ಭ್ರಮೆಯೆಂಬ ಸತ್ಯ

ಭ್ರಮೆಯೆಂಬ ಸತ್ಯ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನೆಯ ನಿಟ್ಟುಸಿರು. ಅರಳಿ ನಿಂತ ನೆಚ್ಚಿನ ಹಳದಿ ಹೂವಿನೊಳಗಿರಬಹುದಾದ ಜೇನಹನಿ ಅವನಿಗಿಂದು ನಂಜು. ಅವನ ಜೀವಸೆಲೆಯಾದ ನಾಲ್ಕು ವರ್ಷದ ನಿರ್ಮಲೆ ಈ ರಾತ್ರಿ ಆ ದೊಡ್ಡ ಆಸ್ಪತ್ರೆಯ ಬಿಳಿ ಹಾಸಿಗೆಯ ಮೇಲೆ ಸಮವಸ್ತ್ರ ಹೊದ್ದು ‘ಕೈ’ಚೆಲ್ಲಿ ಮಲಗಿದ್ದಾಳೆ. ಹಿಂದೆ ಎಷ್ಟೋ ಪುಟ್ಟ ದೇಹಗಳು ಅದೇ ಸಮವಸ್ತ್ರದಲ್ಲಿ ಮಲಗಿ ಎದ್ದು ಹೋಗಿರುವ ಕಡೆಯೇ. ಆಕೆ ಮಲಗಿರುವ ಹಾಸಿಗೆಯ ಮೇಲೆ ಒರಗಿ ಎದ್ದು ಹೋದ ಮಕ್ಕಳಲ್ಲಿ ಉಳಿದು ಸಡಗರವಾದವೆಷ್ಟೊ? ಅಳಿದು ಕೊನೆಯಿಲ್ಲದ ನೋವಾಗಿ ಹೋದವೆಷ್ಟೊ? ಪಕ್ಕದಲ್ಲಿ ಕುಳಿತ ಸುಧಾಕರನಲ್ಲಿ ಆತಂಕದ ಜಿಜ್ಞಾಸೆ.

ನಿರ್ಮಲೆಯ ಲವಲವಿಕೆಯ ಚೈತನ್ಯದ ಅಧೀನತೆಯನ್ನು ರುಜುವಾತು ಮಾಡುತ್ತಿರುವ ಆ ಚಿಕ್ಕ ದೇಹದ ಮೇಲೆ ಆವರಿಸಿರುವ ಬಿಳಿಯ ಹೊದಿಕೆ, ಹೊರಗೆ ಇಣುಕಿರುವ ಪುಟ್ಟ ಬಲಗೈಯ ಅಡಿಯಲ್ಲಿನ ನರವೊಂದಕ್ಕೆ ಹೆಟ್ಟಿರುವ ಸೂಜಿ, ಸೂಜಿಗೆ ಆಯವಾಗಿ ಕಟ್ಟಿರುವ ಹಲಗೆ, ಅದನ್ನು ಬಂಧಿಸಿರುವ ಬ್ಯಾಂಡೇಜು, ಬಳಿಯಲ್ಲಿ ನಿಂತ ಲೋಹದ ಸ್ಟ್ಯಾಂಡಿನ ಮೇಲೆ ತೂಗುಹಾಕಿರುವ ಸೀಸೆಯೊಳಗೆ ಹಾದಿರುವ ತೆಳ್ಳನೆಯ ನಳಿಕೆ, ಅದರ ಮೂಲಕವೇ ಕೆಳಗಿಳಿಯುತ್ತಿರುವ ಔಷಧದ ಝರಿ, ನಿರ್ಮಲೆಯ ದೇಹದೊಳಕ್ಕೆ ಹೆಟ್ಟಿರುವ ಸೂಜಿಯ ಇನ್ನೊಂದು ತುದಿಯ ಮುಖಾಂತರ ಆ ಔಷಧಿಯನ್ನು ಹರಿಯಗೊಟ್ಟು ಎದ್ದುಹೋಗಿರುವ ಆಸ್ಪತ್ರೆಯ ವೈದ್ಯರು – ಎಲ್ಲರ, ಎಲ್ಲದರ ಬಗ್ಗೆ ಸುಧಾಕರನಲ್ಲೊಂದು ತೀರದ ಆಕ್ರೋಶ. ಸೊರಗಿರುವ ಆ ಪುಟ್ಟ ಸುನೀತ ಕೈ ಬೆರಳುಗಳು, ನೀಲಿಗಟ್ಟಿದ ತುಟಿಗಳು, ಅವಳ ಕ್ಷೀಣ, ಸುಂದರ ಮುಖ, ನೋಡು ನೋಡುತ್ತಲೇ ಸುಧಾಕರನ ಕಣ್ಣಲ್ಲಿ ಪದೇ ಪದೇ ಕಂಡೂ ಕಾಣದ ಕಂಬನಿ.

ಆ ಪುಟ್ಟ ಕೈಗಳಿಂದಲೇ ಅಲ್ಲವೇ ತಾನು ಅವಳಿಗೆ ಮೋಡ ಪಲ್ಲಕ್ಕಿಗಳನ್ನು, ಚುಕ್ಕೆ ಚಂದಿರನನ್ನು ಸೋಕಿಸಿ ಸಂಭ್ರಮಿಸುತ್ತಿದ್ದು, ತಂಬೆಳಗಿನ ಕ್ಷಣಗಳಲ್ಲಿ ಹಸಿರ ಮೇಲಿನ ಹೊಳೆವ ಇಬ್ಬನಿಯ ತಣಿವನ್ನು ಸ್ಪರ್ಶಿಸಿ ಮುದಗೊಳ್ಳುತ್ತಿದ್ದು, ಗಿಡದಲ್ಲಿ ಮೂಡಿದ ಹಳದಿ ಹೂವಿನ ಪಕಳೆಗಳನ್ನೊಡೆದ ಮರುಕ್ಷಣ ಉರುಟುವ ಜೇನಹನಿಯನ್ನು ಅವಳ ಬೆರಳುಗಳಿಂದ ನೆಕ್ಕಿ ಚಪ್ಪರಿಸಲು ಅನುವು ಮಾಡಿಕೊಟ್ಟು ನಿರುಮ್ಮಳನಾಗುತ್ತಿದ್ದು, ಹನಿಮಳೆಯ ತೊಟ್ಟನ್ನು ಬೊಗಸೆಯಲ್ಲಿ ಸೆಳೆದು ಅದರ ಸವಿಯನ್ನು ಒಲೆದಾಡುತ್ತಿದ್ದು, ಇಳಿಸಂಜೆಯ ಅಡ್ಡಾಟದ ನೆಪದಲ್ಲಿ ತನ್ನ ತೋರು ಬೆರಳ ಸುತ್ತ ಅವಳ ಬೆರಳುಗಳ ಮುಷ್ಟಿಯನ್ನು ಬಿಗಿಸಿಕೊಂಡು ತನ್ನೆದೆಯಲ್ಲಿ ಹೆಮ್ಮೆಯನ್ನು ಹುದುಗಿಸಿಕೊಳ್ಳುತ್ತಿದ್ದು, ಬಳಿಯಲ್ಲಿ ಮಲಗಿ ಎದೆಯ ಮೇಲಿಟ್ಟುಕೊಂಡ ಆ ಪುಟ್ಟಬೆರಳುಗಳ ಮೃದುಸ್ಪರ್ಶದಿಂದ ಪ್ರತಿ ದಿನದ ಬಳಲಿಕೆಯನ್ನು ಕ್ಷಣವೊಂದರಲ್ಲಿ ಪರಿಹರಿಸಿಕೊಳ್ಳುತ್ತಿದ್ದು. ಆ ಕೈಯ ಮಿದುವಿನಲ್ಲಿ, ಆ ಬೆರಳುಗಳ ನವಿರಿನಲ್ಲಿ, ಅವಳ ಪರಿಶುದ್ಧ ನಗುವಿನಲ್ಲಿ ಇನ್ನೆಂಥಹ ಮಾಂತ್ರಿಕ ಶಕ್ತಿಯಿದೆಯಪ್ಪಾ ಎಂಬುದೇ ಸುಧಾಕರನಲ್ಲಿ ಎಷ್ಟೋ ಬಾರಿ ಸಂಭ್ರಮದ ವಿಸ್ಮಯವನ್ನು ಮೂಡಿಸುತ್ತಿತ್ತು.

ಅಪ್ಪ, ಅಮ್ಮನಿಲ್ಲದ ಸುಧಾಕರನಿಗೆ ನಿರ್ಮಲೆಯೇ ಅಮ್ಮ. ಸಾವಿನ ಅನುಭವ ಅವನನ್ನು ಪ್ರಬುದ್ಧನನ್ನಾಗಿಸಿಲ್ಲ. ನಿರ್ಮಲೆಯ ಲವಲವಿಕೆ, ಅವಳ ಕೆನೆಯ ಹಲ್ಲುಗಳ ಸಾಲುಗಳ ಹಿಂದಿನಿಂದ ಒಡಮೂಡಿ ಹರಡುತಿದ್ದ ಮುದ್ದು ಮಾತಿನ ಸಂಭ್ರಮದ ತಂಗಾಳಿ, ಅವಳ ಗಲ್ಲದ ಮೇಲಿನ ಪುಟ್ಟಗುಳಿಯ ಸ್ನಿಗ್ಧ ಚೆಲುವು, ಅವಳ ರಚ್ಚೆಯಲ್ಲಿ ವ್ಯಕ್ತವಾಗುವ ಸ್ವತಂತ್ರ್ಯಪ್ರಜ್ಞೆಯ ಅಪೇಕ್ಷೆಯ ಆನಂದ ಸುಧಾಕರನ ಅನಾಥಪ್ರಜ್ಞೆಯನ್ನು, ಸಾವಿನ ಅನುಭವದ ಸುಳ್ಳೇ ಮೇಧಾವಿತನವನ್ನು ಮಸುಕಾಗಿಸಿತ್ತು. ಸುಧಾಕರನ ಅನುಭವದ ವಾಸ್ತವ, ಭರವಸೆಯ ಭವಿಷ್ಯ, ಅವನ ಸಂತೋಷ, ಸಹನೆ, ಸಾಂತ್ವನ ಎಲ್ಲವೂ ಆದ ನಿರ್ಮಲೆ ಅವನ ಭಾವಬದುಕಿನ ಅನ್ಯೋನ್ಯ ಅಂಗವಾಗಿಬಿಟ್ಟಿದ್ದಳು. ಅವಳ ಕನವರಿಕೆಯೇ ಅವನಲ್ಲಿ ದೈತ್ಯ ಅಂತ:ಶಕ್ತಿಯನ್ನು ಮೂಡಿಸುತ್ತಿತ್ತು. ಬದುಕಿನ ನಿರಂತರತೆ, ನಿರರ್ಥಕತೆಗಳ್ಯಾವುವೂ ಅವನಿಗೆ ಪರಿವೆಯಿಲ್ಲ.

ಹಾಗಾಗಿ, ಸುಧಾಕರನ ಈ ಯಾತನೆಯ ತಾರ್ಕಿಕತೆ ನಿರ್ಮಲೆಯಡೆಗಿನ ನಿಸ್ವಾರ್ಥ, ನಿತ್ಯಪ್ರೀತಿಯಲ್ಲಿ ಸೇರಿಹೋಗಿತ್ತು. ಬೆಳಗಾಗೆದ್ದರೆ ಶಸ್ತ್ರಕ್ರಿಯೆಯೆಂಬ ಬದುಕಿನ ಅತಿದೊಡ್ಡ ಪರೀಕ್ಷೆಗೆ ಅಯಾಚಿತವಾಗಿ ಒಡ್ಡಿಕೊಂಡಿರುವ ಪುಟ್ಟ ನಿರ್ಮಲೆ ಅದನ್ನು ದಿಟ್ಟವಾಗಿ ಎದುರಿಸಿ ತನ್ನ ಹಿಂದಿನ ಸಂಭ್ರಮಕ್ಕೆ ಮರು ಸಾಕ್ಷಿಯಾಗುತ್ತಾಳೆಯೇ? ಆ ನೀರವ ರಾತ್ರಿಯ ಪ್ರತಿಕ್ಷಣವೂ ಸುಧಾಕರನೊಂದಿಗೆ ತಕರಾರಿಗಳಿಯುತ್ತದೆ, ಅವನೊಂದಿಗೆ ಆಕ್ರಂದಿಸುತ್ತದೆ. ಉಳಿದಿರುವ ಕ್ಷಣಗಳೆಡೆಗೆ ಆತಂಕ ಹೊಂದುತ್ತಲೇ ಅದರಾಚೆಗಿನ ಅನಿರೀಕ್ಷತೆ ಮೂಡಿಸುತ್ತಿರುವ ಅಗಾಧ ಉದ್ವೇಗದಿಂದ ಸುಧಾಕರ ತಲ್ಲಣಗೊಳ್ಳುತ್ತಾನೆ. ತನ್ನೊಳಗೆ ನುಸುಳಿ ಕೆರಳುತ್ತಿರುವ ನೋವನ್ನು ಮುಚ್ಚಿಟ್ಟುಕೊಳ್ಳಲಾಗದೇ ಕಂಪಿಸುತ್ತಾನೆ.

ಸಾವಿನ ಕಠೋರ ಹಿನ್ನೆಲೆಯಲ್ಲಿ ಬದುಕಿನರ್ಥ ಅರಸುತ್ತಲೇ ಮುಡಿಗೊಳ್ಳುವ ಸಾಮಾನ್ಯ ಮನುಷ್ಯನಿಗೆ ಪ್ರತಿ ಸಾವಿನ ಭಯವೂ ತಂದೊಡ್ಡುವ ಬೇಗುದಿ, ಅನುಭವ ಅವನನ್ನು ಮಾಗಲು ಬಿಡುವುದಿಲ್ಲವೆಂಬುದನ್ನು ನಿರೂಪಿಸುವ ಸಂಗತಿಗೆ ಈ ಕಥೆಯ ನಾಯಕ ಸುಧಾಕರನೂ ಹೊರತಲ್ಲ. ಅವನ ಪ್ರೀತಿ ಈಗ ತನ್ನ ನಾಲ್ಕು ವರ್ಷದ ನಿರ್ಮಲೆಯ ಸಾವನ್ನು ಗೆಲ್ಲಲು ತವಕಿಸುತ್ತಿದೆಯಷ್ಟೆ. ಅಮ್ಮನನ್ನು ಕಳೆದುಕೊಂಡಾಗಲೂ, ಅಪ್ಪನನ್ನು ಕಳೆದುಕೊಂಡಾಗಲೂ ಅವನ ಪ್ರೀತಿ ಸಾವನ್ನು ಗೆಲ್ಲುವುದಕ್ಕಷ್ಟೇ ತವಕಿಸಿ ತಲ್ಲಣಿಸಿತ್ತು. ಯಾರಾದರೂ ಆಸ್ಪತ್ರೆಗೆ ಓಡಿ ಬರುವ ಉದ್ದೇಶವೂ ಅಷ್ಟೆ. ಬದುಕಬೇಕೆನ್ನುವ ಅಪೇಕ್ಷೆ. ಯಾಕೆ ಬದುಕಬೇಕೆಂಬ ಪ್ರಶ್ನೆಯೇ ಇಲ್ಲ. ಸಾವನ್ನು ಗೆಲ್ಲಬೇಕೆಂಬುದೇ ಮನುಷ್ಯನ ದಿಟ್ಟ, ಅನರ್ಥ ಹಠ. ಸಾವು ನಿಶ್ಚಿತವಾದರೂ ಆ ಕ್ಷಣದ ಅನಿಶ್ಚಿತತೆ ಅದಕ್ಕೆ ಕಾರಣವೇ?

ನಿರ್ಮಲೆಯನ್ನು ಎದೆಗವಚಿ ನಿಂತ ಸುಧಾಕರನ ಮುಂದೆ ವೈದ್ಯರು ನಿಂತಿದ್ದರು. ಅದೆಂತಹುದೋ ಮದ್ದನ್ನು ಅವಳ ಪುಟ್ಟ ಬಾಯಿಯಲ್ಲಿ ಹಾಕಿದಾಗ ಮಂಪರಿನ ನಿಯಂತ್ರಣಕ್ಕೆ ಸಿಕ್ಕ ಆಕೆಯ ಕ್ಷೀಣ ನಗು ಕಾಣೆಯಾಯಿತು. ಅವನ ಅಪ್ಪುಗೆಯಲ್ಲಿದ್ದ ನಿರ್ಮಲೆಯನ್ನು ಶಸ್ತ್ರಕ್ರಿಯೆಯ ಪರೀಕ್ಷೆಗೆ ಕೊಠಡಿಯೊಳಕ್ಕೆ ಕರೆದೊಯ್ದ ವೈದ್ಯರಲ್ಲಿ ಸುಧಾಕರ ಹುಟ್ಟು ನೀಡುವ ದೇವರನ್ನು ಕಂಡಿದ್ದ. ಕಂಡೂ ಕಾಣದ, ಇದ್ದೂ ಅರಿಯದ ನಿಗೂಢ ಲೋಕಕ್ಕೆ ತೆರಳಿದ ನಿರ್ಮಲೆ ಒಳಗೇ ಉಳಿದಳು. ಸುಧಾಕರ ತನಗರಿವಿಲ್ಲದ, ಕನಸಿಲ್ಲದ ಭ್ರಮೆಯ ಲೋಕಕ್ಕೆ ಸೇರಿಹೋಗಿದ್ದಾನೆ, ಮೌನ ಅವನನ್ನು ಮುತ್ತಿಕೊಂಡಿದೆ. ಅವನ ಮಡದಿಯೂ ಸೇರಿದಂತೆ ಯಾರೂ ಅವನನ್ನು ವಿರೋಧಿಸುವ ಮನಸ್ಥಿತಿಯಲ್ಲಿ ಇಲ್ಲ.
ಕ್ಷಮಿಸಿ, ಈ ಕಥೆಯನ್ನು ಮುಂದುವರೆಸುವ ಮನಸ್ಸಾಗುತ್ತಿಲ್ಲ. ಕ್ಷಣವೊಂದರ ತಲ್ಲಣವನ್ನು ಹಿಡಿದಿಡುವ ಪ್ರಧಾನ ಉದ್ದೇಶವನ್ನು ಮಾತ್ರ ಹೊಂದಿರುವ ಇದಕ್ಕೆ ಇನ್ಯಾವ ಪಾತ್ರಗಳೂ, ಮತ್ಯಾವ ಭಾವಗಳೂ ಸ್ಪಂದಿಸಿಲ್ಲ. ಹಾಗಾದರೂ ಅಪ್ರಸ್ತುತ ಪಾತ್ರಗಳ, ಅನಗತ್ಯ ಭಾವನೆಗಳ ಅಭಿವ್ಯಕ್ತಿಗೆ ತೊಡಗಿಸಿಕೊಂಡರೆ ಅವು ಅನವಶ್ಯಕ ಸಹಾನುಭೂತಿ ಗಿಟ್ಟಿಸಿಕೊಂಡೀತು ಎಂಬ ಸಂದೇಹ ಲೇಖಕನದು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಕೋ ಪದಾ ಬರಕೋ
Next post ಯಶೋಧರೆ…ಗೆ

ಸಣ್ಣ ಕತೆ

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…