ಆ ದಿನ,
ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ಹಾಲಿನೊಳಗಿದ್ದ ಕುರ್ಚಿಯೊಂದರಲ್ಲಿ ಅನೇಕ ವಕೀಲರ ಮಧ್ಯೆ ಕುಳಿತಿದ್ದರು. ಏನನ್ನೋ ಕಳೆದುಕೊಂಡವರಂತೆ ಅತ್ಯಂತ ದುಗುಡದಿಂದಿದ್ದ ಅವರಿಗೆ ಬೇಂಚ್ ಕ್ಲರ್ಕ್ ತಮ್ಮ ಹೆಸರನ್ನು ಕರೆದದ್ದೂ ಕೇಳಿಸಿರಲಿಲ್ಲ.
“ಡಾಕ್ಟರ್ ಕರೀತಾ ಇದ್ದಾರೆ” ಹತ್ತಿರ ಬಂದ ಪೊಲೀಸ್ ಪೇದೆ ಮೆಲ್ಲನೆ ಹೇಳಿದ. ಬೆಚ್ಚಿಬಿದ್ದವರಂತೆ ಅವನತ್ತ ನೋಡಿದ ಪಾರ್ವತಿಯವರು, ಸಾವರಿಸಿಕೊಂಡವರಂತೆ ನಿಧಾನವಾಗಿ ಮೇಲೆದ್ದು ಕಟಕಟೆಯ ಬಳಿ ಬಂದು ಒಳಗೆ ಕಾಲಿಟ್ಟರು. “ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ – ನಾನು ಹೇಳುವುದೆಲ್ಲ ಸತ್ಯ. ಸತ್ಯವನ್ನಲ್ಲದೇ ಬೇರೆ ಏನನ್ನೂ ಹೇಳುವುದಿಲ್ಲವೆಂದು ಹೇಳಿ” ಎಂದು ಹತ್ತಿರ ಬಂದು ನಿಂತ ಪಬ್ಲಿಕ್ ಪ್ರಾಸಿಕ್ಯೂಟರ್ ಭಗವದ್ಗೀತೆಯ ದೊಡ್ಡ ಪುಸ್ತಕವೊಂದನ್ನು ಡಾಕ್ಟರ್ ಪಾರ್ವತಿಯವರ ಮುಂದೆ ಹಿಡಿದರು. ಸೂತ್ರದ ಬೊಂಬೆಯಂತೆ ಅವರು ಹೇಳಿಕೊಟ್ಟಿದ್ದನ್ನು ಹೇಳಿದ ಅವರ ಮುಖ ಗಂಭೀರವಾಗಿತ್ತು.
“ಹೆಸರು?”
“ಡಾಕ್ಟರ್ ಪಾರ್ವತಿ.”
“ವಯಸ್ಸು?”
“ನಲವತ್ತೆರಡು”
“ತಂದೆಯ ಹೆಸರು?”
“ಸದಾಶಿವರಾವ್”
“ಎಲ್ಲಿ ಕೆಲಸ ಮಾಡುತ್ತಿದ್ದೀರಿ?”
“ಜನರಲ್ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳಿಂದಲೂ ಇದ್ದೇನೆ” ಅಲ್ಲಿಗೆ ಒಂದು ಹಂತ ಮುಗಿಸಿದವರಂತೆ ನಿಂತ ಪ್ರಾಸಿಕ್ಯೂಟರ್ ತಮ್ಮ ಕೈಯಲ್ಲಿದ್ದ ಕಾಗದಗಳ ಫೈಲನ್ನು ಮಾಡಿದ ನವಜಾತ ಶಿಶುವಿನ ವಿವರ ತಿಳಿಸ್ತೀರಾ?”
“ನಿಮಗೆ ಆ ದಿನವೇ ಸರ್ಟಿಫಿಕೇಟನ್ನು ಮತ್ತು ಪೋಸ್ಟಮಾರ್ಟಮ್ ರಿಪೋರ್ಟ್ ಬರೆದು ಕಳುಹಿಸಿದ್ದೇನೆ…”
“ನಿಮ್ಮ ಪ್ರಕಾರ ಮಗುವಿನ ದೇಹ ಕೊಳೆತಿದ್ದು, ಸಾವು ಸಹಜವಲ್ಲ… ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿದೆ ಎಂಬುದು ನಿಮ್ಮ ಅಭಿಪ್ರಾಯ ಸರೀನಾ?” ಹತ್ತಿರ ಬಂದು ನಿಂತು ತೀಕ್ಷ್ಣವಾದ ದೃಷ್ಟಿಯಿಂದ ತನ್ನತ್ತ ನೋಡಿದ ಪ್ರಾಸಿಕ್ಯೂಟರ್ ಮುಖವನ್ನು ನೋಡುತ್ತಿದ್ದ ಡಾಕ್ಟರ್ ಪಾರ್ವತಿ,
“ಹೌದು…” ಎಂದರು ಗಂಭೀರವಾದ ಸ್ವರದಲ್ಲಿ
“ಖಚಿತವಾದ ಅಭಿಪ್ರಾಯವನ್ನು, ಶವ ಕೊಳೆತುಹೋದದ್ದರಿಂದ ಕೊಡಲಾಗದೆಂದೂ, ನೀರು ಕುಡಿದು ಮರಣವನ್ನಪ್ಪಿರಬಹುದೆಂದೂ ತಿಳಿಸಿದ್ದೀರಿ ಯಾವುದು ಸರಿ?”
“ಎಲ್ಲವನ್ನೂ ಬರೆದಿದ್ದೀನಲ್ಲ…..”
“ಪೋಸ್ಟಮಾರ್ಟಮ್ ವರದಿಯಲ್ಲಿ ನೀವೇ ಬರೆದಿರುವ ಕೆಲವು ಮುಖ್ಯ ಅಂಶಗಳನ್ನು ಓದಿ ಹೇಳ್ತೀರಾ ಡಾಕ್ಟರ್…..?”
“ಹೂಂ…..” ಎಂದು ಪಾರ್ವತಿ ಪುಸ್ತಕ ಬಿಡಿಸಿದರು. ನಿಧಾನವಾಗಿ ವಿವರವನ್ನು ಗಂಭೀರ ಕಂಠದಿಂದ ಓದುತ್ತಾ ಹೋದರು. ಕೋರ್ಟಿನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ !
ಎಲ್ಲರ ಕಣ್ಣುಗಳಲ್ಲೂ ಕುತೂಹಲ, ಕಾತುರ! ಬಾಡಿ ಕಂಪ್ಲಿಟ್ ಆಗಿ ಡಿಕಂಪೋಸ್ ಆಗಿರಲಿಲ್ಲವಾದ್ದರಿಂದ ಈ ಅಭಿಪ್ರಾಯ ಬರೆದಿದ್ದೇನೆ. ಉಸಿರು ಕಟ್ಟಿ ಸಾವು ಸಂಭವಿಸಿದೆ. ಅದಕ್ಕೆ ಕಾರಣ ನೀರು” ಎಂದು ಮುಕ್ತಾಯದ ಸ್ವರದಲ್ಲಿ ಹೇಳಿದರು. ತಮ್ಮ ಅಭಿಪ್ರಾಯದ ಬಗ್ಗೆ ವಿಶ್ವಾಸವಿತ್ತು. ಪ್ರಾಮಾಣಿಕತೆಯಿಂದ ದೃಢವಾಗಿ ಆಕೆ ಹೇಳಿದರು.
ಪ್ರಾಸಿಕ್ಯೂಟರು ಹೋಗಿ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಪಾರ್ವತಿದೇವಿ ನಿಧಾನವಾಗಿ ಹಣೆಯಲ್ಲಿ ಮೂಡಿದ ಬೆವರ ಹನಿಗಳನ್ನು ಕರ್ಚಿಫಿನಿಂದ ಒರೆಸಿಕೊಂಡರು. ಒಣಗಿ ಬಂದ ಹಾಗಿದ್ದ ತುಟಿಯನ್ನು ನಾಲಿಗೆಯಿಂದ ತೇವ ಮಾಡಿಕೊಂಡರು.
ಮೌನವಾಗಿ ಕುಳಿತು ಆಲಿಸುತ್ತಾ ಬರೆಯಿಸುತ್ತಿದ್ದ ನ್ಯಾಯಾಧೀಶರು, “ಮತ್ತೇನಾದ್ರೂ ಕೇಳುವುದಿದೆಯಾ? ಇದ್ದರೆ ಮುಗಿಸಿಬಿಡಿ” ಎಂದು ವಕೀಲರು ನೋಡಿದರು. ದೊಡ್ಡ ಫೈಲಿನೊಂದಿಗೆ ಎದ್ದು ನಿಂತ ಅಡ್ವಕೇಟ್ ಕೇಶವ್.
“ನಾನಿದ್ದೇನೆ ಸರ್” ಎನ್ನುತ್ತಾ ಕಟಕಟೆಯ ಬಳಿ ಬಂದು ನಿಂತರು. ಮೂವತ್ತರ ಆಕರ್ಷಕ, ತೀಕ್ಷ ಕಣ್ಣುಗಳ, ಲವಲವಿಕೆ ತುಂಬಿದ ಯುವಕ. ಅವನ ಪ್ರತಿಯೊಂದು ಚಲನವಲನೆಗಳಲ್ಲಿಯೂ ವಿಶ್ವಾಸ, ಜಾಣ್ಮೆ ಕಾಣಿಸುತ್ತಿತ್ತು. ಡಾಕ್ಟರ್ ಪಾರ್ವತಿಯವರು ಹೊಸಬರನ್ನು ನೋಡುವಂತೆ ನೋಡಿದರು. ಏನನ್ನೋ ಹೇಳುವ, ಏನನ್ನೂ ಕೇಳುವ ಕುತೂಹಲ ಅವರ ಕಣ್ಣುಗಳಲ್ಲಿ ಕುಣಿಯುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿದ ಕೇಶವ್, ಕಣ್ಣುಗಳಲ್ಲೇ ಭರವಸೆ, ಅಭಯವನ್ನು ವ್ಯಕ್ತಪಡಿಸಿ, ಹಿಂದೆಯೇ ಗಾಂಭೀರ್ಯವನ್ನು ತಂದುಕೊಂಡು.
“ಡಾಕ್ಟರ್, ಸತ್ತ ಮಗುವಿನ ವಯಸ್ಸು ಎಷ್ಟಿರಬಹುದು?” ನೇರವಾಗಿ ನೋಡುತ್ತಾ ಪ್ರಾರಂಭಿಸಿದ.
“ಎರಡು ಮೂರು ದಿನಗಳಿರಬಹುದು.”
“ಒಂಭತ್ತು ತಿಂಗಳು ಅರ್ಥಾತ್, ದಿನ ತುಂಬಿ, ಸಹಜವಾಗಿ ಜನಿಸಿದ ಶಿಶುವೆಂದು ಹೇಳಬಹುದೆ?”
“ಹೌದು. ಪೂರ್ತಿ ದಿನ ತುಂಬಿದ ನಂತರ ಹುಟ್ಟಿದ ಆರೋಗ್ಯವಂತ ಮಗು…”
“ಆರೋಗ್ಯವಾಗಿತ್ತೆಂದು ಹೇಗೆ ಹೇಳ್ತೀರಿ? ಪ್ರಸವದ ಸಮಯದಲ್ಲಿ ನೀವಿದ್ದಿರಾ?”
“ಮ್…. ಮ್…..”
“ಹೇಳಿ ಪರವಾಗಿಲ್ಲ, ಯಾಕೆ ತಡವರಿಸುತ್ತೀರಾ?”
“ತಡವರಿಸ್ತಾ ಇಲ್ಲ, ಯೋಚಿಸಿದೆ ಅಷ್ಟೆ”
“ಇಲ್ಲಿ ಯೋಚಿಸುವ ಅವಶ್ಯಕತೆಯಿಲ್ಲ….. ಪುಸ್ತಕ ನೋಡಿ ಹೇಳಬೇಕಷ್ಟೇ…”
“ಹೌದು, ಮಗುವಿನ ದೈಹಿಕ ಬೆಳವಣಿಗೆ, ಅದರ ಆಕಾರ, ಅಂಗಾಂಗಗಳನ್ನು ನೋಡಿ ಹೇಳಬಹುದು.”
“ಓ… ಹಾಗಾ” ಎಂದ ರಾಗವಾಗಿ, ಅಪ್ಪಕ್ಕೇ ಅವರ ಹುಬ್ಬುಗಳು ಗಂಟಿಕ್ಕಿದ್ದವು. ಕೇಶವ್ ಸಹಜವಾಗಿಯೇ ತಾಳ್ಮೆಯಿಂದ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದ….. ಎದುರಾಳಿಯ ಅಸಹನೆ, ಹುಬ್ಬು ಗಂಟುಗಳಿಂದ ಜಯದ ಒಂದೊಂದೇ ಮೆಟ್ಟಿಲು ಹತ್ತುವವನಂತೆ ಉತ್ಸಾಹಿತನಾಗಿದ್ದ. ಅವನ ರೀತಿ ಯಾರಿಗೂ ತಿಳಿಯುವಂತಿರಲಿಲ್ಲ.
“ಡಾಕ್ಟರ್, ನೀವು ಮಗು ಹುಟ್ಟಿದ ನಂತರ, ನೀರು ಕುಡಿದು ಸಾವನ್ನಪ್ಪಿರಬಹುದೆಂದು ಹೇಳಿದಿರಿ, ಕೆಲವೊಮ್ಮೆ ಪ್ರಸವದ ವೇಳೆಯಲ್ಲಿ ಹೊಟ್ಟೆ ಒಳಗಿರುವಾಗಲೇ ನೀರು ಕುಡಿದುದರಿಂದ ಸತ್ತು ಹುಟ್ಟುತ್ತದೆಂದು ಕೇಳಿದ್ದೇನೆ, ಹೌದಾ?”
“ಒಮ್ಮೊಮ್ಮೆ ಹಾಗಾಗುವುದೂ ಉಂಟು…”
“ಹಾಗಾದ್ರೆ ನನ್ನ ಅಭಿಪ್ರಾಯದಲ್ಲಿ ಈ ಮಗು ಸತ್ತು ಹುಟ್ಟಿದೆ. ಕೊಲೆಯಲ್ಲ…”
“ಅದು ಸಾಧ್ಯವಿಲ್ಲ. ಮಗು ಸತ್ತು ಹುಟ್ಟಿಲ್ಲ ! ಹುಟ್ಟಿದ ನಂತರ ಮರಣವನ್ನಪ್ಪಿದೆ…”
“ಕ್ಷಮಿಸಿ ಡಾಕ್ಟರ್ ಉದ್ವೇಗಗೊಳ್ಳೇಡಿ.”
“ನಾನ್ಯಾಕೆ ಉದ್ವೇಗಗೊಳ್ಳಲಿ? ವಾದ ಮಾಡುವಾಗ ಸ್ವರದಲ್ಲಿ ಏರಿಳಿತವೂ ಇರಬಾರದೇನು?”
“ಹಾಗೇನೂ ಹೇಳಿಲ್ಲವಲ್ಲ. ನಮ್ಮ ನಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುವಾಗ ದನಿ ಏರುವುದು ಅತ್ಯಂತ ಸಹಜ…..”
“……….”
“ನಿಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುವಂತಹ ವಿವರಗಳು ಅಥವಾ ಸಾಕ್ಷಿಗಳು….?
“ವೈದ್ಯಕೀಯ ಶಾಸ್ತ್ರದ ಪ್ರಕಾರ ನಾನು ಪೋಸ್ಟ್‌ಮಾರ್ಟಂ ಮಾಡಿದ ವಿವರಗಳ ಆಧಾರದ ಮೇಲೆ ನನ್ನ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುತ್ತೇನೆ.”
“ಎಸ್ ಮುಂದುವರೆಯಿಸಿ”
“ಆಗಲೇ ಹೇಳಿದೆ, ಆ ಮಗು ಪೂರ್ಣವಾಗಿ ಬೆಳೆದದ್ದು ಎಂದು. ಆ ಮಗುವಿನ ಶವವನ್ನು ಒಳ್ಳೆಯ ಉಣ್ಣೆಯ ಶಾಲಿನಲ್ಲಿ ಸುತ್ತವಾಗಿತ್ತು ಹಾಗೂ ಹೊಕ್ಕುಳ ಬಳ್ಳಿಯನ್ನು ದಾರದಿಂದ ಕಟ್ಟಲಾಗಿತ್ತು -”
“ಹುಟ್ಟಿದ ಎಲ್ಲಾ ಮಕ್ಕಳಿಗೂ ಹೊಕ್ಕುಳ ಬಳ್ಳಿಗೆ ದಾರ ಕಟ್ಟುವುದಿಲ್ಲವೆ?”
“ಸತ್ತು ಹುಟ್ಟಿದ್ದರೆ….. ಕಟ್ಟಿರುವುದಿಲ್ಲ. ಮಗು ಜನನದ ನಂತರ ಉಸಿರಾಡಿದ್ದಕ್ಕೆ ಚಿಹ್ನೆಗಳಿವೆ.”
“…..”
“ಕಿವಿಗಳ ನಿಂತ ಮಧ್ಯೆದಲ್ಲಿ ಕಾಣುವ ತೆಳು ಅಂಟಾದ ವಸ್ತುವಿನ ಬದಲು, ಆ ಜಾಗವನ್ನು ಗಾಳಿಯು ಆಕ್ರಮಿಸಿಕೊಂಡಿರುವುದು ಕಾಣಿಸಿತ್ತು. ಎದೆಗೂಡು ಚಪ್ಪಡಿಯಾಗಿರದೆ ಗುಂಡಾಗಿದ್ದುದರಿಂದ ಶ್ವಾಸಕೋಶಗಳು ಕೆಲಸ ಮಾಡಿದ್ದುದರ ಮತ್ತು ರಕ್ತ ಪರಿಚಲನೆಯಾಗಿದೆ ಎಂಬುದರ ಗುರುತು.”
“ಹೂಂ… ಹೇಳಿ…”
“ಸಹಜವಾದ ಉಸಿರಾಟದ ಕ್ರಿಯೆ ನಡೆಯದಿದ್ದಲ್ಲಿ ಎದೆಗೂಡು ಚಪ್ಪಟೆಯಾಗಿರುವುದೂ ಅಲ್ಲದೆ, ಸ್ಪರ್‍ಶಿಸಿದರೆ ಮೃದುವಾಗಿರುವುದಿಲ್ಲ. ನೀಲ ರಕ್ತ ವರ್ಣದ್ದಾಗಿ ಕಾಣಿಸುತ್ತದೆ. ಆದ್ದರಿಂದ ಮಗು ಉಸಿರಾಡಿದ್ದರ ಬಗ್ಗೆ ಎಲ್ಲಾ ಸೂಚನೆಗಳಿವೆ. ಕತ್ತರಿಸಿದ ಶ್ವಾಸಕೋಶಗಳನ್ನು ನೀರಿಗೆ ಹಾಕಿದರೆ ತೇಲುತ್ತವೆ. ಸ್ಪಂಜಿನಂತಿರುತ್ತದೆ.”
“ಒಂದು ನಿಮಿಷ ಡಾಕ್ಟರ್, ನೀವು ಮಗುವಿನ ಕೃತಕ ಉಸಿರಾಟವನ್ನು ಯಾವ ಸಂದರ್ಭದಲ್ಲಿ ನೀಡುತ್ತೀರಿ?”
“ಹುಟ್ಟಿದ ಕೂಡಲೆ ಮಗು ಉಸಿರಿಗಾಗಿ ಚಡಪಡಿಸಿದರೆ ಮತ್ತು ಹೃದಯದ ಬಡಿತವಿದ್ದು ಉಸಿರಾಟ ಇಲ್ಲದಿದ್ದಾಗ ಬಾಯಿಗೆ ಬಾಯಿಂದ ಉಸಿರು ರವಾನಿಸಿ ಉಸಿರಾಗುವಂತೆ ಪ್ರಚೋದಿಸುತ್ತೇವೆ.”
“ಈ ಮಗು ಸತ್ತು ಹುಟ್ಟಿದ್ದು, ತಿಳಿದೋ ತಿಳಿಯದೆಯೋ ಕೃತಕ ಉಸಿರಾಟವನ್ನು ನೀಡುವ ಪ್ರಯತ್ನ ನಡೆದುದರಿಂದಲೂ ನೀವು ಹೇಳಿರುವ ಚಿಹ್ನೆಗಳು ಕಾಣಿಸಬಹುದು, ಅಲ್ಲವೆ?”
“ಹೌದು, ಇರಬಹುದು. ಆದರೆ ಅರ್ಧಾಂಶವಾಗಿರುತ್ತದೆ. ಶ್ವಾಸಕೋಶಗಳಲ್ಲಿ ಗಾಳಿಯ ಅಂಶ ಕಂಡರೂ, ಪೂರ್ತಿಯಾಗಿ ಆವರಿಸಿರುವುದಿಲ್ಲ. ರಕ್ತ ಪರಿಚಲನೆಯೇ ಆಗಿರದ ಕಾರಣ ಶ್ವಾಸಕೋಶಗಳನ್ನು ಕತ್ತರಿಸುದಾಗ ರಕ್ತವು ಕಾಣಿಸುವುದಿಲ್ಲ.”
“ಓಹ್!”
“ಮಗುವಿನ ಹೊಟ್ಟೆಯೊಳಗೂ ನೀರಿತ್ತು; ಶ್ವಾಸಕೋಶಗಳಲ್ಲೂ ನೀರಿನ ಅಂಶವಿತ್ತು.”
“ಗರ್‍ಭಾಶಯದಲ್ಲಿರುವಾಗಲೇ ಒಳಗೆ ನೀರು ಕುಡಿದು ಸತ್ತಿದ್ದರೆ?”
“ಹೊಟ್ಟೆಯೊಳಗೆ ನೀರಿನಂಶವಿರುವುದಿಲ್ಲ. ಮಗುವು ಉಪವಾಸವಿಟ್ಟಿದ್ದರೂ ಖಾಲಿಯಿರಬಹುದು.”
“………”
“ಎಲ್ಲದಕ್ಕೂ ಮುಖ್ಯವಾಗಿ ಶಿಶುವಿನ ಗುದದ್ವಾರದ ಸುತ್ತಲೂ ಮಲವಿಸರ್ಜನೆಯಾದ ಗುರುತ್ತಿತ್ತು. ಸಾಮಾನ್ಯವಾಗಿ ಶಿಶುವಿನಲ್ಲಿ “ಮೆಕೋನಿಯಂ” ಎಂಬ ಹಸಿರು ಬಣ್ಣದ ಅಂಟು ಅಂಟಾದದ್ದು, ಕರುಳಿನಿಂದ ಕ್ರಮವಾಗಿ ಕೆಳಗಿಳಿಯುತ್ತಾ ಬಂದು ಪ್ರಸವವಾದ ಇಪ್ಪತ್ತ ನಾಲ್ಕರಿಂದ ನಲವತ್ತೆಂಟು ಗಂಟೆಯೊಳಗೆ ಹೊರಗೆ ತಳ್ಳಲ್ಪಡುತ್ತದೆ. ಇಲ್ಲಿ ಮಗುವು ಮಲ ವಿಸರ್ಜನೆ ಮಾಡಿದೆ. ಇದು ಅದಕ್ಕೆ ಹಾಲುಣಿಸಿರುವುದರ ಸಂಕೇತ.”
ಪಾರ್ವತಿಯವರ ಜ್ಞಾನ, ಜಾಣ್ಮೆ, ತರ್‍ಕಬದ್ಧವಾದ ಮಾತುಗಳಿಗೆ ಕೇಶವ್ ಮುಂದೆ ಮಾತನಾಡದಾದ. ಸೋಲಿನ ನೆರಳು ಕಾಣಿಸಿಕೊಂಡರೂ ಹಿಂದೆಯೇ ಜಯಿಸಿಯೇ ತೀರುತ್ತೇನೆಂಬ ಭಾವವು ಆ ನೆರಳನ್ನು ಓಡಿಸಿತು.
“ಥ್ಯಾಂಕ್ಯೂ ಡಾಕ್ಟರ್, ಈ ಕೇಸಿನ ಬಗ್ಗೆ ನಾನು ಹೇಳುವುದೆಲ್ಲಾ ಮುಗಿಯಿತು. ಆದರೆ ಮತ್ತೊಂದೂ ಹೇಗೋ ಕೇಸು ನಿಮಗೆ ಸಿಕ್ಕಿದುದರಿಂದ ನೀವೀಗ ಉತ್ತರಿಸಬೇಕು” ಎಂದ ಕೇಶವ್ ಮತ್ತೊಂದು ಫೈಲನ್ನು ಬಿಡಿಸುತ್ತಾ ದೂರ ನಿಂತಿದ್ದ ಪೊಲೀಸ್ ಪೇದೆಗೆ ಕೈಸನ್ನೆ ಮಾಡಿದ….. ಮೂಲೆಯೊಂದರಲ್ಲಿ ಪೇದೆಯೊಂದಿಗೆ ನಿಂತಿದ್ದ ಯುವತಿಯನ್ನು ಮತ್ತೊಂದು ಕಟಕಟೆಯಲ್ಲಿರಿಸಲಾಯಿತು.
ಹದಿನೆಂಟರ ಹರೆಯದ, ಸುಂದರ ತರುಣಿ ಎಲ್ಲರನ್ನೂ ದಾಟಿ ಕಟಕಟೆಯೊಳಗೆ ಬರುವಾಗ ಗುಜು ಗುಜು ಪ್ರಾರಂಭವಾಯಿತು. ಯುವತಿ ದಿಟ್ಟೆಯಂತೆ ನಡೆದು ಬಂದು ಧೈರ್‍ಯದಿಂದ ತಲೆ ಎತ್ತಿ ನಿಂತಳು. ಕನಸುಗಳನ್ನು ಕಾಣುವ ಬೊಗಸೆ ಕಂಗಳಲ್ಲಿ ಎಂತಹುದೋ ದ್ವೇಷ ಅಸಹನೆ, ಕೋಪ, ನಿರಾಸೆ, ಹಠ, ಹತಾಶೆಯ ಬಗೆಬಗೆಯ ಭಾವನೆಗಳು ತುಂಬಿದ್ದವು. ಮೈತುಂಬಾ ಸೆರಗು ಹೊದ್ದು ನಿಂತ ಅವಳತ್ತ ಜನ ಕರುಣೆ, ಅನುಕಂಪದಿಂದ ನೋಡಿದರು.
“ಸದ್ದು….. ದಯವಿಟ್ಟು ಮಾತು ನಿಲ್ಲಿಸಿ ನ್ಯಾಯಾಧೀಶರು ಗಡಸು ಕಂಠದಿಂದ ಹೇಳಿ,
“ಎಸ್…. ಕೇಶವ್, ಮುಂದುವರೆಯಿಸಿ…” ಎನ್ನುತ್ತಾ ಬರೆಯಲು ಪೆನ್ನು ಎತ್ತಿಕೊಂಡರು. ದನಿ ಸರಿಪಡಿಸಿಕೊಳ್ಳುವಂತೆ ಮೆದುವಾಗಿ ಕೆಮ್ಮಿ ಗಂಟಲು ನೇವರಿಸಿಕೊಂಡು ಕೇಶವ್ ಡಾಕ್ಟರ್ ಪಾರ್ವತಿದೇವಿಯವರ ಬಳಿ ಬಂದು ನಿಂತ.
“ಡಾಕ್ಟರ್, ಈ ಯುವತಿಯನ್ನು ಗುರುತಿಸುತ್ತೀರಾ?’
ಎಂದ ಕೇಶವ್ ಕಟಕಟೆಯಲ್ಲಿ ನಿಂತಿದ್ದ ಯುವತಿಯತ್ತ ಕೈತೋರಿಸಿ, ನಿರ್ದೇಶಿಸುತ್ತಾ ಕೇಳಿದ.
ತಲೆ ಎತ್ತಿ ಕಟಕಟೆಯತ್ತ ನೋಡಿದ ಪಾರ್ವತಿಯವರ ತಲೆ ಒಮ್ಮೆ ಸುತ್ತಿಬಂದಂತಾಗಿ, ಕಾಲುಗಳಲ್ಲಿ ಶಕ್ತಿಯೇ ಇಲ್ಲದಂತಾಗಿ ಕುಸಿದು ಬೀಳುವಂತಾಯಿತು. ಆದರೂ ಸಾವರಿಸಿಕೊಂಡು ನಿಲ್ಲಲು ಪ್ರಯತ್ನಿಸುತ್ತಾ,
“ಹೌದು…..” ಎಂದರು. ಆಳವಾದ ಬಾವಿಯಿಂದ ಬಂದಂತಿತ್ತು ಅವರ ಸ್ವರ
“ಹೇಗೆ? ಪ್ರತಿದಿನಾ ಅನೇಕರ ಮುಖಗಳನ್ನು ನೋಡುವ ಚಿಕಿತ್ಸೆ ನೀಡುವ ನೀವು, ಈಕೆಯನ್ನೇ ಹೇಗೆ ಪ್ರತ್ಯೇಕವಾಗಿ ನೆನಪಿಟ್ಟುಕೊಂಡು ಗುರುತಿಸುತ್ತೀರಿ ಡಾಕ್ಟರ್?”
ಬಾಯಿಗೇ ಬಂದಂತಾದ ಹೃದಯವನ್ನು ಒತ್ತಿ ಹಿಡಿದ ಪಾರ್ವತಿಯವರು.
“ನಾನು ಗುರುತಿಸ್ತೀನಿ” ಎಂದರು. ಅವ್ಯಕ್ತ ನೋವು ಮೂಡಿತು. ಅವರ ದನಿ ಅವರಿಗೇ ಕೇಳಿದಷ್ಟು ಕ್ಷೀಣವಾಗಿತ್ತು.
“ಹೇಳಿ ಡಾಕ್ಟರ್” ಕೇಶವ್ ಒತ್ತಡ ಹೇರತೊಡಗಿದ್ದ.
“ಆಂ? ಹೌದು. ಆ ದಿನ ನೋಡಿ ಪರೀಕ್ಷಿಸಿದ ನಂತರ ವಿವರ ಬರೆದಿದ್ದೇನೆ….. ಅವುಗಳ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸುತ್ತೇನೆ…..” ಬಹು ಪ್ರಯಾಸದಿಂದ ಹೇಳುತ್ತಿರುವರು ಎಂದೆನಿಸಿತು ಕೇಶವನಿಗೆ.
“ಮತ್ತಾವ ಸಂಬಂಧವೂ ಇಲ್ಲವೆ?” ಕೊಂಕು ದನಿಯಲ್ಲಿ ಕೇಳಿದ. ಪಾರ್ವತಿಯವರ ಮುಖ ಬಿರುಸಾಯಿತು. ಕಟುವಾಗಿ ಹೇಳಲು ತವಕಿಸಿದ ನಾಲಿಗೆಯನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದು,
“ಕಾನೂನಿನ ಕೋಣೆಯಲ್ಲಿ ಸಂಬಂಧ ಕೇಳುವುದಾಗಲೀ, ಹೇಳುವುದಾಗಲೀ, ತೀರಾ ವೈಯಕ್ತಿಕ” ಕೇಶವನತ್ತ ತೀಕ್ಷ್ಣವಾಗಿ ನೋಡುತ್ತಾ ಹೇಳಿದ ಅವರ ದನಿಯಲ್ಲಿದ್ದ ಅಸಹನೆಯನ್ನು ಗುರುತಿಸಿದ ಕೇಶವನ ತುಟಿಗಳಲ್ಲಿ ನಸುನಗೆ ಮೂಡಿತು.
“ಡಾಕ್ಟರರಿಗೆ ಸಿಟ್ಟು ತರಿಸಿದೆ. ಕ್ಷಮಿಸಿ, ಸಂಬಂಧಗಳ ಬಗ್ಗೆ ವಿಚಾರಿಸುವುದು, ಕೋರ್ಟಿನಲ್ಲಿ ಒಮ್ಮೊಮ್ಮೆ ಮುಖ್ಯವಾಗುತ್ತದೆ. ಆ ವಿಷಯಕ್ಕೆ ನಂತರ ಬಂದರಾಯ್ತು.” ನೀವು ಈ ಯುವತಿಯನ್ನು ಈ ದಿನಾಂಕದಂದು ಪರೀಕ್ಷಿಸಿದಿರಿ ಎಂದೆ, ಹೌದು ತಾನೇ?”
“ಹೌದು, ಪೊಲೀಸಿನವರಿಂದ ಕರೆತಂದ ಈಕೆಯನ್ನು ಪರೀಕ್ಷಿಸಿ, ಆಸ್ಪತ್ರೆಯ ಪುಸ್ತಕದಲ್ಲಿ ಬರೆದುಕೊಂಡು ಕಳುಹಿಸಿದ್ದೇನೆ….. ಮ್… ಪರೀಕ್ಷೆಯ ಪ್ರಕಾರ ಈಕೆಗೆ, ಆ ತಾರೀಖಿಗೆ ಹೆರಿಗೆಯಾಗಿ ಒಂದು ವಾರವಾಗಿತ್ತು…..”
“ನೀವು ಹೇಳಿದ ವಿವರಗಳು, ಅಥವಾ ಚಿಹ್ನೆಗಳು ಹೆರಿಗೆಯಾದ ಮಹಿಳೆಯಲ್ಲಿಯೂ, ಗರ್ಭಪಾತವಾದ ಮಹಿಳೆಯರಲ್ಲಿಯೂ ಇದೇ ರೀತಿ ಕಾಣಸಿಗಬಹುದು ಅಲ್ಲವೆ?”
“ಇರಲೂಬಹುದು….”
“ಅಂದರೆ, ಇಲ್ಲದಿರಲೂಬಹುದು. ಯಾಕೆ, ಅನುಮಾನವೆ ಡಾಕ್ಟರ್?”
“ನನ್ನ ಅಭಿಪ್ರಾಯದಲ್ಲಿ ನನಗೆ ವಿಶ್ವಾಸವಿದೆ. ಗರ್ಭ ಧರಿಸಿ, ಶಿಶುವನ್ನು ಹೊತ್ತು ನಂತರ ಪ್ರಸವಿಸಿದ, ಗರ್ಭಕೋಶವನ್ನು ಪರೀಕ್ಷಿಸಿ ವಿವರ ತಿಳಿಸಿದ್ದೇನೆ…..”
“ಅಂದರೆ- ಈ ಯುವತಿಗೆ ಪ್ರಸವವಾಗಿರುವುದು ಖಂಡಿತಾ ಎಂದು ನೀವು ಸರ್ಟಿಫಿಕೇಟ್ ಕೊಟ್ಟಿದ್ದೀರಿ…”
“ಹೌದು” ಎಂದ ಆಕೆಯ ಸ್ವರದಲ್ಲಿ ಗಾಂಭೀರ್‍ಯದ ಜೊತೆಗೆ ಕಂಡು ಕಾಣದಂತಹ ಕಾಠಿಣ್ಯ ಗೋಚರಿಸಿತು.
“ನೀವು ಸುಳ್ಳು ಸರ್ಟಿಫಿಕೇಟನ್ನು ಕೊಟ್ಟಿದ್ದೀರಿ. ಈ ಯುವತಿಗೆ ಪ್ರಸವವಾಗಿಲ್ಲ. ಗರ್ಭಪಾತವಾಗಿದೆ ಎಂದು ನಾನು ಅನೇಕ ಆಧಾರಗಳೊಂದಿಗೆ ಸಮರ್ಥಿಸುತ್ತೇನೆ.”
ಇದುವರೆಗೂ ಪ್ರಯತ್ನಪೂರ್ವಕವಾಗಿ ಕೋಪವನ್ನು ತಡೆಹಿಡಿದವರಂತೆ ಮಾತನಾಡುತ್ತಿದ್ದ ಪಾರ್ವತಿಯವರ ಸಿಟ್ಟು ಭುಗಿಲೆಂದಿತು.
“ಇದುವರೆಗೂ ನಾನು ಯಾರಿಗೇ ಆಗಲಿ, ಸುಳ್ಳು ಸರ್ಟಿಫಿಕೇಟನ್ನು ನೀಡಿಲ್ಲ. ನನ್ನ ವೃತ್ತಿಯಲ್ಲಿ ಯಾರೂ ಇಂಥ ಆರೋಪ ಮಾಡಿಲ್ಲ. ನನ್ನನ್ನು ಅನುಮಾನಿಸಿ ಅವಮಾನಿಸುವ ಹಕ್ಕು ನಿಮಗಿಲ್ಲ” ಅವರ ಮುಖ ಕೋಪದಿಂದ ಕೆಂಪೇರಿತ್ತು.
“ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ ಡಾಕ್ಟರ್… ಇದು ಕೋರ್ಟ್….. ನನ್ನ ಸಂದೇಹ ವ್ಯಕ್ತಪಡಿಸುವುದು ವಾದ ವಿವಾದಗಳಲ್ಲಿ ಸಾಮಾನ್ಯ ಹಾಗೂ ಸಹಜ. ಇದರಲ್ಲಿ ಯಾರನ್ನೇ ಅಗಲಿ ಅವಮಾನಿಸುವ ಪ್ರಶ್ನೆಯೇ ಬರುವುದಿಲ್ಲ. ಹೌದು ಅಥವಾ ಇಲ್ಲವೆಂದು ಹೇಳಿದರೆ ಸಾಕು” ಎಂದ ಕೇಶವ್.
ಎಲ್ಲವನ್ನೂ ಆಸಕ್ತಿಯಿಂದ ಆಲಿಸುತ್ತಿದ್ದ ನ್ಯಾಯಾಧೀಶರು, ಟೈಪಿಸ್ಟಿಗೆ ಹೇಳುತ್ತಾ ಹೋಗುತ್ತಿದ್ದರೆ, ಆಕೆ ಪ್ರತಿಯೊಂದು ಅಕ್ಷರವನ್ನೂ ಬಿಡದೆ, ವೇಗದಿಂದ ಟೈಪ್ ಮಾಡುತ್ತಿದ್ದಳು. ಕೋರ್ಟಿನಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ದ !
ಕೇಶವ ಗಂಭೀರವಾದ ಸ್ವರದಲ್ಲಿ ಮುಂದುವರೆಸಿದ. “ಯುವರ್ ಆನರ್, ಈ ಯುವತಿಯ ಒಮ್ಮೆ ಅತ್ಯಾಚಾರಕ್ಕೊಳಗಾಗಿದ್ದಳು. ಕಂಪ್ಲೆಂಟ್, ಪೊಲೀಸ್ ಅಂತ ಓಡಾಡಿದ್ರೆ ಅವಮಾನಾಂತ ಭಾವಿಸಿ ಮೌನವಾಗಿದ್ದು ಬಿಟ್ಟರು. ತಾನು ಗರ್ಭಿಣಿಯಾಗಿದ್ದೇನೆಂದು ಆಕೆ ತಿಳಿದಾಗ ಕೈ ಮೀರಿತ್ತು. ಸ್ನೇಹಿತೆಯರ ಸಹಾಯದಿಂದ ಕಾನೂನುಬದ್ಧವಾಗಿಯೇ ಗರ್ಭಪಾತ ಮಾಡಿಸಿಕೊಂಡಳು. ಅಷ್ಟೇ ವಿನಃ ಆಕೆಗೆ ಹೆರಿಗೆಯಾಗಲೂ ಇಲ್ಲ. ಹೆತ್ತ ಶಿಶುವನ್ನು ಆಕೆ ಹತ್ಯೆ ಮಾಡಲೂ ಇಲ್ಲ” ಕೇಶವನ ದನಿಭಾವೋದ್ವೇಗದಿಂದ ಏರತೊಡಗಿತ್ತು. ಒಂದು ಕ್ಷಣ ನಿಲ್ಲಿಸಿ ಪುನಃ ಮುಂದುವರೆಸಿದ.
“ಡಾಕ್ಟರ್ ಪಾರ್ವತಿಯವರು ಹತ್ಯೆಯಾದ ಶಿಶುವನ್ನು ಗುರುತಿಸಿದ್ದೂ ನಿಜ. ಈ ಯುವತಿಯನ್ನು ಪರೀಕ್ಷಿಸಿ ಕಳುಹಿಸಿದ್ದೂ ನಿಜ. ಆದರೆ ಹತ್ಯೆಯಾದ ಶಿಶು ಈ ಯುವತಿಯದೆಂದು ಹೇಳಲು ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಈ ಯುವತಿ ಕೊಲೆಗಾರಳಲ್ಲ.”
“ಮತ್ತೇನಾದರೂ ಕೇಳುವುದಿದೆಯಾ?” ಇದುವರೆಗೂ ಆಲಿಸುತ್ತಾ ಹೇಳಿಕೆ ಬರೆಯಿಸುತ್ತಿದ್ದ ನ್ಯಾಯಾಧೀಶರು ಕೇಶವನನ್ನು ಕೇಳಿದರು. ಪೇಪರು ಫೈಲನ್ನು ಜೋಡಿಸುತ್ತಿದ್ದ ಕೇಶವ, “ನೋ ಸರ್, ಅವರಿನ್ನು ಹೋಗಬಹುದು….” ಎಂದ.
ನೆಲಕ್ಕಂಟಿಕೊಂಡಂತಾಗಿದ್ದ ಕಾಲುಗಳನ್ನು ಬಲವಂತವಾಗಿ ಕಿತ್ತು ಎತ್ತಿಡುತ್ತಾ, ನಿಧಾನವಾಗಿ ಕಟಕಟೆಯಿಂದ ಇಳಿದುಬಂದ ಪಾರ್ವತಿಯವರ ಮುಖ ನಿಸ್ತೇಜವಾಗಿತ್ತು. ಹಣೆಯ ಮೇಲೆ ಬೆವರ ಹನಿಗಳು ಸಾಲಾಗಿ ಮೂಡಿದ್ದವು. ತುಟಿಗಳು ಬಿಳಿಚಿಕೊಂಡು, ಬಾಯಿ ಒಣಗಿ ಬಂದಂತಾಯಿತು. ಹತ್ತಿರದಲ್ಲೇ ಇದ್ದ ಕುರ್ಚಿಯೊಂದರಲ್ಲಿ ಕುಸಿದು ಕುಳಿತರು. ಎಷ್ಟೋ ಮೈಲಿಗಳ ದೂರ ನಡೆದು ಬಂದವರಂತೆ ಆಯಾಸದಿಂದ ಕುಳಿತ ಅವರು ತನ್ನತ್ತ ನೋಡಿದ ಜವಾನನತ್ತ ತಿರುಗಿ,
“ಸ್ವಲ್ಪ ನೀರು ಕುಡಿಯಲು ಕೊಡ್ತೀಯಾ?” ಎಂದು ಕೇಳಿದರು. ಬಹು ಪ್ರಯಾಸದಿಂದ ಕೇಳಿದ ಅವರಿಗೆ ಉಸಿರು ಕಟ್ಟಿಬಿಡುತ್ತಿರುವಂತೆ ಭಾಸವಾಯಿತು.
“ಯಾಕೆ? ಡಾಕ್ಟರ್ ಏನಾಯ್ತು?” ಕೇಶವ್ ಹತ್ತಿರ ಧಾವಿಸಿ ಕೇಳಿದ. ಇದುವರೆಗೂ ವಾದ ಮಾಡಿ ವಿಜಯದ ನಗೆ ಬೀರುತ್ತಿದ್ದ ಅವನ ಮುಖದಲ್ಲಿ ಗಾಬರಿ ಮೂಡಿತ್ತು.
ಕೋರ್ಟಿನಲ್ಲಿ ಮೆಲು ಮಾತುಗಳ ಗುಜುಗುಜು ಗಲಾಟೆ ಪ್ರಾರಂಭವಾಯಿತು. ಎಲ್ಲರೂ ಕುತೂಹಲದಿಂದ ಪಾರ್ವತಿಯವರು ಕುಳಿತಿದ್ದ ಜಾಗ ದತ್ತ ನೋಡುತ್ತಿದ್ದರು.
“ಏನಿಲ್ಲ. ಬಾಯಾರಿಕೆಯಾಯ್ತು ಅಷ್ಟೆ….. ನೀವಿನ್ನು ಹೋಗಿ…..” ಎಂದರು ಸಂಕೋಚದಿಂದ.
“ಬೇಕಾದ್ರೆ ರೂಮಿನಲ್ಲಿ ಕೂತ್ಕೊಳ್ಳಿ” ಕೇಶವ್ ಮೆಲು ದನಿಯಲ್ಲಿ ಹೇಳಿದ.
“ಊಹೂಂ…. ಅದೆಲ್ಲಾ ಬೇಡಾ….. ಮೊದಲು ವಾದ ಮುಗಿಯಲಿ. ನೀವು ಮುಂದುವರೆಯಿಸಿ….. ಥ್ಯಾಂಕ್ಯೂ ವೆರಿಮಚ್” ಎಂದು ಅವನ ಕೃತಜ್ಞತೆಯಿಂದ ನೋಡಿ ಹೇಳಿದರು.
ಜವಾನ ತಂದುಕೊಟ್ಟ ನೀರು ಕುಡಿದ ನಂತರ ಸ್ವಲ್ಪ ಹಾಯೆನಿಸಿತು. ಹಣೆಯ ಮೇಲಿನ ಬೆವರ ಹನಿಗಳನ್ನು ಕರ್ಚಿಫಿನಿಂದ ನಿಧಾನವಾಗಿ ಒರೆಸಿಕೊಂಡರು. ಕೇಶವನ ಮಾತುಗಳು, ಸಾಕ್ಷಿಗಳಿಗೆ ಸವಾಲುಗಳನ್ನು ಹಾಕುತ್ತಿದ್ದ ರೀತಿಗೆ ಮೆಚ್ಚುಗೆಯಿಂದ ನೋಡಿದರು.
“ಸದ್ದು….. ಸದ್ದು….. ಹೂ…. ಮುಂದುವರೆಯಿಸಿ…..” ಜಡ್ಜ್ ಗಲಾಟೆಯನ್ನು ನಿಯಂತ್ರಿಸಲು ಯತ್ನಿಸಿದರು.
ವಾದ ಮುಂದುವರೆಯುತ್ತಿದ್ದಂತೆಯೇ ಕೋರ್ಟಿನ ಹಾಲಿನಲ್ಲಿ ನಿಶ್ಯಬ್ದ ತಾನಾಗಿಯೇ ಮೂಡಿತು. ಆದರೆ ಡಾಕ್ಟರ್ ಪಾರ್‍ವತಿಯವರ ಕಿವಿಗಳಲ್ಲಿ ಬೇರೆ ಏನೋ ಕೇಳಿಸುತ್ತಿತ್ತು. ಕಣ್ಣುಗಳು ಹಲವು ವರ್ಷಗಳ ಹಿಂದೆ ನಡೆದ ಕಹಿ ಘಟನೆಗಳ ಚಿತ್ರಗಳನ್ನು ನೋಡುತ್ತಿದ್ದವು….
* * *
“ಈ ಮದುವೆಗೆ ಒಪ್ಪಿಕೊ ಪಾರ್ವತಿ, ತುಂಬಾ ಹಳೆಯ ಸಂಬಂಧ, ಸ್ಟೇಟ್ಸ್‌ಗೆ ಹೋಗ್ತಾಯಿದ್ದಾನೆ. ಅವನೂ ಡಾಕ್ಟರ್…..”
“ಏನೇ ಆಗಿದ್ದರೂ ಈ ಮದ್ವೆ ಸಾಧ್ಯವಿಲ್ಲ.”
“ನಿಂಗೆ ಮುದ್ದು ಮಾಡಿ ಬೆಳೆಯಿಸಿದ್ದು ಅತಿಯಾಯ್ತು, ಯಾಕೆ ಬೇಡಾಂತಿಯಾ? ಎಂ.ಬಿ.ಬಿ.ಎಸ್. ಡಿಗ್ರೀ ಮುಗೀಲಿಲ್ವಾ. ಮತ್ತೇನು ನಿನ್ನ ಒಣ ಉಸಾಬರಿ”
“……..”
“ಏನಾಗಿದೇಂತಾನಾದ್ರೂ ಹೇಳೆ…..”
“ನಂಗೆ…. ನಂಗೀಗ…..”
“ನಾನೀಗ ಗರ್ಭಿಣಿ…..”
ಛಟೀರನೆ ಪಾರ್ವತಿಯ ಕೆನ್ನೆ ಊದಿಕೊಳ್ಳುವಂತೆ ಏಟು ಬೀಸಿ ಬಂದು ಬಿದ್ದಿತು.
ಅವಳ ತಂದೆ ಕೋಪದಿಂದ ಉಗ್ರರೂಪ ತಾಳಿದ್ದರೆ, ತಾಯಿ ಕಣ್ಣುಗಳಿಗೆ ಸೆರಗು ಹಚ್ಚಿ ಕುಳಿತಿದ್ದರು.
“ಹೂ! ನೀನು ನಮ್ಮ ಹೊಟ್ಟೇಲಿ ಯಾಕೆ ಹುಟ್ಟಿದೆ? ನಿಂಗೆ ಮೆಡಿಕಲ್ಗೆ ಸೇರಿಸಿದ್ದೇ ತಪ್ಪಾಯ್ತು…… ಹೀಗ್ಯಾಡ್ತೀಯಾಂತ ಗೊತ್ತಿದ್ದರೆ ಹುಟ್ಟಿದಾಗಲೇ ಕತ್ತು ಹಿಚುಕಿ ಸಾಯಿಸಿಬಿಡಬಹುದಿತ್ತು.”
“ಮೆಡಿಕಲ್ ಕಾಲೇಜಿಗೆ ಯಾಕೆ ಬೈತೀರಾ? ತಪ್ಪು ನನ್ನದು.”
“ಮತ್ತೆ ಮಾತಾಡ್ತೀಯಾ? ಯಾರವನು? ಯಾವ ಜಾತಿಯವನು? ಯಾವ ಊರು? ಮದ್ವೆಯಾಗ್ತಾನಂತಾ? ಇದೆಲ್ಲಾ ಹೇಗಾಯ್ತು?” ಪ್ರಶ್ನೆಗಳ ಜಡಿಮಳೆಗೆ ಕಲ್ಲಾಗಿ ನಿಂತಿದ್ದಳು ಪಾರ್ವತಿ.
“ಕಲ್ಲುಬಂಡೆ ತರಹಾ ನಿಂತ್ಕಂಡಿದ್ದೀಯಲ್ಲೇ ಬಾಯ್ದಿಟ್ಟು ಹೇಳು – ನಾಯಿ ಮುಟ್ಟಿದ ಮಡಿಕೇನಾ ನಾಯಿಗೇ ಕಟ್ಟಿದರಾಯ್ತು”
“ಈಗ ಯಾವ ಪ್ರಯೋಜನಾನೂ ಇಲ್ಲ. ಅವನಾಗಲೇ ಈ ದೇಶ ಬಿಟ್ಟು ಹೋಗಿದ್ದಾನೆ.”
“ಅಯ್ಯೋ ದೇವರೇ – ಎಂಥ ಗತಿ ತಂದಳಪ್ಪಾ” ತಾಯಿಯ ಅಳು. ತಂದೆಯ ಆರ್ಭಟ ಮುಂದುವರೆಯಿತು. ಪಾರ್ವತಿ ಎಲ್ಲಕ್ಕೂ ಮೌನವಾಗಿ ಮೈಯೊಡ್ಡಿ ನಿಂತಿದ್ದಳು.
ಕೋಪ ತಾಪಗಳಿಗಿಂತ ಸಂದರ್ಭಕ್ಕೆ ರಾಜಿ ಮಾಡಿಕೊಂಡು ಒಮ್ಮೆ ಈ ಅಪವಾದದಿಂದ ಪಾರಾದರೆ ಸಾಕೆಂಬ ತೀರ್ಮಾನಕ್ಕೆ ಬಂದರು.
“ಈ ಪಿಂಡಾನ ತೆಗೆಸಿದರಾಯ್ತು. ಇದು ಮನೆತನದ ಮರ್‍ಯಾದೆಯ ಪ್ರಶ್ನೆ. ಬೇಗ ಮದ್ವೆ ಮುಗಿಸಿ ನಿನ್ನನ್ನು ಸಾಗಹಾಕದಿದ್ದರೆ ಎಲ್ರೂ ಒಂದೇ ಬಾರಿಗೆ ವಿಷ ಕುಡಿದು ಮಲಗಬೇಕಾಗುತ್ತದೆ” ಎಂದು ಮನೆಯವರು ನಿರ್ಧಾರ ತೆಗೆದುಕೊಂಡವರಂತೆ ಹೇಳತೊಡಗಿದಾಗ,
“ನನ್ನ ಜೀವನದ ಬಗ್ಗೆ ನಿರ್ಧಾರ ನಾನು ತೆಗೆದುಕೊಳ್ಳುತ್ತೇನೆ. ನೀವ್ಯಾರು ವಿಷ ಕುಡಿಯೋದು ಬೇಡಾ. ನಾನೇ ಸಾಯ್ತಿನಿ. ಆದ್ರೆ ಮದ್ವೆ ಮಾತ್ರ ಆಗೋಲ್ಲ” ಪಾರ್ವತಿ ಮೌನ ಮುರಿದು ಹೇಳಿದಳು.
“ಅಂದ್ರೆ-ನಮ್ಮ ಮುಖಕ್ಕೆ ಮಸಿ ಬಳಿದ್ರೂ ಪರವಾಗಿಲ್ಲ ಅಂತ ಹೆದರಿಸ್ತೀಯೇನೆ? ಜೀವಂತ ಎಲ್ರೂ ಸುಟ್ಕಂಡ್ ಸಾಯೋದನ್ನ ನೋಡಿ ಸಂತೋಷಪಡೋ ಆಸೆಯಿದ್ರೆ ಹೇಳು-”
“ಊಹೂಂ, ಖಂಡಿತಾ ಇಲ್ಲ.”
“ಹಾಗಾದ್ರೆ ನಾವು ಹೇಳಿದ್ದಕ್ಕೆ ಒಪ್ಕೋ, ಇಲ್ಲವಾದರೆ ಕಣ್ಮರೆಯಾಗಿ ಹಾಳಾಗಿ ಹೋಗು, ನಮಗೆ ಮಗಳೇ ಹುಟ್ಟಿರಲಿಲ್ಲ. ಅಂದ್ಕೋತೀವಿ-”
“ಹಾಗೇ ಆಗಲಿ- ನಾನೇ ಈ ಮನೆಯಿಂದ ದೂರ ಹೋಗ್ತಿನಿ, ಜನಕ್ಕೆ ಈ ಸಮಾಜಕ್ಕೆ ಅನುಮಾನ ಬಾರದ ರೀತಿಯಲ್ಲಿ ನಾನು ಇಲ್ಲಿಂದ ಹೋಗ್ತಿನಿ, ಯಾವ ಪಾಪವನ್ನೂ ಮಾಡದ ಈ ಕಂದನನ್ನು ಕೊಲ್ಲಲಾರೆ ಭ್ರೂಣ ಹತ್ಯೆಯ ಪಾಪ – ಮಾಡಲಾರೆ. ನಾನಿದನ್ನು ಬೆಳೆಸ್ತೀನಿ, ಆದರೆ ಕೊಲ್ಲಲ್ಲ. ನನ್ನನ್ನು ಕ್ಷಮಿಸಿ, ಸಾಧ್ಯವಾದರೆ, ಮರೆತುಬಿಡಿ.
“ಪಾರ್‍ವತೀ!”
ಹೊಟ್ಟೆಯಲ್ಲಿ ಮುಂದಿನ ಭವಿಷ್ಯವನ್ನು ಹೊತ್ತುಕೊಂಡು ಯಾವುದೋ ಧೈರ್‍ಯದಿಂದ ಮನೆಯಿಂದ ಹೊರಬಿದ್ದು, ಸ್ನೇಹಿತೆಯ ಸಹಾಯದಿಂದ ಊರನ್ನು ತೊರೆದು, ದೂರದ ಊರೊಂದರ ನರ್ಸಿಂಗ್ ಹೋಂ ಒಂದರಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಹೊಟ್ಟೆಯ ಭಾರ ಇಳಿದು, ತನ್ನ ಪ್ರೀತಿಯ ಹೂವನ್ನು ಮಡಿಲಲ್ಲಿ ಮುಚ್ಚಟೆಯಿಂದ ಬೆಳೆಸಿದಳು. ತಾನು ದುಡಿಯುತ್ತಿದ್ದ ನರ್ಸಿಂಗ್ ಹೋಂನ ಮಾಲೀಕರ ಸಹಾಯದಿಂದ ಸರ್ಕಾರಿ ನೌಕರಿ ಸೇರಿ ಸಮಾಧಾನದ ಉಸಿರುಬಿಟ್ಟರೂ, ನಂತರದ ದಿನಗಳು ಅವಳ ಪಾಲಿಗೆ ಬಹಳ ಕಠಿಣವಾಗಿದ್ದವು. ಎಲ್ಲರಿಂದಲೂ ಎಲ್ಲಾ ವಿಧದ ಮಾತುಗಳನ್ನು, ಕೃತಿಗಳನ್ನು ಸಹಿಸಿಕೊಂಡು ಹಠದಿಂದೆಂಬಂತೆ ಬದುಕಿದಳು. ತನ್ನೆಲ್ಲಾ ಪ್ರೀತಿಯನ್ನು ಧಾರೆಯೆರೆದು ಮಗಳನ್ನು ಬೆಳೆಸಿದಳು. ಯಾವ ಕೊರತೆಯೂ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ಸಾಕಿದಳು. ಸುಕೋಮಲವಾಗಿ ಬೆಳೆಯುತ್ತಿದ್ದ ಮಗಳಲ್ಲಿ ತನ್ನೆಲ್ಲಾ ಧೈರ್‍ಯ ಛಲವನ್ನು ಮಗಳಿಗೂ ತುಂಬುತ್ತಿದ್ದಳು.
ಆದರೆ ಆದದ್ದಾದರೂ ಏನು?
ವಯಸ್ಸಿಗೆ ಮೀರಿ ಆಕರ್ಷಕವಾಗಿ ಬೆಳೆದು ನಿಂತ ಶ್ಯಾಮಲಾ ದಿಟ್ಟೆಯಾಗಿದ್ದಳು. ಸ್ಕೂಲಿನಿಂದ ಕಾಲೇಜಿನ ದಿನಗಳವರೆಗೂ ತನಗೆ ಕುಹಕ ನಾಡಿಗಳನ್ನಾಡಿದ, ಕುತ್ಸಿತ ನೋಟಗಳ ಬಾಣಗಳಿಂದ ಚುಚ್ಚಿ, ದೇಹವನ್ನು ಹಿಂಡುವಂತೆ ಮಾಡತೊಡಗಿದ್ದ ಕೆಲವು ದುಷ್ಟರ ವರ್ತನೆಗೆ ಅವಳ ದೇಹ ಸೆಟೆದು ನಿಲ್ಲುತ್ತಿತ್ತು. ಬದುಕಿನಲ್ಲಿ ತನಗಾಗಿ ಶ್ರಮಿಸುತ್ತಾ ಎಲ್ಲ ನೋವನ್ನೂ ನುಂಗಿಕೊಂಡು ನಗುತ್ತಾ ಪ್ರಾಮಾಣಿಕವಾಗಿ ಬದುಕುತ್ತಿದ್ದ ತನ್ನ ತಾಯಿಯ ಬಗ್ಗೆ ಅನುಮಾನದಿಂದ ಕೀಳು ನುಡಿಗಳನ್ನಾಡಿದ ಜನರಿಗೆ ತಿರುಗಿ ನಿಂತು ಹಾವಿನಂತೆ ಭುಸುಗುಡುತ್ತಿದ್ದಳು. ತನ್ನ ತಾಯಿಯು ಬೇಯುತ್ತಿದ್ದ ಬೆಂಕಿಯ ಬಲೆಯೊಳಗೆ ತನ್ನನ್ನೂ ತಳ್ಳಿ ವಿಕೃತ ಸಂತಸಪಡಲು ಯತ್ನಿಸುತ್ತಿದ್ದ ಕುಹಕಿಗಳಿಗೆ ಮುಖಕ್ಕೆ ರಾಚುವಂತೆ ಮಾತನಾಡಿ, ಧುಮುಗುಟ್ಟುತ್ತಾ ಮನೆಗೆ ಬಂದು ರೂಮು ಸೇರಿ ಸದ್ದಿಲ್ಲದೇ ಅಳುತ್ತಿದ್ದರು.
“ಈ ರೀತಿ ಬದುಕುವ ಬದಲು, ಹುಟ್ಟುವ ಮೊದಲೇ ನನ್ನನ್ನು ಕೊಂದು, ಎಲ್ಲರಂತೆ ಮದುವೆಯಾಗಿ ಹಾಯಾಗಿರಬಾರದಿತ್ತೆ? ಯಾಕೆ? ಯಾಕೆ ಹಾಗೆ ಮಾಡಲಿಲ್ಲ? ನಿನ್ನದೇ ಪ್ರತಿಬಿಂಬ ಬೆಳೆಯಬಹುದು ಅಂದುಕೊಳ್ಳಲಿಲ್ಲವಾ?” ಎಂದು ಎದುರಿಗಿದ್ದ ತಾಯಿ ಫೋಟೋವನ್ನು ನೋಡುತ್ತಾ ಮೆಲುವಾಗಿ ದುಃಖ ತುಂಬಿದ ಕಂಠದೊಂದಿಗೆ ಕೇಳಿಕೊಳ್ಳುತ್ತಿದ್ದಳು. ದಿನ ಕಳೆದಂತೆ, ನೋವು ದುಃಖಗಳಿಂದ ಗಟ್ಟಿಯಾಗುವಂತೆ ಕಂಡರೂ ಮಾನಸಿಕವಾಗಿ ಅತ್ಯಂತ ಸೂಕ್ಷ್ಮಳಾಗಿ ಬೆಳೆಯತೊಡಗಿದಳು.
ಗೂಡಿನಲ್ಲಿ ಹಾಯಾಗಿ ತಾಯಿಯ ಮಡಿಲಲ್ಲಿ ಬೆಳೆದಿದ್ದ ಪುಟ್ಟ ಹಕ್ಕಿ ಹಾರಲು ಬಂದಾಗ, ಕಂಡಿದ್ದೆಲ್ಲವೂ ಭಯಾನಕ, ಬೀಸಾಗಿ ರೆಕ್ಕೆ ಬಡಿಯುತ್ತ ಆನಂದದಿಂದ ಹಾರಲು ಮೇಲೇರಿದ ಪುಟ್ಟ ಮರಿಯ ರೆಕ್ಕೆಯನ್ನು ಕತ್ತರಿಸಿ ಕೆಳಗೆ ಬೀಳಿಸಲು ಹವಣಿಸುವವರೇ ಜಾಸ್ತಿಯಾಗಿರುವಾಗ ಹಾರಲಾರದೆ, ಕೆಳಗೆ ಬೀಳಲು ಹೆದರಿ ಕಂಗಾಲಾಯಿತು. ಹದ್ದುಗಳಿಗೆ ಸುಲಭವಾದ ಆಹಾರವಾಯಿತು.
ಪ್ರತಿದಿನ ರಾತ್ರಿ ಏಳು ಗಂಟೆಯ ಹೊತ್ತಿನಲ್ಲಿ ಟ್ಯೂಶನ್ ಮುಗಿಸಿ ಮನೆಗೆ ಬರುತ್ತಿದ್ದ ಶ್ಯಾಮಲ ತನ್ನನ್ನು ಪ್ರತಿದಿನ ಚುಡಾಯಿಸುತ್ತಾ ಆಶ್ಲೀಲವಾಗಿ ಮಾತನಾಡುತ್ತಾ ಹಿಂಬಾಲಿಸಿ ಬರುತ್ತಿದ್ದ ಮೂರು ಜನರಿದ್ದ ಪುಂಡರ ಗುಂಪನ್ನು ದಿಟ್ಟತನದಿಂದ ಎದುರಿಸಿ ನಿಂತಳು. ಕಾಲಲ್ಲಿದ್ದ ಚಪ್ಪಲಿಯಿಂದ ತನ್ನ ದೇಹವನ್ನು ಸವರಿಕೊಂಡು ಹೋದವನನ್ನು ಹಿಂಬಾಲಿಸಿ ಹಿಡಿದು ಮುಖಕ್ಕೆ ರಪರಪನೆ ಬಾರಿಸಿದಳು. ಅವನ ಮೂಗು ಊದಿಕೊಳ್ಳುವಂತೆ ಹುಚ್ಚಿಯಂತೆ ಬಾರಿಸತೊಡಗಿದಾಗ ಉಳಿದವರು ಕಾಲಿಗೆ ಬುದ್ದಿ ಹೇಳಿದರು. ಹೆದರಿ ಸುಮ್ಮನಾದರೆಂದು ಊಹಿಸಿದ್ದಳು. ಅವಳ ಊಹೆ ತಪ್ಪಾಯಿತು. ಪೌರುಷತ್ವವನ್ನು ಚಪ್ಪಲಿಯಿಂದ ಹೊಡೆದು ಕೆರಳಿಸಿದ್ದುದರಿಂದ ಪ್ರತೀಕಾರಕ್ಕಾಗಿ ರೋಷಗೊಂಡ ಹಾವುಗಳಂತೆ ಬುಸುಗುಟ್ಟುತ್ತಾ ಕಾಯುತ್ತಿದ್ದರು. ಅವಳ ಜೀವನ ನಾಶ ಮಾಡಬೇಕು. ಸಾಯುವವರೆಗೂ ಮರುಗವಂತೆ ಮಾಡಬೇಕೆಂಬ ಛಲ ತೊಟ್ಟರು. ಶ್ಯಾಮಲಾಳನ್ನು ಬೇಟೆಯಾಡಲು ಅವರಿಗೆ ಬಹಳ ದಿನ ಹಿಡಿಯಲಿಲ್ಲ.
ಒಂದು ದಿನ ಹಠಾತ್ತಾಗಿ ಆಕ್ರಮಣ ನಡೆಯಿಸಿ ಆಟೋದಲ್ಲಿ ಹೊತ್ತುಕೊಂಡು ಅಪಹರಿಸಿದರು. ಸತತವಾಗಿ ಎರಡು ದಿನ ಸಾಮೂಹಿಕ ಅತ್ಯಾಚಾರದಿಂದ ಹಿಂಸಿಸಿ, ಜರ್ಝರಿತಳಾಗಿದ್ದ ಶ್ಯಾಮಲಾಳನ್ನು ತಂದು ಅವಳ ಮನೆಯೊಳಗಿನ ಮೆಟ್ಟಿಲುಗಳ ಮೇಲೆ ಬಿಟ್ಟು ಹೊರಟುಹೋಗಿದ್ದರು. ಎಂದೂ ಯಾವ ವಿಷಯಕ್ಕೂ ಎದೆಗುಂದದೇ ಇದ್ದ ಪಾರ್ವತಿಯವರ ಹೃದಯ ಅಂದು ಚೂರು ಚೂರಾಗಿತ್ತು. ನರಳುತ್ತಿದ್ದ ಮಗಳನ್ನಪ್ಪಿಕೊಂಡು ಎದೆ ನಡುಗುವಂತೆ ಅತ್ತರು. ಪೊಲೀಸ್, ಕಾನೂನು ಎಂದು ಹೊರಗೆ ಹೋಗಿ ಮಗಳ ಮಾನ ನಷ್ಟ ಮಾಡಲು ಹಿಂಜರಿದರು. ಜೀವನದಲ್ಲಿ ಪ್ರಥಮ ಬಾರಿಗೆ ಪಾರ್ವತಿ ಸೋಲನ್ನು ಗಟ್ಟಿ ಹೃದಯದಿಂದ ಸ್ವೀಕರಿಸಿದ್ದರು. ಅವರ ಕೆಚ್ಚೆದೆ, ದಿಟ್ಟತನ, ಅನ್ಯಾಯವನ್ನು ಪ್ರತಿಭಟಿಸಲು ಯಾವಾಗಲೂ ಸಿದ್ಧವಾಗಿರುತ್ತಿದ್ದ ಅವರ ವ್ಯಕ್ತಿತ್ವವನ್ನೇ ಅಲ್ಲಾಡಿಸುವಂತಹ ಸಂದರ್ಭ ಸಿದ್ಧವಾಗತೊಡಗಿತ್ತು. ಅತ್ಯಾಚಾರಕ್ಕೊಳಗಾಗಿದ್ದ ಶ್ಯಾಮಲ ಗರ್ಭ ಧರಿಸಿದ್ದಳು!
ಡಾಕ್ಟರ್ ಪಾರ್ವತಿಯವರು ಮಂಜಿನಂತೆ ಕುಳಿತುಬಿಟ್ಟರು!
ಎಲ್ಲರೂ ನಡೆಯುತ್ತಿದ್ದ ದಾರಿಯನ್ನು ತುಳಿಯದೇ ತನ್ನದೇ ಆದ ದಾರಿಯಲ್ಲಿ ಧೈರ್‍ಯದಿಂದ ನಡೆದಿದ್ದ ಪಾರ್ವತಿಯ ಹಾದಿ ಅವಳನ್ನು ಕಂಡರಿಯದ ದಟ್ಟವಾದ ಯಾವುದೋ ಕಗ್ಗತ್ತಲಿನ ಕಾಡಿಗೆ ಕರೆದೊಯ್ದು ನಿಲ್ಲಿಸಿತ್ತು. ಹಾಗಾದರೆ ತಾನಿಟ್ಟ ಹೆಜ್ಜೆ ತಪ್ಪಾಗಿತ್ತೆ? ತನ್ನನ್ನು ಪ್ರೀತಿಸುವ ನಾಟಕವಾಡಿ ಹೋಗಿದ್ದು ಅವನ ತಪ್ಪೆ? ತಂದೆ ತಾಯಿಯರ ಬುದ್ದಿವಾದ ಕೇಳದೆ ತನ್ನದೇ ನಿರ್ಧಾರ ತೆಗೆದುಕೊಂಡು ಕಂಡರಿಯದ ಜಗತ್ತಿಗೆ ಹುಂಬ ಧೈರ್‍ಯದಿಂದ ಕಾಲಿಟ್ಟ ತನ್ನ ತಪ್ಪ? ಎಲ್ಲವೂ ಇದ್ದು, ಎಲ್ಲರೂ ಇದ್ದ ಕುಂತಿಯೇ ಹೆತ್ತ ಮಗುವನ್ನು ನೀರಿನಲ್ಲಿ ತೇಲಿಬಿಟ್ಟಿದ್ದು ಈ ಭಯಕ್ಕಾಗಿಯೇ? ಹಾಗಾದ್ರೆ ಇನ್ನೂ ಬದಲಾವಣೆಯೇ ಆಗಿಲ್ಲವೆ?
ಏನಾದರೂ ಆಗಲಿ, ಆಗದಿರಲಿ, ತನ್ನ ಮಡಿಲಲ್ಲಿ ಬೆಳೆದ ಪ್ರಾಣಕ್ಕೆ ಪ್ರಾಣವಾದ, ಬದುಕಲು ಪ್ರೇರೇಪಿಸಿದ ತಮ್ಮ ಮಗಳಿಗಾದ ಅನ್ಯಾಯವನ್ನು ಪಾರ್ವತಿಯವರು ಭರಿಸಲಾರದಾದರು. ತಾವು ತುಳಿದ ಕೆಂಡದ ದಾರಿಯಲ್ಲಿ ಮಗಳನ್ನು ನಿಲ್ಲಿಸದಾದರು. ದಿನೇ ದಿನೇ ಬೆಳೆಯತೊಡಗಿದ್ದ ಮಗಳ ಹೊಟ್ಟೆ ಸವಾಲಾಗತೊಡಗಿತು. ಯೋಚಿಸಿ ಅವರ ಮೆದುಳು ಸಿಡಿಯುವಂತಾಯಿತು.
ಯೋಚಿಸಿ ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದ ಪಾರ್ವತಿ ಮಗಳನ್ನು ಕರೆದುಕೊಂಡು ಸ್ನೇಹಿತೆಯ ಹತ್ತಿರ ಬಂದರು. ಅಂದು ತನ್ನ ಕಷ್ಟದಲ್ಲಿ ನೆರವಾಗಿದ್ದ ಸ್ನೇಹಿತೆ ಇಂದು ತನ್ನ ನಿರ್ಧಾರಕ್ಕೆ ಒಪ್ಪದಿರುವುದನ್ನು ಕಂಡು ಪಾರ್ವತಿಯವರಿಗೆ ಆಶ್ಚರ್ಯದೊಂದಿಗೆ ಗಾಬರಿಯೂ ಆಯಿತು.
“ಪಾರ್ವತಿ, ನೀನು ಡಿಗ್ರಿ ಮುಗಿಸಿದ್ದೆ. ದುಡ್ಕೊಂಡು ಬದುಕಬಲ್ಲೇ ಅನ್ನೋ ಧೈಯ್ಯ ಹುಮ್ಮಸ್ಸು ನಿನ್ನಲ್ಲಿತ್ತು. ಆದರೆ ಈ ಹುಡುಗಿಗೆ ಏನಿದೆ? ಯಾರ ಪ್ರೀತಿಗಾಗಿ ಈ ಮಗೂನ ಬೆಳೆಸಬೇಕು? ನೀನೇನೋ ಹೇಳ್ತಿದ್ದೀಯಾ ಭ್ರೂಣ ಹತ್ಯೆ ಪಾಪ, ಹಾಗೇ ಹೀಗೆ ಅಂತ. ಅತ್ಯಾಚಾರದ ಪಾಪದ ಫಲಾನ ಏನೂ ಅರಿಯದ ಈ ಹುಡುಗಿ ಧರಿಸ್ಬೇಕು. ಅದನ್ನ ಹಡೆಯಬೇಕು ಅನ್ನೋ ವಾದ ನಂಗೆ ಹಿಡಿಸೋಲ್ಲ, ನೀನು ಅನುಭವಿಸ್ತಾ ಇರೋದು ಸಾಲದೇನೇ?”
“ಅವಳೂ ಹೆಣ್ಣು ಹೆತ್ತಳೂಂತಾನೇ ಇಟ್ಕೊ, ಆಮೇಲೆ? ಈ ಸರಪಳಿ ಹೀಗೆ ಬೆಳೀತಾ ಹೋಗ್ಬೇಕೂಂತ ನಿನ್ನ ಆಸೇನಾ? ಹುಚ್ಚು ಆದರ್ಶಗಳಿಂದ ಯಾರಿಗೂ ಎಂದಿಗೂ ಸುಖ, ನೆಮ್ಮದಿ ಸಿಕ್ಕಿಲ್ಲ ಪಾರ್ವತಿ….. ಎಲ್ಲರಂತೆ ನಾವೂ ಇರೋತನಕ ಬದುಕಲು ಕಲಿತರೆ ಎಷ್ಟೋ ಸಾಧಿಸಿದ ಹಾಗೆ… ಆಧುನಿಕ ಕುಂತಿ ಅನ್ನಿಸ್ಕೊಂಡ ನಿಂಗೆ ಏನು ಸಿಕ್ಕಿತೆ? ಆಗಿನ ಕಾಲದಲ್ಲಿ ಗಂಡಾಗಿ ಹುಟ್ಟಿದ ಕರ್ಣನೇ ಅದೆಷ್ಟು ಮಾನಸಿಕ ಹಿಂಸೆಗೊಳಗಾದ ಇನ್ನು ನಿನ್ನ ಪುಟ್ಟ ಹುಡುಗಿಯ ಮನಃಸ್ಥಿತಿ ಹೇಗಿದ್ದಿರಬೇಡಾ? ಎಂದಾದರೂ ಆ ಬಗ್ಗೆ ಯೋಚಿಸಿದೆಯೇನು?”
“ಮ್….. ಮ್…..”
“ಊಹೂಂ ಖಂಡಿತಾ ನೀನು ಆ ಗೊಡವೆಗೆ ಹೋಗಿಲ್ಲ. ಭಾಷಣ ಮಾಡ್ತೀನೀಂತ ಅಂದ್ಕೋಬೇಡಾ. ನಿಜ, ತಾಯಿಯಾಗುವ ಹಕ್ಕು ಎಲ್ಲಾ ಹೆಣ್ಣುಗಳಿಗೂ ಇದೆ. ಹಾಗಂತ ಬೇಡದ ಕಷ್ಟಗಳನ್ನು ಯಾಕೆ ಮೈಮೇಲೆ ಹಾಕ್ಕೋಬೇಕು? ನಾವೇನೋ ಸ್ನೇಹಿತರು ಸಹಾಯ ಮಾಡ್ತೀವಿ, ಬೆಂಬಲಕ್ಕೆ ನಿಲ್ತೀವಿ. ಆದರೆ ನಿನ್ನ ಮಾನಸಿಕ ವೇದನೆಯನ್ನು ತೆಗೆದುಕೊಳ್ಳೋಕೆ ಆಗುತ್ತೇನೆ? ದೂರದಿಂದಲೇ ನಿನ್ನ ಕಷ್ಟ ನೋಡ್ಕಂಡ್ ಮರುಗ್ತಿವಿ, ಹೌದೋ ಅಲ್ವೇ? ಇನ್ನು ನಮ್ಮ ಸಮಾಜದಲ್ಲಿ ಬೇಕಾಗಿರುವ ಸ್ಥಾನ ನೀಡಿಲ್ಲವೆ? ಹುಚ್ಚಿ ನೀನು! ಟೀವಿಯಲ್ಲೋ, ಸಿನಿಮಾದಲ್ಲೋ ಈ ವಿಧದ ಘಟನೆಗಳನ್ನು ನೋಡ್ಕೊಂಡ್ ಅಯ್ಯೋ ಪಾಪಾಂತಾ “ಸಿಂಪತಿ” ತೋರಿಸ್ತಾರೆ. ಎದುರಿಗೇ ನಡೆದರೆ, ಈಗ ಆಗಿಲ್ವಾ ನಿನ್ನ ಮಗಳ ಸ್ಥಿತಿ? ಅಲ್ಲಿಯೇ ತಂದು ಮುಟ್ಟಿದ್ದಾರೆ. ಅವಳಿಗೆ “ಅಪ್ಪ” ಇದ್ದ ಅನ್ನೋ ಭಾವನೆಯ ಬೇಲಿಯಿದ್ದಿದ್ದರೆ ಯಾರು ಆತ್ಮೀಯವಾಗಿ ನುಗ್ಗುವ, ಹೊಸಕಿ ಹಾಕುವ ಯೋಚನೆ ಮಾಡುತ್ತಿರಲಿಲ್ಲ.”
“ಈ ಸಾರಿ ನನ್ನ ಕೈ ಕೊಸರೇಡ. ನೀನು ಸಾಕುವುದು ಬೇಡ, ಸಹಾಯ ಮಾಡು ಈಗಾಗಲೇ ಅವಳಿಗೆ ನಾಲ್ಕು ತಿಂಗಳಾಗಿಬಿಟ್ಟಿವೆ. ಗರ್ಭಪಾತ ಮಾಡಿಸಲು ನಂಗೆ ಸುತಾರಾಂ ಇಷ್ಟವಿಲ್ಲ. ಅದರೆ ಅವಳಂತೆಯೇ ಆಗಲು, ಕಷ್ಟಗಳನ್ನು ಅನುಭವಿಸಲೂ ಬಿಡಲಾರೆ. ದುಷ್ಪ ಪ್ರಾಣಿಗಳಿರೋ ಈ ಕಾಡಿನಲ್ಲಿ ನನ್ನ ಹೂವಿನಂತಹ ಮಗಳನ್ನು ಬಿಡಲಾರೆ. ಇಂತವರಿಲ್ಲದ ದೂರದ ಜಾಗಕ್ಕೊಯ್ದು ಅವಳಿಗೆ ಬೇಕೆನಿಸಿದಂತಹ ಬದುಕನ್ನು ನೀಡುತ್ತೇನೆ. ಅವಳು ತುಂಬಾ ಮುಗ್ಧ, ಏನೂ ತಿಳಿಯದೋಳು. ಹೇಗೆ ಈ ನೋವುಗಳನ್ನು ಸಹಿಸ್ತಾಳೆ?” ಹೇಳುತ್ತಿದ್ದಂತೆಯೇ ಪಾರ್ವತಿಯವರ ಗಂಟಲು ಕಟ್ಟಿಬಂದಿತ್ತು. ಮೊದಲ ಬಾರಿಗೆ ಜೀವನದಲ್ಲಿ ಸೋತವರಂತೆ, ಹತಾಶರಾದವರಂತೆ ಸ್ನೇಹಿತೆಯ ಮಡಿಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅತ್ತರು. ಸ್ವಲ್ಪ ಸಮಾಧಾನ ತಂದುಕೊಂಡು ಪಾರ್ವತಿ ಹೇಳಿದರು.
“ನೀನು ಹೇಳುವುದರಲ್ಲಿ ನಿಜವಿರಬಹುದು. ಆದರೆ ನಾನು ಬೆಳೆಯುತ್ತಿರೋ ಮುಗ್ಧ ಶಿಶುವಿನ ಹತ್ಯೆ ಮಾಡಿಸಲಾರೆ ಕಣೆ, ಅದು ಮಾತ್ರ ನನ್ನಿಂದ ಸಾಧ್ಯವಿಲ್ಲ. ಅವಳನ್ನು ಇಲ್ಲಿಯೇ ಬಿಡುತ್ತೇನೆ. ಅವಳಿನ್ನೂ ಷಾಕ್ನಿಂದ ಚೇರಿಸಿಕೊಂಡಿಲ್ಲ. ಅಂದಿನಿಂದ ಹೆಚ್ಚು ಮಾತೇ ಆಡಿಲ್ಲ. ಉಬ್ಬಿದ ಹೊಟ್ಟೆ ನೋಡ್ಕೊಂಡು ಯಾವಾಗಲೂ ಒಂದೇ ಕಡೆ ಕೂತಿದ್ದಾಳೆ. ಇನ್ನು ಕೆಲವೇ ತಿಂಗಳುಗಳು….. ಹೆರಿಗೆಯಾದ ನಂತರ ಆ ಮಗೂನ ನಾನು ಪಾರು ಮಾಡ್ತೀನಿ. ಆ ಬಂಧನ, ನೋವಿನಿಂದ ನನ್ನ ಮಗಳನ್ನು ನಾನು ಪಾರು ಮಾಡ್ತೀನಿ. ಅಲ್ಲಿಯವರೆಗೂ ಆಶ್ರಯ ಕೊಟ್ಬಿಡು. ನಿನ್ನ ಸಹಾಯ ಎಂದೂ ಮರೆಯಲಾರೆ….”
ಕಣ್ಣೀರು ತುಂಬಿದ ಮುಖ ಮೇಲೆತ್ತಿ ದೈನ್ಯದಿಂದ ಕೇಳುತ್ತಿದ್ದ ಪಾರ್ವತಿಯ ಕೋರಿಕೆಯನ್ನು ಗೆಳತಿಗೆ ತಿರಸ್ಕರಿಸಲಾಗಲಿಲ್ಲ. ಶ್ಯಾಮಲ ಅಲ್ಲಿಯೇ ಉಳಿದಳು. ನಾಲ್ಕು ದಿನಗಳು ಮಗಳೊಂದಿಗೆ ಸ್ನೇಹಿತೆಯ ನರ್ಸಿಂಗ್ ಹೋಂನಲ್ಲಿ ಉಳಿದು ಮನೆಗೆ ಹೊರಟು ನಿಂತಾಗ.
“ನಂಗೆ ಎಲ್ಲವೂ ನೀನೇ ಆಗಿದ್ದೆ. ಆಗ ನಂತೆ ಧೈರ್‍ಯ ಇತ್ತು. ಬದುಕಬೇಕೆಂಬ ಛಲ ಇತ್ತು. ಆದರೆ ಅಂಥಾ ಛಲ ಧೈಯ್ಯ ಇವಳಲ್ಲಿಲ್ಲ. ನಂಗೆ ವಯಸ್ಸಾಗುತ್ತಾ ಬಂದಿದುದಕ್ಕೋ, ಜೀವನದುದ್ದಕ್ಕೂ ಬಳಲಿದ ಹತಾಶೆಗೋ ಏನೋ ಕಣ್ಣು ಕಟ್ಟಿ ಕತ್ತಲಲ್ಲಿ ಬಿಟ್ಟಂತಾಗಿದೆ. ಇಷ್ಟಾದರೂ ಶಿಶುಹತ್ಯೆ ಮಾಡ್ಬೇಕು ಅನ್ನಿಸ್ತಾಯಿಲ್ಲ. ಅವು ಪಾಪದಪಿಂಡಗಳಂತೆ ಎಲ್ಲರಿಗೂ ಅನ್ನಿಸಿದ ಹಾಗೆ ನನಗೆ ಅನಿಸ್ತಾ ಇಲ್ಲ’ ಎಂದು ಸ್ನೇಹಿತೆಯ ಕೈಹಿಡಿದು ಗದ್ಗದಿತರಾಗಿ ಹೇಳಿದರು.
“ನೀನು ಕೊಲ್ಲಲು ಒಪ್ಪದಿದ್ದರೆ, ಸಮಾಜ ನಿನ್ನನ್ನು ಕೊಂದುಹಾಕುತ್ತೇ. ಹಾಕುತ್ತೇ ಅನ್ನೋದೇನು? ಈಗ ನೀನಿಲ್ವಾ? ಎಲ್ಲಾ ಇದ್ದು ಇಲ್ಲದೋರ ತರಹಾ……. ಬದುಕಿದ್ದು ಬದುಕೇ ಇಲ್ಲದವಳ ತರಹಾ……… ಇನ್ನೇನಾಗೇಕು? ಕುತ್ತಿಗೆಯಲ್ಲಿ ನೆಪ ಮಾತ್ರಕ್ಕೆ ತಾಳಿಯಿದ್ದು ಪಾಪದ ಫಲ ಹುಟ್ಟಿದರೂ, ತೊಟ್ಟಿಲು ಹಾಕಿ, ಸಂಭ್ರಮದಿಂದ ತೂಗ್ತಾರೆ. ಇಲ್ಲದಿದ್ದರೆ ನಿನಗಾದ ಸ್ಥಿತಿ, ನಿನ್ನ ಮಗಳಿಗಾದ ಸ್ಥಿತಿಯೇ.” ಕಹಿಯಾಗಿ ನುಡಿದರು ಆಕೆ.
“ಏನೇ ಆಗಲಿ, ಅವಳ ಜವಾಬ್ದಾರಿ ನಿನ್ನದು. ನೀನೇ ಈಗ ಅವಳಿಗೆ ತಾಯಿ” ಅತ್ಯಂತ ಸಂಯಮಿಯಾಗಿದ್ದ ಪಾರ್ವತಿಯ ಬದಲಾಗಿ, ಅಸಹಾಯಕ ತಾಯಿಯನ್ನು ಕಂಡಂತೆ ಭಾಸವಾಗಿ ಕಕ್ಕುಲತೆಯಿಂದ ಹೇಳಿದರು ಆಕೆ.
“ಪಾರ್ವತಿ, ನಿನ್ನ ಮಗಳು ನನ್ನ ಮಕ್ಕಳಲ್ಲಿ ಒಬ್ಬಳು ಕಣೆ. ಮೊದಲಿನಿಂದ ನಿನ್ನ ದುಃಖ ಬವಣೆ ನೋಡಿ ಸಂಕಟಕ್ಕೆ ಮಾತನಾಡಿದೆ. ನಿನ್ನ ಆದರ್ಶ ಧೈಯ್ಯ, ಶ್ರೀಮಂತ ಹೃದಯದ ಭಾವನೆಗಳನ್ನು ಯಾರು ಅರ್ಥ ಮಾಡಿಕೊಂಡರು? ಎಲ್ಲರೂ ಅವರದ್ದೇ ಆದ ರೀತಿಯಲ್ಲಿ ಹತ್ಯೆ ಮಾಡಲಿಲ್ಲವೇ? ಹೋಗಲಿ ಬಿಡು, ನೀನಿನ್ನು ಹೊರಡು.”
ಆಕೆಯ ನುಡಿಗಳು ಅದೆಷ್ಟು ಭರವಸೆ ನೀಡಿತೋ, ಪಾರ್ವತಿ ತಮ್ಮ ಹೃದಯ ತುಣುಕನ್ನು ಗೆಳತಿಯ ವಶಕ್ಕೊಪ್ಪಿಸಿ ಹೊರಟು ಬಂದರು.
ಶ್ಯಾಮಲ ಇದುವರೆಗೂ ಒಂದೂ ಮಾತನಾಡಿರಲಿಲ್ಲ. ಎಲ್ಲರೂ ಎಲ್ಲಾ ವಿಧದಲ್ಲಿ ಯತ್ನಿಸಿ ಸೋತಿದ್ದರು. ಗದರಿಸಿದರೆ ಜೋರಾಗಿ ಅತ್ತುಬಿಡುತ್ತಿದ್ದಳು, ಯಾರೂ ಕಾಣದ ಜಾಗಕ್ಕೆ ಹೋಗಿ ಹೊಟ್ಟೆಯನ್ನು ಜೋರಾಗಿ ಗುದ್ದಿಕೊಳ್ಳುತ್ತಿದ್ದಳು. ಕುತ್ತಿಗೆಯನ್ನು ಹಿಸುಕುವಂತೆ ಅವಳ ಕೈಗಳು ಮಗುವಿನ ಕುತ್ತಿಗೆಗಾಗಿ ಹೊಟ್ಟೆಯ ಮೇಲೆ ಹುಡುಕುತ್ತಿದ್ದವು. ಯಾವಾಗಲೂ ಶೂನ್ಯದತ್ತ ನೋಡುತ್ತ ಮಂಕಾಗಿ ಕುಳಿತುಬಿಡುತ್ತಿದ್ದಳು. ತಾಯಿಯ ವಿಷಯ, ಮನೆಯ ವಿಷಯ ಬಂದಾಗ ದುಃಖ ಉಕ್ಕಿ ಬರುತ್ತಿತ್ತು. ಮರೆಯಲ್ಲಿ ಕುಳಿತು ಚಿಕ್ಕ ಮಗುವಿನಂತೆ ಅಳುತ್ತಿದ್ದಳು. ಏನನ್ನೋ ಹೇಳಲು ಅವಳ ತುಟಿಗಳು ಚಲಿಸಿದರೂ ಸ್ವರ ಬರುತ್ತಿರಲಿಲ್ಲ. ಅವ್ಯಕ್ತ ಕೈಯೊಂದು ಗಂಟಲು ಹಿಚುಕಿದಂತೆ ಚಡಪಡಿಸುತ್ತಿದ್ದಳು.
ಕೊನೆಗೊಮ್ಮೆ ಅವಳ ದೇಹದ ಭಾರ ಇಳಿಯಿತು. ಅವಳ ಚಡಪಡಿಕೆ ತೊಳಲಾಟ ತಟಸ್ಥವಾಯಿತು. ಸುಕೋಮಲ ಮುದ್ದು ಹೆಣ್ಣು ಮಗುವನ್ನು ಕಂಡು ಪಾರ್ವತಿಯವರ ಮುಖದಲ್ಲಿ ನಾನಾ ಭಾವನೆಗಳು ಕ್ಷಣದಲ್ಲಿ ಮಿಂಚಿ ಮರೆಯಾದವು. ಬೆಣ್ಣೆಯಂತಹ ಮುಖ ಸವರಿ ಹಣೆಯ ಮೇಲೆ ಮೃದುವಾಗಿ ಮುತ್ತನ್ನಿಟ್ಟರು. ನಿನ್ನೆ ಮೊನ್ನೆ ಮಡಿಲಲ್ಲಿ ಮಗುವಾಗಿ ಆಡುತ್ತಿದ್ದ ಶ್ಯಾಮಲ. ಈಗ ಮಗುವಿನ ತಾಯಿಯಾಗಿ ಮಲಗಿದ್ದಳು. ಎರಡೂ ಒಂದೇ ಮಂಚದಲ್ಲಿ ಮಲಗಿರುವ ಮಕ್ಕಳು ಎನ್ನಿಸಿ, ಹೃದಯ ತುಂಬಿ ಬಂದಂತಾಯಿತು.
“ಶ್ಯಾಮಾ…” ಮೃದುವಾಗಿ ಮಗಳ ಮುಖ ನೇವರಿಸುತ್ತಾ ಹತ್ತಿರ ಬಾಗಿ ಕರೆದಳು.
ಒಮ್ಮೆ ತಾಯಿಯ ಮುಖದತ್ತ ನಿಧಾನವಾಗಿ ನೋಡಿದ ಶ್ಯಾಮಲ ಪುನಃ ದಣಿದವಳಂತೆ ನಿಧಾನವಾಗಿ ಕಣ್ಣು ಮುಚ್ಚಿಕೊಂಡಳು.
“ಮಗು ತುಂಬಾ ಚೆನ್ನಾಗಿದೆ….”
“…..”
“ಎಲ್ಲಾ ನಿನ್ನ ಹಾಗೇನೇ ಕಣ್ಣು, ಬಾಯಿ ಪಾರ್ವತಿಯವರ ಅಕ್ಕರೆ ತುಂಬಿದ ಮಾತುಗಳನ್ನು ಅರ್‍ಧದಲ್ಲಿಯೇ ಕಡಿದು.
“ಮುಮ್ಮಾ! ಫೀಸ್, ಸ್ಟಾಪ್ ಟೆಲಿಂಗ್…. ಐ, ಐ ಹೇಟ್ ಇಟ್” ಉದ್ವೇಗದಿಂದ ಉನ್ಮಾದಿನಿಯಂತೆ ಚೀರಿದಳು.
“ಐ ಹೇಟ್ ದಿಸ್….ಐ ಹೇಟ್ ಯೂ ಆಲ್….ಐ ಹೇಟ್” ಹೇಳುತ್ತಾ ಹೇಳುತ್ತಾ ಹುಚ್ಚಿಯಂತೆ ದಿಂಬಿನಲ್ಲಿ ಮುಖ ಹುದುಗಿಸಿ ಅಳತೊಡಗಿದಳು. ಹಲವು ತಿಂಗಳುಗಳ ನೋವು ದುಃಖ ಕಟ್ಟೆಯೊಡೆದು ಕಣ್ಣೀರಾಗಿ ಹರಿಯತೊಡಗಿತು.
“ನಾನೂ ಹುಟ್ಟಿದ ಕೂಡಲೆ ನೀನ್ಯಾಕೆ ಸಾಯಿಸಲಿಲ್ಲ? ನೀನೇನು ಸಾಧಿಸಿದೆ? ಹೇಳು ಮಮ್ಮಾ? ನೀನೇನೋ ಪ್ರೀತಿಯಿಂದ ಸಾಕಿದೆ. ಆದರೆ ನೆಮ್ಮದಿಯಿಂದ ನಾನು ಬದುಕಲಿಲ್ಲ. ನೆರೆಹೊರೆಯವರು ಯಾರಿಗೆ ಹುಟ್ಟಿದವಳೂಂತ ಹಂಗಿಸುತ್ತಾ ನೋಡುವಾಗಲೆಲ್ಲಾ ನಾನು ಕಣಕಣವಾಗಿ ಸಾಯತೊಡಗಿದ್ದೆ. ನಿನ್ನ ಸಮಾಜ ನನ್ನನ್ನು ಕೀಳರಿಮೆಯಿಂದ ಸಾಯುವಂತೆ ಮಾಡಿತು, ಅತ್ಯಾಚಾರದಿಂದ ನೋಯುವಂತೆ ಮಾಡಿತು. ಮುಂದೆ ಈ ಪಾಪದ ಕೂಸನ್ನು ಮತ್ಯಾರೋ ಹೀಗೇ…. ಚಿತ್ರಹಿಂಸೆ ಮಾಡಬಹುದು. ನಾನೀಗಲೇ ಇದನ್ನ ಸಾಯಿಸಿಬಿಡ್ತೀನಿ. ಪಾಪದ ಹೂ ಬಿಡುವ ಗಿಡಗಳು ಬೆಳೆಯಬಾರದು ಹೌದು, ನೀನು ಸಹಿಸಿದರೂ ನಾನು ಖಂಡಿತ ಸಹಿಸಲಾರೆ…”
ಉದ್ವೇಗದಿಂದ ಚೀರಿ… ಹೇಳುತ್ತಾ ಧಿಗ್ಗನೆ ಮೇಲೆದ್ದಳು, ಉದ್ವೇಗದಿಂದ ಅವಳು ಕಂಪಿಸುತ್ತಿದ್ದಳು. ಪ್ರಸವದ ದಣಿವು, ನೋವಿನಿಂದ ನಿತ್ರಾಣವಾದಂತಾಗಿದ್ದ ಅವಳ ಕೋಮಲ ದೇಹ ತೊಯ್ದಾಡಿತು.
“ಶ್ಯಾಮೂ ಕೂತ್ಕೋ…. ಬದಲಾಗಿ ಮಗಳನ್ನು ಅಪ್ಪಿ ಹಿಡಿದು ಬಲವಂತದಿಂದ ಮಲಗಿಸಲು ಯತ್ನಿಸಿದಷ್ಟು ಅವಳು ಬಡಿಸುತ್ತಾ ಕೊಸರಾಡುತ್ತಿದ್ದು, ಕೊನೆಗೆ ಬಳಲಿದವಳಂತೆ ಒರಗಿದಳು. ಆ ಕ್ಷಣಕ್ಕೆ ಪಾರ್ವತಿಗೆ ಸ್ವಲ್ಪ ಸಮಾಧಾನವೆನಿಸಿ, ಮನೆಗೆ ಹೊರಡುವ ಏರ್ಪಾಟಿನ ಬಗ್ಗೆ ಸ್ನೇಹಿತೆಯೊಂದಿಗೆ ಚರ್ಚಿಸಿ, ತೀರ್ಮಾನಿಸುವ ವೇಳೆಗೆ ಆಘಾತವೊಂದು ಕಾದಿತ್ತು !
ಶ್ಯಾಮಲಾಳ ನವಜಾತ ಶಿಶುವು, ಶವವಾಗಿ ನರ್ಸಿಂಗ್ ಹೋಂ ಬಳಿಯ ಕಸದ ತೊಟ್ಟಿಯಲ್ಲಿದ್ದುದು ಗೋಚರಿಸಿತು. ಶ್ಯಾಮಲ ಏನೂ ಆಗದವಳಂತೆ ತುಟಿ ಬಿಗಿ ಹಿಡಿದು ಕುಳಿತಿದ್ದಳು. ಪಾರ್ವತಿ ಸ್ನೇಹಿತೆಯ ಸಹಾಯದೊಂದಿಗೆ ಶವವನ್ನು ಹೊತ್ತು ತರುವ ಪ್ರಯತ್ನ ನಡೆಸುವಷ್ಟರಲ್ಲಿಯೇ ಕಸದ ತೊಟ್ಟಿಯ ಬಳಿಯಲ್ಲಿ ಜನರ ಗುಂಪೇ ಸೇರಿತ್ತು. ನಾನಾ ಜನರ ನಾನಾ ಮಾತುಗಳನ್ನು ದೂರದಿಂದಲೇ ಕಂಪಿಸುತ್ತಿದ್ದ ಹೃದಯ ಹೊತ್ತು ಕೇಳುತ್ತಿದ್ದ ಪಾರ್ವತಿ ಮಗುವಿನ ಶವವನ್ನು ತರಲು ಮುಂದಾದಾಗ ಸ್ನೇಹಿತೆ ಆಕೆಯನ್ನು ತಡೆಹಿಡಿದು ಒಳಗೆ ಕರೆದುಕೊಂಡು ಬಂದು,
“ನಿಂಗೇನು ತಲೆ ಕೆಟ್ಟಿದೆಯಾ? ಆ ಗುಂಪು ಪೊಲೀಸರು ಸೇರಿರುವಾಗ ನೀನ್ಯಾಕೆ ಮಗು ನಮ್ಮದೂಂತ ಹೋಗ್ತಿಯಾ? ಎಲ್ಲರೂ ಜೈಲು ಸೇರಬೇಕಾಗುತ್ತೆ ಅಷ್ಟೆ” ಅಸಹನೆಯಿಂದ ನುಡಿದರು. ಆಸ್ಪತ್ರೆಯೊಳಗೇ ಮಗುವಿನ ಶವವಿದ್ದಿದ್ದರೆ ಏನಾದ್ರೂ ಸಮಜಾಯಿಷಿ ನೀಡಬಹುದಿತ್ತು. ಆದರೆ ಕಾಂಪೌಂಡಿನಿಂದಾಚೆಯಲ್ಲಿರುವಾಗ ಕದ್ದು ನೋಡುವುದು ಅಸಾಧು!
“ನನ್ನ ಕ್ಷಮಿಸಿಬಿಡು….. ಪ್ಲೀಸ್, ಸಹಾಯ ಮಾಡಿದ ನಿನಗೂ ಸಂಕಟಕ್ಕೆ ಸಿಲುಕಿಸಿದಂತಾಯಿತು. ಶ್ಯಾಮಲ ಹೀಗೆ ಮಾಡ್ತಾಳೇಂತ ಅಂಡ್ಕೊಂಡಿರಲಿಲ್ಲ. ಹೀಗಾಗುತ್ತೆ ಅಂತ ಗೊತ್ತಿದ್ದರೆ ಮಗೂನ ಅವಳ ಹತ್ತಿರ ಕೊಡ್ತಿರಲಿಲ್ಲ. ಎಂಥಾ ಸಂಕಟ ತಂದಿಟ್ಟಳಲ್ಲೆ” ಪಾರ್ವತಿಯವರು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟರು.
“ನೀನು ಸ್ವಲ್ಪ ಹೊತ್ತು ಸುಮ್ಮನಿದ್ದುಬಿಡು. ಅವಳನ್ನು ಕಂಡ್ ಹೋಗು. ಆ ಮಗನ ಬೇಬಿ ವಾರ್ಡ್ನಲ್ಲಿಟ್ಟಿದ್ದೆ. ನಿನ್ನೆ ರಾತ್ರಿ ಹಾಲು ಕುಡಿಸಿಕೊಡ್ತೀನಿ. ಎದೆ ಕಟ್ಟಿ ಬೀಗೀತಾಯಿದೆಯೆಂತಾ ಸುಳ್ಳು ಹೇಳಿ ಎತ್ತಿಕೊಂಡು ಹೋದಳಂತೆ. ಇದಕ್ಕೆ ನೀನಾದರೂ ಏನು ಮಾಡ್ತಿದ್ದೆ? ನಾನು ನಿಭಾಯಿಸ್ತೀನಿ. ಕಾರು ರೆಡಿ ಮಾಡಿಸಿದ್ದೀನಿ….. ಕರ್‍ಕೊಂಡ್ ಮನೆಗೆ ಹೋಗು….. ಫೀಸ್……”
“ನಿನ್ನನ್ನು ಕಷ್ಟದಲ್ಲಿ ಸಿಲುಕಿಸಿ ನಾನು ಹೋಗೋಲ್ಲ. ನಾನು ಇಲ್ಲಿಯೇ ಇದ್ದು ಸತ್ಯಾಂಶ ತಿಳಿಸ್ತೀನಿ…..”
“ಸತ್ಯ ! ಸತ್ಯ !! ಅಬ್ಬಬ್ಬಾ !!! ಇಷ್ಟಾದರೂ ನಿಂಗೆ ಬುದ್ದಿ ಬಾರ್‍ಲಿಲ್ಲವಲ್ಲೇ? ಸತ್ಯ ಹೇಳಿ ನೀನು, ನಿನ್ನ ಮಗಳು ಬದುಕುತ್ತೀರಿ ಅಂಡ್ಕೊಂಡಿದ್ದೀಯಾ? ಅದು ನಿಧಾನವಾಗಿಯೇ ತಿಳಿಬೇಕು….. ಅವರುಗಳಿಗೆ ಅನ್ನಿಸ್ಬೇಕು, ನಾವಾಗಿಯೇ ಸತ್ಯಾಂಶ ಸಾರುತ್ತಾ ಹೋದ್ರೆ ನಂಬೋದಿರಲಿ, “ಹುಚ್ಚು” ಅಂತಾರೆ ಅಷ್ಟೇ….. ನನ್ನ ಮಾತು ಕೇಳಿ ಮನೆಗೆ ಹೋಗು…… ನನ್ನ ತಿಳಿಯದಿದ್ದರೂ ನನ್ನ ಗಂಡನಿಗೆ ತಿಳಿದಿದೆ” ಆಕೆ ಪಾರ್ವತಿ ಮತ್ತು ಅವಳ ಮಗಳನ್ನು ತರಾತುರಿಯಿಂದ ಹೊರಡಿಸಿದರು.
“ಶ್ಯಾಮಾ – ಯಾಕಿಂಥಾ ಕೆಲ್ಸ ಮಾಡದೆ?” ಪಾರ್‍ವತಿ ದುಃಖ ನೋವಿನಿಂದ ಕೇಳಿದರು.
“ಯಾಕೇಂತಾನಾ? ಹುಟ್ಟಿದ ಕೂಡಲೇ ನೀನು ನನ್ನನ್ನು ಕೊಂದು ಹಾಕಿದ್ದಿದ್ದರೆ ಈ ಮಗೂನ ಕೊಲ್ಲೋಕೆ ನಾನಿರ್‍ತಿರ್‍ಲಿಲ್ಲ. ಅದಕ್ಕೆ ನಿರ್ವಿಕರವಾಗಿ ಒರಟಾಗಿ ಎತ್ತಲೋ ನೋಡುತ್ತಾ ಶ್ಯಾಮಲಾ ಹೇಳಿದಳು.
“ಹಾಗಂತ ಜೋರಾಗಿ ಹೇಳಬೇಡವೇ – ನೋಡೆ ಹೇಗೆ ಮಾತಾಡ್ತಾಳೆ… ಪೊಲೀಸ್ನೋರು ಹಿಡಿದ್ರೆ ನಾನೇನು ಮಾಡಲಿ?” ಸ್ನೇಹಿತೆಯನ್ನು ಅಪ್ಪಿ ಹಿಡಿದು ಅಸಹಾಯಕ ಮಗುವಿನಂತೆ ಅತ್ತರು, ಸ್ನೇಹಿತೆಯ ಕಣ್ಣು ಒದ್ದೆಯಾಗಿದ್ದವು. ಪಾರ್ವತಿಯನ್ನು ಸಾಂತ್ವನಗೊಳಿಸುತ್ತಾ,
“ಧೈರ್ಯವಾಗಿರು ಪಾರ್ವತಿ…… ಅವಳಿನ್ನೂ ಮೆಜಾರಿಟಿಗೆ ಬಂದಿಲ್ಲ…. ಅವ್ಳು ಹೇಳಿದ್ದನ್ನೆಲ್ಲಾ ಯಾರು ನಂಬ್ತಾರೆ… ಹಾಗೇನಾದ್ರೂ ಆದ್ರೆ ಒಳ್ಳೆಯ ಕ್ರಿಮಿನಲ್ ಲಾಯರ್ ಕೇಶವ್ ಅಂತ ಇದ್ದಾರೆ….. ಹೋಗಿ ಕಂಡರಾಯ್ತು. ನೀನು ನಿನ್ನ ಮನೆಗೆ ಸದ್ಯಕ್ಕೆ ಹೋಗು” ಕಾರಿನೊಳಗೆ ಹತ್ತಿಸಿ, ಅವಸರದಿಂದ ಹೊರಡಿಸಿದರು. ಎಲ್ಲರ ನೀರೀಕ್ಷೆಯನ್ನು ಸುಳ್ಳು ಮಾಡಿದ ಶ್ಯಾಮಲ, ಮನೆಗೆ ಹೋದ ವಾರದ ನಂತರ ತಾನೇ ಸ್ವಯಂ ಪೊಲೀಸ್ ಸ್ಟೇಷನ್ನಿಗೆ ಹೋಗಿ ಕೊಲೆ ಮಾಡಿ, ತನ್ನ ಮಗುವನ್ನು ಕಸದ ತೊಟ್ಟಿಯಲ್ಲಿ ಹಾಕಿದ್ದುದಾಗಿ ಹೇಳಿಕೆ ನೀಡಿದ್ದಳು!
* * *
“ಸದ್ದು – ಮಾತು ನಿಲ್ಲಿಸಿ” ಎಲ್ಲೋ ಸ್ವರ ಕೇಳಿಸಿದಂತಾಗಿ ಡಾಕ್ಟರ್ ಪಾರ್ವತಿ ಬೆಚ್ಚಿ ಬಿದ್ದು ನೋಡಿದಳು. ಹೌದು, ತಾನೀಗ ಆಸ್ಪತ್ರೆಯಲ್ಲಿಲ್ಲ. ಮನೆಯಲ್ಲಿಲ್ಲ ಕೋರ್ಟಿನಲ್ಲಿದ್ದೇನೆ ! ಮಂಜು ಮಂಜಾದಂತಹ ಕಣ್ಣುಗಳನ್ನೊಮ್ಮೆ ಒರೆಸಿಕೊಂಡು ಪುನಃ ನೋಡಿದರು.
ಇಷ್ಟು ವರ್ಷಗಳು ದುಃಖ, ನಿರಾಶೆ, ನೋವು, ಒಂಟಿತನದ ದುಃಖವನ್ನೆಲ್ಲಾ ನುಂಗುತ್ತಾ ಸಿಹಿಯನ್ನು ಮಾತ್ರ ಉಣ್ಣಿಸಲು ಯತ್ನಿಸಿ ಬೆಳೆಸಿದ ಮುದ್ದಿನ ಮಗಳು, ತನ್ನ ಎದುರಿನಲ್ಲೇ ಕಟಕಟೆಯಲ್ಲಿ ಕೊಲೆಗಾತಿಯಾಗಿ ನಿಂತಿದ್ದಾಳೆ! ಅವರ ಎದೆಯಲ್ಲಿ ಒಮ್ಮೆ ಛಳಕು ಹೊಡೆದಂತಾಯಿತು. ಅಡ್ವಕೇಟ್ ಕೇಶವ್ ಏರಿದ ದನಿಯಲ್ಲಿ ತನ್ನ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದ.
“ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿನ ಶೀಲಕ್ಕಿರುವ ಪ್ರಾಶಸ್ತ್ಯ ಇನ್ನಾವುದಕ್ಕೂ ಇಲ್ಲ. ಬಾಲ್ಯದಿಂದಲೇ ನೆರೆಯವರಿಂದ ಈ ಸತ್ಯವನ್ನೇಕೆ ಹಂತಹಂತವಾಗಿ ಒಪ್ಪಿಕೊಂಡು ಜೀರ್ಣಿಸಿಕೊಂಡಿರುತ್ತಾಳೆ. ಎಳೆಯ ವಯಸ್ಸಿನಲ್ಲೇ ಆಕೆಗೆ ಶೀಲದ ಬಗ್ಗೆ ಅದನ್ನು ಕಾಪಾಡಿಕೊಳ್ಳುವುದರ ಬಗ್ಗೆ ಪೂರ್ಣ ಪಾಠ ನಡೆದಿರುವಾಗ, ಅತ್ಯಾಚಾರಕ್ಕೊಳಗಾದ ಈ ಹುಡುಗಿ, ಹೇಗೆ, ಯಾರ ಬಳಿ ದೂರು ಹೇಳಿಕೊಂಡಾಳು? ಹೆತ್ತವರಾದರೂ ಹೇಗೆ ಹೇಳಿಕೊಂಡು ಮುಖವಿಟ್ಟುಕೊಂಡು ಓಡಾಡಿಯಾರು? ಅಂತಹುದರಲ್ಲಿ ಗರ್ಭವತಿಯೂ ಆದರೆ ಆಕೆಯ ಮನಸ್ಸಿನ ಸ್ಥಿತಿಯನ್ನು ನೀವೇ ಊಹಿಸಿ. ಮೆಡಿಕಲ್ ಆಕ್ಟ್ ಪ್ರಕಾರ ಕಾನೂನುಬದ್ಧವಾಗಿಯೇ ಗರ್ಭಪಾತ ಮಾಡಿಕೊಳ್ಳಲೇಬೇಕಾದ ಪ್ರಸಂಗ ! ಅದರಲ್ಲೂ ಹದಿನೆಂಟ್ ತುಂಬದ ಹುಡುಗಿ!! ಇದೋ ನೋಡಿ, ದಾಖಲೆ – ಅದರ ವಿವರ ಇಲ್ಲಿದೆ” ಎನ್ನುತ್ತಾ ಕೇಶವ್ ಕಾನೂನುಬದ್ಧವಾದ ಗರ್ಭಪಾತದ ಬಗೆಗಿನ ದಾಖಲೆಳನ್ನು ನ್ಯಾಯಾಧೀಶರ ಮುಂದಿಟ್ಟ.
“ಡಾಕ್ಟರ್ ಪಾರ್ವತಿಯವರು ಸತ್ತ ನವಜಾತ ಶಿಶುವನ್ನು ಪರೀಕ್ಷಿಸಿರಬಹುದು. ಅದೇ ರೀತಿ ಈಕೆಯನ್ನು ಪರೀಕ್ಷಿಸಿರಬಹುದು. ಅಂದಮಾತ್ರಕ್ಕೆ ಸತ್ತ ಶಿಶುವು ಶ್ಯಾಮಲಾಳದೆಂದು ಹೇಳಲು ಯಾವ ಆಧಾರಗಳೂ ಇಲ್ಲ ಯುವರ್ ಆನರ್. ಅತ್ಯಾಚಾರ, ಅಪವಾದ, ಅನ್ಯಾಯಕ್ಕೊಳಗಾಗಿ ದುಃಖಿತೆಯಾದ ಈಕೆ ಕೊಲೆಗಾತಿಯಲ್ಲ” ಎಂದ ಕೇಶವ್ ಮುಗಿಸಿದವನಂತೆ ಕುಳಿತು ಡಾಕ್ಟರ್ ಪಾರ್ವತಿಯವರ ಮುಖವನ್ನೇ ನೋಡಿದ. ಕೃತಜ್ಞತೆಯಿಂದ ಅವರ ಕಣ್ಣುಗಳಲ್ಲಿ ಮಿಂಚಿದ ಕಂಬನಿಯನ್ನು ಕಂಡು, ಕಣ್ಣು ಸನ್ನೆಯಿಂದಲೇ ಸಾಂತ್ವನಗೊಳಿಸುವಂತೆ ಹೇಳಿ ವಿಜಯದ ಮುಗುಳ್ನಗೆ ಬೀರಿದ.
“ನಾನೂ ಮಾತನಾಡ್ಬೇಕು” ಎಲ್ಲರೂ ಒಮ್ಮೆಲೇ ಸ್ವರ ಬಂದತ್ತ ತಿರುಗಿ ನೋಡಿದರು. ಇದುವರೆಗೂ ಮೌನವಾಗಿ ಕಟಕಟೆಯಲ್ಲಿ ನಿಂತಿದ್ದು, ಕೇಳಿದಕ್ಕಷ್ಟೇ ಉತ್ತರ ನೀಡಿದ್ದ ಶ್ಯಾಮಲ ಪೊಲೀಸ್ ಪಹರೆಯೊಳಗಿನಿಂದ ಮುಂದೆ ಬಂದಳು.
ಕೋರ್‍ಟ್ನಲ್ಲಿ ಪುನಃ ಗುಜು ಗುಜು ಎದ್ದಿತು. ಮುಗಿದೇ ಹೋಯಿತು ಎಂದು ಸಮಾಧಾನದ ಉಸಿರು ಎಳೆಯುತ್ತಿದ್ದಾಗಲೇ ಪುನಃ ಪ್ರಾರಂಭವಾದುದನ್ನು ಕಂಡು ಡಾಕ್ಟರ್ ಪಾರ್ವತಿಯವರ ಹೃದಯ ಒಂದು ಕ್ಷಣ ಸ್ತಬ್ಧವಾದಂತಾಯತು!
ಸೇರಿದ್ದ ಜನಸಮೂಹ ಕುತೂಹಲ, ಆಶ್ಚರ್ಯದಿಂದ ಶ್ಯಾಮಲಾಳತ್ತ ನೋಡಿತು.
“ಏನು ಹೇಳ್ತೀಯಾಮ್ಮಾ? ಎಲ್ಲಾ ಮುಗೀತಲ್ಲಾ – ಆಂ?”
ನ್ಯಾಯಾಧೀಶರು ಶಾಂತವಾಗಿ ಕೇಳಿದರು.
“ನಾನು ಮಾಡಿದ್ದ ಪಾಪದ ತೀರ್ಪನ್ನು ನೀವ್ಯಾಕೆ ಹೇಳ್ಬೇಕು? ನಾನೇ-ನಾನೇ ಎಲ್ಲವನ್ನೂ ಹೇಳ್ತೇನೆ-ಶಿಕ್ಷೆ ವಿಧಿಸಿಕೊಳ್ತೇನೆ. ಈ ಕ್ರೂರ ಪ್ರಾಣಿಗಳು ತುಂಬಿರುವ ಈ ಕಾಡಿಗಿಂತ ನನಗೆ ಜೈಲೇ ಇಷ್ಟ – “ಶ್ಯಾಮಲ ಉದ್ವೇಗದಿಂದ ನುಡಿದು, ರೋಷ ದ್ವೇಷದಿಂದೆಂಬಂತೆ ಎಲ್ಲರತ್ತ ನೋಡಿದಳು. ಕೇಶವ್ ಕಕ್ಕಾಬಿಕ್ಕಿಯಾದ. ನ್ಯಾಯಾಧೀಶರ ಸಂಜ್ಞೆಯನ್ನು ಅರಿತಂತೆ, ವಕೀಲರು ಎದ್ದು ಬಂದು ಕಟಕಟೆಯ ಬಳಿ ನಿಂತರು.
“ನಾನು ಹೇಳುವುದೆಲ್ಲಾ ಸತ್ಯಾನೇ-ಅದಕ್ಕೆ ಆಣೆ-ಪ್ರಮಾಣಳು ಬೇಕಿಲ್ಲ” ಎಂದು ದಿಟ್ಟತನದಿಂದ ನುಡಿದಳು.
“ನೀವು ಕೇಳಿದ್ದಕ್ಕೆ “ಹೌದು” ಅಥವಾ “ಇಲ್ಲ” ಎಂಬ ತಯಾರಾದ ಉತ್ತರಗಳನ್ನು ನಾನು ಕೊಡಲ್ಲ. ನೀವು ಕೇಳಿದ ಪ್ರಶ್ನೆಗಳೇನೇ ಇರಲಿ, ಉತ್ತರ ಮಾತ್ರ ಒಂದೇ-ನಾನು ಅಪರಾಧಿ, ಕೊಲೆಪಾತಕಿ, ನಾನೇ ಹೆತ್ತ ಮಗುವದು. ನೀರು ತುಂಬಿದ ಬಕೆಟ್ಟಿನಲ್ಲಿ ಮುಳುಗಿಸಿ ಕೊಂದೆ, ಕರುಣೆ, ಮಮತೆ ನನ್ನಲ್ಲಿ ಸತ್ತಿತ್ತು. ಹಲವು ವರ್ಷಗಳಿಂದ ನನ್ನನ್ನು ಕೊಲ್ಲುತ್ತಾ ಬಂದಿದ್ದ ರೋಷ, ಸೇಡು ಶಿಶುವನ್ನು ಬಲಿ ತೆಗೆದುಕೊಂಡಿತ್ತು. ನನಗೆ ನನ್ನ ಕರುಳ ಕುಡಿಯನ್ನು ಕೊಂದ ಪಶ್ಚಾತ್ತಾಪವಿಲ್ಲ, ಪಾಪದ ಭೀತಿಯಿಲ್ಲ. ನಾನು ಕೊಂದಿದ್ದು “ಬ್ಯಾಸ್ಟರ್ಡ್” ಎಂದು ಬರುವುದು ಹೊತ್ತು ಕಸದ ಡಬ್ಬಿಗಳಲ್ಲಿ ಆಯ್ದು ತಿಂದು ಮುಂದೆ ಬದುಕಲು ಬವಣೆಪಡುತ್ತಾ ಸಮಾಜದಿಂದ ಹಿಂಸಿಸಿಕೊಂಡು ಸಾಯಬೇಕಿದ್ದ ಅಮಾಯಕ ಶಿಶುವನ್ನು, ಅದು ತಪ್ಪೇ?”
“…..”
“ತಂದೆ ಯಾರೆಂದು ತಿಳಿಯದ ಮಕ್ಕಳನ್ನು ಈ ಸಮಾಜ. ಈ ನಮ್ಮ ಜನ ಸ್ವೀಕರಿಸೋ ರೀತಿ ನಂಗೆ ತಿಳಿದಿದೆ. ಅದಕ್ಕೆ ನಾನೇ ಉದಾಹರಣೆ…..”
ಅವಳ ಗಂಟಲು ಉಬ್ಬಿ ಬಂದಿತ್ತು. ಒಂದು ಕ್ಷಣ ನಿಲ್ಲಿಸಿ ಪುನಃ ಕಣ್ಣೊರೆಸಿಕೊಂಡು ಮುಂದುವರೆಸಿದಳು.
“ಚಿಕ್ಕ ವಯಸ್ಸಿನವಳ ಬಾಯಲ್ಲಿ ದೊಡ್ಡ ಮಾತು ಬಾರ್‍ತಾಯಿದೇಂತಾ ಅಂದ್ಕೋಬೇಡಿ. ಮಾನಸಿಕವಾಗಿ ಹಂತಹಂತವಾಗಿ ಕೊಲ್ಲುತ್ತಾ ಬಂದು, ಒಂದು ಪ್ರೇಮ, ಮಮತೆಯ ಮೂರ್ತಿಯಾಗಬೇಕಿದ್ದ ಮುಗ್ಧ ಹೆಣ್ಣನ್ನು ಕೌರ, ಹಿಂಸೆಯ ಮೂರ್ತಿಯನ್ನಾಗಿ ಮಾಡಿದ ನಿಮ್ಮ ಜನರಿಗೆ ಯಾವ ಶಿಕ್ಷೆಯೂ ಇಲ್ಲವೇ? ಹಂತಹಂತವಾಗಿ ತನ್ನ ಕೋಮಲ ಭಾವನೆಗಳನ್ನು ಕೊಂದ ಈ ಸಮಾಜವನ್ನು ಯಾರು ಶಿಕ್ಷಿಸುತ್ತಾರೆ? ನನ್ನನ್ನು ಕೊಂದದ್ದೂ ಅಲ್ಲದೆ, ಕೊಲ್ಲುವಂತೆಯೂ ಮಾಡಿದ ಇವರಿಗೆ ನಿಮ್ಮ ಕಾನೂನು ಯಾವ ರೀತಿ ಶಿಕ್ಷಿಸುತ್ತದೆ? ಹೇಳಿ ಸತ್ತವರನ್ನೇ ಸಾಯಿಸುವ ನಿಮ್ಮ ಕಾನೂನು ಯಾವ ರೀತಿಯದು ನಾನಾಗಲೇ ಸತ್ತು ಹೋಗಿದ್ದೇನೆ. ನಾನೀಗ ಜೀವಂತ ಶವ ಅಷ್ಟೆ.”
ಈಗ ಶ್ಯಾಮಲ ದುಃಖದಿಂದ ಚಿಕ್ಕ ಮಗುವಿನಂತೆ ಅಳಲಾರಂಭಿಸಿದಳು. ಕೋರ್ಟಿನಲ್ಲಿ ಗಲಿಬಿಲಿಯುಂಟಾಯಿತು.
ಕೇಶವ್ ಉದ್ವೇಗದಿಂದ ಎದ್ದು ನಿಂತು ಮುಂದೆ ಬಂದ.
“ನಾನು ಕೊಲೆಪಾತಕಿ – ನನಗೆ ಮರಣದಂಡನೆ ವಿಧಿಸಿ, ನಾನು ಸಾಯಬೇಕು
– ಈ ಪ್ರಪಂಚದ ಹೊರಗಿರುವ ಕ್ರೂರ ಮೃಗಗಳ ಭಯ! ನಂಗೆ ಶಿಕ್ಷೆ ನೀಡಿ ಸರ್ ನನ್ನ ಮಗೂನ ನಾನೇ ಕೊಂದೆ-”
ದುಃಖದಿಂದ ತಡೆದು ತಡೆದು ಬಿಕ್ಕುತ್ತಾ ಹೇಳಿದಳು. ಡಾಕ್ಟರ್ ಪಾರ್ವತಿಯವರ ಮುಖ ಬಟ್ಟೆಯಂತೆ ಬಿಳಿಚಿಕೊಂಡಿತು. ತಮ್ಮೆಲ್ಲಾ ಶಕ್ತಿ ಸೋರಿಹೋಗುತ್ತಿರುವಂತೆ ಭಾಸವಾಗಿ ಕುಸಿದವರಂತೆ ಹಿಂದಕ್ಕೊರಗಿದರು.
ಕೋರ್‍ಟ್ನಲ್ಲಿ ಹಾಲಿನಲ್ಲಿ ಜನರ ಮಾತು ಮೆಲುವಾಗಿ ಪ್ರಾರಂಭವಾಗಿ ಕ್ರಮೇಣದಲ್ಲಿ ಜೋರಾಗತೊಡಗಿತ್ತು. ಒಮ್ಮೆ ತಾಯಿಯತ್ತ ಒಮ್ಮೆ ಮಗಳತ್ತ ಕುತೂಹಲದಿಂದ ನೋಡುತ್ತಾ ತೀರ್ಪಿಗಾಗಿ, ಕಾತುರದಿಂದ ನ್ಯಾಯಾಧೀಶರತ್ತ ನೋಡತೊಡಗಿದರು.
ಈ ಜನರಿಗೆ, ಅರ್ಥಾತ್ ನಮಗೆ ತೀರ್ಪು ಬೇಕು. ಅಪರಾಧಿಯ ಮನಸ್ಸು ಹೇಗೇ ಇರಲಿ ಮಾನವೀಯತೆ, ಅನುಕಂಪದ ಮನೋಭಾವವೊಂದು ಬೇಡಾ, ಅದೇ ನಾವು-ಇದೇ ಜಾಗದಲ್ಲಿ ನಿಂತಾಗ ನಿಜಾಂಶದ ನೋವು ತಿಳಿಯುತ್ತದೆ! ಯೋಚಿಸಿದ ಕೇಶವನ ತುಟಿಗಳಲ್ಲಿ ವಿಷಾಧ ಮೂಡಿತು. ನಿಧಾನವಾಗಿ, ಆದರೆ ದೃಢವಾದ ಸ್ವರದಿಂದ,
“ಯುವರ್ ಆನರ್, ಈ ಹುಡುಗಿ ತನಗಾದ ಅಪಘಾತದಿಂದ ಮಾನಸಿಕ ವಿಭ್ರಮೆಗೊಳಗಾಗಿದ್ದಾಳೆ. ಅದಕ್ಕಾಗಿ ಚಿಕಿತ್ಸೆ ನೀಡಿದ ವೈದ್ಯರ ಸರ್ಟಿಫಿಕೇಟ್ಗಳು, ದಾಖಲೆಗಳು, ಅತ್ಯಾಚಾರ, ಅಕ್ರಮಗರ್ಭ, ನಂತರದ ಗರ್ಭಪಾತದಿಂದ ಇನ್ನೂ ಹದಿನೆಂಟು ತುಂಬದ ಈ ಹುಡುಗಿಯ ಹುಚ್ಚು ಮಾತುಗಳಿಂದ ತೀರ್ಮಾನಕ್ಕೆ ಬರಲಾಗದು. “ಶಿಶುಹತ್ಯೆ” ಸಾಬೀತಾಗಿಲ್ಲ-ಯಾವ ಸಾಕ್ಷ್ಯಾಧಾರಗಳೂ ಸಿಕ್ಕಿಲ್ಲ. ಈಕೆಗೆ ಮನೋಶಾಸ್ತ್ರಜ್ಞರ ನೆರವಿನ ಅವಶ್ಯಕತೆಯಿದೆ….” ಎಂದು ಆತ್ಮವಿಶ್ವಾಸದಿಂದ ಹೇಳಿ ತನ್ನ ಸ್ಥಳಕ್ಕೆ ಬಂದು ಕುಳಿತ.
ನ್ಯಾಯಾಧೀಶರು ತಮ್ಮ ಮುಂದಿದ್ದ ವಿವಿಧ ಸರ್ಟಿಫಿಕೇಟುಗಳನ್ನೂ, ಇಟ್ಟಿದ್ದ ಫೈಲನ್ನು ಬಿಡಿಸಿದರು. ನಂತರ ನಿಧಾನವಾಗಿ,
“ಈಕೆ ಕೊಲೆಪಾತಕಿಯಲ್ಲ” ಹಾಗೂ-
ನ್ಯಾಯಾಧೀಶರು ಮುಂದೆ ಏನು ಹೇಳಿದರು? ಎಷ್ಟು ಹೊತ್ತು ತಮ್ಮ ತೀರ್ಪನ್ನು ಸಮರ್ಥಿಸುತ್ತಾ ಮಾತನಾಡಿದರೂ, ಯಾವುದೂ ಶ್ಯಾಮಲಾಗಳಿಗೆ ಕೇಳಿಸಲಿಲ್ಲ. ಏನೂ ಕಾಣಿಸಲಿಲ್ಲ. ಅವಳ ನೀರು ತುಂಬಿದ ಕಣ್ಣುಗಳ ಮುಂದೆ ದುಂಡುದುಂಡಾಗಿ, ಕೈಕಾಲು ಬಡಿದು ಆಡುತ್ತಿದ್ದ ಮುದ್ದಾದ ಮಗುವನ್ನು ನೀರು ತುಂಬಿದ ಟಬ್ನಲ್ಲಿ ಮುಳುಗಿಸಿ, ಚಡಪಡಿಸುತ್ತಾ ನಂತರದಲ್ಲಿ ಶವವಾಗಿ ತೇಲಿದ ಮಗುವು ಕಣ್ಣು ಮುಂದೆ ಬಂದಂತಾಗಿ, ಒಮ್ಮೆಲೇ ಕತ್ತಲಾವರಿಸಿದಂತಾಗಿ….. ನಿಂತ ಜಾಗದಲ್ಲಿಯೇ ಕುಸಿದುಬಿದ್ದಳು.
*****


















