇದು ಅವಮಾನವಾಗಿ ತೋರಿತು. “ಮೇಳತಾಳಗಳೊಡನೆ ನಮ್ಮೆದುರಿಗೆ ಯಾರು ಹೋಗುತ್ತಿರುವವರು” ಎಂದು ಕೇಳಲು “ಕೆಂಬಲ್ಲಿನ ಒಡೆಯರು” ಎಂಬ ಉತ್ತರ ಬಂತು. ಕೂಡಲೆ ರಾಜ ಒಡೆಯರು ತಮ್ಮ ವಾದ್ಯಗಳನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದರು. ಸದ್ದಿಲ್ಲದೆ ಶ್ರೀರಂಗಪಟ್ಟಣವನ್ನು ಸೇರಿ ತಿರುಮಲರಾಯರ ಆಸ್ಥಾನವನ್ನು ಹೊಕ್ಕರು. ಇದನ್ನು ಕಂಡು ತಿರುಮಲರಾಯರು “ಇದೇನು ರಾಜ ಒಡೆಯರೇ ತಮ್ಮ ಪದವಿಗೆ ತಕ್ಕಂತೆ ಮೇಳತಾಳಗಳೊಡನೆ ಪ್ರವೇಶಮಾಡದೆ ಮೌನದಿಂದ ಬಂದಿರಿ?” ಎಂದು ಕೇಳಲು ರಾಜ ಒಡೆಯರು ಕ್ರೋಧದಿಂದ “ಮೇಳತಾಳಗಳನ್ನು ನಮಗಿಂತಲೂ ಕೀಳಾದವರೂ ಇಟ್ಟುಕೊಳ್ಳುವಾಗ ಅದರಿಂದ ನಮ್ಮ ಪದವಿಗೇನು ಗೌರವ?” ಎಂದು ನುಡಿದರು. ಇದನ್ನು ಕೇಳಿದ ಕಂಬಲ್ಲಿನ ಒಡೆಯನು ಕೋಪದಿಂದ ಕಣು ಕೆರಳಿಸಿದನು. ಅದನ್ನು ಕಂಡು ರಾಜ ಒಡೆಯರು “ಏಕೆ? ಒಡೆಯರೇ? ನಿಮಗಿಷ್ಟವಾದರೆ ಈಗಲೇ ಯಾರು ಶ್ರೇಷ್ಟರೆಂದು ಕಾಣುವ! ತಾಳಮೇಳಗಳು ಯಾರಿಗೆ ಸಲ್ಲತಕ್ಕದ್ದೆಂದು ನಿರ್ಣಯವಾಗಲಿ ” ಎಂದರು. ತಿರುಮಲರಾಯರು “ನೀವಿಬ್ಬರೂ ಹೀಗೆ ಕಲಹವಾಡಬಾರದು” ಎನ್ನಲು ಅವರೆದುರಿಗೇನೂ ಮಾಡಲಾರದೆ ಇಬ್ಬರೂ ರೋಷವನ್ನು ನುಂಗಿಕೊಂಡು ಸುಮ್ಮನಿದ್ದರು. ಮಾರನೆ ದಿವಸ ಬಂದಕೂಡಲೆ ರಾಜ ಒಡೆಯರು ಕೆಂಬಲ್ಲಿನ ಮೇಲೆ ಪಡೆಸಹಿತ ಹೊರಟು ಆ ಒಡೆಯರನ್ನು ಸೋಲಿಸಿ ಕೆಂಬಲ್ಲನ್ನು ವಶಪಡಿಸಿಕೊಂಡರು.
*****
[ವಿಲ್ಕ್ಸ್, ಸಂ. ೧. ಪುಟ ೨೪]