Home / ಕಥೆ / ಸಣ್ಣ ಕಥೆ / ಲಿಟಲ್ ಸ್ಟುವರ್ಟ್

ಲಿಟಲ್ ಸ್ಟುವರ್ಟ್

“ಮಮ್ಮಿ ! ಮಮ್ಮಿ ! ಬೇಗ ಬಾ”

“ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ.

“ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ಇದೆ” ಎಂದು ಪುಟ್ಟ ರೋಜಲಿನ್ ಮತ್ತೆ ಮತ್ತೆ ಕೂಗಿದಳು. ರೋಜಲಿನ್ ಮಮ್ಮಿ ಅವಳ ಕೂಗಿಗೆ ಓಡಿ ಬಂದು ನೋಡಲು ಪುಟ್ಟ ಅಳಿಲು ಮರಿ ಗಿಡದ ಮೇಲಿಂದ ಬಿದ್ದು ಒದ್ದಾಡುತ್ತಿತ್ತು.

“ಹುಷ್! ಹುಷ್!” ಎಂದು ಕಾಗೆಯನ್ನು ಅಟ್ಟಿ ಸುಮನ್ ತಾಯಿ ಮಗುವನ್ನು ರಕ್ಷಿಸುವಂತೆ ಅದನ್ನು ಅಂಗೈಯಲ್ಲಿ ಮೆದುವಾಗಿ ಹಿಡಿದುಕೊಂಡು ಎದೆಗವಚಿ ಅದರ ಬೆನ್ನು ಸವರಲು, ಅಳಿಲು ಮುದಿರಿಕೊಂಡು ನೋವಿನಿಂದ ಮುಖ ಕೆಳಗೆ ಹಾಕಿ ಕತ್ತು ಬಗ್ಗಿಸಿತು.

“ಅಯ್ಯೋ! ಪಾಪ, ಪುಟ್ಟಮರಿ ಮಮ್ಮಿ, ಎಷ್ಟು ಮುದ್ದಾಗಿದೆ” ಎಂದು ಬೆರಳಿನಿಂದ ಅದರ ಮೈ ಸವರಿದಳು ರೋಜಲಿನ್.

ಸುಮನ್ ಅದನ್ನು ಮನೆ ಒಳಗೆ ತೆಗೆದುಕೊಂಡು ಹೋಗಿ ಅದಕ್ಕೆ ಹಾಲನ್ನು ಚಮಚದಲ್ಲಿ ಕುಡಿಸಿದಳು. ಎಲ್ಲವನ್ನು ನೋಡುತ್ತಿದ್ದ ರೋಜಲಿನ್ನಳಿಗೆ ಅಳಿಲ ಮೇಲೆ ಪ್ರೀತಿ ಉಕ್ಕಿ ಬಂತು. “ಮಮ್ಮಿ! ಈ ಡಬ್ಬದಲ್ಲಿ ಮೆತ್ತಗೆ ಹಾಸಿದ್ದೇನೆ. ಇಲ್ಲಿ ಮಲಗಿಸು. ನಾನು ಇದನ್ನು ನೋಡಿಕೊಳ್ಳುತ್ತೇನೆ” ಎಂದು ಅಂಗಲಾಚಿದಳು.

ಪ್ರಾಣಿಪ್ರಿಯೆ ಸುಮನಳಿಗೂ ಅಳಿಲನ್ನು ಆ ಸ್ಥಿತಿಯಲ್ಲಿ ಹೊರಗೆ ಬಿಡಲು ಮನಸ್ಸಾಗಲಿಲ್ಲ. “ಸರಿ, ಇಲ್ಲಿ ಡಬ್ಬದಲ್ಲಿ ಮಲಗಿಸಿರುತ್ತೇನೆ. ನೀನು ಅದಕ್ಕೆ ತೊಂದರೆ ಮಾಡಬೇಡ. ಅದು ಸ್ವಲ್ಪ ಹೊತ್ತಾದರೆ ಚೇತರಿಸಿಕೊಳ್ಳುತ್ತೆ. ಈಗ ಅದಕ್ಕೆ ಷಾಕ್ ಆಗಿದೆ. ಅದನ್ನು ಸುಮ್ಮನೆ ಸ್ವಲ್ಪ ಹೊತ್ತು ಬಿಟ್ಟುಬಿಡು” ಎಂದಳು ಮಮ್ಮಿ.
ಮಮ್ಮಿ ಮಾತಿನಂತೆ ರೋಜಲಿನ್ ಅಳಿಲ ಪಕ್ಕದಲ್ಲಿ ಮೌನವಾಗಿ ಕುಳಿತು ಅದಕ್ಕೆ ಯಾವ ಹೆಸರು ಇಡಬೇಕೆಂದು ಯೋಚಿಸಿದಳು. ಮಮ್ಮಿ ಹತ್ತಿರ ಹೋಗಿ, “ಯಾವ ಹೆಸರು ಇಡೋಣ ?” ಎಂದು ಗೋಗರೆದಳು. ಮಮ್ಮಿಗೂ ಸ್ಫೂರ್ತಿ ಬಂದು

“ಏ! ರೋಜಿ ನಾವು ಹಾಲಿವುಡ್ ಚಿತ್ರ ಲಿಟಲ್ ಸ್ಟುವರ್ಟ್ ಚಿತ್ರ ನೋಡಿದ ಜ್ಞಾಪಕ
ಇದೆಯಾ?”

“ಹೌದು ಮಮ್ಮಿ, ಇದನ್ನು ‘ಲಿಟಲ್ ಸ್ಟುವರ್ಟ್’ ಅಂತ ಕರಿಯೋಣ” ಎಂದು ತಾಯಿ ಮಗಳು ನಿರ್ಧರಿಸಿದರು.

ದಿನೇ ದಿನೇ ಅಳಿಲು ಷಾಕ್‍ನಿಂದ ಚೇತರಿಸಿಕೊಂಡು ಕುಟುಂಬದ ಆತ್ಮೀಯ ಸದಸ್ಯನಾಗಿಬಿಟ್ಟಿತು. ಮನೆಯವರೆಲ್ಲರ ಜೊತೆಯಲ್ಲಿ ಸರಾಗವಾಗಿ ಬೆರೆತು ಅವರ ಭುಜದ ಮೇಲೆ ಹತ್ತುವುದು, ಕೈಮೇಲೆ ಸರಸರನೆ ಇಳಿಯುವುದು, ಕುಣಿದು ಕುಪ್ಪಳಿಸುವುದು ಮಾಡಿ ಎಲ್ಲರನ್ನು ಸಂತೋಷಗೊಳಿಸುತ್ತಿತ್ತು. ಭುಜದ ಮೇಲೆ ಕುಳಿತುಕೊಂಡು ತನ್ನ ಮೆತ್ತನೆಯ ದಪ್ಪ ಬಾಲದಿಂದ ಕೆನ್ನೆಯನ್ನು ಸವರಿದಾಗ ರೋಜಲಿನ್ ರೋಮಾಂಚನಗೊಂಡು ಸಂತಸದಿಂದ ಕಿರುಚುತ್ತಿದ್ದಳು. ಎಲ್ಲರು ಓಡಿಬಂದು ಅವಳ ಸಂತೋಷ ನೋಡಿ ಅವರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ರೋಜಲಿನ್‌ ಅದನ್ನು ಅಂಗೈಯಲ್ಲಿ ಭುಜದ ಮೇಲೆ, ತಲೆಯ ಮೇಲೆ ಇಟ್ಟುಕೊಂಡು ತಂದೆಯನ್ನು ಫೋಟೋ ತೆಗೆಯಲು ಹೇಳುತ್ತಿದ್ದಳು. ಅದಕ್ಕೆ ಊಟ ಮಾಡಿಸುವುದು, ಹಾಲು ಕುಡಿಸುವುದು, ಜೊತೆಗೆ ಅದಕ್ಕೆ ಸಂಡೇ ಸ್ಪೆಷಲ್ ಎಂದು ಚೇಪೆಕಾಯಿ, ಚಪಾತಿ, ಗೋಡಂಬಿ ಕೊಡುತ್ತಿದ್ದಳು. ಅದು ಮುದ್ದಾಗಿ ಎರಡು ಕೈಯಲ್ಲೂ ಚಪಾತಿ ಹಿಡಿದು ಚೂರು ಚೂರು ತಿನ್ನುವುದು ನೋಡುತ್ತಾ ರೋಜಲಿನ್ ಮೈಮರೆಯುತ್ತಿದ್ದಳು.

“ರೋಜಲಿನ್ ! ನಿನ್ನ ಓದು ಬರಹ ಎಲ್ಲಾ ಕಡಿಮೆ ಆಗುತ್ತಾ ಇದೆ. ಅದನ್ನು ಅದರ ಪಾಡಿಗೆ ಬಿಟ್ಟು ನಿನ್ನ ಕೆಲಸ ಮಾಡಿಕೋ ಹೋಗು” ಎಂದು ಬೈಯುತ್ತಿದ್ದರು. ಅದನ್ನು ಲೆಕ್ಕಿಸದೆ ಗಂಟೆಗಟ್ಟಲೆ ಅದರ ಜೊತೆಗೆ ರೋಜಲಿನ್ ಕಾಲ ಕಳೆಯುತ್ತಿದ್ದಳು. ಒಂದೇ ಮಗುವಾಗಿ ಬೆಳೆದ ಅವಳಿಗೆ ಈಗ ಮನೆಯಲ್ಲಿ ಓರ್ವ ಜೊತೆಗಾರ ಬಂದಂತೆ ಆಗಿತ್ತು. ತನ್ನ ಹಾಸಿಗೆ ಪಕ್ಕದಲ್ಲಿ ಅದಕ್ಕೆ ಒಂದು ಡಬ್ಬದಲ್ಲಿ ಮೆತ್ತಗೆ ಹಾಸಿ ಇಟ್ಟಿರುತ್ತಿದ್ದಳು. ಸ್ಟುವರ್ಟ್ ಮನೆಯಲ್ಲಾ ಸುತ್ತಾಡೀ ಹೊರಗೆ ಹೋಗಿ ಗಿಡ ಹತ್ತಿ ಅಲ್ಲಿ ಯಾರಾದರೂ ಬಂದಿದ್ದಾರಾ ಅಂತ ನೋಡಿಕೊಂಡು, ಮತ್ತೆ ರೋಜಲಿನ್ ಪಕ್ಕ ತನಗಾಗಿ ಇಟ್ಟ ಹಾಸಿಗೆಯಲ್ಲಿ ಬಂದು ಮಲಗುತ್ತಿತ್ತು.

ಅದು ಜಾಸ್ತಿ ಹೊತ್ತು ಕಾಣದೆ ಅಲ್ಲಿ ಇಲ್ಲಿ ಸುತ್ತುತ್ತಲಿದ್ದರೆ ಸ್ಟುವರ್ಟ್ ! ಎಲ್ಲಿದ್ದೀಯಾ ?” ಅಂದ ಕೂಡಲೇ ಓಡಿಬರುತ್ತಿತ್ತು. ಮನೆಗೆ ಯಾರಾದರೂ ಅಪರಿಚಿತರು ಬಂದರೆ ಕಿಚ್ ಕಿಚ್ ಎಂದು ಶಬ್ದ ಮಾಡಿ ಎಚ್ಚರ ಕೊಡುತ್ತಿತ್ತು. ಪುಟ್ಟ ಸ್ಟುವರ್ಟಿನ ಚಾತುರ್ಯ, ಜಾಣ್ಮೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿತ್ತು.

ಅದು ಈಗ ಮನೆಗೆ ಬಂದು ಕೆಲವು ತಿಂಗಳುಗಳಾಗಿ ಚೆನ್ನಾಗಿ ತಿಂದು ದಷ್ಟಪುಷ್ಟವಾಗಿ ಬೆಳದು ಯೌವನ ಹೊಸ್ತಿಲಿಗೆ ಕಾಲಿಟ್ಟಿದೆ. ಸ್ಟುವರ್ಟ್‌ಗೆ ಈಗ ಸಂಗಾತಿಯ ಬಯಕೆ ಆಗಿತ್ತು. ಅದಕ್ಕಾಗಿ ಹೆಚ್ಚು ಹೊತ್ತು ಹೊರಗೆ ಇದ್ದ ಗಿಡದ ಮೇಲೆ ಓಡಾಡುತ್ತಿದ್ದ. ಬಾಯಲ್ಲಿ ಗೋಡಂಬಿ, ಕೈಯಲ್ಲಿ ಚಪಾತಿ ಚೂರು ಹಿಡಿದು ಸಂಗಾತಿಗೆ ಕೊಟ್ಟು ಸ್ನೇಹ ಬೆಳಸಲು ತೊಡಗಿದ್ದ. ಮನೆ ಬೆಳಿಗ್ಗೆ ಬಿಟ್ಟು ಹೋದರೆ ಸಂಜೆವರೆಗೂ ಮನೆ ಸೇರದಾಗ ಮನೆ ಮಂದಿಗೆಲ್ಲಾ ಗಾಬರಿ ಆಗುತ್ತಿತ್ತು. ಪ್ರೇಮ ಪಾಶದಲ್ಲಿ ಸಿಲುಕಿ ಮನೆ ಮಗ ಮನೆಯಿಂದ ದೂರ ಆದಂತೆ ಅನಿಸಿ ಸ್ಟುವರ್ಟ್‌ಗಾಗಿ ಎಲ್ಲರು ಹುಡುಕಾಡಿ ಎದುರು ನೋಡುತ್ತಿದ್ದರು.

ಮನೆಯವರು ಅಂದುಕೊಂಡಂತೆ ಸ್ಟುವರ್ಟ್ ಒಂದು ದಿನ ತನ್ನ ಪ್ರಿಯತಮೆಯನ್ನು ಮನೆಗೆ ಕರೆತಂದ. ಪುಟ್ಟ ಸಂಗಾತಿ ಸಂದೇಹದಿಂದ ಹೊಸಿಲಲ್ಲಿ ಹಿಂಜರಿದು ಒಳಗೆ ಬಂತು. ಸ್ಟುವರ್ಟ್ ಅದರ ಕಿವಿಯಲ್ಲಿ ಪಿಸುಗುಟ್ಟಿದ. “ನಿನ್ನ ಅಮ್ಮ, ಮಾವನವರು ಬಹಳಾ ಒಳ್ಳೆಯವರು. ನಿನ್ನ ನಾದಿನಿಯಂತು ಪ್ರಾಣಿಪ್ರಿಯೆ. ನೀನು ಏನೂ ಯೋಚಿಸದೆ ಮನೆ ತುಂಬಿಸಿ ಒಳಗೆ ಬಾ’ ಎಂದು ಪ್ರೀತಿಯಿಂದ ಮುತ್ತಿಟ್ಟು ಪಿಸುಗುಟ್ಟಿತು.

ಪ್ರೇಮಿ ಜೋಡಿ ಮನೆಗೆ ಬಂದದ್ದು ಎಲ್ಲರಿಗೂ ಸಂತಸವಾಗಿ ನಿಶ್ಚಿತಾರ್ಥಕ್ಕೆಂದು ಒಂದು ಚಿಕ್ಕ ಪಾರ್ಟಿಯನ್ನು ಸ್ನೇಹಿತರಿಗೆಲ್ಲಾ ಕೊಟ್ಟು ಬಾಯಿ ತುಂಬ ಸ್ಟುವರ್ಟ್‌ ಪ್ರೇಮ ಕಹಾನಿಯನ್ನು ಎಲ್ಲರಿಗೂ ಹೇಳಿ ಸಂತಸಪಟ್ಟರು. ಈಗ ಈ ಪ್ರೇಮಿಗಳ ಒಡನಾಟ, ಹೊಂದಾಣಿಕೆ, ಅವುಗಳ ಸರಸ ಸಲ್ಲಾಪ, ಪ್ರೇಮ ಪಾಶದ ಬಂಧನ ನೋಡಿ ನಮ್ಮ ರೋಜಲಿನ್‌ಗೆ ಖುಷಿ ಆಗುತ್ತಿತ್ತು. ಲಜ್ಜೆಯಿಂದ ಬಂದು ಹೋಗುತ್ತಿದ್ದ ಸ್ಟುವರ್ಟ್‌ನ ಪ್ರೇಮಿಗೆ ರೋಜಲಿನ್ ಲಿಜ್ಜಾ” ಎಂದು ಹೆಸರಿಟ್ಟಳು.

ಈಗ ಫ್ರಾಂಸಿಸ್, ಸುಮನ್ ದಂಪತಿಗಳು ಬಹಳ ಸಡಗರದಲ್ಲಿ ಇದ್ದಾರೆ. ರೋಜಲಿನ್‌ಗಂತು ಸಂಭ್ರಮ ಹೇಳತೀರದು ಲಿಜ್ಜಾ ಗರ್ಭಿಣಿಯಾಗಿರುವುದು.

ಪುಟ್ಟ ಸ್ಟುವರ್ಟ್ ತಂದು ಕೊಟ್ಟ ಸಂತೋಷ ಕಾಸು ಕೊಟ್ಟರೂ ಸಿಗದು ಎಂಬ ಮನೋಭಾವನೆ ಕುಟುಂಬದಲ್ಲಿ ತುಂಬಿ ತುಳುಕುತ್ತಿತ್ತು. ಜೀವನದಲ್ಲಿ ಹುರುಪು, ಸಂತಸ ಹೆಚ್ಚಿಸುವ ಇಂತಹ ಪುಟ್ಟ ಪುಟ್ಟ ಸಂಗತಿಗಳೇ ಸಾಕಲ್ಲವೇ ಎನ್ನುತ್ತಾರೆ ಫ್ರಾಂಸಿಸ್ ದಂಪತಿಗಳು. ಇನ್ನು ರೋಜಲಿನ್ ಏನು ಹೇಳುತ್ತಾಳೆಂದು ಹೇಳಬೇಕೇ?
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...