Home / ಕಥೆ / ಸಣ್ಣ ಕಥೆ / ಯುದ್ಧ

ಯುದ್ಧ

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತಲೆ ಅದೆಲ್ಲಿಂದ ಬಂದಿತೋ!

ನೇಸರು ದಿಗಂತದಲ್ಲಿ ಮುಳುಗಿತ್ತು. ವರುಣ ಕಾಂತಿಗೂ ಅದೇನೋ ಆದಂತೆ ನಿಸ್ತೇಜ. ಗಗನದಂಚಿನಲ್ಲಿ ಹಕ್ಕಿಗಳ ಸಾಲೊಂದು ಲೊಚಕ್ ಲೊಚಕ್-ಚಿಲಿಪಿಲಿ ಎನ್ನುತ್ತ ಚೆಲ್ಲಾಪಿಲ್ಲಿಯಾಗಿ ಸ್ವಚ್ಛಂದ ಆಕಾಶಕ್ಕೂ ಅಮಾನುಷ ದಾಳಿಯಾಗಿದೆ ಎಂಬಂತೆ ಹೆದರಿ ಹಾರುತ್ತಿತ್ತು. ಅದೇ ರೀತಿಲ್ಲಿ-ರಾಜವೀದಿಯ ಫುಟ್ ಪಾತ್, ಮಧ್ಯ ರಸ್ತೆಯಲ್ಲಿ ಜನಜಂಗುಳಿ ಆತುರರಾಗಿ, ವಿವ್ಹಲರಾಗಿ, ಅಧೀರರಾಗಿ, ಬಹುಶ ಹೆದರಿ ನಿಲ್ದಾಣ, ಬಸ್‌ಸ್ಟಾನ್ಡ್ ಬಳಿಗೆ ಓಡುತ್ತಿದ್ದರು. ಎಷ್ಟೋ ಹೆಂಗಳೆಯರು, ವೃದ್ಧರು, ಮಕ್ಕಳು, ತರುಣ-ತರುಣಿಯರು… ಅವರ ಯವ್ವನ, ವೃದ್ದ, ಹೆಣ್ಣು, ಪುರುಷ ಹೃದಯ ಅದೇಕೋ ಅಶಾಂತ-ಅವಿಶ್ರಾಂತವಾಗಿ ಬಡಿದಾಡುತ್ತಿತ್ತು.

ಸಾಧಾರಣ ನಾಲ್ಕೂವರೆ ಗಂಟೆಗೆ ಸೈರನ್ ಆಗಿತ್ತು! ವೈರಿಗಳ ಬೊಂಬೆಸೆತದ ಮುನ್ಸೂಚನೆ… ಮನೆ ಮಂದಿಯೆಲ್ಲ ಹೆದರಿ, ಭಯಕಂಪಿತರಾಗಿ ಕಿಟಕಿ ಬಾಗಿಲುಗಳನ್ನು – ಭದ್ರವಾಗಿ ಮುಚ್ಚಿಕೊಂಡರು. ಹೆಂಗಸರು ಅನ್ಯಥಾ ರಾಜಕೀಯ ಮಾತಾಡಿ ಸರಕಾರ – ನಾಯಕರನ್ನು ದಿಟ್ಟರಾಗಿ ದೂರುವವರು ದಿಕ್ಕುಗೆಟ್ಟು, ಹೃದಯ ಶರೀರ ಒಡೆದಂತೆ ನಡಗುತ್ತಿದ್ದರು. ಮಕ್ಕಳಿಗೂ ಸೈರನ್ ಕೇಳಿಸಿತ್ತು. ಅದಕ್ಕಾಗಿ ಅವುಗಳು ಅಳುವುದಿಲ್ಲ. ಅಪಾಯದ ಅರಿವು ಅವುಗಳಿಗಿಲ್ಲ. ಅವರೆಷ್ಟು ಭಾಗ್ಯವಂತರು ಮನುಷ್ಯ ಮುಗ್ಧನಾಗಿಯೆ ಇದ್ದಿದ್ದರೆ ಈ ಘಾತುಕ ಉತ್ಪಾತದ ಅರಿವಾಗುತ್ತಿರಲಿಲ್ಲ. ಅರಿವಾಗಿ ತತ್ತರಿಸಬೇಕಾಗುತ್ತಿರಲಿಲ್ಲ.

ಅವಳು ಊರಿಂದ ಬಂದು ನಾಲ್ಕು ತಿಂಗಳಾಗಿತ್ತು. ಅಣ್ಣ ತರಿಸಿದ್ದು ಮದುವೆಗೆಂದು. ಅವಳು ಬಂದು ಒಂದು ತಿಂಗಳೊಳಗಾಗಿಯೆ ಪಾಕಿಸ್ತಾನದದಾಳಿ ಶುರುವಾಗಿ ದೇಶ, ನಗರ, ಹಳ್ಳಿಗಳೆಲ್ಲಾ ಅಪಾಯದಲ್ಲಿ ಸಿಲುಕಿದ್ದುವು. ಜನರೆಲ್ಲ ಹೆದರಿ ಕ್ಷೇಮಕ್ಕಾಗಿ ಹಾತೊರೆಯುತ್ತಿದ್ದರು. ಅವಳಣ್ಣ ಅಷ್ಟೇನು ಹೆದರಿಲ್ಲವಾದರೂ ಅವಳ ಅತ್ತಿಗೆ ಹೆದರಿ ಸುಣ್ಣವಾಗಿದ್ದಳು. ಮೊನ್ನೆ ಮೊದಲ ಸಾರಿ ಹತ್ತು ಗಂಟೆ ರಾತ್ರಿಗೆ ಸೈರನ್ ಆದಾಗ ಅವಳ ಅವಸ್ಥೆ ಕರುಣಾಜನಕವಾಗಿತ್ತು. ದಿಗ್ಭ್ರಾಂತಳಾಗಿ ನಡುಕದಿಂದ ಮೈಯೆಲ್ಲ ಶೀತಗೊಂಡಿತ್ತು. ಅತ್ತಿಗೆಯ ಈ ದುಸ್ಥಿತಿ ನಾದಿನಿಗೆ ಆಶ್ಚರ್ಯ, ತಾನು ಮುಂಬಾಯಿಗೆ ಹೊಸಬಳಾಗಿಯೂ ಈ ಗಾಬರಿಯಿಲ್ಲ. ಸತ್ತರೇನು ಎಲ್ಲರೊಟ್ಟಿಗೆ! ಬಾಂಬು ನಮ್ಮ ಮನೆಗೆ ಬಂದು ಬೀಳುವುದೇ? ಬಿದ್ದರೂ ನಾನೆ ಮೊದಲು ಸತ್ತರೆ ದೇವರ ಕೃಪೆ… ಅತ್ತಿಗೆಗೆ ಮುಂಬಾಯಿಯಲ್ಲಿ ಎಂಟು ವರ್ಷವಾಗಿತ್ತು. ಇಲ್ಲಿಯ ಸ್ಥಿತ್ಯಂತರಗಳ ಪಟ್ಟಿ ಕ್ರಮ ಅವಳ ನಾಲಿಗೆ ತುದಿಯಲ್ಲಿದೆ. ಆದರೂ ಸೈರನ್ ಆದಾಗ…! ನಾದಿನಿಗೆ ನಗೆ ಬಂದಿತು. ಈ ನಗೆಯನ್ನು ಗಮನಿಸಿ, ಗಂಡನಿನ್ನೂ ಬಂದಿಲ್ಲ ಎಂಬ ಹೆದರಿಕೆಯಿಂದ, ಸೈರನ್ ಈಗಲೂ ಕ್ಲೀಯರ್ ಆಗಿಲ್ಲ ಎನ್ನುವಾಗ… ಇದೆಲ್ಲದಕ್ಕೆ ಈ ಅನಿಷ್ಟ ಹುಡುಗಿಯೇ ಕಾರಣವೆಂದು ತಿಳಿದು ‘ಏನೇ ಕುದುರೆ…ನಗುತ್ತೀ? ಮಿಂಡ ಬಂದನೆ… ಹುಚ್ಚೆ…?” ಎಂದು ಶೆಲ್ಲನ್ನು ಎಸೆದಳು. ಇಂತಹ ಶೆಲ್ಲಿನ ಇರಿತಗಳು ನಾದಿನಿಗೆ ಹೊಸದಲ್ಲ. ‘ಅತ್ತಿಗೇ… ಯಾಕೆ ನೀನಿಷ್ಟು ಹೆದರುತ್ತೀಯೇ….. ಸತ್ತರೆ ನಾವು ಮಾತ್ರವೇ…? ಬಾಂಬು ನಮ್ಮ ಮನೆಗೇ ಬೀಳುತ್ತೆಯೆ…?’ ಅಷ್ಟರಲ್ಲಿ ಕಿರ್ ಎಂದು ಅರಚಿದ ಅತ್ತಿಗೆಯ ಮುದ್ದು ಮಗ….

“ಸುಮ್ಮನಿರೇ ತಾಟಕಿ… ನಿನ್ನ ಧೈರ್ಯ ನನಗೇ ಗೊತ್ತು. ಹೋಗು ಅವನನ್ನ ಎತ್ತು… ಬಾಂಬು ಬಿದ್ದರೆ ಗೊತ್ತಾಗುತ್ತೆ….”

“ಏಕ್ ಏಕ್…!” ಆರೇಳು ಸಾರಿ ಬಾಂಬು ಬಿದ್ದಿತ್ತು. ಎಲ್ಲಿಯೋ… ಎಲ್ಲರೂ ಹೊರಗೋಡಿದ್ದರು. ಹೆಂಗಸರು ಅಯೋಮುರ್ಯೊ ಎಂದರು. ಗಂಡಸರು ಮನೆಗಿನ್ನೂ ಹಿಂದಿರುಗಿಲ್ಲ. ಎಷ್ಟೋ ಮಂದಿ ಒಂದಿಷ್ಟು ತಿಳಿದವರು ತಗ್ಗು, ಕಣಿವೆ, ಗಟರ್‌ಗಳಲ್ಲಿ ಬಿದ್ದು ಮಲಗಿದರು. ಮೂರು ರೌಂಡು ಗನ್ ಫಾಯರ್ ಆಗಿತ್ತು… ವೈರಿಗಳ ಬಾಂಬರನ್ನು ಹಿಂಬಾಲಿಸಿ ನಮ್ಮ ಅಂಟಿಗನ್‌ ಗುಂಡೆಸೆದಿತ್ತು.! ಇವರಿಗೆಲ್ಲ ಬಾಂಬು ಬಿತ್ತೆಂದು ತಿಳಿದು… ಗಾಬರಿ. ಎಲ್ಲರ ಎದೆ ಒಡೆದಿತ್ತು. ಬದಿಯ ಪ್ರದೇಶದಲ್ಲಿಯೇ ಬಿದ್ದ ಹಾಗೆ. ಅದರ ಹೊಗೆ ಹಬ್ಬಿದ ಹಾಗೆ, ನಾದಿನಿಗೆ ಒಂದಿಷ್ಟು ಧೈರ್ಯ….. ಹೊರಗೆ ಬಂದಳು. ಬಾಂಬಿನ ಹೊಗೆ-ದಗೆಯಂತೂ ಈಚೆ ಬಂದಂತೆ ತೋರಲಿಲ್ಲ. ಸದ್ದೂ ಈಗ ಮುಗಿದಿತ್ತು.

ಅತ್ತಿಗೆ ಗಡ ಗಡ ನಡುಗುತ್ತಿದ್ದಳು. ನಾದಿನಿಯನ್ನು ಅಪ್ಪಿದವಳು ಬಿಟ್ಟದ್ದು ಈಗಷ್ಟೆ. ಮಗುವನ್ನು ಮಂಚದ ಅಡಿಗೆ ದೂಡಿದ್ದಳು.

“ನೋಡೆ ಅತ್ತಿಗೆ… ಬಾಂಬೆಲ್ಲೊ ದೂರ ಬಿತ್ತು… ಈಗ ಸೈರನೂ ಕೇಳಸೋದಿಲ್ಲ…. ಇಲ್ಲಿಗೇ ಬಿದ್ದಿದ್ದರೆ….”

“ಅನಿಷ್ಟ ಸುಮ್ಮನಿರು… ಬೆಳೆದಿದ್ದ ಎಮ್ಮೆಯಂತೆ… ಮದುವೆಯಾಗಿದ್ದರೆ ಮೂರು ಮಕ್ಕಳಾಗುತ್ತಿತ್ತು.”

ಹೌದೆನಿಸಿತು ನಾದಿನಿಗೆ. ಅತ್ತಿಗೆ ಹೇಳಿದ್ದು ಸರಿ. ಆದರೆ ಹೃತ್ಪೂರ್‍ವಕವಾಗಿಯಲ್ಲ. ನಂಜಿನಿಂದ… ಅಸೂಯೆಯಿಂದ… ನಾನವಳದನ್ನು ತಿನ್ನುತ್ತಿದ್ದೇನೆ. ಅವಳಿಗೆ ನಾನು ಹೊರೆ. ನನ್ನ ಅಣ್ಣನಾದರೂ ಅವಳ ಗಂಡ, ಅವಳ ಮಕ್ಕಳಿಗೆ ತಂದೆ. ಅವರ ಹಕ್ಕೆ ಅವನ ಮೇಲೆ ಹೆಚ್ಚು… ನಾನು ಪರಕೀಯಳು…

“ಹೌದತ್ತಿಗೆ… ಗಂಡ ಸಿಗೋದಿಲ್ಲ ಅಷ್ಟೆ…”

ಗಂಡ ಸಿಗುವುದಿಲ್ಲ ನಿಜ. ಅಣ್ಣ ಅದೆಷ್ಟೋ ಪ್ರಯತ್ನ ಮಾಡಿದ. ಈಗವನೂ ಮುಖ ಸಿಂಡರಿಸುತ್ತಾನೆ. ತಂಗಿಯ ಮೇಲಿನ ಆ ಗೌರವ ಈಗಿಲ್ಲವಾಗಿದೆ. ತಾಪತ್ರಯ ಅವನಿಗೂ ಇದೆ. ಅತ್ತಿಗೆಗೂ ಸಾಕಾಗಿದೆ. ಆದರೆ ಮದುವೆಮಾಡಿ ಬಿಡುವುದು ಅವರ ಕೆಲಸ…

ನಾದಿನಿಗೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಉತ್ತರದಲ್ಲಿ ಎಲ್ಲೆಲ್ಲೂ ಬಾಂಬು ಬೀಳುತ್ತಿದೆ. ಎಷ್ಟೋ ಜನ ಸಾಯುತ್ತಿದ್ದಾರೆ ಕ್ರಿಮಿಗಳಂತೆ. ಒಂದು ಬಾಂಬು ಇಲ್ಲಿಗೂ ಬಿದ್ದಿದ್ದರೆ…! ಅಥವಾ ನಾನಾದರೂ ಬಾಂಬು ಬೀಳುವಲ್ಲಿ ಇದ್ದಿದ್ದರೆ…! ತನ್ನ ಬಾಳು ಬರಡೆಂದು ಅವಳಿಗೆ ಗೊತ್ತು. ಹೆಣ್ಣಿಗೆ ಸೌಂದರ್ಯವಾದರೂ ಬೇಕು. ತಾನೇನು ಹೇಳಿಕೊಳ್ಳುವ ಸುಂದರಿಯಲ್ಲ. ಒಳ್ಳೆ ಮಾಟವಾದ ಶರೀರವಿದ್ದರಾಯಿತೆ… ಅದರೊಟ್ಟಿಗೆ ಖಜಾನೆ ಬೇಕು ಈಗಿನವರಿಗೆ. ಬಾಲಕನಿಯಂಚಿನಲ್ಲಿ ನಿಂತು ಶೂನ್ಯವನ್ನು ನೋಡುತ್ತಿದ್ದಾಳೆ…. ಭೀಭತ್ಸ ಶೂನ್ಯದ ಏಕಾಧಿಪತ್ಯ. ಇಂಥಾ ಭಯಾನಕ ಮೌನವನ್ನು ಅವಳು ಊರ ನಡುರಾತ್ರಿಯಲ್ಲೂ ಅನುಭವಿಸಿಲ್ಲ. ಅಲ್ಲಿ ಶೂನ್ಯವಿದ್ದರೂ ಕ್ರಿಮಿ-ಕೀಟ-ಕಪ್ಪೆಗಳ ಜಿರ್ ಮಿಟ್ ಸದಾ ಎದ್ದು ಕೇಳುತ್ತಿತ್ತು. ನಿದ್ರೆ ಯಾರಿಗೂ ಬಂದಿರಲಿಕ್ಕಿಲ್ಲ. ಎಲ್ಲೆಲ್ಲೂ ಬ್ಲಾಕ್-ಅವುಟ್… ಮೊನ್ನೆನವರೆಗಾದರೆ ಜೊನ್ನ ಹೊಂಬೆಳಕು ಚೆಲ್ಲಿ ಭೀತ ಹೃದಯಗಳನ್ನು ಸಾಂತ್ವನ ಮಾಡುವ ಪ್ರಯತ್ನ ಪಡುತ್ತಿತ್ತು….

ನಗರ ರಕ್ಷೆಯ ತಂಡವೊಂದು ಬಂದು ಬತ್ತಿಯಿದ್ದ ಎದುರಿನ ಮನೆಯನ್ನೂ ಮುತ್ತಿದ್ದಾಗ ಅವಳಿಗೆ ನಗು ಬಂದಿತು. ಮಗು ಕೂಗಿದ್ದಕ್ಕಾಗಿ ಬತ್ತಿ ಮಾಡಿರಬೇಕು… ಅದಕ್ಕೆ ಇಷ್ಟು ಗಲಬೆಯೇ… ಅವರ ಒಕ್ಕೊರಳ ‘ಲೈಟ್ ಆಫ್’ ಎಂಬ ಭಯೋತ್ಪಾದಕ ಕಿರುಚಾಟಕ್ಕೆ ಅವಳು ಎದ್ದು ನಿಂತಿದ್ದಳು. ಈ ದಿನಗಳಲ್ಲಿ ಎಷ್ಟೋ ಮಂದಿ ನಿದ್ರೆ ಮಾಡುತ್ತಿಲ್ಲವೆಂದು ಅವಳಿಗೆ ಗೊತ್ತು. ಯುದ್ಧ ಭಯ… ಪ್ರಚಂಡ ನಿಶ್ಯಬ್ದ… ಅಂಧಕಾರ ಬೃಹದಾಕಾರವಾಗಿ ಹಬ್ಬಿ ಅರಕ್ತ ಮುಖಗಳನ್ನು ನಿಕಿನಿಕಿ ನೋಡುತ್ತಿರುವಂತೆ… ಸ್ಮಶಾನಮೌನವನ್ನು ಒಡೆದು ನಾಯಿ ಕೂಗು ಅಪಾಯವನ್ನು ಸೂಚಿಸುವಂತೆ… ಮನೆ ಗಡಿಯಾರ ‘ಟಿಕ್ ಟಿಕ್’ ಎಂದು ಗಂಟಾ ಘೋಷವಾಗಿ ಅರಚುತ್ತಿತ್ತು. ನಾಲ್ಕಾರು ಮೈಲು ಕೇಳುವ ಹಾಗೆ, ಮುಂಬಯಿ ಇರುವೆಯೇ! ಎಂದಿತು ನಾದಿನಿಯ ದಗ್ದ ಎದೆ. ಅತ್ತಿಗೆಗೆ ನಿದ್ರೆ ಬಂದಿದ್ದ ಹಾಗೆ ಕಾಣಲಿಲ್ಲ. ಅಣ್ಣನನ್ನು ಪೀಡಿಸುವಂತಿತ್ತು… ಯಾವದಕ್ಕೂ… ಬಹುಶಃ ಬಾಂಬು ಬಿದ್ದ ಸುದ್ದಿ….

ಅಷ್ಟು ಹೊತ್ತಿಗೆ… ನೆರಮನೆಯ ಹುಡುಗಿ ಬಾಲ್ಕನಿಗೆ ಬಂದಳು. ಅವಳಿಗೂ ನಿದ್ದೆ ಹತ್ತುತ್ತಿಲ್ಲ… ಅವಳು ಏನನ್ನೊ ಚಿಂತಿಸುತ್ತಿದ್ದಾಳೆ ಬಹುಶಃ ಅಥವಾ ಅವಳ ಮಿತ್ರ(ನ) ಕುರಿತು ಮನದಲ್ಲಿಯೇ ಮೆಲಕುಹಾಕುತ್ತಿರಬಹುದು. ಅವಳು ನೌಕರಿ ಮಾಡುವ ಹೆಣ್ಣು. ಟೆಲಿಫೋನ್ ಎಕ್ಸೆ೦ಜಿನಲ್ಲಿ. ರಾತ್ರಿ ಪಾಳಿಯೂ ಅವಳಿಗೆ ಬೀಳುತ್ತದೆ. ಈಗ ಮಾತ್ರ ಬ್ಲಾಕ್ ಅವುಟ್ನಿಂದಾಗಿ ಹಗಲು ಡೂಟಿ. ಅವಳು ಕೇರಳದವಳು, ಕೇರಳದ ಹುಡಿಗಿಯರಿಗೆ ನೌಕರಿಯಾಗಬೇಕು. ಎಂಥಾದ್ದೂ ಆಗಬಹುದು. ಅವಳಿಗೊಂದು ಅಕ್ಕನೂ ಇದ್ದಾಳೆ. ಇಬ್ಬರೂ ಕೆಲಸ ಮಾಡುತ್ತಾರೆ. ಚಿಕ್ಕಪ್ಪನೊಟ್ಟಿಗಿರುವುದು. ಮೆಟ್ರಿಕ್‌ ಆಗುತ್ತಲೇ ಈ ಹುಡುಗಿಯರು ಟೈಪಿಂಗ್ ಕಲಿತುಕೊಂಡು ಕೆಲಸಕ್ಕೆ ಸೇರುತ್ತಾರೆ. ಮದುವೆಯ ನಿಬಂಧನೆ… ಅವಸರ ಅವರಿಗಿಲ್ಲ. ಸಮಾಜದ ನಿಂದೆಯ ಲಕ್ಷವೂ ಅವರಿಗೆ ಕಡಿಮೆ. ಈ ಹುಡುಗಿ ಎಷ್ಟೋ ಸಾರಿ ರಾತ್ರಿಯ ನಡುಹೊತ್ತಿಗೆ ಮನೆಸೇರಿದ್ದುಂಟು ಕೆಲಸದಿಂದ. ಈ ರೀತಿ ನಮ್ಮಲ್ಲಿ ಸಾಧ್ಯವೇ… ಎಂದಿತು ನಾದಿನಿಯ ಮನಸ್ಸು. ಆ ಇಬ್ಬರೂ ಹುಡುಗಿಯರ ಹಿಂದೆ ನೆರೆಹೊರೆಯ ಮತ್ತು ಕಂಪೆನಿಯ ಹುಡುಗರು ಬೀಳುತ್ತಾರಂತೆ. ಅವರಲ್ಲಿ ಯಾರನ್ನಾದರೂ ಆರಿಸಿವರಿಸಿಕೊಳ್ಳಬಹುದು…

ಆ ಹುಡುಗಿ ಇವಳನ್ನು ಕತ್ತಲಲ್ಲಿಯೇ ನೋಡಿ ಕಿಸು ನಕ್ಕಳು. ನಿದ್ರೆ ಬರುವದಿಲ್ಲವೆ ಎನ್ನುವ ಹಾಗೆ… ಅಥವಾ ತನಗೂ ನಿದ್ರೆ ಬರುತ್ತಿಲ್ಲ ಎನ್ನುವ ಹಾಗೆ…. ವಾತಾವರಣದ ಈ ಉದ್ವಿಗ್ನತೆಯಲ್ಲಿ ನಿದ್ರೆ ಬರುವುದು ದೂರದ ಮಾತು…. ಅದರಂತೆಯೆ ಯವ್ವನದ ಕಾತರತೆಯೊಟ್ಟಿಗೆ ಕಚಕುಳಿಯಾಡುವ ಸುಸ್ಮರಣೆ, ಕುರುಳು-ಅಂಚನ್ನು ಮಿರಮಿರನೆ ಹಾರಿಸುವ ತಂಗಾಳಿ…. ನಿದ್ರೆ ಬರುವುದೆಂತು… ಮಾತಾಡಲಿಲ್ಲ. ಮಲಗಿದವರು ಕೇಳಿದರೆ ರಂಪಮಾಡಿಯಾರು. ನಾದಿನಿಗೆ ಮಲೆಯಾಳಿ ಮಾತ್ರ ಸ್ವಲ್ಪ ತಿಳಿಯುತ್ತದೆ. ಆದ್ದರಿಂದ ಈ ಹುಡಿಗಿ ಜೊತೆ ತುಸು ಸಲಿಗೆ ಹೆಚ್ಚು.

ತಾನೂ ಮೆಟ್ರಿಕ್ಕಾದರೂ ಕಲಿತಿದ್ದರೆ ನೌಕರಿ ಮಾಡಿಯಾದರೂ ಸ್ವತಂತ್ರವಾಗಿ ಬದುಕಬಹುದಿತ್ತು. ಮದುವೆಗಾಗಿ ಕಾದು ನಿರೀಕ್ಷಿಸಿ ಹತ ಹೃದಯದಿಂದ ಸಾಯುವದಕ್ಕಿಂತ. ಬಳಗದವರಿಗೆ ಹೊರೆಯಾಗಿ ನೂರು ಮಾತು ಕೇಳಿ ಕಿವುಡಾಗುವದಕ್ಕಿಂತ, ಅವಳ ತಾರುಣ್ಯ ಅವಳನ್ನು ಹುಚ್ಚಾಗಿಸುತ್ತದೆ ಕೆಲವೊಮ್ಮೆ. ಸಬಲ ತೋಳ ತೆಕ್ಕೆಯಲ್ಲಿ ಆಶ್ರಯ ಪಡೆದು ಇಹದ ಈರ್‍ಷೆ-ನೋವುಗಳನ್ನು ಮರೆವ ಹುಚ್ಚು. ತನ್ನಂಥಾ ಯುವಕನುಸಿರಿನ ಬಿಸಿಯಲ್ಲಿ ಕರಗಿ ಹೋಗುವ ಹುಚ್ಚು… ತುಟಿ-ಬಾಯಿ ನಾಲಿಗೆ, ಕಣ್ಣುಗಳನ್ನು ಒಣಗಿಸುವ ದೃಷ್ಟಿಯನ್ನು ಬಯಕೆಯಮೃತ ಧಾರೆಯಲ್ಲಿ ನಡೆಸಿ ಮೈ ಮರೆವ ಹುಚ್ಚು….!

ಈ ಕೇರಳದ ಹುಡಿಗಿ ಮೊನ್ನೆ ಅವಳ ಹಿಂದೆ ಹಲವು ದಿನಗಳಿಂದ ತಾಗಿದ ಒಬ್ಬ ತರುಣ ಅನಾಯಾಸವಾಗಿ ಬಸ್ಸಿನಲ್ಲಿ ಬದಿಯ ಸೀಟಿನಲ್ಲಿಯೇ ಕೂತು ಒಂದು ತಾಸೂ ತೊಡೆ-ತೊಡೆ, ಮೈ-ಮೈ ಕೈ-ಕೈಗಳನ್ನು ತಾಗಿಸಿ ಅಡಿಗಡಿಗೆ ಕಿವಿಯಲ್ಲಿ ಬಿಸಿಯಾಗಿ ಉಸುರಿ, ಕಣ್ಣುಗಳಲ್ಲಿ ಕಾತರತೆಯನ್ನು ತುಂಬಿ ತನ್ನನ್ನು ಹುಚ್ಚುಮಾಡಿದ್ದ ಎಂದು ಹೇಳಿದಾಗ ತಾನೆಷ್ಟು ನತದೃಷ್ಟೆ ಎನ್ನಿಸಿತ್ತು ನಾದಿನಿಗೆ… ನಡುರಾತ್ರಿಯ ಪ್ರಶಾಂತ ತಂಗಾಳಿಯಲೆಯೊಂದು ಅವಳ ಮೈಮೇಲೆ ಬೀಸಿ-ಜುಮ್ಮೆನ್ನಿಸಿತು. ದೂರದಲ್ಲಿ ಏನೋ ಸೈರನ್‌ನಂತಹ ಅಸ್ಪುಟ ಧ್ವನಿ ಕೇಳಿದಂತಾಯಿತು. ಪುನಃ ಅವಳ ಮನಸ್ಸು ಧ್ವನಿಯಲೆಯೊಂದು ಅವಳ ಮೈಮೇಲೆ ಬೀಸಿ-ಜುಮ್ಮೆನ್ನಿಸಿತು. ದೂರದಲ್ಲಿ ಏನೋ ಸೈರನ್‌ನಂತಹ ಅಸ್ಪುಟ ಧ್ವನಿ ಕೇಳಿದಂತಾಯಿತು. ಪುನಃ ಅವಳ ಮನಸ್ಸು ಆ ಧ್ವನಿಯಲೆಯನ್ನು ಹಿಂಬಾಲಿಸಿ ಹೋಗಬಯಸಿತು. ಈ ಜೀವನದಲ್ಲಿ ತಾನೊಂದು ಸುಖಜೀವನ ಕಾಣುವದುಂಟೆ? ಎಲ್ಲೆಲ್ಲಿಯೂ ತನ್ನ ಪ್ರಯೋಜನವಿಲ್ಲ… ನಿದ್ದೆ ಹತ್ತದು… ಹಾಸಿಗೆಯಲ್ಲಿ ಹೊರಳಾಡಿದರೂ…. ಆ ಕೇರಳದ ಹುಡುಗಿಯ ಕೈಯನ್ನು ಒತ್ತಿ-ಅದುಮಿ ಆ ಹುಡುಗ ಹೇಳಿದ್ದನಂತೆ…! ‘ನಿನ್ನ ಸ್ಮರಣೆಯಲ್ಲಿ – ನಾನೆಷ್ಟೋ ರಾತ್ರಿ-ದಿನಗಳನ್ನು ಕಳೆಯುತ್ತಿದ್ದೇನೆ…ನೀನು ಮಾತ್ರ…’ ಅವಳ ಎದೆ ಉಲ್ಲಾಸ ಮತ್ತು ಹಿಗ್ಗಿನಿಂದ ಬಡಿದುಕೊಂಡಿತ್ತಂತೆ. ‘ನಾನೂ ಹಾಗೆಯೇ’ ಎಂದು ತಾಳಹಾಕುವಂತೆ. ತನಗೂ ಹಾಗೆ ಹೇಳುವ ಜೀವ ಇರಬಹುದೆ ಎಂದು ಮಿಡಕಿದಳು ನಾದಿನಿ. ಅತ್ತಿಗೆಗೆ ತಮ್ಮ ಬೀಳುವವನೊಬ್ಬ, ಬಿ. ಎ. ಪಾಸಾದವ. ಇಲ್ಲಿ ಬಂದಾಗ ತನ್ನನ್ನಷ್ಟು ನೋಡುವುದುಂಟು. ಬಹು ಮಿದುವಾಗಿ ಮಾತಾಡುವುದುಂಟು. ಅವನಾದರೂ ತನ್ನ ಬಗ್ಗೆ ಧತ್…! ಅವನ ಸ್ಥಾನ-ಮಾನ ಎಂಥಾದ್ದು… ತಾನೆಷ್ಟರವಳು. ಅವಳು ತನ್ನ ವಿಚಾರದ ಅತಿರೇಖಕ್ಕೆ ತುಟಿ ಕಚ್ಚಿಕೊಂಡಳು…..

‘ತಾನು ಯಾವದಾದರೂ ರೀತಿಯಲ್ಲಿ ಮನೆಯವರಿಗೆ ಸಹಾಯವಾಗಬೇಕು. ಹೇಗೆ?

ತನ್ನಿಂದಾಗುವದೇನು? ಮನೆ ಕೆಲಸ ಮಾತ್ರ. ಅವಳಿಗೆ ತನ್ನ ಅಸಹಾಯ ಪರಾವಲಂಬಿ ಜೀವನವನ್ನು ನೆನೆ ನೆನೆದು ಕಣ್ಣೀರು ಬಂದಿತು. ಅಣ್ಣ-ಅತ್ತಿಗೆಯರ ಪೇಚಾಟ….. ಅವಳಿಗೊಂದು ಗಂಡು ನೋಡಿದ್ದಾರೆ. ಅವನಿಗದು ಎರಡನೇ ಸಂಬಂಧ… ಇವಳು ಸರ್‍ವಥಾ ಬೇಡವೆಂದು ಚಂಡಿ ಹಿಡಿದು ನಾಲ್ಕು ದಿನ ಉಪವಾಸ ಮಾಡಿದ್ದಳು. ಅಣ್ಣನ ಶತಪಥ, – ಅತ್ತಿಗೆಯ ಒತ್ತಾಯ ಅವಳನ್ನು ಸೋಲಿಸಿತ್ತು. ಕೊನೆಗೆ ಮೌನವಿರಬೇಕಾಯಿತು. ಈ ಮೌನ ಅವರನ್ನು ಮುಂದರಿಸಿತ್ತು. ಎರಡನೇ ಸಂಬಂಧ! ನೋಡುವದೇ ಬೇಡವೆಂದು ಹೇಳಿದ್ದಳು. ತನಗೆ ಇಷ್ಟವಿಲ್ಲ. ತಾನು ಮೆಚ್ಚದ ಎಂದೆಂದೂ ನೆಚ್ಚದ ಪುರುಷನನ್ನು ಕಟ್ಟಿಕೊಂಡು ಈ – ಜನ್ಮವೆಲ್ಲ ಕಳೆಯಬೇಕು…! ಅವಳು ಅತ್ತಳು… ವ್ಯರ್‍ಥವಾಗಿ… ರಾತ್ರಿಯ ಕಪ್ಪಿನಲ್ಲಿ ಏನೇನೂ ಕಾಣಿಸಲಿಲ್ಲ… ತಲೆದಿಂಬನ್ನು ಕಣ್ಣಿಗೊತ್ತಿ… ತಲೆದಿಂಬು ಒದ್ದೆಯಾಗುವಷ್ಟು. ಅವನು ಒಳ್ಳೇ ನೌಕರಿಯಲ್ಲೂ ಇಲ್ಲವಂತೆ… ಸ್ವಂತ ಬಿಡಾರವೂ ಇಲ್ಲ… ಏನೋ ಇಲೆಕ್ಟ್ರಿಶನ್ ಅಂತೆ… ಸಿಕ್ಕರಾಯಿತು ಮಜುರಿ, ಈ ಭಾರ ಪ್ರಚಂಡ ಬೋರ್‍ಗಲ್ಲಿನದು. ಹಿಮಾಲಯದ್ದು…! ಇದನ್ನು ಹೊರಲು ತಾನು ಸಶಕ್ತಳಲ್ಲ. ನಿರ್‍ಬಲೆ.. ಅಬಲೆ ಎಂದಿತು. ಅವಳ ಏದುವ ವಿದಗ್ದ… ಹೃದಯ, ಎಲ್ಲಿಗಾದರೂ ಹೋಗಿ ಬಾವಿ ಕಾಣಲೆ? ಗಾಯಗೊಂಡ ಜವಾನರ ಶುಶ್ರೂಷೆಗೆ… ಸೇವೆಗೆ ಜನ ಬೇಕಂತೆ ತನ್ನನ್ನು ಯಾರಾದರೂ ಅಲ್ಲಿಗೊಯ್ದು ಆ ಕೆಲಸ ಕೊಡಿಸಿ ಪುಣ್ಯ ಕಟ್ಟಿಕೊಳ್ಳಬಾರದೆ? ಹಿಂದಿನ ಜನ್ಮದಲ್ಲಿ ತಾನು ಶಿಶು ಅಥವಾ ಪಶು ಹತ್ಯೆ ಮಾಡಿರಬೇಕು. ಅದಕ್ಕೆಂದೆ ಈ ಸಂಕಟ. ಈ ಅಸಹ್ಯ ನಿಸ್ಪ್ರಯೋಜಕತೆಯ ಅರಿವು… ತನಗಿಂತಲೂ ಹತ್ಯಭಾಗ್ಯರು ಈ ಪ್ರಪಂಚದಲ್ಲಿರಬಹುದೆಂದು ಅವಳಿಗನಿಸಲಿಲ್ಲ. ಪಂಜಾಬದಲ್ಲಿ ಬಾಂಬಿಗೆ ಬಲಿಯಾಗಿ ಕೀಟದಂತೆ ಸತ್ತ… ಮನೆ ಮಠ ಕಳೆದುಕೊಂಡು ಎದೆಯೊಡೆದು ಆಕ್ರಂದನ ಮಾಡುವವರೂ ತನಗಿಂತ ಸುಖಿಗಳೆಂದಿತು ಅವಳ ವಿಚಾರ. ಅವರಾದರೂ ಒಟ್ಟಿಗೆ ಸಾಯುತ್ತಾರೆ… ಅನುಭವಿಸುತ್ತಾರೆ. ತನ್ನ ಈ ಏಕಾಕಿ… ಏಕಾಂತ ಅಂತಃಕ್ಷತಿಯ ನೋವು ಅಯ್ಯೋ ಅಸಾಧ್ಯ… ಅಸಹ್ಯ!! ಆ ಮನೆಯ ಕತ್ತಲು ಅವಳನ್ನು ನಡುಗಿಸಿತು…
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...