ಇರುವದೆಲ್ಲವ ಬಿಟ್ಟು

ಇರುವದೆಲ್ಲವ ಬಿಟ್ಟು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ಆಗಾಗ ಅನಿಸುತ್ತಿತ್ತು. ಅವನ ಕೂದಲುಗಳು ಗರಿಗೆದರಿ ಹಾರುತ್ತಿದ್ದವು. ಕಣ್ಣುಗಳಲ್ಲಿ ಜೀವಂತಿಕೆ ಇರಲಿಲ್ಲ. ಒಮ್ಮೊಮ್ಮೆ ಶೂನ್ಯದತ್ತ ದೃಷ್ಟಿ ನೆಟ್ಟು ಗಂಟೆಗಟ್ಟಲೆ ನಿಶ್ಚಲವಾಗಿ ಕೂತುಬಿಡುತ್ತಿದ್ದ.

ಬೆಳಿಗ್ಗೆ ಕೆಲಸದ ಹೆಂಗಸು ಬಂದಿದ್ದಳು. ತಿಂಡಿ ಮಾಡಿ ಪಾತ್ರೆ ತೊಳೆದಿಟ್ಟಳು ಆದರೆ ಮನೆಯನ್ನು ಗುಡಿಸಲು ಅವಳಿಗೆ ಅವಕಾಶ ಕೊಟ್ಟಿರಲಿಲ್ಲ. “ಎಷ್ಟುದಿನ ಆಯ್ತು ಒಡೆಯ, ಈ ಕಸದಲ್ಲಿಯೇ ಜೀವಿಸುತ್ತೀರಲ್ಲಾ? ಒಮ್ಮೆ ಚೊಕ್ಕಟ ಮಾಡಿ ಬಿಡುತ್ತೇನೆ” ಎಂದಳು. ಕಳೆದು ಎರಡು ವಾರಗಳಿಂದಲೂ ಕೇಳುತ್ತಲೇ ಇದ್ದಳು. ಅವನು ಸುತರಾಂ ಒಪ್ಪಿರಲಿಲ್ಲ. ಅವನದ್ದು ಒಂದೇ ಹಠ. ಈ ಮನೆಯನ್ನು ದಿನಾ ಗುಡಿಸುವವಳು ಈಗ ಇಲ್ಲ. ಬೇರೆಯವರು ಗುಡಿಸುವುದು ಅವನಿಗೆ ಇಷ್ಟವಾಗುವುದಿಲ್ಲ. ಕೆಲಸದವಳು ಏನೆಂದು ಸಮಾಧಾನ ಪಡಿಸಿಯಾಳು?”ಎಲ್ಲಾ ಕೆಲಸಕ್ಕೆ ಒಪ್ಪುವ ದನಿ ಮನೆಯನ್ನು ಶುದ್ಧ ಮಾಡಲು ಒಪ್ಪುತ್ತಿದ್ದರೆ ಅವರ ಹಳೆಯ ನೋವುಗಳನ್ನು ನಿವಾರಿಸಬಹುದಿತ್ತು. ಜೀವನದಲ್ಲಿ ಲವಲವಿಕೆ ತುಂಬುವಂತೆ ಮಾಡಬಹುದಿತ್ತು. ಆದರೆ ದನಿ ಯಾವುದನ್ನೊ ಮರೆಯುವುದಿಲ್ಲ. ಏನು ಮಾಡಲಿ?”

ಅವನು ತನ್ನದೇ ಯೋಚನೆಯಲ್ಲಿ ಮುಳುಗಿದ್ದ. ಎಷ್ಟೋ ದಿನಗಳ ಬಳಿಕ ಅವನಿಗೆ ರಜಾಸೌಲಭ್ಯ ಸಿಕ್ಕಿತ್ತು. ಹೆಂಡತಿ ಬಹಳ ಆಸೆ ಪಟ್ಟಿದ್ದಳು. ಸಮುದ್ರ ನೋಡಬೇಕು. ಅಲೆಗಳೊಡನೆ ಚಿನ್ನಾಟ ಆಡಬೇಕು. ಹಾಕಿದ ಡ್ರೆಸ್ಸು ಪೂರ್ತಿ ಒದ್ದೆ ಯಾಗುವವರೆಗೂ ನೀರಲ್ಲಿ ಮುಂದುವರೆಯಬೇಕು. ಆಮೇಲೆ ಹಾಗೆಯೇ ಬಂದು ಸಮುದ್ರದ ದಡದಲ್ಲಿ ಮರಳ ರಾಶಿಯಲ್ಲಿ ಹೊರಳಾಡಬೇಕು. ಮರಳಲ್ಲಿ ಗೂಡು ಕಟ್ಟಬೇಕು. ಚಿಪ್ಪು ಆರಿಸಬೇಕು. ಮಕ್ಕಳೊಡನೆ ಸಮುದ್ರ ದಂಡೆಯಲ್ಲಿ ಉದ್ದೋ ಉದ್ದಕ್ಕೆ ಓಡಬೇಕು, ಆಡಬೇಕು. ಎಲ್ಲಾ ಒಟ್ಟಿಗೆ ಕೂತು ಹಾಡಬೇಕು. ತಿಂಡಿ ತಿಂದು, ಕಾಫಿ ಕುಡಿದು ಸಂತೋಷ ಪಡಬೇಕು. ಈ ಆಸೆಯನ್ನು ಅವಳು ಅದೆಷ್ಟೋ ಸಲ ಹೇಳಿಕೊಂಡಿದ್ದಳು. ಮೊದಲ ಮಗು ಹೊಟ್ಟೆಯಲ್ಲಿರುವಾಗಲೇ ಬಯಕೆ ಹೆಚ್ಹಾಗಿತ್ತು. ಎರಡನೆಯ ಮಗು ಆದಮೇಲಂತೂ ಆಗಾಗ ಆಸೆಯನ್ನು ತೋಡಿಕೊಳ್ಳುತ್ತಲೇ ಇದ್ದಳು. ಮಕ್ಕಳಿಂದಲೂ ಹೇಳಿಸಿ ನೋಡಿದಳು. ಅವನು ನಕ್ಕು ಹೇಳುತ್ತಿದ್ದ. “ಒಂದಷ್ಟು ಹಣ ಒಟ್ಟಾಗಬೇಕು, ಸಾಕಷ್ಟು ರಜೆ ಸಿಗಬೇಕು. ಮಕ್ಕಳಿಗೂ ರಜೆ ಇರಬೇಕು. ಎಲ್ಲಾ ಕೂಡಿ ಬಂದವತ್ತು ಸಮುದ್ರ ನೋಡಲು ಹೋಗಿಯೇ ಬಿಡೋಣ.”

ಅವನಿಗೂ ಸಮುದ್ರದ ಬಗ್ಗೆ ಪ್ರೀತಿ ಇತ್ತು. ಎಳೆಯವನಿರುವಾಗ ಒಮ್ಮೆ ಅವನು ಸಮುದ್ರ ನೋಡಲು ಹೋಗಿದ್ದ ತಂದೆಯ ಕೈ ಹಿಡಿದು ಸಮುದ್ರದ ಒಳಕ್ಕೆ ನಡೆದಿದ್ದ. ದೊಡ್ಡದಾದ ತೆರೆಯೊಂದು ಬಂದಾಗ ಅವನ ಕಾಲ ಬುಡದ ಮರಳು ಕೊಚ್ಚಿಕೊಂಡು ಸಮುದ್ರ ತನ್ನನ್ನು ಸೆಳೆಯುವ ಅನುಭವವಾಗಿ ಅವನು ಹೆದರಿಕೆ ಯಿಂದ ’ಅಪ್ಪಾ’ ಎಂದು ಕಿರುಚಿದ್ದ. ಅಪ್ಪ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಇಲ್ಲದಿದ್ದರೆ ತೆರೆ ಅವನನ್ನು ಹೊಡೆದುಕೊಂಡು ಹೋಗುತ್ತಿತ್ತೋ ಏನೋ? ಅಪ್ಪನ ಕೈಗಳ ರಕ್ಷಣೆಯಲ್ಲಿ ಅವನಿಗೆ ಅಪಾರಧೈರ್ಯ ಬಂದಿತ್ತು. ಇನ್ನೊಮ್ಮೆ ಅಂಥದೇ ತೆರೆಬರಬಾರದೇ ಎಂದು ಅವನು ಹಂಬಲಿಸಿದ್ದ. ಸಮುದ್ರದ ನೀರಿನಲ್ಲಿ ಒದ್ದಯಾದ ಅವನ ಅಂಗಿ ಚಡ್ಡಿಗಳ ಉಪ್ಪನ್ನು ತೆಗೆಯಲು ಅವನ ಅಮ್ಮ ತುಂಬಾ ಹೆಣಗಿದ್ದರು. ಇದನ್ನು ಅವನು ತನ್ನ ಮಕ್ಕಳಿಗೆ ಹೇಳಿದ್ದ. ಆ ಬಳಿಕ ಮಕ್ಕಳು ಸಮುದ್ರ ನೋಡುವ ಆಸೆಯನ್ನು ಆಗಾಗ ವ್ಯಕ್ತಪಡಿಸುತ್ತಿದ್ದರು, ಅವನ ಹೆಂಡತಿ ಅದಕ್ಕೆ ಒಗ್ಗರಣೆ ಹಾಕುತ್ತಿದ್ದಳು.

ಕೊನೆಗೂ ಅವನಿಗೆ ರಜೆ ಸಿಕ್ಕಿತ್ತು. ಚೆನ್ನೈಗೆ ಟೂರು ಪ್ರೋಗ್ರಾಂ ನಿಗದಿಪಡಿಸಿ ಕೊಂಡೇ ಬಂದಿದ್ದ. ಅವನು ಟಿಕೆಟ್ ತಂದು ತೋರಿಸಿದಾಗಲೇ ಅವನ ಹೆಂಡತಿಗೆ ನಂಬಿಕೆ ಬಂದದ್ದು. ಮಕ್ಕಳಿಗೆ ಖುಷಿಯೋ ಖುಷಿ. ಕ್ರಿಸ್ ಮಸ್ ರಜೆ ಇದ್ದುದರಿಂದ ಮಕ್ಕಳ ಪಾಠ ತಪ್ಪುವದಿಲ್ಲವೆಂದು ಅವನ ಹೆಂಡತಿ ನೆಮ್ಮದಿ ಪಟ್ಟುಕೊಂಡಿದ್ದಳು. ಕಛೇರಿಯ ಯಾಂತ್ರಿಕ ಬದುಕಿನಿಂದ ಬಿಡುವು ಸಿಗುತ್ತದೆಂದು ಅವನಿಗೆ ಸಂತೋಷವಾಗಿತ್ತು. ಅದಕ್ಕಿಂತಲೂ ಮಿಗಿಲಾಗಿ ಹೆಂಡತಿ ಮಕ್ಕಳ ಎಷ್ಟೋ ವರ್ಷದ ಆಸೆಯನ್ನು ಈಡೇರಿಸಲು ತನಗೆ ಸಾಧ್ಯವಾಗುತ್ತಿದೆಯಲ್ಲವೆಂಬ ಭಾವನೆಯಿಂದ ಆತ ನೆಮ್ಮದಿಯಾಗಿದ್ದ..

ಅಂದು ಬೆಳಗ್ಗಿನ ಹೊತ್ತು ಮರಿನಾ ಬೀಚ್ ನಲ್ಲಿ ಜನವೋಜನ. ಅವನೊ ಹೆಂಡತಿ ಮಕ್ಕಳೊಡನೆ ಬೇಗನೆ ಎದ್ದು ಸಮುದ್ರದಲ್ಲಿ ಆಟವಾಡಲು ಬಂದಿದ್ದ. ಅವನ ಮಕ್ಕಳಿಗಿಂತಲೂ ಎಷ್ಟೋ ಚಿಕ್ಕವರು ಅಲ್ಲಿ ತೆರೆಗಳನ್ನು ಕಂಡು ಗದ್ದಲವೆಬ್ಬಿಸುತ್ತಿದ್ದರು. ಮರಳಲ್ಲಿ ಗೂಡು ಕಟ್ಟುತ್ತಿದ್ದರು. ಕಣ್ಣು ಮುಚ್ಹಾಲೆ ಆಟವಾಡುತ್ತಿದ್ದರು. ಕೆಲವರು ಚೆಂಡನ್ನು ಸಮುದ್ರಕ್ಕೆ ಎಸೆದು ಅದನ್ನು ಹೆಕ್ಕಿ ತರುತ್ತಿದ್ದರು. ಅವರೊಡನೆ ಬಂದಿದ್ದ ಕೆಲವು ನಾಯಿಗಳು ಇದನ್ನೇ ಮಾಡುತ್ತಿದ್ದವು. ಅವನಂತೂ ಹಲವು ದಿನಗಳ ಕನಸು ಈಡೇರಿದ ಸಂತೋಷದಲ್ಲಿ ಪೂರ್ತಿಯಾಗಿ ಮೈ ಮರೆತಿದ್ದ. ಮಕ್ಕಳು ಅಡಿಯಿಂದ ಮುಡಿಯವರೆಗೆ ಒದ್ದೆಯಾಗಿ ಹೋಗಿದ್ದವು. ಆದರೆ ಮುಖದಲ್ಲಿ ಸಂತೋಷವಿತ್ತು. ಇಂತಹ ಗಳಿಗೆ ಜೀವನದಲ್ಲಿ ಹೆಚ್ಚು ಸಿಗುವುದಿಲ್ಲ. ಸಿಕ್ಕಾಗ ಅನುಭವಿಸಬೇಕು ಎಂದುಕೊಂಡು ಆಟದಲ್ಲಿ ತಲ್ಲೀನನಾದ.

ಇದ್ದಕ್ಕಿದ್ದ ಹಾಗೆ ಅಲ್ಲಿದ್ದ ನಾಯಿಗಳು ಸಮುದ್ರದತ್ತ ನೋಡಿ ಬೊಗಳಲು ಆರಂಭ ಮಾಡಿದವು. ಆಮೇಲೆ ಬಾಲವನ್ನು ಕಾಲ ಕೆಳಗೆ ಹಾಕಿ ಓಟಕಿತ್ತವು. ಅದು ಅವನ ಗಮನಕ್ಕೆ ಬಿತ್ತು. ಇವುಗಳಿಗೆ ಏನಾಯ್ತಪ್ಪ ಎಂದು ಅವನಿಗೆ ಆಶ್ಚರ್ಯವಾಯಿತು. ಉದ್ದಕ್ಕೆ ಹರಡಿರುವ ಜಲರಾಶಿಯನ್ನು ಅವನು ದಿಟ್ಟಿಸಿದ. ಗಾಬರಿ ಪಡತಕ್ಕಂತದ್ದು ಏನೂ ಅವನ ಕಣ್ಣಿಗೆ ಬೀಳಲಿಲ್ಲ. ಯಾರೋ ನಾಯಿಗಳಿಗೆ ಕಲ್ಲೆಸೆದಿರಬೇಕೆಂದು ಅಂದುಕೊಂಡು ಅವನು ನೀರಿನ ಆಟದಲ್ಲಿ ತಲ್ಲೀನನಾದ.

ಒಮ್ಮೆಲೇ ಅಸಾಧ್ಯ ಕೋಲಾಹಲ, ಗಲಭೆ ಮತ್ತು ಚೀರಾಟ. ಅದೆಲ್ಲಿದ್ದವೋ ರಕ್ಕಸ ಅಲೆಗಳು ಒಂದರ  ಹಿಂದೆ ಒಂದರಂತೆ ಬಂದು ಅಪ್ಪಳಿಸಿದವು. ಅವನು ಎರಡು ಬಾರಿ ಸಮುದ್ರದ ಒಳಗೆ ಎಳೆಯಲ್ಪಟ್ಟ. ಮತ್ತೆ ಅಲೆಗಳು ಅವನನ್ನು ದಂಡೆಗೆ ತಂದವು. ಅವನು ಗಾಬರಿಯಿಂದ ಅತ್ತಿತ್ತ ನೋಡಿದ. ತನ್ನೊಟ್ಟಿಗೆ ಅಡುತ್ತಿದ್ದ ಮಕ್ಕಳೆಲ್ಲಿ? ಎಲ್ಲವನ್ನು ನೋಡಿ ಸಂತೋಷ ಪಡುತ್ತಿದ್ದ ಹೆಂಡತಿ ಯೆಲ್ಲಿ? ಯಾರೂ ಕಾಣಲಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳಲು ಓಡುತ್ತಿದ್ದರು. ಮತ್ತೆ ರಕ್ಕಸ ಅಲೆಯೊಂದು ಬರುವುದು ಅವನ ಕಣ್ಣಿಗೆ ಬಿತ್ತು. ಈ ಬಾರಿ ತಾನು ಸಾಯುವುದು ಖಂಡಿತವೆಂದು ಹೆದರಿ ಕಂಗಾಲಾಗಿ ವೇಗವಾಗಿ ಸಮುದ್ರಕ್ಕೆ ಬೆನ್ನುಹಾಕಿ ಓಡಿದ. ಆದರೆ, ಅಲೆಯಿಂದ ಪೂರ್ತಿ ರಕ್ಷಸಿಕೊಳ್ಳಲಾಗಲಿಲ್ಲ. ಅವನು ಮೂರ್ಛೆ ತಪ್ಪಿಬಿದ್ದ.

ಎಚ್ಚರವಾದಾಗ ಅವನನ್ನು ಬೆಡ್ಡೊಂದರಲ್ಲಿ ಮಲಗಿಸಲಾಗಿತ್ತು. ಎಲ್ಲಾ ಕಡೆಗಳಲ್ಲಿ ರೋದನದ ಸದ್ದು. ಸುತ್ತ ನೋಡಿದಾಗ ಅದೊಂದು ಆಸ್ಪತ್ರೆಯೆಂದು ಅವನಿಗೆ ಗೊತ್ತಾಯ್ತು. ಅವನು ಮಕ್ಕಳನ್ನು ಮತ್ತು ಹೆಂಡತಿಯನ್ನು ನೆನೆದು ದಡಕ್ಕನೆ ಎದ್ದು ಕೂತ. ಅವನ ಕೈಗೆ ಹಾಕಿದ್ದ ಡ್ರಿಪ್ಸ್ ಸಂಪರ್ಕ ಕಳಚಿಕೊಂಡಿತ್ತು. ತಕ್ಷಣ ಅಲ್ಲೇ ಓಡಾಡುತ್ತಿದ್ದ ಬಿಳಿ ಬಟ್ಟೆಯ ನರ್ಸ್ ಅವನಲ್ಲಿಗೆ ಬಂದು ಅವನನ್ನು ಬಲಾತ್ಕಾರವಾಗಿ ಮಲಗಿಸಿದಳು. ಕೈಗೆ ಡ್ರಿಪ್ಸ್ ಸೂಜಿ ಚುಚ್ಚಿದಳು. ಅವನು ಬೊಬ್ಬಿಟ್ಟ. “ನನ್ನ ಮಕ್ಕಳು…….ನನ್ನ ಮಕ್ಕಳು…….ಎಲ್ಲಿದ್ದಾರೆ ಅವರು.” ಬಿಳಿ ಬಟ್ಟೆಯ ದಾದಿ ಮೌನವಾಗಿರಲು ಸೂಚಿಸಿದಳು. ಅವಳು ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲ.

ಸ್ವಲ್ಪಹೊತ್ತಲ್ಲಿ ಖಾಕಿ ವಸ್ತ್ರದಾರಿ ಇನ್ಸ್ಪೆಕ್ಟರರು ಆಗಮಿಸಿದರು. ಇವನಲ್ಲಿಗೆ ಬಂದು ಇಂಗ್ಲೀಷಲ್ಲಿ ಮಾತನಾಡಿಸಿದರು. ಅವನು ಎಲ್ಲವನ್ನೂ ಹೇಳಿದ. ತನ್ನ ಹೆಂಡತಿ ಮಕ್ಕಳು ಎಲ್ಲಿ ಎಂದು ಕೇಳಿದ.”ಬದುಕಿ ಉಳಿದವರನ್ನು ನಾವು ಈ ಆಸ್ಪತ್ರಿಗೆ ಸೇರಿಸಿದ್ದೇವೆ. ಉಳಿದವರನ್ನು ನಾವು ಹುಡುಕುತ್ತಿದ್ದೇವೆ. ಸಿಕ್ಕವರನ್ನು ಇಲ್ಲಿಗೆ ಕರಕೊಂಡು ಬರುತ್ತೇವೆ. ನಿಮ್ಮ ಅದೃಷ್ಟ ಇದ್ದ ಹಾಗಾಗುತ್ತದೆ.”

ಇನ್ ಸ್ಪೆಕ್ಟರರ ಮಾತು ಕೇಳಿ ಅವನು ಭೂಮಿಗಿಳಿದು ಹೋದ. ಅವನಲ್ಲಿದ್ದ ಅಲ್ಪಸ್ವಲ್ಪ ಆಸೆಯೂ ಬತ್ತಿಹೋಯ್ತು. ಎಷ್ಟು ವರ್ಷದಿಂದ ಸಮುದ್ರ ನೋಡಬೇಕೆಂದು ತಾನು ಬಯಸಿದ್ದೆ. ಅದಕ್ಕಾಗಿ ಎಷ್ಟು ಸಿದ್ಧತೆ ನಡೆಸಿದ್ದೆ. ಮಕ್ಕಳೆಷ್ಟು ಸಮಯದಿಂದ ಆಸೆ ಪಟ್ಟಿದ್ದರು. ಎಲ್ಲವೂ ಸರಿಯಾಗಿ ಕೂಡಿಬಂದಿತ್ತು. ಆದರೆ ಈ ರೀತಿಯ ಅನೂಹ್ಯವಾದ ದುರಂತ ತನ್ನ ಬದುಕಲ್ಲಿ ಕಾಡಬೇಕೆ? ಇನ್ನು ಅವರು ತನಗೆ ಸಿಗದಿದ್ದರೆ ಮುಂದಿನ ಜೀವನ ಹೇಗೆ? ಅವರಿಗೆ ಏನಾಗಿರಬಹುದು? ಸಮುದ್ರದಲ್ಲಿ ಮುಳುಗಿ ಸತ್ತು ಹೋಗಿರಬಹುದೇ? ಆಗ ಉಸಿರುಕಟ್ಟಿ ಒದ್ದಾಡಿ ಎಷ್ಟು ಕಷ್ಟಪಟ್ಟರೋ ಏನೋ? ಅಥವಾ ರಕ್ಕಸ ಅಲೆಗಳು ಎಲ್ಲಿಗೋ ಕೊಂಡು ಹೋಗಿ ಯಾವುದೋ ಊರಿನಲ್ಲಿ ಅವರನ್ನು ಬಿಟ್ಟಿರಬಹುದೇ? ಹಾಗೆ ಬಿಟ್ಟರೆ ಒಂದಲ್ಲ ಒಂದು ದಿನ ಅವರು ಸಿಕ್ಕಿಯೇ ಸಿಗುತ್ತಾರೆ. ಸಮುದ್ರದಲ್ಲಿ ಮುಳುಗಿ ಹೋಗಿದ್ದರೆ ಮತ್ತೆ ಅವರನ್ನು ತಾನು ಕಾಣುವಂತಿಲ್ಲ.

ಅವನ ಕಣ್ಣಾಲಿಗಳು ತುಂಬಿ ಬಂದವು. ಮನಸ್ಸಿನಲ್ಲಿಯೇ ಅವನು ಬಿಕ್ಕಳಿಸಿದ. ಈ ನೋವನ್ನು ಯಾರಲ್ಲಿ ಹಂಚಿಕೊಳ್ಳಲಿ ಎನ್ನುವುದೇ ಅವನಿಗೆ ತೋಚದಾಯ್ತು. ಅತ್ತಿತ್ತ ನೋಡಿದರೆ ಪರಿಚಿತರು ಒಬ್ಬರೂ ಇಲ್ಲ. ಇವರಲ್ಲಿ ಯಾರ್ಯಾರು ತಮ್ಮ ಆಪ್ತರನ್ನು ಕಳಕೊಂಡಿದ್ದಾರೋ? ಇವರು ಯಾವ್ಯಾವ ಊರಿನವರೋ? ಇವರ ನೋವುಗಳಿಗೆ ಯಾರು ಸ್ಪಂದಿಸುತ್ತಾರೋ? ಅವನು ಮತ್ತೊಮ್ಮೆ ಎದ್ದುಕೂತ. ಕಳೆದು ಹೋದ ತನ್ನ ಕುಟುಂಬವನ್ನು ಹುಡುಕಲು ಹೊರಡಲೇ ಎಂದು ಯೋಚಿಸಿದ. ಎಲ್ಲಿದ್ದಳೋ ಅವಳು? ಬಿಳಿ ಬಟ್ಟೆಯ ದಾದಿ ಅವನ ಹತ್ತಿರ ಬಂದು ತಮಿಳಿನಲ್ಲಿ ಏನೋ ಗದರಿದಳು. ಸುಮ್ಮನೆ ಮಲಗಲು ಕೈ ಸನ್ನೆ ಮಾಡಿದಳು. ಅವನು ಹಾಗೆ ಮಲಗಿದ. ಅಲ್ಲೇ ಅವನಿಗೆ ಜೊಂಪು ಹತ್ತಿತ್ತು.

ಎರಡು ದಿನಗಳು ಕಳೆದವು. ಒಂದೇ ರೀತಿಯ ದಿನಚರಿಯಲ್ಲಿ. ಅವನಿಗೆ ದಿನ ಕಳೆಯುವುದೇ ಕಷ್ಟವಾಯಿತು. ಹೊತ್ತು ಹೊತ್ತಿಗೆ ಹೊಟ್ಟೆಗೆ ಆಹಾರ ಸಿಗುತ್ತಿತ್ತು. ಇಷ್ಟವಿಲ್ಲದಿದ್ದರೂ ಬಲವಂತ ಮಾಡಿ ದಾದಿ ಮದ್ದು, ಮಾತ್ರೆ ನುಂಗಿಸುತ್ತಿದ್ದಳು. ಡಾಕ್ಟರರು ಬಂದು ನಾಡಿ ಪರೀಕ್ಷೆ ಮಾಡಿ ಹೋಗುತ್ತಿದ್ದರು. ಸುತ್ತಮುತ್ತ ಆಕ್ರಂದನಗಳು. ಯಾರೂ ಯಾರನ್ನೂ ಸಮಾಧಾನಪಡಿಸಲಾಗದ ಪರಿಸ್ಥಿತಿ.

ಮೂರನೆಯ ದಿನ ಮತ್ತೆ ಇನ್ ಸ್ಪೆಕ್ಟರ್ ಬಂದ. ತಾನು ಎಲ್ಲಾ ಕಡೆ ಹುಡುಕಿ ನೋಡಿದೆ. ಆದರೆ ಇವನ ಹೆಂಡತಿ ಮಕ್ಕಳು ಎಲ್ಲೂ ಸಿಗಲಿಲ್ಲವೆಂದು ಹೇಳಿದ. ಅವನಿಗೆ ಇದ್ದ ಒಂದು ಆಸೆಯೂ ಕಮರಿ ಹೋಯ್ತು. ತಾನು ತನ್ನೂರಿಗೆ ಹೋಗುವುದಾಗಿಯೂ ಅದಕ್ಕೆ ವ್ಯವಸ್ಥೆ ಮಾಡ ಬೇಕಾಗಿಯೂ ಇನ್ ಸ್ಪೆಕ್ಟರರಲ್ಲಿ ಕೇಳಿಕೊಂಡ. ಅವರು ಅವನ ಇಚ್ಛೆಯಿಂತೆ ಅವನನ್ನು ಬಸ್ಸಲ್ಲಿ ಕಳಿಸಿಕೊಟ್ಟರು. ಆ ಬಳಿಕ ಅವನದು ಒಂದೇ ದಿನಚರಿ. ದಿನಾ ಮನೆಯೆದುರು ಕುಳಿತುಕೊಂಡು ರಸ್ತೆಯುದ್ದಕ್ಕೂ ದೃಷ್ಟಿ ಹಾಯಿಸುವುದು. ಮನೆಯನ್ನು ಶುದ್ಧೀಕರಿಸುತ್ತೇನೆಂದು ಕೆಲಸದವಳು ಹೇಳಿದರೂ ನಕಾರಾತ್ಮಕವಾಗಿ ತಲೆಯಾಡಿಸುವುದು. ಕೆಲಸದವಳ ಒತ್ತಾಯಕ್ಕೆ ಊಟ ತಿಂಡಿಯ ಶಾಸ್ತ್ರ ಮಾಡುವುದು.

ಒಂದು ದಿನ ಅವನ ಕಛೇರಿಯ ಸ್ನೇಹಿತರು ಬಂದರು. ಅವನ ರಜೆಗಳೆಲ್ಲ ಮುಗಿದು ಹೋಗಿದ್ದವು. ಇನ್ನು ಮನೆಯಲ್ಲಿ ಕೂತರೆ ಅವನು ಕೆಲಸ ಕಳೆದುಕೊಳ್ಳುವುದು ಖಚಿತವಾಗಿತ್ತು. ಒತ್ತಾಯಕ್ಕೆ ಮಣಿದು ಅವನು ಕೆಲಸಕ್ಕೆ ಹೊರಟ. ಆದರೆ ಕಛೇರಿಯಲ್ಲಿ ಅವನಿಗೆ ಮನಸ್ಸಿಟ್ಟು ಕೆಲಸ ಮಾಡಲಾಗುತ್ತಿರಲಿಲ್ಲ. ಅವನ ಸ್ನೇಹಿತರು ಅವನ ಕೆಲಸಗಳನ್ನು ಮಾಡಬೇಕಾಗಿ ಬರುತ್ತಿತ್ತು. ಆದರೆ ಒತ್ತಾಯಕ್ಕೆ ಮಣಿದು ಅವನು ಮನೆಯನ್ನು ತಾನೇ ಶುಭ್ರವಾಗಿರಿಸತೊಡಗಿದ. ಒಮ್ಮೊಮ್ಮೆ ಸಂಜೆ ಬೆಟ್ಟಕ್ಕೆ ವಾಕಿಂಗ್ ಹೋಗುತ್ತಿದ್ದ. ದಿಗಂತದಾಚಿಗೆ ಶೂನ್ಯ ನೋಟವನ್ನು ಬೀರುತ್ತಾ ಗಂಟಿಗಟ್ಟಲೆ ಕೂತುಬಿಡುತ್ತಿದ್ದ.

ಅಂದು ರವಿವಾರ. ಅವನು ಮನೆಯಿಡೀ ಗುಡಿಸಿ ಶುದ್ಧೀಕರಿಸಿದ. ಬಟ್ಟೆಗಳನ್ನು ಒಗೆದು ಒಣಗಿಸಿ ಒಣಗಿದ ಬಟ್ಟೆಗಳಿಗೆ ತಾನೇ ಇಸ್ತ್ರಿ ಹಾಕಿದ. ತನಗೆ ಇಷ್ಟವಾದ ತಿಂಡಿಯನ್ನು ಕೆಲಸದವಳಿಂದ ಮಾಡಿಸಿಕೊಂಡ. ಇನ್ನೂ ಈ ಊರಲ್ಲಿದ್ದರೆ ನೆನಪುಗಳಿಂದ ಮುಕ್ತಿ ಸಿಗಲು ಸಾಧ್ಯವಿಲ್ಲ ಎಂದುಕೊಂಡು ಆಸ್ತಿಯನ್ನೂ, ಮನೆಯನ್ನೂ ಯಾರಿಗಾದರೂ ಮಾರಾಟ ಮಾಡಿ ಬೇರೆಲ್ಲಿಗಾದರೂ ವರ್ಗಾವಣಿ ಮಾಡಿಸಿಕೊಳ್ಳಬೇಕೆಂದು ತೀರ್ಮಾನ ಮಾಡಿದ. ಮನಸ್ಸಿನ ಹೊರೆ ಕಳಚಿದಂತಾಯ್ತು..

ಕೆಲಸದವಳು ಹೋದ ಮೇಲೆ ಯಾರೋ ಬಾಗಿಲು ಬಡಿದ ಸದ್ದಾಯಿತು. ಯಾರಿರಬಹುದು ಎಂದುಕೊಂಡು ಹೊರಗೆ ಬಂದು ನೋಡಿದ. ಒಬ್ಬಾಕೆ ಹೆಣ್ಣು ಇಬ್ಬರು ಮಕ್ಕಳೊಡನೆ ನಿಂತಿದ್ದಳು. ತನ್ನ ಹೆಂಡತಿಯೇ ಇರಬೇಕೆಂದು ಸಂಭ್ರಮದಿಂದ ಕಣ್ಣರಳಸಿ ನೋಡಿದ. ಹೆಂಡತಿಯ ಪ್ರಾಯದವಳು. ಮಕ್ಕಳೂ ಅದೇ ಹರೆಯದವರು. ಆದರೆ ಅವನ ಹೆಂಡತಿಯಲ್ಲ. ಅವನ ಮಕ್ಕಳಲ್ಲ. ಅವನಿಗ ನಿರಾಶೆಯಾಯಿತು. ಅವಳು ಅಂಗಲಾಚಿ ಹೇಳಿದಳು. “ಅಯ್ಯಾ, ರಕ್ಕಸ ತೆರೆಗೆ ಸಿಕ್ಕಿ ಗಂಡನನ್ನು ಕಳೆದುಕೊಂಡವಳು ನಾನು. ನಮ್ಮ ಮನೆ, ಇದ್ದ ಸ್ವಲ್ಪ ಆಸ್ತಿ ಎಲ್ಲವನ್ನು ಸಮುದ್ರ ನುಂಗಿ ಹಾಕಿತು. ನನಗೆ ಉದ್ಯೋಗವಿಲ್ಲ. ಮಕ್ಕಳು ಸಣ್ಣವರು. ಎಲ್ಲಾದರೂ ಒಂದು ಕೆಲಸ ಸಿಕ್ಕಿದರೆ ಹೇಗಾದರೂ ಬದುಕಬಹುದೆಂದು ಮಕ್ಕಳಿಗಾಗಿ ಜೀವ ಹಿಡಿದಿದ್ದೇನೆ. ಈ ಊರಲ್ಲಿ ಒಂದು ಕೆಲಸ ಸಿಗುವವರೆಗೆ ನಿಮ್ಮ ಮನೆಯಲ್ಲಿ ದಯವಿಟ್ಟು ಆಶ್ರಯಕೊಡಬೇಕು.” ಹಾಗೆ ಹೇಳಿದವಳೆ ಕುಸಿದು ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಳು.

ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತಾನೇ ಊರುಬಿಟ್ಟು ಹೋಗಬೇಕೆಂದಿದ್ದವನಿಗೆ ಇದೊಂದು ಘಟನೆ ಯಿಂದಾಗಿ ತುಂಬಾ ಕಿರಿಕಿರಿ ಉಂಟಾಯಿತು. ಕಾಣೆಯಾದ ಹೆಂಡತಿ ಮಕ್ಕಳ ನೆನಪು ತುಂಬಾ ಕಾಡಿತು. ಇವರು ನಿಜವಾಗಿಯೂ ಸಂಕಷ್ಟಕ್ಕೆ ಒಳಗಾದವರೇ ಅಥವಾ ಮೋಸಗಾರರೇ? ಎಂಬ ಸಂದೇಹ ಕಾಡಿತು. ಮಕ್ಕಳನ್ನು ಪರಿಶೀಲನೆಯ ದೃಷ್ಟಿಯಿಂದ ನೋಡಿದ. ಆ ಹೆಂಗಸನ್ನು ಪರಿಶೀಲಿಸಿದ. ಮುಖಭಾವ ವೀಕ್ಷಿಸಿದಾಗ ಸುಳ್ಳು ಹೇಳಿರಲಾರಳು ಎಂದು ಖಚಿತವಾಯ್ತು. ಮನೆಯ ಹಿಂಬದಿಯ ಜೌಟು ಹೌಸಿಗೆ ಅವರನ್ನು ಕರೆದುಕೊಂಡು ಬಂದ. ಬೀಗ ತೆಗೆದು ಮನೆಯನ್ನು ಅವರಿಗೆ ಬಿಟ್ಟುಕೊಟ್ಟ. “ಒಳಗೆ ಅಕ್ಕಿಯಿದೆ, ಬೇಳೆಯಿದೆ, ತರ್ಕಾರಿ ತಂದುಕೊಡುತ್ತೇನೆ. ನಿಮಗೆ ಬೇಕಾದ್ದನ್ನು ನೀವೇ ಬೇಯಿಸಿಕೊಳ್ಳಿ.” ಎಂದು ಹೇಳಿದ.

ಮರುದಿನ ಕಛೇರಿಯಲ್ಲಿ ಈ ವಿಷಯವನ್ನು ಸಹೋದ್ಯೋಗಿಗಳಿಗೆ ತಿಳಿಸಿದ. ಅವಳಿಗೆಲ್ಲಾದರೂ ಕೆಲಸ ದೊರಕಿಸಿ ಕೊಡಲು ಸಾಧ್ಯವೇ ಎಂದು ಕೇಳಿದ. ತನ್ನ ಬಾಸನ್ನು ಈ ಬಗ್ಗೆ ವಿಚಾರಿಸಿದ. ಯಾರಿಂದಲೂ ಸಕಾರಾತ್ಮಕವಾದ ಉತ್ತರ ಬರಲಿಲ್ಲ. ಹಾಳಾಗಿ ಹೋಗಲಿ. ತನಗೇಕೆ ಬೇಕು ಇಲ್ಲದ ಉಸಾಬರಿ ಎಂದು ಕೊಳ್ಳುತ್ತಾ ಮನೆಗೆ ಬಂದ.

ಅವಳ ಮಕ್ಕಳು ಅಂಗಳದಲ್ಲಿ ಓಡಾಡುತ್ತಿದ್ದವು. ಅವಳು ಹೊಗಿಡಗಳ ಮಧ್ಯದ ಕಳೆಯನ್ನು ಕೀಳುತ್ತಿದ್ದಳು. ಒಂದು ಕ್ಷಣ ಅವನು ವಿಚಲಿತನಾದ. ತನ್ನ ಹೆಂಡತಿ ಹೀಗೆ ಮಾಡುತ್ತಿದ್ದಳು! ತನ್ನ ಮಕ್ಕಳು ಹೀಗೆ ಆಡುತ್ತಿದ್ದರು! ಎಲ್ಲಿದ್ದಾರೋ? ಈ ಮಕ್ಕಳಿಗೆ ಯಾವ ಭವಿಷ್ಯವಿದೆ? ಈ ಹೆಣ್ಣಿಗೆ ಏನು ಕೆಲಸ ಸಿಕ್ಕೀತು? ಸಿಕ್ಕಿದರೂ ಎಷ್ಟು ಸಂಬಳ ದೊರತೀತು? ಹಾಳಾದ ಆ ರಕ್ಕಸ ಅಲೆಗಳು ಒಂದು ಕ್ಷಣದಲ್ಲಿ ಎಷ್ಟು ಜನರ ಬದುಕನ್ನು ನಿರ್ನಾಮ ಮಾಡಿದವೋ?

ಕೆಲಸದವಳು ಮನೆಯ ಒಳಗಡೆ ಏನೋ ಕೆಲಸ ಮಾಡುತ್ತಿದ್ದಳು. ಇವನನ್ನು ನೋಡಿ ಕಾಫಿ ಸಿದ್ಧಪಡಿಸಿ ತೆಗೆದುಕೊಂಡು ಬಂದಳು. ಇವನು ಕುಡಿಯುತ್ತಿರುವಂತೆ ಅವಳು ’ಅಯ್ಯಾ’ ಎಂದು ರಾಗ ಎಳೆದಳು. ಇವನು ಏನು? ಎಂಬಂತೆ ನೋಡಿದ. “ತಪ್ಪು ತಿಳಿಯದಿದ್ದರೆ ಒಂದು ಮಾತು. ಈ ಮನೆಗೆ ನಾನು ಕೆಲಸದವಳಾಗಿ ಇರುವ ಅಗತ್ಯ ಇನ್ನಿಲ್ಲವೆಂದು ನನಗೆ ಕಾಣುತ್ತದೆ.”

ಅವನು ಆಶ್ಚರ್ಯದಿಂದ ಅವಳನ್ನು ದಿಟ್ಟಿಸಿದ. ಅವಳು ಮುಂದುವರೆಸಿದಳು.” ಆ ಅಮ್ಮ ಬಂದಮೇಲೆ ಇಲ್ಲಿಗೊಂದು ಹೊಸ ಕಳೆ ಬಂದಿದೆ. ನೀವು ಅಮ್ಮನನ್ನು ಕಳಕೊಂಡಿದ್ದೀರಿ. ಆ ಅಮ್ಮ ಯಜಮಾನರನ್ನು ಕಳಕೊಂಡಿದ್ದಾರೆ. ನೀವಿಬ್ಬರು ಹೇಗೋ ಬದುಕ ಬಲ್ಲಿರಿ. ಆದರೆ ಆ ಮಕ್ಕಳಿಗೆ ಅಪ್ಪ ಎಲ್ಲಿ ದೊರೆಯಬೇಕು, ಅಯ್ಯಾ? ನೀವೇ ಅವರಿಗೆ ಅಪ್ಪ ಆಗಬೇಕು. ನಾನು ಮಾಡುವ ಕೆಲಸವನ್ನು ಆ ಅಮ್ಮ ಮಾಡಲಿ. ನಾನು ಕೆಲಸದವಳು ಏನೋ ಹೇಳಿದ್ದೇನೆಂದು ತಪ್ಪು ತಿಳಿಯಬೇಡಿ. ದಯವಿಟ್ಟು ಯೋಚಿಸಿ ನೋಡಿ.”

ಕೆಲಸದವಳು ಹೊರಟು ಹೋದಳು. ಅವನು ಅರ್ಧಗಂಟಿ ಹಾಗೆಯೇ ಕೂತಿದ್ದ. ಮತ್ತೆ ಏನೋ ನಿರ್ಧಾರಕ್ಕೆ ಬಂದವನಂತೆ ಎದ್ದ. ಹೊರಗಡೆ ಆಡುತ್ತಿದ್ದ ಮಕ್ಕಳ ಚಪ್ಪಾಳೆ ತಟ್ಟಿ ಕರೆದ. “ಇನ್ನು ಮುಂದೆ ನೀವು ಮತ್ತು ನಿಮ್ಮ ಅಮ್ಮ ಈ ಮನೆಯಲ್ಲಿಯೇ ಇರಬೇಕು. ಅಲ್ಲಿರುವ ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಇಲ್ಲಿಗೆ ಬರಲು ಅಮ್ಮನಿಗೆ ಹೇಳಿ.”

ಮಕ್ಕಳು ಕುಣಿಯುತ್ತಾ ಹೊರಗೆ ಓಡಿದವು. ಅವನಿಗೆ ತನ್ನ ಬಾಳಿಗೆ ಹೊಸ ಅರ್ಥ ಮೂಡಿದೆಯೆಂದು ಮೊದಲ ಬಾರಿಗೆ ಅನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ತಬ್ಕೊಂಡ್ ಕೊಡೋ ಮುತ್ತು
Next post ನಮ್ಮ ಜಗತ್ತಿನ ಕಣ್ಮಣಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys