ಕೊನೆಯ ಅಂಕ

ಕೊನೆಯ ಅಂಕ

ರಿಹರ್ಸಲ್ಸ್ ಮುಗಿಸಿ ಮನೆ ಮುಟ್ಟುವಾಗ ರಾತ್ರಿಯ ಹನ್ನೊಂದು ಗಂಟೆಯಾಗಿತ್ತು. ನಾಟಕದ ಕೊನೆಯ ದೃಶ್ಯವನ್ನು ಇಂದು ಹತ್ತು ಸಲ ಮಾಡಿದರೂ ಪ್ರತಿಫಲ ಸಿಗಲಿಲ್ಲವೆಂಬ ಚಿಂತೆ ಮನಸ್ಸನ್ನು ಕಾಡುತ್ತಿದ್ದರೆ ಹತ್ತು ಗಂಟೆ ರಾತ್ರಿಯ ರೈಲು ಪ್ರಯಾಣ ದೇಹವನ್ನು ಆಯಾಸಕ್ಕೆ ಒಳಪಡಿಸಿತ್ತು. ಮನೆಯವರೆಗಿನ ರಿಕ್ಷಾದ ಪ್ರಯಾಣ ಮೈಮನಸ್ಸುಗಳೆರಡನ್ನೂ ನಗರ ಜೀವನದ ಅನಿವಾರ್ಯಕ್ಕೆ ರೋಸಿ ಹೋಗುವಂತೆ ಮಾಡಿತ್ತು. ಇಲ್ಲಿಯ ಜೀವನ ಇಷ್ಟೊಂದು ಕಠಿಣ, ಅಸಹ್ಯವಾಗಿದ್ದರೂ ಜನರು ದೇಶದ ಎಲ್ಲಾ ಮೂಲೆಯಿಂದ ರಾಶಿ ರಾಶಿಯಾಗಿ ಬಂದು ಸೇರಿಕೊಳ್ಳುವುದರ ಗುಟ್ಟೇನೆಂದು ತಿಳಿಯುವ ಹಾಗಿರಲಿಲ್ಲ.

ಉಸ್ಸೆಂದು ಅರಾಮ ಕುರ್ಚಿಯಲ್ಲಿ ಕುಳಿತು ಕಣ್ಣು ಮುಚ್ಚಿ ಕೊಂಡಾಗ ಗಾಡಿಯಲ್ಲಿ ಕುಳಿತು ಶೂನ್ಯ ಭಾವದಿಂದ ರೆಪ್ಪೆ ಮುಚ್ಚಿ ಕೊಂಡಂತೆನಿಸಿತು. ಮೈಯೆಲ್ಲ ದಿನನಿತ್ಯದ ನೋವಿನಿಂದ ಮುರಿದುಕೊಂಡಿತು. ದಿನದಲ್ಲಿ ನಾಲ್ಕಾರು ತಾಸು ರಿಹರ್ಸಲ್ ಮಾಡಿದ ಈ ಕೆಲವು ದಿನಗಳ ಮಹತ್ವವೇನೆಂದು ಹೊಳೆಯಲಿಲ್ಲ. ರಂಗಮಂಚವನ್ನು ಹತ್ತು ವರ್ಷಗಳಿಂದ ತ್ಯಾಗ ಮಾಡಿದವನು ಯಾವ ಅಪೂರ್ವವನ್ನು ಸಾಧಿಸಲು ಮತ್ತೆ ಈ ನಾಟಕದ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದೆಂದು ಅರ್ಥವಾಗಲಿಲ್ಲ. ಇಂದಿನ ದಿನವಿಡೀ ಕೆಲಸಕ್ಕೆ ರಜಾ ಹಾಕಿ ಕೊನೆಯ ಅಂಕದ ಸಂಯೋಜನೆಗೆ ಹೋರಾಡಿ ಕ್ಷಣ ಕ್ಷಣಕ್ಕೂ ಸೋಲನ್ನು ಅನುಭವಿಸುತ್ತಿದ್ದಾಗ ತನ್ನ ಕ್ಷಮತೆಯನ್ನೇ ಶಂಕಿಸುವಂತಾಯಿತು. ಒಂದು ಗಂಟೆಯ ಗಾಡಿ ಪ್ರಯಾಣದಲ್ಲಿಯೂ ಕಾರಣ ಹೊಳೆಯಲಿಲ್ಲ. ಅವನು ಎರಡೂ ಕೈಗಳನ್ನೂ ತಲೆಯಮೇಲಿಟ್ಟು ಉರಿಯುವ ಟ್ಯೂಬ್‌ಲೈಟನ್ನು ನೋಡಿದ. ಕೇವಲ ಪ್ರಕಾಶ, ಆ ಪ್ರಕಾಶದಲ್ಲಿ ಹೊಳಪಿಲ್ಲ ಅರಿವಿನ ರೇಖೆಗಳಿಲ್ಲ. ಕೃತ್ರಿಮ, ಬರೀ ಹೊತ್ತಿಕೊಳ್ಳತ್ತವೆ. ಕುರ್ಚಿಯಿಂದ ಏಳುವಾಗ ಹೊಟ್ಟೆಯನ್ನು ಸವರಿಕೊಂಡ. ಒಂಭತ್ತರ ಸುಮಾರಿಗೆ ವಾಮನನ ಜೊತೆ ಗೋಪಾಲಾಶ್ರಮದಲ್ಲಿ ಮಾಡಿದ ಊಟದ ನೆನಪಾಯಿತು. ‘ಈ ಊಟವನ್ನು ನಲ್ವತ್ತೈದು ವರ್ಷಗಳಿಂದ ಮಾಡುತ್ತಿದ್ದೇವಲ್ಲ. ಆಗ ಒಂದು ರೂಪಾಯಿ, ಈಗ ಹತ್ತು ರೂಪಾಯಿ. ಆಗ ಹೊಟ್ಟೆ ತುಂಬುತ್ತಿತ್ತು. ಈಗ ಅರೆಹೊಟ್ಟೆ, ಆಗ ಈ ಊಟದಿಂದ ಮೈಯೆಲ್ಲ ಚುರುಕಾಗುತ್ತಿತ್ತು. ಈಗ ತಕ್ಷಣ ಜಡ ಏರುತ್ತದೆ.’ ವಾಮನ ನಕ್ಕಿದ್ದ. ಮಾತು ಅರ್ಥಪೂರ್ಣವಾಗಿತ್ತು. ನಗರ ಜೀವನದ ಬದಲಾವಣೆಯನ್ನು ಕನ್ನಡಿಯಲ್ಲಿ ತೋರಿಸುವಂತೆ. ಸ್ನಾನ ಮಾಡುವಾಗ ಇನ್ನೊಂದು ಮಾತು ನೆನಪಿಗೆ ಬಂದಿತ್ತು. ‘ನಾಟಕದಲ್ಲಿ ಈಗ ಸುಖವಿಲ್ಲ. ಟಿ.ವಿ, ಕೇಬಲ್‌ಗಳ ದಾಳಿಯಿಂದ, ಮೆಚ್ಚಿ ಚಪ್ಪಾಳೆ ತಟ್ಟುವ ಪ್ರೇಕ್ಷಕರಿಲ್ಲ. ಪ್ರತಿಫಲವಿಲ್ಲ. ಹುಚ್ಚುಗೀಳು ಮಾತ್ರ’ ಶವರಿನ ಧಾರೆ ತಲೆಯನ್ನು ನವುರಾಗಿ ತೋಯಿಸಿದಾಗ ಅವನು ನಿಜವಾದ ಕಾರಣ ಹುಡುಕ ಹತ್ತಿದ. ಇಂದಿನ ನಟರ ಯೋಗ್ಯತೆ, ನಿಷ್ಟೆಯಲ್ಲಿ ಕೊರತೆಯೇ? ಸ್ಕ್ರಿಪ್ಟಿನ ದೋಷವೇ? ನಿರ್ದೇಶಕನ ಪ್ರತಿಭೆಯ ಕೊರತೆಯೇ ತಿಳಿಯದಾಗಿದೆ. ಒಮ್ಮೆ ಸಫಲ ನಿರ್ದೇಶಕನಾಗಿದ್ದವನು ಇಂದು ಈ ಕೊನೆಯ ಅಂಕದ ಕಲಾತ್ಮಕ ಸಮಾಪ್ತಿಗೆ ಚಡಪಡಿಸುತ್ತಿಲ್ಲವೆ?

ಆ ಗುಂಗಿನಲ್ಲಿಯೇ ಮಲಗುವ ಮುಂಚಿನ ಕರ್ಮವನ್ನೆಲ್ಲ ಮುಗಿಸಿ ಮಂಚದಲ್ಲಿ ಒರಗಿದಾಗ ಪಂಖದ ತಂಗಾಳಿ ಮೈಮೇಲೆ ಚಲಿಸಿತು. ಈಗ ಎಷ್ಟೋ ವರ್ಷಗಳಿಂದ ಏಕಾಂಗಿಯಾಗಿ ಈ ಮನೆಯಲ್ಲಿ ಹೆಚ್ಚಿನ ರಾತ್ರಿಗಳನ್ನು ಕಳೆದದ್ದೇಕೆಂದು ತಿಳಿಯಲಿಲ್ಲ. ತನ್ನ ದಾಂಪತ್ಯ ಮುರಿದ ದಿನಗಳನ್ನು ನೆನೆಯಲು ಕಷ್ಟವಾಯಿತು. ನಿಂತಿರುವ ಎಲ್ಲಾ ವಸ್ತುಗಳು ಅವನ ಬದುಕಿನಂತೆ ಕಾಣುವಾಗ ಕಸಿವಿಸಿಯಾಗುತ್ತಿತ್ತು. ದಣಿದ ಶರೀರ ಮಂಚದ ಆಶ್ರಯ ಬಯಸುತ್ತದೆ. ಹೆಣ್ಣಿನ ಕೋಮಲ ಸ್ಪರ್ಶದಲ್ಲಿ ಮೈಮರೆಯಲು ಆಶೆ ಪಡುತ್ತದೆ. ಮನಸ್ಸು ಮಲಗುವುದಿಲ್ಲ. ಈಚೆಗೆ ವಯಸ್ಸಾಗುತ್ತಿದ್ದಂತೆ, ಹಗಲುಗಳೂ ಸರಿಯುತ್ತಾ ಇಲ್ಲ. ಅದಕ್ಕೆಂದೇ ಬಹುಶಃ ನಾಟಕ ನಿರ್ದೇಶನವನ್ನು ಒಪ್ಪಿಕೊಂಡಿದ್ದೆ. ಸಂಜೆಯ ಕೆಲವು ಹೊತ್ತು ತರುಣ ಕಲಾವಿದರ ಸಂಪರ್ಕದಲ್ಲಿ ಕಳೆದುಹೋಗುತ್ತದೆ. ಆದರೆ ಹಳೆಯ ನೆನಪುಗಳು, ವೈಭವದ ಯೌವನದ ಕ್ಷಣಗಳ ಸವಿ ಸ್ಮರಣೆಗಳು ಎಡೆ ಎಡೆಯಲ್ಲಿ ಮನಸ್ಸನ್ನು ಹೊಕ್ಕು ಕದಡುವುದನ್ನು ಸಹಿಸುವುದು ಹೇಗೆ? ಅವುಗಳ ಜೊತೆಗೆ ಹಿಂದಿನ ಕೆಲವು ನೋವುಗಳು ಬಂದು ನುಸುಳಿ ಹೃದಯವನ್ನು ನರಳಿಸುವಾಗ ನೀವು ನಾಟಕದವರು. ನಾಟಕದವರನ್ನು ‘ನಂಬುವುದು ಹೇಗೆ? ಒಥೆಲೋ, ಹ್ಯಾಮ್ಲೆಟ್, ತುಘಲಕರ ಸ್ವಭಾವ ನಿಮ್ಮದು. ನೀನೂ ಹೊರತಲ್ಲ. ನನ್ನ ಕರವಸ್ತ್ರದಿಂದ ರವಿ ಮುಖ ಒರೆಸುವುದನ್ನು ನೋಡಿದೆ. ಏಕಾಂತದಲ್ಲಿ ಅವನು ನನ್ನ ಹತ್ತಿರ ಮಾತಾಡುವುದನ್ನು ನೋಡಿದೆ. ಅಷ್ಟೇ ಸಾಕಾಯಿತು ನಿನಗೆ. ನೀನೊಬ್ಬ ಪ್ರತಿಭೆಯ ಕಲಾವಿದನೆಂದು ವಯಸ್ಸಿನಲ್ಲಿ ತುಂಬಾ ಫರಕ್ ಇದ್ದರೂ ಪ್ರೀತಿಸಿದೆ, ವಿಶ್ವಾಸವಿಟ್ಟು ಮದುವೆಯಾದೆ. ಹೆಂಡತಿಯ ಶೀಲವನ್ನು ಶಂಕಿಸಿದ ಪುರುಷನ ಜೊತೆ ಜೀವನ ಮಾಡುವುದು ಹೇಗೆ? ಪಕ್ಕದ ಮೇಜಿನಲ್ಲಿ ಒಂಟಿಯಾಗಿ ಫ್ರೇಮಿನಲ್ಲಿ ಕುಳಿತಿರುವ ರೇಖಾನ ಭಾವಚಿತ್ರ ಹೇಳಿದಂತಾಯಿತು. ಅವನ ಧ್ಯಾನ ಒಮ್ಮೆಲೆ ಆಚೆ ಸರಿದು ‘ನಾನು ನಾಟಕಕಾರನಾದುದು ತಪ್ಪೇ. ನಾಟಕದವನಿಗೆ ಭಾವನೆ ಇಲ್ಲವೇ, ಪ್ರೀತಿಸುವ, ಸಂಸಾರ ಹೂಡುವ ಹಕ್ಕಿಲ್ಲವೇ. ಅವನು ಮನುಷ್ಯರಿಗಿಂತ ಭಿನ್ನವೇ? ಎಂಬ ಸವಾಲನ್ನು ಹಾಕಿತು.

ಅವನು ನಿಧಾನವಾಗಿ ಎದ್ದು ಆ ಭಾವಚಿತ್ರವನ್ನು ಎತ್ತಿಕೊಂಡ. ಎಷ್ಟೋ ವರ್ಷಗಳ ಹಿಂದೆ ತನಗೆ, ತನ್ನ ಕಲಾಭಿರುಚಿಗೆ ಸ್ಫೂರ್ತಿಯ ಸೆಲೆಯಾಗಿದ್ದ ರೇಖಾಳನ್ನು ಈಗ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. ಅವಳ ಮನೆಗೆ ಹೋಗಿ ಬರುತ್ತಿದ್ದ ದಿನಗಳಲ್ಲಿ ತನ್ನ ಅಭಿನಯ ನಿರ್ದೆಶನ ಕೌಶಲ, ಪ್ರಶಸ್ತಿಗಳ ಸಾಹಸದ ಕತೆಯನ್ನು ಕೇಳಿ ಅವಳ ಮೈಮನಗಳಲ್ಲಿ ಉಂಟಾಗುತ್ತಿದ್ದ ರೋಮಾಂಚನ, ಅವಳು ವಯಸ್ಸಿನ ಬಂಧನವನ್ನು ಮೀರಿ ತನ್ನ ಹತ್ತಿರಕ್ಕೆ ಸರಿಯುತ್ತಿದ್ದ ಪರಿಯಿಂದ ಗೋಚರವಾಗುತಿತ್ತು. ‘ಈಗೆಲ್ಲ ನಿಮ್ಮದೆ ಧ್ಯಾನ, ಕಾಲೇಜಿನ ಓದಿನಲ್ಲಿ ಮನಸ್ಸು ನಿಲ್ಲುತ್ತಾ ಇಲ್ಲ ಏನು ಮಾಡಲಿ. ನಿಮ್ಮ ನಾಟಕದಲ್ಲಿ ನಾನೂ ಒಂದು ಪಾತ್ರವಾಗಿ ಬರಲೇ, ನೀವು ಒಥೆಲ್ಲೋನ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತೀರಿ. ನಾನು ಡೆಸ್ಟಮೋನಾ ಆಗಿದ್ದರೆ ಈ ಒಥೆಲೋನ ಹಿಂದೆ ಓಡಿ ಹೋಗುತ್ತಿದ್ದೆ. ಅವಳ ಮಾತಿನ ಮರ್ಮ ಏನೆಂದು ನಾಟಕದ ಮರುದಿನ ಇರಾನೀ ಹೋಟೆಲೊಂದರಲ್ಲಿ ಕುಳಿತು ಮೃದುವಾಗಿ ಮಾತನಾಡುತಿದ್ದಾಗ ಆಗುತ್ತಿರಲಿಲ್ಲ. ಇನ್ನೊಂದು ದಿನ ಅದೇ ಜಾಗದಲ್ಲಿ ತನ್ನ ಅತೀ ಹತ್ತಿರದಲ್ಲಿ ಕುಳಿತು, ತೊಡೆಯ ಮೇಲೆ ಕೈಯಿರಿಸಿ, ಮಂದ ಬೆಳಕಿನಲ್ಲಿ ಕಣ್ಣಿನ ಇಂಗಿತವನ್ನು ಕತ್ತೆತ್ತಿ ಹೊರ ಚೆಲ್ಲುತ್ತಿದ್ದಾಗ ಭಾವುಕನಾಗಿ ತನ್ನ ಕರ್ಣಪಾತ್ರದ ಮಾತುಗಳನ್ನು ಹಕ್ಕಿ ಪಿಸುಗುಟ್ಟುವಾಗ ಅರ್ಥವಾಗಹತ್ತಿತ್ತು….. ‘ಅಂಗರಾಜ, ನಿನ್ನ ದೈರ್ಯ, ಶೌರ್ಯ, ದಾನಕಾರ್ಯಗಳ ಕುರಿತು ದಿನ ಪ್ರತಿದಿನ ಬರುವ ಸಮಾಚಾರಗಳನ್ನು ಕೇಳಿ ನನ್ನ ಮೈಯಲ್ಲಿ, ಮನಸ್ಸಿನಲ್ಲಿ ಏಳುವ ನವುರನ್ನು ವ್ಯಕ್ತಪಡಿಸುವ ಮಾರ್ಗವಿರಲಿಲ್ಲ. ಒಂದು ಬಾರಿ ನಿನ್ನ ಮುಖಾಮುಖಿ ಸಂಭಾಷಣೆಯಲ್ಲಿ ನಿನ್ನ ಮಾತುಗಳನ್ನು ಕೇಳುವ ಮಹತ್ತರ ಇಚ್ಛೆ ಅದಮ್ಯವಾಗಿರುತ್ತಿತ್ತು. ಸ್ವಯಂವರದಲ್ಲಿ ನೀನು ಬಿಲ್ಲೆತ್ತಲು ಬಂದ ಭಂಗಿ, ದೇಹ ಕಾಂತಿಗೆ ಒಮ್ಮೆಲೆ ಮೋಹಿತಳಾಗಿ ನನ್ನ ಜೀವನದ ಪ್ರಥಮ ಪ್ರೇಮ ಬಂಧನದಲ್ಲಿ ಬಿದ್ದ ನಂತರ ನಡೆದ ಅಚಾತುರ್ಯ ನಿನಗೆ ಗೊತ್ತಲ್ಲ. ಅದರ ವ್ಯಥೆಯನ್ನು ಎದೆಯಲ್ಲಿ ಅಡಗಿಸಿಕೊಂಡಿದ್ದೇನೆ. ಇಂದು ನನ್ನ ಜೀವನದ ಅಮೋಘ ದಿನ. ಅಮರ ಕ್ಷಣ…. ಅದಕ್ಕೆ ನೀನು ಸಾಗರದಷ್ಟು ಗಂಭೀರ ಭಾವದಿಂದ ಉತ್ತರ ಕೊಟ್ಟಿದ್ದೆ- ‘ಯಾಜ್ಞಸೇನಿ, ಕುಲೀನೆಯಾದ ನಿನಗೆ ಈ ಮಾತು ಶೋಭಿಸುವುದು. ನಾನು ಕುಲಹೀನ. ನಿನ್ನನ್ನು ಬಯಸಿದ್ದೆ ಅಪರಾಧ. ಆದರೆ ನನ್ನ ಜೀವನದ ಎಲ್ಲ ಮಹಾಕಾರ್ಯಗಳಿಗೆ ನೀನೇ ಸ್ಫೂರ್ತಿ, ನೀನೇ ಶಕ್ತಿ. ನಾನೊಬ್ಬ ಮೂಕಪ್ರೇಮಿ.’

‘ವಾಹ್, ಚೆನ್ನಾಗಿ ಹೇಳುತ್ತಿ, ನೀನೂ ನಮ್ಮ ತಂಡಕ್ಕೆ ಸೇರಿಕೊ. ಆದರೆ ರೇಖ, ಅವೆಲ್ಲ ಕರ್ಣನ ಮಾತುಗಳು. ನನ್ನವಲ್ಲ. ಅವನ ಒಳಗುದಿಯ ಅರ್ಥ ನಿನಗಾಗದು. ಬಹುಶಃ ಅವನಷ್ಟು ಏಕಾಂಗಿ ದುಃಖಿ ಪ್ರಪಂಚದ ಯಾವುದೇ ಕಾವ್ಯದ ಕಥೆಯಲ್ಲಿ ಇರಲಾರ. ಮಾತ್ರ ನಾನು ಕರ್ಣನಲ್ಲ. ನೀನೂ ದೌಪದಿಯಲ್ಲ. ಹೆಚ್ಚೆಂದರೆ ನಾನು ಒಥೆಲೋ ಆದೇನು. ಅವನಂತೆಯೆ ಪ್ರೌಢ, ಅನಾಥ, ನನ್ನ ಹಿಂದೆ ಬಂದು ನೀನು ಸುಖಿಯಾಗಲು ಹೇಗೆ ಸಾಧ್ಯ. ಅವನ ಸ್ಪಷ್ಟ ಮಾತು ಆಕೆಯ ಭಾವನೆಯನ್ನು ತಟ್ಟಿರಲಿಲ್ಲ. ಅವಳು ಮತ್ತಷ್ಟು ಮೈಯೊತ್ತಿ ಕುಳಿತು ‘ನಿನ್ನ ನಾಟಕದ ನಾಯಕಿ ನಾನಲ್ಲ ನೀನು ಒಥೆಲೋ ಆಗುವುದೂ ಬೇಡ. ನಾವು ಜೊತೆಯಾಗಿ ಬಾಳ್ವೆ ಮಾಡುವ’ ಎಂದು ಬಿಸಿಯುಸಿರು ಬಿಟ್ಟಿದ್ದವಳು ರವಿಯ ಸಂಬಂಧವನ್ನು ಏಕೆ ಬೆಳೆಸಿದಳು. ಅವಳ ಕರವಸ್ತ್ರದಲ್ಲಿ ಮುಖ ಒರಸಿದ್ದ ರವಿ ಅವಳನ್ನು ಬಿಗಿಹಿಡಿದಿದ್ದ ದೃಶ್ಯ ಕಣ್ಣಿಗೆ ಕಟ್ಟುವಂತೆ ಆಶ್ಚಯ್ಯಕರವಾಗಿ ತುಂಬಿಕೊಂಡಿದೆಯಲ್ಲ. ರಂಗಮಂಚದಲ್ಲಿ ಆಡಿದ ಪಾತ್ರಗಳೆಲ್ಲ ಜೀವಂತವಾಗಿ ತನ್ನನ್ನು ಆಶ್ರಯಿಸಿಕೊಂಡು ಮಾರ್ಗದರ್ಶನ ನೀಡುವ ಕ್ಷಮತೆಯನ್ನೇ ದುರ್ಬಲಗೊಳಿಸುತ್ತಿವೆ. ವಹಿಸಿಕೊಂಡ ನಾಟಕದ ಕೊನೆಯ ದೃಶ್ಯವನ್ನು ಸೃಷ್ಟಿಸುವ ಆತ್ಮ ವಿಶ್ವಾಸವೇಕೆ ಕುಸಿಯುತ್ತಾ ಇದೆ ಎಂದು ವಿಷಾದಿಸುತ್ತಾ ತನ್ನ ಸುತ್ತುವ ಕುರ್ಚಿಯಲ್ಲಿ ಕುಳಿತ. ಕುರ್ಚಿಯನ್ನು ಒಂದು ಸುತ್ತು ತಿರುಗಿಸಿ ಗೋಡೆಗೆ ನೋಡಿದ. ಕನ್ನಡಿಯ ಕಪಾಟಿನಲ್ಲಿ ಪ್ರಶಸ್ತಿ ಪತ್ರಗಳು, ಬಗೆಬಗೆಯ ಛಾಯಾಚಿತ್ರಗಳು, ಫಲಕಗಳು ಅವನ ಜೊತೆ ಮಾತಾಡಹತ್ತಿದ್ದವು. “ನೀನು ಒಬ್ಬ ನಟ; ನಮ್ಮ ಹಾಗೆಯೆ. ಕಾಲದ ಮರೆಯಲ್ಲಿ ನಿಸ್ಪ್ರಹನಾಗಿ, ನಿಷ್ಕ್ರಿಯನಾಗಿ, ಅಸಮರ್ಥನಾದವ. ನೀನು ಸೋತಿರುವೆ. ನಿನ್ನ ಜೀವನ ನಾಟಕದ ದೃಶ್ಯಗಳನ್ನು ನಿರ್ದೇಶಿಸುವಲ್ಲಿ ನಿನಗಾದ ಸೋಲು ಈ ನಾಟಕದ ಕೊನೆಯ ಅಂಕವನ್ನು ಪ್ರಯೋಗಿಸುವಲ್ಲಿಯೂ ಆಗುತ್ತಾ ಇದೆ.” ಅವನು ವ್ಯಗ್ರತೆಯಿಂದ ಅವುಗಳನ್ನು ನೋಡಿದ. ರೇಖಾ ಅವುಗಳ ಸಾಲಿನಿಂದ ಹೊರಗೆ ಬಂದಳು. ‘ನೀನು ನಾಟಕದವನು. ಹೇಗೆ ನಂಬಲಿ’ ಎಂದು ಪ್ರಶ್ನೆ ಹಾಕಿದಳು. ನನ್ನ ಶೀಲವನ್ನು ಶಂಕಿಸಿ ದೂರವಾದಿ, ಸ್ತ್ರೀಸಾನ್ನಿಧ್ಯವಿಲ್ಲದೆ ನೀರಸವಾಗಿ ಬದುಕುವ ನಸೀಬ್ ನಿನ್ನದು’ ಅವಳು ಜಗಳವಾಡುತ್ತಿದ್ದ ದಿನಗಳು ಕಣ್ಣೆದುರು ಬರಲು ಹವಣಿಸಿದವು. ರವಿಯ ಜೊತೆ ಸರಸವಾಡಿ ಬಂದು ರಿಹರ್ಸಲ್, ಪ್ರದರ್ಶನಗಳಿಂದ ತಡವಾಗಿ ಮನೆಗೆ ಬರುತ್ತಿದ್ದ ತನಗಾಗಿ ಕಾಯುವ ನಿಟ್ಟಿನಲ್ಲಿ ಉಗುಳಿದ ಮಾತುಗಳು, ನಾಟಕದಲ್ಲಿ ಅವಳಿಗಿದ್ದ ಆಸಕ್ತಿ ಕಡಿಮೆಯಾಗುತ್ತಿದ್ದ ದಿನಗಳಲ್ಲಿಯೇ ಅವಳ ಬ್ಯಾಂಕಿನ ಚಂದದ ಯುವಕ ರವಿಯ ದೋಸ್ತಿ ಹೆಚ್ಚಾದುದು. ತನ್ನ ನಾಟಕದ ಹುಚ್ಚು ಪ್ರೇಮ ಜೀವನವನ್ನು ಕೆಡಿಸಿತೊ, ಸುಂದರನೂ ಯುವಕನೂ ಆಗಿರುವ ರವಿಯ ಸಾಮೀಪ್ಯದ ಹುಚ್ಚು ಕೆಡಿಸಿತೋ ಎಂದು ತಿಳಿಯದೆ ತತ್ತರಿಸಿದ್ದ. ತವರು ಮನೆಗೆ ಹೋದವಳು ತಿರುಗಿ ಬರಲು ಒಪ್ಪದ ಒಂದು ದಿನ ವಿಚ್ಛೇದನದ ಕಾಗದ ಪತ್ರವನ್ನು ಹಸ್ತಾಕ್ಷರಕ್ಕೆ ಕಳಿಸಿದಾಗ ಅವಳ ಆಕಾಂಕ್ಷೆಯ ಅರಿವಾಗಿ ಅವಳು ಹಿಂದೆ ಆಡಿದ್ದೆಲ್ಲವೂ ನಾಟಕದ ಮಾತುಗಳೆಂದು ಸಿಟ್ಟು ಬಂದಿತ್ತು. ನಾಟಕದವನೆಂದು ಕೊಂಕು ನುಡಿದಿದ್ದ ರೇಖಾ ಎಂಥ ಹೆಣ್ಣೆಂದು ತಿಳಿಯಲು ಆಸಕ್ತಿ ಉಳಿಯದೆ ಮದುವೆ ವಿಚ್ಛೇದನದ ಕಾಗದಗಳಿಗೆ ಸಹಿ ಹಾಕಿ ಕಳಿಸಿಕೊಟ್ಟಿದ್ದ. ಅವಳು ಬಸುರಿಯಾಗಿದ್ದಳೆಂದು ತಿಳಿದ ಮೇಲೂ ಅವಳು ಮಾಡಿದ ವಂಚನೆಗೆ ಮನಸ್ಸು ಹೇಸಿಗೆ ಪಟ್ಟಿತ್ತು. ಮುಂದೆ ಕೆಲವೇ ಸಮಯದಲ್ಲಿ ಅವಳು ರವಿಯನ್ನು ಮದುವೆಯಾದ ಸುದ್ದಿ ತಿಳಿದು ಅವಳ ಸಂಪರ್ಕವಾದ ಬಗೆಗೆ ಪಶ್ಚಾತ್ತಾಪಪಟ್ಟ. ಹೆಣ್ಣಿನ ಮೇಲಿನ ವಿಶ್ವಾಸ ಹಾರಿಹೋಯಿತು. ನೌಕರಿಯಲ್ಲದೆ ಇತರ ಯಾವುದರಲ್ಲೂ ಆಸಕ್ತಿ ಉಳಿಯಲಿಲ್ಲ. ಆದರೆ ನೆನಪುಗಳು ಒಬ್ಬನೇ ಇರುವಾಗ ಬಂದು ಕಾಡುತ್ತವೆಯಲ್ಲ. ಮನುಷ್ಯ ಒಂಟಿಯಾಗಿರಬಾರದು. ಪ್ರೀತಿಸುವ ಹೆಣ್ಣು, ಮುದ್ದು ಮಕ್ಕಳು, ಹಿತವರು ಇಲ್ಲದ ಬದುಕು ಏಕೆ? ಸಂಜೆ ಮನೆಗೆ ಬಂದ ನಂತರ ನಿದ್ರೆ ಬರುವ ತನಕ ಇರುವ ತಾಸುಗಳನ್ನು ಕಳೆಯುವುದು ಹೇಗೆ? ಅವನು ಎದ್ದು ರೂಮಿನಲ್ಲಿ ಶತಪಥ ಹಾಕಿದ. ತಾನು ಗಳಿಸಿದ ಪಾರಿತೋಷಕಗಳೆಲ್ಲ ಮತ್ತೆ ಕಾಣಿಸಿಕೊಂಡವು. ಆದಿನಗಳು ಇನ್ನೊಮ್ಮೆ ಬರಲಾರವು. ರೇಖಾನಂತಹ ಹೆಣ್ಣು ತನ್ನ ಬದುಕಿಗೆ ಮತ್ತೊಮ್ಮೆ ಬರಲು ಸಾಧ್ಯವಿಲ್ಲ. ಅವಳದು ಕೊನೆಯ ಪಾತ್ರ. ಒಮ್ಮೆಲೆ ಬಂದು ಕುರ್ಚಿಯಲ್ಲಿ ಕುಳಿತ. ನಾಟಕದ ಯಾವುದೋ ದೃಶ್ಯವನ್ನು ಮಾಡುವಂತೆ ಅವನ ಸ್ಥಿತಿಯಾಯಿತು. ಮುಖದ ಗಂಟು ಬಿಡಿಸಿಕೊಂಡಂತೆ ಅನಿಸಿ ಸಿಗರೇಟು ತೆಗೆದು ಹಚ್ಚಿಕೊಂಡ. ಸುರುಳಿಯಾಗಿ ಬಿಟ್ಟ ಆ ಹೊಗೆಯಲ್ಲಿ ಅವನ ನಾಟಕದ ಕೊನೆಯ ದೃಶ್ಯ ಕಾಣಿಸಿತು. ಚೆಲುವೆ, ಸೊಗಸುಗಾತಿ ರೇಖಾ ಮೋಹಕವಾಗಿ ನಗೆ ಬೀರಿದಳು. ಅವಳ ಕಣ್ಣಹೊಳಪಿನಲ್ಲಿ ಅಪೂರ್ವ ಚಂಚಲತೆಯನ್ನು ಕಂಡು ತನ್ನ ನೀರಸ ಬದುಕಿಗೆ ಅವಳು ಬಂದದ್ದು ಹೇಗೆಂದು ಗೊಂದಲವಾಯಿತು.

ಆಗ ಕರೆಗಂಟೆ ಬಾರಿಸಿತು. ಅವನು ಗೋಡೆಯ ಗಡಿಯಾರ ನೋಡಿದ. ಹನ್ನೆರಡೂವರೆಯ ಮಧ್ಯರಾತ್ರಿ, ಈ ಅಪರಾತ್ರಿಯಲ್ಲಿ ಬಂದವರು ಯಾರು ಎಂದು ತಕ್ಷಣ ಯೋಚಿಸುವುದು ಕಷ್ಟವಾಯಿತು. ಗಾಬರಿಯಾಗಲಿಲ್ಲ. ಬಾಗಿಲು ತೆರೆಯಲು ಬರುವಾಗ ಬುದ್ದಿ ಹಲವಾರು ಯೋಚನೆಗೆ ಒಳಗಾಯಿತು. ಕಣ್ಣತೂತಿನಿಂದ ಯಾರೆಂದು ನೋಡಿದಾಗ ವಿಚಿತ್ರವಾದ ಉದ್ದನೆಯ ಸ್ವರೂಪ ಒಂದು ಅಸ್ಪಷ್ಟವಾಗಿ ಕಾಣಿಸಿತು. ‘ಯಾರು’ ಎಂದು ಪುನಃ ಪುನಃ ಕೇಳುತ್ತ ಬಾಗಿಲನ್ನು ಅರೆಮರೆ ತೆರೆದಾಗ ಹೆಗಲಲ್ಲಿ, ಕೈಯಲ್ಲಿ ಬ್ಯಾಗು ಹೊತ್ತ ಒಬ್ಬ ತರುಣ ಒಳಬರಲು ಹವಣಿಸಿದ. ಯಾರೆಂದು ಕೇಳುವ ಹಾಗೆಯೇ ಅವನು ಒಳಹೊಕ್ಕು – ‘ಹಲೋ ಸರ್’ ಎನ್ನುತ್ತ ತುಂಟವಾಗಿ ಕೈ ಮುಂದೆ ಮಾಡಿದ, ಕೈಕುಲುಕುವಾಗಲೂ ‘ನೀನು ಯಾರೆಂಬ’ ಪ್ರಶ್ನೆಯನ್ನು ಕಣ್ಣಲ್ಲಿ ತುಂಬಿ ಅವನು ಯುವಕನನ್ನು ನೋಡಿದ. ‘ನಾನು ರಾಹುಲ್, ಮಂಗಳೂರಿನಿಂದ ಬಂದಿದ್ದೇನೆ. ಸಂಜೆಯ ‘ಬಲ್ಲಾಳ’ ಈಗ ಬಂದು ಮುಟ್ಟಿದೆ’ ಎಂದು ರಾಹುಲ್ ಕೈಬಿಟ್ಟ. ‘ನಾನು ಮೊದಲು ಸ್ನಾನ ಮಾಡಬೇಕು ಸರ್, ಆಮೇಲೆ ಏನಾದರೂ ಸ್ವಲ್ಪ ಹೊಟ್ಟೆಗೆ’ ಎನ್ನುತ್ತ ಬ್ಯಾಗನ್ನು ತೆರೆಯಲು ಹೋದ. ಮತ್ತೆ ಬಾಗಿಲಲ್ಲೆ ಇದ್ದ ಟವಲನ್ನು ಎತ್ತಿ ಹೆಗಲಿಗೆ ಹಾಕಿಕೊಂಡ. ಶರ್ಟ್ ಪ್ಯಾಂಟ್‌ಗಳನ್ನು ಜಾರಿಸುತ್ತಾ ಸ್ನಾನ ಗೃಹವನ್ನು ಹುಡುಕಹತ್ತಿದ. ಈ ವರೆಗೂ ಮಾತಾಡುವ ಸಿದ್ಧತೆಯಲ್ಲೇ ಇದ್ದ ಮನೆಯಾತ ರಾಹುಲನ ಇಂಗ್ಲಿಷ್ ಮಾತುಗಳಿಗೆ ಪ್ರತಿಯಾಗಿ ಇಂಗ್ಲಿಷಿನಲ್ಲೇ ‘ನಿನ್ನ ಪರಿಚಯವಾಗಲಿಲ್ಲ’ ಎಂದ. ಇಷ್ಟು ಪ್ರಾಯದ ಹುಡುಗ ತನ್ನ ಕುಟುಂಬದಲ್ಲಿ ಯಾರನ್ನು ಊಹಿಸಿಕೊಳ್ಳಲೂ ಅವನಿಂದಾಗಲಿಲ್ಲ. ರಾಹುಲ್ ಮತ್ತೆ ಇಂಗ್ಲಿಷ್‌ನಲ್ಲಿ ‘ನಾನು ಕಂಪ್ಯೂಟರ್ ಇಂಜಿನೀಯರ್, ಮಣಿಪಾಲದಿಂದ-ವೀಡಿಯೋಕೋನ್ ಕಂಪೆನಿಯಲ್ಲಿ ಪೈನಲ್ ಇಂಟರ್‌ವ್ಯೂ ನಾಳೆ ಇದೆ. ಅದಕ್ಕೆ ಬಂದಿದ್ದೇನೆ’ ಎಂದು ಹೇಳಿದ. ಪರಿಚಯ ಹೇಳುವ ಬದಲು ಪ್ಯಾಂಟಿನ ಕಿಸೆಯಿಂದ ಒಂದು ಮಡಚಿದ ಲಕೋಟೆಯನ್ನು ತೆಗೆದುಕೊಟ್ಟು ಸ್ನಾನ ಗೃಹಕ್ಕೆ ನುಗ್ಗಿದ. ಕಾಗದ ಬಿಚ್ಚಿ ಮೊದಲ ಸಾಲು ಓದುವಾಗ ರಾಮಕೃಷ್ಣನ ಕುತೂಹಲ ಬೆರಗಿನ ಅಂಚನ್ನೆ ಮುಟ್ಟಿತ್ತು.

‘ಪ್ರಿಯ ರಾಮಕೃಷ್ಣ’,
ನಾನು ರೇಖಾ. ನೆನಪಿದೆಯೇ, ಇಪ್ಪತ್ತು ವರ್ಷಗಳ ಹಿಂದೆ ನಿನ್ನವಳಾಗಿದ್ದು ರವಿಯನ್ನು ಮದುವೆಯಾಗಲು ಹೋದವಳು. ನೀನು ಮನೆಯಲ್ಲೇ ಕುಳಿತು ಡೈವೋರ್ಸು ಕೊಟ್ಟೆ. ನನ್ನ ಗೋಜಿಗೇ ಬರಲಿಲ್ಲ. ಹೋಗಲಿ, ಅಪೇಕ್ಷೆಗಳ ಕಾಲ ಮೀರಿತಲ್ಲ. ರಾಹುಲ್ ನಿನ್ನ ಮಗ, ನಿನಗೆ ಗೊತ್ತಿರಬಹುದು. ನೋಡು ಚೆನ್ನಾಗಿ ಸಾಕಿದ್ದೇನೆ. ಆದರೆ ಎಂಥಾ ವಿರಕ್ತಿ ನಿನ್ನದು. ನನಗೆ ಮುಂಬಯಿಗೆ ಬರಲಿಕ್ಕಿದೆ. ನಿನ್ನನ್ನು ಭೇಟಿಯಾಗುವ ಆಸೆಯಿದೆ. ಬರಲೆ?

ರೇಖಾ.

ರಾಮಕೃಷ್ಣನ ಮುಖದಲ್ಲಿ ಅರ್ಥಹೀನ ನಗೆ ಮೂಡಿತು. ಈವರೆಗಿದ್ದ ದಣಿವು ದೇಹದಿಂದ ಹೊರಬಿದ್ದ ವ್ಯರ್ಥ ಅಭಾಸವಾಗಿ ಸುತ್ತುವ ಕುರ್ಚಿಯಲ್ಲಿ ಬಂದು ಕುಳಿತ. ನಾಟಕದ ಕೊನೆಯ ಅಂಕದ ಪುಟ ಎದುರಿಗೆ ತೆರೆದಿತ್ತು. ಅದಕ್ಕೆ ಕೊಡಬೇಕೆಂದಿದ್ದ ಹೊಸ ಆಯಾಮ ಮತ್ತಷ್ಟು ಸಂಕೀರ್ಣಗೊಂಡಂತೆ ಅನಿಸಿ ಅದನ್ನು ಮುಚ್ಚಿ ಅದರ ಮೇಲೆ ಭಾರವನ್ನಿಟ್ಟು ನಟನಾ ಮುದ್ರೆಯಲ್ಲಿ ಸ್ನಾನ ಗೃಹದ ಕಡೆ ನೋಡಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂತ್ರಾಲಯ
Next post ನಾನು ನನ್ನವಳ ಬಾಳು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys