Home / ಕಥೆ / ಸಣ್ಣ ಕಥೆ / ಒಂದು ಪತ್ತೇದಾರಿ ಕಥೆ

ಒಂದು ಪತ್ತೇದಾರಿ ಕಥೆ

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆಯಬೇಕೆಂಬ ಕಥೆ! ಒಂದು ವಿಚಿತ್ರ ಪ್ರೇಮಕಥೆ. ಮಾಗುತ್ತಿರುವ ವಯಸ್ಸಿನೊಡನೆ ವಿಚಿತ್ರ ರೂಪಗಳನ್ನು ತಾಳುವ ಕಾಮದ ಕಥೆ! ಟೀವಿ ಮತ್ತು ಟೈಟಾನಿಕ್‌ಗಳನ್ನು ಮರೆಯುವಂತೆ ಮಾಡುವ ಕಥೆ! ಅದಕ್ಕೆ ಏಕಚಿತ್ತರಾಗಿ ಓದಿ!

ಅಷ್ಟನ್ನು ಬರೆದು ನಿಲ್ಲಿಸಿ ಅದನ್ನೇ ಒಂದೆರಡು ಸಲ ಓದಿಕೊಂಡ. ಚೆನ್ನಾಗಿದೆ ಎನಿಸಿತು. ಇದೇ ರೀತಿಯಲ್ಲಿ ಮೊದಲೇ ಹತ್ತಾರು ಲೇಖಕರು ತಮ್ಮ ಕಥೆಗಳನ್ನು ಕೂಡ ಆರಂಭಿಸಿದ್ದಾರೆ ಎನಿಸಿತು. ಯಾರು ಈವರೆಗೆ ಬರೆಯಲಾರದಂತಹದನ್ನು ಬರೆಯಬೇಕು ಎಂದು ಯೋಚಿಸಿದ. ಅಂತಹದ್ಯಾವುದು ಈವರೆಗೆ ಅವನಿಗೆ ಹೊಳೆದಿರಲಿಲ್ಲ. ಮೆದುಳು ತನ್ನ ಕೆಲಸವನ್ನು ಬಿಟ್ಟಿರಲಿಲ್ಲ.

ಕಸಾನ್‌ ಟಜಾಕಿಸ್, ಸಾಲ್‌ಬೆಲೋ ಸಿಂಗರ್‌ನೊಳಗೊಂಡು ಹೆಸುರ ಮಾಡಿದ ಎಲ್ಲ ಲೇಖಕರನ್ನು ಅವನು ಓದಿದ್ದ. ಕನ್ನಡದಲ್ಲಂತೂ ಅವನು ಓದದ ಪುಸ್ತಕಗಳಿಲ್ಲ. ಇದರಿಂದ ಅವನು ಸಾಹಿತಿಯಾಗುವ ದಿಕ್ಕಿನಲ್ಲಿ ಗೊಂದಲಗಳು ಹೆಚ್ಚಾಗಿದ್ದವು.

ಸೃಜನಶೀಲ ಸಾಹಿತಗಳ ಒಡನಾಟದಲ್ಲಿ ಸಮಯ ಕಳೆಯುತ್ತಿದ್ದ. ಅವರೊಡನೆ ಏಳುವುದು ಕೂಡುವುದು ಮಾಡುತ್ತಿದ್ದ. ಅವರುಗಳ ಸಾಂಗತ್ಯಕ್ಕಾಗಿ, ಸಾಮೀಪ್ಯಕ್ಕಾಗಿ ಹಂಬಲಿಸುತ್ತಿದ್ದ. ಕಲಿಕೆಯ ಇದು ಒಂದು ಮುಖ್ಯ ಮಾರ್ಗವೆಂಬುದವನ ನಂಬಿಕೆ.

“ಸಾಲ್‌ಬಿಲೋನ ಹೆಂಡರ್‌ಸನ್‌ನಂತೆ ನನಗೂ ಬೇಕು… ಬೇಕು… ಬೇಕು… ಎನಿಸುತ್ತದೆ ಸಾರ್!”

ಅವನ ಮಾತು ಕೇಳಿದ ಖ್ಯಾತ ಸೃಜನಶೀಲ ಸಾಹಿತಿಯರು ತಲೆಯೆತ್ತಿ ನೋಡಿದರು. ಅವರ ಕಣ್ಣುಗಳಲ್ಲಿ ವಿಚಿತ್ರ ವ್ಯಂಗ್ಯ ಮತ್ತು ಕರುಣೆಯ ಭಾವ ತುಂಬಿಬಂದಿತ್ತು. ಅಂತಹದ ಮುಗುಳ್ನಗೆ ಬೀರಿ ಅವರು ನಯವಾದ ದನಿಯಲ್ಲಿ ಕೇಳಿದ್ದರು.

“ಹೆಂಡರ್‌ಸನ್ ದ ರೇನ್‌ಕಿಂಗ್ ಓದಿದ್ದೀಯ?”

ದನಿ ನಯವಾಗಿದ್ದರು. ಅದರಲ್ಲಿನ ಮೊನಚು ಅವನಿಗೆ ಚುಚ್ಚುವಂತಿತ್ತು. ಒಬ್ಬ ಮಹಾಬ್ರಾಹ್ಮಣನೆದುರು ತೀರ ಕೀಳುಜಾತಿಯವನೊಬ್ಬ ವೇದಗಳನ್ನು ಓದಿದ್ದೇನೆಂದರೆ ಹೇಗೆ ಪ್ರತಿಕ್ರಿಯಿಸುತ್ತಾರೋ ಹಾಗವರು ಕೇಳಿದ್ದಾರೆ ಎನಿಸಿತವನಿಗೆ. ತನಗೆ ಅವರೆದುರು ಸಾಲ್‌ಬಿಲೋ, ಕಾಫ್ಕಾರಂತಹವರ ವಿಷಯ ಮಾತಾಡುವ ಅಧಿಕಾರವಿಲ್ಲವೆನಿಸಿತು. ಅವರ ಅಸಮಾಧಾನಕ್ಕೆ, ಕೋಪಕ್ಕೆ ಒಳಗಾದರೆ ತಾನು ಸಾಹಿತಿಯಾಗಲು ಸಾಧ್ಯವಿಲ್ಲವೆನಿಸಿ ಆ ಮಾತನ್ನು ಅಲ್ಲಿಗೆ ಬಿಟ್ಟ. ಅದರೊಡನೆಯೇ ತಾನು ಅಂತಹ ಲೇಖಕರ ಬಗ್ಗೆಯೂ ಚರ್ಚಿಸುವುದು ಬಿಟ್ಟು ಬರೀ ಕನ್ನಡ ಲೇಖಕರ ಮೇಲೆ ಮನವನ್ನು ಕೇಂದ್ರೀಕರಿಸಬೇಕೆಂದು ನಿರ್ಣಯಿಸಿದ.

ನಮ್ಮ, ತೀರ ನವ್ಯ, ದಲಿತ, ಬ್ರಾಹ್ಮಣ ಎಂಬ ತಲೆಬರಹಗಳನ್ನು ಹೊತ್ತ ಎಲ್ಲಾ ಲೇಖಕರ ಕೃತಿಗಳನ್ನು ಓದತೊಡಗಿದ. ಅವರಲ್ಲಿ ಬಹುಜನ ಅವನಿಗೆ ಪರಿಚಿತರೆ. ಒಬ್ಬರಿಬ್ಬರನ್ನು ಬಿಟ್ಟರೆ ಎಲ್ಲರೂ ತಿಣುಕುತ್ತಾ, ತೆವಳುತ್ತಾ ಬರೆಯುವವರೆ ಎನಿಸಿತ್ತವನಿಗೆ. ಆದರೆ ಆ ಮಾತು ಅವರೆದುರು ಹೇಳುವ ಹಾಗಿಲ್ಲ. ಬ್ರಾಹ್ಮಣಿಕೆಯ ಹಣೆಯಬರಹ ಹೊತ್ತ ಲೇಖಕರೊ-ಒಬ್ಬರು ಬರೆಯುತ್ತಿದ್ದ ಬೃಹತ್ ಕೃತಿಗಳಲ್ಲಿ ವಾದ ವಿವಾದಗಳೇ ತುಂಬಿರುತ್ತಿದ್ದವು. ಯಾವ ಪಾತ್ರವು ಹೆಂಡರ್‌ಸನ್‌ನಂತ, ಹೆರ್ಜಾಗ್‌ನಂತೆ, ಜೋರ್‌ಬಾ ದ ಗ್ರೀಕ್‌ನಂತೆ ಮನಸ್ಸಿನಲ್ಲಿ ಉಳಿಯುವವರಲ್ಲ. ಆದರೂ ಅವರು ಶ್ರೇಷ್ಠ ಲೇಖಕರೆನಿಸಿ ಕೊಂಡಿದ್ದರು. ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದವು ಅವರ ಕೃತಿಗಳು. ಹೆಂಗಸರ ಅವರ ಓದುಗರಲ್ಲಿ ಹೆಚ್ಚೆಂದು ಲೇಖಕ ಬಳಗದವರು ಆಡಿಕೊಳ್ಳುವುದನ್ನು ಕೇಳಿದ್ದ. ಶ್ರಾದ್ಧ ಕರ್ಮಗಳು, ಹೋಮ ಹವನಗಳು, ಗೌರೀ-ಗಣೇಶರು, ಪೀತಾಂಬರಗಳು, ಗೋವಿನ ಮಹಾತ್ಮ, ಮಾಂಸಾಹಾರದ ಬಗೆಗಿನ ಅಸಹ್ಯದ ಸುತ್ತು ಓಡಾಡುವ ಅವರ ಕಾದಂಬರಿಗಳೆಂದರೆ ಅವನಿಗೆ ಎಲ್ಲಿಲ್ಲದ ಸಿಟ್ಟು. ಎಲ್ಲಾ ಕಟ್ಟುಪಾಡುಗಳನ್ನು ಕಳಚಿ ತನ್ನನ್ನು ಬಂಧಿಸಿ ಬಿಗಿಯಾಗಿ ಹಿಡಿದ ಪೊರೆಯಿಂದ ಮುಕ್ತವಾಗಿ ಹೊರಬರಬೇಕೆಂಬುವುದು ಅವನ ಮಹತ್ತ್ವಾಕಾಂಕ್ಷೆ.

ಈಗಾಗಲೇ ಎಷ್ಟೋ ಕಥೆಗಳನ್ನು ಬರೆದಿದ್ದ ಅವನು ತನ್ನ ಕಥೆಗಳನ್ನು ಪತ್ರಿಕೆಗಳಿಗೆ ಕಳುಹಿಸಿದ್ದ. ತಮ್ಮದೇ ಆದ ಸಮಯ ತೆಗೆದುಕೊಂಡು ಅವನ್ನು ಮರಳಿಸಿದ್ದರವರು. ಸಾಕಷ್ಟು ಅಂಚೆ ಚೀಟಿಗಳನ್ನು ಇಟ್ಟಿದ್ದರು ಕೆಲ ಕಥೆಗಳು ಮರಳಿ ಕೂಡ ಬಂದಿರಲಿಲ್ಲ. ಅವುಗಳ ಕಥೆ ಮುಗಿಯಿತೆಂದುಕೊಂಡು ಸುಮ್ಮನಾಗಿಬಿಟ್ಟಿದ್ದ.

ಬೇರೆ ಲೇಖಕರ ಕಥೆಗಳೊಡನೆ ಹೋಲಿಸಿದರೆ ತನ್ನ ಕಥೆಗಳು ಅವುಗಳಿಗಿಂತ ಎಷ್ಟೋ ಪಾಲು ಮೇಲು ಎನಿಸಿತವನಿಗೆ. ಕಾಗೆಯ ಮರಿ ಕಾಗೆಗೆ ಮುದ್ದು ಎಂಬ ಮಾತು ನೆನೆಯಿಸಿಕೊಂಡ. ಆಗಿನಿಂದ ಹೆಸರು ಮಾಡಿದ ಸಾಹಿತಿಯರ ಒಡನಾಟ ಆರಂಭಿಸಿದ್ದ.

ಇಂತಹ ಕಥೆಗಳನ್ನು ಯಾರು ಪ್ರಕಟಿಸುವುದಿಲ್ಲ, ಓದಿಸಿಕೊಂಡು ಹೋಗುವಂತಹ ರೋಮಾಂಚಕಾರಿ ಕಥೆಗಳಿರಬೇಕು ಎಂದು ಒಬ್ಬ ಸಾಹಿತಿ ಶ್ರೇಷ್ಠರು ಹೇಳಿದಾಗ ತಾನು ಎನ್. ನರಸಿಂಹಯ್ಯನವರಂತೆ ಮತ್ತೊಬ್ಬ ಪತ್ತೇದಾರ ಪುರುಷೋತ್ತಮನನ್ನು ಹುಟ್ಟಿಸಲೇ ಎಂದು ಕೂಡ ಎನಿಸಿತ್ತು. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಹಾಗೇ ಮಾಡಲು ಯತ್ನಿಸಿ ಸೋತ ಎಷ್ಟೋ ಜನ ಸೃಜನಶೀಲ ಸಾಹಿತಿಯರನ್ನು ಅವನು ನೋಡಿದ್ದ. ಅದು ಅಲ್ಲದೆ ಪತ್ತೇದಾರಿ ಕಥೆ ಕಾದಂಬರಿಗಳು ಸಾಹಿತ್ಯವೇ ಅಲ್ಲ! ಅಂತಹದು ಬರೆದು ಕೂಡ ಏನು ಉಪಯೋಗ ಎನಿಸಿತ್ತು.

ಒಬ್ಬ ಬಹಳ ಹೆಸರು ಮಾಡಿದ ರಾಷ್ಟ್ರದ ಬಿರುದು ಸನ್ಮಾನಗಳನ್ನು ಹೊಂದಿದ ಲೇಖಕರ ಹತ್ತಿರನಾದ. ಅವರು ಕರ್ನಾಟಕದಲ್ಲೇ ಅಲ್ಲ, ಇಡೀ ವಿಶ್ವದಲ್ಲಿ ಹೆಸರು ಮಾಡಿದ ಕನ್ನಡಿಗರು. ಅವರನ್ನು ಸರ್ಕಾರ ಸಕಲ ಸನ್ಮಾನ ಬಿರುದುಗಳೊಡನೆ ಅಲಂಕರಿಸಿತ್ತು ಕೂಡ. ಹಿರಿಯ ರಾಜಕಾರಣಿಯರ ಕೇಂದ್ರದಲ್ಲಿನ ಮಂತ್ರಿಯರ ಪರಿಚಯ ಅವರಿಗೆ ಚೆನ್ನಾಗಿತ್ತು. ಅವರ ಮುಖಾಂತರವಾದರೂ ತನ್ನ ಕಥೆಗಳು ಪ್ರಕಟವಾಗುವುದೆಂಬ ವಿಶ್ವಾಸ ಅವನಿಗೆ.

ಮೆಚ್ಚುಗೆ ಗಳಿಸಲು ಅವರ ಅಂಡನ್ನು ತೊಳೆಯುವುದನ್ನು ಬಿಟ್ಟು ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡಿದ. ಅಲ್ಪಸ್ವಲ್ಪ ಹೆಸರು ಮಾಡಿದ ಕೆಲ ಲೇಖಕರು ಕೂಡ ಯಾವಾಗಲೂ ಅವರ ಜೊತೆಗಿರುತ್ತಿದ್ದರು. ಅವರ ಮರ್ಜಿ ಹಿಡಿದು ಆ ಇಡೀ ಗುಂಪಿಗೆ ಗುಲಾಮನಂತಾದ.

ತನ್ನ ಸೇವೆ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದಂತೆ ಕಂಡಿತವನಿಗೆ. ಅಂಚೆ ಇಲಾಖೆಗೆ ಮಾರು ಹೋಗುವುದು ಬಿಟ್ಟು ಅವರು ಅವನ ಪರವಾಗಿ ಸಂಪಾದಕರಿಗೆ ಬರೆದ ಪತ್ರಗಳೊಡನೆ ತನ್ನ ಕಥೆಗಳನ್ನು ಪತ್ರಿಕಾ ಕಾರ್ಯಾಲಯಗಳಿಗೆ ತೆಗೆದುಕೊಂಡು ಹೋಗಿ ಸಂಪಾದಕರಿಗೆ ಕೊಟ್ಟು ಬಹು ವಿನಯವಾಗಿ ಅವರೆದುರು ನಿಲ್ಲುತ್ತಿದ್ದ. ಶ್ರೇಷ್ಠ ಸಾಹಿತಿವರ್ಯರು ಅವನ ಪರವಾಗಿ ಬರೆದ ಪತ್ರದ ಮೇಲೆ ಕಣ್ಣಾಡಿಸಿದ ಸಂಪಾದಕರು ಆದಷ್ಟು ಬೇಗ ಅವನಿಗೆ ಬರೆಯುವ ಅಶ್ವಾಸನೆ ನೀಡಿ ಕಳುಹಿಸಿಬಿಡುತ್ತಿದ್ದರು.

ಇದರಿಂದಲೂ ಅವನ ಯಾವ ಕಥೆಯೂ ಎಲ್ಲೂ ಪ್ರಕಟವಾಗಲಿಲ್ಲ. ತನ್ನ ಹೆಸರು ಮುದ್ರಿತವಾಗಿ ಪತ್ರಿಕೆ, ಪುಸ್ತಕಗಳ ಮೇಲೆ ಶೋಭಿಸಬೇಕು. ತನ್ನ ವಿಚಾರಗಳು ಜನರಿಗೆ ತಿಳಿಯಬೇಕು ಎಂಬ ಅವನ ಮಹತ್ಮಾಕಾಂಕ್ಷೆ, ಕನಸು, ಕನಸಾಗಿಯೇ ಉಳಿಯಿತು.

ಒಂದು ಕೋಣೆ. ಅದನ್ನಂಟಿಕೊಂಡೆ ಇನ್ನೊಂದು ಚಿಕ್ಕ ಕೋಣೆ. ಅದೇ ಅಡುಗೆಮನೆ ಸ್ನಾನ ಶೌಚಗಳಿಗಾಗಿ ವಠಾರದವರೆಲ್ಲಾ ಉಪಯೋಗಿಸುತ್ತಿದ್ದ ನಾಲ್ವರಲ್ಲಿ ಯಾವುದನ್ನಾದರೂ ಉಪಯೋಗಿಸಬಹುದು. ಅಷ್ಟಕ್ಕೆ ಮೂವತ್ತು ಸಾವಿರ ಅಡ್ವಾನ್ಸ್ ನಾಲ್ಕು ನೂರು ಬಾಡಿಗೆ ಅವನಿಗೆ ಬರುತ್ತಿದ್ದ ಸಂಬಳದಲ್ಲಿ ಒಬ್ಬನ ಜೀವನ ಬಹು ಸುಖವಾಗಿ ಸಾಗಬಹುದು. ತಂದೆ ತಾಯಿ ಇಲ್ಲ. ಬಂಧು ಬಾಂಧವರು ದೂರದ ಊರಿನಲ್ಲಿದ್ದಾರೆ. ಯಾರ ಭಾರವೂ ಅವನ ಮೇಲಿಲ್ಲ. ಮಿಗಿಸಬಹುದಾದ ವೆಚ್ಚವಾಗಿಬಿಡುತ್ತಿತ್ತು. ಸಾಕಷ್ಟು ಹಣ ಸಾಹಿತಿಗಳ ಒಡನಾಟದಲ್ಲಿ ವೆಚ್ಚವಾಗಿಬಿಡುತ್ತಿತ್ತು.

ವಠಾರದಲ್ಲೆಲ್ಲಾ ಒಳ್ಳೆಯವನೆಂದು ಹೆಸರು ಸಂಪಾದಿಸಿದ್ದ. ಅವನನ್ನು ವಿಚಾರಿಸಿಕೊಳ್ಳಲು ಆಗಾಗ ಪಕ್ಕದ ಮನೆಯ ಹಿರಿಯ ದಂಪತಿಯರು ಬರುತ್ತಿದ್ದರು. ಹತ್ತಾರು ಸಲ ಅವನು ಅವರ ಮನೆಯಲ್ಲಿ ಊಟ ಮಾಡಿದ್ದು ಉಂಟು, ಅವರಿಗೂಬ್ಬ ಮಗಳು. ಸಾವಿತ್ರಿ. ಹೆಸರನ್ನು ಕೇಳಿದಾಗಲೆಲ್ಲಾ ಯಾವುದೋ ಹಿಂದಿನ ಯುಗಕ್ಕೆ ಹೊರಟುಹೋದಂತೆನಿಸುತ್ತಿತ್ತು. ಆಧುನಿಕತೆಯ ಒಂದು ಕುರುಹು ಅವರ ಮನೆಯಲ್ಲಿ ಕಾಣಿಸುತ್ತಿರಲಿಲ್ಲ. ಆದರೆ ಹೆಸರಿಗೆ ವಿಪರೀತವೆಂಬಂತೆ ಸಾವಿತ್ರಿ ಎಲ್ಲರೊಡನೆಯೂ ನಗುನಗುತ್ತಾ ಮಾತನಾಡುತ್ತಿದ್ದಳು. ಎಲ್ಲರೂ ಹುಟ್ಟಿದಾಕ್ಷಣ ಅಳುತ್ತಾರೆ. ಇವಳು ನಕ್ಕಿರಬೇಕು ಎಂದವನು ಎಷ್ಟೋ ಸಲ ಅಂದುಕೊಂಡಿದ್ದ. ಅದು ಅಲ್ಲದೇ ಎಲ್ಲಾ ವಿಷಯಗಳ ಬಗ್ಗೆ ಅಲ್ಪಸ್ವಲ್ಪ ಅರಿತುಕೊಂಡಿದ್ದಾಳೆ. ಇನ್ನೂ ಹೆಚ್ಚಿನದು ತಿಳಿಯಬೇಕೆಂಬ ಪಿಪಾಸೆ ಅವಳಲ್ಲಿದೆ. ಕಾಲೇಜಿನ ಮೆಟ್ಟಿಲುಗಳನ್ನು ಹತ್ತಿ ಒಂದು ವರ್ಷ ಕಳೆದಿದೆ. ಸಾವಿತ್ರಿ ಎಷ್ಟೋ ಸಲ ಅವನೊಡನೆ ಸಾಹಿತ್ಯದ ಬಗ್ಗೆ ಬಿಚ್ಚು ಮನಸ್ಸಿನಿಂದ ಚರ್ಚಿಸುತ್ತಿದ್ದಳು. ಶಾಂತ ಸ್ವಭಾವದವನಾದ ಅವನು ರೇಗುವ ಮಟ್ಟಿಗಿನವರೆಗೆ ನಡೆದಿತ್ತು ವಾದ-ವಿವಾದ. ಬುದ್ಧಿವಂತೆ ಹೆಸರು ಏನೇ ಇದ್ದರೂ ಅವಳು ಈ ಯುಗದವಳೆ ಎಂಬ ನಿರ್ಣಯಕ್ಕೆ ಬಂದಿದ್ದ.

ಯೌವ್ವನದಿಂದ ತುಂಬಿದ ಸಾವಿತ್ರಿಯ ಮದುವೆ ಮಾಡುವ ಯೋಚನ ತಂದೆತಾಯಿಯರಿಗೆ, ವರನ ಬೇಟೆ ಆರಂಭವಾಗಿತ್ತು. ಅದು ತನಗೆ ಇಷ್ಟವಿಲ್ಲವೆಂದು ಅವನಿಗೆ ಹೇಳಿದ್ದಳು ಸಾವಿತ್ರಿ. ನನಗೆ ನೀವೆ ಬೇಕು ಎಂಬ ಭಾವ ಅವಳ ಮಾತಿನ ರೀತಿಯಿಂದ ಸ್ಪಷ್ಟವಾಗಿತ್ತು. ಅದು ತನ್ನ ಗಮನಕ್ಕೆ ಬರದಂತೆ ನಟಿಸಿದ್ದ. ಪ್ರೀತಿ ಪ್ರೇಮಗಳೆಂಬುವುದು ಅರ್ಥವಿಲ್ಲದ ಶಬ್ದಗಳೆಂಬುವುದು ಅವನ ನಂಬಿಕೆ. ಸಾಹಿತ್ಯದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬುವುದು ಅವನ ಗುರಿಯಾದದ್ದರಿಂದ ಸಾವಿತ್ರಿಯ ಮದುವೆಯ ಬಗ್ಗೆ ಹೆಚ್ಚು ಯೋಚಿಸಲೇ ಹೋಗಿರಲಿಲ್ಲ.

ಸುರೇಶ್! ಅವನ ಏಕೈಕ ಆಪ್ತಮಿತ್ರ, ಸಾಹಿತಿಗಳ ಸಂಗದಿಂದ ಅವನಿಗೆ ಬಿಡುವು ದೊರೆತಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಸುರೇಶನಿಗೆ ಅವನ ಒಳ್ಳೆಯತನ, ಮುಗ್ಧತೆ ಬಹಳ ಹಿಡಿಸಿದ್ದವು. ಆದರೆ ಸಾಹಿತ್ಯದಲ್ಲಿನ ಅವನ ಮಹತ್ವಾಕಾಂಕ್ಷೆಗಳೆಂದರೆ ಅಷ್ಟೇ ಸಿಟ್ಟು. ಆ ಹುಚ್ಚನ್ನು ಬಿಡುವಂತೆ ಹತ್ತಾರು ಸಲ ಹೇಳಿ ಸೋತಿದ್ದ ಸುರೇಶ್! ಪಕ್ಕದ ಮನೆಯ ಸಾವಿತ್ರಿ ಅವನನ್ನು ಪ್ರೀತಿಸುತ್ತಾಳೆಂಬುವುದು ಅವಳು ಅವನ ಕಡೆ ನೋಡುವ ನೋಟದಿಂದ ಮಾತುಗಳಿಂದ ಗ್ರಹಿಸಿದ್ದ ಸುರೇಶ್. ಹಣ! ಹಣವೇ ಈಗಿನ ದಿನಗಳಲ್ಲಿ ಬಹು ಮುಖ್ಯ. ಅದೊಂದು ಹೇರಳವಾಗಿದ್ದರೆ ಬೇರೆ ಬೇಕಾದವುಗಳೆಲ್ಲಾ ತಾವಾಗೇ ಬರುತ್ತವೆಯೆಂದು, ಸಾವಿತ್ರಿಯೊಡನೆ ಮದುವೆಯಾಗಿ ಸುಖವಾದ ಜೀವನ ನಡೆಸೆಂದು, ಅವರಿಬ್ಬರೂ ಭೇಟಿಯಾದಗಲೆಲ್ಲಾ ಸಲಹ ಕೊಡುತ್ತಿದ್ದ. ಅವನಿಗೆ ಬೇಕಾದವರು ಇಬ್ಬರು, ಸಾವಿತ್ರಿ ಮತ್ತು ಸುರೇಶ್, ಅದೂ ಕೂಡ ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಹೆಸರು ಮಾಡುವ ಹಂಬಲ, ಸಾಹಿತಿ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆ ಅವನನ್ನು ಅವರಿಬ್ಬರಿಂದ ದೂರವಿಟ್ಟಿತ್ತು.

ಕೇಂದ್ರದಲ್ಲಿ ಸರ್ಕಾರ ಬದಲಾಗಿತ್ತು. ಹೊಸ ಮಂತ್ರಿವರ್ಯರೊಬ್ಬರು ಸಾಹಿತಿ ಶ್ರೇಷ್ಠರ ಮನೆಗೆ ಬಂದಾಗ ಅವನಿಗೆ ಆಶ್ಚರ್ಯ! ಯಾವುದೇ ಸರ್ಕಾರವಿರಲಿ, ಮಂತ್ರಿ ಯಾರೇ ಇರಲಿ ಅವರು ಈ ಸಾಹಿತಿವರ್ಯರಿಗೆ ಹೇಗೆ ಆಕರ್ಷಿತರಾಗುತ್ತಾರೆಂಬುವುದೇ ಅವನಿಗೆ ಅರ್ಥವಾಗದ ಸಂಗತಿಯಾಗಿತ್ತು. ವಾರಕ್ಕೆ ಒಂದೆರಡು ಸಲವಾದರೂ ದಿನಪತ್ರಿಕೆಗಳಲ್ಲಿ ಅವರ ಹೆಸರು ಬರುತ್ತದೆ. ರಾಜಕಾರಣಿಗಳನ್ನೇ ಅಲ್ಲ ಪತ್ರಿಕೆಗಳನ್ನು ಒಲಿಸಿಕೊಂಡಿದ್ದರವರು. ಅಂತಹದರಲ್ಲಿ ಅವರು ಹೇಳಿದರೂ ತನ್ನ ಕಥೆಗಳು ಏಕೆ ಪ್ರಕಟವಾಗುತ್ತಿಲ್ಲ! ತಾನು ಬರೆದವಂತು ಈಗ ಪ್ರಕಟವಾಗುತ್ತಿರುವಂತಹ ಕಳಪೆ ಕಥೆಗಳೇನಲ್ಲಾ!

ಕೇಂದ್ರ ಮಂತ್ರಿವರ್ಯರಿಗೆ ಅವನನ್ನು ಪರಿಚಯಿಸಿದಾಗ ಆದರದಿಂದ ವಂದಿಸಿದ್ದ. ಸಾಹಿತಿಶ್ರೇಷ್ಠರು, ಮಂತ್ರಿವರ್ಯರು ಅವನ ಒಂದೊಂದು ಭುಜ ತಟ್ಟಿದಾಗ ಸಂತಸದಿಂದ ಹಿಗ್ಗಿದ್ದ.

ಅಂದು ಮನೆಯಲ್ಲಿನ ಆಳು ಬಂದಿರಲಿಲ್ಲವೆಂದು ಕೆಲ ಬಟ್ಟೆಗಳನ್ನು ಅಗಸನಿಗೆ ಕೊಟ್ಟು ಬರಬೇಕೆಂದು ಅಪ್ಪಣೆ ನೀಡಿದರವರು. ಒಂದು ಮೂಲೆಗೆ ಹೇರಿದ ಬಟ್ಟೆಗಳನ್ನು ಸರಿಯಾಗಿ ಜೋಡಿಸಿಕೊಳ್ಳಲಾರಂಭಿಸಿದ. ಅವುಗಳ ನಡುವೆ ಅವರ ಮಗಳ ರಕ್ತಸಿಕ್ತ ಮುಟ್ಟು ಬಟ್ಟೆಗಳು ಇರುವುದು ನೋಡಿ ಎಲ್ಲಿಲ್ಲದ ಅಸಹ್ಯ ತುಂಬಿಬಂತು. ತಾನು ಮನುಷ್ಯನೇ ಎಂಬ ಯೋಚನೆ ಆರಂಭವಾಯಿತವನಲ್ಲಿ.

ಬಟ್ಟೆಗಳನ್ನು ಅಗಸನಿಗೆ ಕೊಟ್ಟು ದಿಕ್ಕು ತೋಚದವನಂತೆ ನಡೆಯತೊಡಗಿದ. ತಾನು ಮನುಷ್ಯನಲ್ಲ ಹುಳು ಎಂಬ ಭಾವ ಅವನಲ್ಲಿ ಕ್ಷಣ ಕ್ಷಣಕ್ಕೂ ಬೃಹದಾಕಾರ ತಾಳತೊಡಗಿತು. ಅವನ ದೇಹದ ಕಣಕಣವನ್ನು ಅದೇ ಯೋಚನೆ ತುಂಬಿಬಿಟ್ಟಿತು.

ಒಮ್ಮೆಲೇ ತಾನು ಕುಬ್ಬನಾಗುತ್ತಿದ್ದೇನೆ ಎನಿಸಿದಾಗ ದೇಹದ ಮೇಲೆ ಕೈಯಾಡಿಸಿಕೊಂಡ. ಕೈಕಾಲುಗಳು ಚಿಕ್ಕದಾದಂತೆ ಕಂಡಿತು ಮತ್ತು ಅವುಗಳ ಮೇಲೆ ಕೂದಲುಗಳು ಹುಟ್ಟಿಕೊಳ್ಳುತ್ತಿವೆ ಎಂದುಕೊಳ್ಳುವುಷ್ಟರಲ್ಲಿ ಅವನೊಂದು ಹುಳುವಾಗಿಬಿಟ್ಟಿದ್ದ!

ಸುತ್ತು ಜನರ ವಾಹನಗಳ ರಕ್ಕಸದಂತಹ ಸಂಚಾರ. ತನ್ನ ಯಾರು ಎಲ್ಲಿ ತುಳಿದು ಬಿಡುತ್ತಾರೋ ಎನಿಸಿದಾಗ ಕೈಕಾಲುಗಳನ್ನು ಆಡಿಸಿದ. ಕೈಗಳೆರಡು ರೆಕ್ಕೆಗಳಾಗಿ ಮಾರ್ಪಟ್ಟಿದ್ದವು. ಹಾರತೊಡಗಿದ. ವಾಹನಗಳಿಂದ, ಜನರಿಂದ, ಗಿಡಗಳಿಂದ, ಆಕಾಶದೆತ್ತರಕ್ಕೆ ಏರಿದ ಕಟ್ಟಡಗಳಿಗಿಂತ ಮೇಲೆ ಹಾರತೊಡಗಿದಾಗ ತಾನು ಹುಳುವಾದದ್ದು ಮರೆತು ಬಿಡುವಷ್ಟು, ಮೋಜೆನಿಸಿತವನಿಗೆ.

ಜನಸಂದಣಿಯಿಂದ ದೂರ ಹೆಮ್ಮರದ ರೆಂಬೆಯೊಂದರ ಮೇಲೆ ಕುಳಿತು ತನ್ನ ಪುಟ್ಟ ಕಾಲುಗಳನ್ನು ಬೆನ್ನಿನ ಮೇಲೆ ಆಡಿಸಿದ. ತಾನು ಬಹು ಚಿಕ್ಕ ಹುಳುವಾಗಿ ಬಿಟ್ಟಿದ್ದೇನೆ ಎನಿಸಿತು. ಮಾತಾಡಬೇಕೆಂದು ಬಾಯಿ ತೆರೆದಾಗ ವಿಚಿತ್ರ ಶಬ್ದಗಳು ಹೊರಬಿದ್ದವು. ಕಣ್ಣುಗಳನ್ನು ಒಂದೆರಡು ಸಲ ತೆಗೆದು ಮುಚ್ಚಿ ನೋಡಿದ. ಅವು ತನ್ನ ದೇಹಕ್ಕಿಂತ ದೊಡ್ಡವಾಗಿವೆ ಎನಿಸಿತು. ಮನುಷ್ಯರಂತೆ ಯೋಚಿಸಬಲ್ಲ, ಅವರ ಮಾತುಗಳನ್ನು ಕೇಳಿಸಿಕೊಳ್ಳಬಲ್ಲ, ಅರ್ಥ ಮಾಡಿಕೊಳ್ಳಬಲ್ಲ ಆದರೆ ಯಾವುದಕ್ಕೂ ಮನುಷ್ಯರಂತೆ ಪ್ರತಿಕ್ರಿಯಿಸುವ ಹಾಗಿಲ್ಲ. ದೃಢಕಾಯವಾದ ಮನುಷ್ಯ ದೇಹ ಹೋಗಿ ಹುಳುವಿನ ದೇಹ ಬಂದಿದೆಯಷ್ಟೆ! ಹಾರಾಡುವ ಹುಳು!

ಇದಕ್ಕೆ ಯಾವುದಾದರೂ ಮಂತ್ರಜಾಲ ಕಾರಣವಿರಬಹುದೇ ಎಂದು ಯೋಚಿಸಿದ. ಕೂಡಲೇ ಸಾಹಿತಿಶ್ರೇಷ್ಟರ ಮಗಳ ರಕ್ತಸಿಕ್ತ ಮುಟ್ಟಿನ ಬಟ್ಟೆಗಳು ಅವನ ಕಣ್ಣೆದು ನಾಟ್ಯವಾಡಿದವು. ಸಾಹಿತ್ಯದ ಗೀಳಿಲ್ಲದಿದ್ದರೆ ತಾನು ಹುಳು ಆಗುತ್ತಿರಲಿಲ್ಲವೇನೋ ಎಂದುಕೊಳ್ಳುತ್ತಾ ಮನೆಯ ಕಡೆ ಹಾರಿದ.

ವಠಾರದ ಹೊರಗೆಲ್ಲೂ ಸಾವಿತ್ರಿ ಕಾಣಲಿಲ್ಲ. ಮುಚ್ಚಿದ ಅವಳ ಮನೆಯ ಬಾಗಿಲ ಮೂಲಕ ಅಸ್ಪಷ್ಟ ಮಾತುಗಳು ಕೇಳುತ್ತಿದ್ದವು. ಹುಳುವಾದ ಅವನು ಒಳಗೆ ನುಸುಳಿಕೊಳ್ಳಲು ಸಾಕಷ್ಟು ಸ್ಥಳವಿತ್ತು. ತಾನು ಈ ರೂಪದಲ್ಲಿ ಪತ್ತೇದಾರಿಕೆ ಮಾಡಬಹುದು ಎನಿಸಿದಾಗ ಮನಸ್ಸಿಗೆ ಎಂತಹುದೋ ಉತ್ಸಾಹ. ಮೇಲ್ಕಿಂಡಿಯ ಸಂದಿನಿಂದ ಸಾವಿತ್ರಿಯ ಮನೆಯೊಳಗೋದ. ಒಳಗೆ ಸಿಟ್ಟಿನ ದನಿಯ ವಾಗ್ವಾದ ನಡೆದಿತ್ತು. ಅದು ಹೊರಗೆ ಕೇಳಿಸುವಷ್ಟು ಜೋರಾಗಿರಲಿಲ್ಲ. ಮಾನ ಮರ್ಯಾದೆಯ ಪ್ರಶ್ನೆ!

“ನೋಡು! ನನ್ನ ಮಾತು ಕೇಳು ಇಪ್ಪತ್ನಾಲ್ಕು ಗುಣಗಳು ಕಲೆತು ಬಂದಿವೆ. ಹೆಚ್ಚಿನ ವರದಕ್ಷಿಣೆಯು ಇಲ್ಲ! ನಾಲ್ಕು ಸಾವಿರ ಸಂಬಳ ಬೇರೆ” ಒದರಾಡಿ ಒದರಾಡಿ ದಣಿದು ಬುದ್ಧಿವಾದ ಹೇಳುವಂತಹ ದನಿಯಲ್ಲಿ ಹೇಳಿದರು ಸಾವಿತ್ರಿಯ ತಾಯಿ.

ತನ್ನ ಸಂಬಳ ಆರು ಸಾವಿರವೆಂದು ತನಗೆ ತಾನೇ ನನಯಿಸಿಕೊಂಡ ಹುಳುವಾದ ಅವನು.

ಸಿಡಿದೇಳುವಂತಹ ದನಿಯಲ್ಲಿ ಹೇಳಿದಳು ಸಾವಿತ್ರಿ ‘ಎಷ್ಟು ಸಲ ಹೇಳಲಿ! ನಾನು ಮದುವೆಯಾದರೆ ಅವರನ್ನೇ! ನನಗಾಗಿ ಭಿಕ್ಷುಕರಂತೆ ಮನೆಮನೆಗಳನ್ನು ಅಲೆಯುವುದು ಸಾಕು ಮಾಡಿ’

‘ಸಾಹಿತಿ ಆಗಲೇಬೇಕೆಂಬ ಹಟ ಹಿಡಿದ ಆ ಹುಚ್ಚನೊಡನೆ ಮದುವೆಯೇ! ತನ್ನ ಹುಚ್ಚಿಗಾಗಿ ಅವನು ನಿನ್ನ ಮಾರಿದರು ಮಾರಬಹುದು!’

ಆಕೆಯ ಮಾತು ಮುಗಿಯುತ್ತಿದ್ದಂತೆ ರಭಸವಾಗಿ ಅಲ್ಲಿಂದ ಹಾರಿದ.

ತೀವ್ರವಾದ ರೆಕ್ಕೆ ಬಡಿತದೊಡನೆ ಅನಿಸಿತು ‘ಈ ಜೀವನಕ್ಕಿನ್ನು ಅರ್ಥವಿಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು!- ತಾನೀಗ ಬದುಕಿದ್ದೇನೆಯೇ! ಹುಳುವಿಗೆ ಆತ್ಮವಿರುತ್ತದೆಯೇ! ಅದು ಆತ್ಮಹತ್ಯೆ ಮಾಡಿಕೊಳ್ಳುತ್ತದೆಯೇ!’ ಒಳ್ಳೆ ವಿಷಯ ! ಕಥೆ ಬರೆಯಬಹುದು ಎನಿಸಿತು. ಅದರ ಹಿಂದೆಯೆ ರಕ್ತಸಿಕ್ತ ಬಟ್ಟೆಗಳು ದೊಡ್ಡ ಕಣ್ಣುಗಳೆದುರು ನಾಟ್ಯವಾಡಿಹೋದವು. ಸಾವಿತ್ರಿಯ ತಾಯಿಯ ಮಾತುಗಳು ಕಿವಿಯಲ್ಲಿ ಗುನುಗುಟ್ಟಿದವು.

ಹೀಗೆ ನಾಲ್ಕಾರು ದಿನಗಳು ಕಳೆದುಹೋದವು. ತಾನಿನ್ನು ಮತ್ತೆ ಮನುಷ್ಯನಾಗುವುದು ಅಸಂಭವ, ಹೀಗೆ ಕ್ರಿಮಿಯಾಗಿಯೇ ಹಾರಾಡುತ್ತಾ ಸಾಯಬೇಕು. ಆವರೆಗೆ ಅವನು ಪತ್ತೇದಾರಿ ಮಾಡಿ ತಿಳಿದುಕೊಂಡ ವಿಷಯಗಳು ಅವನ ಮನವನ್ನು ಬಹಳವಾಗಿ ಕದಡಿಬಿಟ್ಟಿದ್ದವು. ಬದುಕುವುದರಲ್ಲಿ ಆಸೆಯು ಉಳಿದಿರಲಿಲ್ಲ.

ಎರಡನೆಯ ದಿನವೂ ಅವನ ಮನೆಗೆ ಬೀಗ ಕಂಡ ಸಾವಿತ್ರಿ ಸುರೇಶನ ಬಳಿ ಹೋಗಿ ವಿಷಯ ತಿಳಿಸಿದಳು. ಹುಳುವಾಗಿ ಅವಳ ಸುತ್ತ ಸುತ್ತಾಡುತ್ತಿದ್ದ ಅವನು ಎಲ್ಲವನ್ನೂ ನೋಡುತ್ತಿದ್ದ. ಸಾವಿತ್ರಿಯ ಮುಖದಲ್ಲಿ ತನಗೇನಾಗಿಹೋಗಿದೆಯೋ ಎಂಬಂತಹ ಗಾಬರಿ ಕಂಡು ಮನಸ್ಸಿನಲ್ಲಿ ಒಂದು ತರಹದ ಸಂತಸ. ಇಷ್ಟು ಕಾಲ ತಾನಿವಳನ್ನು ಕಡೆಗಣಿಸಿದನಲ್ಲ ಎಂಬ ಸಂಕಟ, ಅವಳಿಗೆ ಸಮಾಧಾನ ಪಡಿಸಿ ಕಳುಹಿಸಿದ ಸುರೇಶ್, ತನ್ನ ಕೆಲಸ ಬಿಟ್ಟು ಹುಡುಕಾಟ ಆರಂಭಿಸಿದ. ಹೆಚ್ಚು ಕಡಿಮೆ ಅವನು ಅಲೆಯುತ್ತಿದ್ದ ಎಲ್ಲಾ ಸಾಹಿತಿಯರ ಬಳಿ ಹೋಗಿದ್ದ ಸುರೇಶ್, ಅವರು ಅವನನ್ನು ಗುರುತಿಸಲೇ ಕಷ್ಟವಾದಂತೆ ಕಂಡಿತು. ನೆನಪಾದಾಗ ವಿಚಿತ್ರ ಉದ್ಗಾರ. ಶ್ರೇಷ್ಠ ಸಾಹಿತಿವರ್ಯರಂತು ಅವನ್ಯಾರೆಂಬುವುದು ಗುರುತಿಸಲೇ ಇಲ್ಲ. ಸುರೇಶ್‌ ಹತ್ತಾರು ಸಲ ಎಲ್ಲಾ ವಿವರಗಳೊಡನೆ ಹೇಳಿದಾಗ ಆತನನ್ನು ಕಂಡು ಬಹು ಕಾಲವಾಯಿತೆಂದು, ಹೇಗಿದ್ದಾನೆಂದು ಸುರೇಶನನ್ನೇ ಕೇಳಿದರವರು. ಅವರ ನಯವಾದ, ಮೆಲ್ಲನೆಯ, ನಾಗರಿಕ, ನಂಬುವಂತಹ ಮಾತಿನ ರೀತಿ ದಂಗುಪಡಿಸಿತ್ತು ಹುಳುವಾದ ಅವನಿಗೆ. ತನ್ನ ಬಗ್ಗೆ ಅವರು ಹೀಗೆ ವರ್ತಿಸಬಹುದೆಂಬುವುದು ಊಹಿಸುವುದು ಅವನಿಗೆ ಸಾಧ್ಯವಿರಲಿಲ್ಲ. ಮೊದಲಿನಿಂದಲೂ ಅವರ ಮಾತಿನ ರೀತಿಯನ್ನು, ಅತಿ ನಮ್ರ, ನಾಗರಿಕ ವಾಕ್ಚಾತುರ್ಯವನ್ನು ಬಹಳ ಮೆಚ್ಚಿಕೊಂಡಿದ್ದ. ಅದೀಗ ಇಂತಹ ತಿರುವು ಕೂಡ ತೆಗೆದುಕೊಳ್ಳಲು ಸಾಧ್ಯವೆಂಬುವುದು ಅವನಿಗಾಗಲೇ ಗೊತ್ತಾಗಿತ್ತು. ಅದನ್ನು ಕೇಳಿದ ಸುರೇಶನಲ್ಲಿ ಸಿಟ್ಟು ಉಕ್ಕಿಬಂದಿತ್ತು. ಅವರನ್ನು ಒಂದು ಹುಳುವನ್ನು ನೋಡುವಂತೆ ದುರುಗುಟ್ಟಿ, ಅಲ್ಲಿಂದ ಹೊರಬಿದ್ದಿದ್ದ.

ಮಿತ್ರನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹುಳುವಾದ ಅವನು ತನ್ನ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ವಿಚಿತ್ರ ಶಬ್ದಗಳನ್ನು ಹೊರಡಿಸುತ್ತಾ ಸುರೇಶನ ಸುತ್ತು ಹಾರಾಡಿದ್ದ. ಅದು ಸುರೇಶನಲ್ಲಿ ಇನ್ನಷ್ಟು ಕೋಪವನ್ನು ಹುಟ್ಟಿಸಿತ್ತು. ಹುಚ್ಚನಂತೆ ನಾಲ್ಕು ಕಡೆ ರಭಸವಾಗಿ ಕೈಯಾಡಿಸಿದ್ದ. ಮಿತ್ರನ ಕೈಯಲ್ಲಿ ಸಾವಿಗೀಡಾಗುವನೇನೋ ಎಂದು ದೂರಸರಿದಿದ್ದ ಹುಳುವಾದ ಅವನು.

ಅಲ್ಲಿಂದ ಅದೇ ರೋಷಾವೇಷದಿಂದ ಅವನ ಫೋಟೋ ತೆಗೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೋದ ಸುರೇಶ್, ಅಲ್ಲಿ ಅವನ ಮಾತನ್ನು ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ. ಕಂಪ್ಲೆಂಟ್ ಬರೆದುಕೊಡುವಂತೆ ಹೇಳಿದ ಒಬ್ಬ ಸೋಮಾರಿ ಹೆಡ್‌ಕಾನ್ಸ್ ಟೇಬಲ್, ವಿಧಿಯಿಲ್ಲದವನಂತೆ ಅದನ್ನು ಬರೆದು ಅವನ ಫೋಟೋವನ್ನು ಕೂಡಾ ಅದಕ್ಕೆ ಜೊತೆ ಸೇರಿಸಿ ಹೆಡ್‌ಕಾನ್ಸ್‌ಟೆಬಲ್‌ಗೆ ಕೊಟ್ಟು ಆದಷ್ಟು ಬೇಗ ಹುಡುಕುವಂತೆ ಬೇಡಿಕೊಂಡು ವಠಾರಕ್ಕೆ ಹಿಂತಿರುಗಿದ.

ಅವನ ಬರುವಿಗಾಗೆ ಕಾದಂತೆ ವಠಾರದೆದುರಿನ ಕಟ್ಟೆಯ ಮೇಲೆ ಕುಳಿತಿದ್ದಳು ಸಾವಿತ್ರಿ. ಅವಳಿಗೆ ಅರೆನಿಜ ಅರೆ ಸುಳ್ಳನ್ನು ಹೇಳಿ ಸಮಾಧಾನದ ಮಾತುಗಳನ್ನಾಡಿ ಮನೆಗೆ ಹೊರಟುಹೋಗಿದ್ದ ಸುರೇಶ್.

ಗಾಬರಿ, ದುಃಖಗಳ ಭಾವ ತುಂಬಿಬಂದ ಅವಳ ಮುಖ ನೋಡಲಾಗದೆ ತಾನು ಸಮಾಧಾನ ಹೇಳುವಂತೆ ಅವಳ ಸುತ್ತು ಹಾರಾಡಿದ ಅವನು. ವಿಚಿತ್ರ ಶಬ್ದಗಳನ್ನು ಹೊರಡಿಸುತ್ತಾ ತನ್ನ ಸುತ್ತು ತಿರುಗುತ್ತಿರುವ ಹುಳುವು ಅವಳ ಗಮನ ಸೆಳೆಯುವುದರಲ್ಲಿ ಸಫಲವಾಗಿರಲಿಲ್ಲ. ಹತ್ತಾರು ಸಲ ಅವಳ ಪ್ರದಕ್ಷಿಣೆ ಹಾಕಿದ ಹುಳು ಅವಳ ಕಾಲ ಬಳಿ ಬಂದು ಕುಳಿತಿತು. ಮೊಣಕಾಲೂರಿ ಕುಳಿತ ಸಾವಿತ್ರಿಯ ನೋಟ ಅದರ ಮೇಲೆ ಬೀಳುತ್ತಿದ್ದಂತೆ ದೊಡ್ಡ ಕಣ್ಣುಗಳನ್ನು ಇನ್ನೂ ಅಗಲಿಸಿ ಅವಳ ಕಡೆಗೆ ನೋಡಿದ. ಆಗ ಸಾವಿತ್ರಿಯಲ್ಲಿ ಆ ಹುಳುವಿನ ಬಗ್ಗೆ ಆಸಕ್ತಿ ಹುಟ್ಟಿತು. ಹಾಗೆ ಅದನ್ನೇ ನೋಡ ತೊಡಗಿದಳವಳು.

ಅವನ ಮನ ಒಮ್ಮೆಲೇ ಪುಳುಕಿತಗೊಂಡಿತು. ಅವಳಿಗೆ ತನ್ನ ಇರುವಿನ ಪರಿಚಯ ಮಾಡಿಕೊಡಬೇಕೆಂಬ ಆಸೆ ಹುಟ್ಟಿತು. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನಾಲ್ಕಾರು ಸಲ ಕಣ್ಣುಗಳನ್ನು ಮುಚ್ಚಿ ತೆಗೆದು ಮಾಡಿದ. ಅವಳಲ್ಲಿ ಆಸಕ್ತಿ ಹೆಚ್ಚಾದಂತೆ ಕಂಡಿತು. ನಾನು ನಿನ್ನವನೇ ಈಗ ಹುಳುವಾಗಿದ್ದೇನೆ ಎಂದು ಹೇಳಿಕೊಳ್ಳುವ ಆಸೆ ಅವನಲ್ಲಿ ಉತ್ಕಟವಾಯಿತು. ಹಾರಿ ಅವಳ ಕಾಲ ಮೇಲೆ ಕುಳಿತಾಗ ಅವಳು ಭಯದಿಂದ ಸೀರೆ ಜಾಡಿಸಿಕೊಳ್ಳುತ್ತಾ ಒಳಗೋಡಿದ್ದಳು. ತಾನು ಹುಳುವಾಗಿ ರೂಪಾಂತರಗೊಂಡಿದ್ದೇನೆಂಬುವುದು ಅವಳಿಗೆ ಮನವರಿಕೆ ಮಾಡಿಕೊಡಬಹುದು ಎಂದುಕೊಳ್ಳುತ್ತಾ ಬೇರೆ ಪತ್ತೇದಾರಿ ಕೆಲಸಕ್ಕಾಗಿ ಅಲ್ಲಿಂದ ಹಾರಿದ.

ಹುಳುವಾಗಿ ತಾನು ಓಡಾಡುತ್ತಿದ್ದ ಸಾಹಿತಿ ಬಳಗದಲ್ಲಿ ಅವರುಗಳ ಮಾತುಗಳನ್ನು ಕೇಳುತ್ತಾ ಬಹಳ ಸಮಯವನ್ನು ಕಳೆದಿದ್ದ. ಕೆಲವರು ಅವನು ಒಳ್ಳೆಯ ಕಥೆಗಾರನೆಂದು ಒಪ್ಪಿಕೊಂಡಿದ್ದರು. ಹಲವರು ಅರ್ಥಸಂಬಂಧವಿಲ್ಲದ ಕಥೆಗಳನ್ನು ಬರೆಯುತ್ತಾನೆ, ಅವು ಕಥೆಗಳ ಅಲ್ಲ ಎಂದು ತಳ್ಳಿಹಾಕಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ ಅವರು ಮಾತಾಡುವ ವಿಷಯಗಳಲ್ಲಿ ಪ್ರಮುಖವಾದದ್ದು, ಮುಖ್ಯವಾದದ್ದು ಶ್ರೇಷ್ಠಸಾಹಿತಿಯರ ಸುತ್ತು ಹರಡಿದ್ದ ವದಂತಿಗಳು.

ಕಥೆಗಾರ್ತಿಯರಾಗಬೇಕು ಎಂದು ತನ್ನಂತೆಯೇ ಹಂಬಲಿಸುವ ಕೆಲ ಯುವತಿಯರು ಅವರ ಬಳಿ ಓಡಾಡುತ್ತಿದ್ದರು. ಅದನ್ನು ಅವನ್ನೂ ಗಮಿನಿಸಿದ್ದ. ಆದರೆ ಅವರಲ್ಲಿ ಒಬ್ಬಿಬ್ಬರೊಡನೆ ಅವರಿಗೆ ಲೈಂಗಿಕ ಸಂಬಂಧವಿದೆ ಎಂಬುವುದು ಅವನಲ್ಲಿ ಆಶ್ಚರ್ಯ ಹುಟ್ಟಿಸಿತು. ಇವರೆಲ್ಲ ಬಾಯಿ ಚಪಲ ತೀರಿಸಿಕೊಳ್ಳಲು ಹೀಗೆ ಮಾತಾಡುತ್ತಿದ್ದಾರೆ, ತಾನೇ ಅದನ್ನು ಖಚಿತ ಪಡಿಸಿಕೊಳ್ಳಬಹುದು ಎಂದುಕೊಂಡ. ತನ್ನ ಕತೆಗಳನ್ನು ಮೆಚ್ಚಿದ್ದವರು ಇದ್ದಾರೆ ಎಂಬ ಮಾಹಿತಿ ಅವನಲ್ಲಿ ಒಂದು ತರಹದ ಸಂತಸ ತಂದಿತು.

ಗಾಡಾಂಧಕಾರದಲ್ಲೂ ಹುಳುವಾದ ಅವನಿಗೆ ಎಲ್ಲವೂ ಬೆಳಗಿನಷ್ಟೆ ಸ್ಪಷ್ಟವಾಗಿ ಕಾಣುತ್ತಿತ್ತು. ಮನುಷ್ಯರಲ್ಲಿ ಕೆಲವರಿಗೆ ಮಾತ್ರ ಇಂತಹ ಗುಣವಿರುತ್ತಿದ್ದರೆ ಏನಾಗುತ್ತಿತ್ತೋ ಎಂಬ ಯೋಚನೆಯೊಡನೆಯೇ ಇದು ಕೂಡ ಕಥೆಗೆ ಒಳ್ಳೆಯ ವಸ್ತುವೆನಿಸಿತು! ಹುಳುವಾಗಿ ಗೊತ್ತುಗುರಿಯಿಲ್ಲದಂತೆ ಹಾರಾಡುತ್ತಿದ್ದರು ಸಾಹಿತ್ಯ ತನ್ನ ಹಿಂಬಾಲಿಸುವುದು ಬಿಡುತ್ತಿಲ್ಲವಲ್ಲ ಎಂದುಕೊಂಡ.

ಕಿಟಕಿಯ ಸಂದಿನಿಂದ ದೂರಿಬರುತ್ತಲೇ ದಿಗ್ಭ್ರಾಂತಿಯಿಂದ ಇನ್ನೂ ಅಗಲವಾದವು ಹುಳುವಾದ ಅವನ ಕಣ್ಣುಗಳು, ಎರಡು ಬತ್ತಲು ದೇಹಗಳು. ಒಂದು ಯೌವ್ವನದ ಮದದಿಂದ ತುಂಬಿ ತುಳುಕುತ್ತಿರುವ ಹೆಣ್ಣು ದೇಹ, ಮತ್ತೊಂದು ಮಾಗಿದ ಗಂಡು ದೇಹ. ಅವಳನ್ನು ತೃಪ್ತಿಪಡಿಸುವುದೇ ತಮ್ಮ ಗುರಿಯೆಂಬಂತೆ ವಿಚಿತ್ರ ವಿಕೃತಗಳಲ್ಲಿ ತೊಡಗಿತ್ತು ಗಂಡು ದೇಹ.

ಹಾರಾಟದ ಭರದಲ್ಲಿ ಮಂಚದಿಂದ ದೂರವಿರುವ ಟೇಬಲಿನಮೇಲೆ ಬಂದು ಕುಳಿತಿದ್ದ ಹುಳುವಾದ ಅವನು. ಹೇಸಿಗೆ ಹುಟ್ಟಿಸುವ ದೃಶ್ಯ ನೋಡಲಾಗದ ನೋಟ ಕೆಳಗೆ ಬಾಗಿಸಿದ. ‘ಹೇಸಿಗೆ ಮತ್ತು ನಾವು’ ಎಂಬ ಹಸ್ತಪ್ರತಿ ಕಣ್ಣಿಗೆ ಬಿತ್ತು. ಅದು ಅವನು ಬರೆದದ್ದೇ. ಯಾವಾಗಲೋ ಅವರಿಗೆ ಓದಲು ಕೊಟ್ಟಿದ್ದ. ಅದರ ಬಗ್ಗೆ ಮರೆತು ಕೂಡ ಹೋಗಿದ್ದ. ಹಾಗೆ ಅವನು ಎಷ್ಟು ಕಥೆಗಳನ್ನು ಬರೆದಿದ್ದನೆಂಬುವುದು ಅವನಿಗೆ ನೆನಪಿರಲಿಲ್ಲ. ಈಗದು ಟೇಬಲಿನ ಮೇಲೆ ಏಕೆ ಬಂತೆಂಬುವುದೇ ಆಶ್ಚರ್ಯ.

ಮುದಿ ಕಾಮದ ಉದ್ರಿಕ್ತತೆ ಇಳಿದಿತ್ತು. ತುಂಬು ಸ್ತನಗಳ ಮೇಲೆ ಕೈ ಸವರುತ್ತಾ ತನ್ನ ಕಥೆಯಲ್ಲೇ ಅಲ್ಪ ಸ್ವಲ್ಪ ಮಾರ್ಪಾಟುಗಳನ್ನು ಮಾಡಿ ಅವಳ ಹೆಸರಿನಲ್ಲಿ ಮಾಸಿಕ ಒಂದಕ್ಕೆ ಕಳುಹಿಸಬೇಕೆಂದು ಅದು ಖಂಡಿತ ಪ್ರಕಟವಾಗುವುದೆಂದು ಹೇಳುತ್ತಿದ್ದರವರು. ಅವನಲ್ಲಿ ಹೇಸಿಗೆ ಭಾವ ತುಂಬಿಬಂತು. ಟೇಬಲಿನ ಮೇಲಿನಿಂದಲೇ ಜಿಗಿದು ಆ ದೊಡ್ಡ ಮನೆಯಿಂದ ಹೊರಗೆ ಹಾರಿದ.

ಮನದಲ್ಲಿನ ಹೊಯ್ದಾಟವನ್ನು ದೂರಮಾಡಲೆಂಬಂತೆ ರೆಕ್ಕೆಗಳನ್ನು ಜೋರಾಗಿ ಆಡಿಸುತ್ತಿದ್ದ. ಅವನಲ್ಲಿ ಹೆಸರು ಮಾಡುವ ಆಸೆ ದೂರವಾಗಿಬಿಟ್ಟಿತ್ತು. ಸಂದಿನ ಮೂಲಕ ತನ್ನ ಮನೆ ಪ್ರವೇಶಿಸಿದಾಗ ಅದು ಶುಭ್ರವಾಗಿರುವುದು ಕಂಡು ಆಶ್ಚರ್ಯವಾಗಲಿಲ್ಲ. ಸಾವಿತ್ರಿ ತನ್ನ ಬಳಿ ಇದ್ದ ಬೀಗದ ಕೈಯಿಂದ ಬೀಗ ತೆಗೆದು ದಿನಾಗಲೂ ಮನೆಯನ್ನು ಶುಚಿ ಗೊಳಿಸುತ್ತಿದ್ದದ್ದೂ ಅವನಿಗೆ ಗೊತ್ತಿತ್ತು.

ತಲೆ ಸಿಡಿದುಹೋಗುವಂತಹ ಭಾಸ, ಗೊಂದಲಮಯ ವಿಚಾರಗಳು. ಅವುಗಳಿಂದ ಮುಕ್ತಿ ದೊರೆಯಲು ಏನಾದರೂ ಮಾಡಬೇಕು. ಎದುರಿಗೆ ಫೋರ್ಟೆಬಲ್ ಟಿವಿ, ಅದರಲ್ಲಿನ ಯಾವುದಾದರೂ ಕಾರ್ಯಕ್ರಮವನ್ನು ನೋಡಿದರೆ ಮನಸ್ಸಿಗೆ ನೆಮ್ಮದಿ ಸಿಗಬಹುದೇನೋ ಎನಿಸಿತು. ಹುಳುವಾದ ತಾನು ಟಿವಿಯನ್ನು ಆನ್ ಮಾಡಲು ಸಾಧ್ಯವೇ ಎಂಬ ವಿಚಾರ ಬಂದಕೂಡಲೇ ಹಾರಿ ಬಟನಿನ ಕೆಳಗೆ ಬಂದು ಕುಳಿತ, ಸಣಕಲಾದ ಎರಡು ಕಾಲುಗಳು, ಅವೇ ಕೈಗಳು ಕೂಡ. ಶಕ್ತಿ ಪರೀಕ್ಷಿಸಿ ನೋಡೇಬಿಡುವ ಎಂಬ ಯೋಚನೆ ಬಂದ ಕೂಡಲೇ ಒಂದು ಕಾಲಿನ ಮೇಲೆ ನಿಂತು ಇನ್ನೊಂದರಿಂದ ತನ್ನ ಪೂರ್ತಿ ಶಕ್ತಿ ಹಾಕಿ ಬಟನ್ ಅದುಮುವುದರಲ್ಲಿ ತೊಡಗಿದ. ಆಶ್ಚರ್ಯ! ಹೆಚ್ಚು ಶಕ್ತಿಯ ಅವಶ್ಯಕತೆ ಬೀಳಲಿಲ್ಲ. ಒಂದು ಚಿಕ್ಕ ಹುಳುವಿಗೆ ಇಷ್ಟು ಶಕ್ತಿಯೇ ಎಂಬ ಯೋಚನೆಯೊಡನೆ ಯಾವುದೋ ಧಾರಾವಾಹಿಯ ದೃಶ್ಯ ತೆರೆಯ ಮೇಲೆ ಪ್ರಕಟವಾಯಿತು. ಯುವತಿಯೊಬ್ಬಳು ಗಂಭೀರ ಆದೇಶದ ದನಿಯಲ್ಲಿ ಹೇಳಿದಳು

“ನಿನಗೆ ನಾಚಿಕೆ, ಮಾನ ಮರ್ಯಾದೆ, ಅಭಿಮಾನ, ರೋಷವಿದ್ದರೆ ತೊಲಗಿಲ್ಲಿಂದ! ಮತ್ತೆ ಮನುಷ್ಯನಾಗಲು ಸಾಧ್ಯವಿದ್ದರೆ ಆಗಿ ಬಾ! ತೊಲಗು ತೊಲಗಿಲ್ಲಿಂದ!”

ವಾಲ್ಯೂಮ್ ದೊಡ್ಡದಾಗಿದ್ದುದ್ದರಿಂದ ಆ ಡೈಲಾಗ್ ಜೋರಾಗಿಯೇ ಕೇಳಿಬಂತು ಅದರೊಡನೆಯ ಹೊರಗೆ ಗುಸುಗುಸು ಮಾತುಗಳು, ಬೀಗ ಹಾಕಿದ ಮನೆಯೊಳಗಿಂದ ಮಾತುಗಳು ಕೇಳಿಸುತ್ತಿವೆಯೇ! ಭೂತವೇನಾದರೂ ಇರಬಹುದೇ ಎಂಬಂತಹ ಸಂದೇಹ. ಹುಳುವಾದ ಅವನು ಲಗುಬಗೆಯಿಂದ ಟಿವಿ ಆಫ್ ಮಾಡಿ ಮನೆಯಿಂದ ಹೊರಹಾರಿದ.

ಇದ್ದಕ್ಕಿದ್ದಂತೆ ಬಿರುಗಾಳಿ ಸುರುವಾಯಿತು. ನೋಡನೋಡುತ್ತಿದ್ದಂತೆ ಆ ಬಿರುಗಾಳಿ ಚಂಡಮಾರುತದ ರೂಪ ತಾಳಿತು. ಕರೆಂಟ್ ಹೋಗಿ ಎಲ್ಲಾ ಕಡೆ ಗಾಡಾಂಧಾಕರ, ಹುಳುವಾದ ಅವನು ಬಿರುಗಾಳಿಯೊಂದಿಗೆ ಹೊಡೆದುಕೊಂಡು ಹೋಗ ತೊಡಗಿದ. ತನ್ನ ಕಥೆಯಿನ್ನು ಮುಗಿಯಿತು! ಯಾವುದಾದರೂ ಗಿಡಕ್ಕೋ, ಬಹು ದೊಡ್ಡ ಮಹಡಿಯ ಕಟ್ಟಡಕ್ಕೋ, ಬಂಡೆಗೋ ಅಪ್ಪಳಿಸಿದರಾಯಿತು! ಹುಳು ಹೀಗೆ ಹುಟ್ಟಿ ಹೀಗೆ ಸಾಯುತ್ತದೆ! ಆದರೆ ತನ್ನ ಗತಿ ಹೀಗಾಗಬಾರದಿತ್ತು! ಸಾಯುವ ಅನಿಸಿಕೆಯೊಡನೆ ಮನುಷ್ಯನಾಗಿ ಬದುಕಬೇಕೆಂಬ ಪ್ರಬಲ ಹಂಬಲ ಹುಳುವಾದ ಅವನಲ್ಲಿ ಹುಟ್ಟಿಕೊಂಡಿತು.

ಚಂಡಮಾರುತದೊಡನೆ ಧಾರಾಕಾರವಾದ ಮಳೆ, ಅವನು ಗಾಳಿಯೊಡನೆ ಎಷ್ಟು ದೂರ ಹಾರಿಬಂದನೆಂಬ ಅರಿವು ಅವನಿಗೆ ಇಲ್ಲ. ಒಮ್ಮೆಲೇ ಗಿಡದ ಎಲೆಯೊಂದಕ್ಕೆ ಅಪ್ಪಳಿಸಿದಾಗ

ಒಂದು ಪತ್ತೇದಾರಿ ಕಥೆ ಅದೇ ತನ್ನನ್ನು ಕಾಪಾಡುವುದು ಎಂಬಂತೆ ಅದಕ್ಕೆ ಕಚ್ಚಿಕೊಂಡ. ಗಿಡದ ಟೊಂಗೆ, ಎಲೆ ಗಾಳಿಯ ರಭಸಕ್ಕೆ ತೂಗುತ್ತಿದ್ದಂತೆ ಎಲೆಯ ಅಂಟಿಕೊಂಡ ಅವನು ತೂಗುತ್ತಿದ್ದ.

ಕೆಳಗೆ ಚರಂಡಿಯ ನೀರು ತುಂಬಿ ರಭಸವಾಗಿ ಹರಿದುಹೋಗುತ್ತಿತ್ತು. ಮಳೆ ಹೆಚ್ಚಾದ ಹಾಗೆ ಮೋರಿ ತುಂಬಿ ಹೊಲಸಿನೊಡನೆ ನೀರು ದಳದ ಆಚೆ ಇಚೆಯಿಂದ ಕೂಡ ಹರಿಯಲಾರಂಭಿಸಿತು.

ಪ್ರಕೃತಿಯ ಅಂತಹ ಭೀಕರತೆಗೂ ತೃಣಮಾತ್ರವು ಭಯಪಡದಂತ ಟೊಂಗೆಗೆ ಅಂಟಿಕೊಂಡಿದ್ದ. ಎಲೆ ಅವನಲ್ಲಿ ಆಶ್ಚರ್ಯ ಹುಟ್ಟಿಸಿತು. ಒಂದು ಎಲೆಗೆ ಇಷ್ಟು ಶಕ್ತಿ ಇರುವಾಗ ಮನುಷ್ಯನಿಗೆ ಎಷ್ಟು ಬಲವಿರಬೇಕು! ಆದರೆ ಮನುಷ್ಯ ಈ ಎಲೆಯಂತಲ್ಲ. ನಪುಂಸಕನಂತೆ ಬದುಕುತ್ತಿದ್ದಾನೆ ಎಂದುಕೊಂಡ. ಹುಳುವಾದ ಅವನು ತಾನು ಎಲ್ಲರಂತಾಗಬಾರದು ಎಂದುಕೊಂಡ.

ಚಂಡಮಾರುತ, ಭೋರ್ಗರೆಯುವ ಮಳೆ ನಿಧಾನವಾಗಿ ಕಡಿಮೆಯಾಗುತ್ತಾ ಬಂತು. ಎಲೆಯ ತೂಗಾಟ ಕಡಿಮೆಯಾಗುತ್ತಿದ್ದಂತೆ ಕೆಳೆಗೇನೋ ಕಂಡಂತಾಗಿ ಕಣ್ಣುಗಳನ್ನು ಅಗಲಿಸಿದ. ಅವನಲ್ಲಿ ಹೇಳಲಾಗದಂತಹ ವಿಚಿತ್ರ ಸಂತಸ ಹುಟ್ಟಿತು. ಎಲೆಯ ಮೇಲಿಂದ ಹಾರಿ ಕೆಳಗೆ ಬಂದ. ತಾನು ನೋಡುತ್ತಿರುವುದು ನಿಜವೆಂಬುವುದು ಖಚಿತಪಡಿಸಿಕೊಳ್ಳಲೆಂಬಂತೆ ಇನ್ನು ಕಣ್ಣಗಲಿಸಿದ.

ಸಾಹಿತ್ಯಕ ಎಲ್ಲಾ ಪುರಸ್ಕಾರಗಳು, ಪ್ರಶಸ್ತಿ ಪತ್ರಗಳು, ಅದಕ್ಕೆ ಸಂಬಂಧಿಸಿದ ವಿಗ್ರಹಗಳು ಕೊಳಚೆ ನೀರಿನಲ್ಲಿ ತೂಗಾಡುತ್ತಿದ್ದವು. ಅವುಗಳನ್ನೇ ದುರುಗುಟ್ಟಿ ನೋಡತೊಡಗಿದ. ನಿಧಾನವಾಗಿ ಅವನ ದೇಹದಲ್ಲಿ ಮಾರ್ಪಾಟು ಆಗಲಾರಂಭಿಸಿತು. ಜ್ಞಾನೋದಯವಾದಂತೆ ಅವನು ಮತ್ತೆ ಮನುಷ್ಯ ರೂಪ ತಾಳಿದ.

ಈ ಅದ್ಭುತ ನಿಜವೆಂಬುದು ಖಚಿತಪಡಿಸಿಕೊಳ್ಳಲೆಂಬಂತೆ ತನ್ನ ದೇಹದ ಮೇಲೆಲ್ಲಾ ಕೈಯಾಡಿಸಿಕೊಂಡ. ಅವನ ಸಂತಸಕ್ಕೆ ಪಾರವೇ ಇರಲಿಲ್ಲ. ಮತ್ತೊಮ್ಮೆ ಮೋರಿಯ ನೀರಿನಲ್ಲಿ ತೇಲಾಡುತ್ತಿದ್ದ ಪ್ರಶಸ್ತಿ ಪತ್ರಗಳು, ಬಿರುದುಗಳು ಅದಕ್ಕೆ ಸಂಬಂಧಿಸಿದ ವಿಗ್ರಹಗಳನ್ನು ನೋಡಿ ಮನೆಯ ಕಡೆ ಹೋಗಲು ಹಿಂತಿರುಗಿದ.

ಸ್ವಲ್ಪ ದೂರದಲ್ಲಿ ಶ್ರೇಷ್ಠ ಸಾಹಿತಿವರ್ಯರು ಬತ್ತಲೆ ನಿಂತಿದ್ದರು. ಮೈಯ್ಯ ಮೇಲಿನ ಎಲ್ಲಾ ಬಟ್ಟೆಗಳನ್ನು ಕಿತ್ತೆಸೆದು ಬತ್ತಲು ಮಾಡುವಂತಹ ಚಂಡಮಾರುತವೇ ಎಂದುಕೊಳ್ಳುತ್ತಾ ಅವರ ಕಡೆ ಮತ್ತೊಮ್ಮೆ ನೋಟ ಹಾಯಿಸಿದ. ಬತ್ತಲೆ ನಿಂತ ಅವರ ನೋಟ ಶೂನ್ಯದಲ್ಲಿ ನಟ್ಟಂತೆ ಕಂಡುಬಂತು. ಅವರನ್ನು ಮರೆತು ವೇಗವಾಗಿ ಮನೆಯ ಕಡೆ ಹೆಜ್ಜೆ ಹಾಕಿದ.

ಮಳೆ, ಚಂಡಮಾರುತ ಪೂರ್ತಿ ನಿಂತುಬಿಟ್ಟಿತು. ವಠಾರದವರು ಅದರ ಬಗ್ಗೆಯೇ ಮಾತಾಡಿಕೊಳ್ಳುತ್ತಿದ್ದರು. ಅವನನ್ನು ನೋಡುತ್ತಲೇ ಓಡಿಬಂದು ಅಪ್ಪಿದ ಸಾವಿತ್ರಿ ಗದ್ಗದ ಕಂಠದಲ್ಲಿ ಹೇಳಿದಳು

“ಎಲ್ಲಿ ಹೋರಟುಹೋಗಿದ್ದೀರಿ… ಇಷ್ಟುದಿನ..!”

“ನಿನ್ನ ಮದುವೆಯಾಗಲೇ ನಾನು ಮರಳಿದ್ದು”

ಭಾವೋದ್ವೇಗವಿಲ್ಲದ ದನಿಯಲ್ಲಿ ಅವನು ಹೇಳಿದ.

ವಠಾರದವರ ನಡುವೆ ಕುಳಿತು ಮಾತಾಡುವಾಗ ಅವನ ಮನೆಯಲ್ಲಿಂದ ಸದ್ದುಗಳನ್ನು ಕೇಳಿಬಂದದ್ದನ್ನು ಹೇಳಿದರವರು. ತಾನೊಂದು ವಿಚಿತ್ರ ಹುಳುವನ್ನು ಕಂಡದ್ದರ ಬಗ್ಗೆ ವಿವರಿಸಿದಳು ಸಾವಿತ್ರಿ. ಆ ಮಾತುಗಳು ಅವನ ಮೇಲೆ ಯಾವ ಪರಿಣಾಮವನ್ನು ಬೀರಲಿಲ್ಲ. ಮತ್ತೆ ಅದೇ ನಿರ್ಭಾವ ದನಿಯಲ್ಲಿ ಹೇಳಿದ

“ಮಿಕ್ಕ ಜೀವನ ಗಂಡಸಿನಂತೆ ಕಳೆಯಲು ಬಂದಿದ್ದೇನೆ, ನನಗೆ ನೀನು ಬೇಕು”

ಮಾತು ಮುಗಿಸಿದ ಅವನು ಎಲ್ಲರೆದುರು ಅವಳನ್ನು ತನ್ನ ಹತ್ತಿರ ಎಳೆದುಕೊಂಡ. ಒಮ್ಮೆಲೆ ಇವನು ಬಹಳ ಬದಲಾಗಿಬಿಟ್ಟಿದ್ದಾನೆ ಎಂದುಕೊಂಡರು ಅವಳ ತಂದೆ ತಾಯಿ. ಮರುದಿನ ಒಬ್ಬ ಸಾಹಿತಿ ಮಹಾಶಯರು ಅವನ ಮನೆಗೆ ಬಂದಾಗ ಬಾಗಿಲಲ್ಲೇ ಅವರನ್ನು ಮಾತಾಡಿಸಿದ ಅವನು.

“ನೀನು ಊರಿಗೆ ಬಂದದ್ದು ತಿಳಿದು ಬಂದೆ”

ಅದಕ್ಕೆ ಅವನೇನು ಉತ್ತರಿಸದೆ ಅವರ ಮುಖವನ್ನು ನೋಡುತ್ತಿದ್ದ. ಅವನಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸದ ಅವರು ತಮ್ಮನ್ನು ತಾವು ಸಂಭಾಳಿಸಿಕೊಂಡು ಕೇಳಿದರು

“ಈ ನಡುವೆ ಯಾವ ಕಥೆಯನ್ನು ಬರೆದಿಲ್ಲವೇ?”

ಈಸಲ ಅವನಿಂದ ಕೂಡಲೇ ನಿಖರವಾದ ಉತ್ತರ ಬಂತು

“ಬಹಳ ಕಥೆಗಳಿವೆ. ಕೊಡುತ್ತೇನೆ! ಅವನ್ನು ನಿಮ್ಮ ಹೆಸರಿನಲ್ಲೇ ಪ್ರಕಟಿಸಿಕೊಳ್ಳಬಹುದು. ಒಂದು ಕಥೆಗೆ ಎಷ್ಟು ಕೊಡುತ್ತೀರಿ?”

ಅಪನಂಬಿಕೆಯಿಂದ ಅವನನ್ನೇ ನೋಡುತ್ತಾ ನಿಂತುಬಿಟ್ಟರು ಸಾಹಿತಿ ಮಹಾಶಯರು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...