ಚಿತ್ರ: ಆಡಮ್ ಹಿಲ್

ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ, ಸಹಜ ಶಿವಯೋಗ ಶಿಬಿರ, ವಿಶೇಷ ಪೂಜೆ ಪ್ರಾರ್ಥನೆ, ಭಜನೆಗಳ ಗದ್ದಲ ಬೇರೆ, ದಿನವೂ ಇದೆಲ್ಲಾ ಇದ್ದದ್ದೇ ಆದರೂ ಈವತ್ತು ಬಸವ ಜಯಂತಿ. ಯಾವುದನ್ನೂ ಬಿಡುವಂತಿಲ್ಲ…. ಕಾರ್ಯಕ್ರಮಗಳಿಗೆ ಮರಿಯನ್ನು ಕಳಿಸಿದರೆ ಭಕ್ತರಿಗೆ ತೃಪ್ತಿಯಿಲ್ಲ. ತಾವು ನೀಡುವ ಕಾಣಿಕೆಯಲ್ಲೇ ಖೋತ ಮಾಡಿಬಿಡುತ್ತಾರೆ. ರಜೆಯಾದರೂ ಮಠದ ಶಿಕ್ಷಣ ಸಂಸ್ಥೆಗಳಿಗೆ ಬೆಳಿಗ್ಗೆಯೇ ಹೋಗಿ ‘ಬಸವ ಧ್ವಜಾರೋಹಣ’ ಮಾಡಿ ಬಂದಾಗಿದೆ. ಆಸೀನರಾಗುವ ಮೊದಲೇ ಭಕ್ತರ ತಂಡ ಒಂದು ಬಂದಿತ್ತು. “ಬುದ್ಧಿ ಹಳ್ಳಿನಾಗೆ ನೂರಾ ಒಂದು ಎತ್ತುಗಳ ಜೋಡಿಯ ಮರವಣಿಗೆ ಮಾಡ್ತೀವಿ. ಹಂಗೆ ಬಸವಣ್ಣನ ಫೋಟೋ ಪಲ್ಲಕ್ಕಿನಾಗಿಕ್ಕಿ ಉತ್ಸವ ಮಾಡೋರಾದೀವ್ರಿ… ತಾವೇ ದಯಮಾಡಿಸಿ ಉದ್ಘಾಟಿಸ ಬೇಕ್ರಿ ಬುದ್ಧಿ” ಅಂತ ಕಾಡಿ ಬೇಡಿ ಮೂಡ್ ಕರಾಬ್ ಮಾಡಿ ಬಿಟ್ಟಿತು. “ಬಸವಣ್ಣ ಅಂದ್ರೆ ನಂದಿ ಅವತಾರ ಅಂತ ಯಾಕ್ ತಿಳಿದಿರ್ರಲೇ. ಆತ ದನ ಅಲ್ರಪಾ, ಶರಣ ಅದಾನೆ. ಅವನಿಕ್ಯಾಕಯ್ಯ ಪಲ್ಲಕ್ಕಿ ಉತ್ಸವ?” ಗದರಿದ್ದರು ಸ್ವಾಮೀಜಿ. “ಏನೋ ಬಿಡ್ರಿ ಅಜ್ಜಾರೆ, ಅನಾದಿ ಕಾಲದಿಂದ ನಡ್ಕೊಂಬಂದ ಪದ್ಧತಿ ಐತಿ. ನಿಮ್ಮನ್ನೇ ಪಲ್ಲಕ್ಕಿನಾಗೆ ಕುಂಡ್ರಿಸಿ ಮೆರವಣಿಗೆ ಮಾಡಿ ನಾವು ಖುಷಿಪಡಲ್ವೆ… ಇದೂ ಹಂಗೆಯಾ… ಬರಂಗಿಲ್ಲ ಆನ್ನಬ್ಯಾಡ್ರಿ ಮತ್ತ” ಎಂದೊಬ್ಬ ಬೆಕ್ಕಿ ಮಾತೂ ಆಡಿದ್ದ. ಮಠದ ಜೊತೆ ಹಳೆಯ ಸಂಬಂಧ ಇಟ್ಟುಕೊಂಡ ಮುದುಕರದ್ದು ಒಂದಿಷ್ಟು ತಲೆಹರಟೆ, ಸ್ಥಾಮೀಜಿಗಳೊಂದಿಗೆ ತಾವೇ ಸಲಿಗೆ ತೆಗೆದುಕೂಳ್ಳುವಷ್ಟು ಸಲೀಸು ಜನ ಇವರು. ಇದೆಲ್ಲಾ ಹಿರಿಯ ಲಿಂಗೈಕ್ಯ ಜಗದ್ದುರುಗಳು ಕೊಟ್ಟಸಲಿಗೆ ಎಂದವರಿಗೆ ಕಸಿವಿಸಿ. “ಈವತ್ತು ಬೆಳಗ್ಗಿನಿಂದ ಭಾರಿ ಕಾರ್ಯಕ್ರಮಗಳಿವೆ. ಸಂಜೆ ಮುಂದ ಮಿನಿಸ್ಟರ ಜೋಡಿ ಫಂಕ್ಷನ್ ಅದೆ. ಮರಿ ಕರ್ಕೊಂಡು ಹೋಗ್ರಿ. ಅವರು ಕೂಡ ಚೆಂದ ಮಾತಾಡ್ತರಪ್ಪಾ” ಅಂತ ತಪ್ಪಿಸಿಕೊಳ್ಳಲು ನೋಡಿದರು. “ಆಯ್! ನಮ್ಮ ಜನ ಒಪ್ಪೋದಿಲ್ ಬಿಡ್ರಪಾ. ಅದ್ರಾಗೂ ನಮ್ಮ ಜಾನಾಂಗದವರೆ ರಗಡ ಇರೋ ಹಳ್ಳಿ ಅಪ್ಪಾರೆ. ಅಜಮಾಷು ಇಪ್ಪತ್ತೈದು ಸಾವಿರ ಪಾದ ಕಾಣಿಕೆ ಕೂಡೋರ್ ಅದಾರ್ರಿ ಭಕ್ತಾದಿಗಳು.” ಮತ್ತೊಬ್ಬ ಖಾದಿ ಜುಬ್ಬದವ ಅವಲತುಕೊಂಡ.

ಸ್ವಾಮೀಜಿಗಳ ಮನಸ್ಸು ಡೋಲಾಯಮಾನವಾಗೋದೇ ರೊಕ್ಕದ ವಿಷಯ ಬಂದಾಗ. ಹೆಂಡರಿಲ್ಲ ಮಕ್ಕಳಿಲ್ಲ ನಮಗ್ಯಾತಕ್ಕೆ ಬೇಕು ರೊಕ್ಕ ಅಂತ ದೇಹ ಬಳಲಿದಾಗ ಆನ್ನಿಸೋದಿದೆ. ಹಾಗಂತ ಬಿಟ್ಟಿದ್ದರೆ ಸ್ಕೂಲು, ಕಾಲೇಜು, ಡೆಂಟಲ್ಲು, ಎಂಜಿನಿಯರಿಂಗ್ ಕಟ್ಟಡಗಳು ತಲೆ ಎತ್ತುತ್ತಿರಲಿಲ್ಲ. ವರ್ಷಕ್ಕೆ ಅವುಗಳಿಂದಲೇ ಕೋಟಿಗಟ್ಟಲೆ ಆದಾಯ ಬರುತ್ತಿರಲಿಲ್ಲ. ಆಗಾಗ ನೂರಾರು ಜೋಡಿ ಸಾಮೂಹಿಕ ವಿವಾಹ ಮಾಡಿ, ಆಗಮಿಸುವ ಸಾವಿರಾರು ಮಂದಿಗೆ ದಾಸೋಹ ನಡೆಸಲಾಗುತ್ತಿರಲಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಬಡವರ ಲಗ್ನ ಮಾಡಿಸ್ತಾರೆ. ಸಾಕ್ಷಾತ್ ಬಸಣವಣ್ಣ ನನ್ನಪ್ಪಾ” ಅನ್ನೋ ಪ್ರಶಂಸೆ ಪತ್ರಿಕೆಗಳಲ್ಲಿ ಫೋಟೋ ಸಮೇತ ವರದಿಯಾಗುತ್ತಿರಲಿಲ್ಲ. ಸಿನಿಮಾ ನಟರು ರಾಜಕಾರಣಿಗಳಂತೆ ಸ್ವಾಮೀಜಿಗಳಿಗೂ ಈವತ್ತು ಪ್ರಚಾರ ಬೇಕು. ಹಿರಿಯ ಸ್ವಾಮೀಜಿ ಹಂಗೆ ವರ್ಷಕ್ಕೊಮ್ಮೆ ಪಲ್ಲಕ್ಕಿ ಉತ್ಸವ ಮಾಡಿಸಿಕೊಂಡು ತೆಪ್ಪಗೆ ಕೂತಿದ್ದರೆ ಮಠ ಶ್ರೀಮಂತವಾಗುತ್ತಿರಲಿಲ. “ಫಾರಿನ್‍ಗೆ ಹೋಗಿ ಬರೋ ಹುಚ್ಚು ನಮ್ಮ ಬುಧಿಯೋರ್ಗೆ ಜಾಸ್ತಿ ಆಗೈತೆ” ಅನ್ನೋರೇ, “ನಮ್ಮ ಸ್ವಾಮೀಜಿ ಯಾರ್ಗೇನ್ ಕಮ್ಮೀನ್ರಲೆ. ನೆನಸ್ಕೊಂಡ್ರೆ ಫಾರಿನ್ಗೆ ಹೊಂಟೇ ಬಿಡ್ತಾರೆ” ಅನ್ನೋ ಹೆಮ್ಮೆಯ ಮಾತುಗಳನ್ನು ಸ್ವಾಮೀಜಿ ಕೇಳಿಸಿಕೊಂಡಿದ್ದಾರೆ. ಫಾರಿನ್ಗೆ ಧರ್ಮ ಪ್ರಚಾರಕ್ಕೆ ಹೊಂಟರೆ ಕಾಣಿಕೆ ಕೊಡೋರು ಬೇರೆ. ಫಾರಿನ್ನಲ್ಲಿರೋ ಭಕ್ತರಂತೂ ಅಪರೂಪಕ್ಕೊಮ್ಮೆ ದಯಮಾಡಿಸುವ ಸ್ವಾಮೀಜಿಗಳಿಗೆ ಡಾಲರ್ ಲೆಕ್ಕದಲಿ ಹಣ ಮಡಗುತ್ತಾರೆ. ಸ್ವಾಮೀಜಿಗಳಿಗೆ ನಗು ಬರುತ್ತದೆ. ರಾಜಕಾರಣಿ, ಸಿನಿಮಾದೋರು, ವ್ಯಾಪಾರಸ್ಥರಂಗೆ ಬಂಡವಾಳ ಹಾಕಿ ಕಳೆದುಕೊಳ್ಳುವ ಭಯವಿಲ್ಲ ಸೀಟು ಗ್ಲಾಮರ್ ಹೋದಿತೆಂಬ ಅಳುಕಿಲ್ಲ. ಒಮ್ಮೆ ಕಾವಿ ತೊಟ್ಟು ಪೀಠ ಏರಿದರಾತು ಸಾವಿಗಲ್ಲದೆ ತಮ್ಮನ್ನು ಮುಟ್ಟುವ ಧೈರ್ಯ ಮತ್ತಾರಿಗಿದೆ?

ಹಲವು ಗಿಮಿಕ್ ಗಳನ್ನು ಮಾಡದೆ ಸ್ವಾಮೀಜಿಗಳೂ ಇಂದು ಉಳಿಯುವಂತಿಲ್ಲ. ಪ್ರಗತಿಪರರೆಂಬ ಸೋಗು ಹಾಕಲೇಬೇಕು. ವೈಚಾರಿಕತೆಯಲ್ಲಿ ಬುದ್ಧಿ ಜೀವಿಗಳ ಬಾಯಿ ಬಡಿಯಬೇಕು. ದಲಿತರೆಂದರೆ ಪಂಚಪ್ರಾಣವೆಂದು ಸಾಬೀತು ಮಾಡಬೇಕು, ಮಾಡುತ್ತಾರೆ ಕೂಡ. ದಲಿತರನ್ನು ಜೊತೆಗೆ ಕುಂಡ್ರಿಸಿಕೊಂಡು ವಿಶೇಷ ದಿನಗಳಲ್ಲಿ ಸ್ವಾಮೀಜಿ ಉಣ್ಣುವುದನ್ನು ನೋಡುವಾಗ ಜನಾಂಗದವರಿಗೆ ಇರಿಸು ಮುರಿಸು. “ಬಿಡ್ರಿ ಮಠದಾಗೆ ಸ್ವಾಮೀಜಿ ಏನಾರ ಮಾಡ್ಕ್ಯಳ್ಳಿ ಮನೆ ಹೆಂಡ್ರು ಮಕ್ರಳು ಇರೋ ನಾವ್ ಮಾಡಕಾಗುತ್ತಾ” ಎಂದವರವರೇ ಸಮಾಧಾನ ಪಟ್ಟುಕೊಂಡಿದ್ದಾರೆ. ದೇವಸ್ಥಾನ ಕಟ್ಟಿ ಕರೆದರೆ ಸ್ವಾಮೀಜಿ ಬೈತಾರೆ ಅಂತಲೂ ಬೇಸರಿಕೆ ಐತೆ. “ನೋಡ್ರಲೆ ಬಸವಣ್ಣ ಕಾವಿ, ತೊಡಲಿಲ್ಲ ಮಠ ಕಟ್ಟಲಿಲ್ಲ, ಆತನ್ನ ಹೋರಿ ಮಾಡಿ ಕುಂಡ್ರಿಸಿ ಯಾಕ್ರಲೇ ಗುಡಿ ಕಡ್ತೀರ? ನಮ್ಮದು ಗುಡಿ ಸಂಸ್ಕೃತಿ ಅಲ್ರಪ್ಪಾ” ಅಂತ ಗುಡುಗುತ್ತಾರೆ. ಪಾದ ಪೂಜೆ ಪಾದಗಾಣಿಕೆ ಮಾತು ಬಂದಾಗ ಹೊಂಟು ನಿಂತು ಬಿಡುತ್ತಾರೆ. ಈ ಬಗ್ಗೆ ಪೇಪರಿನೋರು ಹಲವೊಮ್ಮೆ ಟೀಕಿಸಿ ಬರೆಯೋದುಂಟು. “ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯಾ ಬಡವನು” ಅಂತ ಬಸವಣ್ಣ ಅಂದಿದ್ದು ‘ಇರೋರು ಶಿವಾಲಯ ಮಾಡ್ಕೊಳ್ಳಿ ಅಂತ ಅರ್ಥವೇ ಹೊರತು ದೇವಾಲಯವೇ ಕಟ್ಟಬ್ಯಾಡ್ರಿ ಅಂತಲ್ಲ’ ಎಂದು ಪತ್ರಿಕೆಗಳವರಿಗೆ ಉಲ್ಟಾ ಒಡೆವ ಜಾಣತನ ತೋರುತ್ತಾರೆ. ಪತ್ರಿಕೆಗಳ ಟೀಕೆಗೆ ಅಂಜುವುದಿಲ್ಲ. ಫೇಮಸ್ ಆಗಿದ್ದರ ರುಜುವಾತು ಅಂತವರಿಗೆ ಮನವರಿಕೆಯಾಗಿದೆ. ಪತ್ರಿಕೆಯವರನ್ನು ಕೂರಿಸಿಕೊಂಡು ಜಾತ್ಯಾತೀತತೆ ಸರ್ವಸಮಾನತೆ ಮೂಢ ನಂಬಿಕೆಗಳ ಬಗ್ಗೆ ಆಗಾಗ ಚಿಂತನ ಮಂಥನ ನಡೆಸುವ ಸ್ವಾಮೀಜಿ, ಅವರನ್ನೆಂದೂ ಬರಿಗೈಲಿ ಕಳಿಸದಷ್ಟು ಉದಾರಿ. ವರ್ಷಕ್ಕೊಮ್ಮೆ ನಡೆಸುವ ಸಪ್ತ ದಿನಗಳ ಉತ್ಸವಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳನ್ನು ಕರೆಸಿ ತಮ್ಮ ವಜನ್ ಎಷ್ಟೆಂದು ಇತರ ಸ್ವಾಮೀಜಿಗಳಿಗೆ ಮೌನ ಸವಾಲ್ ಹಾಕುತ್ತಾರೆ. ಆ ಸಮಯದಲ್ಲೇ ಸಿರಿವಂತ ಗಂಡಹೆಂಡಿರನ್ನು ಕರೆಸಿ ಸನ್ಮಾನ ಮಾಡಿದರೆ, ಅವರಿಗೂ ಧನ್ಯತಾ ಭಾವ. “ಧರ್ಮ ಪರ್ವತ” ಬಿರುದು ನೀಡಿದಾಗ ಉತ್ಸವದ ಖರ್ಚಿಗೆ ಅವರೇ ಮುಂದಾಗುತ್ತಾರೆ. ಇನ್ನು ಟೀಕಿಸುವ ಪತ್ರಿಕೆಗಳ ಸಂಪಾದಕರನ್ನು ಹಿಡಿದು ತರಿಸಿ ರೇಷ್ಮೆ ಶಾಲು, ತಲೆಗೆ ಮೈಸೂರು ಪೇಟ ಇಕ್ಕಿಬಿಟ್ಟು ‘ಪತ್ರಿಕಾ ಭಾಸ್ಕರ’ ಅಂತ ಬಿರುದು ಬಾವಲಿ ನೀಡುಬಿಟ್ಟು ಹಂಗಿನಲ್ಲಿ ಕಟ್ಟಿಹಾಕಿ ಬಿಡುವ ಶಾಣ್ಯತನ ಸ್ವಾಮೀಜಿಗಳಿಗೆ ರಕ್ತಗತವಾಗಿಬಿಟ್ಟಿದೆ. ಸಾಹಿತಿಗಳನ್ನು ನಾಟಕ ಕಲಾವಿದರನ್ನು ಕರಸಿ ಅವರ ತೇಪೆ ಅಂಗಿಯ ಮೇಲೆ ಶಾಲು ಹೊದಿಸಿ ಬಿಟ್ಟರೆ ರಂಗ ಪ್ರೇಮಿ, ಸಾಹಿತ್ಯ ಪ್ರೇಮಿ ಎಂಬ ಪುಕ್ಕಟ್ಟೆ ಪ್ರಚಾರ ಲಭ್ಯ.

ಇಷ್ಟೆಲ್ಲಾ ಮಾಡಿದರೂ ಮಠಕ್ಕೆ ಮೆಡಿಕಲ್ ಕಾಲೇಜ್ ಒಂದನ್ನು ಕರುಣಿಸದಿರುವ ಸರ್ಕಾರದ ಮೇಲೆ ಕೆಂಡಾಮಂಡಲ ಕೋಪವಿದೆ. ಅದಕ್ಕೆ ಈಸಲ ವಿರೋಧ ಪಕ್ಷದ ನಾಯಕರನ್ನು ಕರೆಸಿ ಬೆಳ್ಳಿ ಕಿರೀಟ ತೊಡಿಸಿ, ಕೈಗೆ ಗದೆ ಕೊಟ್ಟು ಸನ್ಮಾನಿಸುವುದು ಯೋಜನೆ ಹಾಕಿಕೊಂಡಿದ್ದಾರೆ. ಹೆಲಿಕಾಪ್ಟರ್ ಕೊಡುವಂತಹ ಫಾರಿನ್ ಭಕ್ತರನ್ನು ಸಂಮೋಹನಗೊಳಿಸುವ ಸ್ಕೆಚ್ ಸಿದ್ಧಪಡಿಸಿಕೊಂಡಿದ್ದಾರೆ. ಪೈಪೋಟಿ ಸ್ವಾಮೀಜಿಗಳನ್ನು ಬಿಟ್ಟಿಲ್ಲವಲ್ಲ ಎಂದು ಒಳಗೇ ಲಜ್ಜೆ ಪಡುತ್ತಾರೆ.

“ಅಲ್ಲ ಸ್ವಾಮೀಜಿ, ಭ್ರಷ್ಟ ರಾಜಕಾರಣಿಗಳ ಹತ್ತಿರ ತಾವು ಕಾಣಿಕೆ ತಗೊಳ್ಳೋದು ಸರಿಯೇ?” ಅಂತ ಸಾಹಿತಿಯೊಬ್ಬ ಸಭೆಯಲ್ಲೇ ಕೆಣಕಿದ್ದ. ಸ್ವಾಮೀಜಿಗಳು ಅರಿಷಡ್ವರ್ಗಗಳನ್ನು ಗೆದ್ದವರು ಮುನಿಯಲಿಲ್ಲ. “ನೋಡ್ರಪಾ ಸಾಹಿತಿಗುಳೆ, ಭ್ರಷ್ಟ ಅಂತ ದೂರ ಇಟ್ಟರೆ ಕಡು ಭ್ರಷ್ಟರಾಗುತ್ತಾನೆ. ಕಾಣಿಕೆ ತೊಗೊಳ್ದೆ ಹೋದ್ರೆ ಮತ್ತೆ ಆ ರೊಕ್ಕ ದುರಾಚಾರಕ್ಕೆ ವಿನಿಯೋಗವಾಯ್ತದೆ. ಅದನ್ನು ಪಡ್ಕೊಂಡ ನಾವು ಸದ್ವಿನಿಯೋಗ ಮಾಡ್ತೀವಿ ಇದೆ ಸಮಾಜವಾದ ಅಲ್ವೇನ್ರಿ?” ಸಾಹಿತಿಗೇ ಮರು ಪ್ರಶ್ನೆ ಹಾಕಿದ್ದರು.

ಸ್ವಾಮೀಜಿಗಳನ್ನು ಎದುರು ಹಾಕಿಕೊಳ್ಳುವ ಬದಲು ನಾಲ್ಕು ಒಳ್ಳೆ ಮಾತನಾಡಿದರೆ, ಲೇಖನ ಬರೆದವನ ಮಗನಿಗೆ ಕಾಲೇಜಲ್ಲಿ ಸೀಟೋ, ಹೆಂಡತಿಗೆ ಮೇಡಂ ಪೋಸ್ಟೋ ಸಿಗುವಾಗ ಅವರನ್ನು ಖಾಯಂ ಆಗಿ ಹೊಗಳುವ ದಂಡೇ ಮಠವನ್ನು ಮುತ್ತಿಕೊಂಡಿದೆ. ಸ್ವಾಮೀಜಿಗೆ ಸಾಚಾ ಯಾರು? ಖೋಟಾ ಯಾರೂ ಅಂತ್ಲು ಗೊತ್ತಿದೆ. ಆದರೆ ಅವರಿಗೆ ಎಲ್ಲರೂ ಬೇಕು, ಎಲ್ಲರಿಗೂ ಬೇಕು-ಕಡೆಗೋಲು ಬೆಣ್ಣೆಯ ಸಂಬಂಧದಂತೆ. ತರಲೆ ಮಾಡುವ ಕಾಲೇಜು ಮೇಸ್ಟ್ರುಗಳಿಗೆ ಸರಿಯಾಗಿ ಸಂಬಳ ಕೊಡದೆ ಹದ್ ಬಸ್ತಿನಲ್ಲಿಟ್ಟಿದ್ದಾರೆ. “ಹೆಣ್ಣು ಮಕ್ಕಳನ್ನು ಕಂಡರೆ ಒಂದಿಷ್ಟು ಸಾಫ್ಟ್‌ ಕಾರ್ನರ್” ಎಂದೆಲ್ಲಾ ಆಡಿಕೊಳ್ಳುವವರ ಮಾತಿಗೆಲ್ಲಾ ರೇಜಿಗೆ ಮಾಡಿಕೊಳ್ಳುವಷ್ಟು ದಡ್ಡರೂ ಅಲ್ಲ. ಎಂತಹ ಪುಕಾರುಗಳಿದ್ದರು ತಾವು ಮಠಕ್ಕಾಗಿ ಮಾಡಿದ ಸೇವೆಯ ಮುಂದೆ ಆವುಗಳಿಗೆ ರೆಕ್ಕಪುಕ್ಕ ಬೆಳೆಯದೆಂಬ ಆತ್ಮ ವಿಶ್ವಾಸವಿದೆ. “ದೆವ್ವದಂತ ಮಠದಾಗೆ ಎಲ್ಲಿ ಏನ್ ನಡಿತೈತೋ ಯಾರು ಬಲ್ಲರು?” ಅಂತಾನೆ ಅವರ ಖಾಸಾ ಡ್ರೈವರ್ ಸಿದ್ಧಪ್ಪ ಸ್ವಾಮೀಜಿಗಳು ಅವನಿಗೆ ದೆವ್ವದಂತ ಬಂಗಲೆಯನ್ನೇ ಕಟ್ಟಿಸಿಕೊಟ್ಟು ಬಿಟ್ಟಿದ್ದಾರೆ. ಕಾರು ಆವನ ಸ್ವಂತದ್ದೇ ಅನ್ನೋ ಹಂಗೆ ಆಡ್ತಾನೆ. ಒಂದಿಷ್ಟು ಉದ್ಧಟ ಕೂಡ. ಎಷ್ಟೋ ಸಲ ಪರ ಊರಿನ ಕಾರ್ಯಕ್ರಮಗಳಿಗೆ ಹೊರಟಾಗ ಡ್ರೈವರನ ಹೆಂಡತಿಗೂ ಹಿಂದಿನ ಸೀಟಿನಾಗ ರಿಜರ್ವೇಶನ್ ಉಂಟು. ಡ್ರೈವರ್‍ನ ಎರಡನೇ ಹೆಂಡತಿ ದುಂಡು ದುಂಡುಗೆ ಪಟದಾಗಳ ಪಾರ್ವತಿ ಇದ್ದಂಗವಳೆ. ಮೊದಲಿದ್ದಾಕೆ ಮಠದಾಗಳ ಮರಕ್ಕೆ ನೇಣು ಹಾಕ್ಕೊಂಡು ಸತ್ತಿದ್ದನ್ನೂ ಎಲ್ಲರೂ ಎಂದೋ ಮರೆತವರೆ, ಸ್ವಾಮೀಜಿ ಕಾರ್ಯಕ್ರಮ ಶುರುವಾಗೋದೆ ಆಕಿ ಪ್ರಾರ್ಥನೆಯಿಂದ. ಹೆಸರೋ ಪ್ರಾರ್ಥನಾ, ಚಲೋ ಹಾಡ್ತಾಳೆ ಚಲೋತ್ನಾಗೂ ಅವಳೆ ಅಂತಾಗಲೆ ಹಲವರ ಸರ್ಟಿಫೀಕೆಟ್ ನೀಡಿಬಿಟ್ಟವರೆ. ಜೊತೆನಾಗೇ ಡ್ರೈವರ್ ಇರೋವಾಗ ಯಾರ ಗುಮಾನಿಗೆ ಯಾತರ ಬೆಲೆ ಬಂದೀತು? ಹೇಳಿ? ತೀರಾ ಬೊಗಳುವ ನಾಲಿಗೆಗೆ ಬ್ರೆಡ್ ಎಸೆದು ಬಿಡುತ್ತಾರೆ ಸ್ವಾಮೀಜಿ. ಇಂತದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಲು ಅವರಿಗೆಲ್ಲಿನ ವ್ಯಾಳ್ಯಾ. ಸರ್ವಸಂಘ ಪರಿತ್ಯಾಗಿಗಳೆನ್ನುವ ಮಾತನ್ನೇ ಅವರ ವಿಚಾರವಂತಿಕೆ ಒಪ್ಪುವುದಿಲ್ಲ. ಹೆಣ್ಣುಬೇಕೆಂದಾಗ ಸಿಗೋಲ್ಲ ನಾವದನ್ನು ಬಯಸೋದು ಇಲ್ಲ. ಅದೊಂದನ್ನ ಬಿಟ್ಟರೆ ಸರ್ವರ ಸಂಘದೊಳಗೆ ನಾವು ಸುಖವಾಗಿಲ್ಲವೆ ಎಂದು ಪರಮಾಪ್ತರೊಡನೆ ನಗೆಯಾಡುತ್ತಾರೆ. ಎಷ್ಟೋ ಸಲ ಭಕ್ತರನ್ನು ನೋಡಲೂ ಬೇಸರ, ಗ್ರಂಥಗಳನ್ನು ಓದಲು ವಾಕರಿಕೆ. ರಾಜಕಾರಣಿಗಳೂ ಜೊತೆಗೆ ಅಬ್ಕಾರಿ ದೊರೆಗಳು ಬಂದಾಗ ಮಾತ್ರ ಲವಲವಿಕೆ ಉಳಿದಂತೆ ಸದಾ ಹಪಹಪಿಕೆ.

“ಬುದ್ದಿ ಮಂತ್ರಿ ಮಾಯಣ್ಣ ಚಿನ್ನಪ್ಪನೋರು ಬಂದಾರೆ” ಆಡಳಿತಾಧಿಕಾರಿ ಬಂದವನೆ ದೂರ ನಿಂತು ವರದಿ ಮಾಡುತ್ತಾನೆ. “ಹತ್ತು ಮಿನೀಟು ಬಿಟ್ಟು ಕಳಿಸು” ಆಜ್ಞಾಪಿಸುತ್ತಾರೆ. ಹತ್ತು ನಿಮಿಷದ ನಂತರ ಮಂತ್ರಿಗಳ ದೇಹ ಸ್ವಾಮಿಗಳ ಪಾದಕ್ಕೆ ಬಿದ್ದು ನೆಲಕ್ಕೆ ಕೈ ಯೂರಿ ಅಂಡೆತ್ತಿ ನಂತರ ಇಡೀ ದೇಹವನ್ನೆತ್ತಿ ಎದುರಿನ ಕುರ್ಚಿಯಲ್ಲಿ ಕುಸಿಯುತ್ತಾರೆ. ಬಂದ ಶಾಸಕರಿಬ್ಬರು ಜಮಖಾನೆಯ ಮೇಲೆ ವಿರಮಿಸುತ್ತಾರೆ.

“ಸಂಜೆ ಬಸವ ಜಯಂತಿ ಕಾರ್ಯಕ್ರಮಕ್ಕೆ ಬಂದಾವ್ರಿ ಅಪ್ಪಾರೆ. ಆಶೀರ್ವಾದ ತಕ್ಕೊಂಡು ಹೋಗವಾ ಅಂತ ಬಂದ್ವಿ” ಮಂತ್ರಿಗಳು ಉಲಿದರು.

“ನಾವು ಖಾಲಿ ಆಶೀರ್ವಾದ ಮಾಡೋರಲ್ಲಪಾ” ದೇಶಾವರಿ ನಗೆ ಬೀರಿದರು ಸ್ವಾಮೀಜಿ. ಅರ್ಥಮಾಡಿಕೊಂಡವರಂತೆ ಸಚಿವರು ಅವರ ಮುಂದಿರುವ ಬೊಗುಣಿಯಲ್ಲಿ ನೋಟಿನ ಕಂತೆಗಳನ್ನು ಮಡಗಿದರು. ಸ್ವಾಮೀಜಿಗಳೀಗ ಪ್ರಸನ್ನವದನರಾದರು. “ಸಂಜೆ ನಾವೂ ಕಾರ್ಯಕ್ರಮಕ್ಕೆ ಬರೋರು ಅದೀವಿ. ನಿಮ್ಮ ಮಂತ್ರಿಗಿರಿ ಹೆಂಗೆ ನಡೆದೈತ್ರಪಾ?” ವಿಚಾರಿಸಿಕೊಂಡರು.

‘ಸುಖ ಇಲ್ರಿ ಅಪ್ಪಾರೆ. ನನಗೆ ಸಕ್ಕರೆ ಖಾತೆ ಕೊಟ್ಟವರೆ, ಇವರಿಗೆ ಬಂಧೀಖಾನೆ… ನಮ್ಮ ಜನಾಂಗದಾಗೆ ಒಗ್ಗಟ್ಟಿಲ್ಲ. ಪ್ರಭಾವ ಇರೋತಾವು ಸಿಯಮ್ಮಿಗೆ ಒಂದ್ ಅವಾಜ್ ಹಾಕಿ ಹೇಳ ಬೇಕ್ರಿ. ನಾವೂ ಮಠನಾ ಕೈ ಬಿಡೋದಿಲ್ಲ. ಈ ಸಲ ಮೆಡಿಕಲ್ ಕಾಲೇಜ್ಗೆ ಪಟ್ಟು ಹಿಡಿತೀವಿ ನೋಡ್ರಿ… ಹಂಗೆ ತಾವೂ” ಬೆಣ್ಣೆ ಹಚ್ಚಿದರು.

“ಆತು ಬಿಡ್ರಿ, ಅದೇನ್ ದೊಡ್ಡ ಮಾತಲ್ಲ ನೀವಿನ್ನು ಪ್ರಸಾದ ತಗೊಂಡು ಹೋಗ್ರಪಾ” ಮಾತು ಮುಗಿಸಿದರು ಸ್ವಾಮೀಜಿ. ಎಲ್ಲರೂ ಹೋದರು ಶಾಸಕನೊಬ್ಬ ಕುಂತೇ ಇದ್ದ.

“ಏನಪಾ ದುರ್ಗಪ್ಪ ನಿನ್ಗೆ ಬ್ಯಾರೆ ಸ್ಪೆಷಲ್ ಆಗಿ ಹೇಳಬೇಕೇನು?” ಸಿಡುಕಿದರು.

“ಅಲ್ರಿ ಅಜ್ಜಾರೆ, ಎಲಕ್ಷನ್ನಾಗ ಮೂರು ಪಟ್ಟು ಗೆದ್ದು ಬಂದೀನ್ರಿ. ಆದರೆ ಸಿಯಮ್ಮು ನನ್ಗೆ ಮಂತ್ರಿ ಪದವಿ ಕೊಡವಲ್ಲ ನೋಡ್ರಿ. ನಾ ದಲಿತ ಶಾಸಕ ಬೇರೆ ಅದಾನ್ರಿ. ಇದು ಅನ್ಯಾಯ ಅಲ್ಲೇನ್ ನೀವೇ ಹೇಳ್ರಪಾ” ಕುಂತಲ್ಲೇ ಅಡ್ಡ ಬಿದ್ದ ದುರ್ಗಪ್ಪ.

“ಬಿಡೋ ನಿನ್ನ. ಶಾಸಕ ಅಂದ್ಮೇಲೆ ನೀನೆಂತ ದಲಿತ್ನೋ… ಬಲಿತ. ಅಲ್ಲೋ ದುರ್ಗಪ್ಪ ಎಲ್ಲರ್‍ನೂ ಮಂತ್ರಿ ಮಾಡೋಕಾದೀತೇನೋ?” ಪಕಪಕನೆ ನಕ್ಕರು ಸ್ವಾಮೀಜಿ.

“ತಮಗ್ಯಾಕೋ ನಮ್ಮ ಮ್ಯಾಗೆ ಅಭಿಮಾನ ಕಮ್ಮಿ ಆಗ್ಯದೆ. ತಾವು ಕಡಕ್ ಆಗಿ ಒಂದು ಮಾತು ಸಿಯಮ್ಗೆ ಹೇಳ್ರಾ ಬುದ್ಧಿ” ಅಂಗಲಾಚಿ ಮುನಿದ.

“ನೀವು ಹಿಂಗೆ ಕಣ್ರಲೆ ಮೊದ್ಲುಸೀಟು ಕೂಡಿಸ್ರಿ ಅಂತೀರಾ. ಆಮೇಲೆ ಗೆಲ್ಲಿಸ್ರಿ ಅಂತೀರಾ ಗೆದ್ದ ಮೇಲೆ ಪೊಸಿಷನ್ ಕೇಳ್ತೀರಾ. ಸಾಮಾಜಿಕ ನ್ಯಾಯ ಮಣ್ಣು ಮಸಿ ಅಂತ ಚಳವಳಿ ಮಾಡ್ತೀರ. ಆಸೆಗೂ ಒಂದು ಮಿತಿ ಇರಬೇಕ್ರಪಾ” ತಾತ್ಸಾರವಾಗಂದರು.

“ಅಲ್ರಿ ಅಪ್ಪಾರೆ, ಬಸವಣ್ಣೋರು ಅಲ್ಲಮ ಪ್ರಭುವನ್ನೇ ಹೆಡ್ ಮಾಡಿ ಅನುಭವ ಮಂಟಪದಾಗೆ ಕುಂಡ್ರಿಸಲಿಲ್ಲೇನು? ತಾವು ಬಸವಣ್ಣಾರ ಅಪರಾವತಾರ. ತಾವೇ ನಮ್ಮನ್ನ ಕೈ ಬಿಟ್ರೆ ಹೆಂಗೆ ಬುದ್ಧಿ” ಗೋಗರೆದ.

‘ಓಹೋ! ನಿನಗೆ ರೆಕ್ಮಂಡ್ ಮಾಡಿದ್ರೆ ನಾನು ಬಸವಣ್ಣನಾಗ್ತೀನಿ ಅಂದಂಗಾತು… ಆತಪಾ ಮಾಡಾನೇಳು. ಈಗ ಮ್ಯಾಕೇಳು ನಮಗೆ ಪೂಜೆ ವ್ಯಾಳ್ಯಾತು…” ಸ್ವಾಮಿಯೇ ಎದ್ದುಬಿಟ್ಟರು.

***

ಸಂಜೆ ಸಚಿವರ ಕಾರ್ಯಕ್ರಮಕ್ಕೆ ಮೊದಲು ಕಲ್ಲಳ್ಳಿಗೆ ಹೋಗಿ ದನಗಳ ಮೆರವಣಿಗೆ ಉದ್ಘಾಟಿಸಬೇಕಿತ್ತು. ಇಪ್ಪತ್ತೈದು ಸಾವಿರವೇನು ಕಡಿಮೆ ರಖಂ ಅಲ್ಲ – ಹೊರಟರು. ಮಠದಲ್ಲಿ ಅದರ ಪಾಡಿಗೆ ವಚನ ಗಾಯನ ಅಖಂಡ ಭಜನೆ ನಡೆದಿತ್ತು. ಅಲ್ಲಿ ನಿಂತಂಗೆ ಮಾಡಿ ನಗುಬೀರಿ ಹುರಿದುಂಬಿಸಿದರು ಸ್ವಾಮೀಜಿ. “ಚಂದ ಹಾಡ್ತಿಯಲ್ಲೆ ಯಾರ ಮಗಳವ್ವಾ? ಬಕ್ಕೇಶನ ಮಗಳಲ್ವಾ? ಹಾಡು ಹಾಡು!” ಅಂದು ಮೈದಡವಿದರು.

ಕತ್ತಿ ಹಿಡಿದು ಕುಚ್ಚಿನ ಕಿರೀಟ ಇಟ್ಟು ಕುದುರೆ ಏರಿದ ಬಸವಣ್ಣನ ದೊಡ್ಡ ಪಟ ಕಂಡು ಒಮ್ಮೆಲೆ ವ್ಯಾಗ್ರರಾದರು. ಈ ಪಟ ಇಡಬ್ಯಾಡ್ರಿ ಅಂದರೂ ಇದನ್ನ ಯಾವನಲೆ ಇಲ್ಲಿ ಇಟ್ಟೋನು ಚೋದಿಮಗ” ಎಂದು ಗರಂ ಆದರು.

“ಯಾಕ್ರಪಾ?” ತಬ್ಬಿಬ್ಬಾದನೊಬ್ಬ ಕಾರ್ಯಕರ್ತ.

“ಬಸವಣ್ಣ ಕೈನಾಗೆ ಲಿಂಗದ ಕಾಯಿ ಹಿಡ್ಕಂಡು ಶಿವಪೂಜೆ ಮಾಡೋ ಪಟ ಇಡ್ರಲೆ” ಗದರಿದರು. ಆ ಪಟಕ್ಕೂ ಈ ಪಟಕ್ಕೂ ಪರಖ್ ಏನೆಂದು ಅರ್ಥವಾಗದಿದ್ದರೂ “ಆತ್ರಪಾ” ಎಂದವ ತಲೆಯಾಡಿಸಿದ, ಪಾದಕ್ಕೆರಗಲು ಶರಣರ ಸಾಲು ಸಾಲೇ ಬಂತು, ಒಳಗೇ ಉರಿದರೂ ತೋರುಗೊಡಲಿಲ್ಲ. “ನೀನು ಆಬ್ಕಾರೆ ಕಂಟ್ರಾಕ್ಟರ್ ಮಗನಲ್ಲೇನಲೆ?” “ನೀನು ಬೆಳ್ಳಿ ಬಂಗಾರದ ಅಂಗ್ಡಿ ಶಿವಣ್ಣನ ತಮ್ಮ ಅಲ್ವೆ? ಹೆಂಗಾದರಪ್ಪಾ ಶಿವಣ್ಣ?” ಆತುರದಲ್ಲೇ ಅವರವರ ಯೋಗ್ಯತಾನುಸಾರ ಅವರ ಉಭಯ ಕುಶಲೋಪರಿ ನಡೆಸಿದರು. ಕತ್ತಲಾಗ ಹತ್ತಿತ್ತು. “ಡ್ರೈವರ್ ಕಲ್ಲಳ್ಳಿಗೆ ಹೋಗಿ ದನದ ಮೆರವಣಿಗೆ ಬೇರೆ ಉದ್ಘಾಟಿಸಬೇಕಲ್ಲಯ್ಯ, ಲಗೂನ ಗಾಡಿ ಹೊಡಿ” ಎಂದು ಡ್ರೈವರ್ ಮೇಲೆ ಎಗರಲಾಡಿದರು. ಡ್ರೈವರ್‍ನ ಹೆಂಡತಿ ಪ್ರಾರ್ಥನಾ ಕಾರಲ್ಲಿ ಕಂಡಾಗ ಮಂದಹಾಸ ಬೀರಿದರು.

***

ಹಳ್ಳಿಯಲ್ಲಂತೂ ಸಾವಿರಾರು ಜನ ಕಿಕ್ಕಿರಿದು ಬಿಟ್ಟಿದ್ದಾರೆ. ಹಾಡು ಭಜನೆ ಕರಡಿ ಚಮ್ಮಾಳ, ನಂದಿಕೋಲು ಕುಣಿತ ಡೋಲುಗಳ ಮೊರೆತ ಪಟಾಕಿ ಸಿಡಿತ, ಗದ್ದಲಕ್ಕೆ ಸ್ವಾಮೀಜಿಗಳ ತಲೆ ಅದ್ವಾನವಾತು. ಜನ ಭಕ್ತಿ ಭಾವದಿಂದ ಭರಮಾಡಿಕೊಂಡರು. ಜಯಕಾರ ಹಾಕಿದರು. ಮೊದಲ ಎತ್ತಿನ ಜೋಡಿಗೆ ಮಂಗಳಾರತಿ ಬೆಳಗಿ ಹೂ ಎರಚಿ ಉದ್ಘಾಟಿಸಿದರು ಸ್ವಾಮೀಜಿ. ಕೇರಿಯ ಮುತ್ಯಾ ದುಪ್ಪನೆ ಅಡ್ಡ ಬಿದ್ದು ಕಾಣಿಕೆ ಅರ್ಪಿಸಿದ. ಎಲ್ಲರೂ ದುಡುದುಡು ಅಡ್ಡಬಿದ್ದರು.

ತಡಮಾಡದೆ ಕಾರು ಏರಿದ ಸ್ವಾಮೀಜಿ “ಮೊದ್ಲು ಊರು ಕಡೆ ಗಾಡಿ ಹೊವಿ, ಟವನ್ ಹಾಲ್ತಾವ ನಡೆಯೋ ಫಂಕ್ಷನ್ಗೆ ಹೋಗೋದದೆ… ಮಂತ್ರಿಗುಳ್ನ ಕಾಯಿಸಬಾರ್‍ದು” ಅಂದವರೆ ನೋಟಿನ ಕಂತೆಗಳನ್ನು ಡ್ರೈವರನ ಹೆಂಡತಿ ಉಡಿದುಂಬಿಸಿದರು. ಹಳ್ಳಿಯ ಉಬ್ಬು ತಗ್ಗು ಗುಂಡಿ ಗೊಟರುಗಳ ರಸ್ತೆಮೇಲೆ ಪಲ್ಟಿ ಹೊಡಯುತ್ತಾ ಕಾರು ಸಾಗಿತ್ತು ಕತ್ತಲು ಬೇರೆ. ಕಾರು ಒಮ್ಮೆಲೆ ‘ಜಿಂಕೆ’ ಎಂಬ ಕೆಟ್ಟ ಶಬ್ಬದೊಂದಿಗೆ ಮುಗ್ಗರಿಸಿ ದಡಬಡಿಸಿ ನಿಂತಿತು. ಆ ರಭಸಕ್ಕೆ ಸ್ವಾಮೀಜಿ, ಪ್ರಾರ್ಥನಾ ಒಬ್ಬರ ಮೇಲೊಬ್ಬರಾದರು. “ಏನಾತಲೆ ಬಾಡ್ಯಾ ನಿನ್ಗೆ” ಚೀರಿದ ಸ್ವಾಮೀಜಿಗಳ ಬೋಳು ತಲೆ ಸೀಟಿಗೆ ಬಡಿದು ಊತ ಬಂತು. “ದನ ಅಡ್ಡ ಬಂದು ಬಿಡ್ತು ಬುದ್ಧಿ. ಏಟು ಅವಾಯ್ಡ್ ಮಾಡಿದ್ರೂ ಆಗಲಿಲ್ಲ… ಎಟ್ಟೇ ಬಿಟ್ಟೇನ್ರಿ” ಗಾಬರಿಗೊಂಡಿದ್ದ ಡ್ರೈವರು. ವಿಂಡೋ ಸರಿಸಿ ನೋಡಿದರು ಸ್ವಾಮೀಜಿ. ಎತ್ತು ಬಕ್ಕುಬರಾಲ ಬಿದ್ದಿತ್ತು. ಕತ್ತಲಾದಾಗೂ ಹರಿವ ರಕ್ತ ಕಂಡಿತು.

“ಯಾರಾರ ನೋಡಿದ್ರೋ ಹೆಂಗಲೆ ಸಿದ್ಧಪ್ಪಾ?” ಸ್ವಾಮೀಜಿಗಳಿಗೆ ಟೆನ್ಷನ್ನು. ಯಾರು ಅದಾರ್ರಿ ನೋಡಾಕೆ. ಕಾಡು ದಾರಿ” ಏದುಸಿರು ಬಿಟ್ಟ ಸಿದ್ಧಪ್ಪ.

“ಈ ಅನಿಷ್ಠ ಯಾಕಲೆ ನಮ್ಮಕಾರಿಗೇ ಆಡ್ಡಬಂತು ಅದಕ್ಕೆ ನೋಡು ಆದ್ನ ದನ ಅನ್ನಾದು. ಇರ್‍ಲಿ ಆತಲ್ಲ ಲಗೂನ ಗಾಡಿ ಹೊಡಿ” ಸಿಡಿಮಿಡಿಗೊಂಡರು. ಪ್ರಾರ್ಥನ ಸ್ವಾಮೀಜಿಗಳ ಬೋಳು ತಲೆ ಮೇಲೆ ಮೂಡಿದ್ದ ಬುಗುಟನ್ನು ಅಂಗೈಯಿಂದ ಮಸಾಜ್ ಮಾಡುತ್ತಿದ್ದಳು. ದ್ರೈವರ್ ಗಾಡಿ ನಿಲ್ಲಿಸಿದ.

“ಯಾಕ್ಲಾ ಗಾಡಿನಿಲ್ಲಿಸಿದ್ದಿ ದುಬ್ಬಾ?” ಜಬರಿಸಿದರು ಸ್ವಾಮೀಜಿ.

“ಅದು ಸಾಯಂಗೈತಲ್ರಪ್ಪಾರೆ” ಮಿಡುಕಿದ ಡ್ರೈವರ್.

“ಈ ಕಾಲ್ದಾಗೆ ಮನುಷ್ಯ ಜೀವಕ್ಕೆ ಕವಡೆ ಕಿಮ್ಮತ್ತಿಲ್ಲ. ಈ ಮುದಿ ದನದ ಬಗ್ಗೆ ಯಾಕ್ ತಲೆ ಕೆಡಸ್ಕ್ಯಂತೀಯೋ ತೆಪರೆ. ಗಾಡಿ ರಸ್ತೆ ಕಡೆಗೆ ತಿರುವಕ್ಕಂಡು ನೆಟ್ಟಗೆ ಗ್ಯಾನ ಇಟ್ಕಂಡು ಹೊಡಿ ಮಗ್ನೆ” ಅವನ ತಲೆಗೆ ಪಟ್ಟನೆ ಹೊಡೆದರು. ಕಿಸಕ್ಕೆಂದಳು ಪ್ರಾರ್ಥನಾ. ಕಾರು ವೇಗ ಹೆಚ್ಚಿಸಿಕೊಂಡಿತು. ಕಾರಿನಾಗಳ ಟೇಪ್ ರೆಕಾರ್ಡರ್ ಇಂಪಾಗಿ ವಚನ ಹಾಡುತ್ತಿತ್ತು. ‘ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರೊಳು ದಯೆ ಇಲ್ಲದ ಧರ್ಮ ಯಾವುದಯ್ಯ?”

ಸ್ವಾಮೀಜಿಗಳಿಗೆ ತಾವು ಮಾಡಲಿರುವ ಆಶೀರ್ವಚನಕ್ಕೆ ವಸ್ತು ಒಂದು ಹೊಳೆದಂತಾಯಿತು.
*****

ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)